25.6 C
Karnataka
Thursday, May 21, 2026
    Home Blog Page 144

    ಆನ್‍ಲೈನ್ ಶಿಕ್ಷಣ ಭವಿಷ್ಯತ್ತಿನ ಶಿಕ್ಷಣ

    ಕೊರೊನಾ ವೈರಸ್‍ನ ಹಾವಳಿ ಹೇಳತೀರದು. ಇದರ ದುಷ್ಪರಿಣಾಮಗಳನ್ನು ಎಲ್ಲಾ ಕ್ಷೇತ್ರಗಳಲ್ಲಿ ವಿಶ್ವದಾದ್ಯಂತ ಕಾಣುತ್ತಿದ್ದೇವೆ ಹಾಗೂ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದೇವೆ. ಆರ್ಥಿಕ ವ್ಯವಸ್ಥೆಯಲ್ಲಿನ ಹಿಂಜರಿತಗಳು, ಉದ್ಯೋಗ ಕ್ಷೇತ್ರದಲ್ಲಿ ಸೃಷ್ಟಿಯಾಗಿರುವ ಏರುಪೇರುಗಳು, ಷೇರು ಮಾರುಕಟ್ಟೆಯಲ್ಲಿನ ಕುಸಿತ ಹೀಗೆ ಹಲವಾರು ಪರಿಣಾಮಗಳು ಎದ್ದು ಕಾಣುತ್ತಿವೆ. ಲಕ್ಷಾಂತರ ಜನ ಉದ್ಯೋಗವನ್ನು ಕಳೆದುಕೊಂಡಿರುವ ಉದಾಹರಣೆ ಕೂಡ ಇದೆ.

    ಇವುಗಳೆಲ್ಲದರ ನಡುವೆ ಕೊರೊನಾದಿಂದ ಕೆಲವೊಂದು ಹೊಸ ದಾರಿಗಳನ್ನು ಸಹ ನಾವುಗಳು ಕಂಡುಕೊಂಡಿದ್ದೇವೆ. ಅವುಗಳಲ್ಲಿ ಬಹಳ ಮುಖ್ಯವಾಗಿ ಮನೆಯಿಂದಲೇ ಕೆಲಸ ( work from home ) ಮತ್ತುಆನ್‍ಲೈನ್ ಶಿಕ್ಷಣ.ಮನೆಯಿಂದಲೇ ಕೆಲಸ ಪದ್ದತಿಯಿಂದಾಗುವ ಅನುಕೂಲಗಳನ್ನು, ಮುಖ್ಯವಾಗಿ ಆರ್ಥಿಕ ಉಳಿಕೆ, ಪರಿಶೀಲಿಸಿ ಮುಂದಿನ ದಿನಗಳಲ್ಲಿ  work from home ಪದ್ದತಿಯನ್ನು ಶಾಶ್ವತವಾಗಿ ಅಳವಡಿಸಲು ಬಹುರಾಷ್ಟ್ರೀಯ ಕಂಪನಿಗಳು ಚಿಂತನೆ ನಡೆಸಿವೆ.

    ಪ್ರಸ್ತುತ ನಾವುಗಳುಅನುಭವಿಸುತ್ತಿರುವ ಕಠಿಣ ಮತ್ತು ಅನಿಶ್ಚಿತ ಸಮಯದಲ್ಲಿ ಆನ್‍ಲೈನ್ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಂಡಿದ್ದೇವೆ. ಈ ಪದ್ದತಿಯ ಬಗ್ಗೆ ಪರ ಮತ್ತು ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಆನ್‍ಲೈನ್ ಶಿಕ್ಷಣ ಪದ್ದತಿಯ ಅನುಕೂಲಗಳ ರುಚಿಯನ್ನು ಕೆಲವರು ಸವಿದಿದ್ದಾರೆ. ಸಾಂಪ್ರದಾಯಿಕ ಕ್ಲಾಸ್ ರೂಮ್ ಶಿಕ್ಷಣದಿಂದ ಹೊರಬರುವುದು ನಮಗೆ ಕಷ್ಟಕರವಾದಂತಹ ಸಂಗತಿ. ಆದರೂ ಆನ್‍ಲೈನ್ ಶಿಕ್ಷಣದ ಮಹತ್ವವನ್ನು ಅರಿಯಲು ಪ್ರಯತ್ನಿಸೋಣ.

    ಕಳೆದ ಒಂದು ದಶಕದಿಂದ ಆನ್‍ಲೈನ್ ಕಲಿಕೆ ಹೆಚ್ಚು ಹೆಚ್ಚು ಪ್ರವೇಶಾವಕಾಶಗಳನ್ನು ಹೊಂದಿದೆ. ಹಿಂದಿನ ದಿನಗಳಲ್ಲಿ ಸಾಂಪ್ರದಾಯಿಕ ಆನ್ ಕ್ಯಾಂಪಸ್ ಶಿಕ್ಷಣ ಮಾತ್ರವೇ ಕಲಿಕೆಯ ದಾರಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರಿಗೆ ಹೈಸ್ಪೀಡ್ ಅಂತರ್ಜಾಲ ಸಂಪರ್ಕಗಳು ದೊರೆತಿರುವುದರಿಂದ, ಆನ್‍ಲೈನ್ ಶಿಕ್ಷಣ ಜನಪ್ರಿಯವಾಗುತ್ತಿದೆ ಮತ್ತು ಉತ್ತಮ ಗುಣ ಮಟ್ಟದ ಶಿಕ್ಷಣವನ್ನು ನೀಡುವ ಪರ್ಯಾಯ ವ್ಯವಸ್ಥೆಯಾಗಿ ಬೆಳೆಯುತ್ತಿದೆ. ಸ್ನಾತಕೋತ್ತರ ಶಿಕ್ಷಣಕ್ಕೆ ಉತ್ತೇಜನ ನೀಡುವ ಪರಿಣಾಮಕಾರಿ ವಿಧಾನವಾಗಿದೆ. 

    ಭಾರತದಲ್ಲಿ ಆನ್‍ಲೈನ್ ಶಿಕ್ಷಣ 2021 ಕ್ಕೆ ಸಂಬಂಧಿಸಿದಂತೆ ಕೆಪಿಎಂಜಿ ಮತ್ತು ಗೂಗಲ್ ಕಂಪನಿಯವರು ನೀಡಿರುವ ವರದಿ ಪ್ರಕಾರ ಮುಂದಿನ ಮೂರು ವರ್ಷಗಳಲ್ಲಿ ಆನ್‍ಲೈನ್ ಶಿಕ್ಷಣ ಎಂಟು ಪಟ್ಟು ಬೆಳೆಯುವ ನಿರೀಕ್ಷೆಯನ್ನು ಹೊಂದಿದೆ. ಆನ್‍ಲೈನ್ ಶಿಕ್ಷಣದ ಪ್ರಯೋಜನವನ್ನು ಪಡೆಯುವವರ ಸಂಖೈ 2021 ರ ವೇಳೆಗೆ 9.5 ಮಿಲಿಯನ್ ಮುಟ್ಟುವ ಅಂದಾಜು ಮಾಡಲಾಗಿದೆ ( 2016 ರಲ್ಲಿ ಕೇವಲ 1.6 ಮಿಲಿಯನ್ಇತ್ತು ). ವಿಶೇಷವಾಗಿ ಸ್ನಾತಕೋತ್ತರ ಪದವಿಗಳಾದ ಎಂಬಿಎ ಮತ್ತು ಎಂಸಿಎ ಕೋರ್ಸುಗಳಿಗೆ ಹೆಚ್ಚು ವಿದ್ಯಾರ್ಥಿಗಳು ಹಾಗೂ ಉದ್ಯೋಗದಲ್ಲಿರುವವರು ಪ್ರವೇಶವನ್ನು ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ, ಪದವಿ ಮತ್ತು ಪದವಿಪೂರ್ವ ಶಿಕ್ಷಣಗಳಲ್ಲಿಯೂ ಸಹ ಜನಪ್ರಿಯವಾಗುವ ಲಕ್ಷಣಗಳು ಕಾಣುತ್ತಿವೆ.

    ಆನ್‍ಲೈನ್ ಶಿಕ್ಷಣದ ಅನುಕೂಲಗಳು

    ಆನ್‍ಲೈನ್ ಶಿಕ್ಷಣದ ನವನೀಯತೆ ( Flexibility ) ಎಲ್ಲರನ್ನೂ ಆಕರ್ಷಿಸಿದೆ. ಆನ್‍ಲೈನ್ ಶಿಕ್ಷಣದ ಮೂಲಕ, ಎಲ್ಲಿಂದಲಾದರೂ , ಯಾವಾಗ ಬೇಕಾದರೂ ಶಿಕ್ಷಣವನ್ನು ಪಡೆಯಬಹುದು. ಲ್ಯಾಪ್‍ಟಾಪ್ ಅಥವಾ ಸ್ಮಾರ್ಟ್ ಪೋನ್ ಜೊತೆಗೆ ಅಂತರ್ಜಾಲದ ವ್ಯವಸ್ಥೆಯಿದ್ದರೆ ಸಾಕು. ತರಗತಿಗಳಲ್ಲಿನ ಹಾಜರಾತಿ ತಲೆನೋವು ಇರುವುದಿಲ್ಲ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿಯನ್ನು ಅನುಸರಿಸಬಹುದು. ವಿಶೇಷವಾಗಿ ಉದ್ಯೋಗಿಗಳಿಗೆ, ಕೆಲಸವನ್ನು ಬಿಟ್ಟು ಕೊಡದೆ, ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯವಾಗುತ್ತದೆ. ವಾರಾಂತ್ಯಗಳಲ್ಲಿ ಅಥವಾ ಬಿಡುವಿನ ವೇಳೆಯಲ್ಲಿ ಕಲಿಯುವ ಅವಕಾಶ ದೊರೆಯುತ್ತದೆ. ಸಮಯ ನಿರ್ವಹಣೆ ಹಾಗೂ ಉದ್ಯೋಗ – ಶಿಕ್ಷಣ ಇವುಗಳ ಸಮತೋಲನವನ್ನು ಕಾಪಾಡುವ ಕೌಶಲ್ಯವನ್ನು ಕಲಿಸುತ್ತದೆ.

    ಕಲಿಯುವ ವೇಗ ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ವ್ಯತ್ಯಾಸವಾಗುತ್ತದೆ. ಪ್ರತಿಯೊಬ್ಬರೂ ಒಂದೇ ವೇಗದಲ್ಲಿ ಕಲಿಯಲು ಸಾಧ್ಯವಿಲ್ಲ. ತರಗತಿಯ ಕೊಠಡಿಯಲ್ಲಿ ಎಲ್ಲರಿಗೂ ಒಟ್ಟಿಗೆ ಪಾಠಮಾಡುವಾಗ, ಅನೇಕ ವಿದ್ಯಾರ್ಥಿಗಳಿಗೆ ಪಾಠಗಳನ್ನು ಅನುಸರಿಸಲು ಸಾಧ್ಯವಾಗುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸ ಬೇಕಾಗುತ್ತದೆ. ಹಲವು ಭಾರಿ ಇದು ಸಹ ಸಾಧ್ಯವಾಗದ ಪರಿಸ್ಥಿತಿಯಿರುತ್ತದೆ. ಇಂತಹ ಸಂದರ್ಭಗಳಲ್ಲಿ ಆನ್‍ಲೈನ್ ಶಿಕ್ಷಣ ಪರಿಹಾರ ನೀಡುತ್ತದೆ. ಈ ಪದ್ದತಿಯಲ್ಲಿ ಅಧ್ಯಯನಕ್ಕೆ ಸಂಬಂಧಪಟ್ಟ ಲೇಖನಗಳನ್ನು, ಪಠ್ಯಗಳನ್ನು ಮೊದಲೇ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸ್ವಂತ ಸಮಯದಲ್ಲಿ ಮತ್ತು ವೇಗದಲ್ಲಿ ಕಲಿಯಬಹುದು. ಆನ್‍ಲೈನ್ ಚಾಟ್ ಮೂಲಕ ತಮ್ಮ ಸಂದೇಹಗಳಿಗೆ ಸ್ಪಷ್ಟೀಕರಣಗಳನ್ನು ಪಡೆಯಬಹುದು.

    ಆನ್‍ಲೈನ್ ಶಿಕ್ಷಣದ ಮೂಲಕ ಬಹಳ ದೊಡ್ಡ ಮಟ್ಟದಲ್ಲಿ ಕೋರ್ಸ್‍ಗಳ ವ್ಯಾಪಕ ಆಯ್ಕೆ ಸಾಧ್ಯವಾಗುತ್ತದೆ. ಜೊತೆಗೆ ಮನೆಯಲ್ಲಿ ಕುಳಿತು, ಪ್ರಪಂಚದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿಗಳನ್ನು ನಾವು ಗಳಿಸಬಹುದು. ಉದಾಹರಣೆಗೆ ಹೇಳುವುದಾದರೆ, ಸಂಗೀತ, ಕಲೆಯಿಂದ ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಕಯಂತ್ರಶಾಸ್ತ್ರದ ವಿಷಯಗಳವರೆವಿಗೂ ಪದವಿಗಳನ್ನು ಪಡೆಯಬಹುದು. ಕೌಶಲ್ಯಾಧಾರಿತ ಶಿಕ್ಷಣವನ್ನು ಪಡೆಯಲು ಬಹಳ ಅನುಕೂಲವಾಗಿದೆ.

    ಕ್ಯಾಂಪಸ್ ಶಿಕ್ಷಣಕ್ಕಿಂತ ಕಡಿಮೆ ವೆಚ್ಚ

    ಆನ್‍ಲೈನ್ ಶಿಕ್ಷಣದಲ್ಲಿ ಹಣ ಮತ್ತು ಸಮಯ ಎರಡನ್ನು ಉಳಿಸಬಹುದು. ಕ್ಯಾಂಪಸ್ ಶಿಕ್ಷಣಕ್ಕಿಂತ, ಆನ್‍ಲೈನ್ ಶಿಕ್ಷಣವು ಹೆಚ್ಚು ಉಳಿತಾಯದಾಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾಂಪಸ್ ಶಿಕ್ಷಣದ ವೆಚ್ಚ ವೇಗವಾಗಿ ಏರುತ್ತಲೆ ಇದೆ. ಕ್ಯಾಂಪಸ್ ಶಿಕ್ಷಣದ ನಿರ್ವಹಣಾ ವೆಚ್ಚವು ಜಾಸ್ತಿಯಾಗಿರುವುದರಿಂದ, ಶಿಕ್ಷಣ ಸಂಸ್ಥೆಗಳು ಹೆಚ್ಚು ಶುಲ್ಕವನ್ನು ವಸೂಲಿಮಾಡುತ್ತಿವೆ. ಆದರೆ ಆನ್‍ಲೈನ್ ಶಿಕ್ಷಣದ ನಿರ್ವಹಣಾ ವೆಚ್ಚವು ಕಡಿಮೆಯಿರುವುದರಿಂದ, ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಬಹುದು. ಕ್ಯಾಂಪಸ್ ಶಿಕ್ಷಣ ಪದ್ದತಿಯಲ್ಲಿ ಕಾಣುವ ಸ್ಥಾಪನೆ ಶುಲ್ಕಗಳು, ವಸತಿ ಖರ್ಚುಗಳು, ಕ್ರೀಡಾ ಮತ್ತು ಸಾಂಸ್ಕೃತಿಕ ವೆಚ್ಚಗಳು, ಸಾರಿಗೆ ವೆಚ್ಚಗಳು ಇವು ಯಾವುವು ಇರುವುದಿಲ್ಲ. ಸ್ವಾಭಾವಿಕವಾಗಿ ಆನ್‍ಲೈನ್ ಶಿಕ್ಷಣದ ಶುಲ್ಕ ಗಣನೀಯವಾಗಿ ಕಡಿಮೆಯಿರುತ್ತದೆ.

    ಆನ್‍ಲೈನ್ ಶಿಕ್ಷಣದ ಮೂಲಕ ಗ್ರಾಹಕೀಯಗೊಳಿಸಿದ ಕಲಿಕೆ ( customised online learning ) ಸಾಧ್ಯ. ಸಾಧಾರಣವಾಗಿ, ಆನ್‍ಲೈನ್ ಶಿಕ್ಷಣದ ತರಗತಿಗಳಲ್ಲಿ ಕಡಿಮೆ ಸಂಖ್ಯೆ ವಿದ್ಯಾರ್ಥಿಗಳಿರುತ್ತಾರೆ. ಹಲವಾರು ಸಂದರ್ಭಗಳಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರವೇ ಗುರುಗಳ ಜೊತೆಗೆ ಸಂವಹನವನ್ನು ನಡೆಸುತ್ತಾನೆ. ಇದರಿಂದ ಶಿಕ್ಷಕರ ಜೊತೆಯಲ್ಲಿ ಪರಿಣಾಮಕಾರಿಯಾಗಿ ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶ ದೊರೆಯುತ್ತದೆ. ಜೊತೆಗೆ, ಆನ್‍ಲೈನ್ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಅಧ್ಯಯನ ಲೇಖನಗಳು, ವಿಡಿಯೋಗಳು, ಭಾಷಣಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿರುವುದರಿಂದ, ವಿದ್ಯಾರ್ಥಿಯ ಅವನ/ಳ ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳ ಬಹುದು.

    ಸಹಪಾಠಿಗಳ ಜೊತೆಗೆ ಸಾಮಾಜಿಕ ಸಂಪರ್ಕವನ್ನು ಸಹ ಬೆಳೆಸಬಹುದು. ಡಿಜಿಟಲ್ ಸಹಪಾಠಿಗಳೊಂದಿಗೆ ಗ್ರೂಪ್ ವೀಡಿಯೋ ಚಾಟ್‍ಗಳನ್ನು ಆಯೋಜಿಸಬಹುದು, ವಿಚಾರ ವಿನಿಮಯಗಳನ್ನು ಮಾಡಿಕೊಳ್ಳಬಹುದು.

    ಆಡಳಿತ ಮಂಡಳಿಯವರ ದೃಷ್ಟಿಯಿಂದಲೂ ಸಹ ಆನ್‍ಲೈನ್ ಶಿಕ್ಷಣ ಹೆಚ್ಚು ವೆಚ್ಚದಾಯಕ. ಕಡಿಮೆ ವೆಚ್ಚದಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಬಹುದು. ಸರ್ಕಾರದ ದೃಷ್ಟಿಯಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯುವಂತೆ ಮಾಡುವುದಕ್ಕೆ ದಾರಿ ದೀಪ. GER ( ಸರಾಸರಿ ದಾಖಲಾತಿ ಅನುಪಾತ ) ಹೆಚ್ಚಿಸಲು ಉತ್ತಮವಾದಂತಹ ಮಾರ್ಗ.

    ಅನಾನುಕೂಲಗಳು

    ಆನ್‍ಲೈನ್ ಶಿಕ್ಷಣದಲ್ಲಿ ಕೆಲವು ಅನಾನುಕೂಲಗಳಿವೆ. ಉದಾಹರಣೆಗೆ ಆನ್‍ಲೈನ್ ಶಿಕ್ಷಣದಲ್ಲಿ ನವನೀಯತೆಯಿರುವುದರಿಂದ, ಪದವಿಯನ್ನು ಗಳಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಅವಕಾಶಗಳಿವೆ. ಪ್ರಾಧ್ಯಾಪಕರ ಮತ್ತು ಸಮಾನ ಮನಸ್ಕರ ನಡುವೆ ಮುಖಾಮುಖಿ ಸಂವಹನ ನಡೆಸುವ ಅವಕಾಶವಿರುವುದಿಲ್ಲ. ಇದರಿಂದ ಪೂರ್ಣ ಮಟ್ಟದ ಕಲಿಕೆ ಕುಂಠಿತವಾಗಬಹುದು. ಸಾಂಪ್ರದಾಯಿಕ ಆನ್‍ ಕ್ಯಾಂಪಸ್ ಶಿಕ್ಷಣದ ಜೀವನ ಶೈಲಿ, ಶಿಕ್ಷಣದ ಸಂಸ್ಥೆಗಳ ಕಲಿಕಾ ವಾತಾವರಣ, ಸಹ ಪಾಠಿಗಳ ಜೊತೆಯಲ್ಲಿ ಕಳೆಯಬಹುದಾದ ಆನಂದದ ಕ್ಷಣಗಳು ಆನ್‍ಲೈನ್ ಶಿಕ್ಷಣದಲ್ಲಿ ಲಭ್ಯವಿರುವುದಿಲ್ಲ.

    ಆನ್‍ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೆಚ್ಚು ಸಮಯ ಮೀಸಲಿಡಬೇಕಾಗಿರುತ್ತದೆ. ಏಕೆಂದರೆ, ವಿದ್ಯಾರ್ಥಿಗಳು, ಪದವಿಯಲ್ಲಿ ಕಲಿಯುವ ವಿಷಯಗಳ ಬಗ್ಗೆ ಪ್ರಭುತ್ವವನ್ನು ಹೊಂದಿದ್ದಾರೆ ಎಂಬುವುದನ್ನು ದೂರದಿಂದಲೇ ಸಾಬೀತು ಪಡಿಸಬೇಕು. ಆನ್‍ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸ್ವತಂತ್ರ ಅಧ್ಯಯನವನ್ನು ಮಾಡಿರುವುದರಿಂದ, ಮಾನ್ಯತೆಯನ್ನು ಪಡೆದ ಮತ್ತು ಶ್ರೇಷ್ಠ ಮಟ್ಟದ ಕಾಲೇಜುಗಳು ಮತ್ತು ವಿಶ್ವ ವಿದ್ಯಾಲಯಗಳು ಹೆಚ್ಚು ಕಾಲ ಅಧ್ಯಯನದಲ್ಲಿ ತೊಡಗುವಂತೆ ನಿರ್ದೇಶನ ನೀಡಬಹುದು.ಪುಟ್ಟ ಮಕ್ಕಳ ಮನೋ ವಿಕಾಸಕ್ಕೆ ಈ ವ್ಯವಸ್ಥೆ ಅಷ್ಟೊಂದು ಅನುಕೂಲಕರವಲ್ಲ.

    ಆನ್‍ಲೈನ್ ಶಿಕ್ಷಣದ ಅನುಕೂಲಗಳನ್ನು ಮತ್ತು ಅನಾನುಕೂಲಗಳನ್ನು ತುಲನೆ ಮಾಡಿ, ವೈಯಕ್ತಿಕ ಗುರಿಗಳ ಮತ್ತು ಆರ್ಥಿಕ ಬಲದ ಆಧಾರದ ಮೇಲೆ ಆಯ್ಕೆಯನ್ನು ಮಾಡಬಹುದು. ಮುಂದಿನ ದಿನಗಳಲ್ಲಿ ಆನ್‍ಲೈನ್ ಶಿಕ್ಷಣ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.2019 ರಲ್ಲಿ, ಸಂತ ಕ್ಲಾರಾ ವಿಶ್ವ ವಿದ್ಯಾಲಯವು ಆನ್‍ಲೈನ್ ಶಿಕ್ಷಣದ ಪರಿಣಾಮದ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಶೇಖಡಾ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಚ್ಚುಗೆಯನ್ನು ಸೂಚಿಸಿದ್ದಾರೆ.        

     ಆನ್‍ಲೈನ್ ಶಿಕ್ಷಣದ ಜೊತೆಗೆ, ಕ್ಯಾಂಪಸ್‍ನಲ್ಲಿ ಕಲಿಕೆಯನ್ನು ಅನುಭವಿಸ ಬಯಸುವ ವಿದ್ಯಾರ್ಥಿಗಳು ಹೈಬ್ರಿಡ್ ( ಮಿಶ್ರಣ ) ಕೋರ್ಸುಗಳಿಗೆ ಸೇರಬಹುದು. ಮುಂದಿನ ದಿನಗಳಲ್ಲಿ ಆನ್‍ಲೈನ್ ಶಿಕ್ಷಣ, ಶಿಕ್ಷಣದ ಪದ್ದತಿಯನ್ನೇ ಬದಲಾಯಿಸಿದರೆ ಅಚ್ಚರಿಪಡುವ ಅಗತ್ಯವಿಲ್ಲ.

    Photo by cottonbro from Pexels

    ಸರಸ್ವತಿ ಪೂಜೆ ಎಂದು ಆಚರಿಸ ಬೇಕು?

    ಎಲ್ಲೆಡೆ ನವರಾತ್ರಿ ಸಂಭ್ರಮ. ಕೋವಿಡ್ ಗದ್ದಲದ ನಡುವೆಯೂ ಮನೆಯೇ ಮಂತ್ರಾಲಯ ಎಂದು ಸುರಕ್ಷಿತ ನವರಾತ್ರಿ ಆಚರಣೆಗೆ ಒತ್ತು ಕೊಡಬೇಕಾದದು ಅನಿವಾರ್ಯ.

    ಇಂದು ನವರಾತ್ರಿ ಪಂಚಮಿ. ಮುಂದೆ ಸಾಲು ಸಾಲು ಸಡಗರ. ದುರ್ಗಾಷ್ಟಮಿ, ಸರಸ್ವತಿ ಪೂಜೆ, ಆಯುಧ ಪೂಜೆ, ವಿಜಯದಶಮಿ.

    ಖ್ಯಾತ ವಿದ್ವಾಂಸ ಹಾಗೂ ಜ್ಯೋತಿಷಿ ಸಿ.ಕೆ. ಆನಂದತೀರ್ಥಚಾರ್ ಅವರು ಈ ಪಾಡ್ಕಾಸ್ಟ್ ನಲ್ಲಿ ಈ ಆಚಾರಣೆಗಳ ಹಿಂದಿನ ಮಹತ್ವವನ್ನು ವಿವರಿಸಿದ್ದಾರೆ.

    ಆಲಿಸಿ ಪ್ರತಿಕ್ರಿಯಿಸಿ.

    ಜಗದ ಜನನಿ ಜಗದಂಬಾ ಅಂಬಾ ಭವಾನಿ

    ಇಂದು ನವರಾತ್ರಿ ಚತುರ್ಥಿ. ಕನ್ನಡಪ್ರೆಸ್.ಕಾಮ್ ನ ಸಂಗೀತೋತ್ಸವ ಮತ್ತೊಂದು ಹಂತವನ್ನು ತಲುಪಿದೆ. ಎಲ್ಲಾ ರೀತಿಯ ಗೀತೆಗಳನ್ನು ಸೊಗಸಾಗಿ ಹಾಡುವ ಶ್ಯಾಮಲಾ ಇಂದಿನ ಕಚೇರಿಯನ್ನು ನಡೆಸಿಕೊಟ್ಟಿದ್ದಾರೆ.

    ಶ್ಯಾಮಲಾ ಅವರಿಗೆ ಬಾಲ್ಯದಿಂದಲೇ ಸಂಗೀತ ಮತ್ತು ಭಜನೆಯಲ್ಲಿ ಆಸಕ್ತಿ.ಮನೆಯಲ್ಲಿ ಅದಕ್ಕೆ ಪೂರಕ ವಾತಾವರಣವೂ ಇದ್ದುದರಿಂದ ಭಜನೆ, ಶ್ಲೋಕಗಳನ್ನು ಹೇಳುವ ಅಭ್ಯಾಸ ಬೆಳೆಯಿತು.ಪುಸ್ತಕಗಳ ಓದು ಅವರ ಸಾಹಿತ್ಯ ಹರಿವನ್ನು ವಿಸ್ತರಸಿತು. ಜೊತಗೆ ಅವರಿಗೆ ಚಿತ್ರಕಲೆಯಲ್ಲೂ ಆಸಕ್ತಿ. 

    ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ಇಂದಿನ ಸಂಗೀತ ಸಂಜೆ ಕಣ್ಣುಗಳೆರಡು ಸಾಲದಮ್ಮ ಎಂದು ಲಕ್ಷ್ಮಿಯನ್ನು ಧ್ಯಾನಿಸುತ್ತದೆ. ಮುಂದೆ ದಯಮಾಡೆ ಭ್ರಮರಾಂಭೆ ಮೂಲಕ ಮುಂದುವರಿಯುತ್ತದೆ. ಜಗದ ಜನನಿ ಜಗದಂಬಾ ಅಂಬಾ ಭವಾನಿ ಎಂದು ದೇವಿಯನ್ನು ಆರಾಧಿಸಿ ಶ್ರೀಮನ್ನಾರಾಯಣನ ಆರತಿ ಗೀತೆಯೊಂದಿಗೆ ಸಂಪನ್ನ ವಾಗುತ್ತದೆ..

    ಭಾರತಿ ಎಸ್ ಎನ್ ಅವರ ನಿರರ್ಗಳ ವ್ಯಾಖ್ಯಾನ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುವಂತೆ ಮಾಡುತ್ತದೆ.

    ನೀವು ಆಲಿಸಿ, ಪ್ರತಿಕ್ರಿಯಿಸಿ.

    ಸುಮತಾ ಶ್ರೀಧರ್ ಅವರ ಮನೆಯ ಆಕರ್ಷಕ ದಸರಾ ಗೊಂಬೆ ಪ್ರದರ್ಶನ

    ರಾಜರಾಜೇಶ್ವರಿ ನಗದರ ಶ್ರೀಧರ್ ವೃತ್ತಿಯಲ್ಲಿ ಎಂಜಿನಿಯರ್. ಅವರ ಮನೆಯಲ್ಲಿ ಇತ್ತೀಚೆಗೆ ಕೆಲ ವರ್ಷಗಳಿಂದ ಗೊಂಬೆ ಕೂಡಿಸುವ ಸಂಪ್ರದಾಯವನ್ನು ರೂಢಿಸಿಕೊಂಡಿದ್ದಾರೆ.

    ಶ್ರೀಧರ್ ಅವರ ಪತ್ನಿ ಸುಮತಾ ಶ್ರೀಧರ್ ಆಸ್ಥೆಯ ಫಲವಾಗಿ ಅವರ ಮನೆಯಲ್ಲಿ ಗೊಂಬೆಗಳ ಲೋಕ ತೆರೆದುಕೊಂಡಿದೆ. ಸುಂದರವಾದ ಮನೆಯಲ್ಲಿ ಮುದ್ದಾದ ಗೊಂಬೆಗಳನ್ನು ನೋಡುವುದೇ ಆನಂದ.

    ಈ ಬಾರಿ ಕೋವಿಡ್ ಕಾರಣದಿಂದ ಈ ವರ್ಷ ನಮ್ಮ ಮನೆಯ ಗೊಂಬೆಗಳನ್ನು ಎಲ್ಲರೂ ಆನ್ ಲೈನ್ ನಲ್ಲೇ ನೋಡಬೇಕು ಎನ್ನುತ್ತಾರೆ ಶ್ರೀಧರ್. ಅವರ ಮನೆಯ ದಸರಾ ಗೊಂಬೆ ಲೋಕ ಇಲ್ಲಿದೆ.

    ಅಂಬಾಪುರ ವಾಸಿನಿ ಅಖಿಲಾ ಭುವನೇಶ್ವರಿ

    ಇಂದು ನವರಾತ್ರಿ ತದಿಗೆ. ಕನ್ನಡಪ್ರೆಸ್.ಕಾಮ್ ನ ಸಂಗೀತೋತ್ಸವ ಇಂದು ಶಾಸ್ತ್ರೀಯ ಸಂಗೀತದ ಉತ್ತುಂಗವನ್ನು ತಲುಪಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶಾಸ್ತೀಯವಾಗಿ ಅಭ್ಯಸಿಸಿ ಸೊಗಸಾಗಿ ಹಾಡುವ ಗೀತಾ ಗಣೇಶ್ ಇಂದಿನ ಕಚೇರಿಯನ್ನು ನಡೆಸಿಕೊಟ್ಟಿದ್ದಾರೆ.

    ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ಈ ಸಂಗೀತ ಸಂಜೆ ತಾಯಿ ಚಾಮುಂಡೇಶ್ವರಿಯನ್ನು ಧ್ಯಾನಿಸುವ ಮೂಲಕ ಮುಂದುವರಿಯುತ್ತದೆ. ಅಂಬಾಪುರ ವಾಸಿನಿ ಅಖಿಲಾ ಭುವನೇಶ್ವರಿ ಎಂದು ದೇವಿಯನ್ನು ಆರಾಧಿಸಿ ,ಜಗ ಜನನಿಯನ್ನು ನೆನೆದು ,ಭೈರವಿ ಪರಮೇಶ್ವರಿ ಪರಾಶಕ್ತಿಯನ್ನು ಸ್ಮರಿಸುತ್ತಾ ಸಂಪನ್ನವಾಗುತ್ತದೆ.

    ಭಾರತಿ ಎಸ್ ಎನ್ ಅವರ ನಿರರ್ಗಳ ವ್ಯಾಖ್ಯಾನ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುವಂತೆ ಮಾಡುತ್ತದೆ.

    ನೀವು ಆಲಿಸಿ, ಪ್ರತಿಕ್ರಿಯಿಸಿ.

    ಮಂಜುಳಾ ಅವರ ಮನೆಯ ಪಾರಂಪರಿಕ ಗೊಂಬೆ ಸಂಗ್ರಹ

    ಬೆಂಗಳೂರು ಚಾಮರಾಜಪೇಟೆಯ ಮಂಜುಳಾ ಅವರ ಮನೆಯಲ್ಲಿನ ದಸರಾ ಗೊಂಬೆಗಳನ್ನು ನೋಡುವುದೇ ಹಬ್ಬ. ಇನ್ನೂರು ವರುಷಗಳ ಪಟ್ಟದ ಗೊಂಬೆ ಇವರ ಮನೆಯ ವಿಶೇಷ. ಗೊಂಬೆ ಇಡುವ ಸಂಪ್ರದಾಯವನ್ನು ಅನೂಚೂನವಾಗಿ ನಡೆಸುಕೊಂಡು ಬರುತ್ತಿರುವ ಹಿರಿಮೆ ಅವರದ್ದು.

    ಈ ಬಾರಿ ಕೋವಿಡ್ ಕಾರಣದಿಂದ ಸಂಪ್ರದಾಯ ಬಿಡಬಾರದೆಂದು ಕೆಲವೇ ಗೊಂಬೆಗಳನ್ನು ಕೂಡಿಸಲು ನಿರ್ಧರಿಸಿದ್ದರು. ಆದರೆ ಮಗಳು ಗೌರಿಯ ಒತ್ತಾಸೆಯ ಫಲವಾಗಿ ಎಂದಿನಂತೆ ದೊಡ್ಡ ಸಂಖ್ಯೆಯಲ್ಲೇ ಗೊಂಬೆಗಳನ್ನು ಕೂಡಿಸಿದ್ದಾರೆ.ಕೋವಿಡ್ ಕಾರಣದಿಂದ ಯಾರನ್ನೂ ಆಹ್ವಾನಿಸದೇ ಬಂಧು ಬಾಂಧವರಿಗೆ ವಿಡಿಯೋಗಳನ್ನು ರವಾನಿಸಿ ವರ್ಚುಯಲ್ ಗೊಂಬೆ ಹಬ್ಬದ ಅನುಭೂತಿ ನೀಡಿದ್ದಾರೆ.

    ಕಿಲ್ಲಾರ ಗೊಂಬೆಗಳು, ಚಾಮುಂಡೇಶ್ವರಿ, ಮೈಸೂರು ಅರಮನೆ ಅಲ್ಲದೆ ನೂರಾರು ವರುಷಗಳಿಂದ ಜತನವಾಗಿ ಕಾಯ್ದುಕೊಂಡು ಬಂದಿರುವ ಗೊಂಬೆ ಸಂಗ್ರವೂ ಇದೆ.

    ಅವರ ಮನೆಯ ದಸರಾ ಗೊಂಬೆ ಸಂಗ್ರಹದ ಸೈಡ್ ಶೋ ಇಲ್ಲಿದೆ.

    ವಿಚಿತ್ರ ನೋಟದ ಜೀವಿಯೊಂದರ ಮರೆಮಾಚುವಿಕೆಯ ರಹಸ್ಯ

    ಸಾಮಾಜಿಕ ಮಾಧ್ಯಮದಲ್ಲಿ  ವೈರಲ್ ಆಗಿದ್ದ ವಿಚಿತ್ರ ನೋಟದ  ಪ್ರಾಣಿಯೊಂದರ ರಹಸ್ಯದ ಜಾಡು ಹಿಡಿದು ಹೊರಟಾಗ  ಅದು ಕೊರೊನಾವೈರಸ್ ಗೆ  ಕಾಕತಾಳೀಯವಾದದ್ದು ಹೇಗೆ….?

    ತ್ತೀಚಿಗೆ, ವಿಚಿತ್ರ  ನೋಟದ ಒಂದು ಪ್ರಾಣಿಯು ವೈರಲ್ ಆಗಿ   ಅನೇಕ ಜನರ ಮೊಬೈಲ್, ಲ್ಯಾಪ್ಟಾಪ್ನಲ್ಲಿ    ಹರಿದಾಡುತಿತ್ತು.   ಯಾರೋ ತಮ್ಮ  ಮನೆಯ ಮಾವಿನ ಮರದ ಎಲೆಯೊಂದರಲ್ಲಿ   ಕುಳಿತಿದ್ದ  ಆ  ಪ್ರಾಣಿಯನ್ನು    ಶೂಟಿಂಗ್ ಮಾಡಿ  ತಮ್ಮ  ಬಂಧುಮಿತ್ರರಿಗೆ ವಾಟ್ಸಾಪ್ ಮಾಡಿದ  ವಿಡಿಯೋ ಜನರ  ಕುತೂಹಲ ಕೆರಳಿಸಿ ವೈರಲ್ ಆಗಿತ್ತು.   ಅಷ್ಟಕ್ಕೆ  ನಿಲ್ಲದೇ  ಆ ಜೀವಿಯ ಬಗ್ಗೆ ಕೆಲವು   ಊಹಾಪೋಹಗಳು ಕೂಡ ಟ್ರಾಲ್ ಆಯಿತು. “ಅದು ಕಚ್ಚಿದರೆ ನಾಲ್ಕು ಗಂಟೆಯೊಳಗೆ ವಿಪರೀತ ಬೆವರು ಬಂದು ಸಾಯುತ್ತಾರೆ”. ಹಾಗೆ ಹೀಗೆ, ಅಂತ.   ಆ ಪ್ರಾಣಿಯ ಬಗ್ಗೆ  ವಿಚಾರಿಸಿ  ನನಗೂ  ಕೆಲವೊಂದು ಕಾಲ್,   ಮೆಸೇಜ್ ಗಳು   ಬಂದವು.  

    ವಿಭಿನ್ನ ನೋಟದ    ಆ  ಪ್ರಾಣಿಯನ್ನು ನೀವು ನೋಡಿರದಿದ್ದರೆ   ಇಲ್ಲಿರುವ ಛಾಯಾಚಿತ್ರದ  ಮೇಲೆ ಒಮ್ಮೆ ಕಣ್ಣು  ಹಾಯಿಸಿ.  

    ಒಂದಿಷ್ಟು   ಎಲೆಗಳು ಬಿಟ್ಟರೆ ಬೇರೆ ಏನಾದರೂ ಕಾಣಿಸಿತೇ?  ಕಾಣಿಸದಿದ್ದರೆ,  ಇನ್ನೊಮ್ಮೆ  ಸೂಕ್ಮವಾಗಿ ಗಮನಿಸಿ.    ಎಲೆಯೊಂದರ  ಮೇಲೆ   ಮರೆಮಾಚಿದ ಹಸಿರು ಬಣ್ಣದ  ‘ವಸ್ತು’ ಒಂದು   ಕಾಣುವುದಿಲ್ಲವೇ? ಕಾಣದಿದ್ದರೆ ಈ ಕೆಳಗಿನ ಯೂ ಟ್ಯೂಬ್ ವಿಡಿಯೋ ನೋಡಿ.  

    ಈ ಮೊದಲು ಈ  ತರಹದ ಪ್ರಾಣಿಯನ್ನು ನೋಡಿರದಿದ್ದರೆ, ಇದನ್ನು  ನೋಡಿ  ‘ಹೀಗೂ ಉಂಟೇ’..!!!? ಎಂದು ನೀವು ಆಶ್ಚರ್ಯಚಕಿತರಾಗಿರಬಹುದು.       ಹೌದು,  ನಿಸರ್ಗದಲ್ಲಿ ಹೀಗೂ ಉಂಟು,  ಇನ್ನು  ಹೇಗೇಗೋ    ಉಂಟು…!

    ಒಂದು ಕಂಬಳಿಹುಳು

    ಪ್ರಸ್ತುತ  ನಾವು ನೋಡುತ್ತಿರುವ    ಈ ಪ್ರಾಣಿ  ಬೇರೆ ಯಾವುದೂ ಅಲ್ಲ,  ಒಂದು ಕಂಬಳಿಹುಳು.   ಚಳಿಗೆ ಹೊದೆಯಲು,  ಹಾಸಲು ಬಳಸುವ     ಕಂಬಳಿಯಲ್ಲಿ ಇರುವಂತೆ  ಮೈತುಂಬ  ನುಣ್ಣಗೆ ಚೂಪಾದ  ರೋಮಗಳಂತಹ ರಚನೆ     ಇರುವ ಕಂಬಳಿಹುಳುಗಳನ್ನು ನೋಡಿದ್ದೇವೆ.  ಅವುಗಳು ರೂಪಾಂತರಗೊಂಡು ಚಿಟ್ಟೆ,  ಪತಂಗ ಆಗುವುದರ ಬಗ್ಗೆಯೂ ಕೇಳಿದ್ದೇವೆ.   ಇದು ಯಾವ ಸೀಮೆಯ ಕಂಬಳಿಹುಳು,  ಇದು ಯಾಕೆ ಹೀಗೆ ಇದೆ..!? 

    ಮೊದಲು ಇದರ ವಿಳಾಸವನ್ನು ಪತ್ತೆ ಹಚ್ಚಿ  ನಂತರ ಇದರ ವಿಚಿತ್ರ ನೋಟದ ಹಿನ್ನೆಲೆಯ ಜಾಡು ಹಿಡಿಯೋಣ.  

    ಇದು ಬ್ಯಾರನ್ (Baron) ಎಂದು ಕರೆಯಲ್ಪಡುವ  ಮಧ್ಯಮ ಗಾತ್ರದ ನಿಮ್ಫಾಲಿಡ್ ಚಿಟ್ಟೆಯ   ಬೆಳವಣಿಗೆ  ಹಂತದಲ್ಲಿರುವ ಕಂಬಳಿಹುಳು (ಲಾರ್ವ). ಕೀಟ  (Insecta) ವರ್ಗದ ಲೆಪಿಡೋಪ್ಟೆರಾ (Lepidoptera) ಗಣ,  ನಿಮ್ಫಾಲಿಡೆ (Nymphalidae)  ಕುಟುಂಬಕ್ಕೆ  ಸೇರಿರುವ ಇದರ  ವೈಜ್ಞಾನಿಕ ಹೆಸರು  ಯುಥಾಲಿಯಾ ಅಕಾಂಥಿಯಾ (Euthalia aconthea).  ಇದು ಶ್ರೀಲಂಕಾ, ಭಾರತ ಮತ್ತು ಆಗ್ನೇಯ ಏಷ್ಯಾದ   ಸ್ಥಳೀಯ ಪ್ರಭೇದವಾಗಿದೆ.  ಪೀಟರ್ ಕ್ರಾಮರ್ 1779 ರಲ್ಲೇ  ಇದರ ಅಸ್ತಿತ್ವವನ್ನು ಪತ್ತೆಹಚ್ಚಿದ್ದರು.

    ಹೆಚ್ಚಿನ ಕಂಬಳಿಹುಳುಗಳಂತೆ ಸಸ್ಯಹಾರಿ ಆಗಿರುವ ಇದು ಕೂಡ ಎಲೆಗಳನ್ನು ತಿಂದು  ಬದುಕುತ್ತವೆ. ಒಂದೊಂದು ಬಗೆಯ ಕಂಬಳಿಹುಳುಗಳಿಗೆ ಅವುಗಳಿಗೆ ಇಷ್ಟವಾದ ಆಹಾರದ ಆಯ್ಕೆ ಇದ್ದೇ  ಇದೆ.  ನಮ್ಮೆದುರು ಇರುವ ಹಸಿರು ವರ್ಣದ ಈ ಕಂಬಳಿಹುಳುವಿಗೆ ಮಾವಿನ ಮತ್ತು  ಗೇರು ಮರದ  ಎಲೆಗಳು ಇಷ್ಟದ ಆಹಾರ. ಹಾಗಾಗಿ ಅಲ್ಲೇ ವಾಸವಾಗಿರುತ್ತವೆ. ಅಂದರೆ, ಈ ಕಂಬಳಿ ಹುಳುವಿನ ಅಮ್ಮ ಎಲೆಗಳ ಅಡಿಭಾಗದಲ್ಲಿ  ಮೊಟ್ಟೆಗಳನಿಟ್ಟು  ಹೋಗುತ್ತವೆ.  ಮೊಟ್ಟೆಗಳಿಂದ   ಹೊರಬರುವ ಲಾರ್ವಗಳು (ಕಂಬಳಿಹುಳುಗಳು) ನಿಧಾನಕ್ಕೆ  ಎಲೆಯ ಮೇಲ್ಭಾಗಕ್ಕೆ  ಬಂದು ತಿನ್ನಲು ಪ್ರಾರಂಭಿಸುತ್ತದೆ.  

    ಇದರ ವಿಚಿತ್ರ  ದೇಹ ರಚನೆಯ ಹಿಂದಿರುವ  ರಹಸ್ಯ  ಮರೆಮಾಚುವಿಕೆ ಮತ್ತು ರಕ್ಷಣೆ. ಆಹಾರಕ್ಕಾಗಿ  ಒಂದು ಪ್ರಾಣಿಯನ್ನು ಬೇಟೆಯಾಡಿ   ಇನ್ನೊಂದು  ಪ್ರಾಣಿಯು ಬದುಕುವುದು ನಿಸರ್ಗದ ನಿಯಮ.  ಅಂತೆಯೇ,  ಈ ಕಂಬಳಿಹುಳುಗಳನ್ನು ಬೇಟೆಯಾಡಲು ಹಕ್ಕಿಗಳು ಇದ್ದೆ ಇವೆ.  ಪರಭಕ್ಷಕಗಳಿಂದ ರಕ್ಷಿಸಿಕೊಳ್ಳಲು ಮರೆಮಾಚಿಕೊಳ್ಳಲೇ ಬೇಕು.  ಮರೆಮಾಚುವುದು ಅಂದರೆ ಅಡಗಿಕೊಳ್ಳುವುದಲ್ಲ. ಅಡಗಿಕೊಂಡರೂ ಎಷ್ಟು ಹೊತ್ತು ಅಡಗಿಕೊಂಡಿರಬಹುದು? ಆಹಾರಕ್ಕಾಗಿ ಹೊರಗೆ ಬರಲೇಬೇಕು.  ಅದಕ್ಕಾಗಿ, ಕಬಳಿಸಲು ಬರುವ  ಇತರ ಪ್ರಾಣಿಗಳಿಗೆ ತಮ್ಮ  ಇರುವಿಕೆಯನ್ನು ಗೊತ್ತಾಗದಂತೆ ಮಾಡಿದರೆ, ಬದುಕುಳಿಯಬಹುದು.   ಕೆಲವು ಪ್ರಾಣಿ ಪ್ರಭೇದಗಳು   ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ವಿಕಾಸಪಥದಲ್ಲಿ ಕಂಡುಕೊಂಡ ಹೊಂದಾಣಿಕೆಯ  ವಿಧಾನವೇ  ಮರೆಮಾಚುವಿಕೆ.  ಅಂತಹುದೇ ಒಂದು ಮರೆಮಾಚುವಿಕೆ  ನಾವು ನೋಡುತ್ತಿರು ಈ  ವಿಚಿತ್ರ ನೋಟದ ಕಂಬಳಿಹುಳು. 

    ಸುಲಭದಲ್ಲಿ  ಗುರುತಿಸಲು ಸಾಧ್ಯವಿಲ್ಲ 

    ಮೈಗಂಟಿಕೊಂಡಿರುವ ಹಸಿರು ಬಣ್ಣದ ಸೂಜಿಯಂತಹ ಬಿರುಗೂದಲು ಹೊಂದಿರುವ   ಈ ಕಂಬಳಿಹುಳು  ಎಲೆಯ ಮೇಲೆ  ಇದ್ದರೆ  ಯಾವ ಪ್ರಾಣಿಯು ಸುಲಭದಲ್ಲಿ  ಗುರುತಿಸಲು ಸಾಧ್ಯವಿಲ್ಲ. ಏಕೆಂದರೆ,  ದೇಹದ ಹಸಿರು ಬಣ್ಣವು ಎಲೆಯ ಬಣ್ಣದೊಂದಿಗೆ ಸಂಪೂರ್ಣವಾಗಿ ಸಂಯೋಜನೆಗೊಂಡಿದೆ. ಕೇವಲ ಬಣ್ಣ ಮಾತ್ರವಲ್ಲ  ಎಲೆಗಳಲ್ಲಿರುವ ಮಧ್ಯನಾಳ  (ಮಿಡ್ ರಿಬ್ ) ಮತ್ತು  ಸಣ್ಣ ನಾಳಗಳ (Veins) ಹೋಲುವ ರಚನೆಯನ್ನೂ  ಹೊಂದಿರುವುದರಿಂದ ಇದು  ಎಲೆಯ  ಮೇಲೆ ವಿಶ್ರಾಂತಿ  ಸ್ಥಿತಿಯಲ್ಲಿದ್ದರೆ ಗುರುತಿಸಲು ಸಾಧ್ಯವೇ ಇಲ್ಲ.    ಆ ಮೂಲಕ ತಮ್ಮ ಇರುವಿಕೆ ಇದ್ದರೂ   ಇಲ್ಲದಂತೆ ಮರೆಮಾಚಿಕೊಂಡು  ತಮ್ಮನ್ನು  ಆಹಾರವಾಗಿ ಕಬಳಿಸಲು ಬರುವ ಪ್ರಾಣಿಗಳಿಂದ ರಕ್ಷಿಸಿಕೊಳ್ಳುತ್ತದೆ.   ದೇಹದ  ಮುಂಭಾಗವು  ಹಸಿರು ಬಣ್ಣದ ಬಿರುಗೂದಲುಗಳ ಜಾಲರಿಯಲ್ಲಿ ಮುಚ್ಚಲ್ಪಟ್ಟಿದ್ದರೂ  ಅಡಿಭಾಗದಲ್ಲಿ ಹಳದಿ ಮಿಶ್ರಿತ ಬಿಳಿ ಬಣ್ಣ  ಹೊಂದಿದೆ. 

    ಯುಥಾಲಿಯಾ ಅಕಾಂಥಿಯಾ ಕಂಬಳಿಹುಳುವನ್ನು ನೋಡಿ ಆಶ್ಚರ್ಯಗೊಂಡಿರುವ ನಾವು  ಇದರ ಮೊಟ್ಟೆಯನ್ನು ನೋಡಿದರೆ ಇನ್ನೂ ವಿಸ್ಮಯ  ಮೂಡಿಸುತ್ತದೆ. ಇದರ ಮೊಟ್ಟೆಯು  ಕೊರೊನಾವೈರಸ್ ರಚನೆಗೆ ಹೋಲುತ್ತದೆ.!  ಎಲ್ಲಿಯ ಕೊರೊನಾವೈರಸ್? ಎಲ್ಲಿಯ ಯುಥಾಲಿಯಾ ಅಕಾಂಥಿಯಾ ಚಿಟ್ಟೆಯ ಮೊಟ್ಟೆ?; ಒಂದಕ್ಕೊಂದು ಸಂಬಂಧವೇ ಇಲ್ಲ. ಆದರೂ, 1.5-1.8 ಮಿಲಿ ಮೀಟರ್ ಗಾತ್ರದ ಅಪ್ಸರೆ ಚಿಟ್ಟೆಯ ಮೊಟ್ಟೆ  ಮತ್ತು  120–140 ನ್ಯಾನೊಮೀಟರ್ ಗಾತ್ರದ ಕೊರೊನಾವೈರಸ್ ಹೊರನೋಟ ಸುಮಾರಿಗೆ  ಒಂದೇ  ತೆರನಾಗಿರುವುದು ವಿಸ್ಮಯ ಮೂಡಿಸುವಂತ್ತದ್ದು.  ‘ಇಲ್ಲಿ ಕೊರೊನಾ ಇದೆ ಹತ್ತಿರ ಬರಬೇಡಿ’ ಎಂದು ಮನುಷ್ಯರಿಗೆ ಬೆದರಿಸಲು    ತಾಯಿ ಚಿಟ್ಟೆಯು    ಈ ತರಹದ   ಮೊಟ್ಟೆಗಳನ್ನು  ಇಡುತ್ತದೆ”  ಅಂತ ಯಾರಾದರೂ ಹೇಳಿದರೆ ಕೋವಿಡ್-19 ಮಹಾಮಾರಿಯ  ಈ ಸಂದರ್ಭದಲ್ಲಿ ಒಪ್ಪಬೇಕಾಗಬಹುದು….!!!.  


    https://upload.wikimedia.org/wikipedia/commons/2/28/Euthalia_aconthea_egg_sec.jpg

    ಅಂದ ಹಾಗೆ,  ಹಬ್ಬ ಹರಿದಿನ ಮದುವೆ ಮುಂಜಿಗಳಿಗೆ  ತಳಿರು-ತೋರಣ ಕಟ್ಟಲು, ಶಾಸ್ತ್ರಕ್ಕೆ ಉಪಯೋಗಿಸಲು   ಮಾವಿನ ಮರದ ಎಲೆಗಳನ್ನು ಕೊಯ್ಯುವಾಗ,  ಮನೆಗೆ ತಂದಾಗ ಜಾಗೃತೆ ವಹಿಸಿ.  ಮರೆಮಾಚಿರುವ   ಯುಥಾಲಿಯಾ ಅಕಾಂಥಿಯಾ ಕಂಬಳಿಹುಳು ಇರಬಹುದು. ಅದನ್ನು  ಸ್ಪರ್ಶಿಸಿದರೆ   ಕೆಲವು  ಗಂಟೆಗಳವರೆಗೆ ತೀವ್ರ ಕಿರಿಕಿರಿ, ತುರಿಕೆ  ಉಂಟಾಗುತ್ತದೆ !

    ಪೇಟೆಯಲ್ಲಿ ತಾಳಿದವನೆ ಬಾಳಿಯಾನು

    ಬೆಂಗಳೂರಿನ ಟ್ರಾಫಿಕ್‌ ನಲ್ಲಿ ವಾಹನ ಸಂಚಾರದ ಸಮಯದಲ್ಲಿ ಹಿರಿಯರು ಹೇಳುತ್ತಿದ್ದ ಮಾತೆಂದರೆ, ʼ ನೀನು ಓಡಿಸುವಾಗ ನಿಯಮಬದ್ಧವಾಗಿದ್ದರೆ ಸಾಲದು- ನಿನ್ನ ಸಮೀಪಕ್ಕೆ ಬರುವ ವಾಹನ ಚಾಲಕರು ಯಾವ ರೀತಿ ತಪ್ಪುಗಳೆಸಗುವರು ಎಂಬುದನ್ನೂ ಸಹ ಊಹಿಸಿದಲ್ಲಿ ಮಾತ್ರ ನೀನು ಯಶಸ್ವಿಯಾಗುತ್ತೀಯʼ ಎಂಬುದಾಗಿದೆ. ಇಂತಹ ಪಾಲಿಸಿಯನ್ನು ಈಗ ದೈನಂದಿನ ಜೀವನದಲ್ಲೂ ಅಳವಡಿಸಿಕೊಳ್ಳಲೇಬೇಕಾದ ಪರಿಸ್ಥಿತಿಯನ್ನು ಕೋವಿಡ್‌ ಜಾರಿಗೊಳಿಸಿದಂತಾಗಿದೆ. ಕೋವಿಡ್‌ ಸೋಂಕಿತರು, ಅವರು ಯಾರೇ ಆಗಿರಲಿ ಅಂದರೆ, ಸ್ನೇಹಿತರಾಗಲಿ, ಬಂಧುಗಳಾಗಲಿ, ಅಪರಿಚಿತರಾಗಲಿ ಎಲ್ಲರನ್ನೂ ಸಂಪರ್ಕದಿಂದ ದೂರವಿಡುವ ಹವ್ಯಾಸ ಮುನ್ನೆಚ್ಚರಿಕೆಯಾಗಿ ಜಾರಿಯಾಗಿದೆ.

    ಈಗಿನ ಸಮಯದಲ್ಲಿ ಈ ವಿಚಾರ ಎಲ್ಲಾ ವಲಯಗಳಿಗೂ ಅನ್ವಯವಾಗುವಂತಿದ್ದು, ಆಯಾ ವಲಯದ ಸಾಕ್ಷರತೆಯನ್ನು ಬೆಳೆಸಿಕೊಳ್ಳುವುದು ಅನಿವಾರ್ಯವಾಗಿದೆ. ಆರೋಗ್ಯ ಸಂಬಂಧಿತ ವಿಚಾರದಲ್ಲಿ ಸ್ವಾಸ್ಥ ಸಾಕ್ಷರತೆ, ವಿತ್ತೀಯ ವಿಚಾರದಲ್ಲಿ ಆರ್ಥಿಕ ಸಾಕ್ಷರತೆಯಂತಹ ಸ್ಪೆಷಲೈಸೇಷನ್‌ ಹೊಂದಿರಲೇ ಬೇಕಾಗಿರುವುದು ಅನಿವಾರ್ಯವೆಂಬಂತಾಗಿದೆ.

    ಹೂಡಿಕೆ ಲಾಭದಾಯಕವಾಗಲು ಸಮಯ ನೀಡಬೇಕು

    ಯಾವುದೇ ಒಂದು ಪ್ರಯತ್ನ ಯಶಸ್ವಿಯಾಗಲು, ಅದಕ್ಕೆ ಬೇಕಾದಷ್ಟು ಸಮಯಾವಕಾಶ ನೀಡಲೇ ಬೇಕು. ಆಹಾರ ಸೇವಿಸಿದ ನಂತರ ಅದು ಪಚನವಾಗಿ ರಕ್ತಗತವಾಗಲೂ ಸಹ ಸಮಯಾವಕಾಶ ಬೇಕಾಗುತ್ತದೆ. ಅದೇ ರೀತಿ ವಿತ್ತೀಯ ಪೇಟೆಗಳಲ್ಲಿಯ ಚಟುವಟಿಕೆಗಳಲ್ಲೂ ಸಹ ಒಂದು ಹೂಡಿಕೆ ಲಾಭದಾಯಕವಾಗಲು ಬೇಕಾದ ಸಮಯಾವಕಾಶ ನೀಡಲೇಬೇಕಾಗುತ್ತದೆ. ಈಗಿನ ದಿನಗಳಲ್ಲಿ ವಿತ್ತೀಯ ಪೇಟೆಯ ಚಟುವಟಿಕೆಯಲ್ಲಿರುವವರಿಗೆ ಪದ್ದತಿಯ ಮೇಲೆ ನಂಬಿಕೆಯೇ ಇಲ್ಲದಂತಾಗಿ, ದೊರೆತ ಅವಕಾಶಗಳನ್ನು ತ್ವರಿತವಾಗಿ ಕೈಗೆಟುಕಿಸಿಕೊಳ್ಳುವ ಪ್ರಯತ್ನಗಳೇ ಹೆಚ್ಚಾಗಿವೆ. ಹಾಗಾಗಿ ಹೆಚ್ಚಿನ ಮಟ್ಟದ ಅಸ್ಥಿರತೆಯನ್ನುಂಟುಮಾಡುತ್ತಿದೆ.

    ಯಾವುದೇ ಒಂದು ವ್ಯವಹಾರಿಕ ಚಟುವಟಿಕೆ ಯಶಸ್ಸು ಕಾಣಲು ಪ್ರಮುಖವಾಗಿ ಆವಶ್ಯವಿರುವುದು ಗ್ರಾಹಕರು ಮತ್ತು ಅವರ ಸಂಖ್ಯೆ. ಷೇರುಪೇಟೆಯ ದೃಷ್ಟಿಯಿಂದ ನೋಡಿದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದ್ದರೂ, ನಮ್ಮ ದೇಶದ ಜನಸಂಖ್ಯೆಗೆ ಹೋಲಿಸಿದಲ್ಲಿ ಅತಿ ಕಡಿಮೆ. ಆದರೂ ಷೇರುಪೇಟೆಯ ಬಗ್ಗೆ ಹೆಚ್ಚಿನವರಿಗೆ ಆಸಕ್ತಿ ಮೂಡುತ್ತಿದೆ. ಷೇರುಪೇಟೆ ಚಟುವಟಿಕೆಗೆ, ಕಳೆದ ಜುಲೈ ತಿಂಗಳಲ್ಲಿ 5.15 ಕೋಟಿ ಜನರು ನೋಂದಾಯಿಸಿಕೊಂಡಿದ್ದು ಆ ಸಂಖ್ಯೆ ಈಗ ಅಂದರೆ ಅಕ್ಟೋಬರ್‌ ಮಧ್ಯೆ ಈ ಸಂಖ್ಯೆಯು 5.56 ಕೋಟಿಗೆ ಏರಿಕೆ ಯಾಗಿದೆ. ಅಂದರೆ ಮೂರು ತಿಂಗಳಲ್ಲಿ ಸುಮಾರು 40 ಲಕ್ಷ ಹೊಸ ಹೂಡಿಕೆದಾರರು ನೋಂದಾಯಿಸಿಕೊಂಡಿದ್ದಾರೆ.

    ಷೇರುಪೇಟೆಯ ಸೂಚ್ಯಂಕಗಳು ಉತ್ತುಂಗದಲ್ಲಿದ್ದು ಅನೇಕ ಪ್ರಮುಖ ಕಂಪನಿಗಳ ಷೇರಿನಗಳು ಗಗನಕ್ಕೇರಿವೆ. ಆದರೂ ಹೆಚ್ಚಿನವರಿಗೆ ಗರಿಷ್ಠದಲ್ಲಿರುವ ಷೇರುಗಳ ಹಿಂದೆ ಸಾಗುವುದು ವಾಡಿಕೆಯಾಗಿದೆ. ಷೇರುಪೇಟೆಯಲ್ಲಿ ಈಗಿನ ದಿನಗಳಲ್ಲಿ, ಲಾಭ ಗಳಿಸಲು ಯಾವುದೇ ನಿಖರವಾದ ನಿಯಮಾವಳಿ ಇಲ್ಲ. ಆದರೆ ಯಾವುದೇ ಸಮಯ ನಿರ್ಬಂಧವಿಲ್ಲದ Value pick – profit book ಪದ್ಧತಿಯೊಂದೇ ಸದಾ ಹಸಿರಾದ ಸಮೀಕರಣವಾಗಿದೆ.

    ಷೇರುಪೇಟೆಯ ಬಗ್ಗೆ ಕೆಲವು ಕಲ್ಪನೆಗಳು:

    • ಸೆನ್ಸೆಕ್ಸ್‌ ಏರಿಕೆ ಕಂಡಾಗ ಹೂಡಿಕೆದಾರರ ಲಾಭವೆಂದು, ಇಳಿಕೆ ಕಂಡಾಗ ಹೂಡಿಕೆದಾರರ ಹಾನಿ ಎಂದು ಬಿಂಬಿಸುವುದು ಕೇವಲ ಕಾಲ್ಪನಿಕ. ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ಬಗ್ಗೆ ಹೂಡಿಕೆದಾರರು ಹೆಚ್ಚು ಚಿಂತಿಸ ಬೇಕಿಲ್ಲ.
    • ಐ ಪಿ ಒ ಗಳಲ್ಲಿ ಹೂಡಿಕೆ ಸದಾ ಲಾಭಕರ ಎಂಬುದು ಸರಿಯಲ್ಲ ಎಂಬುದನ್ನು ಈತ್ತೀಚಿನ ಯುಟಿಐ ಎ ಎಂಸಿ, ಏಂಜಲ್‌ ಬ್ರೋಕಿಂಗ್‌, ಗಳಲ್ಲಿ ಉಂಟಾದ ಹಾನಿ ತೋರಿಸಿದೆ. ಐಪಿಒ ಗಳಲ್ಲಿ ಹೆಚ್ಚು ಲಾಭ ಗಳಿಸುತ್ತಿರುವುದು ಕೆಲವು ಆಂಕರ್‌ ಇನ್ವೆಸ್ಟರ್‌ ಸಂಸ್ಥೆಗಳು ಮಾತ್ರ. ಐಸಿಐಸಿಐ ಪ್ರುಡೆನ್ಶಿಯಲ್ಸ್‌, ಗೋಲ್ಡ್‌ ಮನ್‌ ಸಾಕ್ಸ್‌ ನಂತಹ ಸಂಸ್ಥೆಗಳು ಆಂಕರ್‌ ಇನ್ವೆಸ್ಟರ್ಸ್‌ ಗಳಂತಹ ಸಂಸ್ಥೆಗಳು ಇತ್ತೀಚೆಗೆ ಬಂದ ಕೆಂಕಾನ್‌ ಸೆಷಾಲಿಟಿ ಕೆಮಿಕಲ್ಸ್‌, ಹ್ಯಾಪಿಯೆಸ್ಟ್‌ ಮೈಂಡ್ಸ್‌, ಯುಟಿಐ ಎಎಂಸಿಯಂತಹ ಐಪಿಒಗಳಲ್ಲಿ ಆಂಕರ್‌ ಇನ್ವೆಸ್ಟರ್ಸ್‌ ಆಗಿ ಭಾಗವಹಿಸಿದ್ದು ಈ ಹೂಡಿಕೆಗೆ ಕೇವಲ 30 ದಿನಗಳ ಲಾಕ್‌ ಇನ್‌ ನಿಯಮವಿದೆ. ʼ ಗ್ರೇʼ ಮಾರ್ಕೆಟ್‌ ಎಂಬ ಕಾನೂನು ಬಾಹಿರ ವ್ಯವಸ್ಥೆಯ ದರಗಳ ಕಾರಣ ಹೂಡಿಕೆದಾರರನ್ನು ಸೆಳೆಯಲಾಗುವ ಪ್ರಯತ್ನಕ್ಕೆ ಬಲಿಯಾಗದೆ ದೂರವಿರುವುದು ಕ್ಷೇಮ. ಕೆಂಕಾನ್ ಕಂಪನಿಯು ಈ ತಿಂಗಳ 1 ರಂದು ಲೀಸ್ಟಿಂಗ್‌ ಆಗಿ ಅಂದು ರೂ.743 ರ ಸಮೀಪದಿಂದ 16 ರಂದು ಶುಕ್ರವಾರ ಈ ಷೇರು ರೂ.398 ರವರೆಗೂ ಕುಸಿದಿದ್ದು, ಲೀಸ್ಟಿಂಗ್‌ ನಂತರ ಖರೀದಿಸಿದವರ ಹೂಡಿಕೆ ಕರಗಿತು, ಮಾರಾಟಮಾಡಿಕೊಂಡವರು ಸುಲಭವಾಗಿ ಲಾಭಗಳಿಸಿಕೊಂಡವು. ಇದೇ ರೀತಿ ಲೀಸ್ಟಿಂಗ್‌ ಆದ ಕಂಪನಿಗಳು ಆರಂಭಿಕ ಶೂರತ್ವ ಪ್ರದರ್ಶಿಸಿವೆ.
    • ಪ್ರಮುಖ ಕಂಪನಿ ಷೇರಿನ ಬೆಲೆ ಇಳಿಕೆಯಾದಾಗ Value pickಗೆ ಅವಕಾಶವೆಂಬುದನ್ನು ನೆನಪಿನಲ್ಲಿಡಬೇಕು. ಆದರೆ ಖರೀದಿ ಮಾತ್ರ ಹಂತ ಹಂತವಾಗಿರಬೇಕು. ಒಮ್ಮೆಲೆ lumpsum / wholesale ಆಗಿ ಹೂಡಿಕೆಯ ನಿರ್ಧಾರ ಅಪಾಯಕರವೂ ಆಗಬಹುದು.
    • ಪ್ರತಿಯೊಂದು ಭಾರಿ ಏರಿಕೆಯನ್ನು profit book ಗೆ ಉಪಯೋಗಿಸಿಕೊಂಡಲ್ಲಿ ಬಂಡವಾಳ ಸುರಕ್ಷತೆಯೊಂದಿಗೆ ಲಾಭ ಗಳಿಕೆಯ ಕಾರ್ಯವೂ ಆಗಬಹುದು. ಇದೇ ಷೇರಿನ ಬೆಲೆ ಕಡಿಮೆಯಾದಾಗ ಮರುಖರೀದಿಗೆ ಅವಕಾಶವಾಗುವುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕಳೆದ ಕೆಲವು ದಿನಗಳಿಂದ ಕಂಪನಿಗಳಾದ ಟಾಟಾ ಸ್ಟೀಲ್‌, ಗ್ಲೆನ್‌ ಮಾರ್ಕ್‌ ಫಾರ್ಮ, ಯು ಪಿ ಎಲ್‌, ಎಸ್‌ ಬಿ ಐ, ಕಮ್ಮಿನ್ಸ್‌, ಶಿಲ್ಪಾ ಮೆಡಿಕೇರ್‌, ಎಲ್‌ ಐ ಸಿ ಹೌಸಿಂಗ್‌, ಬಜಾಜ್‌ ಫೈನಾನ್ಸ್‌, ಹೆಚ್‌ ಸಿ ಎಲ್‌ ಟೆಕ್ನಾಲಜೀಸ್‌ ಮುಂತಾದವುಗಳ ಏರಿಳಿತಗಳಾಗಿವೆ.
    • ಕಂಪನಿಗಳು ಘೋಷಿಸಿದ ಕಾರ್ಪೊರೇಟ್‌ ಫಲಗಳಿಗನುಣವಾಗಿ ಷೇರಿನ ದರಗಳು ಏರಿಕೆ ಕಂಡಾಗ ಅಂತಹ ಕಂಪನಿಗಳನ್ನುಖರೀದಿಸುವಾಗ ಅತಿ ಹೆಚ್ಚಿನ ಎಚ್ಚರ ಅಗತ್ಯ. ಲಾಭಾಂಶ ವಿತರಣೆ ನಂತರ ಈ ಕಂಪನಿಗಳು ಭಾರಿ ಕುಸಿತ ಕಾಣುತ್ತಿರುವುದು ಇತ್ತೀಚಿನ ಟ್ರೆಂಡ್‌ ಆಗಿದೆ. ಇದಕ್ಕೆ ಉದಾಹರಣೆಯಾಗಿ ಬಾಲ್ಮರ್‌ ಲೌರಿ, ಬಾಲ್ಮರ್‌ ಲೌರಿ ಇನ್ವೆಸ್ಟ್ ಮೆಂಟ್ಸ್‌, ಐಟಿಸಿ, ಕ್ಲಾರಿಯಂಟ್‌, ಪಿಟಿಸಿ ಇಂಡಿಯಾ, ಟಿ ಎನ್‌ ಪಿ ಎಲ್‌, ಟಾಟಾ ಕೆಮಿಕಲ್ಸ್‌ ನಂತಹ ಕಂಪನಿಗಳು ಪ್ರದರ್ಶಿಸಿದ ಏರಿಳಿತಗಳಾಗಿವೆ.
    • ಯಾವುದೇ ವಿಶ್ಲೇಷಣೆಗಳನ್ನು ಅಳವಡಿಸಿಕೊಳ್ಳುವ ಮುನ್ನ ಚಿಂತಿಸಿ ನಿರ್ಧರಿಸುವುದು ಸುರಕ್ಷಿತ. ಹೂಡಿಕೆ ಮಾಡಿದ ಹಣಕ್ಕೆ ತಕ್ಷಣದ ಪ್ರತಿಫಲ ನಿರೀಕ್ಷಿಸುವುದು ಸರಿಯಲ್ಲ, ಆದರೆ ಲಾಭದ ಅವಕಾಶ ದೊರೆತರೆ ಮಾತ್ರ ಉಪಯೋಸಿಕೊಳ್ಳುವುದು ಮಾತ್ರ ಬಿಡಬಾರದು.

    ನೆನಪಿರಲಿ: ಷೇರುಪೇಟೆಯು ಈಗಿನ ದಿನಗಳಲ್ಲಿ ಆರಂಭದಲ್ಲಿ ಹೂಡಿಕೆಯಾಗಿದ್ದರೂ, ನಂತರದಲ್ಲಿ ಅದು ವ್ಯವಹಾರದಂತೆ ಸದಾ ನಿಗಾವಹಿಸಿ ದೊರೆತಂತ ಅವಕಾಶಗಳನ್ನು ಕೈಗೆಟುಕಿಸಿಕೊಳ್ಳುವುದು ಅತ್ಯವಶ್ಯ. ಆಗಲೇ ಬಂಡವಾಳ ಸ್ವಲ್ಪ ಮಟ್ಟಿನ ಸುರಕ್ಷತೆ ಕಾಣಬಹುದ.

    ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ತ್ರಿಭುವನ ಜನನಿ ಜಗನ್ಮೋಹಿನಿ

    ಈ ದಿನದ ಸಂಗೀತ ಸಂಜೆಯನ್ನು ಬೆಂಗಳೂರಿನ ಮಮತಾದೇವಿ ಟಿ.ಜಿ. ನಡೆಸಿಕೊಟ್ಟಿದ್ದಾರೆ.

    ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ಈ ಸಂಗೀತ ಸಂಜೆ ಚಂದ್ರಚೂಡ ಶಿವಶಂಕರ ಪಾರ್ವತಿ ರಮಣ ನಿನಗೆ ನಮೋ ನಮೋ ಎನ್ನುವ ಮೂಲಕ ಶಿವನನ್ನು ಧ್ಯಾನಿಸುತ್ತದೆ. ಮುಂದೆ ತ್ರಿಭುವನ ಜನನಿ ಜಗನ್ಮೋಹಿನಿ..,ರಾಜ ರಾಜೇಶ್ವರಿ ದೇವಿ ಕನ್ಯಾಕುಮಾರಿ, ವೇದವಾಣಿ ಪುಣ್ಯ ಜನನಿ ಗೀತೆಗಳ ಮೂಲಕ ದೇವಿಯನ್ನು ಆರಾಧಿಸಿ ,ಅಂಬೆಗಾಲಿಕ್ಕುತಲಿ ಬಂದ ಗೋವಿಂದ ಎಂದು ಜಗದೋದ್ಧಾರನನ್ನು ಧ್ಯಾನಿಸುತ್ತಾ ಸಂಪನ್ನವಾಗುತ್ತದೆ.

    ಭಾರತಿ ಎಸ್ ಎನ್ ಅವರ ನಿರರ್ಗಳ ವ್ಯಾಖ್ಯಾನ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುವಂತೆ ಮಾಡುತ್ತದೆ.

    ನೀವು ಆಲಿಸಿ, ಪ್ರತಿಕ್ರಿಯಿಸಿ.

    ವೀಣಾ ಅವರ ಮನೆಯ ಗೊಂಬೆ ಲೋಕ

    ಬೆಂಗಳೂರು ಬಸವನ ಗುಡಿಯ ವೀಣಾ ರವೀಂದ್ರನಾಥ್ ಅವರ ಮನೆಯ ಬೊಂಬೆ ಲೋಕ ವಿಶಿಷ್ಟ. ಸುಂದರ ಬೊಂಬೆಗಳನ್ನು ಥೀಮ್ ಆಧಾರಿತವಾಗಿ ಜೋಡಿಸುವುದು ಇವರ ವೈಶಿಷ್ಟ್ಯ. ಇಡೀ ಕುಟುಂಬದಲ್ಲಿ ದಸರಾ ಬಂದಾಗ ಸಂಭ್ರಮ. ಗೊಂಬೆ ಜೋಡಿಸುವಲ್ಲಿ ಇಡೀ ಕುಟುಂಬವೇ ತೊಡಗುತ್ತದೆ.

    ಸುಮಾರು ೫೦೦೦ ಗೊಂಬೆಗಳ ಸಂಗ್ರಹ ಇವರಲ್ಲಿದೆ. ಈ ಬಾರಿ ಕೋವಿಡ್ ಕಾರಣದಿಂದ ಯಾರನ್ನೂ ಮನೆಗೆ ಕರೆಯುತ್ತಿಲ್ಲ. ಆನ್ ಲೈನ್ ನಲ್ಲೇ ನಮ್ಮ ಮನೆಯ ಗೊಂಬೆಗಳನ್ನು ನೋಡಬೇಕು ಎನ್ನುತ್ತಾರೆ ವೀಣಾ ರವೀಂದ್ರನಾಥ್.

    ಅವರ ಮನೆಯ ಬೊಂಬೆ ಆಲ್ಬಂ ಕನ್ನಡಪ್ರೆಸ್.ಕಾಮ್ ಗೊಂಬೆ ಹಬ್ಬದಲ್ಲಿ ಹೀಗೆ ತೆರೆದುಕೊಳ್ಳುತ್ತಿದೆ.

    error: Content is protected !!