24.6 C
Karnataka
Sunday, April 28, 2024

    ವೈದ್ಯಕೀಯ, ಎಂಜಿನಿಯರಿಂಗ್ ಸೇರಿ ಎಲ್ಲ ಕೋರ್ಸ್ ಗಳಿಗೂ ಒಮ್ಮೆಗೇ ಸೀಟು‌ ಹಂಚಿಕೆ

    Must read

    ಸಿಇಟಿ: ಈ ಬಾರಿ ಸಂಯೋಜಿತ ಸೀಟು ಹಂಚಿಕೆ

    BENGALURU JULY 24

    ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಇದುವರೆಗೂ ಪ್ರತ್ಯೇಕವಾಗಿಯೇ ಸೀಟು ಹಂಚಿಕೆ ಪ್ರಕ್ರಿಯೆ ನಡೆಸುತ್ತಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಸಕ್ತ ಸಾಲಿನಿಂದ (2023-24) ಎಲ್ಲವನ್ನೂ ಒಟ್ಟಿಗೇ, ಒಮ್ಮೆಗೇ ನಡೆಸಲು ತೀರ್ಮಾನಿಸಿದೆ.

    ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಅನಗತ್ಯ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಈ ಸುಧಾರಣಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಪಶುವೈದ್ಯ, ಕೃಷಿ, ನರ್ಸಿಂಗ್, ಅರ್ಕಿಟೆಕ್ಟ್ ಹಾಗೂ ಫಾರ್ಮಸಿ ಕೋರ್ಸ್ ಗಳ ಪ್ರವೇಶಕ್ಕೆ ಸಂಯೋಜಿತ ಸೀಟು ಹಂಚಿಕೆ {Combined Seat Allotment) ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಹೀಗೆ ಮಾಡುತ್ತಿರುವುದು ಇದೇ ಮೊದಲು ಎಂದು ಅವರು ವಿವರಿಸಿದ್ದಾರೆ.

    ಪ್ರತ್ಯೇಕ ಸೀಟು ಹಂಚಿಕೆ ಪ್ರಕ್ರಿಯೆಯಿಂದಾಗಿ ಸಾಕಷ್ಟು ಅನಾನುಕೂಲಗಳು ಇದ್ದವು. ಒಬ್ಬ ಅಭ್ಯರ್ಥಿ ಒಮ್ಮೆಗೇ ಒಂದಕ್ಕಿಂತ ಹೆಚ್ಚು ಕೋರ್ಸ್ ಗಳಲ್ಲಿ ಸೀಟು ಪಡೆದು, ನಂತರ ಆತ ಯಾವುದಾದರು ಒಂದಕ್ಕೆ ಪ್ರವೇಶ ಪಡೆಯುವವರೆಗೂ ಉಳಿದ ಕೋರ್ಸ್ಗಳಲ್ಲಿನ ಸೀಟು ಬೇರೆಯ ಅಭ್ಯರ್ಥಿಗಳಿಗೆ ಲಭ್ಯವಾಗುತ್ತಿರಲಿಲ್ಲ. ಇದರಿಂದ ಪ್ರತಿಭಾವಂತರಿಗೆ ಆಯ್ಕೆ ಸುತ್ತಿನಲ್ಲಿ ಸೀಟು ಕೈತಪ್ಪುತ್ತಿತ್ತು ಎಂದು ಅವರು ಹೇಳಿದ್ದಾರೆ.

    ಅಭ್ಯರ್ಥಿಗಳು ಯಾವುದೇ ಕೋರ್ಸ್ಗಳಿಗೆ ಪ್ರವೇಶ ಬಯಸಿದ್ದಲ್ಲಿ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಶುಲ್ಕ ಮತ್ತು ಲಭ್ಯವಿರುವ ಸೀಟುಗಳನ್ನು ಪರಿಶೀಲಿಸಿ, ನಂತರ ತಮ್ಮ ಆದ್ಯತೆಯನುಸಾರ ಸೀಟುಗಳ ಆಪ್ಷನ್ ಎಂಟ್ರಿ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

    ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ?

    ಅಭ್ಯರ್ಥಿಯು ಆಪ್ಷನ್ ಎಂಟ್ರಿ ಮಾಡುವಾಗ ತನ್ನ ಮೊದಲ ಆದ್ಯತೆಯ ಕೋರ್ಸ್ ಗಳನ್ನು ಮೊದಲು ದಾಖಲಿಸಬೇಕು. ಒಂದು ವೇಳೆ ಮೊದಲ ಆದ್ಯತೆಯ ಕೋರ್ಸ್ ಸಿಗದಿದ್ದರೆ ಅದರ ನಂತರದ ಆಯ್ಕೆಯ ಕೋರ್ಸ್ ಯಾವುದು ಎನ್ನುವುದನ್ನು ಎರಡನೇ ಆದ್ಯತೆಯಾಗಿ ದಾಖಲಿಸಬೇಕು. ಉದಾಹರಣೆಗೆ ವೈದ್ಯಕೀಯ ಕೋರ್ಸ್ ಬೇಕೆಂದು ಮೊದಲ ಆದ್ಯತೆ ನೀಡುವ ಅಭ್ಯರ್ಥಿ, ಒಂದು ವೇಳೆ ಅದು ಸಿಗದಿದ್ದಾಗ ತನ್ನ ಆದ್ಯತೆ ಎಂಜಿನಿಯರಿಂಗ್ ಎನ್ನುವುದನ್ನು ದಾಖಲಿಸಬೇಕು. ಆಗ ವೈದ್ಯಕೀಯ ಸೀಟು ಸಿಗದಿದ್ದಾಗ ನಂತರದ ಆದ್ಯತೆಯಾದ ಎಂಜಿನಿಯರಿಂಗ್ ನಲ್ಲಿ ಸೀಟು ಹಂಚಿಕೆ ಆಗುತ್ತದೆ. ಇದೇ ರೀತಿ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಎಷ್ಟು ಕೋರ್ಸ್ ಗಳು ಇವೆಯೊ ಅಷ್ಟೂ ಕೋರ್ಸ್ಗಳಿಗೆ ಆದ್ಯತೆಯನುಸಾರ ಆಪ್ಷನ್ ಎಂಟ್ರಿ ಮಾಡುವುದರ ಮೂಲಕ ಸೀಟು ಪಡೆಯಬಹುದು ಎಂದು ಅವರು ವಿವರಿಸಿದರು.

    ಅಭ್ಯರ್ಥಿಯ ಮೆರಿಟ್, ಮೀಸಲಾತಿ ಹಾಗೂ ಆಪ್ಷನ್ ಎಂಟ್ರಿ ಆಧಾರದ ಮೇಲೆ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯುತ್ತದೆ. ಕೆಲ ಅಭ್ಯರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಎರಡೂ ಕೋರ್ಸ್ ಗಳಲ್ಲಿ ಸೀಟು ದೊರೆಯುವ ಸಾಧ್ಯತೆ ಇರುತ್ತದೆ. ಅಂತಹವರು ಚಾಯ್ಸ್ ಎಂಟ್ರಿ ಸ್ಕ್ರೀನ್ ನಲ್ಲಿ ಇವೆರಡರಲ್ಲಿ (ವೈದ್ಯಕೀಯ ಅಥವಾ ಎಂಜಿನಿಯರಿಂಗ್) ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಚಲನ್ ಮೂಲಕ ಶುಲ್ಕ ಪಾವತಿಸಿ ಆಡ್ಮಿಷನ್ ಆರ್ಡ್ರನ್ನು ಆನ್ ಲೈನ್ ಮೂಲಕ ಪಡೆದು ಸಂಬಂಧಪಟ್ಟ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕಾಗುತ್ತದೆ. ಬಳಿಕ ಅದನ್ನು ಕಾಲೇಜಿನ ಪೋರ್ಟಲ್ ನಲ್ಲಿ ತಪ್ಪದೇ ಅಪ್ ಡೇಟ್ ಮಾಡಿಸಬೇಕು. ಒಂದು ವೇಳೆ ಹಾಗೆ ಮಾಡದಿದ್ದರೆ ಸದರಿ ಸೀಟು ಖಾಲಿ ಇದೆ ಎಂದು ಭಾವಿಸಿ, ಅದನ್ನು ಮುಂದಿನ ಸುತ್ತಿನ ಹಂಚಿಕೆಗೂ ಬಳಸಿಕೊಳ್ಳುವ ಅಪಾಯ ಇರುತ್ತದೆ.‌

    ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಅಭ್ಯರ್ಥಿಯು ಮಾಡಿರುವ ಆಪ್ಷನ್ ಎಂಟ್ರಿ ಪ್ರಕಾರ ಯಾವುದಾದರೊಂದು ಕೋರ್ಸ್ ನಲ್ಲಿ (ವೈದ್ಯಕೀಯ, ಎಂಜಿನಿಯರಿಂಗ್, ಪಶುವೈದ್ಯ ಇತ್ಯಾದಿ) ಸೀಟು ಪಡೆಯಬೇಕು.ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ ಗಳಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆ ನಂತರ ಕಡ್ಡಾಯವಾಗಿ ತಮಗೆ ಹಂಚಿಕೆಯಾದ ಸೀಟಿಗೆ ಶುಲ್ಕ ಪಾವತಿಸಿ, ಪ್ರವೇಶ ಪಡೆಯಬೇಕು. ಇಲ್ಲದಿದ್ದರೆ ಸದರಿ ಸೀಟುಗಳನ್ನು ದಂಡದ ಮೊತ್ತ ಪಾವತಿಸಿ ರದ್ದುಪಡಿಸಬೇಕು. ಎರಡನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಮಾಪ್ಅಪ್ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ. ಆದರೆ ಎರಡನೇ ಸುತ್ತಿನಲ್ಲಿ ದಂತ ವೈದ್ಯಕೀಯ ಸೀಟು ದೊರೆತ ಅಭ್ಯರ್ಥಿಗಳು ಸೀಟನ್ನು ರದ್ದುಪಡಿಸದೇ ವೈದ್ಯಕೀಯ ಕೋರ್ಸ್‌ ನ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

    ಎಂಜಿನಿಯರಿಂಗ್ ಸೀಟುಗಳಿಗೆ ಮೂರನೇ ಸುತ್ತಿನವರೆಗೂ ಭಾಗವಹಿಸಬಹುದು. ಆದರೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ ಶುಲ್ಕು ಪಾವತಿಸುವುದು ಕಡ್ಡಾಯವಾಗಿರುತ್ತದೆ. ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಜಾಯ್ಸ್-3 ಕೊಟ್ಟಿರುವ ಅಭ್ಯರ್ಥಿಗಳು ಹಾಗೂ ಯಾವುದೇ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳ ಮೊದಲೆರಡು ಸುತ್ತಿನಲ್ಲಿ ಮಾಡಿದ್ದ ಆಪ್ಷನ್ ಎಂಟ್ರಿಗಳನ್ನು ಡಿಲೀಟ್ ಮಾಡಲಾಗಿರುತ್ತದೆ. ಅಭ್ಯರ್ಥಿಯು ಮೂರನೇ ಸುತ್ತಿಗೆ ಹೊಸದಾಗಿ ಆಪ್ಷನ್ ಎಂಟ್ರಿ ಮಾಡಬೇಕು. ಮೂರನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ರದ್ದುಪಡಿಸಲು ಎಲ್ಲ ವರ್ಗದ ಅಭ್ಯರ್ಥಿಗಳು ಶುಲ್ಕದ ಐದು ಪಟ್ಟು ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಎಚ್ಚರಿಕೆಯಿಂದಲೇ ಮೂರನೇ ಸುತ್ತಿನ ಆಪ್ಷನ್ ಎಂಟ್ರಿ ಮಾಡಬೇಕು.

    ಮಾಪ್ಅಪ್ ಸುತ್ತು:
    ಎರಡನೇ ಸುತ್ತಿನಲ್ಲಿ ಎಂಜಿನಿಯರಿಂಗ್, ನರ್ಸಿಂಗ್, ಆರ್ಕಿಟೆಕ್ಟರ್, ಪಶುವೈದ್ಯಕೀಯ, ಕೃಷಿ – ಸೀಟು ದೊರೆತ ಅಭ್ಯರ್ಥಿಗಳು ದಂಡ ಪಾವತಿಸಿ, ತಮ್ಮ ಸೀಟನ್ನು ರದ್ದುಪಡಿಸಿದ ನಂತರವೇ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ ನ ಮಾಪ್ಅಪ್ ಸುತ್ತಿನಲ್ಲಿ ಭಾಗವಹಿಸಬಹದು.
    ಅದೇ ರೀತಿ ಎರಡನೇ ಸುತ್ತಿನಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸೀಟುಗಳು ಹಂಚಿಕೆಯಾದ ಅಭ್ಯರ್ಥಿಗಳು ಸದರಿ ಸೀಟುಗಳನ್ನು ದಂಡ ಪಾವತಿಸಿ ರದುಪಡಿಸಿದ ನಂತರ ಎಂಜಿನಿಯರಿಂಗ್ ಮಾಪ್ಅಪ್ ಸುತ್ತಿನಲ್ಲಿ ಭಾಗವಹಿಸಬಹುದು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!