25.6 C
Karnataka
Thursday, May 21, 2026
    Home Blog Page 145

    ಎಚ್ಚೆಸ್ವಿ ಅವರ ಇಪ್ಪತ್ತು ವರ್ಷಗಳ ಅವಿರತ ತಪಸ್ಸಿನ ಫಲ ಬುದ್ಧಚರಣ

    ಅಂತಃಕರಣದ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಅವರ ಇಪ್ಪತ್ತು ವರ್ಷಗಳ ಅವಿರತ ತಪಸ್ಸಿನ ಫಲವಾಗಿ ಜನ್ಮತಾಳಿದ ಮಹಾಕಾವ್ಯ ಬುದ್ಧಚರಣ. ಬುದ್ಧನ ಕತೆಯನ್ನು ಕಾವ್ಯದಲ್ಲಿ ಕಟ್ಟಿಕೊಟ್ಟಿರುವ ಎಚ್ಚೆಸ್ವಿಯವರ ಈ ಪುಸ್ತಕ ಇಂದು ವರ್ಚುಯಲ್ ಸಮಾರಂಭದಲ್ಲಿ ಲೋಕಾರ್ಪಣೆ ಆಗುತ್ತಿದೆ. ಕನ್ನಡಿಗರಿಗೆ ಓದಿಗೆ ಸಿಕ್ಕಲಿದೆ.

    ಅಂಕಿತ ಪುಸ್ತಕ ಹೊರತಂದಿರುವ ಈ ಮಹಾಕಾವ್ಯದ ಹೊತ್ತಿಗೆಯನ್ನು ಬುಕ್ ಬ್ರಹ್ಮ ಫೇಸ್ ಬುಕ್ ಲೈವ್ ನಲ್ಲಿ ಹೆಸರಾಂತ ವಿಮರ್ಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಬಿಡುಗಡೆ ಮಾಡಲಿದ್ದಾರೆ. ಕವಿ ಎಚ್. ಎಸ್ ವೆಂಕಟೇಶ ಮೂರ್ತಿ ಮತ್ತು ಎಂ. ಆರ್. ದತ್ತಾತ್ರಿ ಅವರು ನಂತರ ನಡೆಯುವ ಸಂವಾದದಲ್ಲಿ ಭಾಗವಹಿಸಲಿದ್ದಾರೆ.

    ಈ ಪುಸ್ತಕದ ಒಂದು ಭಾಗವನ್ನು ಕನ್ನಡ ಪ್ರೆಸ್ ಓದುಗರಿಗೆ ಇಲ್ಲಿ ಸಾದರ ಪಡಿಸುತ್ತಿದ್ದೇವೆ.

    ದೀಕ್ಷಾಕಾಂಡ


    ಬುದ್ಧ ನೊಗದಳತೆಯಷ್ಟೇ ದಾರಿ ನೋಡುತ್ತ,
    ರಾಜಧಾನಿಯ ಬೀದಿಬೀದಿಯಲಿ ನಡೆಯುವುದ
    ನೋಡಿ, ಕರಗಿದ ಗರತಿಯರು ಕಣ್ಣ ಹನಿಯನ್ನು
    ಸೆರಗಿನಲ್ಲೊರೆಸುವರು. ‘ಬೆಳ್ಗೊಡೆಯ ಅಡಿಯಲ್ಲಿ
    ಬೆಳ್ಳಿ ರಥದಲಿ ಕೂತು ವಿಜಯಯಾತ್ರೆಗೆ ಹೋಗ-
    ಬೇಕಾದ ದೊರೆಮಗನು, ತಲೆಯ ಬೋಳಿಸಿ, ಕಾವಿ
    ಚೀವರವ ಧರಿಸಿ ಕೈಯಲ್ಲಿ ಕಪ್ಪರವನ್ನು
    ಹಿಡಿದು ಮನೆಮನೆ ಮುಂದೆ ತುಟಿಯ ಪಿಟ್ಟೆನ್ನಿಸದೆ
    ನಿಲ್ಲುವುದ ನೋಡಿದರೆ ಯಾವ ತಾಯಿಗೆ ಹೊಟ್ಟೆ
    ಚುರ್ರೆನ್ನದಿದ್ದೀತು? ಹೇಗೆ ಮನಗೊಂಡನೋ
    ಎಂದು ಬಿಸುಸುಯ್ಯುವರು. ಪತ್ನಿ ಪುತ್ರರ ಸಖ್ಯ
    ದಲ್ಲಿ ಕಾಣದ ಯಾವ ಆನಂದ ಕಂಡನೋ
    ಇಂಥ ನಿಷ್ಠುರ ವ್ರತಕೆ ಮನಮಾಡಿದನು ನೋಡಿ!’
    ಎಂದು ಹಲುಬುತ್ತಾರೆ, ಮೂಗು ಸೊರಬುರ ಮಾಡಿ


    ನೀನು ಊರನು ತೊರೆದು ಹೋದೆ. ಆಮೇಲೆ ಇ-
    ಲ್ಲಾದದ್ದು ನಿನಗೆ ತಿಳಿದಿಲ್ಲ. ಸಂಸಾರವನು
    ಬಿಟ್ಟು ಹೋದದ್ದಕ್ಕೆ ಆಕ್ಷೇಪಿಸದೆ ನಿನ್ನ,
    ನನ್ನಿಂದ ಏನು ಅಪರಾಧವಾಯಿತೊ ತಿಳಿಯೆ.
    ಏಕೆ ನೊಂದನೊ! ಏಕೆ ತೊರೆಯಬೇಕೆನ್ನಿಸಿತೊ?
    ತಂದೆ ಮುಖವನ್ನೆ ಕಾಣದೆ ಬೆಳೆಯುವಂತಾಯ್ತೆ
    ಕಂದಮ್ಮ? ಅದರ ತಪ್ಪೇನುಂಟು? ಹೆಂಗರುಳು
    ಸಿದ್ಧಾರ್ಥನದು! ನನ್ನ ಕಣ್ಣಲಿ ಒಂದು ಹನಿ
    ಕಂಡಿತೋ ಕೈಹಿಡಿದು ಹಲುಬುವನು ದಿನವಿಡೀ.
    ಯಾರು ಏನೆಂದರೇ ಗೆಳತಿ? ಕಣ್ಣಲಿ ನೀರು
    ಬರಬಾರದಮ್ಮ ಕೈಹಿಡಿದು ಬಂದಾಕೆಗೆ!
    ಎಂದು ದಿನವಿಡಿ ಹಲುಬುತಿದ್ದ ಆ ಕರುಣಾಳು.
    ಎಂದು ನೊಂದಳು ಎಂದ, ದೊರೆಯು ಅಮಿತಾಭಗೆ.
    ಎಂಥ ಅಭಿಮಾನವೋ ಸೊಸೆಯಲ್ಲಿ ಅವನಿಗೆ|


    ನೀನೇನೊ ಹೋದೆ ಸಂಸಾರ ಸಾಗರದಲ್ಲಿ
    ಬಿದ್ದು ಒದ್ದಾಡುವೀ ಲೋಕದುದ್ಧಾರಕ್ಕೆ.
    ತಪವ ಕೈಗೊಂಡೆ ಅನ್ನಾಹಾರವನು ತೊರೆದು.
    ಇಲ್ಲಿ ಈಕೆಯು ನಿನ್ನ ಹಾಗೆಯೇ ತಪಿಸಿದಳು.
    ನಾರು ಬಟ್ಟೆಯನುಟ್ಟು. ಮೆತ್ತೆಯಲಿ ಮಲಗದೆ.
    ತೊಡದೆ ಆಭರಣ. ತಿನ್ನದೆ ಭಕ್ಷ್ಯ ಭೋಜ್ಯವ.
    ಮನೆಯಲ್ಲೆ ಇದ್ದರೂ ಸನ್ಯಾಸಿನಿಯ ಹಾಗೆ
    ಬದುಕಿದಳು. ಹೆತ್ತ ಕಂದನಿಗಾಗಿ ಒಪ್ಪಿಡಿಯ
    ಉಪ್ಪುಖಾರಗಳಿರದ ಕೂಳುಂಡು! ನಾವು ಅ-
    ತ್ತೇವೆಂದು ತಾನಳದೆ, ಹೇಗೊ ದುಃಖವ ಸಹಿಸಿ.
    ನಿನ್ನ ತಪ ಫಲಿಸಲೆಂದೇ ಹಲವು ವ್ರತದಲ್ಲಿ
    ತೊಡಗಿದಳು, ತಿನ್ನುಣ್ಣೊ ಹರಯದಲಿ ಸಾಧ್ವಿಯು,
    ತುತ್ತಾದ ಹಾಗೆ ಮುಪ್ಪಿಗೆ ತನ್ನ ಹರಯದಲಿ;
    ನಿನಗೆ ಗೆಲುವಾಗಲೆನ್ನುವ ಒಂದೆ ಬಯಕೆಯಲಿ.


    ಕರುಣೆ ಉಕ್ಕಿತು ತರುಣಿಯಲ್ಲಿ ಅಮಿತಾಭನಿಗೆ.
    ದೃಢವಾದ ಸ್ವರದಲ್ಲಿ ನುಡಿದ: ನಾನವಳನ್ನು
    ಅವಳು ಇರುವಲ್ಲಿಗೇ ಹೋಗಿ ಸಾಂತ್ವನಿಸುವೆನು,
    ಅರ್ಥವಾಗುವುದು ಆಕೆಗೆ ನನ್ನ ಕಳವಳವು.
    ಅರಿಯುವಳು ಲೋಕಕಾಳಜಿಯ ಈ ಮನದಳಲು.
    ಒಳಗೊಳ್ಳಲಾರದು ಸಮಷ್ಟಿಯನು ವ್ಯಷ್ಟಿಯು.
    ಒಳಗೊಳ್ಳುವುದು ನೂರು ನದಿಯಳಲ ಹೆಗ್ಗಡಲು.
    ನಾನು ನನಗಾಗಿ ಅಳುವುದು ಸಹಜ. ಲೋಕಕ್ಕೆ
    ಅಳಬೇಕು ನೊಂದವರು. ಆಗಷ್ಟೆ ನೊಂದ ನೋ-
    ವಿಗೆ ಅರ್ಥ ಎನ್ನುತ್ತ ಬುದ್ಧ ತಾನೇ ಹೋದ.
    ಆತ್ಮಕೇಂದ್ರಿತ ಬದುಕ ತ್ಯಜಿಸುವುದೆ ಸನ್ಯಾಸ.
    ಮಾತು ಮುಟ್ಟದು ಮನದ ಅನುಭೂತಿ. ಕೈಹಿಡಿದು
    ನಡೆದವಳು ಅರಿತಾಳು ನನ್ನ ನಾಡಿಯ ಮಿಡಿತ;
    ಎನ್ನುವುದು ಶಬ್ದಾರ್ಥ ಲೆಕ್ಖಿಸದ ಎದೆ ನುಡಿತ.


    ಅಮಿತಾಭ ಇರುವಷ್ಟು ಕಾಲ ಹುಟ್ಟೂರಲ್ಲಿ
    ನಿತ್ಯವೂ ನೂರಾರು ಮಂದಿ ಜಿಜ್ಞಾಸುಗಳು
    ಬರುವಾರಾತನ ಬಳಿಗೆ. ಸಂಶಯದ ಪರಿಹಾರ
    ಪಡೆದು ಆಗುತ್ತಾರೆ ಭಿಕ್ಕು, ದೀಕ್ಷೆಯ ವಹಿಸಿ.
    ಅರಸು ಮನೆವಾಳ್ತೆಯಲು ಪ್ರತಿಯೊಂದು ಮನೆಯಿಂದ
    ಒಬ್ಬೊಬ್ಬರಂತೆ ಬುದ್ಧನ ಶಿಷ್ಯರಾಗುವರು.
    ನಂದ, ಆನಂದ, ಅನುರುದ್ಧ ಮೊದಲಾದವರು
    ಮುಖ್ಯರವರಲ್ಲಿ. ಆ ದೇವದತ್ತನು ಕೂಡ.
    ದಾಯಾದಿ ಬುದ್ಧನಿಗೆ. ಮೊದಲಿಂದಲೂ ದ್ವೇಷ
    ಸಾಧಿಸುತ ಬಂದವನು. ಬುದ್ಧ ವೈಭವ ಈಗ
    ಕಣ್ಕುಕ್ಕುವುದು ಅವನ. ಇಂದಲ್ಲ ನಾಳೆ ಸಂ-
    ಘದ ಮುಖ್ಯನೆನ್ನಿಸುವ ಕನಸು ಕಾಣುತ್ತಾನೆ.
    ಬುಧ್ಧನನುಯಾಯಿ ಆ ದೇವದತ್ತನು ಕೂಡ.
    ಅರಿಯುವುದು ಅರಿದು ಮನದೊಳಗಿನೊಳಗಿನ ಜಾಡ.


    ಬುದ್ಧ, ನ್ಯಗ್ರೋಧ ವನದಲ್ಲಿ ನೆಲೆಸಿದ್ದಾಗ
    ಪ್ರತಿ ಸಂಜೆ ನಡೆಯುವುದು ಬುದ್ಧಧರ್ಮದ ಕುರಿತ
    ಜಿಜ್ಞಾಸೆ. ಆಗಾಗ ಗೌತಮಿಯ ಜೊತೆಗೆ ಗುರು
    ಪತ್ನಿಯೂ ಬಂದು ಕೇಳುವಳು ಬುದ್ಧನ ವಾಣಿ.
    ತೆರೆಯುವುದು ಒಳಮನೆಗೆ ಆಗ ಎಷ್ಟೋ ಕಿಂಡಿ.
    ಹೊಸಧರ್ಮದತ್ತ ಒಲಿಯುವುದು ಆಕೆಯ ಚಿತ್ತ.
    ಬರುವಾಗ ತಿರುಗಿ ದಾರಿಯಲಿ ಆ ಅತ್ತೆ ಸೊಸೆ
    ನಡೆಸುವರು ಸಂವಾದ ಹೊಸ ವಿಚಾರದ ಬಗ್ಗೆ.
    ಕೆಲವು ಸಿಕ್ಕುಳಿದಾಗ ಗುರುವನ್ನೆ ಕೇಳಿ ಪರಿ-
    ಹಾರ ಪಡೆಯಲು ಯಶೋಧರೆಯು ನಿಶ್ಚಯಿಸುವಳು.
    ಅವಳ ಧಾರ್ಮಿಕ ಓಲುವೆಯು ಬಹಳ ಹಿತವೆನಿಸಿ,
    ಪರಿಹರಿಸುವನು ಬುದ್ಧ ಶಂಕೆಯಕ್ಕರೆಯಿಂದ.
    ಹೇಗೆ ಗಾಳಿಯ ತಂಪುಗೊಳಿಸುವುದೊ ಪುಷ್ಕರಣಿ
    ಮನವ ಹಾಗೇ ಸ್ವಸ್ಥಗೊಳಿಸುವುದು ಗುರುವಾಣಿ.


    ಶುದ್ಧೋದನನ ಸೋದರನು ಸುಕ್ಲೋದನ.
    ಇಬ್ಬರಿದ್ದಾರೆ ಪುತ್ರರು. ಒಬ್ಬ ಅನುರುದ್ಧ.
    ಇನ್ನೊಬ್ಬನಿಗೆ ಮಹಾನಾಮ ಎನ್ನುತ್ತಾರೆ.
    ಬುದ್ಧಗುರುವಿನ ಪ್ರಭಾವಕ್ಕೆ ಅವರೊಳಗಾಗಿ
    ಭಿಕ್ಕುವಾಗಲು ನಿಶ್ಚಯಿಸುವರು. ಅನುರುದ್ಧ
    ಸಂಸಾರ ತ್ಯಾಗಕ್ಕೆ ತಾಯಿಯನುಮತಿಯನ್ನು
    ಬೇಡುವನು. ತಾಯಿಗೋ ಅನುರುದ್ಧ ಸನ್ಯಾಸಿ
    ಯಾಗುವುದು ಬೇಡವೆನಿಸಿದೆ. ಶಾಕ್ಯ ಜನಪದಕೆ
    ಆಗ ಬದ್ಧೀಯ ಎನುವವನು ದೊರೆ. ತಾಯಿ ಹೇ-
    ಳುವಳು: ಬದ್ಧೀಯ ಆದರೆ ಭಿಕ್ಕು ನಿನಗೂನು
    ಅನುಮತಿಯ ನೀಡುವೆನು! ಅನುರುದ್ಧ ಹೋಗಿ ಬ-
    ದ್ಧೀಯನನು ಕೇಳಿದರೆ ಒಪ್ಪೆಬಿಟ್ಟನು ಅವನು!
    ಬದ್ಧೀಯನೊಡನೆ ಅನುರುದ್ಧ ತಾನೂ ಕೂಡ
    ಸನ್ಯಾಸಿಯಾಗಿ ಹಿಡಿಯುವನು ಧರ್ಮದ ಜಾಡ!


    ಮೇಲು ಕೀಳುಗಳಿಲ್ಲ, ಭೇದ ಭಾವಗಳಿಲ್ಲ.
    ಎಲ್ಲರಿಗು ತೆರೆದಿರಲು ಬುದ್ಧ ಕಾರುಣ್ಯ ಮತ
    ಕ್ಷೌರಿಕ ಉಪಾಲಿಯೂ ಭಿಕ್ಕುವಾಗುತ್ತಾನೆ!
    ಸಮಸಮಾನತೆ! ಏಣಿಯಿರದ ಸಮ ಪಾತಳಿ.
    ಶತಮಾನಗಳ ನೆತ್ತಿಭಾರ ಹಗುರಾಗುವುದು.
    ಇದು ಮಹಾ ಬಿಡುಗಡೆಯ ಮಾರ್ಗ. ಹೆಗಲಿಗೆ ಹೆಗಲು
    ತಾಗುತ್ತ ಸಾಗುವರು ಬುದ್ಧಾನುಯಾಯಿಗಳು,
    ನಿಬ್ಬಾಣದೆಡೆಗೆ ದೃಢವಾದ ಹೆಜ್ಜೆಯನೂರಿ.
    ಹಿರಿಯ ಭಿಕ್ಕುವಿಗೆ ಶರಣನೆನ್ನುವನು ಹೊಸದಾಗಿ
    ಭಿಕ್ಕು ಆದವ! ತನ್ನ ಹಳೆಯ ಕಸರನು ಮರೆತು!
    ಬುದ್ಧಚರಣವ ಹಿಡಿದು ಮುಕ್ತರಾಗುತ್ತಾರೆ
    ಹಲವು ಹನ್ನೊಂದು ಕುಲದವರು ಭಿಕ್ಕುಗಳಾಗಿ!
    ಕಾರುಣ್ಯವರ್ಷ ಸುರಿಯುವುದು ಎಲ್ಲಾ ಕಡೆಗು.
    ಇಬ್ಬನಿಯ ಮುತ್ತು ಪ್ರತಿಯೊಂದು ಹುಲ್ಲಿನ ಹೆಡೆಗು.


    ಭಿಕ್ಕುಗಳ ಸಂಘವಷ್ಟೇ ಸಾಕೆ ಭಗವಂತ?
    ಬೇಡವೇ ಭಿಕ್ಕುಣಿಯ ಸಂಘ? ಕೇಳುತ್ತಾಳೆ
    ತಾಯಿ ಗೌತಮಿ ಬುದ್ಧ ಗುರುವನ್ನು ಆಗಾಗ.
    ನೀಡು ವಿಶ್ವದ ಅರ್ಧ ಭಾಗವೆನ್ನಿಸುವಂಥ
    ಹೆಣ್ಣುಮಕ್ಕಳಿಗು ಕೂಡಾ ಯುಕ್ತ ಸಮಪಾಲು.
    ಪುರುಷನುದ್ಧಾರವಷ್ಟೇ ಸಾಕೆ ಧರ್ಮಕ್ಕೆ?
    ಅಸದಳವೆ ಸ್ತ್ರೀಯರಿಗೆ ವ್ರತ ನಿಷ್ಠೆ? ಕಾರುಣ್ಯ
    ನಿಧಿಯೆ ಅನುಗ್ರಹಿಸು ಸ್ತ್ರೀಯರಿಗು ಭಿಕ್ಕುಣಿಯಾಗಿ
    ನಿಬ್ಬಾಣ ಸಾಧಿಸುವ ಅವಕಾಶ! ಭಗವಂತ
    ಮೌನವಹಿಸುತ್ತಾನೆ ಏಕೊ! ‘ಪ್ರಿಯ ಆನಂದ
    ಕಾಲ ಕೂಡುವವರೆಗೆ ಕಾಯೋಣ’- ಎನ್ನುವನು.
    ಒಳಮನದಲೇನು ಯೋಚನೆಯೊ ಭಗವಂತನಿಗೆ.
    ಗೌತಮಿಯ ಕಣ್ಣಲ್ಲಿ ನೀರುಕ್ಕುವುದು ಆಗ.
    ಸಂವರಿಸುವಳು ತಾಯಿ ಹೇಗೋ ತನ್ನ ಆವೇಗ.

    ೧೦
    ಬುದ್ಧ ಧರ್ಮವು ಬರೀ ಸಾನ್ಯಾಸಿ ಧರ್ಮವೇ?
    ಭಿಕ್ಕುಗಳ ಸಂಘವೊಂದುಂಟು. ನಿಜ. ಸಂಸಾರಿ
    ಬುದ್ಧನನ್ನನುಸರಿಸಬಹುದುಪಾಸಕನಾಗಿ!
    ಕೆಲವು ನಿಯಮಗಳುಂಟು ಈರ್ವರಿಗು! ಆಸ್ತಿಯನು
    ಗಳಿಸಲನುಮತಿಯುಂಟುಪಾಸಕಗೆ. ಆಗಲು ಉ-
    ಪಾಸಕನು ಸಂಸಾರಿಗಿಲ್ಲ ವಿಧ್ಯುಕ್ತ ವಿಧಿ!
    ಭಿಕ್ಕುವಾಗುವುದಕ್ಕೆ ‘ಉಪಸಂಪದ’ ಎಂಬ
    ವಿಧಿಯುಂಟು. ಯಾರುಪಾಸಕರು ಭಿಕ್ಕುಗಳ್ಯಾರು
    ಎನ್ನುವುದ ತೀರ್ಮಾನಿಸುವನು ಬುದ್ಧನು ತಾನೆ!
    ಹೀಗೆ ಬುದ್ಧನ ಧರ್ಮ ವಿಸ್ತಾರ ಪಡೆಯಿತು.
    ಗಳಿಸಿದ್ದ ಸತ್ಪಾತ್ರರಿಗೆ ದಾನಮಾಡುತ್ತ
    ಕರ್ಮಲೇಪವ ಕಳೆದುಕೊಳ್ಳುವನುಪಾಸಕ.
    ಭಿಕ್ಕುಸಂಘದ ಅಸನ-ವಸನ-ವಸತಿಗಳನ್ನು
    ಸಂಸಾರಿ ತನ್ನ ಬಾಧ್ಯತೆಯೆಂದು ತಿಳಿಯುವನು.

    ೧೧
    ಸೋಪಾಕ ಎಂಬ ಬಾಲಕನನ್ನು ಮಲತಂದೆ
    ಯಿಂದ ರಕ್ಷಿಸಿ ಅಭಯ ನೀಡಿದ್ದ ಅಮಿತಾಭ.
    ಒಂದು ಯಾವುದು ಎಂದು ಕೇಳಿದರೆ ಬಾಲಕ
    ಎಲ್ಲರಿಗೆ ಬೇಕಾದ ಅನ್ನ ಎನ್ನುತ್ತಾನೆ!
    ಎರಡು ಯಾವುದು ಎಂದು ಕೇಳಿದರೆ ಬಾಲಕ
    ವಿಶ್ವಸೃಷ್ಟಿಯು ನಾಮ-ರೂಪದಿಂದೆನ್ನುವನು.
    ಲೋಭ-ಮೋಹ-ದ್ವೇಷ ಸಂಸಾರ ಸೆಳೆತಗಳು.
    ನಾಲಕ್ಕು ಎಂದರವು ಆರ್ಯ ಸತ್ಯಗಳು.
    ರೂಪ-ವೇದನೆ-ಸಂಜ್ಞೆ-ಸಂಕಾರ-ವಿಜ್ಞಾನ
    ಐದು ಎನ್ನುತ್ತಾನೆ ದಿಟ್ಟ ಸ್ವರದಲಿ ಹುಡುಗ.
    ಆರು? ಪಂಚೇಂದ್ರಿಯ ಮತ್ತು ನಮ್ಮ ಮನಸ್ಸು.
    ಏಳು ಬೋಧಿಯ ಅಂಗವೆನ್ನುವನು ಬಾಲಕ.
    ಎಂಟು ಅಷ್ಟಾಂಗಗಳು. ಲೋಕಗಳು ಒಂಭತ್ತು.
    ಬುದ್ಧಗುರುವೇ ನಿನ್ನ ಪಾರಮಿಗಳಿವೆ ಹತ್ತು!

    ೧೨
    ನಂದ ಬುದ್ಧನ ತಮ್ಮ. ಕಲ್ಯಾಣಿ ಅವನ ವಧು.
    ಅವಳ ಮೋಹದಲಿ ಮೈಮರೆತಿರುವ ನಂದನನು
    ಉದ್ಧರಿಸಬೇಕೆಂದು ಒಮ್ಮೆ ಭಿಕ್ಷಾಪಾತ್ರೆ
    ಕೊಂಚ ಹಿಡಿದುಕೊ ಎಂದು ಹಸ್ತದಲ್ಲಿರಿಸಿದವ
    ಮರಳಿ ಹಿಂದಕ್ಕದನು ತೆಗೆದುಕೊಳ್ಳಲೆ ಇಲ್ಲ!
    ಬುದ್ಧನೆಂದರೆ ಮಹಾ ಭಕ್ತಿ ಆ ನಂದನಿಗೆ.
    ಹೀಗೆ ಭಿಕ್ಷಾಪಾತ್ರೆ ಹಿಡಿದು ಆದನು ಭಿಕ್ಕು.
    ಭಿಕ್ಕುವಾಗಲು ಸಾಧ್ಯವೇ ಮನದ ಹದವಿರದೆ?
    ಕೇಳುವನು: ಹಿಂದಿರುಗಲನುಮತಿಯ ಕರುಣಿಸು!
    ಯೋಗಶಕ್ತಿಯ ಬಳಸಿ ತೋರುವನು ಭಗವಂತ
    ಸರ್ವಾಂಗ ಸುಂದರಿಯರಾದ ಅಚ್ಚರಸಿಯರ!
    ‘ನನಗೆ ಸಿಕ್ಕರೆ ಇವರು, ಭಿಕ್ಕುವಾಗುಳಿವೆನು.’
    ಹಿರಿಯ ಸಾಧನೆ ಮಾಡಿ ಅರಹಂತನಾಗುವನು.
    ಈಗ ಕಾಯದು ದೀಪ, ಬತ್ತಿ ಎಣ್ಣೆಗಳನ್ನು.

    ೧೩
    ಬುದ್ಧಗುರುವನು ಬೇಡಿ ಯಾವುದಕ್ಷಯ ನಿಧಿಯೊ
    ಅದನು ಪಡೆಯೆಂದು ರಾಹುಲಮಾತೆ ಹೇಳುವಳು.
    ‘ಯಾವತ್ತು ತೀರದಕ್ಷಯ ನಿಧಿಯು ಕಪ್ಪರ!
    ಭಂತೆ, ಈ ಬಾಲನಿಗೆ ಭಿಕ್ಕು ದೀಕ್ಷೆಯ ನೀಡು’
    ಎನ್ನುವನು ಭಗವಂತ ಸಾರಿಪುತ್ರನಿಗಾಗ.
    ಹೀಗೆ ಸಮಣೇರನಾದನು ಪುಟ್ಟ ಬಾಲಕನು.
    ಕಣ್ಣೀರ ಕರೆಯುತ್ತ ಶುದ್ಧೋದನನು ಬಂದು
    ಬೇಡುವನು ಬುದ್ಧನನು: ‘ತಂದೆಯೊಪ್ಪಿಗೆ ಇರದೆ
    ಮುಂದೆ ನೀನೆಂದಿಗೂ ಭಿಕ್ಕುಪಟ್ಟವ ನೀಡ-
    ಬೇಡ ಭಗವಂತನೇ ಮಕ್ಕಳಿಗೆ!’- ಎನ್ನುವನು.
    ಮಾತುಕೊಡುವನು ಬುದ್ಧ ವೃದ್ಧದೊರೆಗಾವತ್ತು.
    ಭಿಕ್ಕುವಾಗಲು ಮುಂದೆ ಹಿರಿಯರನುಮತಿ ಅಗತ್ಯ.
    ಕಡ್ಡಾಯ ನಿಯಮವಿದು. ತಂದೆಯೊಪ್ಪಿಗೆಯಿರದೆ
    ಭಿಕ್ಕು ದೀಕ್ಷೆಯ ನೀಡುವಂತಿಲ್ಲ ಬಾಲರಿಗೆ.

    ೧೪
    ಮುಂಜಾನೆ ಕೋಸಲದ ಶ್ರಾವಸ್ತಿಯಿಂದೊಬ್ಬ
    ವಾರ್ತವಾಹಕ ಬಂದ. ಶ್ರಾವಸ್ತಿಯಲಿ ದಂಡ-
    ಪಿಂಡಕನು ಕಟ್ಟತೊಡಗಿದ್ದ ಬುದ್ಧವಿಹಾರ
    ಪೂರ್ಣಗೊಂಡಿದೆಯೆಂಬ ಶುಭವಾರ್ತೆಯನು ತಂದ.
    ಜೇತವನದ ವಿಹಾರವನ್ನು ಅಮಿತಾಭನೇ
    ಸ್ವೀಕರಿಸಬೇಕಿತ್ತು. ಮಾರನೆಯ ದಿನ ಕಪಿಲ-
    ವಸ್ತುವನು ಬಿಟ್ಟು ಕೋಸಲದತ್ತ ನಡೆಯುವುದು
    ಎಂದು ಸುಗತನು ನಿರ್ಧರಿಸಿ ಶುದ್ಧೋದನನ
    ಅನುಮತಿಯ ಪಡೆದನು. ತಾಯಿ ಗೌತಮಿ ಮತ್ತು
    ಪೂರ್ವಾಶ್ರಮದ ಸತಿಗೆ ಹೇಳಿ ಕೊನೆಯ ವಿದಾಯ
    ಮರು ದಿವಸ ಆ ಭಿಕ್ಕು ಸಮುದಾಯದೊಂದಿಗೆ
    ಶ್ರಾವಸ್ತಿಯಾತ್ರೆ ಕೈಗೊಳ್ಳುವನು ಅಮಿತಾಭ.
    ಬುದ್ಧನೊಡನೆ ಕುಮಾರ ರಾಹುಲನು ಹೊರಟನು,
    ಒದ್ದೆಗಣ್ಣಿನ ತಾಯಿ, ವೃದ್ಧರನು ಬೀಳ್ಕೊಂಡು.

    ೧೫
    ಜೇತವನ ಜೇತ ಎನ್ನುವ ರಾಜಪುತ್ರನಿಗೆ
    ಸೇರಿದ್ದು. ಭಾರಿ ಬೆಲೆ ತೆತ್ತು ಜೇತವನವನ್ನ
    ಕೊಂಡನು ಅನಾಥಪಿಂಡಕನೆಂಬ ಸಿರಿವಂತ.
    ಬಹು ದೊಡ್ಡ ಗಾತ್ರದ ವಿಹಾರವನು ಕಟ್ಟಿದನು
    ಬುದ್ಧ ವಾಸ್ತವ್ಯಕ್ಕೆ. ಬಿಟ್ಟುಕೊಟ್ಟನು ಜೇತ
    ತನ್ನ ಪಾಲಿನ ಭೂಮಿಯನ್ನು ಕಾಣಿಕೆಯಾಗಿ.
    ಈಗ ನಿರ್ಮಾಣ ಕೊನೆಗೊಂಡಿಹುದು. ಬುದ್ಧನೇ
    ಆ ವಿಹಾರವ ಕೈಯಾರೆ ಸ್ವೀಕರಿಸುವನು.
    ಕೋಸಲದ ರಾಜ ಪಸೇನದಿ ಕೂಡ ಬರಲಿಹನು
    ಆ ವಿಹಾರದ ಅರ್ಪಣೆಯ ಶುಭ ಉತ್ಸವಕೆ.
    ಏನುಂಟು ಏನಿಲ್ಲ ಜೇತವನದ ವಿಹಾರ
    ದಲ್ಲಿ? ಅಂಥ ವಿಹಾರ ಯಾರು ಕಟ್ಟಿರಲಿಲ್ಲ.
    ವಾಚನಾಲಯ. ಭೋಜನ ಶಾಲೆ. ಅಂಗಣ.
    ಎಷ್ಟು ಜನ ಕೂತರೂ ತುಂಬದ ಸಭಾಂಗಣ

    ೧೬
    ಅಲ್ಲಲ್ಲಿ ಪುಷ್ಕರಣಿ. ನಡೆಹಾದಿ. ಸ್ನಾನ ಗೃಹ.
    ಹಲವು ಖೋಲಿಯ ಬಲುಮಹಡಿ ಕಟ್ಟಡ ಹಲವು.
    ಬುದ್ಧ ಗುರುವಿಗೆ ವಿಸ್ತೃತ ಧ್ಯಾನ ಮಂದಿರ.
    ಉಗ್ರಾಣ. ಸಾಲು ಶೌಚಾಲಯಗಳಲ್ಲಲ್ಲಿ.
    ಭಿಕ್ಕುಗಳ ಯೋಗಸಾಧನೆಗೆ ಶಿಲಾಮಂಟಪ.
    ಕಾಲಕಾಲಕೆ ಹೂವ ಬಿಡುವ ನಾನಾ ಬಗೆಯ
    ವೃಕ್ಷಗಳು. ಕಾರಂಜಿ. ಹಸಿರು ದಿಣ್ಣೆಯ ಮೇಲೆ
    ಬೋಧಿವೃಕ್ಷದ ಕಟ್ಟೆ. ಬುದ್ಧನಿಗೆ ಪ್ರಿಯವಾದ
    ಗೋಣಿ ಮರ. ಮಾವು ಆಲದ ವೃದ್ಧ ವೃಕ್ಷಗಳು.
    ಸಂಪಗೆ ಸಿರಿಹೊನ್ನೆ ಬನ್ನಿ ಬೇವಿನ ಕಟ್ಟೆ.
    ಪೂರ್ವದಿಕ್ಕಲ್ಲೊಂದು ದೊಡ್ಡ ತಾವರೆ ಕೆರೆ.
    ಗಡಗ ತೊಡಿಸಿದ ಶುದ್ಧ ತಿಳಿನೀರ ಬಾವಿಗಳು.
    ಪಾರಿಜಾತದ ನವುರುಗಂಪು. ತೊಂಗಲಿನಲ್ಲಿ
    ಮೈಮರೆಸಿ ಕೂತ ಕೋಗಿಲೆಯು ಕೂಜನವಲ್ಲಿ.

    ೧೭
    ಮುಂದೆ ಈ ಜೇತವನ ಪ್ರಿಯವಾಯ್ತು ಸುಗತನಿಗೆ.
    ತನ್ನ ಜೀವಿತದ ಬಹು ಕಾಲ ಕಳೆದದ್ದಾತ
    ಈ ಜೇತವನದಲ್ಲೆ. ಸುಮುಹೂರ್ತದಲಿ ಪಿಂಡಕನು
    ಜೇತವನವನ್ನು ಅರ್ಪಿಸಿದ ಗುರು ಬುದ್ಧನಿಗೆ.
    ಅಂದು ಅಮಿತಾಭ ಆಡಿದ ಮಾತ ಯಾರೂನು
    ಮರೆಯುವಂತೆಯೆ ಇಲ್ಲ. ಮತ್ತೆ ಉಬ್ಬರವಿಳಿತ-
    ವಿರದ ಗಂಭೀರ ಬೋಧಾಮೃತವು ಹರಿದಿತ್ತು
    ತಿಳಿನೀರ ಹೊಳೆಯಂತೆ. ಮಂತ್ರಮುಗ್ಧನು ಪಸೇ
    ನದಿ ಪ್ರಭುವು. ಬುದ್ಧ ಬೋಧಾಮೃತವು ಯಾವುದೋ
    ಲೋಕಕ್ಕೆ ಕೊಂಡೊಯ್ದ ಹಾಗೆ ತೋರಿತು ದೊರೆಗೆ.
    ಬುದ್ಧ ಹೇಳಿದ: ನಿತ್ಯ ಪರಿವರ್ತನೆಯೆ ಲೋಕ
    ಗುಣ! ಈಗ ಬಿರುಗಾಳಿ ಮರುಗಳಿಗೆ ನಿಷ್ಪಂದ
    ಎಲೆ ಕೂಡ ಅಲ್ಲಾಡುತಿಲ್ಲ. ಧಗಧಗ ಹಾದಿ
    ಈಗ. ಮರುಗಳಿಗೆ ಮುಸ್ಸಂಜೆ. ಇರುಳಿನ ಬೂದಿ. |

    ೧೮
    ಕಂಚುಗನ್ನಡಿ ನಿತ್ಯ ನಿತ್ಯ ಬದಲಾಗುತಿದೆ.
    ಬೊಕ್ಕ ತಲೆ. ಎಲ್ಲಿ ಹೋದವು ನಿಮ್ಮ ಮುಂಗುರುಳು?
    ನೀವು ಆತನೊ ಅಥವಾ ಇದು ಭವಾಂತರವೊ?
    ನೆಲಗುದ್ದಿ ನೀರ ಎತ್ತುತಿದ್ದಿರಿ ಹಿಂದೆ. ಈಗ ಕಾ-
    ಲೆತ್ತಿಡುವುದೂ ಕಷ್ಟ! ಗಿರಿಯಲ್ಲ, ಮನೆಯ ಸೋ-
    ಪಾನ ಹತ್ತುವುದಕ್ಕೆ ಏದುಸಿರು. ಎಷ್ಟು ಮುತು-
    ವರ್ಜಿ ಈ ದೇಹ ಪೋಷಣೆಗೆ! ಎಷ್ಟು ಪೌಷ್ಟಿಕ
    ಧಾತು! ಅತಿಯಾದ ಲಾಲನೆ ಪಾಲನೆಯ ಮಾಡಿ
    ಪೊರೆದದ್ದು ಕಾಯವನು! ಬಾಳಿಕೆಯು ಬರದೊಡಲು!
    ಕರ್ಮಾಶ್ರಿತವು ದೇಹ ಎನ್ನುವುದ ತಿಳಿಯಿರಿ!
    ತೊಡಗಿ ನಿವೃತ್ತಿಯಲಿ! ಪ್ರವೃತ್ತಿ ದುಃಖಮಯ.
    ಕಾಲ ಬರುವನು ಕಾಲ ಸಪ್ಪುಳವು ಕೇಳುವುದು.
    ಏನು ಬರುವುದು ಜೊತೆಗೆ ಯೋಚಿಸಿರಿ ನೀವೆಲ್ಲ.
    ಆಳಿಲ್ಲ ಕಾಳಿಲ್ಲ ಮನೆಯಿಲ್ಲ ಮಠವಿಲ್ಲ!

    ೧೯
    ಇಲ್ಲವಾಗುವುದೊಂದೆ ಇರಲು ಇರುವ ಉಪಾಯ.
    ಕಾಮವಾಸನೆಯಿಂದ ದೂರವಾದರೆ ಸಾಧ್ಯ
    ದುಃಖದ ವಿಮೋಚನೆ. ಧರ್ಮವೆಂಬುದೆ ದೀಪ.
    ದೀಪವಿದ್ದರೆ ದಾರಿ ಕಾಣುವುದು ಇರುಳಲ್ಲು.
    ಈ ಮಹಾಶಯ ಧರ್ಮದೀಪ ಕೈಯಲಿ ಹಿಡಿದು
    ಇರುಳು ಸಾಗಿದ್ದಾನೆ ನಿರ್ಭೀತ. ಗಳಿಸಿದ್ದ
    ಅಳಿಸಿ ಕಳೆಯದೆ ಈತ ಕೊಟ್ಟು ಉಳಿಸಿದ್ದಾನೆ.
    ಹೀಗೆ ಕೆಲವರು ಗೃಹಸ್ಥರಾಗಿದ್ದೂ ಸ್ವಸ್ಥರು.
    ನಿಜವಾದ ಅರ್ಥದಲಿ ಬುದ್ಧಾನುಯಾಯಿಗಳು.
    ಆಲಯದಲಿದ್ದೇನೆ ಬಯಲ ಸಾಧಿಸಿದವರು.
    ಬುದ್ಧಮಾರ್ಗವು ಸಂಸಾರಿಗೂ ತೆರೆದಿದೆ.
    ತೋರು ಬೆರಳಲಿ ಊರ ಹೆಸರನ್ನು ಬರೆದಿದೆ.
    ಬುದ್ಧ, ನಿರ್ವಾಣ ಮಾರ್ಗಕ್ಕೆ ಕೈಮರ ಮಾತ್ರ.
    ನಡೆಯುವುದು ನೀವೆ; ನೋಡುವುದು ನಿಮ್ಮದೆ ನೇತ್ರ.

    ೨೦
    ಬುದ್ಧದಿವ್ಯತೆ ದೇವದತ್ತನಿಗೆ ಹೊಟ್ಟೆಯುರಿ!
    ರಾಜಗೃದಲ್ಲೀಗ ಬಿಂಬಿಸಾರನ ಪುತ್ರ
    ಬಲವಂತದಿಂದ ಹಿರಿ ದೊರೆಯ ಸೆರೆಯಲ್ಲಿಟ್ಟು
    ತಾನೆ ಪ್ರಭುವೆಂದು ಅಧಿಕಾರ ಹಿಡಿದಿದ್ದಾನೆ.
    ಅವನನ್ನು ನಾನು ಕೈವಶ ಮಾಡಿಕೊಳ್ಳುವೆನು
    ಎಂಬ ನಿಶ್ಚಯದಿಂದಜಾತಶತ್ರುವ ಬಣ್ಣ
    ನುಡಿಯಿಂದ ಮರುಳುಗೊಳಿಸುತ ಕಿವಿಯ ಚುಚ್ಚುವನು.
    ಬಿಂಬಿಸಾರನ ಮರುಳು ಮಾಡಿ ಅಮಿತಾಭನು
    ರಾಜ್ಯ ಬೊಕ್ಕಸ ಸೂರೆ ಮಾಡಿರುವನೆನ್ನುವನು.
    ಬಿಂಬಿಸಾರನ ಮಿತ್ರ ತನಗೆ ಶತ್ರು ಎಂದು
    ನಂಬುವನು ದೇವದತ್ತನ ಮಾತ ಹೊಸರಾಜ.
    ಯಾರದ್ದೊ ತಟ್ಟೆ. ಬಿಟ್ಟಿ ಕೂಳು ಭಿಕ್ಕುಗಳುಂಡು
    ಅಲೆಯುವರು ಸನ್ಯಾಸಿ ಸೋಗಲ್ಲಿ ಊರೂರು
    ಎಂಬ ಅಪವಾಕ್ಯವೇ ದೇವದತ್ತನ ದೂರು.

    ೨೧
    ಬುದ್ಧ ಧರ್ಮದ ತಿರುಳು ಹೇಗೆ ಸರಳವೊ ಹಾಗೆ
    ಬುದ್ಧ ದೈನಿಕ ಕೂಡ ಸರಳ. ಆ ಸರಳತೆಯೆ
    ಇತರರನುಸರಣಕ್ಕೆ ಕಷ್ಟ! ಬೆಳಗಿನ ಜಾವ
    ನಸುಕಲ್ಲೆ ಬುದ್ಧ ಏಳುತ್ತಾನೆ. ಎದ್ದವನು
    ತನ್ನ ಸ್ನಾನಕೆ ತಾನೆ ನೀರನನುಗೊಳಿಸುವನು.
    ತನ್ನ ಚೀರವ ತಾನೆ ಒಗೆದು ಶುಚಿಗೊಳಿಸುವನು.
    ಆ ಬಳಿಕ ರೋಗಪೀಡಿತ ಭಿಕ್ಕುಗಳ ನೋಡಿ
    ಶುಶ್ರೂಷೆ ಮಾಡುವನು. ಮತ್ತೆ ಮಧ್ಯಾಹ್ನವಾ
    ಗುವ ತನಕ ಧ್ಯಾನದಲಿ ತೊಡಗುವನು. ಆ ಬಳಿಕ
    ಹಿಡಿದು ಭಿಕ್ಷಾಪಾತ್ರೆ ಹತ್ತಿರದ ಊರಲ್ಲಿ
    ಅನ್ನ ಸಂಗ್ರಹ. ಜೊತೆಗೆ ಕೆಲವರೇ ಶಿಷ್ಯರು.
    ಕರೆದಾಗ ಮನೆಗೆ ಶಿಷ್ಯರ ಜೊತೆಗೆ ಭೋಜನ.
    ಮೆಲುದನಿಯ ಸಂವಾದ. ಮಿತ ಪ್ರಮಾಣದ ಊಟ.
    ಉಪದೇಶ, ಕೇಳಿದರೆ ಧ್ಯಾನ ಯೋಗದ ಪಾಠ.

    ೨೨
    ಆ ಬಳಿಕ ಬಂದು ಬಿಡದಿಗೆ ಕೊಂಚ ವಿಶ್ರಾಂತಿ.
    ಬಳಿಕ ಭಿಕ್ಕುಗಳೊಡನೆ ಏಕಾಂತ ಸಂವಾದ.
    ಅವರು ಧ್ಯಾನಕೆ ಹೋದ ಬಳಿಕ ತಾನೊಬ್ಬನೇ
    ಧ್ಯಾನದಲಿ ತೊಡಗುವುದು! ಬಿಸಿಲಿಳಿದು ಸಂಜೆಯಾ
    ದರೆ ನೆರೆದ ಗುಂಪಿಗೆ ಮೈದಾನದುಪದೇಶ.
    ಬಳಿಕ ಸಂಜೆಯ ಸ್ನಾನ. ಶಿಶ್ಯರೊಂದಿಗೆ ಮಾತು.
    ಸಂಶಯದ ಪರಿಹಾರ. ಬಳಿಕ ಏಕಾಂತ ಕ್ಷಣ.
    ಧ್ಯಾನ ಮಾಡುತ್ತಲೇ ಕಿರುದಾರಿ ಶತಪಥ.
    ಮಳೆಬರಲಿ, ಛಳಿಯಿರಲಿ ದೈನಿಕವು ತಪ್ಪದು.
    ಕಿರುಗೊಡೆಯ ಹಿಡಿದು ಹನಿಮಳೆಯಲ್ಲೆ ಬುದ್ಧಗುರು
    ನಡೆಯುವದ ನೋಡುವರು ಭಿಕ್ಕುಗಳು ಶಿರಬಾಗಿ.
    ಇದು ಕಾಲ ಕ್ರಮಣ. ನಿತ್ಯಾಚಾರ ನೈಷ್ಠಿಕತೆ.
    ಆಗಾಗ ನಿಂತು ಮಾತಾಡುವನು ಚಿಗುರೊಡೆದ
    ಮರದೊಡನೆ. ಸೌಖ್ಯವೇ ಎನ್ನುವನು ನಸುನಗುತ.

    ೨೩
    ಸಹಿಸಲಾರದು ಪೂರ್ಣಚಂದ್ರಮನ, ಉದ್ವಿಗ್ನ
    ಕ್ರುದ್ಧ ವಾರಿಧಿ. ಬುಸುಗುಟ್ಟುವುದು, ಹೆಡೆಯನ್ನು
    ರಪ್ಪನಪ್ಪಳಿಸಿ ಭೋರ್-ಭೋರೆಂದು ಅಬ್ಬರಿಸಿ
    ಮಾರಿಯ ಉಪಾಸಕರು ಉರುಮೆ ರೌರವ ರವಕೆ
    ಆವೇಶಗೊಂಡು ಚಾವಟಿಯಿಂದ ತಮ್ಮನ್ನು
    ತಾವೆ ಬಾರಿಸುತ ಬರೆಗೊಳ್ವಂತೆ, ಜಿನುಗಿ ನೆ
    ತ್ತರು, ಒಡಲು ರಕ್ತಚಂದನದ ತರುವಾಗುತಿರೆ.
    ಬುದ್ಧ ಚಂದ್ರೋದಯವ ಸಹಿಸಲಾರದೆ ಬೇರೆ
    ಧರ್ಮಾನುಯಾಯಿಗಳು, ಸುತ್ತ ನಾಕೂ ದಿಕ್ಕಿ
    ನಿಂದ ಆಕ್ರಮಿಸುವರು ಕಡಲ ನಡುವಿನ ದೀವಿ
    ನಿಲ್ಲಲಾದೀತೆ ನೋಡುತ್ತೇವೆ ಎನ್ನುವಂತೆ.
    ‘ಬಾಯ್ಗೆ ಬಂದದ್ದ ಬಗುಳುತ್ತಾನೆ ಸಮಣ ಮುನಿ:
    ಆತ್ಮವೇ ಇಲ್ಲ. ಇಲ್ಲ ಸೃಷ್ಟಿಕಾರನ ಗೊಡವೆ
    ನಾವೆ ದಾರಿಯ ನಡೆದು ಊರ ತಲಪುತ್ತೇವೆ!’

    ೨೪
    ನಡೆಯುವುವು ವಾಗ್ವಾದ ಚರ್ಚೆ! ನುಡಿ ಸೋತಾಗ
    ಆಗುವುದು ಕೈ ಮುಂದು. ತಿಳಿಯ ಬಲ್ಲವರು ತಿಳಿ-
    ಗೊಳ್ಳುವರು. ಸುಗತ ದನಿ ಎತ್ತಿ ಸಂಘರ್ಷಕ್ಕೆ
    ಕರೆಗೊಡದೆ, ಆಳ ನದಿ ಹರಿವಂತೆ ಹರಿಯುವನು.
    ಪಥ್ಯವಾದವರು ಮೀಯುವರು; ತಣಿಸುತ ದಾಹ.
    ಹರಿಯುವರು ಹರಿದು ಬೆರೆಯದ ಹಲವು ತೊರೆಯಂತೆ
    ಉಳಿದವರು. ಕಸವರದ ಅರ್ಥ ಬಲ್ಲಂಥವರು
    ನಡೆಯುವರು ತಮ್ಮ ನಡೆಯನು ತಾವು. ಸಂಘದಲೆ
    ಒಡಕು ಹುಟ್ಟಿಸುವ ಯತ್ನದಲಿ ತೊಡಗುತ್ತಾರೆ
    ಕಾಷಾಯ ಮೊಗವಾಡದಲ್ಲಿ ಮುಖ ಮರೆಮಾಡಿ
    ಕೊಡೆ ಹಿಡಿದೆ ಬೆನ್ನಿಗಿರಿಯುವ ಧೂರ್ತ ವ್ಯಕ್ತಿಗಳು!
    ನಡೆಯುತಿವೆ ಸಂಘದಲೆ ಬಗೆಬಗೆ ಕುಯುಕ್ತಿಗಳು.
    ಅವರಲ್ಲಿ ಹಿರಿಯ ಮುಂದಾಳು ಬುದ್ಧನ ರಕ್ತ-
    ಬಂಧು! ಮಾಡಿದ್ದೆಲ್ಲ ಸ್ವಾರ್ಥಸಿದ್ಧಿ ಪ್ರಯುಕ್ತ.

    ೨೫
    ಪೂರ್ಣನೆನ್ನುವ ಭಿಕ್ಕು ಸುಗತನಲ್ಲಿಗೆ ಬಂದು
    ಬೇಡಿದನು: ಪೂಜ್ಯನೇ ಅನುಮತಿಯ ನೀಡೆನಗೆ.
    ಕಂಡರಾಗದ ಕ್ರೂರಿಗಳಿಗಹಿಂಸಾತತ್ವ
    ಬೋಧಿಸಲು ಹೊರಟಿರುವೆ. ಸಂತೋಷವೆನ್ನುತ್ತ
    ಪೂರ್ಣನನು ಕೇಳಿದನು. ಭಿಕ್ಕುವೇ ನಿಂದಕರು
    ಬೈಯುವರು. ಆಗ ನೀನೇನು ಮಾಡುತ್ತೀಯ?
    ಬೈದರಷ್ಟೇ; ಹೊಡೆಯಲಿಲ್ಲ ಎನ್ನುತ್ತೇನೆ!
    ಭಿಕ್ಕುವೇ ಅವರು ಹೊಡೆದರೆ ನಿನ್ನ? ಹೊಡೆದರೆ,
    ಹೊಡೆದರಷ್ಟೆ! ಎಂಥ ಒಳ್ಳೆ ಜನ! ಅಲುಗಿಂದ
    ತಿವಿಯಲಿಲ್ಲೆನ್ನುವೆ! ಅವರು ತಿವಿದರೆ ನಿನ್ನ?
    ತಿವಿದರಷ್ಟೇ! ಕೊಲ್ಲಲಿಲ್ಲ ಎನ್ನುತ್ತೇನೆ!
    ಮಸಲ ಆ ನಿಂದಕರು ಕೊಂದೆಬಿಟ್ಟರೆ ನಿನ್ನ?
    ಹೊರೆಯನಿಳಿಸಿದರೆಂಥ ಒಳ್ಳೆಜನ ಎನ್ನುವೆ!
    ಬುದ್ಧ ಹರಸಿದ! ಹೋಗು ಕೃತಕೃತ್ಯನಾಗುವೆ!

    ೨೬
    ಬೋಧಿಯಾಗಿಪ್ಪತ್ತು ವರ್ಷ ಕಳೆದಿದ್ದಾವೆ.
    ಜೇತವನದಾರಾಮದಲ್ಲಿ ಇದ್ದನು ಬುದ್ಧ.
    ಲೋಕದಲಿ ಎಂತೆಂಥ ವಿಕೃತರಿದ್ದಾರೆಂದು
    ಯೋಚಿಸುತ. ದುಷ್ಟ ಅಂಗುಲಿಮಾಲ ಎನ್ನುವವ
    ಘೋರ ಕರ್ಮಗಳಲ್ಲಿ ತೊಡಗಿರುವುದನು ತಿಳಿದು.
    ನಿರ್ದಯಿ. ಕ್ರೂರಿ. ಹಿಂಸಾನಂದ. ಕೊಲೆ ದರೋ-
    ಡೆಯಲಿ ತೊಡಗಿದ್ದಾನೆ ಜಾಲಿನೀ ವನದಲ್ಲಿ.
    ಜನ ಅತ್ತ ಸುಳಿಯಲೂ ದಿಗಿಲು ಪಡುವರು ಈಗ.
    ಹಿಂದಿನಿರುಳಲ್ಲು ಕೊಂದಿದ್ದಾನೆ ಹಲವರನು.
    ಯೋಚಿಸುತ ಕುಳಿತಿದ್ದ ಬುದ್ಧ ಎದ್ದನು ಏನೊ
    ನಿಶ್ಚಯಿಸಿ! ಈಗಲೇ ಹೊರಟೆ ಜಾಲಿನಿಗೆನುತ.
    ಕೋಸಲದ ದೊರೆಗೆ ಕೂಡಾ ತಿಳಿಯಬಾರದಿದು.
    ಎಂದು ಆನಂದನಿಗೆ ತಿಳಿಸಿ ಅಮಿತಾಭನು
    ಹೊರಟೆಬಿಟ್ಟನು ಕಾಣಲು ಪರಮ ದುಷ್ಟನನು.

    ೨೭
    ನಿಶ್ಚಯದ ಸದೃಢತೆ ಬುದ್ಧಚರಣದಲಿತ್ತು.
    ಜಾಲಿನಿಯ ಸನಿಯ ಬಂದಾಗ ದನಗಾಹಿ ಎದು-
    ರಾಗಿ ಹೇಳುತ್ತಾನೆ ಮುಂದೆ ಕಾನನ ಕಣಿವೆ.
    ಅಲ್ಲಿ ಅಲೆಯುತ್ತಾನೆ ಹಿರಿದ ಕತ್ತಿಯ ಹಿಡಿದು.
    ಕ್ರೂರಮೃಗಗಳಿಗಿಂತ ಕ್ರೂರಿ ಅಂಗುಲಿಮಾಲ.
    ಕೊಂದವರ ಬೆರಳ ಮಾಲೆಯೆ ಅವನ ಜಪಸರ!
    ಹಾಗಾದರವನ ಕಾಣಲೆ ಬೇಕು ನಾನೆನುತ
    ಬುದ್ಧ ನಡೆದನು ಘೋರ ಜಾಲಿನಿಯ ಒಳಹೊಕ್ಕು.
    ಸಾರ್ಥಗಾರರ ಬಂಡಿಸಾಲು ಸಾಗಿದ ಜಾಡು
    ಹಿಡಿದು ಹೊರಟನು ಬುದ್ಧ ಏಕಾಂಗಿ. ಆನಂದ-
    ನನ್ನು ಹಿಂದೆಯೆ ಬಿಟ್ಟು. ಕಾಡ ಜೀಕಾರ ಕೇ-
    ಳುತ್ತ, ನೋಡುವೆ ದಾರಿತಪ್ಪಿರುವ ಕಂದನ್ನ
    ಎನ್ನುತ್ತ ತನ್ನಲ್ಲೆ ತಾನು ಆ ಕರುಣಾಳು;
    ಕಿರಣ ಬಿಡಿಸುತ್ತ ಇರೆ ಹೆಗ್ಗಾಡ ಮುಂಗುರುಳು.

    ೨೮
    ಇರುಳು ಕವಿಯಿತು. ಕಾಳಗಪ್ಪು ಕತ್ತಲೆ ಮೆಲ್ಲ
    ಮೆಲ್ಲ ತಿಳಿಯುತ್ತ ಇದೆ. ನಕ್ಷತ್ರ ಹೊಳೆಯಲ್ಲಿ
    ಯಾರೊ ತೇಲಿಸಿ ಬಿಟ್ಟ ಹಣತೆಯಂತಿದ್ದಾನೆ
    ಅರೆಚಂದ್ರ ಮೇಲೆ ಕಣ್ಮುಚ್ಚಾಲೆಯನ್ನಾಡುತ್ತ
    ಮರದ ಹರೆ ನಡುವೆ. ಹೆಗ್ಗಾಡು ಮೈದಾಳುತಿದೆ
    ಕಿವಿಯಲ್ಲಿ. ಕ್ರಿಮಿಕೀಟದೆಡೆಬಿಡದ ಜೀಕಾರ
    ಶ್ರುತಿಯಾಗಿ ಮೊರೆಯುತಿದೆ. ಮಿದಿಯುವನು ಮದ್ದಲಿಗ
    ವ್ಯಾಘ್ರಗರ್ಜನೆ ತಾಳ ಗತಿಯನ್ನು. ನಕ್ಷತ್ರ
    ಶುರುಹಚ್ಚಿದವು ಈಗ ನಿಶ್ಶಬ್ದ ಗಾಯನವ.
    ‘ನಿಲ್ಲು ನಿಲ್ಲೆ’ಂದು ಕೂಗುವರು ಯಾರೋ ಹಿಂದೆ.
    ತಂದು ರಸಭಂಗವನು. ತಿರುಗಿದರೆ ದೊಂದಿಬೆಳ-
    ಕಲ್ಲಿ ಕಾಣುತ್ತಾನೆ ತಾನು ಕೂಡ ಒಂದು
    ಉರಿಪಂಜು ಎನ್ನುವಂತೆ, ಹೊಳೆವ ಕಿರುಗತ್ತಿಯನು
    ಸೆಳೆದು ಝಳಪಿಸುತಿರುವ ಅಂಗುಲೀಮಾಲನು.

    ೨೯
    ಬುದ್ಧ ಹೇಳುತ್ತಾನೆ ಮೆಲುದನಿಯಲಾತನಿಗೆ:
    ‘ನಾನು ನಿಂತಿದ್ದೇನೆ. ನಿಲ್ಲದಿರುವವ ನೀನೆ!
    ಜೀವ ಹಿಂಸೆಗಳಿಂದ ದೂರ ನಿಂತಿದ್ದೇನೆ.
    ಭಯದೆದುರು ನಿರ್ಭಯದ ಹಾಗೆ ನಿಂತಿದ್ದೇನೆ
    ಸಖ್ಯಕಾರುಣ್ಯವಾಧರಿಸಿ ನಿಂತಿದ್ದೇನೆ.
    ಶಾಂತಿಮಾರ್ಗಕೆ ತೋರು ಬೆರಳನ್ನು ತೋರುತ್ತ
    ನಿಂತಿರುವೆ. ತೆಗೆದುಕೋ ನನ್ನ ಈ ಬೆರಳನ್ನು.
    ದಿಕ್ಸೂಚಿಯಾಗಿ ತೋರಲಿ ಶಾಂತಿಮಾರ್ಗವನು’.
    ಒಮ್ಮೆ ಕಂಪಿಸುವುದು ಮೈ! ಇಳಿವುದೆತ್ತಿದ ಕೈ!
    ಬುದ್ಧ ಕಣ್ಣಲ್ಲಿ ಕಣ್ಣಿಟ್ಟು ಬರುವನು ಸನಿಹ.
    ಒಂದೊಂದೆ ಹೆಜ್ಜೆ ಊರುತ್ತ ಮೆಲ್ನೆಡೆಯಲ್ಲಿ.
    ಧಿಗ್ಗೆಂಬ ಬೆಳಕು ಆ ಕೊಲೆಗಡುಕನೆದೆಯಲ್ಲಿ.
    ಎದೆಯಾಳದಲ್ಲಿ ಜುಳುಜುಳು ಏನೊ ಹರಿದಂತೆ;
    ಯಾವ ಜನ್ಮದ ತಾಯಿಯೋ ಕಣ್ಣು ತೆರೆದಂತೆ.

    ೩೦
    ಹೆಡೆ ಮುದುಡುವುದು ನಾಗ ಕೇತಕೀ ಬನದಲ್ಲಿ.
    ನಂದುವುದು ಕಿಚ್ಚು ಸುರಿಸುರಿವ ಹಾಲ್ಬೆಳಕಲ್ಲಿ.
    ಇರುಳ ಕಡಲಲಿ ತೇಲುವುದು ಬೆಳಕಿನ ಹಡಗು.
    ಬೆರಳು ತೋರಿತು ದಿಕ್ಕ, ದಿಕ್ಕೆಟ್ಟವಗೆ ಕಡೆಗು.
    ಏನೊ ತಳಮಳ; ಏಕೊ ಕಣ್ಣಿರು; ಕರುಳರಿವು.
    ಬಾಗಿತ್ತು ಒಡಲು ಕಡಲಲೆಯಂತೆ ಗಿರಿಯೆದುರು.
    ಹೆಗಲ ಹಿಡಿದೆತ್ತಿದನು ಅಂಗುಲೀಮಾಲನನು.
    ಚಾಚಿದನು ಪೂರ್ವಗಿರಿಯತ್ತ ತೋರ್ಬೆರಳನ್ನು.
    ಕೆಂಪಾಗುತಿದೆ ಪೂರ್ವ ದಿಕ್ಕು. ಹಕ್ಕಿಗಳೀಗ
    ರೆಕ್ಕೆ ಕೊಡುವುತ್ತ ಇವೆ. ಕಾಡಲೊಮ್ಮೆಗೆ ಸಾವಿ
    ರಾರು ಕೊರಳರಳುತಿವೆ , ಬಗೆಬಗೆಯ ಚಿಲಿಮಿಲಿಯ
    ಇನಿದನಿಯ ಹನಿಮಳೆಯು ಶುರುವಾಗುತಿದೆ ಈಗ.
    ಮುಂದೆ ಗುರು. ಹಿಂದೆ ನಡೆದಿರುವನಂಗುಲಿಮಾಲ.
    ಹೋಲುತ್ತ, ದೀಪವನು ಹಿಂಬಾಲಿಸುವ ನೆರಳ.

    ೩೧
    ರವಿವಾರದಂದು ಮುಂಜಾನೆ ಉಪಸಂಪದ.
    ಅಂಗುಲೀಮಾಲ ಗುರುವಿಂದ ದೀಕ್ಷಿತನಾಗಿ
    ಭಿಕ್ಕುವಾಗುವ ದಿವಸ. ನಂಬಲಾರರು ಮಂದಿ
    ಇಂಥ ಪರಿವರ್ತನೆಯ! ತಲೆಯನ್ನ ಬೋಳಿಸಿ,
    ಅಗ್ನಿವರ್ಣದ ಚೀವರವನ್ನು ಧರಿಸಿರುವ
    ಈತನೇ ಈವರೆಗು ಕೊಲೆಸುಲಿಗೆಯಲಿ ತೊಡಗಿ
    ಅಂಗುಲೀಮಾಲೆಯನು ಧರಿಸಿದ್ದ ಪಾತಕಿ?
    ಕಿಕ್ಕಿರಿದ ಜನರು ಅಚ್ಚರಿಯಿಂದ ನೋಡುವರು.
    ಬುದ್ಧಗುರು ಬೋಧಿಸುತ್ತಿದ್ದಾನೆ ಆತನಿಗೆ
    ಪಂಚಶೀಲದ ಐದು ಸಂಕಲ್ಪಸೂತ್ರಗಳ.
    ದೊರೆ ಪಸೇನದಿ ಕೂಡ ಸಾಕ್ಷಿ ಉಪಸಂಪದಕೆ.
    ಸಭೆಯಲ್ಲಿ ಗಟ್ಟಿ ಉಸಿರಾಟ ಕೇಳೀತೆನ್ನು-
    ವಂಥ ನೀರವ ಮೌನ. ಕಾರುಣ್ಯ ಸೂಸುತ್ತ
    ಅಮಿತಾಭ ಹೇಳುವನು ಪಂಚಶೀಲದ ಸುತ್ತ.

    ೩೨
    ಸ್ವೀಕರಿಸುವೆನು ನಾನು ಜೀವ ಹತ್ಯಾವಿರತಿ
    ‘ಸ್ವೀಕರಿಸುವೆನು ನಾನು ಜೀವಹತ್ಯಾ ವಿರತಿ.’
    ಕಳವು ಮಾಡೆನು ಇನ್ನು.‘ಕಳವು ಮಾಡೆನು ಇನ್ನು.’
    ವ್ಯಭಿಚಾರ ಮಾಡೆನು.‘ವ್ಯಭಿಚಾರ ಮಾಡೆನು.’
    ಅನೃತವ ನುಡಿಯೆನು. ‘ಅನೃತವ ನುಡಿಯೆನು.’
    ಮತ್ತು ಬರಿಸುವ ವಸ್ತುಗಳನು ಸ್ವೀಕರಿಸೆನು.
    ‘ಮತ್ತು ಬರಿಸುವ ವಸ್ತುಗಳನು ಸ್ವೀಕರಿಸೆನು.’
    ಅಸ್ತು!ಅಸ್ತೂ! ಎಂದು ನುಡಿದರು ಸಮಸ್ತರೂ.
    ಹರಸಿದನು ಅಮಿತಾಭ ಹೊಸ ಭಿಕ್ಕುವನು ಕಣ್ಣಿ-
    ನಲ್ಲಿ ತುಳುಕುತ್ತಿರಲು ಬೆಳಕು. ಪಸೇನದಿಯಾಗ
    ಎದ್ದು ಬುದ್ಧನ ದಿವ್ಯ ಚರಣಕ್ಕೆ ನಮಿಸುವನು.
    ಅಭಿನಂದಿಸುವನು ಈಗ ಭಿಕ್ಕುವಾದವನನ್ನು.
    ಶಿಲೆಯು ಕರಗದೆ ಹೇಳಿ ಚಂದ್ರಿಕೆಯ ವರ್ಷಕ್ಕೆ?
    ಎದೆಯ ಹೂ ಅರಳದೇ ರವಿಯ ಕರಸ್ಪರ್ಶಕ್ಕೆ?

    ೩೩
    ಹೀಗೆ ಮುಟ್ಟಿದ್ದೆಲ್ಲ ಜೀವ ತಳೆಯುವುದಿಲ್ಲ.
    ಜೀವವಿರಬೇಕು ಕೈಯಲ್ಲಿ. ಮುಟ್ಟುವ ಹಿಂದೆ
    ಪ್ರೀತಿ ಮಡುಗಟ್ಟಿ ಕಳವಳಿಸುತ್ತ ಇರಬೇಕು.
    ಮುಟ್ಟಿದರೆ ಸಾಕು ಮೇಲೆದ್ದು ನಿಲುವ ಉಮೇದು
    ಪಾತ್ರಕ್ಕು ಇರಬೇಕು. ಕಣ್ಗುರುಡಿನಿಂದಲೋ
    ಕಾಲ್ಜಾರಿಯೋ ಅಕಸ್ಮಾತ್ತು ಮುಟ್ಟುವುದೊಂದು
    ಮುಟ್ಟೆ? ಅಂತಃಕರಣವಿಟ್ಟು ಅಕ್ಕರೆಯಿಂದ
    ಮುಟ್ಟುವುದೆ ಮಾನವತೆ. ಹೊಲೆಮಡಿಗೆ ಹಿಡಿಮದ್ದು.
    ಆಗಸದ ಹೊಂಗಿರಣ ಮಣ್ಣ ಮುಟ್ಟಿದ ಹಾಗೆ.
    ಉರಿವ ದೀಪವು ಬತ್ತಿಯನ್ನು ಮುಟ್ಟಿದ ಹಾಗೆ.
    ನಿಂತ ಗಿರಿ ನಿಲ್ಲದಿಹ ಮುಗಿಲ ಮುಟ್ಟಿದ ಹಾಗೆ.
    ಮುಂಗಿರಣ ಬಂದು ತಾವರೆಯ ಮುಟ್ಟಿದ ಹಾಗೆ.
    ಶ್ರುತಿಗೊಂಡ ವೀಣೆಯನು ಬೆರಳು ಮುಟ್ಟಿದ ಹಾಗೆ
    ಕೊಲೆಗಡುಕನನ್ನು ಕಾರುಣ್ಯ ಮುಟ್ಟಿದ ಹಾಗೆ.

    ೩೪
    ಪ್ರಾಪ್ತಿಯೂ ಇರಬೇಕು. ಬುದ್ಧನೊಂದಿಗೆ ಆಡಿ
    ಬೆಳೆದು ಮುಪ್ಪಿಗೆ ಬಂದ ದೇವದತ್ತನ ನೋಡಿ!
    ಬುದ್ಧನೊಡನಿದ್ದರೂ ಬುದ್ಧಿ ಬದಲಾಗಿಲ್ಲ.
    ಕಣ್ಣುಕುಕ್ಕಿದೆ ಬುದ್ಧನ ಖ್ಯಾತಿ ಗೌರವ.
    ಇರುಳು ಬಂದನು ಬುದ್ಧನಡಿಗೆ ತಾನೊಬ್ಬನೆ.
    ಇನ್ನೆಷ್ಟು ಕಾಲ ಬಿಡುವಿರದೆ ನೀ ದುಡಿಯುವೆ?
    ವಿಶ್ರಮಿಸು. ಬಿಟ್ಟುಕೊಡು ಪೀಠವನ್ನನ್ಯರಿಗೆ.
    ನೆನಪಾಯಿತಾಗ ಬುದ್ಧನಿಗೆ ಯಾರೋ ಹಿಂದೆ
    ಹೇಳಿದ್ದು ಈ ಮಾತು! ಯಾರು? ಮಾರನೆ? ಸಂಘ
    ದಿನದಿನವು ಅಡ್ಡ ಹಾದಿಯ ಹಿಡಿದು ನಡೆದಿದೆ!
    ಕೊಲೆಗಡುಕರೂ ಭಿಕ್ಕುವಾಗುವರು ಸಂಘದಲಿ.
    ರೋಸಿಹೋಗಿದ್ದೇನೆ. ಬೇರೊಂದು ಸಂಘವನು-
    ಕಟ್ಟು ಎನ್ನುತ್ತಾರೆ ಆಪ್ತ ಶಿಷ್ಯರು ನನಗೆ.
    ಬುದ್ಧನುತ್ತರ ಕೇವಲ ಒಂದು ಮುಗುಳು ನಗೆ.

    ೩೫
    ದುರ್ದಾನ ತೆಗೆದುಕೊಂಡಂತೆ ಹೋಗುತ್ತಾನೆ
    ಚೀವರವ ಕೊಡಹುತ್ತ ಆ ದೇವದತ್ತನು!
    ಆಗಲೇ ಬಂದದ್ದು ಆನಂದ. ಮುಖದಲ್ಲಿ
    ದುಗುಡ ತುಂಬಿದೆ. ಕಣ್ಣಿನಂಚಲ್ಲಿ ಕಂಬನಿ.
    ಏನು ಎನುವಂತೆ ಆನಂದನನು ನೋಡುವನು
    ಲೋಕಗುರು. ಆನಂದ ಹೇಳುವನು: ಭಗವಂತ
    ಕಪಿಲವಸ್ತುವಿನಿಂದ ವಾರ್ತೆ ಬಂದಿದೆ ಈಗ.
    ತಂದೆ ಮಲಗಿದ್ದಾನೆ. ಸಾವೀಗ ಸನ್ನಿಹಿತ.
    ನಿನ್ನ ಕಾಣುವ ಕೊನೆಯ ಆಸೆ ಹೆತ್ತಾತನಿಗೆ.
    ಹಿಡಿಯುವನು ಆಪ್ತ ಶಿಷ್ಯನ ಹಸ್ತವನು ಬುದ್ಧ.
    ಉತ್ಪನ್ನ ಹೊತ್ತು ತರುವುದು ತನ್ನ ಮಿತ್ತನ್ನ.
    ಬಾ ಎಂಬ ಕರೆಗೆ ಓಗೊಡದೆ ದಾರಿಯೆ ಇಲ್ಲ.
    ನಸುಕಿನಲ್ಲೇ ಹೊರಡಬೇಕು ಹುಟ್ಟೂರಿಗೆ
    ಪಯಣಕ್ಕೆ ಅಣಿಮಾಡು ಎಂದನಾನಂದಗೆ.

    ೩೬
    ಕಪಿಲವಸ್ತುವಿಗೆ ಬಂದಾಗ ಅರಮನೆಯಲ್ಲಿ
    ಶೋಕ ಆವರಿಸಿತ್ತು. ಬುದ್ಧನನು ನೋಡಲೇ
    ಮುಚ್ಚಿದ್ದ ಕಣ್ಣುಗಳು ಮೆಲ್ಲಗರಳುತ್ತಾವೆ.
    ಮತ್ತೆ ಮುಚ್ಚುತ್ತಾವೆ ತೆರೆಬಿದ್ದಹಾಗೆ ಆ-
    ವರೆಗೆ ತಡೆಯಿರದೆ ನಡೆದಿದ್ದ ಬಾಳಾಟಕ್ಕೆ.
    ತಾಯಿ ಗೌತಮಿ ತುಟಿಯ ಕಚ್ಚಿ ಸಹಿಸುತ್ತಾಳೆ
    ದುಃಖವನು. ಸೊಸೆ ಅವಳ ಹೆಗಲನಮುಕುತ್ತಾಳೆ.
    ಕೊಳದ ನೀರಿಗೆ ಅಲೆಗಳಿಲ್ಲ ಎನ್ನುವ ಹಾಗೆ
    ಕಾಣುತಿವೆ ಆಗ ತನ್ನಲ್ಲಿ ತಾನೇ ಮುಳುಗಿ
    ಧ್ಯಾನಸ್ಥವಾದಂತೆ ಲೋಕಗುರುವಿನ ಕಣ್ಣು.
    ಬರುವವರು ಬಂದು ಅಂತಿಮ ನಮನ ಸಲಿಸುವರು.
    ಗಾಳಿಯಲಿ ಕರಗುವುದು ಅಗರುಬತ್ತಿಯ ಧೂಪ
    ಬಯಲಲ್ಲಿ ಏನನೋ ಬರೆಯುತ್ತ ಇರುವಂತೆ;
    ಬರೆದದ್ದ ಕೈಯಾರೆ ಅಳಿಸುತ್ತ ಇರುವಂತೆ.

    ೩೭
    ಬುದ್ಧ ರಾಜಗೃಹಕೆ ಹೊರಟಾಗ ಗೌತಮಿಯು
    ಹೇಳುವಳು: ಭಂತೆ ಈ ಲೌಕಿಕವು ಸಾಕಿನ್ನು.
    ಭಿಕ್ಕು ಪದವಿಯ ನೀಡಿ ಅನುಗ್ರಹಿಸು ನನ್ನನ್ನು.
    ಹೆತ್ತ ತಂದೆಯ ಹಾಗೆ ಇದ್ದ ದೊರೆ ಅಳಿದನು.
    ಅತ್ತೆ ಭಿಕ್ಕುಣಿಯಾಗಲಿಕ್ಕೆ ಹೊರಟಿದ್ದಾಳೆ.
    ಅನುಗ್ರಹಿಸು ನನಗು ಆ ಪರಮ ಶಾಂತಿಯ ನೆಲೆ.
    ಕರುಣೆಯಿಡು ಕಾರುಣ್ಯ ಮೂರ್ತಿ. ಈ ತಾಯಿಯರು
    ಅರಹಂತರಾಗಲರ್ಹತೆಯ ಪಡೆದಿದ್ದಾರೆ-
    ಪರಿಶೀಲಿಸಿವರ ಬೇಡಿಕೆಯ ಎನ್ನುತ್ತಾನೆ
    ಪ್ರಿಯ ಶಿಷ್ಯನಾದ ಆನಂದ ಕಂಬನಿ ತಂದು.
    ಅರೆಗಳಿಗೆ ಮೌನತಾಳುವನಾಗ ಅಮಿತಾಭ.
    ಅರೆ ಆಯುವಾಗುವುದು ಧರ್ಮ ಹೆಮ್ಮಕ್ಕಳನು
    ಭಿಕ್ಕುಸಂಘಕ್ಕೆ ಸೇರಿಸಲು. ಏನನ್ನುವೆ?
    ಅರ್ಧ ಒಳಗೊಳ್ಳುವುದು ಅರ್ಧವಾಗೆನ್ನುವೆನು.

    ೩೮
    ಅಸ್ತು ಎಂದನು ಬುದ್ಧ ಭಗವಂತ ಶೂನ್ಯವನು
    ದಿಟ್ಟಿಸುತ. ಶರಣಾದರಿಂತು ಆ ತಾಯಿಯರು
    ಬುದ್ಧನಿಗೆ, ಧರ್ಮಕ್ಕೆ, ಸಂಘಕ್ಕೆ. ಅಲೆಯಡಗಿ
    ಶಾಂತವಾಯಿತು ಕಡಲು. ಒಂದು ಬೆಳಕಿನ ಹಡಗು
    ತೇಲಿತ್ತು ಕ್ಷಿತಿಜದಲಿ ಹೊನ್ನ ಬೆಳಕಿನ ಸಂಜೆ.
    ಮಿಡಿಯತೊಡಗಿವೆ ಮುಸುಕ ಹೊದ್ದು, ಮೂಲೆಯಲಿದ್ದ,
    ಹದವಾಗಿ ಶ್ರುತಿಗೊಂಡ ವೀಣೆಗಳು. ಆನಂದ
    ಒಲವು ತುಂಬಿದ ಕಣ್ಣಿನಲ್ಲಿ ನೋಡುತ್ತಾನೆ.
    ಆನಂದಬಾಷ್ಪ ಧಾರಾಕಾರ ಸುರಿಸುತ್ತ,
    ಅರೆಗೆ ಅರೆ ಕೂಡಿ ಹೆರೆ ಪೂರ್ಣವಾಯಿತು ಎನುತ,
    ಸಾಷ್ಟಾಂಗವೆರಗುವನು ಬುದ್ಧ ಶ್ರೀ ಚರಣಕೆ
    ಮುಡಿಯನಿರಿಸುತ. ಯಶೋಧರೆ, ತಾಯಿ ಗೌತಮಿ
    ಕಣ್ಣಲ್ಲಿಯೇ ತೆರೆದು ತೋರುವರು ಸಂತೃಪ್ತಿ.
    ಯಾವುದೋ ಹಕ್ಕಿ ಉಲಿಯುವುದು ಸ್ವಸ್ತಿ-ಸ್ವಸ್ತಿ.

    ೩೯
    ನಡುಹಗಲ ಸಮಯ. ಆಗಷ್ಟೆ ಹತ್ತಿದೆ ಕಣ್ಣು.
    ಯಾರೊ ಎತ್ತಿದ ಸ್ವರದಲಳುವ ದನಿ ಕೇಳಿದ್ದೆ
    ಥಟ್ಟನೆಚ್ಚರವಾಗಿ ಕಣ್ತೆರೆಯುವನು ಬುದ್ಧ.
    ಆನಂದ, ನೋಡು! ಯಾರೋ ಪಾಪ ಅಳುತಿಹರು.
    ಕರೆದು ತಾ ಒಳಗವರ. ಆನಂದ ಹೇಳುವನು:
    ಕೂಸು ತೀರಿದೆ! ಕಿಸಾಗೌತಮಿಯು ಕೂಸನ್ನು
    ಹೊತ್ತು ತಂದಿದ್ದಾಳೆ. ಬುದ್ಧಮಲಗಿದ ಕೂಸ
    ಎಚ್ಚರಿಸಬಹುದೆಂದು. ಛೆ! ಎಂದು ನೊಂದು ಬು-
    ದ್ಧನು ಎದ್ದು ಹೊರಬಂದು ನೋಡುವನು ಮಗುವನ್ನು.
    ಮುಟ್ಟಿದರೆ ಒಡಲು ಬಿಸಿಯಿಲ್ಲ. ಉಸಿರಾಟವೂ
    ನಿಂತಿಹುದು. ಬಿಳಿಚಿಕೊಂಡಿದೆ ತುಟಿ. ಅರೆ ತೆರೆದ
    ಕಣ್ಣಲ್ಲಿ ಬೆಳಕಿಲ್ಲ. ‘ದಯಮಾಡಿ ಎಚ್ಚರಿಸು!
    ಮಲಗಿದ್ದ ಕೂಸು ಮೈಮರೆತು ಮಲಗಿರುವುದು!
    ಪುಣ್ಯಾತ್ಮ ನೀನು ಮುಟ್ಟಿದರೆ ಕಣ್ತೆರೆಯುವುದು.’

    ೪೦
    ಕೂಸು ತೀರಿದೆ ಮಗಳೆ. ಸಾವೆ ಇಲ್ಲದ ಮನೆಯ
    ಸಾಸಿವೆಯ ತಂದರೆ, ಕೂಸು ಕಣ್ತೆರೆದೀತು!
    ಮಗುವನಲ್ಲೇ ಇರಿಸಿ ತಾಯಿ ಓಡುತ್ತಾಳೆ!
    ಸಾವು ಆಗದ ಮನೆಯೆ ಇಲ್ಲ ಆ ಊರಲ್ಲಿ!
    ಹೋಗುವಾಗಿದ್ದ ಬಿರುಸಿಲ್ಲವಳ ನಡೆಯಲಿ.
    ಕಾಲನೆಳೆಯುತ್ತ ಬರುವಳು ತಾಯಿ ಗೌತಮಿ.
    ಬುದ್ಧಚರಣದಲಿರಿಸಿ ಕೂಸ ಕಣ್ಣೀರ ಮಳೆ
    ಕರೆಯುವಳು. ಸುಗತನಾಕೆಯ ಮುಡಿಯ ಮೃದುವಾಗಿ
    ಸವರುವನು: ಹುಟ್ಟಿದವರೆಲ್ಲ ಸಾಯಲೆ ಬೇಕು.
    ಹುಟ್ಟುಸಾವಿನ ನಿತ್ಯ ನಾಟಕವ ತೋರುತಿದೆ
    ಪ್ರಕೃತಿ. ಹೂವರಳಿ ಬಾಡುವುದು, ಈ ಮಣ್ಣಲ್ಲಿ.
    ರವಿ ಮೂಡಿ ಮುಳುಗುವನು ಪ್ರತ್ಯಿನಿತ್ಯ ಬಾನಲ್ಲಿ.
    ಯಾರಿಗೂ ತಪ್ಪಿಸಲು ಆಗದಾ ಮೃತ್ಯುವನು
    ಅಪ್ಪಿಕೋ! ಒಪ್ಪಿ ಈ ಬಾಳ ಕ್ಷಣಿಕತೆಯನ್ನು.

    ೪೧
    ಬುದ್ಧ ಸ್ಪರ್ಶವೊ, ಅವನ ಸಾಂತ್ವನದ ನುಡಿಗಳೊ
    ಅನಿವಾರ್ಯತೆಯ ಅರಿವು ಮೂಡಿಸಿತು ಮನದಲ್ಲಿ.
    ತಾಯಿ ಗೌತಮಿ ಕೂಸ ಬಂಧುಗಳ ಕೈಗಿಟ್ಟು,
    ಒಪ್ಪಮಾಡಿರಿ ಎಂದು ತಡೆ ತಡೆದು ಆಡಿದಳು.
    ಆವತ್ತಿನಿಂದ ಗೌತಮಿಯು ಪ್ರತಿ ಸಂಜೆಯೂ
    ಕೊನೆಯ ಸಾಲಲಿ ಕೂತು ನೋಡುವಳು ಬುದ್ಧನನು.
    ಕೇಳುವಳು ತಣಿವು ನೀಡುವ ಅವನ ಮಾತುಗಳ.
    ‘ಮಾತಿಗಿದೆ ದುಃಖವನು ಶಮನಗೊಳಿಸುವ ಶಕ್ತಿ.
    ಸತ್ಯ ಮತ್ತೂ ದಯೆಯ ಮಿಲನಗೊಳಿಸುವ ಶಕ್ತಿ.
    ಮಾತಿಗಿದೆ ಜಗವನ್ನೆ ಪರಿವರ್ತಿಸುವ ಶಕ್ತಿ.’
    ಇದು ಬುದ್ಧವಾಣಿ ಎನ್ನುತ್ತಾನೆ ಆನಂದ,
    ಶ್ವೇತವಸ್ತ್ರದಲಿರುವ ಗೌತಮಿಯ ನೋಡುತ್ತ.
    ಬಾಳು ಬದುಕುವುದಕ್ಕೆ; ಸಾವುಂಟು ಸಾಯಲು.
    ಹುಟ್ಟು ಸಾವಿವೆ ಬಂದ ಹಾಗೆ ಬಾ ಎನ್ನಲು.

    ೪೨
    ಸಾರಿಪುತ್ರನ ಜೊತೆಗೆ ಮೊಗ್ಗಲಾಯನ ಬಂದು
    ಕಾಣುವನು ಬುದ್ಧನನು: ದೇವದತ್ತನು ಕೊನೆಗು
    ಹಿಡಿದ ಹಠ ಬಿಡಲಿಲ್ಲ. ಉಜ್ಜಯಿನಿ ಮತ್ತು ವೈ
    ಶಾಲಿಗಳ ಕಡೆಯಿಂದ ಬಂದ ಹೊಸ ಭಿಕ್ಕುಗಳ
    ತಲೆಕೆಡಿಸಿ ಐನೂರು ಭಿಕ್ಕುಗಳ ಜೊತೆಮಾಡಿ-
    ಕೊಂಡು ದೂರದ ಗಯಾಸೀನಕ್ಕೆ ಹೋಗಿಹನು.
    ‘ಭಿಕ್ಕುಗಳು ಹೊಸಬರು. ತತ್ವ ಅರಿತವರಲ್ಲ.
    ನೀವೆ ಅಲ್ಲಿಗೆ ಹೋಗಿ ಮನವೊಲಿಸಿ ಕರೆತನ್ನಿ’-
    ಎನ್ನುವನು ಅಮಿತಾಭ ಅನುಕಂಪ ಸ್ವರದಲ್ಲಿ.
    ಹಾಗೆ ಮಾಡುತ್ತೇವೆ ಎಂದು ಆ ಭಿಕ್ಕುಗಳು
    ಹೋಗುವರು ದೇವದತ್ತನ ಗಯಾಸೀನಕ್ಕೆ.
    ದೂರದಿಂದವರ ನೋಡಿದ ದುಷ್ಟ ಹೇಳುವನು
    ಶಿಷ್ಯರಿಗೆ:‘ನೋಡಿ! ಬುದ್ಧನ ಬಿಟ್ಟು ಬರುವವರ!’
    ಹೇಗೆ ಅರಿತಾರು ಶತ ಮೂರ್ಖ ಜನ ಬಲ್ಲವರ?

    ೪೩
    ದೇವದತ್ತನು ನಂಬಿದನು: ಬುದ್ಧ ಭಿಕ್ಕುಗಳು
    ತನ್ನ ಸಂಘವ ಸೇರಲೆಂದೆ ಬಂದಿದ್ದಾರೆ!
    ಮಿತ್ರ ಕೋಕಾಲಿಕನು ಹೇಳುವನು ಅವನಿಗೆ:
    ಹಾಗೆ ಭಾವಿಸಬೇಡ! ತಂತ್ರವಿದೆ ಇದರಲ್ಲಿ.
    ದೇದತ್ತನಿಗೊ ವಿಶ್ವಾಸ. ಯಾವುದರಲ್ಲಿ
    ಕಮ್ಮಿ ಗೌತಮಗಿಂತ ತಾನು!? ಬಂದವರನ್ನು
    ಸ್ವಾಗತಿಸಿ ಕರೆದು ಕೂಡಿಸಿದನು ವೇದಿಕೆ ಮೇಲೆ.
    ತನ್ನ ಹೊಸಧರ್ಮವನು ಕುರಿತು ಮಾತಾಡಿದನು
    ಗಂಟೆಗಟ್ಟಲೆ! ಬಳಿಕ ಸಾರಿಪುತ್ರನ ನೋಡಿ
    ಸಂಜೆಯಿಂದಲು ಮಾತನಾಡಿ ದಣಿದಿದ್ದೇನೆ.
    ನೀವೀಗ ಹೊಸ ಸಂಘವನು ಕುರಿತು ಮಾತಾಡಿ!
    ಎನ್ನುತ್ತ ಬುದ್ಧ ಹೇಗೋ ಹಾಗೆ ಮಲಗಿದನು!
    ಬಲಮಗ್ಗುಲಾಗಿ ಗೌತಮನದೇ ಶೈಲಿಯಲಿ!!
    ನಿದ್ದೆ ಹತ್ತಿತು ಪಾಪ! ಯಾವುದೊ ಮಾಯೆಯಲಿ!

    ೪೪
    ಎಷ್ಟೊ ಹೊತ್ತಿನ ಮೇಲೆ ಥಟ್ಟನೆಚ್ಚರ. ಕಣ್ಣು
    ತೆರೆದು ನೋಡುತ್ತಾನೆ. ಖಾಲಿಯಾಗಿದೆ ಸಭೆ!
    ಕಾಣದಾಗಿದೆ ಒಂದು ನರಪಿಳ್ಳೆಯೂ ಕೂಡ!
    ಎದ್ದು ದುಡುದುಡು ಓಡಿದ ಹೊದ್ದ ಚೀವರವ
    ನೇವರಿಸಿಕೊಳುತ…ಕೋಕಾಲಿಕಾ ಎನ್ನುತ್ತ!
    ಉಳಿದ ಭಿಕ್ಕುಗಳೊಡನೆ ಕೋಕಾಲಿಕನು ಕೂಡ
    ಮಾಯ! ಹೊಸ ಭಿಕ್ಕುಗಳು ಗಂಟು ಮೂಟೆ ಸಮೇತ
    ಮರಳಿಯಾಗಿದೆ ರಾಹಗೃಹಕೆ! ಮಗಧದ ರಾಜ
    ಕೊಟ್ಟಿದ್ದ ಭವ್ಯವಾದಂಥ ಆ ಭವನದಲಿ
    ನೀನೆ ಅನ್ನೋರಿಲ್ಲ. ಬಾಗಿಲಲಿ ಮುದಿ ನಾಯಿ
    ಮಲಗಿಹುದು ತನ್ನ ಬಾಲವತಾನೆ ಮುದ್ದಿಸುತ!
    ಅಲ್ಲೆ ಜಗುಲಿಯ ಮೇಲೆ ಕುಸಿದ! ತಳಮಳಿಸುತ್ತ!
    ಇದಕೆ ತಕ್ಕದ್ದನ್ನ ಮಾಡುವೆನು ಎನ್ನುತ್ತ!
    ಹಾವು ಬುಸುಗುಟ್ಟುತಿದೆ ಹುತ್ತವನು ಬಡಿಯುತ್ತ.

    ೪೫
    ವೇಣುವನದಲಿ ಬುದ್ಧ ಈಗ ನೆಲೆಸಿದ್ದಾನೆ.
    ಗೃಧ್ರ ಕೂಟದ ಅಡಿಯ ತಪ್ಪಲಲಿ ಭಾರಿಸಭೆ!
    ವೈಶಾಖ ಪೂರ್ಣಿಮೆಯ ಆಚರಣೆ! ಅಮಿತಾಭ
    ಬರುವುದನು ಕಾಯುತ್ತ ಕೂತಿರಲು ಭಿಕ್ಕುಗಳು
    ಬಂದೆಬಿಟ್ಟನು ಬುದ್ಧ ಒಂದು ಕ್ಷಣ ಹಿಂಚಿಲ್ಲ
    ಒಂದು ಕ್ಷಣ ಮುಂಚಿಲ್ಲ. ಬುದ್ಧನಿಗೆ ಜಯವೆಂದು
    ಮೊರೆಯುವುದು ಭಿಕ್ಕು ಸಮುದಾಯ. ಸಾರೀಪುತ್ರ
    ನಿಲ್ಲುವನು ಗುರುವನ್ನು ಸ್ವಾಗತಿಸೆ! ಚಕ್ಕೆ ಮೈ
    ವೃದ್ಧ ಗುರು ನಸುನಗುತ ಬಂದ ವೇದಿಕೆಯತ್ತ.
    ಶರಣು ಗುರು ಬುದ್ಧನಿಗೆ! ಧರ್ಮಕ್ಕೆ! ಸಂಘಕ್ಕೆ!
    ಒಕ್ಕೊರಲಿನಿಂದ ಪಠಿಸುವರು ಭಿಕ್ಕುಗಳೆದ್ದು.
    ಮೊಗ್ಗಲಾಯನ ಎರಡು ಮಾತು ಆಡುತ್ತಾನೆ.
    ಈಗ ಬುದ್ಧನ ಸರದಿ. ಭಿಕ್ಕುಗಳೆ ಈವತ್ತು
    ಇರುಳೆದೆಯ ಸೇರುವುದು ಬೆಳ್ದಿಂಗಳಿನ ಬಿತ್ತು.

    ೪೬
    ಹೀಗೆ ನುಡಿಯಲು ತೊಡಗಿ ನಿಮಿಷವೂ ಆಗಿಲ್ಲ!
    ಒಂದು ಹೆಬ್ಬಂಡೆ ಗುಡುಗುಡು ಗುಡುಗಿನಂತುರುಳಿ
    ಬಂತು ಬಂತಾ ಬಯಲ ಸಭೆಯತ್ತ! ಭಿಕ್ಕುಗಳು
    ಹಾ ಎಂದು ಕೂಗುವರು. ಓಡುವರು ಹೆಬ್ಬಂಡೆ
    ಬರಲು ಸಭೆಯನೆ ತನ್ನ ಗುರಿಮಾಡಿಕೊಂಡಂತೆ.
    ಇನ್ನೇನು ಬಂಡೆ ತಾಗಿತು ವೃದ್ಧ ಗುರುವಿಗೆ!
    ಬುದ್ಧ ನೋಡುತ್ತಾನೆ ನಿಂತು ಸುಸ್ಥಿರವಾಗಿ.
    ಮತ್ತೊಂದು ಬಂಡೆ ಎದುರಾದಂತೆ ಆ ಹೆಬ್ಬಂಡೆ
    ಗುರಿಯ ಬದಲಿಸಿದಂತೆ ಉರುಳಿ ಹೋಯಿತು ಪಕ್ಕ!
    ಕಾಲು ತರಚಿತು ಬಂಡೆ ಚೂರು ಛಟ್ಟನೆ ಸಿಡಿದು.
    ಜೀವಕನು ಓಡೋಡಿ ಬಂದು ಗುರುವನ್ನೆತ್ತಿ
    ಕರೆದೊಯ್ದ ವಿಶ್ರಾಂತಿ ಧಾಮಕ್ಕೆ. ಮೈಯಿಂದ
    ಸುರಿದು ರಾಣಾರಕ್ತಮಯವಾಯ್ತು ಮೈಯೆಲ್ಲ!
    ಕಣ್ಣೀರ ಕರೆಯುವರು ಬುದ್ಧ ಭಿಕ್ಕುಗಳೆಲ್ಲ.

    ೪೭
    ಬಂಡೆ ಗುರಿತಪ್ಪಿ ಜೀವಂತ ಉಳಿದನು ಬುದ್ಧ.
    ಗಾಯ ಮಾಯಲು ಹಲವು ತಿಂಗಳೇ ಬೇಕಾಯ್ತು.
    ಬಂಡೆ ತಾನೇ ಉರುಳಿ ಬಿದ್ದಿಲ್ಲ. ಮೀಟುಗೋ
    ಲಿಟ್ಟು ಸಡಲಿಸಿ ಅಡ್ಡ ಬಂಡೆಗಳ ಯಾವನೋ
    ಬುದ್ಧ ಹತ್ಯೆಗೆ ನಡೆಸಿರುವಂಥ ಹುನ್ನಾರ
    ಎಂಬುದರಿವಾಗಿ ನಡುನಡುಗುವರು ಭಿಕ್ಕುಗಳು.
    ಆ ದೇವದತ್ತನದೆ ಈ ಸಂಚು? ಆನಂದ
    ಗುರುವನೊಪ್ಪಿಸಿ ಜೇತವನಕೆ ಕರೆದೊಯ್ಯುವೆನು.
    ದೇವದತ್ತ ಮತ್ತು ಬಿಂಬಿಸಾರನ ಪುತ್ರ
    ಬುದ್ಧನನು ಹತ್ಯೆಮಾಡುವ ಯತ್ನದಲ್ಲಿರಲು
    ವೇಣುವನ ವಾಸ್ತವ್ಯ ಹಿತವಲ್ಲ ಎನ್ನುವನು.
    ಕಲ್ಲಿಗೂ ಕರುಣೆ ಎನ್ನುವನು ಬುದ್ಧ ನಗುತ್ತ.
    ಹೀಗೆ ಹೇಗೋ ಉಳಿದ ಬುದ್ಧ ಹೇಳುತ್ತಾನೆ!
    ಬರುವಾಗ ಬರಲಿ ಬಿಡಿ ಸಾವು ತನ್ನಿಂತಾನೆ!

    ೪೮
    ಈಗ ಬಿಗಿ ಭದ್ರತೆಯು ಹೆಚ್ಚಾಗುವುದು ವೇಣು-
    ವನಕೆ ಬರುವವರ ತಪಾಸಣೆ ಮಾಡಿ ಬಿಡುವರು!
    ಬುದ್ಧ ಒಪ್ಪನು ಇದನು. ತನ್ನ ರಕ್ಷೆಗೆ ಬೇಡ
    ಕಾವಲಿನ ಕಣ್ಣು ಎನ್ನುವನು! ಮೊದಲಿನ ಹಾಗೆ
    ಒಬ್ಬನೇ ಮಲಗುವನು ಧ್ಯಾನ ಮಂದಿರದಲ್ಲಿ.
    ಈಗ ಪ್ರತಿಯೊಬ್ಬರೂ ಹಂತಕರೆ ಎನಿಸುವುದು
    ಸಾರಿಪುತ್ರ ಮತ್ತು ಮೊಗ್ಗಲಾಯನರಿಗೆ.
    ಆನಂದ ನಿದ್ದೆ ಮಾಡದೆ ಧ್ಯಾನ ಮಂದಿರದ
    ಜಗುಲಿಯಲಿ ಕಳೆವನಿರುಳನು ಕಣ್ಣು ಮುಚ್ಚದೆ.
    ಏನಾದರೂ ಸರಿ! ತನ್ನ ದಿನಚರಿ ತಪ್ಪ
    ದೆನ್ನುವನು ಗುರು. ಹಗಲು ಭಿಕ್ಷಕ್ಕೆ ಹೋಗುವನು,
    ಆದುದಾಗಲಿ ಎಂಬ ದಿವ್ಯ ನಿರ್ಲಕ್ಷ್ಯದಲಿ.
    ಕೇಡಿನಲಿ ಹುಡುಕುವುದು ಮಾನವ್ಯ ನನ್ನ ಗುರಿ!
    ಮಾನವರಲರಿಸುವುದು ಕೇಡ! ಹೇಗಯ್ಯ ಸರಿ?!

    ೪೯
    ವಿಶ್ವಾಸವಿರಲಿ ಮಾನವರೊಳ್ಳೆತನದಲ್ಲಿ
    ಎನ್ನುವನು ಅಮಿತಾಭ ತನ್ನಾಪ್ತರೆದುರಲ್ಲಿ.
    ಬೇಡವೇ ಬೇಡ ಬಿಡಿ. ಇದ್ದಷ್ಟು ದಿನ ನಾವು
    ಬದುಕೋಣ ನಮ್ಮಂತೆ ಇರುವ ಮಂದಿಯ ನಂಬಿ.
    ನಮ್ಮಂತೆಯೇ ಕಣ್ಣು ಕಣ್ಣೀರು ಉಳ್ಳವರು
    ನೋಡೋಣ ಹೇಗೆ ಕೆಂಗಣ್ಣರಾಗುವರೆಂದು.
    ಕೇಳಲಿಕ್ಕೇನೊ ಹಿತ . ಆಚರಣೆಗಿದು ಕಷ್ಟ.
    ಎನ್ನುವನು ಆನಂದ ಸಾರಿಪುತ್ರನ ಎದುರು.
    ವೈಶಾಲಿಯತ್ತ ಹೊರಡೋಣ ಎನ್ನುತ್ತಾನೆ
    ಮೊಗ್ಗಲಾಯನನ ಕೈಹಿಡಿದು ಆ ಕಾಶ್ಯಪ.
    ದಯಮಾಡಿ ಬುದ್ಧನೊಡನಿರಲು ಅನುಮತಿ ನೀಡು
    ಬೇಡುವನು ಜಾಲಿನೀಭಿಕ್ಕು ಕಾಶ್ಯಪನನ್ನು.
    ಒಟ್ಟಿನಲಿ ಯಾವುದೋ ಆತಂಕ; ತಳಮಳ.
    ಹಿರಿಯ ಭಿಕ್ಕುಗಳಲ್ಲಿ ಎಂಥದೋ ಕಳವಳ.

    ೫೦
    ಹಳೆಯ ಗಾಯವು ಪೂರ ಮಾಸಿಲ್ಲ. ಒಂದು ದಿನ
    ಆನೆ ನುಗ್ಗಿತು ಎಂದು ಅರಚುವುರು ಭಿಕ್ಕುಗಳು.
    ಹೇಗೆ ಬಂದಿತು ಇಂಥ ಮದ್ದಾನೆ ಚೈತ್ರಕ್ಕೆ?
    ಮಾವುಟಿಗ ಮೇಲಿಲ್ಲ. ಯರೊ ಸರಪಳಿ ಕಳಚಿ
    ಕುಡಿಸಿ ಮಾದಕ ದ್ರವ್ಯ ಅಟ್ಟಿರುವ ಹಾಗಿದೆ.
    ಯಾರೊ ಇದು ದೊರೆಯ ಪಟ್ಟದ ಆನೆ ಎನ್ನುವರು!
    ಇದು ನಲಾಗಿರಿ ಎನ್ನುವನು ಮತ್ತೆ ಇನ್ನೊಬ್ಬ
    ಚೀವರವು ಬಿದ್ದರೂ ಲಕ್ಷಿಸದೆ ಓಡುತ್ತ.
    ಧ್ಯಾನ ಮಂದಿರದಿಂದ ಹೊರಗೆ ಬರುವನು ಬುದ್ಧ.
    ನೋಡುವನು ಘೀಂಕರಿಸಿ ಬರುವ ಮದಿಸಿದ ಗಜವ.
    ಕಣ್ಣಲ್ಲಿ ಕಣ್ಣು. ಸೊಂಡಿಲ ಎತ್ತಿ ಮದ್ದಾನೆ
    ಇಗ್ಗಾಲಿನಲ್ಲಿ ನಿಲ್ಲುವುದೊಂದು ಅರೆಗಳಿಗೆ.
    ಆನಂದ ತಡೆದರೂ ಲಕ್ಷಿಸದೆ ಬುದ್ಧ ಮು-
    ನ್ನಡಿಯಿಡುತ ಮದ್ದಾನೆಯತ್ತ ಬರುತಿರುವನು.

    ೫೧
    ‘ಮತ್ತೇರಿಸುವ ದ್ರವ್ಯ ಸ್ವೀಕರಿಸ ಬಾರದು’-
    ಎಂದು ಆನೆಯ ಕೊರಳ ಗಂಟೆಯನು ಮಿಡಿಯುವನು!
    ಎಂಥ ಸುಮಧುರ ನಾದವೆನ್ನುತ್ತ ಹೊಮ್ಮುತಿಹ
    ಓಂಗೆ ಓಂ ಎಂದು ಮರು ನುಡಿಯುತ್ತ ಅಮಿತಾಭ
    ತಂದ ಬೆಲ್ಲದ ಉಂಡೆ ಇರಿಸುವನು ಬಾಯಲ್ಲಿ.
    ಆನೆ ಮಂಡಿಯನೂರಿ ಕೂರುವುದು. ಭಿಕ್ಕುಗಳು
    ಬೆರಗಾಗಿ ನಿಲ್ಲುವರು ಅರೆಗಳಿಗೆ. ಸಮಣೇರ
    ಒಮ್ಮೆಗೇ ಕೂಗುವನು ಬುದ್ಧಗುರುವಿಗೆ ಉಘೇ!
    ಉಘೆ ಉಘೇ ಉಘೆ ಉಘೇ ಎನ್ನುವರು ಭಿಕ್ಕುಗಳು.
    ಘೀಎಂದ ಆನೆಯು ಉಘೇ ಎನ್ನುವುದು ಈಗ.
    ಕರವೆತ್ತಿ ಸುತ್ತಿ ಶರಣೆನ್ನುವುದು ಬುದ್ಧನಿಗೆ
    ತನ್ನದೇ ನುಡಿಯಲ್ಲಿ. ಆಗ ಮಾವುಟ ಅಲ್ಲಿ-
    ಗೋಡಿ ಬರುವನು ದಾರಿಯಲ್ಲಿ ಎದ್ದೂಬಿದ್ದು.
    ಕಣ್ಣೀರ ಕರೆಯುವನು ಬುದ್ಧಚರಣಕೆ ಬಿದ್ದು.

    ೫೨
    ಕಾಡುಗಿಚ್ಚಾಗಿ ಹಬ್ಬಿತು ಹೀಗೆ ಗುರುವನ್ನು
    ಹತ್ಯೆ ಮಾಡುವ ಯತ್ನ ವೈಫಲ್ಯಗೊಂಡದ್ದು.
    ಬೆರಾಗುವನು ದೊರೆ ಅಜಾತಶತ್ರುವು ಕೂಡ.
    ಸಾಮಾನ್ಯನಲ್ಲ ಬುದ್ಧನು ಎಂಬ ಅರಿವಾಗಿ.
    ಒಮ್ಮೆ ನಡುಗಿತು ಎದೆ. ಕಂಪಿಸಿತು ಕೈಕಾಲು.
    ಬುದ್ಧನನು ಹತ್ಯೆಮಾಡುವ ಯತ್ನ ನಡೆದಿರುವ
    ದುರ್ವಾರ್ತೆ ದೊರೆ ಪಸೇನದಿಯನ್ನು ಮುಟ್ಟಿತ್ತು.
    ಬಿಂಬಿಸಾರನ ಸಾವು ಮೊದಲೆ ಕಲಕಿತ್ತವನ.
    ಈಗ ಅರಮನೆಯಾನೆಯಿಂದ ಬುದ್ಧನ ಹತ್ಯೆ
    ಯತ್ನ ನಡೆದಿದೆ. ಸೇನಾಪಡೆಯ ನುಗ್ಗಿಸಿ
    ಮಗಧ ದೊರೆಯನು ಬಗ್ಗು ಬಡಿಯೆ ನಿಶ್ಚಯಿಸಿದ.
    ಚತುರಂಗ ಬಲ ಹೊರಟಿತು ರಾಜಗೃಹದತ್ತ.

    ೫೩
    ಏಕೊ ಗ್ರಹಚಾರವೇ ಸರಿಯಿಲ್ಲವೆನ್ನುತ್ತ
    ಬಿಂಬಿಸಾರನ ಪುತ್ರ ಓಡಿಬಂದನು ವೇಣು
    ವನದತ್ತ. ಬಂದು ಕಂಡನು ಬುದ್ಧಗುರುವನ್ನು.
    ತಪ್ಪಾಗಿಹೋಗಿದೆ! ದಯಮಾಡಿ ಮನ್ನಿಸು.
    ಹೇಗಾದರೂ ಮಾಡಿ ಯುದ್ಧವನು ತಪ್ಪಿಸು.
    ಯಾರೊ ತಲೆತಿರುಕ ಹೇಳಿದ್ದ ನಂಬಿದೆ ನಾನು!
    ನಿನ್ನ ತಾಗಿದ ಬಂಡೆ ಕರಗುವುದು. ಮದ್ದಾನೆ
    ಮಂಡಿಯೂರುತ್ತದೆ! ನೀನು ವೈಶಾಲಿಗೆ
    ಭಿಕ್ಕುಗಳ ಕಳಿಸಿ ನಿಲ್ಲಿಸು ಕ್ರೂರ ಕದನವ.
    ಪ್ರಾಣವ್ಯಯ. ಶಕ್ತಿವ್ಯಯ. ಸರ್ವನಾಶದ ಭಯ.
    ನಿನ್ನೊಂದು ನುಡಿಯಿಂದ ತಪ್ಪಬಹುದೀವತ್ತು
    ದೂರಾಗಬಹುದು ಬಂದಿರುವ ಹಿರಿ ಆಪತ್ತು.
    ಬುದ್ಧ ಕೈಹಿಡಿದೆತ್ತಿದ ಮಗಧ ದೊರೆಯನ್ನು.
    ಆನಂದ ಹೋದ ಕಾಣಲು ಪಸೇನದಿಯನ್ನು.

    ೫೪
    ಯುದ್ಧ ತಪ್ಪಿತು. ಪಸೇನದಿಯು ಬಂದನು ರಾಜ-
    ಗೃಹಕೆ. ಬೇಡುತ್ತಾನೆ ಬುದ್ಧನನು ದಯಮಾಡಿ
    ಬಾ ಎಂದು, ಶ್ರಾವಸ್ತಿ ನಗರಕ್ಕೆ. ಜೇತವನ
    ಕಾಯುತ್ತ ಇದೆ ನಿನ್ನ ಆಗಮನವನೇ ಈಗ.
    ಹಠಕೆ ಸೋಲುವನಲ್ಲ. ಸೋಲುವನು ಪ್ರೀತಿಗೆ.
    ಬುದ್ಧ ಹೊರಟನು ಶ್ರಾವಸ್ತಿ ನಗರಕೆ ಆಗ.
    ಮಗಧ ದೊರೆ ಶರಣಾಗುವನು ಬುದ್ಧ ಚರಣಕ್ಕೆ.
    ತನ್ನ ರಾಣಿಯರೊಡನೆ ದೀಕ್ಷೆ ಸ್ವೀಕರಿಸುವನು.
    ಬೀಳ್ಕೊಡೆಯ ದಿನ ನಲಾಗಿರಿಯ ಮಗಧದ ದೊರೆ
    ಒಪ್ಪಿಸುತ್ತಾನೆ ಕಾಣಿಕೆಯಾಗಿ ಬುದ್ಧನಿಗೆ.
    ಬುದ್ಧ ಹುಸಿ ನಗುತ ಹೇಳುತ್ತಾನೆ ಮಗಧನಿಗೆ
    ಅರಸನಾನೆಗೆ ತಿರಿದ ಅರೆಗಾಸ ಮಜ್ಜಿಗೆಯೆ?
    ಇರಲಿ ಪ್ರತಿನಿಧಿಯಾಗಿ ನನ್ನೀ ನಲಾಗಿರಿ!
    ಎಂದು ಚೀವರವ ಹಾಕುವನದರ ಹೆಗಲಲಿ.

    ೫೫
    ಜೇತವನದಲಿ ಬುದ್ಧ ಬಹುಕಾಲ ಉಳಿಯುವನು.
    ಮೊದಲ ಕಸುವಿಲ್ಲ ಕಾಲುಗಳಲ್ಲಿ. ಕಣ್ಮಬ್ಬು.
    ಕಿವಿಯು ಕೂಡಾ ಮಂದ. ಆನಂದ ಇನ್ನೊಮ್ಮೆ
    ಎನ್ನುವನು. ಎಡಗಿವಿಯ ಬಳಿ ಬಾಗಿ ಮಾತಾಡು
    ಅನ್ನುವನು. ಹೇಮಂತ ಋತು ಬಂತು. ಮರದಿಂದ
    ಎಲೆಗಳುದುರುತ್ತಾವೆ ಸತತ. ಈ ಎಲೆ ಬೀಳ
    ಕರುಣೆ ತುಂಬಿದ ಕಣ್ಣಿನಿಂದ ನೋಡುತ್ತಾನೆ.
    ನೆನಪಾಗುವರು ತನ್ನೊಡನಿದ್ದು ಮುಂದಾಗಿ
    ಹೋದವರು ಮುಪ್ಪಡಸಿ. ಅಥವಾ ರೋಗಿಗಳಾಗಿ.
    ಸಾವು ಕೈಹಿಡಿವ ಸಖ ಎನಿಸುವುದು ಆಗಾಗ.
    ಸುಳಿವಿಲ್ಲ ಮಾರನದು. ಇದ್ದಾನೊ ಇಲ್ಲವೊ!
    ಗೌತಮಿಯು ಹೋದಳು. ಹಾಗೇ ಯಶೋಧರೆ!
    ಕಾಶ್ಯಪ, ಮೊಗ್ಗಲಾಯನ ಸಾರಿಪುತ್ರರೂ
    ಕರೆ ಬಂದ ಹೊತ್ತು ಕರೆಕರೆಯಿರದೆ ಎಲ್ಲರೂ.

    ೫೬
    ಸೂರ್ಯ ಮೂಡುತ್ತಾನೆ. ಮತ್ತೆ ಮುಳುಗುತ್ತಾನೆ
    ಬುದ್ಧನಿಗೆ ಶರಣೆಂದು ನೆರಳ ಕಂಬಳಿ ಹಾಸಿ
    ಒಂದು ಕ್ಷಣ ನಿಂತು ನೋಡುವನು ಮುಸ್ಸಂಜೆಯಲಿ.
    ಜೇತವನದ ವಿಹಾರದುಪ್ಪರಿಗೆಯಲಿ ಕೂತು
    ಜಪಮಣಿಯನೆಣಿಸುತ್ತ ಬುದ್ಧ ಬೀಳ್ಕೊಳ್ಳುವನು
    ಸೂರ್ಯನನು. ಪಡುವಲಾಕಾಶದಲಿ ಕಾಷಾಯ
    ಹೊದ್ದ ಬೆಳ್ಮುಗಿಲುಗಳು ತೇಲುತಿವೆ ಹಗುರಾಗಿ
    ಸಂಜೆ ಸ್ನಾನದ ಸಮಯ ಎನ್ನುವನು ಆನಂದ
    ಎಡಗಿವಿಯ ಬಳಿ. ಬುದ್ಧ ನೋಡುವನು ಒಲವಿಂದ.
    ನೀನು ಮಾತಾಡು ಆನಂದ ಕೇಳುತ್ತೇನೆ ನಿನ್ನ ನುಡಿ!
    ಎನ್ನುವನು ಸುಗತ ಅಕ್ಕರೆಯಿಂದವನ ಕೈಹಿಡಿದು.
    ಮಂಡಿಯೂರುತ ಆನಂದ ಹೇಳುತ್ತಾನೆ: ಭಂತೆ
    ನಿನ್ನೆದುರು ನಾನೇನು ನುಡಿದೇನು? ಕಡಲೆದುರು
    ನಿಂತ ಬೊಗಸೆಯ ಚಿಪ್ಪು. ‘ಚಿಪ್ಪಲ್ಲೆ ಮುತ್ತುಂಟು!’

    ೫೭
    ವಜ್ಜಿಗಳ ರಾಜ್ಯಕ್ಕೆ ವೈಶಾಲಿಯೇ ಕೇಂದ್ರ.
    ಅದೆ ರಾಜಧಾನಿ. ಲಿಚ್ಛವಿಗಳದು ಆಡಳಿತ.
    ಬರಬಾರದಂಥ ಕ್ಷಾಮವು ಬಂತು ರಾಜ್ಯಕ್ಕೆ.
    ಬುದ್ಧ ಕಾಲಿಡಲು ಮಳೆಯಾಗುವುದು ಎನ್ನುವರು
    ಮಂತ್ರಿಗಳು. ಲಿಚ್ಛವಿಗಳಾಗ ಬುದ್ಧನ ಕಂಡು
    ಬೇಡಿದರು ದಯಮಾಡಿ ಬನ್ನಿ ನಗರಕ್ಕೆಂದು.
    ಬುದ್ಧನೂ ಒಪ್ಪಿದನು. ಶುಭವಾಗಲೆನ್ನುತ್ತ
    ರತನ ಸೂತ್ರವ ಪಠಿಸಿ, ಹರಸಿದನು ಒಲವಿಂದ.
    ಯಾವ ಶುಭ ಗಳಿಗೆಯಲಿ ಕಾಲಿಟ್ಟನೋ ಬುದ್ಧ
    ಮೋಡಗಟ್ಟಿತು ಇರುಳು. ಸುರಿದಿತ್ತು ಸಮೃದ್ಧ
    ವೃಷ್ಟಿ. ಲಿಚ್ಛವಿಗಳೊಪ್ಪಿದರವನ ಗುರುವೆಂದು
    ಪುಷ್ಕರಣಿ ಕೆರೆಕಟ್ಟೆಗಳು ತುಂಬಿ ತುಳುಕಿದವು.
    ರೋಗರುಜಿನವು ಹರಿದು, ಹಸಿರು ಕಣ್ತುಂಬಿತ್ತು.
    ಬುದ್ಧ ಮೈತ್ರಿಯು ನಗರವನ್ನು ಆವರಿಸಿತ್ತು.

    ೫೮
    ವೈಶಾಲಿಯಲಿ ಬುದ್ಧ ಉಳಿದದ್ದು ಹೊರವಲಯ-
    ದಲ್ಲಿದ್ದ ಆಮ್ರವನದಲ್ಲಿ. ಆ ವನದೊಡತಿ
    ಆಮ್ರಪಾಲೀ ಎಂಬ ರಾಜನರ್ತಕಿ. ಅವಳ
    ಕಲೆಗೆ ಚೆಲ್ವಿಕೆಗೆ ಮರುಳಾಗದವರೇ ಇಲ್ಲ.
    ಸರದಿ ಕಾಯುತ್ತಾರೆ ಹಣವುಳ್ಳ ಸಿರಿವಂತ
    ಮಂದಿ ಆಕೆಯ ಮನೆಯ ಮುಂದೆ ಲಜ್ಜೆಯ ತೊರೆದು.
    ಲಕ್ಷ್ಮಿ ಕಾಲ್ಮುರಿದು ಬಿದ್ದಿದ್ದಾಳೆ ಮನೆಯಲ್ಲಿ.
    ಆದರೇಕೋ ಒಂದು ಬೇಸರವು ಕಾಡುತಿದೆ
    ಇಷ್ಟೆ ಬದುಕಿನ ಗುರಿ, ಒಡಲೊಡ್ಡಿ ಹಣಗಳಿಕೆ?
    ನಿತ್ಯವೂ ಬಂದು ಮುಖಮುಸುಕಲ್ಲಿ ದೂರದಲೆ
    ನಿಂತು ಕೇಳುತ್ತಾಳೆ ಗುರುವಿನಮೃತ ವಾಣಿ.
    ಇರುಳ ಚೆಲುವೆಗೆ ತೆಗೆದ ನೇರ ಬೈತಲೆಯಂತೆ
    ಬುದ್ಧ ನುಡಿ. ನೆಮ್ಮದಿಯ ಸಂಚಾರ ಮನದೊಳಗೆ.

    ೫೯
    ಕೊನೆಯ ದಿನ ಬುದ್ಧ ಚರಣಕ್ಕಾಕೆ ಮಣಿಯುವಳು
    ನಾಳೆ ಬರಲಾದೀತೆ ಭಿಕ್ಷಕ್ಕೆ ಭಗವಂತ?
    ಯಾಕೆ ಆಗದು? ಬರುವೆನು ಭಿಕ್ಕುಗಣದೊಡನೆ.
    ಬೆರಗು ಪಡುವನು ಆನಂದ, ಭಂತೇ ಅವಳು
    ಒಡಲು ಮಾರುವ ಹೆಣ್ಣು. ನನಗವಳು ಹೆಣ್ಣಲ್ಲ
    ಒಂದು ದುಃಖಿತ ಜೀವ. ಸ್ವಲ್ಪ ಸಮಯದ ಬಳಿಕ
    ಲಿಚ್ಛವಿಯ ದೊರೆ ಮತ್ತು ಪರಿವಾರ ಆಗಮಿಸಿ
    ನಾಳೆ ಭಿಕ್ಷೆಗೆ ಬರುವ ಕೃಪೆಮಾಡು ಎನ್ನುವರು.
    ಈಗಷ್ಟೆ ಆಮ್ರಪಾಲಿಯ ಭಿಕ್ಷೆಗೆ ನಾನು ಒಪ್ಪಿರುವೆ.
    ಲಿಚ್ಛವಿಯ ದೊರೆ ಆಮ್ರಪಾಲಿಯನು ಕಾಣುವನು.
    ನಾಳೆ ಭಿಕ್ಷೆಗೆ ಬರಲಿ ಬುದ್ಧಗುರು ನಮ್ಮಲ್ಲಿ.
    ನೀನು ಒಪ್ಪಿಸು ಅವನ. ಎಷ್ಟು ಬೇಕೋ ಕೇಳು.
    ಎನ್ನುವಳು: ‘ಗುರುವಿನಾಗಮನಕಿಂತಲು ಹೆಚ್ಚೆ
    ನೀನು ನೀಡುವ ಹೊನ್ನು?’. ಲಿಚ್ಛವಿಯ ದೊರೆ ಪೆಚ್ಚು.

    ೬೦
    ಉಳಿದೆಲ್ಲ ಭಿಕ್ಕುಗಳ ಸುತ್ತುಮುತ್ತಲ ಆಪ್ತ-
    ಬಂಧುಗಳ ಕಡೆ ಕಳಿಸಿ, ಆನಂದನೊಡನೆ ಅಮಿ-
    ತಾಭ ಉಳಿದನು ವೇಲುಗ್ರಾಮದಲಿ. ಅಲ್ಲಿಯೇ
    ಕಳೆಯೆ ವರ್ಷಾವಾಸ. ಮೂರು ತಿಂಗಳ ಅವಧಿ.
    ಆ ಅವಧಿಯಲ್ಲೇನೆ ಬುದ್ಧ ಮೊದಲನೆ ಸಾರಿ
    ದುಸ್ಸಹಾ ಅನ್ನಿಸುವ ಉದರಶೂಲೆಯ ಬಾಧೆ
    ಗೊಳಗಾದ. ಶಿಷ್ಯರಿಗೆ ಹೇಳದೆ ವಿದಾಯವನು
    ನಿಬ್ಬಾಣಗೊಳ್ಳೆನು ಎಂಬ ದೃಢ ಸಂಕಲ್ಪ
    ತಳೆದು ದುರ್ಭರ ನೋವ ಹಲ್ಕಚ್ಚಿ ಸಹಿಸಿದನು.
    ಮಳೆಗಾಲ ಕಳೆದು ಬಂದರು ಎಲ್ಲ ಭಿಕ್ಕುಗಳು.
    ಅವರೊಡನೆ ಅಮಿತಾಭ ಬಂಡ ಗ್ರಾಮಕೆ ಹೊರಟ.
    ಆಗ ಏಕೋ ಒಮ್ಮೆ ತಿರುಗಿ ನೋಡಿದ ತನಗೆ
    ತುಂಬ ಪ್ರಿಯವಾದ ಆ ವೈಶಾಲಿ ನಗರವನು.
    ನೋಡುತ್ತ ಭಿಕ್ಕು ಆನಂದನಿಗೆ ನುಡಿಯುವನು:

    ೬೧
    ‘ಇದು ತಥಾಗತಗೆ ವೈಶಾಲಿಯಂತಿಮ ನೋಟ!’
    ಎನ್ನುತ್ತ ಮತ್ತೆ ತಿರುಗದೆ ಮುಂದೆ ನಡೆಯುವನು.
    ಹತ್ತಿಗ್ರಾಮವ ದಾಟಿ, ಜಂಬ, ಭೋಗದ ಮಾರ್ಗ
    ಹಿಡಿದು ಪಾವದ ಕಡೆಗೆ ನಡೆಯುವನು, ಭಿಕ್ಕುಗಳು
    ಹಿಂಬಾಲಿಸುವರು ವೃದ್ಧ ಗುರುವನ್ನ. ಪಾವದಲಿ
    ಊರ ಹೊರಗೇ ಒಂದು ಆಮ್ರವನ. ಕಮ್ಮಾರ
    ಕುಂದನಿಗೆ ಸೇರಿದ್ದು. ಅಲ್ಲೆ ಉಳಿಯಿತು ಭಿಕ್ಷು
    ಸಮುದಾಯ ಇರುಳಲ್ಲಿ. ಬುದ್ಧ ಗುರು ಬಂದಿರುವ
    ಸುದ್ದಿ ತಿಳಿದೊಡನೆಯೇ ಓಡಿಬಂದನು ಕುಂದ.
    ನಾಳೆ ನಮ್ಮಲ್ಲಿಯೇ ಬರಬೇಕು ಭಿಕ್ಷೆಗೆ
    ಎಂದು ಬೇಡುತ್ತಾನೆ ಭಗವಂತನನು ಕುಂದ.
    ಹಾಗೆ ಆಗಲಿ ಎಂದು ಬುದ್ಧನೂ ಒಪ್ಪುವನು.
    ಅಂದಿನ ವಿಶೇಷ ಸೂಕರಮದ್ದವಾ ಎಂಬ
    ಭಕ್ಷ್ಯ. ಕೂತರು ಎಲ್ಲ ಕಾಯುತ್ತ ಬಡಿಸೋದ.

    ೬೨
    ಕುಂದ! ಮದ್ದವವನ್ನು ನನಗೆ ಮಾತ್ರ ಬಡಿಸು.
    ಭಿಕ್ಕು ಸಮುದಾಯಕ್ಕೆ ಉಳಿದ ಖಾದ್ಯವ ಬಡಿಸು.
    ನಾನು ತಿನ್ನದೆ ಉಳಿದ ಮದ್ದವವ ಮಣ್ಣಲ್ಲಿ
    ಹೂತುಬಿಡು-ಎನ್ನುವನು ಬುದ್ಧ! ಅದರಂತೆಯೇ
    ಮಾಡುವನು, ಮೀರಲಾಗದು ಬುದ್ಧ ನುಡಿಯನ್ನು.
    ಮನೆಮಂದಿಯೆಲ್ಲ ಉಂಡಾಗಿ , ನೆರೆದರು ಎಲ್ಲ,
    ಮುಂದಿನಂಗಳದಲ್ಲಿ. ಆರ್ಯ ಸತ್ಯಗಳನ್ನು
    ಅಮಿತಾಭ ವಿಸ್ತರಿಸಿ ಹೇಳುವನು, ಒಂದಲ್ಲ,
    ಎರಡಲ್ಲ, ಮೂರುಸಲ ಹೇಳುವನು. ಸಂದೇಹ
    ವಿದ್ದರೀಗಲೆ ಕೇಳಿ ಎನ್ನುವನು! ಅರ್ಥವಾ
    ಯಿತು ಹೇಳುವರು ಮನೆಯವರು. ಬುದ್ಧನ ಧ್ಯಾನ
    ವಿಶ್ರಾಂತಿಗಳ ಸಮಯ. ಸುಗತನೊಂದಿಗೆ ಆಮ್ರ-
    ವನದ ತನಕಾ ಬಂದು, ಅಭಿವಂದನೆಯ ಸಲಿಸಿ
    ಹಿಂದಿರುಗುವನು ಕುಂದ, ಸಂತೃಪ್ತ ಭಾವದಲಿ.

    ೬೩
    ಥಟ್ಟನೆಚ್ಚರವಾಯ್ತು ನಟ್ಟಿರುಳು. ಅತಿಯಾದ
    ಹೊಟ್ಟೆ ಮುರಿತದ ಬಾಧೆ; ಝಾಡಿಸುತ್ತಿದೆ ಉದರ.
    ವೇಲುಗ್ರಾಮದಲಿ ಆದಂತೆ. ದುಸ್ಸಹ ಬಾಧೆ.
    ಬತ್ತಿಯೇರಿಸಿ ಹಾಗೆ ಧ್ಯಾನಿಸುತ ಮಲಗುವನು.
    ಬೇಡ ಆನಂದನನು ಎಚ್ಚರಿಸುವುದು ಈಗ.
    ಮುಂಜಾನೆ ನಸುಕಲ್ಲೆ ಹೊರಡಬೇಕಿದೆ ಕುಶೀ-
    ನಗರಕ್ಕೆ. ಕಾಯುತಿರುವರು ಅಲ್ಲಿ ಮಲ್ಲರು.
    ಸೂಕರದ ಮದ್ದವವು ಅರಗಲಿಲ್ಲವೊ ಹೇಗೊ!
    ಚಾಪೆಯಲಿ ಮೈಚಾಚಲಾಗದಿರುವಾಗವನು
    ನಿಲ್ಲುವನು, ನಡೆಯುವನು. ಉಸಿರೊತ್ತಿ ಬರುತ ಇದೆ.
    ನೀರು ಕುಡಿಯುವುದಕ್ಕು ಉಬ್ಬಳಿಕೆ. ಜಪಮಾಲೆ
    ಎಣಿಸುವನು. ಬಾಧೆ ತುಸು ಕಡಿಮೆಯಾಗುತ್ತ ಇದೆ.
    ಯಾವ ಮಾಯದಲಿ ಕಣ್-ಹತ್ತಿತೋ ತಿಳಿಯದು!
    ನಸುಕಲ್ಲೆ ಯಾವ ಕರೆಗೋ ತಾನು ಎದ್ದದ್ದು?

    ಜಯದುರ್ಗಿ ಜಯದುರ್ಗಿ ನಾನಿನ್ನ ಕಾಲ್ಗೆರಗಿ ಬೇಡುವೆನು ಭೀತಿಗಳ ಪರಿಹರಿಸು

    ಇಂದಿನಿಂದ ಎಲ್ಲೆಡೆ ನವರಾತ್ರಿ ಸಂಭ್ರಮ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ನಿಮ್ಮ ನೆಚ್ಚಿನ ಕನ್ನಡ ಪ್ರೆಸ್.ಕಾಮ್ ಇಂದಿನಿಂದ ನವರಾತ್ರಿ ಸಂಗೀತೋತ್ಸವವನ್ನು ಸಾದರ ಪಡಿಸುತ್ತಿದೆ.

    ಇಂದು ನವರಾತ್ರಿ ಪಾಡ್ಯ. ಈ ದಿನದ ಸಂಗೀತ ಸಂಜೆಯನ್ನು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಶ್ರುತಿ ಕೋಡನಾಡ್ ಮತ್ತು ಅವರ ಶಿಷ್ಯವೃಂದದಿಂದ ಆರಂಭಿಸುತ್ತಿದ್ದೇವೆ.

    ಶ್ರುತಿ ಕೋಡನಾಡ್ ಅವರ ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ಈ ಸಂಗೀತ ಸಂಜೆ ಎಂಟು ವರ್ಷದ ಪ್ರಥಮ್ ಗಿರೀಶ್ ರಾವ್ ಹಾಡಿರುವ ಕುಮಾರವ್ಯಾಸ ನ ಕರ್ನಾಟ ಭಾರತ ಕಥಾಮಂಜರಿಯ ನಾಂದಿ ಪದ್ಯದೊಂದಿಗೆ ಮುಂದುವರಿಯುತ್ತದೆ.

    ಅನಂತರ ಒಂಭತ್ತು ವರ್ಷದ ಕುಮಾರಿ ಸನಯ ಸಂತೋಷ್ ಹಾಡಿರುವ ಅಪ್ಪಯ್ಯ ದೀಕ್ಷಿತರ ಕೃತಿ ವರವೀಣಾ ಮೃದುಪಾಣಿ ಯೊಂದಿಗೆ ಮತ್ತೊಂದು ಮಜಲನ್ನು ಪ್ರವೇಶಿಸುತ್ತದೆ.

    ಈ ವೇಳೆಗೆ ಶ್ರುತಿ ಅವರೇ ಗಾಯನಕ್ಕೆ ಧಾವಿಸಿದ್ದರಿಂದ ಕಛೇರಿ ಮತ್ತೊಂದು ಎತ್ತರಕ್ಕೆ ಏರುತ್ತದೆ.ಶಂಕರಾಚಾರ್ಯರು ವಿರಚಿತ ಸೌಂದರ್ಯ ಲಹರಿ ಶ್ಲೋಕ ಮತ್ತು ಮುತ್ತಯ್ಯ ಭಾಗವತರ ಹಿಮಗಿರಿ ತನಯೇ ಕೃತಿಯೊಂದಿಗೆ ಅವರು ಸಂಗೀತದ ನೂತನ ಅನುಭೂತಿ ಸೃಷ್ಟಿಸುತ್ತಾರೆ.

    ಮುಂದೆ ಆರು ವರ್ಷದ ಪುಟಾಣಿ ಕುಮಾರಿ ಆದ್ಯ ಒರುಗಂಟಿ ಮುತ್ತುಸ್ವಾಮಿ ದೀಕ್ಷಿತರ ಶ್ಯಾಮಳೆ ಮೀನಾಕ್ಷಿ ಕೃತಿಯನ್ನು ತನ್ನ ಮುದ್ದಾದ ಕಂಠದಿಂದ ಹಾಡಿ ಕೇಳುಗರನ್ನು ಮಂತ್ರ ಮುಗ್ಧಗೊಳಿಸುತ್ತಾಳೆ.

    ಕೊನೆಯಲ್ಲಿ ಶ್ರುತಿ ಕೋಡನಾಡ್, ಸಂಸ್ಕೃತಿ ಸಮೀರ್,  ಪುಷ್ಪಾ ಬೈಕಾಡಿ,  ಸುಪ್ರಿಯಾ ಪಾರಂಪಳ್ಳಿ ಮತ್ತು ಅಶ್ವೀನಿ ಸಂಗಮ್ ಅವರೆಲ್ಲರೂ ಬೀರೂರು ಚಿದಂಬರ ಜೋಯಿಸರ ಜಯದುರ್ಗಿ ಎಂಬ ಮಂಗಳ ಗೀತೆಯನ್ನು ಹಾಡಿ ಸಂಪನ್ನಗೊಳಿಸುತ್ತಾರೆ.

    ಮೂಲತಃ ಚಿತ್ರದುರ್ಗದವರಾದ ಶ್ರುತಿ ಕೋಡನಾಡ್ ರವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಗಮಕ ಕಲೆಯನ್ನು ಗಮಕ ಕಲಾನಿಧಿ ಶ್ರೀಮತಿ ಚಂಪಕಾ ಶ್ರೀಧರ್ ಇವರಲ್ಲಿ  ಅಭ್ಯಾಸ ಮಾಡಿದ್ದಾರೆ.ಚಿಕ್ಕವಯಸ್ಸಿನಲ್ಲೇ ತಮ್ಮ ತಾಯಿ ಗಮಕಿ ಶ್ರೀಮತಿ ಮಂಜುಳಾ ದತ್ತಾತ್ರೇಯ ಅವರಿಂದ ಗಮಕ ಕಲೆಗೆ ಪರಿಚಿತರಾಗಿರುತ್ತಾರೆ.

    ಪಾಡ್ಕಾಸ್ಟ್ ನಿರೂಪಣೆ ಭಾರತಿ ಅವರದ್ದು.

    ಆಲಿಸಿ ಪ್ರತಿಕ್ರಿಯಿಸಿ.

    ಕನ್ನಡಪ್ರೆಸ್ ಗೊಂಬೆ ಹಬ್ಬ

    ನವರಾತ್ರಿ ಬಂತೆಂದರೆ ಮನೆ ಮನೆಯಲ್ಲಿ ಗೊಂಬೆ ಕೂಡಿಸುವ ಸಂಭ್ರಮ. ಹಳೇ ಮೈಸೂರು ಭಾಗದಲ್ಲಿ ಇದರ ಸಂಭ್ರಮ ಹೆಚ್ಚು. ಒಂದೊಂದು ಮನೆಯಲ್ಲೂ ನೂರಾರು ಗೊಂಬೆಗಳು. ಮಹಾಭಾರತ, ರಾಮಾಯಣ, ಶ್ರೀನಿವಾಸ ಕಲ್ಯಾಣ, ಗಿರಿಜಾ ಕಲ್ಯಾಣ ಎಲ್ಲವೂ ಗೊಂಬೆ ರೂಪದಲ್ಲಿ ಜೀವ ತಾಳುವುದುಂಟು.

    ಆದರೆ ಆ ಬಾರಿ ಕೋವಿಡ್ ಈ ಸಂಭ್ರಮಕ್ಕೆ ಒಂದಿಷ್ಟು ಅಡ್ಡಿ ತಂದಿರುವುದಂತು ನಿಜ. ಸುರಕ್ಷತಾ ದೃಷ್ಟಿಯಿಂದ ಅನೇಕ ಮನೆಗಳಲ್ಲಿ ಗೊಂಬೆ ಹಬ್ಬ ಈ ಬಾರಿ ಅವರವರ ಮನೆಗೆ ಸೀಮಿತವಾಗಿದೆ. ಗೊಂಬೆ ನೋಡಲು ಯಾರನ್ನೂ ಕರೆಯದಂಥ ಅನಿವಾರ್ಯತೆ ಎದುರಾಗಿದೆ.

    ಹೀಗಾಗಿ ಕೆಲವರು ಶಾಸ್ತ್ರ ನಿಲ್ಲಿಸಬಾರದೆಂದು ಪಟ್ಟದ ಗೊಂಬೆಗಳನ್ನು ಮಾತ್ರ ಇಟ್ಟಿದ್ದಾರೆ. ಇನ್ನೂ ಕೆಲವರು ಕೆಲವೇ ಕೆಲವು ಗೊಂಬೆಗಳನ್ನು ಮಾತ್ರ ಇಟ್ಟಿದ್ದಾರೆ. ಇನ್ನು ಹಲವರು ಎಂದಿನಂತೆ ಮನೆ ತುಂಬಾ ಗೊಂಬೆ ಕೂಡಿಸಿದ್ದಾರೆ.

    ಎಲ್ಲರೂ ಎಲ್ಲರ ಮನೆಯ ಗೊಂಬೆ ಹಬ್ಬವನ್ನು ಕಣ್ತುಂಬಿಕೊಳ್ಳಲಿ ಎಂಬ ಉದ್ದೇಶದಿಂದ ಕನ್ನಡಪ್ರೆಸ್.ಕಾಮ್ ವೇದಿಕೆ ಕಲ್ಪಿಸಿದೆ. ನಿಮ್ಮ ಮನೆಯಲ್ಲಿ ಕೂಡಿಸಿರುವ ಗೊಂಬೆಗಳ ಫೋಟೋವನ್ನು ಕೆಳಗಿನ ನಂಬರಿಗೆ ವಾಟ್ಸಾಪ್ ಮಾಡಿ ಅಥವಾ ಇ ಮೇಲ್ ಮಾಡಿ. ನಾವದನ್ನು ಸುಂದರ ಆಲ್ಬಂ ಮಾಡಿ ಪ್ರಕಟಿಸುತ್ತೇವೆ. ಆ ಮೂಲಕ ನಿಮ್ಮ ಮನೆಯ ಗೊಂಬೆ ಅಲಂಕಾರ ಎಲ್ಲರ ಮನೆ ಮನವನ್ನು ಮುಟ್ಟುತ್ತದೆ. ವಾಟ್ಸಪ್ ನಂಬರ್ 7483010618 ಇ ಮೇಲ್ [email protected]

    ನವರಾತ್ರಿ : ನವದುರ್ಗೆಯರ ಆರಾಧನೆ

    ನವರಾತ್ರಿಯನ್ನು ನಮ್ಮ ದೇಶದಲ್ಲಿ ಹಿಂದೂಗಳು ಬಹಳ ವಿಧವಾಗಿ ಆಚರಿಸುತ್ತಾರೆ. ಕೆಲವರು ಉಪವಾಸ ವ್ರತ ಮಾಡಿದರೆ ಕೆಲವರು ವಿಜೃಂಭಣೆಯಿಂದ ದೇವಿಯನ್ನು ಆರಾಧಿಸುತ್ತಾರೆ. 

    ಹಬ್ಬವನ್ನು ಅವರವರ ಪ್ರಾದೇಶಿಕ ಸಂಸ್ಕೃತಿಯಂತೆ ಆಚರಿಸುತ್ತಾರೆ.ಮಳೆಗಾಲ ಮುಗಿದ ನಂತರ ಚಳಿಗಾಲ ಆರಂಭದ ಮೊದಲು ಬರುವ ಈ ಹಬ್ಬವನ್ನು ನವರಾತ್ರಿ ಎಂದೂ ಕರೆಯುತ್ತಾರೆ. ಎಲ್ಲೆಲ್ಲೂ ದುರ್ಗಾ ದೇವಿಯ ಆರಾಧನೆ ನಡೆಯುತ್ತದೆ.

    ನಮ್ಮ ದೇಶದ ಪೂರ್ವ ಮತ್ತು ಈಶಾನ್ಯದಲ್ಲಿ ದುರ್ಗಾಪೂಜೆ ನವರಾತ್ರಿಯ ಬಹು ಮುಖ್ಯವಾದ ಆಚರಣೆ . ವಾಯುವ್ಯ ಭಾಗದಲ್ಲಿ ಈ ಹಬ್ಬವನ್ನು ರಾಕ್ಷಸ ರಾವಣನನ್ನು ಕೊಂದು ಶ್ರೀರಾಮ ವಿಜಯ ಆದ ಕಥೆಯನ್ನು ರಾಮಲೀಲಾ ಎಂಬುದಾಗಿ ಆಚರಿಸುತ್ತಾರೆ. ಇನ್ನೂ ದಕ್ಷಿಣ ಭಾಗದಲ್ಲಿ ರಾಮನ ಗೆಲುವನ್ನು ಮತ್ತು ದೇವಿಯ ಪೂಜೆಯನ್ನು ಮಾಡುತ್ತಾರೆ. ಯಾರು ಹೇಗೆ ಆಚರಿಸಿದರೂ ಮೂಲವಾಗಿ ಅಧರ್ಮವನ್ನು ನಾಶಮಾಡಿ ಧರ್ಮವನ್ನು ಸ್ಥಾಪಿಸುವುದೇ ಆಗಿರುತ್ತದೆ.

    ದಕ್ಷಿಣದಲ್ಲಿ ಮನೆಮನೆಯಲ್ಲೂ ಬೊಂಬೆಗಳನ್ನು ಅಲಂಕಾರವಾಗಿ ಜೋಡಿಸಿ ಎಲ್ಲರನ್ನೂ ಕರೆದು ಸಡಗರಿಸುತ್ತಾರೆ.ಗುಜರಾತ್ ನಲ್ಲಿ ಗರ್ಭ ನೃತ್ಯ ಮಾಡಿ ಜನರು ಸಂತೋಷದಿಂದ ದೇವಿಯ ಪೂಜೆ ಮಾಡುತ್ತಾರೆ.

    ಬಂಗಾಳಿಗರು ಅತ್ಯಂತ ದೊಡ್ಡದಾದ ಪೆಂಡಾಲ್ ಹಾಕಿ ದೇವಿ ಪೂಜೆಯನ್ನು ಬಹಳ ವಿಶಿಷ್ಟವಾಗಿ ಆಚರಿಸುತ್ತಾರೆ. ಅವರಲ್ಲಿ ತುಂಬಿದ ಮಣ್ಣಿನ ಮಡಿಕೆಯಲ್ಲಿ ನಿಧಾನವಾಗಿ ಉರಿಯುವ ಇದ್ದಿಲು ಮತ್ತು ಸಾಂಬ್ರಾಣಿ ಹಾಕಿ ಹೆಂಗಸರು ಗಂಡಸರು ಡೋಲಿನ ಬಡಿತಕ್ಕೆ ನರ್ತಿಸುತ್ತಾರೆ. ಇನ್ನೂ ಕೆಲವೆಡೆ ಒಂಬತ್ತು ದಿನವೂ ರಾಮಾಯಣವನ್ನು ರಾತ್ರಿ ನಾಟಕವಾಡಿ ಜನರನ್ನು ಸಂತೋಷ ಗೊಳಿಸುತ್ತಾರೆ.

    ನಮ್ಮ ಭಾರತೀಯ ಸಂಸ್ಕೃತಿಯ ಚರಿತ್ರೆಯಲ್ಲಿ ಇಷ್ಟೊಂದು ಸುದೀರ್ಘಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣ ಸಿಗುವುದು ಬಹಳ ಅಪರೂಪ.

    ನಮ್ಮ ಕರ್ನಾಟಕದಲ್ಲಿ ನವರಾತ್ರಿಯನ್ನು ನಾಡಹಬ್ಬ ವೆಂದು ಆಚರಿಸುತ್ತಾರೆ. ವಿಜಯನಗರದ ರಾಜರು ತಮ್ಮ ವೈಭವವನ್ನು ತೋರಿಸಲು ಈ ಹಬ್ಬವನ್ನು ಶುರುಮಾಡಿದರು.

    ಹಿಂದೂಗಳ ಸಂಪ್ರದಾಯದಂತೆ ಮುಖ್ಯವಾಗಿ ದೇವಿಯನ್ನು ಅವತಾರವನ್ನು ಮೂರು ವಿಧದಲ್ಲಿ ಪ್ರಾರ್ಥನೆ ಮಾಡುತ್ತಾರೆ .ಮಹಾಸರಸ್ವತಿ, ಮಹಾಲಕ್ಷ್ಮಿ ಮತ್ತು ಮಹಾಕಾಳಿ ಎಂದು. ಬ್ರಹ್ಮ ವಿಷ್ಣು ಮತ್ತು ರುದ್ರ ಈ ದೇವಿಯರಿಗೆ ತಮ್ಮಶಕ್ತಿಯನ್ನು ಕೊಟ್ಟಿರುತ್ತಾರೆ.

    ಈ ಮೂರು ದೇವತೆಗಳನ್ನು ಒಂದೊಂದು ದೇವಿಯ ಮೂರು ವಿಧದಲ್ಲಿ ಪೂಜಿಸುತ್ತಾರೆ.ಅದಕ್ಕೆ ನವರಾತ್ರಿಯನ್ನು 9 ದಿನ ಆಚರಿಸುತ್ತಾರೆ.

    ೧. ತಾಯಿ ಶೈಲಪುತ್ರಿ ದೇವಿ.

    ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಪೂಜೆ ನಡೆಯುತ್ತದೆ.ಶೈಲ ವೆಂದರೆ ಪರ್ವತ  ಪುತ್ರಿ ಎಂದರೆ ಮಗಳು.ಕೈಯಲ್ಲಿ ತ್ರಿಶೂಲ ಮತ್ತು ಕಮಲವನ್ನು ಹಿಡಿದಿರುತ್ತಾಳೆ.ದೇವಿ ಎತ್ತಿನ ಮೇಲೆ ಕೂತಿರುತ್ತಾಳೆ. ದೇವಿಯ ಪಾದಕ್ಕೆ ತುಪ್ಪವನ್ನು ನೈವೇದ್ಯ ಮಾಡುತ್ತಾರೆ.

    ೨. ತಾಯಿ ಬ್ರಹ್ಮಚಾರಿಣಿ ದೇವಿ.

    ಒಂದು ಕೈಯಲ್ಲಿ ಕುಂಭ ಮತ್ತೊಂದರಲ್ಲಿ ಜಪಮಣಿ ಹಿಡಿದಿರುತ್ತಾಳೆ.ದೇವತೆ ಪ್ರೀತಿ ಮತ್ತು ನಂಬಿಕೆಯ    ಅಧಿದೇವತೆ. ಧ್ಯಾನ ಮತ್ತು ಬುದ್ಧಿಮತ್ತೆಯ ಗಣಿ.  ರುದ್ರಾಕ್ಷಿ ಸರವನ್ನು ಹಾಕಿರುತ್ತಾಳೆ. ಬರೀ ಕಾಲಿನಲ್ಲಿರುವ ಈ ದೇವಿ ಶಿವನನ್ನು ಒಲಿಸಲು ಘೋರ ತಪಸ್ಸು ಮಾಡುತ್ತಾಳೆ. ನೈವೇದ್ಯಕ್ಕೆ ಸಕ್ಕರೆ ಮಾತ್ರ ಅರ್ಪಿಸುತ್ತಾರೆ. 

    ೩. ತಾಯಿ ಚಂದ್ರಕಾಂತ ದೇವಿ

    ಮೂರನೆಯದಿನ  ಈ ದುರ್ಗಾದೇವಿಯು ಹುಲಿಯ ಮೇಲೆ ಆರೂಢ ಆಗಿರುತ್ತಾಳೆ. ದೇವಿಯ ಶರೀರದಿಂದ ಚಿನ್ನದ ಬಣ್ಣ ಹೊಮ್ಮುತ್ತಿರುವಂತೆ ಕಾಣುತ್ತದೆ.ದೇವಿಗೆ 10 ಕೈಗಳು ಇರುತ್ತದೆ. ಎಂಟು ಕೈಗಳಲ್ಲಿ ವಿಧವಿಧವಾದ ಯುದ್ಧ ಅಸ್ತ್ರಗಳು ಮತ್ತು ಒಂದು ಕೈಯಲ್ಲಿ ವರಗಳನ್ನು ಕೊಡುತ್ತಾ ಮತ್ತೊಂದು ಕೈಯಲ್ಲಿ ಅಭಯಮುದ್ರೆ ಆಶ್ವಾಸನೆ ತೋರಿಸುತ್ತಾಳೆ.ಚಂದ್ರಕಾಂತ ದೇವಿ ಎಂದರೆ ಬ್ರಹ್ಮಾನಂದ ದಲ್ಲಿ ಇರುವ ಬೆಳದಿಂಗಳ ಶೀತ ಮಾರುತದಂತೆ. ದೇವಿಗೆ ಖೀರ್ ನೇವೇದ್ಯ ಮಾಡುವುದರಿಂದ ಎಲ್ಲನೋವುಗಳು ನಿವಾರಣೆಯಾಗುತ್ತೆ.

    ೪. ತಾಯಿ ಕೂಷ್ಮಾಂಡ ದೇವಿ

    ನಾಲ್ಕನೇ ದಿನದಂದು ಕುಷ್ಮಾಂಡ ದೇವಿಯ ಆರಾಧನೆ ನಡೆಯುತ್ತದೆ. ಎಂಟು ಕೈಗಳು ಇರುತ್ತದೆ.ಏಳು ಕೈಯಲ್ಲಿ ಯುದ್ಧದ ಆಯುಧಗಳು ಒಂದು ಕೈಯಲ್ಲಿ ಜಪಮಣಿಇರುತ್ತದೆ.ದೇವಿಯು ಹುಲಿಯ ಮೇಲೆ ಆಸೀನರಾಗಿರುತ್ತಾಳೆ.ದೇವಿಯ ಸುತ್ತಲೂ ಸೂರ್ಯ ಪ್ರಭೆ ಇರುತ್ತದೆ.ಕುಂಭ ಬಂದ್ ಎಂದರೆ ಬ್ರಹ್ಮಾಂಡದ ಆನಂದ ಅಥವಾ ಬ್ರಹ್ಮ ಜ್ಞಾನ ದೇವತೆ.ದೇವಿಯ ಆಸ್ಥಾನ ಬ್ರಹ್ಮ ಪರ್ವತದಲ್ಲಿದೆ. ಮಾಲ್ಪುವಾ ನೇವೇದ್ಯ ಮಾಡಬೇಕು. ಜ್ಞಾನವನ್ನು ಮತ್ತು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ನೀಡುತ್ತಾಳೆ.

    ೫. ತಾಯಿ ಸ್ಕಂದ ಮಾತಾ ದೇವಿ.

    ಸಿಂಹ ರೂಢಿನಿ ಮತ್ತು ತೊಡೆಯ ಮೇಲೆ ಮಗ ಸ್ಕಂದನನ್ನು ಕೂಡಿಸಿಕೊಂಡು ಇರುತ್ತಾಳೆ. ಮೂರು ಕಣ್ಣು ಮತ್ತು ನಾಲ್ಕು  ಕೈ ಇರುತ್ತದೆ.ಎರಡು ಕೈಯಲ್ಲಿ ಕಮಲದ ಹೂವು ಮತ್ತೆರಡು ಕೈ ಅಭಯ ಮತ್ತು ರಕ್ಷಣೆ ಕೊಡುವ ಮುದ್ರೆ.ಸ್ಕಂದ ಮಾತೆಯ ಕೃಪೆಯಿಂದ ಎಂತಹ ಮೂರ್ಖನು ಜ್ಞಾನಿಯಾದ ಪಂಡಿತನಾಗ ಬಲ್ಲ.ಕಾಳಿದಾಸ ಪಂಡಿತನಾದಂತೆ.ಬಾಳೆಹಣ್ಣು ನೈವೇದ್ಯಮಾಡುವುದರಿಂದ ಬಹಳ ತೃಪ್ತಳಾಗುತ್ತಾಳೆ.

    ೬. ತಾಯಿ ಕಾತ್ಯಾಯಿನಿ ದೇವಿ.

    ಕಾತ್ಯಾಯಿನಿ ತನ್ನ ತಪಸ್ಸಿಗಾಗಿ ಕಾತ್ಯಾಯನ  ಋಷಿಯ ಆಶ್ರಮದಲ್ಲಿ ಇದ್ದರಂತೆ. ಅದಕ್ಕೆ ಅವರ ಹೆಸರು ಕಾತ್ಯಾಯಿನಿ ಎಂದು ಆಯಿತು.ಈ ದೇವಿ ಸಿಂಹವಾಹಿನಿ ಮೂರು ಕಣ್ಣು ಮತ್ತು ನಾಲ್ಕಕೈಗಳಿವೆ.ಒಂದು ಎಡ ಕೈಯಲ್ಲಿ ಯುದ್ದಾಯುದ   ಮತ್ತೊಂದರಲ್ಲಿಪುಷ್ಪವನ್ನು ಹಿಡಿದಿರುತ್ತಾಳೆ.  ಬಲಗೈಯಲ್ಲಿ ರಕ್ಷಣೆ ಮತ್ತು ವರಗಳನ್ನು ನೀಡುತ್ತಿರುವ ಮುದ್ರೆ ಇರುತ್ತದೆ. ದೇವಿಯು ಚಿನ್ನದ ಬಣ್ಣವನ್ನು ಹೊಂದಿರುತ್ತಾಳೆ.ದೇವಿಗೆ ಜೇನುತುಪ್ಪ ನೇವೇದ್ಯ ಮಾಡುವುದರಿಂದ ದೇವಿ ಸುಪ್ರೀತ ಆಗುತ್ತಾಳೆ.

    ೭. ತಾಯಿ ಕಾಳರಾತ್ರಿ ದೇವಿ.

    ಕಪ್ಪು ಬಣ್ಣ ತಲೆಯ ತುಂಬಾ ಹೊರೆ ಯಂತಿರುವ ಕೂದಲು ನಾಲ್ಕು ಕೈಗಳು ಇರುತ್ತವೆ.ಎರಡು ಕೈಯಲ್ಲಿ ಯುದ್ಧದ ಆಯುಧ ಮತ್ತು ಬೆಂಕಿ ಮತ್ತೆರಡು ಕೈಯಲ್ಲಿ ವರಗಳನ್ನು ನೀಡುವ,ರಕ್ಷಿಸುವ ಮುದ್ರೆ ಇರುತ್ತದೆ. ಕತ್ತಲು ಮತ್ತು ಅಜ್ಞಾನವನ್ನು ಹೋಗಲಾಡಿಸುತ್ತಾಳೆ. ಕಾಳರಾತ್ರಿ ದೇವಿ ಅವತಾರ ಅಂಧಕಾರವನ್ನು ಓಡಿಸುವ ಕತ್ತಲೆಯನ್ನು ದ್ವೇಷಿಸುವ ಕಾಳಿಮಾತೆಯ ದೇವಸ್ಥಾನ ಕೊಲ್ಕತ್ತಾದಲ್ಲಿ ಪ್ರಖ್ಯಾತವಾಗಿದೆ. ದೇವಿಗೆ ಬೆಲ್ಲವನ್ನು ನೈವೇದ್ಯ ಮಾಡಿದರೆ  ನೋವು ತೊಂದರೆಗಳಿಂದ ವಿಮುಕ್ತರಾಗ ಬಹುದು.ದೇಶದ ಉತ್ತರಭಾಗದಲ್ಲಿ ಚಿಕ್ಕ ಹೆಣ್ಣು ಮಕ್ಕಳನ್ನು ದೇವಿಯರು ಎಂದು ಕರೆದು ಪಾದಗಳನ್ನ ತೊಳೆದು ಪೂಜೆ ಮಾಡಿ ಪೂರಿ ಸಜ್ಜಿಗೆ ಮತ್ತು ದಕ್ಷಿಣೆ ಕೊಡುತ್ತಾರೆ.ಸನಾತನ ಧರ್ಮವನ್ನು ಕಾಪಾಡುವ ಈ ಸಂಸ್ಕೃತಿ ಬಹುಶಃ ಪ್ರಪಂಚದಲ್ಲಿ ಎಲ್ಲೂ ಇರಲಾರದು.

    ೮. ತಾಯಿ ಗೌರಿದೇವಿ.

     ನವರಾತ್ರಿಯ ಎಂಟನೆಯ ದಿನವಾದ ಇಂದು ಗೌರಿ ದೇವಿಯನ್ನು ಪೂಜಿಸುತ್ತಾರೆ ನಾಲ್ಕು ಕೈಗಳು ಬಿಳಿಯಾನೆ ಅಥವಾ ಎತ್ತಿನ ಮೇಲೆ ಆಸನಾರೂಢಳಾಗಿರುತ್ತಾಳೆ.ಕೈಯಲ್ಲಿ ತ್ರಿಶೂಲ ಮತ್ತು ಡಮರುಗವನ್ನು ಹಿಡಿದಿರುತ್ತಾಳೆ. ದೇವಿಯು ಅತ್ಯಂತ ಶುಭ್ರ ಶ್ವೇತ ವರ್ಣದ ಗಳಾಗಿರುತ್ತಾಳೆ. ಮುಖದಲ್ಲಿ ಶಾಂತತೆ ಹಾಗೂ ವಾತ್ಸಲ್ಯದ ಕಳೆ ಹೊಳೆಯುತ್ತಿರುತ್ತದೆ ಮಹಾ ಗೌರಿಯ ದೇವಸ್ಥಾನ ಹರಿದ್ವಾರದಲ್ಲಿದೆ.ತೆಂಗಿನಕಾಯಿ ನೆವೇದ್ಯ ಮಾಡುವುದರಿಂದ ಸದಾ ಸುಮಂಗಲಿಯರು ಆಗಿರುವಂತೆ ಆಶೀರ್ವಾದ ಮಾಡುತ್ತಾಳೆ.

    ೯. ತಾಯಿ ಸಿದ್ಧಿದಾತ್ರಿ ದೇವ

    ಒಂಬತ್ತನೆಯ ದಿನವಾದ ಇಂದು ಸಿದ್ಧಿದಾತ್ರಿ ಯ ಆರಾಧನೆ ನಡೆಯುತ್ತದೆ. ದೇವಿಗೆ ನಾಲ್ಕು ಕೈಗಳು ಮತ್ತು ಕಮಲದ ಮೇಲೆ ಆಸೀನರಾಗಿರುತ್ತಾರೆ. ಗಧೆ ಮತ್ತು ಯುದ್ಧಆಯುಧ ಮತ್ತು ಪುಸ್ತಕ ಮತ್ತು ತಾವರೆಯನ್ನು ಕೈಯಲ್ಲಿ ಹಿಡಿದಿರುತ್ತಾರಳೆ. ದೇವಿಯ ಮಂದಿರ ಹಿಮಾಲಯದ ನಂದ ಪರ್ವತದಲ್ಲಿದೆ ದೇವಿಯು 26 ವಿಧವಾದ ಭಕ್ತರ ಆಸೆಗಳನ್ನು ಪೂರೈಸುತ್ತಾಳೆ. ದೇವಿಯು ನಮ್ಮಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ಕೊಟ್ಟು ಕಷ್ಟಗಳಿಂದ ಪಾರಾಗುವಂತೆ ಮಾಡುತ್ತಾಳೆ.ನಮ್ಮ ಅವಗುಣಗಳನ್ನು ದೂರ ಮಾಡಿ ಮನಸ್ಸನ್ನು ಸ್ವತಂತ್ರಹಾಗೂ ಸ್ವಚ್ಛತೆಯಿಂದ  ಇರುವಂತೆ ಕಾಪಾಡುತ್ತಾಳೆ. ದೇವಿಗೆ ಸಾಸಿವೆ ಕಾಳನ್ನು ಅರ್ಪಿಸಬೇಕು.ಜೀವನದಲ್ಲಿ ಯಾವ ಪ್ರಾಕೃತಿಕ ಅವಘಡ ಬಾರದಂತೆ ರಕ್ಷಿಸುತ್ತಾಳೆ.

    ಈ ಎಲ್ಲ ದೇವಿಯರ ಮಹಾತ್ಮೆಯನ್ನು ದೇವಿ ಮಹಾತ್ಮೆ ಎಂಬ ಸಂಸ್ಕೃತ ಗ್ರಂಥದಲ್ಲಿ ವರ್ಣಿಸಿದ್ದಾರೆ. ಇದು ಮಾರ್ಕಂಡಯಮುನಿಗಳಿಂದ ರಚಿತವಾಗಿದೆ.ದೇವಿಮಹಾತ್ಮೆ,ದುರ್ಗಾಸಪ್ತಶತಿ,ಅಥವಾ ದುರ್ಗಾಪಾಠ ಎಂದು ಕರೆಯುತ್ತಾರೆ.

    ಒಂಬತ್ತು ದಿನಗಳನ್ನು ಬಹಳ ಶ್ರದ್ಧೆ ಭಕ್ತಿಯಿಂದ ಪೂಜಿಸಿದ ದೇವಿಯನ್ನು ಹತ್ತನೆಯ ದಿನ ವಿಜಯದಶಮಿ ದಿನದಂದು ನೀರಲ್ಲಿ ವಿಸರ್ಜಿಸುತ್ತಾರೆ.

    ನಿಮ್ಮೆಲ್ಲರಿಗೂ ದೇವಿ ಶಕ್ತಿ ಸಂತೋಷ ಮಾನವೀಯತೆ ಶಾಂತಿ ಧ್ಯಾನ ಜ್ಞಾನ ಭಕ್ತಿ ಒಳ್ಳೆಯ ಹೆಸರು ಮತ್ತು ಆಯುರಾರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲಿ.

    ಹೇಗಿರಲಿದೆ ಈ ಬಾರಿಯ ಮೈಸೂರು ದಸರಾ

    ನಾಳೆಯಿಂದ ಮೈಸೂರಿನಲ್ಲಿ ದಸರಾ ಆರಂಭ. ಕೋವಿಡ್ ಕಾರಣದಿಂದ ಈ ಬಾರಿ ದಸರಾ ನಿಜಾರ್ಥದಲ್ಲಿ ಸರಳವಾಗಿ ಆಚರಣೆ ಆಗುತ್ತಿದೆ. ಈ ಬಾರಿಯ ಮೈಸೂರು ದಸರಾ ಹೇಗಿರಲಿದೆ ಎಂಬದನ್ನು ಕುರಿತು ಕನ್ನಡಪ್ರೆಸ್ .ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪಾಡ್ಕಾಸ್ಚ್ ಇದು . ಆಲಿಸಿ ಪ್ರತಿಕ್ರಿಯಿಸಿ.

    ಕನ್ನಡ ಕಲಿಸಿದ ನಮ್ಮೂರ ಟಾಕೀಸು

    ಸಂತೆಬೆನ್ನೂರು ಫೈಜ್ನಟ್ರಾಜ್

    ನ್ನಡವೆನೆ ಕುಣಿದಾಡುವುದೆನ್ನೆದೆ
    ಕನ್ನಡ ಎನೆ ಕಿವಿ ನಿಮಿರುವುದು-
    ಕುವೆಂಪು ಅವರ ಈ ಮಾತು ನಮ್ಮೂರ, ನನ್ನಂತಹ ಎಷ್ಟೋ ಹುಡುಗರಿಗೆ ವರಪ್ರಸಾದ. ಕನ್ನಡ ಬರಿದೇ ಭಾಷೆ ಎಂದರೆ ಕ್ಲೀಷೆಯಾದೀತು. ಬಂಧನ,ಭಾವ,ಬೆಸುಗೆ,ಜೀವಧ್ವನಿ,ಸಂಚಲನ,ಶಕ್ತಿ,ಸ್ಪೂರ್ತಿ,ನೆರಳು,ಹೃದಯದೊಳಗಣ ಅಪಧಮನಿ,ಅಭಿಧಮನಿಯೂ ಹೌದು!

    ಕನ್ನಡ ಭಾಷೆ ನಮ್ಮ ಮನೆಯಲ್ಲಿ ನಾ ಹುಟ್ಟುವ ಮುಂಚೆಯೇ ಮನೆಯ ಅಂಗಳ,ಹಿತ್ತಲು,ಮನೆ- ಮನಗಳಲ್ಲಿ ಮೈದಾಳಿತ್ತು.ನನ್ನಾಗಮನದ ನಂತರ ನನ್ನ ಕಿರು ಬೆರಳ ಹಿಡಿದು ನಡೆಸಿದ್ದು ಮನೆಯ ಕನ್ನಡವಾದರೂ ಓಡುವಂತೆ ಮಾಡಿದ್ದು ನಮ್ಮೂರ ಶ್ರೀವೆಂಕಟೇಶ್ವರ ಟಾಕೀಸು!

    ನೆಲ,ಬೆಂಚು,ಛೇರ್ ಗಳೆಂಬ ಹಣಭೇದ ನೀತಿಯೊಂದಿಗೆ ವಿಭಾಗೀಕರಿಸಿದ ಆಸನಗಳಲ್ಲಿ ಸಿನಿಮಾ ಪ್ರದರ್ಶನ ನಡೆಯುತ್ತಿತ್ತು. ಪಿಯುಸಿ ದಾಟಿದರೂ ನೆಲ ಬಿಟ್ಟು ಕಡೆಗೆ ಬೆಂಚಿಗೂ ಬಡ್ತಿ ಪಡೆಯಲಿಲ್ಲ! ಹಣದ ಅಭಾವ ಸೇರಿದಂತೆ ಇಡೀ ಮೈಯನ್ನೇ ಆ ನೆಲಕರ್ಪಿಸಿ ಸಿನಿಮಾ ನೋಡೋ ಮಜನೇ ಬೇರೆ!

    ನೆಲನಲ್ಲದೇ ಕಡೆಗೆ
    ಬೇರೆ ನೆಲೆಯ
    ಸೆಲೆಯಾದರೂ
    ಎಲ್ಲುಂಟು ಸಂತೆಪ್ರಿಯ-

    ಎಂಬ ವಚನದಂತೆ ಅಂಗಾತವಾಗಿ ಮಣ್ಣ ರಾಶಿ ದಿಂಬಾಗಿಸಿ ಮನೆಯಿಂದೊಯ್ದ ಟವಲೆಂಬ ರತ್ನಗಂಬಳಿಯ ಮೇಲೆ ಪವಡಿಸಿ ಕೈಗೆಟುಕೋ ಪರದೆ ಮೇಲೆ ಕಾಣೋ ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಹದ್ದಿನ ಕಣ್ಣು, ಗರುಡರೇಖೆ, ಗಂಡಭೇರುಂಡ, ಸನಾದಿ ಅಪ್ಪಣ್ಣ, ಶ್ರೀಕೃಷ್ಣದೇವರಾಯ, ಹೊಸನೀರು, ಬೆಂಕಿ ಬಿರುಗಾಳಿ, ಜೀವನ ಚಕ್ರ, ಗೀತಾ, ಆಕ್ಸಿಡೆಂಟ್, ಬಝಾರ್ ಭೀಮ, ಸಹೋದರರ ಸವಾಲ್, ಗೋವಾದಲ್ಲಿ ಸಿಐಡಿ ೯೯೯, ಚಂದನದಗೊಂಬೆ….ಅಬ್ಬಾ ಅದೆಷ್ಟು ಚಿತ್ರ ರತ್ನಗಳನ್ನು ಕಣ್ತುಂಬಿಕೊಂಡೆನೋ ನಾನರಿಯೆ!

    ಸಿನಿಮಾಕ್ಕೆ ಟಿಕೇಟಿದ್ದರೂ ನಾವ್ ಮಾತ್ರ ಎಂದೂ ಟಿಕೇಟು ಕೊಂಡವರಲ್ಲ; ದುಡ್ ಕೊಟ್ಟೇ ಹೋದವರು! ನೆಲಕ್ಕೆ ತಿಕೀಟು ಒಂದುವರೆ ರೂಪಾಯಿ,ಬೆಂಚು ಎರೆಡು ರೂ, ಛೇರ್ ಮೂರ್ ರುಪಾಯಿ!

    ಆ ನೆಲಕ್ ಕೊಡೋ ಅಷ್ಟು ದುಡ್ಡಿಲ್ಲ, ಮನೆಯ ರಾಗಿ ಕದ್ದು ಅಂಗಡಿಗೆ ಮಾರಿದ್ರೆ ಬರೋ ರೊಕ್ಕ ಎಂಭತ್ತು ಪೈಸೆ. ಅದನ್ನೇ ಹಿಡಿದು ನೆಲದ ಪ್ರವೇಶ ದ್ವಾರಕ್ಕೆ ಹೋದರೆ ‘ಚನ್ನಮ್ಮ’ ( ಈಗಿನ ಟಾಕೀಸು ಮಾಲೀಕ ಪ್ರಕಾಶಣ್ಣರ ಮಾತೃಶ್ರೀ!) ಬಗಲಲ್ ಚರ್ಮದ ಹಳೇಚೀಲ ಹಿಡಿದು ತಿಕೀಟು ತಂದವರ ಕಳಿಸಿ ಇಲ್ಲದವರನ್ನು ವಾಪಸ್ ಕಳುಹಿಸುತ್ತಿದ್ದರು! ಟಾಕೀಸು ಮಾಲಕಿ ಚನ್ನಮ್ಮನವರನ್ನು ಬಳಿ ಕಾಡಿ, ಬೇಡಿ, ಗೋಗರೆದು ಮೊದಲ ಫೈಟ್ ಅಥವಾ ಹೀರೋನ ಮೊದಲ ಇಂಟ್ರಡಕ್ಷನ್ ಹಾಡು ಆದಮೇಲೆ ಒಳನುಗ್ಗುತ್ತಿದ್ದೆವು.

    ಹಾಗೆ ಹೋಗಿ ಹೋಗಿ ರಾಜ್‌ಕುಮಾರ್, ವಿಷ್ಣುವರ್ಧನ್,ಶಂಕರ್ ನಾಗ್, ಅನಂತ್ ನಾಗ್, ಅಂಬರೀಷ್, ವಜ್ರಮುನಿ, ಸು.ಕೃ.ಅರಸ್, ಅಶ್ವಥ್,ಬಾಲಕೃಷ್ಣ, ನರಸಿಂಹರಾಜು, ಆರತಿ, ಭಾರತಿ, ಮಂಜುಳಾ, ಸತ್ಯಭಾಮ, ಶಾಂತಮ್ಮ, ಕೆ.ವಿಜಯ, ಪದ್ಮಪ್ರಿಯ, ಕೆ.ಡಿ ನಾಗಪ್ಪ, ಸುದರ್ಶನ್…ಮುಂತಾದ ಭಾವಬಂಧುಗಳನ್ನ ನಮ್ಮ ಮನೆಯವರೇನೋ, ನಮ್ಮ ಬೀದಿಯ ಅಣ್ಣ ತಮ್ಮಂದಿರೇನೋ ಎಂಬಂತೆ ಪರಿಚಯ ಮಾಡಿಕೊಂಡು ಪಕ್ಕದಲ್ಲೇಯೇ ಹಾವು ಹರಿದರೂ ಗಮನಿಸದೇ ಪರದೆ ನೋಡಿ ಆನಂದ ಪಡುತ್ತಿದ್ದೆವು.

    ನಮ್ಮ ಊರೇ ಸಂತೆಬೆನ್ನೂರು. ಸಂತೆಗೆ ಹೆಸರಾದ ಊರು. ಪ್ರತೀ ಗುರುವಾರ ಸಂತೆ. ಸಂತೆದಿನ ಸಿನಿಮಾ ಬದಲಾಗಲೇಬೇಕು. ಸುತ್ತಾ ಹದಿನೆಂಟು ಹಳ್ಳಿಗೆ ನಮ್ಮೂರ ಸಂತೆಯೇ ಆಧಾರ. ಅ ಗುರುವಾರದ ಬೆಳ್ ಬೆಳಿಗ್ಗೆ ನಮ್ಮೂರ ಹಳೆಯ ಬಸ್ಟ್ಯಾಂಡಿನಲ್ಲಿ ಎಡಬಲಕ್ಕಿರೋ ದೊಡ್ಡ ದೊಡ್ಡ ಬೇವಿನನ ಮರಗಳ ಕೊಂಬೆಗಳಿಗೆ ಸಿನಿಮಾ ವಾಲ್ ಪೋಸ್ಟ್ ಹಚ್ಚುತ್ತಿದ್ದರು. ಎದ್ದವನೇ ನಾನು ಹಲ್ಲೂ ಉಜ್ಜದೇ ಬರಿಗೈಯ ಮೋಟಾರು ಸ್ಟಾಟ್ ಮಾಡಿ ಹೊಂಟರೆ ಆ ಬೇವಿನ ಮರದ ಹತ್ತಿರವೇ ನಿಲ್ತಾ ಇದ್ದದ್ದು; ಅದೂ ಅರ‍್ಧ ಕಿ.ಮೀ ನಮ್ಮ ಮನೆಗೆ! ಆ ವಾಲ್ ಪೋಸ್ಟಿಳೀಸಿ ಹಳೆಯ ಹಾಳೆಯ ಮೇಲೆ ಹೊಗೆ ಅನ್ನದ ಗಂಜಿ ಅಥವಾ ಮೈದಾಹಿಟ್ಟಿನ ಗಂಜಿ ಹಾಕಿ ಕಟ್ ಪೀಸ್ ಹಚ್ಚುತ್ತಿದ್ದರೆ ನೋಡಲು ನನ್ನಂಥಾ ಹುಡುಗರ ದಂಡು ಅಲ್ಲಿ ವೃತ್ತಾಕಾರದಿ ಕೂಡಿರ್ತಿತ್ತು!

    ಒಂದು ಪೀಸ್ ಹಚ್ಚಿದರೆ ಒಂದೇ ಅಕ್ಷರ ಕಾಣೋದು. ಅದರ ಆಧಾರದ ಮೇಲೆ ಸಿನಿಮಾ ಹೆಸರ ಗೆಸ್ಸಿಂಗ್ ಆರಂಭ ನಮ್ ನಮ್ಮೋಳಗೇ ಚಾಲು!ಇಡೀ ಪೋಸ್ಟರ್ ಅಂಟಿಸಿ ಅದಕ್ಕೆ ನೀಲಿ ಕಲಿಸಿದ ಬಣ್ಣದಿಂದ ದಿನ ಮೂರು ಆಟ, ಸಮಯ, ಟಾಕೀಸಿನ ಹೆಸರು ಬರೆಯುವಷ್ಟರಲ್ಲಿ ನಾ ಮತ್ತೆ ನನ್ನ ಬರಿಗೈ ಮೋಟಾರು ಬೈಕ್ ಚಾಲು ಮಾಡಿ ಇಡೀ ನಮ್ಮ ಹಟ್ಟಿಗೆ ಇವತ್ತು ಇಂಥಾ ಸಿನಿಮಾ ಹಾಕಿದ್ದಾರಪ್ಪೋ ಅಂತ ಕೂಗಿ ಹೇಳಿ ನಂತರ ಹಲ್ಲು, ಮುಖ, ಬೆಲ್ಲದ ಚಹಾ ಆಂತ ಹೋಗ್ತಾ ಇದ್ದದ್ದು!

    ಜಗತ್ಪ್ರಳಯ ಆದ್ರೂ ನಮ್ಮ ಮೊದಲ ಶೋ ತಪ್ಪುತ್ತಿರಲಿಲ್ಲ. ಹಾಗೆ ನೋಡಿದ ಸಿನಿಮಾಗಳು ಬೇರೆಯವರಿಗೆ ಅದೇನು ಕಲಿಸಿತೋ ನನಗಂತೂ ಕನ್ನಡ ಕಲಿಸಿತು!
    ಕನ್ನಡ? ಸಿನಿಮಾದಿಂದ? ಮೂಗು ಅರಳಿಸಬೇಡಿ ಹೌದು, ನಮ್ಮ ವೆಂಕಟೇಶ್ವರ ಟಾಕೀಸಿನಲ್ಲಿ ಬಂದ ಯಾವ ಸಿನಿಮಾ ಬಿಡದೇ ನೋಡಿ,ಅದರಲ್ಲೂ ಡಾ.ರಾಜ್ ಅವರ ಪ್ರತೀ ಸಿನಿಮಾದಲ್ಲೂ ಅವರ ಅಭಿನಯ,ಆಂಗ್ಲ ಪದ ಬಳಕೆ ಇಲ್ಲದ ವಾಕ್ಯಗಳು, ಸ್ಪಷ್ಟ ಉಚ್ಚಾರ, ದನಿಯ ಏರಿಳಿತ, ನಿರರ್ಗಳ ವಾಗ್ಝರಿ, ಉತ್ತಮ ವಾಕ್ಪಟುತ್ವ ….ಇವೆಲ್ಲವೂ ನನಗೆ ಕನ್ನಡ ಕಲಿತರೆ ಹೀಗೆ ಕಲಿಯಬೇಕು ಅಂತನ್ನಿಸಿ ಸಿನಿಮಾ ಗೀಳಿಗೆ ಬಿದ್ದೆ!

    ಮನೆ ಭಾಷೆ ಉರ್ದುವಾದರೂ ಅಣ್ಣಂದಿರು, ಅಕ್ಕ ಎಲ್ಲ ಕಲಿತದ್ದು ಕನ್ನಡ ಶಾಲೆ, ಕನ್ನಡ ಮಾಧ್ಯಮ. ಆದರೂ ಈಗಾಗಲೇ ‘ಸಾಬರಗನ್ನಡ’ ಅಂತ ಭಾಷೆ ಬಳಕೆ ಅಸ್ತಿತ್ವದಲ್ಲಿತ್ತು. ಅಂದರೆ ‘ಸ’ ಕಾರದ ಪದಗಳಿಗೆ ‘ಇ’ ಕಾರ ಸೇರಿಸಿ ಇಸ್ಕೂಲು, ಸೈಂಕಲ್, ಇಸ್ಟೈಲ್, ಇಸ್ಕ್ರೂ ಡೈವರ್…ಮತ್ತು ತಗಂಡಿ, ಬಂದಿ, ಹೋಗ್ಬಿಟ್ಟಿ..ಗಳ ಪದಗಳು ನನ್ನನ್ನು ಅವಮಾನದ ಕೂಪಕ್ಕೆ ನೂಕಿದ್ದವು! ಆ ಕೂಪದಿಂದ ಸ್ವಲ್ಪ ಮಟ್ಟಿಗೆ ಎತ್ತಿದ ಮಹನೀಯ ಡಾ.ರಾಜ್ ಕುಮಾರ್! ಜೊತೆಗೆ ನಮ್ಮೂರ ಟಾಕೀಸು!

    ಕನ್ನಡ ಕನ್ನಡಿಗರ ಅಸ್ಮಿತೆ, ಕರ್ನಾಟಕ ವಾಸಿಗಳ ಜೀವನಾಡಿ, ಇಲ್ಲಿನ ನೆಲ- ಜಲ- ಆಹಾರ ಸೇವಿಸುವ ಸಕಲರ ಜೀವದ್ಭಾಷೆ. ಅದನ್ನು ಯಾರೂ ಮರೆಯಬಾರದು. ನನ್ನ ತಿಲ ಮಾತ್ರದ ಕನ್ನಡ ಕಲಿಕೆಗೆ ನಮ್ಮ ಸಿನಿಮಾಗಳು ಕಾರಣ ಎಂದಿದ್ದೇನೆ, ಇದು ಒಂದು ಕಾಲದ ಅಭಿಪ್ರಾಯ, ಅಂದಿನ ಭಾಷೆ ಸಂಸ್ಕಾರದ ಚಲನಚಿತ್ರಗಳಾದ್ದರಿಂದ ಮಾತ್ರ. ಇದೇ ಮಾತನ್ನು ಇಂದಿನ ಬಹುಪಾಲು ಸಿನಿಮಾಗಳಿಗೆ ಅನ್ವಯವಾಗುವುದೇ ಇಲ್ಲ.

    ಇಂದಿನ ಮಕ್ಕಳು ಡಾ. ರಾಜ್ ಅವರ ಹತ್ತು ಸಿನಿಮಾಗಳು ಆಕ್ತಿಯಿಂದ ಕೂತು ನೋಡಿದರೆ ಕನ್ನಡ ಸ್ಪಷ್ಟವಾಗಿ ಮಾತಾಡುವುದನ್ನು ಕಲಿಯುವರೇನೋ.. .. ಮತ್ತು ಕೆಲವು ಸಿನಿಮಾ ಮಂದಿ ಅಂದಿನ ಸಿನಿಮಾ, ಅಣ್ಣಾವ್ರ ಸಿನಿಮಾ, ಅಂದಿನ ಸಂಭಾಷಣೆ, ಗೀತರಚನೆ, ಸಂಗೀತ ನೋಡಿದರೆ, ಕೇಳೀದರೆ ಅದೇ ಭಾಷೆ ಪ್ರಯೋಗಕ್ಕೆ, ಕನ್ನಡ ಭಾಷಾ ಶುದ್ಧಿಗೆ ಅಂದಿನ ಸಿನಿಮಾ ಭಾಷೆಯೇ ಪಠ್ಯವಾದೀತೇನೋ….!

    ಸಂತೆಬೆನ್ನೂರು ಫೈಜ್ನಟ್ರಾಜ್ ವೃತ್ತಿಯಿಂದ ಶಿಕ್ಷಕ. ಪ್ರವೃತ್ತಿಯಿಂದ ಕವಿ, ಕಥೆಗಾರ , ಸಾಹಿತಿ.

    ವಿಶ್ವ ಆಹಾರ ದಿನ: ಪಾಲಿಫೆಮಸ್ ಲಾರ್ವಾದಿಂದ ಕಲಿಯಬೇಕಾದ ಒಂದು ಪಾಠ

    ‘ಅತ್ಯಂತ ಹೊಟ್ಟೆಬಾಕ’ ಎಂದು ಗುರುತಿಸಿಕೊಂಡಿರುವ ಪಾಲಿಫೆಮಸ್ ಪತಂಗದ ಮರಿಗಳು ಎಷ್ಟೇ ಪ್ರಮಾಣದಲ್ಲಿ ತಮ್ಮ ಆಹಾರವನ್ನು ತಿಂದರೂ ಒಂದು ಸಲ ತೃಪ್ತಿ ಆದ ನಂತರ ಅವುಗಳು ಮತ್ತೆ ತಿನ್ನಲು ಹೋಗದು. ಆದರೆ…, ಮಾನವನ ಆಸೆ, ದುರಾಸೆಗೆ ಒಂದು ಮಿತಿ ಇದೆಯೇ..?

    ಹೊಟ್ಟೆಬಾಕರಿಗಾಗಿ ಅಲ್ಲಿ ಇಲ್ಲಿ ಕೆಲವೊಂದು ಸ್ಪರ್ಧೆಗಳನ್ನಿಡುವುದುಂಟು. ಇಡ್ಲಿ ಪ್ರಿಯರಿಗೆ  ಇಡ್ಲಿ ತಿನ್ನುವ ಸ್ಪರ್ಧೆ, ಬಾಳೆಹಣ್ಣು ಪ್ರಿಯರಿಗೆ ಬಾಳೆಹಣ್ಣು ತಿನ್ನುವ ಸ್ಪರ್ಧೆ, ಐಸ್ಕ್ರೀಂ, ಉಪ್ಪಿಟ್ಟು…, ಹೀಗೆ. ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ತಿಂದು ಬಹುಮಾನ ಗಿಟ್ಟಿಸಿಕೊಳ್ಳುತ್ತಾರೆ. ಒಂದೇ ಸಲಕ್ಕೆ 60-70 ಇಡ್ಲಿ ತಿಂದು ತೇಗುವ, ನೂರಿನ್ನೂರು ಬಾಳೆಹಣ್ಣುಗಳನ್ನು ತಿಂದು ಜೀರ್ಣಿಸಿಕೊಳ್ಳುವ ಛಲಗಾರರೂ ನಮ್ಮಲ್ಲಿ ಇದ್ದಾರೆ…! ಆದರೆ ಇಲ್ಲೊಂದು ಜೀವಿಯ ಹೊಟ್ಟೆಬಾಕತನ ನೋಡಿದರೆ ರಾಶಿ ರಾಶಿ ಇಡ್ಲಿ, ಬಾಳೆಹಣ್ಣು ತಿನ್ನುವ   ಛಲಗಾರರು ಬಿಡಿ, ಬಂಡಿ ಅನ್ನವನ್ನು ತಿನ್ನುತಿದ್ದ  ಭಕಾಸುರರು  ಕೂಡ ತಿಂದ ಅನ್ನವನ್ನು ಕಕ್ಕಬಹುದು..! 

    86,000 ಪಟ್ಟು ಆಹಾರ ತಿನ್ನುತ್ತದೆ

    ಉತ್ತರ ಅಮೇರಿಕಾದಲ್ಲಿರುವ ‘ಪಾಲಿಫೆಮಸ್ (Polyphemus) ಎನ್ನುವ ಒಂದು ಪತಂಗದ ಮರಿಯು ತತ್ತಿಯಿಂದ ಹೊರಬಂದ ಆರಂಭದ 48 ಗಂಟೆಗಳಲ್ಲಿ, ಅಂದರೆ ಬಾಲ್ಯಾವಸ್ಥೆಯಲ್ಲಿ ತನ್ನ ದೇಹ ತೂಕದ 86,000 ಪಟ್ಟು ಆಹಾರವನ್ನು ತಿನ್ನುತ್ತದೆ!! ಮನುಷ್ಯರಿಗೆ ಹೋಲಿಸಿದರೆ ಇದು ಎಷ್ಟಾಗುತ್ತದೆ ಗೊತ್ತೇ..? 3.17 ಕಿಲೋಗ್ರಾಂ ತೂಕವಿರುವ ಒಂದು ಮಗು 273 ಟನ್ನುಗಳಷ್ಟು ಆಹಾರ ತಿನ್ನುವಷ್ಟಕ್ಕೆ ಸಮ! ಈವರೆಗೆ ಗುರುತಿಸಿರುವ ಒಟ್ಟು 1,60,000 ಪತಂಗ (Moth) ಪ್ರಭೇದಗಳಲ್ಲಿ ಅತ್ಯಂತ ದೊಡ್ಡ ಗಾತ್ರದ ಪತಂಗ ಎಂಬ ಹೆಗ್ಗಳಿಕೆಯೂ ಈ ‘ ಪಾಲಿಫೆಮಸ್’ಗೆ ಇದೆ! ರೆಕ್ಕೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಸುಮಾರು 15 ಸೆಂಟಿಮೀಟರ್ ವಿಸ್ತೀರ್ಣದಷ್ಟು ದೊಡ್ಡದಾಗಿ ಬೆಳೆಯುವ ಪಾಲಿಫೆಮಸ್ ಬಾಲ್ಯಾವಸ್ಥೆಯಲ್ಲಿ ಬೇರೆ ಪತಂಗಗಳಿಗಿಂತ ಹೆಚ್ಚು ಆಹಾರ ಬೇಕಾಗಿರುವುದು ಸಹಜವೇ. ಆದರೆ ದೇಹ ಗಾತ್ರಕ್ಕನುಗುಣವಾಗಿ ಇದು ತಿನ್ನುವ ಆಹಾರದ ಪ್ರಮಾಣ ಮಾತ್ರ ಊಹೆಗೂ ಮೀರಿದ್ದು. ಹಾಗಿದ್ದರೆ,  ಪಾಲಿಫೆಮಸ್ ಪತಂಗದ ಮರಿಯು ಅಷ್ಟೊಂದು ಪ್ರಮಾಣದಲ್ಲಿ ಆಹಾರ ತಿನ್ನುವ ಅದರ ಹುಟ್ಟುಗುಣದ ಗುಟ್ಟೇನು? ಬನ್ನಿ ನೋಡೋಣ. 

    ಪಾಲಿಫೆಮಸ್

    ಕೀಟಗಳ ಜೀವನ ಚಕ್ರದಲ್ಲಿ ಮುಖ್ಯವಾಗಿ ‘ಲಾರ್ವ (Larva) ಮತ್ತು ‘ಪ್ಯೂಪ’ (Pupa) ಎಂಬ ಎರಡು ಹಂತಗಳಿವೆ. ಪ್ಯೂಪ ಹಂತದಲ್ಲಿ ಸ್ವತಂತ್ರವಾಗಿ ಹಾರಬಲ್ಲ ಕೀಟವಾಗಿ ರೂಪುಗೊಳ್ಳಲು ಬೇಕಾದ ದೇಹದ ಭಾಗಗಳೆಲ್ಲಾ ಬೆಳವಣಿಗೆಯಾದರೆ, ಲಾರ್ವ ಹಂತದಲ್ಲಿ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತವೆ. ತಯಾರಿಯ ಒಂದು ಮುಖ್ಯ ಅಂಶವೇ ಸಾಕಷ್ಟು ಆಹಾರವನ್ನು ತಿನ್ನುವುದು. ಏಕೆಂದರೆ, ಮುಂದಿನ ‘ಪ್ಯೂಪ’ ಹಂತ ಕೇವಲ ಬೆಳವಣಿಗೆಗೆ ಮೀಸಲಾಗಿರುವುದರಿಂದ ಈ ಸಮಯದಲ್ಲಿ ಏನನ್ನೂ ತಿನ್ನಲಾಗದು. ಪ್ಯೂಪದ ಬೆಳವಣಿಗೆಯ ಕೊನೆಯ ಹಂತದಲ್ಲಿ ಸ್ವತಂತ್ರ ಕೀಟವಾಗಿ ರೂಪುಗೊಂಡು ಹಾರಿಹೋಗುತ್ತದೆ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ರೂಪ ಪರಿವರ್ತನೆಗೊಳ್ಳುವ (Metamorphosis) ಎಲ್ಲಾ ಕೀಟ ಪ್ರಭೇದಗಳಲ್ಲೂ ನಡೆಯುತ್ತದೆ. ‘ಪಾಲಿಫೆಮಸ್’ ಪತಂಗ ಸಂಪೂರ್ಣ ರೂಪಾಂತರಗೊಳ್ಳುವ ಕೀಟಗಳಲ್ಲಿ ಒಂದು. ಆದರೆ, ಈ ಪತಂಗ ಮಾತ್ರ ಲಾರ್ವ ಹಂತದಲ್ಲಿ ಅತಿ ಹೆಚ್ಚು ಆಹಾರವನ್ನು ತಿನ್ನುವ ಸಾಮರ್ಥ್ಯವನ್ನು ಪಡೆದು ಕೀಟಗಳಲ್ಲಿ ಮಾತ್ರವಲ್ಲ, ಪ್ರಾಣಿ ಪ್ರಭೇದಗಳಲ್ಲೇ ಅತ್ಯಂತ ಹೊಟ್ಟೆಬಾಕ ಎಂದು ಗುರುತಿಸಿಕೊಂಡಿದೆ.

    ಅತ್ಯಂತ ಹೊಟ್ಟೆಬಾಕ

    ಪಾಲಿಫೆಮಸ್ ಪತಂಗದ ಮರಿ ಅತ್ಯಂತ ಹೊಟ್ಟೆಬಾಕ ಎಂಬ ಹೆಗ್ಗಳಿಕೆ ಹೊಂದಿರುವುದೇನು ಸರಿ. ಆದರೆ, ಎಲ್ಲಾ ಪ್ರಾಣಿಗಳಿಗಿಂತ ಭೂಮಿಯಲ್ಲಿ ಉತ್ಪನ್ನವಾಗುವ ಆಹಾರ ಮತ್ತು ಸಂಪನ್ಮೂಲಗಳನ್ನು ಅತಿ ಹೆಚ್ಚು ಕಬಳಿಸುತ್ತಿರುವ ಪ್ರಭೇದವೊಂದಿದೆ, ಅದುವೇ ‘ಹೋಮೋ ಸೆಪಿಯನ್ಸ್’ (Homo sapiens). ‘ಹೋಮೋ ಸೇಪಿಯನ್ಸ್’ ಅಂದರೆ ಕೇಳಿರದ ಯಾವುದೋ ಒಂದು ಪ್ರಾಣಿ ಅಲ್ಲ, ಇದು ಮನುಷ್ಯನಿಗೆ ‘ನೀಡಿರುವ’ ವೈಜ್ಞಾನಿಕ ಹೆಸರು.  ಹೋಮೋ ಸೇಪಿಯನ್ಸ್  ಲ್ಯಾಟಿನ್ ಮೂಲದ ಪದಗಳಾಗಿದ್ದು, ಅದರ ಅರ್ಥ ‘Wise man’ ಅರ್ಥಾತ್, ‘ವಿವೇಕವುಳ್ಳ ಮನುಷ್ಯ’

    ಮನುಷ್ಯರ ಆಹಾರದ ಬೇಡಿಕೆ 

    ಜನಸಂಖ್ಯೆ ಏರುತ್ತಿದ್ದಂತೆ ಮನುಷ್ಯರ ಆಹಾರದ ಬೇಡಿಕೆಯೂ ಏರುತ್ತಿದೆ. ಮಾನವನ ಅವಶ್ಯಕತೆಗಳನ್ನು ಪೂರೈಸುವ ಭೂಮಿಯ ಸಂಪನ್ಮೂಲವನ್ನು ಅಳೆಯುವ ಮಾನದಂಡವನ್ನು ‘ಜೀವಪರಿಸರದ ಹೆಜ್ಜೆಗುರುತು’ (Ecological footfrint) ಎನ್ನಲಾಗುತ್ತದೆ. ಆ ಹೆಜ್ಜೆಗುರುತು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ; ಎಷ್ಟೆಂದರೆ, ಭೂಮಿಯ ನವೀಕರಿಸುವ ಸಾಮರ್ಥ್ಯಕ್ಕಿಂತಲೂ ವೇಗದಲ್ಲಿ ಸಂಪನ್ಮೂಲಗಳು ಮಾನವನ ದುರಾಸೆಯಿಂದಾಗಿ ಬರಿದಾಗುತ್ತಿದೆ. ‘ಜಾಗತಿಕ ಹೆಜ್ಜೆಗುರುತಿನ ಜಾಲ’ (Global Footprint Network) 2007 ರಲ್ಲಿ ಪ್ರಕಟಿಸಿದ ಸಂಶೋಧನಾಧರಿತ ವರದಿಯ ಪ್ರಕಾರ ಭೂಗ್ರಹವು ನವೀಕರಿಸಲು ಬೇಕಾದ ಸಮಯಕ್ಕಿಂತ 1.5 ವೇಗದಲ್ಲಿ ಮಾನವನು ಭೂಸಂಪನ್ಮೂಲಗಳನ್ನು ಸ್ವಪ್ರಯೋಜನಕ್ಕಾಗಿ ಬಳಸುತ್ತಿದ್ದಾನೆ. ‘ಅತ್ಯಂತ ಹೊಟ್ಟೆಬಾಕ’ ಎಂದು ಗುರುತಿಸಿಕೊಂಡಿರುವ ಪಾಲಿಫೆಮಸ್ ಪತಂಗದ ಮರಿಗಳು ಎಷ್ಟೇ ಪ್ರಮಾಣದಲ್ಲಿ ತಮ್ಮ ಆಹಾರವನ್ನು ತಿಂದರೂ ಒಂದು ಸಲ ತೃಪ್ತಿ ಆದ ನಂತರ ಅವುಗಳು ಮತ್ತೆ ತಿನ್ನಲು ಹೋಗದು. ಆದರೆ…, ಮಾನವನ ಆಸೆ, ದುರಾಸೆಗೆ ಒಂದು ಮಿತಿ ಇದೆಯೇ..?

    ಒಂದು ಕಡೆ ಮಾನವ ಭೂಸಂಪನ್ಮೂಲಗಳನ್ನು ಮಿತಿಮೀರಿ ಬಳಸುತ್ತಿದ್ದರೆ, ಅಣಕವೆನ್ನುವಂತೆ ಇನ್ನೊಂದು ಕಡೆ ಜಗತ್ತಿನಾದ್ಯಂತ ಶೇಕಡಾ   50 ರಷ್ಟು ಜನರು ಹಸಿವು ಮತ್ತು ಪೌಷ್ಟಿಕಾಂಶಗಳ ಕೊರತೆಯಿಂದ ಸಾಯುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ತಿಳಿಯುತ್ತದೆ. 2011ರಲ್ಲಿ ವಿಶ್ವ ಬ್ಯಾಂಕ್ ಪ್ರಕಟಿಸಿದ ‘ಹಸಿವಿನ ಜಾಗತಿಕ ಸ್ಯೂಚಂಕ’ದ ಸಮೀಕ್ಷೆಯ ಪ್ರಕಾರ ಭಾರತವು 15ನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಭಾರತ ಸರಕಾರದ ‘ರಾಷ್ಟ್ರೀಯ ನಾಗರಿಕ ಆಹಾರ ಭದ್ರತೆ’ ಯೋಜನೆಯು ನಿಜವಾದ ಫಲಾನುಭವಿಗಳಿಗೆ ತಲುಪುವಂತಾಗಲಿ ಎಂದು ಆಶಿಸೋಣ. 

    ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಘಟಕವು ಪ್ರಕಟಿಸಿರುವ ವರದಿಯ ಪ್ರಕಾರ ಪ್ರಪಂಚದಲ್ಲಿ ಪ್ರತಿ ವರ್ಷ 1.3 ಬಿಲಿಯನ್ ಟನ್ ಆಹಾರವು ಅನಗತ್ಯವಾಗಿ ಪೋಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಪರಿಸರ ಘಟಕವು ಪ್ರತಿವರ್ಷ ಜೂನ್ 5ರಂದು ಜಗತ್ತಿನಾದ್ಯಂತ ಆಚರಿಸುವ ವಿಶ್ವಪರಿಸರ ದಿನಾಚರಣೆ (2013)  ಧ್ಯೇಯವಾಕ್ಯ  ‘ಆಲೋಚಿಸು, ತಿನ್ನು, ಉಳಿಸು”. ಇದರ ಸಂದೇಶ ಇಷ್ಟೇ, ಆಹಾರವನ್ನು ಪೋಲಾಗದಂತೆ ನೋಡಿಕೊಂಡು ಭೂಸಂಪನ್ಮೂಲವನ್ನು ಉಳಿಸೋಣ, ಹಸಿವಿನಲ್ಲಿರುವವರಿಗೆ ನೆರವಾಗೋಣ.

    ವಿಶ್ವ ಆಹಾರ ದಿನ

    ಜಾಗತಿಕ ಹಸಿವನ್ನು ನಿಭಾಯಿಸಲು ಹಾಗೂ   ಪ್ರಪಂಚದಾದ್ಯಂತ ಹಸಿವನ್ನು ನಿರ್ಮೂಲನೆ  ಸದುದ್ದೇಶದಿಂದ  ಪ್ರತಿವರ್ಷ ಅಕ್ಟೋಬರ್ 16 ರಂದು  ‘ವಿಶ್ವ ಆಹಾರ ದಿನ’ ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆಯು 1945 ರಲ್ಲಿ  ಆಹಾರ ಮತ್ತು ಕೃಷಿ ಸಂಘಟನೆಯನ್ನು  (UN-Food and Agricultural Organization)  ಸ್ಥಾಪಿಸಿತು.    ಸ್ಥಾಪನೆಯ  ದಿನಾಂಕದ (ಅಕ್ಟೊಬರ್ 16) ನೆನಪಿಗಾಗಿ  ವಿಶ್ವ ಆಹಾರ ದಿನ ಆಚರಣೆಯನ್ನು ಆಯೋಜಿಸುತ್ತಾ ಬಂದಿದೆ. 

    ಕಾಲಾಮಾನಕ್ಕೆ  ಅನುಗುಣವಾಗಿ ವಿಶ್ವ ಆಹಾರ ದಿನವನ್ನು ಪ್ರತಿ ವರ್ಷ ವಿಭಿನ್ನ ವಿಷಯಗಳೊಂದಿಗೆ ಆಚರಿಸಲಾಗುತ್ತದೆ. ಈ ವರ್ಷದ  ವಿಶ್ವ ಆಹಾರ ದಿನಾಚರಣೆಯ ಕೇಂದ್ರ ವಿಷಯ   “ಬೆಳೆಯಿರಿ, ಪೋಷಿಸಿ, ಉಳಿಸಿಕೊಳ್ಳಿ. ಜೊತೆಯಾಗಿ. ನಮ್ಮ ಕಾರ್ಯಗಳು ನಮ್ಮ ಭವಿಷ್ಯ”.  

    “ಜಗತ್ತಿನಲ್ಲಿಅನೇಕ  ಜನರು ತುಂಬಾ ಹಸಿವಿನಿಂದಿದ್ದಾರೆ,  ಅವರು ರೊಟ್ಟಿಯ ರೂಪದಲ್ಲಿ  ದೇವರನ್ನು  ಕಾಣುತ್ತಾರೆಯೇ ಹೊರತು  ಬೇರೇನೂ ಆಪೇಕ್ಷಿಸುವುದಿಲ್ಲ”;  ಹಸಿದವರಿಗೆ ಸಹಾಯ ಮಾಡುವುದೇ ದೇವರ ಕೆಲಸ”  – ಮಹಾತ್ಮ ಗಾಂಧಿ  ಅವರು ಅಂದು ಹೇಳಿದ ಮಾತು ಇಂದಿಗೂ ಪ್ರಸ್ತುತ.

    Photo courtesy: https://thelogicalindian.com and Photo by Dan Gold on Unsplash

    ಮುಕ್ತಿಯೇ ಪರಮಗುರಿ ಎಂದಾದ ಮೇಲೆ ಅದನ್ನು ಸಾಧಿಸುವ ಮಧ್ಯೆ ಏಕಿಷ್ಟು ಗೊಂದಲ

    ಎಲ್ಲ ಬಂಧನಗಳ ಕಿತ್ತೊಗಿವಿಕೆಯೇ ಮುಕ್ತಿ! ಸ್ವತಂತ್ರತೆಯ ಪರಮಾವಧಿಯೇ ಮುಕ್ತಿ!ಇದು ಹೀಗಿರಬೇಕು,ಅದು ಹೀಗಿರಬೇಕು ಅನ್ನುವ ವಿಧಿ,ವಿಧಾನಗಳ ಇಲ್ಲವಾಗುವಿಕೆಯೇ ಮುಕ್ತಿ! ಅದು ಯಾವುದೇ ತರಹದ ಜಂಜಡಗಳ ಸಂಕೋಲೆಗಳಿಲ್ಲದ ಆನಂದದ ಮಹಾಸಾಗರ! ಕೊಚ್ಛೆ,ಕೊಳಕು,ತೀರ್ಥ ಎಲ್ಲವೂ ಸೇರಿ ಹರಿದು ಸಾಗರ ಸೇರುವ ನೈಸರ್ಗಿಕ ನಿಯಮದಂತೆ,ಜೀವವು ಸಂಸಾರದ ಜಂಜಡಗಳಲ್ಲಿ ಬೆರೆತು,ಈಸಿ,ಜೈಸಿ, ಸೇರಬೇಕಾದ ಮಹಾದಾನಂದದ ಸಾಗರ!

    ಕತ್ತಲು, ಬೆಳಕುಗಳಿಲ್ಲದ, ಸುಖ ದುಃಖಗಳ ಕಲ್ಪನೆಯಿಲ್ಲದ, ಮೇಲು,ಕೀಳು,ಒಳ್ಳೆಯದು,ಕೆಟ್ಟದ್ದು ಅನ್ನುವ ಭ್ರಮಾ,ಬ್ರಾಂತಿ ಇಲ್ಲದ ಪರಂಧಾಮ! ಎಲ್ಲ ಜೀವರಾಶಿಯ ತಾಣವೂ ಅದಾಗಿದ್ದು, ಉಗಮವೂ ಒಂದು ಕಾಲಕ್ಕೆ ಅಲ್ಲಿಂದಲೇ ಮೊದಲ್ಗೊಂಡು, ಅದು ಬೇಸರವಾಗಿ ಪ್ರಾಪಂಚಿಕ ಜೀವನವನ್ನು ಜೀವವು ತಾನೇ ಆಯ್ಕೆಮಾಡಿಕೊಂಡು, ಇಲ್ಲಿಯ ಸಂಕೋಲೆಗಳಲ್ಲಿ ಸಿಕ್ಕಿಹಾಕಿಕೊಂಡು,ಬಿಡುಗಡೆಯ ಮಾರ್ಗವನ್ನು ಕಂಡುಕೊಂಡು ಮತ್ತೆ ಆ ಮಹಾದಾನಂದದ ಕಡೆಗೆ ಪಯಣಿಸುವುದೇ ಜೀವನ!

    ಅಪ್ಪ, ಒಂದು ನನ್ನ ಬಾಲ್ಯದ ಮಧ್ಯಾಹ್ನದ ದಿನ ಜೀವನ,ಮುಕ್ತಿಯ ಬಗ್ಗೆ ಹೀಗೆ ಹೇಳುತ್ತಿದ್ದನ್ನು ತದೇಕ ಚಿತ್ತದಿಂದ ಕೇಳುತ್ತಿದ್ದ ನನಗೆ ಸಾವಿರ ಸಾವಿರ ಹೆಡೆಗಳ ಸರ್ಪ ನನ್ನೆದುರು ಒಮ್ಮೆಲೇ ಪ್ರತ್ಯಕ್ಷವಾದ ಅನುಭವ! ಇದು ಬಾಲ,ಇದು ತಲೆ ಅಂತ ಹೇಳಿದರೂ ಅರ್ಥವಾಗದ ಸ್ಥಿತಿ!

    ಸಂದರ್ಭ ನೆನಪಿಸಿಕೊಂಡು ಹೇಳುವುದಾದರೆ,ಅದು ಮಹಾಭಾರತದ ಅರಣ್ಯಕಾಂಡದ ಪ್ರಸಂಗ. ಸಿಕ್ಕ,ಸಿಕ್ಕ ಮುನಿಗಳನ್ನು,ಸಾಧು,ಸಂತರನ್ನು ಧರ್ಮರಾಯ ಕರೆದು,ಸತ್ಕರಿಸಿ, ಧರ್ಮ,ಜೀವನ, ಮುಕ್ತಿಗಳ ಬಗ್ಗೆ ಕೇಳುತ್ತಿರುತ್ತಾನೆ. ಭೀಮ ಮತ್ತೊಂದು ಕಡೆ ಸೇಡಿನ ಬೆಂಕಿಯಿಂದ ಬೇಯುತ್ತಿರುತ್ತಾನೆ.ತದ್ವಿರುದ್ಧ ತುಮುಲಗಳನ್ನು ವ್ಯಾಸನು ಒಂದೇ ವೇದಿಕೆಯಲ್ಲಿ ಓದುಗರಿಗೆ ಪರಿಚಯಿಸುವ ಪರಿಗೆ ಅಪ್ಪ ತನ್ನ ಮೆಚ್ಚುಗೆ ಸೂಸುತ್ತಿದ್ದರೆ,ನನಗೆ ಬೇರೆಯದೇ ಕಲ್ಪನೆ ನನ್ನ ಚಿಕ್ಕ ಮೆದುಳಲ್ಲಿ ಅಚ್ಚೊತ್ತಿತ್ತು.

    ಎಲ್ಲ ಬಂಧನಗಳನ್ನ ಬಿಡಿಸಿಕೊಂಡು ಪಡೆಯುವ ಮುಕ್ತಿಗೆ ಧರ್ಮ,ಆಚರಣೆಗಳ ಕಟ್ಟಲೆ/ಸಂಕೋಲೆಗಳು ಏಕೆ ಎನ್ನುವ ಪ್ರೆಶ್ನೆ ಆಗಲೇ ಕಾಡಲು ಆರಂಭಿಸಿತ್ತು. ಮೃಗತ್ವದಿಂದ ಮಾನವತ್ವ ಅಂದ್ರೆ ಸಂಕೋಲೆಗಳ ಚಕ್ರವ್ಯೂಹವಾ? ಮೃಗತ್ವ ನೈಸರ್ಗಿಕವಾದದ್ದಾದರೆ,ಮಾನವತ್ವ ನಾವು ಅವಿರ್ಭವಿಸುವುದಾ? ಸ್ವಾಭಾವಿಕವಾದದ್ದನ್ನು ನಿಯಂತ್ರಿಸಿ,ನಿಗ್ರಹಿಸಿ ನಮ್ಮದಲ್ಲ ಅನ್ನುವಂತಾದನ್ನ ಪಡೆಯುವುದು ಎಷ್ಟು ಸರಿ? ಮಾನವತ್ವವೇ ಮನುಷ್ಯನ ಹುಟ್ಟು ಗುಣವಾದರೆ, ದೈವತ್ವಕ್ಕೆ ಪ್ರಯತ್ನಿಸುವುದು ಸರಿಯಾ ಅದೂ ಎಲ್ಲ ಸ್ವಾಭಾವಿಕತೆಗಳನ್ನು ಸಂಕೋಲೆಗಳಿಂದ ಬಂಧಿಸಿ?

    ಪರಮಾತ್ಮನ ಅಂಶವಾದ ಜೀವಿಗಳು,ಮುಕ್ತಿ ಎನ್ನುವ ಪರಂಧಾಮದ ಮೂಲ ನಿವಾಸಿಗಳೇ ಆಗಿದ್ದು, ಪಂಚೇಂದ್ರಿಯಗಳೆಂಬ ಮೂಲ ವೈರಿಗಳೊಡನೆ ಹೋರಾಡುತ್ತಾ,ಅವುಗಳನ್ನು ನಿಗ್ರಹಿಸಿ ಮತ್ತೆ ಆ ಪರಂಧಾಮದ ಕಡೆ ತಲುಪುವ ರೀತಿ ನನಗೆ ವಿಚಿತ್ರ ಕುತೂಹಲ ಕೆರಳಿಸುತ್ತಿತ್ತು. ಆ ಪರಂಧಾಮದ ಮಾರ್ಗಗಳು ಸಾಕಷ್ಟಿದ್ದು, ಪ್ರಪಂಚಾದ್ಯಂತ ಜೀವಿಗಳು ತಮ್ಮದೇ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ತೊಡಗಿದ್ದರೆ,ಮತ್ತೆ ಕೆಲವರು ಹಾಗೆ ತಲೆಕೆಡಿಸಿಕೊಳ್ಳದೆ, ಒಬ್ಬರು ಕಂಡುಕೊಂಡ ಮಾರ್ಗದಲ್ಲಿ ತಮ್ಮ ನಂಬಿಕೆ ಇರಿಸಿ,ಅದರಂತೆ ಅನುಸರಿಸುವುದು,ಆ ಮಾರ್ಗದರ್ಶಕರನ್ನೇ ತಮ್ಮ ಸರ್ವಸ್ವ ಅಂತ ತಿಳಿದು,ಅವರು ಹೇಳಿದ ಹಾಗೆ ನಡೆಯುವುದು ಅನಾದಿಕಾಲದಿಂದಲೂ ನಡೆದು ಬಂದಿದೆ. ಎಲ್ಲ ಮಾರ್ಗದರ್ಶಕರೂ ಒಂದಿಲ್ಲೊಂದು ಆಚರಣೆ,ಕಟ್ಟಳೆ ಹಾಕಿರುವುದು ನನ್ನ ವಿಚಿತ್ರ ಕುತೂಹಲಕ್ಕೆ ಕಾರಣವಾದದ್ದು.

    ಜೀವಶಾಸ್ತ್ರದ ನೈಸರ್ಗಿಕ ನಿಯಮದಂತೆ ಜೀವಿಗಳ ಪ್ರತಿಯೊಂದು ಜೀವಕೋಶ ತಮ್ಮದೇ ಆದ ಕೆಲಸಗಳಿಗಾಗಿ ವಿಕಸತೆ ಹೊಂದಿದೆ. ಬೇಕಾಗುವುದನ್ನು ಮಾತ್ರ ವಿಕಸನಗೊಳಿಸುವಲ್ಲಿ ನಿರತವಾದ ಈ ಕ್ರಿಯೆಯಲ್ಲಿ, ಬೇಡವಾದ್ದು ವಿಕಸನ ಹೇಗಾಯ್ತು,ಏಕಾಯ್ತು? ಮತ್ತು ಬೇಡವಾದ ಈ ವಿಕಸತೆಯನ್ನು ನಿಯಂತ್ರಿಸುವುದೇ ಮುಕ್ತಿಯ ಮಾರ್ಗ ಹೇಗಾಯ್ತು?! ಮುಂದೆ ಜೀವವಿಜ್ಞಾನವನ್ನು ಕಲಿಯುವಾಗ ಇಂತಹ ಯೋಚನೆಗಳು ನನ್ನಲ್ಲಿ ಸುಪ್ತವಾಗಿದ್ದ ಮುಕ್ತಿ,ಮುಕ್ತಿಯಹಾದಿಯ ವಿಷಯಗಳನ್ನು ಮತ್ತಷ್ಟು ಕ್ಲಿಷ್ಟಗೊಳಿಸಿದ್ದವು.

    ನಿನ್ನ ನೀನು ಮರೆತರೇನು ಸುಖವಿದೆ….. ಮತ್ತು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ…. ಅಂದ ಸಾಹಿತಿಗಳ ವಾಕ್ಯಗಳು ನನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದವು. ಸೃಷ್ಠಿಯ ಪ್ರತಿಯೊಂದು ಜೀವಿಯೂ ತನ್ನದೇ ಆದ ಸ್ವಂತಿಕೆ ಹೊಂದಿದೆ. ಸೃಷ್ಟಿಗೆ ನಕಲು ಮಾಡಲು ಆಗಿಲ್ಲ. ಹಾಗಿದ್ದಾಗ ನಾವೇಕೆ ಮತ್ತೊಬ್ಬರ ನಕಲಾಗಬೇಕು ಎಂಬಂತಹ ಪ್ರಾಜ್ಞರ ಮಾತುಗಳು ನನಗೆ ಹಿಡಿಸಿದ್ದವು. ಸ್ವಂತಿಕೆಯನ್ನು ತಮ್ಮ ಎಳೆ ದಿನಗಳಿಂದಲೇ ಕಳೆದುಕೊಂಡು, ನಕಲು ಮಾಡುವುದೇ ಗುರಿ ಅಂತ ತಿಳಿದ ಈಗಿನ ಜನಾಂಗ ಯೌವ್ವನಾವಸ್ಥೆಯಲ್ಲೇ ದಿಕ್ಕುತಪ್ಪಿ, ಮಾನಸಿಕ ರೋಗಿಗಳಾಗುತ್ತಿರುವುದು ನನಗೆ ಸ್ವಂತಿಕೆಯ ಪ್ರೆಜ್ಞೆಯನ್ನು ಮನವರಿಕೆ ಮಾಡಿಸಿತ್ತು.

    ಅಷ್ಟೇ ಅಲ್ಲ ಯಾವುದೇ ಇಂತಹ ಕಟ್ಟು ಕಟ್ಟಳೆಗಳಿಲ್ಲದೆ, ವಿಕಸಿತ ಜೀವಿಗಳ ಕೆಲಸವನ್ನಷ್ಟೇ ಮಾಡಿಕೊಂಡ ಪ್ರಾಣಿಗಳು ಇರುವಷ್ಟು ಸುಖದಿಂದ ಮನುಷ್ಯ ಇಲ್ಲ ಅಂದಮೇಲೆ, ನಾವು ಮುಕ್ತಿಯ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲವಾಗಿಸಿಕೊಂಡು ಬಿಟ್ಟೆವಾ?! ಸ್ವನಿಯಂತ್ರಣ ನಿಸರ್ಗದ ವಿರುದ್ಧವಾಗಿಬಿಟ್ಟಿತಾ? ಇತ್ತ ನೈಸರ್ಗಿಕವಾಗಿ ಬದುಕದೆ, ಅತ್ತ ಮುಕ್ತಿಗಾಗಿ ನಿಯಂತ್ರಣಗಳನ್ನೂ ಪಾಲಿಸದೆ, ಸ್ವಂತಿಕೆ ಕಳೆದುಕೊಂಡವರಾಗಿ ಕಳೆದು ಹೋಗುತ್ತಿದ್ದೇವಾ? ಇಂದಿಗೂ ಪ್ರಾಣಿಗಳು,ಹಲವಾರು ನೈಸರ್ಗಿಕ ಮಡಿಲಲ್ಲೇ ಇರುವ ಬುಡಕಟ್ಟು ಜನಾಂಗದವರು ಇರುವಷ್ಟು ಸಂತೋಷವಾಗಿ ನಾವಿಲ್ಲದಿರುವುದು, ನಾವು ಸವೆಸುತ್ತಿರುವ ದಾರಿಯಲ್ಲಿ ಏನೋ ಎಡವಟ್ಟು ಇದೆ ಅಂತ ಅನ್ನಿಸುತ್ತಿಲ್ಲವಾ?

    ಪ್ರಾಣಿಗಳಲ್ಲಿ,ಅನಾಗರಿಕರಲ್ಲಿ ಇರದಿದ್ದ ಆತ್ಮಹತ್ಯೆ ಮುಕ್ತಿಮಾರ್ಗದಲ್ಲಿ ನಡೆಯುವ ಅಥವಾ ನಡೆಯುತ್ತಿರುವ ನಮ್ಮಲ್ಲಿ ಏಕೆ ಬಂತು? ಆತ್ಮಹತ್ಯೆ ಒಂದು ಉದಾಹರಣೆ ಅಷ್ಟೇ. ತಾನೂ ಬದುಕದೇ, ಸುತ್ತ ಇರುವವರನ್ನೂ ಬದುಕಲು ಬಿಡದಷ್ಟು ಕ್ರೂರಿಯಾಗಿ ಮನುಷ್ಯ ವಿಜ್ಞಾನಿ,ಜ್ಞಾನಿ,ಪೂಜ್ಯ ಅಂತ ಏನೇನೋ ಹೆಸರುಗಳಿಂದ ಕರೆಯಿಸಿಕೊಂಡು ಮೈತುಂಬಾ ಬಟ್ಟೆ,ಚಿನ್ನ ಹಾಕಿಕೊಂಡು ಗಾಳಿಯಲ್ಲಿ ಹಾರಾಡುತ್ತಿದ್ದಾನೆ,ನೀರಲ್ಲಿ ತೇಲಾಡುತ್ತಿದ್ದಾನೆ, ಗ್ರಹಗಳ ಮೇಲೆಲ್ಲ ತನ್ನ ವಸಾಹತು ಸ್ಥಾಪಿಸಿ, ದೇವರನ್ನು ಕಾಣುವ ತವಕದಲ್ಲಿದ್ದಾನೆ!

    ಮನುಷ್ಯ,ಮನುಷ್ಯನಿಗೆ ಇಂದು ಹೆದರುವಷ್ಟು ವಿಕಾಸದ ದಾರಿಯುದ್ದಕ್ಕೂ ಎಲ್ಲೂ ಹೆದರಿಲ್ಲ. ಕ್ರೂರ ಮೃಗಗಳೊಂದಿಗೆ ಬದುಕುವಾಗಲೂ. ಮುಂದುವರೆದ ನಾವು ಯೋಚಿಸದ,ಮಾಡದ ಕೆಲಸಗಳೇ ಇಲ್ಲ. ನಮ್ಮ ಹಸಿವಿನ ಅಗತ್ಯಗಳಿಗೆ ಒಂದು ಕಾಲದಲ್ಲಿ ಪ್ರಾಣಿಗಳನ್ನು ಬೇಟೆ ಆಡಿ ತಿನ್ನುತ್ತಿದ್ದ ನಾವು ಇಂದು ಮತ್ತೊಬ್ಬ ಮನುಷ್ಯನನ್ನು ಬೇಟೆ ಆಡಿ, ನಾವು ಬದುಕುವ ಮಟ್ಟಕ್ಕೆ ಬಂದಿದ್ದೇವೆ! ಪ್ರತಿಯೊಬ್ಬರೂ ಇಂದು ಯಾವುದೋ ಒಂದು ಧರ್ಮದ ಅನುಯಾಯಿಗಳು, ವಿಜ್ಞಾನ ಓದಿಕೊಂಡ ಪ್ರಖಾಂಡರು, ಪ್ರಪಂಚದ,ಸೃಷ್ಟಿಯ,ಜೀವನದ ಎಲ್ಲ ವಿದ್ಯೆಗಳನ್ನೂ ಬಲ್ಲವರು. ಕೆಲವರಂತೂ ಮುಕ್ತಿಗೆ ಇನ್ನೇನು ಹತ್ತಿರ ಇರುವವರು.

    ಪ್ರತಿಯೊಬ್ಬರೂ ಮುಕ್ತಿಯನ್ನರಸಿ, ಅವರವರ ದಾರಿ, ಮಾರ್ಗದರ್ಶಕರ ದಾರಿಗಳಲ್ಲಿ ನಡೆಯುವವರೇ. ಯಾರೊಬ್ಬರೂ ಮತ್ತೊಬ್ಬರ ಕೆಡಕನ್ನು ಕನಸಲ್ಲಿಯೂ ಊಹಿಸಿಕೊಳ್ಳದವರು. ಏನೇ ಸ್ವಲ್ಪ ಕೆಟ್ಟದ್ದು ಉಸಿರಾಡುತ್ತಿದೆ ಅಂತ ಅನ್ನಿಸಿದರೂ ಕಠೋರ ಆಚರಣೆಗಳೊಂದಿಗೆ ನಿಗ್ರಹಿಸಿಕೊಂಡು ದೇವರ ಪ್ರೀತಿಗೆ ಪಾತ್ರರಾಗಿ, ತಮ್ಮ ಸ್ಥಾನಗಳನ್ನು ಮುಕ್ತಿಯ ಪರಂಧಾಮದಲ್ಲಿ ಕಾಯ್ದಿರಿಸಿಕೊಳ್ಳಲು ಮಗ್ನರಾಗಿರುವವರು.ಆದರೂ ಈ ಭೂಮಿ ದಿನದಿನವೂ ನರಕದ ಅರ್ಥವನ್ನು ಹೆಚ್ಚು ಸ್ಪಷ್ಟವಾಗಿ ವ್ಯಕ್ತಗೊಳಿಸುತ್ತಿರುವುದು ಏಕೆ?

    Photo by Simon Migaj on Unsplash

    ತಟ್ಟೆಯೆನ್ನುವ ದೇವಸ್ಥಾನದಲ್ಲಿ ಕಾಣುವ ದೇವರೇ ಅನ್ನ

    ಮಾಸ್ತಿ

    ” ಅನ್ನ ” …… ಇದೊಂದು ಶಬ್ಧ ಕಿವಿಗೆ ಬಿದ್ರೆ ಅದೇನೋ ಒಂದು ಸಂತೃಪ್ತಿ . ಅನ್ನ ಆಹಾರಕ್ಕೂ ಮಿಗಿಲಾದ ಅನುಬಂಧ .ಅಮ್ಮ ಇಲ್ಲದ ಮನೇನ, ಅನ್ನ ಇಲ್ಲದ ಅಡುಗೆ ಮನೇನ ಊಹಿಸಿಕೊಳ್ಳಲೂ ಅಸಾಧ್ಯ . ಹಸಿವು ಅನ್ನೋ ಪ್ರಶ್ನೆಗೆ ಸಮರ್ಪಕವಾದ ಉತ್ತರವೇ ಅನ್ನ .

    ಅನ್ನಂ ಪರಬ್ರಹ್ಮಂ ಅಂತ ಅನ್ನವನ್ನ ಸಾಕ್ಷಾತ್ ಭಗವಂತನಿಗೇ ಹೋಲಿಸ್ತಾರೆ . ಅನ್ನದಾತ ಅಂತ ಬೆಳೆಯೋ ರೈತನ್ನ ಕರೀತಾರೆ . ಅನ್ನಪೂರ್ಣ ಅಂತ ಬಡಿಸೋ ಅಮ್ಮನ್ನ ಹೆಸರಿಸುತ್ತಾರೆ . ಅನ್ನದಾನವನ್ನ ಶ್ರೇಷ್ಠದಾನಗಳಲ್ಲೊಂದಾಗಿ ಪರಿಗಣಿಸ್ತಾರೆ .ಅನ್ನವನ್ನ ಋಣ ಅಂತಾರೆ . ಅನ್ನದ ಬೆಲೆ ತಿಳ್ಕೋ ಅಂತಾರೆ .

    ಅನ್ನವಿಲ್ಲದ ಯಾವ ಭೋಜನವೂ ಊಟ ಅನ್ನಿಸಿಕೊಳ್ಳಲ್ಲ , ಅನ್ನವಿಲ್ಲದ ಯಾವ ಕಾರ್ಯವೂ ಕಾರ್ಯಕ್ರಮವೆನಿಸಿಕೊಳ್ಳುವುದಿಲ್ಲ .

    ” ತಿನ್ನೋ ಅನ್ನದ ಮೇಲೆ ಆಣೆ ಇಟ್ಟು ಹೇಳು ನೋಡೋಣ ” . “ಅನ್ನ ತಿನ್ನೋ ಮಾತು ಆಡಯ್ಯ ” , ” ಹೊಟ್ಟೆಗೆ ಅನ್ನ ತಿಂತಿಯೋ ಇಲ್ಲ ಮಣ್ ತಿಂತಿಯೋ ” . ಹೀಗೆ ಜಗಳಗಂಟರ ಬಾಯಲ್ಲೂ ಅನ್ನದ ವಿಷಯ ಪ್ರಸ್ತಾಪವಾಗುತ್ತದೆ .

    ಒಂದೇ ಮಾತಲ್ಲಿ ಹೇಳಬೇಕೆಂದರೆ ” ತಟ್ಟೆಯೆನ್ನುವ ದೇವಸ್ಥಾನದಲ್ಲಿ ಕಾಣುವ ದೇವರೇ ಅನ್ನ ” .

    ಅಮ್ಮ ಮಗುವನ್ನ ಕಂಕುಳಲ್ಲಿ ಎತ್ತಿಕೊಂಡು ಒಂದು ಪುಟ್ಟ ಬಟ್ಟಲಿನಲ್ಲಿ ಅನ್ನ ತಿಳಿಸಾರನ್ನು ಚೆನ್ನಾಗಿ ಹಿಸುಕಿ ಮುದ್ದೆ ಮಾಡಿ ತಿನ್ನಿಸುವುದರೊಂದಿಗೆ ಶುರುವಾಗುತ್ತೆ ಅನ್ನದ ಜೊತೆ ನಮ್ಮ ಪ್ರಯಾಣ .

    ಸಂಜೆಯಾದರೆ ಮನೆಯಿಂದ ಫೋನ್ ಬರುತ್ತೆ , ಎಷ್ಟೊತ್ತಿಗೋ ಬರ್ತಿಯಾ ಅನ್ನಕ್ಕಿಡ್ಬೇಕು ಅಂತ . ಹೇಳದೇ ಮನೆಗೆ ಹೋದರೆ , ಐದು ನಿಮಿಷ ಅನ್ನಕ್ಕಿಟ್ಬಿಡ್ತೀನಿ ಇರು ಅಂತಾರೆ . ತಟ್ಟೇಲಿ ಅನ್ನ ಬಿಟ್ರೆ ಇದ್ಯಾವಾಗಿಂದ ಕಲ್ತೆ ತಟ್ಟೇಲಿ ಅನ್ನ ಬಿಡೋದು ? ಅಂತಾರೆ .

    ಮನೇಲಿ ಅಪ್ಪ ಬೈದಾಗ ನಾ ಊಟ ಮಾಡಲ್ಲ ಅಂತ ಮುನಿಸಿಕೊಂಡಾಗ , ಅಮ್ಮ ಬಂದು ಬಿಸ್ಬಿಸಿ ಅನ್ನ ಮಾಡಿದೀನಿ ಒಂದು ತುತ್ತು ತಿನ್ನು ಬಾರೊ ಅಂತ ಗೋಗರೀತಾರೆ , ನಾ ಬರಲ್ಲ ಅಂತ ಹಠವಿಡಿದಾಗ , ದೊಡ್ಡವರು ಕೋಪದಲ್ಲಿ ಒಂದೆರೆಡು ಮಾತು ಅಂತಾರೆ ಅಷ್ಟಕ್ಕೆ ಅನ್ನದ ಮೇಲೆ ಕೋಪ ಮಾಡ್ಕೋತಾರ ? ಎದ್ಬಾ ಊಟ ಮಾಡು ಅಂತ ಹೇಳ್ತಾರೆ .

    ನೋಡಿ ಬೇರೆ ಎಲ್ಲವನ್ನೂ ಚಮಚ ಸೌಟು ಜಾಲರ ಅದೂ ಇದೂ ಅಂತೆಲ್ಲಾ ಕರೀತಾರೆ ಅದ್ರೆ ಅನ್ನ ಬಡಿಸೋದನ್ನ ಮಾತ್ರ ಅನ್ನದ ಕೈ ಅಂತಾರೆ . ಅಪರೂಪಕ್ಕೆ ಒಂದು ಹೊತ್ತು ಅಮ್ಮ ಮನೆಯಲ್ಲಿ ಇರದೇ ಹೋದ್ರೂ ಅನ್ನ ಮಾಡಿಟ್ಟು ಹೋಗಿರ್ತಾಳೆ .

    ಅನ್ನ ಸಾರು ತಿಂದು ಅಸಿಡಿಟಿ ಆಗಿದೆ ಅಂತ ಯಾರ್ ಬಾಯಲ್ಲೂ ಕೇಳಿದ ಇತಿಹಾಸಾನೇ ಇಲ್ಲ .ಜ್ವರ ಬಂದಾಗ ಬಿಸಿ ಅನ್ನ ಮೆಣಸಿನ ಸಾರು , ರಸಂ ತಿನ್ನಿ , ಮಜ್ಜಿಗೆ ಅನ್ನ ತಿನ್ನಿ ಅಂದವರೇ ಹೆಚ್ಚು .ಪ್ರಪಂಚ ಸುತ್ಕೊಂಡು ವಾಪಸ್ ಮನೆಗೆ ಹೋಗಿ ತಟ್ಟೆ ಮುಂದೆ ಕೂತು ಅನ್ನ ನೋಡಿದ್ ತಕ್ಷಣ ಅದೇ ಪ್ರಪಂಚ ಅನ್ನಿಸಿಬಿಡುತ್ತೆ .

    ಅನ್ನ ಮಾಡೋದು ಅನ್ನ ಉಂಡಷ್ಟೇ ಸುಲಭ ಅದ್ರೆ ಆ ಪುಟ್ಟ ವಿಧಾನವನ್ನ ಸರಿಯಾಗಿ ಪಾಲಿಸಬೇಕು ಅಷ್ಟೇ . ಎಷ್ಟು ಗ್ಲಾಸ್ ಅಕ್ಕೀಗೆ ಎಷ್ಟು ಗ್ಲಾಸ್ ನೀರು ಇಡಬೇಕು ? ಕುಕ್ಕರ್ ರಬ್ಬರ್ ಸರಿಯಾಗಿ ಹಾಕಿದೀವಾ ? ವೆಯ್ಟ್ ಇಟ್ವಾ ? ಎಷ್ಟು ವಿಸಿಲ್ ಕೂಗಿಸ್ಬೇಕು ? ಹೀಗೆ .

    ಸ್ವಲ್ಪ ನೀರು ಜಾಸ್ತಿ ಅದ್ರೂ ಅನ್ನ ಮುದ್ದೆ ಅಗಿರುತ್ತೆ , ನೀರು ಕಮ್ಮಿ ಅದ್ರೂ ಅನ್ನ ಮುಳ್ಳು ಕಂಡಿಯಂತಾಗಿರುತ್ತದೆ . ಸ್ವಲ್ಪ ಯಾಮಾರಿದ್ರೆ ತಳ ಹಿಡಿದಿರುತ್ತೆ .
    ಪ್ರಪಂಚದಲ್ಲಿ ದೊಡ್ಡ ದೊಡ್ಡ ಅಡುಗೆ ಭಟ್ಟರಿಂದ ಅಡುಗೆ ಕೆಟ್ಟಿರೋ ಉದಾಹರಣೆಯಿದೆ ಆದರೆ ಅಮ್ಮನಿಂದ ಅನ್ನ ಕೆಟ್ಟಿರೋ ಉದಾಹರಣೆ ತುಂಬಾ ವಿರಳ .

    ಇದಲ್ಲದೇ ನಾವು ಸಣ್ಣವರಿದ್ದಾಗ ಮನೆಗೆ ಬಂದ ನೆಂಟರಿಷ್ಟರ ಮಕ್ಕಳ ಜೊತೆ ಅಮ್ಮ ನಮ್ಮನ್ನೂ ಸುತ್ತ ಕೂರಿಸಿಕೊಂಡು ಒಂದು ತಪಲೆ ಅನ್ನ ಸಾರನ್ನು ಕಲಿಸಿ ಬೆಳದಿಂಗಳ ಬೆಳಕಿನಲ್ಲಿ ಒಬ್ಬೊಬ್ಬರಿಗೇ ಕೈ ತುತ್ತು ಹಾಕುತ್ತಿದ್ದಾಗ ನಾವು ಸ್ಪರ್ಧೆಗೆ ಬಿದ್ದವರಂತೆ ತಿನ್ನುತ್ತಿದ್ದೆವಲ್ಲ ಆ ಘಳಿಗೆ ನಿಜಕ್ಕೂ ಅಮೃತಘಳಿಗೆಯೇ .

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಮುದುಕಿ ಹೇಳಿದ ಸರ್ ಎಂ.ವಿ. ಕತೆ – ಸರ್ ಎಂ.ವಿ ತಿಳಿದ ಮುದುಕಿ ಕತೆ

    ಕಳೆದ ತಿಂಗಳು ಸರ್ ಎಂ.ವಿ ಅವರ ಜನ್ಮ ದಿನದಂದು ಕನ್ನಡಪ್ರೆಸ್ .ಕಾಮ್ ನಲ್ಲಿ ಪ್ರಕಟವಾದ ಲೇಖನವೊಂದನ್ನು ಓದಿದ ನಾಡಿನ ಹೆಸರಾಂತ ಕಥೆಗಾರ ಕೆ. ಸತ್ಯನಾರಾಯಣ ಅವರು ತಾವು ಸರ್ ಎಂವಿ ಕುರಿತು ಬಹಳ ಹಿಂದೆ ಬರೆದಿದ್ದ ಕಥೆಯನ್ನು ಈ ತಲೆಮಾರಿನ ಓದುಗರಿಗೂ ತಲುಪಲಿ ಎಂಬ ಆಶಯದೊಂದಿಗೆ ನಮಗೆ ಕಳುಹಿಸಿಕೊಟ್ಟರು. ವೈಎನ್ಕೆ ಅವರು ಕನ್ನಡಪ್ರಭ ಸಂಪಾದಕರಾಗಿದ್ದಾಗ ಈ ಕಥೆ ಅಲ್ಲಿ ಪ್ರಥಮವಾಗಿ ಪ್ರಕಟವಾಗಿತ್ತು.ನಂತರ ಎಸ್ ದಿವಾಕರ ಸಂಪಾದಕತ್ವದಲ್ಲಿ ಹೊರ ಬಂದ ಶತಮಾನದ ಕಥೆಗಳು ಪುಸ್ತಕದಲ್ಲೂ ಈ ಕಥೆ ಸೇರಿತು. ಇದನ್ನು ಆಧರಿಸಿ ೨೦೦೦ರಲ್ಲಿ ದೂರದರ್ಶನದಲ್ಲಿ ಕಿರುಚಿತ್ರವೂ ಪ್ರಸಾರವಾಗಿತ್ತು.


    ಕನ್ನಡದ ಪ್ರಮುಖ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ 1954ರ ಏಪ್ರಿಲ್‌ 21ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸುವರ್ಣ ಪದಕದೊಂದಿಗೆ ಪದವಿ ಪಡೆದು, ಅಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್‌ ರೆವಿನ್ಯೂ ಸರ್ವಿಸ್‌ಗೆ ಸೇರಿದ ಅವರು ಆದಾಯ ತೆರಿಗೆ ಇಲಾಖೆಯಿಂದ ನಿವೃತ್ತರಾಗುವಾಗ ಕರ್ನಾಟಕ ಮತ್ತು ಗೋವಾ ವಲಯದ ಮುಖ್ಯ ಆಯುಕ್ತರಾಗಿದ್ದರು. ಸಣ್ಣಕತೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣ ಬರೆಹ, ವಿಮರ್ಶೆ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಬಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯ ಅವರಿಗೆ 2013ರಲ್ಲಿ ಗೌರವ ಡಾಕ್ಟರೇಟ್‌ ನೀಡಿದೆ.

    .

    (ಕೆಲವು ವರ್ಷಗಳ ಹಿಂದೆ ಊರಿಗೆ ಹೋಗಿದ್ದಾಗ ತಿಳಿದ ಕತೆ ಇದು)

    ನಮ್ಮ ಸೀಮೆಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರು ಬಹಳ ಪ್ರಸಿದ್ಧರು ಎಂದರೆ ಏನೂ ಹೇಳಿದ ಹಾಗಾಗುವುದಿಲ್ಲ. ಬದಲಿಗೆ ಭಗೀರಥ – ಗಂಗೆ ಕತೆಯನ್ನು ನೀವು ಹೇಳಬೇಕಾದರೆ ಸರ್.ಎಂ.ವಿ. ಕತೆಯನ್ನು ಪೀಠಿಕೆಯಾಗಿ ಹೇಳಿ ಭಗೀರಥನ ತಪಸ್ಸು ಪರಿಶ್ರಮವನ್ನು ವಿವರಿಸಿದರೆ ಜನಕ್ಕೆ ಭಗೀರಥನ ಕತೆ ಸರಿಯಾಗಿ ಗೊತ್ತಾಗುತ್ತದೆ ಎಂದರೆ ಸರ್.ಎಂ.ವಿ. ಪ್ರಭಾವ ನಮ್ಮ ಸೀಮೆಯಲ್ಲೆಷ್ಟು ಎಂಬುದು ನಿಮ್ಮ ಊಹೆಗೆ ಬರಬಹುದು.

    ಕನ್ನಂಬಾಡಿ ಕಟ್ಟೆ ಕಟ್ಟಿ ಅದರಲ್ಲಿ ಶೇಖರಿಸಿದ ನೀರಿನ ವಿತರಣೆಗೆ ಮಂಡ್ಯ ಜಿಲ್ಲೆಯ ಉದ್ದಕ್ಕೂ ನಾಲೆ ಕಟ್ಟಿಸುವ ಕೆಲಸಕ್ಕೆ ಸಂಬಂಧಪಟ್ಟ ಹಾಗೆ ಸರ್.ಎಂ.ವಿ. ಊರಿಗೆ ಬಂದದ್ದನ್ನು ಈಗಲೂ ಜನ ನೆನಸಿಕೊಳ್ಳುತ್ತಾರೆ. ಅವರು ನಮ್ಮ ಊರಿಗೆ ಬಂದಾಗ ಬೆಳಿಗ್ಗೆಯಾಗಿತ್ತೋ, ಮಧ್ಯಾಹ್ನವಾಗಿತ್ತೋ ಅನ್ನುವುದು ಕೂಡ ಊರವರ ನೆನಪಿನಲ್ಲಿದೆ. ಪ್ರತಿ ಗ್ರಾಮದ ಮಣ್ಣನ್ನು ಅವರು ಮುಟ್ಟಿ ನೋಡಿ, ಮುಷ್ಠಿಯಲ್ಲಿ ಹಿಡಿದು ಪರೀಕ್ಷೆ ಮಾಡಿ ಈ ಮಣ್ಣು ಈ ಬೆಳೆಗೆ, ಇಂತಹ ಹಣ್ಣಿಗೆ ಎಂದು ಗ್ರಾಮಸ್ಥರಿಗೆ ಹೇಳೋರಂತೆ.

    ಗಾಂಧೀ, ಸುಭಾಷ್, ನೆಹರೂ, ವಿವೇಕಾನಂದ, ಶಿವಾಜಿ, ವಿಶ್ವೇಶ್ವರಯ್ಯ- ಇವರ ಪೋಟೋಗಳು ನಮ್ಮ ಸೀಮೆಯ ಎಲ್ಲ ಅನುಕೂಲಸ್ಥ ಕುಳಗಳ ಮನೆಯಲ್ಲೂ ಇವೆ.ಒಂದೊಂದು ಸಲ ಗಾಂಧೀ ಫೋಟೋ ಇರುವ ಒಂದು ಮನೆಯಲ್ಲಿ ವಿವೇಕಾನಂದರ ಫೋಟೋ ಇಲ್ಲದೆ ಇರಬಹುದು ಶಿವಾಜಿ ಫೋಟೋ ಇರುವ ಮನೆಯಲ್ಲಿ ನೆಹರೂ ಫೋಟೋ ಇಲ್ಲದೆ ಇರಬಹುದು. ಆದರೆ ಎಲ್ಲರ ಮನೆಯಲ್ಲೂ ಸರ್.ಎಂ.ವಿ .ಫೋಟೋ ಮಾತ್ರ ಗ್ಯಾರಂಟಿ. ಅಷ್ಟೇ ಏಕೆ, ಒಕ್ಕಲಿಗರ ಮನೆಗಳಲ್ಲಿ ಪಕ್ಷದ ದಿವಸ ಎಡೆ ಇಟ್ಟಾಗ ಸರ್.ಎಂ.ವಿ ಫೋಟೋದ ಮುಂದೆ ಕೂಡ ಎಡೆ ಇಡುತ್ತಾರೆ. ಶೆಟ್ಟರ ಮನೆಗಳಲ್ಲಿ ದೀಪಾವಳಿ ಸಮಯದಲ್ಲಿ ಲಕ್ಷ್ಮೀ ಪೂಜೆಗೆಂದು ಇರುವ ಲೆಕ್ಕ ಪುಸ್ತಕಗಳ ಜೊತೆಗೆ ಸರ್.ಎಂ.ವಿ. ಫೋಟೋನು ಇಡುತ್ತಾರೆ. ಬ್ರಾಹ್ಮಣರ ಮನೆಗಳಲ್ಲಿ ದೇವರ ಫೋಟೋಗೆ ಇಡುವಂತೆ ಇವರ ಫೋಟೋಗೂ ಗಂಧ, ಕುಂಕುಮ ಇಟ್ಟಿರುವುದನ್ನು ನೀವು ನೋಡಬಹುದು.

    ತಮ್ಮ ಮಕ್ಕಳು ಅವರಷ್ಟೇ ಬುದ್ದಿವಂತರಾಗಲಿ ಅನ್ನೋ ಆಸೆಯಿಂದ ಎಷ್ಟೋ ತಂದೆ ತಾಯಿಗಳು ಇವರ ಹೆಸರನ್ನು ಮಕ್ಕಳಿಗಿಡುವುದುಂಟು. ಅಣ್ಣ-ತಮ್ಮ ಇಬ್ಬರಿಗೂ ಅವರ ಹೆಸರನ್ನೇ ದೊಡ್ಡ ವಿಶ್ವೇಶ್ವರಯ್ಯ, ಚಿಕ್ಕ ವಿಶ್ವೇಶ್ವರಯ್ಯ ಎಂದು ಕರೆಯುವುದೂ ಉಂಟು. ಇಷ್ಟೆಲ್ಲಾ ಇರುವಾಗ ಪ್ರತಿ ಗ್ರಾಮದಲ್ಲೂ ಯುವಕ ಸಂಘಗಳು ಅವರ ಹುಟ್ಟಿದ ಹಬ್ಬನ ಬಹು ವಿಜೃಂಭಣೆಯಿಂದ ಆಚರಿಸೋದರಲ್ಲಿ ಹೆಚ್ಚೇನಿದೆ? ಅವತ್ತು ಶಾಲೆಗಳಿಗೆ ರಜ, ಜಾನುವಾರುಗಳಿಗೆ ಬಿಡುವು, ಶಾಸಕರು, ಸರ್ಕಲ್ ಇನ್ಸ್‌ಪೆಕ್ಟರ್, ಹೆಡೆಮಾಸ್ಟರ್, ಡಾಕ್ಟರ್- ಹೀಗೆ ಎಲ್ಲ ಗಣ್ಯರೂ ಸಭೆಯಲ್ಲಿ ಮಾತನಾಡುತ್ತಾರೆ. ಅವರಲ್ಲಿ ಎಷ್ಟೋ ಜನ ಸರ್.ಎಂ.ವಿ ಯವರನ್ನು ನೋಡದೇ ಇದ್ದರೂ ತಾವೇ ಅವರನ್ನು ಕಣ್ಣಾರೆ ಕಂಡವರಂತೆ, ಮಾತನಾಡಿಸಿದವರಂತೆ ಭಾಷಣ ಮಾಡುತ್ತಾರೆ. ಅವರು ಹೇಳುವ ಮಾತುಗಳಲ್ಲಿ ಸುಳ್ಳು, ಉತ್ಪ್ರೇಕ್ಷೆ ಇದ್ದರೂ, ಇದೆಲ್ಲ ಕೃತಜ್ಞತೆಯಿಂದ, ಪ್ರೀತಿಯಿಂದ, ವಾಂಛೆಯಿಂದ ಹೇಳುವ ಮಾತಾದ್ದರಿಂದ ನಿಜಕ್ಕಿಂತಲೂ ಹೆಚ್ಚು ಇಷ್ಟವಾಗುತ್ತದೆ- ಹೇಳುವವರಿಗೂ, ಕೇಳುವವರಿಗೂ.
    ****
    ಈ ವರ್ಷದ ಹುಟ್ಟಿದ ಹಬ್ಬಕ್ಕೆ ನನ್ನನ್ನೂ ಭಾಷಣಕ್ಕೆ ಕರೆದಿದ್ದರು. ನಾನು ನನ್ನ ಹತ್ತಿರ ಇದ್ದ ಪುಸ್ತಕ, ಪತ್ರಿಕೆಗಳನ್ನೆಲ್ಲ ತಿರುವಿ ಹಾಕಿ ಸರ್.ಎಂ.ವಿ. , ಗಾಂಧಿ, ನೆಹರೂ, ಹನುಮಂತಯ್ಯ, ಮೋತಿಲಾಲ್ ಇಂತಹವರನ್ನೆಲ್ಲ ಭೇಟಿ ಮಾಡಿದಾಗ ಏನೇನು ಮಾತುಕತೆ ನಡೆಯಿತು ಅನ್ನೋದನ್ನೆಲ್ಲ ಪಟ್ಟಿ ಮಾಡಿಕೊಂಡು ಆಕರ್ಷಣೀಯವಾಗಿ ಹೇಳಬೇಕೆಂದು ಲೆಕ್ಕಹಾಕಿದ್ದೆ. ಮೊದಲು ಪ್ರಿನ್ಸಿಪಾಲ್ ಭಾಷಣ, ಆಮೇಲೆ ಮಾಜಿ ಎಂ.ಎಲ್.ಸಿ ದು, ಆಮೇಲೆ ನನ್ನದು, ಹೀಗಿತ್ತು ಭಾಷಣದ ಸರದಿ.

    ಮಾಜಿ ಎಂ.ಎಲ್.ಸಿ. ಭಾಷಣ ಮುಗಿಸ್ತಾ ಇದೀನಿ, ಭಾಷಣ ಮುಗಿಸ್ತಾ ಇದೀನಿ ಅಂತ ಎರಡು ಸಲ ಹೇಳಿದ ಮೇಲು ಇನ್ನು ಭಾಷಣ ಮಾಡ್ತಾನೆ ಇದ್ದರು. ಆವಾಗಲೇ ಈ ಮುದುಕಿ ಮೀಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಬಂದದ್ದು. ‘ಹೋಗಮ್ಮಾ ಹೊರಗಡೆ ನೀನು ನಿನಗೇನು ಕೆಲಸ ಇಲ್ಲಿ’ ಎಂದು ಜನ ಕೂಗಾಡಿ, ಗದರಿಸಿ, ಮಾತಿನಲ್ಲಿ ಅವಳನ್ನು ಹೊರಗಟ್ಟಬೇಕೆಂದುಕೊಂಡಿದ್ದರೂ ಆ ಮುದುಕಿ ಒಳಕ್ಕೆ ಬಂದೇ ಬಿಟ್ಟಿತು. ಸೊಂಟ, ಬೆನ್ನು ಎರಡೂ ಒಂದೇ ಆಗಿಬಿಟ್ಟಿದೆ. ಗೂನು ಅಂತ ಪ್ರತ್ಯೇಕ ಹೇಳುವ ಹಾಗೇ ಇಲ್ಲ. ಕತ್ತನ್ನು ಮೇಲೆತ್ತಿದರೆ ತಾನೇ ಮುಖ ಹೇಗಿದೆ ಅಂತಾ ಹೇಳೋದು. ಸೊಂಟ, ಬೆನ್ನು ಎಲ್ಲಾ ಒಂದೇ ಆಗಿ, ದೇಹದ ಆಕೃತಿ ಮೂರು-ಮೂರುವರೆ ಅಡಿಗೆ ಬಂದುಬಿಟ್ಟಿದೆ. ಚಪ್ಪಟೆ ಬೆನ್ನು ಪ್ರಾಣಿಯ ಮೂತಿಯಂತೆ ಮುಂದೆ ಮಾಡಿದ ತಲೆ ಕಾಣುತ್ತಿದೆ. ಯಾರಿದು ಈ ಮುದುಕಿ-ಇಲ್ಲಿಗೇಕೆ ಬಂತು ಎಂದು ನಾನು ಅಂದುಕೊಳ್ಳುತ್ತಿರುವಾಗಲೇ ಆ ಮುದುಕಿ ಗೊಗ್ಗರು ದನಿಯಲ್ಲಿ ಮಾತಿಗೆ ಶುರು ಮಾಡಿತು. ‘ನಿನಗೇನು ಗೊತ್ತಿರೋದು-ಅವನ ಕತೆ-ನನಗೂ ಗೊತ್ತು. ನಾನೂ ಹೇಳ್ತೀನಿ. ನನಗೆ ಬಹಳ, ಬಹಳ ಉಪಕಾರ
    ಆಗಿದೆ ಅವನಿಂದ. ಹೀಗೇ ಒಂದು ಸಲ ಅವನು ನಮ್ಮ ಊರಿಗೆ ಬಂದು ಪಂಚಾಯಿತಿ ಆಫೀಸಿನಲ್ಲಿ…’ …ಮುದುಕಿ ಬಡಬಡಿಸೋಕ್ಕೆ ಶುರು ಮಾಡೇಬಿಟ್ಟಿತು. ಈಗ ಅದು ತನ್ನ ಎರಡು ಕೈಯನ್ನು ಕುರ್ಚಿಯ ಮೇಲೆ ಊರಿತ್ತು. ಬೋಳುತಲೆ, ಮುಖವೆಲ್ಲ ನೆಲನ ನೋಡ್ತಾ ಇದೆ. ಎಷ್ಟಿರಬಹುದು ವಯಸ್ಸು ಎಪ್ಪತ್ತೈದು, ಎಂಭತ್ತು, ಎಷ್ಟಾದರೂ ಇರಬಹುದು. ಬೋಳುತಲೆ ನೋಡಿದರೆ ಬ್ರಾಹ್ಮಣ ವಿಧವೆಯಿರಬಹುದು ಅನ್ನಿಸಿತು. ಆದರೆ ಕೆಂಪು ಸೀರೆಯಿಲ್ಲವಲ್ಲ. ಕಪ್ಪು ಬಣ್ಣದ ಸೀರೆ ಉಟ್ಟಿದೆ. ಇಲ್ಲ ಸರಿಯಾಗಿ ನೋಡಿದರೆ ಸೀರೆ ಮೈಮೇಲೆ ಹೇಗೆ ಹೇಗೋ ಕುಳಿತಿದೆ, ಅಷ್ಟೆ.

    ಮಾಜಿ ಎಂ.ಎಲ್.ಸಿ ಕೂಡ ಕೂಗಿದರು. ‘ ಏ ಭಾಗಮ್ಮ, ನೀನು ಮನೆಗೆ ಹೋಗು ನಿನಗೇನು ಕೆಲಸ ಇಲ್ಲಿ?’ ಜನ ಕೂಡ ‘ಹೋಗು ಹೋಗು, ಹೊರಗಡೆ ಹೋಗು’ ಅಂತ ಗದರಿಸ್ತಾ ಇದ್ದರೂ ಆ ಮುದುಕಿ ನಿಂತಲ್ಲೇ ನಿಂತಿತ್ತು. ಸ್ವಲ್ಪ ಹೊತ್ತಾದ ಮೇಲೆ ಜನಾನೆ ಹೋಗಲಿ ಸುಮ್ಮನೆ ನಿಂತುಕೋ, ಮಾತಾಡಬೇಡ’ ಅಂತ ಹೇಳಿ ತಾವೇ ಸುಮ್ಮನಾದರು. ಮುದುಕಿ ಹಾಗೇ ನಿಂತುಕೊಂಡಿತ್ತು. ಆದರೆ ಯಾರಾದರೂ ಮಾತಾಡುವಾಗ ಮಧ್ಯದಲ್ಲಿ ಅದು ಕೂಡ ಇದ್ದಕ್ಕಿದ್ದಂತೆ ಮಾತಾಡೋಕೆ ಶುರು ಮಾಡಿಬಿಡುತ್ತಿತ್ತು. ತಿರುಗ ಜನ ಗದರಿಸಿ ಮುದುಕಿನ ಮತ್ತೆ ಸುಮ್ಮನಾಗಿಸುವರು. ಹೀಗೆ ಸಮಾರಂಭ ಮುಗಿಯಿತು. ಮುದುಕಿ ಮಾತ್ರ ಉದ್ದಕ್ಕೂ ಹಾಗೇ ನಿಂತಿತ್ತು.

    ನನ್ನ ಭಾಷಣದಲ್ಲಿ ನನಗೆ ಆಸಕ್ತಿ ಉಳಿಯಲಿಲ್ಲ. ಮನಸ್ಸೆಲ್ಲಾ ಮುದುಕಿಯ ಬಗ್ಗೆ ಆದರೂ ನನ್ನ ಭಾಷಣ ಚೆನ್ನಾಗಿತ್ತೆಂದು, ಗಾಂಧಿಗೆ ನೆಹರೂಗೆ ಕೂಡ ಸರ್. ಎಂ. ವಿ. ಕೊಟ್ಟ ಉತ್ತರ, ಹಾಕಿದ ಪಾಯಿಂಟ್ ಬಹಳ ಚೆನ್ನಾಗಿತ್ತೆಂದು ಜನರೆಲ್ಲಾ ಹೇಳಿದರು. ನನಗೆ ಭಾಷಣ ಸರಿಯಾಗಿ ಮಾಡಲು ಬರುವುದಿಲ್ಲ, ಮಾತುಗಳನ್ನು ನುಂಗಿ ನುಂಗಿ ಮಾತಾಡ್ತೀನಿ ಅಂತ ರೇಗಿಸುವ ನನ್ನ ಹೆಂಡತಿ ಕೂಡ ಇವತ್ತು ತುಂಬಾ ಸ್ಪಷ್ಟವಾಗಿ ಮಾತಾಡಿದಿರಿ ಅಂತ ಹೊಗಳಿದಳು. ನನಗೇನೆ ಯಾವುದರಲ್ಲೂ ಅಷ್ಟೊಂದು ಮನಸ್ಸಿರಲಿಲ್ಲ, ಮುದುಕಿ ನೋಡಿದ ಮೇಲೆ.

    ನಾನೇ ನನ್ನ ಹೆಂಡತಿಯ ಜತೆ ಹೋಗಿ ಪರಿಚಯ ಮಾಡಿಕೊಂಡು, ಮುದುಕಿನ
    ಮಾತಾಡಿಸಿದೆ. ತನ್ನ ಕತೇನ ಅದು ಬಹು ಚೆನ್ನಾಗಿ ಹೇಳಿಕೊಂಡಿತು. ಯಾವುದೋ ಕಾಲದ ಯಾವುದೋ ಪುರಾಣದ ಕತೆಯಂತೆ. ಮುದುಕಿ ಹೇಳಿದ ಕತೆ ಜೊತೆಗೆ ಇರಲಿ ಅಂತ ಇನ್ನು ನಾಲ್ಕು ಜನನ್ನ ವಿಚಾರಿಸಿದೆ. ಈಗ ಅದನ್ನೇ ಮುಂದೆ ಹೇಳಿರುವುದು.
    ****
    ವಿಶ್ವೇಶ್ವರಯ್ಯನವರನ್ನು ನೋಡಿದಾಗ ಭಾಗಮ್ಮ ಒಬ್ಬ ವಿಧವೆ. ನಾಲ್ಕಾರು ಮನೆಗಳಲ್ಲಿ ಸುತ್ತು ಕೆಲಸ, ಸೂರುಕೆಲಸ ಅಂತ ಮಾಡಿ ಜೊತೆಗೆ ಆ ಮನೆ ಮಕ್ಕಳ, ಮೊಮ್ಮಕ್ಕಳ ಬಾಣಂತನ, ಹೆರಿಗೆ, ಅಭ್ಯಂಜನ, ಸ್ನಾನ- ಹೀಗೆ ಎಲ್ಲದರ ಪಾರುಪತ್ಯನೂ ಅವಳೇ ನೋಡಿಕೊಳ್ಳುತ್ತಿದ್ದಳು. ಅಷ್ಟೇ ಆಗಿದ್ದರೆ ಭಾಗಮ್ಮನಂತೋರು ನೂರಾರು ಜನ ಅದೇ ಊರಲ್ಲಿ ಇದ್ದರು. ಅವರ ಹಾಗೆ ಭಾಗಮ್ಮನು ವಿಶ್ವೇಶ್ವರಯ್ಯನವರನ್ನು ನೋಡಬೇಕಾಗ್ತಿರಲಿಲ್ಲ.

    ಆದರೆ ಭಾಗಮ್ಮನದು ಸಿಂಹಾಸನದ ಮೇಲೆ ಕುಳಿತು ಗುಂಡಿಗೆ ಬಿದ್ದವರ ಅದೃಷ್ಟ ಭಾಗಮ್ಮನ ಮದುವೆಯಾದಾಗ ಅವಳ ಗಂಡ ತಿಪ್ಪಯ್ಯ ಸ್ಥಿತಿವಂತನೆ. ಊರಲ್ಲೇ ಅಲ್ಲದೇ ಸುತ್ತಮುತ್ತಲಿನ ನಾಲ್ಕಾರು ಹಳ್ಳಿಗಳಲ್ಲಿ ಹೊಲ, ತೋಟ ಇಟ್ಟುಕೊಂಡಿದ್ದವನು. ಅದಷ್ಟನ್ನೇ ನೋಡಿಕೊಂಡಿದ್ದರೂ ಅವನು, ಭಾಗಮ್ಮ, ಅವನೆರಡು ಗಂಡು ಮಕ್ಕಳು ಬೆಳಿಗ್ಗೆಯಿಂದ ಸಂಜೆ ತನಕ ತುಪ್ಪ ನೆಕ್ಕಿಕೊಂಡೆ ಬದುಕಬಹುದಾಗಿತ್ತು. ಆದರೆ ತಿಪ್ಪಯ್ಯನಿಗೆ ಊರೋರ ದನವೆಲ್ಲ ಕಾಯೋ ಹುಚ್ಚು. ತನ್ನ ಆಸ್ತಿ ಜೊತೆಗೆ, ತನ್ನ ಆಸ್ತಿ ಇದ್ದ ಊರವರ ಹೊಲ, ತೋಟ, ಜಮೀನು, ಮನೆ ಎಲ್ಲದರ ತರಲೇನು ತಿಪ್ಪಯ್ಯನಿಗೆ ಬೇಕು. ಯಾರ ಜಮೀನು ಯಾರಿಗೆ ಅಡವಿಡಸಬೇಕು, ಯಾವ ಪತ್ರ ಮೈಸೂರಿನಲ್ಲಿ ರಿಜಿಸ್ಟರ್ ಆಗಬೇಕು, ಯಾವ ಪತ್ರ ಮದ್ದೂರಿನಲ್ಲಿ ರಿಜಿಸ್ಟರ್ ಆದರೆ ಸಾಕು, ಯಾರ ಮನೆಗೆ ಎತ್ತಿನ ಜೊತೆ ತರೋಕ್ಕೆ ಅವರ ಜೊತೆ ತಾನೂ ಎಡಿಯೂರ ಜಾತ್ರೆಗೆ ಹೋಗಬೇಕು, ಹೊಸದಾಗಿ ಕಟ್ಟಿಸಿದ ಮೈಸೂರು ಅರಮನೆಯ ಕಂಟ್ರಾಕ್ಟ ಗಿರಿಯಲ್ಲಿ ಯಾರ್ಯಾರು ಎಷ್ಟೆಷ್ಟು ದುಡ್ಡು ತಿಂದು ಹಾಕಿದರು ಎಲ್ಲಾನು ಅವನಿಗೆ ಬೇಕು. ಇವರ ಆಸ್ತಿ ಅವರ ಕೈಗೆ ಅವರ ಆಸ್ತಿ ಇವರ ಕೈಗೆ ಬದಲಾಯಿಸುವ ಹುರುಪಿನಲ್ಲಿ ಇವನ ಆಸ್ತಿಯೂ ಕೂಡ ಆ ಕೈ, ಈ ಕೈ ಬದಲಾಯಿಸುವುದು. ಅಡ ಇಟ್ಟು ಜಮೀನಿನ ಮೇಲೆ ಸಾಲ ತೆಗೆದು, ಅದನ್ನು ಬಡ್ಡಿಗೆ ಕೊಟ್ಟು, ಸಾಲ ತೆಗೆದುಕೊಂಡವರು ವಾಪಸ್‌ಕೊಡದೆ ಜಮೀನ್‌ನ ವಾಪಸ್ ಬಿಡಿಸಿಕೊಳ್ಳಕ್ಕಾಗದೆ ಅದಕ್ಕೆ ಭಾಗಮ್ಮನ ಜೊತೆ ಜಗಳ ಕಾದು, ಅವಳ ಒಡವೆ ಅಡ ಇಟ್ಟು-ಒಂದೇ ಎರಡೇ, ಅಷ್ಟಾದರೂ ಇನ್ನೂಬ್ಬರ ವ್ಯವಹಾರದ ಪರಭಾರೆ ಹುಚ್ಚು ಕಡಿಮೆಯಾಗುತ್ತಿರಲಿಲ್ಲ. ಅಗತ್ಯ ಇರಲಿ, ಇಲ್ಲದೇ ಇರಲಿ ಸುತ್ತಮುತ್ತಲ ಹಳ್ಳಿಯ ಯಾವುದೇ ಜಮೀನಿನ ಮನೆಯ ಕ್ರಯದ, ಅಡವಿನ ರಿಜಿಸ್ಟ್ರಿ ಎಂದರೆ ಇವನೂ ಕೂಡ ಅವರ ಜೊತೆ ಹೊರಟುಬಿಡೋನು. ಭಾಗಮ್ಮನ ತವರು ಕಡೆಯವರಿಗೆ ತಿಪ್ಪಯ್ಯನ ವ್ಯವಹಾರ, ಓಡಾಟ ಯಾವುದೂ ಇಷ್ಟವಾಗುತ್ತಿರಲಿಲ್ಲ. ಭಾಗಮ್ಮನ ಅಣ್ಣನ ಹೆಂಡತಿನೋ ತುಂಬಾ ಕೆಂಪು ಬಣ್ಣದೋಳು. ಜೊತೆಗೆ ಅವಳ ತವರು ಕಡೆಯೋರು ತುಂಬಾ ಸ್ಥಿತಿವಂತರು ಬೇರೆ. ಭಾಗಮ್ಮನ್ನ ಸೀಟ ಹಾಕುತಿರಲೂ ಇಲ್ಲ.ಅಷ್ಟೇ ಅಲ್ಲ, ಭಾಗಮ್ಮನ ಅಣ್ಣ ಶ್ರೀನಿವಾಸನ ಪ್ರೀತಿ, ಅಕ್ಕರೆ, ಅಪ್ಪಿ ತಪ್ಪಿ ಕೂಡ ತಂಗಿ ಕಡೆ ಹರಿಯದ ಹಾಗೆ, ಅವನನ್ನು ತನ್ನ ಒನಪು ವೈಯ್ಯಾರದ ನಿಯತ್ತಿನಲ್ಲಿಟ್ಟಿರೋಳು. ಹೀಗಾಗಿ ತಿಪ್ಪಯ್ಯ ಶ್ರೀನಿವಾಸಯ್ಯನ, ಭಾಗಮ್ಮನ ತವರು ಮನೆಯೋರನ್ನ ಕಿಚಾಯಿಸಿ ಉಡಾಫೆ ಮಾತನಾಡಿದಾಗ ಭಾಗಮ್ಮನೇ ಸುಮ್ಮನಾಗಬೇಕು. ತಿಪ್ಪಯ್ಯ ತನ್ನ ವ್ಯವಹಾರನ ಮುಂದುವರಿಸಿಕೊಂಡು ಹೋಗುಬೇಕು, ಭಾಗಮ್ಮನಿಗೆ ಅದು ಇಷ್ಟ ಇರಲಿ, ಇಲ್ಲದೇ ಇರಲಿ.

    ಊರವರೆಲ್ಲರ ದನಾನ ಕಾಯುವ ತಿಪ್ಪಯ್ಯನ ತರಲೆಗಳು ಎಷ್ಟಿತ್ತೆಂದರೆ ಅವನಿಗಿದ್ದ ಊರಿನ ಪ್ರೈಮರಿ ಸ್ಕೂಲಿನ ಮೇಷ್ಟರ ಕೆಲಸನು ಸರಿಯಾಗಿ ಮಾಡ್ತಾ ಇರಲಿಲ್ಲ. ತನ್ನ ವ್ಯವಹಾರದ ಹುಚ್ಚು, ಓಡಾಟ ಇವುಗಳೆಲ್ಲದರ ಮುಂದೆ ನಾಲ್ಕು ಅಕ್ಷರನ ದಿನವೆಲ್ಲ ತಿದ್ದಿಸೋದು, ಪುಣ್ಯಕೋಟಿ ಕತೆ ಹೇಳೋದೇನು ಮಹಾ ಎನಿಸಿ ಯಾರು ಬೇಕಾದ್ರು ಅದನ್ನ ಮಾಡಬೋದಲ್ಲವೆ ಅಂತಾ ದುರ್ಗದ ಕಡೆಯಿಂದ ಒಬ್ಬ ಬ್ರಾಹ್ಮಣನ್ನ ತಂದು ಮೇಷ್ಟರಗಿರಿನ ತನ್ನ ಪರವಾಗಿ ಮಾಡೋಕೆ ಇಟ್ಟಿದ್ದ. ತಿಪ್ಪಯ್ಯ ಸಕಲ ಭೂಭಾರಗಳನ್ನು ಹೊತ್ತುಕೊಂಡು ಊರೂರು ತಿರುಗುತ್ತಾ ಇದ್ದರೆ ಅವನ ಪರವಾಗಿ ಆ ಬ್ರಾಹ್ಮಣನೇ ಮೇಷ್ಟರಗಿರಿ ನಡಸೋನು. ಊರಲ್ಲಿದ್ದಾಗ, ಮನಸ್ಸು ಅನ್ನೋದು ಬಂದಾಗ ಆರಕ್ಕೋ, ಮೂರಕ್ಕೋ ಒಂದು ಸಲ ತಿಪ್ಪಯ್ಯ ಸ್ಕೂಲು ಕಟ್ಟೆ ಹತ್ತೋನು. ಒಟ್ಟಿನಲ್ಲಿ ತಿಪ್ಪಯ್ಯ ಹೀಗೆ ತುಂಬಿದ ಹಾಗೆ ತುಂಬಿಕೊಂಡು ಓಡಾಡೋ ಹಾಗೆ ಕಾಣೋನು. ಭಾಗಮ್ಮನಿಗೂ ಹಾಗೇ ಅನಿಸ್ತಾ ಇದ್ದದರಿಂದ ಅವಳು ಪೀಡಿಸೋಕೆ, ಮಾಡಿಸೋಕೆ ಹೋಗ್ತಾ ಇರಲಿಲ್ಲ. ಒಂದು ಸಲ ಮೈಸೂರಿಗೆ ಯಾರದೋ ಕ್ರಯ ಪತ್ರದ ರಿಜಿಸ್ಟ್ರಿಗೆ ಹೋಗಿದ್ದ ತಿಪ್ಪಯ್ಯ ಅಲ್ಲಿಂದಲೇ ಫರಂಗಿ ಗಡ್ಡೆ ಜ್ವರ ತಗೊಂಡು ಬಂದು ಊರಿಗೆ ವಾಪಸ್ ಬಂದ ಮೂರೇ ದಿವಸಕ್ಕೆ ಸಾಯದೇ ಹೋಗಿದ್ದರೆ…

    ಅಣ್ಣ ಶ್ರೀನಿವಾಸ ಮುಂದಿನ ಬೀದೀಲಿ ಇದ್ದರೂ ಅತ್ತಿಗೆ ವಯ್ಯಾರಕ್ಕೆ, ಒನಪಿಗೆ ಬಹಳ ನಿಯತ್ತಿರೂ ಮನುಷ್ಯ. ಅತ್ತಿಗೆ ಊರವರಿಗೆಲ್ಲ ನಾದಿನಿ ಅದೃಷ್ಟನ ಕತೆ ಮಾಡಿ, ಕತೆ ಮಾಡಿ ಊರವರಿಗೆಲ್ಲ ಒಪ್ಪಿಸ್ತಾ ಇದ್ದಾಳೆ. ಮಕ್ಕಳನ್ನೇನೋ ಭಾಗಮ್ಮ ಬೀದಿಗೆ ಬಿಟ್ಟಳು. ಅವು ಗಂಡು ಮಕ್ಕಳಾದ್ದರಿಂದ ದೇವಸ್ಥಾನದ ಚರವು, ಇಡಗಾಯಿ ತುಂಡು ಚೂರು, ಸಮಾರಾಧನೆ ಕೊನೆ ಪಂಕ್ತಿ ಊಟ ಅದೂ ಇದೂ ಮಾಡಿಕೊಂಡು ಬೆಳೀತಾ ಇದ್ದವು. ಭಾಗಮ್ಮ ಮೊದಲು ಒಂದು ಮನೆ ಕೆಲಸ , ಆಮೇಲೆ ಇನ್ನೊಂದು ಮನೆ ಕೆಲಸ ಅಂತ ಶುರು ಮಾಡಿಕೊಂಡು ಕೊನೆ ಕೊನೆಗೆ ತನ್ನ ತವರ ಸಂಬಂಧದ ಕಡೆ ಬಿಟ್ಟು ಬಾಕಿ ಮನೆ ಕಡೆ ಎಲ್ಲ ಕೆಲಸ ಮಾಡೋಕೆ ಶುರು ಮಾಡಿದಳು. ತಿಪ್ಪಯ್ಯ ಒಂದು ತರಕ್ಕೆ ಎಲ್ಲರನ್ನು ಹಚ್ಚಿಕೊಂಡಿದ್ದರೆ, ಭಾಗಮ್ಮ ಇನ್ನೊಂದು ತರಕ್ಕೆ ಎಲ್ಲರನ್ನು ಹಚ್ಚಿಕೊಂಡಳು.

    ಒಂದಾರು ವರ್ಷನೋ, ಎಂಟು ವರ್ಷನೋ ಎಲ್ಲ ಹೀಗೇ ನಡೀತಿತ್ತು. ಭಾಗಮ್ಮನ ಬದುಕು ಇರೋದು ಹೀಗೆ ಅಂತ ಅವಳು, ಊರನೋರು ಎಲ್ಲ ಒಪ್ಪಿಕೊಂಡಾಗಿತ್ತು. ಒಂದು ದಿವಸ ಮಧ್ಯಾಹ್ನ ಕರಿಕೋಟು, ಬಿಳಿಪೇಟ, ಕಚ್ಚೆ ಪಂಚೆ ಹಾಕಿಕೊಂಡು ಅಮೀನ ಬಂದು ಭಾಗಮ್ಮನ ಬಾಡಿಗೆ ಮನೆ ಜಗುಲಿ ಮೇಲೆ ಕೂತುಕೊಂಡಾಗಿನಿಂದ ಕತೇನೇ ಬದಲಾಯಿಸಿತು.

    ಅಮೀನ ತಿಪ್ಪಯ್ಯನಿಗೆ ಕೈ ಸಾಲ ಅಂತಾ ಎಪ್ಪತ್ತೈದು ರೂಪಾಯಿ ಕೊಟ್ಟಿದ್ದನಂತೆ. ತಿಪ್ಪಯ್ಯ ಸಾಯೋ ಹೊತ್ತಿಗೆ ಅವನಿಗೆ ಚಿತ್ರದುರ್ಗದ ಕಡೆಗೆ ವರ್ಗವಾಗಿ ಹೋಯಿತಂತೆ. ಅಲ್ಲಿಂದಲೇ ಹತ್ತಾರು ಕಾಗದ ಬರೆದರೂ ತಿಪ್ಪಯ್ಯನ ಕಡೆಯಿಂದ ಉತ್ತರ ಬರಲೇ ಇಲ್ಲ. ಪರಿಚಯಸ್ಥರ ಕೈಲಿ ಹೇಳಿ ಕಳಿಸಿದರೂ ಮಾರುತ್ರ ಸಿಗಲಿಲ್ಲ. ಕೊನೆಗೆ ತಿರುಗ ಅಮೀನನಿಗೆ ಶ್ರೀರಂಗಪಟ್ಟಣದ ಕೋರ್ಟಿಗೆ ವರ್ಗವಾದ್ದರಿಂದ ಊರಿಗೇ ಹುಡುಕೊಂಡು ಬಂದಿದ್ದ. ತಿಪ್ಪಯ್ಯ ಸತ್ತಿದ್ದು ಗೊತ್ತಾಗಿದ್ದರೂ ಅವನ ಮನೆ ಕಡೆಯಿಂದ ಏನಾದರೂ ವಸೂಲು ಮಾಡಬೇಕು ಅನ್ನೋ ಲೆಕ್ಕಾಚಾರದಲ್ಲಿ ಮೊದಲು ಭಾಗಮ್ಮನ ಅಣ್ಣ ಶ್ರೀನಿವಾಸಯ್ಯನ ಮನೆಗೆ ಹೋಗಿ ಮುಖಕ್ಕೆ ಪೂಜೆ ಮಾಡಿಕೊಂಡು ಅಲ್ಲಿ ಚೆನ್ನಾಗಿ ಬೈಸಿಕೊಂಡದ್ದರಿಂದ ತಿಪ್ಪಯ್ಯನ ಸಂಸಾರದ ಕೈಯಿಂದಲೇ ಏನಾದರೂ ಸರಿ ಬಾಕಿ ವಸೂಲಿ ಮಾಡಲೇಬೇಕು ಅನ್ನೋ ನಿರ್ಧಾರವನ್ನು ಗಟ್ಟಿ ಮಾಡಿಕೊಂಡಿದ್ದ.

    ಭಾಗಮ್ಮ ಮನೇಲಿ ಇರಲೇ ಇಲ್ಲ. ಇವನ ವೇಷಭೂಷಣ, ಮುಖ ಚಹರೆ, ಗತ್ತು ಎಲ್ಲ ನೋಡಿದೋರು ಸರಪರ ಅಂತ ಓಡಾಡಿ ಭಾಗಮ್ಮನ ಕರಕೊಂಡು ಬಂದರೂ ಅಮೀನ ಜಗಲಿ ಮೇಲೆ ಮರಿ ದೊರೆ ತರ ಕೂತಿದ್ದ. ಮನೆ ಹತ್ತಿರ ಬಂದವಳೇ ಭಾಗಮ್ಮ ಇವನ್ನು ನೋಡಿದರೂ ನೋಡದೇ ಇದ್ದ ಹಾಗೆ ಒಳಗಡೆ ಹೋಗಿ ಸೇರಿಕೋಂಡಳು. ಅಮೀನನೆ ಮಾತಿಗೆ ಶುರು ಮಾಡಿದ . ಇಷ್ಟೋತ್ತಿಗಾಗಲೇ ಸುತ್ತ ನಾಲ್ಕಾರು ಜನ ಸೇರಿದ್ದರು. ಸ್ಪಲ್ಪ ಅನೂಕೂಲಸ್ಥರಾಗಿದ್ದೋರು, ಕುಳ ಅಂತ ಅನ್ನಿಸಿಕೊಂಡೋರು ಅಮೀನನ್ನ ಬಹುವಚನದಲ್ಲಿ ಮಾತಾಡಿಸಿ ಗೌರವ ಸೂಚಿಸ್ತ ಜಗುಲಿ ಮೇಲೆ ಅಮೀನನ ಎದುರಿಗೆ ಕುಳಿಕೊಂಡುಬಿಟ್ಟರು.

    ಅಮೀನ ಹೇಳಿದ್ದನ್ನೆಲ್ಲಾ ಭಾಗಮ್ಮ ಕಿವಿಯಾರ ಮನಸಾರ ಕೇಳಿಸಿಕೊಂಡಳು. ಅವನು ಸುಳ್ಳು ಹೇಳ್ತಿದ್ದಾನೆ ಅಂತ ಏನೂ ಅನಿಸಲಿಲ್ಲ ಅವಳಿಗೆ. ಅದೆಷ್ಟೋ ವ್ಯವಹಾರ ಮಾಡಿ ಕೈ ಮೈ ಎಲ್ಲ ಸುಟ್ಟುಕೊಂಡಿದ್ದ ಅವಳ ಗಂಡ ಇದನ್ನು ತಾನೆ ಯಾಕೆ ಮಾಡಿರೋಲ್ಲ ಅಂತ ಅನುಮಾನನೂ ಬಂತು. ಆದರೆ ಈಗ, ಯಾವತ್ತೋ ಸತ್ತು ಹೋದ ಮನುಷ್ಯನ ಸಾಲ ತೀರಿಸು, ಈಗಲೇ ಪೈಸಲ್ ಮಾಡು ಅಂತ ಇದೆ ಮೇಲೆ ಬಂದು ಕೂತುಕೊಂಡರೆ…… ಭಾಗಮ್ಮ ಏನೂ ಮಾತಾಡಲೇ ಇಲ್ಲ. ಕೊನೆ ಮನೆ ಶಾಸ್ತ್ರಿಗಳ ಮನೇನಲ್ಲಿ ಮೆಣಸಿನ ಪುಡಿ ಮುಗಿದಿತ್ತು. ಮೆಣಸಿನಕಾಯಿನ ಮನೆಯಿಂದಲೇ ಹುರಕೊಂಡು ಹೋಗಬೇಕು ಅಂತ ತಂದಿಟ್ಟುಕೊಂಡಿದ್ದಳು. ಅದರ ತೊಟ್ಟನ್ನ ಮುರೀತಾ ಮುರೀತಾ, ಎದುರುಗಡೆ ಇದ್ದ ಮೆಣಸಿನಕಾಯಿ ಗುಡ್ಡೇನೆ ನೋಡ್ತಾ ಕೂತಕೊಂಡಿದ್ದಳು.

    ಹೊರಗಡೆ ಜಗುಲಿ ಮೇಲೆ ಕೂತಿದ್ದೋರಗೆಲ್ಲ ಅಮೀನನ ವೇಷಭೂಷಣ ಮಾತು ಎಲ್ಲ ನೋಡಿ, ಅವನ ಪರವಾಗೆ ಮಾತಾಡಬೇಕು ಅಂತ ಆಸೆ ಆದರೂ ಭಾಗಮ್ಮನ ಎದೆ ಸೀಳಿದರೂ ಎರಡು ಕಾಸು ಹುಟ್ಟೋಲ್ಲ ಅಂತ ಗೊತ್ತಿದ್ದರಿಂದ ಅಮೀನನ ಮುಖನೇ ನೋಡ್ತಾ ಕೂತಿದ್ದರು. ಎಷ್ಟೋತ್ತಾದರೂ ಯಾರೂ ಬಾಯಿ ಬಿಡದೇ ಇದ್ದದ್ದರಿಂದ ಅಮೀನನೆ ಜಗಲಿ ಇಳಿದು ಬಾಗಿಲ ಹತ್ತಿರ ಬಂದು ಒಳಗಡೆ ತಲೆ ತುರಿಸುವ ಹಾಗೆ ಮಾಡಿ ‘ ಈವತ್ತೇ ಅಂತ ಏನಿಲ್ಲ. ಮುಂದಿನ ಅಮವಾಸ್ಯೆ ಕಳೆದ ಮೇಲೆ ಬರ್ತೀನಿ. ದುಡ್ಡೇ ಆಗಬೇಕು ಅಂತಾನು ಇಲ್ಲ ನನಗೆ . ದುಡ್ಡಿಗೆ ಯಾವುದಾದರೂ ಪದಾರ್ಥ ಕೊಟ್ಟರೂ ಸಾಕು’. ಜಗಲಿ ಏರಿ ಕುಳಿತಿದ್ದ ಕುಲಸ್ಥರಿಗೂ ಈ ಮಾತು ಸರಿ ಎನ್ನಿಸಿ ಅವರು ಕೂಡ ಅಮೀನನ ಹಿಂದೆ ಹೊರಟು ದುರ್ಗದಿಂದ ಹೊರಟು ಮಂಡ್ಯದ ಮೇಲೆ ಶ್ರೀರಂಗಪಟ್ಟಣ ಸೇರೋ ರಾಯಲ್ ಮೋಟಾರ್ ಬಸ್ ನಿಲ್ಲುವ ಸಂತೆ ಮಾಳದ ತನಕವು ಅವನ ಜೊತೆಯೇ ಹೋದರು.

    ಅಮೀನನಲ್ಲವೇ? ಹೇಳಿದಂತೆಯೆ ಬಂದ. ಆವತ್ತೂ ಭಾಗಮ್ಮ ಮನೇಲಿ ಇರಲಿಲ್ಲ. ಅಮೀನ ಏನು ಹೇಳಬೇಕಾಗೇ ಇರಲಿಲ್ಲ. ಊರವರೆ ಅವನ ಮುಖ ನೋಡಿದ ತಕ್ಷಣ ಓಡಿ ಹೋಗಿ ಭಾಗಮ್ಮನ ಕರಕೊಂಡು ಬಂದರು. ಎರಡಮಾವಾಸ್ಯ ಮಧ್ಯೆ ಎಷ್ಷು ದುಡ್ಡು ಹುಟ್ಟುತ್ತೆ? ಆದೂ ಭಾಗಮ್ಮನಿಗೆ. ಅಮೀನ ಮನೇಲಿರೋ ಪದಾರ್ಥನೆ ತಗೊಂಡೋಗ್ತಿನಿ, ತಿಂಗಳಿಗೊಂದು ಸಲ ಐದಾರು ರೂಪಾಯ ಖರ್ಚು ಮಾಡಿಕೊಂಡು ನಾನು ಪಶ್ಚಿಮ ವಾಹಿನಿಯಿಂದ ಇವರ ಮುಖ ನೊಡೋಕೆ ಬರಬೇಕೆ’ ಅಂತಾ ಹೇಳಿ ನ್ಯಾಯ ಒಪ್ಪಿಸಿದ. ಒಂದು ಸಣ್ಣ ಕೊಳದಪ್ಪಲೆ, ಅಡಿಗೆ ಮನೆ ಚಿಕ್ಕ ಹಂಡೆ, ಒಂದು ದಪ್ಪ ಬೀಸೋ ಕಲ್ಲು ಇಷ್ಟನ್ನು ನಾಲ್ಕು ಜನದ ಎದುರಿಗೇನೆ ಹೊರೆಸಿಕೊಂಡು ಹೊರಟ. ಆಳು ತೂಕ ಇದೆ, ಬೀಸೋ ಕಲ್ಲದು ಇಲ್ಲೇ ಯಾರಿಗಾದರೂ ಮಾರಿ ಅಂತ ಊರಿನೋರು ಹೇಳಿದರು. ಅಮೀನ ಇಲ್ಲ ಇಲ್ಲ ಹೀಗೆ ತುದಿಗಾಲಲ್ಲಿ ನಿಂತು ಸೀಯೋಕೆ ಹೋದರೆ ಏನು ಬೆಲೆ ಹುಟ್ಟೋಲ್ಲ. ಬಸ್ ಕಂಡಕ್ಟರ್ಗೆ ನಾನು ಅಮೀನ ಅಂತ ಗೊತ್ತು’ ಅಂತ ಗಟ್ಟಿಯಾಗಿ ಹೇಳ್ತಾ, ಹೇಳ್ತಾ ನಡೆದದ್ದನ್ನೆಲ್ಲಾ ನೋಡ್ತಾ ನಿಂತಿದ್ದ ಮೇಲುಸಕ್ಕರೆ ಗೋವಿಂದ ಶೆಟ್ಟಿ ಕೈಲಿ ಎಲ್ಲವನ್ನು ಹೊರೆಸಿಕೊಂಡು ಸಂತೆ ಮಾಳದ ಕಡೆಗೆ ಹೋದ, ಬಸ್ಸು ಹಿಡಿಯೋಕೆ.

    ಅಮೀನ ಹಾಗೆ ಬೀಸೋ ಕಲ್ಲು ಸಮೇತ ಎಲ್ಲವನ್ನು ಹೊರೆಸಿಕೊಂಡು ಹೋದ ಮೇಲೇನೆ ಭಾಗಮ್ಮನಿಗೆ ಅರಳು ಮರಳಾದ್ದು. ಹುಚ್ಚು ಹಿಡಿದದ್ದು ಅಂತ ಊರಿನೋರೆಲ್ಲ ಅಂದುಕೊಂಡರು. ಬೀಸೋಕಲ್ಲ ತಗೋಂಡೋಗೋಕೆ ಮುಂಚೇನೆ ಭಾಗಮ್ಮ ಮನೇಲಿದ್ದಾಗ ತನ್ನಷ್ಟಕ್ಕೆ ತಾನು ಮಾತಾಡಿಕೊಳ್ಳೋಳು, ಅತ್ತು ಕರೆದು ಮಾಡೋಳು, ತಿಪ್ಪಯ್ಯನ್ನ ಮನಸಾರೆ ಬಯ್ಯೋಳು, ಅಣ್ಣ- ಅತ್ತಿಗೇನ ಜಾಲಾಡೋಳು ಬೀಸೋಕಲ್ಲಿನ ಶಬ್ದದಲ್ಲಿ ಅದು ಯಾರಿಗೂ ಕೇಳಿಸ್ತಾ ಇರಲಿಲ್ಲ ಅಷ್ಟೇ. ಒಂದು ಮನೇದೆ ಕೆಲಸ ಭಾಗಿ ಮಾಡ್ತಾ ಇದ್ದದ್ದು. ಎಷ್ಟು ಮನೇದು ಅಂತ ಹಿಟ್ಟು, ತರಿ ಎಲ್ಲನು ಅದರಲ್ಲಿ ಬೀಸಿದೋಳು ಅವಳು? ಬೀಸೋಕಲ್ಲಿನ ಹಿಡಿ ಹಿಡಕೋಳ್ಳೋಕೆ ಅದೆಷ್ಟು ತ್ರಾಣ ಬೇಕು? ಅಷ್ಟು ದಪ್ಪನಾದ ಹಿಡಿ ಅದು.

    ಈವಾಗ ಅಮೀನ ಬಂದು ಹೋದ ಮೇಲೆ ಬೀಸೋ ಕಲ್ಲೆ ಇಲ್ಲವಲ್ಲ. ಜಗುಲಿ ಮೇಲೆ ಕುತ್ಕೋಂಡು ಮಾತಾಡೋಕೆ ಶುರು ಮಾಡಿದಳು. ಯಾರಾದರೂ ಮನೆ ಎದುರಿಗೆ ಹೋಗ್ತಾ ಇದ್ದರೆ ಅವರ ಹಿಂದುಗಡೆ ಹೋಗಿ ಅವರು ಮನೆ ಸೇರೋ ತನಕ ಇವಳು ಲೊಟ ಲೊಟ ಅಂತ ವಟಗುಟ್ಟಕೊಂಡು ಹೋಗೋಳು. ಯಾರು ಇಲ್ಲದೆ, ಕೆಲಸಾನೂ ಇಲ್ಲದೆ ಕೈ ಖಾಲಿ ಇದ್ರೆ ಮನೇಲೆಲ್ಲಾ ಓಡಾಡ್ತಾ ಒಡಾಡ್ತಾ ತಾನೇ ಮಾತಾಡಿಕೊಳ್ಳೋಳು.

    ಅಮೀನ ಭಾಗಮ್ಮನ ಬೀಸೋಕಲ್ಲು ಹೊತ್ತುಕೊಂಡು ಹೋದದ್ದು ಊರವರಿಗೂ ತೊಂದರೆಯಾಯ್ತು. ‘ಏ ಭಾಗೀ ಏನಾದರೂ ಮಾಡಿ ಒಂದು ಬೀಸೋಕಲ್ಲು ಹೊಂಚಕೊಳೆ’ ಎಂದು ಸುಖನಾತಿ ರಾಗದಲ್ಲಿ ಊರವರೆಲ್ಲಾ ಹೇಳ್ತಾ ಇದ್ದರೂ ಭಾಗಿಗೆ ಬೀಸೋಕಲ್ಲು ಹೇಗೆ ಸಿಗುತ್ತೆ? ಅವಳು ಅದಕ್ಕೆ ದುಡ್ಡು ಹೇಗೆ ಕೊಡ್ತಾಳೆ? ಅಂತ ಕೇಳಿಕೊಳ್ಳೋಕು ಹೋಗಲಿಲ್ಲ, ಹೇಳಕೊಡೋಕು ಹೋಗಲಿಲ್ಲ? ಭಾಗಮ್ಮನಿಗೂ ಬೀಸೋ ಕಲ್ಲು ಶಬ್ದ ಕೇಳಿ ಕೇಳಿ ಕಿವಿ ತುಂಬಾ ಅದೇ ರೂಢಿಯಾಗಿ ಬಿಟ್ಟಿದ್ದರಿಂದ ಅದನ್ನೇ ಕೇಳ್ತಾ ಕೇಳ್ತಾ ಇರಬೇಕು ಅಂತ ಆಸೆಯಾಗ್ತಾ ಇದ್ರು ಅದನ್ನ ಹೇಗೆ ಹೇಳಬೇಕು, ಅದು ಹೇಳಕೊಳೋ ಆಸೇನೆ ಅಂತಾನು ಗೋತ್ತಾಗ್ತಾ ಇರಲಿಲ್ಲ. ಊರನೋರ ಸುಖನಾತಿ ರಾಗ ಮಾತ್ರ ಮುಂದುವರಿದೇ ಇತ್ತು. ಬೀಸೋಕಲ್ಲ ತಗೋಳೆ, ಬೀಸೋಕಲ್ಲ ಹೊಂಚಹಾಕೆ.

    ಭಾಗಮ್ಮನಿಗೆ ಕೂಡ ವಿಶ್ವೇಶ್ವರಯ್ಯನೋರ ಕತೆ, ಪ್ರತೀತಿಯೆಲ್ಲಾ ತಿಳಿದಿತ್ತು. ಅವರು ನಾಲೆ ಕೆಲಸಕ್ಕೆಂದು ಮೋಟರಿನಲ್ಲಿ ಬರೋದು, ಅಮಲ್ದಾರ್, ಶೇಖದಾರ್, ಅವರು ಇವರೆಲ್ಲ ಅವರ ಹಿಂದುಗಡೆ ಬರೋದು. ದಿವಾನರಾದ ಮೇಲು ವಿಶ್ವೇಶ್ವರಯ್ಯ ಖಾಯಿಲೆ ತಾಯಿನ ಬಂಗ್ಲೇಲಿ ಇಟ್ಟುಕೊಂಡು ಉಪಚಾರ ಮಾಡೋದು, ಅಂತ ದೊಡ್ಡ ಮನುಷ್ಯನ ಜೊತೆ ಬದುಕೋ ಅದೃಷ್ಟ ಇಲ್ಲದೆ ಅವರ ಹೆಂಡತಿ ಬೇರೆ ಯಾರ ಜೊತೆಯೋ ಓಡಿ ಹೋದ್ದು – ಎಲ್ಲ ಕತೇನು ಭಾಗಮ್ಮ ಕೇಳಿದ್ದಳು. ಊರಿನ ಜನವೆಲ್ಲ ಬೀಸೋಕಲ್ಲು ತಗೊಳೆ, ಬೀಸೋಕಲ್ಲು ತಗೊಳೆ ಅಂತ ಜ್ಞಾಪಕ ಮಾಡ್ತ ಮಾಡ್ತಾ ಅದನ್ನೇ ಯೋಚನೆ ಮಾಡಿ, ಯೋಚನೆ ಮಾಡಿ ಯಾವುದೋ ಒಂದು ಕ್ಷಣದಲ್ಲಿ ಅವಳಿಗೆ ದಿವಾನ್ ವಿಶ್ವೇಶ್ವರಯ್ಯನೋರ ಹತ್ತಿರ ಹೋಗಿ ತನ್ನ ಅಹವಾಲು ಹೇಳಿಕೊಂಡು, ಒಂದು ಬೀಸೋ ಕಲ್ಲು ತೆಗೆಸಕೊಬೇಕು ಅಂತ ಅನ್ನಿಸೋಕೆ ಶುರುವಾಗಿ ಬಿಟ್ಟಿತ್ತು. ಆಮೇಲಿಂದ ಅವಳು ಅರಳು ಮರಳು ಮಾತಿನಲ್ಲಿ, ಲೊಟಕಾಟದಲ್ಲಿ ಅವಳು ವಿಶ್ವೇಶ್ವರಯ್ಯನವರ ಎದುರಿಗೇನೆ ನಿಂತುಕೊಂಡು ಅಹವಾಲು ಹೇಳ್ತಾ ಇದ್ದದ್ದು ಅವರು ಕೇಳಿಸಿಕೊಳ್ತಾ ಇದ್ದದ್ದು ಎಲ್ಲ ಸೇರಿಕೊಂಡಿತು. ಊರಿನೋರಿಗೆ ಯಾರಿಗೂ ಗೊತ್ತಾಗಲಿಲ್ಲ, ಅಷ್ಟೆ ಭಾಗಿ ಕೂಡ ತಾನು ದಿವಾನರನ್ನು ಬೀಸೋಕಲ್ಲು ಕೇಳೋ ಸಂಗತಿ ಯಾರಿಗೂ ಗೊತ್ತಾಗಬಾರದು ಅಂತ ಅಂದುಕೊಂಡಿದ್ದಳು.

    ತನ್ನಷ್ಟಕ್ಕೆ, ತನಗೆ ತಾನೇ ಭಾಗಿ ದಿವಾರನ್ನು ಕಾಣೋ ಆಸೇನ ನೂರು ಸಲ, ಸಾವಿರ ಸಲ ಹೇಳಿಕೊಂಡರೂ ಬೇರೆ ಯಾರಿಗೂ ಹೇಳೋಕೆ ಹೋಗಲಿಲ್ಲ. ಎಲ್ಲರ ಮನೆ ಕೆಲಸ ಎಲ್ಲ ಮುಗಿಸಿದ ಮೇಲೆ ಮಧ್ಯಾಹ್ನ ಅನ್ನದೆ, ಸಂಜೆ ಅನ್ನದೆ ಊರ ಹೊರಗಿನ ಸಂತೆ ಮಾಳದ ಹತ್ತಿರ ಬಂದು ತುದಿಗಾಲ ಮೇಲೆ ನಿಂತ್ಕೊಂಡು ಕಣ್ಣಿಗೆ ಕಾಣುವ ತನಕವು ರಸ್ತೇನ ನೋಡ್ತಾ ನಿಂತಿರೋಳು. ದಿವಾನರ ಪ್ರೋಗ್ರಾಂ ಇವಳಿಗೆ ಗೊತ್ತಾಗಿದೆ. ಅದಕ್ಕೆ ಊರ ಬಾಗಿಲಲ್ಲಿ ಕಾಯ್ತಾ ನಿಂತಿದ್ದಾಳೆ ಅಂತ ಅನ್ನಕೊಬೇಕು ಹಾಗೆ. ದಿನ ಕಾದಳು, ತಿಂಗಳು ಕಾದಳು, ವರ್ಷನು ಕಾದರಿಬೇಕು. ದಿವಾನರ ಮೋಟರು ಬರಲಿಲ್ಲ. ಭಾಗಿ ಕಾಯುವುದನ್ನು ಬಿಡಲಿಲ್ಲ.

    ಕೊನೆಗೊಂದು ದಿನ ಬೇಸಿಗೆ ಇನ್ನೇನು ಇಳಿಯೋಕೆ ಶುರುವಾಗುತ್ತೆ ಅಂತ ಅನ್ನಕೊಳೋ ಒಂದು ದಿವಸದಲ್ಲಿ ದಿವಾನರು ಬಂದೇ ಬಿಟ್ಟರು. ಮೋಟಾರಿನಲ್ಲಿ ಧೂಳೆಬ್ಬಿಸುತ್ತಾ, ಮೋಟರ್ ನೋಡಿದವಳಿಗೆ ಅದು ದಿವಾನರದೆ ಮೋಟರ್ ಅಂತಾ ಹೇಗೆ ತಿಳೀತೋ ಸಂತೋಷದಿಂದ ಊರೊಳಗೆ ಓಡಿಹೋಗಿ ಮನೆ ಒಳಗಡೆ ಸೇರಿಕೊಂಡುಬಿಟ್ಟಳು. ಆವತ್ತು ರಾತ್ರಿ ನಿದ್ದೆ ಕಣ್ಣರಪ್ಪೆ ಹತ್ರ ಇರಲಿ, ಇವಳ ಮನೆ ಜಗುಲಿ ಹತ್ರನು ಬರಲಿಲ್ಲ. ನಿದ್ದೆಯಿಲ್ಲವಲ್ಲ, ಅಮೀನ ತಗೊಂಡೋಗಿದ್ದನಲ್ಲ; ಬೀಸೋಕಲ್ಲು, ಅದರ ಜಾಗ ಖಾಲಿ ಇತ್ತಲ್ಲ ಅದನ್ನೇ ನೋಡ್ತಾ ನೋಡ್ತಾ ನಿರುಕಿಸ್ತಾ ಮಲಗಿಕೊಂಡಿದ್ದಳು.

    ದಿವಾನರು ಬಂದ ಮೇಲೆ ಊರಿನೋರಿಗೆ ಗೊತ್ತಿರಲ್ಲವೆ? ಎಲ್ಲರ ಮನೇಲು ಅವರದ್ದೇ ಸುದ್ದಿ. ಅವರ ಜೊತೆ ಯಾರ್ಯಾರು ಬಂದಿದಾರೆ, ಎಷ್ಟು ದಿನ ಇರ್ತಾರೆ, ನಾಲೆ ಕೆಲಸ ಎಲ್ಲಿ ತನಕ ಬಂತು, ನಾಲೆ ನೀರು ಯಾರ ಯಾರ ಜಮೀನಿಗೆ ಸಿಗುತ್ತೆ? ಎಲ್ಲರ ಬಾಯಲ್ಲು ಇದೇ ಮಾತು . ಈ ಸಲ ದಿವಾನರದು ಮೂರು ನಾಲ್ಕು ದಿನದ ಮೊಕ್ಕಾಂ ಅಂತ ಎಲ್ಲರೂ ಮಾತಾಡಿಕೊಳ್ಳೋರು. ಶುಕ್ರವಾರ ಸಂಜೆ ಸುತ್ತಮುತ್ತಲ ಊರನೋರೆಲ್ಲ ಸೇರಿ ದಿವಾನರಿಗೆ ಒಳ್ಳೆದಾಗಲಿ ಅಂತ ಈಶ್ವರನ ಗುಡೀಲಿ ಪಂಚಾಮೃತದ ಅಭಿಷೇಕ ಮಾಡಿಸ್ತಾರೆ. ಶನಿವಾರ ಬೆಳ್ಳಿಗೆ ದಿವಾನರು ಎದ್ದು ಮದ್ದೂರಿನ ತನಕ ಮೋಟರಿನಲ್ಲಿ ಹೋಗಿ ಅಲ್ಲಿಂದ ರೈಲಿನಲ್ಲಿ ಬೆಂಗಳೂರಿಗೆ ಹೋಗ್ತಾರೆ. ಎಲ್ಲನು ಭಾಗಮ್ಮನ ಕಿವಿ ಮೇಲೆ ಬೀಳೋದು.

    ಒಂದು ದಿನ ಭಾಗಮ್ಮ ಬೆಳಿಗ್ಗೆ ಕೋಳಿ ಕೂಗೋ ಹೊತ್ತಿಗೆ ಎದ್ದು ದಿವಾನರು ಮೊಕ್ಕಾಂ ಮಾಡಿದ್ದ ಪಂಚಾಯತಿ ಆಫೀಸಿನ ಮುಂದುಗಡೆ ಕೂತೇ ಬಿಟ್ಟಳು . ದಿವಾನರ ಮೋಟರ್ ಅಲ್ಲೇ ನಿಂತಿತ್ತು. ದಿವಾನರ ಕಡೆಯಿಂದ ಒಂದಿಷ್ಟು ಜನ ಜಗುಲಿ ಮೇಲೆ ಮಲಗಿದ್ದ್ರು. ಗೂರ್ಖಾ ಒಬ್ಬ ಮಾತ್ರ ಆ ಕಡೆಯಿಂದ ಈ ಕಡೆಗೆ , ಈ ಕಡೆಯಿಂದ ಆ ಕಡೆಗೆ ಓಡಾಡ್ತಾ ಇದ್ದ. ಇವನ ಕಣ್ಣಿಗೆ ಬಿದ್ದರೆ ಏನಾದರೂ ಕೇಳಬೋದು, ಗದರಿಸಿ ಬೆದರಿಸಿ ಓಡಿಸಬಹುದು ಅಂತ ಭಾಗಮ್ಮ ಪಂಚಾಯತಿ ಆಫೀಸ್ ಎದುರಿಗೆ ಇದ್ದ ಒಂದು ಸುಮಾರಾದ ದೊಡ್ಡ ಮರದ ಹಿಂದೆ ಅವಿತುಕೊಂಡ ಹಾಗೆ ನಿಂತುಕೊಂಡಳು.

    ಬೆಳಕು ಸ್ವಲ್ಪ ಸ್ವಲ್ಪ ಆಗ್ತ ಗೂರ್ಖಾ, ಜಗುಲಿ ಮೇಲೆ ಮಲಗಿದ್ದೋರು ಎಲ್ಲ ಎದ್ದು ಜಗುಲಿ ಮೇಲಿನ ಅಲ್ಲಿ ಇಲ್ಲಿ ಅಂತ ಒಂದಿಷ್ಟು ಒಡಾಡಿ ಎಲ್ಲರೂ ಒಟ್ಟಿಗೆ ಕೆರೆ ಕಡೆಗೆ ಹೊರಟರು. ಭಾಗಮ್ಮ ಈಗ ಧೈರ್ಯವಾಗಿ ಜಗುಲಿ ಹತ್ತಿರಕ್ಕೇ ಬಂದಳು. ಅವಳು ಬರೋ ಹೊತ್ತಿಗೆ ಒಬ್ಬ ಬೋಳು ತಲೆ ಮುದುಕಪ್ಪ, ಬನೀನ್ ಪಂಚೆನಲ್ಲಿ ಜಗುಲಿ ಮೇಲಿದ್ದ ಬಲಗಡೆ ಭಾಗದ ರೂಮಿನಿಂದ ಹೊರಬಂತು. ಕೈನಲ್ಲಿ ಹಿಡಿಕೊಂಡಿದ್ದ ಪುಸ್ತಕ, ಪೇಪರ್‌ನ ಜಗುಲಿ ಮೇಲೆ ಒಂದು ಮೂಲೇಲಿದ್ದ ಟೇಬಲ್ ಮೇಲೆ ಇಟ್ಟು, ಎರಡು ಕೈನೂ ಹಿಂದಕ್ಕೆ ಕಟ್ಟಿಕೊಂಡು ಶತಪಥ ಓಡಾಡೋಕೆ ಶುರು ಮಾಡಿತು. ಆಳುಕಾಳುಗಳು, ಕೈಕೆಳಗಿನ ಅಧಿಕಾರಿಗಳೆಲ್ಲ ಎದ್ದ ಮೇಲೆ ತಾನೇ ದಿವಾನರು ಏಳೋದು, ಇನ್ನೂ ಮಲಗಿರಬೇಕು ಅಂತ ತನಗೆ ತಾನೇ ಹೇಳಿಕೊಂಡು, ಶತಪಥ, ಹಾಕ್ತಿದ್ದ ಮುದುಕನನ್ನೇ ಭಾಗಮ್ಮ ನೋಡ್ತಾ ನಿಂತುಕೊಂಡಳು.

    ಶತಪಥ ಹಾಕ್ತಿದ್ದ ಮುದುಕ ಒಂದು ಸಲ ಇವಳ ಕಡೆ ತಿರುಗದೋನೇ ‘ ಯಾರಮ್ಮಾ ನೀನು, ಈ ಬೆಳಿಗ್ಗೆ, ಬೆಳಿಗ್ಗೆ…’ ಇದ್ದಕ್ಕಿದ್ದಂತೆ ಮಾತಾಡಿದ್ದರಿಂದ ಮಾತು ಸ್ವಲ್ಪ ಬಿರುಸಾಗಿ ಇತ್ತು. ‘ ದಿವಾನರು ಇನ್ನೂ ಎದ್ದಿಲ್ಲವಾ? ಭಾಗಿ ತನಗೆ ಮಾತ್ರವೇ ಕೇಳಿಸುವಂತೆ ಕೇಳಿದಳು. ಮುದುಕಪ್ಪನಿಗೆ ಸರಿಯಾಗಿ ಕೇಳಿಸಲೇ ಇಲ್ಲ. ಮೊದಲು ಕೇಳಿದ್ದಕ್ಕಿಂತಲೂ ಜೋರಾಗಿ ‘ಯಾರಮ್ಮಾ ನೀನು’ ಅಂತ ಇನ್ನೊಂದು ಸಲ ಕೇಳಿದರು. ಭಾಗಮ್ಮ ಜಗುಲಿ ಮೇಲಿದ್ದ ರೂಮಿನ ಕಡೆ ತೋರಿಸಿ ಗಂಟಲು ದೊಡ್ಡದು ಮಾಡಿ ‘ದಿವಾನರು ಇನ್ನೂ ಎದ್ದಿಲ್ಲವೇನೋ…’ ಅಂತ ಕೇಳಿದಳು. ಮುದುಕಪ್ಪನಿಗೆ ಯಾರಿದು ಈ ಮುದುಕಿ, ಈ ಸರಹೊತ್ತಿನಲ್ಲಿ ಅನಿಸಿ ‘ಯಾರಮ್ಮಾ ನೀನು, ಏನುಬೇಕು? ಅಂತ ಕೇಳ್ತಾ ಜಗುಲಿಯಿಂದ ಕೆಳಗಿಳಿಯೋಗೆ ಶುರು ಮಾಡಿತು. ಭಾಗಮ್ಮ ಹೆದರಿ ಓಡಿಬಿಟ್ಟಳು.

    ಒಂದಷ್ಟು ದೂರ ಓಡಿಹೋಗಿ ಬೀದಿ ಕೊನೆಯಲ್ಲಿ ಮರೆಯಾದ ಹಾಗೆ ನಿಂತುಕೊಂಡು ಮುದುಕಪ್ಪನ್ನೇ ನೋಡೋಕೆ ಶುರು ಮಾಡಿದಳು ಭಾಗಮ್ಮ. ಮುದುಕಪ್ಪ ಈಗ ಕೈಕಟ್ಟಿಕೊಂಡು ಓಡಾಡೋದನ್ನ ನಿಲ್ಲಿಸಿ ಜಗಲಿ ಮೆಟ್ಟಿಲು ಮೇಲೆ ಕೂತಕೊಂಡು ಪೇಪರ್, ಪುಸ್ತಕ ನೋಡೋಕೇ ಶುರು ಮಾಡಿತು. ದಿವಾನರು ಏಳಲಿ, ಎದ್ದ ತಕ್ಷಣ ಓಡಿಹೋಗಿ ಎಲ್ಲ ಹೇಳಿ, ಬೀಸೋಕಲ್ಲು ಕೇಳ್ತೀನಿ ಅಂತ ಭಾಗಮ್ಮ ತನಗೆ ತಾನೇ ಹೇಳಿಕೊಂಡು ಕಾಯ್ತಾ ನಿಂತುಕೊಂಡಳು.

    ಭಾಗಮ್ಮ ಹೀಗೆ ರಸ್ತೆ ಕೋನೇಲಿ ನಿಂತಿದ್ದ ಹಾಗೇನೆ, ಕೆರೆ ಕಡೆ ಹೋಗಿದ್ದ ದಿವಾನರ ಕಡೆಯವರು ಗುಂಪಾಗಿ ಮಾತಾಡಿಕೊಂಡು ಬರ್ತಿರುವುದು ಕಂಡಿತು. ಕಂಡವಳೇ ಭಾಗಮ್ಮ, ಎದ್ದೆನೋ ಬಿದ್ದನೋ ಅಂತಾ ಓಡಿ ಬಂದು ಪಂಚಾಯತಿ ಜಗುಲಿ ಮುಂದೆ ನಿಂತುಕೊಂಡು ಏದುಸಿರು ಬಿಡುತ್ತಾ, ‘ಏನುಸ್ವಾಮಿ, ದಿವಾನರು ಇನ್ನೂ ಏಳಲಿಲ್ಲವಾ? ಮಲಗಿಕೊಳ್ಳಲಿ ಬಿಡಿ, ನಮ್ಮ ಊರಲ್ಲಾದರೂ ದಿವನಾಗಿ… ಮನೇಲಂತು ಸುಖ ಇಲ್ಲ – ಸಂಸಾರ ಅಂತು ಕೇಳಿಕೊಂಡು ಬಂದಿಲ್ಲ’ ಅಂದು ತಲೆ ಚಚ್ಚಿಕೊಳ್ಳಲು ಪ್ರಾರಂಭಿಸಿದಳು. ಇವಳು ಹೀಗಂದ ತಕ್ಷಣವೇ, ಮುದುಕಪ್ಪ ಮೆಟ್ಟಲಿಳಿದು ಇವಳ ಕಡೆಗೆ ಬರುತ್ತಾ, ‘ಏನಮ್ಮಾ ನೀನು ಯಾರು, ಯಾರು ಬೇಕು? ಏನು ಬೇಕು? ಅಂತ ಕೇಳಿದ್ದೆ ಭಾಗಮ್ಮ ಹಿಂದಕ್ಕೆ ಹಿಂದಕ್ಕೆ ಓಡಿ ಹೋಗಲು ನೋಡಿದಳು. ಮುದುಕಿ ಇನ್ನೂ ಓಡಿ ಹೊರಟು ಹೋಗುತ್ತಲ್ಲಾ ಅಂತ ಮುದುಕಪ್ಪ ನಿಂತ ಜಾಗದಲ್ಲೇ ನಿಂತುಕೊಂಡ ತಕ್ಷಣವೆ, ಭಾಗಮ್ಮ ಬಡ ಬಡ ಅಂತಾ ಅಮೀನ ಬಂದದ್ದು, ಬೀಸೋಕಲ್ಲು ತಗೊಂಡೋದ್ದು, ತನಗೆ ಈಗ ಅದು ಬೇಕಾಗಿರೋದು ಎಲ್ಲನು ಕೇಳಿಕೊಂಡಳು. ಹೇಳಿಕೋಳ್ಳುತ್ತಿದ್ದ ಹಾಗೇನೆ ಕೆರೆ ಕಡೆ ಹೋಗಿದ್ದ ದಿವಾನರ ಕಡೆಯವರು ಇನ್ನೇನು ಪಂಚಾಯತಿ ಜಗುಲಿ ಹತ್ತಿರಕ್ಕೆ ಬರ್ತಾ ಇದ್ದದ್ದು ಕಾಣಿಸಿತು. ಭಾಗಮ್ಮ ಓಡೇಬಿಟ್ಟಳು.

    ದಿವಾನರಿಗೆ ಹೇಳದೇ ಹೋದರೇನೂ, ಅವರ ಕಡೆಯೋರಿಗೆ ಹೇಳಿದೀನಲ್ಲ. ಆ ಮನುಷ್ಯ ಇಟ್ಟುಕೊಂಡಿದ್ದ ಪೇಪರ್, ಪುಸ್ತಕ ಎಲ್ಲ ನೋಡಿದರೆ ಆತನು ಅಧಿಕಾರಸ್ಥನೇ ಇರಬೇಕು. ಏನಾದರೂ ಸಹಾಯ ಮಾಡಬೋದು. ಬೀಸೋಕಲ್ಲು ವ್ಯವಸ್ಥೆ ಮಾಡಬಹುದು-ಅಂತ ಆಸೆಯಿಂದಲೇ ಭಾಗಮ್ಮ ಘಂಟೆ, ಗಳಿಗೆಗಳನ್ನು ಕಾಯ್ತ ಇದ್ದಳು. ದಿವಾನರನ್ನು ನೋಡೋಕೆ ಯಾರ್ಯಾರು ಬಂದಿದ್ದರು, ಯಾರ ಯಾರ ಜಮೀನ ಹತ್ರ ದಿವಾನರು ಹೋಗಿದ್ರು , ಯಾರ ಜಮೀನಿನಲ್ಲಿ ಅವರು ಬಾಯಾರಿಕೆಗೆ ಶರಬತ್ತು ಕುಡಿದರು, ಯಾರ ಮನೇಲಿ ಅವರಿಗೆ ಊಟ ಇಟ್ಟುಕೊಂಡಿದ್ದರು, ಎಲ್ಲಾನೂ ಭಾಗಮ್ಮನ ಕಿವಿಗೆ ಬೀಳೋದು. ಅಪ್ಪಿ ತಪ್ಪಿಯಾದರೂ ದಿವಾನರು ಬೀಸೋಕಲ್ಲಿನ ಬಗ್ಗೆ, ಭಾಗಮ್ಮನ ಬಗ್ಗೆ ಯಾರ ಕೈಲೂ ಹೇಳಿರಲಿಲ್ಲ ಅಂತಾ ಕಾಣುತ್ತೆ ಅದು ಭಾಗಮ್ಮನ ಕಿವಿಗೂ ಬೀಳಲೇ ಇಲ್ಲ. ಏನ್ ಮಾಡೋದು? ನಾನು ದಿವಾನರನ್ನೇ ನೇರ ನೋಡಬೇಕಿತ್ತು. ಆ ಅಧಿಕಾರಸ್ಥ ಮನುಷ್ಯ ಅವತ್ತು ನಾನು ಹೇಳಿದ್ದನ್ನೆಲ್ಲ ಕೇಳಿಸಿಕೊಂಡನಲ್ಲ, ಅವನೇ ಹೇಳಬೇಕಿತ್ತು ದಿವಾನರಿಗೆ. ದಿವಾನರ ಮನಸ್ಸಿಗೆ ಬಂದರೆ ಅದೇನು ದೊಡ್ಡ ವಿಷಯಾನಾ ? ಸ್ಥಳದಲೇ ನಿಂತಲ್ಲೇ ಬೀಸೋಕಲ್ಲು ಹುಕುಂ ಮಾಡಬಹುದಿತ್ತು. ಇನ್ನೊಂದು ಸಲ ಹೋಗಿ ಖುದ್ದಾಗಿ ಅವರನ್ನೇ ಕಂಡರೆ ಕೆಲಸ ಕೈ ಹತ್ತಬಹುದು. ಆದರೆ ದಿವಾನರನ್ನು ನೋಡೋಕೆ ಹೋದರೆ ಅವರ ಸುತ್ತ ಅದೆಷ್ಟೊಂದು ಜನ ಇರ್ತಾರೆ. ಅವರಿಗೆಲ್ಲ ಯಾಕೆ ನನ್ನ ಕತೆ ಗೋತ್ತಾಗಬೇಕು?

    ಅಳೆದು ಸುರಿದು ಯೋಚನೆ ಮಾಡಿ ಭಾಗಮ್ಮ ಶುಕ್ರವಾರ ಬೆಳಿಗ್ಗೆ ಸರಿಹೊತ್ತಿಗೆ ಸರಿಯಾಗಿ ತಿರುಗಿ ಪಂಚಾಯತಿ ಆಫೀಸ್ ಹತ್ತಿರ ಬಂದು ನಿಂತಿದ್ದಳು. ಅವತ್ತಿನಂತೆ ಅದೇ ಗೂರ್ಖಾ, ದಿವಾನರ ಕಡೆ ಜನ ಎಲ್ಲ ಎದ್ದು ಬಯಲು ಕಡೆಗೆ ಹೊರಟ ಮೇಲೆ ಇವಳು ಜಗಲಿ ಹತ್ತಿರ ಬಂದು ಕೂತುಕೊಂಡೇಬಿಟ್ಟಳು. ಏನಾದರೂ ಸರಿಯೇ, ಇವತ್ತು ದಿವಾನರನ್ನು ನೋಡಲೇಬೇಕೆಂಬ ಮೊಂಡುತನದಿಂದ ಭಾಗಮ್ಮನಿಗೆ ಒಂದು ತರಹ ಧೈರ್ಯ ಬಂದುಬಿಟ್ಟಿತ್ತು. ಜಗಲಿಯ ಬಲಭಾಗಕ್ಕಿದ್ದ ರೂಮಿನ ಬಾಗಿಲ ಕಡೆಗೇ ಅವಳ ಕಣ್ಣೆಲ್ಲ ಮೈಯಾಗಿ ನೋಡುತ್ತಿತ್ತು.

    ಒಂದು ಸ್ವಲ್ಪ ಹೊತ್ತಾದ ಮೇಲೆ ಸೂಟು, ಬೂಟು, ಪೇಟ ಹಾಕಿಕೊಂಡ ಭದ್ರಾವತಿ ದಾಸಪ್ಪನವರು ಹೊರಗೆ ಬಂದ ತಕ್ಷಣ ಭಾಗಮ್ಮ ಓಡಿಹೋಗಿ ಅವರ ಕಾಲಿಗೆ ಅಡ್ಡ ಬಿದ್ದು ‘ದೊಡ್ಡ ಮನಸ್ಸು ಮಾಡಬೇಕು. ಇಡೀ ಸೀಮೇಗೆ ನಾಲೆ ಮಾಡಿಸೋರಿಗೆ ಒಂದು ಬೀಸೋಕಲ್ಲು ಕೊಡಸೋದು ಬಹಳ ಕಷ್ಟವೇ ಮೊನ್ನೆನೆ ಬಂದು ನಿಮ್ಮ ಕಡೆಯೋರಿಗೆ ಹೇಳಿದೆ. ದಿವಾನರಿಗೆ ಅವರು ಏನೂ ಹೇಳಲಿಲ್ಲ ಅಂತಾ ಕಾಣುತ್ತೆ. ಮನಸ್ಸು ಮಾಡಬೇಕು. ಹಿಡಿದಿದ್ದ ಕಾಲನ್ನು ಬಿಟ್ಟು ಎದ್ದೋಳು ತಿರುಗ ಅವರ ಪಾದಗಳನ್ನು ಸ್ಪರ್ಶಿಸಿ ಕಣ್ಣಿಗೊತ್ತಿಕೊಂಡು ‘ಸೀಮೆಗೆಲ್ಲಾ ಅನ್ನ ಕೊಡ್ತಿ, ನೀರು ಕೊಡ್ತಿ, ದೇವರು ನಿನಗೂ ಒಳ್ಳೇದು ಮಾಡೇ ಮಾಡ್ತಾನೆ. ಒಳ್ಳೆ ಸಂಸಾರ ಕೊಡ್ತಾನೆ. ಹೋದೋಳು ಹೋಗಲಿ, ಬರೋಳು ಬಂದೇ ಬರ್ತಾಳೆ. ನನ್ನಂತೋಳದು ಸ್ವಲ್ಪ ನೋಡಪ್ಪ’ ಅಂತ ಹೇಳ್ತಾ ನಿಂತಿದ್ದ ಹಾಗೇನೆ ಸೂಟು ಬೂಟು ಪೇಟ ಹಾಕಿಕೊಂಡಿದ್ದ ಅಷ್ಟೇ ಎತ್ತರದ ಇನ್ನೊಂದು ಮನುಷ್ಯ ಬಂದು ಭಾಗಮ್ಮನ ಹತ್ತಿರ ನಿಂತುಕೊಂಡಿತು. ಭಾಗಮ್ಮನಿಗೆ ಏನು ತೋಚದೆ ಹೆದರಿಕೆಯಾಗಿ ಕಿಟಾರ್ ಅಂತ ಕಿರುಚಿಕೊಂಡು ಓಡಿ ಹೋಗಿಬಿಟ್ಟಳು.

    ಭಾಗಮ್ಮ ಅವತ್ತು ಮೊದಲನೇ ದಿವಸ ಬನೀನ್, ಬೋಳುತಲೆ, ಪಂಚೆ, ಪುಸ್ತಕದ ಜೊತೆ ನೋಡಿದ್ದು ಸರ್. ಎಂ.ವಿ. ಯವರನ್ನೆ, ದಿವಾನರನ್ನೆ… ದಿವಾನರಿಗೆ ಅವತ್ತು ದಿನಕ್ಕಿಂತಲೂ ಬಲು ಬೇಗ ಎಚ್ಚರವಾಗಿತ್ತು. ಹೇಗಿದ್ದರೂ ಎಚ್ಚರ ಆಯ್ತಲ್ಲಾ ಅಂತ ಅಂದುಕೊಂಡು, ಇಷ್ಟೊತ್ತಿಗೇನೆ ಬೆಳಿಗ್ಗೆ ಯಾರೂ ನೋಡೋಕೆ ಮಾಡೋಕೆ ಬಂದಿರೋಲ್ಲವಲ್ಲ ಅಂತ ಉಟ್ಟ ಬಟ್ಟೇಲಿ ಜಗುಲಿಗೆ ಬಂದಿದ್ದರು. ಭಾಗಮ್ಮ ಅವಾಗಲೇ ಬಂದು ಎಲ್ಲವನ್ನು ಹೇಳಿಕೊಂಡಿದ್ದು. ಶುಕ್ರವಾರ ಬೆಳಿಗ್ಗೆ ಬಂದು ಅವಳು ಸೂಟು, ಬೂಟು ಪೇಟದ ಸಮೇತ ಮೊದಲು ನೋಡಿದ ಮನುಷ್ಯ ಭದ್ರಾವತಿ ದಾಸಪ್ಪ ಅಂತಾ, ದಿವಾನರ ಖಾಸಾ ಕಾರ್ಯದರ್ಶಿ. ದಿವಾನರು ತಮ್ಮ ಹತ್ತಿರ, ತಮ್ಮ ಆಫೀಸಿನಲ್ಲಿ ಕೆಲಸ ಮಾಡೋರೆಲ್ಲ ತಮ್ಮಷ್ಟೇ ಟಿಪ್ ಟಾಪ್ ಆಗಿರಬೇಕೆಂದು ಅವರುಗಳಿಗೂ ತಮ್ಮದೇ ರೀತಿಯ ಬಟ್ಟೆ ಭೂಷಣಗಳನ್ನು ಕೊಡಿಸ್ತಾ ಇದ್ದದ್ದರಿಂದ ಫೋಟೋ, ಪೇಪರ್ ಇಲ್ಲದೆ ಇದ್ದ ಕಾಲದಲ್ಲಿ ಎಷ್ಟೋ ಜನ ದಾಸಪ್ಪನೋರನ್ನೆ ದಿವಾನರು ಅಂತಾ ತಿಳಕೊಂಡು ಕಟ್ಟ ಸುಖ ಹೇಳಿಕೊಳ್ಳೋರು. ದಿವಾನರಿಗೆ ಇದೇನೂ ತಿಳಿದೇ ಇರಲಿಲ್ಲ. ಹಾಗೆ ದಾಸಪ್ಪನವರಿಗೆ ಹೇಳಿಕೊಂಡ ಕಷ್ಟ ಸುಖಾನೂ, ದಾಸಪ್ಪ ದಿವಾನರಿಗೆ ಹೇಳಿ ಸರ್ಕಾರದ ಕಡೆಯಿಂದ ಏನೇನು ಕೆಲಸ ಆಗಬೇಕಾಗಿತ್ತೋ ಆ ಕೆಲಸ ಆಗೇ ಆಗೋದು. ಭಾಗಮ್ಮನ ವಿಷಯದಲ್ಲಿ ಇದು ತಿರವು ಮುರುವಾಗಿತ್ತು. ದಿವಾನರಿಗೇ ಕಷ್ಟ ಸುಖ ಹೇಳಿಕೊಂಡಿದ್ದರೂ, ದಿವಾನರ ಕಡೆಯವರನ್ನು ದಿವಾನರು ಅಂತ ತಿಳಿದು ಅವರ ಕಾಲಿಗೆ ಬಿದ್ದಿದ್ದಳು. ಅಹವಾಲು ಮಾತ್ರ ದಿವಾನರಿಗೇ ಸರಿಯಾಗಿ ಹೇಳಿಕೊಂಡಿದ್ದಳು.

    ಭಾಗಮ್ಮ ಆಕಡೆ ಓಡಿಹೋದ ತಕ್ಷಣ ದಿವಾನರು-ದಾಸಪ್ಪನೋರು ಒಬ್ಬರೊಬ್ಬರ ಮುಖ ನೋಡಿಕೊಂಡರು. ದಿವಾನರು ‘ನನ್ನ ಈ ಹೆಂಗಸು ಮೊನ್ನೇನೆ ನೋಡಿದಾರೆ’ ಅಂತ ಹೇಳಿ ಮೆಟ್ಟಿಲಿಳಿದು ವಾಕಿಂಗ್‌ಗೆ ಹೊರಟರು. ದಾಸಪ್ಪನು ಕೂಡ ಅವರ ಹಿಂದೆ ಹೊರಟರು.

    ಬೀಸೋಕಲ್ಲು ತಗೊಂಡು ಹೋಗುವಾಗ ಅಮೀನ ಎರಡಮಾವಾಸ್ಯೆ ವಾಯದೆ ಕೊಟ್ಟಿದ್ದ ಹಾಗೆ ದಿವಾನರು ವಾಯಿದೆ ಕೊಡದೆ ಹೋಗಿದ್ದರೂ ಬಲು ಬೇಗನೆ ಹತ್ತು ರೂಪಾಯಿನ ಮನಿಯಾರ್ಡರ್ ಭಾಗಮ್ಮನ ವಿಳಾಸಕ್ಕೆ ಬಂತು. ಭಾಗಮ್ಮನೆ ಸ್ವಲ್ಪ ಸುಳ್ಳು ತಟವಟ, ಹೇಳೋಕೆ ಶುರು ಮಾಡಿದಳು. ದಿವಾನರು ಊರಿಗೆ ಈಚಿಗೆ ಬಂದದ್ದರಿಂದ ದಿವಾನರು ಖುದ್ದು ಕಳಿಸಿದಾರೆ ಅಂತ ಹೇಳಿದರೆ ತಾನೇ ಹೋಗಿ ದಿವಾವನರನ್ನು ಅಂಗಲಾಚಿದೆ ಅಂತಾ ಎಲ್ಲರಿಗೂ ಗೊತ್ತಾಗುತ್ತೆ ಅನ್ನೋ ಯೋಚನೆನೆ ಹಿಡಿದು, ಮೈಸೂರು ಮಹಾರಾಜರೆ ಗೂಢಚಾರರ, ಚಿತ್ರಗುಪ್ತರ ಮೂಲಕ ತನ್ನ ಕಷ್ಟ ತಿಳಕೊಂಡು ತನಗೆ ಖುದ್ದು ಕಳಿಸ್ತಾ ಇದಾರೆ ಅಂತ ಊರಲ್ಲೆಲ್ಲ ಪ್ರಚಾರ ಮಾಡಿದಳು.

    ಕೆಸ್ತೂರಿನ ಸಂತೆಗೆ ಅದೇ ಮೇಲುಸಕ್ಕರೆ ಗೋವಿಂದಶೆಟ್ಟಿನ ಜತೆ ಮಾಡಿಕೊಂಡು ಹೋಗಿ ಬೀಸೋಕಲ್ಲು ತಗೊಂಬಂದ ಮೇಲೆ ಊರವರ ಪ್ರಕಾರ ಭಾಗಮ್ಮನಿಗೆ ಹುಚ್ಚು ಅರಳು-ಮರಳು ಎಲ್ಲ ಕಡಿಮೆಯಾಯ್ತು. ಆದರೆ ಅವಳು ಮಾತ್ರ ಮೊದಲಿನಂತೆಯೇ ಬೀಸೋಕಲ್ಲಿನ ಶಬ್ದದ ಜೊತೆಗೆ ತನ್ನ ಬೈಗುಳ, ಅಳು, ಅಲವತ್ತು ಕೊಳ್ಳುವುದನ್ನು ಸೇರಿಸೋಕೆ ಶುರು ಮಾಡಿದಳು. ಬೀಸೋಕಲ್ಲಿನ ಶಬ್ದಾನೇ ತುಂಬಾ ಜೋರು ಮಾಡಿದಾಗ ಮಾತ್ರ ಯಾರಿಗೂ ಕೇಳಲಾರದು ಅನ್ನುವಂತೆ ತಾನು ದಿವಾನರನ್ನು ನೋಡಿದ್ದು, ಅವರ ಕಾಲಿಗೆ ಬಿದ್ದ ಸಂಗತೀನು ಹೇಳುವಳು. ಅಷ್ಟೇ ಅಲ್ಲ, ವಿಶ್ವೇಶ್ವರಯ್ಯನವರು ಇಡೀ ಭೂಮಿಗೆ ದಿವಾನರಾಗಬೇಕು, ಆಗ್ತಾರೆ. ಅವರ ಖಾಯಿಲೆ ತಾಯಿಗೆ ಸತ್ತು ಸ್ವರ್ಗ ಸುಖ ಸಿಗುತ್ತೆ. ವಿಶ್ವೇಶ್ವರಯ್ಯನವರಿಗೆ ಹೊಸ ಸಂಸಾರ ಬರುತ್ತೆ. ಮನೆ ತುಂಬಾ ಗಂಡು ಮಕ್ಕಳಾಗುತ್ತೆ ಅನ್ನೋ ಮಾತನ್ನೂ ಸೇರಸೋಳು.

    ದಿವಾನರು ಪಂಚಾಮೃತದ ಅಭಿಷೇಕ, ಕ್ಯಾಂಪು ಎಲ್ಲಾನು ಮುಗಿಸಿಕೊಂಡು ಶನಿವಾರ ಬೆಂಗಳೂರಿಗೆ ಬಂದು ಮನೆ ತಲುಪಿದಾಗ ಸಂಜೆ ಆಗ್ತಾ ಇತ್ತು. ಅವರ ಸಾಕುಮಗ ಅಪ್ಪನಂತೆಯೆ ಸೂಟು ಬೂಟು ಪೇಟ, ಟೈ ಧರಿಸಿ ವಾಕಿಂಗ್‌ಗೆ ಹೊರಟು ನಿಂತಿದ್ದರು. ಎಷ್ಟು ಹೊತ್ತಿನಲ್ಲಿ ವಾಕಿಂಗ್‌ಗೆ ಹೋಗಬೇಕು, ಎಷ್ಟು ಸಮಯ ಹೋಗಬೇಕು ಅನ್ನೋದನ್ನ ದಿವಾನರೆ ಕಟ್ಟುನಿಟ್ಟು ಮಾಡಿದ್ದರಿಂದ ದಿವಾನರ ಮುಖ ನೋಡಿದ ತಕ್ಷಣ ಅವರು ಕೋಟು, ಶರಟನ್ನು ಹಿಂದಕ್ಕೆ ಸರಸಿ ಗಡಿಯಾರ ನೋಡಿಕೊಂಡರು-ದಿವಾನರು ನಿಗದಿ ಮಾಡಿದ್ದ ಸಮಯಕ್ಕೆ ಸರಿಯಾಗಿ ಹೊರಟಿದ್ದರಿಂದ ಅವರಿಗೆ ಖುಷಿಯೇ ಆಯ್ತು.

    ದಿವಾನರೇ ಸಾಕು ಮಗನನ್ನು ಬೆರಳು ಸನ್ನೆ ಮಾಡಿ ಮನೆ ಒಳಗೆ ಕೂಗಿದರು. ಸೊಸೆ ಎಲ್ಲಿ ಎಂದು ವಿಚಾರಿಸಿದರು. ಅದೇನು ಮಾತು ಕತೆ ನಡೀತೋ, ಅದಾದ ಹತ್ತು ನಿಮಿಷಕ್ಕೇ ದಿವಾನರ ಸಾಕು ಮಗ – ಸೊಸೆ ಇಬ್ಬರೂ ವಾಕಿಂಗ್‌ಗೆ ಹೊರಟರು. ಸೊಸೆನ ಆತುರ ಆತುರವಾಗಿ ಹೊರಡಿಸಿರಬೇಕು ಅಂತಾ ಕಾಣುತ್ತೆ. ಹೆಜ್ಜೆ ಹಾಕ್ತಾ ಹಾಕ್ತಾನೆ ಮುಡಿಲಿರೋ ಹೂವನ್ನು ಸರಿ ಮಾಡಕೋತಾ ಇದ್ದರು.

    ಅವತ್ತೇ ಅಲ್ಲ, ಅದಾದ ಮೇಲೆ ಪ್ರತಿದಿವಸನೂ ಅದೇ ಹೊತ್ತಿನಲ್ಲಿ ದಿವಾನರ ಸಾಕುಮಗ ಸೊಸೆ ವಾಕಿಂಗ್‌ಗೆ ಹೋಗೋದು. ವಾಕಿಂಗ್‌ನಿಂದ ಬಂದಮೇಲೆ ಸಾಕುಮಗ ಕಾರಲ್ಲಿ ಕ್ಲಬ್ಬಿಗೆ ಹೋಗುತ್ತಿದ್ದ. ಅಲ್ಲಿ ದಿವಾನರು ಸಾಕುಮಗನ ಆಗಮನವನ್ನು ಕಿರುಗಣ್ಣಿನಿಂದಲೇ ಗಮನಿಸಿ ಕೇರಂ ಬೋರ್ಡುನಲ್ಲಿ ಉಳಿದಿದ್ದ ಪಾನುಗಳನ್ನು ಹೊಡೆಯೋಕೆ ರೆಡಿಯಾಗೋರು.

    ಈ ಕತೆ ಇಷ್ಟೆಲ್ಲಾ ತಿಳಿದ ಮೇಲೆ ನಾನು ನನ್ನ ಹೆಂಡತಿ ಯಾವಾಗ ಊರಿಗೆ ಹೋದರೂ ಒಂದು ಗಳಿಗೆ ಬಿಡುವು ಮಾಡಿಕೊಂಡು ಭಾಗಮ್ಮನ ಮನೆಗೆ ಹೋಗ್ತಾ ಇದ್ದಿವಿ. ನಾವು ಯಾರೂ ಅಂತ ಅವಳಿಗೆ ಗೊತ್ತಿಲ್ಲ. ದಿವಾನರನ್ನೇ ನೋಡಿದೋಳಿಗೆ ನಾವ್ಯಾರು ಅನ್ನೋದು ಯಾಕೆ ಗೊತ್ತಾಗಬೇಕು. ನನ್ನ ಕುತೂಹಲಕ್ಕೆ, ಆಸೆಗೆ ಸರ್ ಎಂ.ವಿ. ಪೋಟೋ ಅವಳ ಮನೇಲಿ ಇರಬಹುದೆ ಅಂತ ಆಸೆಯಿಂದ ಹುಡುಕಿದ್ದೇನೆ, ಇಲ್ಲ . ದಶಾವತಾರದ ಪೋಟೋ, ಲಕ್ಷ್ಮಿಯ ಪೋಟೋ, ವಸ್ತ್ರಾಪಹರಣದ ಪೋಟೋ ಎಲ್ಲ ಇದೆ. ಸರ್ ಎಂ.ವಿ ಪೋಟೋ ಮಾತ್ರ ಇಲ್ಲ. ಮೊದಲೊಂದೆರಡು ಸಲ ಹೋದಾಗ ಇದಕ್ಕೆ ಮನಸ್ಸು ಪಿಚ್ ಅನಿಸೋದು. ಆಮೇಲೆ ಅದೇ ರೂಢಿಯಾಗಿ ಹೋಯ್ತು. ಭಾಗಮ್ಮನ ಮನೆಗೆ ಹೋಗೋ ಬಳಕೆನು ಕಡಿಮೆಯಾಯ್ತು. ಆವಾಗ ಈವಾಗ ಗೂನ್‌ಬೆನ್ನಿನ ಜೊತೆ ಸರಸರ ಅಂತಾ ಓಡಾಡೋ ಭಾಗಮ್ಮನ್ನ ಊರ ಬೀದೀಲಿ ನೋಡೋದು, ಅಷ್ಟೇ.

    ಎರಡು ಮೂರು ವರ್ಷದ ಹಿಂದೆ ಭಾಗಮ್ಮ ಸತ್ತು ಹೋದಳು. ಬೆಂಗಳೂರಿಗೆ ಬಂದಿದ್ದ ಯಾರೋ ಸಂಬಂಧಿಗಳು ಈ ಸುದ್ದಿ ಹೇಳಿದರು. ಆವಾಗ ಎರಡು ಮೂರು ದಿವಸವೆಲ್ಲ ಭಾಗಮ್ಮ, ಬೀಸೋಕಲ್ಲು ಸರ್ ಎಂ ವಿ ಯವರದೇ ನೆನಪು, ಯೋಚನೆ . ನಾನು ನನ್ನ ಹೆಂಡತಿ ಯಾವಾಗಲೂ ಅದೇ ವಿಷಯಾನ ಮಾತಾಡ್ತಾ ಇದ್ದೆವು. ‘ ನೋಡಿ, ಭಾಗಮ್ಮ , ಸರ್ ಎಂ ವಿ ಫೋಟೋನ ಅವಳ ಮನೇನಲ್ಲಿ ಇಟ್ಟುಕೊಳ್ಳದೇ ಹೋದ್ರೆ ಏನು, ಅವರ ಮನೆ ಇದೆಯಲ್ಲ ಮುದ್ದೇನಹಳ್ಳಿಯಲ್ಲಿ ಸ್ಮಾರಕದ್ದು ಅಂತಾ, ಅಲ್ಲಿ ಅವರು ಕೊಡಿಸಿದ ಬೀಸೋಕಲ್ಲು ಇರಲಿ, ಮುಂದಿನ ಸಲ ಊರಿಗೆ ಹೋದಾಗ ತಗೊಂಬಂದು ಮುದ್ದೇನಹಳ್ಳಿಗೆ ಕೊಡೋಣ.

    ಹೆಂಡತಿ ಹೇಳಿದ್ದು ನನಗೂ ಸರಿ ಎನಿಸಿತು. ಮುಂದಿನ ಸಲ ಊರಿಗೆ ಹೋದಾಗ ಭಾಗಮ್ಮನ ಮನೆ ಹತ್ತಿರ ಹೋದೆವು. ಅವಳ ಮನೆಗೆ ಬೀಗ ಹಾಕಿತ್ತು. ಬಾಡಿಗೆಗೆ ಹೊಸದಾಗಿ ಯಾರೂ ಬಂದಿರಲಿಲ್ಲ. ಒಬ್ಬ ಮಗ ಸೊಲ್ಲಾಪುರ, ಇನ್ನೊಬ್ಬ ಮಗ ಗೋವಾ ಅಂತೆ. ಯಾರೋ ಕಾಗದ ಬರೆದದ್ದಕ್ಕೆ ಸತ್ತ ಐದನೇ ದಿನ ಒಬ್ಬ, ಏಳನೇ ದಿನ ಒಬ್ಬ ಬಂದು ಊರಲ್ಲಿ ತಿಥಿ ಸಮಾರಾಧನೆ ಮಾಡಿ ಹೊರಟುಹೋದರಂತೆ. ಇಬ್ಬರು ಮಕ್ಕಳು ಸಂತೆಮಾಳದಲ್ಲಿರೋ ಹೋಟೆಲಲ್ಲಿ ವಾಸ ಮಾಡಿಕೊಂಡು ದಿನ ಊರೊಳಕ್ಕೆ ಬಂದು ತಿಥಿ ಸಮಾರಾಧನೆ ಮಾಡೋರಂತೆ.

    ಮನೆ ಮಾಲೀಕ ಶೇಷಗಿರಿನ ಹಿಡಿದು ಬೀಗ- ಬಾಗಿಲು ತೆಗೆಸಿದಾಗ ಬೀಸುಕಲ್ಲಿನ ಒರಳಲ್ಲಿ ಜಿರಳೆಗಳು, ಜಿರಳೆ ಮೊಟ್ಟೆಗಳು. ಬೀಸುಕಲ್ಲನ್ನು ಈಚೆಗೆ ತೆಗೆಸಿ ಅದರ ಮೇಲೆ ಕೂತಿದ್ದ ಜೇಡ, ಕಸ, ಜಿರಳೆ ಮೊಟ್ಟೆ ಎಲ್ಲವನ್ನೂ ಒರೆಸಿ ಬೆಂಗಳೂರಿಗೆ ತಂದು ಆಮೇಲೆ ಒಂದು ಭಾನುವಾರ ಬೆಳಿಗ್ಗೆ ಮುದ್ದೇನಹಳ್ಳಿಗೆ ಹೋಗಿ ನಮಗೆ ತಿಳಿದಿದ್ದ ಸರ್ ಎಮ್ ವಿ ಕತೆಗೆಂದು ಸ್ಮಾರಕವಾಗಿ ಬೀಸೋ ಕಲ್ಲನ್ನು ಅಲ್ಲೇ ಬಿಟ್ಟು ಬಂದೆವು. ಸ್ಮಾರಕದ ಮ್ಯಾನೇಜರ್ ಸರ್ ಎಮ್ ವಿ ಹಸ್ತಾಕ್ಷರವಿರುವ ಒಂದು ಫೋಟೋ ನಮಗೆ ಕೊಟ್ಟ.

    ನೀವು ಆಕಡೆ ಹೋದಾಗ ಭಾಗಮ್ಮನ ಬೀಸೋ ಕಲ್ಲನ್ನ, ಅಲ್ಲ ದಿವಾನರು ಭಾಗಮ್ಮನಿಗೆ ಕೊಡಿಸಿದ ಬೀಸೋಕಲ್ಲನ್ನ ತಪ್ಪದೇ ನೋಡಬೇಕು.

    ಈಗ ನಮ್ಮ ಮನೆ ಹಾಲಿನಲ್ಲಿರುವ ಸರ್ ಎಮ್ ವಿ ಫೋಟೋ, ಸ್ಮಾರಕಕ್ಕೆ ಬೀಸೋಕಲ್ಲು ಕೊಡೋಕ್ಕೆ ಹೋಗಿದ್ದಾಗ ಮ್ಯಾನೇಜರ್ ಕೊಟ್ಟದ್ದು. ನಾನು ಆ ಫೋಟೋನಾ ನೋಡುವಾಗಲೆಲ್ಲಮಕ್ಕಳು ಯಾರದು, ಯಾರದು ಅಂತ ಕೇಳ್ತಾರೆ. ಸರ್ ಎಂ ವಿ ಬಡವರಾಗಿ ಹುಟ್ಟಿದ್ದು, ಕಷ್ಟಪಟ್ಟು ಓದಿದ್ದು, ದಿವಾನರಾಗಿ ದೇಶದ ಬದುಕಿಗೆ ಹೊಸ ದಿಕ್ಕು ಕೊಟ್ಟಿದ್ದು ಎಲ್ಲಾನೂ ಅವರಿಗೆ ಅರ್ಥವಾಗುವ ಹಾಗೆ ಹೇಳೋಕೆ ಪ್ರಯತ್ನ ಮಾಡ್ತೀನಿ. ಭಾಗಮ್ಮನ ಕತೆ, ಬೀಸೋಕಲ್ಲು ಕತೆ, ಯಾಕೆ ಚಿಕ್ಕ ವಯಸ್ಸಿಗೆ ದೊಡ್ಡವರಾದ ಮೇಲೆ ಹೇಳಬಹುದಲ್ಲವೇ ಅಂತಾ.

    ಎಲ್ಲಿ? ಆವಾಗ ಕತೆ ಹೇಳಿದಾಗ ಬೀಸೋ ಕಲ್ಲನ್ನ ಮಕ್ಕಳು ನೋಡಬೇಕು ಅಂದರೆ ಮುದ್ದೇನಹಳ್ಳಿ ಸ್ಮಾರಕಕ್ಕೆ ಕರಕೊಂಡು ಹೋಗಬೇಕೇನೋ?

    (ಚಿತ್ರ : ಕಿರಣ ಮಾಡಾಳು)

    error: Content is protected !!