ಗೆಲಿಲಿಯೋನ ಹೆಸರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಲ್ಲಿಯೂ ಸಹ ಚಿರಪರಿಚಿತ. ಚಲನೆಯ ವಿಜ್ಞಾನ (ಸೈನ್ಸ್ ಆಫ್ ಮೋಶನ್), ಖಗೋಳಶಾಸ್ತ್ರ (ಆಸ್ಟ್ರಾನಾಮಿ), ಬೀಳುವ ವಸ್ತುಗಳ ನಿಯಮ ( ಲಾ ಆಫ್ ಫಾಲಿಂಗ್ ಬಾಡೀಸ್), ಪ್ಯಾರಾಬೊಲಿಕ್ ಪಥಗಳು (ಪ್ಯಾರಾಬೊಲಿಕ್ ಟ್ರಾಜೆಕ್ಟರೀಸ್), ಲೋಲಕಗಳ ನಿಯಮಗಳು, ವಕ್ರೀಭವನ ದೂರದರ್ಶಕದ ಆವಿಷ್ಕಾರ (ರಿಪ್ರಾಕ್ಟಿಂಗ್ ಟೆಲಿಸ್ಕೋಪ್) ಮತ್ತು ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರನ್ನು ನೆನಪಿಸಿಕೊಳ್ಳುತ್ತೇವೆ. ಇಟಲಿ ದೇಶದ ಪಿಸಾ ನಗರದಲ್ಲಿರುವ ಬಾಗಿದ ಗೋಪುರದ ಮೇಲ್ಬಾಗದಿಂದ ಬೀಳುವ ಕಾಯಗಳ ಅಥವಾ ವಸ್ತುಗಳ ನಿಯಮದ ಬಗ್ಗೆ ಅವರು ಮಾಡಿದರು ಎನ್ನಲಾದ ಪ್ರಯೋಗವು ಮಕ್ಕಳ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದೆ. ಈ ಪ್ರಯೋಗವನ್ನು ವಾಸ್ತವದಲ್ಲಿ ನಡೆಸಲಾಗಿದೆಯೇ ಅಥವಾ ಇದು ಚಿಂತನೆಯ ಪ್ರಯೋಗವೇ ಎಂಬುವುದರ ಬಗ್ಗೆ ಸಂದೇಹಗಳಿದ್ದರೂ ಸಹ ಗೆಲಿಲಿಯೋ ಶಿಷ್ಯ ವಿನ್ಸ್‌ಶೆನ್ ಜೊ ಬರೆದಿರುವ ಗೆಲಿಲಿಯೋನ ಜೀವನ ಚರಿತ್ರೆಯಲ್ಲಿ ಉಲ್ಲೇಖವಾಗಿರುವಂತೆ (1717), ಈ ಪ್ರಯೋಗವನ್ನು ಸುಮಾರು 1589 ರಲ್ಲಿ ಗೆಲಿಲಿಯೋ ನಡೆಸಿದರೆಂದು ದಾಖಲಿಸಿದ್ದಾನೆ. ಗೆಲಿಲಿಯೋ ಮತ್ತು ಅವರ ಕೆಲವು ಕೃತಿಗಳ ಬಗ್ಗೆ ಸಂಕ್ಷಿಪ್ತ ಲೇಖನವನ್ನು ಬರೆದು, ಆ ಮೂಲಕ ಅವರ ಅಭಿಮಾನಿಗಳ ನೆನಪನ್ನು ಪುನರುಜ್ಜೀವನಗೊಳಿಸಬೇಕೆಂಬ ಹಂಬಲ ನನ್ನದು. ಆ ಉದ್ದೇಶದ ಫಲವಾಗಿ ಈ ಲೇಖನವನ್ನು ಓದುಗರ ಮುಂದೆ ಇಡುತ್ತಿದ್ದೇನೆ. ಈ ಲೇಖನ ಹದಿನಾರನೇ ಶತಮಾನದ ಉತ್ತರಾರ್ಧ ಹದಿನೇಳನೇ ಶತಮಾನದ ಮೊದಲಾರ್ಧದಲ್ಲಿ ವಾಸಿಸುತ್ತಿದ್ದ ಮಹಾನ್ ಭೌತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞನ ಸ್ಮರಣೆಗೆ ಸೂಕ್ತ ಗೌರವವಾಗಿದೆ.
ಗೆಲಿಲಿಯೋ ಗೆಲಿಲಿ ಫೆಬ್ರವರಿ 15, 1564 ರಂದು ಇಟಲಿಯ ಪೀಸಾ ನಗರದಲ್ಲಿ ಜನಿಸಿದರು. ಗೆಲಿಲಿಯೋರವರನ್ನು ಆಧುನಿಕ ವಿಜ್ಞಾನದ ಪಿತಾಮಹ ಎಂದು ಪರಿಗಣಿಸಲಾಗಿದೆ ಮತ್ತು ಅವರು ಭೌತಶಾಸ್ತ್ರ, ಖಗೋಳಶಾಸ್ತ್ರ, ಗಣಿತ ಮತ್ತು ತತ್ವಶಾಸ್ತ್ರ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಅವರು ಆವಿಷ್ಕರಿಸಿದ ಸುಧಾರಿತ ದೂರದರ್ಶಕವು ಗುರುಗ್ರಹದ ಉಪಗ್ರಹಗಳು, ಶನಿಯ ಉಂಗುರಗಳು, ಶುಕ್ರಗ್ರಹದ ಹಂತಗಳು (ಫೇಜಸ್ ಆಫ್ ವೀನಸ್), ಸೂರ್ಯನ ಚುಕ್ಕಿಗಳು (ಸನ್ ಸ್ಪಾಟ್ಸ್) ಮತ್ತು ಚಂದ್ರನ ಕುಳಿಗಳನ್ನು (ಲೂನಾರ್ ಕ್ರೇಟರ್ಸ್) ವೀಕ್ಷಿಸಲು ಮತ್ತು ವಿವರಿಸಲು ಅನುವು ಮಾಡಿಕೊಟ್ಟಿತು.
ಗೆಲಿಲಿಯೋ ಮೊದಲ (ಬಹುಶಃ ಕೊನೆಯ) ವೈಜ್ಞಾನಿಕ ಹುತಾತ್ಮನಾಗಬಹುದಿತ್ತು. ಆದರೆ ತನ್ನ ಫಲಿತಾಂಶಗಳು ತಪ್ಪಾಗಿವೆ ಎಂದು ಚರ್ಚ್ ಪ್ರಾಧಿಕಾರದ ಮುಂದೆ ಪ್ರಮಾಣ ಮಾಡಲು ಆಯ್ಕೆ ಮಾಡುವ ಮೂಲಕ ಅವರು ಬುದ್ಧಿವಂತಿಕೆಯಿಂದ ಮರಣದಂಡನೆಯಿಂದ ತಪ್ಪಿಸಿಕೊಂಡರು (ವಿಶೇಷವಾಗಿ ಹಿಲೀಯೊ ಸೆಂಟ್ರಿಸಂನ ಕೊಪರ್ನಿಕನ್ ಕಲ್ಪನೆಗೆ ಸಂಬಂಧಿಸಿದಂತೆ). ಆದರೆ ಅವರ ಹೃದಯದಲ್ಲಿ ತನ್ನ ಫಲಿತಾಂಶಗಳು ಸರಿಯಾಗಿವೆ ಎಂದು ಬಲವಾಗಿ ನಂಬಿದ್ದರು. ಗೆಲಿಲಿಯೋನ ಯುಗವು ಲಿಯೊನಾರ್ಡೊ ಡಾವಿನ್ಸಿಯ ಪುನರುಜ್ಜೀವನ ಅವಧಿ ಮತ್ತು ನ್ಯೂಟನ್ ನ ವೈಜ್ಞಾನಿಕ ಯುಗದ ನಡುವೆ ನಡೆಯಿತು. ಪುನರುಜ್ಜೀವನವು ಅಧಿಕಾರಕ್ಕೆ ಶರಣಾಗುವ ಬದಲು ಪ್ರಾಯೋಗಿಕ ತನಿಖೆಗಳಿಂದ ಪ್ರಕಟವಾದ ಸತ್ಯವನ್ನು ನಂಬುವ ಗ್ರೀಕ್ ಕಲ್ಪನೆಯ ಪುನರ್ಜನ್ಮಕ್ಕೆ ಸಾಕ್ಷಿಯಾಯಿತು. ಗೆಲಿಲಿಯೋ ಈ ತತ್ವಕ್ಕೆ ಬದ್ದನಾಗಿರುವುದು ಚರ್ಚಿನ ಕೋಪವನ್ನು ಆಹ್ವಾನಿಸಿತು. ಇದರ ಪರಿಣಾಮವಾಗಿ ಅವನ ಜೀವನದ ಕೊನೆಯ ದಿನಗಳಲ್ಲಿ ವಿಚಾರಣೆ ಮತ್ತು ಗೃಹ ಬಂಧನಕ್ಕೆ ಒಳಗಾಗ ಬೇಕಾಯಿತು.
ವಿವಿಧ ಮಾಪನ ಉಪಕರಣಗಳ ಬಳಕೆಯೊಂದಿಗೆ, ಗೆಲಿಲಿಯೋ ಸೌರವ್ಯೂಹದ ಸೂರ್ಯ ಕೇಂದ್ರಿತತೆ ಮತ್ತು ವೈಜ್ಞಾನಿಕ ವಾಸ್ತವಗಳನ್ನು ದೃಢಪಡಿಸಿದರು. ಗೆಲಿಲಿಯೋನ ಕಾಲಕ್ಕಿಂತ ಪೂರ್ವದಲ್ಲಿ, ಭೌತಶಾಸ್ತ್ರದ ನಿಯಮಗಳು ಭೂಮಿಗೆ ಮಾತ್ರ ಅನ್ವಯಿಸುತ್ತವೆ. ಗ್ರಹಗಳಿಗೆ ಮತ್ತು ನಕ್ಷತ್ರಗಳಿಗೆ ಅನ್ವಯಿಸುವುದಿಲ್ಲ ಎಂದು ನಂಬಲಾಗಿತ್ತು. ಗೆಲಿಲಿಯೋನ ನಂತರ, ಬ್ರಹ್ಮಾಂಡದ ಎಲ್ಲಾ ವೈಜ್ಞಾನಿಕ ವಿವರಣೆಗಳಿಗೆ ಬಾಗಿಲು ತೆರೆಯಲಾಯಿತು ಮತ್ತು ನ್ಯೂಟನ್ ಸರಿಯಾದ ಉತ್ತರಗಳೊಂದಿಗೆ ವೈಜ್ಞಾನಿಕ ಕ್ಷೇತ್ರಕ್ಕೆ ಪ್ರವೇಶಿಸಿದರು. ಕುತೂಹಲಕರ ಸಂಗತಿಯೆಂದರೆ, ಗೆಲಿಲಿಯೋ 1642 ರಲ್ಲಿ (ಜನವರಿ, 8) ನಿಧನರಾದರು ಮತ್ತು ನ್ಯೂಟನ್ ಅದೇ ವರ್ಷದಲ್ಲಿ (ಡಿಸೆಂಬರ್, 25) ಜನಿಸಿದರು. ಪ್ರಾಯಶಃ ನಿರ್ಧಿಷ್ಟವಾಗಿ ಭೌತಶಾಸ್ತ್ರದ ಸಂಶೋಧನಾ ಕ್ಷೇತ್ರದಲ್ಲಿ ಮತ್ತು ಸಾಮಾನ್ಯವಾಗಿ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಯಾವುದೇ ನಿರ್ವಾತವನ್ನುಂಟು ಮಾಡಲು ದೇವರು ಬಯಸಲಿಲ್ಲ ಎಂಬುವುದು ಹಲವರ ಅಭಿಪ್ರಾಯ. ಆವಿಷ್ಕಾರಗಳು ಇಂದಿಗೂ ವೈಜ್ಞಾನಿಕ ಗೀಳಾಗಿ ಉಳಿದಿವೆ ಎಂಬ ಅಂಶವು ನಿಜವಾಗಿಯೂ ಹೃದಯ ಸ್ಪರ್ಶಿಯಾದ ಮಾತು.
ಆರಂಭಿಕ ಜೀವನ:
ಗೆಲಿಲಿಯೋ ಗೆಲಿಲಿ 1564 ರಲ್ಲಿ ಇಟಲಿ ದೇಶದ ಪೀಸಾ ನಗರದಲ್ಲಿ ಜನಿಸಿದರು. ಅವರ ತಂದೆ ವಿನ್ಸೆಂಜೋ ಗೆಲಿಲಿಯೋ ಮತ್ತು ತಾಯಿ ಗಿಯುಲಿಯಾ ಅಮ್ಮನಾಟಿ. ಆರು ಮಕ್ಕಳಲ್ಲಿ, ಗೆಲಿಲಿಯೋ ಮೊದಲನೆಯವರಾಗಿದ್ದರು. ಅವರ ತಂದೆ ಸಂಗೀತಗಾರರಾಗಿದ್ದರು ಮತ್ತು ಸಂಗೀತ ಸಿದ್ಧಾಂತದಲ್ಲಿ ಪರಿಣಿತರಾಗಿದ್ದರು. ಗೆಲಿಲಿಯೋ ಹತ್ತು ವರ್ಷದವನಾಗಿದ್ದಾಗ, ಕುಟುಂಬವು ಫ್ಲಾರೆನ್ಸ್ ನಗರಕ್ಕೆ ಸ್ಥಳಾಂತರಗೊಂಡಿತು. ಫ್ಲಾರೆನ್ಸ್ ನಲ್ಲಿ, ಗೆಲಿಲಿಯೋ ತಂದೆಯವರನ್ನು ಆಸ್ಥಾನ ಸಂಗೀತಗಾರನಾಗಿ ನೇಮಿಸಲಾಯಿತು. ಗೆಲಿಲಿಯೋ 1575 ರಿಂದ 1578 ರ ವರೆಗೆ ಮೂರು ವರ್ಷಗಳ ಕಾಲ ಫ್ಲಾರೆನ್ಸ್ ನಿಂದ 30 ಕಿ. ಮೀ ದೂರದಲ್ಲಿರುವ ವಲ್ಲೊಂಬ್ರೋಜಾ ಅಬ್ಬೆಯಲ್ಲಿ, ವಿಶೇಷವಾಗಿ ತರ್ಕಶಾಸ್ತ್ರದಲ್ಲಿ (ಲಾಜಿಕ್) ಶಿಕ್ಷಣ ಪಡೆದರು. ಗೆಲಿಲಿಯೋ ವೈದ್ಯನಾಗಬೇಕೆಂದು ಅವರ ತಂದೆ ಬಯಸಿದ್ದರಿಂದ (ವೈದ್ಯರ ಗಳಿಕೆ ವಿಜ್ಞಾನಿಗಿಂತ ಹೆಚ್ಚು), 1580 ರಲ್ಲಿ ಅವರು ವೈದ್ಯಕೀಯ ಅಧ್ಯಯನಕ್ಕಾಗಿ ಪಿಸಾ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದರು. ಆದರೆ, ಶೀಘ್ರದಲ್ಲಿಯೇ ಅವರು ಗಣಿತದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಆಸ್ಥಾನದ ಗಣಿತಜ್ಞ ಬಸ್ಟಿಲ್ಲೊ ರಿಕ್ಕಿ ನೀಡಿದ ಉಪನ್ಯಾಸಗಳಿಂದ ಗೆಲಿಲಿಯೋ ಆಕರ್ಷಿತರಾದರು. ಅವರು ಗೆಲಿಲಿಯೋನನ್ನು ತನ್ನೊಂದಿಗೆ ಸಂವಹನ ನಡೆಸಲು ಸ್ವ ಇಚ್ಛೆಯಿಂದ ಪ್ರೋತ್ಸಾಹಿಸಿದರು. ಗೆಲಿಲಿಯೋ ವೈದ್ಯಕೀಯ ಅಧ್ಯಯನವನ್ನು ನಿಲ್ಲಿಸಿದರು ಮತ್ತು ಗಣಿತಶಾಸ್ತ್ರದ ಅಧ್ಯಯನವನ್ನು ಬಹಳ ಗಂಭೀರವಾಗಿ ತೆಗೆದುಕೊಂಡರು. ಗೆಲಿಲಿಯೋ ಯೂಕ್ಲಿಡ್ ಮತ್ತು ಆರ್ಕಿಮಿಡೀಸ್ ಅವರ ಕೃತಿಗಳಿಂದ ತುಂಬಾ ಪ್ರಭಾವಿತರಾಗಿದ್ದರು. ಗೆಲಿಲಿಯೋ ತಾನು ಸಹ ಅತ್ಯಂತ ಪ್ರತಿಭಾನ್ವಿತ ಎಂದು ತೋರಿಸಿದರು ಮತ್ತು 1583 ರಲ್ಲಿ ಸರಳ ಲೋಲಲಕದ ನಿಯಮಗಳನ್ನು (ಲಾಸ್ ಆಫ್ ಸಿಂಪಲ್ ಪೆಂಡುಲಂ) ಆವಿಷ್ಕರಿಸಿದರು. ವಿಜ್ಞಾನ ಲೋಕದಲ್ಲಿ ಪ್ರಮುಖ ಸ್ಥಾನವನ್ನು ಪಡೆದರು.
ಲೋಲಕದ ಐಸೊಕ್ರೋನಿಸಂ:
ಒಂದು ಭಾನುವಾರ ಬೆಳಿಗ್ಗೆ, ಗೆಲಿಲಿಯೋ ಪಿಸಾ ಕೆಥೆಡ್ರಲ್‌ನಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾಗ, ಛಾವಣಿಯಿಂದ ಉದ್ದನೆಯ ತಂತಿಯಿಂದ ನೇತು ಹಾಕಲಾದ, ತೂಗಾಡುತ್ತಿರುವ ಶಾಂಡೆಲೀರ್ (ಗೊಂಚಲು ದೀಪ) ಅವರ ಗಮನವನ್ನು ಸೆಳೆಯಿತು. ಅದರಿಂದ ಗೆಲಿಲಿಯೋ ಆಕರ್ಷಿತರಾದರು. ಕಂಪನದ ಪಾರವು (ಆಂಪ್ಲಿಟ್ಯೂಡ್) ಏನೇ ಇದ್ದರು, ದೀಪವು ಒಂದು ಆಂದೋಲನವನ್ನು (ಆಸಿಲೇಷನ್) ಪೂರ್ಣಗೊಳಿಸಲು ನಿಖರವಾಗಿ ಒಂದೇ ಸಮಯವನ್ನು ತೆಗೆದುಕೊಳ್ಳುತ್ತದೆ ಎಂಬ ಅಂಶವನ್ನು ಗೆಲಿಲಿಯೋ ಗಮನಿಸಿದರು. ನಂತರ, ಅವರು ದಾರದ ವಿವಿಧ ಉದ್ದಗಳು ಮತ್ತು ಲೋಲಕ ಬಾಬ್‌ನ ವಿವಿಧ ದ್ರವ್ಯ ರಾಶಿಗಳೊಂದಿಗೆ ಹಲವಾರು ವೀಕ್ಷಣೆಗಳನ್ನು ಮಾಡಿದರು. ಲೋಲಕದ ಆಂದೋಲನದ ಅವಧಿಯು ಅದರ ಪಾರ ಮತ್ತು ಬಾಬ್‌ನ ದ್ರವ್ಯ ರಾಶಿಯಗಳ ಮೇಲೆ ಅವಲಂಬಿತವಾಗಿರದೆ, ಸ್ವತಂತ್ರವಾಗಿದೆ ಎಂದು ಕಂಡುಕೊಂಡರು. ಅವಧಿಯು ಲೋಲಕದ ಉದ್ದವನ್ನು ಅವಲಂಬಿಸಿರುತ್ತದೆ. ಅವಧಿಯು ಲೋಲಕದ ಉದ್ದದ ವರ್ಗ ಮೂಲಕ್ಕೆ ನೇರ ಅನುಪಾತದಲ್ಲಿರುತ್ತದೆ ಎಂದು ತೋರಿಸಿಕೊಟ್ಟರು. ಗೆಲಿಲಿಯೋ ರೋಗಿಯ ನಾಡಿಮಿಡಿತವನ್ನು ಅಳೆಯಲು ಬಳಸ ಬಹುದಾದ ಸಾಧನವನ್ನು ಸಹ ಕಂಡುಹಿಡಿದರು.1589 ರಲ್ಲಿ ಗೆಲಿಲಿಯೋ ಪಿಸಾದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ಕೇವಲ ಅರವತ್ತು ಕ್ರೌನ್‌ಗಳ ಸಂಬಳಕ್ಕೆ ನೇಮಕಗೊಂಡರು. ಈ ಅವಧಿಯಲ್ಲಿ, ತನ್ನ ಪ್ರಸಿದ್ಧ ಪ್ರಯೋಗವನ್ನು ಪಿಸಾದ ವಾಲಿದ ಗೋಪುರದ ಮೇಲ್ಬಾಗದಿಂದ ನಡೆಸಿರಬಹುದೆಂದು ಹೇಳಲಾಗಿದೆ.
ಪಿಸಾನ ವಾಲಿದ ಗೋಪುರ ಪ್ರಯೋಗ:
ದಂತ ಕತೆಯ ಪ್ರಕಾರ ಗೆಲಿಲಿಯೋ ಪಿಸಾ ನಗರದಲ್ಲಿರುವ ವಾಲಿದ ಗೋಪುರದ ತುದಿಯಿಂದ ವಿವಿಧ ದ್ರವ್ಯ ರಾಶಿಗಳಿರುವ ವಸ್ತುಗಳನ್ನು ಬೀಳಿಸಿ, ಎಲ್ಲಾ ವಸ್ತುಗಳು ಬೀಳುವ ವೇಗೋತ್ಕರ್ಷವು ದ್ರವ್ಯರಾಶಿಯನ್ನು ಅವಲಂಬಿಸದೆ, ಒಂದೇ ಆಗಿರುತ್ತದೆ ಎಂದು ಸಾಬೀತು ಪಡಿಸಿದರು. ಗೆಲಿಲಿಯೋನ ಶಿಷ್ಯ ವಿನ್ಸೆಂಜೋ ವಿವಿಯಾನಿ ಬರೆದ ಜೀವನ ಚರಿತ್ರೆಯ ಪ್ರಕಾರ , ಗೆಲಿಲಿಯೋ ಈ ಪ್ರಯೋಗವನ್ನು 1589 ಮತ್ತು 1592 ರ ನಡುವೆ ನಡೆಸಿದರೆಂದು ಹೇಳಲಾಗಿದೆ.
ಒಂದೇ ವಸ್ತುವಿನಿಂದ (ಮೆಟೀರಿಯಲ್) ಮಾಡಲ್ಪಟ್ಟ ವಿವಿಧ ದ್ರವ್ಯರಾಶಿಗಳಿರುವ ವಸ್ತುಗಳನ್ನು ಗೋಪುರದ ಮೇಲ್ಬಾಗದಿಂದ ಬೀಳಿಸಿ, ಎಲ್ಲಾ ವಸ್ತುಗಳು (ದ್ರವ್ಯ ರಾಶಿಯ ಮೇಲೆ ಅವಲಂಬಿಸದೆ) ಒಂದೇ ವೇಗದಲ್ಲಿ ಬೀಳುತ್ತವೆ ಮತ್ತು ಒಂದೇ ಸಮಯದಲ್ಲಿ ಭೂಮಿಯನ್ನು ತಲುಪುತ್ತವೆ ಎಂದು ಗೆಲಿಲಿಯೋ ಸಾಬೀತು ಪಡಿಸಿದರು. ಈ ಫಲಿತಾಂಶವು ಭಾರವಾದ ವಸ್ತುಗಳು ವೇಗವಾಗಿ ಚಲಿಸುತ್ತವೆ ಮತ್ತು ಭೂಮಿಯನ್ನು ಮೊದಲು ತಲುಪುತ್ತವೆ ಎಂಬ ಅರಿಸ್ಟಾಟಲ್‌ನ ವಾದಕ್ಕೆ ವಿರುದ್ಧವಾಗಿತ್ತು. ಆದರೆ ವಿಭಿನ್ನ ದ್ರವ್ಯ ರಾಶಿಗಳ ಎರಡು ಕಾಯಗಳು ಒಂದೇ ವೇಗದಲ್ಲಿ ಏಕೆ ಬೀಳುತ್ತವೆ ಎಂಬುದಕ್ಕೆ ಗೆಲಿಲಿಯೋ ವಿವರಣೆ ನೀಡಲಿಲ್ಲ. ಒಂದು ಶತಮಾನದ ನಂತರ, ನ್ಯೂಟನ್ ತನ್ನ ಗುರುತ್ವಾಕರ್ಷಣೆಯ ನಿಯಮದೊಂದಿಗೆ ವಿವರಣೆಯನ್ನು ನೀಡಿದ ಅಂಶವನ್ನು ಇಲ್ಲಿ ಉಲ್ಲೇಖಿಸುವುದು ಸಮಂಜಸ. ಹಲವಾರು ವರ್ಷಗಳ ನಂತರ ಅಪೊಲೊ 15 ಚಂದ್ರನ ನಡಿಗೆ ಕಾರ್ಯಾಚರಣೆಯಲ್ಲಿ ಡೇವಿಡ್ ಸ್ಕಾಟ್ ಸುತ್ತಿಗೆ ಮತ್ತು ಗರಿಯನ್ನು ಬೀಳಿಸಿದಾಗ, ಈ ಸಂಗತಿ ನಿಜವೆಂದು ಸಾಬೀತಾಗಿದೆ. ಇದು ಮೂಲಭೂತವಾಗಿ ಗಾಳಿಯ ಪ್ರತಿರೋಧವಿಲ್ಲದ ನಿರ್ವಾತವಾಗಿರುವುದರಿಂದ, ಎರಡೂ ವಸ್ತುಗಳು (ಸುತ್ತಿಗೆ ಮತ್ತು ಗರಿ) ಒಂದೇ ದರದಲ್ಲಿ ಚಲಿಸಿ, ಒಂದೇ ಸಮಯದಲ್ಲಿ ಚಂದ್ರನ ಮೇಲ್ಮೈಯನ್ನು ತಲುಪಿದವು. ಹೀಗೆ ಗೆಲಿಲಿಯೋನ ಸಂಶೋಧನೆಗಳಿಗೆ ಪುರಾವೆಗಳನ್ನು ಒದಗಿಸುತ್ತದೆ. ಇದನ್ನು ಕೆಲವೊಮ್ಮೆ ಗೆಲಿಲಿಯೋನ ಗುರುತ್ವಾಕರ್ಷಣೆಯ ಸಿದ್ಧಾಂತ ಎಂದು ಕರೆಯಲಾಗುತ್ತದೆ. ಈ ಸಿದ್ಧಾಂತದ ಪ್ರಕಾರ, ಎಲ್ಲಾ ವಸ್ತುಗಳು, ಅವುಗಳ ದ್ರವ್ಯ ರಾಶಿಯನ್ನು ಲೆಕ್ಕಿಸದೆ, ಒಂದೇ ದರದಲ್ಲಿ ಬೀಳುತ್ತವೆ ಎಂದು ಹೇಳುತ್ತದೆ.ಗೆಲಿಲಿಯೋ, ಸಿದ್ಧಾಂತಕ್ಕಿಂತ ಪ್ರಾಯೋಗಿಕ ವೀಕ್ಷಣೆಯ ಮೇಲೆ ಹೆಚ್ಚು ಅವಲಂಬಿತವಾಗಿದ್ದರೂ, ವಿಶ್ವವಿದ್ಯಾಲಯದಲ್ಲಿ ಅವರು ಅರಿಸ್ಟಾಟಲ್ ಭೌತಶಾಸ್ತ್ರವನ್ನು, ವಿಶೇಷವಾಗಿ ಸೌರವ್ಯೂಹದ ಭೂಕೇಂದ್ರಿತ ಸಿದ್ಧಾಂತವನ್ನು, ವಿವಿಧ ಕಾರಣಗಳಿಗಾಗಿ ಕಲಿಸುವುದನ್ನು ಮುಂದುವರಿಸಿದರು.
ಜಡತ್ವದ ತತ್ವ ಮತ್ತು ಚಲನೆಯ ನಿಯಮಗಳು
ಜಡತ್ವ ಎಂದರೆ ಬಲ ಪ್ರಯೋಗ ಮಾಡುವವರೆವಿಗೂ ಏಕ ರೂಪದ ಚಲನೆಯಲ್ಲಿರುವ ವಸ್ತುಗಳು ಏಕ ರೂಪ ಚಲನೆಯಲ್ಲಿ ಉಳಿಯುವ ಮತ್ತು ನಿಶ್ಚಲ ಸ್ಥಿತಿಯಲ್ಲಿರುವ ವಸ್ತುಗಳು ನಿಶ್ಚಲ ಸ್ಥಿತಿಯಲ್ಲಿ ಮುಂದುವರಿಯುವ ಪ್ರವೃತ್ತಿ. ಬಲವನ್ನು ಪ್ರಯೋಗಿಸದ ಹೊರತು, ವೇಗ ಅಥವಾ ದಿಕ್ಕನ್ನು ಬದಲಾಯಿಸುವುದಿಲ್ಲ. ಐಸಾಕ್ ನ್ಯೂಟನ್ ತನ್ನ ಮೊದಲ ಚಲನೆಯ ನಿಯಮದಲ್ಲಿ ವಿವರಿಸಿದ ಶಾಸ್ತ್ರೀಯ ಭೌತಶಾಸ್ತ್ರದ ಮೂಲಭೂತ ನಿಯಮಗಳಲ್ಲಿ ಇದು ಒಂದಾಗಿದೆ ಎಂದು ಹೇಳ ಬೇಕಾಗಿಲ್ಲ. ಜಡತ್ವವು ದ್ರವ್ಯ ರಾಶಿಯ ಅಭಿವ್ಯಕ್ತಿಯಾಗಿದೆ.
ಐತಿಹಾಸಿಕವಾಗಿ ಹೇಳುವುದಾದರೆ, ಪುನರುಜ್ಜೀವನಕ್ಕೆ ಮುಂಚಿನ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಚಲನೆಯ ಸಿದ್ಧಾಂತವು ಅರಿಸ್ಟಾಟಲ್ ಪ್ರತಿಪಾದಿಸಿದ ಸಿದ್ದಾಂತ. ಭೂಮಿಯ ಮೇಲ್ಮೈಯಲ್ಲಿ, ಭೌತಿಕ ವಸ್ತುಗಳ ಜಡತ್ವದ ಗುಣಲಕ್ಷಣವು ಹೆಚ್ಚಾಗಿ ಗುರುತ್ವಾಕರ್ಷಣೆ, ಘರ್ಷಣೆ (ಫ್ರಿಕ್ಷನ್) ಮತ್ತು ಗಾಳಿಯ ಪ್ರತಿರೋಧದಿಂದ ಮಸುಕಾಗುತ್ತದೆ. ಇದು ಚಲಿಸುವ ವಸ್ತುಗಳ ವೇಗವನ್ನು ಕಡಿಮೆ ಮಾಡುತ್ತದೆ. ಈ ಅಂಶಗಳಿಂದ, ಅರಿಸ್ಟಾಟಲ್ ವಸ್ತುಗಳ ಮೇಲೆ ಬಲವನ್ನು ಪ್ರಯೋಗಿಸುವವರೆಗೆ ಮಾತ್ರ ಚಲಿಸುತ್ತವೆ ಎಂಬ ತೀರ್ಮಾನಕ್ಕೆ ಬರಲು ಕಾರಣವಾಯಿತು. ಬಲವು ವೇಗವನ್ನು ಉತ್ಪದಿಸುತ್ತದೆ ಎಂದು ಅರಿಸ್ಟಾಟಲ್ ಹೇಳಿದರು. ಇದಕ್ಕೆ ವಿರುದ್ಧವಾಗಿ, ಬಲವು ವೇಗೋತ್ಕರ್ಷವನ್ನುಂಟು ಮಾಡುತ್ತದೆ ಎಂದು ಗೆಲಿಲಿಯೋ ಹೇಳಿದರು. ಗೆಲಿಲಿಯೋ ತನ್ನ ಜಡತ್ವದ ತತ್ವದಲ್ಲಿ, ಸಮತಟ್ಟಾದ ಮೇಲ್ಮೈಯಲ್ಲಿ ಚಲಿಸುವ ವಸ್ತುವು ಅಡಚಣೆಗೊಳಗಾಗದ ಹೊರತು ಸ್ಥಿರ ವೇಗದಲ್ಲಿ ಅದೇ ದಿಕ್ಕಿನಲ್ಲಿ ಚಲಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ. ಗೆಲಿಲಿಯೋ 1632 ರಲ್ಲಿ, ಚಲಿಸುವ ವಸ್ತು ಮತ್ತು ಸ್ಥಿರ ವಸ್ತುವಿನ ನಡುವಿನ ವ್ಯತ್ಯಾಸವನ್ನು ಕೆಲವು ಬಾಹ್ಯ ಉಲ್ಲೇಖವಿಲ್ಲದೆ (ಔಟ್‌ಸೈಡ್ ರೆಫೆರೆನ್ಸ್) ಹೇಳುವುದು ಅಸಾಧ್ಯ ಎಂದು ತೀರ್ಮಾನಿಸಿದರು.
ಇದಲ್ಲದೆ ಇಳಿತಲ (ಇನ್‌ಕ್ಲೈನ್ಡ್ ಪ್ಲೇನ್) ಬಳಸಿಕೊಂಡು ನಡೆಸಿದ ಪ್ರಯೋಗದ ಆಧಾರದ ಮೇಲೆ ಗೆಲಿಲಿಯೋ ಮೂರು ಚಲನೆಯ ನಿಯಮಗಳನ್ನು ರೂಪಿಸಿದರು.
1) ಒಂದೇ ಎತ್ತರದಿಂದ ಬಿದ್ದ ಎಲ್ಲಾ ವಸ್ತುಗಳು ಸಮಾನ ಸಮಯದಲ್ಲಿ ಭೂಮಿಯನ್ನು ತಲುಪುತ್ತವೆ.
2) ಬೀಳುವಾಗ, ಅವುಗಳ ಅಂತಿಮ ವೇಗವು ಅವುಗಳ ಪ್ರಯಾಣದ ಸಮಯಕ್ಕೆ ನೇರ ಅನುಪಾತದಲ್ಲಿರುತ್ತದೆ.
3) ಪ್ರಯಾಣದ ದೂರವು ಅವುಗಳ ಪ್ರಯಾಣದ ಸಮಯದ ವರ್ಗಕ್ಕೆ ನೇರ ಅನುಪಾತದಲ್ಲಿರುತ್ತದೆ.
ಇಳಿತಲದ ವ್ಯವಸ್ಥೆಯ ಸಹಾಯದಿಂದ ಈ ನಿಯಮಗಳನ್ನು ಪ್ರದರ್ಶಿಸಿದರು. ಇದಲ್ಲದೆ, ಒಂದು ಉತ್ ಕ್ಷೇಪಕ (ಪ್ರೊಜೆಕ್ಟೈಲ್) ವು ಪ್ಯಾರಾಬೊಲಿಕ ಪಥವನ್ನು ಅನುಸರಿಸುತ್ತದೆ ಎಂದು ತೋರಿಸಲು ಸಾಧ್ಯವಾಯಿತು.
1592 ರಲ್ಲಿ ಗೆಲಿಲಿಯೋ 1222 ರಲ್ಲಿ ಸ್ಥಾಪಿಸಲಾದ ಪಡುವಾ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪೀಠಕ್ಕೆ ಆಯ್ಕೆಯಾದರು. ಅವರು 1610 ರ ವರೆಗೆ ರೇಖಾಗಣಿತ (ಜ್ಯಾಮಿಟ್ರಿ), ಯಂತ್ರಶಾಸ್ತ್ರ (ಮೆಕಾನಿಕ್ಸ್) ಮತ್ತು ಖಗೋಳಶಾಸ್ತ್ರವನ್ನು (ಆಸ್ಟ್ರಾನಾಮಿ) ಭೋಧಿಸಿದರು. ಈ ಅವಧಿಯಲ್ಲಿ ಗೆಲಿಲಿಯೋ ಚಲನೆಯ ಕೈನೆಮ್ಯಾಟಿಕ್ಸ್‌ನ್ನು ಅಧ್ಯಯನ ಮಾಡಿದರು.
ಸೌರವ್ಯೂಹದಲ್ಲಿ ಸೂರ್ಯ ಕೇಂದ್ರಿತತ್ವದ ಬಗ್ಗೆ ಗೆಲಿಲಿಯೋ
ಗೆಲಿಲಿಯೋ, ಭೂಕೇಂದ್ರಿತ ಬ್ರಹ್ಮಾಂಡದ ಟೊಲೆಮಿಕ್ ಅಭಿಪ್ರಾಯವನ್ನು ಅನುಮಾನಿಸಿದರು ಮತ್ತು ಪೋಲಿಷ್ ಖಗೋಳಶಾಸ್ತ್ರಜ್ಞ ನಿಕೋಲಸ್ ಕೋಪರ್ನಿಕಸ್ ಪ್ರತಿಪಾದಿಸಿದ ಸೂರ್ಯ ಕೇಂದ್ರಿತ ಬ್ರಹ್ಮಾಂಡದ ಕೊಪರ್ನಿಕನ್ ದೃಷ್ಟಿಕೋನದತ್ತ ಒಲವು ತೋರಿದರು. ಗ್ರಹಗಳು ಸೂರ್ಯನ ಸುತ್ತ ವೃತ್ತಾಕಾರದ ಕಕ್ಷಿಗಳಲ್ಲಿ ಸ್ಥಿರ ವೇಗದಲ್ಲಿ ಚಲಿಸುತ್ತವೆ ಎಂದು ಕೋಪರ್ನಿಕಸ್ ಪ್ರತಿಪಾದಿಸಿದರು. ಟೈಕೊ ಬ್ರಾಹೆ ಅವರ ಭೂಗತ ವೀಕ್ಷಣಾಲಯದಲ್ಲಿ ಇಪ್ಪತ್ತು ವರ್ಷಗಳ ಕಠಿಣ ಪರಿಶ್ರಮದೊಂದಿಗೆ ಕಲೆ ಹಾಕಿದ ದತ್ತಾಂಶ ಮತ್ತು ಜೋಹಾನ್ಸ್ ಕೆಪ್ಲರ್ ಹಲವಾರು ವರ್ಷಗಳ ಕಾಲ ಅಧ್ಯಯನ ಮಾಡಿ, ದತ್ತಾಂಶದ ವಿವರವಾದ ವಿಶ್ಲೇಷಣೆಯ ಫಲವಾಗಿ ಕೆಪ್ಲರ್‌ನ ಗ್ರಹಗಳ ಚಲನೆಯ ನಿಯಮಗಳನ್ನು ನಿರೂಪಿಸಲು ಕಾರಣವಾಯಿತು. ಗೆಲಿಲಿಯೋ ಕೆಪ್ಲರ್‌ನೊಂದಿಗೆ ಸ್ನೇಹವನ್ನು ಬೆಳೆಸಲು ಫ್ರಾರಂಭಿಸಿದರು. ತಾನು ಕೋಪರ್ನಿಕನ್ ನ ಸೂರ್ಯ ಕೇಂದ್ರಿತ ಸಿದ್ಧಾಂತವನ್ನು ನಂಬುತ್ತೇನೆ, ಆದರೆ ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಹೆದರುತ್ತೇನೆ ಎಂದು ಗೆಲಿಲಿಯೋ ಕೆಪ್ಲರ್ ಬಳಿ ಒಪ್ಪಿಕೊಂಡಿದ್ದರು ಎಂದು ಹೇಳಲಾಗಿದೆ. ಅರಿಸ್ಟಾಟಲ್‌ನ ಕಟ್ಟಾ ಅನುಯಾಯಿಗಳಾಗಿದ್ದ ತನ್ನ ಸಹೋದ್ಯೋಗಿಗಳು ತನ್ನನ್ನು ಅಪಹಾಸ್ಯ ಮಾಡುತ್ತಾರೆಂದು ಗೆಲಿಲಿಯೋ ಭಾವಿಸಿದ್ದರು.
ದೂರ ದರ್ಶಕದ ಆವಿಷ್ಕಾರ ಮತ್ತು ಖಗೋಳಶಾಸ್ತ್ರದ ಅವಲೋಕನಗಳು.
ದೂರದರ್ಶಕದ ಆವಿಷ್ಕಾರವು ಬ್ರಹ್ಮಾಂಡ ಮತ್ತು ಭೂಮಿಯ ಸ್ಥಾನದ ಬಗ್ಗೆ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುವಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದೆ ಎಂದರೆ ತಪ್ಪಾಗಲಾರದು.
ಮೊದಲ ದೂರದರ್ಶಕಗಳನ್ನು 1608 ರಲ್ಲಿ ನೆದರ್‌ಲ್ಯಾಂಡ್‌ನಲ್ಲಿನ ಕನ್ನಡಕ ತಯಾರಕರಾದ ಹ್ಯಾನ್ಸ್ ಲಿಪ್ಪರ್ಶೆ ಮತ್ತು ಜಕ್ರಿಯಾಸ್ ಜಾನ್ಸನ್ ಮತ್ತು ಜಾಕೋಬ್ ಮೆಟಿಯಸ್ ಸ್ವತಂತ್ರವಾಗಿ ರಚಿಸಿದರು. ಆರಂಭಿಕ ದೂರದರ್ಶಕಗಳು ಪ್ರಾಥಮಿಕವಾಗಿ ಭೂಮಿಯ ವೀಕ್ಷಣೆಗಾಗಿ ಉದ್ದೇಶಿಸಲ್ಪಟ್ಟಿದ್ದವು. 1609 ರಲ್ಲಿ ಗೆಲಿಲಿಯೋ ವೆನಿಸ್ ನಗರವನ್ನು ತಲುಪಿದಾಗ, ಡಚ್ ಕನ್ನಡಕ ತಯಾರಕರು ದೂರದ ವಸ್ತುಗಳನ್ನು ಹತ್ತಿರಕ್ಕೆ ಕಾಣುವಂತೆ ಮಾಡುವ ಸಾಧನವನ್ನು ಕಂಡುಹಿಡಿದಿದ್ದಾರೆ ಎಂಬ ವದಂತಿಗಳನ್ನು ಕೇಳಿದರು. ನಿರ್ಮಾಣದ ಹಿಂದಿನ ಮೂಲತತ್ವವನ್ನು ಗ್ರಹಿಸಿದ ನಂತರ, ಗೆಲಿಲಿಯೋ ನಾವು ಈಗ ದೂರದರ್ಶಕ ಎಂದು ಕರೆಯುವ ಉಪಕರಣವನ್ನು 3X ವರ್ಧನೆಯೊಂದಿಗೆ (ಮ್ಯಾಗ್ನಿಫಿಕೇಷನ್) ಯಶಸ್ವಿಯಾಗಿ ನಿರ್ಮಿಸಿದರು. ನಂತರ ಅದನ್ನು 30X ವರ್ಧನೆಗೆ ಸುಧಾರಿಸಿದರು. ಗೆಲಿಲಿಯೋ ತನ್ನ ದೂರದರ್ಶಕದಿಂದ ಆಕಾಶವನ್ನು ಅನ್ವೇಷಿಸಲು ಪ್ರಾರಂಭಿಸಿದರು. ಶುಕ್ರಗ್ರಹದ ಹಂತಗಳು, ಸೂರ್ಯನ ಬಿಂದುಗಳು ಮತ್ತು ಶನಿಗ್ರಹದ ಉಂಗುರಗಳನ್ನು ಅಧ್ಯಯನ ಮಾಡಿದರು.
ನವೆಂಬರ್ 1609 ರಲ್ಲಿ ಗೆಲಿಲಿಯೋ ತನ್ನ ದೂರದರ್ಶಕವನ್ನು ಚಂದ್ರನ ಮೇಲೆ ಕೇಂದ್ರೀಕರಿಸಿ, ಅಧ್ಯಯಿಸಿ, ಚಂದ್ರನ ಮೇಲ್ಮೈ ಪರ್ವತಗಳು ಮತ್ತು ಕುಳಿಗಳಿಂದ ಅಸಮವಾಗಿದೆ ಎಂದು ಕಂಡುಕೊಂಡರು.
ಜನವರಿ 1610 ರಲ್ಲಿ, ಗೆಲಿಲಿಯೋ ಗುರುಗ್ರಹದ ನಾಲ್ಕು ಚಂದ್ರಗಳನ್ನು ಕಂಡುಹಿಡಿದರು ಮತ್ತು ಅವು ಗುರುಗ್ರಹವನ್ನು ಸುತ್ತುತ್ತವೆ ಎಂದು ತೀರ್ಮಾನಿಸಿದರು. ಗೆಲಿಲಿಯೋ ಅವುಗಳನ್ನು ಮೆಡಿಸಿಯನ್ ನಕ್ಷತ್ರಗಳು ಎಂದು ಕರೆದರು. ಈಗ ಅವುಗಳನ್ನು ಐಒ, ಯುರೋಪಾ, ಗ್ಯಾನಿಮೀಡ್ ಮತ್ತು ಕ್ಯಾಲಿಸ್ಟೊ ಎಂದು ಕರೆಯಲಾಗುತ್ತದೆ. ಅನೇಕ ಖಗೋಳ ಶಾಸ್ತ್ರಜ್ಞರು ಮತ್ತು ತತ್ವಜ್ಞಾನಿಗಳು ಇದು ಅರಿಸ್ಟಾಟಲ್ ನ ವಿಶ್ವ ವಿಜ್ಞಾನಕ್ಕೆ ಅನುಗುಣವಾಗಿಲ್ಲದ ಕಾರಣ ನಂಬಲು ನಿರಾಕರಿಸಿದರು. ಸೆಪ್ಟೆಂಬರ್ 1610 ರಲ್ಲಿ, ಶುಕ್ರಗ್ರಹದ ಹಂತಗಳನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ, ಚಂದ್ರನ ಹಂತಗಳಿಗೆ ಹೋಲುತ್ತದೆ ಎಂಬ ಅಂಶವನ್ನು ಧೃಡಪಡಿಸಿದರು. ಸೂರ್ಯ ಕೇಂದ್ರಿತ ಕೋಪರ್ನಿಕಸ್ ಮಾದರಿಯು ಶುಕ್ರದ ಹಂತಗಳನ್ನು ನೋಡಲು ಸಾಧ್ಯವಿದೆ ಎಂದು ಊಹಿಸಿತ್ತು. ಏಕೆಂದರೆ, ಶುಕ್ರಗ್ರಹವು ಸೂರ್ಯನ ಸುತ್ತ ಸುತ್ತುತ್ತಿರುವಾಗ ಪ್ರಕಾಶಮಾನವಾದ ಗೋಳಾರ್ಧವು ಸೂರ್ಯನ ವಿರುದ್ಧ ಬದಿಯಲ್ಲಿದ್ದಾಗ, ಭೂಮಿಯನ್ನು ಎದುರಿಸುತ್ತದೆ ಮತ್ತು ಭೂಮಿಯಂತೆಯೇ ಅದೇ ಬದಿಯಲ್ಲಿದ್ದಾಗ, ಭೂಮಿಯಿಂದ ದೂರ ಮುಖ ಮಾಡುತ್ತದೆ. ಆದರೆ ಟಾಲೆಮಿಯ ಭೂಕೇಂದ್ರಿತ ಸಿದ್ಧಾಂತದ ಪ್ರಕಾರ, ಹಂತಗಳನ್ನು ನೋಡುವುದು ಅಸಾಧ್ಯ. ಶುಕ್ರಗ್ರಹದ ಹಂತಗಳಾದ, ಅರ್ಧಚಂದ್ರ, ಗಿಬ್ಬಸ್ ಮತ್ತು ಪೂರ್ಣ ಹಂತವು ಸೌರವ್ಯೂಹದ ಸೂರ್ಯ ಕೇಂದ್ರಿತ ಸಿದ್ಧಾಂತವನ್ನು ಬೆಂಬಲಿಸಿತು. ಟಾಲೆಮಿಯ ಸಿದ್ಧಾಂತವು ಸ್ವೀಕಾರಾರ್ಹವಲ್ಲ ಎಂಬ ಅಂಶ ಧೃಡಪಟ್ಟಿತು.
ಗೆಲಿಲಿಯೋ ಸೂರ್ಯನ ಬಿಂದುಗಳನ್ನು ದೂರದರ್ಶಕದಿಂದ ವೀಕ್ಷಿಸಿದರು. ಕ್ಷೀರಪಥವು (ಮಿಲ್ಕಿ ವೇ) ಅಸಂಖ್ಯಾತ ನಕ್ಷತ್ರಗಳನ್ನು ಒಳಗೊಂಡಿದೆ ಎಂದು ಕಂಡುಹಿಡಿದರು. ಇದನ್ನು ಹಿಂದೆ ನೆಬುಲ (ನೀಹಾರಿಕೆ) ಎಂದು ನಂಬಲಾಗಿತ್ತು. ಅವರು ಶನಿ ಗ್ರಹದ ಉಂಗುರಗಳನ್ನು ಸಹ ಗಮನಿಸಿದರು.
ಗೆಲಿಲಿಯೋ ಈ ಎಲ್ಲಾ ಅವಲೋಕನಗಳನ್ನು 1610 ರಲ್ಲಿ ಪ್ರಕಟವಾದ “ಸ್ಟಾರ್ರಿ ಮೆಸೆಂಜರ್” ಎಂಬ ಪುಸ್ತಕದಲ್ಲಿ ಪ್ರಕಟಿಸಿದರು. ಈ ಎಲ್ಲಾ ಅವಲೋಕನಗಳೊಂದಿಗೆ ಯೂರೋಪ್ ನಲ್ಲಿ ಸಂವೇದನೆ ಉಂಟಾಯಿತು. ಗೆಲಿಲಿಯೋ, ತಮ್ಮ ಜೀವನದ್ದುದ್ದಕ್ಕೂ ಕೆಪ್ಲರ್‌ನ ಅಂಡಾಕಾರಾ ಗ್ರಹಗಳ ಕಕ್ಷೆಗಳ ಕಲ್ಪನೆಯನ್ನು ತಿರಸ್ಕರಿಸಿದರು ಮತ್ತು ಗ್ರಹಗಳ ಕಕ್ಷೆಗಳು ವೃತ್ತಾಕಾರವಾಗಿವೆ ಎಂಬ ಅರಿಸ್ಟಾಟಲ್ ಕಲ್ಪನೆಯನ್ನು ನಂಬಿದ್ದರು. “ಸನ್ ಸ್ಪಾಟ್ಸ್” ಬಗ್ಗೆ ಸಣ್ಣ ಪುಸ್ತಕವನ್ನು ಪ್ರಕಟಿಸಿದರು.
ವಿಚಾರಣೆ
“ಸ್ಟಾರ್ರಿಮೆಸೆಂಜರ್” ಮತ್ತು “ಸನ್ ಸ್ಪಾಟ್‌ಗಳ” ಕಿರು ಪುಸ್ತಕದ ಪ್ರಕಟಣೆ ಮತ್ತು ಅವುಗಳ ಜನಪ್ರಿಯತೆಯು ಅರಿಸ್ಟಾಟಲ್ ಸಿದ್ಧಾಂತದ ಪ್ರತಿಪಾದಕರನ್ನು ಗೆಲಿಲಿಯೋ ವಿರುದ್ಧ ವೈರತ್ವಕ್ಕೆ ಎಳೆಯಿತು. ಅವರು ಸೂರ್ಯ ಕೇಂದ್ರಿತ ಬ್ರಹ್ಮಾಂಡವು ಬೈಬಲ್ ನಲ್ಲಿ ಮಂಡಿಸಲಾದ ಬ್ರಹ್ಮಾಂಡದ ದೃಷ್ಟಿಕೋನಗಳಿಗೆ ಅನುಗುಣವಾಗಿಲ್ಲ ಎಂದು ಬಹಿರಂಗವಾಗಿ ಹೇಳಿದರು. 1616 ರಲ್ಲಿ “ಸ್ವರ್ಗೀಯ ಕಾಯಗಳ ತಿರುಗುವಿಕೆ” ಕುರಿತಾದ ಕೋಪರ್ನಿಕಸ್‌ನ ಪುಸ್ತಕವನ್ನು ಚರ್ಚ್ ನಿಷೇಧಿಸಿತು ಮತ್ತು ತಪ್ಪು ಎಂದು ತೀರ್ಮಾನಿಸಿತು. ಕೋಪರ್ನಿಕನ್ ದೃಷ್ಟಿಕೋನಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಬಾರದೆಂದು ಗೆಲಿಲಿಯೋಗೆ ಬಲವಾಗಿ ಎಚ್ಚರಿಕೆ ನೀಡಲಾಯಿತು. “ಎರಡು ಮುಖ್ಯ ವಿಶ್ವ ವ್ಯವಸ್ಥೆಗಳಾದ ಟೋಲೆಮಿಕ್ ಮತ್ತು ಕೋಪರ್ನಿಕನ್‌ಗೆ ಸಂಬಂಧಿಸಿದ ಸಂವಾದ” ಎಂಬ ಶೀರ್ಷಿಕೆಯ ಸಂಭಾಷಣೆಯ ರೂಪದಲ್ಲಿ ಬರೆದ ಗೆಲಿಲಿಯೋನ ಕೃತಿ ಚರ್ಚ್ ಅಧಿಕಾರಿಗಳನ್ನು ಮತ್ತಷ್ಟು ಕೆರಳಿಸಿತು. ಗೆಲಿಲಿಯೋನ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಲು ಪೋಪ್ ಆದೇಶಿಸಿದರು. ಆದರೆ ಪೋಪ್ ಅಧಿಕಾರಿಗಳು ಪುಸ್ತಕವನ್ನು ಅನುಮತಿಸಿದ್ದರಿಂದ ಕ್ರಮ ಜರುಗಿಸಲು ಸಾದ್ಯವಾಗಲಿಲ್ಲ. ಆದರೆ ಚರ್ಚ್ ಅಧಿಕಾರಿಗಳು ಬೇರೊಂದು ಮಾರ್ಗವನ್ನು ಕಂಡುಕೊಂಡರು. ಅವರು ಕಡತಗಳ ರಾಶಿಯನ್ನು ಬಗೆದು ನೋಡಿದಾಗ, 1616 ರಲ್ಲಿ ಬರೆಯಲಾದ ದೋಷಾರೋಪಣೆಯ ದಾಖಲೆಯೊಂದು ದೊರಕಿತು. ಅದರಲ್ಲಿ ಗೆಲಿಲಿಯೋ ತಾನು ಕೋಪರ್ನಿಕನ್ ದೃಷ್ಟಿಕೋನಗಳನ್ನು ಕಲಿಸುವುದನ್ನು ಅಥವಾ ಹೊಗಳುವುದನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದರು. ಗೆಲಿಲಿಯೋಗೆ ಬುದ್ಧಿವಾದ ಹೇಳಲಾಯಿತು ಮತ್ತು ಅವರು ಕೋಪರ್ನಿಕಸಂ ಅನ್ನು ತಿರಸ್ಕರಿಸುವಂತೆ ಮಾಡಲಾಯಿತು. ಫಲವಾಗಿ ತನ್ನ ಸೂರ್ಯ ಕೇಂದ್ರಿತ ದೃಷ್ಟಿಕೋನಗಳನ್ನು ತ್ಯಜಿಸಿದರು, ತ್ಯಜಿಸುತ್ತೇನೆ ಮತ್ತು ದ್ವೇಷಿಸುತ್ತೇನೆ ಎಂದು ಪ್ರಮಾಣೀಕರಿಸಿದರು. ಗೆಲಿಲಿಯೋಗೆ ಗೃಹ ಬಂಧನ ಶಿಕ್ಷೆಯನ್ನು ನೀಡಲಾಯಿತು. ಅವರು ತಮ್ಮ ಜೀವನದ ಕೊನೆಯ ಎಂಟು ವರ್ಷಗಳನ್ನು ಗೃಹ ಬಂಧನದಲ್ಲಿ ಏಕಾಂತದಲ್ಲಿ ಕಳೆದರು. ಗೆಲಿಲಿಯೋ ಅಂತಿಮವಾಗಿ ಜನವರಿ 8, 1642 ರಂದು ದುರ್ಬಲ ಮತ್ತು ಕುರುಡರಾಗಿ ಇಹಲೋಕ ತ್ಯಜಿಸಿದರು. ಕ್ರಿಶ್ಚಿಯನ್ ಧರ್ಮದಂತೆ ಅಂತಿಮ ಸಂಸ್ಕಾರ ಮಾಡಲು ಚರ್ಚ್ ಒಪ್ಪಲಿಲ್ಲ ಹಾಗೂ ಗೆಲಿಲಿಯೋ ಗೌರವಾರ್ಥ ಸ್ಮಾರಕಗಳನ್ನು ನಿರ್ಮಿಸಲು ಅನುಮೋದನೆ ನೀಡಲಿಲ್ಲ. ಆದರೆ ಯುರೋಪಿಯನ್ ಭೌತಶಾಸ್ತ್ರಜ್ಞರಾಗಿ ಪ್ರಪಂಚದಾದ್ಯಂತ ಜನರ ಮನದಲ್ಲಿ ಚಿರಸ್ಥಾಯಿಯಾದರು. 1992 ರಲ್ಲಿ 350 ವರ್ಷಗಳ ನಂತರ, ಗೆಲಿಲಿಯೋನನ್ನು ಹಿಂಸಿಸುವಲ್ಲಿ ತಾನು ತಪ್ಪು ಮಾಡಿದ್ದೇನೆ ಎಂದು ವ್ಯಾಟಿಕನ್ ಚರ್ಚ್ ಒಪ್ಪಿಕೊಂಡಿತು.
ನಾವು ಅವರ ಎಂಜಿನಿಯರಿಂಗ್ ಸಾಧನೆಗಳನ್ನು ಪರಿಶೀಲಿಸಿದಾಗ, ಅವರು ತಮ್ಮ ಪ್ರಾಯೋಗಿಕ ಕೌಶಲ್ಯಗಳನ್ನು ಬಳಸುವಲ್ಲಿ ನಿಪುಣರಾಗಿದ್ದರು ಎಂಬ ಅಂಶವು ದೃಢಗೊಳ್ಳುತ್ತದೆ. ಗೆಲಿಲಿಯೋ ಮೊದಲ ಥರ್ಮಾಮೀಟರ್ ಅನ್ನು ಕಂಡುಹಿಡಿದರು. ಜ್ಯಾಮತೀಯ ಮತ್ತು ಮಿಲಿಟರಿ ದಿಕ್ಸೂಚಿಯನ್ನು (ಕಂಪಾಸ್) ವಿನ್ಯಾಸಗೊಳಿಸಿದರು. ಕುದುರೆಯಿಂದ ನಿರ್ವಹಿಸಲ್ಪಡುವ ನೀರಿನ ಪಂಪನ್ನು ಕಂಡು ಹಿಡಿದರು.
ಗೆಲಿಲಿಯೋ ಅಂತರ್ಮುಖಿ, ಅನ್ವೇಷಣಾಶೀಲ ಮತ್ತು ಬುದ್ಧಿಜೀವಿ. ಅವರು ಯಾವುದೇ ಸಮಸ್ಯೆಗೆ ತಮ್ಮ ವಿಧಾನದಲ್ಲಿ ವಿಶ್ಲೇಷಣಾತ್ಮಕ ಮತ್ತು ತಾರ್ಕಿಕವಾಗಿದ್ದರು. ಅವರ ಶಿಷ್ಯ ವಿವಿಯಾನಿಯ ಪ್ರಕಾರ, ಗೆಲಿಲಿಯೋ ಬೇಗನೆ ಕೋಪಗೊಳ್ಳುತ್ತಿದ್ದರು ಮತ್ತು ಅಷ್ಟೇ ಬೇಗನೆ ಶಾಂತರಾಗುತ್ತಿದ್ದರು. ಅವರು ಉತ್ತಮ ವಾಗ್ಮಿ, ಶಿಕ್ಷಕ ಮತ್ತು ಉತ್ಸಾಹಿ ಸಂಶೋಧಕರಾಗಿದ್ದರು. ತಮ್ಮ ಭೌದ್ಧಿಕ ಅನ್ವೇಷಣೆಗಳ ಮೂಲಕ, ಗೆಲಿಲಿಯೋ ವಿಜ್ಞಾನದ ಇತಿಹಾಸದಲ್ಲಿ ಅಳಿಸಲಾಗದ ಗುರುತನ್ನು ಬಿಟ್ಟಿದ್ದಾರೆ. ಗೆಲಿಲಿಯೋನ ಒಂದು ಉಲ್ಲೇಖದೊಂದಿಗೆ ಲೇಖನವನ್ನು ನಾನು ಮುಕ್ತಾಯಗೊಳಿಸುತ್ತೇನೆ.
“Passion is the genesis of genius”
“ಭಾವೋದ್ರೇಕವು ಪ್ರತಿಭೆಯ ಮೂಲವಾಗಿದೆ”


