23.5 C
Karnataka
Friday, May 10, 2024

    ಕೋವಿಡ್ ವೈರಸ್ ಪತ್ತೆ ಮಾಡುವ ಶ್ವಾನ ಪಡೆ

    Must read

    ಕೊರೋನಾ ಸೋಂಕು ಅಥವಾ ವಿಶ್ವವ್ಯಾಪಿ ಹೊಸವ್ಯಾಧಿಯ ಶುರುವಾತಿಗೆ ಪ್ಯಾಂಗೋಲಿನ್  ಮೂಲಕ ಈ ವೈರಾಣು ಮನುಷ್ಯನಿಗೆ ಜಿಗಿದದ್ದೇ ಕಾರಣ  ಎಂದು ಅನುಮಾನಿಸಲಾಗಿದೆ.

    ಕಾಡು ಪ್ರಾಣಿಯನ್ನು ಹಿಡಿದು ತಂದು ಅದರ ಮಾಂಸ ಭಕ್ಷಣೆ ಮಾಡಿದ್ದರಿಂದ ಕೋವಿಡ್ ಬಂದದ್ದು ನಿಜವಿರಬಹುದು.ಆದರೆ ಆ ನಂತರ ಈ ಸೋಂಕು ಹರಡುತ್ತ ಸಾಗಿದ್ದು ಮನುಷ್ಯರಿಂದ ಮನುಷ್ಯರಿಗೆ. ಈ ಕೊರೋನಾ ವೈರಸ್ಸಿನ ಸಂಸಾರದಲ್ಲಿ ಹಲವಾರು ಬಗೆಯ ಕೋವಿಡ್ ವೈರಸ್ಸುಗಳಿದ್ದರೂ ಬಹುತೇಕ ಅವೆಲ್ಲವೂ ಕಾಡು ಪ್ರಾಣಿಗಳಲ್ಲೇ ಮನೆ ಮಾಡಿಕೊಂಡಿರುವುದನ್ನು ಪರಿಣಿತರು ಧೃಢಪಡಿಸುತ್ತಾರೆ.

    ಕೋವಿಡ್-19 ಎಂದು ಕರೆವ SARS-CoV-2 ವೈರಸ್ಸು ಮನುಷ್ಯನಿಗೆ ಜಿಗಿದದ್ದುಇದೇ ಮೊದಲು.ಆದರೆ ಇದು ಯಾವ ಪ್ರಾಣಿಯಲ್ಲಿ ಮೊದಲು ತನ್ನ ಮನೆಮಾಡಿಕೊಂಡಿತ್ತು ಎನ್ನುವ ಬಗ್ಗೆ ಇನ್ನೂ ಊಹೆಗಳು ಮತ್ತುಅಧ್ಯಯನಗಳು ನಡೆಯುತ್ತಿವೆ.

    ಇದೇ ಕಾರಣಕ್ಕೆ ಸೋಂಕು ತಗುಲಿದ ಸಾಕು ಪ್ರಾಣಿಗಳಿಂದಲೂ ಮನುಷ್ಯರಿಗೆ ಕೊರೋನಾ ಬರಬಲ್ಲದೇ?- ಎನ್ನುವ ಪ್ರಶ್ನೆ ಹಲವರ ನಿದ್ದೆ ಕೆಡಿಸಿದ್ದೂ ಉಂಟು. ನಗರದ ಮನೆಗಳಲ್ಲಿ ಮತ್ತು ಹಳ್ಳಿಗಳಲ್ಲಿ  ಇರುವ ಸಾಕು ಪ್ರಾಣಿಗಳ ಜೊತೆಗೆ ಮನುಷ್ಯರಿಗೆ ನಿಕಟ ಸಂಪರ್ಕಗಳಿರುವ ಕಾರಣ ಅವುಗಳ ಸಂಪರ್ಕಕ್ಕೆ ಬರುವ ಮನುಷ್ಯರಿಗೂ ಇದು ಹರಡಬಲ್ಲದೇ?-ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಲು ಅಧ್ಯಯನಗಳನ್ನು ನಡೆಸಲಾಯ್ತು.

    ನಮ್ಮ ಪ್ರೀತಿಯ ನಾಯಿ, ಬೆಕ್ಕುಗಳು, ಹಸು, ಎಮ್ಮೆ, ಕುರಿ,ಮೇಕೆ,ಕೋಳಿ ಹಂದಿ, ಕತ್ತೆ-ಕುದುರೆಗಳಿಗೂ ಇದು ಹರಡಿದರೆ ಬರೀ ನಮ್ಮ ಭಾವನೆಗಳುಮಾತ್ರವಲ್ಲದೆ ಈ ಪ್ರಾಣಿಗಳನ್ನೇ ತಮ್ಮ ವೃತ್ತಿಯಾಗಿ  ಅವಲಂಬಿಸಿ ಬದುಕುತ್ತಿರುವ ಕೋಟ್ಯಂತರ ಸಂಸಾರಗಳು ಅರ್ಥಿಕವಾಗಿ ಕಷ್ಟಕ್ಕೆ ಬೀಳುವ ಸಾಧ್ಯತೆ ಇತ್ತು.

     ಈ ಬಗ್ಗೆ ಅಧ್ಯಯನಗಳನ್ನು ನಡೆಸಿದಾಗ ಕೋವಿಡ್ ಸೋಂಕಿತ ಮನುಷ್ಯರಿಂದ ಅವರ ಪ್ರೀತಿಯ ನಾಯಿ, ಬೆಕ್ಕುಗಳಿಗೆ ಈ ಸೋಂಕು ಹರಡುತ್ತಿದ್ದದ್ದು ಧೃಡವಾಯ್ತು. ಸೋಂಕಿತ ಮನುಷ್ಯರು ಇದ್ದ ಮನೆಗಳಲ್ಲಿ ಅವರ ಸಂಪರ್ಕಕ್ಕೆ ಬಂದ ನಾಯಿ ಬೆಕ್ಕುಗಳು ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದವು.ಅದೃಷ್ಟ ಎಂದರೆ, ಈ ಪ್ರಾಣಿಗಳು ಮನೆಯ ಇತರೆ ಮನುಷ್ಯರಿಗೆ ಸೋಂಕನ್ನು ವರ್ಗಾಯಿಸುತ್ತಿರಲಿಲ್ಲ.

    ಆದರೆ ತಮ್ಮದೇ ಪ್ರಭೇದದ ಇತರೆ ಪ್ರಾಣಿಗಳಿಗೆ ಸೋಂಕನ್ನು ನೀಡಬಲ್ಲವಾಗಿದ್ದವು. ಉದಾಹರಣೆಗೆ-  ನಾಯಿ ಮತ್ತೊಂದು ನಾಯಿಗೆ ಸೋಂಕನ್ನು ಕೊಡಬಲ್ಲವು. ಆದರೆ ನಾಯಿಗಳಿಂದ ಮನುಷ್ಯರಿಗೆ ಹರಡಿದ ಉದಾಹರಣೆಗಳಿಲ್ಲ. ಆದರೆ ಮನುಷ್ಯರು ಇತರೆ ಮನುಷ್ಯರಿಗೆ ಮತ್ತು ಪ್ರಾಣಿಗಳೆರಡಕ್ಕೂ ರೋಗವನ್ನು ನೀಡಬಲ್ಲವರಾಗಿದ್ದರು!

    ಉಣ್ಣೆದೊಗಲಿನ ಕೆಲವು ಪ್ರಾಣಿಗಳು ಮನುಷ್ಯರಿಂದ ಸೋಂಕನ್ನು ಪಡೆದು ಇತರೆ ಮನುಷ್ಯರಿಗೆ ಕೊಟ್ಟ ಉದಾಹರಣೆಗಳಿವೆ. ಆದರೆ ಮನುಷ್ಯರು ಅವುಗಳಿಂದ ದೂರವಿದ್ದಲ್ಲಿ ಇವ್ಯಾವ ಅವಘಡಕ್ಕೂ ಆಸ್ಪದವಿರಲಿಲ್ಲ.

     ಸಾಕು ಪ್ರಾಣಿಗಳನ್ನು ನೋಡಿಕೊಳ್ಳಲು ಇನ್ಯಾರೂ ಇಲ್ಲದಿದ್ದಲ್ಲಿ ಕೋವಿಡ್ ಸೋಂಕು ನಮ್ಮಿಂದ ಸಾಕು ಪ್ರಾಣಿಗಳಿಗೆ ಹರಡದಿರುವಂತೆ ಸಾರ್ವತ್ರಿಕ ಎಚ್ಚರಿಕೆ ವಹಿಸಬೇಕಾಗುತ್ತದೆ. ಸೋಂಕು ಹರಡದಂತೆ ತಡೆಯಲು ಅವುಗಳೊಂದಿಗೆ ಇರುವಾಗ ಇತರೆ ಜನರೊಂದಿಗೆ ತೆಗೆದುಕೊಳ್ಳುವ ಎಲ್ಲ ಸಾಮಾನ್ಯ ಎಚ್ಚರಿಕೆಗಳನ್ನೂ ಪಾಲಿಸಬೇಕಾಗುತ್ತದೆ. ಮಾಸ್ಕ್ ಧರಿಸಿ, ಕೈ ತೊಳೆದುಕೊಂಡು, ಸಾಧ್ಯವಾದಷ್ಟು ಕಡಿಮೆ ಒಡನಾಡುವ ಮೂಲಕ ಕೋವಿಡ್ ಹರಡದಂತೆ ತಡೆಯಬಹುದಾಗಿದೆ.

    ಮನುಷ್ಯರಿಂದ ಸಾಕು ಪ್ರಾಣಿಗಳನ್ನು ರಕ್ಷಿಸುವ ಮಾತುಗಳು ನಡೆಯುತ್ತಿರುವಾಗಲೇ ಕೋವಿಡ್ ಸೋಂಕನ್ನು ಪತ್ತೆ ಹಚ್ಚಲು ಪ್ರಾಣಿಗಳ ಮೊರೆಹೋಗುವ ವಿಚಾರವೂ ಶುರುವಾಯಿತು.

    ಸಾಕು ಪ್ರಾಣಿಗಳಿಂದ ಸೋಂಕು ಮನುಷ್ಯನಿಗೆ ಹರಡುವುದಿಲ್ಲ ಎಂದು ತಿಳಿದ ನಂತರ ’ಮನುಷ್ಯನ ಮಿತ್ರ ’ ಶ್ವಾನದ ವಾಸನಾ ಗ್ರಹಿಕೆಯ ಶಕ್ತಿಯನ್ನು ಉಪಯೋಗಿಸಿಕೊಳ್ಳುವ ಸೋಂಕನ್ನು ಆರಂಭಿಕ ಹಂತಗಳಲ್ಲೇ ಪತ್ತೆ ಹಚ್ಚಬಹುದೇ?- ಎಂಬ  ವಿಚಾರಕ್ಕೂ ಮನ್ನಣೆ ದೊರಕಿತು. ಕೋವಿಡ್ ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ ಸೋಂಕಿದೆಯೇ ಇಲ್ಲವೇ ಎಂಬುದನ್ನು ನಾಯಿಗಳ ಮೂಲಕ ತಿಳಿಯಬಲ್ಲೆವೇ?- ಎನ್ನುವ ಉತ್ಸಾಹವೂ ಜೊತೆ ಸೇರಿತು.

    ಈ ವಿಚಾರ ಹೊಳೆದದ್ದು ಆಶ್ಚರ್ಯವೇನೂ ಆಗಿರಲಿಲ್ಲ. ಏಕೆಂದರೆ ಅದರ ತುರ್ತು ಅಗತ್ಯವಿತ್ತು. ವ್ಯಾಪಕವಾದ ಕೋವಿಡ್ ಪರೀಕ್ಷೆಗಳು ನಡೆದರೂ, ಅದನ್ನು ನಿಖರವಾಗಿ ಕಂಡುಹಿಡಿಯುವ ವಿಧಾನವನ್ನು ಹುಡುಕಬೇಕಿತ್ತು. ಸುಳ್ಳು ಧನಾತ್ಮಕ ಪರೀಕ್ಷೆಗಳು, ಹುಸಿ ಋಣಾತ್ಮಕ ಪರೀಕ್ಷೆಗಳು ಎಲ್ಲವನ್ನೂ ಮೀರಿದ ಪರೀಕ್ಷಾ ವಿಧಾನವೊಂದು ಬೇಕಿತ್ತು. ಹಾಗಾಗಿ  ವೈದ್ಯಕೀಯ ಪರೀಕ್ಷೆಗಳು, ವೈದ್ಯರುಗಳಿಗಿಂತ ಮುಂಚಿತವಾಗಿಯೇ ಮಲೇರಿಯ,  ಕ್ಯಾನ್ಸರ್, ಮಧುಮೇಹ ರೋಗ, ಪಾರ್ಕಿನ್ಸನ್ಸ್ ಇತ್ಯಾದಿಗಳನ್ನು ಪತ್ತೆಹಚ್ಚ ಬಲ್ಲ ಮತ್ತು ಅದಕ್ಕಾಗಿ ತರಭೇತಿ ಹೊಂದಿದ ಮೆಡಿಕಲ್ ನಾಯಿಗಳನ್ನು  ಕೊರೋನಾ ಸೋಂಕಿನ ಪತ್ತೆಗೂ ಬಳಸಬಾರದೇಕೆ ?- ಎಂಬ ವಿಚಾರ  ಹಲವು ದೇಶಗಳಲ್ಲಿ  ಒತ್ತಟ್ಟಿಗೆ ಪ್ರಯೋಗಗಳನ್ನು ನಡೆಸಲು ಕಾರಣವಾಯಿತು.

    ಶ್ವಾನ ತರಬೇತಿಯ ಉಪಾಯ

    ಮಾರ್ಚ್ ತಿಂಗಳಿಂದಲೇ ಶ್ವಾನಗಳ ತರಬೇತಿಯೂ ಶುರುವಾಯಿತು.ಫ್ರಾನ್ಸ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ  ತರಬೇತಿ ತಂಡವೊಂದು ಆಲ್ಫೊರ್ಟ್ ರಾಷ್ತ್ರೀಯ ವೆಟೆರಿನರಿ ವಿಶ್ವವಿದ್ಯಾಲಯದಲ್ಲಿ  ಡೊಮಿನಿಕ್ ಗ್ರಾಂಡ್ ಜೀನ್ ಎಂಬಾತನ ನೇತೃತ್ವದಲ್ಲಿ ಮನುಷ್ಯನ ಬೆವರಿನ ಮೂಲಕ ಸೋಂಕನ್ನು ಪತ್ತೆ ಹಚ್ಚಬಹುದೇ ಎಂಬ ಪ್ರಯೋಗ ನಡೆಸಿತು. ಆಗಸ್ಟ್ ವೇಳೆಗೆ ನಾಯಿಗಳು ಸೋಂಕಿತರ ಬೆವರನ್ನು ಶೇಕಡ 100 ನಿಖರತೆಯೊಂದಿಗೆ ಕಂಡುಹಿಡಿಯಬಲ್ಲವು ಎಂದು ವರದಿ ಸಲ್ಲಿಸಿತು. ಫ್ರಾನ್ಸ್ ನಂತೆಯೇ  ಯುನೈಟೆಡ್ ಅರಬ್ ಎಮಿರೇಟ್ಸ್, ಚಿಲಿ, ಅರ್ಜೆಂಟಿನಾ, ಬ್ರೆಜಿಲ್, ಇಂಗ್ಲೆಂಡ್  ಮತ್ತು ಬೆಲ್ಜಿಯಂ  ದೇಶಗಳಲ್ಲಿಯೂ ಶ್ವಾನಪ್ರಯೋಗಗಳು ನಡೆದವು.ಕೆಲವು ದೇಶಗಳು ಅತ್ಯಂತ ಬೇಗನೆ ತಮ್ಮ ಪ್ರಯೋಗದ ವಕ್ಕಣೆಯನ್ನು ನೀಡಿ ನಾಯಿಗಳನ್ನು ಕೆಲಸಕ್ಕೆ ಹಚ್ಚಿದವು.

    ಉದಾಹರಣೆಗೆ, ಯುನೈಟೆಡ್ ಅರಬ್ ದೇಶಗಳು ಮೇ ವೇಳೆಗೆಲ್ಲ ಹೀಗೆ ಕೊರೋನಾ ಪತ್ತೆಯಲ್ಲಿ ತರಬೇತಿ ಹೊಂದಿದ ನಾಯಿಗಳನ್ನು ಹಲವಾರು ಏರ್ ಪೋರ್ಟ್ ಗಳಲ್ಲಿ ಕೋವಿಡ್ ಪತ್ತೆಗಾಗಿ ನೇಮಿಸಿಕೊಂಡಿತು.ಆದರೆ ಇದೇ ಉದ್ದೇಶವನ್ನು ಹೊಂದಿದ ಇನ್ನೂ ಅನೇಕ ದೇಶಗಳು ನಿಧಾನವಾಗಿ  ತರಬೇತಿ ಮುಂದುವರೆಸಿದರು. ಇದೀಗ ಅಮೆರಿಕಾದಿಂದ-ಆಸ್ಟ್ರೇಲಿಯಾ ವರೆಗೆ ಹಲವು ದೇಶಗಳು ಇದೇ ಯೋಜನೆಗಳನ್ನುಹೊಂದಿವೆ.

    ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಕೋವಿಡ್ ಸೋಂಕನ್ನು ಪತ್ತೆ ಹಚ್ಚಬಲ್ಲ ಕೆಲವು ನಾಯಿಗಳು ಸೋಂಕು ಶುರುವಾಗುವ ಮುನ್ನವೇ ಅಂದರೆ ಪರೀಕ್ಷೆಯಲ್ಲಿ ಸೋಂಕು  ’ ಪಾಸಿಟಿವ್ ಇದೆ ’ ಎಂದು ಬರುವುದಕ್ಕಿಂತ ಮೊದಲೇ ಕೊರೋನಾ ಸೋಂಕಿನ ಇರುವನ್ನು ಈ ಶ್ವಾನಗಳು ಕಂಡುಹಿಡಿಯಬಲ್ಲವಾಗಿದ್ದವು!

    ಶ್ವಾನ ತರಬೇತಿಯ ವಿಧಾನಗಳು

    ಇಂಗ್ಲೆಂಡಿನ ಡರ್ಹ್ಯಾಂ ಮತ್ತು ಲಂಡನ್ನಿನ ಟ್ರಾಪಿಕಲ್ ಮೆಡಿಸಿನ್ ಮತ್ತು ಶುಚಿತ್ವದ  ಶಾಲೆಗಳು ಮೊದಲಿಗೆ ಈ ಸಾಧ್ಯತೆಯನ್ನು ಪರೀಕ್ಷಿಸಲು ಮಾರ್ಚಿನಲ್ಲೇ ಶ್ವಾನಗಳಿಗೆ ತರಬೇತಿ ಕೊಡಲು ಮುಂದಾದರು. ಕೊರೋನಾವನ್ನು ಕಂಡು ಹಿಡಿಯಲು ನಾಯಿಗಳಿಗೆ ಸಾಧ್ಯ ಎನ್ನುವುದರ ಬಗ್ಗೆ ಇವರಿಗೆ ಪೂರ್ತಿ ನಂಬಿಕೆಯಿತ್ತು. ಮಿಲ್ಟನ್ ಕೀನ್ಸ್ ಎಂಬ ಜಾಗದಲ್ಲೂ ಆರು ನಾಯಿಗಳಿಗೆ ತರಬೇತಿ ಶುರುವಾಯಿತು.

    ಮೊದಲಿಗೆ ಆಸ್ಪತ್ರೆಗಳಲ್ಲಿ ಕೆಲಸಮಾಡುತ್ತಿದ್ದವರ ಮುಖಗವಸು, ಸಾಕ್ಸ್ ಇತ್ಯಾದಿಗಳ ವಾಸನೆಯ ಮೂಲಕ ಅವರಲ್ಲಿ ಸೋಂಕು ಶುರುವಾಗಿದೆಯೇ ಅಥವಾ ಇದೆಯೇ ಎಂಬುದನ್ನು ಕಂಡುಹಿಡಿಯುವ ಪ್ರಯತ್ನವಾಯಿತು. ಇದಕ್ಕಾಗಿ ಇಂಗ್ಲೆಂಡಿನ ಆಸ್ಪತ್ರೆಗಳಲ್ಲಿ ಕೆಲಸಮಾಡುವ 3500  ಪ್ರಯೋಗದಲ್ಲಿ ಭಾಗಿಗಳಾಗಲು ಮುಂದೆ ಬಂದರು.ಬೀದಿಗೆ ಬಿದ್ದ  ನಾಯಿಗಳನ್ನು ರಕ್ಷಿಸುವ ಧರ್ಮಾರ್ಥ ಸಂಸ್ಥೆಯೊಂದು ತನ್ನ ಕೆಲವು ನಾಯಿಗಳನ್ನು ಹೆಮ್ಮೆಯಿಂದ ತರಬೇತಿಗೆ ಇಳಿಸಿತು.

    ಕೊರೋನಾ ಪರೀಕ್ಷೆಯಲ್ಲಿ  ಪಾಸಿಟಿವ್ ಎಂದು ಬಂದಿರುವವರ ಬೆವರನ್ನು ಮತ್ತು ನೆಗೆಟಿವ್ ಎಂದು ಬಂದಿರುವವರ ಬೆವರನ್ನು ಈ ಪ್ರಯೋಗಗಳಲ್ಲಿ ಸಾಲಾಗಿ ಆದರೆ ಯಾವುದೇ ಅನುಕ್ರಮವಿಲ್ಲದೆ ಇಡಲಾಗುತ್ತದೆ. ಸ್ನಿಫರ್ ಡಾಗ್ ಗಳಿಗೆ ಮೊದಲು ಕೊರೋನಾ ಪಾಸಿಟಿವ್ ಇರುವ ಒಂದು ಮಾದರಿಯನ್ನು ಮೂಸಿಸಲಾಗುತ್ತದೆ. ನಂತರ ಅದೇ ಮಾದರಿಯ ವಾಸನೆ ಆ ಸಾಲಿನಲ್ಲಿ ಯಾವ ಮಾದರಿಗಳಿಗಿವೆ ಎಂದು ನಾಯಿಗಳು ಮೂಸುತ್ತ ಹೋಗುತ್ತದೆ. ಹೊಂದಾಣಿಕೆಯಾಗುವ ಮಾದರಿ ಸಿಕ್ಕ ಕೂಡಲೆ ನಾಯಿ ದೈಹಿಕ ಚಲನೆಯ ಮೂಲಕ ಸನ್ನೆ ಮಾಡುತ್ತದೆ. ಉದಾಹರಣೆಗೆ ಪಾಸಿಟಿವ್ ಇರುವ ಸ್ಯಾಂಪಲ್ ಪತ್ತೆಯಾದಾಗ ನಾಯಿ ಅದರ ಮುಂದೆ ಕೂರುವ ಮೂಲಕ ಅಥವಾ ಬೊಗಳುವ ಮೂಲಕ ತಿಳಿಸುತ್ತದೆ. ಸರಿಯಾದ ಸ್ಯಾಂಪಲ್ ಅನ್ನೇ ಅದು ಪತ್ತೆ ಹಚ್ಚಿದ್ದಲ್ಲಿ ಅದಕ್ಕೆ ಪ್ರೋತ್ಸಾಹಕರವಾಗಿ ಅವುಗಳಿಗಿಷ್ಟವಾಗುವ ತಿಂಡಿಯನ್ನು ನೀಡಲಾಗುತ್ತದೆ.ತಪ್ಪು ನಡೆಯುತ್ತಿದ್ದಲ್ಲಿ ಮತ್ತೆ ತರಬೇತಿಗೊಳಪಡಿಸಲಾಗುತ್ತದೆ.

    ಸತತ ಎಂಟು-ಹತ್ತು ವಾರಗಳ ಕಾಲ ಹೀಗೆ ತರಬೇತಿಗೊಂಡ ನಾಯಿಗಳು ಯಾವ ತಪ್ಪನ್ನೂ ಮಾಡುತ್ತಿಲ್ಲ ಎಂದಾದಾರೆ ಅವನ್ನು ಮಾತ್ರ ಮನುಷ್ಯರನ್ನೇ ನೇರವಾಗಿ ಮೂಸಿ ಕೋವಿಡ್ ಇದೆಯೇ ಇಲ್ಲವೇ ಎಂದು ಹೇಳಲು ನೇಮಿಸಲಾಗುತ್ತದೆ.

    ನಾಯಿಗಳನ್ನು ಮುಖ್ಯವಾಗಿ ಬಳಸುವುದು ವಿಮಾನ ನಿಲ್ದಾಣಗಳಂಥ ಸ್ಥಳಗಳಲ್ಲಿ. ಏಕೆಂದರೆ ಯಾವುದೇ ಪರೀಕ್ಷೆಗಳಿಲ್ಲದೆ, ಸಮಯದ ಅಗತ್ಯವಿಲ್ಲದೆ,ಅತ್ಯಂತ ವೇಗವಾಗಿ ಕೊರೋನಾ ಸೋಂಕಿತರನ್ನು ಸಾಲು ಸಾಲು ಜನರ ಮಧ್ಯೆ ಬರೇ ವಾಸನೆಯಿಂದ ಗುರುತಿಸಿಬಿಡಬಲ್ಲ ಕಲೆ ತರಬೇತಿಗೊಂಡ ನಾಯಿಗಳಿಗೆ  ಮಾತ್ರ ಸಾಧ್ಯ.

    ನಾಯಿಗಳಲ್ಲೂ ಪ್ರತಿಭೆ ಇರುವಂತೆ ಕೆಲವು ನಾಯಿಗಳು ಮಾತ್ರ ಇದರಲ್ಲಿ ಅತ್ಯಂತ ನಿಖರವಾಗಿ ಕೆಲಸಮಾಡುತ್ತವೆ. ಅಂಥವನ್ನು ಮಾತ್ರವೇ ಪ್ರತ್ಯೇಕಿಸಿ ಕೆಲಸಕ್ಕೆ ಹಚ್ಚಲಾಗುತ್ತದೆ.

     ಇಂತಹ ಪ್ರತಿಭೆಯುಳ್ಳ ನಾಯಿಗಳು ಗಂಟೆಯೊಂದಕ್ಕೆ 250 ಜನರನ್ನು ಮೂಸಿ ಫಲಿತಾಂಶವನ್ನು ಹೇಳಬಲ್ಲವು. ಅಂದರೆ,ಒಂದು ಮಿಷಿನ್ನಿಗಿಂತಲೂ ವೇಗವಾಗಿ ಮತ್ತು ಅದಕ್ಕಿನ್ನ ನಿಖರವಾಗಿ ನಾಯಿಗಳು ಫಲಿತಾಂಶವನ್ನು ಬಿತ್ತರಿಸಬಲ್ಲವು.

    ಇದನ್ನು ಕೆಲವು ದೇಶಗಳು ಎಷ್ಟೊಂದು ಗಂಭೀರವಾಗಿ ತೆಗೆದುಕೊಂಡಿವೆಯೆಂದರೆ,  ನಾಯಿಗಳ ಮೂಲಕ ಕೋವಿಡ್ ನ್ನು ಕಂಡುಹಿಡಿಯುವ ಅಧ್ಯಯನಕ್ಕೆ ಇಂಗ್ಲೆಂಡ್ ಸುಮಾರು 5 ಕೋಟಿ ರೂಪಾಯಿಗಳನ್ನು ಬಂಡವಾಳವನ್ನಾಗಿ ಹೂಡಿದೆ. ಇದರ ಮೇಲೆ ಇನ್ನೂ ಹಲವಾರು ಧರ್ಮಾರ್ಥ ಸಂಸ್ಥೆಗಳೂ ಹಣವನ್ನು ನೀಡಿಈ ತರಬೇತಿಗೆ ಉತ್ತೇಜನ ನೀಡಿದ್ದಾರೆ.

    ಏಕೆಂದರೆ ಒಂದು ಸ್ಪೂನ್ ಸಕ್ಕರೆಯನ್ನು ಎರಡು ಒಲಿಂಪಿಕ್ಸ್ ಈಜುಕೊಳಗಳಷ್ಟು ನೀರಿನಲ್ಲಿ ಬೆರೆಸಿದರೂ ನಾಯಿಗಳ ಅತ್ಯಂತ ಸೂಕ್ಷ್ಮವಾದ ವಾಸನಾ ಶಕ್ತಿ ಅದನ್ನು ಕಂಡುಹಿಡಿಯಬಲ್ಲವಂತೆ.

    ಹಾಗೆಂದು ನಾಯಿಗಳು ತಪ್ಪು ಮಾಡುವುದೇ ಇಲ್ಲ- ಅಂತಲೂ ಅಲ್ಲ. ಕೆಲವೊಮ್ಮೆ ಅವುಗಳು ತಪ್ಪು ಮಾಡಿದ ಹಲವು ಉದಾಹರಣೆಗಳಿವೆ. (ಹಾಗಂತ ಯಾರು ತಪ್ಪು ಮಾಡುವುದಿಲ್ಲ?) ಆದರೆ ಅವುಗಳ ವಾಸನಾ ಶಕ್ತಿ ಅಗಾಧವಾದದ್ದು ಎನ್ನುವುದನ್ನು ಮನುಷ್ಯ ಮರೆಯುವಂತಿಲ್ಲ.

    ವಿಶ್ವಾಸಾರ್ಹ ನಾಯಿಗಳ ಹಲವು ಪಾತ್ರಗಳು

    ಭಾರತವೂ ಸೇರಿದಂತೆ ನಾಯಿಗಳನ್ನು ಮನೆಯ ಮತ್ತು ದೇಶದ ಭದ್ರತೆಗೆ ಬಳಸುವುದು ಸರ್ವೇ ಸಾಮಾನ್ಯವಾಗಿದ್ದ ಕಾಲದಲ್ಲಿ ನಾಯಿಗಳ ಪಾತ್ರ ಹೇಗೆ ಈ ದಿಕ್ಕಿಗೆ ತಿರುಗಿಕೊಂಡಿತು?

    ತರಬೇತಿಯೇ ಇಲ್ಲದೆಯೂ ಕೆಲವು ನಾಯಿಗಳು ಸ್ಥನ ಕ್ಯಾನ್ಸರ್, ಮಾರಣಾಂತಿಕ ಮಧು ಮೇಹ ಇತ್ಯಾದಿಗಳನ್ನು ತಮ್ಮನ್ನು ಸಾಕುವವರಿಗೆ ಇರುವುದನ್ನು ತಿಳಿಸಿದ ಹಲವು ಮನಕರಗುವ ಘಟನೆಗಳಾಗಿವೆ.

    ಉದಾಹರಣೆಗೆ- ಮಹಿಳೆಯೊಬ್ಬಳು ತನ್ನ ನಾಯಿಯ ಜೊತೆ ಅನ್ಯೋನ್ಯ ಸಂಬಂಧ ಇಟ್ಟುಕೊಂಡಿದ್ದಳು. ಒಮ್ಮೆ ಆ ನಾಯಿ ವಿಚಿತ್ರವಾಗಿ ವರ್ತಿಸತೊಡಗಿತು. ಅವಳು ಮಲಗಿದ್ದಾಗ, ಕೂತಿದ್ದಾಗ ಅವಳ ಸ್ಥನಗಳನ್ನು ಮೂಸಿ ಕುಯ್ ಗುಡತೊಡಗಿತು. ಅವಳು  ತನ್ನ ಸ್ತನಗಳನ್ನು ಪರೀಕ್ಷಿಸಿಕೊಂಡಾಗ ಸಣ್ಣದೊಂದು ಗಡ್ಡೆ ಪತ್ತೆಯಾಯಿತು. ಆಕೆ ವೈದ್ಯರ ಬಳಿ ಹೋಗಿ ಎಲ್ಲ ತಪಾಸಣೆಗಳನ್ನು ಮಾಡಿಸಿಕೊಂಡಳು.ಆದರೆ ಯಾವ ಸಮಸ್ಯೆಯೂ ಪತ್ತೆಯಾಗಲಿಲ್ಲ.

     ಮುಂದಿನ ಹದಿನೈದು ದಿನ ನಾಯಿ ಸಪ್ಪಗಿರುವುದು, ಅವಳ ಸ್ತನಗಳನ್ನು ಮತ್ತೆ ಮತ್ತೆ ಮೂಸುತ್ತ ಕುಯ್ಗುಡುವುದನ್ನು ಮುಂದುವರೆಸುತ್ತ ಊಟವನ್ನು ನಿರಾಕರಿಸತೊಡಗಿತು. ಆಕೆ ನಾಯಿಯ ವಾಸನಾ ಶಕ್ತಿಯ ಬಗ್ಗೆ ಎಲ್ಲಿಯೋ ಓದಿದ್ದಳು.ಆದ್ದರಿಂದ ಏನಾದರಾಗಲಿ ಎಂದು ಮತ್ತೆ ವೈದ್ಯರ ಬಳಿ ಹೋದಳು. ಈ ಬಾರಿ  ಅವಳಿಗೆ ಸ್ತನ ಪರೀಕ್ಷೆಯಲ್ಲಿ ಕ್ಯಾನ್ಸರ್ ಶುರುವಾಗಿರುವುದು ಪತ್ತೆಯಾಯಿತು. ಅಂದರೆ ವೈದ್ಯಕೀಯ ಪರೀಕ್ಷೆಗಳು ಪತ್ತೆಹಚ್ಚುವುದಕ್ಕಿಂತ ಒಂದು ತಿಂಗಳು ಮುಂಚೆಯೇ ನಾಯಿಗೆ ಅದು ತಿಳಿದುಹೋಗಿತ್ತು!

    ಆಕೆ ಕ್ಯಾನ್ಸರ್ ಆಪರೇಶನ್ ಮುಗಿಸಿಕೊಂಡು ಸಂಪೂರ್ಣ ಗುಣಮುಖಳಾಗಿ ಮರಳಿದ ಕೂಡಲೇ ನಾಯಿ ಕುಣಿದಾಡಿ ಅವಳನ್ನು ಸ್ವಾಗತಿಸಿತು. ಎಂದಿನಂತೆ ಊಟ ತಿಂಡಿ ಮಾಡಿಕೊಂಡು ಗೆಲುವಾಯಿತು.ಇಂತಹ ಅತ್ಯಂತ ಹೃದಯಂಗಮವಾದ ಹಲವಾರು  ಕಥೆಗಳನ್ನು ನಾವಿಂದು ಓದಬಹುದು.

    ಈ ರೀತಿ ಹಲವಾರು ಘಟನೆಗಳು ವರದಿಯಾದಕೂಡಲೇ ಆಗಾಗಲೇ ಡ್ರಗ್ಸ್ ಹಿಡಿಯಲು, ಸ್ಪೋಟಕಗಳನ್ನು ಪತ್ತೆಹಚ್ಚಲು, ಹಣ, ಮೊಬೈಲ್ ಫೋನ್ ಗಳು, ಮದ್ದು-ಗುಂಡುಗಳು ಇತ್ಯಾದಿಗಳನ್ನು ಕಂಡು ಹಿಡಿಯಲು ಶ್ವಾನ ಪಡೆಗಳನ್ನು ಬಳಸುತ್ತಿದ್ದ ಜನರು ನಾಯಿಗಳನ್ನು ಖಾಯಿಲೆಗಳನ್ನು ಮೂಸಿ ಪತ್ತೆ ಹಚ್ಚಲು ತರಬೇತಿ ನೀಡತೊಡಗಿದರು. ನಾಯಿಗಳ ಇಂತಹ ಬಳಕೆ ಈಗಾಗಲೇ ದಶಕ ವರ್ಷಗಳನ್ನು ಮುಗಿಸಿ ಮುಂದುವರೆಯುತ್ತಿದೆ. ಹೊಸ ವ್ಯಾಧಿ ಕೋವಿಡ್ ಸೋಂಕನ್ನು ಪತ್ತೆ ಹಚ್ಚಿ ನಿಯಂತ್ರಿಸಲು ಕೂಡ ಇದು ಹೊಸ ಭರವಸೆಗಳನ್ನು ನೀಡಿದೆ.

     ಹೀಗಾಗಿ ಪೊಲೀಸು ಇಲಾಖೆಯಲ್ಲಿ, ಸೆಕ್ಯುರಿಟಿ ಇಲಾಖೆಗಳಲ್ಲಿ, ಮಿಲಿಟರಿ, ಏರ್ ಪೋರ್ಟುಗಳಲ್ಲಿ, ಬಂದರುಗಳಲ್ಲಿ, ಕಾರ್ಪೋರೇಟು ಸಮಾರಂಭ, ಮ್ಯೂಸಿಕ್ ಹಬ್ಬಗಳಿಗಾಗಿ ಈಗಾಗಲೇ ಕೆಲಸಕ್ಕಿದ್ದ ನಾಯಿಗಳು ಇದೀಗ ತಮ್ಮ ತರಬೇತುದಾರರೊಂದಿಗೆ ವೈದ್ಯಕೀಯ ಸಂಶೋಧನಾ ಕೇಂದ್ರಗಳಲ್ಲಿ ಕೂಡ ಕೆಲಸ ಗಿಟ್ಟಿಸುತ್ತಿವೆ. ಇಂಗ್ಲೆಂಡಿನ ಕೆಲವು ಆಸ್ಪತ್ರೆಗಳಲ್ಲಿ, ಉದಾಹರಣೆಗೆ ಲಂಡನ್ನಿನ ಗ್ರೇಟ್ ಆರ್ಮಾಂಡ್ ಮಕ್ಕಳ ಆಸ್ಪತ್ರೆ ಯಲ್ಲಿ ಖಾಯಿಲೆ ಬಿದ್ದ ಮಕ್ಕಳ ಮನಸ್ಸನ್ನು ಉಲ್ಲಸಿತಗೊಳಿಸಲು ಸಾಧು ಸ್ವಭಾವದ ನಾಯಿಗಳನ್ನು ಕರೆತರಲಾಗುತ್ತದೆ. ಮಕ್ಕಳು ಅವರ ತಲೆ ನೇವರಿಸುವಾಗ ಅವರಲ್ಲಿ ಆಗುವ ಆನಂದ ಅವರ ದುಃಖವನ್ನು ನೀಗುತ್ತದೆ.ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಗುಣ ಮುಖರಾಗಲು ನೆರವಾಗುತ್ತದೆ ಎನ್ನಲಾಗಿದೆ. ಇದನ್ನೇ ವೃದ್ದಾಶ್ರಮಗಳಲ್ಲಿಯೂ ಮಾಡುತ್ತಿದ್ದಾರೆ. ನಾಯಿಗಳನ್ನು ನೇವರಿಸುವುದರಿಂದ, ಅವುಗಳ ಒಡನಾಟದಿಂದಲೂ ಹಲವ ಬಗೆಯ ಪ್ರಯೋಜನಗಳು ಮನುಷ್ಯನಿಗಿವೆ. ಇನ್ನು ಒಂಟಿತನ, ಖಿನ್ನತೆಗಳನ್ನು ಹೊಡೆದೋಡಿಸುವ ಸಾಕು ಪ್ರಾಣಿಗಳು ಮನುಷ್ಯನ ಜೀವನ ಸಂಗಾತಿಗಳಾಗುವುದು ನಮ್ಮೆಲ್ಲರಿಗೂ ತಿಳಿದ ವಿಚಾರವೇ ಆಗಿದೆ.

    ಇದೀಗ ಕೋವಿಡ್ ಶ್ವಾನ ಪಡೆಯನ್ನು ವಿಶ್ವದ ಹಲವು ದೇಶಗಳು ಕಟ್ಟುತ್ತಿದ್ದಾರೆ. ಅತ್ಯಂತ ನಿಖರವಾಗಿ ಪತ್ತೆ ಹಚ್ಚುವುದರ ಜೊತೆಗೆ ಇವು ಅತ್ಯಂತ ಅಗ್ಗವಾಗಿ ಫಲಿತಾಂಶವನ್ನು ನೀಡುತ್ತವೆ. ಹಣವನ್ನು ಉಳಿಸುತ್ತವೆ. ಸಮಯದ ಸಮಸ್ಯೆಯನ್ನೂ ಇಲ್ಲವಾಗಿಸುತ್ತವೆ. ದಟ್ಟ ಜನಸಂದಣಿ ಇದ್ದರೂ ಅವರ ನಡುವೆ ನುಸುಳಿ ಸುತ್ತಾಡಿ ಯಾರು ಕೋವಿಡ್ ಟೆಸ್ಟ್  ಮಾಡಿಸಿಕೊಳ್ಳಬೇಕೆಂದು ನಿರ್ಧರಿಸಬಲ್ಲವಾಗಿವೆ.

    ಸಾಮಾನ್ಯವಾಗಿ ನಾಯಿಗಳು ಸೋಂಕನ್ನು ಪತ್ತೆ ಹಚ್ಚಿದ ನಂತರ ಅವರಿಗೆ ಮತ್ತೊಂದು ಪರೀಕ್ಷೆಯನ್ನೂ ಮಾಡುವುದರಿಂದ ಎರಡೆರಡು ಬಾರಿ ಸೋಂಕನ್ನು ಖಚಿತಗೊಳ್ಳಿಸಿಕೊಳ್ಳಬಹುದಾದ ಅವಕಾಶಗಳಿವೆ.

    ಸ್ನಿಫರ್ ಡಾಗ್ ಗಳನ್ನು ನೋಡಿದರೆ ಅಪರಾಧಿಗಳ ಜಂಘಾಬಲವೇ ಉಡುಗಿಬಿಡುವುದು ಖಂಡಿತ. ಮನುಷ್ಯನ ದುಷ್ಟ ಅಭ್ಯಾಸಗಳನ್ನು, ಉದ್ದೇಶಗಳನ್ನು ಭೇದಿಸುವುದರ ಜೊತೆಗೆ ಆತನಿಗೆ ತಗುಲುವ ಹಲವು ಹತ್ತು ರೋಗ ಪತ್ತೆಯಲ್ಲೂ ನಾಯಿಗಳು ಪ್ರಮುಖ ಪಾತ್ರ ವಹಿಸುತ್ತಿವೆ. ನಮ್ಮ ಬದುಕಿನಲ್ಲಿ ಹೊಸ ಭರವಸೆ ಮೂಡಿಸುತ್ತಿವೆ. ವಿಮಾನ ನಿಲ್ದಾಣದಲ್ಲೇ ಅಲ್ಲದೆ ಕೋವಿಡ್ ಪರೀಕ್ಷಾ ಕೇಂದ್ರಗಳಲ್ಲಿ ಕೂಡ ರೋಗ ಪತ್ತೆಗೆ ನಾಯಿಗಳನ್ನು ಬಳಸಿಕೊಳ್ಳುವ ಯೋಚನೆಗಳಿವೆ.

     ಫಿನ್ ಲ್ಯಾಂಡಿನ ಹೆಲ್ಸಿಂಕಿ ಪಶು ವೈದ್ಯಕೀಯ ವಿಭಾಗದ ಪ್ರಕಾರ ನಾಯಿಗಳು ನೂರಕ್ಕೆ ನೂರು ಖಚಿತವಾಗಿ ಕೋವಿಡ್ ಸೋಂಕನ್ನು ಕಂಡುಹಿಡಿಯಬಲ್ಲವು. ಇದೇ ಕಾರಣಕ್ಕೆ ಹೆಲ್ಸಿಂಕಿ ಏರ್ ಪೋರ್ಟ್ ನಲ್ಲಿ ದೊಡ್ಡ ಕೋವಿಡ್ ಶ್ವಾನ ದಳದ ಬಳಕೆ ಈಗಾಗಲೇ ಚಾಲ್ತಿಯಲ್ಲಿದೆ. ಇವರ ಪ್ರಕಾರ ಇಡೀ ಪ್ರಪಂಚದಲ್ಲಿ ಫಿನ್ ಲ್ಯಾಂಡಿನಲ್ಲಿ ಉಪಯೋಗಿಸಲಾಗುತ್ತಿರುವಷ್ಟು ಕೋವಿಡ್  ಶ್ವಾನಗಳನ್ನು ಇನ್ನೆಲ್ಲೂ ಉಪಯೋಗಿಸುತ್ತಿಲ್ಲ.

     ಅತ್ಯಂತ ಕಡಿಮೆ ಸಮಯ ಎಂದರೂ ಅರ್ಧಗಂಟೆಯಿಂದ ಒಂದುಗಂಟೆ ಬೇಕಾಗುವ ಕೋವಿಡ್ ಪರೀಕ್ಷೆಗೆ ಹೋಲಿಸಿದರೆ,  ನಾಯಿಗಳು ಕೇವಲ ಏಳು ನಿಮಿಷಗಳಲ್ಲಿ ಕೋವಿಡ್ ಅನ್ನು ಕಂಡುಹಿಡಿಯಬಲ್ಲವಾಗಿವೆ.

    ಆಂಟಿಬಾಡಿ ಪರೀಕ್ಷೆ ಅಥವಾ Polymerase chain Reaction (PCR) ಯನ್ನು ಪ್ರಯೋಗಾಲಯದಲ್ಲಿ ಮಾಡಬೇಕೆಂದರೆ ಕನಿಷ್ಠ 1.8 ಮಿಲಿಯನ್ ಸಣ್ಣಕಣಗಳು ಗಂಟಲು-ಮೂಗಿನ ದ್ರವದ ಮೂಲಕ ಸಿಗದಿದ್ದರೆ ವೈರಸ್ಸು ಖಚಿತವಾಗಿ ಇದೆ ಎಂದು ಹೇಳಲಾಗುವುದಿಲ್ಲ. ಆದರೆ ನಾಯಿಗಳಿಗೆ ಕೇವಲ 10 ರಿಂದ 100  ಸಣ್ಣ ಕಣಗಳು ಸಿಕ್ಕರೆ ಸಾಕು ಎನ್ನಲಾಗಿದೆ.ಜೊತೆಗೆ ವಿಮಾನದಿಂದ ಇಳಿವ ಪ್ರಯಾಣಿಕರು ತಮ್ಮ ಮೂಗು-ಗಂಟಲಿನ ದ್ರವದ ಮಾದರಿಯನ್ನೂ ಕೊಡಬೇಕಿಲ್ಲ. ಮಾಸ್ಕ್ ಅಥವಾ ಸಾಕ್ಸ್ ಅನ್ನು ಕೂಡ ಬಿಚ್ಚಿಕೊಡಬೇಕಿಲ್ಲ. ಬದಲಿಗೆ ಹತ್ತಿಯ ಕಡ್ಡಿಯನ್ನು ತಮ್ಮ ಚರ್ಮದ ಮೇಲಾಡಿಸಿ ಒಂದು ಪ್ಲಾಸ್ಟಿಕ್ ಕಪ್ ನಲ್ಲಿ ಹಾಕಿ ಕೊಡಬಹುದಾಗಿದೆ. ಇದನ್ನು ಕೋವಿಡ್ ನಾಯಿ ಮೂಸಿ ತನ್ನ ಪತ್ತೆ ಏನೆಂದು ಹೇಳುತ್ತದೆ. ಲಕ್ಷಣಗಳಿಲ್ಲದವರನ್ನೂ ಸುಲಭವಾಗಿ ಪತ್ತೆ ಮಾಡಲು ಸಾಧ್ಯವಾಗುತ್ತದೆ. ಸಾಂಪ್ರದಾಯಿಕವಾಗಿ ಪರೀಕ್ಷೆಗೊಳಪಡಿಸಲಾಗದಿದ್ದವರಿಗೆ ಇದು ವರದಾನವಾಗುತ್ತದೆ.  ಡಿಸೆಂಬರ್ ವೇಳೆಗೆ ಮತ್ತೂ ಹಲವು ದೇಶಗಳ ವಿಮಾನ ನಿಲ್ದಾಣ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ನಾವು ನಮ್ಮ ವಿಶ್ವಾಸಾರ್ಹ ಮಿತ್ರರನ್ನು ನೋಡಬಹುದಾಗಿದೆ ಎನ್ನಲಾಗಿದೆ.

     ಶ್ವಾನದ ಮೂಗು ಕೋವಿಡ್ ಸೋಂಕನ್ನು ಪತ್ತೆ ಹಚ್ಚಿ ಅದರಿಂದ ಮನುಷ್ಯ ಹೊರಬರಲು ಒಂದು ಭರವಸೆಯನ್ನು ನೀಡಿರುವುದನ್ನು ನೋಡಿದರೆ ಇಪ್ಪತ್ತೊಂದನೇ ಶತಮಾನದಲ್ಲೂ ಮತ್ತು ಯಾವತ್ತಿಗೂ ಪ್ರಕೃತಿ ಮನುಷ್ಯನಿಂದ ಮೈಲು ದೂರ ಮುಂದಕ್ಕೆ ಎಂಬುದನ್ನು ನಿಚ್ಚಳವಾಗಿ ಕಾಣಬಹುದು.

    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    8 COMMENTS

    1. ಅದ್ಬುತ ಲೇಖನ ಮೇಡಂ. ಎಷ್ಟೋ ಸಂಗತಿಗಳು ನಮಗೆ ತಿಳಿದೆ ಇಲ್ಲ. ನೂತನ ಆವಿಷ್ಕಾರದ ಮೇಲೆ ಬೆಳಕು ಚೆಲ್ಲುವ ಹಾಗೂ ಶ್ವಾನಗಳ ರೋಗ ಪತ್ತೆ ಚಾತುರ್ಯದ ವಿವರಣೆ ಕುತೂಹಲ ಮೂಡಿಸುತ್ತದೆ

      • ಕೋವಿಡ್ ಸಂಭಂದಿತ ಲೇಖನ ಮಾಲೆಯನ್ನು ಓದುತ್ತ ಆಗಾಗ ಅಥವಾ ನಿಯಮಿತವಾಗಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುವ ನಿಮಗೆ ಮತ್ತು ಎಲ್ಲರಿಗೂ ನನ್ನ ಧನ್ಯವಾದಗಳು

    2. ನಮಗೆ ಗೊತ್ತಿಲ್ಲದೇ ಇರೋ ಎಷ್ಟೊಂದು ವಿಷಯಗಳು ನಿಮ್ಮ ಲೇಖನದಿಂದ ತಿಳಿಯಿತು ವಂದನೆಗಳು

      • ಬರಹಗಾರರಿಗೆ ಮಾಹಿತಿಗಳನ್ನು ಸಂಗ್ರಹಿಸಿ, ಸಂಸ್ಕರಿಸಿ ನಿಮ್ಮಂತ ಓದುಗರೊಂದಿಗೆ ಹಂಚಿಕೊಳ್ಳುವುದು ಸಂತಸದ ವಿಚಾರ. ನಿಮ್ಮ ಅನಿಸಿಕೆಗೆ ಧನ್ಯವಾದಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!