27.7 C
Karnataka
Monday, April 29, 2024

    ವಿಕ್ರಮ್‌ ಅಂಬಾಲಾಲ್‌ ಸಾರಾಭಾಯಿ – ಭಾರತದ ಬಾಹ್ಯಾಕಾಶ ವಿಜ್ಞಾನದ ಪಿತಾಮಹ  

    Must read

    ಆಗಸ್ಟ್ 23,‌ 2023 ಈ ದಿನವನ್ನು ಭಾರತದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ದಿನ. ಚಂದ್ರಯಾನ -3 ಬಾಹ್ಯಾಕಾಶ  ನೌಕೆಯನ್ನು ಚಂದ್ರನ ಮೇಲ್ಮೈಗೆ ಸುರಕ್ಷಿತವಾಗಿ ಸಾಪ್ಟ್ ಲ್ಯಾಂಡಿಂಗ್ ಮಾಡಿದ ಮಹತ್ತರವಾದ ದಿನ. ವಿಕ್ರಮ್ ಲ್ಯಾಂಡರ್‌ ನಿಂದ ಪ್ರಗ್ಯಾನ್ ರೋವರನ್ನು ಬೇರ್ಪಡಿಸಿ ಚಂದ್ರನ ಮೇಲ್ಮೈಗೆ ಇಳಿಸಲಾಯಿತು. ಭಾರತದ ತಾಂತ್ರಿಕ ಮತ್ತು ವೈಜ್ಞಾನಿಕ ಸಾಧನೆಗೆ ಇಡೀ ವಿಶ್ವವೇ ಸಾಕ್ಷಿಯಾದ ದಿನ. ಚಂದ್ರನ ದಕ್ಷಿಣ ಧ್ರುವಕ್ಕೆ ಮೊಟ್ಟ ಮೊದಲಿಗೆ ಕಾಲಿಡುವ ಮೂಲಕ ನಮ್ಮ ದೇಶದ ವಿಜ್ಞಾನಿಗಳು ಹೊಸ ಮೈಲಿಗಲ್ಲನ್ನು ಸಾಧಿಸಿದ್ದಾರೆ.

    ಜುಲೈ 14, 2023ರಂದು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧಾವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಸುಮಾರು 40 ದಿನಗಳ ನಂತರ ಯಾವ ಸಮಸ್ಯೆಯಿಲ್ಲದೆ ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಗ್ಯಾನ್‌  ರೋವರ್‌ ಚಂದ್ರನನ್ನು ತಲಪಿದ್ದು ಐತಿಹಾಸಿಕ ಸಾಧನೆ. ಇದರಿಂದ ರಷ್ಯಾ, ಅಮೇರಿಕ ಮತ್ತು ಚೀನಾ ದೇಶಗಳ ನಂತರ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಸಾಪ್ಟ್ ಲ್ಯಾಂಡಿಂಗ್‌ ಮಾಡಿದ ನಾಲ್ಕನೇ ದೇಶ ಎಂಬ ಕೀರ್ತಿಯನ್ನು ಗಳಿಸಿತು. ಇಂತಹ ಚಿರಸ್ಮಣೀಯ ಸಂದರ್ಭದಲ್ಲಿ ಭಾರತದ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದು ಖ್ಯಾತಿಗಳಿಸಿರುವ, ಬಾಹ್ಯಾಕಾಶ ವಿಜ್ಞಾನವು ಈ ಮಟ್ಟಕ್ಕೆ ಬೆಳೆಯಲು ಅಡಿಪಾಯ ಹಾಕಿದ ಮತ್ತು ಭಾರತಕ್ಕೆ ರಾಕೆಟ್‌ ವಿಜ್ಞಾನವನ್ನು ಕಲಿಸಿದ ವಿಕ್ರಮ್ ಅಂಬಾಲಾಲ್‌ ಸಾರಾಭಾಯಿ ಅವರನ್ನು ನೆನೆಯುವುದು ಮತ್ತು ಅವರ ಬಗ್ಗೆ ಕೆಲವು ವಿಚಾರಗಳನ್ನು ತಿಳಿದುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

    ವಿಕ್ರಮ್ ಅಂಬಾಲಾಲ್‌ ಸಾರಾಭಾಯಿ ಅವರು ವಿಶ್ವ ವಿಖ್ಯಾತ ಭೌತಶಾಸ್ತ್ರ ಮತ್ತು ಖಗೊಳಶಾಸ್ತ್ರದ ವಿಜ್ಙಾನಿ. ಇವರು ಬಾಹ್ಯಾಕಾಶ ಸಂಶೋಧನೆಗೆ ನಮ್ಮ ದೇಶದಲ್ಲಿ ಅಡಿಪಾಯ ಹಾಕಿದವರು ಮತ್ತು ಪರಮಾಣು ಶಕ್ತಿ ಪ್ರಗತಿಗೆ ಸಹಾಯ ಮಾಡಿದವರು. ವಿಕ್ರಮ್ ಸಾರಾಭಾಯಿರವರು ಆಗಸ್ಟ್ 12, 1919 ರಂದು ಗುಜರಾತಿನ ಅಹಮದಾಬಾದ್‌ ನಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಅಂಬಾಲಾಲ್‌ ಸಾರಾಭಾಯಿ ಮತ್ತು ತಾಯಿ ಸರಳಾದೇವಿ. ಇವರ ಕುಟುಂಬ ಬಹಳ ದೊಡ್ಡ ಕೈಗಾರಿಕೊದ್ಯಮಿಗಳ ಕುಟುಂಬ. ಚಿಕ್ಕಂದಿನಿಂದಲೇ ಬುದ್ದಿವಂತನಾಗಿದ್ದ ಸಾರಾಭಾಯಿ ಅವರು ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ಅಪಾರ ಆಸಕ್ತಿ ಮತ್ತು ಒಲವನ್ನು ಹೊಂದಿದ್ದರು. ಸೃಜನಶೀಲತೆ ಮತ್ತು ಪರಿಶೋಧಕ ಶಕ್ತಿಯನ್ನು ಪಡೆದಿದ್ದರು. ಗುಜರಾತ್‌ ಕಾಲೇಜಿನಲ್ಲಿನ ವ್ಯಾಸಂಗದ ನಂತರ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಮುಂದುವರೆಸಿದರು. ಪ್ರಕೃತಿ ವಿಜ್ಙಾನದಲ್ಲಿ ಟ್ರೈಪಾಸ್‌ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ಭಾರತ ದೇಶಕ್ಕೆ ವಾಪಸ್ಸಾದರು. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್‌ ಸಿ. ವಿ. ರಾಮನ್‌ ರ  ಮಾರ್ಗದರ್ಶನದಲ್ಲಿ ಕಾಸ್ಮಿಕ್ ಕಿರಣಗಳ ಬಗ್ಗೆ ಸಂಶೋಧನೆಯನ್ನು ನಡೆಸಿದರು. ಸಂಶೋಧನೆ ಪ್ರಾರಂಭಿಸಿದ ಎರಡೇ ವರ್ಷಗಳಲ್ಲಿ (1942) ಅತ್ಯುತ್ತಮ ಪ್ರಬಂಧವನ್ನು ಪ್ರಕಟಿಸಿದರು. ಪುನಃ ವಿದೇಶ ಪ್ರಯಾಣ ಬೆಳೆಸಿ, 1947ರಲ್ಲಿ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಿಂದ “ಉಷ್ಣವಲಯದ ಅಕ್ಷಾಂಶಗಳಲ್ಲಿ ಕಾಸ್ಮಿಕ್‌ ಕಿರಣಗಳ ತನಿಖೆಗಳು” (ಕಾಸ್ಮಿಕ್‌  ರೇಸ್‌ ಇನ್ವೆಸ್ಟಿಗೇಷನ್ಸ್‌ ಇನ್‌ ಟ್ರಾಪಿಕಲ್‌ ಲ್ಯಾಟಿಟೂಡ್ಸ್) ಎಂಬ ಶೀರ್ಷಿಕೆಯ ಪ್ರಬಂಧಕ್ಕೆ ಪಿಎಚ್.ಡಿ ಪದವಿಯನ್ನು ಪಡೆದರು. ಸ್ವಾತಂತ್ರ್ಯದ ನಂತರ, 1947 ರಲ್ಲಿ ತಮ್ಮ ತಾಯ್ನಾಡಿಗೆ ಮರಳಿದರು. 1942 ರಲ್ಲಿ ಶಾಸ್ತ್ರೀಯ ನರ್ತಕಿ ಮ್ರಿನಾಲಿಯವರನ್ನು ವಿವಾಹವಾದರು.

    ವಿಕ್ರಮ್‌ ಸಾರಾಭಾಯಿರವರು, ಮುಖ್ಯವಾಗಿ ನಮ್ಮ ದೇಶದಲ್ಲಿ ಬಾಹ್ಯಾಕಾಶ ವಿಜ್ಞಾನದಲ್ಲಿ ಸಂಶೋಧನೆ ಪ್ರಾರಂಭಿಸುವಲ್ಲಿ ಮತ್ತು ಪರಮಾಣು ಶಕ್ತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತ ಸರ್ಕಾರದ ಒಪ್ಪಿಗೆಯನ್ನು ಪಡೆಯಲು ಪ್ರಮುಖ ಕಾರಣೀಭೂತರು. ಅದರ ಫಲವಾಗಿ 1962 ರಲ್ಲಿ ಇಂಡಿಯನ್‌ ನ್ಯಾಷನಲ್‌ ಕಮಿಟಿ ಫಾರ್‌ ಸ್ಪೇಸ್‌ ರಿಸರ್ಚ್‌ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ 1969 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರವಾಗಿ (ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗ್‌ ನೈಝೇಶನ್) ಮರು ನಾಮಕರಣ ಮಾಡಲಾಯಿತು. ಭಾರತದ ಪರಮಾಣು ವಿಜ್ಞಾನ ಕಾರ್ಯಕ್ರಮಗಳ ಪಿತಾಮಹರಾದ ಎಚ್.‌ ಜೆ. ಭಾಭಾರವರು ವಿಕ್ರಮ್‌ ಸಾರಾಭಾಯಿ ರವರಿಗೆ ದೇಶದ ಮೊದಲ ರಾಕೆಟ್‌ ಉಡಾವಣೆ ಕೇಂದ್ರವನ್ನು ಸ್ಥಾಪಿಸಲು ಬೆಂಬಲಿಸಿದರು.

    1963 ನವೆಂಬರ್‌ 21 ರಂದು ಮೊದಲನೇ ರಾಕೆಟ್‌ ನ್ನು ತುಂಬಾ ಉಡಾವಣಾ ನಿಲ್ದಾಣದಿಂದ ಉಡಾವಣೆ ಮಾಡಲಾಯಿತು. 1975 ರಲ್ಲಿ ರಷ್ಯಾದ ಉಡಾವಣಾ ಕೇಂದ್ರದಿಂದ ಭಾರತದ ಮೊಟ್ಟ ಮೊದಲನೆ ಉಪಗ್ರಹ “ಆರ್ಯಭಟ”ವನ್ನು ಕಕ್ಷೆಯಲ್ಲಿರಿಸಿದ ಯಶಸ್ವಿ ಕಾರ್ಯವನ್ನು ಸ್ಮರಿಸಬಹುದು.

    ಸಾರಾಭಾಯಿರವರ ಪ್ರಮುಖ ಸಾಧನೆಗಳು (ಸ್ಥಾಪನೆ/ಕಾರಣೀಭೂತರು)  

    1. ಭಾರತದಲ್ಲಿನ ಬಾಹ್ಯಾಕಾಶ ಸಂಶೋಧನೆಯ ಪ್ರವರ್ತಕರು ಎಂದೇ ಖ್ಯಾತಿಯನ್ನು ಪಡೆದ ಸಾರಾಭಾಯಿರವರು ಫಿಸಿಕಲ್‌ ರಿಸರ್ಚ್‌ ಲ್ಯಾಬೊರೇಟರಿಯನ್ನು 1947 ರಲ್ಲಿ ಅಹಮದಾಬಾದ್‌ ನಲ್ಲಿ ಸ್ಥಾಪಿಸಿದರು. ಈ ಸಂಸ್ಥೆಯು “ಬಾಹ್ಯಾಕಾಶ ವಿಜ್ಞಾನದ ತೊಟ್ಟಿಲು (ಕ್ರಾಡೆಲ್ ಆಫ್‌ ಸ್ಪೇಸ್‌ ಸೈನ್ಸ್)”‌ ಎಂದೇ ಖ್ಯಾತಿಯನ್ನು ಪಡೆದಿದೆ. ಅವರ ಮನೆ “ರಿಟ್ರೀಟ್”‌ ನಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ, ನಂತರ ಎಂ. ಜಿ ಸೈನ್ಸ್‌ ಸಂಸ್ಥೆಯಲ್ಲಿ ಸ್ಥಾಪಿಸಲಾಯಿತು. ಪ್ರಾರಂಭದಲ್ಲಿ ಕಾಸ್ಮಿಕ್‌ ಕಿರಣಗಳು ಮತ್ತು ಮೇಲಿನ ವಾಯುಮಂಡಲ (ಅಪ್ಪರ್‌ ಅಟ್ಮಾಸ್ವಿಯರ್)‌ ಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿತ್ತು. ಕ್ರಮೇಣ, ಸೈದ್ಧಾಂತಿಕ ಭೌತಶಾಸ್ತ್ರ (ಥಿಯರಿಟಿಕಲ್‌ ಫಿಸಿಕ್ಸ್)‌ ಮತ್ತು ರೇಡಿಯೊ ಭೌತಶಾಸ್ತ್ರಗಳ ಬಗ್ಗೆಯೂ ಸಂಶೋಧನೆಗಳನ್ನು ಪ್ರಾರಂಭಿಸಲಾಯಿತು. ಈಗ ಖಗೋಳಶಾಸ್ತ್ರ, ಖಗೋಳ ಭೌತಶಾಸ್ತ್ರ, ವಾಯುಮಂಡಲ ವಿಜ್ಞಾನ, ಏರೋನೋಮಿ, ಗ್ರಹಗಳ ಮತ್ತು ಭೂವಿಜ್ಞಾನ, ಸೂರ್ಯ ಮಂಡಲ, ಸೈದ್ಧಾಂತಿಕ ಭೌತಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ಸಂಶೋಧನೆಗಳನ್ನು ನಡೆಸಲಾಗುತ್ತಿದೆ.

    2. ನೆಹರೂ ಫೌಂಢೇಶನ್‌ ಫಾರ್‌ ಡೆವೆಲಪ್‌ ಮೆಂಟ್‌ ಸಂಸ್ಥೆಯನ್ನು 1965 ರಲ್ಲಿ ಅಹಮದಾಬಾದ್‌ ನಲ್ಲಿ ಸ್ಥಾಪಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದು ಸಂಸ್ಥೆಯ ಮೂಲ ಉದ್ದೇಶಗಳು.

    3. ಅಹಮದಾಬಾದ್ ನಲ್ಲಿ 1960 ರಲ್ಲಿ ವಿಕ್ರಮ್‌ ಸಾರಾಭಾಯಿ ಕಮ್ಯುನಿಟಿ ಸೈನ್ಸ್‌  ಸೆಂಟರ್‌ ನ್ನು ಸ್ಥಾಪಿಸಿದರು. ವಿಜ್ಞಾನ ಮತ್ತು ಗಣಿತದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ಮತ್ತು ಸಾಮಾನ್ಯ ಪ್ರಜೆಗಳಲ್ಲಿ ಒಲವು ಮೂಡಿಸಿ, ಜನಪ್ರಿಯಗೊಳಿಸುವುದು ಸಂಸ್ಥೆಯ ಮೂಲ ಉದ್ದೇಶ.

    4. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮಾನೇಜ್‌ಮೆಂಟ್‌, ಅಹಮದಾಬಾದ್‌ ಇದರ ಸ್ಥಾಫನೆಗೆ (1961) ಕಾರಣೀಭೂತರು.

    5. ಅಹಮದಾಬಾದ್‌ ವಸ್ತ್ರೋದ್ಯಮ ಸಂಶೋಧನಾ ಸಂಸ್ಥೆಯ ಸ್ಥಾಪನೆಯಲ್ಲಿ (1947) ಸಕ್ರಿಯ ಪಾತ್ರವಹಿಸಿದರು.

    6. ಅಹಮದಾಬಾದ್‌ನ ಪರಿಸರ ಯೋಜನೆ ಮತ್ತು ತಂತ್ರಜ್ಞಾನದ ವಿಶ್ವವಿದ್ಯಾಲಯವನ್ನು 1962 ಸ್ಥಾಪಿಸಿದರು.

    7. ಕಾರ್ಯಾಚರಣೆಗಳ ಸಂಶೋಧನಾ ತಂಡದ ವ್ಯವಸ್ಥೆಯನ್ನು (ಆಪರೇಷನ್ಸ್‌ ರಿಸರ್ಚ್‌ ಗ್ರೂಪ್)‌1961 ರಲ್ಲಿ ಹುಟ್ಟು ಹಾಕಿದರು. ಈ ಸಂಸ್ಥೆ ಭಾರತದ ಮೊದಲನೆಯ ಮಾರ್ಕೆಟ್‌ ಸಂಶೋಧನಾ ಸಂಸ್ಥೆ.

    8. ಬಹಳ ಪ್ರಮುಖವಾದ ಸಾಧನೆಯೆಂದರೆ, ಈಗಾಗಲೇ ತಿಳಿಸಿರುವಂತೆ , 1969 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಸ್ಥಾಪನೆ (ಇಂಡಿಯನ್‌ ಸ್ಪೇಸ್‌ ರಿಸರ್ಚ್‌ ಆರ್ಗನೈಝೇಶನ್‌ – ಇಸ್ರೊ). ನಮ್ಮ ಬೆಂಗಳೂರಿನಲ್ಲಿ ಸ್ಥಾಪಿಸದ್ದು ನಮ್ಮೆಲ್ಲರಿಗೂ ಸಂತಸದ ವಿಷಯ.

    9. ತುಂಬಾ ಸಮಬಾಜಕ ರಾಕೆಟ್‌ ಉಡಾವಣೆ ನಿಲ್ದಾಣವನ್ನು (ತುಂಬಾ ಈಕ್ವ ಟೋರಿಯಲ್‌ ರಾಕೆಟ್‌ ಲಾಂಚಿಂಗ್ ಸ್ಟೇಷನ್) 1963 ರಲ್ಲಿ ತುಂಬಾ, ತಿರುವನಂತಪುರಂ, ಕೇರಳದಲ್ಲಿ ಸ್ಥಾಪಿಸಿದರು. ಈ ಸಂಸ್ಥೆಯನ್ನು ವಿಕ್ರಮ್‌ ಸಾರಾಭಾಯಿರವರ ಮರಣದ ನಂತರ, ವಿಕ್ರಮ್‌ ಸಾರಾಭಾಯಿ ಸ್ಪೇಸ್‌ ಸೆಂಟರ್‌ ಎಂದು ಮರು ನಾಮಕರಣ ಮಾಡಲಾಗಿದೆ.

    10. ತಮ್ಮ ಪತ್ನಿ ಯವರ ಉತ್ತೇಜನ ಮತ್ತು ಸಕ್ರಿಯ ಪಾತ್ರದಿಂದ ದರ್ಪನ್‌ ಅಕಾಡೆಮಿ ಫಾರ್‌ ಪರ್‌ಪಾರ್ಮಿಂಗ್‌ ಆರ್ಟ್ಸ್, ಸಂಸ್ಥೆಯನ್ನು 1949 ರಲ್ಲಿ ಸ್ಥಾಪಿಸಿದರು.

    11. ವೇಗದ ತಳಿ ಪರೀಕ್ಷಾ ರಿಯಾಕ್ಟರ್‌ (ಪಾಸ್ಟ್‌ ಬ್ರೀಡರ್‌ ಟೆಸ್ಟ್‌ ರಿಯಾಕ್ಟರ್‌), ಕಲ್ಪಾಕಮ್‌, ತಮಿಳುನಾಡು.

    12. ವೇರಿಯಬಲ್‌ ಎನರ್ಜಿ ಸೈಕ್ಲೋಟ್ರಾನ್‌ ಸೆಂಟರ್‌, ಕೊಲ್ಕತ್ತಾ –ಕಾರ್ಯಾಚರಣೆ ಪ್ರಾರಂಭ 1977.

    13. ಇಲೆಕ್ಟ್ರಾನಿಕ್ಸ್‌ ಕಾರ್ಪೊರೇಶನ್‌ ಆಫ್‌ ಇಂಡಿಯಾ ಲಿಮಿಟೆಡ್‌, ಹೈದರಾಬಾದ್‌. ಸ್ಥಾಪನೆ – 1967.

    14. ಯುರೇನಿಯಮ್‌ ಕಾರ್ಪರೇಶನ್‌ ಆಫ್‌ ಇಂಡಿಯಾ ಲಿಮಿಟೆಡ್‌ ಜಾದುಗುಡ, ಬಿಹಾರ್.‌ ಸ್ಥಾಪನೆ-1967.

    ವಿಕ್ರಮ್ಸಾರಾಭಾಯಿ ರವರು ಅಲಂಕರಿಸಿದ ಪ್ರತಿಷ್ಠಿತ ಹುದ್ದೆಗಳು.

    1. ಅಧ್ಯಕ್ಷರು, ಭೌತಶಾಸ್ತ್ರ ವಿಭಾಗ, ಇಂಡಿಯನ್‌ ಸೈನ್ಸ್‌ ಕಾಂಗ್ರೆಸ್, 1962.

    ೨. ಅಧ್ಯಕ್ಷರು, ಐ.ಎ.ಈ.ಎ  (ಅಂತರ್‌ ರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ) ಜನರಲ್‌ ಕಾನ್ಪರೆನ್ಸ್‌ (ಸಾಮಾನ್ಯ ಸಮಾವೇಶ), ವಿಯೆನ್ನಾ, 1970.

    ೩. ಅಧ್ಯಕ್ಷರು, ಪರಮಾಣು ಶಕ್ತಿ ಆಯೋಗ, 1966 ರಿಂದ 1971 ರ ವರೆಗೆ.

    ೪. ಉಪಾಧ್ಯಕ್ಷರು, ನಾಲ್ಕನೇ ವಿಶ್ವಸಂಸ್ಥೆಯ ಕಾನ್ಪರೆನ್ಸ್‌ (ಸಮಾವೇಶ) – 1971. ವಿಷಯ : ಪರಮಾಣು ಶಕ್ತಿಯ ಶಾಂತಿಯುತ ಬಳಕೆ.

    ೫. ಸಂಸ್ಥಾಪಕ ಅಧ್ಯಕ್ಷರು, ಬಾಹ್ಯಾಕಾಶ ವಿಜ್ಞಾನ ಅನ್ವಯಗಳು, 1963-1971.

    ವಿಕ್ರಮ್ಸಾರಾಭಾಯಿರವರ ಪರಂಪರೆ (ಲೆಗಸಿ)

    1. ಕೇರಳ ರಾಜ್ಯದಲ್ಲಿರುವ ಬಾಹ್ಯಾಕಾಶ ಸಂಶೋಧನಾ ಕೇಂದ್ರವನ್ನು ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರವೆಂದು ಮರು ನಾಮಕರಣ ಮಾಡಲಾಗಿದೆ.

    2. ಚಂದ್ರನ ಮೇಲ್ಮೈನಲ್ಲಿರುವ ಕುಳಿಯನ್ನು 1973 ರಲ್ಲಿ ಅಂತರ್ ರಾಷ್ಟ್ರೀಯ ಖಗೋಳಶಾಸ್ತ್ರದ ಒಕ್ಕೂಟವು ಸಾರಾಭಾಯಿ ಕುಳಿ ಎಂದು ನಾಮಕರಣ ಮಾಡಿರುತ್ತಾರೆ.

    3. ಭಾರತೀಯ ಅಂಚೆ ಇಲಾಖೆಯು 1972 ರಲ್ಲಿ ಸಾರಾಭಾಯಿ ರವರ ಮೊದಲನೇ ವರ್ಷದ ಪುಣ್ಯ ದಿನದಂದು, ಅವರ ಸ್ಮರಣಾರ್ಥವಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.

    4. ಚಂದ್ರಯಾನ -2 ಮತ್ತು ಚಂದ್ರಯಾನ -3 ರ ಲ್ಯಾಂಡರ್‌ ನ್ನು ವಿಕ್ರಮ್‌ ಎಂದು ಹೆಸರಿಡಲಾಗಿದೆ.

    ಪ್ರಶಸ್ತಿಗಳು ಮತ್ತು ಗೌರವಗಳು.

    ಪ್ರಮುಖವಾಗಿ, ಇವರ ಸಾಧನೆಗಳನ್ನು ಮತ್ತು ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ, ಭಾರತ ಸರ್ಕಾರವು ಇವರಿಗೆ 1966 ರಲ್ಲಿ ಪದ್ಮ ಭೂಷಣ ಮತ್ತು 1972 ರಲ್ಲಿ (ಮರಣೋತ್ತರ) ಪದ್ಮ ವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿತು.

    ವಿಕ್ರಮ್‌ ಸಾರಾಭಾಯಿ ಅವರು ದಿನಕ್ಕೆ16-18ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿದ್ದರು. ಕಾರ್ಯ ನಿಮಿತ್ತ ತುಂಬಾ ರಾಕೆಟ್‌ ಉಡಾವಣಾ ಕೇಂದ್ರಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ, ಡಿಸೆಂಬರ್‌ 30, 1971ರಂದು ರಾತ್ರಿ ನಿದ್ರಿಸುತ್ತಿರುವಾಗ ಹೃದಯಾಘಾತದಿಂದ ದೈವಾಧೀನರಾದರು. ಕೇವಲ 52 ನೇ ಚಿಕ್ಕ ವಯಸ್ಸಿನಲ್ಲಿ ನಿಧನರಾದದ್ದು ಬಹಳ ದುಃಖಕರವಾದ ಸಂಗತಿಯಾಗಿದೆ. ಇವರ ಅಕಾಲಿಕ ಮರಣದಿಂದ ವಿಜ್ಞಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಯಿತು.

    ಇಷ್ಟೆಲ್ಲಾ ಸಾಧನೆಯನ್ನು ಮಾಡಿ, ಭಾರತ ದೇಶವು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪರಮಾಣು ಶಕ್ತಿ ಕ್ಷೇತ್ರಗಳಲ್ಲಿ ಉತ್ತುಂಗಕ್ಕೇರಲು ಕಾರಣೀಭೂತರಾದ ವಿಕ್ರಮ್‌ ಸಾರಾಭಾಯಿರವರು, ನಿಜವಾಗಿ ಭಾರತದ ರತ್ನ ಎಂದೇ ಕರೆಯಬಹುದು. ದೊಡ್ಡ ಮಟ್ಟದ ಸಾಧನೆ ಮಾಡಿದ್ದರೂ ಸಹ, ವ್ಯಕ್ತಿತ್ವದಲ್ಲಿ ಸರಳಜೀವಿ. ಎಲ್ಲಾ ಮನುಷ್ಯರನ್ನು ಸಮಾನವಾಗಿ ಕಾಣುವ ವಿಶಾಲ ಹೃದಯವನ್ನು ಹೊಂದಿದ್ದರು. ಬೇಸಾಯ, ಕೈಗಾರಿಕೆ, ಹವಾಮಾನ ಅಧ್ಯಯನ, ಖನಿಜಗಳ ಶೋಧನಾ ಕಾರ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ, ಪರಮಾಣು ಶಕ್ತಿ ಕೇಂದ್ರಗಳು ತಮ್ಮ ಕಾರ್ಯಾಚರಣೆಯ ಉದ್ದೇಶಗಳಲ್ಲಿ ಅಂತರ್ಗತ ಮಾಡಿಕೊಳ್ಳ ಬೇಕೆಂಬ ಅಭಿಪ್ರಾಯ ಹೊಂದಿದ್ದರು. ಇಂತಹ ದೊಡ್ಡ ವಿಜ್ಞಾನಿ ನಮ್ಮ ಭಾರತಾಂಭೆಯ ಸುಪುತ್ರ ಎಂಬುವುದೇ ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಇವರ ಸಾಧನೆ ಈಗಿನ ಮತ್ತು ಮುಂದಿನ ಯುವ ಪೀಳಿಗೆಗೆ ಮಾದರಿಯಾಗಲೆಂದು ಆಶಿಸೋಣ.  

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ.
    spot_img

    More articles

    9 COMMENTS

    1. Very good and informative article on the history of Indian space Research Organisation and contribution made by Vikram Sarabhai in a simple and easily understandable language for a common man Congratulations

    2. ಭಾರತೀಯ ವಿಜ್ಞಾನಿಗಳು ನಮ್ಮ ಹೆಮ್ಮೆ.ಕೇವಲ 52 ವರ್ಷ ಗಳಲ್ಲಿ ಅಮೋಘ ಸಾಧನೆ ಮಾಡಿದ ವಿಕ್ರಮ್ ಸಾರಾಭಾಯಿ ಯವರ ಬಗ್ಗೆ ತಿಳಿಸುವ ಈ ಲೇಖನ ಅಪೂರ್ವವಾದುದು.ವಂದನೆಗಳೊಂದಿಗೆ
      ಸುಬ್ರಹ್ಮಣ್ಯ ಭಟ್ ಸಂಸ್ಕೃತ ಪ್ರಾಧ್ಯಾಪಕರು

    3. Elaborated, well researched article about Dr Vikram Sarabhai . Complete information is available about Vikram Sarabhai in this article .

    4. ವಿಕ್ರಂ ಸಾರಾಬಾಯಿಯವರ ಕುರಿತ ಡಾ. ಬಿಎಸ್ಎಸ್ ರವರ ಬರಹ ಸಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಸಾರಾಬಾಯಿ ಅವರ ಕುರಿತ ಅನೇಕ ವಿಚಾರಗಳನ್ನು, ವಿವರಗಳನ್ನು. ತಿಳಿಯುವಂತಾಯಿತು. ನಮ್ಮ ಮೇಷ್ಟ್ರಿಗೆ ಅನಂತಾನಂತ ನಮಸ್ಕಾರಗಳು, ಅಭಿನಂದನೆಗಳು ಸಾರ್.

    5. ಈ ಲೇಖನ ತುಂಬಾ ಉಪಯುಕ್ತವಾಗಿದೆ.
      ವಿಕ್ರಮ್ ಸಾರಾಭಾಯಿ ಅವರ ಜೀವನ ತುಂಬಾ ಸ್ಫೂರ್ತಿದಾಯಕ.
      ಡಾ. ಶ್ರೀಕಂಠ ಅವರು ಬಹಳ ಸೊಗಸಾಗಿ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ. ಅವರಿಗೆ ಧನ್ಯವದಗಳು.

    6. ಬಹಳ ಅದ್ಬುತವಾಗಿ ವಿಕ್ರಮ್ ಸಾರಾಭಾಯಿ ಅವರ ಬಗ್ಗೆ ಲೇಖನವನ್ನು ಬಹಳ ಸರಳ ಭಾಷೆಯಲ್ಲಿ ಬರೆದಿದ್ದೀರಿ. ಏಷ್ಟೋ ತಿಳಿಯದ ಮಾಹಿತಿಯನ್ನು ಓದುಗರ ಮನಮುಟ್ಟುವಂತೆ ಬರೆದ Dr. B. S. Srikanta sir ಗೆ ಕೋಟಿ ಕೋಟಿ ಪ್ರಣಾಮಗಳು 🙏🙏

    7. Vikram Sarabhais contribution to the civilization is remarkable and all.of that collectively and briefly documented here very brilliantly. Thank you so much for detailed Research and putting it altogether

    LEAVE A REPLY

    Please enter your comment!
    Please enter your name here

    Latest article

    error: Content is protected !!