25.1 C
Karnataka
Thursday, May 21, 2026
    Home Blog Page 143

    ಸರಳ ಕಾರ್ಟೂನ್ ಗಳಿಂದ ಕೋವಿಡ್ ಜಾಗೃತಿ:ಸಂತೇಬೆನ್ನೂರು ಪೊಲೀಸರ ವಿನೂತನ ಪ್ರಯತ್ನ

    ಈ ವರ್ಷದ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಅಂದಿನಿಂದ ಕೋವಿಡ್ ತಡೆಯಲು ಹತ್ತು ಹಲವಾರು ವಿಧಾನಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನ ನಡೆಯಿತು. ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ತಮ್ಮ ಜೀವದ ಹಂಗು ತೊರೆದು ಕೋವಿಡ್ ನಿಯಂತ್ರಣಕ್ಕೆ ಶ್ರಮಿಸಿದ್ದಾರೆ.

    ಸಂತೇಬೆನ್ನೂರಿನ ಪೊಲೀಸ್ ಠಾಣೆ ಆರಂಭದಿಂದಲೂ ವಿನೂತನವಾಗಿ ಕೋವಿಡ್ ನಿಯಂತ್ರಣ ಅಭಿಯಾನ ನಡೆಸಿದರು. ಆರಂಭದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲಾ ಧರ್ಮದ ಧರ್ಮಗುರುಗಳನ್ನು ಆಹ್ವಾನಿಸಲಾಯಿತು. ಅವರ ಮೂಲಕ ಕೊರೊನಾ ತಡೆಗೆ ಮಾರ್ಗಸೂಚಿಗಳನ್ನು ಮನದಟ್ಟು ಮಾಡಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥ ನಡೆಸಿ ಮನೆ-ಮನೆಗೆ ಕರಪತ್ರ ಹಂಚಲಾಯಿತು. ಡಿವೈಎಸ್ಪಿ ಪ್ರಶಾಂತ್ ಮನೋಳಿ, ಇನ್ಸ್ ಪೆಕ್ಟರ್ ಆರ್.ಆರ್.ಪಾಟೀಲ್, ಪಿಎಸ್ ಐ ಶಿವರುದ್ರಪ್ಪ ನೇತೃತ್ವ ವಹಿಸಿದ್ದರು.

    ಆನಂತರ ಲಾಕ್ ಡೌನ್ ನಲ್ಲಿ ಹೊರ ರಾಜ್ಯಗಳಿಂದ ಬಂದ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡರು. ಸೀಲ್ ಡೌನ್ ಗಳ ಮೂಲಕ ನಿಯಂತ್ರಣಕ್ಕೆ ಶ್ರಮಿಸಿದರು.

    ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಸರಳ ವ್ಯಂಗ್ಯ ಚಿತ್ರಗಳ ಮೂಲಕ ಸಂತೇಬೆನ್ನೂರು ಪೊಲೀಸ್ ಠಾಣೆ ಕೋವಿಡ್-19 ತಡೆಗೆ ವಿನೂತನ ಪ್ರಯತ್ನ ನಡೆಸಿದೆ.

    ಈಗಾಗಲೇ ಕೋವಿಡ್ ತಡೆಗೆ ವಿಶ್ವದಾದ್ಯಂತ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ. ಅನೇಕ ಬಗೆಯ ಔಷಧಗಳಿಂದ ಸೋಂಕಿತರನ್ನು ಉಪಚರಿಸಲಾಗುತ್ತಿದೆ. ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲು ಹಲವು ವಿಧಾನಗಳು ಪ್ರಚಾರ ಪಡೆದಿವೆ. ಇದೆಲ್ಲಾ ಪ್ರಯತ್ನಗಳ ಹೊರತಾಗಿಯೂ ವೈರಾಣುಗಳ ಹರಡುವಿಕೆ ನಿಯಂತ್ರಣ ತರಲು ಸಾಧ್ಯವಾಗುತ್ತಿಲ್ಲ.

    ರೋಗ ತಡೆಯಲು ಪ್ರಮುಖ ಅಸ್ತ್ರಗಳೇ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಆಗಾಗ್ಗೆ ಸೋಪು ಹಾಗೂ ಸ್ಯಾನಿಟೈಸರ್ ಬಳಕೆಯಿಂದ ಕೈ ತೊಳೆಯುವುದು. ಇವು ಸರಳ, ಖರ್ಚಿಲ್ಲದ ವಿಧಾನಗಳಿಂದ ವೈರಾಣುಗಳ ಹರಡುವಿಕೆ ತಡೆಯಲು ಅನುಸರಿಸಬೇಕಾದ ವಿಧಾನಗಳು. ಎಷ್ಟೆಲ್ಲಾ ಪ್ರಚಾರದ ನಡುವೆಯೂ ಜನರ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ. ಗ್ರಾಮಗಳಲ್ಲಿಯೂ ಕೋವಿಡ್ ಸೋಂಕು ತಾಂಡವವಾಡಲು ನಮ್ಮ ಅಸುರಕ್ಷತೆ ಕಾರಣ.

    ಈ ಹಿನ್ನೆಲೆಯಲ್ಲಿ ‘ನನ್ನ ಮಾಸ್ಕ ನನ್ನ ಲಸಿಕೆ’, ಸ್ವಚ್ಛ ಕೈಗಳು ಸುರಕ್ಷಿತ ಕೈಗಳು, ವ್ಯಕ್ತಿಗತ ಅಂತರವೇ ರೋಗ ನಿರೋಧಕ ಶಕ್ತಿ, ಬುದ್ಧಿವಂತರಾಗಿ, ಸ್ವಚ್ಛವಾಗಿರಿ ಎಂಬ ಘೋಷ ವಾಕ್ಯಗಳ ಕಾರ್ಟೂನ್ ಗಳ ಮೂಲಕ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಅಡಿಯಲ್ಲಿ ಸಾಮಾಜಿಕ ಜಾಲ ತಾಣಗಳ ಮೂಲಕ ಜನಾಂದೋಲನ ನಡೆಸಲಾಗಿದೆ.

    ಸಂತೇಬೆನ್ನೂರಿನ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್ ಪಡೆ ಶುಕ್ರವಾರ ಪಿಎಸ್ ಐ ಶಿವರುದ್ರಪ್ಪ ಮೇಟಿ ನೇತೃತ್ವದಲ್ಲಿ ಕೋವಿಡ್ ತಡೆಯ ಮುಂದುವರಿದ ಭಾಗವಾಗಿ ಗ್ರಾಮದ ಪ್ರಮುಖ ವಾಣಿಜ್ಯ ತಾಣಗಳಿಗೆ ಭೇಟಿ ನೀಡಿ ಅಂತರಕ್ಕಾಗಿ ಚೌಕಗಳನ್ನು ಹಾಕಿದರು. ಮಾಸ್ಕ್ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಕರಪತ್ರದ ಮೂಲಕ ಜಾಗೃತಿ ಮೂಡಿಸಿದರು.

    ಅಕ್ಟೋಬರ್ 3ನೇ ವಾರದಲ್ಲಿ ಸ್ವಲ್ಪ ಇಳಿಮುಖ ಕಂಡ ಸೋಂಕು ಧೃಡ ಪ್ರಕರಣಗಳ ಹಿನ್ನೆಲೆಯಲ್ಲಿ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಮತ್ತೊಮ್ಮೆ ಅಂತರ ಕಾಯ್ದುಕೊಳ್ಳುವ ಪಟ್ಟಿಗಳನ್ನು ಹಾಕುವ ಮೂಲಕ ಮುಂದುವರಿದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕೋವಿಡ್ ನಿಯಂತ್ರಣಕ್ಕೆ ಅಂತರ, ಮಾಸ್ಕ ಧರಿಸುವುದು ಹಾಗೂ ಸ್ವಚ್ಛತೆಯೇ ಸರಳ ಉಪಾಯ. ಮೈಮರೆತು ಉದಾಸೀನ ಮಾಡುವ ಜನರಲ್ಲಿ ಜಾಗೃತಿಯ ಮೂಲಕ ಇವುಗಳ ಅನುಸರಣೆ ಉತ್ತೇಜಿಸುವುದು. ಆ ಮೂಲಕ ಕೊರೊನ ಮುಕ್ತ ಸಮಾಜ ನಿರ್ಮಿಸಲು ಪ್ರಯತ್ನ ನಡೆದಿದೆ ಎನ್ನುತ್ತಾರೆ ಪಿಎಸ್ ಐ ಶಿವರುದ್ರಪ್ಪ ಮೇಟಿ.

    ಕೋಲ್ಕತಾದ ದುರ್ಗಾ ಪಂಡಾಲ್ ನಲ್ಲಿ ಒಂದು ಸುತ್ತು

    ನಮ್ಮಲ್ಲಿ ದಸರಾ ಗೊಂಬೆ ಹಬ್ಬ ಹೇಗೋ ಹಾಗೆ  ಗುಜರಾತ್ ಮತ್ತು ಉತ್ತರ ಭಾರತದಲ್ಲಿ ದಾಂಡಿಯಾ, ಕೋಲ್ಕತಾದಲ್ಲಿ ದುರ್ಗಾ ಪೂಜೆ ತುಂಬಾನೆ ಫೇಮಸ್. ದಸರಾ  ಸಮಯದಲ್ಲಿ ಐದು ದಿನಗಳ  ಕಾಲ ಇಡೀ ಕೋಲ್ಕತಾ ನಗರ ದುರ್ಗೆಯನ್ನು ಆರಾಧಿಸುತ್ತದೆ.

    ಈಗ್ಗೆ ಎರಡು ವರ್ಷಗಳ ಹಿಂದೆ ಕುಟುಂಬ ಸಮೇತವಾಗಿ ಈ ಸಡಗರದ ಉತ್ಸವದಲ್ಲಿ ಭಾಗಿಯಾಗುವ ಅವಕಾಶ ನನಗೆ ತಾನಾಗೆ ಒದಗಿಬಂತು. ನವರಾತ್ರಿಯ ಆರನೇ ದಿನ ಅಂದರೆ ಷಷ್ಟಿಯ ದಿನ ನನ್ನ ದುರ್ಗಾ ಪಂಡಾಲ್ ವೀಕ್ಷಣೆಯ ಕಾರ್ಯಕ್ರಮ ಶುರುವಾಯಿತು. ಈ ದಿನದಂದೆ ದುರ್ಗೆಯನ್ನು ಗಣೇಶ, ಸ್ಕಂದ, ಲಕ್ಷ್ಮಿ, ಸರಸ್ವತಿಯರ ಸಮೇತವಾಗಿ ಪಂಡಾಲ್ ನಲ್ಲಿ ಪ್ರತಿಷ್ಟಾಪಿಸಲಾಗುತ್ತದೆ. ಅಂದು ರಾತ್ರಿ ಆರಂಭವಾದ  ನಮ್ಮ ಪಂಡಾಲ್ ವೀಕ್ಷಣೆ ಬೆಳಗಾದರು ಮುಗಿಯಲಿಲ್ಲ. ಒಂದೊಂದು ಕಡೆಯಂತೂ ಎರಡು ಕಿಮಿ ಉದ್ದದ ಕ್ಯೂ. ಜನಪ್ರಿಯ ಪಂಡಾಲ್ ಗಳ ಮುಂದೆಯಂತೂ ಕರಗಿದಷ್ಟು ಬೆಳೆಯುವ ಸಾಲು. ಕೆಲವು ದುರ್ಗಾ ಮೂರ್ತಿಗಳ ಈ ಸ್ಲೈಡ್ ಶೋ ನೋಡಿ.(ಸಂಗ್ರಹ ಚಿತ್ರ)

    ಕೋಲ್ಕತಾದಲ್ಲಿ ದುರ್ಗಾ ಪೂಜೆಗೆ ವಾಣಿಜ್ಯ ಆಯಾಮವೂ ಇದೆ. ಟೆಲಿಕಾಮ್,ಆಟೋಮೊಬೈಲ್, ಎಫ್‌ಎಂಸಿಜಿ ಕಂಪೆನಿಗಳು  ಈ ಪಂಡಾಲ್ ಗಳನ್ನು ಪ್ರಾಯೋಜಿಸುತ್ತವೆ. ತಮ್ಮ ಬ್ರಾಂಡ್ ಗಳ ಪ್ರಚಾರಕ್ಕೆ ಕೋಟಿಗಟ್ಟಲೆ ವ್ಯಯಿಸುತ್ತವೆ. ಒಂದು ಮೂಲದ ಪ್ರಕಾರ 50000 ಕೋಟಿ ರೂಪಾಯಿಗಳಷ್ಟು ವ್ಯವಹಾರ ಈ ಸಂದರ್ಭದಲ್ಲಿ ನಡೆಯುತ್ತದೆ.

    ದುರ್ಗಾ ಪೂಜೆಗೆ ಎಷ್ಟೇ ವಾಣಿಜ್ಯ ಆಯಾಮ ಬಂದಿದ್ದರು ದುರ್ಗಾ ಮೂರ್ತಿಗಳ ನಿರ್ಮಾಣದಲ್ಲಿ ಹಿಂದಿನ ಪರಂಪರೆ ಹಾಗೆಯೇ ಮುಂದುವರಿದಿದೆ.  ಕೋಲ್ಕತಾದ ಕುಮರತುಲಿಯಲ್ಲಿ ಈ ಮೂರ್ತಿಗಳು ಸಿದ್ಧಗೊಳ್ಳುತ್ತವೆ. ಇಲ್ಲಿನ ಕಲಾವಿದರು ತಲೆ ತಲಾಂತರದಿಂದ ವಿಗ್ರಹಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮೂರ್ತಿ ನಿರ್ಮಾಣದ ಈ ಸ್ಲೈಡ್ ಶೋ ನೋಡಿ.

    ಪಾಶ್ಚಿಮಾತ್ಯರಿಗೆ ಕ್ರಿಸ್ ಮಸ್ ಇರುವಂತೆ ಬಂಗಾಲಿಗಳಿಗೆ ದುರ್ಗಾ ಪೂಜೆ  ದೊಡ್ಡ ಹಬ್ಬ. ಹೊರ ದೇಶದಲ್ಲಿರುವ ಬಂಗಾಲಿಗಳು ಕೂಡ ತಾವು ಎಲ್ಲೇ ಇದ್ದರೂ ಒಂದಾಗಿ ಸೇರಿ ಇದನ್ನು ಆಚರಿಸುತ್ತಾರೆ.

    ಈ ಉತ್ಸವ ದುರ್ಗಾಷ್ಟಮಿಯಂದು ತನ್ನ ಉತ್ತುಂಗವನ್ನು ತಲುಪುತ್ತದೆ. ಅಂದು ಮಹಿಳೆ, ಪುರುಷ ಮಕ್ಕಳು ಎಂಬ ಭೇದವಿಲ್ಲದೆ ದುರ್ಗೆಯ ಆರಾಧನೆಯಲ್ಲಿ ತೊಡಗುತ್ತಾರೆ. ಧುನುಚಿ ನೃತ್ಯದ  ಮೂಲಕ       ದುರ್ಗೆ ಮಾತೆಯನ್ನು ಪ್ರಾರ್ಥಿಸುತ್ತಾರೆ.  ಈ ನೃತ್ಯ ಒಂದು ಮಾದರಿ ನಮ್ಮ ಕೋಲಾಟದಂತೆ ಇರುತ್ತದೆ. ಆದರೆ ಕೋಲಿನ ಬದಲು ಎಲ್ಲರ ಕೈಯಲ್ಲೂ ಧೂಪ ತುಂಬಿದ ಪಾತ್ರೆ ಇರುತ್ತದೆ. ಅದನ್ನು ಕೈಯಲ್ಲಿ ಹಿಡಿದು ನೃತ್ಯ ಮಾಡುತ್ತಾರೆ. ಕೆಲವರಂತೂ ಮೂರು ಪಾತ್ರೆಗಳನನ್ನು ಹಿಡಿದು ನರ್ತಿಸುತ್ತಾರೆ. ಮೂರನೆ ಪಾತ್ರೆಯನ್ನು ಹಲ್ಲಿನ ಮಧ್ಯೆ  ಕೋಲಿನ ಸಹಾಯದಿಂದ ಹಿಡಿದಿರುತ್ತಾರೆ. ಡೋಲಿನ ಸದ್ದಿನೊಂದಿಗೆ ಈ ನೃತ್ಯ ನೋಡುವುದೆ ಒಂದು ಸುಂದರ ಅನುಭವ. ಇದಾದನಂತರ ಭೋಗ್ ಅಂದರೆ ಹಬ್ಬದ ಊಟವನ್ನು ಎಲ್ಲರೂ ಸೇರಿ ಮಾಡುತ್ತಾರೆ.

    ನೋಡುವುದೆ ಸೊಗಸು

     ಪಂಡಾಲ್ ಗಳನ್ನು ನೋಡುವುದೆ ಸೊಗಸು. ಇಡೀ ರಾತ್ರಿ ತಿರಗಿದರೂ ಮುಗಿಯುವುದಿಲ್ಲ. ಇಡಿ ಕೋಲ್ಕತಾ ನಗರ ಅಕ್ಷರಶಃ   ರಸ್ತೆಯಲ್ಲೇ ಇರುತ್ತದೆ. ಪಂಡಾಲ್ ಗಳನ್ನಂತೂ ನಾನಾ ರೀತಿಯಲ್ಲಿ ಅಲಂಕರಿಸಿರುತ್ತಾರೆ. ಮೈಸೂರು ಅರಮನೆ, ಲೋಟಸ್ ಟೆಂಪಲ್, ವೈಟ್ ಹೌಸ್ ಹೀಗೆ ನಾನಾ ರೀತಿಯಲಲ್ಲಿ ಅಲಂಕೃತಗೊಂಡಿರುತ್ತವೆ. ಕೆಲವು ಪಂಡಾಲ್ ಗಳಲ್ಲಿ ದುರ್ಗೆಯ ಆಭರಣಗಳು ಅಪ್ಪಟ ಚಿನ್ನದ್ದೇ ಆಗಿರುತ್ತವೆ. ದುರ್ಗೆಯ ಮೂರ್ತಿಗಳು ಅಷ್ಟೇ ಒಂದಕ್ಕಿಂತ ಒಂದು ಸುಂದರ , ಕಲಾವಿದರ ಕೈ ಚಳಕ ಎದ್ದು ಕಾಣುತ್ತದೆ, ಚಿನ್ನದ ಆಭರಣಗಳ ಕಂಪೆನಿಯೊಂದು ಒಂದು ಪಂಡಾಲ್ ಅನ್ನು ಪ್ರಾಯೋಜಿಸಿದ್ದು ಇಲ್ಲಿ ದುರ್ಗೆ ಗೆ 8 ಕೋಟಿ ರೂಪಾಯಿಗಳ ಆಭರಣ ಹಾಕಲಾಗಿದೆ. ಐದು ದಿನಗಳ ಉತ್ಸವದ ನಂತರ ದುರ್ಗೆಯನ್ನು ಹೂಗ್ಲಿ ನದಿಯಲ್ಲಿ ವಿಸರ್ಜಿಸಲಾಗುವುದು. ಪಂಡಾಲ್ ಗಳ ನೋಟ ನೋಡಿ.

    ನವಗ್ರಗಳ ಆರಾಧನೆ ದುರ್ಗಾ ಪೂಜೆಯಲ್ಲಿ ಮಿಳಿತಗೊಂಡಿದೆ. ಹಳದಿ  ಮತ್ತು ಬಿಳಿ ಬಣ್ಣದ ದುರ್ಗಾ ಮೂರ್ತಿ ಸೂರ್ಯನನನ್ನು, ಆಕೆಯ ವಾಹನವಾದ ಸಿಂಹ ಚಂದ್ರನನ್ನು ಪ್ರತಿನಿಧಿಸುತ್ತದೆ.  ತೆರೆದಿರುವ ಸಿಂಹದ ಬಾಯಿ ರಾಹು  ಹಾಗೂ  ಅದರ ಬಾಲ ಕೇತು. ಬುದ್ಧಿ ಮತ್ತು ಸಿದ್ಧಿಯ ಗಣಪ  ಬುಧನನ್ನು, ಸ್ಕಂದ ಮಂಗಳನ್ನು ಪ್ರತಿನಿಧಿಸುತ್ತದೆ.  ದೇವಿ ಲಕ್ಷ್ಮಿ ಗುರುವನ್ನು,ಸರಸ್ವತಿ ಶುಕ್ರನನ್ನು ಹಾಗೂ ಕೋಣವನ್ನು ಕಚ್ಚುವ ಸರ್ಪ ಶನಿ ಗ್ರಹವನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆಯೂ ಇದೆ.

    ವಲಸೆ ಕಾರ್ಮಿಕರ ಪ್ರತಿಕೃತಿ

    ಈ ಬಾರಿ ಕೋವಿಡ್ ಸುರಕ್ಷ ನಿಯಮಗಳ ಅನುಸಾರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಈ ಬಾರಿ ಡಾಕ್ಟರ್, ಕೋವಿಡ್ , ವಲಸೆ ಕಾರ್ಮಿಕರು ಅಲ್ಲದೆ ಕಲಾವಿದ   ಸೋನ ಸೂಡ್ ಪ್ರತಿಕೃತಿಯನ್ನು ಕೂಡ ಪಂಡಾಲ್ ನಲ್ಲಿ ನಿರ್ಮಿಸಲಾಗಿದೆ.(ಈ ಬಾರಿಯ ಪಂಡಾಲ್ ಆಕರ್ಷಣೆ ಮೇಲಿನ ಸ್ಲೈಡ್ ಶೋ ನಲ್ಲಿ)

    ದಸರಾ ಸಮಯದಲ್ಲಿ ಯಾವುದಾದರು ಒಂದು ವರ್ಷ ಕೊಲ್ಕತಾಗೆ  ಹೋಗಿ ಬನ್ನಿ. ಹೋದಾಗ  ಬಂಗಾಲಿಗಳು ಹೇಳುವ ಹಾಗೆ ದುರ್ಗಾ ಪೂಜೋವನ್ನು ಮರೆಯಬೇಡಿ.

    ಪುಷ್ಪಲತಾ ಅವರ ಕೈಯಲ್ಲಿ ಅರಳಿದ ತಂಜಾವೂರು ಕಲೆ

    ತಂಜಾವೂರು ಕಲಾ ಪ್ರಕಾರ ಒಂದು ವಿಶಿಷ್ಟವಾದ ಪ್ರಕಾರ.ಕಲಾವಿದರ ಕೈಯಲ್ಲಿ ಅರಳುವ ಕಲೆಯನನ್ನು ನೋಡುವುದೆ ಒಂದು ಸೊಗಸು. ನಿಮ್ಮ ದಸರಾ ಹಬ್ಬದ ಸಡಗರ ಹೆಚ್ಚಿಸಲು ಇಲ್ಲಿ ಅಂಥ ಕಲಾ ಸಂಗ್ರಹವನ್ನು ನೀಡುತ್ತಿದ್ದೇವೆ.

    ಇಲ್ಲಿರುವ ತಂಜಾವೂರು ಶೈಲಿಯ ಚಿತ್ರಗಳ ಕಲಾವಿದೆ ಪುಷ್ಪಲತಾ. ಕಳೆದ 30 ವರುಷಗಳಿಂದ ಚಿತ್ರ ರಚನೆಯಲ್ಲಿ ತೊಡಗಿದ್ದಾರೆ. ಅವರ ಕಲಾ ಗುರು ಅವರ ತಂದೆ ದಿ. ಪನ್ನೂರು ಶ್ರೀಪತಿ. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಶ್ರೀಪತಿ ಅವರದು ಕಲಾ ಪರಂಪರೆಯಲ್ಲಿ ದೊಡ್ಡ ಹೆಸರು. ತಂದೆಯಿಂದ ಬಂದ ಪರಂಪರೆಯನ್ನು ಪುಷ್ಪಲತಾ ಮುಂದುವರಿಸಿದ್ದಾರೆ.

    ಇದು ವರೆಗೂ 1000ಕ್ಕೂ ಹೆಚ್ಚು ಚಿತ್ರಗಳನ್ನು ರಚಿಸಿರುವ ಪುಷ್ಚಲತಾ ಇನ್ನೂ ಚಿತ್ರಗಳನ್ನು ರಚಿಸುತ್ತಲೇ ಇದ್ದರೆ. ಪತಿ, ಇಬ್ಬರು ಮಕ್ಕಳ ಸಂತೃಪ್ತ ಕುಟುಂಬ ಅವರ ಕಲಾಸೇವಗೆ ಸದಾ ಬೆಂಬಲ ಕೊಡುತ್ತಾ ಬಂದಿದೆ.

    ಚಿತ್ರಗಳು ಮೆಚ್ಚುಗೆಯಾದರೆ 9886019827 ನಲ್ಲಿ ಪುಷ್ಪಲತಾ ಅವರನ್ನು ಸಂಪರ್ಕಿಸಿ ಒಂದು ಅಭಿನಂದನೆ ಸಲ್ಲಿಸಿ.

    (ಚಿತ್ರ: ಮಾಹಿತಿ ವಿನಯ್ ರಾವ್)

    ವ್ಯಾಸ್- ಸೀತಾಲಕ್ಷ್ಮಿ ದಂಪತಿಗಳ ಗೊಂಬೆ ಸಂಗ್ರಹ

    ಚಿಕ್ಕಕಲ್ಲಸಂದ್ರದ ವ್ಯಾಸ್ ಮತ್ತುಸೀತಾಲಕ್ಷ್ಮಿ ಅವರಿಗೆ ಗೊಂಬೆಗಳ ಮೇಲೆ ವಿಶೇಷ ಪ್ರೀತಿ.ಕಳೆದ ಎರಡು ದಶಕಗಳಿಂದ ತಮ್ಮ ಮನೆಯಲ್ಲಿ ಅನೂಚೂನವಾಗಿ ಗೊಂಬೆಗಳನ್ನು ಕೂಡಿಸಿಕೊಂಡು ಬರುತ್ತಿದ್ದಾರೆ.

    ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳಸಿಕೊಂಡು ಹೋಗಬೇಕು ಎನ್ನುವ ವ್ಯಾಸ್, ಮನೆತುಂಬಾ ಗೊಂಬೆ ತುಂಬಿಸಿದ್ದಾರೆ. ಮನೆಯ ಗೋಡೆಗಳನ್ನು ಸುಂದರ ಸೀರೆಗಳ ಅಲಂಕರಿಸುವ ಮೂಲಕ ಗೊಂಬೆಗಳಿಗೆ ವಿಶೇಷ ಮೆರಗನ್ನು ನೀಡಿದ್ದಾರೆ.

    ಪ್ರತಿವರ್ಷ ಗೊಂಬೆ ನೋಡಲು ಮನೆ ತುಂಬಾ ಜನ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನ ಎನ್ನುವ ವ್ಯಾಸ್ ಗೊಂಬೆಗಳ ಚಿತ್ರವನ್ನು ಪ್ರಟಿಸುವ ಮೂಲಕ ಎಲ್ಲರೂ ನೋಡುವಂತೆ ಮಾಡುತ್ತಿರುವ ಕನ್ನಡಪ್ರೆಸ್.ಕಾಮ್ ನ ಕಾರ್ಯವನ್ನು ಶ್ಲಾಘಿಸಿದ್ದಾರೆ,

    ವ್ಯಾಸ್ ಅವರ ಮನೆಯ ಗೊಂಬೆ ಆಲ್ಬಂ ಇಲ್ಲಿದೆ.

    ಕಾಣದ ವೈರಸ್ ಗಳಿಗಿಂತ ಕಚ್ಚುವ ಸೊಳ್ಳೆಗಳೇ ಪರವಾಗಿಲ್ಲ

    ಆಗ ತಾನೇ ಹಾರಲು ಕಲಿತ ಎಳೆ ರೆಕ್ಕೆಯ ಮರಿ ಸೊಳ್ಳೆಯೊಂದು ಅಮ್ಮನ ಅಪ್ಪಣೆ ಪಡೆದು ಮೊಟ್ಟ ಮೊದಲ ಬಾರಿ ಹಾರಲು ಹೊರಟಿತು . ಸ್ವಚ್ಛದಿಂದ ಹಾರಾಡಿಕೊಂಡು ಮರಳಿ ಅಮ್ಮನ ಹತ್ತಿರ ಬಂದು ಕೂತಿತು . ಅದರ ಖುಷಿ ನೋಡಿದ ಅಮ್ಮ …. ಹೇಗಿತ್ತು ಮಗು ಮೊದಲ ಹಾರಾಟದ ಅನುಭವ ಎಂದು ಕೇಳಿದಳು ?

    ಆಗ ಆ ಮರಿಸೊಳ್ಳೆ ಹೇಳಿತು ಅಮ್ಮಾ ನೀವೆಲ್ಲಾ ಯಾಕೆ ಮನುಷ್ಯರನ್ನ ಕೆಟ್ಟವರು ಅಂತ ಹೇಳ್ತೀರ , ಅವರೆಷ್ಟು ಒಳ್ಳೆಯವರು ಗೊತ್ತಾ , ನಾನು ಫಸ್ಟ್ ಟೈಂ ಹಾರ್ತಿರೋದು ನೋಡಿ ಅವರೆಲ್ಲಾ ನನ್ ಹತ್ತಿರ ಬಂದೂ ಬಂದೂ ಚಪ್ಪಾಳೆ ತಟ್ಟಿ ಅಭಿನಂದಿಸ್ತಾ ಇದ್ರು . ಈ ಮಾತನ್ನು ಕೇಳಿ ಅಮ್ಮ ಸೊಳ್ಳೆ ಅವಕ್ಕಾಯಿತು .

    ಹೌದು……

    ನಮ್ಮ ಮೇಲೆ ಕೂತು ರಕ್ತ ಹೀರುತ್ತಿದ್ದ ಸೊಳ್ಳೆಯನ್ನು ಪಟ್ ಎಂದು ಹೊಡೆದು ಕೊಂದಾಗ ನಮ್ಮೊಳಗೆ ಯಾವುದೇ ರೀತಿಯ ಪಶ್ಚಾತ್ತಾಪವಿರದ ಒಂದು ನಿರುಮ್ಮಳವಾದ ಆನಂದ ಆತ್ಮತೃಪ್ತಿ ಉಂಟಾಗುತ್ತದೆ . ತಪ್ಪಿತಸ್ಥ ಕೀಟಕ್ಕೆ ತಕ್ಕ ಮರಣದಂಡನೆಯ ಶಿಕ್ಷೆ ಕೊಟ್ಟ ಸಂತೋಷ ಲಭಿಸುತ್ತದೆ . ಹೀರಿದ ರಕ್ತವನ್ನು ಅಲ್ಲೇ ಕಕ್ಕಿಸಿ ಅದೇ ರಕ್ತದ ಮಡುವಿನಲ್ಲಿ ಆ ಸೊಳ್ಳೆಯನ್ನು ದಬ್ಬಿದ ಸಮಾಧಾನ ,ನಮ್ಮ ತಂಟೆಗೆ ಬಂದ ಶತ್ರುವೊಬ್ಬನನ್ನು ಹೊಡೆದುರುಳಿಸಿದ ಅನುಭವವಾಗುತ್ತದೆ .

    ಅನಾಫಿಲಿಸ್ ಎಂಬ ಜಾತಿಯ ಹೆಣ್ಣು ಸೊಳ್ಳೆಯಿಂದ ಮಲೇರಿಯಾ ರೋಗ ಹರಡುತ್ತದೆ ಎಂದು ಎಂದೋ ಬಾಲ್ಯದಲ್ಲಿ ಓದಿದ ನೆನಪು ಇನ್ನೂ ಮಾಸೇ ಇಲ್ಲ . ಅಂದಿನಿಂದಲೂ ಸೊಳ್ಳೆಗಳು ಅಂದರೆ ಅದು ನಮ್ಮ ಶತ್ರು .

    ವಿಪರೀತ ಸೊಳ್ಳೆ ಕಾಟ , ಕಚ್ಚಿದ್ರೆ ಇಂಜೆಕ್ಷನ್ ಕೊಟ್ಟಂಗಾಗುತ್ತೆ , ಕಿವಿ ಹತ್ರ ಬಂದು ಗುಂಯ್ ಅಂತ ಸೌಂಡ್ ಮಾಡುತ್ತೆ ನಿದ್ದೇನ ಬರಲ್ಲ ಇವೆಲ್ಲಾ ನಮ್ಮ ದಿನನಿತ್ಯದ ಮಾತುಗಳೇ ….

    ಕರೆಂಟ್ ಹೋದ ಸಮಯದಲ್ಲಿ ಫ್ಯಾನೂ ಇಲ್ಲದೇ ನಿದ್ದೆಯೂ ಸರಿಯಾಗಿ ಬರದೇ ಇದ್ದಾಗ ಸೊಳ್ಳೆಯೊಂದು ಕಿವಿ ಹತ್ರ ಬಂದು ಗುಂಯ್ ಗುಡುವುದು ಇದೆಯಲ್ಲಾ ಅದು ಸೊಳ್ಳೆ ಕಚ್ಚಿ ರಕ್ತ ಹೀರುವುದಕ್ಕಿಂತಲೂ ಹೆಚ್ಚು ನೋವು ಕೊಡುತ್ತದೆ .

    ಸೊಳ್ಳೆಗಳ ವಿರುದ್ಧ ನಾವು ಮೊದಲಿನಿಂದಲೂ ಸಮರ ಸಾರುತ್ತಲೇ ಇದ್ದೇವೆ . ನಮ್ಮತ್ರ ಸುಳಿಯದಂತೆ ಸೊಳ್ಳೆ ಪರದೆ , ಕಿಟಕಿಗಳಿಗೆ ಮೆಷ್ಷು . ಅವುಗಳ ಅಂತ್ಯಕ್ಕೆ ಅಂತಲೇ ಸೊಳ್ಳೆ ಬತ್ತಿ , ಮಸ್ಕಿಟೋ ಮ್ಯಾಟು , ಲಿಕ್ವಿಡ್ಡು , ಲೋಷನ್ನು , ಸ್ಪ್ರೇ ಹೀಗೆ ಹತ್ತು ಹಲವು ಸಾಧನಗಳನ್ನು ಉಪಯೋಗಿಸುತ್ತಿದ್ದೇವೆ . ಈಗ ಅದನ್ನು ಬಡಿಯಲು ವಿನೂತನ ಮಾದರಿಯ ಬ್ಯಾಟರಿ ಬ್ಯಾಟು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ .

    ಸೊಳ್ಳೇ ಕಾಟಕ್ಕೆ ಮತ್ತದರ ನಿಯಂತ್ರಣಕ್ಕೆ ಎಂತಹುದೇ ಆವಿಷ್ಕಾರಗಳಾಗಿ ಹೊಸ ಹೊಸ ಪ್ರಾಡಕ್ಟ್ ಗಳು ಬಜಾರಿಗೆ ಬಂದಿದ್ದರೂ ನಾವು ಸಣ್ಣವರಿದ್ದಾಗ ತರುತ್ತಿದ್ದ ಸುರುಳಿ ಆಕಾರದ ಹಸಿರು ಬಣ್ಣದ ಕಾಯಿಲ್ ಇದೆಯಲ್ಲ ಅದರ ನೆನಪೇ ಚೆಂದ .ಅಂಗಡಿಯಿಂದ ತಂದ ಆ ಜಂಟಿ ಕಾಯಿಲ್ಲನ್ನು ಹುಷಾರಾಗಿ ವಿಂಗಡಿಸಿ ಒಂದನ್ನು ಎತ್ತಿಟ್ಟು ಮತ್ತೊಂದನ್ನು ಸ್ಟ್ಯಾಂಡಿಗೆ ಸಿಕ್ಕಿಸಿ ಅಂಟಿಸಿ ಮನೆಯ ಒಂದು ಮೂಲೆಯಲ್ಲಿ ಇಡುತ್ತಿದ್ದೆವು . ಬೆಳಿಗ್ಗೆ ಅದರ ಬೂದಿಯೇ ವೃತ್ತಾಕಾರದ ಚೌಕಗಳ ರಂಗೋಲಿಯಂತೆ ಕಾಣುತ್ತಿತ್ತು .ಸ್ಟೀಲ್ ರೇಕಿನ ಆ ಸ್ಟ್ಯಾಂಡಂತೂ ಆಗ ನಮಗೆ ಅತ್ಯಮೂಲ್ಯ ಯಾಕಂದ್ರೆ ಅಂಗಡಿಯಲ್ಲಿ ಕಾಯಿಲ್ ಲೂಸ್ ತಗೊಂಡ್ರೆ ಸ್ಟ್ಯಾಂಡು ಕೊಡುತ್ತಿರಲಿಲ್ಲ ಫುಲ್ ಬಾಕ್ಸ್ ಕೊಂಡರೆ ಮಾತ್ರ ಸ್ಟ್ಯಾಂಡು ಉಚಿತವಾಗಿ ಸಿಗುತ್ತಿತ್ತು .

    ಮನುಷ್ಯ ತನ್ನನ್ನು ತಾನು ಹೊಡೆದುಕೊಳ್ಳುವಂತೆ ಮಾಡುವ ಜಗತ್ತಿನ ಏಕೈಕ ಜೀವಿ ಈ ಸೊಳ್ಳೆ .ಆಗಿನಿಂದಲೂ ಹಾಗೇ ಇದೆ ಗಾತ್ರವೂ ಬದಲಾಗಲಿಲ್ಲ , ನೋವೂ ಬದಲಾಗಲಿಲ್ಲ , ಪರಿಣಾಮ ಮಾತ್ರ ಕೊಂಚ ಬದಲಾಗಿದೆ ಅಷ್ಟೇ .

    ಏನೇ ಆಗಲಿ ಈ ಕಾಣದ ವೈರಸ್ ಗಳಿಗಿಂತ ಕಚ್ಚುವ ಸೊಳ್ಳೆಗಳೇ ಪರವಾಗಿಲ್ಲ.

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ರಾಜರಾಜೇಶ್ವರಿ ತ್ರಿಪುರ ಭೈರವಿ ಮಹಾಕಾಳಿ ಮಧುಕರವೇಣಿ

    ಇಂದು ನವರಾತ್ರಿ ಆರನೇ ದಿನ. ಕನ್ನಡಪ್ರೆಸ್.ಕಾಮ್ ನ ಸಂಗೀತೋತ್ಸವ ಮತ್ತೊಂದು ಹಂತವನ್ನು ತಲುಪಿದೆ.ನಾಲ್ವರು ಗಾಯಕರು ಇಂದಿನ ಸಂಗೀತ ಸಂಜೆಯನ್ನು ನಡೆಸಿಕೊಟ್ಟಿದ್ದಾರೆ.

    ಬೆಂಗಳೂರಿನ ಪ್ರಿಯಾಂಕ ಪದಕಿ ಅವರ ಗಣೇಶ ಸ್ತುತಿಯೊಂದಿಗೆ ಆರಂಭವಾಗುವ ಇಂದಿನ ಸಂಗೀತ ಸಂಜೆ ವಿದುಷಿ ಜಯಶೀಲ ಅವರ ದೇವಿ ಆರಾಧನೆಯೊಂದಿಗೆ ಮುಂದುವರೆಯುತ್ತದೆ. ನಂತರ ಸಿಯಾಟೆಲ್ ನಿಂದ ಜೊತೆಯಾಗುವ ರಮ್ಯಾ ಹರ್ಷ ಅವರು ಶಾರದೆಯನ್ನು ಆರಾಧಿಸುವ ಮೂಲಕ ಸಂಗೀತ ಸರಸ್ವತಿಯನ್ನು ನೆನೆಯುತ್ತಾರೆ. ಮುಂದೆ ಜಯಶೀಲ ಮತ್ತು ಸುಮನ್ ಅವರು ಧರ್ಮಸಂವರ್ಧಿನಿ ಧನುಜಾ ಸಂವರ್ಧಿನಿ ಎಂದು ದೇವಿಯನ್ನು ಸ್ತುತಿಸುತ್ತಾರೆ. ಪ್ರಿಯಾಂಕ ಅವರ ಮಂಗಳ ಗೀತೆಯೊಂದಿಗೆ ಕಛೇರಿ ಸಂಪನ್ನವಾಗುತ್ತದೆ.

    ಭಾರತಿ ಎಸ್ ಎನ್ ಅವರ ನಿರರ್ಗಳ ವ್ಯಾಖ್ಯಾನ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುವಂತೆ ಮಾಡುತ್ತದೆ.

    ನೀವು ಆಲಿಸಿ, ಪ್ರತಿಕ್ರಿಯಿಸಿ.

    ಶಾಂತಾ ಕಾರ್ಣೀಕ್ ಅವರ ಮನೆಯ ಗೊಂಬೆ ಸಂಗ್ರಹ

    ಬೆಂಗಳೂರು ಮಾಗಡಿ ಮುಖ್ಯರಸ್ತೆಯಲ್ಲಿರುವ ಗೊಲ್ಲರಹಟ್ಟಿಯ ಶ್ರೀಕೃಷ್ಣನಗರದ ನಿವಾಸಿ ಶಾಂತಾ ಕಾರ್ಣೀಕ್ ಕಳೆದ 25 ವರ್ಷಗಳಿಂದ ಗೊಂಬೆ ಕೂಡಿಸುತ್ತಾ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅಮ್ಮನ ಮನೆಯಲ್ಲಿದ್ದ ಸಂಪ್ರದಾಯ ಮದುವೆಯಾಗಿ ಬಂದ ಮೇಲೂ ಮುಂದುವರಿದಿದೆ.

    ಮನೆ ಮಂದಿಯೆಲ್ಲಾ ಶಾಂತಾ ಅವರ ಗೊಂಬೆ ಪ್ರೀತಿಗೆ ಸಹಕಾರಿಯಾಗಿ ನಿಂತಿದ್ದಾರೆ. ಪಿಯುಸಿ ಓದುತ್ತಿರುವ ಮಗ, ಜಿಟಿಟಿಸಿ ಯಲ್ಲಿ ನೌಕರಿಯಲ್ಲಿರುವ ಪತಿ , ನಿವೃತ್ತ ಹೆಡ್ ಮಾಸ್ಟರ್ ಆಗಿರುವ ಮಾವ, ಅತ್ತೆ ಎಲ್ಲರೂ ಬೆಂಬಲವಾಗಿ ನಿಂತಿದ್ದಾರೆ.

    ಈ ಬಾರಿ ಕೈಲಾಸ ಪರ್ವತವನ್ನು ಹೊಸದಾಗಿ ತಮ್ಮ ಗೊಂಬೆ ಸಂಗ್ರಹಕ್ಕೆ ಸೇರಿಸಿದ್ದಾರೆ. ಪ್ರತಿವರ್ಷ ಗೊಂಬೆ ಹಬ್ಬ ಬಂದರೆ ಮನೆ ತುಂಬಾ ಜನ. ಆದರೆ ಈ ಬಾರಿ ಯಾರನ್ನು ಕರೆಯದಂತಾಗಿದೆ ಎಂದು ಬೇಸರ ಪಟ್ಟುಕೊಳ್ಳುತ್ತಾರೆ.

    ಅಂಜನಾ ನಗರದ ಶ್ರೀ ವಿದ್ಯಾಲಕ್ಷ್ಮಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕಿಯೂ ಆಗಿರುವ ಶಾಂತಾ, ಗೊಂಬೆ ಕೂಡಿಸುವ ಪರಂಪರೆಯನ್ನು ಅನೂಚೂನವಾಗಿ ನಡೆಸಿಕೊಂಡು ಬಂದಿದ್ದಾರೆ.

    ಅವರ ಮನೆಯ ಗೊಂಬೆ ಆಲ್ಬಂ ಇಲ್ಲಿದೆ.

    ಕೋವಿಡ್ ವೈರಸ್ ಪತ್ತೆ ಮಾಡುವ ಶ್ವಾನ ಪಡೆ

    ಕೊರೋನಾ ಸೋಂಕು ಅಥವಾ ವಿಶ್ವವ್ಯಾಪಿ ಹೊಸವ್ಯಾಧಿಯ ಶುರುವಾತಿಗೆ ಪ್ಯಾಂಗೋಲಿನ್  ಮೂಲಕ ಈ ವೈರಾಣು ಮನುಷ್ಯನಿಗೆ ಜಿಗಿದದ್ದೇ ಕಾರಣ  ಎಂದು ಅನುಮಾನಿಸಲಾಗಿದೆ.

    ಕಾಡು ಪ್ರಾಣಿಯನ್ನು ಹಿಡಿದು ತಂದು ಅದರ ಮಾಂಸ ಭಕ್ಷಣೆ ಮಾಡಿದ್ದರಿಂದ ಕೋವಿಡ್ ಬಂದದ್ದು ನಿಜವಿರಬಹುದು.ಆದರೆ ಆ ನಂತರ ಈ ಸೋಂಕು ಹರಡುತ್ತ ಸಾಗಿದ್ದು ಮನುಷ್ಯರಿಂದ ಮನುಷ್ಯರಿಗೆ. ಈ ಕೊರೋನಾ ವೈರಸ್ಸಿನ ಸಂಸಾರದಲ್ಲಿ ಹಲವಾರು ಬಗೆಯ ಕೋವಿಡ್ ವೈರಸ್ಸುಗಳಿದ್ದರೂ ಬಹುತೇಕ ಅವೆಲ್ಲವೂ ಕಾಡು ಪ್ರಾಣಿಗಳಲ್ಲೇ ಮನೆ ಮಾಡಿಕೊಂಡಿರುವುದನ್ನು ಪರಿಣಿತರು ಧೃಢಪಡಿಸುತ್ತಾರೆ.

    ಕೋವಿಡ್-19 ಎಂದು ಕರೆವ SARS-CoV-2 ವೈರಸ್ಸು ಮನುಷ್ಯನಿಗೆ ಜಿಗಿದದ್ದುಇದೇ ಮೊದಲು.ಆದರೆ ಇದು ಯಾವ ಪ್ರಾಣಿಯಲ್ಲಿ ಮೊದಲು ತನ್ನ ಮನೆಮಾಡಿಕೊಂಡಿತ್ತು ಎನ್ನುವ ಬಗ್ಗೆ ಇನ್ನೂ ಊಹೆಗಳು ಮತ್ತುಅಧ್ಯಯನಗಳು ನಡೆಯುತ್ತಿವೆ.

    ಇದೇ ಕಾರಣಕ್ಕೆ ಸೋಂಕು ತಗುಲಿದ ಸಾಕು ಪ್ರಾಣಿಗಳಿಂದಲೂ ಮನುಷ್ಯರಿಗೆ ಕೊರೋನಾ ಬರಬಲ್ಲದೇ?- ಎನ್ನುವ ಪ್ರಶ್ನೆ ಹಲವರ ನಿದ್ದೆ ಕೆಡಿಸಿದ್ದೂ ಉಂಟು. ನಗರದ ಮನೆಗಳಲ್ಲಿ ಮತ್ತು ಹಳ್ಳಿಗಳಲ್ಲಿ  ಇರುವ ಸಾಕು ಪ್ರಾಣಿಗಳ ಜೊತೆಗೆ ಮನುಷ್ಯರಿಗೆ ನಿಕಟ ಸಂಪರ್ಕಗಳಿರುವ ಕಾರಣ ಅವುಗಳ ಸಂಪರ್ಕಕ್ಕೆ ಬರುವ ಮನುಷ್ಯರಿಗೂ ಇದು ಹರಡಬಲ್ಲದೇ?-ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಲು ಅಧ್ಯಯನಗಳನ್ನು ನಡೆಸಲಾಯ್ತು.

    ನಮ್ಮ ಪ್ರೀತಿಯ ನಾಯಿ, ಬೆಕ್ಕುಗಳು, ಹಸು, ಎಮ್ಮೆ, ಕುರಿ,ಮೇಕೆ,ಕೋಳಿ ಹಂದಿ, ಕತ್ತೆ-ಕುದುರೆಗಳಿಗೂ ಇದು ಹರಡಿದರೆ ಬರೀ ನಮ್ಮ ಭಾವನೆಗಳುಮಾತ್ರವಲ್ಲದೆ ಈ ಪ್ರಾಣಿಗಳನ್ನೇ ತಮ್ಮ ವೃತ್ತಿಯಾಗಿ  ಅವಲಂಬಿಸಿ ಬದುಕುತ್ತಿರುವ ಕೋಟ್ಯಂತರ ಸಂಸಾರಗಳು ಅರ್ಥಿಕವಾಗಿ ಕಷ್ಟಕ್ಕೆ ಬೀಳುವ ಸಾಧ್ಯತೆ ಇತ್ತು.

     ಈ ಬಗ್ಗೆ ಅಧ್ಯಯನಗಳನ್ನು ನಡೆಸಿದಾಗ ಕೋವಿಡ್ ಸೋಂಕಿತ ಮನುಷ್ಯರಿಂದ ಅವರ ಪ್ರೀತಿಯ ನಾಯಿ, ಬೆಕ್ಕುಗಳಿಗೆ ಈ ಸೋಂಕು ಹರಡುತ್ತಿದ್ದದ್ದು ಧೃಡವಾಯ್ತು. ಸೋಂಕಿತ ಮನುಷ್ಯರು ಇದ್ದ ಮನೆಗಳಲ್ಲಿ ಅವರ ಸಂಪರ್ಕಕ್ಕೆ ಬಂದ ನಾಯಿ ಬೆಕ್ಕುಗಳು ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದವು.ಅದೃಷ್ಟ ಎಂದರೆ, ಈ ಪ್ರಾಣಿಗಳು ಮನೆಯ ಇತರೆ ಮನುಷ್ಯರಿಗೆ ಸೋಂಕನ್ನು ವರ್ಗಾಯಿಸುತ್ತಿರಲಿಲ್ಲ.

    ಆದರೆ ತಮ್ಮದೇ ಪ್ರಭೇದದ ಇತರೆ ಪ್ರಾಣಿಗಳಿಗೆ ಸೋಂಕನ್ನು ನೀಡಬಲ್ಲವಾಗಿದ್ದವು. ಉದಾಹರಣೆಗೆ-  ನಾಯಿ ಮತ್ತೊಂದು ನಾಯಿಗೆ ಸೋಂಕನ್ನು ಕೊಡಬಲ್ಲವು. ಆದರೆ ನಾಯಿಗಳಿಂದ ಮನುಷ್ಯರಿಗೆ ಹರಡಿದ ಉದಾಹರಣೆಗಳಿಲ್ಲ. ಆದರೆ ಮನುಷ್ಯರು ಇತರೆ ಮನುಷ್ಯರಿಗೆ ಮತ್ತು ಪ್ರಾಣಿಗಳೆರಡಕ್ಕೂ ರೋಗವನ್ನು ನೀಡಬಲ್ಲವರಾಗಿದ್ದರು!

    ಉಣ್ಣೆದೊಗಲಿನ ಕೆಲವು ಪ್ರಾಣಿಗಳು ಮನುಷ್ಯರಿಂದ ಸೋಂಕನ್ನು ಪಡೆದು ಇತರೆ ಮನುಷ್ಯರಿಗೆ ಕೊಟ್ಟ ಉದಾಹರಣೆಗಳಿವೆ. ಆದರೆ ಮನುಷ್ಯರು ಅವುಗಳಿಂದ ದೂರವಿದ್ದಲ್ಲಿ ಇವ್ಯಾವ ಅವಘಡಕ್ಕೂ ಆಸ್ಪದವಿರಲಿಲ್ಲ.

     ಸಾಕು ಪ್ರಾಣಿಗಳನ್ನು ನೋಡಿಕೊಳ್ಳಲು ಇನ್ಯಾರೂ ಇಲ್ಲದಿದ್ದಲ್ಲಿ ಕೋವಿಡ್ ಸೋಂಕು ನಮ್ಮಿಂದ ಸಾಕು ಪ್ರಾಣಿಗಳಿಗೆ ಹರಡದಿರುವಂತೆ ಸಾರ್ವತ್ರಿಕ ಎಚ್ಚರಿಕೆ ವಹಿಸಬೇಕಾಗುತ್ತದೆ. ಸೋಂಕು ಹರಡದಂತೆ ತಡೆಯಲು ಅವುಗಳೊಂದಿಗೆ ಇರುವಾಗ ಇತರೆ ಜನರೊಂದಿಗೆ ತೆಗೆದುಕೊಳ್ಳುವ ಎಲ್ಲ ಸಾಮಾನ್ಯ ಎಚ್ಚರಿಕೆಗಳನ್ನೂ ಪಾಲಿಸಬೇಕಾಗುತ್ತದೆ. ಮಾಸ್ಕ್ ಧರಿಸಿ, ಕೈ ತೊಳೆದುಕೊಂಡು, ಸಾಧ್ಯವಾದಷ್ಟು ಕಡಿಮೆ ಒಡನಾಡುವ ಮೂಲಕ ಕೋವಿಡ್ ಹರಡದಂತೆ ತಡೆಯಬಹುದಾಗಿದೆ.

    ಮನುಷ್ಯರಿಂದ ಸಾಕು ಪ್ರಾಣಿಗಳನ್ನು ರಕ್ಷಿಸುವ ಮಾತುಗಳು ನಡೆಯುತ್ತಿರುವಾಗಲೇ ಕೋವಿಡ್ ಸೋಂಕನ್ನು ಪತ್ತೆ ಹಚ್ಚಲು ಪ್ರಾಣಿಗಳ ಮೊರೆಹೋಗುವ ವಿಚಾರವೂ ಶುರುವಾಯಿತು.

    ಸಾಕು ಪ್ರಾಣಿಗಳಿಂದ ಸೋಂಕು ಮನುಷ್ಯನಿಗೆ ಹರಡುವುದಿಲ್ಲ ಎಂದು ತಿಳಿದ ನಂತರ ’ಮನುಷ್ಯನ ಮಿತ್ರ ’ ಶ್ವಾನದ ವಾಸನಾ ಗ್ರಹಿಕೆಯ ಶಕ್ತಿಯನ್ನು ಉಪಯೋಗಿಸಿಕೊಳ್ಳುವ ಸೋಂಕನ್ನು ಆರಂಭಿಕ ಹಂತಗಳಲ್ಲೇ ಪತ್ತೆ ಹಚ್ಚಬಹುದೇ?- ಎಂಬ  ವಿಚಾರಕ್ಕೂ ಮನ್ನಣೆ ದೊರಕಿತು. ಕೋವಿಡ್ ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ ಸೋಂಕಿದೆಯೇ ಇಲ್ಲವೇ ಎಂಬುದನ್ನು ನಾಯಿಗಳ ಮೂಲಕ ತಿಳಿಯಬಲ್ಲೆವೇ?- ಎನ್ನುವ ಉತ್ಸಾಹವೂ ಜೊತೆ ಸೇರಿತು.

    ಈ ವಿಚಾರ ಹೊಳೆದದ್ದು ಆಶ್ಚರ್ಯವೇನೂ ಆಗಿರಲಿಲ್ಲ. ಏಕೆಂದರೆ ಅದರ ತುರ್ತು ಅಗತ್ಯವಿತ್ತು. ವ್ಯಾಪಕವಾದ ಕೋವಿಡ್ ಪರೀಕ್ಷೆಗಳು ನಡೆದರೂ, ಅದನ್ನು ನಿಖರವಾಗಿ ಕಂಡುಹಿಡಿಯುವ ವಿಧಾನವನ್ನು ಹುಡುಕಬೇಕಿತ್ತು. ಸುಳ್ಳು ಧನಾತ್ಮಕ ಪರೀಕ್ಷೆಗಳು, ಹುಸಿ ಋಣಾತ್ಮಕ ಪರೀಕ್ಷೆಗಳು ಎಲ್ಲವನ್ನೂ ಮೀರಿದ ಪರೀಕ್ಷಾ ವಿಧಾನವೊಂದು ಬೇಕಿತ್ತು. ಹಾಗಾಗಿ  ವೈದ್ಯಕೀಯ ಪರೀಕ್ಷೆಗಳು, ವೈದ್ಯರುಗಳಿಗಿಂತ ಮುಂಚಿತವಾಗಿಯೇ ಮಲೇರಿಯ,  ಕ್ಯಾನ್ಸರ್, ಮಧುಮೇಹ ರೋಗ, ಪಾರ್ಕಿನ್ಸನ್ಸ್ ಇತ್ಯಾದಿಗಳನ್ನು ಪತ್ತೆಹಚ್ಚ ಬಲ್ಲ ಮತ್ತು ಅದಕ್ಕಾಗಿ ತರಭೇತಿ ಹೊಂದಿದ ಮೆಡಿಕಲ್ ನಾಯಿಗಳನ್ನು  ಕೊರೋನಾ ಸೋಂಕಿನ ಪತ್ತೆಗೂ ಬಳಸಬಾರದೇಕೆ ?- ಎಂಬ ವಿಚಾರ  ಹಲವು ದೇಶಗಳಲ್ಲಿ  ಒತ್ತಟ್ಟಿಗೆ ಪ್ರಯೋಗಗಳನ್ನು ನಡೆಸಲು ಕಾರಣವಾಯಿತು.

    ಶ್ವಾನ ತರಬೇತಿಯ ಉಪಾಯ

    ಮಾರ್ಚ್ ತಿಂಗಳಿಂದಲೇ ಶ್ವಾನಗಳ ತರಬೇತಿಯೂ ಶುರುವಾಯಿತು.ಫ್ರಾನ್ಸ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ  ತರಬೇತಿ ತಂಡವೊಂದು ಆಲ್ಫೊರ್ಟ್ ರಾಷ್ತ್ರೀಯ ವೆಟೆರಿನರಿ ವಿಶ್ವವಿದ್ಯಾಲಯದಲ್ಲಿ  ಡೊಮಿನಿಕ್ ಗ್ರಾಂಡ್ ಜೀನ್ ಎಂಬಾತನ ನೇತೃತ್ವದಲ್ಲಿ ಮನುಷ್ಯನ ಬೆವರಿನ ಮೂಲಕ ಸೋಂಕನ್ನು ಪತ್ತೆ ಹಚ್ಚಬಹುದೇ ಎಂಬ ಪ್ರಯೋಗ ನಡೆಸಿತು. ಆಗಸ್ಟ್ ವೇಳೆಗೆ ನಾಯಿಗಳು ಸೋಂಕಿತರ ಬೆವರನ್ನು ಶೇಕಡ 100 ನಿಖರತೆಯೊಂದಿಗೆ ಕಂಡುಹಿಡಿಯಬಲ್ಲವು ಎಂದು ವರದಿ ಸಲ್ಲಿಸಿತು. ಫ್ರಾನ್ಸ್ ನಂತೆಯೇ  ಯುನೈಟೆಡ್ ಅರಬ್ ಎಮಿರೇಟ್ಸ್, ಚಿಲಿ, ಅರ್ಜೆಂಟಿನಾ, ಬ್ರೆಜಿಲ್, ಇಂಗ್ಲೆಂಡ್  ಮತ್ತು ಬೆಲ್ಜಿಯಂ  ದೇಶಗಳಲ್ಲಿಯೂ ಶ್ವಾನಪ್ರಯೋಗಗಳು ನಡೆದವು.ಕೆಲವು ದೇಶಗಳು ಅತ್ಯಂತ ಬೇಗನೆ ತಮ್ಮ ಪ್ರಯೋಗದ ವಕ್ಕಣೆಯನ್ನು ನೀಡಿ ನಾಯಿಗಳನ್ನು ಕೆಲಸಕ್ಕೆ ಹಚ್ಚಿದವು.

    ಉದಾಹರಣೆಗೆ, ಯುನೈಟೆಡ್ ಅರಬ್ ದೇಶಗಳು ಮೇ ವೇಳೆಗೆಲ್ಲ ಹೀಗೆ ಕೊರೋನಾ ಪತ್ತೆಯಲ್ಲಿ ತರಬೇತಿ ಹೊಂದಿದ ನಾಯಿಗಳನ್ನು ಹಲವಾರು ಏರ್ ಪೋರ್ಟ್ ಗಳಲ್ಲಿ ಕೋವಿಡ್ ಪತ್ತೆಗಾಗಿ ನೇಮಿಸಿಕೊಂಡಿತು.ಆದರೆ ಇದೇ ಉದ್ದೇಶವನ್ನು ಹೊಂದಿದ ಇನ್ನೂ ಅನೇಕ ದೇಶಗಳು ನಿಧಾನವಾಗಿ  ತರಬೇತಿ ಮುಂದುವರೆಸಿದರು. ಇದೀಗ ಅಮೆರಿಕಾದಿಂದ-ಆಸ್ಟ್ರೇಲಿಯಾ ವರೆಗೆ ಹಲವು ದೇಶಗಳು ಇದೇ ಯೋಜನೆಗಳನ್ನುಹೊಂದಿವೆ.

    ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಕೋವಿಡ್ ಸೋಂಕನ್ನು ಪತ್ತೆ ಹಚ್ಚಬಲ್ಲ ಕೆಲವು ನಾಯಿಗಳು ಸೋಂಕು ಶುರುವಾಗುವ ಮುನ್ನವೇ ಅಂದರೆ ಪರೀಕ್ಷೆಯಲ್ಲಿ ಸೋಂಕು  ’ ಪಾಸಿಟಿವ್ ಇದೆ ’ ಎಂದು ಬರುವುದಕ್ಕಿಂತ ಮೊದಲೇ ಕೊರೋನಾ ಸೋಂಕಿನ ಇರುವನ್ನು ಈ ಶ್ವಾನಗಳು ಕಂಡುಹಿಡಿಯಬಲ್ಲವಾಗಿದ್ದವು!

    ಶ್ವಾನ ತರಬೇತಿಯ ವಿಧಾನಗಳು

    ಇಂಗ್ಲೆಂಡಿನ ಡರ್ಹ್ಯಾಂ ಮತ್ತು ಲಂಡನ್ನಿನ ಟ್ರಾಪಿಕಲ್ ಮೆಡಿಸಿನ್ ಮತ್ತು ಶುಚಿತ್ವದ  ಶಾಲೆಗಳು ಮೊದಲಿಗೆ ಈ ಸಾಧ್ಯತೆಯನ್ನು ಪರೀಕ್ಷಿಸಲು ಮಾರ್ಚಿನಲ್ಲೇ ಶ್ವಾನಗಳಿಗೆ ತರಬೇತಿ ಕೊಡಲು ಮುಂದಾದರು. ಕೊರೋನಾವನ್ನು ಕಂಡು ಹಿಡಿಯಲು ನಾಯಿಗಳಿಗೆ ಸಾಧ್ಯ ಎನ್ನುವುದರ ಬಗ್ಗೆ ಇವರಿಗೆ ಪೂರ್ತಿ ನಂಬಿಕೆಯಿತ್ತು. ಮಿಲ್ಟನ್ ಕೀನ್ಸ್ ಎಂಬ ಜಾಗದಲ್ಲೂ ಆರು ನಾಯಿಗಳಿಗೆ ತರಬೇತಿ ಶುರುವಾಯಿತು.

    ಮೊದಲಿಗೆ ಆಸ್ಪತ್ರೆಗಳಲ್ಲಿ ಕೆಲಸಮಾಡುತ್ತಿದ್ದವರ ಮುಖಗವಸು, ಸಾಕ್ಸ್ ಇತ್ಯಾದಿಗಳ ವಾಸನೆಯ ಮೂಲಕ ಅವರಲ್ಲಿ ಸೋಂಕು ಶುರುವಾಗಿದೆಯೇ ಅಥವಾ ಇದೆಯೇ ಎಂಬುದನ್ನು ಕಂಡುಹಿಡಿಯುವ ಪ್ರಯತ್ನವಾಯಿತು. ಇದಕ್ಕಾಗಿ ಇಂಗ್ಲೆಂಡಿನ ಆಸ್ಪತ್ರೆಗಳಲ್ಲಿ ಕೆಲಸಮಾಡುವ 3500  ಪ್ರಯೋಗದಲ್ಲಿ ಭಾಗಿಗಳಾಗಲು ಮುಂದೆ ಬಂದರು.ಬೀದಿಗೆ ಬಿದ್ದ  ನಾಯಿಗಳನ್ನು ರಕ್ಷಿಸುವ ಧರ್ಮಾರ್ಥ ಸಂಸ್ಥೆಯೊಂದು ತನ್ನ ಕೆಲವು ನಾಯಿಗಳನ್ನು ಹೆಮ್ಮೆಯಿಂದ ತರಬೇತಿಗೆ ಇಳಿಸಿತು.

    ಕೊರೋನಾ ಪರೀಕ್ಷೆಯಲ್ಲಿ  ಪಾಸಿಟಿವ್ ಎಂದು ಬಂದಿರುವವರ ಬೆವರನ್ನು ಮತ್ತು ನೆಗೆಟಿವ್ ಎಂದು ಬಂದಿರುವವರ ಬೆವರನ್ನು ಈ ಪ್ರಯೋಗಗಳಲ್ಲಿ ಸಾಲಾಗಿ ಆದರೆ ಯಾವುದೇ ಅನುಕ್ರಮವಿಲ್ಲದೆ ಇಡಲಾಗುತ್ತದೆ. ಸ್ನಿಫರ್ ಡಾಗ್ ಗಳಿಗೆ ಮೊದಲು ಕೊರೋನಾ ಪಾಸಿಟಿವ್ ಇರುವ ಒಂದು ಮಾದರಿಯನ್ನು ಮೂಸಿಸಲಾಗುತ್ತದೆ. ನಂತರ ಅದೇ ಮಾದರಿಯ ವಾಸನೆ ಆ ಸಾಲಿನಲ್ಲಿ ಯಾವ ಮಾದರಿಗಳಿಗಿವೆ ಎಂದು ನಾಯಿಗಳು ಮೂಸುತ್ತ ಹೋಗುತ್ತದೆ. ಹೊಂದಾಣಿಕೆಯಾಗುವ ಮಾದರಿ ಸಿಕ್ಕ ಕೂಡಲೆ ನಾಯಿ ದೈಹಿಕ ಚಲನೆಯ ಮೂಲಕ ಸನ್ನೆ ಮಾಡುತ್ತದೆ. ಉದಾಹರಣೆಗೆ ಪಾಸಿಟಿವ್ ಇರುವ ಸ್ಯಾಂಪಲ್ ಪತ್ತೆಯಾದಾಗ ನಾಯಿ ಅದರ ಮುಂದೆ ಕೂರುವ ಮೂಲಕ ಅಥವಾ ಬೊಗಳುವ ಮೂಲಕ ತಿಳಿಸುತ್ತದೆ. ಸರಿಯಾದ ಸ್ಯಾಂಪಲ್ ಅನ್ನೇ ಅದು ಪತ್ತೆ ಹಚ್ಚಿದ್ದಲ್ಲಿ ಅದಕ್ಕೆ ಪ್ರೋತ್ಸಾಹಕರವಾಗಿ ಅವುಗಳಿಗಿಷ್ಟವಾಗುವ ತಿಂಡಿಯನ್ನು ನೀಡಲಾಗುತ್ತದೆ.ತಪ್ಪು ನಡೆಯುತ್ತಿದ್ದಲ್ಲಿ ಮತ್ತೆ ತರಬೇತಿಗೊಳಪಡಿಸಲಾಗುತ್ತದೆ.

    ಸತತ ಎಂಟು-ಹತ್ತು ವಾರಗಳ ಕಾಲ ಹೀಗೆ ತರಬೇತಿಗೊಂಡ ನಾಯಿಗಳು ಯಾವ ತಪ್ಪನ್ನೂ ಮಾಡುತ್ತಿಲ್ಲ ಎಂದಾದಾರೆ ಅವನ್ನು ಮಾತ್ರ ಮನುಷ್ಯರನ್ನೇ ನೇರವಾಗಿ ಮೂಸಿ ಕೋವಿಡ್ ಇದೆಯೇ ಇಲ್ಲವೇ ಎಂದು ಹೇಳಲು ನೇಮಿಸಲಾಗುತ್ತದೆ.

    ನಾಯಿಗಳನ್ನು ಮುಖ್ಯವಾಗಿ ಬಳಸುವುದು ವಿಮಾನ ನಿಲ್ದಾಣಗಳಂಥ ಸ್ಥಳಗಳಲ್ಲಿ. ಏಕೆಂದರೆ ಯಾವುದೇ ಪರೀಕ್ಷೆಗಳಿಲ್ಲದೆ, ಸಮಯದ ಅಗತ್ಯವಿಲ್ಲದೆ,ಅತ್ಯಂತ ವೇಗವಾಗಿ ಕೊರೋನಾ ಸೋಂಕಿತರನ್ನು ಸಾಲು ಸಾಲು ಜನರ ಮಧ್ಯೆ ಬರೇ ವಾಸನೆಯಿಂದ ಗುರುತಿಸಿಬಿಡಬಲ್ಲ ಕಲೆ ತರಬೇತಿಗೊಂಡ ನಾಯಿಗಳಿಗೆ  ಮಾತ್ರ ಸಾಧ್ಯ.

    ನಾಯಿಗಳಲ್ಲೂ ಪ್ರತಿಭೆ ಇರುವಂತೆ ಕೆಲವು ನಾಯಿಗಳು ಮಾತ್ರ ಇದರಲ್ಲಿ ಅತ್ಯಂತ ನಿಖರವಾಗಿ ಕೆಲಸಮಾಡುತ್ತವೆ. ಅಂಥವನ್ನು ಮಾತ್ರವೇ ಪ್ರತ್ಯೇಕಿಸಿ ಕೆಲಸಕ್ಕೆ ಹಚ್ಚಲಾಗುತ್ತದೆ.

     ಇಂತಹ ಪ್ರತಿಭೆಯುಳ್ಳ ನಾಯಿಗಳು ಗಂಟೆಯೊಂದಕ್ಕೆ 250 ಜನರನ್ನು ಮೂಸಿ ಫಲಿತಾಂಶವನ್ನು ಹೇಳಬಲ್ಲವು. ಅಂದರೆ,ಒಂದು ಮಿಷಿನ್ನಿಗಿಂತಲೂ ವೇಗವಾಗಿ ಮತ್ತು ಅದಕ್ಕಿನ್ನ ನಿಖರವಾಗಿ ನಾಯಿಗಳು ಫಲಿತಾಂಶವನ್ನು ಬಿತ್ತರಿಸಬಲ್ಲವು.

    ಇದನ್ನು ಕೆಲವು ದೇಶಗಳು ಎಷ್ಟೊಂದು ಗಂಭೀರವಾಗಿ ತೆಗೆದುಕೊಂಡಿವೆಯೆಂದರೆ,  ನಾಯಿಗಳ ಮೂಲಕ ಕೋವಿಡ್ ನ್ನು ಕಂಡುಹಿಡಿಯುವ ಅಧ್ಯಯನಕ್ಕೆ ಇಂಗ್ಲೆಂಡ್ ಸುಮಾರು 5 ಕೋಟಿ ರೂಪಾಯಿಗಳನ್ನು ಬಂಡವಾಳವನ್ನಾಗಿ ಹೂಡಿದೆ. ಇದರ ಮೇಲೆ ಇನ್ನೂ ಹಲವಾರು ಧರ್ಮಾರ್ಥ ಸಂಸ್ಥೆಗಳೂ ಹಣವನ್ನು ನೀಡಿಈ ತರಬೇತಿಗೆ ಉತ್ತೇಜನ ನೀಡಿದ್ದಾರೆ.

    ಏಕೆಂದರೆ ಒಂದು ಸ್ಪೂನ್ ಸಕ್ಕರೆಯನ್ನು ಎರಡು ಒಲಿಂಪಿಕ್ಸ್ ಈಜುಕೊಳಗಳಷ್ಟು ನೀರಿನಲ್ಲಿ ಬೆರೆಸಿದರೂ ನಾಯಿಗಳ ಅತ್ಯಂತ ಸೂಕ್ಷ್ಮವಾದ ವಾಸನಾ ಶಕ್ತಿ ಅದನ್ನು ಕಂಡುಹಿಡಿಯಬಲ್ಲವಂತೆ.

    ಹಾಗೆಂದು ನಾಯಿಗಳು ತಪ್ಪು ಮಾಡುವುದೇ ಇಲ್ಲ- ಅಂತಲೂ ಅಲ್ಲ. ಕೆಲವೊಮ್ಮೆ ಅವುಗಳು ತಪ್ಪು ಮಾಡಿದ ಹಲವು ಉದಾಹರಣೆಗಳಿವೆ. (ಹಾಗಂತ ಯಾರು ತಪ್ಪು ಮಾಡುವುದಿಲ್ಲ?) ಆದರೆ ಅವುಗಳ ವಾಸನಾ ಶಕ್ತಿ ಅಗಾಧವಾದದ್ದು ಎನ್ನುವುದನ್ನು ಮನುಷ್ಯ ಮರೆಯುವಂತಿಲ್ಲ.

    ವಿಶ್ವಾಸಾರ್ಹ ನಾಯಿಗಳ ಹಲವು ಪಾತ್ರಗಳು

    ಭಾರತವೂ ಸೇರಿದಂತೆ ನಾಯಿಗಳನ್ನು ಮನೆಯ ಮತ್ತು ದೇಶದ ಭದ್ರತೆಗೆ ಬಳಸುವುದು ಸರ್ವೇ ಸಾಮಾನ್ಯವಾಗಿದ್ದ ಕಾಲದಲ್ಲಿ ನಾಯಿಗಳ ಪಾತ್ರ ಹೇಗೆ ಈ ದಿಕ್ಕಿಗೆ ತಿರುಗಿಕೊಂಡಿತು?

    ತರಬೇತಿಯೇ ಇಲ್ಲದೆಯೂ ಕೆಲವು ನಾಯಿಗಳು ಸ್ಥನ ಕ್ಯಾನ್ಸರ್, ಮಾರಣಾಂತಿಕ ಮಧು ಮೇಹ ಇತ್ಯಾದಿಗಳನ್ನು ತಮ್ಮನ್ನು ಸಾಕುವವರಿಗೆ ಇರುವುದನ್ನು ತಿಳಿಸಿದ ಹಲವು ಮನಕರಗುವ ಘಟನೆಗಳಾಗಿವೆ.

    ಉದಾಹರಣೆಗೆ- ಮಹಿಳೆಯೊಬ್ಬಳು ತನ್ನ ನಾಯಿಯ ಜೊತೆ ಅನ್ಯೋನ್ಯ ಸಂಬಂಧ ಇಟ್ಟುಕೊಂಡಿದ್ದಳು. ಒಮ್ಮೆ ಆ ನಾಯಿ ವಿಚಿತ್ರವಾಗಿ ವರ್ತಿಸತೊಡಗಿತು. ಅವಳು ಮಲಗಿದ್ದಾಗ, ಕೂತಿದ್ದಾಗ ಅವಳ ಸ್ಥನಗಳನ್ನು ಮೂಸಿ ಕುಯ್ ಗುಡತೊಡಗಿತು. ಅವಳು  ತನ್ನ ಸ್ತನಗಳನ್ನು ಪರೀಕ್ಷಿಸಿಕೊಂಡಾಗ ಸಣ್ಣದೊಂದು ಗಡ್ಡೆ ಪತ್ತೆಯಾಯಿತು. ಆಕೆ ವೈದ್ಯರ ಬಳಿ ಹೋಗಿ ಎಲ್ಲ ತಪಾಸಣೆಗಳನ್ನು ಮಾಡಿಸಿಕೊಂಡಳು.ಆದರೆ ಯಾವ ಸಮಸ್ಯೆಯೂ ಪತ್ತೆಯಾಗಲಿಲ್ಲ.

     ಮುಂದಿನ ಹದಿನೈದು ದಿನ ನಾಯಿ ಸಪ್ಪಗಿರುವುದು, ಅವಳ ಸ್ತನಗಳನ್ನು ಮತ್ತೆ ಮತ್ತೆ ಮೂಸುತ್ತ ಕುಯ್ಗುಡುವುದನ್ನು ಮುಂದುವರೆಸುತ್ತ ಊಟವನ್ನು ನಿರಾಕರಿಸತೊಡಗಿತು. ಆಕೆ ನಾಯಿಯ ವಾಸನಾ ಶಕ್ತಿಯ ಬಗ್ಗೆ ಎಲ್ಲಿಯೋ ಓದಿದ್ದಳು.ಆದ್ದರಿಂದ ಏನಾದರಾಗಲಿ ಎಂದು ಮತ್ತೆ ವೈದ್ಯರ ಬಳಿ ಹೋದಳು. ಈ ಬಾರಿ  ಅವಳಿಗೆ ಸ್ತನ ಪರೀಕ್ಷೆಯಲ್ಲಿ ಕ್ಯಾನ್ಸರ್ ಶುರುವಾಗಿರುವುದು ಪತ್ತೆಯಾಯಿತು. ಅಂದರೆ ವೈದ್ಯಕೀಯ ಪರೀಕ್ಷೆಗಳು ಪತ್ತೆಹಚ್ಚುವುದಕ್ಕಿಂತ ಒಂದು ತಿಂಗಳು ಮುಂಚೆಯೇ ನಾಯಿಗೆ ಅದು ತಿಳಿದುಹೋಗಿತ್ತು!

    ಆಕೆ ಕ್ಯಾನ್ಸರ್ ಆಪರೇಶನ್ ಮುಗಿಸಿಕೊಂಡು ಸಂಪೂರ್ಣ ಗುಣಮುಖಳಾಗಿ ಮರಳಿದ ಕೂಡಲೇ ನಾಯಿ ಕುಣಿದಾಡಿ ಅವಳನ್ನು ಸ್ವಾಗತಿಸಿತು. ಎಂದಿನಂತೆ ಊಟ ತಿಂಡಿ ಮಾಡಿಕೊಂಡು ಗೆಲುವಾಯಿತು.ಇಂತಹ ಅತ್ಯಂತ ಹೃದಯಂಗಮವಾದ ಹಲವಾರು  ಕಥೆಗಳನ್ನು ನಾವಿಂದು ಓದಬಹುದು.

    ಈ ರೀತಿ ಹಲವಾರು ಘಟನೆಗಳು ವರದಿಯಾದಕೂಡಲೇ ಆಗಾಗಲೇ ಡ್ರಗ್ಸ್ ಹಿಡಿಯಲು, ಸ್ಪೋಟಕಗಳನ್ನು ಪತ್ತೆಹಚ್ಚಲು, ಹಣ, ಮೊಬೈಲ್ ಫೋನ್ ಗಳು, ಮದ್ದು-ಗುಂಡುಗಳು ಇತ್ಯಾದಿಗಳನ್ನು ಕಂಡು ಹಿಡಿಯಲು ಶ್ವಾನ ಪಡೆಗಳನ್ನು ಬಳಸುತ್ತಿದ್ದ ಜನರು ನಾಯಿಗಳನ್ನು ಖಾಯಿಲೆಗಳನ್ನು ಮೂಸಿ ಪತ್ತೆ ಹಚ್ಚಲು ತರಬೇತಿ ನೀಡತೊಡಗಿದರು. ನಾಯಿಗಳ ಇಂತಹ ಬಳಕೆ ಈಗಾಗಲೇ ದಶಕ ವರ್ಷಗಳನ್ನು ಮುಗಿಸಿ ಮುಂದುವರೆಯುತ್ತಿದೆ. ಹೊಸ ವ್ಯಾಧಿ ಕೋವಿಡ್ ಸೋಂಕನ್ನು ಪತ್ತೆ ಹಚ್ಚಿ ನಿಯಂತ್ರಿಸಲು ಕೂಡ ಇದು ಹೊಸ ಭರವಸೆಗಳನ್ನು ನೀಡಿದೆ.

     ಹೀಗಾಗಿ ಪೊಲೀಸು ಇಲಾಖೆಯಲ್ಲಿ, ಸೆಕ್ಯುರಿಟಿ ಇಲಾಖೆಗಳಲ್ಲಿ, ಮಿಲಿಟರಿ, ಏರ್ ಪೋರ್ಟುಗಳಲ್ಲಿ, ಬಂದರುಗಳಲ್ಲಿ, ಕಾರ್ಪೋರೇಟು ಸಮಾರಂಭ, ಮ್ಯೂಸಿಕ್ ಹಬ್ಬಗಳಿಗಾಗಿ ಈಗಾಗಲೇ ಕೆಲಸಕ್ಕಿದ್ದ ನಾಯಿಗಳು ಇದೀಗ ತಮ್ಮ ತರಬೇತುದಾರರೊಂದಿಗೆ ವೈದ್ಯಕೀಯ ಸಂಶೋಧನಾ ಕೇಂದ್ರಗಳಲ್ಲಿ ಕೂಡ ಕೆಲಸ ಗಿಟ್ಟಿಸುತ್ತಿವೆ. ಇಂಗ್ಲೆಂಡಿನ ಕೆಲವು ಆಸ್ಪತ್ರೆಗಳಲ್ಲಿ, ಉದಾಹರಣೆಗೆ ಲಂಡನ್ನಿನ ಗ್ರೇಟ್ ಆರ್ಮಾಂಡ್ ಮಕ್ಕಳ ಆಸ್ಪತ್ರೆ ಯಲ್ಲಿ ಖಾಯಿಲೆ ಬಿದ್ದ ಮಕ್ಕಳ ಮನಸ್ಸನ್ನು ಉಲ್ಲಸಿತಗೊಳಿಸಲು ಸಾಧು ಸ್ವಭಾವದ ನಾಯಿಗಳನ್ನು ಕರೆತರಲಾಗುತ್ತದೆ. ಮಕ್ಕಳು ಅವರ ತಲೆ ನೇವರಿಸುವಾಗ ಅವರಲ್ಲಿ ಆಗುವ ಆನಂದ ಅವರ ದುಃಖವನ್ನು ನೀಗುತ್ತದೆ.ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಗುಣ ಮುಖರಾಗಲು ನೆರವಾಗುತ್ತದೆ ಎನ್ನಲಾಗಿದೆ. ಇದನ್ನೇ ವೃದ್ದಾಶ್ರಮಗಳಲ್ಲಿಯೂ ಮಾಡುತ್ತಿದ್ದಾರೆ. ನಾಯಿಗಳನ್ನು ನೇವರಿಸುವುದರಿಂದ, ಅವುಗಳ ಒಡನಾಟದಿಂದಲೂ ಹಲವ ಬಗೆಯ ಪ್ರಯೋಜನಗಳು ಮನುಷ್ಯನಿಗಿವೆ. ಇನ್ನು ಒಂಟಿತನ, ಖಿನ್ನತೆಗಳನ್ನು ಹೊಡೆದೋಡಿಸುವ ಸಾಕು ಪ್ರಾಣಿಗಳು ಮನುಷ್ಯನ ಜೀವನ ಸಂಗಾತಿಗಳಾಗುವುದು ನಮ್ಮೆಲ್ಲರಿಗೂ ತಿಳಿದ ವಿಚಾರವೇ ಆಗಿದೆ.

    ಇದೀಗ ಕೋವಿಡ್ ಶ್ವಾನ ಪಡೆಯನ್ನು ವಿಶ್ವದ ಹಲವು ದೇಶಗಳು ಕಟ್ಟುತ್ತಿದ್ದಾರೆ. ಅತ್ಯಂತ ನಿಖರವಾಗಿ ಪತ್ತೆ ಹಚ್ಚುವುದರ ಜೊತೆಗೆ ಇವು ಅತ್ಯಂತ ಅಗ್ಗವಾಗಿ ಫಲಿತಾಂಶವನ್ನು ನೀಡುತ್ತವೆ. ಹಣವನ್ನು ಉಳಿಸುತ್ತವೆ. ಸಮಯದ ಸಮಸ್ಯೆಯನ್ನೂ ಇಲ್ಲವಾಗಿಸುತ್ತವೆ. ದಟ್ಟ ಜನಸಂದಣಿ ಇದ್ದರೂ ಅವರ ನಡುವೆ ನುಸುಳಿ ಸುತ್ತಾಡಿ ಯಾರು ಕೋವಿಡ್ ಟೆಸ್ಟ್  ಮಾಡಿಸಿಕೊಳ್ಳಬೇಕೆಂದು ನಿರ್ಧರಿಸಬಲ್ಲವಾಗಿವೆ.

    ಸಾಮಾನ್ಯವಾಗಿ ನಾಯಿಗಳು ಸೋಂಕನ್ನು ಪತ್ತೆ ಹಚ್ಚಿದ ನಂತರ ಅವರಿಗೆ ಮತ್ತೊಂದು ಪರೀಕ್ಷೆಯನ್ನೂ ಮಾಡುವುದರಿಂದ ಎರಡೆರಡು ಬಾರಿ ಸೋಂಕನ್ನು ಖಚಿತಗೊಳ್ಳಿಸಿಕೊಳ್ಳಬಹುದಾದ ಅವಕಾಶಗಳಿವೆ.

    ಸ್ನಿಫರ್ ಡಾಗ್ ಗಳನ್ನು ನೋಡಿದರೆ ಅಪರಾಧಿಗಳ ಜಂಘಾಬಲವೇ ಉಡುಗಿಬಿಡುವುದು ಖಂಡಿತ. ಮನುಷ್ಯನ ದುಷ್ಟ ಅಭ್ಯಾಸಗಳನ್ನು, ಉದ್ದೇಶಗಳನ್ನು ಭೇದಿಸುವುದರ ಜೊತೆಗೆ ಆತನಿಗೆ ತಗುಲುವ ಹಲವು ಹತ್ತು ರೋಗ ಪತ್ತೆಯಲ್ಲೂ ನಾಯಿಗಳು ಪ್ರಮುಖ ಪಾತ್ರ ವಹಿಸುತ್ತಿವೆ. ನಮ್ಮ ಬದುಕಿನಲ್ಲಿ ಹೊಸ ಭರವಸೆ ಮೂಡಿಸುತ್ತಿವೆ. ವಿಮಾನ ನಿಲ್ದಾಣದಲ್ಲೇ ಅಲ್ಲದೆ ಕೋವಿಡ್ ಪರೀಕ್ಷಾ ಕೇಂದ್ರಗಳಲ್ಲಿ ಕೂಡ ರೋಗ ಪತ್ತೆಗೆ ನಾಯಿಗಳನ್ನು ಬಳಸಿಕೊಳ್ಳುವ ಯೋಚನೆಗಳಿವೆ.

     ಫಿನ್ ಲ್ಯಾಂಡಿನ ಹೆಲ್ಸಿಂಕಿ ಪಶು ವೈದ್ಯಕೀಯ ವಿಭಾಗದ ಪ್ರಕಾರ ನಾಯಿಗಳು ನೂರಕ್ಕೆ ನೂರು ಖಚಿತವಾಗಿ ಕೋವಿಡ್ ಸೋಂಕನ್ನು ಕಂಡುಹಿಡಿಯಬಲ್ಲವು. ಇದೇ ಕಾರಣಕ್ಕೆ ಹೆಲ್ಸಿಂಕಿ ಏರ್ ಪೋರ್ಟ್ ನಲ್ಲಿ ದೊಡ್ಡ ಕೋವಿಡ್ ಶ್ವಾನ ದಳದ ಬಳಕೆ ಈಗಾಗಲೇ ಚಾಲ್ತಿಯಲ್ಲಿದೆ. ಇವರ ಪ್ರಕಾರ ಇಡೀ ಪ್ರಪಂಚದಲ್ಲಿ ಫಿನ್ ಲ್ಯಾಂಡಿನಲ್ಲಿ ಉಪಯೋಗಿಸಲಾಗುತ್ತಿರುವಷ್ಟು ಕೋವಿಡ್  ಶ್ವಾನಗಳನ್ನು ಇನ್ನೆಲ್ಲೂ ಉಪಯೋಗಿಸುತ್ತಿಲ್ಲ.

     ಅತ್ಯಂತ ಕಡಿಮೆ ಸಮಯ ಎಂದರೂ ಅರ್ಧಗಂಟೆಯಿಂದ ಒಂದುಗಂಟೆ ಬೇಕಾಗುವ ಕೋವಿಡ್ ಪರೀಕ್ಷೆಗೆ ಹೋಲಿಸಿದರೆ,  ನಾಯಿಗಳು ಕೇವಲ ಏಳು ನಿಮಿಷಗಳಲ್ಲಿ ಕೋವಿಡ್ ಅನ್ನು ಕಂಡುಹಿಡಿಯಬಲ್ಲವಾಗಿವೆ.

    ಆಂಟಿಬಾಡಿ ಪರೀಕ್ಷೆ ಅಥವಾ Polymerase chain Reaction (PCR) ಯನ್ನು ಪ್ರಯೋಗಾಲಯದಲ್ಲಿ ಮಾಡಬೇಕೆಂದರೆ ಕನಿಷ್ಠ 1.8 ಮಿಲಿಯನ್ ಸಣ್ಣಕಣಗಳು ಗಂಟಲು-ಮೂಗಿನ ದ್ರವದ ಮೂಲಕ ಸಿಗದಿದ್ದರೆ ವೈರಸ್ಸು ಖಚಿತವಾಗಿ ಇದೆ ಎಂದು ಹೇಳಲಾಗುವುದಿಲ್ಲ. ಆದರೆ ನಾಯಿಗಳಿಗೆ ಕೇವಲ 10 ರಿಂದ 100  ಸಣ್ಣ ಕಣಗಳು ಸಿಕ್ಕರೆ ಸಾಕು ಎನ್ನಲಾಗಿದೆ.ಜೊತೆಗೆ ವಿಮಾನದಿಂದ ಇಳಿವ ಪ್ರಯಾಣಿಕರು ತಮ್ಮ ಮೂಗು-ಗಂಟಲಿನ ದ್ರವದ ಮಾದರಿಯನ್ನೂ ಕೊಡಬೇಕಿಲ್ಲ. ಮಾಸ್ಕ್ ಅಥವಾ ಸಾಕ್ಸ್ ಅನ್ನು ಕೂಡ ಬಿಚ್ಚಿಕೊಡಬೇಕಿಲ್ಲ. ಬದಲಿಗೆ ಹತ್ತಿಯ ಕಡ್ಡಿಯನ್ನು ತಮ್ಮ ಚರ್ಮದ ಮೇಲಾಡಿಸಿ ಒಂದು ಪ್ಲಾಸ್ಟಿಕ್ ಕಪ್ ನಲ್ಲಿ ಹಾಕಿ ಕೊಡಬಹುದಾಗಿದೆ. ಇದನ್ನು ಕೋವಿಡ್ ನಾಯಿ ಮೂಸಿ ತನ್ನ ಪತ್ತೆ ಏನೆಂದು ಹೇಳುತ್ತದೆ. ಲಕ್ಷಣಗಳಿಲ್ಲದವರನ್ನೂ ಸುಲಭವಾಗಿ ಪತ್ತೆ ಮಾಡಲು ಸಾಧ್ಯವಾಗುತ್ತದೆ. ಸಾಂಪ್ರದಾಯಿಕವಾಗಿ ಪರೀಕ್ಷೆಗೊಳಪಡಿಸಲಾಗದಿದ್ದವರಿಗೆ ಇದು ವರದಾನವಾಗುತ್ತದೆ.  ಡಿಸೆಂಬರ್ ವೇಳೆಗೆ ಮತ್ತೂ ಹಲವು ದೇಶಗಳ ವಿಮಾನ ನಿಲ್ದಾಣ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ನಾವು ನಮ್ಮ ವಿಶ್ವಾಸಾರ್ಹ ಮಿತ್ರರನ್ನು ನೋಡಬಹುದಾಗಿದೆ ಎನ್ನಲಾಗಿದೆ.

     ಶ್ವಾನದ ಮೂಗು ಕೋವಿಡ್ ಸೋಂಕನ್ನು ಪತ್ತೆ ಹಚ್ಚಿ ಅದರಿಂದ ಮನುಷ್ಯ ಹೊರಬರಲು ಒಂದು ಭರವಸೆಯನ್ನು ನೀಡಿರುವುದನ್ನು ನೋಡಿದರೆ ಇಪ್ಪತ್ತೊಂದನೇ ಶತಮಾನದಲ್ಲೂ ಮತ್ತು ಯಾವತ್ತಿಗೂ ಪ್ರಕೃತಿ ಮನುಷ್ಯನಿಂದ ಮೈಲು ದೂರ ಮುಂದಕ್ಕೆ ಎಂಬುದನ್ನು ನಿಚ್ಚಳವಾಗಿ ಕಾಣಬಹುದು.

    ಶೃಂಗ ಪುರಾಧೀಶ್ವರಿ ಶಾರದೆ

    ಇಂದು ನವರಾತ್ರಿ ಪಂಚಮಿ. ಕನ್ನಡಪ್ರೆಸ್.ಕಾಮ್ ನ ಸಂಗೀತೋತ್ಸವ ಮತ್ತೊಂದು ಹಂತವನ್ನು ತಲುಪಿದೆ.ಭಾವಗೀತೆ, ಚಿತ್ರಗೀತೆ, ಶಾಸ್ತ್ರೀಯ ಸಂಗೀತವನ್ನು ಸುಮಧುರವಾಗಿ ಹಾಡುವ ಮೀರಾ ಜಿ ಇಂದಿನ ಕಚೇರಿಯನ್ನು ನಡೆಸಿಕೊಟ್ಟಿದ್ದಾರೆ.ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತಿರುವ ಮೀರಾ ರಾಜ್ಯ ಸರಕಾರದಲ್ಲಿ ಉದ್ಯೋಗದಲ್ಲಿದ್ದಾರೆ.

    ಬಾಲ್ಯದಲ್ಲೇ ಮಲ್ಲಾಡಿಹಳ್ಳಿಯ ಶ್ರೀರಾಘವೇಂದ್ರ ಸ್ವಾಮೀಜಿಯವರ ಪ್ರಭಾವಕ್ಕೆ ಒಳಗಾದ ಮೀರಾ ಅವರಿಗೆ ಓದುವ ಸಮಯದಲ್ಲಿ ಅಲ್ಲಿದ್ದ ಸಾಂಸ್ಕೃತಿಕ ವಾತಾವರಣ ಸಂಗೀತ ಕಲಿಯಲು ಪ್ರೇರಣೆ ನೀಡಿತು. ಅಂದಿನಿಂದ ಸಂಗೀತ ಅಭ್ಯಾಸ ಸತತವಾಗಿ ನಡೆದಿದೆ. ಹತ್ತಾರು ವರ್ಷಗಳಿಂದ ಕಾರ್ಯಕ್ರಮಗಳನ್ನು ನೀಡಿದ್ದಾರೆ.

    ಶರಣು ಶರಣು ಗಣಪನೆ ಎಂದು ವಿಘ್ನವಿನಾಯಕನ್ನು ಸ್ತುತಿಸುವ ಮೂಲಕ ಆರಂಭವಾಗುವ ಸಂಗೀತ ಸಂಜೆ ಮುಂದೆ ಶಾರದೆಯನ್ನು ಧ್ಯಾನಿಸುತ್ತದೆ.ಶೃಂಗ ಪುರಾಧೀಶ್ವರಿ ಶಾರದೆ, ಬಿಳಿಯ ವಸ್ತ್ರವ ಧರಿಸಿ..,ಸ ರಿ ಗ ಮ ಪ ದ ನಿ …ಸಪ್ತ ಸ್ವರ ಮಿಡಿಸಿ ವೀಣೆಯಲಿ, ನೀನೊಲಿದರೆ ಜ್ಞಾನ ಎನ್ನುತ್ತಾ ದೇವಿ ಸರಸ್ವತಿಯನ್ನು ಕೊಂಡಾಡುತ್ತಾ ಸಂಪನ್ನ ವಾಗುತ್ತದೆ..

    ಮಧುಸೂಧನ್

    ಭಾರತಿ ಎಸ್ ಎನ್ ಅವರ ನಿರರ್ಗಳ ವ್ಯಾಖ್ಯಾನ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸುವಂತೆ ಮಾಡುತ್ತದೆ. ಚಿತ್ರದುರ್ಗದ ಮಧುಸೂಧನ್ ತಾವು ಕಂಡ ಮೈಸೂರು ದಸರಾ ನೆನಪನ್ನು ಹಂಚಿಕೊಂಡಿದ್ದಾರೆ. ಭಾರತದ ನಾನಾ ಕಡೆ ಆಚರಿಸುವ ದಸರಾ ವಿವರಗಳನ್ನು ಆರ್. ಶ್ರೀನಿವಾಸ್ ನೀಡಿದ್ದಾರೆ.

    ನೀವು ಆಲಿಸಿ, ಪ್ರತಿಕ್ರಿಯಿಸಿ.

    ಪರಂಪರೆ ಮುಂದುವರಿಸುತ್ತಿರುವ ಪ್ರೇಮ ಅವರ ಮನೆಯ ಗೊಂಬೆ ನೋಟ

    ಬೆಂಗಳೂರು ಬೊಮ್ಮನಹಳ್ಳಿ ಬಳಿಯ ಕೋಡಿಚಿಕ್ಕನಹಳ್ಳಿಯ ನಿವಾಸಿ ಪ್ರೇಮ ಎನ್ ಎಸ್ ಅವರು ಕಳೆದ ನಲುವತ್ತು ವರುಷಗಳಿಂದ ಗೊಂಬೆ ಕೂಡಿಸುವ ಸಂಪ್ರದಾಯವನ್ನು ಅನುಚೂನವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ವಂಶಪಾರಂಪರ್ಯವಾಗಿ ಬಂದ ಪದ್ಧತಿಯನ್ನು ಅವರು ಕೈ ಬಿಟ್ಟಿಲ್ಲ. ಅವರ ಮಗಳು ಕೂಡ ಅಮ್ಮನಿಗೆ ಬೆಂಬಲವಾಗಿ ನಿಂತಿದ್ದಾರೆ.

    ತಂತ್ರಜ್ಞಾನ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ಪ್ರೇಮಾ ಅವರು ಬಿಡುವಿಲ್ಲದ ಕೆಲಸದ ನಡುವೆಯೂ ಗೊಂಬೆ ಕೂರಿಸಲು ಬಿಡುವುಮಾಡಿಕೊಂಡಿದ್ದಾರೆ.

    ನಮ್ಮ ಮನೆಯ ಗೊಂಬೆಗಳನ್ನು ನೋಡಲು ನಮ್ಮ ಸ್ನೇಹಿತರು , ಬಂಧುಗಳಿಗೆ ಆಸಕ್ತಿ. ಆದರೆ ಈ ಬಾರಿ ಯಾರ್ಯಾರು ಬರುತ್ತಾರೋ ಗೊತ್ತಿಲ್ಲ ಎನ್ನುತ್ತಾರೆ.

    ಅವರ ಮನೆಯ ಗೊಂಬೆ ಆಲ್ಬಂ ಇಲ್ಲಿದೆ.

    error: Content is protected !!