ವಿಶ್ವ (ಯೂನಿವರ್ಸ್) ಅಂದರೆ ಬಾಹ್ಯಾಕಾಶ ಮತ್ತು ಕಾಲ (ಆಲ್ ಸ್ಪೇಸ್ ಮತ್ತು ಟೈಮ್) ಮತ್ತು ಎಲ್ಲಾ ವಸ್ತು ಮತ್ತು ಶಕ್ತಿ ( ಆಲ್ ಮ್ಯಾಟರ್ ಅಂಡ್ ಎನರ್ಜಿ). ಹದಿನಾಲ್ಕು ಶತಕೋಟಿ (ಹದಿನಾಲ್ಕು ಬಿಲಿಯನ್) ವರ್ಷಗಳ ಹಿಂದೆ ಬಿಗ್ ಬ್ಯಾಂಗ್ ಎಂಬ ತ್ವರಿತ ಮಹಾ ಸ್ಪೋಟದಲ್ಲಿ ವಿಶ್ವವು ಪ್ರಾರಂಭವಾಯಿತು. ಈ ವಿಶ್ವಕ್ಕೆ ಅಂತ್ಯವಿದೆಯೇ ಎಂಬ ಪ್ರಶ್ನೆ ಸಾವಿರಾರು ವರ್ಷಗಳಿಂದಲೂ ಕಾಡುತ್ತಲೇ ಬಂದಿದೆ. ಬಹುಶಃ ಮಾನವನು ಯೋಚಿಸಲು ಮೊದಲು ಮಾಡಿದ ದಿನದಿಂದಲೇ ಈ ಪ್ರಶ್ನೆ ಉದ್ಭವಿಸಿರಬಹುದು. ಕೆಲವರಿಗೆ ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಏಕೆ ತಲೆ ಕೆಡಿಸಿಕೊಳ್ಳಬೇಕು? ಎಂಬ ಆಲೋಚನೆ ಸಹ ಬಂದಿರಬಹುದು. ಈ ಪ್ರಶ್ನೆಗೆ ಮರು ಪ್ರಶ್ನೆ ಎಂದರೆ ತೇನ್ಸಿಂಗ್ ಎವರೆಸ್ಟ್ ಶಿಖರವನ್ನು ಏಕೆ ಏರಿದ? ಈ ಎರಡು ಪ್ರಶ್ನೆಗಳಿಗೆ ಒಂದೇ ಉತ್ತರ, ಅವುಗಳು ಇರುವುದರಿಂದ.
ಕೆಲವು ಅಂತ್ಯಗಳನ್ನು ಊಹಿಸುವುದು ಸುಲಭ. ಉದಾಹರಣೆಗೆ, ಚೆಂಡನ್ನು ಮೇಲಕ್ಕೆ ಎಸೆದರೆ, ಅದು ಮತ್ತೆ ಕೆಳಗೆ ಬೀಳುತ್ತದೆ. ಊದಿದ ಬೆಲೂನ್ ನ್ನು ಸೂಜಿಯಿಂದ ಚುಚ್ಚಿದರೆ ಅದು ಸಿಡಿಯುತ್ತದೆ. ಆದರೆ ವಿಶ್ವದ ಅಂತ್ಯವನ್ನು ಊಹಿಸುವುದು ಅಷ್ಟು ಸುಲಭವಲ್ಲ. ಆದರೂ, ಭೌತಶಾಸ್ತ್ರ, ಖಗೋಳವಿಜ್ಞಾನ (ಅಷ್ಟ್ರೋನಮಿ), ವಿಶ್ವವಿಜ್ಞಾನ (ಕಾಸ್ಮೋಲಜಿ) ಮುಂತಾದ ವಿಜ್ಞಾನ ಪ್ರಕಾರಗಳಲ್ಲಿ ಹೆಚ್ಚಿನ ಜ್ಞಾನವನ್ನು ಪಡೆಯಲು ವಿಜ್ಞಾನಿಗಳು ಸಫಲವಾಗಿರುವ ಕಾರಣ ವೈಜ್ಞಾನಿಕವಾಗಿ ವಿಶ್ವದ ಅಂತ್ಯ ಊಹಿಸಲು ಮತ್ತು ಸಿದ್ಧಾಂತಗಳನ್ನು ಪ್ರತಿಪಾದಿಸಲು ಸಾಧ್ಯವಾಗಿದೆ.
ಮಾನವನು ಆಕಾಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಲೇ ಬಂದಿದ್ದಾನೆ. ಉದಾಹರಣೆಗೆ, ಸೂರ್ಯೋದಯ, ಅಸ್ತಮಾನ, ಮಿನುಗುವ ನಕ್ಷತ್ರಗಳು, ಗ್ರಹಗಳು, ಉಲ್ಕೆಗಳು (ಮೀಟಿಯೊರ್), ಅಪರೂಪಕ್ಕೆ ಕಾಣುವ ಧೂಮಕೇತುಗಳು (ಕಾಮೆಟ್ಸ್), ಇತ್ಯಾದಿ. ಈ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ನೂರಾರು ವರ್ಷಗಳ ಸತತ ಮತ್ತು ಪ್ರಬುದ್ಧತೆಯಿಂದ ಕೂಡಿದ ಸಂಶೋಧನೆಗಳ ಮೂಲಕ ಅರ್ಥಮಾಡಿಕೊಳ್ಳುವಲ್ಲಿ ಮಾನವ ಅದ್ಭುತವಾದ ಸಾಧನೆಯನ್ನು ಮಾಡಿದ್ದಾನೆ ಎಂದರೆ ಅತಿಶಯೋಕ್ತಿಯಾಗಲಾರದು. ವಿಜ್ಞಾನಿಗಳು ಸಿದ್ಧಾಂತಗಳನ್ನು ಪ್ರತಿಪಾದಿಸಿ ವಿಶ್ವದ ಅಂತ್ಯದ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ, ತಿಳಿಯಲು ಪ್ರಯತ್ನಿಸೋಣ..
ವಿಶ್ವದ ಅಂತ್ಯವನ್ನು ವಿವರಿಸುವ ಮುಂಚೆ, ವಿಶ್ವದ ಜನನ, ಅದರ ದೈತ್ಯಾಕಾರದ ಗಾತ್ರ, ನಾವು ವಾಸಿಸುವ ಸೌರವ್ಯೂಹ ಮತ್ತು ಆಕಾಶದಲ್ಲಿ ಗೋಚರಿಸುವ ನಕ್ಷತ್ರಗಳು ಮತ್ತು ಅವುಗಳ ಜೀವನ ಚಕ್ರ ಇವುಗಳ ಬಗ್ಗೆ ಕೆಲವು ಅಂಶಗಳನ್ನು ತಿಳಿಯೋಣ.
ವಿಶ್ವವು ಒಂದು ಅಪಾರ ಮತ್ತು ದೈತ್ಯಾಕಾರದ ಅಸ್ತಿತ್ವ
ವಿಶ್ವವು ಎಷ್ಟು ದೊಡ್ಡದಾಗಿದೆ ಎಂಬುವುದರ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ಪಡೆಯೋಣ.
ಸೂರ್ಯ ಮತ್ತು ಭೂಮಿಗೆ ನಡುವೆ ಇರುವ ಅಂತರವನ್ನು (150 ಮಿಲಿಯನ್ ಕಿ. ಮೀ – ಒಂದು ಮಿಲಿಯನ್ ಅಂದರೆ ಹತ್ತು ಲಕ್ಷ) ಒಂದು ಅಸ್ಟ್ರೋನೊಮಿಕಲ್ ಏಕಮಾನ (ಎ. ಯೂ) ಎಂದು ಕರೆಯಲಾಗಿದೆ. ಈ ಲೆಕ್ಕದಲ್ಲಿ ಸೂರ್ಯನಿಗೂ ಮತ್ತು ಪ್ಲೂಟೊಗೆ ಇರುವ ಅಂತರ ನಲವತ್ತು ಎ. ಯೂ. ಗಳು. ಸೂರ್ಯಮಂಡಲ ಮತ್ತು ಅತ್ಯಂತ ಹತ್ತಿರದ ನಕ್ಷತ್ರ ಪ್ರೊಕ್ಸಿಮಾ ಸೆಂಟೌರಿಗೆ ಇರುವ ಅಂತರ ಮೂರು ಲಕ್ಷ ಎ. ಯೂ. ಗಳು. ನಾವಿರುವ ನಕ್ಷತ್ರಗಳ ಬೃಹತ್ ಸಮೂಹದ ಹೆಸರು ಆಕಾಶ ಗಂಗೆ ಅಥವಾ ಮಿಲ್ಕಿವೇ. ಇದನ್ನು ತಿಳಿಯಾಗಿರುವ ರಾತ್ರಿ ದಿನಗಳಲ್ಲಿ ಬಿಳಿ ಮೋಡದಂತೆ ಕಾಣಬಹುದು. ಗೆಲಕ್ಸಿ ಅಥವಾ ನಕ್ಷತ್ರಗಳ ಪುಂಜ ಎಂದರೆ ಲಕ್ಷಾಂತರ ನಕ್ಷತ್ರಗಳ ಸಮೂಹ. ನಮ್ಮ ಸೂರ್ಯ ಆಕಾಶಗಂಗೆ ಪುಂಜದಲ್ಲಿರುವ ಒಂದು ಅತಿ ಸಾಮಾನ್ಯವಾದ ನಕ್ಷತ್ರ. ಆಕಾಶಗಂಗೆ ನಕ್ಷತ್ರಪುಂಜದ ಗಾತ್ರ ಒಂದು ಲಕ್ಷ ಜ್ಯೋತಿ ವರ್ಷಗಳು. (ಒಂದು ಜ್ಯೋತಿವರ್ಷ ಎಂದರೆ, ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರ. ಒಂದು ಜ್ಯೋತಿ ವರ್ಷ 60000 ಎ. ಯೂ. ಗಳಿಗೆ ಸಮ. ಸೂರ್ಯ ಮತ್ತು ಭೂಮಿಯ ನಡುವೆ 60000 ಸಾರಿ ಓಡಾಡುವ ದೂರಕ್ಕೆ ಸಮ). ಒಂದು ಲಕ್ಷ ಜ್ಯೋತಿ ವರ್ಷಗಳೆಂದರೆ, ಆಕಾಶ ಗಂಗೆ ನಕ್ಷತ್ರ ಪುಂಜದ ಒಂದು ಕೊನೆಯಿಂದ ಅದರ ವಿರುದ್ಧವಿರುವ ಕೊನೆಗೆ ಕ್ರಮಿಸಲು ಬೆಳಕು ಒಂದು ಲಕ್ಷ ವರ್ಷಗಳು ತೆಗೆದುಕೊಳ್ಳುತ್ತದೆ. ಆಕಾಶ ಗಂಗೆಯಂತಹ ನಕ್ಷತ್ರಪುಂಜಗಳು ಬ್ರಹ್ಮಾಂಡದಲ್ಲಿ ಮಿಲಿಯನ್ ಮಿಲಿಯನ್ ಗಳಿವೆ. ಅಂದರೆ ವಿಶ್ವವೂ ಎಷ್ಟು ದೊಡ್ಡದಾಗಿದೆ ಎಂಬ ಅಂಶವನ್ನು ನಾವುಗಳು ಊಹಿಸಬಹುದು. ಇಂತಹ ದೈತ್ಯಾಕಾರದ ವಿಶ್ವವೂ ಹೇಗೆ ಅಂತ್ಯವಾಗಬಹುದು ಎಂಬ ದೊಡ್ಡ ಪ್ರಶ್ನೆಗೆ ಉತ್ತರವನ್ನು ಪಡೆಯಲು ಪ್ರಯತ್ನಿಸೋಣ.
ಸೂರ್ಯ (ಆದಿತ್ಯ) ಭೂಮಿಯ ಮೇಲಿರುವ ಜೀವರಾಶಿಗಳಿಗೆ ಆಧಾರ. ಭೂಮಿಯ ಮೇಲಿನ ಎಲ್ಲಾ ಚಟುವಟಿಕೆಗಳಿಗೆ ಮುಖ್ಯ ಕಾರಣ ಸೂರ್ಯ. ಸೂರ್ಯನಿಂದ ಬರುತ್ತಿರುವ ಶಾಖ ಮತ್ತು ಬೆಳಕು ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳಿಗೆ ಜೀವವನ್ನು ನೀಡುವ ಅಪಾರ ಶಕ್ತಿ. ಇಷ್ಟಾದರೂ, ವೈಜ್ಞಾನಿಕವಾಗಿ, ಸೂರ್ಯ ಅತಿ ಸಾಮಾನ್ಯವಾದ ನಕ್ಷತ್ರ. ಉರಿಯುತ್ತಿರುವ ಬಹಳ ದೊಡ್ಡ ಗಾತ್ರದ ಬೀಜಾಣು ಸಮ್ಮಿಳನದ ಶಕ್ತಿಯ ಕೇಂದ್ರ (ಸೆಂಟರ್ ಆಫ್ ನ್ಯೂಕ್ಲಿಯರ್ ಫ್ಯೂಷನ್ ಎನರ್ಜಿ). ಸೂರ್ಯನ ಮಧ್ಯಭಾಗದಲ್ಲಿ ಪ್ರತಿ ಸೆಕೆಂಡಿಗೆ ಸುಮಾರು ಆರುನೂರು ಮಿಲಿಯನ್ ಟನ್ ಗಳಷ್ಟು ಜಲಜನಕ (ಹೈಡ್ರೋಜನ್) ಹೀಲಿಯಂ ಆಗಿ ಪರಿವರ್ತನೆಗೊಳ್ಳುತ್ತದೆ ಎಂದು ಅಂದಾಜು ಮಾಡಲಾಗಿದೆ. ಇಲ್ಲಿ ಸುಮಾರು ನಾಲ್ಕು ಮಿಲಿಯನ್ ದ್ರವ್ಯವು ನೇರವಾಗಿ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ (ಐನ್ ಸ್ಟೀನ್ ನ ದ್ರವ್ಯ ಮತ್ತು ಶಕ್ತಿಯ ಸಮೀಕರಣದ ಪ್ರಕಾರ). ಇದೇ, ಸೂರ್ಯನಿಂದ ಬರುವ ಬೆಳಕು ಮತ್ತು ಶಾಖಗಳಿಗೆ ಕಾರಣ. ಈ ಕ್ರಿಯೆ ಸುಮಾರು ಐದು ಶತಕೋಟಿ ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ಮುಂದೆಯೂ ಸಹ ಇನ್ನು ಐದು ಶತಕೋಟಿ ವರ್ಷಗಳು ನಿರಂತರವಾಗಿ ನಡೆಯುತ್ತದೆ ಎಂದು ಅಂದಾಜು ಮಾಡಲಾಗಿದೆ. ನಂತರ ಏನಾಗುತ್ತದೆ? ಸೂರ್ಯನ ಅಂತ್ಯವಾಗುವುದೇ? ಎಂಬುವುದು ಕೂಡ ಕುತೂಹಲಕಾರಿಯಾದ ಪ್ರಶ್ನೆ.
ನಕ್ಷತ್ರಗಳ ಜನನ ಮತ್ತು ಅವುಗಳ ಜೀವನ ಚಕ್ರ

ನಕ್ಷತ್ರದ ಜೀವನವು ಹೈಡ್ರೋಜನ್, ಹೀಲಿಯಂ ಮತ್ತು ಕೆಲವು ಭಾರವಾದ ಅಂಶದ ಕುರುಹುಗಳನ್ನು ಒಳಗೊಂಡಿರುವ ವಸ್ತುವಿನ ಅನಿಲ. ನಿಹಾರಿಕೆಯ (ನೆಬ್ಯುಲಾ – ಧೂಳು, ಅನಿಲ ಮತ್ತು ಪ್ಲಾಸ್ಮಾದಿಂದ ಕೂಡಿರುವ ಬೃಹತ್ ಮೋಡ) ಗುರುತ್ವಾಕರ್ಷಣೆಯ ಕುಸಿತದೊಂದಿಗೆ ನಕ್ಷತ್ರದ ಜನನ ಪ್ರಾರಂಭವಾಗುತ್ತದೆ. ಅನಿಲ ಮತ್ತು ಧೂಳಿನಿಂದ ಕೂಡಿದ ವಿಶಾಲವಾದ ತಂಪಾದ ಮೋಡದೊಳಗೆ ನಕ್ಷತ್ರವೊಂದು ಜನಿಸುತ್ತದೆ. ನೀಹಾರಿಕೆಯಲ್ಲಿನ ಗುರುತ್ವಾಕರ್ಷಣೆಯ ಬಲ ಮೋಡವನ್ನು ಸಂಕುಚಿತಗೊಳಿಸಿ, ತನ್ನದೇ ಆದ ಗುರುತ್ವಾಕರ್ಷಣೆಯ ಬಲದಿಂದ ದ್ರವ್ಯವನ್ನು ಹಿಡಿದಿಡಲಾಗುತ್ತದೆ. ನೀಹಾರಿಕೆ ಕುಸಿದಂತೆ, ಅದರೊಳಗಿನ ಅನಿಲ ಮತ್ತು ಧೂಳಿನ ಕಣಗಳು ಒಟ್ಟಿಗೆ ಸೇರಿಕೊಂಡು ದಟ್ಟವಾದ ಕೋರನ್ನು (ಮಧ್ಯಭಾಗ) ರೂಪಿಸುತ್ತದೆ. ಇದು ಒಳಮುಖ ಗುರುತ್ವಾಕರ್ಷಣೆಯ ಬಲದಿಂದ ನಡೆಯುವ ಪ್ರಕ್ರಿಯೆ. ಕುಸಿಯುತ್ತಿರುವ ನೀಹಾರಿಕೆಯ ಮಧ್ಯಭಾಗವು ಸಂಕುಚಿತಗೊಳ್ಳುತ್ತಲೇ ಇರುವ ಕಾರಣ, ಅದರ ಉಷ್ಣತೆಯು ಹೆಚ್ಚಾಗಿ, ಪ್ರೋಟೋ ಸ್ಟಾರ್ ರೂಪಗೊಳ್ಳುತ್ತದೆ. ಇದು ನಕ್ಷತ್ರದ ಆರಂಭಿಕ ಹಂತ. ಪ್ರೋಟೋಸ್ಟಾರ್ ಸುತ್ತಲೂ ಅನಿಲ ಮತ್ತು ಧೂಳಿನಿಂದ ಕೂಡಿರುವ ಸಂಚಯನ್ ಡಿಸ್ಕ್ (ಅಕ್ರಿಷನ್ ಡಿಸ್ಕ್) ಇರುತ್ತದೆ. ಸಂಚಯ ಡಿಸ್ಕ್ ನಿಂದ ಹೆಚ್ಚಿನ ವಸ್ತುಗಳನ್ನು ಪ್ರೋಟೋ ಸ್ಟಾರ್ ಸಂಗ್ರಹಿಸುವುದರಿಂದ ಅದು ಬೆಳೆಯುತ್ತಲೇ ಇರುತ್ತದೆ. ಕೋನಿಯ ಆವೇಗದ ಸಂರಕ್ಷಣೆಯು (ಕನ್ಸರ್ವೇಷನ್ ಆಫ್ ಆಂಗ್ಯುಲರ್ ಮೊಮೆಂಟಂ) ಡಿಸ್ಕ್ ಮತ್ತು ಪ್ರೋಟೋಸ್ಟಾರ್ ಸಂಕುಚಿತಗೊಂಡಂತೆ, ವೇಗವಾಗಿ ತಿರುಗಲು ಕಾರಣವಾಗುತ್ತದೆ. ಪ್ರೋಟೋಸ್ಟಾರ್ ನ ಮಧ್ಯಭಾಗವು ಸುಮಾರು ಹದಿನೈದು ಮಿಲಿಯನ್ ಕೆಲ್ವಿನ್ ತಾಪಮಾನವನ್ನು ತಲುಪಿದಾಗ ಥರ್ಮೋ ಬೀಜಾಣು ಸಮ್ಮಿಳನ ಪ್ರಕ್ರಿಯೆ (ಥರ್ಮೋ ನ್ಯೂಕ್ಲಿಯರ್ ಪ್ಯೂಷನ್ ಪ್ರತಿಕ್ರಿಯೆ) ಪ್ರಾರಂಭವಾಗುತ್ತದೆ. ಧರ್ಮೋ ಬೀಜಾಣು ಸಮ್ಮಿಳನ ಪ್ರಕ್ರಿಯೆ ಎಂದರೆ ಅತ್ಯಂತ ಹೆಚ್ಚಿನ ತಾಪಮಾನದಲ್ಲಿ ಎರಡು ಅಥವಾ ಹೆಚ್ಚು ಹಗುರವಾದ ಪರಮಾಣುಗಳ ನ್ಯೂಕ್ಲಿಯಸ್ ಗಳ (ಬೀಜಾಣುಗಳು) ಸಂಯೋಜನೆಗೊಂಡು ಅಥವಾ ಒಗ್ಗೂಡಿ ಭಾರವಾದ ನ್ಯೂಕ್ಲಿಯಸ್ ಅನ್ನು ಸೃಷ್ಟಿಸುವ ಪ್ರಕ್ರಿಯೆ. ಮಧ್ಯಭಾಗದಲ್ಲಿರುವ ಜಲಜನಕ ಬೀಜಾಣುಗಳು ಸಂಯೋಜನೆಗೊಂಡು ಹೀಲಿಯಂ ಆಗಿ ಪರಿವರ್ತನೆಯಾಗುತ್ತದೆ. ಇದರ ಪರಿಣಾಮದಿಂದ ಅಪಾರ ಪ್ರಮಾಣದಲ್ಲಿ ಬೆಳಕು ಮತ್ತು ಶಕ್ತಿ ಬಿಡುಗಡೆಯಾಗುತ್ತದೆ. ಇದು ನಕ್ಷತ್ರದ ಜನನವನ್ನು ಸೂಚಿಸುತ್ತದೆ. ಇದನ್ನು ಮುಖ್ಯ ಅನುಕ್ರಮ ನಕ್ಷತ್ರ (ಮೈನ್ ಸೀಕ್ವೆನ್ಸ್ ಸ್ಟಾರ್) ಎಂದು ಕರೆಯುತ್ತಾರೆ. ಅಪಾರವಾದ ಶಕ್ತಿಯಿಂದ ಉಂಟಾಗುವ ಬಾಹ್ಯ ಒತ್ತಡವು (ಔಟ್ ವರ್ಡ್ ಪ್ರೆಷರ್ – ರೇಡಿಯೇಷನ್ ಒತ್ತಡ) ಗುರುತ್ವಾಕರ್ಷಣೆಯಿಂದ ಉಂಟಾಗುವ ಒಳಮುಖ ಒತ್ತಡವನ್ನು (ಇನ್ ವರ್ಡ್ ಪ್ರೆಷರ್) ಸಮತೋಲನಗೊಳಿಸಿದಾಗ ಹೊಸದಾಗಿ ರೂಪುಗೊಂಡ ನಕ್ಷತ್ರವು ಸ್ಥಿರ ಸ್ಥಿತಿಯನ್ನು (ಈಕ್ವಿಲಿ ಬ್ರಿಯಂ ಸ್ಟೇಟ್) ತಲುಪುತ್ತದೆ. ಬಾಹ್ಯ ಮತ್ತು ಒಳಮುಖ ಒತ್ತಡಗಳು ಸಮತೋಲನವಾಗಿರುವವರವಿಗೂ, ನಕ್ಷತ್ರಗಳು ಸ್ಥಿರ ಸ್ಥಿತಿಯಲ್ಲಿದ್ದು, ಅವುಗಳ ದ್ರವ್ಯರಾಶಿಯನ್ನು ಅವಲಂಬಿಸಿ, ಲಕ್ಷಾಂತರದಿಂದ ಶತಕೋಟಿ ವರ್ಷಗಳವರೆಗೆ ತನ್ನ ಮಧ್ಯಭಾಗದಲ್ಲಿರುವ ಜಲನಜನಕ ಸುಡುವಿಕೆ ಮುಂದುವರೆಯುತ್ತದೆ. ಆದರೆ ಈ ಒತ್ತಡಗಳ ಸಮತೋಲನ ಶಾಶ್ವತವಾಗಿರುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಜಲಜನಕ ಹೀಲಿಯಂ ಆಗಿ ಪರಿವರ್ತನೆಯಾದ ನಂತರ, ಥರ್ಮೋ ಬೀಜಾಣು ಸಮ್ಮಿಳನ ಪ್ರತಿಕ್ರಿಯೆ ನಿಲ್ಲುತ್ತದೆ. ಇದರಿಂದ ಮುಂದಿನ ಪೀಳಿಗೆಯ ನಕ್ಷತ್ರ ಜನನವಾಗುತ್ತದೆ.
ಹೆಚ್ಚಿನ ಪ್ರಮಾಣದಲ್ಲಿ ಜಲಜನಕ ಹೀಲಿಯಂ ಆಗಿ ಪರಿವರ್ತನೆಗೊಂಡು, ಥರ್ಮೋ ನ್ಯೂಕ್ಲಿಯಕ್ ಬರ್ನಿಂಗ್ ನಿಂತು ಹೋದಾಗ, ಗುರುತ್ವಾಕರ್ಷಣೆಯ ಬಲ ಹೆಚ್ಚಾಗಿ ರೇಡಿಯೇಷನ್ ಮೂಲಕ ಉಂಟಾದ ಬಾಹ್ಯ ಒತ್ತಡ ಕಡಿಮೆಯಾಗಿ, ಗುರುತ್ವಾಕರ್ಷಣೆಯ ಬಲವು ಮೇಲುಗೈ ಹೊಂದುತ್ತದೆ. ಇದರ ಪರಿಣಾಮದಿಂದಾಗಿ, ನಕ್ಷತ್ರವು ಮತ್ತೆ ಸಂಕುಚಿಸಲು ಪ್ರಾರಂಭಗೊಳ್ಳುತ್ತದೆ. ಇದರಿಂದ ನಕ್ಷತ್ರದ ಕೇಂದ್ರ ಬಿಂದುವಿನಲ್ಲಿ ಉಷ್ಣತೆ ಹೆಚ್ಚಾಗಿ, ಹೊರ ವಲಯದಲ್ಲಿರುವ ಜಲಜನಕದ ಪದರ ಉರಿಯಲು ಪ್ರಾರಂಭವಾಗಿ, ಈ ಪದರ ವಿಕಸನಗೊಳ್ಳುತ್ತದೆ. ಕೇಂದ್ರದಲ್ಲಿ ದ್ರವ್ಯವು ಸಂಕುಚಿತವಾಗುತ್ತಾ, ಹೊರ ವಲಯದ ಪದರ ವಿಕಸನವಾಗುತ್ತಾ, ಕೊನೆಗೆ ನಕ್ಷತ್ರವು ದೈತ್ಯಾಕಾರವಾಗಿ ಕಾಣುವಂತೆ ಮಾಡುತ್ತದೆ. ಈ ದೈತ್ಯ ನಕ್ಷತ್ರದ ಪ್ರಕಾಶಮಾನವು ಕಡಿಮೆಯಿದ್ದು ಕೆಂಪು ಬಣ್ಣವನ್ನು ಹೊಂದಿರುತ್ತದೆ. ಇದನ್ನು ಕೆಂಪು ದೈತ್ಯ (ರೆಡ್ ಜೈಂಟ್) ಎಂದು ಕರೆಯುತ್ತಾರೆ. ಉದಾಹರಣೆಗೆ, ಒರಿಯನ್ ನಕ್ಷತ್ರ ಪುಂಜದಲ್ಲಿರುವ ಬೆಟೆಲ್ ಗ್ಯೂಸ್ (ಆರ್ದ್ರಾ ನಕ್ಷತ್ರ). ನಮ್ಮ ಸೂರ್ಯ ರೆಡ್ ಜೈಂಟ್ ಆದಾಗ ಅದರ ತ್ರಿಜ್ಯ ಗುರು ಗ್ರಹ ಸೂರ್ಯನೂ ಸುತ್ತಲೂ ಸುತ್ತುವ ಕಕ್ಷೆಯ ತ್ರಿಜ್ಯಕ್ಕೆ ಸಮನಾಗಿರುತ್ತದೆ. ಥರ್ಮೋ ನ್ಯೂಕ್ಲಿಯರ್ ಬರ್ನಿಂಗ್ ಹಲವು ಹಂತಗಳಲ್ಲಿ ನಡೆಯುತ್ತದೆ. ಒಂದು ಹಂತದಲ್ಲಿ ನಡೆಯುವ ಥರ್ಮೋ ನ್ಯೂಕ್ಲಿಯರ್ ಬರ್ನಿಂಗ್ ಗೆ ಒದಗಿಸುವ ಇಂಧನ ವಸ್ತುಗಳು (ಎಲಿಮೆಂಟ್ಸ್) ಖಾಲಿಯಾದ ನಂತರ, ನಕ್ಷತ್ರದ ಕೇಂದ್ರ (ಕೋರ್) ಗುರುತ್ವಾಕರ್ಷಣೆ ಬಲದಿಂದ ಸಂಕುಚಿತಗೊಳ್ಳುತ್ತದೆ. ಮುಂದಿನ ಥರ್ಮೋ ನ್ಯೂಕ್ಲಿಯರ್ ಕ್ರಿಯೆಯು ಪ್ರಾರಂಭವಾಗುವ ವರವಿಗೂ ಸಂಕುಚಿತ ಪ್ರಕ್ರಿಯೆ ಮತ್ತೆ ಮತ್ತೆ ನಡೆಯುತ್ತದೆ. ಭಾರವಾದ ದ್ರವ್ಯಗಳು ಸೃಷ್ಠಿಯಾಗುತ್ತಿರುತ್ತವೆ. ಕೊನೆಯ ಹಂತದಲ್ಲಿ ಕೇಂದ್ರದಲ್ಲಿರುವ ದ್ರವ್ಯವು ಕಬ್ಬಿಣವಾಗಿ ಮಾರ್ಪಾಡುವಾಗುವವರೆವಿಗೂ ಬರ್ನಿಂಗ್ ಹಂತ ಹಂತವಾಗಿ ನಡೆಯುತ್ತದೆ. ಎಲ್ಲಾ ನಕ್ಷತ್ರಗಳು ಇದೇ ರೀತಿಯಾಗಿ ಪ್ರಕ್ರಿಯೆಯ ಚಕ್ರವನ್ನು ಅನುಸರಿಸಿ ಕೊನೆಗೊಳ್ಳುತ್ತವೆಯಾ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ನಕ್ಷತ್ರದ ಆರಂಭಿಕ ದ್ರವ್ಯ ರಾಶಿಯ ಮೇಲೆ ಅವಲಂಬಿಸಿರುತ್ತದೆ. ಧರ್ಮೋ ನ್ಯೂಕ್ಲಿಯರ್ ಇಂಧನ ಮುಗಿದ ನಂತರ, ನಕ್ಷತ್ರದಲ್ಲಿ ಆಂತರಿಕವಾಗಿ ನಡೆಯುವ ದೊಡ್ಡ ಪ್ರಮಾಣದ ಉರಿಯುವಿಕೆ ನಿಂತು ಹೋಗುತ್ತದೆ. ಇದರಿಂದ ಬಾಹ್ಯ ಒತ್ತಡ ಕಡಿಮೆಯಾಗಿ ನಕ್ಷತ್ರ ಪುನಃ ಸಂಕುಚಿಸಲು ಪ್ರಾರಂಭಿಸುತ್ತದೆ. ಉರಿಯುವಿಕೆ ಇಲ್ಲದ ಕಾರಣ, ನಕ್ಷತ್ರವು ಸಂಕುಚಿಸಿ ಬಿಂದುವಾಗಿ ಪರಿವರ್ತನೆಗೊಳ್ಳುತ್ತದೆಯೋ ಎಂಬ ಪ್ರಶ್ನೆ ಉದ್ಭವಿಸಬಹುದು. ಉತ್ತರ, ಹಾಗೆ ಆಗುವುದಿಲ್ಲ. ಈ ಪ್ರಶ್ನೆಗೆ ಉತ್ತರ 1927ರಲ್ಲಿ ಇಂಗ್ಲೆಂಡಿನ ವಿಜ್ಞಾನಿ ಪೌಲರ್ ಕಂಡುಹಿಡಿದರು. ನಕ್ಷತ್ರದ ಶವವು (ಸ್ಟಾರ್ಸ್ ಕಾರ್ಪ್ಸ್) ಅತಿ ಕಡಿಮೆ ಗಾತ್ರಕ್ಕೆ ಸಂಕುಚಿಸಿದಾಗ, ಹೊಸ ರೀತಿಯ ಕ್ವಾಂಟಮ್ ಮೆಕಾನಿಕಲ್ ಪರಿಣಾಮದ ಡೀಜನರಸಿ ಒತ್ತಡ ಉಂಟಾಗುತ್ತದೆ. ಇದರಿಂದ ನಕ್ಷತ್ರ ಸಂಕುಚಿಸುವುದು ನಿಂತು, ನಿರ್ದಿಷ್ಟ ತ್ರಿಜ್ಯವುಳ್ಳ ಗೋಲವಾಗುತ್ತದೆ. ಇದನ್ನು ಶ್ವೇತ ಕುಬ್ಜ (ವೈಟ್ ಡ್ವಾರ್ಪ್) ಎಂದು ಕರೆಯುತ್ತಾರೆ. ದೊಡ್ಡ ಪ್ರಮಾಣದ ದ್ರವ್ಯರಾಶಿಯು ಅತಿ ಕಡಿಮೆ ಗಾತ್ರದಲ್ಲಿ ಶೇಖರಣೆಯಾಗಿರುವುದರಿಂದ ಶ್ವೇತಾ ಕುಬ್ಜದಲ್ಲಿನ ದ್ರವ್ಯದ ಸಾಂಧ್ರತೆ ಹಲವು ಸಾವಿರ ಕಿ.ಗ್ರಾ/ ಸಿ.ಸಿ ಇರುತ್ತದೆ. ಮೊಟ್ಟ ಮೊದಲನೆಯದಾಗಿ ಕಂಡುಹಿಡಿದ ಶ್ವೇತ ಕುಬ್ಜ, ಸಿರಿಯಸ್ ನಕ್ಷತ್ರದ ಒಡನಾಡಿ ಅಥವಾ ಸಂಗಾತಿ ನಕ್ಷತ್ರ (ಸೀರಿಯಸ್ ಅವಳಿ ನಕ್ಷತ್ರಗಳಲ್ಲಿ ಒಂದು). ಶ್ವೇತ ಕುಬ್ಜದಲ್ಲಿ ಡೀಜನರಸಿ ಒತ್ತಡ ಬಹಳ ಮುಖ್ಯ. ಇದರಿಂದ ನಕ್ಷತ್ರ ನಿರ್ದಿಷ್ಟ ಗಾತ್ರವನ್ನು ಪಡೆಯುತ್ತದೆ. ಕೇಂದ್ರದಲ್ಲಿ ಹೀಲಿಯಂ, ಇಂಗಾಲ ಮತ್ತಿತರ ಧಾತುಗಳು ಇರುತ್ತವೆ. ಮುಂದಿನ ಪ್ರಶ್ನೆ ಎಲ್ಲಾ ನಕ್ಷತ್ರಗಳು ಶ್ವೇತ ಕುಬ್ಜವಾಗಿ ಕೊನೆಗೊಳ್ಳುತ್ತವೆಯೇ? ಉತ್ತರ ಖಂಡಿತವಾಗಿ ಇಲ್ಲ. ನಕ್ಷತ್ರದ ದ್ರವ್ಯ ರಾಶಿಯ ಮೇಲೆ ಅವಲಂಬಿಸಿರುತ್ತದೆ. ಇದಕ್ಕೆ ಉತ್ತರ, ನಮ್ಮ ಭಾರತೀಯ ವಿಜ್ಞಾನಿ ಎಸ್. ಚಂದ್ರಶೇಖರ್ ರವರು ನೀಡಿದ್ದಾರೆ. ಚಂದ್ರಶೇಖರ್ ರವರ ಪ್ರಕಾರ ನಕ್ಷತ್ರವು ಕುಬ್ಜವಾಗಿ ಪರಿವರ್ತನೆಗೊಳ್ಳಲು ಸಂಕುಚಿಸುವ ಹಂತದಲ್ಲಿ, ಸೂರ್ಯನ ದ್ರವ್ಯದ 1.44 ಪಟ್ಟುಗಿಂತಲೂ ಹೆಚ್ಚಾಗಿ ದ್ರವ್ಯರಾಶಿ ಹೊಂದಿದ್ದರೆ, ಕೊರ್ ನಲ್ಲಿ ಗುರುತ್ವಾಕರ್ಷಣೆಯನ್ನು ವಿರೋಧಿಸಲು ಸಾಧ್ಯವಿಲ್ಲ. ಇದನ್ನು ಚಂದ್ರಶೇಖರ್ ಮಿತಿಯೆಂದು (ಚಂದ್ರಶೇಖರ್ ಲಿಮಿಟ್) ಕರೆಯುತ್ತಾರೆ. ಇದರಿಂದಾಗಿ ಕೋರ್ ಕುಸಿಯುತ್ತದೆ ಮತ್ತು ಸಂಭಾವ್ಯವಾಗಿ ಸೂರ್ಪನೋವಾ ಅಥವಾ ನ್ಯೂಟ್ರಾನ್ ನಕ್ಷತ್ರ ಅಥವಾ ಕಪ್ಪುಕುಳಿ (ಬ್ಲ್ಯಾಕ್ ಹೋಲ್) ಆಗಬಹುದು.

Image of Sirius system taken by the Hubble telescope. Sirius B, which is the closest white dwarf, can be seen as faintest point of light to the lower left of the much brighter Sirius A
ನಕ್ಷತ್ರದ ದ್ರವ್ಯರಾಶಿಯು ಚಂದ್ರಶೇಖರ್ ಮಿತಿಯನ್ನು ದಾಟಿದಾಗ (ಸೂರ್ಯನ ದ್ರವ್ಯ ರಾಶಿಯ 1.44 ಪಟ್ಟು) ಡೀಜನರಸಿ ಒತ್ತಡವು, ಗುರುತ್ವಾಕರ್ಷಣೆಯಿಂದಾಗುವ ಸಂಕುಚಿತೆಯನ್ನು ತಡೆಯಲು ಸಾಧ್ಯವಿಲ್ಲ. ಗುರುತ್ವಾಕರ್ಷಣೆಯ ಪರಿಣಾಮದಿಂದ ನಕ್ಷತ್ರವು ಸಂಕುಚಿಸಿದಾಗ ಪ್ರೋಟಾನ್ ಮತ್ತು ಎಲೆಕ್ಟ್ರಾನ್ ಗಳು ಸಂಯೋಜನೆಗೊಂಡು ನ್ಯೂಟ್ರಾನುಗಳು ಉತ್ಪತ್ತಿಯಾಗುತ್ತವೆ. ಈ ಹಂತದಲ್ಲಿ ದ್ರವ್ಯವು ನ್ಯೂಟ್ರಾನ್ ಗಳಿಂದ ಕೂಡಿರುತ್ತದೆ. ಹೊರಗಿನ ಪ್ರದೇಶದಲ್ಲಿ ಕೆಲವು ಪ್ರೋಟಾನ್ ಮತ್ತು ಎಲೆಕ್ಟ್ರಾನ್ ಗಳು ಇರಬಹುದು, ಇದನ್ನು ನ್ಯೂಟ್ರಾನ್ ನಕ್ಷತ್ರ ಎಂದು ಕರೆಯುತ್ತಾರೆ. ನ್ಯೂಟ್ರಾನ್ ನಕ್ಷತ್ರದಲ್ಲಿಯೂ ಸಹ ಡೀಜನರಸಿ ಒತ್ತಡದಿಂದ ನಕ್ಷತ್ರವು ಸ್ಥಿರವಾಗಿರುತ್ತದೆ. ಇದರ ತ್ರಿಜ್ಯವು ಕೇವಲ 20-30 ಕಿ. ಮೀ. ಗಳಷ್ಟು ಇರುತ್ತದೆ. ನ್ಯೂಟ್ರಾನ್ ನಕ್ಷತ್ರಗಳು ಬ್ರಹ್ಮಾಂಡದ ಎರಡನೇ ಅತ್ಯಂತ ದಟ್ಟವಾದ (ಹೆಚ್ಚು ಸಾಂದ್ರತೆ ಹೊಂದಿರುವ) ಕಾಯಗಳಾಗಿವೆ. ನ್ಯೂಟ್ರಾನ್ ನಕ್ಷತ್ರದ ಒಂದು ಟೀ ಸ್ಪೂನ್ ನಷ್ಟು ದ್ರವ್ಯವು ಸುಮಾರು ಒಂದು ಶತ ಕೋಟಿ ಟನ್ ಗಳಷ್ಟು ದ್ರವ್ಯರಾಶಿ ಹೊಂದಿರುತ್ತದೆ. ಒಂದು ಶತಕೋಟಿ ಟನ್ ತೂಕವಿರುತ್ತದೆ. 1934 ರಲ್ಲಿ ಸ್ವಿಡ್ಜರ್ ಲ್ಯಾಂಡ್ ದೇಶದ ಜಿಕ್ವೆ ಮತ್ತು ಜರ್ಮನ್ ದೇಶದ ವಾಲ್ಟರ್ ಬಾಡೆ ಎಂಬ ವಿಜ್ಞಾನಿಗಳು ನ್ಯೂಟ್ರಾನ್ ನಕ್ಷತ್ರದ ಕಲ್ಪನೆಗಳನ್ನು ನೀಡಿದರು. ನ್ಯೂಟ್ರಾನ್ ನಕ್ಷತ್ರಗಳನ್ನು ಪಲ್ಸಾರ್ ಎಂದು ಸಹ ಕರೆಯುತ್ತಾರೆ. ಈಗಾಗಲೇ ಉಲ್ಲೇಖಿಸಿರುವಂತೆ, ನಕ್ಷತ್ರಗಳ ಜೀವನ ಚಕ್ರದ ಕೊನೆಯ ಹಂತದ ಸ್ಥಿತಿ ಅದರ ಆರಂಭಿಕ ದ್ರವ್ಯ ರಾಶಿಯ ಮೇಲೆ ಅವಲಂಬಿಸಿರುತ್ತದೆ.
ನಕ್ಷತ್ರಗಳನ್ನು ಕಡಿಮೆ ಭಾರದ ನಕ್ಷತ್ರಗಳು (ಸೂರ್ಯನ ಭಾರದ ಸುಮಾರು 6 – 8 ಪಟ್ಟುಗಿಂತ ಕಡಿಮೆ ಭಾರವಿರುವ ನಕ್ಷತ್ರಗಳು) ಮತ್ತು ಹೆಚ್ಚು ಭಾರದ ನಕ್ಷತ್ರಗಳು (ಸೂರ್ಯನ ಭಾರದ ಸುಮಾರು 8 ಪಟ್ಟು ಗಿಂತ ಹೆಚ್ಚು ಭಾರವಿರುವ ನಕ್ಷತ್ರಗಳು) ಎಂದು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ.
ಈಗಾಗಲೇ ವಿವರಿಸಿರುವಂತೆ, ಕಡಿಮೆ ಬಾರದ ನಕ್ಷತ್ರಗಳು, ಕೆಂಪು ದೈತ್ಯ ನಕ್ಷತ್ರ ಅಥವಾ ಬಿಳಿ ಕುಬ್ಜ ಹಂತದವರೆವಿಗೂ ಪರಿವರ್ತನೆಗೊಳ್ಳುತ್ತವೆ.
ಹೆಚ್ಚು ಬಾರದ ನಕ್ಷತ್ರಗಳನ್ನು ಅಂತ್ಯದಲ್ಲಿ ನ್ಯೂಟ್ರಾನ್ ನಕ್ಷತ್ರ ಅಥವಾ ಕಪ್ಪು ಕುಳಿಗಳಾಗಿ (ಬ್ಲ್ಯಾಕ್ ಹೋಲ್ಸ್) ಪರಿವರ್ತನೆಗೊಳ್ಳುತ್ತವೆ.
ಹೀಗೆ ನಕ್ಷತ್ರಗಳ ಶವವು ಕೆಂಪು ದೈತ್ಯ ನಕ್ಷತ್ರ ಅಥವಾ ಶ್ವೇತ ಕುಬ್ಜ ಅಥವಾ ನ್ಯೂಟ್ರಾನ್ ನಕ್ಷತ್ರ ಅಥವಾ ಕಪ್ಪು ಕುಳಿಯಾಗಬಹುದು ಎಂಬ ಅಂಶವನ್ನು ತಿಳಿಯಬೇಕಾಗಿದೆ.ಕಪ್ಪು ಕುಳಿಗಳಲ್ಲಿ ಗುರುತ್ವಾಕರ್ಷಣೆಯನ್ನು ತಡೆಯಲು ಯಾವುದೇ ಶಕ್ತಿಯು ಸಾಕಾಗದೆ ನಕ್ಷತ್ರವು ಸಂಪೂರ್ಣವಾಗಿ ಕುಸಿದು ಕಪ್ಪು ಕುಳಿಯಾಗಿ ಪರಿವರ್ತನೆಗೊಳ್ಳುತ್ತದೆ.

ಒಂದು ಕಪ್ಪು ಕುಳಿ ಪರಿವರ್ತನೆಗೊಂಡಾಗ, ಅಪಾರ ಶಕ್ತಿ ಬಿಡುಗಡೆಯಾಗಿ, ಆ ನಕ್ಷತ್ರ ಪುಂಜವೇ ಅತ್ಯಂತ ಪ್ರಕಾಶಮಾನವಾಗಿ ಕಾಣುತ್ತದೆ. ಕಪ್ಪು ಕುಳಿಗಳಿಂದ ಬೆಳಕಿನ ಕಿರಣಗಳಾಗಲಿ ಅಥವಾ ಯಾವುದೇ ಬಗೆಯ ಸಿಗ್ನಲ್ ಗಳಾಗಲಿ ಬರುವುದಿಲ್ಲ. ಆದ್ದರಿಂದ ಕಪ್ಪು ಕುಳಿಗಳನ್ನು ನೇರವಾಗಿ ನೋಡಲು ಅಥವಾ ಕಂಡುಹಿಡಿಯಲು ಸಾಧ್ಯವಿಲ್ಲ. ಆದರೆ ಕಪ್ಪು ಕುಳಿಗಳು ತಮ್ಮಲ್ಲಿರುವ ಅಪಾರ ಗುರುತ್ವಾಕರ್ಷಣೆಯ ಬಲದಿಂದ ಸಮೀಪದಲ್ಲಿರುವ ನಕ್ಷತ್ರಗಳ ಮೇಲೆ ಬೀರುವ ಪರಿಣಾಮಗಳಿಂದ ಅವುಗಳ ಅಸ್ತಿತ್ವವನ್ನು ಗುರುತಿಸಬಹುದು. ಉದಾಹರಣೆಗೆ, ಅವಳಿ ನಕ್ಷತ್ರಗಳಲ್ಲಿ ಒಂದು ನಕ್ಷತ್ರವು ಕಪ್ಪು ಕುಳ್ಳಿಯಾಗಿದ್ದರೆ, ಅದರ ಜಂಟಿ ನಕ್ಷತ್ರದಿಂದ ದ್ರವ್ಯ ರಾಶಿಯು ಕಪ್ಪು ಕುಳಿಯ ಕಡೆಗೆ ಅತ್ಯಂತ ವೇಗವಾಗಿ ಹರಿಯಲು ಪ್ರಾರಂಭಿಸುತ್ತದೆ. ಈ ಹರಿಯುವ ದ್ರವ್ಯವು ದೊಡ್ಡ ಪ್ರಮಾಣದಲ್ಲಿ ಶಕ್ತಿಯನ್ನು ಉತ್ಪಾದಿಸಿ ಎಕ್ಸ್ – ಕಿರಣಗಳನ್ನು ಉತ್ಪಾದಿಸುತ್ತದೆ. ಎಕ್ಸ್ ಕಿರಣಗಳನ್ನು ಪತ್ತೆ ಮಾಡುವ ಮೂಲಕ ಅವಳಿ ನಕ್ಷತ್ರಗಳ ಭಾಗವಾದ ಸಿಗ್ನಸ್ X – 1 ಎಂಬ ಕಪ್ಪು ಕುಳಿಯನ್ನು 1971ರಲ್ಲಿ ಪತ್ತೆ ಹಚ್ಚಲಾಯಿತು.
ನಕ್ಷತ್ರಗಳ ಜನನ ಮತ್ತು ಅವುಗಳ ಜೀವನ ಚಕ್ರದ ಬಗ್ಗೆ ತಿಳಿಯಲಾಯಿತು. ಈ ನಮ್ಮ ಬ್ರಹ್ಮಾಂಡ ಅಥವಾ ವಿಶ್ವ ಹೇಗೆ ಅಂತ್ಯವಾಗಬಹುದು ಎಂಬುದರ ಬಗ್ಗೆ ತಿಳಿಯೋಣ.
ಭೂಮಿಯ ಅಂತ್ಯ
ಈಗಾಗಲೇ ಉಲ್ಲೇಖಿಸಿರುವಂತೆ, ನಮ್ಮ ಸೂರ್ಯನು ಐದು ಶತಕೋಟಿ ವರ್ಷಗಳಲ್ಲಿ ಕೆಂಪು ದೈತ್ಯ ಸ್ಥಿತಿಯನ್ನು ಹೊಂದಿದಾಗ, ಅದರ ಗಾತ್ರ ದೊಡ್ಡದಾಗಿ, ಅದರ ತ್ರಿಜ್ಯ ಗುರುಗ್ರಹವು ಸೂರ್ಯನ ಸುತ್ತಲೂ ಸುತ್ತುವ ಕಕ್ಷೆಯ ತ್ರಿಜ್ಯಕ್ಕೆ ಸಮನಾಗಿರುತ್ತದೆ. ಅದರ ಗಾತ್ರ ಸುಮಾರು ಪಟ್ಟು ವಿಕಾಸ ಹೊಂದಿ, ಒಳಗಿನ ಗ್ರಹಗಳಾದ ಬುಧ ಮತ್ತು ಶುಕ್ರ ಗ್ರಹಗಳು ಸೂರ್ಯನಲ್ಲಿ ಐಕ್ಯವಾಗಿ, ಆವಿಯಾಗುತ್ತವೆ. ಭೂಮಿಯು ಭಯಾನಕ ಉರಿಯುತ್ತಿರುವ ವಿನಾಶವನ್ನು ಎದುರಿಸಬೇಕಾಗುತ್ತದೆ. ಸೂರ್ಯನ ಹೊರಗಿನ ವಾತಾವರಣದೊಳಗೆ ಸುಟ್ಟ ನಿರ್ಜೀವ ಬಂಡೆಯಾಗಿ ಕುದಿಯುವುದು. ಸೂರ್ಯನು ಅಧಿಕೃತವಾಗಿ ಕೆಂಪು ದೈತ್ಯವಾಗುವ ಮೊದಲೇ ಒಂದು ಶತಕೋಟಿ ವರ್ಷಗಳಲ್ಲಿ ಸೂರ್ಯನ ಪ್ರಕಾಶವು ಶೇಕಡಾ ಹತ್ತರಷ್ಟು ಹೆಚ್ಚಾಗಿ, ಭೂಮಿಯ ಸಾಗರಗಳು ಆವಿಯಾಗುತ್ತವೆ, ಎಲ್ಲಾ ಜೀವರಾಶಿಗಳು ಸಾಯುತ್ತವೆ. ಅಂತಿಮವಾಗಿ ಭೂಮಿಯ ವಾತಾವರಣವು ಸೌರ ಮಾರುತಗಳಿಂದ ಹರಿದು ಹೋಗುತ್ತದೆ. ಗುರುತಿಸಬಹುದಾದ ಏನು ಉಳಿಯುವುದಿಲ್ಲ ಎಂದು ಭವಿಷ್ಯವನ್ನು ವಿಜ್ಞಾನಿಗಳು ನುಡಿದಿದ್ದಾರೆ. ಭೂಮಿಯ ಅಂತ್ಯದವರೆಗಿನ ಸಮಯ: ಸುಮಾರು ಐದು ಶತ ಕೋಟಿ ವರ್ಷಗಳು.
ಸೌರವ್ಯೂಹದ ಅಂತ್ಯ
ಕೆಂಪು ದೈತ್ಯ ಹಂತ, ನಮ್ಮ ಸೂರ್ಯನ ಜೀವನದ ಅಂತ್ಯದ ಆರಂಭ ಮಾತ್ರ. ಕೆಂಪು ದೈತ್ಯದ ಹಂತದ ನಂತರ ನಕ್ಷತ್ರದ ಹೊರ ಪದರಗಳು ವಿಸ್ತರಿಸುತ್ತಲೇ ಇರುತ್ತವೆ. ಎಷ್ಟರಮಟ್ಟಿಗೆ ಎಂದರೆ, ಅವು ಒಂದು ಗ್ರಹ ನಿಹಾರಿಕೆಯನ್ನು ಸೃಷ್ಟಿಸುತ್ತವೆ. ಮಧ್ಯಭಾಗವು ಬಿಳಿ ಕುಬ್ಜವಾಗಿ ಪರಿವರ್ತನೆಗೊಳ್ಳುತ್ತದೆ.
ಈ ಪ್ರಕ್ರಿಯೆಯ ಮೂಲಕ, ಸೂರ್ಯನು ತನ್ನ ಅರ್ಧದಷ್ಟು ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತಾನೆ. ಇದರಿಂದಾಗಿ ದೈತ್ಯ ಗ್ರಹಗಳಾದ ಗುರು, ಶನಿ, ಯುರೇನಸ್ ಮತ್ತು ನೆಪ್ಟೂನ್ ವಿಶಾಲವಾದ ಕಕ್ಷೆಗಳಿಗೆ ವಲಸೆ ಹೋಗುತ್ತವೆ. ಗುರುತ್ವಾಕರ್ಷಣೆಯ ಮೂಲದಿಂದ ದೂರ ಹೋದಂತೆ, ಅವುಗಳ ಸ್ಥಿರತೆ ಕಡಿಮೆಯಾಗಿ, ಮತ್ತೊಂದು ನಕ್ಷತ್ರವು ಅವುಗಳನ್ನು ಆಕರ್ಷಿಸಲು ಸುಲಭವಾಗುತ್ತದೆ. ಸೌರವ್ಯೂಹದ ಅಂತ್ಯದವರೆಗಿನ ಸಮಯ 8 ಶತಕೋಟಿ ವರ್ಷಗಳು.
ಕ್ಷೀರ ಪಥದ ಅಂತ್ಯ (ಮಿಲ್ಕಿವೇ ನಕ್ಷತ್ರ ಪುಂಜ)

ಹಲವಾರು ಶತಕೋಟಿ ವರ್ಷಗಳ ನಂತರ, ಕ್ಷೀರಪಥವು ನಮ್ಮ ಹತ್ತಿರದ ದೊಡ್ಡ ಸುರುಳಿ ಆಕಾರದ ನಕ್ಷತ್ರ ಪುಂಜವಾದ ಆಂಡ್ರೋಮಿಡಾದೊಂದಿಗೆ ವಿಲೀನಗೊಳ್ಳುತ್ತದೆ ಎಂದು ವಿಜ್ಞಾನಿಗಳಿಂದ ತಿಳಿದಿದ್ದೇವೆ. ಆದರೆ ನಮ್ಮ ನಕ್ಷತ್ರಪುಂಜವು ಹಾದು ಹೋಗುವ ಏಕೈಕ ವಿಲೀನ ಇಲ್ಲದಿರಬಹುದು. ಗುರುತ್ವಾಕರ್ಷಣೆಯ ಕಾರಣದಿಂದಾಗಿ, ಹೆಚ್ಚಿನ ನಕ್ಷತ್ರಪುಂಜಗಳು (ಗೆಲಾಕ್ಸಿ) ಗುಂಪುಗಳಾಗಿ ಚಲಿಸುತ್ತವೆ. ಕ್ಷೀರಪಥವು ಬ್ರಹ್ಮಾಂಡದಲ್ಲಿ ಚಲಿಸುವ ಸುಮಾರು ನಲವತ್ತು ನಕ್ಷತ್ರಪುಂಜಗಳಿಂದ ಕೂಡಿದ ಒಂದು ಸ್ಥಳೀಯ ಗುಂಪಿಗೆ ಸೇರಿದೆ. ಹಲವಾರು ಶತಕೋಟಿ ವರ್ಷಗಳ ನಂತರ, ಎಲ್ಲಾ ನಕ್ಷತ್ರಪುಂಜಗಳು ಒಟ್ಟಾಗಿ ಸೇರಿ ಒಂದು ಬೃಹದಾಕಾರದ ಅಂಡಾಕಾರದ ನಕ್ಷತ್ರಪುಂಜವನ್ನು ರೂಪಿಸುವ ಸಾಧ್ಯತೆಯಿದೆ. ಅವುಗಳ ಪ್ರತ್ಯೇಕತೆಗೆ ಯಾವುದೇ ಪುರಾವೆಗಳು ಇರುವುದಿಲ್ಲ. ಬ್ರಹ್ಮಾಂಡವು ನಿರಂತರವಾಗಿ ವಿಸ್ತರಿಸುತ್ತಿದೆ. ಗೆಲಾಕ್ಸಿಗಳು ನಮ್ಮಿಂದ ದೂರ ಹೋಗುತ್ತಿರುವುದನ್ನು ನಾವು ಗಮನಿಸಿದ್ದೇವೆ (ರೆಡ್ ಶಿಫ್ಟ್ ಮೂಲಕ). ಅವುಗಳು ಹೆಚ್ಚು ದೂರ ಹೋದಂತೆ ಅವುಗಳ ವೇಗ ಹೆಚ್ಚಾಗುತ್ತದೆ (ಹಬ್ಬಲ್ ನಿಯಮ 1929). ಇದು ಹೀಗೆ ಮುಂದುವರೆದರೆ, ಬ್ರಹ್ಮಾಂಡವು ಎಷ್ಟು ವೇಗವಾಗಿ ವಿಸ್ತರಿಸುತ್ತದೆಯೆಂದರೆ, ದೂರದ ಗೆಲಾಕ್ಸಿಗಳಿಂದ ಬರುವ ಬೆಳಕು ನಮ್ಮನ್ನು ತಲುಪಲು ಸಾಧ್ಯವಾಗುವುದಿಲ್ಲ ಮತ್ತು ವೀಕ್ಷಿಸಬಹುದಾದ ವಿಶ್ವದಲ್ಲಿ ಗೋಚರಿಸುವುದಿಲ್ಲ. ಅಂತಿಮವಾಗಿ ಉಳಿಯುವುದು ಕಪ್ಪು ಕುಳಿಗಳು. ನ್ಯೂಟ್ರಾನ್ ನಕ್ಷತ್ರಗಳು ಮತ್ತು ಕೆಲವು ಕಪ್ಪು ಕುಬ್ಜಗಳು (ಕಪ್ಪು ಕುಬ್ಜಗಳು ಎಂದರೆ ಸೈದ್ಧಾಂತಿಕ ನಾಕ್ಷತ್ರಿಕ ಅವಶೇಷ. ಇದು ಒಂದು ಬಿಳಿ ಕುಬ್ಜವಾಗಿದ್ದು, ಟ್ರಿಲಿಯನ್ ಗಟ್ಟಲೆ ವರ್ಷಗಳಿಂದ ಸಂಪೂರ್ಣವಾಗಿ ತಣ್ಣಗಾಗಿ, ಗಮನಾರ್ಹ ಶಾಖ ಅಥವಾ ಗೋಚರ ಬೆಳಕನ್ನು ಹೊರ ಸೂಸುವುದಿಲ್ಲ. ಬ್ರಹ್ಮಾಂಡ ಕೇವಲ 14 ಶತಕೋಟಿ ವರ್ಷಗಳಷ್ಟು ಹಳೆಯದಾಗಿರುವುದರಿಂದ, ಇನ್ನೂ ಯಾವುದು ಅಸ್ತಿತ್ವದಲ್ಲಿ ಎಂದು ನಂಬಲಾಗಿದೆ) ಈ ಅಂತ್ಯದವರೆಗಿನ ಸಮಯ: 150 ಶತಕೋಟಿ ವರ್ಷಗಳು.
ವಿಶ್ವದ ಅಂತ್ಯ
ಬ್ರಹ್ಮಾಂಡವು ನಿಜವಾಗಿಯೂ ಹೇಗಿದೆ ಅಥವಾ ಹೇಗಿದೆ ಎಂದು ನಮಗೆ ನಿಜವಾಗಿಯೂ ತಿಳಿದಿಲ್ಲ. ವಿಶ್ವದ ಅಂತ್ಯವೂ ಹಲವು ರೀತಿಗಳಲ್ಲಿ ಪ್ರಕಟವಾಗಬಹುದು.
ಬ್ರಹ್ಮಾಂಡವು ವಿಸ್ತರಿಸುತ್ತಲೇ ಇದ್ದರೆ, ಶಕ್ತಿಯು ಎಷ್ಟು ಹರಡುತ್ತದೆ ಎಂದರೆ ಅಂತಿಮವಾಗಿ ಅದರೊಳಗಿನ ಎಲ್ಲಾ ಪ್ರದೇಶಗಳು ಒಂದೇ ತಾಪಮಾನದಲ್ಲಿ ಉಳಿಯುತ್ತವೆ. ಬ್ರಹ್ಮಾಂಡವು ತುಂಬಾ ತಣ್ಣಗಾಗುವವರೆವಿಗೆ ಮತ್ತು ಜೀವನ ಮತ್ತು ಚಟುವಟಿಕೆಗಳನ್ನು ಬೆಂಬಲಿಸಲು ಬಳಸಬಹುದಾದ ಶಕ್ತಿಯು ಇಲ್ಲದಂತಾಗುತ್ತದೆ. ಇದನ್ನು ಬಿಗ್ ಫ್ರೀಜ್ ಎಂದು ಕರೆಯುತ್ತೇವೆ. ಆಗ ಕಣಗಳ ನಡುವಿನ ಪರಸ್ಪರ ಕ್ರಿಯೆಗಳು ನಿಂತು ಹೋಗುತ್ತವೆ ಮತ್ತು ಬ್ರಹ್ಮಾಂಡವು ಶಾಶ್ವತವಾಗಿ ಹೆಪ್ಪುಗಟ್ಟಿ ನಿಲ್ಲುತ್ತದೆ.
ಬ್ರಹ್ಮಾಂಡದ ಅಂತ್ಯಕ್ಕೆ ಇನ್ನೂ ಹಲವು ಅಸ್ವಸ್ಥ ಸಾಧ್ಯತೆಗಳಿವೆ. ಬ್ರಹ್ಮಾಂಡವು ಹೆಚ್ಚಿದ ವೇಗವನ್ನು ಪಡೆದು ವಿಸ್ತರಿಸುತ್ತಾ ಹೋದರೆ, ಗುರುತ್ವಾಕರ್ಷಣೆಯು ಯಾವುದನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದಷ್ಟು ವೇಗವಾಗಿ ವಿಸ್ತರಿಸಬಹುದು. ಗೆಲಕ್ಸಿಗಳಿಂದ ಪರಮಾಣುಗಳವರೆಗೆ, ಎಲ್ಲವೂ ಹರಿದು ಹೋಗುತ್ತವೆ. ಉಳಿದಿರುವುದು ಖಾಲಿ ಕಾಲತೀತ ಜಾಗದ ಮೂಲಕ ಚಲಿಸುವ ಏಕಕಣಗಳು ಮಾತ್ರ.
ಕೆಲವು ವಿಜ್ಞಾನಿಗಳು ಹೇಳುವಂತೆ ಬ್ರಹ್ಮಾಂಡವು ಶಾಶ್ವತವಾಗಿ ವಿಸ್ತರಿಸುವುದಿಲ್ಲ ಎಂಬ ವಾದ. ಬಿಗ್ ಬೌನ್ಸ್ ಸಿದ್ಧಾಂತದ ಪ್ರಕಾರ ಬ್ರಹ್ಮಾಂಡದಲ್ಲಿ, ವಸ್ತುವಿನ ಪ್ರಮಾಣವು ತುಂಬಾ ದೊಡ್ಡದಾಗಿದ್ದು, ಗುರುತ್ವಾಕರ್ಷಣೆಯು ವಿಸ್ತರಣೆಯನ್ನು ನಿಧಾನಗೊಳಿಸುತ್ತದೆ ಮತ್ತು ನಿಲ್ಲಿಸುತ್ತದೆ ಎಂದು ನಂಬಲಾಗಿದೆ. ನಂತರ ಅದು ಹಿಮ್ಮುಖವಾಗುತ್ತದೆ. ಬ್ರಹ್ಮಾಂಡವು ಸಂಕುಚಿತಗೊಳ್ಳುತ್ತದೆ ಮತ್ತು ಅದು ಮತ್ತೆ ವಿಸ್ತರಿಸುವ ಮೊದಲು ಏಕತ್ವ ಎಂಬ ಸಣ್ಣ ಬಿಂದುವಾಗಿ ಸಂಯೋಜಿಸಲ್ಪಡುತ್ತದೆ. ಇದು ಮತ್ತೊಂದು ಬಿಗ್ ಬ್ಯಾಂಗ್ ಅನ್ನು ಪ್ರಚೋದಿಸಿ, ಹೊಸ ಬ್ರಹ್ಮಾಂಡದ ಜನನಕ್ಕೆ ಕಾರಣವಾಗುತ್ತದೆ. ಈ ಪ್ರಕ್ರಿಯೆಯು ಮತ್ತೆ ಮತ್ತೆ ಸಂಭವಿಸಬಹುದು. ಅಂದರೆ ನಮ್ಮ ಬ್ರಹ್ಮಾಂಡ ಮತ್ತು ಭವಿಷ್ಯದ ಬ್ರಹ್ಮಾಂಡಗಳು ಸಂಕುಚಿತ ಮತ್ತು ವಿಸ್ತರಣೆಯ ಅಂತ್ಯವಿಲ್ಲದ ಚಕ್ರದಲ್ಲಿ ಸಿಲುಕಿಕೊಂಡಿದೆ ಎಂದೇ ಹೇಳಬಹುದು. ಬ್ರಹ್ಮಾಂಡದ ಅಂತ್ಯದವರೆಗಿನ ಸುಮಾರು 10^64 ವರ್ಷಗಳು ಎಂದು ಅಂದಾಜು ಮಾಡಲಾಗಿದೆ.
ಪ್ರತಿ ಬ್ರಹ್ಮಾಂಡದ ಸೃಷ್ಟಿಯು ವಿಶ್ವದ ಬೆಳವಣಿಗೆ ಒಂದೇ ರೀತಿಯಾಗಿರುವುದೇ, ಈಗಿರುವ ಪ್ರಕೃತಿಯ ನಿಯಮಗಳನ್ನು ಪಾಲಿಸುವುದೇ?, ಈ ಪ್ರಶ್ನೆಗೆ ಉತ್ತರ ಹೇಳುವುದು ಅಸಾಧ್ಯ.
ಭೂಮಿಯ ಮೇಲೆ ವಾಸಿಸುವ ಮಾನವ ತನ್ನ ಬುದ್ಧಿ ಶಕ್ತಿಯಿಂದ ವಿಶ್ವದ ಘಟನೆಗಳನ್ನು ಆಳವಾಗಿ ಅಭ್ಯಾಸ ಮಾಡಿ ಅದರ ಬಗ್ಗೆ ಸರಳವಾದ ತತ್ವಗಳನ್ನು ಮತ್ತು ಸಿದ್ಧಾಂತಗಳನ್ನು ಪ್ರತಿಪಾದಿಸಿರುವುದು ಮನುಕುಲದ ಹೆಮ್ಮೆಗೆ ಕಾರಣವಾಗಬೇಕು. ಮೇಲೆ ವಿವರಿಸಿರುವ ಪ್ರಕ್ರಿಯೆಗಳು ನಡೆಯಲು, ಹಲವಾರು ಶತಕೋಟಿ ವರ್ಷಗಳು ಬೇಕಾಗಿದೆ. ವಿಜ್ಞಾನದಲ್ಲಿ ಇದೇ ಕೊನೆಯ ಮಾತು ಎಂದು ಹೇಳುವುದು ಇಲ್ಲವೇ ಇಲ್ಲ. In science, no theory is final, all theories are tentative.
ಆದ್ದರಿಂದ, ಭಯಪಡುವ ಅವಶ್ಯಕತೆಯಿಲ್ಲ. ಈಗ ನಾವೆಲ್ಲರೂ ನೆಮ್ಮದಿಯಾಗಿರೋಣ.
References : 1) Chandrasekhar and his limit by G. Venkataraman , Universities Press
2) Wikipedia


