ನಮ್ಮಲ್ಲಿ ದಸರಾ ಗೊಂಬೆ ಹಬ್ಬ ಹೇಗೋ ಹಾಗೆ ಗುಜರಾತ್ ಮತ್ತು ಉತ್ತರ ಭಾರತದಲ್ಲಿ ದಾಂಡಿಯಾ, ಕೋಲ್ಕತಾದಲ್ಲಿ ದುರ್ಗಾ ಪೂಜೆ ತುಂಬಾನೆ ಫೇಮಸ್. ದಸರಾ ಸಮಯದಲ್ಲಿ ಐದು ದಿನಗಳ ಕಾಲ ಇಡೀ ಕೋಲ್ಕತಾ ನಗರ ದುರ್ಗೆಯನ್ನು ಆರಾಧಿಸುತ್ತದೆ.
ಈಗ್ಗೆ ಎರಡು ವರ್ಷಗಳ ಹಿಂದೆ ಕುಟುಂಬ ಸಮೇತವಾಗಿ ಈ ಸಡಗರದ ಉತ್ಸವದಲ್ಲಿ ಭಾಗಿಯಾಗುವ ಅವಕಾಶ ನನಗೆ ತಾನಾಗೆ ಒದಗಿಬಂತು. ನವರಾತ್ರಿಯ ಆರನೇ ದಿನ ಅಂದರೆ ಷಷ್ಟಿಯ ದಿನ ನನ್ನ ದುರ್ಗಾ ಪಂಡಾಲ್ ವೀಕ್ಷಣೆಯ ಕಾರ್ಯಕ್ರಮ ಶುರುವಾಯಿತು. ಈ ದಿನದಂದೆ ದುರ್ಗೆಯನ್ನು ಗಣೇಶ, ಸ್ಕಂದ, ಲಕ್ಷ್ಮಿ, ಸರಸ್ವತಿಯರ ಸಮೇತವಾಗಿ ಪಂಡಾಲ್ ನಲ್ಲಿ ಪ್ರತಿಷ್ಟಾಪಿಸಲಾಗುತ್ತದೆ. ಅಂದು ರಾತ್ರಿ ಆರಂಭವಾದ ನಮ್ಮ ಪಂಡಾಲ್ ವೀಕ್ಷಣೆ ಬೆಳಗಾದರು ಮುಗಿಯಲಿಲ್ಲ. ಒಂದೊಂದು ಕಡೆಯಂತೂ ಎರಡು ಕಿಮಿ ಉದ್ದದ ಕ್ಯೂ. ಜನಪ್ರಿಯ ಪಂಡಾಲ್ ಗಳ ಮುಂದೆಯಂತೂ ಕರಗಿದಷ್ಟು ಬೆಳೆಯುವ ಸಾಲು. ಕೆಲವು ದುರ್ಗಾ ಮೂರ್ತಿಗಳ ಈ ಸ್ಲೈಡ್ ಶೋ ನೋಡಿ.(ಸಂಗ್ರಹ ಚಿತ್ರ)
ಕೋಲ್ಕತಾದಲ್ಲಿ ದುರ್ಗಾ ಪೂಜೆಗೆ ವಾಣಿಜ್ಯ ಆಯಾಮವೂ ಇದೆ. ಟೆಲಿಕಾಮ್,ಆಟೋಮೊಬೈಲ್, ಎಫ್‌ಎಂಸಿಜಿ ಕಂಪೆನಿಗಳು ಈ ಪಂಡಾಲ್ ಗಳನ್ನು ಪ್ರಾಯೋಜಿಸುತ್ತವೆ. ತಮ್ಮ ಬ್ರಾಂಡ್ ಗಳ ಪ್ರಚಾರಕ್ಕೆ ಕೋಟಿಗಟ್ಟಲೆ ವ್ಯಯಿಸುತ್ತವೆ. ಒಂದು ಮೂಲದ ಪ್ರಕಾರ 50000 ಕೋಟಿ ರೂಪಾಯಿಗಳಷ್ಟು ವ್ಯವಹಾರ ಈ ಸಂದರ್ಭದಲ್ಲಿ ನಡೆಯುತ್ತದೆ.
ದುರ್ಗಾ ಪೂಜೆಗೆ ಎಷ್ಟೇ ವಾಣಿಜ್ಯ ಆಯಾಮ ಬಂದಿದ್ದರು ದುರ್ಗಾ ಮೂರ್ತಿಗಳ ನಿರ್ಮಾಣದಲ್ಲಿ ಹಿಂದಿನ ಪರಂಪರೆ ಹಾಗೆಯೇ ಮುಂದುವರಿದಿದೆ. ಕೋಲ್ಕತಾದ ಕುಮರತುಲಿಯಲ್ಲಿ ಈ ಮೂರ್ತಿಗಳು ಸಿದ್ಧಗೊಳ್ಳುತ್ತವೆ. ಇಲ್ಲಿನ ಕಲಾವಿದರು ತಲೆ ತಲಾಂತರದಿಂದ ವಿಗ್ರಹಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮೂರ್ತಿ ನಿರ್ಮಾಣದ ಈ ಸ್ಲೈಡ್ ಶೋ ನೋಡಿ.
ಪಾಶ್ಚಿಮಾತ್ಯರಿಗೆ ಕ್ರಿಸ್ ಮಸ್ ಇರುವಂತೆ ಬಂಗಾಲಿಗಳಿಗೆ ದುರ್ಗಾ ಪೂಜೆ ದೊಡ್ಡ ಹಬ್ಬ. ಹೊರ ದೇಶದಲ್ಲಿರುವ ಬಂಗಾಲಿಗಳು ಕೂಡ ತಾವು ಎಲ್ಲೇ ಇದ್ದರೂ ಒಂದಾಗಿ ಸೇರಿ ಇದನ್ನು ಆಚರಿಸುತ್ತಾರೆ.
ಈ ಉತ್ಸವ ದುರ್ಗಾಷ್ಟಮಿಯಂದು ತನ್ನ ಉತ್ತುಂಗವನ್ನು ತಲುಪುತ್ತದೆ. ಅಂದು ಮಹಿಳೆ, ಪುರುಷ ಮಕ್ಕಳು ಎಂಬ ಭೇದವಿಲ್ಲದೆ ದುರ್ಗೆಯ ಆರಾಧನೆಯಲ್ಲಿ ತೊಡಗುತ್ತಾರೆ. ಧುನುಚಿ ನೃತ್ಯದ ಮೂಲಕ ದುರ್ಗೆ ಮಾತೆಯನ್ನು ಪ್ರಾರ್ಥಿಸುತ್ತಾರೆ. ಈ ನೃತ್ಯ ಒಂದು ಮಾದರಿ ನಮ್ಮ ಕೋಲಾಟದಂತೆ ಇರುತ್ತದೆ. ಆದರೆ ಕೋಲಿನ ಬದಲು ಎಲ್ಲರ ಕೈಯಲ್ಲೂ ಧೂಪ ತುಂಬಿದ ಪಾತ್ರೆ ಇರುತ್ತದೆ. ಅದನ್ನು ಕೈಯಲ್ಲಿ ಹಿಡಿದು ನೃತ್ಯ ಮಾಡುತ್ತಾರೆ. ಕೆಲವರಂತೂ ಮೂರು ಪಾತ್ರೆಗಳನನ್ನು ಹಿಡಿದು ನರ್ತಿಸುತ್ತಾರೆ. ಮೂರನೆ ಪಾತ್ರೆಯನ್ನು ಹಲ್ಲಿನ ಮಧ್ಯೆ ಕೋಲಿನ ಸಹಾಯದಿಂದ ಹಿಡಿದಿರುತ್ತಾರೆ. ಡೋಲಿನ ಸದ್ದಿನೊಂದಿಗೆ ಈ ನೃತ್ಯ ನೋಡುವುದೆ ಒಂದು ಸುಂದರ ಅನುಭವ. ಇದಾದನಂತರ ಭೋಗ್ ಅಂದರೆ ಹಬ್ಬದ ಊಟವನ್ನು ಎಲ್ಲರೂ ಸೇರಿ ಮಾಡುತ್ತಾರೆ.
ನೋಡುವುದೆ ಸೊಗಸು
ಪಂಡಾಲ್ ಗಳನ್ನು ನೋಡುವುದೆ ಸೊಗಸು. ಇಡೀ ರಾತ್ರಿ ತಿರಗಿದರೂ ಮುಗಿಯುವುದಿಲ್ಲ. ಇಡಿ ಕೋಲ್ಕತಾ ನಗರ ಅಕ್ಷರಶಃ ರಸ್ತೆಯಲ್ಲೇ ಇರುತ್ತದೆ. ಪಂಡಾಲ್ ಗಳನ್ನಂತೂ ನಾನಾ ರೀತಿಯಲ್ಲಿ ಅಲಂಕರಿಸಿರುತ್ತಾರೆ. ಮೈಸೂರು ಅರಮನೆ, ಲೋಟಸ್ ಟೆಂಪಲ್, ವೈಟ್ ಹೌಸ್ ಹೀಗೆ ನಾನಾ ರೀತಿಯಲಲ್ಲಿ ಅಲಂಕೃತಗೊಂಡಿರುತ್ತವೆ. ಕೆಲವು ಪಂಡಾಲ್ ಗಳಲ್ಲಿ ದುರ್ಗೆಯ ಆಭರಣಗಳು ಅಪ್ಪಟ ಚಿನ್ನದ್ದೇ ಆಗಿರುತ್ತವೆ. ದುರ್ಗೆಯ ಮೂರ್ತಿಗಳು ಅಷ್ಟೇ ಒಂದಕ್ಕಿಂತ ಒಂದು ಸುಂದರ , ಕಲಾವಿದರ ಕೈ ಚಳಕ ಎದ್ದು ಕಾಣುತ್ತದೆ, ಚಿನ್ನದ ಆಭರಣಗಳ ಕಂಪೆನಿಯೊಂದು ಒಂದು ಪಂಡಾಲ್ ಅನ್ನು ಪ್ರಾಯೋಜಿಸಿದ್ದು ಇಲ್ಲಿ ದುರ್ಗೆ ಗೆ 8 ಕೋಟಿ ರೂಪಾಯಿಗಳ ಆಭರಣ ಹಾಕಲಾಗಿದೆ. ಐದು ದಿನಗಳ ಉತ್ಸವದ ನಂತರ ದುರ್ಗೆಯನ್ನು ಹೂಗ್ಲಿ ನದಿಯಲ್ಲಿ ವಿಸರ್ಜಿಸಲಾಗುವುದು. ಪಂಡಾಲ್ ಗಳ ನೋಟ ನೋಡಿ.
ನವಗ್ರಗಳ ಆರಾಧನೆ ದುರ್ಗಾ ಪೂಜೆಯಲ್ಲಿ ಮಿಳಿತಗೊಂಡಿದೆ. ಹಳದಿ ಮತ್ತು ಬಿಳಿ ಬಣ್ಣದ ದುರ್ಗಾ ಮೂರ್ತಿ ಸೂರ್ಯನನನ್ನು, ಆಕೆಯ ವಾಹನವಾದ ಸಿಂಹ ಚಂದ್ರನನ್ನು ಪ್ರತಿನಿಧಿಸುತ್ತದೆ. ತೆರೆದಿರುವ ಸಿಂಹದ ಬಾಯಿ ರಾಹು ಹಾಗೂ ಅದರ ಬಾಲ ಕೇತು. ಬುದ್ಧಿ ಮತ್ತು ಸಿದ್ಧಿಯ ಗಣಪ ಬುಧನನ್ನು, ಸ್ಕಂದ ಮಂಗಳನ್ನು ಪ್ರತಿನಿಧಿಸುತ್ತದೆ. ದೇವಿ ಲಕ್ಷ್ಮಿ ಗುರುವನ್ನು,ಸರಸ್ವತಿ ಶುಕ್ರನನ್ನು ಹಾಗೂ ಕೋಣವನ್ನು ಕಚ್ಚುವ ಸರ್ಪ ಶನಿ ಗ್ರಹವನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆಯೂ ಇದೆ.
ವಲಸೆ ಕಾರ್ಮಿಕರ ಪ್ರತಿಕೃತಿ
ಈ ಬಾರಿ ಕೋವಿಡ್ ಸುರಕ್ಷ ನಿಯಮಗಳ ಅನುಸಾರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಈ ಬಾರಿ ಡಾಕ್ಟರ್, ಕೋವಿಡ್ , ವಲಸೆ ಕಾರ್ಮಿಕರು ಅಲ್ಲದೆ ಕಲಾವಿದ ಸೋನ ಸೂಡ್ ಪ್ರತಿಕೃತಿಯನ್ನು ಕೂಡ ಪಂಡಾಲ್ ನಲ್ಲಿ ನಿರ್ಮಿಸಲಾಗಿದೆ.(ಈ ಬಾರಿಯ ಪಂಡಾಲ್ ಆಕರ್ಷಣೆ ಮೇಲಿನ ಸ್ಲೈಡ್ ಶೋ ನಲ್ಲಿ)
ದಸರಾ ಸಮಯದಲ್ಲಿ ಯಾವುದಾದರು ಒಂದು ವರ್ಷ ಕೊಲ್ಕತಾಗೆ ಹೋಗಿ ಬನ್ನಿ. ಹೋದಾಗ ಬಂಗಾಲಿಗಳು ಹೇಳುವ ಹಾಗೆ ದುರ್ಗಾ ಪೂಜೋವನ್ನು ಮರೆಯಬೇಡಿ.
ವಿನಯ್ ರಾವ್, ನಿಮ್ಮ ಜೊತೆ ನಾವು ಸಹ ಕೊಲ್ಕತ್ತಾ ದಲ್ಲಿ ಸುಂದರ ವಾದ ಪೆಂಡಾಲ್ ಗಳನ್ನು ನೋಡಿದಂತಾಯಿತು. ಅದೇನು ವ್ಯೆಭವ ದಿಂದ ನಿರ್ಮಿ
ಸಿದ್ದಾರೆ ! ನವ ವಿಧ ಗಳಲ್ಲಿ ಅಲಂಕರಿಸಿದ ದುರ್ಗೆ ಯರನ್ನು
ನೋಡಲು ಅದೆಷ್ಟು ಸುಂದರ ವಾಗಿವೆ!!ಕಲಾವಿದನ ಕಲ್ಪನೆಯ
ಕನಸಿನಲೋಕದಲ್ಲಿ ಮೂಡಿ ಬಂದಿರುವ ಎಲ್ಲ ದುರ್ಗೆಯರಿಗೂ ಅನಂತ ಭಕ್ತಿಭಾವದಿಂದ ನಮನಗಳು.
ನಾವೇ ಕೊಲ್ಕೋತದಲ್ಲಿ ಒಂದು ಸುತ್ತು ಹೋಗಿ ಬಂದಂತೆ ಆಯಿತು.
Very colourful article.
Mr.Vinay Rao has taken us from decorated one pendal to another in Kolkata in this Navarathri where Durga Devi is worshipped and each pendal decorated with different theme some historic and mostly on contemporary basis. We never knew the amount involved is so huge and if you google we come to know grandest celebration of Dassera is done in Kolkata and it stands top 1 in India among all the cities which is known for hopping of devotees from one pendal to another throughout the night and tasting the delicious sweets offered. Mr.Vinay Rao has written the article well with slideshow during the narration which made us to feel as though we have a seen a good documentary movie on Durga Devi pooja celebration in Kolkata. Please keep sharing such experience in this portal.
ಓದುವಾಗಲೇ ಇಷ್ಟೊಂದು ಪುಳಕಿತನಾಗುವುದಾದರೆ, ಇನ್ನು ಕಣ್ಣಾರೆ ಕಂಡರೆ ಎಷ್ಟು ಅದ್ಬುತ ಅನುಭವವಾಗಬಹುದು!. ತುಂಬಾ ಧನ್ಯವಾದಗಳು ವಿನಯ್ ರಾವ್, ಉತ್ತಮವಾದ ಬರಹ. ಅಲ್ಲಿನ ಜನರ ಆಚಾರ-ವಿಚಾರಗಳನ್ನು ಸುಂದರವಾಗಿ ತಿಳಿಸಿಕೊಟ್ಟಿರುವಿರಿ.
ಧನ್ಯವಾದಗಳು.
ವಿನಯ್ ಕುಮಾರ್