26.9 C
Karnataka
Sunday, April 28, 2024

    ಆನೆ ಮಹಾರಾಜರಿಗೆ ಅಪ್ಪನ ಮೌನ ಪ್ರಾರ್ಥನೆ

    Must read

    ಕಳೆದ ಸರ್ತಿ ಇನ್ನೂ ಬಡಿಯದ ಹುಲ್ಲುಬಣವೆಯಿಂದ ನಾಕಾರು ಬಾಯಿ ಹುಲ್ಲು ಮೆದ್ದು ನಂತರ ಅದೂ ಬೇಸರವಾಗಿ ಗೇಟನ್ನು ಮುರಿಯಲು ಹೋಗಿ ಅಪ್ಪ ‘ಯಾಕಪ್ಪ ಮುರಿತೀಯಾ…ಮಣ್ಣು ನೆಚ್ಚಿ ಬಾಳ್ವೆ ಮಾಡೋ ನಮಗೂ ಕಷ್ಟ ನಷ್ಟ ಇರ್ತವೆ ಕಣೋ,ದಾಟುಕೊಂಡು ಹೋಗಬಾರದಾ’ಎಂದಾಗ ತಿರುಗಿ ನೋಡಿ ಕಾಂಪೌಂಡನ್ನು ಸ್ವಲ್ಪ ತ್ರಾಸದಲ್ಲೇ ದಾಟಿ ಆಚೆ ಹೋದ ನಮ್ಮ ಬೆನವಣ್ಣ ಆನೆ ಮಹಾರಾಜ ನಿನ್ನೆ ರಾತ್ರಿ ‌ಮತ್ತೆ ಅಪ್ಪನ ಮನೆಯ ಸೂರಿನ ಬದಿಯಲ್ಲೇ ಹಾದು ಹೋಗಿದ್ದಾನೆ.

    ರಾತ್ರಿ ಹತ್ತರ ಹೊತ್ತಿಗೆ ಅಪ್ಪನ ಚಿಳ್ಳೆಪಿಳ್ಳೆಗಳಾದ ಸೋನಿ ಕೀನ್ಯಾ ರಾಜ ಇತರೆ ನಾಯಿಗಳು ಬೊಗಳಿದ್ದು ಕೇಳಿ ಎಂದಿನಂತೆ ಮೇಲಿನ ಹೊಲದ ತೋಟದಲ್ಲಿ ಆನೆ ದಾಟ್ತಿರಬೇಕು ಅಂದುಕೊಂಡು ಮಾಮೂಲಿನಂತೆ ಪಟ್ಟಾಂಗ ಹೊಡಿತಾ ಕೂತಿದ್ದಾರೆ.ಯಾಕೋ ನಾಯಿಗಳ ಬೊಗಳುವಿಕೆ ಕಡಿಮೆಯಾಗಿ ದೊಡ್ಡದೊಂದು ಉಸಿರು ಕೇಳಿದಾಗ ಅಮ್ಮ ಮಲಗಿದ್ದ ಮಂಚದ ಪಕ್ಕದಲ್ಲಿರುವ ಕಿಟಿಕಿ ತೆಗೆದರೆ ಎರಡು ಕೈಯಾಚೆ ದೊಡ್ಡ ಹೆಬ್ಬಂಡೆಯಂತಹ ಒಂಟಿಸಲಗ ನಿಂತಿದೆ.ಅಮ್ಮನ ಮೈ ತಣ್ಣಗಾದಂತಾಗಿ ಅಲ್ಲೇ ಇದ್ದ ನನ್ ‌ಮಗ ಮತ್ತು ಅಣ್ಣನನ್ನು ಕೂಗಿದ್ದಾರೆ.ಇಬ್ಬರೂ ಕಿಟಿಕಿಯಲ್ಲಿ ನೋಡುವಷ್ಟರಲ್ಲಿ ಆನೆ ಸೋಲಾರ ಪ್ಯಾನಲ್ ಪಕ್ಕ ಹೋಗಿ ನಿಂತಿದೆ.ಸಣ್ಣಗೊಮ್ಮೆ ಸೊಂಡಿಲಿನಿಂದ ಮುತ್ತಿಟ್ಟರೂ ಸೋಲಾರು ಸೋತು ಶರಣಾಗ್ತದೆ.
    ಅದೇನೋ ಗೊತ್ತಿಲ್ಲ. ಅಪ್ಪನ ಎಂದಿನ ಗದರುವಿಕೆಯ ಸದ್ದಿಗಾಗಿ ಆಲಿಸಿದಂತೆ ಮತ್ತೆ ಸುತ್ತ ನಿಂತು ನೋಡಿದೆ.ಅಪ್ಪಂಗೆ ಸ್ವಲ್ಪ ಮೈ ಹುಷಾರಿಲ್ಲದೆ ಆ ಮಳೆಯ ಅಬ್ಬರದಲ್ಲಿ‌ ಜೋರು ಧ್ವನಿಯಲ್ಲಿ ಗದರಲಾಗದೆ ‘ನೀನೆ ಸರಿ ತಪ್ಪು ನೋಡ್ಕೊಂಡು ಹೋಗಪ್ಪ’ ಅಂತ ಮನಸಲ್ಲೇ ಹೇಳಿದ್ರಂತೆ.

    ಈ ಆನೆ ಮಹಾರಾಜರಿಗೆ ಅಪ್ಪನ ಮೌನ ಪ್ರಾರ್ಥನೆ ಕೇಳಿರಬಹುದು ಕಾಣುತ್ತೆ.ಸ್ವಲ್ಪ ಹೊತ್ತು ಅಲ್ಲೇ ನಿಂತು ಯೋಚಿಸಿ ಮತ್ತೆ ಅಲ್ಲಿಂದ ಎರಡು ಹೆಜ್ಜೆ ಮುಂದೆ ಬಂದು ನಮ್ಮ ಸೇದೋ ಬಾವಿಯ ಬಳಿ ನಿಂತು ಅಪ್ಪನ ಧ್ವನಿ ಗಾಗಿ ಎಂಬಂತೆ ಕಾಯ್ದಿದೆ.
    ಅಪ್ಪಂದು ಈ ಬಾರಿಯೂ ಎಂದಿನಂತೆ ಮೌನ ಸಂಭಾಷಣೆ.ಅಲ್ಲಿಂದ ಎರಡು ಹೆಜ್ಜೆ ಆಚೆ ಸ್ವಲ್ಪ ಇಕ್ಕಟ್ಟು.

    ಕಾರಣ ಅಣ್ಣ ತನ್ನ ಎಕ್ಸ್ ಯು ವಿ ಕಾರನ್ನು ಅದೇ ಬದಿಯಲ್ಲಿ ನಿಲ್ಲಿಸಿದ್ದ.ಅಲ್ಲೂ ನಮ್ಮ ಆನೆಯಣ್ಣನಿಗೆ ಕಾರನ್ನು ಸ್ವಲ್ಪ ಮಾತಾಡಿಸುವ ಅಂತ ಮನಸ್ಸಾಗಿದ್ದಿದ್ರೆ ಎನೋ ಎಂತೊ.
    ಅಲ್ಲಿಂದ ಕಾರಿಗೂ ತಾಗದಂತೆ ಸೋಲಾರಿಗೂ ನೋವಾಗದಂತೆ, ಬಾವಿ ಕಟ್ಟೆಗೂ ತೊಂದರೆಯಾಗದಂತೆ ಹೆಜ್ಜೆ ಹಾಕಿ ಮುಂದೆ ಬಂದಿದೆ.ಅಲ್ಲಿಂದ ಆನೆ ಮಹಾರಾಜ ಹನ್ನೆರಡು ಹೆಜ್ಜೆ ಹಾಕಿದರೆ ಹೊರ ಗೇಟು ಸಿಕ್ತದೆ.ಅಲ್ಲಿಂದ ಸುತ್ತಕೂ ಕಾಂಪೌಂಡು.

    ಸಂಜೆಯಾಗುತ್ತಲೂ ಒಂಟಿಮನೆಯಾದ್ದರಿಂದ ಗೇಟಿಗೆ ದೊಡ್ಡ ಬೀಗ ಹಾಕಿರ್ತಾರೆ.
    ಬೆನವಣ್ಣ ಅಪ್ಪನ ಮೌನ ಬೇಡಿಕೆಗೆ ಈಗ ಎಂತ ಮಾಡೋದು ಅಂತ ಸ್ವಲ್ಪ ಯೋಚಿಸಿ ಬೀಗ ಮಾತ್ರ ಮುರಿದು ಮೆಲ್ಲಗೆ ಗೇಟು ಅಲುಗಿಸಿದ್ದಾನೆ.ಮನೆಯ ಕಡೆಗೆ ಸ್ವಲ್ಪ ತಗ್ಗಿರುವ ಕಾರಣ ಗೇಟಿನ ಒಂದು ಬದಿ ತೆರೆದು ಕೊಂಡಿದೆ.ಸೀದಾ ಆಚೆ ಹೋಗಿ ಒಂದ್ನಿಮಿಷ ನಿಂತು ತಿರುಗಿ ನೋಡಿ ಎಡಕ್ಕೆ ಹೊರಳಿ ತೋಟದ ರಸ್ತೆಯಲ್ಲಿ ಆಚೆ ಎಲ್ಲೋ ಹೋಗಿದ್ದಾನೆ.

    ಅಮ್ಮ ಬೆಳಿಗ್ಗೆ ಇದನ್ನು ಹೇಳುವಾಗ ಆನೆಯ ಬುದ್ಧಿವಂತಿಕೆ ,ನೆನಪಿನ ಶಕ್ತಿ ಮತ್ತು ಅದರ ಮೆದುಳಿನಲ್ಲಿರುವ ಕಂಪಾಸ್ ವ್ಯವಸ್ಥೆಯ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದ ನನಗೆ ಮತ್ತೊಮ್ಮೆ ಮನೆ ಬಾಗಿಲಿಗೆ ಬಂದು ಹೋದ ಗಜರಾಜನ ಬಗ್ಗೆ ಪ್ರೀತಿಯುಕ್ಕಿತು.

    ಕಳೆದ ವಾರದಲ್ಲಿ ಮನೆಯಿಂದ ಕೆಳಗಿರುವ ಬಾಳೆ ತೋಟಕ್ಕೆ ನುಗ್ಗಿ ಹತ್ತಿಪ್ಪತ್ತು ಬಾಳೆಯ ಗೊನೆಗಳನ್ನು ಕಿತ್ತು ಬಾಳೆಯ ಕಂದುಗಳನ್ನೂ ಎಳೆದಾಡಿ ಅಡಾವುಡಿ ಮಾಡಿದ್ದಕ್ಕೆ ಅಪ್ಪ ಫೋನ್ ಮಾಡಿ ನನ್ ಹತ್ರ ಬೈಕೊಂಡಿದ್ರು.’ಮದುವೆಗೆಂತ ಎಂತ ಚೆನ್ನಾಗಿ ಬಾಳೆ ಗೊನೆ ತೂಗಾಡಿದ್ದವು.ಈ ನನ್ಮಗಂದು ಬಂದು ಎಲ್ಲನೂ ಹುಡಿ ಎಬ್ಸಿದೆ”ಅಂದಿದ್ರು.

    ‘ಅಯ್ಯೋ ಅಪ್ಪಾಜಿ..ಮದುವೆ ಇರೋದು ನವೆಂಬರ್ ಗೆ..ಈ ಬಾಳೆಗೊನೆ ಅಲ್ಲಿಯವರೆಗೂ ಎಲ್ಲಿ ಉಳಿತಿದ್ವು.ಸುಮ್ನಿರಿ ನೀವೊಂದು’ ಎಂದಿದ್ದೆ.

    ಅಪ್ಪ ಆನೆಗಳಿಗೆ ಬಯ್ಯುವಾಗಲೂ ಅದೆಂತದೋ ಅಕ್ಕರೆಯನ್ನು ತುಂಬ್ಕೊಂಡೇ ಬಯ್ತಾರೆ.
    ಅವೂ ಕೂಡಾ ‘ನೀ ಬೆಳೆದಿರೋದ್ರಲ್ಲಿ ಒಂದು ಐದು ಪರ್ಸೆಂಟು ನಾವು ಮೇಯಕ್ಕೇ ಇರೋದು’ ಅಂತ ವರ್ಷ ವರ್ಷವೂ ಚಂಡಿ ಹಿಡಿದು ತೋಟ ನುಗ್ತವೆ.
    ….
    ಹಾಗಂತ ಸಮಸ್ಯೆ ಇಷ್ಟು ಸಲೀಸಾಗಿ ಮಾರ್ಧವವಾಗಿ ಮುಗಿದು ಹೋಗ್ತದೆ ಅಂತಲ್ಲ.
    ಆಲೂರು ಸಕಲೇಶಪುರ ತಾಲ್ಲೂಕಿನಲ್ಲಿ ಆನೆಯಿಂದ ಆಗ್ತಿರುವ ಸಾವಿನ ಪ್ರಮಾಣ ವರ್ಷವರ್ಷವೂ ಜಾಸ್ತಿಯಾಗ್ತಿದೆ.ಬೆಳೆ ಹಾನಿಗೆ ಸರ್ಕಾರ ಕೊಡುವ ಪರಿಹಾರ ಅರೆಕಾಸಿನ ಮಜ್ಜಿಗೆಯಂತಿದೆ.

    ಅಪ್ಪನ ಮನೆಯ ಬಳಿಯೂ ಅಸ್ಸಾಮಿನಿಂದ ಬರುವ ವಲಸೆ ಕಾರ್ಮಿಕರ ಮಕ್ಕಳು ಅಷ್ಟಗಲಕ್ಕೂ ಹೊತ್ತಿನ ಪರಿವೆಯಿಲ್ಲದೆ ಆಡುತ್ತಿರುತ್ತವೆ. ಮನೆಗೆ ಸಂಜೆ ಮೇಲೆ ಯಾರೇ ಬರಲಿಕ್ಕೂ ಭಯ ಬೀಳ್ತಾರೆ.ನಾವು ಕೂಡ ಬೆಳಕಿದ್ದ ಹಾಗೇ ಮನೆ ಸೇರಿಕೊಳ್ಳುವ ಅನಿವಾರ್ಯತೆ.

    ಆನೆಗಳ ಮನಸ್ಸು ಹೀಗೇ ಎಂದು ಹೇಳಲಾಗದು.ಅಲ್ಲೆಲ್ಲೋ ಬೆದೆಗೆ ಬಂದ ಹೆಣ್ಣಾನೆ ಇದ್ದರೆ ಸುತ್ತಿನ ನಲ್ವತ್ತು ಕಿಮೀ ವರೆಗಿನ ಇತರೆ ಗಂಡು ಆನೆಗಳಿಗೆ ಬೆದೆಯ ಆನೆ ಸ್ರವಿಸುವ ಫಿರಮೋನ್ ಮನಸ್ಸನ್ನು ತಲ್ಲಣಗೊಳಿಸುತ್ತದೆ.ಅದರ ಬುದ್ದಿ ಸ್ಥಿಮಿತದಲ್ಲಿರುವುದಿಲ್ಲ.ಇದು ಪ್ರಕೃತಿ ಸಹಜ ಕ್ರಿಯೆ.ಆಗ ಅವುಗಳನ್ನು ಕೆಣಕಿದಂತೆನಿಸುವ ಯಾವ ಘಟನೆಗಳಿಗೂ ಅವುಗಳ ಪ್ರತಿಕ್ರಿಯೆ ವಿಪರೀತದ್ದೆ.

    ಮನುಷ್ಯ ನಿರ್ಮಿತ ವಿಕೃತಿಗಳೂ ದಿನೇದಿನೇ ಹೆಚ್ಚುತ್ತಿವೆ.ನೆಟ್ಟಗೆ ನಿಂತಿದ್ದ ಬೆಟ್ಟ ಹತ್ತಾರು ವರ್ಷಗಳಲ್ಲಿ ಜೆಸಿಬಿ ಅಗೆದು ಅರ್ಧ ಖಾಲಿಯಾಗಿ ಸಪ್ಪೆ ಮುಖ ತೋರುತ್ತಿದೆ.ಎಲ್ಲೊ ಇದ್ದ ಕಾಲುಹಾದಿ ,ನೀರಿನ ಝರಿ,ತಗ್ಗು ತೋಡು,ದೊಡ್ಡದಾದ ಶತಮಾನ ಹಳೆಯ ಮರ ಎಲ್ಲವೂ ಅರ್ಥಮೂವರ್ಸ್ ಗಳ ದೊಡ್ಡ ಬಾಯಿಗೆ ಆಹಾರವಾಗಿ ವರ್ಷ ಬಿಟ್ಟು ನೋಡುವಾಗ ಇದು ನಮ್ಮೂರೇನಾ ಎನ್ನುವಂತೆ ರೂಪು ಕಳೆದುಕೊಳ್ಳುತ್ತಿದೆ.

    ನಿರಂತರವಾಗಿ ಬದಲಾಗುತ್ತಿರುವ ಲ್ಯಾಂಡ್ ಸ್ಕೆಪಿನಿಂದಾಗಿ ಆನೆಗಳು ಗೊಂದಲಕ್ಕೊಳಗಾಗುತ್ತಿವೆ.ಮೂರು ತಲೆಮಾರುಗಳಿಂದ ತಾವು ತಿರುಗಾಡಿದ ಹಾದಿಯನ್ನು ಕರಾರುವಾಕ್ಕಾಗಿ ನೆನಪಿಟ್ಟುಕೊಳ್ಳುವ ಆನೆಯಲ್ಲಿರುವ ಮೆದುಳಿನ ಸಂಕೀರ್ಣ ವ್ಯವಸ್ಥೆ ತಮ್ಮ ಹಾದಿ ಕಾಣೆಯಾದ ಕಾರಣ ಸಿಕ್ಕಸಿಕ್ಕಲ್ಲಿ ದಾರಿ ಕಂಡುಕೊಳ್ಳುತ್ತಿವೆ.ಇನ್ನೂ ಇತ್ತೀಚಿನ ತಲೆಮಾರುಗಳ ಆನೆಮರಿಗಳು ಹುಟ್ಟಿರುವುದೇ ಕಾಫಿ ತೋಟಗಳಲ್ಲಿ. ಅವುಗಳ ಮಾಮೂಲು ತಿರುಗಾಟವೂ ಊರಿನ ಒಳಗೇ.ಹಾಗಾಗಿ ಈ ತಲೆಮಾರಿನವು ನಾವು ಊರಿಗೇ ಸೇರಿದವುಗಳು ಎಂದೇ ಅಂದುಕೊಂಡಿರುತ್ತವೆ.

    ಆನೆಧಾಮ ಯೋಜನೆ ಪ್ರತಿ ಒಂದೂವರೆ ವರ್ಷಕೊಮ್ಮೆ ಧಿಡೀರನೆ ಮುನ್ನೆಲೆಗೆ ಬಂದು ನಿಧಾನವಾಗಿ ಹಿಂಜರಿಯುತ್ತಿದೆ.ಇಚ್ಛಾಶಕ್ತಿಯ ಕೊರತೆ ಅಂತ ನಾವು ಬಾಯಿ ಹರಿಯುವವರೆಗೂ ಒದರುತ್ತಿದ್ದೇವೆ.ಆನೆಯೆಂಬ ಮಹಾ ಜೀವದ ಒಂದು ದಿನ ಓಡಾಟದ ದೂರ ಅಂದಾಜು ಸುಮಾರು ಅರುನೂರು ಕಿಮೀ ಅಂತ ಹೇಳುವುದಿದೆ.ಅವಕ್ಕೆ ಧಾಮ ಎಂದಾದಲ್ಲಿ ಬೇಕಾದ ಅತ್ಯಂತ ವಿಶಾಲವಾದ ಜಾಗ ಯಾವುದು ಎನ್ನುವ ಗೊಂದಲದ ಜೊತೆಗೆ ಆನೆಧಾಮದ ಸಾಧಕಬಾಧಕಗಳ ಕುರಿತೂ ಸಾಕಷ್ಟು ಗೊಂದಲಗಳಿವೆ.

    ಕಾಫಿತೋಟದಲ್ಲಿ ಸಮೃದ್ಧವಾಗಿ ಸಿಗುತ್ತಿರುವ ಪ್ರೋಟೀನ್ ಭರಿತ ಆಹಾರ ಮತ್ತು ನೀರಿನ ಮೂಲಗಳಿಂದ ಆನೆಗಳ ವಂಶಾಭಿವೃದ್ಧಿಯೂ ಈಚಿನ ದಶಕಗಳಲ್ಲಿ ವೇಗವಾಗಿ ವೃದ್ಧಿಸಿದೆ.
    ನಾಲ್ಕು ವರ್ಷದಾಚೆ ನಮ್ಮಲ್ಲಿ ನಲ್ವತ್ತೆರಡು ಆನೆಗಳಿವೆ ಎಂದು ಅಂದಾಜಿಸಲಾಗಿತ್ತು.ಈಚಿನ ಗಣತಿ ನಡೆದಿದೆಯಾ.ನಡೆದರೂ ನಿಜವಾದ ಅಂಕಿಅಂಶ ಬಿಡುಗಡೆ ಮಾಡಿದರೆ ಜನ ಭೀತರಾಗುವ ಆತಂಕದಿಂದ ಮುಚ್ಚಿಟ್ಟಿದ್ದಾರಾ ಗೊತ್ತಿಲ್ಲ.

    ಇದೆಲ್ಲದರ ನಂತರವೂ ಒಂಟಿಮನೆಗಳು ಆನೆಯ ಕಾರಣದಿಂದಾಗಿ ಸುರಕ್ಷಿತವಾಗಿದ್ದಾವೆ ಅಂತ ಖಂಡಿತವಾಗಿ ಹೇಳಬಹುದು. ಎಷ್ಟೇ ಬೆಳೆ ಹಾಳು ಮಾಡಿದರೂ ಆನೆ ಎಂದೊಡನೆ ಭಕ್ತಿಯ ಜೊತೆಗೆ ಪ್ರೀತಿಯೂ ಇದ್ದೇ ಇದೆ.ಆನೆಯೊಂದು ಕಾರಣಾಂತರಗಳಿಂದ ದೈವಾಧೀನವಾದರೆ ಅದನ್ನು ವಿಧಿಪೂರ್ವಕವಾಗಿ ಸಂಸ್ಕಾರ ಮಾಡುವುದು ನಮ್ಮಲ್ಲಿ ಸಾಮಾನ್ಯ.
    ಅಪ್ಪ ಹೇಳುವ ಹಾಗೆಯೇ ಬಹುತೇಕರು ‘ಈ ನನ್ಮಗಂದು’ ಅಂತ ಗದರುತ್ತಾರೆ ಅಷ್ಟೇ. ಆನೆಯ ಕಾರಣಕ್ಕೆ ಸಾವುನೋವು ಸಂಭವಿಸಿದಾಗ ಮನಸ್ಸು ಎಂದಿನಂತೆ ಕುಸಿಯುತ್ತದೆ.

    ಹೊಂದಾಣಿಕೆ ಬಾಳುವೆ ಮಾಡಿ ಎನ್ನುವ ಪ್ರಭುಗಳ ಹೇಳಿಕೆ ನಗೆಪಾಟಲಿನ ಜೊತೆಗೆ ಆಕ್ರೋಶಕ್ಕೂ ಕಾರಣವಾಗಿ ಆಗಾಗ ರಸ್ತೆ ತಡೆ ಚಳವಳಿ ನಡೆಯುತ್ತವೆ.ನಿಮ್ಮ ಪಾಡು ನಿಮ್ಮದು ನಮ್ಮ ಡೌಲು ನಮ್ಮದು ಅಂತಿದ್ದಾರೆ ರಾಜಕಾರಣಿಗಳು..

    ಆನೆಯಣ್ಣ ಬಂದರೂ ಹೋದರೂ ತೊಂದರೆ ಕೊಡದಂತೆ ಸಾವರಿಸಿಕೊಂಡು ಹೋಗು ಅಂತಷ್ಟೆ ಬೇಡಿಕೊಳ್ತಾ ಸದ್ಯಕ್ಕೆ ದ್ವೀಪದಂತಾಗಿರುವ ತವರಿನ ಫೋಟೋ ನೋಡ್ತಾ ಕೂತಿದ್ದೇನೆ.

    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ
    ನಂದಿನಿ ಹೆದ್ದುರ್ಗ ಅವರ ವಾಸ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೆದ್ದುರ್ಗ ಎನ್ನುವ ಪುಟ್ಟ ಹಳ್ಳಿಯಲ್ಲಿ. ಬದುಕಿಗೆ ಕಾಫಿ ತೋಟ,ಕೃಷಿ. ಆಸಕ್ತಿ ಕೃಷಿ,ಕಾವ್ಯ,ಸಾಹಿತ್ಯ, ತಿರುಗಾಟ. ಮೂವತ್ತೈದನೇ ವಯಸಿನಲ್ಲಿ ಬರವಣಿಗೆ ಪ್ರಾರಂಭ. ಮೊದಲಿಗೆ ಹಾಸನದ ಪ್ರಾದೇಶಿಕ ಪತ್ರಿಕೆ ಜನತಾ ಮಾಧ್ಯಮಕ್ಕೆ ಅಂಕಣ ಬರಹಗಳನ್ನು ಬರೆಯುವುದರೊಂದಿಗೆ ಸಾಹಿತ್ಯಾರಂಭ. 2016 ಅಕ್ಟೋಬರ್ ನಲ್ಲಿ ಸಕಲೇಶಪುರದಲ್ಲಿ ನಡೆದಂತಹ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ "ಅಸ್ಮಿತೆ" ಎನ್ನುವ ಕವನ ಸಂಕಲನ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರಿಂದ ಬಿಡುಗಡೆ. ಆ ನಂತರದಲ್ಲಿ ಅವರ ಮಾರ್ಗದರ್ಶನದಲ್ಲಿ ಕವಿತೆ ಬರೆಯಲು ಆರಂಭ. ಜನವರಿ 1,2017ರಲ್ಲಿ ಮೊದಲ ಕವನಗಳ ಗುಚ್ಛ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟ. 2018ಜನವರಿಯಲ್ಲಿ ಬೆಂಗಳೂರಿನ ಅಂಕಿತ ಪ್ರಕಾಶನದಿಂದ ಎರಡನೇ ಸಂಕಲನ "ಒಳಸೆಲೆ"ಬಿಡುಗಡೆ. ಕನ್ನಡದ ಖ್ಯಾತ ವಿಮರ್ಶಕಿ ಎಮ್ ಎಸ್ ಆಶಾದೇವಿಯವರ ಮುನ್ನುಡಿ ಮತ್ತು ಸುವಿಖ್ಯಾತ ಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರ ‌ಬೆನ್ನುಡಿಯಿರುವ ಈ ಸಂಕಲನಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಕೊಡುವ ಪ್ರತಿಷ್ಠಿತ ಜಿ ಎಸ್ ಎಸ್ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಗೌರವದ ಪುರಸ್ಕಾರ.ಮಂಡ್ಯದ ಅಡ್ಡ್ವೆಸರ್ ಕೊಡಮಾಡುವ ಅಡ್ಡ್ವೆಸರ್ ವರ್ಷದ ಸಂಕಲನ ಪುರಸ್ಕಾರ ದೊರೆತಿದೆ. ದಸರಾಕವಿಗೋಷ್ಠಿ,ಆಳ್ವಾಸ್ ನುಡಿಸಿರಿ, ಬಾಗಲಕೋಟೆಯ ನುಡಿಸಡಗರ ,ಧಾರವಾಡದಲ್ಲಿ ನಡೆದ ರಾಜ್ಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವನ ವಾಚನ. ಇತ್ತೀಚೆಗೆ ಪ್ರಕಟವಾದ ಬ್ರೂನೊ..ದಿ ಡಾರ್ಲಿಂಗ್ ಎನ್ನುವ ಪ್ರಬಂಧ ಸಂಕಲನ ರತಿಯ ಕಂಬನಿ ಎಂಬ ಕವಿತಾ ಸಂಕಲನ ಮತ್ತು ಇಂತಿ ನಿನ್ನವಳೇ ಆದ ಪ್ರೇಮಕಥೆಗಳ ಸಂಕಲನ ಅಪಾರ ಓದುಗರ ಮೆಚ್ಚುಗೆ ಗಳಿಸಿವೆ.. ರತಿಯ ಕಂಬನಿ ಸಂಕಲನಕ್ಕೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಲಭಿಸಿದೆ.
    spot_img

    More articles

    2 COMMENTS

    1. ಪ್ರಾಣಿಗಳ ಜೊತೆ ಮನುಷ್ಯನ ಒಡನಾಟ ಮೊದಲಿನಿಂದಲೂ ಇದೆ. ಆನೆ ಹಾಗೂ ಮನುಷ್ಯನ ಆಪ್ತತೆಯನ್ನು ಲೇಖಕಿ ತುಂಬ ಸೊಗಸಾಗಿ ಮೂಡಿಸಿದ್ದಾರೆ. ಪ್ರಬಂಧ ಚೆನ್ನಾಗಿದೆ.

    2. ಪ್ರಬಂಧ ತುಂಬಾ ಇಷ್ಟ ಆಯ್ತು. ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಓದುತ್ತಾ ಮುದ ನೀಡುತ್ತದೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!