ಸೈಕಲ್‌ ವೇಗದಲ್ಲಿ ಪ್ರಸರಣಗೊಳ್ಳುವ ನಿಧಾನ ಬೆಳಕು ಮತ್ತು ನಿಂತಿರುವ ಬೆಳಕು

Photo by Umberto on Unsplash

SLOW LIGHT AND STOPPED LIGHT

ಪ್ರಾಥಮಿಕ, ಮಾಧ್ಯಮಿಕ ಮತ್ತು‍ ಪ್ರೌಢಶಾಲಾ ತರಗತಿಗಳಿಂದಲೂ ನಮಗೆ ಬೆಳಕಿನ ಬಗ್ಗೆ ತಿಳಿದಿರುವ ವಿಷಯವೆಂದರೆ ಅದರ ವೇಗ.  ಒಂದು ಸೆಕೆಂಡಿಗೆ 1,86,000 ಮೈಲಿಗಳು ಅಥವಾ ಮೂರು ಲಕ್ಷ ಕಿಲೊಮೀಟರ್‌ ವೇಗದಲ್ಲಿ ಪ್ರಸರಣಗೊಳ್ಳುತ್ತದೆ.  93 ದಶಲಕ್ಷ ಮೈಲಿಗಳು ಅಥವಾ 150 ದಶಲಕ್ಷ ಕಿಲೋಮೀಟರ್‌ ದೂರದಲ್ಲಿರುವ ಸೂಯ೯ನಿಂದ ಕೇವಲ ಎಂಟು ನಿಮಿಷಗಳಲ್ಲಿ ಬೆಳಕು ನಮ್ಮ ಭೂಮಿಯನ್ನು ತಲುಪುತ್ತದೆ.  ಒಂದು ಸೆಕೆಂಡಿನಲ್ಲಿ ಭೂಮಿಯನ್ನು ಏಳೂವರೆ ಸುತ್ತುಗಳನ್ನು ಹಾಕಬಲ್ಲ ವೇಗವನ್ನು ಬೆಳಕು ಹೊಂದಿದೆ.   ಇದು ಪ್ರಕೃತಿಯಲ್ಲಿ ಅಂತಿಮ ವೇಗದ ಮಿತಿ. 

ಐನ್‌ಸ್ಟೈನ್ ನ ಸಾಷೇಕ್ಷ ಸಿದ್ಧಾಂತದ ಪ್ರಕಾರ ಯಾವುದೇ ವಸ್ತು ಬೆಳಕಿನ ವೇಗವನ್ನು ಮೀರಿ ಚಲಿಸಲು ಸಾಧ್ಯವಿಲ್ಲ.  ಗಮನಿಸಬೇಕಾದ ಅಂಶವೆಂದರೆ, ಬೆಳಕು ನಿಧಾನವಾಗಿ ಹೋಗಲು ಸಾಧ್ಯವಿಲ್ಲ ಎಂದು ಅವರು ಎಂದೂ ಪ್ರತಿಪಾದಿಸಿಲ್ಲ, ಇಷ್ಟು ವೇಗದಲ್ಲಿ ಪ್ರಸರಣಗೊಳ್ಳುವ ಬೆಳಕನ್ನು 1999 ರಲ್ಲಿ ಹಾವ೯ಡ್‌೯ ವಿಶ್ವವಿದ್ಯಾಲಯದ ಡ್ಯಾನಿಶ್‌ ಭೌತಶಾಸ್ತ್ರಜ್ಞೆ ಹಾಗೂ ಶಿಕ್ಷಕಿ ಲೆನೆ ವೆಸ್ಟರ್‌ ಗಾಡ್‌೯ ಹೌ ಬೆಳಕಿನ ಕಿರಣಗಳ ವೇಗವನ್ನು ಸೆಕೆಂಡಿಗೆ 17 ಮೀಟರ್‌ ಗೆ ಅಥವಾ ಒಂದು ಗಂಟೆಗೆ 38 ಮೈಲಿಗಳಿಗೆ ಕಡಿಮೆ ಮಾಡುವಲ್ಲಿ ಯಶಸ್ವಿಯಾದರು.  ಮುಂದುವರಿದು, 2001 ರಲ್ಲಿ ಬೆಳಕಿನ ಕಿರಣವನ್ನು ಸಂಪೂಣ೯ವಾಗಿ ನಿಲ್ಲಿಸುವಲ್ಲಿ (ಸ್ಟಾಪಡ್‌ ಲೈಟ್‌) ಸಾಧ್ಯವಾಯಿತು.  ನಿರಪೇಕ್ಷ ಶೂನ್ಯ (ಆಬ್ಸ್‌ಲ್ಸೂಟ್‌ ಜೀರೋ ತಾಪಮಾನ) ತಾಮಮಾನಕ್ಕೆ ಬಹಳ ಹತ್ತಿರವಾದ ತಾಪಮಾನಕ್ಕೆ (450 ನ್ಯಾನೊ ಕೆಲ್ವಿನ್) ತಂಪಾಗಿಸಿದ ಸೊಡಿಯಂ ಅಯಾನುಗಳ ಮೋಡದ ಮೂಲಕ ಬೆಳಕನ್ನು ಬೆಳಗಿಸಿ ಇದನ್ನು ಸಾಧಿಸಲಾಯಿತು.  ಇದುವರೆವಿಗೂ ದಾಖಲೆಯಾಗಿರುವ ಬೆಳಕಿನ ಕನಿಷ್ಠ ವೇಗವೆಂದರೆ ಗಂಟೆಗೆ 27.5 ಮೈಲುಗಳು.  ಇದು ನಿಜವಾಗಲೂ ಕುತೂಹಲಕಾರಿ ಸಂಗತಿಯಲ್ಲವೇ?  ಈ ವಿಷಯದ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿಯೋಣ.

ವಿಷಯಕ್ಕೆ ಹೋಗುವ ಮುಂಚೆ, ಬಾಬ್‌ ಶಾ ರವರು 1966 ರಲ್ಲಿ ಪ್ರಕಟಿಸಿದ “ಲೈಟ್‌ ಆಫ್‌ ಅದರ್‌ ಡೇಸ್” ಎಂಬ ವೈಜ್ಞಾನಿಕ ಕಾದಂಬರಿಯಲ್ಲಿ ನಿರೂಪಿಸಿರುವ ಸಣ್ಣ ಕಥೆಯನ್ನು ತಿಳಿಯೋಣ.  ಶೈಕ್ಷಣಿಕ ಉದ್ದೇಶದಿಂದ ಮತ್ತು ಸಾಮಾನ್ಯ ಓದುಗರಿಗೆ ಸ್ಲೊ ಲೈಟ್‌, ಸ್ಲೊ ಗ್ಲಾಸ್‌ನ ಪರಿಕಲ್ಪನೆಯನ್ನು ಅಥೈ೯ಸುವ ದೃಷ್ಟಿಯಿಂದ ಈ ಕಥೆಯನ್ನು ಉಲ್ಲೇಖಿಸಲಾಗಿದೆ.  ಕಥೆಯು “ಸ್ಲೊ ಗ್ಲಾಸ್‌” ಎಂಬ ಕಲ್ಪನೆಯನ್ನು ಬಳಸುತ್ತದೆ.

ನಿರೂಪಕನು ತನ್ನ ಪತ್ನಿ ಸೆಲೀನಾಳೊಂದಿಗೆ ವಾಯುವ್ಯ (ನಾತ್‌೯ವೆಸ್ಟ್) ‌ ಸ್ಕಾಟ್ಲೆಂಡ್ ನಲ್ಲಿ ಪ್ರವಾಸವನ್ನು ಮಾಡುತ್ತಿರುತ್ತಾನೆ.  ಅವರ ಸಂಬಂಧ ಅಷ್ಟಾಗಿ ಸಂತೋಷಕರವಾಗಿರುವುದಿಲ್ಲ.  ಸೆಲೀನಾ ಗಭ೯ವತಿಯಾದ ವಿಷಯ, ಸಂಬಂಧವನ್ನು ಇನ್ನಷ್ಟು ಹದಗೆಡಿಸಿರುತ್ತದೆ.  ಸಂಬಂಧವನ್ನು ಸುಧಾರಿಸುವ ಉದ್ದೇಶದಿಂದ ರಜೆಯನ್ನು ತೆಗೆದುಕೊಂಡು, ಜೊತೆಯಲ್ಲಿ ವಿಹರಿಸಿದರೂ ಸಹ ಯಶಸ್ವಿಯಾಗಿರಲಿಲ್ಲ.  ದೂರದ ಪ್ರದೇಶದ ಮೂಲಕ ಪ್ರಯಾಣಿಸುವಾಗ, ಅವರಿಗೆ ನಿಧಾನ ಗಾಜಿನ (ಸ್ಲೊ ಗ್ಲಾಸ್)‌  ಫಲಕಗಳನ್ನು ಮಾರುವ ಸ್ಥಳವು ಕಾಣಿಸುತ್ತದೆ.  ನಿಧಾನ ಗಾಜಿನ ಫಲಕಗಳ ಮೂಲಕ ಬೆಳಕು ಹಾದು ಹೋಗಲು ಬಹಳ ವಷ೯ಗಳೇ ತೆಗೆದುಕೊಳ್ಳುತ್ತದೆ.  ಆದ್ದರಿಂದ, ಈ ಗಾಜಿನ ಫಲಕವು ಹಲವು ವಷ೯ಗಳ ಹಿಂದೆ ನಡೆದಂತಹ ಘಟನೆಗಳನ್ನು ತೋರಿಸುತ್ತದೆ.  ಉದಾಹರಣೆಗೆ, ಹತ್ತು ವಷ೯ದ ಗಾಜಿನ ಫಲಕ ಎಂದರೆ, ಈ ಗಾಜಿನ ಫಲಕದ ಮೂಲಕ ಬೆಳಕು ಹಾದು ಹೋಗಲು ಹತ್ತು ವಷ೯ಗಳು ತೆಗೆದು ಕೊಳ್ಳುತ್ತದೆ.  ಅಂದರೆ, ಈ ಗಾಜಿನ ಮೂಲಕ ನಾವು ಹತ್ತು ವಷ೯ಗಳ ಹಿಂದೆ ನಡೆದಂತಹ ಘಟನೆಗಳನ್ನು ಮತ್ತು ದೃಶ್ಯಗಳನ್ನು ನೋಡಬಹುದು.  ಹಾಗಾಗಿ, ಜನರು ಹಿಂದಿನ ವಷ೯ಗಳಲ್ಲಿ ನಡೆದಂತಹ ದೃಶ್ಯಗಳನ್ನು ಅಥವಾ ಘಟನೆಗಳನ್ನು ನೋಡಿ ಆನಂದಿಸುವ ಉದ್ದೇಶದಿಂದ ನಿಧಾನ ಗಾಜಿನ ಫಲಕಗಳನ್ನು ಖರೀದಿಸುತ್ತಿದ್ದರು. ನಿಧಾನ ಗಾಜಿನ ಫಲಕದ ಬೆಲೆ ಅದರ ದಪ್ಪದಿಂದ ನಿಧ೯ರಿಸಲಾಗುತ್ತಿತ್ತು.  ದಪ್ಪ ಹೆಚ್ಚಿದಷ್ಟು, ಬೆಲೆ ಹೆಚ್ಚು.  ಏಕೆಂದರೆ, ದಪ್ಪ ಹೆಚ್ಚಾದಷ್ಟು, ಫಲಕದ ಮೂಲಕ ಹಾದು ಹೋಗಲು ಬೆಳಕು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದರಿಂದ, ಬಹಳ ವಷ೯ಗಳ ಹಿಂದೆ ನಡೆದಂತ ದೃಶ್ಯಗಳನ್ನು ಅಥವಾ ಘಟನೆಗಳನ್ನು ವೀಕ್ಷಿಸಲು ಅವಕಾಶ ಸಿಗುತ್ತದೆ.  ನಿಧಾನ ಗಾಜಿನ ಫಲಕವನ್ನು ಖರೀದಿಸಿ, ಹಿಂದಿನ ದಿನಗಳ ಸಂತೋಷವಾಗಿರುವ ದೃಶ್ಯಗಳನ್ನು ನೋಡುವುದರ ಮೂಲಕ ಸಲೀನಾ ಜೊತೆಯಲ್ಲಿನ ಸಂಬಂಧವನ್ನು ಸರಿಪಡಿಸಬಹುದೆಂದು ನಿರೂಪಕ ಭಾವಿಸುತ್ತಾನೆ.

  ಗಾಜಿನ ಫಲಕಗಳನ್ನು ಮಾರುತ್ತಿದ್ದ ಹ್ಯಾಗನ್‌ ಅವರನ್ನು ಭೇಟಿಯಾಗುತ್ತಾರೆ.  ಮನೆಯ ಮುಂದೆ ತಗ್ಗು ಗೋಡೆಯ ಮೇಲೆ ಕುಳಿತು ಹ್ಯಾಗನ್‌ ಮನೆಯ ಕಡೆಗೆ ನೋಡುತ್ತಿರುತ್ತಾರೆ.  ಕಿಟಕಿಯ ಮೂಲಕ, ಒಬ್ಬ ಹೆಂಗಸು ಮತ್ತು ಒಬ್ಬ ಪುಟ್ಟ ಬಾಲಕನನ್ನು ನೋಡುತ್ತಿರುತ್ತಾರೆ.  ನಿರೂಪಕ ಮತ್ತು ಅವರ ಪತ್ನಿ ಸಲೀನಾ, ಹ್ಯಾಗನ್‌ ಕೊಟ್ಟ ಕಂಬಳಿಯ ಮೇಲೆ ಕುಳಿತುಕೊಳ್ಳುತ್ತಾರೆ.  ಹೆಂಗಸು ಮತ್ತು ಹುಡುಗ, ಬಹುಶ: ಹ್ಯಾಗನ್‌ನ ಪತ್ನಿ ಮತ್ತು ಅವರ ಮಗ ಇರಬಹುದೆಂದು ಊಹಿಸುತ್ತಾರೆ.  ನಿರೂಪಕನು ಗಾಜಿನ ಫಲಕವನ್ನು ಖರೀದಿಸಿ, ಕಾರಿನ ಕಡೆಗೆ ನಡೆಯುತ್ತಿರುವಾಗ, ಮಳೆ ಪ್ರಾರಂಭವಾಗುತ್ತದೆ.  ಆದ್ದರಿಂದ, ಕಂಬಳಿಯನ್ನು ಹಿಂತಿರುಗಿಸಲು, ಸೇಲಿನಾ ಮನೆಯ ಒಳಗೆ ಹೋಗುತ್ತಾಳೆ.  ಅವಳು ಮನೆಯ ಬಾಗಿಲನ್ನು ತೆಗೆದಾಗ, ಹ್ಯಾಗನ್‌ ಒಬ್ಬಂಟಿಯಾಗಿ ವಾಸಿಸುತ್ತಿದ್ದಾನೆ, ಹೆಂಡತಿ ಮತ್ತು ಮಗುವಿನ ಕುಟುಂಬದ ದೃಶ್ಯಗಳು ಹಲವಾರು ವಷ೯ಗಳ ಹಿಂದಿನದು, ನಿಧಾನವಾಗಿ ಫಲಕದ ಮೂಲಕ ನೋಡಲ್ಪಟ್ಟಿದೆ ಎಂಬ ಅಂಶ ಅರಿವಾಗುತ್ತದೆ.  ಹ್ಯಾಗನ್‌ ತನ್ನ ಹೆಂಡತಿ ಮತ್ತು ಮಗ ಆರು ವಷ೯ಗಳ ಹಿಂದೆ ಅಫಘಾತದಲ್ಲಿ ತೀರಿಕೊಂಡ ವಿಷಯವನ್ನು ಬಹಳ ದುಃಖದಿಂದ ತಿಳಿಸುತ್ತಾನೆ.  ತನ್ನ ಪತ್ನಿಯ ಜೊತೆ ನಡೆದುಕೊಂಡು ಹೋಗುತ್ತಿರುವ ನಿರೂಪಕನಿಗೆ ಅವರ ಸಂಬಂಧ ಬಲಗೊಂಡಿದೆ ಎಂದು ಅನಿಸುತ್ತದೆ.  ಹ್ಯಾಗನ್‌ ಕಡೆಗೆ ಹಿಂದೆ ತಿರುಗಿ ಧನ್ಯತಾ ಭಾವದಿಂದ ನೋಡುತ್ತಾನೆ.  ಬಹುಶಃ ಈ ನಿಧಾನ ಗಾಜಿನ ಕಥೆಯು ಲೆನೆ ಹೌ ನಿಧಾನ ಬೆಳಕಿನ ಬಗ್ಗೆ ಸಂಶೋಧನೆ ಮಾಡಲು ಸ್ಪೂತಿ೯ಯಾಗಿರಬಹುದೇನೋ?

ನಿವಾ೯ತದಲ್ಲಿ ಬೆಳಕಿನ ವೇಗ ಸೆಕೆಂಡಿಗೆ ಮೂರು ಲಕ್ಷ ಕಿ. ಮೀ.  ಆದರೆ, ಗಾಜು, ನೀರು, ವಜ್ರ ಹೀಗೆ ಪಾರದಶ೯ಕದ ಮಾಧ್ಯಮಗಳಲ್ಲಿ ಹಾದು ಹೋಗುವಾಗ, ಬೆಳಕಿನ ವೇಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.  ಇದರಿಂದ ವಕ್ರಿಭವನ ಉಂಟಾಗುತ್ತದೆ.  ಉದಾಹರಣೆಗೆ, ಗಾಜಿನಲ್ಲಿ ಸೆಕೆಂಡಿಗೆ ಎರಡು ಲಕ್ಷ ಕಿ. ಮೀ, ನೀರಿನಲ್ಲಿ 2.25 ಲಕ್ಷ ಕಿ.ಮೀ, ವಜ್ರದಲ್ಲಿ ಸೆಕೆಂಡಿಗೆ 1.25 ಲಕ್ಷ ಕಿ. ಮೀ. ಗೆ ಇಳಿಕೆಯಾಗುತ್ತದೆ.  ನಿವಾ೯ತದಲ್ಲಿನ ವೇಗ ಮತ್ತು ಪಾರದಶ೯ಕ ಮಾಧ್ಯಮದಲ್ಲಿನ ವೇಗಗಳ ಅನುಪಾತವನ್ನು ವಕ್ರಿ ಭವನ ಸೂಚ್ಯಂಕ (ರಿಫ್ರಾಕ್ಟಿವ್‌ ಇಂಡೆಕ್ಸ್)‌ ಎಂದು ಕರೆಯುತ್ತಾರೆ.  ಫೋಟಾನ್‌ಗಳ ಮತ್ತು ಮಾಧ್ಯಮದ ಅಣು / ಪರಮಾಣುಗಳ ನಡುವಿನ ಪರಸ್ವರ ಕ್ರಿಯೆಯಿಂದ ಬೆಳಕಿನ ವೇಗ ಕಡಿಮೆಯಾಗುತ್ತದೆ.  ವಕ್ರಿಭವನದ ಸೂಚ್ಯಂಕಗಳ ವ್ಯಾಪ್ತಿಯು ನಿಯಮಿತವಾಗಿರುವುದರಿಂದ ವಕ್ರಿಭವನದ ಸೂಚ್ಯಂಕವನ್ನು ಬದಲಾಯಿಸುವುದರ ಮೂಲಕವೇ ನಿಧಾನ ಬೆಳಕನ್ನು ಪಡೆಯಲು ಸಾಧ್ಯವಿಲ್ಲ.  ಹಾಗಾದರೆ ನಿಧಾನ ಬೆಳಕು ಎಂದರೇನು?  ಅದನ್ನು ಹೇಗೆ ಪಡೆಯಲಾಗಿದೆ ಎಂಬ ವಿಷಯಗಳ ಬಗ್ಗೆ ತಿಳಿಯೋಣ.

ದೃಗ್ವಿಜ್ಞಾನದಲ್ಲಿ ಬೆಳಕಿಗೆ ಸಂಬಂಧಿಸಿದಂತೆ ಎರಡು ರೀತಿಯ ವೇಗಗಳನ್ನು ಪ್ರಸ್ತಾಪಿಸಲಾಗಿದೆ:  ಹಂತದ ವೇಗ (ಫೇಜ್‌ ವೆಲಾಸಿಟಿ) ಮತ್ತು ಗುಂಪು ವೇಗ (ಗ್ರೂಪ್‌ ವೆಲಾಸಿಟಿ).  ಹಂತದ ವೇಗಕ್ಕೆ ಉದಾಹರಣೆ ಕೊಡುವುದಾದರೆ, ಒಂದು ತರಂಗದ ಶಿಖಿರವು ಪ್ರಯಾಣಿಸುವ ವೇಗ (Vp=c/n, C – ನಿವಾ೯ತದಲ್ಲಿ ಬೆಳಕಿನ ವೇಗ, n – ವಕ್ರಿಭವನದ ಸೂಚ್ಯಂಕ).  ಬೆಳಕಿನ ನಾಡಿಯು (‌ತರಂಗದ ಪಲ್ಸ್) ಸುಮಾರು ಸಮಾನ ಆವತ೯ನಗಳಿಂದ ಕೂಡಿದ ತರಂಗಗಳ ಹೊದಿಕೆಯ ಗುಂಪು. ಈ ಗುಂಪು ಪ್ರಸರಿಸುವ ವೇಗವನ್ನು ಗುಂಪುವೇಗ (ಗ್ರೂಪ್‌ ವೆಲಾಸಿಟಿ) ಎಂದು ಕರೆಯುತ್ತಾರೆ.  ಉದಾಹರಣೆಗೆ, ನೀರಿನ ಮೇಲೆ ಪ್ರಸರಿಸುವ ಅಲೆಗಳು.  ಗುಂಪು ವೇಗವು ವಕ್ರಿ ಭವನದ ಸೂಚ್ಯಂಕವು ಆವತ೯ನದೊಂದಿಗೆ ಬದಲಾಗುವ ದರಕ್ಕೆ ವಿಲೋಮವಾಗಿ ಸಂಬಂಧಿಸಿದೆ.  ಹಾಗಾಗಿ ವಕ್ರಿಭವನದ ಸೂಚ್ಯಂಕವು ಆವತ೯ನದೊಂದಿಗೆ ಬದಲಾಗುವ ದರವನ್ನು ಅಧಿಕ ಮತ್ತು ಧನಾತ್ಮಕವಾಗಿ ಮಾಡುವ ಮೂಲಕ ನಿಧಾನ ಬೆಳಕನ್ನು ಉತ್ಪತ್ತಿ ಮಾಡಲು ಸಾಧ್ಯವಾಗುತ್ತದೆ.  ನಿಧಾನ ಬೆಳಕಿನ ವೇಗ ಗುಂಪುವೇಗವನ್ನು ಸೂಚಿಸುತ್ತದೆ ಎಂಬ ಅಂಶವನ್ನು ನಾವು ಗಮನದಲ್ಲಿಡಬೇಕಾಗುತ್ತದೆ. 

ವಿಜ್ಞಾನಿ ಲೆನೆ ಹೌ ಮತ್ತು ಸಂಗಡಿಗರು ಮಾಡಿದ ಪ್ರಾಯೋಗಿಕ ಪ್ರಯತ್ನವಾದರೂ ಏನೆಂದರೆ, ನಿರಪೇಕ್ಷಶೂನ್ಯ ತಾಪಮಾನಕ್ಕೆ ಬಹಳ ಹತ್ತಿರವಾದ ತಾಪಮಾನಕ್ಕೆ (450 ನ್ಯಾನೊ ಕೆಲ್ವಿನ್‌, ಕ್ಲೋಸ್‌ ಟು ಆಬ್ಸ್ ಲ್ಯೂಟ್‌ ಜೀರೊ) ತಂಪಾಗಿಸಿದ ಸೋಡಿಯಂ ಪರಮಾಣುಗಳ ಮೋಡವನ್ನು ಸೃಷ್ಟಿಸಿದರು.  ಅಂದರೆ ನಿರಪೇಕ್ಷ ಶೂನ್ಯಕ್ಕಿಂತ ಕೆಲವು ಶತಕೋಟಿ ಡಿಗ್ರಿಯ ಒಳಗೆ.  ಈ ತಾಪಮಾನದಲ್ಲಿ ಬೇರೆ ಬೇರೆ ಇರುವ ಪರಮಾಣುಗಳು ಅಥವಾ ಉಪಪರಮಾಣುಗಳು, ಏಕೀಭವಿಸಿ, ಕ್ವಾಂಟಮ್‌ ವಸ್ತುವಾಗಿ ಪರಿವತ೯ನೆಗೊಳ್ಳುತ್ತದೆ.  ಈ ತಾಪಮಾನದಲ್ಲಿ ಪರಮಾಣುಗಳು ಕನಿಷ್ಠ ಶಕ್ತಿಯನ್ನು ಹೊಂದಿದ್ದು, ಬಹುತೇಕ ಚಲನೆಯನ್ನು ನಿಲ್ಲಿಸುತ್ತವೆ.  ಇದನ್ನು ಬೋಸ್‌ – ಐನ್‌ಸ್ಟೈನ್‌ ಕಂಡನ್ಸೇಟ್‌ ಎಂದು ಕರೆಯುತ್ತಾರೆ.  ನಮ್ಮ ದೇಶದ ಭೌತ ವಿಜ್ಞಾನಿ ಸತ್ಯೇಂದ್ರನಾಥ್‌ ಬೋಸ್‌ ರವರು ನೀಡಿದ್ದ ಕ್ವಾಂಟಮ್‌ ಸೂತ್ರೀ ಕರಣಗಳ (ಕ್ವಾಂಟಮ್‌ ಫಾಮು೯ಲೇಷನ್ಸ್) ಆಧಾರದ ಮೇಲೆ, 1924 ರಲ್ಲಿಯೇ ಆಲ್ಬಟ್‌೯ ಐನ್‍ಸ್ಟೈನ್ ಇಂತಹ ವಸ್ತು ಸ್ಥಿತಿಯನ್ನು ಸೃಷ್ಟಿಸಬಹುದೆಂದು ಮುನ್ಸೂಚನೆಯನ್ನು ನೀಡಿದ್ದ ಅಂಶವನ್ನು ನಾವು ಇಲ್ಲಿ ಸ್ಮರಿಸ ಬಹುದಾಗಿದೆ. 

ಬೋಸ್‌ – ಐನ್‍ಸ್ಟೈನ್ ಕಂಡೆನ್ಸೇಟ್‌ ಮೋಡದ ಮೂಲಕ ಲೇಸರ್‌ ಬೆಳಕನ್ನು ಹಾಯಿಸಿದಾಗ, ಬೆಳಕಿನ ನಾಡಿಯ ವೇಗವು ಸೆಕೆಂಡಿಗೆ ಕೇವಲ 17 ಮೀಟರ್‌ ಅಥವಾ ಗಂಟೆಗೆ 38 ಮೈಲಿ ವೇಗಕ್ಕೆ ಕಡಿಮೆಯಾಯಿತು.  ಮುಖ್ಯವಾದ ಅಂಶವೆಂದರೆ, ವಕ್ರಿಭವನದ ಸೂಚ್ಯಂಕವು ಅತ್ಯಂತ ಹೆಚ್ಚಿನ ಪ್ರಮಾಣ ದರದಲ್ಲಿ ಬದಲಾಗುವುದರಿಂದ ಇದು ಸಾಧ್ಯವಾಯಿತು.  ಬೆಳಕಿನ ವೇಗವನ್ನು ಕುಶಲತೆಯಿಂದ ಕಡಿಮೆ ಮಾಡಬಹುದೆಂದು ಜಗತ್ತಿಗೆ ತೋರಿಸಿದರು. ಮುಂದುವರೆದು, ಬೆಳಕನ್ನು ಸಂಪೂಣ೯ವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾದರು.  ನಂತರ ಪು‍ನಃ ಚಲಿಸುವಂತೆ ಮಾಡುವ ವಿಧಾನಗಳನ್ನು ಸಹ ಅಭಿವೃದ್ದಿ ಪಡಿಸಿದರು. 

ಕಳೆದ ವಷ೯ಗಳಲ್ಲಿ, ಬೆಳಕನ್ನು ನಿಧಾನಗೊಳಿಸಲು ವಿವಿಧ ತಂತ್ರಗಳನ್ನು ಅಭಿವೃದ್ದಿ ಪಡಿಸಲಾಗಿದೆ.  ಅವುಗಳಲ್ಲಿ ವಿದ್ಯುತ್ಕಾಂತೀಯ ಪ್ರೇರಿತ ಪಾರದಶ೯ಕತೆ (ಎಲೆಕ್ಟ್ರೋ ಮ್ಯಾಗ್ನಿಟಿಕಲಿ ಇಂಡ್ಶೂಸಡ್‌ ಟ್ರಾನ್ಸಫರೆನ್ಸಿ), ಬೋಸ್‌ ಐನ್‍ಸ್ಟೈನ್ ಕಂಡೆನ್ಸೇಟ್‌, ಪೋಟೊನಿಕ್‌ ಸ್ವಟಿಕಗಳು ಮತ್ತು ಪ್ರಚೋದಿತ ಬ್ರಿಲೌವಿಯನ್‌ ಸ್ಕಾಟರಿಂಗ್‌ ಸೇರಿವೆ.

ಇತ್ತೀಚಿನ ದಿನಗಳಲ್ಲಿ ನಿಧಾನ ಬೆಳಕನ್ನು ಪಡೆಯುವಲ್ಲಿ ಹೆಚ್ಚು ಆಸಕ್ತಿ ತೋರಿಸಲಾಗುತ್ತಿದೆ.  ಏಕೆಂದರೆ, ನಿಧಾನ ಬೆಳಕು ದ್ರವ್ಯ ಮತ್ತು ಬೆಳಕಿನ ಪರಸ್ವರ ಕ್ರಿಯೆಯನ್ನು ಉತ್ತೇಜಿಸುತ್ತದೆ.  ಹಾಗೂ ಪರಸ್ವರ ಕ್ರಿಯೆಯ ರೋಹಿತದ ಬ್ಯಾಂಡ್‌ ವಿಸ್ತೀಣ೯ದ ಮೇಲೆ ಹೆಚ್ಚುವರಿ ನಿಯಂತ್ರಣವನ್ನು ನೀಡುತ್ತದೆ.  ಹಾಗೂ ಪೋಟೊನಿಕ್‌ ಸಾಧನೆಗಳನ್ನು ಗಮನಾಹ೯ವಾಗಿ ಚಿಕ್ಕದಾಗಿಸುತ್ತದೆ.

ನಿಧಾನ ಬೆಳಕಿನ ಕೆಲವು ಉಪಯೋಗಗಳೆಂದರೆ: –

  1. ನಿಧಾನ ಬೆಳಕನ್ನು ಆಪ್ಟಿಕಲ್‌ ಸ್ಮರಣೆಗಳಲ್ಲಿ ಬಳಸಬಹುದು.
  2. ರೇಖಿಯ ಮತ್ತು ರೇಖಾತ್ಮಕ ವಲ್ಲದ ದೃಗ್ವಿಜ್ಞಾನ ಪರಿಣಾಮಗಳನ್ನು ಹೆಚ್ಚಿಸಲು ಬಳಸಬಹುದು.
  3.  ಆಪ್ಟಿಕಲ್‌ ಶಕ್ತಿಯ ಪ್ರಾದೇಶಿಕ ಸಂಕುಚಿತಕ್ಕೆ ಬಳಸಬಹುದು.

ಆಪ್ಟಿಕಲ್‌ ಬಫರ್ಸ್‌, ಆಪ್ಟಿಕಲ್‌ ಮೆಮೋರಿ, ಆಪ್ಟಿಕಲ್‌ ಸಿಗ್ನಲ್‌ ಪ್ರೊಸಸಿಂಗ್‌, ವಧಿ೯ತ ದತ್ತಾಂಶ ಪ್ರಸರಣ (ಎನ್‌ಹಾನ್ಸ್‌ ಡ್‌ ಡೇಟಾ ಟ್ರಾನ್ಸ್‌ ಮಿಷನ್‌), ಕ್ವಾಂಟಮ್‌ ಮಾಹಿತಿ ಸಂಸ್ಕರಣೆ (ಕ್ವಾಂಟಮ್‌ ಇನ್ ಫರ್ ಮೇಷನ್‌ ಪ್ರೊಸಸಿಂಗ್‌) ಇತ್ಯಾದಿ ಕ್ಷೇತ್ರಗಳಲ್ಲಿ ನಿಧಾನ ಬೆಳಕಿನ ತಂತ್ರಜ್ಞಾನವನ್ನು ಬಳಸಲು ಪ್ರಾರಂಭಿಸಿದ್ದಾರೆ. 

ಗಮನಿಸಿ:ಹೆಚ್ಚು ತಾಂತ್ರಿಕವಾಗಿ ವಿವರಿಸದೆ, ಸಾಮಾನ್ಯ ಓದುಗರನ್ನು ಗಮನದಲ್ಲಿಟ್ಟುಕೊಂಡು, ಲೇಖನವನ್ನು ಬರೆಯಲಾಗಿದೆ.

Previous articleಹಾಸನದ ಹೆಮ್ಮೆ ಸತ್ಯವತಿ ರಾಮನಾಥ
Next articleಗೆಲಿಲಿಯೋ– ಬಹುಮುಖಿ ಶಾಸ್ತ್ರಜ್ಞ
ಡಾ. ಬಿ. ಎಸ್ . ಶ್ರೀಕಂಠ
ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ. ಸಧ್ಯ ಬೆಂಗಳೂರಿನ ಇಂಡಿಯನ್ ಅಕಾಡೆಮಿ ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ .

LEAVE A REPLY

Please enter your comment!
Please enter your name here