25.6 C
Karnataka
Thursday, May 21, 2026
    Home Blog Page 146

    ಕೋವಿಡ್ ನಿಂದ ಕೆಲವರು ಮಾತ್ರ ದೀರ್ಘ ಕಾಲ ಬಳಲಲು ಕಾರಣ ಏನು?

    ಇದೀಗ ಒಂಭತ್ತು ತಿಂಗಳು ತುಂಬಿದ ಈ ಕೊರೋನ ವೈರಸ್ಸಿನ ಬಗ್ಗೆ ಇನ್ನೂ ಹೊಸ ಹೊಸ ವಿಚಾರಗಳು ತಿಳಿಯುತ್ತಲೇ ಇವೆ. ಜಗತ್ತಿನ ಮಿಲಿಯನ್ ಗಟ್ಟಲೆ ಜೀವಗಳನ್ನು ಆಹುತಿ ತೆಗೆದುಕೊಂಡು ಕೋಟ್ಯಂತರ ಜನರ ದೇಹಗಳನ್ನು ತನ್ನ ಸಂತಾನವರ್ಧನೆಗೆ ಬಳಸಿಕೊಂಡಿರುವ ಈ ವೈರಸ್ಸು ನಮ್ಮ ದೇಹದ ಮೇಲೆ ದೀರ್ಘಕಾಲದ ಪರಿಣಾಮಗಳನ್ನು ಬೀರಬಲ್ಲದೇ ಎನ್ನುವ ಬಗ್ಗೆ ಹೊಸ ಕಾಳಜಿಗಳು ಹುಟ್ಟಿಕೊಂಡು ಜಗತ್ತಿನಾದ್ಯಂತ ಹಲವು ಅಧ್ಯಯನಗಳನ್ನು ಆರಂಭಿಸಲಾಗಿದೆ.

    ಈ ಬಗ್ಗೆ ಸೆಪ್ಟಂಬರ್ 3 ರಂದು ಪ್ರತಿಷ್ಠಿತ ಬ್ರಿಟಿಷ್ ಮೆಡಿಕಲ್ ಜರ್ನಲ್ (BMJ) ಏರ್ಪಡಿಸಿದ್ದ ಒಂದು ವೆಬಿನಾರ್ ನಲ್ಲಿ ಕೊರೋನಾ ರೋಗದ ಅಧ್ಯಯನದಲ್ಲಿ ತೊಡಗಿಕೊಂಡಿರುವ ಹಲವು ತಜ್ಞರು ಚರ್ಚೆಯನ್ನು ನಡೆಸಿದರು. ನಂತರ ಅವರು ತಮ್ಮ ಚರ್ಚೆ ಮತ್ತು ಅಧ್ಯಯನವನ್ನು ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ   ಪ್ರಕಟಿಸಿದ್ದಾರೆ.

    ಅವರು ಆರಿಸಿಕೊಂಡ ವಿಚಾರ  ’ದೀರ್ಘ ಕೋವಿಡ್ ’ ( Long COVID ) ಎಂಬುದು. ಏನು ಹಾಗೆಂದರೆ?

    ಕೊರೋನಾ ಸೋಂಕಿತರಲ್ಲಿ ಬಹುತೇಕರು ಬೇಗನೆ ಗುಣಮುಖರಾಗುತ್ತಾರೆ. ಆದರೆ ಕೆಲವರಲ್ಲಿ ಈ ಸೋಂಕಿನ ರೋಗ ಲಕ್ಷಣಗಳು ಹಲವು ವಾರ ಅಥವಾ ತಿಂಗಳುಗಳ ಕಾಲ ಹಾಗೇ ಉಳಿದು  ಆಗಾಗ ಉಲ್ಬಣಗೊಂಡು ಕಾಡಬಲ್ಲವು. ಇದನ್ನು ಲಾಂಗ್ ಕೋವಿಡ್ ಎಂದು ಕರೆಯಲಾಗಿದೆ.

    ಕೋವಿಡ್ ನೆಗೆಟಿವ್ ಆದ ನಂತರವೂ ರೋಗ ಲಕ್ಷಣಗಳು ಕೆಲವರನ್ನು ಬಹುಕಾಲ ಕಾಡುವುದರಿಂದ ಕ್ಷಿಪ್ರವಾಗಿ ಗುಣಮುಖರಾಗುವ ಇತರರಿಂದ ಇವರನ್ನು ಬೇರೆಯೆಂದು ಗುರುತಿಸಲು  ’ದೀರ್ಘ ’ ಎನ್ನುವ ಪದವನ್ನು ಬಳಸಲಾಗುತ್ತಿದೆ.ಆದರೆ ಲಾಂಗ್ ಕೋವಿಡ್ ಎಂಬ ಪದ ವೈಜ್ಞಾನಿಕವಾಗಿ ಇನ್ನೂ ಪರಿಗಣಿಸಲ್ಪಟ್ಟಿಲ್ಲ. ಇದಿನ್ನೂ ವೈದ್ಯರು ಮತ್ತು ಜನಬಳಕೆಯಲ್ಲಿ ಮಾತ್ರ ಇರುವ ಪದ.

    ಹಲವು ಲಕ್ಷಣಗಳು

    ಕೊರೋನಾಕ್ಕೆ ಹಲವು ಲಕ್ಷಣಗಳಿವೆ. ಬೇರೆ ಬೇರೆ ಜನರನ್ನು ಇದು ಬೇರೆ ಬೇರೆ ರೀತಿ ಕಾಡಬಲ್ಲದು. ಗುಣಮುಖರಾಗುವ ಜನರಲ್ಲೂ ವೈವಿಧ್ಯತೆಗಳಿವೆ. ಕೆಲವರು ಅತಿ ಬೇಗ ಸುಧಾರಿಸಿಬಿಡುತ್ತಾರೆ. ಮತ್ತೆ ಕೆಲವರು ತಿಂಗಳಾನುಕಾಲ ಹೋರಾಡಿದ ನಂತರ ಗುಣಮುಖರಾಗುತ್ತಾರೆ. ಆದರೆ ಇಂಥವರಲ್ಲಿ ಕೆಲವರು ಗುಣಮುಖರಾದ ನಂತರವೂ ಹಲವು ತಿಂಗಳುಗಳ ಕಾಲ ನಾನಾ ತೊಂದರೆಗಳಿಂದ ಬಳಲುತ್ತಿದ್ದಾರೆ. ಇನ್ನು ಕೆಲವರು ಈ ದೀರ್ಘಕಾಲದ ಹೋರಾಟದಲ್ಲಿ ಯಶಸ್ವಿಯಾಗುವುದಿಲ್ಲ ಆದರೆ ಇಂಥವರ ಸಂಖ್ಯೆ ಕಡಿಮೆ ಎನ್ನುವುದೇ ಸಮಾಧಾನದ ಸಂಗತಿ.

    ’ದೀರ್ಘ ಕೋವಿಡ್ ’ ಚರ್ಚೆಯಲ್ಲಿ ಭಾಗವಹಿಸಿದ ಇಂಗ್ಲೆಂಡಿನ ಡಾ. ನಿಸ್ರೀನ್ ಆಲ್ವನ್ ಸೌಂಥಾಂಟನ್ ಆಸ್ಪತ್ರೆಯ ಪಬ್ಲಿಕ್ ಹೆಲ್ತ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸಮಾಡುತ್ತಿದ್ದಾರೆ. ಈಕೆಗೆ ಸ್ವತಃ ದೀರ್ಘಕಾಲದ ಕೊರೋನಾ ವೈರಸ್ಸಿನ ಸೋಂಕು ತಗುಲಿತ್ತು.

    ಕೋವಿಡ್ ಸೋಂಕು ಬಂದರೆ ಎರಡು ವಾರ ಮನೆಯಲ್ಲಿರಿ. ಅಷ್ಟರಲ್ಲಿ ಸಾಮಾನ್ಯವಾಗಿ ಗುಣವಾಗಿರುತ್ತೀರಿ ಎಂದೇ ಬಹುತೇಕ ಸಂದೇಶಗಳು ಹೇಳುವುದು. ಕ್ವಾರಂಟೈನ್ ಕಾಲವೂ ಇಷ್ಟು ಕಾಲ ಮಾತ್ರ.ಇದೇ ಕಾರಣಕ್ಕೆ ಕೋವಿಡ್ ಎಂದರೆ ಎರಡು ವಾರದ ಸೋಂಕು ಎನ್ನುವ ಭಾವನೆಗಳೂ ಜನರಲ್ಲಿವೆ.ಹೀಗೆ ಕೆಲವು ದಿನಗಳಲ್ಲಿ ಅಥವಾ 2-3 ವಾರದಲ್ಲಿ ಪರಿಪೂರ್ಣವಾಗಿ ವಾಸಿಯಾಗುವ ಕೊರೋನಾ ಸೋಂಕನ್ನು ಸಾಮಾನ್ಯ ಕೋವಿಡ್ ಎನ್ನಬಹುದು.ದೀರ್ಘ ಕೋವಿಡ್ ನಲ್ಲಿ ಕೊರೋನಾ ಸೋಂಕಿನ ಪರೀಕ್ಷೆ  ಋಣಾತ್ಮಕವಾಗಿ ಬಂದಿದ್ದರೂ ಸೋಂಕಿನ ಲಕ್ಷಣಗಳು ಮುಂದುವರೆಯಬಲ್ಲವು.

    ಆಗಸ್ಟ್ ನ ಮೊದಲಿಗೇ ಕೊರೊನಾದಿಂದ ಆಸ್ಪತ್ರೆಗೆ ಸೇರಿದ ಎಸ್. ಪಿ. ಬಾಲಸುಬ್ರಮಣ್ಯಂ ಸುಮಾರು 7 ವಾರಗಳ ಕಾಲ ಅದರೊಂದಿಗೆ ಹೋರಾಡಿದ್ದನ್ನೂ ನಾವು ಇಲ್ಲಿ ನೆನೆಯಬಹುದು. ಸೆಪ್ಟಂಬರಿನ ಮೊದಲಿಗೆ ಇವರ ಕೋವಿಡ್ ಪರೀಕ್ಷೆ ನೆಗಟಿವ್ ಎಂದು ತಿಳಿದಿತ್ತು. ಆದರೆ ಅವರಲ್ಲಿ ಆಯಾಸ ಮತ್ತು ಕೆಲವು ಲಕ್ಷಣಗಳು ಮುಂದುವರೆದವು. ಸೆಪ್ಟಂಬರ್ 25 ರಂದು ಹೃದಯ ಮತ್ತು ಉಸಿರಾಟಗಳೆರಡರದ್ದೂ ತೊಂದರೆಯಾಗಿ ಅವರು ಅಸುನೀಗಿದರು.ಕೋಟ್ಯಂತರ ಜನರು ಮಮ್ಮಲ ಮರುಗಿದರು.

    ಅತ್ಯಧಿಕ ಆಯಾಸ ಲಾಂಗ್ ಕೋವಿಡ್ ನ ಅತ್ಯಂತ ಮುಖ್ಯ ಲಕ್ಷಣ ಎಂದು ಡಾ.ನಿಸ್ರೀನ್ ಹೇಳುತ್ತಾರೆ. ಇದರ ಜೊತೆ ಜೊತೆಗೆ ಕೋವಿಡ್ ಸೋಂಕಿನ ಹಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಎಲ್ಲಕ್ಕಿನ್ನ ಮುಖ್ಯವಾಗಿ ಈ ರೋಗಲಕ್ಷಣಗಳು ಬಿಟ್ಟು ಬಿಟ್ಟು ಬಂದು- ಹೋಗಿ ಮಾಡುತ್ತವೆ ಎನ್ನುತ್ತಾರಿವರು. 

    ನಾವೆಲ್ಲ “ ಇದೀಗ ಎಸ್ಪಿಬಿ ಚೇತರಿಸಿಕೊಳ್ಳುತ್ತಿದ್ದಾರೆ “ ಎಂದು ಕೇಳಿದ ಕೆಲವೇ ದಿನಗಳಲ್ಲಿ “ಅವರ ಸ್ಥಿತಿ ಚಿಂತಾಜನಕವಾಗಿದೆ…” ಎಂದು  ಆಸ್ಪತ್ರೆಗಳು ಹೇಳಿಕೆ ಕೊಟ್ಟದ್ದನ್ನು ನಾವಿಲ್ಲಿ ಸ್ಮರಿಸಬಹುದು. ಅವರ ಪರೀಕ್ಷೆ ನೆಗೆಟಿವ್ ಬಂದಾಗಲೂ ಅವರ ಸಾವಿನ ಕಾರಣವನ್ನು  ’ಕೋವಿಡ್ ಸಾವು ’ ಎಂದು ಕರೆದರು. ಕೋವಿಡ್  ಸೋಂಕು ಶ್ವಾಸಕೋಶಗಳ ಜೊತೆಗೆ ಮನಷ್ಯರ ಹೃದಯ,ಮೂತ್ರಪಿಂಡ, ಯಕೃತ್ತು, ನರ ವ್ಯವಸ್ಥೆಗಳ ಮೇಲೆಯೂ ದಾಳಿ ಮಾಡಬಲ್ಲದು ಎಂಬುದು ಈಗಾಗಲೇ ಧೃಡವಾಗಿರುವ ವಿಚಾರ.

    ನಿಸ್ರೀನ್ ಪ್ರಕಾರ ರೋಗಿಗೂ, ರೋಗಿ ಸುಧಾರಿಸಿಕೊಳ್ಳಲಿ ಎಂದು ಕಾಯುತ್ತಿರುವ ರೋಗಿಯ ಹಿತೈಷಿಗಳಿಗೂ ಪದೇ ಪದೇ ನಿರಾಸೆ ಮಾಡುವ ವಿಚಾರಗಳಿವು. 74 ವರ್ಷ ವಯಸ್ಸಾಗಿದ್ದ , ಸ್ಥೂಲಕಾಯದ ಎಸ್ಪಿಬಿ ಯವರಿಗೆ ಐವತ್ತು ವರ್ಷದೊಳಗಿನವರಿಗೆ ಹೋಲಿಸಿದರೆ ಶೇಕಡ 90 ರಷ್ಟು ಹೆಚ್ಚು ಅಪಾಯವಿತ್ತು.ಅವರು ಸಿಗರೇಟು ಸೇದುತ್ತಿದ್ದ ವಿಚಾರವೂ ಇಲ್ಲಿ ತನ್ನ ಪಾತ್ರವನ್ನು ತೋರಿತು ಎನ್ನಲಾಗಿದೆ. 

    74 ವರ್ಷದ, ಅಮೆರಿಕಾದ ವೈದ್ಯರ ಪ್ರಕಾರ ಸ್ಥೂಲಕಾಯದ, ಜಂಕ್ ಆಹಾರಗಳ ಪ್ರಿಯರಾದ ಅಮೆರಿಕಾದ ಅಧ್ಯಕ್ಷ ಡೊನಾಲ್ದ್ ಟ್ರಂಪ್ ಇಂತವೇ ಮೂರು ಅಪಾಯಗಳನ್ನು  ಹೊಂದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಕೂಡಲೇ ಅವರನ್ನು ಮಿಲಿಟರಿ ಆಸ್ಪತ್ರೆಯಲ್ಲಿಟ್ಟು ಪ್ರಾಯೋಗಿಕ ರಿಜೆನೆರಾನ್ಸ್ ಪಾಲಿಕ್ಲೋನಲ್ ಆಂಟಿಬಾಡಿ ಕಾಕ್ ಟೈಲ್ ನೀಡಿ ಚಿಕಿತ್ಸೆಯನ್ನು ಶುರುಮಾಡಲಾಯಿತು.

    ಬಹುಕಾಲ ಕಾಡಬಹುದು

    ದೀರ್ಘ ಕೋವಿಡ್ ಎರಡು ರೀತಿಯಲ್ಲಿ ಬಹುಕಾಲ ಕಾಡಬಹುದು ಎನ್ನಲಾಗಿದೆ. ಮೊದಲನೆಯದಾಗಿ ಈಗಾಗಲೇ ಹಲವು ಖಾಯಿಲೆಗಳಿಂದ ನರಳುತ್ತಿರುವ ಕೆಲವರು ಕೊರೋನಾದಿಂದ ಅಲ್ಪ ಸ್ವಲ್ಪ ಚೇತರಿಸಿಕೊಂಡಿದ್ದರೂ ಅದರಿಂದ ಜರ್ಜರಿತರಾಗುವ ಅವರು ತಮ್ಮ ಇತರೆ ಖಾಯಿಲೆಗಳು ಮತ್ತು ಸಮಸ್ಯೆಗಳು ಉಲ್ಬಣವಾಗುವ ಕಾರಣ  ಬಹುಕಾಲ ಸುಧಾರಿಸಿಕೊಳ್ಳಬೇಕಾಗುತ್ತದೆ. ಮತ್ತು ಎರಡನೆಯದಾಗಿ ಮೊದಲಿಂದಲೂ ಕೊರೋನಾ ಲಕ್ಷಣಗಳು ಬಹಳ ಕಡಿಮೆಯಿದ್ದು ಅವೇ ಲಕ್ಷಣಗಳಿಂದ ಬಹುಕಾಲ ಬಳಲುವವರು.

    ಸುಮಾರು ಆರು ತಿಂಗಳ ಕಾಲ ದೀರ್ಘ  ಕೋವಿಡ್ ಲಕ್ಷಣಗಳಿಂದ ಬಳಲಿದ ಪಾಲ್ ಗಾರ್ನರ್ ಎಂಬಾತ ಮೊದಲ ಎರಡು ತಿಂಗಳಲ್ಲಿ ಕೋವಿಡ್ ರೋಗ ಲಕ್ಷಣಗಳು ಪದೇ ಪದೇ ಅವನನ್ನು ಬಳಲಿಸಿತೆಂದೂ ನಂತರದ ನಾಲ್ಕು ತಿಂಗಳು ಸತತ ಸುಸ್ತಿನೊಂದಿಗೆ ಸಣ್ಣದಾಗಿ ಇತರೆ ಲಕ್ಷಣಗಳು ಕೂಡ ಇದ್ದವೆಂದು ಹೇಳುತ್ತಾನೆ. ಅಂದರೆ ಇವನಲ್ಲಿ ವೈರಸ್ಸು ಇಲ್ಲದಿದ್ದರೂ ರೋಗ ಲಕ್ಷಣಗಳು ಸತತವಾಗಿ 6 ತಿಂಗಳುಗಳ ಕಾಲ ಮುಂದುವರೆದಿದ್ದವು. ಕೊರೋನಾ ನೆಗೆಟಿವ್ ಆಗಿದ್ದರೂ ಈ ರೀತಿ ದೀರ್ಘಕಾಲದ ಲಕ್ಷಣಗಳಿಂದ ಬಳಲುತ್ತಿರುವ ಸಾವಿರಾರು ಜನರಿದ್ದಾರೆ. 

    ಆದ್ದರಿಂದ ಸೋಂಕಿನಿಂದ ಮುಕ್ತರಾದವರನ್ನು  “ಮತ್ತೆ ಸೋಂಕು ಬಂದಿರಬಹುದೇ ? “ ಎನ್ನುವ ಸಂದೇಹದಿಂದ ನೋಡುವ ಅಗತ್ಯವಿಲ್ಲ. ಆದರೆ ಅವರನ್ನು ಲಕ್ಷಣಗಳು ಕೆಲಕಾಲ ನಲುಗಿಸಬಲ್ಲವು ಎಂಬ ಅರಿವಿದ್ದರೆ ಒಳ್ಳೆಯದು. ಇಂಥವರ ಬಗ್ಗೆ ಸಹಾನುಭೂತಿಯಿರಲಿ. ಕೆಲಸಕೊಟ್ಟಿರುವ ಧಣಿಗಳು, ಉದ್ಯಮಿಗಳು, ಸಂಸ್ಥೆಗಳು ಇವರ ವಿಶೇಷ ಅಗತ್ಯಗಳನ್ನು ಅರಿತುಕೊಳ್ಳಲಿ.

    ದೀರ್ಘ ಕಾಲೀನ ಕೋವಿಡ್ ನಿಂದ ಬಳಲುತ್ತಿರುವವರು ’ತಮ್ಮನ್ನು ಜನರು ಅರ್ಥಮಾಡಿಕೊಳ್ಳುತ್ತಿಲ್ಲ’ ಎನ್ನುವ ನೋವುನ್ನೂ ತೋಡಿಕೊಂಡಿದ್ದಾರೆ. ಸೋಂಕು ಮುಕ್ತರಾದ ಕಾರಣ ಇವರಿಗೆ ಬೇಕಾದ ನೆರವು,ಬಿಡುವು, ರಜಾಗಳು ದೊರೆಯದೆ ಅವರು ಮಾನಸಿಕವಾಗಿಯೂ ಬಳಲಬಲ್ಲರು.ಆದ್ದರಿಂದ ಕೊರೋನಾ ಸೋಂಕಿನ ಈ ವಿಧದ ಬಗ್ಗೆಯೂ ಅರಿವು ಮೂಡಬೇಕು ಎನ್ನುವುದು ಈ ಬರಹದ ಮುಖ್ಯ ಉದ್ದೇಶವಾಗಿದೆ. 

    ಯಾರಲ್ಲಿ ಹೆಚ್ಚು?

    ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಜೆನೆಟಿಕ್ಸ್ ಆಫ್ ಎಪಿಡೆಮಿಯಾಲಜಿಯ ಪ್ರೊಫೆಸರ್ ಮತ್ತು ಕೋವಿಡ್ ಲಕ್ಷಣಗಳ ಅಧ್ಯಯನದ ಮುಖ್ಯಸ್ಥರಾಗಿರುವ ಡಾ. ಟಿಂ ಸ್ಪೆಕ್ಟರ್ ಪ್ರಕಾರ ದೀರ್ಘ ಕೋವಿಡ್ ಬರುವವರು ಸೋಂಕು ತಗುಲಿದ ಮೊದಲ ವಾರದಲ್ಲೇ ನಿಲ್ಲದ ಕೆಮ್ಮು, ಒಡೆದ ಧ್ವನಿ, ತಲೆನೋವು, ಭೇದಿ,ಊಟ ತಿನ್ನಲಾಗದಿರುವುದು ಮತ್ತು ಉಸಿರಾಟದ ತೊಂದರೆಯ ಲಕ್ಷಣಗಳನ್ನು ತೋರಿಸುತ್ತಾರೆ. ಇಂತವರು ಮಿಕ್ಕವರಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚಾಗಿ ದೀರ್ಘ ಕೋವಿಡ್ ಗೆ ಬಲಿಯಾಗುತ್ತಾರಂತೆ.

    ಗಂಡಸರಿಗೆ ಹೋಲಿಸಿದರೆ ಹೆಂಗಸರಲ್ಲಿ ಇದು ದುಪ್ಪಟ್ಟು ಉಂಟಾಗುತ್ತದೆ ಎನ್ನಲಾಗಿದೆ.ಸಾಮಾನ್ಯವಾಗಿ ಕಡಿಮೆ ಕಾಲ ಅಥವಾ ಶಾರ್ಟ್ ಕೋವಿಡ್ ಬರುವವರಿಗಿಂತ ಇವರ ವಯಸ್ಸು ಕನಿಷ್ಠ ನಾಲ್ಕು ವರ್ಷ ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ.ದೀರ್ಘ ಕಾಲೀನ ಕೋವಿಡ್ ನ ಮುಖ್ಯ ಲಕ್ಷಣ ಎಂದರೆ ಅದು ಆಯಾಸ/ಸುಸ್ತು ಎನ್ನುವ ಈತ ಮೂರು ವಾರಕ್ಕಿಂತ ಹೆಚ್ಚು ಕಾಲ ಕೋವಿಡ್ ಇದ್ದ ಶೇಕಡ 80 ಜನರು ತಿಂಗಳಾನುಗಟ್ಟಲೆ ಪದೇ ಪದೇ ಸುಸ್ತನ್ನು ಅನುಭವಿಸಿದ್ದನ್ನು ವರದಿ ಮಾಡಿದ್ದಾರೆ.

    ಇದಕ್ಕೆ ಪೂರಕವಾಗಿ ಡಾ. ವೇಲೆಂಟಿನಾ ಪಂಟ್ಮ್ಯಾನ್ ಎಂಬಾಕೆ ದೀರ್ಘ ಕೋವಿಡ್ ವೈರಸ್ಸಿನಿಂದ  ಮುಕ್ತರಾದವರ ಬಹುತೇಕರ ಹೃದಯದಲ್ಲಿ ಉರಿಯೂತ ( Inflammation) ಕಾಣಿಸಿಕೊಂಡದ್ದನ್ನು ತನ್ನ ಅಧ್ಯಯನಗಳ ಮೂಲಕ ಜಗತ್ತಿಗೆ ತಿಳಿಸಿದ್ದಾಳೆ. ತನ್ನ ಈ ಅಧ್ಯಯನವನ್ನು ಜಮ (JAMA) ದಲ್ಲಿ ಹಂಚಿಕೊಂಡಿರುವ ಈಕೆ ಕೊರೋನಾ ಸೋಂಕಿತರಲ್ಲಿ ಉಸಿರಾಟ ಮತ್ತು ಶ್ವಾಸಕೋಶಗಳ ಬಗ್ಗೆಯೇ ಹೆಚ್ಚು ಒತ್ತುಕೊಡುತ್ತಿದ್ದ ಬಗ್ಗೆ ಹೇಳುತ್ತ ವೈರಸ್ಸುಗಳು ಹೃದಯದ ಮೇಲೆಯೂ ದಾಳಿ ಮಾಡಬಲ್ಲವು ಎಂದು ಹೇಳುತ್ತಾಳೆ. ಇದೇ ಕಾರಣಕ್ಕೆ ಈಗಾಗಲೇ ಹೃದಯದ ತೊಂದರೆಗಳಿಂದ ಬಳಲುತ್ತಿರುವ ರೋಗಿಗಳು ಕೋವಿಡ್ ವೈರಸ್ಸಿನಿಂದ ಸೋಂಕಿತರಾದರೆ ಅತ್ಯಂತ ಬೇಗನೆ ನಿತ್ರಾಣರಾಗುತ್ತಾರೆ ಎನ್ನಲಾಗಿದೆ.

    ಬದಲಾಗುತ್ತಿರುವ ಚಿತ್ರ

    ಅದು ಅಲ್ಪಕಾಲದ ಕೋವಿಡ್ ಆಗಲಿ ಅಥವಾ ದೀರ್ಘಕಾಲದ ಕೋವಿಡ್ ಆಗಿರಲಿ ಸಾವಿನ ಸಂಖ್ಯೆ ಕಡಿಮೆಯೇ. ಆದರೆ ಮೊದಲ ಮೂರು ವಾರದಲ್ಲಿ ತೀವ್ರ ನಿಗಾ ಘಟಕ ಬೇಕಾಗದ ಜನರು ಗುಣಮುಖರಾಗುವ ಸಾಧ್ಯತೆ ಹೆಚ್ಚು. ಒಮ್ಮೆ ವೆಂಟಿಲೇಟರುಗಳ ಅಗತ್ಯ ಬಿದ್ದನಂತರ ಅವರ ಗುಣಮುಖರಾಗಬೇಕಾದಲ್ಲಿ ಆ ಪ್ರಯಾಣ ದೀರ್ಘಕಾಲ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ ಎನ್ನಲಾಗಿದೆ.

    ಆದರೆ ಗುಣಮುಖರಾಗುವದು ಇಲ್ಲವೇ ಸಾಯುವುದು ಇವೆರಡನ್ನು ಬಿಟ್ಟು ದೀರ್ಘಕಾಲ ಕಾಡುವ ಕೋವಿಡ್ ಬಗ್ಗೆ ಇತ್ತೀಚೆಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ.  ಏಕೆಂದರೆ ದೀರ್ಘಕಾಲದ ಕೋವಿಡ್ ಬಂದವರಲ್ಲಿ ದೈಹಿಕವಾಗಿ ಆರೋಗ್ಯವಾಗಿದ್ದವರು, ಚಟುವಟಿಕೆಗಳಿಂದ ಕೂಡಿದ್ದ ಜನರು ಎಲ್ಲರೂ ಇದ್ದು ಅವರ ಬದುಕು ಕೋವಿಡ್ ಕಾರಣ ತಳಕಂಬಳಕ ಆದದ್ದು ವಿಷಾದದ ಸಂಗತಿಯಾಗಿದೆ.ಕೆಲವರಲ್ಲಿ ಆಯಾಸ, ಮೈ-ಕೈ ನೋವು,ಕೀಲು ನೋವಿನ ಜೊತೆ, ಮರೆವು,ಏಕಾಗ್ರತೆಯ ನಾಶ, ಖಿನ್ನತೆ ಮತ್ತು ಮಾನಸಿಕ ರೋಗದ ಲಕ್ಷಣಗಳು, ಕೂದಲುದುರುವಿಕೆ ಕೂಡ ಕಂಡು ಬಂದಿವೆ. ಒಂದು ವರ್ಷದ ನಂತರಇದರ ಪೂರ್ಣ ಚಿತ್ರ ಹೇಗಿರಬಹುದೆಂಬುದರ ಬಗ್ಗೆ ಸಧ್ಯಕ್ಕೆ ತಿಳಿದಿಲ್ಲ.

    ಆಸ್ಪತ್ರೆಗೆ ದಾಖಲಾಗಬೇಕಾಗುವ ರೋಗಿಗಳಲ್ಲಿ ಕೋವಿಡ್ ಹೇಗೆ ವರ್ತಿಸುತ್ತದೆ ಎಂದು ಅಧ್ಯಯನ ಮಾಡಲು ಇಂಗ್ಲೆಂಡಿನ ಲೆಸ್ಟರ್ ಎನ್ನುವ ನಗರದ ಆಸ್ಪತ್ರೆಗಳಲ್ಲಿ ಇಡೀ ಪ್ರಪಂಚದಲ್ಲೇ  ದೊಡ್ಡದು ಎನ್ನುವಂಥ ಅಧ್ಯಯನವೊಂದು ನಡೆಯುತ್ತಿದೆ.ಇದರಲ್ಲಿ ಶ್ವಾಸಕೋಶ, ಹೃದಯ, ಮಾನಸಿಕ ಆರೋಗ್ಯ, ಜೀವ ನಿರೋಧಕ ಶಕ್ತಿ, ಮೂತ್ರಕೋಶ ಹೀಗೆ ವೈದ್ಯಕೀಯ ಲೋಕದ ಹಲವಾರು ವಿಭಾಗಕ್ಕೆ ಸೇರಿದ ತಜ್ಞರು ಒತ್ತಟ್ಟಿಗೆ ಬಂದು ಕೆಲಸಮಾಡುತ್ತಿದ್ದಾರೆ.

    ಇವರ ಮುಖ್ಯ ಉದ್ದೇಶ ದೀರ್ಘಕಾಲದ ಕೋವಿಡ್ ಯಾರಿಗ ಬರುತ್ತದೆ, ಏಕೆ ಬರುತ್ತದೆ, ಹೇಗೆ ವರ್ತಿಸುತ್ತದೆ ಮತ್ತು ಅದನ್ನು ಹೇಗೆ ನಿಯಂತ್ರಿಸಬಹುದು, ಅವರಲ್ಲಿ ಯಾರು ಬದುಕುಳಿಯುತ್ತಾರೆ ಮತ್ತು ಯಾರು ಯಾವ ಕಾರಣಕ್ಕೆ ಸಾಯುತ್ತಾರೆ ಎನ್ನುವುದನ್ನು ಆಳವಾಗಿ ಅಧ್ಯಯನ ಮಾಡುವುದೇ ಆಗಿದೆ.

    ಇದಕ್ಕೂ ಕಾರಣಗಳಿವೆ. ಈ ಹಿಂದೆ ಏಪ್ರಿಲ್ ನಲ್ಲೇ ಯೂರೋಪಿನ ಒಕ್ಕೂಟ, ಇನ್ನೋವೇಟ್ ಯು.ಕೆ. ಮತ್ತು ಪರ್ಸ್ಪೆಕ್ಟಮ್  ಎನ್ನುವವರ ಸಹಭಾಗತ್ವದಲ್ಲಿ 160 ರೋಗಿಗಳ ಮೇಲೆ ಅಧ್ಯಯನ ಶುರುವಾಗಿತ್ತು. ಇವರೆಲ್ಲರೂ ದೀರ್ಘ ಕೋವಿಡ್ ನಿಂದ ಬಳಲುತ್ತಿದ್ದರು. ಇವರಲ್ಲಿ ಶೇಕಡಾ 50 ರಷ್ಟು ಜನರಲ್ಲಿ ಹೃದಯ, ಮೂತ್ರಪಿಂಡ ಮತ್ತು ಯಕೃತ್ತ ನ್ನು ಕೊರೋನಾ ವೈರಸ್ಸು ತೊಂದರೆಗೀಡುಮಾಡಿತ್ತು.ಇದೇ ಕಾರಣಕ್ಕೆ ಈಗಿನ ಅಧ್ಯಯನದಲ್ಲಿ ಎಲ್ಲ ವಿಭಾಗದ ನಿಪುಣರೂ ಒತ್ತಟ್ಟಿಗೆ ಸೇರಿ ಕೆಲಸಮಾಡುತ್ತಿದ್ದಾರೆ.

    ಕಾಲ ಕ್ರಮೇಣ ಜನಸಾಮಾನ್ಯರಿಗೆ ಕೋವಿಡ್ ನ ವರ್ತನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳು ಲಭ್ಯವಾಗುತ್ತ ಹೋಗುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ.

    ಇದಕ್ಕೆ ಮದ್ದಿದೆಯೇ?

    ದೀರ್ಘಕಾಲದ ಕೋವಿಡ್ ನಿಂದ ನರಳಿ ಸುಧಾರಿಸಿಕೊಳ್ಳುವವರ ಆರೋಗ್ಯಕ್ಕೆ ಆರೋಗ್ಯಕರ ಆಹಾರ ಸೇವನೆ, ಆರಾಮ ಮತ್ತು ಲಘು ವ್ಯಾಯಾಮಗಳೇ ಸಧ್ಯಕ್ಕಿರುವ ಚಿಕಿತ್ಸೆ. ಅದರಿಂದಲೇ ಅವರಲ್ಲಿ ಉಳಿಯುವ ದೀರ್ಘಕಾಲದ ಸಮಸ್ಯೆಗಳು ನಿಧಾನವಾಗಿ ಸುಧಾರಿಸುತ್ತವೆ ಎನ್ನಲಾಗಿದೆ. ಮ್ಯಾಟ್ ಎಂಬ ನಲವತ್ತರ ಪ್ರಾಯದ ವ್ಯಕ್ತಿಗೆ ಕೋವಿಡ್ ಬಂದು ಹೋದ ನಂತರ  ಕೇವಲ ಹತ್ತು ನಿಮಿಷಗಳ ಕಾಲ ಟಿ.ವಿ. ಅಥವಾ ಯಾವುದೇ ಪರದೆಗಳನ್ನು ನೋಡಿದರೆ ತಲೆನೋವು ಬರುತ್ತದಂತೆ. ಐದು ನಿಮಿಷದ ನಡಿಗೆ ಅತ್ಯಂತ ತ್ರಾಸವಾಗಿ ಉಸಿರಾಡಲು ಆಗುವುದಿಲ್ಲ ಎಂದಿದ್ದಾನೆ. ಇವನಿಗೆ ಮಾರ್ಚ್ ತಿಂಗಳಲ್ಲಿ ಕೋವಿಡ್ ಬಂದುಹೋಗಿ ಆರು ತಿಂಗಳು ಕಳೆದಿದ್ದರೂ ದೀರ್ಘಕಾಲೀನ ಲಕ್ಷಣಗಳು ಇನ್ನೂ ಉಳಿದಿವೆಯಂತೆ.

    ಕೊರೋನ ಬಿಟ್ಟು ಹೋದ ನಂತರದ ಮೂರು ವಾರಗಳ ನಂತರವೂ ರೋಗ ಲಕ್ಷಣಗಳಿದ್ದರೆ ವೈದ್ಯರ ಬಳಿ ತೋರಿಸಿಕೊಳ್ಳುವುದು ಒಳಿತು. ನಿಮ್ಮ ಸುಸ್ತು, ಸೋಲಿಗೆ ರಕ್ತ ಪರೀಕ್ಷೆ ಮಾಡಿಸಿಕೊಂಡು ಇನ್ನೇನಾದರೂ ಕಾರಣಗಳಿವೆಯೇ ಎಂದು ತಿಳಿಯುವುದು ಒಳ್ಳೆಯದು. ದೇಹಕ್ಕೆ ಆಯಾಸ ತರುವ ಯಾವುದೇ ವ್ಯಾಯಾಮವನ್ನು ನಿಲ್ಲಿಸುವುದು ಒಳ್ಳೆಯದು. ಪೌಷ್ಟಿಕ ಆಹಾರ ಸೇವನೆ ಮತ್ತ ಲಘು ವ್ಯಾಯಾಮ ನಿಯಮಿತವಾಗಿ ಮಾಡಬೇಕು ಎಂದು ತಜ್ಞರು ಹೇಳಿದ್ದಾರೆ.

    ದೀರ್ಘ ಕಾಲದ ಕೋವಿಡ್ ಇರುವವರಿಗೆ ಯಾವುದು ಅವರಲ್ಲಿ ಸುಸ್ತು ಸೋಲನ್ನು ತರಬಲ್ಲದು ಎಂಬ ಅರಿವು ಮೂಡುತ್ತದೆ. ಅಂಥವನ್ನು ಮಾಡದಿದ್ದರೆ ಒಳ್ಳೆಯದು.ಸಧ್ಯಕ್ಕೆ ರೋಗಿಗಳು ಮಾಡಬಹುದಾದ್ದು ಇಷ್ಟು ಮಾತ್ರವೇ ಎನ್ನುವ ಡಾ.ನಸ್ರೀನ್ ವೈದ್ಯರುಗಳ ನಡುವೆ ಈ ದೀರ್ಘಕಾಲದ ಲಕ್ಷಣಗಳನ್ನು ಸುಧಾರಿಸುವ ಮಾರ್ಗಗಳ ಬಗ್ಗೆ ಒಂದು ನಿಚ್ಚಳ ರೂಪು ರೇಖೆ ಮತ್ತು ಮಾರ್ಗಸೂಚಿ ತಯಾರಾಗಬೇಕು ಎನ್ನುತ್ತಾರೆ.

    ದೀರ್ಘಕಾಲದ ಕೋವಿಡ್ ರೋಗಿಗಳು ನಾನಾತರದ ಲಕ್ಷಣಗಳನ್ನು ಹೇಳಿದರೂ ಅವರನ್ನು ಒಂದು ವಿಭಾಗದಿಂದ ಇನ್ನೊಂದಕ್ಕೆ ಅಲಸದೆ ಅವರ ಎಲ್ಲ ಲಕ್ಷಣಗಳನ್ನು ತಿಳಿಸಿಕೊಡಬಲ್ಲ ಮಾರ್ಗಸೂಚಿ ಇದ್ದರೆ ಒಬ್ಬರೇ ವೈದ್ಯರು ಅವರನ್ನು ಸುಧಾರಿಸಬಹುದು ಎನ್ನುವ ಆಶಯಗಳನ್ನು ವ್ಯಕ್ತಪಡಿಸುತ್ತಾರೆ.  ಆ ಮೂಲಕ ಭಯ ಮತ್ತು ಆತಂಕಗಳನ್ನು ಸುಧಾರಿಸಬಹುದು ಎನ್ನುತ್ತಾರೆ.

    ಇನ್ನೂ ಆಸಕ್ತಿಯ ವಿಚಾರವೆಂದರೆ, ಮೇ ವೇಳೆಗೆ ಯು.ಕೆ.ಯಲ್ಲಿ ದೀರ್ಘ ಕೋವಿಡ್ ನಿಂದ ಬಳಲಿದ 640 ಜನರಿದ್ದ ಒಂದು ಸಮೀಕ್ಷೆ ನಡೆಯಿತು. ಇವರಲ್ಲಿ ಕೇವಲ ಶೇಕಡ 23.1 ಜನರಿಗೆ ಮಾತ್ರ ಕೋವಿಡ್ ಪರೀಕ್ಷೆ ಪಾಸಿಟಿವ್ ಎಂಬ ಫಲಿತಾಂಶ ದೊರಕಿತ್ತು.ಶೇಕಡ 27.5 ಜನರಿಗೆ ಪರೀಕ್ಷೆ ನೆಗೆಟಿವ್ ಎಂಬ ಫಲಿತಾಂಶ ಬಂದಿತ್ತು. ಮಿಕ್ಕ ಶೇಕಡ 50.1 ಜನರಿಗೆ ಕೋವಿಡ್ ಸೋಂಕು ಬಂದು ಹೋಗಿರಬೇಕು ಎಂದು ನಂಬಲಾಗಿತ್ತು. ಆದರೆ ಪರೀಕ್ಷೆಯೇ ಆಗಿರಲಿಲ್ಲ.

     ಏಕೆಂದರೆ ಪರೀಕ್ಷೆಗಳು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಎಲ್ಲರಿಗೂ ವ್ಯಾಪಕವಾಗಿ ದೊರಕುತ್ತಿರಲಿಲ್ಲ. ಆದರೆ, ಇವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇವರು ತಮ್ಮ ಮನೆಗಳಲ್ಲೇ ಕ್ವಾರಂಟೈನ್ ಮಾಡಿಕೊಂಡು ಗುಣ ಮುಖರಾದೆವು ಎಂದುಕೊಂಡಿದ್ದರು. ಮೇ ತಿಂಗಳ 18 ನೇ ತಾರೀಖಿನ ನಂತರವಷ್ಟೇ ಅವರಿದ್ದ ದೇಶದಲ್ಲಿ ಎಲ್ಲ ಸಾರ್ವಜನಿಕರಿಗೂ ಪರೀಕ್ಷೆಗಳು ಸುಲಭವಾಗಿ ಲಭ್ಯವಾದದ್ದು. ಆ ವೇಳೆಗೆ ಅವರು ಗುಣಮುಖರಾಗಿದ್ದರು.ಆದರೆ,ಕೋವಿಡ್  ನ ಕೆಲವು ಲಕ್ಷಣಗಳು ಇವರನ್ನು ಬಹಳ ಕಾಲ ಕಾಡಿದ್ದವು. ದೀರ್ಘಕಾಲದ ಕೋವಿಡ್ ನಿಂದ ಇನ್ನೂ ಬಳಲುತ್ತಿರುವ ಇವರೆಲ್ಲ ಅಂತರ್ಜಾಲದಲ್ಲಿ ತಮ್ಮದೇ ಗುಂಪನ್ನು ನಿರ್ಮಿಸಿಕೊಂಡಿದ್ದಾರೆ. 

    ಈ ವಿಚಾರವಿನ್ನೂ ಅಧ್ಯಯನದ ಹಂತದಲ್ಲಿರುವ ಕಾರಣ ಇವರ ಪರಿಸ್ಥಿತಿಗೊಂದು ಹೆಸರಿಲ್ಲ. ಇದೇ ರೀತಿ ಕನಿಷ್ಠ 6 ತಿಂಗಳ ಕಾಲ ಸೋಲು ಸುಸ್ತನ್ನು ಅನುಭವಿಸುವುದನ್ನು ಕ್ರಾನಿಕ್ ಫೆಟಿಗ್ ಸಿಂಡ್ರೋಮ್ (Chronic Fatigue Syndrome) ಎನ್ನುತ್ತಾರೆ. ಮುಂದೊಮ್ಮೆ  CFS ನ್ನು ಧೀರ್ಘ ಕೊರೋನಾ ಬಂದು ಹೋದವರಿಗೆ ಜೋಡಿಸಬಹುದು.  

    ಮುಂದಿನ ತಿಂಗಳು, ವರ್ಷಗಳಲ್ಲಿ ನಮಗೆ ಈ ಸೋಂಕಿನ ಬಗ್ಗೆ ಮತ್ತೂ ಹೆಚ್ಚಿನ ಮಾಹಿತಿಗಳು ದೊರೆಯುತ್ತ ಹೋಗುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.


    ಟಾಕೀಸ್ ತೆರೆದರೂ ಸ್ಟಾರ್ ನಟರ ಚಿತ್ರಗಳಿಲ್ಲದೆ ಪ್ರೇಕ್ಷಕರು ಬರುವುದು ಅನುಮಾನ; ಸಂದಿಗ್ಧ ಸ್ಥಿತಿಯಲ್ಲಿ ಗ್ರಾಮೀಣ ಚಿತ್ರಮಂದಿರ

    ಅದೊಂದು ಕಾಲ ನಮೋ ವೆಂಕಟೇಶ… ಎಂಬ ಘಂಟಸಾಲ ಹಾಡಿನ ಸಾಲು ಕೇಳಿದೊಡಣೆಯೇ ಲೇ… ಪಿಚ್ಚರ್ ಸ್ಟಾಟ್ ಆತ್ಕಣಲೇ… ಅಂತ ಪಂಚೆ ಮೇಲೆ ಕಟ್ಟಿ ಎದ್ನೊ..ಬಿದ್ನೊ..ಎಂದು ಓಡುತ್ತಿದ್ದೆವು. ಸೆಕೆಂಡ್ ಶೋಗೆ ಎತ್ತಿನ ಗಾಡಿ ಗಲ್..ಗಲ್.. ಸದ್ದಿನೊಂದಿಗೆ ಚಿತ್ರಮಂದಿರದತ್ತ ಬಿರ್ರನೆ ಧಾವಿಸುತ್ತಿದ್ದೆವು. ದೊಡ್ಡವರು ಟಿಕೆಟ್ ತಗಂಡ ತಕ್ಷಣ ..ಧಡ ಧಡ ಓಡಿ ಜಾಗ ಹಿಡಿಯುತ್ತಿದ್ದ ಗ್ರಾಮೀಣ ಚಿತ್ರಮಂದಿರ ವೈಭವ ನೆನಪಿನಂಗಳದಲ್ಲಿ ಅಚ್ಚಳಿಯದೆ ಉಳಿದಿದೆ.

    ದೊಡ್ಡ ಮಕ್ಕಳಿಗೆ ದುಡ್ಡು ಕೇಳ್ತಾರೆ ಅಂತ ಅಜ್ಜಿ ಎತ್ತಿಕೊಂಡ ನೆನಪು. ಚಿಲ್ಲರೆ ಹಿಡಿದು ಅಣ್ಣ.. ಬಿಡಣ.. ಅಂತ ಹಲ್ಲುಗಿರಿಯುವ ಮಕ್ಕಳು. ಗೇಟ್ ಕೀಪರ್ ಬಿಟ್ಟನೆಂದರೆ ಟಣ್ ಅಂತ ಒಳಗೆ ಹಾರಿ ಕುಳಿತುಕೊಳ್ಳುವ ಚಿಣ್ಣರು. ಆಗ ನೆಲ, ಬೆಂಚ್, ಕುರ್ಚಿ ಮೂರು ವರ್ಗಗಳು. ಮಣ್ಣು ಭರಿತ ನೆಲದಲ್ಲೇ ಟೂರಿಂಗ್ ಟಾಕೀಸ್ ಚಿತ್ರ ಪ್ರದರ್ಶನ. ಹೈಸ್ಕೂಲು ಓದುವಾಗ ಸ್ನೇಹಿತರ ಗುಂಪು ಸ್ಕ್ರೀನ್ ಕೆಳಗೆ ಕಾಲು ಚಾಚಿ ಅಂಗಾತ ಮಲಗಿ ನೋಡಿದ ಸಿನಿಮಾಗಳೆಷ್ಟೋ..

    60-70ರ ದಶಕದಲ್ಲಿ ಚಿತ್ರಮಂದಿರಗಳೇ ಮನರಂಜನೆಯ ತಾಣ. ಕಪ್ಪು-ಬಿಳುಪು ಚಿತ್ರದಿಂದ ಬಣ್ಣದ ಚಿತ್ರಗಳಿಗೆ ಬದಲಾದ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದ ಟೂರಿಂಗ್ ಟಾಕೀಸ್ ಗಳಿಗೆ ಉತ್ತುಂಗ ಕಾಲ. ಭಕ್ತಿ ಪ್ರಧಾನ, ಐತಿಹಾಸಿಕ, ಸಾಮಾಜಿಕ ಚಿತ್ರಗಳಿಗೆ ಎಲ್ಲಿಲ್ಲದ ರಶ್. ಎರಡು- ಮೂರು ವಾರಗಳು ಸಿನಿಮಾ ಓಡುತ್ತಿದ್ದವು. ಫೈಟಿಂಗ್ ಸೀನ್ ನಲ್ಲಿ ಸೀಟಿ, ಕೇಕೆ, ಭಾವುಕತೆಯಲ್ಲಿ ಕಣ್ಣೀರು ಹಾಕಿದವರೆಷ್ಟೊ.

    ರಾಜ್ಯಾದ್ಯಂತ ಬಹುತೇಕ ಟೂರಿಂಗ್ ಟಾಕೀಸ್ ಗಳಲ್ಲಿ ಚಿತ್ರ ವೀಕ್ಷಣೆಯ ಸೊಗಡು ಜವಾರಿಯೇ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತನಾಗ್, ಅಂಬರೀಶ್ ಸಿನಿಮಾಗಳ ಸುಗ್ಗಿ. ಅವರ ಸ್ಟೈಲ್ ಕಾಪಿ ಮಾಡಿದವರಿಲ್ಲ. ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲ್, ಜನನಾಯಕ, ಹಂತದಂತಹ ಸಾಲು ಸಾಲು ಸಿನಿಮಾಗಳಿಗೆ ಹಳ್ಳಿಗಳಿಂದ ಬಂದ ಎತ್ತಿನಗಾಡಿಗಳನ್ನೆ ಎಣಿಕೆ ಮಾಡುವ ಅಚ್ಚರಿ.  ಈ ಚಿತ್ರಣ 2000 ಇಸವಿವರೆಗೂ ಚಿತ್ರಮಂದಿರಗಳ ಹೈ ಕಲೆಕ್ಷನ್ ಇದ್ದೇ ಇತ್ತು.

    ಸಿನಿಮಾ ಸಮಯ ಕಸಿದ ಟೀವಿ

    ನನ್ನೂರಲ್ಲಿ ಕಪ್ಪು ಬಿಳುಪು ಟಿವಿ 1986ರಲ್ಲಿ  ಕಾಲಿಟ್ಟಾಗ ಮರಡೋನಾ ಫುಟ್ ಬಾಲ್ ಫೈನಲ್ ಸಮಯ. ಒಂದೆರಡು ಮನೆಯಲ್ಲಿದ್ದ ಟಿವಿ ನೋಡಲು ಮಗಿಬೀಳುತ್ತಿದ್ದೆವು. ಅಂದಿನಿಂದ 2000ದ ವರೆಗೆ ದೂರದರ್ಶನದಲ್ಲಿ ವಾರಕ್ಕೊಂದು ಸಿನಿಮಾ ಪ್ರಸಾರ. ಚಿತ್ರಮಂದಿರಗಳ ಮೇಲೆ ಹೆಚ್ಚು ಪರಿಣಾಮ ಬೀರಿರಲಿಲ್ಲ. 2001ರ ಸುಮಾರಿಗೆ ಆರಂಭವಾದ ಖಾಸಗಿ ಚಾನಲ್ ಗಳು ಧಾರಾವಾಹಿಗಳಿಂದ ಚಿತ್ರಮಂದಿರಗಳಿಗೆ ಹೋಗುವ ಪ್ರೈಮ್ ಟೈಂ ಕಸಿದುಕೊಂಡವು. ಸಿನಿಮಾಗಳಿಗೆ ಮೀಸಲಾದ ಚಾನಲ್ ಗಳು ನಿತ್ಯ ಸಿನಮಾ ಎಡಬಿಡದೆ ಪ್ರಸಾರ ಮಾಡಿದವು. ಉಚಿತ ಚಾನಲ್ ಗಳಿಂದ ಚಿತ್ರಮಂದಿರಗಳಿಗೆ ಹೋಗುವವರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿತು. 2005 ರ ಹೊತ್ತಿಗೆ ಅನೇಕ ಗ್ರಾಮೀಣ ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚಲ್ಪಟ್ಟವು. ತಮ್ಮ ಗತಕಾಲದ ವೈಭವದ ಸ್ಮರಣೆಯಲ್ಲಿ ಗೋಡೆ ಕುಸಿದು, ರೂಫಿಂಗ್ ಹಾರಿ, ಗೋಡೌನ್ ಗಳಾಗಿ ನಿಂತಿವೆ. ಚಿತ್ರ ಮಂದಿರದ ಮಾಲೀಕರ ಬದಲಿ ಉದ್ಯಮಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. ಕೆಲವರು ಆರ್ಥಿಕ ದುಸ್ಥಿತಿ ತಲುಪಿದ್ದಾರೆ.

    ರಾಜ್ಯದಲ್ಲಿ 1500 ಚಿತ್ರಮಂದಿರಗಳಿದ್ದವು. ಕಲೆಕ್ಷನ್ ಇಲ್ಲದೇ 800 ಚಿತ್ರಮಂದಿರಗಳಿಗೆ ಕುಸಿದಿದೆ. ತಾಲ್ಲೂಕಿನಲ್ಲಿ  10 ರಿಂದು 15 ಚಿತ್ರಮಂದಿರಗಳಿಂದ 3 ರಿಂದ 4 ಚಿತ್ರಮಂದಿರಗಳು ಮಾತ್ರ ಆರಂಭಿಸಿವೆ. ಇದಕ್ಕೆ ಕಾರಣ ಟಿವಿ ಮಾಧ್ಯಮ. ಸದಭಿರುಚಿಯ ಚಿತ್ರಗಳ ಕೊರತೆ. ಚಿತ್ರ ವಿತರಣೆ ಸಮಸ್ಯೆ,  ಆಧುನಿಕ ತಂತ್ರಜ್ಞಾನ ಅಳವಡಿಸಿ ಪುನರುಜ್ಜೀವನಗೊಳಿಸದೆ ಇರುವುದು, ಶುಚಿತ್ವದ ಕೊರತೆ, ಆಸನದ ಕೊರತೆ ಹೀಗೆ ಅನೇಕ ಕಾರಣಗಳ ಸಮಾಗಮದಿಂದ ಚಿತ್ರಮಂದಿರಗಳಿಗೆ ಜನರ ನಿರಾಸಕ್ತಿ ಮಡುಗಟ್ಟಿದೆ.

    ಕರ್ನಾಟಕ ಏಕಪರದೆ ಹಾಗೂ ಮಲ್ಟಿಪ್ಲೆಕ್ಟ್ ಚಿತ್ರಮಂದಿರಗಳಿವೆ. ಏಕ ಪರದೆ ಚಿತ್ರಮಂದಿರಗಳಲ್ಲಿ ನಗರ, ಜಿಲ್ಲಾ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಎ.ಬಿ.ಸಿ.ಡಿ ಎಂದು ವಿಭಾಗಿಸಲಾಗಿದೆ. ಎಲ್ಲಾ ಹಂತದ ಚಿತ್ರಮಂದಿರಗಳಿಗೆ ಏಕರೂಪದ ಸಿನಿಮಾಟೊಗ್ರಫಿ ಕಾಯ್ದೆಯಗೆ ಒಳಪಡಿಸಲಾಗಿದೆ.

    ಕೋವಿಡ್ ಕಾಲದ ಸ್ಥಿತಿ

    ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದ ಪರಿಣಾಮ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಸುಮಾರು 8 ಸಾವಿರ ಚಿತ್ರಮಂದಿರ ಕಾರ್ಮಿಕರಿಗೆ ಸರ್ಕಾರದ ಯಾವುದೇ ಸವಲತ್ತು ದೊರೆತಿಲ್ಲ. ಪಡಿತರ ಆಹಾರ ಕಿಟ್ ಗಳನ್ನು ನೀಡಿಲ್ಲ. ಮಾಲೀಕರು ವೇತನ ಕೊಡಲು ಆಶಕ್ತರಾದ ಕಾರಣ ಅವರ ಜೀವನಕ್ಕೆ ಮಾರ್ಗೋಪಾಯ ಹುಡುಕಲು ಹೆಣಗಾಡುತ್ತಿದ್ದಾರೆ.

     ಸುಮಾರು 100 ವರ್ಷಗಳಿಂದ ಸಾರ್ವಜನಿಕ ಮನರಂಜನೆ ನೀಡುತ್ತಿವೆ. ಜಿಎಸ್ ಟಿ, ವಿದ್ಯುತ್ ಶುಲ್ಕ, ನೀರಿನ ಕಂದಾಯ, ಆಸ್ತಿ ತೆರಿಗೆ, ಬ್ಯಾಂಕ್ ಗಳ ಸಾಲದ ಕಂತು ಬಾಕಿ ಇರುತ್ತವೆ. ಫ್ಯಾನ್ ಫಾಲೋವರ್ಸ್ ಇರುವ ನಾಯಕ ನಟರ ಸಿನಿಮಾಗಳಿಗೆ ಗ್ರಾಮೀಣ ಭಾಗದ ಚಿತ್ರಮಂದಿರಗಳಿಗೆ ಕಲೆಕ್ಷನ್. ಸಾಲು, ಸಾಲು ಚಿತ್ರ ಬಿಡುಗಡೆ ನಿರೀಕ್ಷೆ ಇದ್ದ ಮಾಲೀಕರಿಗೆ ಕೋವಿಡ್ ಬರಸಿಡಿಲಿನಂತೆ ಅಪ್ಪಳಿಸಿದೆ.

    ಒಟಿಟಿ, ಮೊಬೈಲ್, ಟಿವಿಗಳಿಂದ ಚಿತ್ರಮಂದಿರದ ಸಂಭ್ರಮದ ವೀಕ್ಷಣೆಯಿಂದ ಏಕತಾನತೆ ಮೂಡಿದೆ. ಜನರ ಗುಂಪಿನೊಂದಿಗೆ, ಕೇಕೆ, ಸಿಳ್ಳೆ, ಚಪ್ಪಾಳೆಗಳಿಂದ ಕೂಡಿದ ಸಿನಿಮಾ ವೀಕ್ಷಣೆ ಸಂಭ್ರಮ ಕಳೆದು ಹೋಗಬಾರದು. ಚಿತ್ರಮಂದಿರಗಳ ಸಂಭ್ರಮ ಕಾಪಾಡುವುದು ಸರ್ಕಾರದ, ನಿರ್ಮಾಪಕರ, ಚಿತ್ರ ರಸಿಕರ, ಉದ್ಯಮದ ಕಲಾವಿದರ, ನಿರ್ದೇಶಕರ, ಕಾರ್ಮಿಕರ ಕರ್ತವ್ಯವಾಗಿದೆ. ಸರ್ಕಾರದ ಕೃಪಾ ದೃಷ್ಟಿಯಿಂದ ಚಿತ್ರಮಂದಿರಗಳು ಜೀವಂತಿಕೆ ಪಡೆಯಲಿ. ಆ ಮೂಲಕ ಮಾಲೀಕರ, ಕಾರ್ಮಿಕರ ಜೀವನ ಸಂರಕ್ಷಣೆಗೆ ಮುಂದಾಗಲಿ

    ಪುನರಾರಂಭಿಸಲು ನಿರಾಸಕ್ತಿ

    ಇದೇ 15 ರಿಂದ ಚಿತ್ರಮಂದಿರಗಳಿಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ವಯ ಚಿತ್ರಮಂದಿರ ಪುನರರಾಂಭಕ್ಕೆ ಅವಕಾಶ ನೀಡಲಾಗಿದೆ. ಗ್ರಾಮೀಣ ಚಿತ್ರಮಂದಿರಗಳ ಮಾಲೀಕರಲ್ಲಿ ನಿರಾಸಕ್ತಿ ಇದೆ. ಪ್ರತಿ ಚಿತ್ರ ಪ್ರದರ್ಶನಕ್ಕೂ ಸ್ಯಾನಿಟೈಸರ್ ಮಾಡಬೇಕು. ಒಬ್ಬ ವೀಕ್ಷಕನಿಗೆ ರೂ.10 ಖರ್ಚು ತಗುಲಿದೆ.

    ಎಚ್.ಎಸ್.ಪ್ರಕಾಶ್.

    ಈಗ ಟಿಕೆಟ್ ದರ ರೂ.80 ಇದೆ. ಅದರಲ್ಲಿ ಶೇ.12 ಜಿಎಸ್ ಟಿ ಕಡಿತಗೊಳ್ಳುತ್ತದೆ. ಹೆಸರಾಂತ ನಟರ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿಲ್ಲ. ಹಾಗಾಗಿ ಚಿತ್ರಮಂದಿರದ ಕಡೆ ಹೆಜ್ಜೆ ಹಾಕುವ ಪ್ರೇಕ್ಷಕರಿಲ್ಲ ಎನ್ನುತ್ತಾರೆ ವೆಂಕಟೇಶ್ವರ ಚಿತ್ರಮಂದಿರದ ಮಾಲೀಕ ಎಚ್.ಎಸ್.ಪ್ರಕಾಶ್.

    ಪ್ರಮುಖ ಬೇಡಿಕೆಗಳು

    1.ವಾರ್ಷಿಕ ಪರವಾನಗಿ ಶುಲ್ಕ ರೂ.22500ಕ್ಕೆ ಏರಿಸಲಾಗಿದೆ. ಈ ಮೊದಲು ರೂ.1500 ಇತ್ತು. ಇದನ್ನು ಕಡಿತಗೊಳಿಸಬೇಕು.

    2.ಚಲನ ಚಿತ್ರಮಂದಿರವನ್ನು ಉದ್ಯಮ ಅಡಿಯಲ್ಲಿದೆ. ಹಾಗಾಗಿ ವಿದ್ಯುತ್ ದರ ಪ್ರತಿ ಯುನಿಟ್ ಗೆ ರೂ.3.50ಕ್ಕೆ ನಿಗದಿಗೊಳಿಸಬೇಕು. ಸದ್ಯ ರೂ. 8 ವಿಧಿಸಲಾಗುತ್ತಿದೆ.

    3.ಕಟ್ಟಡದ ವಿಸ್ತೀರ್ಣಕ್ಕೆ ಮಾತ್ರ ತೆರಿಗೆ ವಿಧಿಸಬೇಕು. ಹೊರ ಆವರಣ ಸೇರಿಸಬಾರದು.

    4.ಸಿನಿಮಾ ಪ್ರದರ್ಶನ ರದ್ದಾಗಿರುವಾಗ ನೀರಿನ ಕಂದಾಯಕ್ಕೆ ವಿನಾಯಿತಿ ನೀಡಬೇಕು.

    5.ಹಿಂತಿರುಗಿಸದ ಮುಂಗಡ ಕಟ್ಟಲು ಮಾಲೀಕರಿಗೆ ನಷ್ಟ ಉಂಟುಮಾಡುತ್ತದೆ. ಕಲೆಕ್ಷನ್ ಆಧಾರದಲ್ಲಿ ಮುಂಗಡ ಪಡೆಯಬೇಕು.

    ಇಂತಹ ಗೊಂದಲಗಳನ್ನು ನಿವಾರಿಸಲು ಮುಂದಾದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಪುನರರಾಂಭಿಸಲು ಚಿಂತನೆ ನಡೆಸಲಾಗುವುದು ಎನ್ನುತ್ತಾರೆ ಪ್ರಕಾಶ್.

    ಚಿನ್ನವನ್ನು ಹೂಡಿಕೆಯಾಗಿ ಆಯ್ಕೆ ಮಾಡಲು ಪರ್ಯಾಯ ಯೋಜನೆ ಸವರಿನ್‌ ಗೋಲ್ಡ್‌ ಬಾಂಡ್

    ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮಾಧ್ಯಮದಲ್ಲೂ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ನೀಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿತ್ತು. ಸೋಜಿಗವೆಂದರೆ ಆ ಸಂದರ್ಭದಲ್ಲಿ, ಚಿನ್ನ ಮಾರಬೇಕೇ, ತಕ್ಷಣ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಯನ್ನು ನಮ್ಮ …………..ಗೋಲ್ಢ್‌ಕಂಪನಿ ನೀಡುತ್ತದೆ ಎಂಬ ವೈವಿಧ್ಯಮಯ ರೀತಿಯ ಹೆಚ್ಚಿನ ಗೋಲ್ಡ್‌ಕಂಪನಿಗಳ ಪ್ರಚಾರ ಹೆಚ್ಚಾಯಿತು.

    ವಿಪರ್ಯಾಸವೆಂದರೆ ಇಂತಹ ಗೋಲ್ಡ್‌ಕಂಪನಿಗಳ ಪ್ರಚಾರ ಹೆಚ್ಚಾದರೂ ಸಹ ಚಿನ್ನವನ್ನು ಅಡವಿಟ್ಟು ಸಾಲ ಪಡೆದವರು, ಸಾಲ ಮರುಪಾವತಿ ಮಾಡದ ಕಾರಣ ಆ ಚಿನ್ನವನ್ನು ಹರಾಜು ಹಾಕುವ ಬಗ್ಗೆ ಪುಟಗಟ್ಟಲೆ ಜಾಹಿರಾತುಗಳು ಬರುತ್ತಲೇ ಇವೆ. ಜನಸಾಮಾನ್ಯರ ಮನದಲ್ಲಿ ಆಸೆ ಮತ್ತು ಆಸಕ್ತಿಯನ್ನು ಕೆರಳಿಸಿ, ಚಿನ್ನ ಕೊಳ್ಳಬೇಕೆಂಬ ಆಸೆಯನ್ನು ಸಹ ಬಿತ್ತಲಾಯಿತು. ಅದಕ್ಕೆ ಪೂರಕವಾಗಿ 2021 ರಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ರೂ.82 ಸಾವಿರ ತಲುಪುತ್ತದೆಂಬ ವಿಶ್ಲೇಷಣೆಗಳು ಸಹ ಹೊರಬಂದವು. ಕಮಾಡಿಟೀಸ್ ಮಾರ್ಕೆಟ್‌ ಚಟುವಟಿಕೆ ಆರಂಭವಾದ ಮೇಲೆ ಇವು ಸಹ ಸರಕು ಪೇಟೆಯ ವಹಿವಾಟಿನ ಸರಕಾಗಿದೆ. ಅಂದರೆ ಇಲ್ಲಿಯೂ ಏರಿಳಿತಗಳ ಒತ್ತಡವಿರುತ್ತದೆ. ಹಲವಾರು ಪವಿತ್ರವಾದ, ಹಬ್ಬ ಹರಿದಿನಗಳಲ್ಲಿ ಚಿನ್ನ-ಬೆಳ್ಳಿಗಳಂತಹ ಅಮೂಲ್ಯವಾದ ಲೋಹಗಳನ್ನು, ಕನಿಷ್ಟ ಪಕ್ಷ ಸಾಂಕೇತಿಕವಾಗಿಯಾದರೂ ಕೊಳ್ಳುವ ಸಂಪ್ರದಾಯ ರೂಢಿಯಲ್ಲಿದೆ. ಈಗಿನ ದರಗಳಲ್ಲಿ ಚಿನ್ನದ ಆಭರಣವಾಗಲಿ ಬೆಳ್ಳಿಯ ವಸ್ತುಗಳಾಗಲಿ ಕೊಳ್ಳುವುದಕ್ಕೆ ಸಾಮಾನ್ಯರಿಗೆ ಸಾಧ್ಯವಿಲ್ಲ ಎಂಬಂತಾಗಿದೆ.

    ಬೆಳ್ಳಿಯ ಬೆಲೆ

    2008 ರ ಡಿಸೆಂಬರ್‌ ತಿಂಗಳಲ್ಲಿ ಬೆಳ್ಳಿಯ ಬೆಲೆ ರೂ.18,500 ರಲ್ಲಿತ್ತು. ಅಲ್ಲಿಂದ ಕ್ರಮೇಣವಾಗಿ ಏರಿಕೆಯ ಪಥದಲ್ಲಿ ಚಲಿಸುತ್ತಾ 2011 ರ ಏಪ್ರಿಲ್‌ ನಲ್ಲಿ ರೂ.75 ಸಾವಿರ ರೂಪಾಯಿಗಳನ್ನು ತಲುಪಿತು. ಆ ಸಂದರ್ಭದ ವಿಶ್ಲೇಷಣೆಗಳು ಬೆಳ್ಳಿಯ ದರ ರೂ.1,00,000 ಕ್ಕೆ ತಲುಪುವುದೆಂಬ ಮುನ್ನುಡಿದವು. ಅದಕ್ಕೆ ಪೂರಕವಾಗಿ, ರೂ.75 ಸಾವಿರಕ್ಕೂ ಬೆಳ್ಳಿ ಲಭ್ಯವಿಲ್ಲ ಎಂದು ಕಂದು ಬಣ್ಣದ ದಿನಪತ್ರಿಕೆಗಳು ಸುದ್ಧಿ ಪ್ರಕಟಿಸಿದ್ದವು. ಇದು ಇನ್ನಷ್ಟು ಬೇಡಿಕೆ ಹೆಚ್ಚಿಸಿದವು. ಈ ಎಲ್ಲಾ ಬೆಳವಣಿಗೆಗಳ ಹಿಂದೆ ಅಡಕವಾಗಿರುವ ಅಂಶವೆಂದರೆ ಆ ಸಂದರ್ಭವು ಅಕ್ಷಯ ತೃತೀಯ ಆಚರಣೆಯ ಸಮೀಪದ ದಿನವಾಗಿತ್ತು. ವಿಸ್ಮಯವೆಂದರೆ ಮೇ6 ರಂದು ಅಕ್ಷಯ ತೃತೀಯದ ದಿನ ಬೆಳ್ಳಿಯ ಬೆಲೆ ರೂ.53 ಸಾವಿರ ರೂಪಾಯಿಗಳಿಗೆ ಕುಸಿದಿತ್ತು. ನಂತರದ ವರ್ಷಗಳಲ್ಲಿ ಬೆಳ್ಳಿಯ ಬೆಲೆ ರೂ.30 ಸಾವಿರದವರೆಗೂ ಜಾರಿ ಪುನ: ಚೇತರಿಕೆ ಕಂಡಿತು. ಬೆಳ್ಳಿ, ಚಿನ್ನ ಗಳು ಆಂತರಿಕವಾಗಿ ಸುಭದ್ರವಾದ ಹೂಡಿಕೆ ಎಂದೆನಿಸಿದರೂ, ಖರೀದಿಸುವ ಬೆಲೆಯೂ ಮುಖ್ಯ. ಸುಮಾರು 11 ವರ್ಷಗಳಿಂದಲೂ ಬೆಳ್ಳಿಯ ಮೇಲಿನ ಹೂಡಿಕೆಗೆ ಅಸಲು ಹಣವೂ ಲಭ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ಚಿನ್ನದ ಬೆಲೆ ಗರಿಷ್ಟಮಟ್ಟದಲ್ಲಿದ್ದಾಗ ಖರೀದಿಸಿದಲ್ಲಿ ಹೂಡಿಕೆಯ ಹಣ ಸುಭದ್ರವೆನಿಸದು ಅಲ್ಲವೇ?

    ಹಳದಿ ಲೋಹದ ಬೇಡಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಸರ್ಕಾರಗಳ ಮಟ್ಟದಲ್ಲಿ, ಹೆಚ್ಚಾಗಲು ಆರಂಭವಾಗಿದ್ದು 2009 ರಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ 200 ಟನ್‌ ಚಿನ್ನವನ್ನು ಐ ಎಂ ಎಫ್‌ ನಿಂದ ರೂ.31,490 ರಂತೆ ಖರೀದಿಸಿದ್ದಾಗಿದೆ. ನವೆಂಬರ್‌ 2017 ರಿಂದ 2019 ರ ನವೆಂಬರ್‌ ಅವಧಿಯಲ್ಲಿ ಆರ್‌ ಬಿ ಐ ಸುಮಾರು 75 ಟನ್ ಚಿನ್ನವನ್ನು ಖರೀದಿಸಿದೆ. ಈ ರೀತಿಯ ಬೇಡಿಕೆಯು ಚಿನ್ನದ ಬೆಲೆ ಸತತ ಏರಿಕೆ ಕಾಣುವಂತೆ ಮಾಡಿದೆ.

    ಹೂಡಿಕೆಯಾಗಿಯೋ, ಆಭರಣವಾಗಿಯೋ

    ಚಿನ್ನ ಕೊಳ್ಳಬೇಕೆ, ಹಾಗಿದ್ದರೆ ಚಿನ್ನವನ್ನು ಆಭರಣಕ್ಕಾಗಿಯೋ ಅಥವಾ ಹೂಡಿಕೆಯಾಗಿ ಕೊಳ್ಳಬೇಕಾಗಿದೆಯೋ ಎಂಬುದನ್ನು ನಿರ್ಧರಿಸಿರಿ. ಹೂಡಿಕೆಯಾಗಿ ಚಿನ್ನವನ್ನು ಖರೀದಿಸುವ ಉದ್ದೇಶವಾಗಿದ್ದರೆ ಕೇಂದ್ರ ಸರ್ಕಾರದ ಸವರಿನ್‌ ಗೋಲ್ಡ್‌ ಬಾಂಡ್‌ ಯೋಜನೆ ಸೂಕ್ತವೆನಿಸಬಹುದು. ಈ ಬಾಂಡ್‌ ಗಳು ಡಿಮ್ಯಾಟ್‌ ರೂಪದಲ್ಲಿರುವುದರಿಂದ, ಈ ಹಿಂದೆ ವಿತರಣೆಯಾಗಿರುವ ಬಾಂಡ್‌ ಗಳು ಷೇರುಪೇಟೆಯಲ್ಲಿ ಖರೀದಿಸಬಹುದು. ಸವರಿನ್‌ ಗೋಲ್ಡ್‌ ಬಾಂಡ್‌ 7 ವಿತರಣೆಗೆ ಸಿದ್ಧವಾಗಿದ್ದು, ವಿತರಣೆಯ ಬೆಲೆ ರೂ.5,051 ಎಂದು ನಿಗದಿಪಡಿಸಲಾಗಿದೆ. ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಿದವರಿಗೆ ರೂ.50 ರಂತೆ ರಿಯಾಯಿತಿ ನೀಡಲಾಗುವುದು. 8 ವರ್ಷಗಳ ಅವಧಿಯ ಈ ಬಾಂಡ್‌ ಗಳು ಪ್ರತಿ ವರ್ಷ ಶೇ.2.50 ಯಂತೆ ಬಡ್ಡಿ ಗಳಿಸುವುದಲ್ಲದೆ, ಸ್ಟಾಕ್‌ ಎಕ್ಸ್‌ ಚೇಂಜ್‌ ಗಳಲ್ಲಿ ವಹಿವಾಟಿಗೆ ಅನುಮತಿಯಿದೆ. ಅವಧಿಯ ನಂತರ ಅದರ ಹಿಂದಿನ ವಾರದ ಸರಾಸರಿ ಬೆಲೆಯಲ್ಲಿ ಬಾಂಡ್‌ ಹೋಲ್ಡರ್‌ ಗಳಿಗೆ ರೂಪಾಯಿಗಳಲ್ಲಿ ಹಿಂದಿರುಗಿಸಲಾಗುವುದು. ಸೋಜಿಗವೆಂದರೆ ಈ ಹಿಂದಿನ ವರ್ಷಗಳಲ್ಲಿ, ಹಿಂದಿನ ತಿಂಗಳಲ್ಲಿ ವಿತರಿಸಿದ ಬಾಂಡ್‌ ಗಳು ರೂ.4,800 ರಿಂದ ರೂ.5,000 ಗಳವರೆಗೂ ವಹಿವಾಟಾಗುತ್ತಿದ್ದು, ಅವುಗಳು ವಿತರಿಸಿದ ಬೆಲೆಗಳ ಮೇಲೆ ಬಡ್ಡಿ ನೀಡಲಾಗುತ್ತದೆ. ಒಟ್ಟಾರೆ ಹೂಡಿಕೆಯಾಗಿ ಚಿನ್ನವನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಇದು ಉತ್ತಮ ಯೋಜನೆ. ಹೂಡಿಕೆಗೆ ಮುನ್ನ ವಿತರಣೆ ಬೆಲೆ ಮತ್ತು ವರ್ಷ ಅರಿತು ನಿರ್ಧರಿಸಿರಿ.

    2017 ರಲ್ಲಿ ವಿತರಿಸಿದ ಮೇ 2025 ರ ಪಕ್ವತೆಯುಳ್ಳ ಬಾಂಡ್‌ ಗಳು ರೂ.2,951 ರಲ್ಲಿ ವಿತರಿಸಲಾಗಿದ್ದು, ಸಧ್ಯ ರೂ.4,800 ರ ಸಮೀಪ ವಹಿವಾಟಾಗುತ್ತಿದೆ. ಇಲ್ಲಿ ಚಿನ್ನದ ಬೆಲೆ 2025 ರ ಪೇಟೆಯನ್ನವಲಂಭಿಸಿದ್ದರೂ, ಅಲ್ಲಿಯವರೆಗೂ ದೊರೆಯುವ ಬಡ್ಡಿ ಮಾತ್ರ ವಿತರಣೆ ಬೆಲೆಯಾದ ರೂ.2,951 ರ ಮೂಲ ಬೆಲೆಮೇಲೆ. ಅದೇ ಸೆಪ್ಟೆಂಬರ್‌ 2028 ಬಾಂಡ್‌ ಗಳ ವಿತರಣೆ ಬೆಲೆ ರೂ.5,117 ಆಗಿದ್ದು, ಈ ಬಾಂಡ್‌ ಗಳು ಸಹ ರೂ.4,850 ರ ಸಮೀಪ ವಹಿವಾಟಾಗುತ್ತಿವೆ. ಹೀಗೆ ವಹಿವಾಟಾಗುತ್ತಿರುವ ದರ ಈಗಿನ ಚಿನ್ನದ ದರವನ್ನವಲಂಭಿಸಿದ್ದರೂ, ವಿತರಣೆ ಬೆಲೆ ಮತ್ತು ಪಕ್ವತೆಯ ಅವಧಿಗಳು ಬೇರೆ ಬೇರೆಯಾಗಿರುತ್ತವೆ. ಹೂಡಿಕೆಗೆ ಮುಂಚೆ ಚಿಂತಿಸಿ ನಿರ್ಧರಿಸಿರಿ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕ್ಲಾಸ್ ಎಂದರೆ ಆನ್ಲೈನ್ ಕ್ಲಾಸ್

    ಕೊರೋನ ಕರಿಛಾಯೆ ಪ್ರಪಂಚದಾದ್ಯಾಂತ ಗಾಢವಾಗಿ ಹಬ್ಬಿ ಸದ್ಯದ ಪರಿಸ್ಥಿತಿಯಲ್ಲಿ ’ಕ್ಲಾಸ್ ಎಂದರೆ ಆನ್ಲೈನ್ ಕ್ಲಾಸ್ ಎನ್ನಿರಯ್ಯ’ ಎಂಬ ಸಂದಿಗ್ದತೆ.

    ಪಾಪ …. ಇಷ್ಟರವರೆಗೆ ತರಗತಿಯ ಗೋಡೆ -ಗೋಡೆಗಳಲ್ಲಿ ತಮ್ಮದೇ ಶಾಸನವ ಕೆತ್ತುತ್ತಾ, ಕಿವಿಯ ತಮಟೆ ಒಡೆದು ಹೋಗುವ ಹಾಗೆ ಚೀರುತ್ತಾ, ಗೆಳೆಯರೊಂದಿಗೆ ಮೋಜು -ಮಸ್ತಿ ಮಾಡುತ್ತಾ ಹಕ್ಕಿಗಳಂತಿದ್ದ ವಿದ್ಯಾರ್ಥಿಗಳಿಗೆ ಪಂಜರದಲ್ಲಿಟ್ಟ ಅನುಭವ.

    ಅತ್ತ ಶಾಲೆ ಶುರುವಾಗಿಲ್ಲ ಎಂಬ ಬೇಸರ, ಇತ್ತ ಆನ್ಲೈನ್ ಕ್ಲಾಸಿಗೆ ಒಗ್ಗಿಕೊಳ್ಳಲೇಬೇಕಾದ ಅನಿವಾರ್ಯತೆ. ಎಲ್ಲದರ ಮದ್ಯೆ ಬಳಲಿ -ಬೆಂಡಾಗಿರುವುದಂತು ನಿಜ. ಈ ಸಂದಿಗ್ದತೆಯಲ್ಲಿ ಹೊಸ ಮೋಜನ್ನು ಕಂಡುಕೊಳ್ಳುತ್ತಿದೆ ವಿದ್ಯಾರ್ಥಿ ವರ್ಗ.

    ಮೊದ-ಮೊದಲು ಆನ್ಲೈನ್ ಕ್ಲಾಸ್ ಬಗ್ಗೆ ಗಂಧ -ಗಾಳಿ ಗೊತ್ತಿಲ್ಲದ ವಿದ್ಯಾರ್ಥಿಗಳ ಪಜೀತಿ ಕೇಳಿದರೆ ನಗು ಬರುವುದಂತು ಖಂಡಿತ. ಅದಕ್ಕೆ ನಾನೂ ಹೊರತಲ್ಲ. ಆನ್‌ಲೈನ್‌ ಕ್ಲಾಸ್‌ ಎಂದರೆ ಮನೇಲೇ ಕೂತು ಪಾಠ ಕೇಳ್ಬಹುದು, ತರಗತಿ ಮಜವಾಗಿರವಾಗಿರಬಹುದೆಂದು ಯೋಚಿಸಿ , ಸರಿಯಾದ ಸಮಯಕ್ಕೆ ಫೋನನ್ನು ಮುಖಾರವಿಂದದ ಎದುರು ಹಿಡಿದು ಕುಂತರೆ….ಕಾದಿದ್ದೇ ಬಂತು, ಕ್ಲಾಸ್‌ ಶುರುವಾಗಲೇ ಇಲ್ಲ. ದಡ್ಡ ಶಿಖಾಮಣಿಗಳಿಗೆ ತರಗತಿ ಮುಗಿದಿದ್ದೂ ಗೊತ್ತಾಗಲಿಲ್ಲ! ಜೂಮ್, ಗೂಗಲ್ ಮೀಟ್ ಎಂಬ ಆಪ್ ಉಂಟು ಅದನ್ನು ಡೌನ್ಲೋಡ್ ಮಾಡಬೇಕು ಅನ್ನೋದು ತಿಳಿಯದೇ ಹೋದದ್ದು ಆನ್ಲೈನ್‌ ದುರಂತ!

    ಹಾಗೋ ಹೀಗೋ ಗೆಳೆಯರನ್ನು ಕಾಡಿ -ಬೇಡಿ ಆಪ್ ಇನ್ಸ್ಟಾಲ್ ಮಾಡಿಟ್ಟು ಮರುದಿನ ಮೀಟನ್ನು ಓಪನ್ ಮಾಡಿ ಕುಳಿತಿದ್ದರೆ, ಮತ್ತೆ ಕ್ಲಾಸ್‌ ಶುರುವಾಗಲಿಲ್ಲ. ಚಿಂತೆ ಮುಖದಲ್ಲಿ ಬೆವರಾಗಿ ಹರಿಯತೊಡಗಿತು. ತಕ್ಷಣವೆ ಗೆಳೆಯರಿಗೆ ಪೋನು ಹಚ್ಚಿದರೆ ಬ್ಯುಸಿ ಎಂದು ಬಂತು .ಆಗಲೇ ಏನೋ ಸುಟ್ಟ ವಾಸನೆ ಬಂದರೂ ಎದೆಗುಂದದೆ ಪುನಃ ಆಪ್ ಓಪನ್ ಮಾಡಿದೆ. ಕ್ಲಾಸ್ ಇನ್ನು ಶುರುವಾಗಲೇ ಇಲ್ಲ… ಒಂದು ತಾಸಿನ ನಂತರ ಗೆಳೆಯರ ಕರೆ ಬಂತು ಕ್ಲಾಸಿಗೆ ಯಾಕೆ ಜಾಯಿನ್ ಆಗಲಿಲ್ಲ ಎಂದು ಪ್ರಶ್ನಿಸಿದರು! ಕ್ಲಾಸ್ಗೊಂದು ಲಿಂಕ್ ಇರುತ್ತೆ, ಅದ್ರ ಮೂಲಕ ಜಾಯಿನ್ ಆಗಬೇಕು ಎಂಬ ದಿವ್ಯಜ್ಞಾನ ನಂತರ ಸಿಕ್ಕಿತು. ಅಂತೂ ಕ್ಲಾಸ್‌ಗೆ ಜಾಯಿನ್‌ ಆಗಿದ್ದು ಆಯಿತು, ಮೊದಲೆರಡು ದಿನ ಆದ ವಿಚಿತ್ರ ಅನುಭವಗಳ ನೆನೆದು ನಕ್ಕಿದ್ದೂ ಆಯಿತು!

    ಮೀಟು ಕೈಗೆಟುಕಿದ ನಂತ್ರ ಇನ್ನೇನು…ಕ್ಲಾಸ್‌ ಬಗ್ಗೆ ಕಲಿತಿದ್ದೇ ಕಲಿತಿದ್ದು. ಬಹಳ ದಿನಗಳಿಂದ ಕಾಣದ ಸಹಪಾಠಿಗಳ ಮೊಗವ ವಿಡಿಯೋದಲ್ಲಿ ಕಂಡಾಗ ಅದೇನೋ ಖುಷಿ. ಕ್ಲಾಸ್ ನಲ್ಲಿ ಮಾಡುತ್ತಿದ್ದ ತರ್ಲೆ -ತಮಾಷೆ ರಪ್ ಅಂತ ಕಣ್ಣ ಮುಂದೆ ಬಂದು ಹೋಯಿತು. ಇನ್ನೂ ನೆಟ್ವರ್ಕ್ ಸಮಸ್ಯೆಯಿಂದ ಶಿಕ್ಷಕರು ಲೆಫ್ಟ್ ಆದಾಗ, ಅಲ್ಲಿವರೆಗೂ ಸಾಚಾಗಳಂತೆ ವರ್ತಿಸುತ್ತಿದ್ದ ನಮ್ಮೊಳಗೇ ಅವಿತು ಕುಳಿತಿರುವ ನಾನಾ ಪ್ರತಿಭೆಗಳು ಹೊರ ಬರುತ್ತವೆ. ಸಂಭಾಷಣೆ ತೀರಾ ಹಾಸ್ಯಮಯ. ತಕ್ಷಣ ಗುರುಗಳು ರೀಜಾಯಿನ್ ಆದಾಗ ಸಿಂಹ ಕಂಡಂತೆ ಗಪ್ಚುಪ್ ಆಗುತ್ತೆ ಕ್ಲಾಸ್!

    ಇನ್ನೂ ತರಗತಿ ನಡೆಯುತ್ತಿರುವಾಗಲೆ ನಡೆಯುವ ಲೈವ್ ಕಾಮೆಂಟ್ರಿ ಕ್ರಿಕೆಟ್ ಮ್ಯಾಚ್ ನಂತೆ ಕುತೂಹಲಕಾರಿ. ವಾಟ್ಸಪ್ ಇದರ ಪ್ಲಾಟ್ಫಾರಂ . ಶಿಕ್ಷಕರ ಹಾವ -ಭಾವ, ವಿದ್ಯಾರ್ಥಿಗಳ ಪ್ರತ್ಯುತ್ತರದ ಬಗ್ಗೆ ವಾದ, ಎಲ್ಲರ ವೇಷಭೂಷಣ ಇದರ ಮುಖ್ಯ ಚರ್ಚಾ ವಿಷಯ. ಶಾಲೆಯ ಗಂಟೆ ಶಬ್ದವೊಂದು ಬಿಟ್ಟು ಮತ್ತೆಲ್ಲ ಇಲ್ಲಿ ಸಾಧ್ಯ. ಈಗೀಗ ಅನಿಸುವುದುಂಟು’ ಏನೋ ನವನವೀನ ಈ ಆನ್ಲೈನ್ ಕ್ಲಾಸ್ ’!

    Photo by Startup Stock Photos from Pexels

    ಪತ್ರಗಳು ಇತಿಹಾಸ ಹೇಳುತ್ತವೆ

    ಎಲ್ಲವೂ ಮೊಬೈಲ್ ಆಗಿರುವ ಈ ದಿನದಲ್ಲಿ ಅನೇಕರಿಗೆ ಅಂಚೆ ಮೂಲಕ ಬರುತ್ತಿದ್ದ ಪತ್ರಗಳ ನೆನಪೇ ಇದ್ದಂತೆ ಇಲ್ಲ. ಎಂತೆಂಥ ಪತ್ರಗಳಿವೆ ಗೊತ್ತಾ. ವಿಶ್ವ ಅಂಚೆ ದಿನದ ಹಿನ್ನೆಲೆಯಲ್ಲಿ ಈ ಲೇಖನ ಓದಿ.

    ಸುಮಾವೀಣಾ, ಹಾಸನ

    ಒಬ್ಬರು ಮತ್ತೊಬ್ಬರಿಗೆ ಬರವಣಿಗೆಯ ಮೂಲಕ ಸಂವಹನ ನಡೆಸುವುದನ್ನು ಪತ್ರಲೇಖನ ಎಂದು ಕರೆಯಬಹುದು.ಸಂವಹನ, ಸಂಪರ್ಕ ಈ ಪದಗಳ ಉದ್ದೇಶ ಮನದಿಂಗಿತವನ್ನು ಅರುಹುವುದೇ ಆಗಿದೆ.“ಪತ್ರ” ಪದವನ್ನು ತೆಗೆದುಕೊಂಡರೆ ಪತ್ರೆಯ ಬದಲಾದ ರೂಪವೇ ಪತ್ರ ಎನ್ನಬಹುದು. ಅಂದರೆ ಪತ್ರೆಯ ಮೇಲೆ ಬರೆದ ಲೇಖನ “ಪತ್ರಲೇಖನ” ಎಂದಾಯಿತು.ಈಗ ಕಾಗದದ ಮೇಲೆ ಬರೆಯುವುದಾದರೂ ಹಳೆಯ ಪದ ಪತ್ರದ ಬಳಕೆಯಿದೆ.ಪಂಡಿತರೆಲ್ಲ ‘ಪತ್ರ’ ಬರೆದಿದ್ದೇನೆ “ಪತ್ರ ತಲುಪಿತು” ಎಂದು ಹೇಳುತ್ತಾರೆ.‘ಪತ್ರ’ ಸಂಸ್ಕೃತ ಪದ ‘ಕಾಗದ’ ಹಿಂದುಸ್ಥಾನಿ ಮೂಲದ ಕಾಗಜ಼್ನಿಂದ ಬಂದಿರುವ ಅನ್ಯದೇಶಿ ಪದ.ಅಷ್ಟೇನೂ ಓದು ಬರಹ ಬಾರದವರು ಪತ್ರಕ್ಕೆ ‘ಕಾಗದ’,’ಕಾದಗ’ ಎಂದೇ ಕರೆಯುವುದು, ಹಾಗಾಗಿ ಕನ್ನಡದ ‘ಓಲೆ’ ಸರಿಯಾದ ಪದ ಪ್ರಯೋಗ.

    ದೇಶೀಯ ಶಬ್ದ

    ‘ಓಲೆ’ ಇದೊಂದು ದೇಶೀಯ ಶಬ್ದ. ‘ತಾಳೆಯಗರಿ’ ಎಂಬುದು ಇದರ ಅರ್ಥ. ಹಾಗಾಗಿ ‘ಓಲೆಗರಿ’ ಎಂಬ ಪದವೂ ಬಳಕೆಯಲ್ಲಿದೆ. ಹಿಂದೊಂದು ಕಾಲದಲ್ಲಿ ತಾಳೆಗರಿಗಳನ್ನು ಮಡಿಸಿ ಸುಂದರ ಆಕಾರ ಕೊಟ್ಟು ಕಿವಿಗೆ ಆಭರಣವಾಗಿ ಧರಿಸುತ್ತಿದ್ದರು.ಕಾಲಕ್ರಮೇಣ ಬೆಂಡನ್ನು ಅಲಂಕಾರದ ಆಭರಣವಾಗಿಸಿಕೊಂಡರು.ಆ ಕಾರಣಕ್ಕಾಗಿ ಅದನ್ನು ‘ಬೆಂಡೋಲೆ’ ಎಂದೂ ಕರೆದರು. ನಂತರ ಮುತ್ತು, ರತ್ನ, ವಜ್ರ, ಚಿನ್ನಗಳಿಂದ ತಯಾರಾದ ಕಿವಿಯ ಆಭರಣಗಳಿಗೆ ಓಲೆ ಪದವನ್ನು ಸೇರಿಸಿಕೊಂಡು ಮುತ್ತಿನೋಲೆ, ರತ್ನದೋಲೆ… ಹೀಗೆ ಕರೆದದ್ದಾಯಿತು.‘ತಾಳೆಗರಿ’ ಎಂಬ ಸೀಮಿತ ಅರ್ಥದಲ್ಲಿದ್ದ ‘ಓಲೆ’ ಕಿವಿಯ ಆಭರಣ ಎಂಬ ವಿಶಾಲಾರ್ಥ ಪಡೆದುಕೊಂಡಿದೆ. ಇದರ ಜೊತೆಗೆ ಕಾಗದ, ಪತ್ರ ಎಂಬ ಅರ್ಥದಲ್ಲೂ ಬಳಕೆಯಲ್ಲಿದೆ.‘ಓಲೆ’ ಎಂಬ ಪದ ರೂಪ ವ್ಯತ್ಯಾಸವಾಗದೇ ಇದ್ದರೂ ‘ಅರ್ಥವ್ಯತ್ಯಾಸ’ ಹಾಗು ‘ಅರ್ಥವಿಕಾಸ’ ಪಡೆದುಕೊಂಡಿದೆ.

    ಪ್ರಸ್ತುತ ‘ಓಲೆ’ ಪದವನ್ನು ಪತ್ರಗಳಿಗೆ ಅನ್ವಯಿಸಿ ಹೇಳುತ್ತೇವೆ. ಹಿಂದೆ ತಾಳೆಗರಿಗಳನ್ನು ಇನ್ನೂ ತೇವಾಂಶ ಇರುವಾಗಲೇ ಬಿಸಿನೀರಿನಲ್ಲಿ ಕುದಿಸಿ ನೆರಳಿನಲ್ಲಿ ಒಣಗಿಸಿ ನುಣುಪಾದ ಗಾರೆಯ ಕಲ್ಲಿನಿಂದ ಉಜ್ಜಿ ಮೃದುಗೊಳಿಸುತ್ತಿದ್ದರು.ಆಗ ಎರಡು ಬದಿಗಳು ಸಮತಲವಾಗುತ್ತಿದ್ದವು. ಅಂತಹವುಗಳನ್ನು.ಪತ್ರಗಳನ್ನು ಬರೆಯಲೋ, ಗ್ರಂಥಗಳನ್ನು ಬರೆಯಲೋ ಬಳಸುತ್ತಿದ್ದರು. ಓಲೆಗರಿಗಳಿಂದ ರಚಿತವಾದ ಸಂದೇಶವನ್ನು ಸಂವಹಿಸುವವನಿಗೆ ‘ಓಲೆಕಾರ’ ಎಂದು ಕರೆಯುತ್ತಿದ್ದುದುಂಟು.ಧಾರವಾಡ ಕನ್ನಡದಲ್ಲಿ ‘ವಾಲಿಕಾರ’. ನಾವು ಆಧುನೀಕರು ಕಾಗದದಲ್ಲಿ ಬರೆದ ಸಂದೇಶ ತಲುಪಿಸುವ ಸಂದೇಶ ವಾಹಕರಿಗೆ ಪೋಸ್ಟ್ಮ್ಯಾನ್ ಎಂದು ಕರೆಯುತ್ತೇವೆ.

    ಓಲೆಗರಿ ಹೆಚ್ಚು ತಾಳಿಕೆ ಬಾಳಿಕೆ

    ರಾಸಾಯನಿಕ ಕ್ರಿಯೆಯಿಂದ ತಯಾರಾದ ಕಾಗದಕ್ಕಿಂತಲೂ ಪ್ರಕೃತಿ ಸಹಜವಾದ ಓಲೆಗರಿ ಹೆಚ್ಚು ತಾಳಿಕೆ ಬಾಳಿಕೆ ಬರುವಂತಹದ್ದು. ಬಹುಬೇಗ ಹುಳುಗಳ ಹೊಡೆತಕ್ಕೆ ಇವುಗಳು ಬಲಿಯಾಗುತ್ತಿರಲಿಲ್ಲ. ರಾಜ ಮಹಾರಾಜರ ಕಾಲದಲ್ಲಿ ಬರೆಯುತ್ತಿದ್ದ ಪತ್ರಗಳು ರೇಷ್ಮೆ ವಸ್ತುಗಳಿಂದ, ಮುತ್ತು ರತ್ನಗಳಿಂದ ಅಲಂಕೃತವಾಗಿ ಸುರುಳಿ ಸುತ್ತಿ ಸೈನಿಕರ ಮುಖೇನ ಅದನ್ನು ತಲುಪಿಸುತ್ತಿದ್ದರು.ಈಗ ನಾವು ನೋಡುವ ಪತ್ರಗಳು ಚಪ್ಪಟೆಯಾಗಿರುತ್ತವೆ. ರಾಜ ತನ್ನ ಪತ್ರದ ಕಡೆಯಲ್ಲಿ ರಾಜಮುದ್ರೆಯನ್ನು ಒತ್ತುತ್ತಿದ್ದ.ಇಂದಿಗೆ ಸರಕಾರಿ, ವಾಣಿಜ್ಯ ಪತ್ರಗಳಲ್ಲಿ ಅಧಿಕಾರಿಗಳ ಉಧ್ಯಮಿಗಳ ಸೀಲ್ ಮತ್ತು ಸಹಿ ಇರುತ್ತದೆ.ಅದರಲ್ಲಿ ಅವರ ಪದನಾಮ, ವಿಳಾಸ ಎಲ್ಲವೂ ಅಡಕವಾಗಿರುತ್ತದೆ.

    ಅಂಚೆ ಮೂಲಕ

    ಅಂಚೆ ಇಲಾಖೆಯ ಮೂಲಕ ಪತ್ರ ರವಾನೆಯಾಗುತ್ತದೆ.ಎಂದರೆ ದಿನಾಂಕ ಹಾಗೂ ಊರಿನ ಹೆಸರನ್ನುಳ್ಳ ಮುದ್ರೆ ಖಂಡಿತಾ ಇರುತ್ತದೆ.ಭಾರತದಲ್ಲಿ ಏಪ್ರಿಲ್ ೧, ೧೭೭೪ ರಲ್ಲಿ ಪ್ರಥಮ ಬಾರಿಗೆ ಅಂಚೆ ಇಲಾಖೆ  ಕಾರ್ಯಾರಂಭ ಮಾಡಿತು. ಸದ್ಯ ೨೧-೨೨ ಕಿ.ಮೀ.ಗೊಂದು ಅಂಚೆ ಕಛೇರಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ. ಅಂಚೆ, ಟಪಾಲು ಇತ್ಯಾದಿ ವ್ಯವಹಾರಗಳನ್ನು ನೋಡಿಕೊಳ್ಳುವುದಕ್ಕೆ ಅಂಚೆ ಕಛೇರಿ ಎಂದು ಕರೆಯುತ್ತೇವೆ. ಇಲ್ಲಿ ‘ಅಂಚೆ’ ದೇಶೀಪದವಾದರೆ ಅನ್ಯದೇಶ್ಯ ಪದ ‘ಕಚೇರಿ’, ಇದು ಮರಾಠಿಯ ಕಚೇರಿಯಿಂದ ಹಾಗೂ ಹಿಂದಿಯ ಕಛಹರಿಯಿಂದ ಬಂದಿದೆ. ಹಾಗಾದರೆ ‘ಅಂಚೆ ಕಛೇರಿ’ ಅಂದರೆ ‘ಟಪಾಲು ವ್ಯವಹಾರ’ ನೋಡುವುದು ಎಂದಾಯಿತಲ್ಲ. ಈಗ ಪತ್ರ, ಓಲೆ, ಕಾಗದ ಯಾವುದೂ ಇಲ್ಲ, ಎಲ್ಲಾ ಪೇಪರ್‌ಲೆಸ್ ಆಗಿ ಮೊಬೈಲ್ ಸಂದೇಶ, ಇ-ಮೇಲ್, ವಾಟ್ಸಪ್, ಫೇಸ್‌ಬುಕ್ ಸಂದೇಶಗಳು ರಾರಾಜಿಸುತ್ತಿವೆ. ಆಯ ತಪ್ಪಿದರೆ ಸಂದೇಶಗಳಲ್ಲಿ ಬರೇ ಸಂದೇಹಗಳು ಏನಂತೀರಿ…?

    ಪತ್ರಗಳಲ್ಲಿ ವೈಯುಕ್ತಿಕ, ಸರಕಾರಿ, ಅರೆಸರಕಾರಿ ವಾಣಿಜ್ಯ ಪತ್ರಗಳು, ಆಮಂತ್ರಣ ಪತ್ರಿಕೆಗಳು ಎಂದೆಲ್ಲಾ ಹೇಳಬಹುದು.ಹಿಂದೆ ‘ಮದುವೆ ಪತ್ರಿಕೆ ಆಯ್ತು’ ಎಂದು ಹೇಳುತ್ತಿದ್ದರು.ಈಗ ‘ಮದುವೆ ಕಾಗದ’ ‘ಪ್ರಿಂಟ್ ಕೊಡೋಕೆ ಬಂದಿದ್ವಿ’ ಅನ್ನುತ್ತಾರೆ.ಸರಿಯಾದ ಪದ ಪ್ರಯೋಗ, ಶುಭಾಶಯ ಪತ್ರಗಳು ಸಮಾರಂಭಗಳ ಆಹ್ವಾನ ಪತ್ರಿಕೆಗಳೂ ಪತ್ರಗಳೇ’’ ಕೆಲವೊಂದು ದಾಖಲೆಗಳನ್ನು ಅಂದರೆ ಜನನ, ಮರಣ, ಆದಾಯ, ವಾಸಸ್ಥಳ ಪತ್ರಗಳೂ ಇವೆ. ಅಂದರೆ ಇವು ಸರಕಾರದ ಅಧಿಕಾರಿಗಳಿಂದ ಅಧೀಕೃತವಾಗಿ ಪರಿಶೀಲಿಸಿದ ಪ್ರಮಾಣೀಕರಿಸಿದ ಪತ್ರಗಳು, ನಡತೆ ಪ್ರಮಾಣ ಪತ್ರ, ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಪದವಿ ಪ್ರಮಾಣ ಪತ್ರಗಳು ಇವೆಯಲ್ಲ!ಎಲ್ಲಾ ಅಸಲಿಯೋ ಇಲ್ಲ ನಕಲಿಯೋ ನನಗೆ ತಿಳಿದಿಲ್ಲ.

     ‘ಕಾಗದ ಪತ್ರ’ ಎನ್ನುವುದು ದ್ವಿರುಕ್ತಿ.ಚಿರಾಸ್ತಿಗೆ ಸಂಬಂಧಿಸಿದ ಪತ್ರಗಳನ್ನು ಕ್ರಯಪತ್ರ, ಭೋಗ್ಯಪತ್ರ, ಬಾಡಿಗೆ ಕರಾರು ಪತ್ರ ಮುಂತಾದ ಪತ್ರಗಳ ಬಗೆಯನ್ನೂ ನೋಡಬಹುದು.ಈ ದಾಖಲೆಗಳನ್ನು ಪತ್ರ ರೂಪಕ್ಕಿಳಿಸಲು ಪತ್ರಬರಹಗಾರರೇ ಇರುತ್ತಾರೆ.ಸರಕಾರಕ್ಕೆ ಇಂತಿಷ್ಟು ಶುಲ್ಕ ಪಾವತಿಸಿದ ಸ್ಟಾಂಪ್ ಹಚ್ಚಿದ ಕಾಗದಗಳಲ್ಲಿ ಇವರು ವಿಷಯ ದಾಖಲಿಸುತ್ತಾರೆ. ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಸಲ್ಲಿಸುವ ಪತ್ರಕ್ಕೆ ನಾಮಪತ್ರ ಎನ್ನುತ್ತೇವೆ. ಉದ್ದಿಮೆಗಳನ್ನು ನಡೆಸಲು ಅನುಮತಿ ನೀಡುವ ಪರವಾನಗಿಗಳು, ಪತ್ರಿಕಾ ಸಂಪಾದಕರಿಗೆ ಬರೆಯುವ ಪತ್ತ, ಬ್ಯಾಂಕ್ ನೋಟೀಸು, ಕರಪತ್ರಗಳೂ ಪತ್ರಗಳೇ..

    ಓಲೆಗಳು ಬಂದುವೆಂದರೆ ಹಿಂದೆ ಬಂಧುಗಳು ಬಂದಷ್ಟೇ ಸಂತೋಷಿಸುತ್ತಿದ್ದರು.ಕಾಗದದಲ್ಲಿ ಉಕ್ತವಾದ ಸಾಲುಗಳನ್ನು ಮತ್ತೆ ಮತ್ತೆ ಓದಿ ಆನಂದಿಸುತ್ತಿದ್ದರು. ಹೊಸ ಉತ್ಸಾಹ ಪಡೆಯುತ್ತಿದ್ದರು. ಅನಕ್ಷರಸ್ಥರೇ ಹೆಚ್ಚಾಗಿದ್ದ ಕಾಲದಲ್ಲಿ ಊರಿಗೊಬ್ಬ ಅಕ್ಷರಸ್ಥ ಇದ್ದರೆ ಅವನಿಗೆ ಅದೇ ಕೆಲಸ ಪತ್ರ ಓದುವುದು, ಪತ್ರ ಬರೆಯುವುದು.ಆನಂತರ ಅಂಚೆಯಣ್ಣನಿಗೆ ಆ ಜವಾಬ್ದಾರಿ.ಕೆಲವೊಮ್ಮೆ ಪತ್ರಗಳೂ ಅದರ ಸಂದೇಶಗಳು ದುರುಪಯೋಗವಾದದ್ದೂ ಇದೆ.ಹೆಣ್ಣು ಮಕ್ಕಳಿಗಂತೂ ಹಬ್ಬದ ಸಮಯದಲ್ಲಿ ತಾಯಿ ಮನೆಯವರು ಹಬ್ಬಕ್ಕೆ ಕರೆದು ಕಾಗದ ಬರೆಯುತ್ತಾರೆ, ಬಾಗಿನಕ್ಕೆ ಹಣ ಕಳುಹಿಸುತ್ತಾರೆ ಎಂತಲೇ ಅಂಚೆಯಣ್ಣನನ್ನು ಕಾಯುತ್ತಿದ್ದುದು ಇದೆ.ಹಿಂದೆ ತವರಿನ ಸಂದೇಶಗಳನ್ನು ಹೆಣ್ಣು ಮಕ್ಕಳಿಗೆ ತಲುಪಿಸುವಲ್ಲಿ ಬಳೆಗಾರರದ್ದೂ ಪಾತ್ರವಿತ್ತು. ಎಂಬುದನ್ನು ಕೆ.ಎಸ್.ನ.ರವವರ “ಬಳೆಗಾರಚನ್ನಯ್ಯ” ಗೀತೆ ನೆನಪಿಸುತ್ತದೆ.

    ಅಂಚೆಕಾರ್ಡು, ಇನ್‌ಲ್ಯಾಂಡ್ ಶೀಟ್ (ಇದರ ಅಪಭ್ರಂಶ ಇಂಗ್ಲೆಂಡ್ ಶೀಟ್ ಎಂದೂ ಕರೆಯುವುದಿದೆ), ಎನ್‌ವಲಪ್, ನಂತರ ಬೇರೆ ಹಾಳೆಗಳಲ್ಲಿ ಬರೆದು ಲಕೋಟೆಗಳಲ್ಲಿ ಹಾಕಿ ಅದು ತೂಗುವ ತೂಕಕ್ಕೆ ಸರಿಯಾದ ಮೌಲ್ಯದ ಅಂಚೆ ಚೀಟಿಗಳನ್ನು ಹಚ್ಚುವುದಿತ್ತು.ಕಾರ್ಡುಗಳೆಂದರೆ ಖುಲ್ಲಂ ಖುಲ್ಲ ಯಾರು ಬೇಕಾದರೂ ಓದಬಹುದು, ಇನ್‌ಲ್ಯಾಂಡ್ ಶೀಟ್ ಎಂದರೆ ಒಳ ಮೈಯಲ್ಲಿ ವಿಚಾರ ಅರುಹಿ ಹೊರ ಮೈಯ್ಯಲ್ಲಿ ವಿಳಾಸ ಬರೆಯುವುದು ಇತ್ತು.ಈಗ ಕಡಿಮೆಯಾಗಿದೆ. ಕಾಗದ ಬರೆದು ಅಂಚೆಪೆಟ್ಟಿಗೆಯೊಳಗೆ ಹಾಕಿದ ಮೇಲೆ ತಲುಪಿತೋ ಇಲ್ಲವೋ ಎಂಬ ಕಳವಳ ಇರುತ್ತಿತ್ತು.ಅದನ್ನು ತಪ್ಪಿಸಲು ರಿಪ್ಲೆಕಾರ್ಡು, ರಿಜಿಸ್ಟ್ರೆಡ್ ಪೋಸ್ಟ್, ಅದಕ್ಕೆ ಸ್ವೀಕೃತಿ ಪತ್ರ. ವೇಗದ ಅಂಚೆ ಚಾಲ್ತಿಯಲ್ಲಿದೆ.ಇವೆಲ್ಲ ವಿಳಾಸದಾರರಿಗೇ ಖುದ್ದಾಗಿ ತಲುಪಬೇಕು ಅನ್ನುವ ಕಾರಣಕ್ಕೆ.ಕೆಲ ಜಿಪುಣಾಗ್ರೇಸರರು ಹಣ ಖರ್ಚಾಗುತ್ತದೆಂದು ಡ್ಯೂ ಬೀಳುವಂತೆ ಮಾಡಿ ತಾವು ಅಂದುಕೊಂಡವರಿಗೆ ಕಾಗದ ತಲುಪುವಂತೆ ಮಾಡುತ್ತಿದ್ದರು.ಈಗ ಪತ್ರ ತಲುಪಿದ ಬಗ್ಗೆ ಖಾತ್ರಿ ಮಾಡಿಕೊಳ್ಳಲು ಮೊಬೈಲ್ ಆ್ಯಪ್ ಇದೆ.ನಾವು ಕಳುಹಿಸಿದ ಅಂಚೆ ಎಲ್ಲಿದೆ ಯಾವಾಗ ತಲುಪುತ್ತದೆ, ಯಾವಾಗ ವಿಳಾಸದಾರರು ತೆಗೆದುಕೊಂಡಿದ್ದಾರೆ ಎಂಬುದನ್ನು ಕ್ಷಣಾರ್ಧದಲ್ಲಿ ಗ್ರಹಿಸಬಹುದು.

    ಕೆಂಪು ಬಣ್ಣದ ಅಂಚೆ ಪಟ್ಟಿಗೆ

    ಅಂಚೆ ಪೆಟ್ಟಿಗೆಗಳ ಬಗ್ಗೆ ಒಂದೆರಡು ಮಾತು.ಭಾರತದಲ್ಲಿ ಹೆಚ್ಚಿಗೆ ಕೆಂಪು ಬಣ್ಣದ ಅಂಚೆ ಪಟ್ಟಿಗೆಗಳನ್ನು ಕಾಣಬಹುದು.ಕೆಂಪು ನೆಲಮಟ್ಟದಲ್ಲಿ ಇರುತ್ತದೆ ಇಲ್ಲ ಗೋಡೆಗೆ ತೂಗಿಸಿರುತ್ತಾರೆ. ಸಿಲಿಂಡರಿನಾಕಾರದ, ಚೌಕಾಕಾರದ ವಿನ್ಯಾಸದಲ್ಲಿ ಅಂಚೆ ಪೆಟ್ಟಿಗೆಗಳು ಇರುತ್ತವೆ. ಹಸಿರು, ನೀಲಿ ಪೆಟ್ಟಿಗೆಗಳಿದ್ದರೂ ಅವುಗಳು ಅಪರೂಪ. ದೇಶ ಅಲ್ಲಿನ ಆಡಳಿತ ವ್ಯವಸ್ಥೆ ಇತ್ಯಾದಿಗಳ ಮೇಲೆ ಅಂಚೆ ಪೆಟ್ಟಿಗೆಯ ಬಣ್ಣ ನಿರ್ಧಾರವಾಗಿರುತ್ತದೆ. ವಿಳಾಸದಾರರಿಗೆ ತಲುಪಿಸಲು ಪಿನ್‌ಕೋಡ್ ನಂಬರ್ ಇರುತ್ತದೆ.ಒಂದೇ ಹೆಸರಿನ ಊರುಗಳಿಂದ ಆಗುವ ಗೊಂದಲಗಳನ್ನು ಪಿನ್‌ಕೋಡ್‌ಗಳು ತಪ್ಪಿಸುತ್ತವೆ. ಸರ್ಕಾರಿ ಅಂಚೆ ವ್ಯವಸ್ಥೆಯನ್ನು ಮೀರಿಸಲೆಂದೇ ಖಾಸಗಿ ಕೊರಿಯರ್ ವ್ಯವಸ್ಥೆ ಇದೆ. ಆದರೆ ಸರಕಾರವೇ ಗ್ರೇಟ್ ಬಿಡಿ!. ಸಾಗರದಾಚೆಗೂ ಭಾರತೀಯ ಅಂಚೆ ಕಚೇರಿ ಇದೆ.

    ಅಂದ ಹಾಗೆ ಪತ್ರಲೇಖನ ಪರಿಣಾಮಕಾರಿಯಾಗಿ ಇದ್ದರೆ ಅದರ ಉದ್ದೇಶ ಸಫಲ.ಯಾವುದೇ ಅಂಶ ಅಪೂರ್ಣವಾಗಿಯಾಗಲಿ, ಅರ್ಥ ಸಂದಿಗ್ಧತೆಯಿಂದಲಿ ಕೂಡಿರಬಾರದು.ಬರೆದವರ ಗುರುತು, ಬರೆದ ಸ್ಥಳ, ದಿನಾಂಕ ಯಾರನ್ನು ಉದ್ದೇಶಿಸಿ ಯಾವ ಸಂದರ್ಭದಲ್ಲಿ ಬರೆಯಲಾಗಿದೆ ಎಂಬ ಅಂಶಗಳು ನಿರ್ದಿಷ್ಟವಾಗಿರಬೇಕು.ಸ್ವವಿಳಾಸ, ದಿನಾಂಕ, ಸಂಭೋದನೆ, ವಿಸಯ, ನಿರೂಪಣೆ, ಮುಕ್ತಾಯ ಹಸ್ತಾಕ್ಷರ ಇರಬೇಕು.ಇಲ್ಲಿ ‘ಸಾಮಾನ್ಯ ಪತ್ರಗಳು’ ಅಂದರೆ ವೈಯುಕ್ತಿಕ ಪತ್ರಗಳಿಗೆ ಭಾಷೆ  ಹೀಗೆ ಇರಬೇಕು ಎಂಬುದಿಲ್ಲ. ಭಾವುಕರಾಗಿ, ಕೋಪಿಷ್ಠರಾಗಿ, ದುಃಖಿತರಾಗಿ, ಹಾಸ್ಯವಾಗಿ ಕೂಡ ಪತ್ರಗಳನ್ನು ಬರೆಯಬಹುದು.ಆದರೆ ಸರಕಾರಿ ಪತ್ರಗಳು, ವಾಣಿಜ್ಯ ಪತ್ರಗಳಲ್ಲಿ ಭಾವುಕತೆಗೆ ಅವಕಾಶವಿರುವುದಿಲ್ಲ. ಹೇಳುವುದನ್ನು ನಿಖರವಾಗಿ, ನೇರವಾಗಿ ಸರಳವಾಗಿ ಹೇಳಬೇಕು. ‘ಕೈ ಮುಗಿಯುತ್ತೇನೆ’, ‘ಕಾಲು ಹಿಡಿಯುತ್ತೇನೆ’, ‘ಕೆಲಸವಾಗದೆ ಇದ್ದರೆ ಕಾಲು ಮುರಿಯುತ್ತೇವೆ’ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ.

    ಕರೆಯೋಲೆಗಳು

    ಇನ್ನು ಕರೆಯೋಲೆಗಳ ಕಡೆಗೆ ಹೊರಳೋಣ, ಪದವೇ ಎಷ್ಟು ಸೊಗಸಾಗಿದೆ.ನಮ್ಮನ್ನು ಕರೆಯುವ, ಆಹ್ವಾನಿಸುವ ಓಲೆಗಳು ಅಥವಾ ಪತ್ರಗಳು.ಆತ್ಮೀಯ ಕರೆಯೋಲೆ, ಪ್ರೀತಿಯ, ಒಲವಿನ, ಮಮತೆಯ ಇತ್ಯಾದಿ ಪದಗಳೊಂದಿಗೆ ಓಲೆ ಸೇರಿಕೊಂಡಿರುತ್ತದೆ. ಶುಭಾಶಯ ಪತ್ರಗಳು ಒಂದು ಬಗೆ ಶುಭ+ಆಶಯ ಎಷ್ಟು ಚೆನ್ನಾಗಿದೆ ಪದ..! ಮದುವೆಗಳಲ್ಲಿ ಮೊದಲ ಕಾಗದವನ್ನು ಕುಲದೇವರಿಗೆ, ದೇವಸ್ಥಾನಕ್ಕೆ, ಕುಲಗುರುಗಳ ಮಠಕ್ಕೆ ಕೊಡುವುದೆ ಎಲ್ಲಿಗೂ ಕೊಡಲಿಲ್ಲ ಎಂದರೂ ಧರ್ಮಸ್ಥಳ ಮಂಜುನಾಥನಿಗಂತೂ ಹೆಚ್ಚಿನವರು ಮದುವೆ ಕಾಗದ ತಲುಪಿಸುತ್ತಾರೆ.ಈಗ ವಾಟ್ಸಪ್‌ನಲ್ಲಿ ಕರೆಯೋಲೆ ಕಳುಹಿಸುತ್ತಾರೆ. ‘ವಾಟ್ಸಪ್ ಕರಯೋಲೆಗೆ’ ವಾಟ್ಸಪ್ ಹಾರೈಕೆ ಸರಿ ಅಲ್ವ !

    ಖಾಸಗಿ ಶುಭ ಕರ‍್ಯಕ್ರಮಗಳಾದ ಮದುವೆ, ನಾಮಕರಣ, ಗೃಹಪ್ರವೇಶ, ಉದ್ದಿಮೆಗಳ ಪ್ರಾರಂಭ, ಶಾಲಾ ವಾರ್ಷಿಕೋತ್ಸವ, ಸರಕಾರಿ ಸಮಾರಂಭಗಳ ಆಹ್ವಾನ ಪತ್ರಿಕೆ ಮೊದಲಾದವು ಇವೆ. ಶಿವಗಣಾರಾಧನೆಯ, ವೈಕುಂಠ ಸಮಾರಾಧನೆಯ ಆಮಂತ್ರಣ ಪತ್ರಿಕೆ ಮರೆತಿದ್ದಾರೆ ಅಂದುಕೊಳ್ಳಬೇಡಿ ಅದನ್ನೂ ಅವಶ್ಯವಾಗಿ ಸೇರಿಕೊಳ್ಳಿ.ಇಂತಹ ಪತ್ರಗಳಲ್ಲಿ ಕಾರ್ಯಕ್ರಮ ಎಲ್ಲಿ, ಯಾವಾಗ, ಯಾವ ಸ್ಥಳ, ಎಷ್ಟು ಗಂಟೆಗೆ ಭೋಜನ ಇತ್ಯಾದಿಗಳಿಗೇ ಆದ್ಯತೆ, ಅದನ್ನೇ ಕೆಂಪು ಅಕ್ಷರಗಳಲ್ಲಿ ಮುದ್ರಿಸಿರುತ್ತಾರೆ. ನಾವು ಮುಖ್ಯವಾಗಿ ನೋಡೋದು ಅದನ್ನೇ ಅಲ್ವೆ !.

    ಹಿಂದೆ ಇಂತಹ ಪತ್ರಿಕೆಗಳಲಿ ವಿಳಾಸ ಬರೆಯಲೆಂದೇ ಮೂರು ನಾಲ್ಕು ಗೆರೆ ಎಳೆದಿರುತ್ತಿದ್ದರು.ಈಗ ಗೆರೆಗಳ ಜಾಗದಲ್ಲಿ ನಿಮ್ಮ ಹೆಸರು ನಮ್ಮ ಮನದಲ್ಲಿದೆ, ನಿಮ್ಮ ಹೆಸರು ಹಸುರಾರಾಗಿದೆ ಇತ್ಯಾದಿ ಇತ್ಯಾದಿ ಬರೆದಿರುತ್ತಾರೆ. ವಿಳಾಸದಾರರ ಹೆಸರೇ ಇರಲ್ಲ. ಎಲ್ಲಿಗೆ ಬಂದು ತಲುಪಿದ್ದೇವೆ ನೋಡಿ!.ಕಡೆ ಪಕ್ಷ ಹೆಸರು ಬರೆಯುವ ವ್ಯವಧಾನ ತಾಳ್ಮೆ ನಮ್ಮಲ್ಲಿ ಮಾಯವಾಗಿದೆ.

    ಮುಂದೆ ಪತ್ರದ ಒಕ್ಕಣೆಗೆ ಬರೋಣ ಮಕ್ಕಳನ್ನು ವ್ಯಾಸಂಗಕ್ಕೆ ಕಳುಹಿಸಿದರೆ ಆಗ ಅಪ್ಪ ಗದರಿ ‘ಹೆಚ್ಚು ಹಣ ಖರ್ಚು ಮಾಡಬೇಡ, ‘ಕಾಲಹರಣ ಮಾಡಬೇಡ ಎಂದು ಬರೆದರೆ, ಅಮ್ಮ ಮುದ್ದಿನಿಂದ “ಆರೋಗ್ಯ ಸರಿಯಾಗಿ ನೋಡಿಕೊ, ಕೋಡುಬಳೆ, ರವೆಉಂಡೆ, ನಿಪ್ಪಟ್ಟು ಕಳಿಸುತ್ತೇನೆ’’ ಎಂದು ಬರೆಯುವುದು.ಮಕ್ಕಳು “ಚೆನ್ನಾಗಿ ಓದದೆ ಇದ್ದರೂ “ಚೆನ್ನಾಗಿ ಓದಿ ಕೊಳ್ಳುತ್ತೇನೆ ವ್ಯಾಸಂಗ ಉತ್ತಮವಾಗಿದೆ ಪ್ರವಾಸ ಹೊರಡುತ್ತಿದ್ದೇವೆ ಹಣ ಕಳುಹಿಸಿ” ಎಂದು ಬರೆಯುತ್ತಿದ್ದರು.ಇನ್ನು ಕೆಲವರು ಎಷ್ಟೇ ಕಷ್ಟವಿದ್ದರೂ ನಾನು ‘ಕ್ಷೇಮವಾಗಿದ್ದೇನೆ’, ‘ಸುಖವಾಗಿದ್ದೇನೆ’ ಎಂದು ಬರೆಯುವುದಿತ್ತು.ಅತ್ತೆ ಮನೆ ಸೊಸೆಯಾದರೆ ಅದು ದೂರುಗಳ ಸರಪಳಿಯೇ ಸರಿ.ದೂರದಲ್ಲಿ ಸೈನ್ಯದಲ್ಲಿದದ ಸೈನಿಕರುಗಳಿಗೆ ಮನೋಸ್ಥೈರ್ಯ ತುಂಬಲು ಪತ್ರಗಳೇ ಸಂಜೀವಿನಿಯಾಗಿರುತ್ತಿದ್ದವು. ಈಗ ವೀಡಿಯೊ ಕಾಲ್ ಮಾಡಿ ಮಾತನಾಡುತ್ತಾರೆ ಬಿಡಿ.

    ಕೆಲವರಿಗೆ ಕೆಟ್ಟ ಚಾಳಿ, ಅದೇನೆಂದರೆ ಬೇರೆಯವರ ಪತ್ರಗಳನ್ನು ಓದುವುದು, ಪತ್ರಗಳು ಹರಿದು ಚಿಂದಿಯಾಗಿ ಕಸದ ಬುಟ್ಟಿಯಲ್ಲಿ ಬಿದ್ದಿದ್ದರೂ ಅದನ್ನೆಲ್ಲಾ ಒಟ್ಟುಗೂಡಿಸಿ ಓದುವುದು. ಕೆಲವರು ಪತ್ರಗಳನ್ನು ಮುಚ್ಚಿಡುತ್ತಾರೆ.ಸನ್ನಿವೇಶಗಳು ಕುತ್ತಿಗೆಗೆ ಬಂದಾಗ ಹೇಳಿ ಒಳ್ಳೆಯವರಾಗೂ ನೀಚರಿಗೇನೂ ಕಡಿಮೆಯಲ್ಲ ಬಿಡಿ. ಇನ್ನು ಕೆಲವರು ಮೊದಲು ಅವರು ಓದಿದ ನಂತರ ಬೇರೆಯವರಿಗೆ ಕೊಡುವುದು ಕೆಲವೊಮ್ಮೆ ವಿಷಯ ಕುತೂಹಲಕ್ಕೆ ಪತ್ರ ಓದುವ ಮುನ್ನವೇ ಪತ್ರ ಛಿದ್ರವಾಗುವುದೂ ಇತ್ತೆನ್ನಿ. ಎಸ್.ಎಂ.ಎಸ್. ಯುಗ ಬರುವುದಕ್ಕೂ ಪೂರ್ವದಲ್ಲಿ ವಿದ್ಯಾರ್ಥಿಗಳ ಫಲಿತಾಂಶವನ್ನು ಖಾಸಗಿ ಶಾಲೆಗಳು ಅಂಚೆಯ ಮೂಲಕ ಕಳುಹಿಸುತ್ತಿತ್ತು. ಬುದ್ಧಿವಂತ ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ತೆಗೆದುಕೊಂಡವರು ಅಂಚೆಯಣ್ಣನನ್ನು ಪುಸಲಾಯಿಸಿ “ನಾವೇ ಮನೆಗೆ ಕೊಡುತ್ತೇವೆ” ಎಂದು ಅದಕ್ಕೊಂದು ಗತಿ ಕಾಣಿಸಿಬಿಡುತ್ತಿದ್ದರು.

    ಸುಳ್ಳು ಪತ್ರಗಳು

    ಅತ್ಯಂತ ಸುಳ್ಳು ಪತ್ರಗಳು ಎಂದರೆ ಕೆಲವೊಮ್ಮೆ ಪ್ರೇಮಪತ್ರಗಳು.ನಿಜವಾದ ಪ್ರೀತಿಯಿಂದ ಪ್ರೇಮ ಪತ್ರಗಳನ್ನು ಬರೆದ ಓದುಗರಿದ್ದರೆ ಸಿಟ್ಟಾಗಬೇಡಿ ನಿಮ್ಮ ಪತ್ರಗಳ ವಿಚಾರಕ್ಕೆ ನಾನು ಬರಲಾರೆ ನಿಮ್ಮ ಪ್ರೀತಿ ಚಿರಾಯುವಾಗಿರಲಿ.ನಾನು ಹೇಳುತ್ತಿರುವುದು ಡಮ್ಮಿ ಪತ್ರಗಳ ಬಗ್ಗೆ. ಬೇರೆಯವರಿಗೆ ಅರ್ಥವಾಗಬಾರದೆಂದು ಉಲ್ಟ ಬರೆಯುವುದು, ಕ್ಯಾಡಲ್‌ನ ಪ್ರಯೋಗ ಏನೇನೋ? ಬರೆದವರಿಗೆ ಗೊತ್ತಿರುತ್ತೆ ಬಿಡಿ! ಆದರೆ ಪೋಷಕರಿಗೆ ಪತ್ರಗಳು ಸಿಕ್ಕಿದರಂತೂ ಊರು ಹಬ್ಬವಾಗುತ್ತಿತ್ತು.ಇನ್ನೊಂದು ಜಾತಿಯ ಸುಳ್ಳುಪತ್ರವೆಂದರೆ ರಜಾ ಅರ್ಜಿ. ಯಾವುದೇ ಶುಭಸಮಾರಂಭಕ್ಕೆ ಹೋಗಲು ಇಲ್ಲದ ರೋಗ ಬರಿಸಿಕೊಂಡು ಹೋಗುವುದು.

    ಮತ್ತೆ ಅತ್ಯಂತ ಅಪಾಯಕಾರಿ ಪತ್ರಗಳೆಂದರೆ ಅನಾಮಧೇಯ ಪತ್ರಗಳು.ಒಂದು ರೀತಿಯ ಮನೆಹಾಳು ಪತ್ರಗಳು.ಆಗುವ ಮದುವೆಗಳಿಗೆ ವಿಘ್ನ ತರಲು ಇಲ್ಲ ಬೇರೆಯವರ ಬಗ್ಗೆ ಈರ್ಷೆಯಿಂದ, ಅವರ ಏಳಿಗೆ ಸಹಿಸದೆ ಬರೆಯುವುದು.ಆನಂತರ ತಮಾಷೆ ನೋಡುವುದು ವಿಕೃತಿಯ ಪರಮಾವಧಿ. ಇವುಗಳನ್ನು ಹೇಡಿಗಳು ಬರೆಯುತ್ತಾರೆ ಎನ್ನಬಹುದೋ?ಗೊತ್ತಿಲ್ಲ.

    ನನಗೀಗ ಹೊಳೆಯುತ್ತಿರುವುದು ಹಿರಿಯರು ಹೇಳಿದಂತೆ ಪತ್ರಗಳನ್ನು ಬರೆಯುತ್ತಿದ್ದ ಸನ್ನಿವೇಶ. ಅವರು ಹೇಳಿದಂತೆಯೇ ನಾವುಗಳು ಬರೆಯಬೇಕಾಗಿತ್ತು.ವ್ಯಾಕರಣ ದೋಷವಾದರೂ, ಪುನರುಕ್ತಿಗಳಿದರೂ ಮಾತನಾಡದೆ ಬರೆದು ಮುಗಿಸಬೇಕಾಗಿತ್ತು.ಸಾಂಪ್ರದಾಯಿಕವಾಗಿ ಸ್ವಸ್ತಿಶ್ರೀ ಇಲ್ಲ ಕ್ಷೇಮ, ಶ್ರೀ, ದಿನಾಂಕ, ಊರಿನ ಹೆಸರು, ತೀರ್ಥರೂಪು, ಎಲ್ಲರೂ ಕ್ಷೇಮ, ನಿಮ್ಮ ಕ್ಷೇಮಕ್ಕೆ ಕಾಗದ ಬರೆಯಿರಿ ಇತ್ಯಾದಿ ಇತ್ಯಾದಿ ಬರೆದು ಇನ್ನೇನು ಹೆಚ್ಚಿನ ವಿಷಯವಿಲ್ಲ ಇದ್ದರೆ ಮುಂದಿನ ಕಾಗದದಲ್ಲಿ ಎಂದು ಬರೆದು ಸಹಿ ಮಾಡಲು ಕೊಡಬೇಕಾಗಿತ್ತು.ಬಹಳ ಕಷ್ಟದ ಕೆಲಸವಾಗಿತ್ತು ಬಿಡಿ.

    ಮಕ್ಕಳು ನಮಗೂ ಪತ್ರ ಬರೆಯಲು ಬರುತ್ತದೆ ಎಂಬ ಅಹಂನಲ್ಲಿ ತೀರ್ಥರೂಪುರವರಲ್ಲಿ ಮಾಡುವ ಆಶೀರ್ವಾದಗಳು ಬೇಡುವ ನಮಸ್ಕಾರಗಳು ಇಲ್ಲ ಪೂಜ್ಯ ‘ಪಿತಾಜಿ’ ಎನ್ನುವುದರ ಬದಲು ‘ಪಿಶಾಚಿ’ ಎಂದು ಬರೆದು ಇಂತಿ ತಮ್ಮ ವಿಶ್ವಾಸಿ ಎಂದು ಬರೆದು ಕಳುಹಿಸಿದರೆ ತಂದೆ-ತಾಯಿಗಳ ಪಾಡು ಯೋಚಿಸಬೇಕಾದ್ದೆ.ಪತ್ರಲೇಖನವನ್ನು ಸಂಭ್ರಮಿಸಬೇಕೋ ಪತ್ರಲೇಖನ ಸರಿಪಡಿಸಬೇಕೋ ತಿಳಿಯುತ್ತಿರಲಿಲ್ಲ. ಎದುರು ಸಿಕ್ಕಾಗ ತಲೆಗೊಂದು ಮೊಟಕುವುದು ಅಷ್ಟೇ. ನಿಮಗೂ ಇಂತಹ ಕೆಲ ವಿಚಾರ ನಿನಪಾಗುತ್ತಿರಬಹುದು. ಅಲ್ವ! ಕೆಲ ಬುದ್ಧಿವಂತರು ಪತ್ರ ಬರೆದಿದ್ದೇವೆ ಎಂಬ ಹೆಚ್ಚುಗಾರಿಕೆಯಲ್ಲಿ ‘ಇಂದ’ ವಿಳಾಸವನ್ನು ‘ಗೆ’ ವಿಳಾಸವನ್ನು ಅದಲು ಬದಲು ಮಾಡುತ್ತಿದ್ದುದು ನೆನಪಿದೆ.

    ಕೆಲವರಿಗೆ ಪತ್ರದಲ್ಲಿರುವ ತಪ್ಪುಗಳನ್ನು ಹೇಳಿಕೊಂಡು ನಗುವುದೇ ಖಯಾಲಿಯಾಗಿರುತ್ತಿತ್ತು, ಈಗ ಅವಕಾಶವೇ ಇಲ್ಲ!.ಕಾಗದಗಳನ್ನು ಬರೆಯುತ್ತಿದ್ದ ಆ ಕಾಲವೇ ಚೆನ್ನಾಗಿತ್ತು.ಪತ್ರಲೇಖನವೂ ಒಂದು ಕಲೆಯಲ್ಲವೆ, ಭಾವನಾತ್ಮಕತೆ, ಸೃಜಶೀಲತೆ ಪತ್ರಗಳಲ್ಲಿತ್ತು.ಎಷ್ಟೋ ದಿನಗಳವರೆಗೆ ಜೋಪಾನವಾಗಿ ಇಡುತ್ತಿದ್ದೆವು.ಈಗ ಫೋನ್ ಮೆಮೊರಿ ತುಂಬಿ ಹೋಗುತ್ತದೆ, ಸಿಸ್ಟಮ್ ಹ್ಯಾಂಗ್ ಆಗುತ್ತದೆ ಎಂದು ನಿರ್ಧಾಕ್ಷಿಣ್ಯವಾಗಿ ಡಿಲೀಟ್ ಮಾಡುತ್ತೇವೆ. ಅಂದಿನ ದಿನಮಾನಗಳಲ್ಲಿ ಕಾಗೆಗಳು ಮನೆಗಳ ಮೇಲೆ ಬಂದು ಕೂಗಿದರೆ ಕಡೇ ಪಕ್ಷ ಕಾಗದವಾದರೂ ಬರುವೆ ಎಂದು ಹೇಳೋರು. ಅಂದರೆ ಕಾಗದಕ್ಕೂ ಅಷ್ಟು ಬೆಲೆಯಿತ್ತು !ಕಾಗದ ಬರೆಯಲು ಅವರಿಗೆ ಬಾರದೆ ಇದ್ದರೂ ಮತ್ತೊಬ್ಬರಲ್ಲಿ ಬರೆಸುವವರು ಇದ್ದರು, ಈಗ ಬರೆಯಲು ಬಂದರೂ ಟೈಪ್ ಮಾಡುತ್ತೇವೆ. ಕೆಲವರು ಅದೂ ಮಾಡಲ್ಲ ಧ್ವನಿ ಸಂದೇಶ ರವಾನಿಸುತ್ತಾರೆ.  ನಾವು ಹೇಳಿದಂತೆ ಟೈಪ್ ಮಾಡಲು ಆ್ಯಪ್ಗಳು ಬಂದಿವೆ.ಒಮ್ಮೊಮ್ಮೆ ಕೆಲವರಿಗೆ ಅನಿವಾರ್ಯವಾಗಿ ಪತ್ರಗಳನ್ನು ಬರೆಯಲೇಬೇಕೆಂದಾಗ ನಕಲು ಮಾಡುವ ಚಾಳಿ. ಹಾಗೆ ನಕಲು ಮಾಡುವಾಗ ಎಚ್ಚರದಿಂದ ಇರಬೇಕು. ಇಲ್ಲ ಅಭಾಸಗಳು ಖಂಡಿತ. ಹೆರಿಗೆ ರಜೆ ಹಾಕುವ ಮಹಿಳೆಯ ರಜಾ ಅರ್ಜಿಯನ್ನು ಪುರುಷನೊಬ್ಬ ನಕಲು ಮಾಡಿದರೆ ಹೇಗೆ ?. ಹೌದು ತಾನೆ !

    ಇಲ್ಲಿಯವರಗೂ ಬಹುಪಾಲು ಅಂಚೆ ಪೆಟ್ಟಿಗೆಗೆ ಹಾಕುವ ಪತ್ರಗಳ ಸಮಾಚಾರವಾಯಿತು. ಅಂಚೆ ಪೆಟ್ಟಿಗೆಗೆ ಹಾಕದ ಹಾಕಲಾರದ ಅನೇಕ ಪತ್ರಗಳೂ ಇವೆ. ಇಂತಹ ಪತ್ರಗಳನ್ನು ಯಾರು ಬರೆಯುತ್ತಾರೆ ? ಎಂದರೆ ಬರೆಯೋದಿಲ್ಲವೇ ?ಮನೆ ಬಿಟ್ಟು ಹೋಗುವವರು ಬರೆಯುತ್ತಾರೆ.“ಏನೋ ತಪ್ಪಾಗಿದೆ” “ನನ್ನನ್ನು ಹುಡುಕಲು ಪ್ರಯತ್ನಿಸಬೇಡಿ” ಎಂದು ಬರೆದು ಮೇಜಿನ ಮೇಲೋ ಬಾಗಿಲಿಗೋ ಸಿಕ್ಕಿಸಿ ಹೊರಟಿರುತ್ತಾರೆ.

    ಜನಜಂಗುಳಿಯಿದ್ದ ಸಮಾರಂಭಗಳಲ್ಲಿ ತಮಾಷೆ ನೋಡಲೆಂದೇ ಹೇಗೋ ಬೆದರಿಕೆ ಪತ್ರಗಳನ್ನು ರವಾನಿಸುವುದು ಇದೆ. ಆತ್ಯಹತ್ಯೆ ಮಾಡಿಕೊಳ್ಳುವವರು “ನನ್ನ ಸಾವಿಗೆ ನಾನೇ ಕಾರಣ” ಎಂದೋ “ಇಂತಹವರೆ ಕಾರಣರು ಅವರಿಗೆ ಶಿಕ್ಷೆ ಕೊಡಿ” ಎಂದೋ ಬರೆದಿಡುವ ಪತ್ರಗಳು ಸಾಮಾನ್ಯ.

    ಒಂದಷ್ಟೇ ವರ್ಷಗಳ ಹಿಂದೆ ಫೋನ್ ಇಲ್ಲದ ಕಾಲದಲ್ಲಿ ದಂಪತಿಗಳಿಬ್ಬರೂ ಕೆಲಸಕ್ಕೆ ಹೋಗಬೇಕಾದಲ್ಲಿ ಮನೆಗೆ ಬೇಗ ಬರುವವರಿಗೆ ಸಂದೇಶ ತಲುಪಿಸಲು ಪತ್ರಗಳನ್ನು ಬರೆದು ಗಂಡಸರಿಗಾದರೆ ಟಿ.ವಿ. ಬಳಿ ಹೆಂಗಸರಿಗಾದರೆ ಡ್ರೆಸ್ಸಿಂಗ್ ಟೇಬಲ್ ಬಳಿ ಇಟ್ಟು ಹೋಗುತ್ತಿದ್ದರು. ತುಂಬಾ ಮರೆಗುಳಿಗಳಾಗಿದ್ದವರೂ ತಮಗೆ ತಾವೇ ದಿಕ್ಸೂಚಿ ಎಂಬಂತೆ ಪತ್ರಗಳನ್ನು ಇಲ್ಲ ಟಿಪ್ಪಣಿಗಳನ್ನು ಬರೆದಿಡುತ್ತಿದ್ದರು. ಈಗೆಲ್ಲ ಗೂಗಲ್ ಕ್ಯಾಲೆಂಡರ್‌ನಲ್ಲಿ ರಿಮೈಂಡರ್‌ಗೆ ಹಾಕುವುದಲ್ವೆ !

    ಈಗ ಮೊಬೈಲ್ ಮಯ

    ತರಗತಿಗಳನ್ನು ಅಧ್ಯಾಪಕರು ಪಾಠ ಮಾಡುವಾಗ ಮುಂದೆ ಮಾಡಬೇಕಾದ ಕ್ಲಾಸ್ ಬಂಕ್ಕ್ ಯೋಜನೆಗೆ ಸಂದೇಶಗಳು ಬೆಂಚಿಂದ ಬೆಂಚಿಗೆ ರೂಪಾಂತರಗಳಲ್ಲಿ ರವಾನೆಯಾಗುತ್ತಿದ್ದವು. ಅತೀ ಬುದ್ಧಿವಂತರೂ ಅಧ್ಯಾಪಕರಿಗೆ ಕಾಟ ಕೊಡಲು ಅಸಂಬದ್ಧ ಪ್ರಶ್ನೆಗಳನ್ನು ಚೀಟಿ ಸಂದೇಶಗಳ ಮೂಲಕ ಬೇರೆಯವರಿಂದ ಕೇಳಿಸುವುದೆಲ್ಲ ಹಳೆಯದು. ಆದರೆ ಅಧ್ಯಾಪಕರು ವಿದ್ಯಾರ್ಥಿಗಳಿಗಿಂತ ಬುದ್ಧಿವಂತರಾಗಿ ಬೆಲ್ ಆಗುವ ಸಮಯಕ್ಕೆ ಪ್ರಶ್ನೆಗಳನ್ನು ಪಡೆದು ಈಗ ಸಮಯವಾಯಿತು ನಾಳಿನ ತರಗತಿಯಲ್ಲಿ ಹೇಳುತ್ತೇನೆ ಎಂದು ಮರುದಿನ ತಿಳಿದುಕೊಂದು ಬಂದು ಹೇಳುತ್ತಿದ್ದರು. ಈಗ ಅಂತಹ ಸಂದೇಶಗಳೆಲ್ಲ ಮೊಬೈಲ್‌ನಲ್ಲಿ ರವಾನೆಯಾಗುತ್ತಿರುತ್ತವೆ. ಸೈಲೆಂಟ್ ಮೋಡ್‌ನಲ್ಲಿ ಇರಿಸಿಕೊಂಡ ವಿದ್ಯಾರ್ಥಿಗಳ ಮೊಬೈಲ್‌ನ ವೈಬರೇಟರ್ ಸದ್ದಿಗೆ ಅಧ್ಯಾಪಕರು ಅಲರ್ಟ್ ಆಗುತ್ತಾರೆ. ಆದರೆ ವಿದ್ಯಾರ್ಥಿಗಳು ಏನೂ ಗೊತ್ತಿಲ್ಲವೆಂಬಂತೆ ಬಂಡೆಕಲ್ಲಿನಂತೆ ಕುಳಿತುಕೊಂಡಿರುತ್ತಾರೆ.ಬೋರ್ಡಿಂಗ್ ಶಾಲೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳದ್ದೇ ಬೇರೆ ಕತೆ, ಎಲ್ಲಾ ಕಾಗದಗಳನ್ನು ಶಾಲೆಯವರು ಮೊದಲು ಓದುತ್ತಿದ್ದರು. ಹಾಗಿದ್ದಾಗ ಮೊದಲು ಶಾಲೆಯನ್ನು ಶಾಲೆಯವರನ್ನು ಹೊಗಳೆ ಬರೆದು ಉಳಿದದ್ದನ್ನು ಸೇರಿಸಬೇಕಾಗಿತ್ತು.

    ಇನ್ನು ಹಲವು ಬಗೆಯ ಪತ್ರಗಳಿವೆ. ಬೇಡಿಕೆಗಳನ್ನು ಈಡೇರಿಸುವಂತೆ, ‘ನನ್ನ ಗಂಡನಿಗೆ ಬುದ್ಧಿ ಕಲಿಸು’ ಎಂದೋ, “ಇಂಥ ಹುಡುಗಿಯ ಇಲ್ಲ ಹುಡುಗನ ಜೊತೆ ಮದುವೆ ಮಾಡಿಸು ನಾನು ಇಂತಹದ್ದನ್ನು ಕೊಡುತ್ತೇನೆ” ಎಂದು ವ್ಯವಹಾರ ಕುದುರಿಸಿ ದೇವಸ್ಥಾನದ ಹುಂಡಿಗಳಿಗೆ ಹಾಕುವ ಪತ್ರಗಳು ಇವೆ. ಮತ ಪೆಟ್ಟಿಗೆಯಲ್ಲಿ ಹಾಕುವ ಟೀಕಾಪತ್ರಗಳು, ಗಲಾಟೆ ಮಾಡಬಾರದು, ನೋಟ್ಸ್ ಎಲ್ಲಾ ಬರೆದು ತೋರಿಸಬೇಕೆಂದು ಶಿಕ್ಷಕರು ವಿದ್ಯಾರ್ಥಿಗಳಿಂದ ಬರೆಸಿಕೊಳ್ಳುವ ತಪ್ಪೊಪ್ಪಿಗೆ ಪತ್ರ, ಕ್ಷಮಾಪಣಾ ಪತ್ರಗಳೂ ಇವೆ. ಕ್ಷಮೆ ಕೋರಿ ವಿದ್ಯಾರ್ಥಿ ಪತ್ರ ಬರೆಯಲ್ಲ ನಮಗೆ ಕ್ಷೇಮ ತೋರಿ ಎಂದು ಬರೆಯುತ್ತಾರೆ. ಇನ್ನೊಂದು ಪೋಲಿಸ್ ಠಾಣೆಯಲ್ಲಿ ಇನ್ನು ಮುಂದೆ ಯಾರ ತಂಟೆ-ತಕರಾರಿಗೆ ಹೋಗುವುದಿಲ್ಲವೆಂದು ಬರೆಸುವೆ ಮುಚ್ಚಳಿಕೆಯ ಪತ್ರ.ಈಗ ಇಂತಹ ಪತ್ರಗಳಿಗೆ ಬದಲಾಗಿ ಅವರ ತಪ್ಪೊಪ್ಪಿಗೆ, ಹೇಳಿಕೆಗಳನ್ನು ಆಡಿಯೋ-ವೀಡಿಯೋ ಮಾಡಿಕೊಳ್ಳುತ್ತಾರೆ ಬಿಡಿ.

    ಬದಲಾದ ದಿನಮಾನಗಳಲ್ಲಿ ಅಂಚೆ ವ್ಯವಸ್ಥೆ ತನ್ನದೇ ಆದ ಛಾಪು ಮೂಡಿಸಿದೆ ಆದರೆ ಅದಕ್ಕೂ  ವಿಘ್ನ ಲಾಕ್ಡೌನ್ ಕಾಲದಲ್ಲಿ ಆಗಿತ್ತು. ಇದೀಗ ಅನ್ಲಾಕ್ ಪ್ರಕ್ರಿಯೆಯಿಂದ  ಚಟುವಟಿಕೆಗಳು ಗರಿಗೆದರಿವೆ.ಒಟ್ಟಾರೆಯಾಗಿ ಈ ಓಲೆ ಪತ್ರ, ಕಾಗದ ಏನಾದರೂ ಕರೆಯಿರಿ ನಮ್ಮ ಸಂವೇದನೆಯ ಸಂವಾಹಕ ತಡ ಮಾಡಬೇಡಿ ನಿಮ್ಮ ಸಂವೇದನೆಯನ್ನು ಪತ್ರದ ಮೂಲಕ ನಿಮ್ಮ ಇಷ್ಟ ಮಿತ್ರರಿಗೆ ಸಂವಹಿಸಿ. ಪತ್ರಗಳು ಇತಿಹಾಸ ಹೇಳುತ್ತವೆ. ಪತ್ರ ಮುಖೇನ ತಾವೂ ಇತಿಹಾಸ ಸೃಜಿಸಿ.

    ಸುಮಾ ವೀಣಾ

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.‘’ನಲವಿನ ನಾಲಗೆ’”ಎಂಬ ಪ್ರಬಂಧಸಂಕಲನ ಹೊರತಂದಿದ್ದಾರೆ.

    ಇದರೊಂದಿಗೆ ಪ್ರಕಟವಾಗಿರುವ ಚಿತ್ರ ಬರೆದವರು ಕಿರಣ ಆರ್ . ಅಂಚೆ ಕಾರ್ಡನಲ್ಲೇ ಈ ಚಿತ್ರವನ್ನು ಅವರು ರಚಿಸಿದ್ದಾರೆ

    ಹೊನ್ನಿಗಿರುವಷ್ಟು ಬೆಲೆ ಪಿನ್ನಿಗಿತ್ತು

    ಬಾಲ್ಯದಲ್ಲಿ ಎಲ್ಲಿಗೆ ಹೋಗ್ಬೇಕಂದ್ರೂ ಬರಿಗಾಲಿನಲ್ಲೇ ಹೋಗುತ್ತಿದ್ದೆವು. ಆಗ ಟಾರು ರಸ್ತೆಗಳೂ ಕಡಿಮೆಯೇ ಕಲ್ಲು ಮುಳ್ಳಿನ ಕಾಲುದಾರಿಗಳಲ್ಲೇ ನಮ್ಮ ಸಂಚಾರ ಆಟ ಪಾಟ ಎಲ್ಲವೂ ಆಗಿತ್ತು .

    ವಾರದಲ್ಲಿ ಎರಡು ಬಾರಿಯಾದರೂ ಮುಳ್ಳು ಚುಚ್ಚಿಸಿಕೊಂಡು ಕುಂಟುತ್ತಿದ್ದೆವು . ಕಾಲಿಗೆ ಚುಚ್ಚಿದ್ದ ಆ ಮುಳ್ಳನ್ನು ಹುಡುಕುವ ಮೊದಲು ನಾವು ಹುಡುಕುತ್ತಿದ್ದುದ್ದೇ ‘ಪಿನ್ನನ್ನು’ .

    ಮೊದಲಿಗೆ ನಾವೇ ಪಿನ್ನಿನ ಮೂಲಕ ಮುಳ್ಳನ್ನು ತೆಗೆಯಲು ಪ್ರಯತ್ನ ಪಟ್ಟು ಸಾಧ್ಯವಾಗದಿದ್ದಾಗ ಹಿರಿಯರ ಕೈಗೆ ನಮ್ಮ ಕಾಲನ್ನು ಒಪ್ಪಿಸುತ್ತಿದ್ದೆವು .
    ಅವರು ಒಂದಷ್ಟು ಬೈದು ಮುಳ್ಳನ್ನು ತೆಗೆದ ನಂತರ ನಮಗೆ ಜೋಪಾನವಾಗಿರು ಅನ್ನುವುದಕ್ಕಿಂತಾ ಹೆಚ್ಚಾಗಿ ಪಿನ್ನನ್ನು ಜೋಪಾನವಾಗಿಡುವಂತೆ ಹೇಳುತ್ತಿದ್ದರು .
    ಹೊನ್ನಿಗಿರುವಷ್ಟು ಬೆಲೆ ಪಿನ್ನಿಗಿತ್ತು.ಹಾಗಂತ ಬೆಲೆಯಲ್ಲಲ್ಲ ಆವಶ್ಯಕತೆಯಲ್ಲಿ .

    ಪಿನ್ನಿನ ಬಗ್ಗೆ ಪಿನ್ ಟು ಪಿನ್ ಆಗಿ ಬರೆಯಲು ಕಾರಣ ಪಿನ್ನಿನ ಜೊತೆ ನಮಗಿರುವ ದಶಕಗಳಷ್ಟು ಹಳೆಯದಾದ ಸ್ನೇಹ ಸಂಬಂಧ.

    ನಮ್ಮ ಹವಾಯಿ ಚಪ್ಪಲಿಯು ಕಿತ್ತುಬಂದಾಗ ಇದನ್ನು ಪಟ್ಟಿಗೂ ಚಪ್ಪಲಿಗೂ ನಡುವೆ ಸಿಕ್ಕಿಸಿ ನಡೆಯುವಂತೆ ಮಾಡುತ್ತಿತ್ತು .ಪ್ರತೀ ಬಾರಿ ಅಂಗಿಗೆ ಗುಂಡಿ ಇಲ್ಲವಾದಾಗ ಇದನ್ನು ಬಳಸಿದ್ದೇವೆ .
    ಚಡ್ಡೀ ಹುಕ್ಸ್ ಕಿತ್ತೋದಾಗ ಚಡ್ಡೀನ ಸೊಂಟದಲ್ಲಿ ನಿಲ್ಲುವಂತೆ ಮಾಡಿ ನಮ್ಮ ಮರ್ಯಾದೆ ಕಾಪಾಡಿದ್ದು ಇದೇ ಪಿನ್ನು .

    ಪ್ಯಾಂಟಿನ ಜಿಪ್ಪಾಗಲಿ ಬ್ಯಾಗಿನ ಜಿಪ್ಪಾಗಲೀ ಹರಿದು ಕೆಲಸ ಮಾಡದಿದ್ದಾಗ ಕೆಲಸಕ್ಕೆ ಬರುತ್ತಿದ್ದುದ್ದು ಇದೇ ಪಿನ್ನು .
    ಮದ್ರಾಸ್ ಐ ಎಂಬ ಕಣ್ಣಿನ ಸೋಂಕಾದಾಗ ಆ ನಾಲ್ಕಾಣೆಯ ಟ್ಯೂಬನ್ನು ತೆರೆಯಲು ಆವಶ್ಯಕವಾಗ್ತಿದ್ದಿದ್ದು ಈ ಪಿನ್ನು .

    ಮನೆಮಂದಿಯೆಲ್ಲಾ ಉಪಯೋಗಿಸುತ್ತಿದ್ದ ಬಾಚಣಿಗೆಯ ಹಲ್ಲುಗಳ ನಡುವಿನ ಕೊಳೆಯನ್ನು ತೆಗೆಯಲೂ ಇದೇ ಬೇಕಾಗಿತ್ತು .

    ಗಾತ್ರದಲ್ಲಿ ಸಣ್ಣದೇ ಆದರೂ ಇದರ ಪಾತ್ರ ಮಾತ್ರ ದೊಡ್ಡದು .ಆಪದ್ಭಾಂಧವನಾಗಿ , ಅಮ್ಮನ ಅಸಿಸ್ಟೆಂಟ್ ಆಗಿ , ಟೈಲರ್ರಾಗಿ , ಡಾಕ್ಟರ್ ಆಗಿ , ಕ್ಲೀನರ್ ಆಗಿ , ರಕ್ಷಕನಾಗಿ …. ನಮ್ಮ ಬಾಲ್ಯವನ್ನು ಕಾಪಾಡಿ ದಾಟಿಸಿದ ಕೆಳಮಧ್ಯಮವರ್ಗದ ಬಹುಪಯೋಗಿ “ಆಯುಧ” ಈ ಪಿನ್ನು .

    ಆವತ್ತಿನಿಂದ ಇವತ್ತಿಗೂ ಮಹಿಳೆಯರ ನಂಬಿಕೆಯನ್ನು ಬಲವಾಗಿ ಹಿಡಿದಿಟ್ಟಿಕೊಂಡಿದೆ ಅಂದ್ರೆ ಸುಳ್ಳಲ್ಲ .

    ಜಗತ್ತಿನ ಸಣ್ಣ ದೊಡ್ಡ ಫ್ಯಾಷನ್ ಷೋಗಳಲ್ಲಿ ಲಲನೆಯರ ಮಾರ್ಜಾಲ ನಡಿಗೆಯ ಬೆನ್ನಿಗೆ ಈ ಪಿನ್ನಿದೆ .

    ಇದರ ಇನ್ನೊಂದು ವಿಶೇಷವೇನೆಂದರೆ ಮನೆಯ ಎಲ್ಲೋ ಯಾವುದೋ ಒಂದು ಮೂಲೆಯಲ್ಲಿ ಇದ್ದಂತೆ ಭಾಸವಾಗುತ್ತಿದ್ದರೂ ಇದು ಇರುತ್ತಿದ್ದದ್ದೇ ಅಮ್ಮನ ಕತ್ತಲ್ಲಿ. ನಮ್ಮನ್ನ ಸೇಫ್ಟಿಯಾಗಿ ನೋಡಿಕೊಳ್ಳುವ ಅಮ್ಮ ಸೇಫ್ಟಿಯಾಗಿ ಅದನ್ನು ಇಟ್ಟಿರುತ್ತಿದ್ದಳು .

    ಜಗತ್ತಿನಲ್ಲಿ ಈ ಸೇಫ್ಟಿ ಪಿನ್ನನ್ನು ಯಾರು ಕಂಡುಹಿಡಿದ್ನೋ ಏನೋ ಆ ಪುಣ್ಯಾತ್ಮನಿಗೆ ಅನಂತಾನಂತ ಧನ್ಯವಾದಗಳು.

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಹಾರುತ್ತಿದ್ದ ವಿಮಾನನದಲ್ಲೇ ಜನಿಸಿದ ಮಗು; ಕ್ಯಾಪ್ಟನ್ ಹೇಳಿದ ಕ್ಷಣ ಕ್ಷಣದ ಕಥೆ

    ದೆಹಲಿಯಿಂದ ಬೆಂಗಳೂರಿಗೆ ಧಾವಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ -6E 122- ಪ್ರಯಾಣಿಕರೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಬುಧವಾರ ವರದಿಯಾಗಿದೆ. ಈ ವಿಮಾನದ ಕ್ಯಾಪ್ಟನ್ ವಿಂಗ್ ಕಮಾಂಡರ್ ಸಂಜಯ್ ಮಿಶ್ರಾ ಅವರು ಈ ಘಟನೆಯ ವಿವರಗಳನ್ನು ಅವರ ಒಂದು ಕಾಲದ ಸಹೋದ್ಯೋಗಿ ಮಧುಸೂಧನ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಅದರ ಪೂರ್ಣ ಪಾಠವನ್ನು ಕನ್ನಡಪ್ರೆಸ್. ಕಾಮ್ ಇಲ್ಲಿ ನೀಡಿದೆ.

    ದೆಹಲಿಯಿಂದ ನಮ್ಮ ವಿಮಾನ ಆಗಷ್ಟೆ ಹೊರಟಿತ್ತು. ವಾತಾವರಣವೂ ತಿಳಿಯಾಗಿತ್ತು. ಮುಸ್ಸಂಜೆಯ ಹೊತ್ತು. ಕ್ಯಾಬಿನ್ ಕ್ರ್ಯೂ ಒಬ್ಬರು ನನ್ನ ಬಳಿ ಧಾವಿಸಿ ಬಂದರು. ಅವರ ಧ್ವನಿಯಲ್ಲಿ ಸ್ವಲ್ಪ ಆತಂಕವಿತ್ತು.

    “ಕ್ಯಾಪ್ಟನ್….. ಸೀಟ್ 1ಸಿಯಲ್ಲಿ ರುವ ಮಹಿಳೆಯೊಬ್ಬರ ಆರೋಗ್ಯದಲ್ಲಿ ಸ್ವಲ್ಪ ಏರು ಪೇರಾಗಿದೆ. ಡಿಸ್ ಕಂಫರ್ಟ್ ಆಗಿದ್ದಾರೆ. ಬೆಳಿಗ್ಗೆಯಿಂದ ಆಕೆ ಏನು ತಿಂದಂತೆ ಕಾಣುತ್ತಿಲ್ಲ” ಎಂದರು. ಆಕೆಗೆ ಏನಾದರು ತಿನ್ನಲು ಕೊಡಲು ಹೇಳಿದೆ. ಆದರೂ ಆಕೆಯ ಪರಿಸ್ಥಿತಿ ಸುಧಾರಿಸಿದಂತೆ ಕಾಣಲಿಲ್ಲ. ಆಕೆಯ ಸಂಕಟ ಹೆಚ್ಚಾಯಿತು. ಈ ಮಧ್ಯೆ ಹೊಟ್ಟೆ ನೋವು ಕೂಡ ಆರಂಭವಾಯಿತು.ಆಕೆ ಗರ್ಭಿಣಿ ಎಂದು ಗೊತ್ತಾಯಿತು. ಇನ್ನು ತಡಮಾಡುವುದು ಬೇಡವೆಂದು ಕೂಡಲೆ ವಿಮಾನದಲ್ಲಿ ಯಾರಾದರು ವೈದ್ಯರು ಇದ್ದಾರ ಎಂದು ಅನೌನ್ಸ್ ಮಾಡಲು ಹೇಳಿದೆ.

    ನಮ್ಮ ಅದೃಷ್ಟ ಇಬ್ಬರು ವೈದ್ಯರು ವಿಮಾನದ ಪ್ರಯಾಣಿಕರಾಗಿದ್ದರು. ಒಬ್ಬರು ರಿಯಾದ್ ನಲ್ಲಿ ಪ್ರಾಸ್ಲಿಕ್ ಸರ್ಜನ್ ಆಗಿರುವ ಡಾ. ನಾಗರಾಜ್ ಮತ್ತು ಇನ್ನೊಬ್ಬರು ಕ್ಲೌಡ್ ನೈನ್ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಶೈಲಜಾ.

    ಈ ವೇಳೆಗೆ ನಮ್ಮ ವಿಮಾನ ಜೈಪುರದಲ್ಲಿತ್ತು. FL 390 ಆಲ್ಟಿಟ್ಯೂಡ್ ಲ್ಲಿ ಹಾರಾಡುತ್ತಿತ್ತು. ಆರಂಭದಲ್ಲಿ ಆ ಪ್ರಯಾಣಿಕರಿಗೆ ಗ್ಯಾಸ್ಟ್ರಿಕ್ ತೊಂದರೆ ಇರಬಹುದು ಎಂದು ವೈದ್ಯರು ಭಾವಿಸಿದರು. ಆದರೆ ಪರಿಸ್ಥಿತಿ ಸುಧಾರಿಸಲಿಲ್ಲ. ಆಕೆಯ ನೋವು ಹೆಚ್ಚುತ್ತಲೆ ಹೋಯಿತು. ಇಬ್ಬರೂ ವೈದ್ಯರು ಸತತ ನಿಗಾ ಇಟ್ಟಿದ್ದರು. ನಾನು ಲೇಡಿ ಡಾಕ್ಟರ್ ಬಳಿ ಮಾತಾಡಿದೆ. ಅವರು ಹೆದರುವ ಅಗತ್ಯ ಇಲ್ಲವೆಂತಲೂ ಪರಿಸ್ಥಿತಿಯನ್ನು ಗಮನಿಸುತ್ತಿರುವುದಾಗಿಯೂ ಹೇಳಿದರು.

    ವಿಮಾನ ಭೋಪಾಲ್ ನ ಉತ್ತರದಲ್ಲಿತ್ತು. ಈ ವೇಳೆಗೆ ಆಕೆಯಲ್ಲಿ ತೀವ್ರ ರಕ್ತ ಸ್ರಾವ ಕಾಣಿಸಿತು. ಕ್ಯಾಬಿನ್ ಕ್ರ್ಯೂ ಸನ್ನದ್ಧರಾದರು. ಕ್ಷಣಾರ್ಧದಲ್ಲಿ ವಿಮಾನದ ಕಿಚನ್- galley- ಅನ್ನು ಲೇಬರ್ ರೂಮ್ ಆಗಿ ಪರಿವರ್ತಿಸಿದರು. ವಿಮಾನ ಹಾರುತ್ತಲೇ ಇತ್ತು. ನಾನು ಮುಂದೇನು ಮಾಡಬೇಕು ಎಂಬುದನ್ನು ಡಾಕ್ಟರ್ ಸಲಹೆ ಮೇರೆಗೆ ನಿರ್ಧರಿಸೋಣ ಎಂದು ಕೊಂಡೆ.

    ಇದಕ್ಕಿದ್ದಂತೆ ವಿಮಾನದೊಳಗೆ ಚಟುವಟಿಕೆ ಗರಿಗೆದರಿತು, ಕ್ಯಾಬಿನ್ ಸಿಬ್ಬಂದಿ ಗಡಿ ಬಿಡಿಯಲ್ಲಿ ಓಡಾಡ ತೊಡಗಿದರು. ಆತಂಕದ ವಾತಾವರಣ. ನಿಟ್ಟುಸಿರು, ನಿಶಬ್ಧ…ಇದೆಲ್ಲಾ ಕೆಲವೆ ಹೊತ್ತು .ಮರುಕ್ಷಣ ವಿಮಾನದಲ್ಲಿ ಚಪ್ಪಾಳೆ. ಗಂಡು ಮಗುವಿನ ಜನನವಾಗಿತ್ತು. ಆತಂಕದ ಕ್ಷಣಗಳು ಮಾಯಾವಾಗಿ ಎಲ್ಲೆಲ್ಲೂ ಸಂತಸ ಮೂಡಿತು. ಈ ಒಂದು ಸಂದರ್ಭದಲ್ಲಿ ರೋಮಾಂಚನ ಗೊಳ್ಳದ ಒಬ್ಬ ಪ್ರಯಾಣಿಕರು ಅಲ್ಲಿರಲಿಲ್ಲ ಎಂದು ನಾನು ಹೇಳಬಲ್ಲೆ. ಕ್ಲೌಡ್ ನೈನ್ ನಲ್ಲಿ ಕ್ಲೌಡ್ ನೈನ್ ವೈದ್ಯರ ನರೆವಿನೊಂದಿಗೆ ಹೊಸ ಜನ್ಮವೊಂದು ಅವತರಿಸಿತು.

    ಆದರೆ ಆ ಮಗು ಪ್ರಿ ಮೆಚೂರ್. ಎಷ್ಟು ತಿಂಗಳ ಮಗು ಎಂಬುದು ಖಾತ್ರಿ ಆಗಲಿಲ್ಲ. ಆದರೆ ಮತ್ತೇನಾದರು ಹೆಚ್ಚು ಕಡಿಮೆ ಆಗಿ ಬಿಟ್ಟರೆ ಎಂಬ ಭಯ. ಡಾಕ್ಟರೇನೋ ಆತಂಕ ಪಡಬೇಕಾಗಿಲ್ಲ. ತಾಯಿ ಮಗು ಹುಷಾರಾಗಿದ್ದಾರೆ ಎಂಬ ಅಭಯ ನೀಡಿದರು. ಆದರೆ ನನಗೆ ಏನಾಗುವುದೋ ಎಂಬ ಆತಂಕ ದೂರವಾಗಲಿಲ್ಲ,

    ನಾಗಪುರ, ಇಂದೋರ್ ದೂರವಾಗಿತ್ತು. ಹತ್ತಿರವೆಂದರೆ ಹೈದರಾಬಾದ್. ಅಲ್ಲಿಗೆ ನನ್ನ ವಿಮಾನವನ್ನು ತಿರುಗಿಸಬೇಕಿತ್ತು. ಆದರೆ ಕೋವಿಡ್ ಕಾಲದಲ್ಲಿ ಆ ಮಗುವನ್ನು ಅಲ್ಲಿ ಇಳಿಸಿ ಹೋಗಲು ನನ್ನ ಮನಸ್ಸು ಒಪ್ಪಲಿಲ್ಲ. ಆ ಪ್ರಯಾಣಿಕರ ಜೊತೆ ಮತ್ತಾರು ಇರಲಿಲ್ಲ. ನಾನು ವಿಮಾನದಲ್ಲಿ ಹೊಸ ಪ್ರಯಾಣಿಕರು ಸೇರಿಕೊಂಡ ವಿಷಯನ್ನು ಪ್ರಕಟಿಸಿದೆ. ಚೆನ್ನೈ, ನಾಗಪುರ , ಬೆಂಗಳೂರು ಏರ್ ಟ್ರಾಫಿಕ್ ನಿಂದ ಅಭಿನಂದನೆಗಳು ಕೇಳಿ ಬಂದವು. ನಾಗಪುರದ ಏರ್ ಟ್ರಾಫಿಕ್ ನೇರವಾಗಿ ಬೆಂಗಳೂರು ಸೇರುವುದಕ್ಕೆ ಅನುವು ಮಾಡಿಕೊಟ್ಟರು. ಯಾವುದೇ ಅಡೆತಡೆ ಇಲ್ಲದೆ ವೇಗವಾಗಿ ಬೆಂಗಳೂರನ್ನು ಸೇರಿ ನಿಟ್ಟುಸಿರು ಬಿಟ್ಟೆ.

    ಈ ವೇಳೆಗೆ ಬೆಂಗಳೂರಿಗೆ ಸುದ್ದಿ ಮುಟ್ಟಿತ್ತು. ತಾಯಿ ಮಗುವಿಗೆ ಅದ್ದೂರಿ ಸ್ವಾಗತ. ಆಸ್ತರ್ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು, ಕೆಎಐಲ್ ಸಿಬ್ಬಂದಿ ಸ್ವಾಗತ ಕೋರಿದರು. ಬ್ಯಾನರ್ ಗಳು.. ಚಾಕೋಲೇಟ್ಗಳು…

    ಅರ್ಧಗಂಟೆಯ ಹಿಂದೆ ಹುಟ್ಚಿದ ಹೀರೋನನ್ನು ಕೈ ಗೆತ್ತಿಕೊಂಡೆ.. ಧನ್ಯತಾ ಭಾವ ಮೂಡಿತು. ಏರ್ ಪೋರ್ಸ್ ಡೇ ಹಿಂದಿನ ದಿನವೇ ನನಗೆ ಏರ್ ಪೋರ್ಸ್ ಡೇ ಯ ಶುಭಾಶಯ ಸಿಕ್ಕಂತಾಯಿತು.

    ಟ್ವಿಟರ್ ನಲ್ಲಿ ಪೋಸ್ಟ್ ಆಗಿರುವ ಒಂದು ವಿಡಿಯೋ ಇಲ್ಲಿದೆ.

    ಕೋವಿಡ್ ನುಂಗಿದ ಶೈಕ್ಷಣಿಕ ವರ್ಷ: ಶಾಲೆ ಆರಂಭಿಸದರೂ ಕಷ್ಟ , ಆರಂಭಿಸದಿದ್ದರೂ ನಷ್ಟ

    ಕೊರೊನಾ ಸೋಂಕು ನಮ್ಮ ದೇಶದಲ್ಲಿನ್ನೂ ತಾಂಡವವಾಡುತ್ತಿದೆ.ಈ ಸ್ಥಿತಿಯಲ್ಲಿ ಮನುಷ್ಯರು ಸೀಮಿತವಾಗಿ ಮಾಡಬಹುದಾದ್ದು ‘ಆಯ್ಕೆ ‘ ಮಾತ್ರ. ಸೀಮಿತ ಆಯ್ಕೆಯೂ ಇಲ್ಲದೆ ಹೊಟ್ಟೆ ಪಾಡಿಗಾಗಿ ಪರದಾಡುತ್ತಿರುವ ಮಿಲಿಯನ್ ಗಟ್ಟಲೆ ಜನರೂ ಇದ್ದಾರೆ ಎನ್ನುವುದನ್ನು ಮರೆಯಲು ಸಾಧ್ಯವಿಲ್ಲವಾದರೂ ಆಯ್ಕೆ ಇರುವವರ ನಡುವೆಯಾವುದು ಸರಿ ಅಥವಾ ತಪ್ಪು, ಯಾವುದು ಸಮಂಜಸ ಅಥವಾ ಅತಿರೇಖ ಎನ್ನುವುದರ ಬಗ್ಗೆ ಗೊಂದಲವೂ ಇದೆ.ಈ ಗೊಂದಲಗಳು ಮನುಷ್ಯರ ನಡುವೆ, ಸಾಮಾಜಿಕ ವ್ಯವಸ್ಥೆಗಳ ನಡುವೆ, ದೇಶ-ವಿದೇಶಗಳಲ್ಲಿ ಕಂಡುಬಂದಿದೆ.

    ವಿಶ್ವವಿದ್ಯಾನಿಲಯಗಳಿಗೆ ಸೇರಿ ಜೀವನದ ಹೊಸ ಅಧ್ಯಾಯವನ್ನು ಶುರುಮಾಡಬೇಕಿದ್ದ ಮಿಲಿಯನ್ ಗಟ್ಟಲೆ ವಿದ್ಯಾರ್ಥಿಗಳು ಈ ಕೊರೋನ ಗೊಂದಲದ ನಡುವೆ ಸಿಲುಕಿಕೊಂಡಿದ್ದಾರೆ.ಆಯಾ ದೇಶಗಳು ತಮಗೆ ಸೂಕ್ತ ಎನ್ನುವ ಆಯ್ಕೆಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ಒಂದು ಅಕಾಡೆಮಿಕ್ ವರ್ಷವನ್ನು ಉಳಿಸುವ ಪ್ರಯತ್ನದಲ್ಲಿದ್ದಾರೆ.

    ದೇಶದಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲದಿದ್ದರೂ ಭಾರತ ತನ್ನ ಆರ್ಥಿಕತೆಯನ್ನು ಸಂಭಾಳಿಸಲು ಬಹುತೇಕ ಎಲ್ಲ ವಹಿವಾಟುಗಳನ್ನು ಶುರುಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಅದರಂತೆ ಅಕ್ಟೋಬರ್ ಒಂದರಿಂದ ಅನ್ ಲಾಕ್ 5.0 ಭಾರತದಲ್ಲಿ ಜಾರಿಗೆ ಬಂದಿದೆ.

    ಇದರ ಪ್ರಕಾರ ಮಲ್ಟಿಪ್ಲೆಕ್ಸ್ ಗಳು ಮತ್ತು ಸಿನಿಮಾ ಮಂದಿರಗಳು ಶೇಕಡಾ 50 ಕಾರ್ಯನಿರತವಾಗಬಹುದಿದೆ. ಕ್ರೀಡಾಪಟುಗಳಿಗಾಗಿ ಈಜು ಕೊಳಗಳನ್ನು ಕೂಡ ತೆರೆಯಲಾಗುತ್ತಿದೆ. ಮನರಂಜನಾ  ಉದ್ಯಾನವನಗಳನ್ನು ತೆರೆಯಲಾಗುತ್ತಿದೆ. ಇದಕ್ಕೆ ತಕ್ಕನಾದ SOP (Standard operating procedures) ಗಳನ್ನು ನೀಡಲಾಗುತ್ತಿದೆ. ಅಕ್ಟೋಬರ್ 15 ರಿಂದ ಶ್ರೇಣೀಕೃತವಾಗಿ ಶಾಲೆ-ಕಾಲೇಜುಗಳನ್ನು ತೆರೆಯಲು ಅನುಮತಿ ಸಿಗುತ್ತಿದೆ. ವಿದ್ಯಾರ್ಥಿಗಳ ಹಾಜರಾತಿಯನ್ನು ಗಣನೆಯಲ್ಲಿ ಇಡುವುದಿಲ್ಲ ಎನ್ನಲಾಗಿದೆ. ಶಿಕ್ಷಣವನ್ನು ಆನ್ ಲೈನ್ ಮಾದರಿಯಲ್ಲೇ ಮುಂದುವರೆಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎನ್ನಲಾಗಿದೆ. ಆದರೆ, ಈ ವಿಚಾರದಲ್ಲಿ ಭಾರತ ಅಡಕತ್ತರಿಯಲ್ಲಿ ಸಿಲುಕಿದೆ. ಇಂದಿಗೂ ಸುಮಾರು ೭೦-೮೦ ಸಾವಿರ ಹೊಸ ಪ್ರಕರಣಗಳು ನಮ್ಮ ದೇಶದಲ್ಲಿ ಪತ್ತೆಯಾಗುತ್ತಿವೆ. ಇನ್ನು  ವಿದ್ಯಾರ್ಥಿಗಳು ಹೊರಬಂದರೆ ಥಟ್ಟನೆ ಈ ಸಂಖ್ಯೆ ದುಪ್ಪಟ್ಟಾಗಬಲ್ಲದು.ಇತ್ತ ಆನ್ ಲೈನ್ ಶಿಕ್ಷಣ ಭಾರತದ ಬಹುತೇಕ ವಿದ್ಯಾರ್ಥಿಗಳಿಗೆ ನಿಲುಕಬಲ್ಲ ವಿಚಾರವೂ ಅಲ್ಲ ವಿಧಾನವೂ ಅಲ್ಲವಾಗಿದೆ. ’ಗೆಲ್ಲಲು ಸಾಧ್ಯವಿಲ್ಲ’ ಎನ್ನುವ ಸ್ಥಿತಿಯಿದು.

    ಕಾಲೇಜುಗಳನ್ನು ಕೋವಿಡ್ ನಡುವೆಯೂ ಏಕೆ ಶುರುಮಾಡಲಾಗುತ್ತಿದೆ?

    ಮಿಕ್ಕೆಲ್ಲ ಉದ್ಯಮಗಳಂತೆ ಶಿಕ್ಷಣ ಮತ್ತು ವಿದ್ಯಾರ್ಥಿಗಳು ಸಮಾಜದ ಅವಿಭಾಜ್ಯ ಭಾಗಗಳು. ವಿದ್ಯಾ ರ್ಥಿಗಳ ವಯಸ್ಸು ಮತ್ತು ಸಂಭಾವ್ಯತೆ ಅಥವಾ ಒಳಸತ್ವದ ಕಾರಣ ಇತರೆ ಕೆಲವು ವರ್ಗಗಳಿಗಿಂತ ಹೆಚ್ಚಾಗಿ ಅವರ ಭವಿಷ್ಯವನ್ನು ಕಾಪಾಡುವುದು ಅತ್ಯಂತ ಮಹತ್ವವಾದ ವಿಚಾರವಾಗುತ್ತದೆ.

    ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳ ವಿಶ್ವವಿದ್ಯಾನಿಲಯಗಳು ಸೆಪ್ಟೆಂಬರ್ ನಲ್ಲಿ ಶುರುವಾದರೆ ಭಾರತದಲ್ಲಿ ಅಕ್ಟೋಬರಿನಲ್ಲಿ ದಾಖಲಾತಿ ಪ್ರಕ್ರಿಯೆ ನಡೆದು ನಂತರ ನವೆಂಬರಿನಿಂದ ತರಗತಿಗಳು ಶುರುವಾಗುತ್ತವೆ. ಇದೇ ಕಾರಣ ಭಾರತಕ್ಕೆ  ಬೇರೆಡೆ ಏನಾಗುತ್ತಿದೆ ಎಂದು  ವಾಸ್ತವದಲ್ಲಿ ತಿಳಿಯಲು ಒಂದು ಸುವರ್ಣಾವಕಾಶ ದೊರೆತಿದೆ.

    ವಿಶ್ವ ವಿದ್ಯಾನಿಲಯಗಳು ಸಾಮಾನ್ಯವಾಗಿ ಕೆಲವು ದೊಡ್ಡ ಸ್ಥಳಗಳಲ್ಲಿರುತ್ತವೆ. ಅಲ್ಲಿಗೆ ವಿದ್ಯಾರ್ಥಿಗಳು ಇತರೆ ಹಲವು ನಗರ, ಗ್ರಾಮ , ಹಳ್ಳಿಗಳಿಂದ ಬಂದು ದಾಖಲಾಗುತ್ತಾರೆ. ಬೇರೆ ಊರು, ರಾಜ್ಯ ಮತ್ತು ದೇಶಗಳ ವಿದ್ಯಾರ್ಥಿಗಳಾಗಿಯೂ ಅವರು ದಾಖಲಾಗಿರಬಹುದು.ಅದರ ಜೊತೆಯಲ್ಲೇ ವಿದ್ಯಾರ್ಥಿಗಳು ಆಯಾ ದೇಶದ ಆರ್ಥಿಕ ವ್ಯವಹಾರಗಳಿಗೆ ಮೌಲ್ಯಯುತ ಕಾಣಿಕೆಯನ್ನು ಸಲ್ಲಿಸುವ ಗ್ರಾಹಕರೂ ಹೌದು. ಉದಾಹರಣೆಗೆ ಅವರ ಪ್ರಯಾಣ, ಬಾಡಿಗೆ ಹಿಡಿಯುವ ಮನೆಗಳು, ಊಟ ತಿಂಡಿ ಮಾಡುವ ಸ್ಥಳಗಳು, ಸಾಮಾನು-ಸಾಮಗ್ರಿಗಳನ್ನು ಕೊಳ್ಳುವ ಅಂಗಡಿಗಳು, ಶುಲ್ಕವನ್ನು ಪಡೆಯುವ ವಿಶ್ವ ವಿದ್ಯಾಲಯಗಳು, ಸಿನಿಮಾ, ಆಟೋಟ-ಸಂಗೀತ-ನಾಟಕ ಇತ್ಯಾದಿ ಹಲವು ಚಟುವಟಿಕೆಗಳು ಈ ಹೊಸ ವಿದ್ಯಾರ್ಥಿಗಳ ವಾರ್ಷಿಕ ವಲಸೆಯನ್ನೇ ನಂಬಿ ಬದಕುವ ಚಟುವಟಿಕೆಗಳಾಗಿವೆ.

    ಕೊರೊನಾ ಕಾರಣ ಉನ್ನತ ಶಾಲಾ-ಕಾಲೇಜಿನ ತರಗತಿಗಳು, ಪರೀಕ್ಷೆಗಳು, ಫಲಿತಾಂಶ ಎಲ್ಲವೂ ಈ ವರ್ಷ ಅಯೋಮಯವಾಗಿದ್ದರೂ, ಇಡೀ ಒಂದು ವರ್ಷವನ್ನು ವಿಧ್ಯಾಭ್ಯಾಸದ ವಿಚಾರದಲ್ಲಿ ಇಲ್ಲವಾಗಿಸಲು ಸಾಧ್ಯವಿಲ್ಲ. ಇದನ್ನು ಯಾವ ದೇಶವೂ ಒಪ್ಪುವುದಿಲ್ಲ. ಏಕೆಂದರೆ ಈ ವರ್ಷದ ವಿದ್ಯಾರ್ಥಿಗಳು ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟರೆ 2021 ಕೂಡ ಮತ್ತೆ ಬಿಕ್ಕಟ್ಟಿನ ವರ್ಷವಾಗುತ್ತದೆ.ತರಗತಿಗಳ ಪ್ರಮಾಣ, ಬೋಧಿಸುವವರ ಮೇಲಿನ ಒತ್ತಡ, ಫಲಿತಾಂಶದ ನಂತರದ ಪೈಪೋಟಿ , ಮಿಲಿಯನ್ ಗಟ್ಟಲೆ ವಿದ್ಯಾರ್ಥಿಗಳ ಭವಿಷ್ಯತ್ತು ಹೀಗೆ ಎಲ್ಲವೂ ಹಾಳಾಗಬಲ್ಲವು.

    ಹಾಗೆಂದು ಕೊರೊನಾ ಸೋಂಕು ಇನ್ನೂ ದಟ್ಟವಾಗಿದ್ದಾಗಲೇ ತರಗತಿಗಳನ್ನು ಎಂದಿನಂತೆ ನಡೆಸಲು ಸಾಧ್ಯವಿಲ್ಲ. ಹಲವು ಸಾವಿರ ವಿದ್ಯಾರ್ಥಿಗಳ ಪಾದಗಳನ್ನು ಕ್ಯಾಂಪಸ್ಸಿನ ಆವರಣವನ್ನು ತುಳಿಯಲು ಬಿಟ್ಟರೆ ಆದರ ಜೊತೆ ಜೊತೆಗೆ ಕೊರೊನಾ ಸೋಂಕು ಕೂಡ ನಲಿ ನಲಿಯುತ್ತ ಕಾಲಿಡುತ್ತದೆ.

     ನಾನಾ ಸ್ಥಳಗಳಿಂದ ಬರುವ ಎಳೆಯ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಕೆಲವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಸೋಂಕು ಇರಬಹುದು. ಅವರಲ್ಲಿ ಇರಬಹುದಾದ ಸೋಂಕು ಹಲವು ರೀತಿಯಲ್ಲಿ ಇಡೀ ಊರಿಗೆ ಹರಡಬಲ್ಲದು. ಕಾಲೇಜುಗಳಲ್ಲಿ ಬೋಧಿಸುವ , ಆಡಳಿತದ ವಿಭಾಗದ  ಜನರಲ್ಲಿ ಕೊರೊನಾ ಕಾಣಿಸಿಕೊಂಡರೆ ಮತ್ತೆ ಇಡೀ ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ.

    ಇವೆಲ್ಲ ಗೊತ್ತಿದ್ದೂ ಕಾಲೇಜು ವರ್ಷವನ್ನು ಶುರುಮಾಡದೆ ವಿಧಿಯಿಲ್ಲ. ಏನೇ ಆದರೂ ವಿಶ್ವ ವಿದ್ಯಾಲಯಗಳನ್ನು  ನಡೆಸಲೇ ಬೇಕೆಂದಾಗ ಸರಕಾರಗಳಿಗೆ ದೊರೆತಿರುವ ಪರ್ಯಾಯ ಆಯ್ಕೆಯೆಂದರೆ ಆನ್ ಲೈನ್ ಪಾಠಗಳು. ಆದರೆ ಪ್ರತಿಯೊಂದು ಅಧ್ಯಯನದ ವಿಷಯಗಳನ್ನು ಕೇವಲ ಆನ್ ಲೈನ್ ತರಗತಿಗಳಾಗಿ ನಡೆಸಲು ಸಾಧ್ಯವಿಲ್ಲ.ಕೆಲವು ವಿಚಾರಗಳನ್ನು ’ಪ್ರಾಕ್ಟಿಕಲ್ ’ ರೂಪದಲ್ಲೇ ನಡೆಸಬೇಕಾಗುತ್ತದೆ. ಜೊತೆಗೆ ಬರೇ ಆನ್ ಲೈನ್ ತರಗತಿಗಳಾಗಿಬಿಟ್ಟರೆ ವಿದ್ಯಾರ್ಥಿ ವಲಸೆಯ ಮೂಲಕ ನಡೆವ ಎಲ್ಲ ಆರ್ಥಿಕ ಚಟುವಟಿಕೆಗಳೂ ನಿಂತುಹೋಗುತ್ತವೆ.

    ಯುಕೆ ವಿಶ್ವವಿದ್ಯಾನಿಲಯಗಳ ಉದಾಹರಣೆ

    ಇದರ ಅಗಾಧತೆಯನ್ನು ಅಳೆಯಲು ಕರ್ನಾಟಕಕ್ಕಿಂತ ಸ್ವಲ್ಪವೇ ದೊಡ್ದದಿರುವ ಯುನೈಟೆದ್ ಕಿಂಗ್ಡಮ್ ನ ವಿಶ್ವವಿದ್ಯಾನಿಲಯಗಳ ಉದಾಹರಣೆಯನ್ನು ನೋಡೋಣ.

    ಓಪನ್ ಯೂನಿವರ್ಸಿಟಿಗಳೂ ಸೇರಿದಂತೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಒಟ್ಟು 169 ವಿಶ್ವ ವಿದ್ಯಾನಿಲಯಗಳಿವೆ. ಅವುಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಅಗಾಧವಾದ್ದು. ಈ ವಿಶ್ವವಿದ್ಯಾನಿಲಯಗಳಿಗೆ 2018–19  ರ ಸಾಲಿನಲ್ಲಿ ಒಟ್ಟು 2.38 ಮಿಲಿಯನ್ ವಿದ್ಯಾರ್ಥಿಗಳು ಓದಲು ಸೇರಿದ್ದರು. ಇವರು ದೇಶದ ಶೈಕ್ಷಣಿಕ ವ್ಯವಸ್ಥೆ ಮುಂದುವರೆಯಲು ಅಗತ್ಯವಾಗಿ ಬೇಕಾದ ಜೀವರಸದಂತವರು.ಶಿಕ್ಷಣದ ಅಗತ್ಯ ವಿದ್ಯಾರ್ಥಿಗಳ ಎಷ್ಟಿದೆಯೋ, ಶೈಕ್ಷಣಿಕ ವ್ಯವಸ್ಥೆಯ ಉಳಿವಿಗೆ ಈ ವಿದ್ಯಾರ್ಥಿಗಳ ಅಗತ್ಯವೂ ಅಷ್ಟೇ ಇದೆ ಅಥವಾ ಇನ್ನೂ ಹೆಚ್ಚಿದೆ ಎಂದರೂ ತೊಂದರೆಯಿಲ್ಲ.

    ಈ ಕಾರಣ ಯೂರೋಪ್ ಮತ್ತು ಇಂಗ್ಲೆಂಡ್ ದೇಶಗಳು ನಿಗದಿತ ಸಮಯಕ್ಕೆ ಸರಿಯಾಗಿ ವಿಶ್ವವಿದ್ಯಾನಿಲಯಗಳನ್ನು ಶುರುಮಾಡಿಯೇ ಬಿಟ್ಟರು. ಜೊತೆಗೆ ಇಲ್ಲಿ ಮೊದಲ ಕೊರೊನಾ ಅಲೆ ತಣ್ಣಗಾಗಿತ್ತು. ಲಾಕ್ ಡೌನ್ ತೆರವಾಗಿ ಬದುಕು ’ಸಹಜ’ ಎನ್ನುವತ್ತ ತೆರಳುತ್ತಿತ್ತು.ಜನರು ಕೆಲಸಗಳಿಗೆ ಮರಳುತ್ತಿದ್ದರು. ಪ್ರಾಥಮಿಕ ಶಾಲೆಗಳು ಎಂದಿನಂತೆ ಸೆಪ್ಟಂಬರಿನಲ್ಲಿ ಶುರುವಾಗಿದ್ದವು.ಆದ್ದರಿಂದ ವಿಶ್ವವಿದ್ಯಾನಿಲಯಗಳು ಹೊಸ ವಿದ್ಯಾರ್ಥಿಗಳಿಗೆ ಬಾಗಿಲು ತೆರೆಯಲು ಸಿದ್ದವಾದವು.ಯೂರೋಪಿನ ಬಹತೇಕ ವಿಶ್ವ ವಿದ್ಯಾನಿಲಯಗಳು ಮತ್ತು ಇಂಗ್ಲೆಂಡಿನ 17 ವಿಶ್ವ ವಿದ್ಯಾನಿಲಯಗಳು ಕೊರೊನಾ ಪರೀಕ್ಷೆಯ ನಂತರವೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದಾರೆ.

    ಆದರೆ ಸೆಪ್ಟಂಬರಿನ ನಡುವಿನಿಂದ ವಿಶ್ವವಿದ್ಯಾಲಯಗಳು ಶುರುವಾದ ಮೊದಲ ಒಂದೆರಡು ವಾರದಲ್ಲೇ ಯುನೈಟೆಡ್ ಕಿಂಗ್ಡಮ್ ನ ಸುಮಾರು ನಲವತ್ತು ವಿಶ್ವವಿದ್ಯಾನಿಲಯಗಳು ತಮ್ಮ ವಿದ್ಯಾರ್ಥಿಗಳಲ್ಲಿ ಕೋವಿಡ್ ಪತ್ತೆಯಾಗಿರುವುದನ್ನು ವರದಿ ಮಾಡಿದವು.

    ಅಕ್ಟೋಬರ್ ಎರಡರಂದು ನ್ಯೂಕ್ಯಾಸಲ್ ನಗರದ ನಾರ್ತ್ ಅಂಬ್ರಿಯ ವಿಶ್ವ ವಿದ್ಯಾನಿಲಯವೊಂದರಲ್ಲೇ 770 ಜನ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಇದೆ ಎನ್ನುವುದು ಪತ್ತೆಯಾಯಿತು.ಆಶ್ಚರ್ಯವೆಂದರೆ ಇವರಲ್ಲಿ 78 ಜನರನ್ನು ಬಿಟ್ಟರೆ ಇನ್ಯಾರಲ್ಲೂ ಯಾವುದೇ ರೋಗಲಕ್ಷಣಗಳಿರಲಿಲ್ಲ!

    ಶುರುವಾದ ಮೊದಲ ವಾರದಲ್ಲಿ ಮ್ಯಾಂಚೆಸ್ಟರ್ ನಗರದ ಯೂನಿವರ್ಸಿಟಿಯಲ್ಲಿ  127 ವಿದ್ಯಾರ್ಥಿಗಳಲ್ಲಿ ಕೋವಿಡ್ ಕಾಣಿಸಿಕೊಂಡಿತು. ಈ ಕಾರಣ ಅವರೊಡನೆ ಒಡನಾಡಿದ್ದ 1700 ವಿದ್ಯಾರ್ಥಿಗಳು ತಮ್ಮನ್ನು ತಾವು ಕ್ವಾರಂಟೈನ್ ನಲ್ಲಿ ಇಟ್ಟುಕೊಳ್ಳಬೇಕಾಯಿತು.ಇದಕ್ಕಿಂತಲೂ ಒಂದು ವಾರ ಮುಂಚೆಯೇ ಕಾಲೇಜು ಶುರುವಾದ ಸ್ಕಾಟ್ಲ್ಯಾಂಡಿನ ಗ್ಲಾಸ್ಗೋ ಯೂನಿವರ್ಸಿಟಿಯಲ್ಲಿ 172 ವಿದ್ಯಾರ್ಥಿಗಳಿಗೆ ಕೊರೊನಾ ಕಾಣಿಸಿಕೊಂಡಿತು.ಹಲವಾರು ನೂರು ಜನ ವಿದ್ಯಾರ್ಥಿಗಳು ಅವರ ಸಂಪರ್ಕಕ್ಕೆ ಬಂದಿದ್ದ ಕಾರಣ ತಾವಿದ್ದ ವಿದ್ಯಾರ್ಥಿ ಗೃಹದಲ್ಲೇ ಕ್ವಾರಂಟೈನ್ ಗೆ ಒಳಗಾದರು.

    ವಿದ್ಯಾರ್ಥಿಗಳು ಫ್ರೆಶರ್ಸ್ ಪಾರ್ಟಿ ಮಾಡಿಕೊಂಡ ಸಮಯದಲ್ಲಿ ಮತ್ತು ವಿದ್ಯಾರ್ಥಿ ಗೃಹಗಳಲ್ಲಿ ಈ ಸೋಂಕು ಯಾರಿಂದಲೋ ಹರಡಲು ಶುರುವಾಗಿರಬೇಕೆಂದು ಶಂಕಿಸಲಾಯ್ತು.ಜೊತೆ ಜೊತೆಗೇ ವಿಶ್ವ ವಿದ್ಯಾಲಯಗಳನ್ನು ತೆರೆವ ನಿರ್ಧಾರ ಮಾಡಿದ ಸರ್ಕಾರದ  ನಿಲುವು ಸರಿಯೇ? ನಾನಾ ಊರುಗಳಿಂದ ಬಂದ ವಿದ್ಯಾರ್ಥಿಗಳ ಹಣ, ಶ್ರಮದ ಜೊತೆಗೆ ಇದೀಗ ವಿದ್ಯಾರ್ಥಿಗಳ ಗೃಹ ಬಂಧನದ ಹೊಣೆ ಸರಕಾರದ್ದೇ ಎನ್ನುವ ವಿವಾದಗಳು ಹುಟ್ಟಿಕೊಂಡವು.

    ತಾವಿರುವ ಕಟ್ಟಡಗಳನ್ನು ಬಿಡಲು ಅನುಮತಿಯಿರದ ವಿದ್ಯಾರ್ಥಿಗಳಿಗೆ ಅವರ ಪೋಷಕರು, ಹಿತೈಷಿ ಗಳು ಆಹಾರವನ್ನು ತಂದು ನೀಡುತ್ತಿದ್ದಾರೆ.ಅವರಿಗೆ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿ ಹೋಗಲು ಮೊದಲು ಅನುಮತಿ ನೀಡದಿದ್ದರೂ ಇದೀಗ “ ಹೋಗಬಹುದು.ಆದರೆ ನಿಮ್ಮಿಂದ ನಿಮ್ಮ ಮನೆಯ ಹಿರಿಯರಿಗೂ ಹರಡುವುದನ್ನು ತಡೆಗಟ್ಟಲು ಸಾಧ್ಯವಾದಷ್ಟೂ ಇದ್ದಲ್ಲೇ ಇದ್ದರೆ ಒಳ್ಳೆಯದು “ ಎಂಬ ಕಿವಿಮಾತನ್ನು ಹೇಳಲಾಗಿದೆ. ಆದರೆ ವಿದ್ಯಾರ್ಥಿಗಳು ಇಡೀ ಸೆಪ್ಟಂಬರ್ ತಿಂಗಳಿನ ವಿದ್ಯಾರ್ಥಿ ಗೃಹಗಳ ಬಾಡಿಗೆಯನ್ನು ಹಿಂತಿರುಗಿಸಿ ಎಂದು ಪಟ್ಟು ಹಿಡಿದಿದ್ದಾರೆ.ಕಾಲೇಜಿನ ತರಗತಿಗಳು ಆನ್ ಲೈನ್ ಮಾಡುವುದಾದರೆ ನಾವೇಕೆ ವಾರ್ಷಿಕ ಕಾಲೇಜು ವೇತನವನ್ನು ಪೂರ್ತಿಯಾಗಿ ಕಟ್ಟಬೇಕು? ಎಂದು ವಾದಿಸುತ್ತಿದ್ದಾರೆ. ವಿಶ್ವ ವಿದ್ಯಾನಿಲಯಗಳ ಶುಲ್ಕದಲ್ಲಿ ರಿಬೇಟ್ ನೀಡಿ ’-ಎನ್ನುವ ಹೊಸ ಹೋರಾಟವನ್ನು ಆರಂಭಿಸಿದ್ದಾರೆ. ಈ ನಡುವೆ ಆಡಳಿತ ವರ್ಗದವರು, ಜನ ನಾಯಕರು ಅಡಕತ್ತರಿಗೆ ಸಿಲುಕಿದಂತಹ ಸ್ಥಿತಿಯನ್ನು ತಲುಪಿದ್ದಾರೆ.

    ಭಾರತದಲ್ಲಿ ಇನ್ನೂ ಮೊದಲ ಅಲೆ ಇರುವಾಗಲೇ ಶೈಕ್ಷಣಿಕ ವರ್ಷ ಶುರುವಾಗಲಿದೆ. ಆದರೆ ಭವಿಷ್ಯ?

    ಇನ್ನೊಂದು ತಿಂಗಳಲ್ಲಿ ಭಾರತದ ಮೊದಲ ಕೊರೊನಾ ಅಲೆ ಮುಗಿದಿರುತ್ತದೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ. ನವೆಂಬರ್ ಒಂದರಿಂದ ಆರಂಭವಾಗಬೇಕಿರುವ ವಿಶ್ವ ವಿದ್ಯಾನಿಲಯಗಳು ಹಾಗಾದರೆ ಯಾವ ಮಾರ್ಗವನ್ನು ಅನುಸರಿಸಬೇಕು? ಮೇಲಿನ ಉದಾಹರಣೆಗಳಿಂದ ಕಲಿಯುವುದೇನಾದರೂ ಇದೆಯೇ?

    ಕಳೆದ ವರ್ಷ ಕರ್ನಾಟಕದ  659 ಸರ್ಕಾರೀ ಕಾಲೇಜುಗಳಲ್ಲಿ 4,0139  ವಿದ್ಯಾರ್ಥಿಗಳು ಪ್ರವೇಶ ಪಡೆದರೆ 2876   ಖಾಸಗೀ ಕಾಲೇಜುಗಳಲ್ಲಿ 10,68,243 ವಿದ್ಯಾರ್ಥಿಗಳು ಪ್ರವೇಶ ಪಡೆದರು. ಇದಾದ ನಂತರವೂ ಹಲವು ಶಾಲಾ ಕಾಲೇಜುಗಳನ್ನು ತೆರೆಯಲು ಸರ್ಕಾರ ಅನುಮತಿಯನ್ನು ನೀಡಿದೆ.

    ಪ್ರತಿ ಲಕ್ಷ ಜನರಿಗೆ ಸುಮಾರು 51 ಕಾಲೇಜುಗಳನ್ನು ಹೊಂದಿರುವ ನಮ್ಮ ಕರ್ನಾಟಕ ಇಡೀ ದೇಶದಲ್ಲೇ ಅತಿಸಾಂದ್ರತೆಯ ಕಾಲೇಜುಗಳನ್ನು ಹೊಂದಿರುವ ರಾಜ್ಯವಾಗಿದೆ.ಆದರೆ ದಾಖಲಾತಿಯ ವಿಚಾರಕ್ಕೆ ಬಂದಾಗ ನಮ್ಮ ರಾಜ್ಯಕ್ಕೆ 5 ನೇ ಸ್ಥಾನ ದೊರೆಯುತ್ತದೆ.ಉದಾಹರಣೆಗೆ 2017-18 ರಲ್ಲಿ ಕಾಲೇಜುಗಳಿಗೆ ದಾಖಲಾದವರ ಒಟ್ಟು ಸಂಖ್ಯೆ 14.6 ಲಕ್ಷ ಮಾತ್ರ..

    ಈ ವರ್ಷ ಕೊರೊನಾದ ಕಾರಣ ಅಪಾರ ನಷ್ಟ ಅನುಭವಿಸಿರುವ ಸಾವಿರಾರು ಕುಟುಂಬಗಳು ಮಕ್ಕಳನ್ನು ವಿಶ್ವ ವಿದ್ಯಾನಿಲಯಗಳಿಗೆ ಸೇರಿಸಲಾರರು. ಖರ್ಚು ವೆಚ್ಚಗಳನ್ನು ಭರಿಸಲಾರರು. ಸರ್ಕಾರೀ ಮತ್ತು ಖಾಸಗಿ ಎರಡೂ ವಲಯಗಳು ಈ ವರ್ಷ ಅತಿ ಕಡಿಮೆ ದಾಖಲಾತಿಯನ್ನು ನೋಡುವ ಮುನ್ಸೂಚನೆಯಿದೆ. ಹಾಗಿರುವಾಗ ಆನ್ ಲೈನ್  ತರಗತಿಗಳ ವಿಚಾರ ಇನ್ನೂ ಹಲವರನ್ನು ಹಿಮ್ಮೆಟ್ಟಿಸಬಲ್ಲದು.

    ಈಗಾಗಲೇ ಭಾರತದಲ್ಲಿ ಆನ್ ಲೈನ್ ತರಗತಿಗಳಿಗೆ ಆದ್ಯತೆ ದೊರಕಿದೆ. ಆದರೆ ಖಾಸಗೀ ಶಾಲಾ ಕಾಲೇಜುಗಳು ಒಂದು ರೀತಿಯ ನೀತಿಯನ್ನನುಸರಿಸಿದರೆ ಸರ್ಕಾರೀ ಶಾಲಾ ಕಾಲೇಜುಗಳು ಇನ್ನೂ ಆನ್ ಲೈನ್ ತರಗತಿ ನಡೆಸಲು ಹೆಣಗುತ್ತಿದ್ದಾರೆ. ಚಂದನ ಚಾನಲ್ ನ ಮೂಲಕವೂ ತರಗತಿಗಳು ನಡೆಯುತ್ತಿವೆ. ಆದರೆ ನಮ್ಮ ಶೈಕ್ಷಣಿಕ ಚಿತ್ರ ಏಕರೂಪದಲ್ಲಿದೆಯೇ?

    ಆನ್ ಲೈನ್ ಎಂದ ಕೂಡಲೇ ಫೋನ್ ಗಳು, ಕಂಪ್ಯೂಟರ್ ಗಳ ಅಗತ್ಯ ಬೀಳುತ್ತದೆ. ಅಂತರ್ಜಾಲ ವ್ಯವಸ್ಥೆಯಿರಬೇಕಾಗುತ್ತದೆ. ಅಂತರ್ಜಾಲ ವ್ಯವಸ್ಥೆಯ ನೆಟ್ವರ್ಕ್ ಅಥವಾ ಸಂಪರ್ಕ ಜಾಲ ಬೇಕಾಗುತ್ತದೆ.ಅದಕ್ಕೆ ವೇಗವಿರಬೇಕಾಗುತ್ತದೆ. ಎಲ್ಲ ಇದ್ದರೂ ಫೋನು, ಕಂಪ್ಯೂಟರ್  ಚಾರ್ಜು ಮಾಡಲು ವಿದ್ಯುತ್ ಇರಬೇಕಾಗುತ್ತದೆ.ಇದ್ದರೂ ಅದಕ್ಕೆ ವೋಲ್ಟೇಜ್ ಬೇಕಾಗುತ್ತದೆ.

    ದೂರದ ಯಾವುದೋ ಹಳ್ಳಿಯ ಮಕ್ಕಳಿಗೆ ಈ ಎಲ್ಲ ಸವಲತ್ತುಗಳಿವೆಯೇ? ಇಲ್ಲದಿದ್ದರೆ ಇಡೀ ಶೈಕ್ಷಣಿಕ ವರ್ಷ ಬರೀ ಶ್ರೀಮಂತರ ಪಾಲಾಗುತ್ತದೆ. ಕೊರೊನಾ ಕಾಟವಿದ್ದರೂ ಛಲ ಹಿಡಿದು ಓದಬೇಕೆನ್ನುವ ಮಕ್ಕಳಿಗೆ ಬಡತನ ಮತ್ತು ಈ ಸರ್ಕಾರೀ ನೀತಿಗಳು ಮುಳುವಾಗುತ್ತಿವೆ. ಸಣ್ಣ ಪುಟ್ಟ ವಿಚಾರಗಳಿಗೂ ಸಿಡಿದೆದ್ದು ನ್ಯಾಯಕೇಳಬಲ್ಲ ಮುಂದುವರೆದ ದೇಶಗಳ ವಿಚಾರವೇ ಬೇರೆ. ಆದರೆ ನೆಟ್ವರ್ಕ್ ಗಾಗಿ ಯಾವುದೋ ಗುಡ್ಡಹತ್ತಿ ಕೈನಲ್ಲಿ ಫೋನಿಡಿದು ಮಳೆ, ಗಾಳಿಗಳನ್ನು ಮೆಟ್ಟಿ ಕೂರಬೇಕಾಗಿರುವ ನಮ್ಮ ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠದ ಹೆಸರಲ್ಲಿ ಅನ್ಯಾಯವಾಗುವ ಸಾಧ್ಯತೆಗಳೇ ಹೆಚ್ಚಿವೆ.

    ಹೇಗೋ ಕಷ್ಟಪಟ್ಟು ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳಿಸುತ್ತಿರುವ  ಬಡ ತಂದೆ ತಾಯಿಗಳು ಆನ್ ಲೈನ್ ತರಗತಿಗಾಗಿ ಮೊಬೈಲ್, ಡೇಟಾ, ಇಂಟರ್ನೆಟ್, ಲ್ಯಾಪ್ ಟಾಪ್ ಕೊಡಿಸಲು ಸಾಧ್ಯವೇ? ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆಯ ಚಿತ್ರಣವನ್ನು ಸರ್ಕಾರ ನಮ್ಮ ವಿದ್ಯಾರ್ಥಿಗಳಿಗೆ ನೀಡಲು ಸಾಧ್ಯವೇ? ಇದು ಒಬ್ಬಿಬ್ಬ ವಿದ್ಯಾರ್ಥಿಯ ಪ್ರಶ್ನೆಯೇ?

    ತೀರಾ ಬಡತನದ ಕುಟುಂಬಗಳು ಮಕ್ಕಳಿಗೆ ಹೇಗೂ ಶಾಲೆ ಇಲ್ಲವೆಂದು ಸಣ್ಣ ಪುಟ್ಟ ಕೆಲಸಕ್ಕೆ ಹಚ್ಚಿದರೆ ಏನು ಗತಿ? ದುಡಿಮೆಯ ರುಚಿಕಂಡ ಮಕ್ಕಳು ಶಾಲಾ ಶಿಕ್ಷಣದಿಂದ ದೂರ ಉಳಿದು ಬಿಟ್ಟರೆ ಅದು ಮತ್ತೊಂದು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ.

    ಅದರಲ್ಲೂ ಈ ವರ್ಷ ಕೊರೊನಾ ಕಾರಣ ಎಲ್ಲರೂ ಆರ್ಥಿಕ ನಷ್ಟಗಳನ್ನು ಅನುಭವಿಸಿದ್ದಾರೆ. ಕಷ್ಟ ಪಟ್ಟು ಬೆಳೆ ಬೆಳೆದರೂ ರೈತರಿಗೆ ಬಂಡವಾಳವೂ ಹುಟ್ಟದೆ ಉಪವಾಸವಿರಬೇಕಾದ ಸಮಯದಲ್ಲಿ ಆಧುನಿಕ ಸಂಪರ್ಕ ಜಾಲಗಳ ಮೇಲೆ ಸಾವಿರಾರು ರೂಪಾಯಿ ಹಾಕಲು ಸಾಧ್ಯವೇ? ನಗರದಲ್ಲಿರುವವರ ಕುಟುಂಬಗಳು ಕೂಡ ಕೆಲಸವಿಲ್ಲದೆ, ಆದಾಯವಿಲ್ಲದೆ ತತ್ತರಿಸಿರುವ ಈ ಕಾಲದಲ್ಲಿ ಆನ್ ಲೈನ್ ತರಗತಿಗಳು ಮುಗಿಲ ಮಲ್ಲಿಗೆಯಲ್ಲವೇ?

    ನೇರ ಪಾಠ ಹೇಳುತ್ತೇವೆಂದು ಕರೆಸಿ ಆನ್ ಲೈನ್ ಪಾಠ ಹೇಳುವುದು ಅನ್ಯಾಯ ಎಂದು ವಿದ್ಯಾರ್ಥಿ ಒಕ್ಕೂಟಗಳೊಂದಿಗೆ ಸೇರಿ ಹೋರಾಟ ನಡೆಸುತ್ತಿರುವ ಇಂಗ್ಲೆಂಡಿನ ವಿದ್ಯಾರ್ಥಿಗಳಂತೆ ಈ ಆನ್ ಲೈನ್ ಪಾಠಗಳ ಬಗ್ಗೆ ನಮ್ಮ ವಿದ್ಯಾರ್ಥಿಗಳು ಪ್ರಶ್ನೆ ಎತ್ತಲು ಸಾಧ್ಯವಿದೆಯೇ? ಅಥವಾ ವಿದ್ಯಾರ್ಥಿಗಳು ಮೂಕವಾಗಿ ಬಲಿಪಶುಗಳಾಗುತ್ತಿದ್ದಾರೆಯೇ? ಎಂಬುದನ್ನು ಶೈಕ್ಷಣಿಕ ತಜ್ಞರು ತುರ್ತಾಗಿ ಚರ್ಚಿಸಬೇಕಿದೆ.

    ಆನ್ ಲೈನ್ ತರಗತಿಗಳ ಗುಣಮಟ್ಟ

    ಜೊತೆಗೆ ನಡೆಯುತ್ತಿವೆ ಎನ್ನಲಾಗುತ್ತಿರುವ ಆನ್ ಲೈನ್ ತರಗತಿಗಳ ಗುಣಮಟ್ಟವನ್ನು ಅಳೆಯುವ ಪದ್ಧತಿಗಳನ್ನು ಅಳವಡಿಸಬೇಕಿದೆ.ಏಕೆಂದರೆ ಆನ್ ಲೈನ್ ಪಾಠ ಮಾಡಿ ಅಭ್ಯಾಸವಿರದ ಹಳೆಯ ತಲೆಮಾರಿನ ಬೋಧಕರು ತರಗತಿಯಲ್ಲಿನ ಹೆಸರು ಪಟ್ಟಿಯನ್ನು ಕೂಗುವಂತೆ ಕೂಗಿ ಹಾಜರಾತಿ ಹಾಕಲೇ ಅರ್ಧಗಂಟೆ ಕಳೆಯುತ್ತಿದ್ದಾರೆಂಬ ದೂರುಗಳಿವೆ. ಆನ್ ಲೈನ್ ನಲ್ಲಿ ತರಗತಿ ಮಾಡಿ ಅಭ್ಯಾಸವಿಲ್ಲದವರು ತಾವೇ ಪರದಾಡುವುದಿದೆ. ಝೂಮ್ ಮುಂತಾದ ಉಚಿತ ವೇದಿಕೆಗಳು ಪ್ರತಿ 45 ನಿಮಿಷಕ್ಕೊಮ್ಮೆ ಕತ್ತರಿಸಿದಾಗಲೂ ಮತ್ತೆ ಎಲ್ಲವೂ ಗೊಂದಲಮಯವಾಗುತ್ತಿದೆ. 15 ನಿಮಿಷ ಪಾಠ ಹೇಳಿ ತರಗತಿ ಮುಗಿಯಿತೆಂದು ಕಣ್ಮರೆಯಾಗುವ ಬೋಧಕರಿದ್ದಾರೆ. 15 ನಿಮಿಷದ ಪಾಠಗಳನ್ನು ರೆಕಾರ್ಡ್ ಮಾಡಿ  ಯೂ ಟ್ಯೂಬಿನಲ್ಲಿ ನೋಡಿಕೊಳ್ಳಿ ಎಂದು ಕೈ ತೊಳೆದುಕೊಳ್ಳುವ ದಾರಿಯಲ್ಲೂ ಇದು ಸಾಗಿದೆ.ಒಟ್ಟಾರೆ ಪಠ್ಯವನ್ನೇ ಕಡಿಮೆ ಮಾಡುವ, ಉದಾರವಾಗಿ ಅಂಕಕೊಟ್ಟು ಪಾಸ್ ಮಾಡುವ ತಂತ್ರಗಳೂ ಜಾರಿಯಲ್ಲಿವೆ.

    ಜ್ಞಾನದ ಮೇಲೆ ಮಾತ್ರ ಒತ್ತು ಕೊಡುವ ಪದವಿಗಳಾದರೆ ಪರವಾಗಿಲ್ಲ. ಆದರೆ ಜೊತೆಗೆ, ಕೈ ಕಸಬನ್ನು ಕಲಿಸುವ ಕೋರ್ಸ್ ಗಳಾದರೆ ಕೆಲಸವನ್ನು ಕಲಿಯದೆ ಈ ಪದವೀಧರರು ಈ ವರ್ಷ ಮತ್ತು ಮುಂದಿನ ವರ್ಷಗಳಲ್ಲಿ ನಷ್ಟವನ್ನು ಅನುಭವಿಸಲಿದ್ದಾರೆ.

    ಏನೇ ಆದರೂ ಸಮಾಜದ ಯಾವುದೇ ಇನ್ನಿತರ ವರ್ಗಗಳಂತೆ ಅವಿಭಾಜ್ಯ ಅಂಗಗಳಾಗಿರುವ ವಿದ್ಯಾರ್ಥಿಗಳು ಮಿಲಿಯನ್ ಗಟ್ಟಲೆ ಲೆಕ್ಕದಲ್ಲಿ ರಸ್ತೆಗಿಳಿಯುವುದು ಸಧ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಬೇಡವಾಗಿದೆ.

    ಪ್ರತಿ ವಿದ್ಯಾರ್ಥಿಗೆ ಕೋವಿಡ್ ಟೆಸ್ಟ್ ಮಾಡುವುದು, ವಿದ್ಯಾರ್ಥಿಗಳನ್ನು ಸಣ್ಣ, ಸಣ್ಣ ಗುಂಪುಗಳಾಗಿ ವಿಂಗಡಿಸಿ ಪ್ರಾಕ್ಟಿಕಲ್  ಕಸುಬನ್ನು ಹೇಳಿಕೊಡುವುದು, ಶಿಕ್ಷಕರಿಗೆ ಆನ್ ಲೈನ್ ತರಗತಿಗಳ ಬಗ್ಗೆ ತರಬೇತಿ ನೀಡುವುದು, ಮಧ್ಯೆ ಕಡಿದು ಹೋಗದಂತಹ  ಅಂತರ್ಜಾಲ ವೇದಿಕೆಗಳನ್ನು ಆಯಾ ಶಿಕ್ಷಣ ಸಂಸ್ಥೆಗಳು ಖರೀದಿಸುವುದು, ಆಧುನಿಕ ಸವಲತ್ತುಗಳಿಲ್ಲದ ಮಕ್ಕಳು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ತಮ್ಮ ಶಾಲಾ-ಕಾಲೇಜಗಳಲ್ಲೇ ಆನ್ ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗುವಂತಹ ವ್ಯವಸ್ಥೆಗಳನ್ನು ಒದಗಿಸುವುದು,ರೆಕಾರ್ಡ್ ಆದ ಲೈವ್ ಪಾಠಗಳನ್ನು ಅಕಸ್ಮಾತ್ ಆ ದಿನದ ತರಗತಿಗೆ ಹಾಜರಾಗಲು ಸಾದ್ಯವಾಗದ ಮಕ್ಕಳಿಗೆ ದೊರಕುವಂತೆ ಮಾಡುವ ಬದಲಾವಣೆಗಳ ಬಗ್ಗೆ ಮತ್ತು ಅಳವಡಿಸಬಹುದಾದ ಇತರೆ ಹೊಸ ವಿಚಾರಗಳಿಗೆ ಸರ್ಕಾರ ಮತ್ತು ದುಬಾರಿ ಶುಲ್ಕವನ್ನು ಪಡೆವ ಕಾಲೇಜುಗಳು ಗಮನಹರಿಸಲೇ ಬೇಕಿದೆ.

    ಪ್ರತಿ ಸುಧಾರಣೆಯೂ ಹಲವು ಸಹಸ್ರ ವಿದ್ಯಾರ್ಥಿಗಳ ಮುಖ್ಯ ಘಟ್ಟವಾದ ಈ ಶೈಕ್ಷಣಿಕ ವರ್ಷಗಳ ಕರಾಳತೆಯನ್ನು ಒಂದಷ್ಟು ಕಡಿಮೆ ಮಾಡಬಲ್ಲವು.ಕೊರೊನಾ ಕಾರಣ ಲೇವಡಿಯಾಗಿ ಬಿಟ್ಟಿರುವ, ಬಿಕ್ಕಟ್ಟಿನಲ್ಲಿ ಬೇಯುತ್ತಿರುವ ಉನ್ನತ ಅಭ್ಯಾಸದ ವಿಶ್ವ ವಿದ್ಯಾನಿಲಯದ ಶೈಕ್ಷಣಿಕ ವರ್ಷಗಳ ಗೌರವವನ್ನು ಅಲ್ಪಮಟ್ಟಿಗಾದರೂ ಎತ್ತಿಹಿಡಿಯಬೇಕಿದೆ.

    ಕಾರಣವಿಷ್ಟೆ. ಮೊದಲ ಅಲೆ ನೆಲಕಚ್ಚಿದರೂ ಎರಡನೆಯ ಅಲೆಯ ಭಯವೂ ಮತ್ತೆ  ಭಾರತವನ್ನು ಮತ್ತಷ್ಟು ಕಾಲ ಕಾಡಬಲ್ಲದು. ಎರಡನೆಯ ಅಲೆಯ ಭಯದಲ್ಲಿ ಮತ್ತೆ ಸುಮಾರು ಅರ್ಧಭಾಗದಷ್ಟು ಲಾಕ್ ಡೌನ್ ಆಗಿರುವ ವೇಲ್ಸ್ ನಂತಹ ಪುಟ್ಟ ದೇಶವನ್ನು ನೋಡಿದರೆ ಇದಿನ್ನೂ ಶುರುವಾಗುತ್ತಿರುವ ಕೋಟಲೆಗಳ ಅಧ್ಯಾಯ ಎನ್ನುವುದನ್ನು ನಾವು ಅರಿಯಬಹುದಾಗಿದೆ.

    Photo by Rubén Rodriguez on Unsplash

    ಬದುಕನ್ನು ಮತ್ತಷ್ಟು ಸಂಭ್ರಮಿಸುವ ಬಗೆಯಿದು

    ನಾವು ಬದುಕನ್ನು ಖುಷಿಯಾಗಿ ಕಳೆಯುವುದನ್ನು ಕಲಿತಿದ್ದೇವೆಯೇ? ಜೀವನದಲ್ಲಿ . ಅನಿರ್ದಿಷ್ಟತೆಯನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಈ ಕ್ಷಣವನ್ನು ಖುಷಿಯಿಂದ ಕಳೆಯಲು ಮನಸ್ಸು ಹಿಂದೇಟು ಹಾಕುತ್ತಿದೆಯಾ?

    ಬದುಕಿದ್ದಷ್ಟೂ ದಿನ ಎಲ್ಲರೊಂದಿಗೆ ಖುಷಿ ಖುಷಿಯಾಗಿ ಕಳೆಯುವುದಷ್ಟೇ ಜೀವನದ ಉದ್ದೇಶ ಆಗಿರಬೇಕು. ಇತರರನ್ನು ದ್ವೇಷಿಸಿ, ತೊಂದರೆ ಕೊಟ್ಟು ಬದುಕಿದ್ದಷ್ಟೂ ದಿನ ಮತ್ತೊಬ್ಬರ ಬಗ್ಗೆಯೇ ಅಸೂಯೆ, ಅಸಹನೆ, ದ್ವೇಷ ಮನೋಭಾವ ಬೆಳೆಸಿಕೊಳ್ಳುವುದರಿಂದ ಗಳಿಸುವಂತಹದ್ದೂ ಏನೂ ಇಲ್ಲ. ಕಳೆದುಕೊಳ್ಳುವುದೇ ಹೆಚ್ಚು.

    ಜೀವನದ ಕೊನೆಯ ಗಳಿಗೆಯ ಬಗ್ಗೆ ನಿಖರತೆ ಇಲ್ಲದೇ ಇರುವುದರಿಂದ ಈ ಕ್ಷಣವನ್ನು ಎಷ್ಟು ಸಾಧ್ಯವೋ ಅಷ್ಟು ಆನಂದಿಂದ ಎಲ್ಲರೊಂದಿಗೂ ಪ್ರೀತಿಭಾವದಿಂದ ಕಳೆದರೆ ಅದುವೇ ಜೀವನದ ಸಾರ್ಥಕ ಭಾವ. ಅದೇ ಬದುಕಿನ ಶ್ರೀಮಂತಿಕೆ.

    ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ಕಾಣದ ಶಕ್ತಿಗೆ ಒಂದು ನಮನ ಸಲ್ಲಿಸಿ. ಬದುಕನ್ನು ಖುಷಿಯಿಂದ ಕಳೆಯಲು ನನ್ನ ಬದುಕಿನಲ್ಲಿ ಒಳ್ಳೆಯದನ್ನೇ ಯೋಚನೆ ಮಾಡಲು, ಈ ಕ್ಷಣವನ್ನು ಖುಷಿಯಿಂದ ಕಳೆಯಲು, ಎಲ್ಲರನ್ನೂ ಪ್ರೀತಿಸಲು ಮತ್ತೊಂದು ಅಮೂಲ್ಯ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗ ಮಾಡಿಕೊಳ್ಳುತ್ತೇನೆ ಎನ್ನುವ ಪ್ರತಿಜ್ಞೆ ಮಾಡಿ ನೋಡಿ. ಇದೆಲ್ಲವುಗಳಿಂತ ಹೆಚ್ಚಾಗಿ ನಮ್ಮ ಬಳಿ ಏನಿದೆ ಏನಿಲ್ಲ ಎನ್ನುವುದಷ್ಟೇ ಮುಖ್ಯವಲ್ಲ. ಬದುಕನ್ನು ಹೇಗೆ ಕಳೆಯುತ್ತಿದ್ದೇವೆ ಎಂಬುದು ಮುಖ್ಯ.

    ಬದುಕನ್ನು ಆನಂದಿಸಲು
    ಪ್ರತಿ ಕ್ಷಣವನ್ನು ಸವಿಯಿರಿ. ಯಾವ ಕ್ಷಣ ನಮ್ಮ ಜೀವನದ ಕೊನೆ ಗಳಿಗೆ ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಪ್ರತಿಯೊಂದು ಅಂಶವನ್ನು ಗಮನದಲ್ಲಿಟ್ಟುಕೊಂಡು ಪ್ರತಿಕ್ಷಣವನ್ನು ಆನಂದದಿಂದ ಕಳೆಯುವ ಪ್ರಯತ್ನ ಮಾಡಬೇಕು.

    ಮಗುವನ್ನು ಗಮನಿಸಿ ನೋಡಿ ಸಣ್ಣ ಸಣ್ಣ ವಿಷಗಳಲ್ಲಿಯೂ ಆನಂದವನ್ನು ಹುಡುಕುತ್ತಿರುತ್ತದೆ. ಹರಿದಾಡುವ ಇರುವೆಯನ್ನು ನೋಡಿ ಖುಷಿ ಕಂಡುಕೊಳ್ಳುತ್ತಿರುತ್ತದೆ. ಅದೇ ರೀತಿ ನಾವೂ ಕೂಡಾ ಸಣ್ಣ ಸಣ್ಣ ವಿಷಯಗಳಲ್ಲಿಯೂ ಸಂತೋಷವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು.

    ಮಗುವಾಗಿದ್ದಾಗ ಕಳೆದ ಪ್ರತಿಕ್ಷಣವೂ ಆನಂದದಾಯಕವಾಗಿರುತ್ತದೆ.
    ಅದಷ್ಟೇ ಅಲ್ಲ ಮಳೆಯ ಸಿಂಚನಕ್ಕೆ ಮೈಯೊಡ್ಡಿ ಸಂಭ್ರಮಿಸಿದ್ದು, ಮೋಜಿನ ಆಟಗಳನ್ನು ಆಡಿದ್ದು, ಯಾವುದರ ಬಗ್ಗೆಯೂ ಚಿಂತೆ ಇಲ್ಲದೇ ನಿರಾಂತಕವಾಗಿದ್ದಿದು. ಹೀಗೆ ಸಣ್ಣಸಣ್ಣ ಖುಷಿಯೂ ಅವಶ್ಯಕವೇ.

    ದೈಹಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಿ. ನಿತ್ಯ ಎಕ್ಸರಸೈಸ್ ಮಾಡುವುದರಿಂದ ನಮ್ಮಲ್ಲಿ ಖುಷಿಯಾಗಿರಲು ಪ್ರೇರಣೆ ನೀಡುವಂತಹ ರಾಸಾಯನಿಕಗಳು ಬಿಟುಗಡೆಯಾಗುವಂತೆ ಮಾಡುತ್ತದೆ. ಎಂಡೋರ್ಫಿನ್‍ಗಳ ಬಿಡುಗಡೆಯಿಂದ ದೇಹದಲ್ಲಿ ನೋವು ಒತ್ತಡ ಕಡಿಮೆ ಆಗುತ್ತದೆ.

    ನಗು ಮುಖದಿಂದಿರಿ. ನಗು ಎಲ್ಲದಕ್ಕೂ ಔಷಧ ಎಂದಿದ್ದಾರೆ ಹ್ಯಾರಿ ವಾರ್ಡ್ ಬೀಚರ್. ವ್ಯಾಯಾಮ ಮಾಡುವುದರಿಂದ ದೇಹ ಉಲ್ಲಾಸಿತಗೊಳ್ಳುತ್ತದೆ. ಖುಷಿಯಾಗಿರಿಸುವಂತಹ ವಿಷಯಗಳತ್ತ ಗಮನಹರಿಸಿ. ಹೊಸ ತರದ ಆಹಾರ ಸೇವನೆ, ಹಾಸ್ಯಮಯ ಸಿನಿಮಾಗಳನ್ನು ನೋಡುವುದು, ಮಕ್ಕಳೊಂದಿಗೆ ಸಮಯ ಕಳೆಯುವುದು, ಮೋಜಿನ ಆಟಗಳನ್ನು ಕೈಗೊಳ್ಳುವುದು ಇವೇ ಮೊದಲಾದ ಮನಸ್ಸಿಗೆ ಖುಷಿ ನೀಡುವಂತಹ ವಿಚಾರಗಳತ್ತ ಗಮನ ಹರಿಸಿ. ಹೊಸತನ್ನು ಟ್ರೈ ಮಾಡುವುದರಿಂದ ಅದು ಆಹಾರವೇ ಆಗಿರಬಹುದು ಅದರಿಂದ ಸಿಗುವ ಖುಷಿ ಬೇರೆಯೇ ಆಗಿರುತ್ತದೆ.

    ಡೈರಿ ಬರೆಯುವ ಅಭ್ಯಾಸ ರೂಢಿಸಿಕೊಳ್ಳಿ. ಖುಷಿಯ ವಿಚಾರಗಳನ್ನು ದೈನಂದಿನ ಚಟುವಟಿಕೆಗಳನ್ನು ಅದರಲ್ಲಿ ನಮೂದಿಸುತ್ತಾ ಹೋಗಿ. ಮುಂದೊಂದು ಅದನ್ನು ತೆರೆದಾಗ ಆಗುವ ಖುಷಿ ಅಷ್ಟಿಷ್ಟಲ್ಲ.

    ಹೊಸ ವಿಷಯಗಳನ್ನು ಕಲಿಯಲು ಆರಂಭಿಸಿ. ಹೊಸ ವಿಷಯಗಳನ್ನು ಕಲಿತುಕೊಳ್ಳುವುದರಿಂದ ವಿಷಯಜ್ಞಾನ ಹೆಚ್ಚುವುದರ ಜತೆಗೆ ಖುಷಿಯೂ ಆಗುವುದು. ಮನಸ್ಸು, ಆಲೋಚನಾ ಕ್ರಮವನ್ನು ಹೆಚ್ಚು ಚಟುವಟಿಕೆಯಿಂದ ಕೂಡಿರುವಂತೆ ಮಾಡುವುದು. ದೇಹ ಮತ್ತಷ್ಟುಚಟುವಟಿಕೆಯಿಂದ ಕೂಡಿರುವುದರಿಂದ ಸಹಜವಾಗಿ ಸಂತೋಷವೂ ಹೆಚ್ಚುವುದು.

    • ಥ್ಯಾಂಕ್ಸ್ ಹೇಳುವುದು, ಉಡುಗೊರೆಗಳನ್ನು ನೀಡುವುದು, ಕುಟುಂಬದವರೊಂದಿಗೆ, ಬಂಧು ಬಾಂಧವರೊಡನೆ ಸಮಯ ಕಳೆಯುವುದು ಕೂಡಾ ಖುಷಿ ನೀಡುತ್ತದೆ. ಅದಕ್ಕಾಗಿ ಸಮಯ ಮೀಸಲಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕೈಚಾಚಿ ಬಂದವರಿಗೆ ಸಹಾಯ ಮಾಡುವುದು, ಕೆಲಸದ ಜಾಗದಲ್ಲಿ ಹೊಸಬರಿಗೆ ಸಹಾಯಮಾಡುವುದು, ಇವೇ ಮೊದಲಾದ ಸಣ್ಣ ಸಣ್ಣ ವಿಷಯಗಳೂ ಕೂಡಾ ಖುಷಿ ನೀಡುತ್ತದೆ.
    • ಭವಿಷ್ಯದ ಬಗ್ಗೆ ಯೋಜನೆ ರೂಪಿಸಿಕೊಳ್ಳಿ. ಆದರೆ ವರ್ತಮಾನದಲ್ಲಿ ಜೀವಿಸಿ. ಭವಿಷ್ಯದ ಬಗ್ಗೆಯೇ ಚಿಂತೆ ಮಾಡುತ್ತಾ,ಯೋಜನೆಗಳನ್ನು ರೂಪಿಸಿಕೊಳ್ಳುತ್ತಾ ಪ್ರಸ್ತುತ ಜೀವನದ ಸುಖದ ಕ್ಷಣಗಳನ್ನು ಮರೆತರೆ ಅದಕ್ಕರ್ಥವಿಲ್ಲ.ಖುಷಿಯಿಂದಿರುವ ವ್ಯಕ್ತಿಗಳು ಹೆಚ್ಚಾಗಿ ಈ ಕ್ಷಣವನ್ನು ಅನುಭವಿಸುತ್ತಿರುತ್ತಾರೆ ಎಂಬುದು ಸಂಶೋಧನೆಗಳಿಂದಲೂ ತಿಳಿದುಬಂದಿದೆ.
    • ಬದುಕಿನ ಸಣ್ಣ ಸಣ್ಣ ಯಶಸ್ಸನ್ನೂ ಆನಂದಿಸಿ. ಇದರಿಂದ ಜೀವನಕ್ಕೆ ಮತ್ತಷ್ಟು ಸೂರ್ತಿ ಮತ್ತು ಪ್ರೇರಣೆ ಸಿಗುತ್ತದೆ. ಸಣ್ಣದೇ ಆಗಿರಬಹುದು ಅದರೆ ಅದನ್ನು ಅನುಭವಿಸುವುದರಿಂದ ಸಿಗುವ ಖುಷಿಯ ಮೊತ್ತ ದೊಡ್ಡದೇ ಆಗಿರುತ್ತದೆ.
    • ತನ್ನ ಬಳಿ ಏನಿದೆಯೋ ಅದರ ಬಗ್ಗೆ ಹೆಮ್ಮೆ ಇರಲಿ. ಏನಿಲ್ಲವೋ ಅದರ ಬಗ್ಗ ಚಿಂತೆ ಬೇಡ. ಪಾಲಿಗೆ ಬಂದದ್ದು ಪಂಚಾಮೃತ ಅನ್ನುತ್ತಾರಲ್ಲ. ಅಂತಹ ಮನಸ್ಥಿತಿ ಇರಲಿ.
    • ಕುಟುಂಬ, ಗೆಳೆಯರ ಬಳಗವನ್ನು ಗೌರವಿಸಿ. ಅವರ ಬಗ್ಗೆ ಹೆಮ್ಮೆ ಇರಲಿ. ಪ್ರೀತಿಪಾತ್ರರನ್ನು ಗೌರವಿಸುವುದರಿಂದ ಆದರದಿಂದ ಕಾಣುವುದರಿಂದ ಪರಸ್ಪರ ಬಾಂಧವ್ಯ ಚೆನ್ನಾಗಿರುತ್ತದೆ. ಕಷ್ಟಕಾಲದಲ್ಲಿಯೂ ನೆರವಾಗುತ್ತಾರೆ.
    • ಜೀವನ ಅನ್ನೋದು ಕ್ಷಣಿಕ. ಬದುಕಿನ ಬಗ್ಗೆ ನಿಖರತೆ ಇಲ್ಲ, ಇಲ್ಲಿ ಯಾವುದೂ ಕೂಡಾ ಶಾಶ್ವತ ಅಲ್ಲ. ಹಾಗಿರುವಾಗ ಜೀವನವನ್ನು ಪ್ರತಿಕ್ಷಣ ಖುಷಿಯಿಂದ ಅನುಭವಿಸಲಿಕ್ಕಾಗಿಯೇ ಇದ್ದೇನೆ ಎನ್ನುವ ಭಾವ ಇರಲಿ.

    Photo by Belle Co from Pexels

    ಇಂದಿನ ನುಡಿ

    ಅದೃಷ್ಟವಂತ ಎಂದರೆ ಅವಕಾಶವನ್ನು ಪಡೆಯುವವನು. ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು…

    ಸಂಗ್ರಹ :ರಾಜೀವಲೋಚನ
    .

    ಇಂದಿನ ಪಂಚಾಂಗ

    ದಿನಾಂಕ 7 ಅಕ್ಟೋಬರ್ 2020,ಬುಧವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ಶರದ್, ಮಾಸ : ಅಧಿಕ ಆಶ್ವೀಜ, ಪಕ್ಷ :ಕೃಷ್ಣ ತಿಥಿ:ಪಂಚಮಿನಕ್ಷತ್ರ:ರೋಹಿಣಿ

    ಸೂರ್ಯೋದಯ : ಬೆಳಿಗ್ಗೆ 6.09

    ಸೂರ್ಯಾಸ್ತ: ಸಂಜೆ 6.06

    error: Content is protected !!