23.5 C
Karnataka
Monday, May 20, 2024

    ಮುದುಕಿ ಹೇಳಿದ ಸರ್ ಎಂ.ವಿ. ಕತೆ – ಸರ್ ಎಂ.ವಿ ತಿಳಿದ ಮುದುಕಿ ಕತೆ

    Must read

    ಕಳೆದ ತಿಂಗಳು ಸರ್ ಎಂ.ವಿ ಅವರ ಜನ್ಮ ದಿನದಂದು ಕನ್ನಡಪ್ರೆಸ್ .ಕಾಮ್ ನಲ್ಲಿ ಪ್ರಕಟವಾದ ಲೇಖನವೊಂದನ್ನು ಓದಿದ ನಾಡಿನ ಹೆಸರಾಂತ ಕಥೆಗಾರ ಕೆ. ಸತ್ಯನಾರಾಯಣ ಅವರು ತಾವು ಸರ್ ಎಂವಿ ಕುರಿತು ಬಹಳ ಹಿಂದೆ ಬರೆದಿದ್ದ ಕಥೆಯನ್ನು ಈ ತಲೆಮಾರಿನ ಓದುಗರಿಗೂ ತಲುಪಲಿ ಎಂಬ ಆಶಯದೊಂದಿಗೆ ನಮಗೆ ಕಳುಹಿಸಿಕೊಟ್ಟರು. ವೈಎನ್ಕೆ ಅವರು ಕನ್ನಡಪ್ರಭ ಸಂಪಾದಕರಾಗಿದ್ದಾಗ ಈ ಕಥೆ ಅಲ್ಲಿ ಪ್ರಥಮವಾಗಿ ಪ್ರಕಟವಾಗಿತ್ತು.ನಂತರ ಎಸ್ ದಿವಾಕರ ಸಂಪಾದಕತ್ವದಲ್ಲಿ ಹೊರ ಬಂದ ಶತಮಾನದ ಕಥೆಗಳು ಪುಸ್ತಕದಲ್ಲೂ ಈ ಕಥೆ ಸೇರಿತು. ಇದನ್ನು ಆಧರಿಸಿ ೨೦೦೦ರಲ್ಲಿ ದೂರದರ್ಶನದಲ್ಲಿ ಕಿರುಚಿತ್ರವೂ ಪ್ರಸಾರವಾಗಿತ್ತು.


    ಕನ್ನಡದ ಪ್ರಮುಖ ಬರೆಹಗಾರರಲ್ಲಿ ಒಬ್ಬರಾಗಿರುವ ಕೆ.ಸತ್ಯನಾರಾಯಣ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ 1954ರ ಏಪ್ರಿಲ್‌ 21ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸುವರ್ಣ ಪದಕದೊಂದಿಗೆ ಪದವಿ ಪಡೆದು, ಅಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್‌ ರೆವಿನ್ಯೂ ಸರ್ವಿಸ್‌ಗೆ ಸೇರಿದ ಅವರು ಆದಾಯ ತೆರಿಗೆ ಇಲಾಖೆಯಿಂದ ನಿವೃತ್ತರಾಗುವಾಗ ಕರ್ನಾಟಕ ಮತ್ತು ಗೋವಾ ವಲಯದ ಮುಖ್ಯ ಆಯುಕ್ತರಾಗಿದ್ದರು. ಸಣ್ಣಕತೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣ ಬರೆಹ, ವಿಮರ್ಶೆ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅವರ 30ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಬಂದಿವೆ. ಬೆಂಗಳೂರು ವಿಶ್ವವಿದ್ಯಾನಿಲಯ ಅವರಿಗೆ 2013ರಲ್ಲಿ ಗೌರವ ಡಾಕ್ಟರೇಟ್‌ ನೀಡಿದೆ.

    .

    (ಕೆಲವು ವರ್ಷಗಳ ಹಿಂದೆ ಊರಿಗೆ ಹೋಗಿದ್ದಾಗ ತಿಳಿದ ಕತೆ ಇದು)

    ನಮ್ಮ ಸೀಮೆಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರು ಬಹಳ ಪ್ರಸಿದ್ಧರು ಎಂದರೆ ಏನೂ ಹೇಳಿದ ಹಾಗಾಗುವುದಿಲ್ಲ. ಬದಲಿಗೆ ಭಗೀರಥ – ಗಂಗೆ ಕತೆಯನ್ನು ನೀವು ಹೇಳಬೇಕಾದರೆ ಸರ್.ಎಂ.ವಿ. ಕತೆಯನ್ನು ಪೀಠಿಕೆಯಾಗಿ ಹೇಳಿ ಭಗೀರಥನ ತಪಸ್ಸು ಪರಿಶ್ರಮವನ್ನು ವಿವರಿಸಿದರೆ ಜನಕ್ಕೆ ಭಗೀರಥನ ಕತೆ ಸರಿಯಾಗಿ ಗೊತ್ತಾಗುತ್ತದೆ ಎಂದರೆ ಸರ್.ಎಂ.ವಿ. ಪ್ರಭಾವ ನಮ್ಮ ಸೀಮೆಯಲ್ಲೆಷ್ಟು ಎಂಬುದು ನಿಮ್ಮ ಊಹೆಗೆ ಬರಬಹುದು.

    ಕನ್ನಂಬಾಡಿ ಕಟ್ಟೆ ಕಟ್ಟಿ ಅದರಲ್ಲಿ ಶೇಖರಿಸಿದ ನೀರಿನ ವಿತರಣೆಗೆ ಮಂಡ್ಯ ಜಿಲ್ಲೆಯ ಉದ್ದಕ್ಕೂ ನಾಲೆ ಕಟ್ಟಿಸುವ ಕೆಲಸಕ್ಕೆ ಸಂಬಂಧಪಟ್ಟ ಹಾಗೆ ಸರ್.ಎಂ.ವಿ. ಊರಿಗೆ ಬಂದದ್ದನ್ನು ಈಗಲೂ ಜನ ನೆನಸಿಕೊಳ್ಳುತ್ತಾರೆ. ಅವರು ನಮ್ಮ ಊರಿಗೆ ಬಂದಾಗ ಬೆಳಿಗ್ಗೆಯಾಗಿತ್ತೋ, ಮಧ್ಯಾಹ್ನವಾಗಿತ್ತೋ ಅನ್ನುವುದು ಕೂಡ ಊರವರ ನೆನಪಿನಲ್ಲಿದೆ. ಪ್ರತಿ ಗ್ರಾಮದ ಮಣ್ಣನ್ನು ಅವರು ಮುಟ್ಟಿ ನೋಡಿ, ಮುಷ್ಠಿಯಲ್ಲಿ ಹಿಡಿದು ಪರೀಕ್ಷೆ ಮಾಡಿ ಈ ಮಣ್ಣು ಈ ಬೆಳೆಗೆ, ಇಂತಹ ಹಣ್ಣಿಗೆ ಎಂದು ಗ್ರಾಮಸ್ಥರಿಗೆ ಹೇಳೋರಂತೆ.

    ಗಾಂಧೀ, ಸುಭಾಷ್, ನೆಹರೂ, ವಿವೇಕಾನಂದ, ಶಿವಾಜಿ, ವಿಶ್ವೇಶ್ವರಯ್ಯ- ಇವರ ಪೋಟೋಗಳು ನಮ್ಮ ಸೀಮೆಯ ಎಲ್ಲ ಅನುಕೂಲಸ್ಥ ಕುಳಗಳ ಮನೆಯಲ್ಲೂ ಇವೆ.ಒಂದೊಂದು ಸಲ ಗಾಂಧೀ ಫೋಟೋ ಇರುವ ಒಂದು ಮನೆಯಲ್ಲಿ ವಿವೇಕಾನಂದರ ಫೋಟೋ ಇಲ್ಲದೆ ಇರಬಹುದು ಶಿವಾಜಿ ಫೋಟೋ ಇರುವ ಮನೆಯಲ್ಲಿ ನೆಹರೂ ಫೋಟೋ ಇಲ್ಲದೆ ಇರಬಹುದು. ಆದರೆ ಎಲ್ಲರ ಮನೆಯಲ್ಲೂ ಸರ್.ಎಂ.ವಿ .ಫೋಟೋ ಮಾತ್ರ ಗ್ಯಾರಂಟಿ. ಅಷ್ಟೇ ಏಕೆ, ಒಕ್ಕಲಿಗರ ಮನೆಗಳಲ್ಲಿ ಪಕ್ಷದ ದಿವಸ ಎಡೆ ಇಟ್ಟಾಗ ಸರ್.ಎಂ.ವಿ ಫೋಟೋದ ಮುಂದೆ ಕೂಡ ಎಡೆ ಇಡುತ್ತಾರೆ. ಶೆಟ್ಟರ ಮನೆಗಳಲ್ಲಿ ದೀಪಾವಳಿ ಸಮಯದಲ್ಲಿ ಲಕ್ಷ್ಮೀ ಪೂಜೆಗೆಂದು ಇರುವ ಲೆಕ್ಕ ಪುಸ್ತಕಗಳ ಜೊತೆಗೆ ಸರ್.ಎಂ.ವಿ. ಫೋಟೋನು ಇಡುತ್ತಾರೆ. ಬ್ರಾಹ್ಮಣರ ಮನೆಗಳಲ್ಲಿ ದೇವರ ಫೋಟೋಗೆ ಇಡುವಂತೆ ಇವರ ಫೋಟೋಗೂ ಗಂಧ, ಕುಂಕುಮ ಇಟ್ಟಿರುವುದನ್ನು ನೀವು ನೋಡಬಹುದು.

    ತಮ್ಮ ಮಕ್ಕಳು ಅವರಷ್ಟೇ ಬುದ್ದಿವಂತರಾಗಲಿ ಅನ್ನೋ ಆಸೆಯಿಂದ ಎಷ್ಟೋ ತಂದೆ ತಾಯಿಗಳು ಇವರ ಹೆಸರನ್ನು ಮಕ್ಕಳಿಗಿಡುವುದುಂಟು. ಅಣ್ಣ-ತಮ್ಮ ಇಬ್ಬರಿಗೂ ಅವರ ಹೆಸರನ್ನೇ ದೊಡ್ಡ ವಿಶ್ವೇಶ್ವರಯ್ಯ, ಚಿಕ್ಕ ವಿಶ್ವೇಶ್ವರಯ್ಯ ಎಂದು ಕರೆಯುವುದೂ ಉಂಟು. ಇಷ್ಟೆಲ್ಲಾ ಇರುವಾಗ ಪ್ರತಿ ಗ್ರಾಮದಲ್ಲೂ ಯುವಕ ಸಂಘಗಳು ಅವರ ಹುಟ್ಟಿದ ಹಬ್ಬನ ಬಹು ವಿಜೃಂಭಣೆಯಿಂದ ಆಚರಿಸೋದರಲ್ಲಿ ಹೆಚ್ಚೇನಿದೆ? ಅವತ್ತು ಶಾಲೆಗಳಿಗೆ ರಜ, ಜಾನುವಾರುಗಳಿಗೆ ಬಿಡುವು, ಶಾಸಕರು, ಸರ್ಕಲ್ ಇನ್ಸ್‌ಪೆಕ್ಟರ್, ಹೆಡೆಮಾಸ್ಟರ್, ಡಾಕ್ಟರ್- ಹೀಗೆ ಎಲ್ಲ ಗಣ್ಯರೂ ಸಭೆಯಲ್ಲಿ ಮಾತನಾಡುತ್ತಾರೆ. ಅವರಲ್ಲಿ ಎಷ್ಟೋ ಜನ ಸರ್.ಎಂ.ವಿ ಯವರನ್ನು ನೋಡದೇ ಇದ್ದರೂ ತಾವೇ ಅವರನ್ನು ಕಣ್ಣಾರೆ ಕಂಡವರಂತೆ, ಮಾತನಾಡಿಸಿದವರಂತೆ ಭಾಷಣ ಮಾಡುತ್ತಾರೆ. ಅವರು ಹೇಳುವ ಮಾತುಗಳಲ್ಲಿ ಸುಳ್ಳು, ಉತ್ಪ್ರೇಕ್ಷೆ ಇದ್ದರೂ, ಇದೆಲ್ಲ ಕೃತಜ್ಞತೆಯಿಂದ, ಪ್ರೀತಿಯಿಂದ, ವಾಂಛೆಯಿಂದ ಹೇಳುವ ಮಾತಾದ್ದರಿಂದ ನಿಜಕ್ಕಿಂತಲೂ ಹೆಚ್ಚು ಇಷ್ಟವಾಗುತ್ತದೆ- ಹೇಳುವವರಿಗೂ, ಕೇಳುವವರಿಗೂ.
    ****
    ಈ ವರ್ಷದ ಹುಟ್ಟಿದ ಹಬ್ಬಕ್ಕೆ ನನ್ನನ್ನೂ ಭಾಷಣಕ್ಕೆ ಕರೆದಿದ್ದರು. ನಾನು ನನ್ನ ಹತ್ತಿರ ಇದ್ದ ಪುಸ್ತಕ, ಪತ್ರಿಕೆಗಳನ್ನೆಲ್ಲ ತಿರುವಿ ಹಾಕಿ ಸರ್.ಎಂ.ವಿ. , ಗಾಂಧಿ, ನೆಹರೂ, ಹನುಮಂತಯ್ಯ, ಮೋತಿಲಾಲ್ ಇಂತಹವರನ್ನೆಲ್ಲ ಭೇಟಿ ಮಾಡಿದಾಗ ಏನೇನು ಮಾತುಕತೆ ನಡೆಯಿತು ಅನ್ನೋದನ್ನೆಲ್ಲ ಪಟ್ಟಿ ಮಾಡಿಕೊಂಡು ಆಕರ್ಷಣೀಯವಾಗಿ ಹೇಳಬೇಕೆಂದು ಲೆಕ್ಕಹಾಕಿದ್ದೆ. ಮೊದಲು ಪ್ರಿನ್ಸಿಪಾಲ್ ಭಾಷಣ, ಆಮೇಲೆ ಮಾಜಿ ಎಂ.ಎಲ್.ಸಿ ದು, ಆಮೇಲೆ ನನ್ನದು, ಹೀಗಿತ್ತು ಭಾಷಣದ ಸರದಿ.

    ಮಾಜಿ ಎಂ.ಎಲ್.ಸಿ. ಭಾಷಣ ಮುಗಿಸ್ತಾ ಇದೀನಿ, ಭಾಷಣ ಮುಗಿಸ್ತಾ ಇದೀನಿ ಅಂತ ಎರಡು ಸಲ ಹೇಳಿದ ಮೇಲು ಇನ್ನು ಭಾಷಣ ಮಾಡ್ತಾನೆ ಇದ್ದರು. ಆವಾಗಲೇ ಈ ಮುದುಕಿ ಮೀಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಬಂದದ್ದು. ‘ಹೋಗಮ್ಮಾ ಹೊರಗಡೆ ನೀನು ನಿನಗೇನು ಕೆಲಸ ಇಲ್ಲಿ’ ಎಂದು ಜನ ಕೂಗಾಡಿ, ಗದರಿಸಿ, ಮಾತಿನಲ್ಲಿ ಅವಳನ್ನು ಹೊರಗಟ್ಟಬೇಕೆಂದುಕೊಂಡಿದ್ದರೂ ಆ ಮುದುಕಿ ಒಳಕ್ಕೆ ಬಂದೇ ಬಿಟ್ಟಿತು. ಸೊಂಟ, ಬೆನ್ನು ಎರಡೂ ಒಂದೇ ಆಗಿಬಿಟ್ಟಿದೆ. ಗೂನು ಅಂತ ಪ್ರತ್ಯೇಕ ಹೇಳುವ ಹಾಗೇ ಇಲ್ಲ. ಕತ್ತನ್ನು ಮೇಲೆತ್ತಿದರೆ ತಾನೇ ಮುಖ ಹೇಗಿದೆ ಅಂತಾ ಹೇಳೋದು. ಸೊಂಟ, ಬೆನ್ನು ಎಲ್ಲಾ ಒಂದೇ ಆಗಿ, ದೇಹದ ಆಕೃತಿ ಮೂರು-ಮೂರುವರೆ ಅಡಿಗೆ ಬಂದುಬಿಟ್ಟಿದೆ. ಚಪ್ಪಟೆ ಬೆನ್ನು ಪ್ರಾಣಿಯ ಮೂತಿಯಂತೆ ಮುಂದೆ ಮಾಡಿದ ತಲೆ ಕಾಣುತ್ತಿದೆ. ಯಾರಿದು ಈ ಮುದುಕಿ-ಇಲ್ಲಿಗೇಕೆ ಬಂತು ಎಂದು ನಾನು ಅಂದುಕೊಳ್ಳುತ್ತಿರುವಾಗಲೇ ಆ ಮುದುಕಿ ಗೊಗ್ಗರು ದನಿಯಲ್ಲಿ ಮಾತಿಗೆ ಶುರು ಮಾಡಿತು. ‘ನಿನಗೇನು ಗೊತ್ತಿರೋದು-ಅವನ ಕತೆ-ನನಗೂ ಗೊತ್ತು. ನಾನೂ ಹೇಳ್ತೀನಿ. ನನಗೆ ಬಹಳ, ಬಹಳ ಉಪಕಾರ
    ಆಗಿದೆ ಅವನಿಂದ. ಹೀಗೇ ಒಂದು ಸಲ ಅವನು ನಮ್ಮ ಊರಿಗೆ ಬಂದು ಪಂಚಾಯಿತಿ ಆಫೀಸಿನಲ್ಲಿ…’ …ಮುದುಕಿ ಬಡಬಡಿಸೋಕ್ಕೆ ಶುರು ಮಾಡೇಬಿಟ್ಟಿತು. ಈಗ ಅದು ತನ್ನ ಎರಡು ಕೈಯನ್ನು ಕುರ್ಚಿಯ ಮೇಲೆ ಊರಿತ್ತು. ಬೋಳುತಲೆ, ಮುಖವೆಲ್ಲ ನೆಲನ ನೋಡ್ತಾ ಇದೆ. ಎಷ್ಟಿರಬಹುದು ವಯಸ್ಸು ಎಪ್ಪತ್ತೈದು, ಎಂಭತ್ತು, ಎಷ್ಟಾದರೂ ಇರಬಹುದು. ಬೋಳುತಲೆ ನೋಡಿದರೆ ಬ್ರಾಹ್ಮಣ ವಿಧವೆಯಿರಬಹುದು ಅನ್ನಿಸಿತು. ಆದರೆ ಕೆಂಪು ಸೀರೆಯಿಲ್ಲವಲ್ಲ. ಕಪ್ಪು ಬಣ್ಣದ ಸೀರೆ ಉಟ್ಟಿದೆ. ಇಲ್ಲ ಸರಿಯಾಗಿ ನೋಡಿದರೆ ಸೀರೆ ಮೈಮೇಲೆ ಹೇಗೆ ಹೇಗೋ ಕುಳಿತಿದೆ, ಅಷ್ಟೆ.

    ಮಾಜಿ ಎಂ.ಎಲ್.ಸಿ ಕೂಡ ಕೂಗಿದರು. ‘ ಏ ಭಾಗಮ್ಮ, ನೀನು ಮನೆಗೆ ಹೋಗು ನಿನಗೇನು ಕೆಲಸ ಇಲ್ಲಿ?’ ಜನ ಕೂಡ ‘ಹೋಗು ಹೋಗು, ಹೊರಗಡೆ ಹೋಗು’ ಅಂತ ಗದರಿಸ್ತಾ ಇದ್ದರೂ ಆ ಮುದುಕಿ ನಿಂತಲ್ಲೇ ನಿಂತಿತ್ತು. ಸ್ವಲ್ಪ ಹೊತ್ತಾದ ಮೇಲೆ ಜನಾನೆ ಹೋಗಲಿ ಸುಮ್ಮನೆ ನಿಂತುಕೋ, ಮಾತಾಡಬೇಡ’ ಅಂತ ಹೇಳಿ ತಾವೇ ಸುಮ್ಮನಾದರು. ಮುದುಕಿ ಹಾಗೇ ನಿಂತುಕೊಂಡಿತ್ತು. ಆದರೆ ಯಾರಾದರೂ ಮಾತಾಡುವಾಗ ಮಧ್ಯದಲ್ಲಿ ಅದು ಕೂಡ ಇದ್ದಕ್ಕಿದ್ದಂತೆ ಮಾತಾಡೋಕೆ ಶುರು ಮಾಡಿಬಿಡುತ್ತಿತ್ತು. ತಿರುಗ ಜನ ಗದರಿಸಿ ಮುದುಕಿನ ಮತ್ತೆ ಸುಮ್ಮನಾಗಿಸುವರು. ಹೀಗೆ ಸಮಾರಂಭ ಮುಗಿಯಿತು. ಮುದುಕಿ ಮಾತ್ರ ಉದ್ದಕ್ಕೂ ಹಾಗೇ ನಿಂತಿತ್ತು.

    ನನ್ನ ಭಾಷಣದಲ್ಲಿ ನನಗೆ ಆಸಕ್ತಿ ಉಳಿಯಲಿಲ್ಲ. ಮನಸ್ಸೆಲ್ಲಾ ಮುದುಕಿಯ ಬಗ್ಗೆ ಆದರೂ ನನ್ನ ಭಾಷಣ ಚೆನ್ನಾಗಿತ್ತೆಂದು, ಗಾಂಧಿಗೆ ನೆಹರೂಗೆ ಕೂಡ ಸರ್. ಎಂ. ವಿ. ಕೊಟ್ಟ ಉತ್ತರ, ಹಾಕಿದ ಪಾಯಿಂಟ್ ಬಹಳ ಚೆನ್ನಾಗಿತ್ತೆಂದು ಜನರೆಲ್ಲಾ ಹೇಳಿದರು. ನನಗೆ ಭಾಷಣ ಸರಿಯಾಗಿ ಮಾಡಲು ಬರುವುದಿಲ್ಲ, ಮಾತುಗಳನ್ನು ನುಂಗಿ ನುಂಗಿ ಮಾತಾಡ್ತೀನಿ ಅಂತ ರೇಗಿಸುವ ನನ್ನ ಹೆಂಡತಿ ಕೂಡ ಇವತ್ತು ತುಂಬಾ ಸ್ಪಷ್ಟವಾಗಿ ಮಾತಾಡಿದಿರಿ ಅಂತ ಹೊಗಳಿದಳು. ನನಗೇನೆ ಯಾವುದರಲ್ಲೂ ಅಷ್ಟೊಂದು ಮನಸ್ಸಿರಲಿಲ್ಲ, ಮುದುಕಿ ನೋಡಿದ ಮೇಲೆ.

    ನಾನೇ ನನ್ನ ಹೆಂಡತಿಯ ಜತೆ ಹೋಗಿ ಪರಿಚಯ ಮಾಡಿಕೊಂಡು, ಮುದುಕಿನ
    ಮಾತಾಡಿಸಿದೆ. ತನ್ನ ಕತೇನ ಅದು ಬಹು ಚೆನ್ನಾಗಿ ಹೇಳಿಕೊಂಡಿತು. ಯಾವುದೋ ಕಾಲದ ಯಾವುದೋ ಪುರಾಣದ ಕತೆಯಂತೆ. ಮುದುಕಿ ಹೇಳಿದ ಕತೆ ಜೊತೆಗೆ ಇರಲಿ ಅಂತ ಇನ್ನು ನಾಲ್ಕು ಜನನ್ನ ವಿಚಾರಿಸಿದೆ. ಈಗ ಅದನ್ನೇ ಮುಂದೆ ಹೇಳಿರುವುದು.
    ****
    ವಿಶ್ವೇಶ್ವರಯ್ಯನವರನ್ನು ನೋಡಿದಾಗ ಭಾಗಮ್ಮ ಒಬ್ಬ ವಿಧವೆ. ನಾಲ್ಕಾರು ಮನೆಗಳಲ್ಲಿ ಸುತ್ತು ಕೆಲಸ, ಸೂರುಕೆಲಸ ಅಂತ ಮಾಡಿ ಜೊತೆಗೆ ಆ ಮನೆ ಮಕ್ಕಳ, ಮೊಮ್ಮಕ್ಕಳ ಬಾಣಂತನ, ಹೆರಿಗೆ, ಅಭ್ಯಂಜನ, ಸ್ನಾನ- ಹೀಗೆ ಎಲ್ಲದರ ಪಾರುಪತ್ಯನೂ ಅವಳೇ ನೋಡಿಕೊಳ್ಳುತ್ತಿದ್ದಳು. ಅಷ್ಟೇ ಆಗಿದ್ದರೆ ಭಾಗಮ್ಮನಂತೋರು ನೂರಾರು ಜನ ಅದೇ ಊರಲ್ಲಿ ಇದ್ದರು. ಅವರ ಹಾಗೆ ಭಾಗಮ್ಮನು ವಿಶ್ವೇಶ್ವರಯ್ಯನವರನ್ನು ನೋಡಬೇಕಾಗ್ತಿರಲಿಲ್ಲ.

    ಆದರೆ ಭಾಗಮ್ಮನದು ಸಿಂಹಾಸನದ ಮೇಲೆ ಕುಳಿತು ಗುಂಡಿಗೆ ಬಿದ್ದವರ ಅದೃಷ್ಟ ಭಾಗಮ್ಮನ ಮದುವೆಯಾದಾಗ ಅವಳ ಗಂಡ ತಿಪ್ಪಯ್ಯ ಸ್ಥಿತಿವಂತನೆ. ಊರಲ್ಲೇ ಅಲ್ಲದೇ ಸುತ್ತಮುತ್ತಲಿನ ನಾಲ್ಕಾರು ಹಳ್ಳಿಗಳಲ್ಲಿ ಹೊಲ, ತೋಟ ಇಟ್ಟುಕೊಂಡಿದ್ದವನು. ಅದಷ್ಟನ್ನೇ ನೋಡಿಕೊಂಡಿದ್ದರೂ ಅವನು, ಭಾಗಮ್ಮ, ಅವನೆರಡು ಗಂಡು ಮಕ್ಕಳು ಬೆಳಿಗ್ಗೆಯಿಂದ ಸಂಜೆ ತನಕ ತುಪ್ಪ ನೆಕ್ಕಿಕೊಂಡೆ ಬದುಕಬಹುದಾಗಿತ್ತು. ಆದರೆ ತಿಪ್ಪಯ್ಯನಿಗೆ ಊರೋರ ದನವೆಲ್ಲ ಕಾಯೋ ಹುಚ್ಚು. ತನ್ನ ಆಸ್ತಿ ಜೊತೆಗೆ, ತನ್ನ ಆಸ್ತಿ ಇದ್ದ ಊರವರ ಹೊಲ, ತೋಟ, ಜಮೀನು, ಮನೆ ಎಲ್ಲದರ ತರಲೇನು ತಿಪ್ಪಯ್ಯನಿಗೆ ಬೇಕು. ಯಾರ ಜಮೀನು ಯಾರಿಗೆ ಅಡವಿಡಸಬೇಕು, ಯಾವ ಪತ್ರ ಮೈಸೂರಿನಲ್ಲಿ ರಿಜಿಸ್ಟರ್ ಆಗಬೇಕು, ಯಾವ ಪತ್ರ ಮದ್ದೂರಿನಲ್ಲಿ ರಿಜಿಸ್ಟರ್ ಆದರೆ ಸಾಕು, ಯಾರ ಮನೆಗೆ ಎತ್ತಿನ ಜೊತೆ ತರೋಕ್ಕೆ ಅವರ ಜೊತೆ ತಾನೂ ಎಡಿಯೂರ ಜಾತ್ರೆಗೆ ಹೋಗಬೇಕು, ಹೊಸದಾಗಿ ಕಟ್ಟಿಸಿದ ಮೈಸೂರು ಅರಮನೆಯ ಕಂಟ್ರಾಕ್ಟ ಗಿರಿಯಲ್ಲಿ ಯಾರ್ಯಾರು ಎಷ್ಟೆಷ್ಟು ದುಡ್ಡು ತಿಂದು ಹಾಕಿದರು ಎಲ್ಲಾನು ಅವನಿಗೆ ಬೇಕು. ಇವರ ಆಸ್ತಿ ಅವರ ಕೈಗೆ ಅವರ ಆಸ್ತಿ ಇವರ ಕೈಗೆ ಬದಲಾಯಿಸುವ ಹುರುಪಿನಲ್ಲಿ ಇವನ ಆಸ್ತಿಯೂ ಕೂಡ ಆ ಕೈ, ಈ ಕೈ ಬದಲಾಯಿಸುವುದು. ಅಡ ಇಟ್ಟು ಜಮೀನಿನ ಮೇಲೆ ಸಾಲ ತೆಗೆದು, ಅದನ್ನು ಬಡ್ಡಿಗೆ ಕೊಟ್ಟು, ಸಾಲ ತೆಗೆದುಕೊಂಡವರು ವಾಪಸ್‌ಕೊಡದೆ ಜಮೀನ್‌ನ ವಾಪಸ್ ಬಿಡಿಸಿಕೊಳ್ಳಕ್ಕಾಗದೆ ಅದಕ್ಕೆ ಭಾಗಮ್ಮನ ಜೊತೆ ಜಗಳ ಕಾದು, ಅವಳ ಒಡವೆ ಅಡ ಇಟ್ಟು-ಒಂದೇ ಎರಡೇ, ಅಷ್ಟಾದರೂ ಇನ್ನೂಬ್ಬರ ವ್ಯವಹಾರದ ಪರಭಾರೆ ಹುಚ್ಚು ಕಡಿಮೆಯಾಗುತ್ತಿರಲಿಲ್ಲ. ಅಗತ್ಯ ಇರಲಿ, ಇಲ್ಲದೇ ಇರಲಿ ಸುತ್ತಮುತ್ತಲ ಹಳ್ಳಿಯ ಯಾವುದೇ ಜಮೀನಿನ ಮನೆಯ ಕ್ರಯದ, ಅಡವಿನ ರಿಜಿಸ್ಟ್ರಿ ಎಂದರೆ ಇವನೂ ಕೂಡ ಅವರ ಜೊತೆ ಹೊರಟುಬಿಡೋನು. ಭಾಗಮ್ಮನ ತವರು ಕಡೆಯವರಿಗೆ ತಿಪ್ಪಯ್ಯನ ವ್ಯವಹಾರ, ಓಡಾಟ ಯಾವುದೂ ಇಷ್ಟವಾಗುತ್ತಿರಲಿಲ್ಲ. ಭಾಗಮ್ಮನ ಅಣ್ಣನ ಹೆಂಡತಿನೋ ತುಂಬಾ ಕೆಂಪು ಬಣ್ಣದೋಳು. ಜೊತೆಗೆ ಅವಳ ತವರು ಕಡೆಯೋರು ತುಂಬಾ ಸ್ಥಿತಿವಂತರು ಬೇರೆ. ಭಾಗಮ್ಮನ್ನ ಸೀಟ ಹಾಕುತಿರಲೂ ಇಲ್ಲ.ಅಷ್ಟೇ ಅಲ್ಲ, ಭಾಗಮ್ಮನ ಅಣ್ಣ ಶ್ರೀನಿವಾಸನ ಪ್ರೀತಿ, ಅಕ್ಕರೆ, ಅಪ್ಪಿ ತಪ್ಪಿ ಕೂಡ ತಂಗಿ ಕಡೆ ಹರಿಯದ ಹಾಗೆ, ಅವನನ್ನು ತನ್ನ ಒನಪು ವೈಯ್ಯಾರದ ನಿಯತ್ತಿನಲ್ಲಿಟ್ಟಿರೋಳು. ಹೀಗಾಗಿ ತಿಪ್ಪಯ್ಯ ಶ್ರೀನಿವಾಸಯ್ಯನ, ಭಾಗಮ್ಮನ ತವರು ಮನೆಯೋರನ್ನ ಕಿಚಾಯಿಸಿ ಉಡಾಫೆ ಮಾತನಾಡಿದಾಗ ಭಾಗಮ್ಮನೇ ಸುಮ್ಮನಾಗಬೇಕು. ತಿಪ್ಪಯ್ಯ ತನ್ನ ವ್ಯವಹಾರನ ಮುಂದುವರಿಸಿಕೊಂಡು ಹೋಗುಬೇಕು, ಭಾಗಮ್ಮನಿಗೆ ಅದು ಇಷ್ಟ ಇರಲಿ, ಇಲ್ಲದೇ ಇರಲಿ.

    ಊರವರೆಲ್ಲರ ದನಾನ ಕಾಯುವ ತಿಪ್ಪಯ್ಯನ ತರಲೆಗಳು ಎಷ್ಟಿತ್ತೆಂದರೆ ಅವನಿಗಿದ್ದ ಊರಿನ ಪ್ರೈಮರಿ ಸ್ಕೂಲಿನ ಮೇಷ್ಟರ ಕೆಲಸನು ಸರಿಯಾಗಿ ಮಾಡ್ತಾ ಇರಲಿಲ್ಲ. ತನ್ನ ವ್ಯವಹಾರದ ಹುಚ್ಚು, ಓಡಾಟ ಇವುಗಳೆಲ್ಲದರ ಮುಂದೆ ನಾಲ್ಕು ಅಕ್ಷರನ ದಿನವೆಲ್ಲ ತಿದ್ದಿಸೋದು, ಪುಣ್ಯಕೋಟಿ ಕತೆ ಹೇಳೋದೇನು ಮಹಾ ಎನಿಸಿ ಯಾರು ಬೇಕಾದ್ರು ಅದನ್ನ ಮಾಡಬೋದಲ್ಲವೆ ಅಂತಾ ದುರ್ಗದ ಕಡೆಯಿಂದ ಒಬ್ಬ ಬ್ರಾಹ್ಮಣನ್ನ ತಂದು ಮೇಷ್ಟರಗಿರಿನ ತನ್ನ ಪರವಾಗಿ ಮಾಡೋಕೆ ಇಟ್ಟಿದ್ದ. ತಿಪ್ಪಯ್ಯ ಸಕಲ ಭೂಭಾರಗಳನ್ನು ಹೊತ್ತುಕೊಂಡು ಊರೂರು ತಿರುಗುತ್ತಾ ಇದ್ದರೆ ಅವನ ಪರವಾಗಿ ಆ ಬ್ರಾಹ್ಮಣನೇ ಮೇಷ್ಟರಗಿರಿ ನಡಸೋನು. ಊರಲ್ಲಿದ್ದಾಗ, ಮನಸ್ಸು ಅನ್ನೋದು ಬಂದಾಗ ಆರಕ್ಕೋ, ಮೂರಕ್ಕೋ ಒಂದು ಸಲ ತಿಪ್ಪಯ್ಯ ಸ್ಕೂಲು ಕಟ್ಟೆ ಹತ್ತೋನು. ಒಟ್ಟಿನಲ್ಲಿ ತಿಪ್ಪಯ್ಯ ಹೀಗೆ ತುಂಬಿದ ಹಾಗೆ ತುಂಬಿಕೊಂಡು ಓಡಾಡೋ ಹಾಗೆ ಕಾಣೋನು. ಭಾಗಮ್ಮನಿಗೂ ಹಾಗೇ ಅನಿಸ್ತಾ ಇದ್ದದರಿಂದ ಅವಳು ಪೀಡಿಸೋಕೆ, ಮಾಡಿಸೋಕೆ ಹೋಗ್ತಾ ಇರಲಿಲ್ಲ. ಒಂದು ಸಲ ಮೈಸೂರಿಗೆ ಯಾರದೋ ಕ್ರಯ ಪತ್ರದ ರಿಜಿಸ್ಟ್ರಿಗೆ ಹೋಗಿದ್ದ ತಿಪ್ಪಯ್ಯ ಅಲ್ಲಿಂದಲೇ ಫರಂಗಿ ಗಡ್ಡೆ ಜ್ವರ ತಗೊಂಡು ಬಂದು ಊರಿಗೆ ವಾಪಸ್ ಬಂದ ಮೂರೇ ದಿವಸಕ್ಕೆ ಸಾಯದೇ ಹೋಗಿದ್ದರೆ…

    ಅಣ್ಣ ಶ್ರೀನಿವಾಸ ಮುಂದಿನ ಬೀದೀಲಿ ಇದ್ದರೂ ಅತ್ತಿಗೆ ವಯ್ಯಾರಕ್ಕೆ, ಒನಪಿಗೆ ಬಹಳ ನಿಯತ್ತಿರೂ ಮನುಷ್ಯ. ಅತ್ತಿಗೆ ಊರವರಿಗೆಲ್ಲ ನಾದಿನಿ ಅದೃಷ್ಟನ ಕತೆ ಮಾಡಿ, ಕತೆ ಮಾಡಿ ಊರವರಿಗೆಲ್ಲ ಒಪ್ಪಿಸ್ತಾ ಇದ್ದಾಳೆ. ಮಕ್ಕಳನ್ನೇನೋ ಭಾಗಮ್ಮ ಬೀದಿಗೆ ಬಿಟ್ಟಳು. ಅವು ಗಂಡು ಮಕ್ಕಳಾದ್ದರಿಂದ ದೇವಸ್ಥಾನದ ಚರವು, ಇಡಗಾಯಿ ತುಂಡು ಚೂರು, ಸಮಾರಾಧನೆ ಕೊನೆ ಪಂಕ್ತಿ ಊಟ ಅದೂ ಇದೂ ಮಾಡಿಕೊಂಡು ಬೆಳೀತಾ ಇದ್ದವು. ಭಾಗಮ್ಮ ಮೊದಲು ಒಂದು ಮನೆ ಕೆಲಸ , ಆಮೇಲೆ ಇನ್ನೊಂದು ಮನೆ ಕೆಲಸ ಅಂತ ಶುರು ಮಾಡಿಕೊಂಡು ಕೊನೆ ಕೊನೆಗೆ ತನ್ನ ತವರ ಸಂಬಂಧದ ಕಡೆ ಬಿಟ್ಟು ಬಾಕಿ ಮನೆ ಕಡೆ ಎಲ್ಲ ಕೆಲಸ ಮಾಡೋಕೆ ಶುರು ಮಾಡಿದಳು. ತಿಪ್ಪಯ್ಯ ಒಂದು ತರಕ್ಕೆ ಎಲ್ಲರನ್ನು ಹಚ್ಚಿಕೊಂಡಿದ್ದರೆ, ಭಾಗಮ್ಮ ಇನ್ನೊಂದು ತರಕ್ಕೆ ಎಲ್ಲರನ್ನು ಹಚ್ಚಿಕೊಂಡಳು.

    ಒಂದಾರು ವರ್ಷನೋ, ಎಂಟು ವರ್ಷನೋ ಎಲ್ಲ ಹೀಗೇ ನಡೀತಿತ್ತು. ಭಾಗಮ್ಮನ ಬದುಕು ಇರೋದು ಹೀಗೆ ಅಂತ ಅವಳು, ಊರನೋರು ಎಲ್ಲ ಒಪ್ಪಿಕೊಂಡಾಗಿತ್ತು. ಒಂದು ದಿವಸ ಮಧ್ಯಾಹ್ನ ಕರಿಕೋಟು, ಬಿಳಿಪೇಟ, ಕಚ್ಚೆ ಪಂಚೆ ಹಾಕಿಕೊಂಡು ಅಮೀನ ಬಂದು ಭಾಗಮ್ಮನ ಬಾಡಿಗೆ ಮನೆ ಜಗುಲಿ ಮೇಲೆ ಕೂತುಕೊಂಡಾಗಿನಿಂದ ಕತೇನೇ ಬದಲಾಯಿಸಿತು.

    ಅಮೀನ ತಿಪ್ಪಯ್ಯನಿಗೆ ಕೈ ಸಾಲ ಅಂತಾ ಎಪ್ಪತ್ತೈದು ರೂಪಾಯಿ ಕೊಟ್ಟಿದ್ದನಂತೆ. ತಿಪ್ಪಯ್ಯ ಸಾಯೋ ಹೊತ್ತಿಗೆ ಅವನಿಗೆ ಚಿತ್ರದುರ್ಗದ ಕಡೆಗೆ ವರ್ಗವಾಗಿ ಹೋಯಿತಂತೆ. ಅಲ್ಲಿಂದಲೇ ಹತ್ತಾರು ಕಾಗದ ಬರೆದರೂ ತಿಪ್ಪಯ್ಯನ ಕಡೆಯಿಂದ ಉತ್ತರ ಬರಲೇ ಇಲ್ಲ. ಪರಿಚಯಸ್ಥರ ಕೈಲಿ ಹೇಳಿ ಕಳಿಸಿದರೂ ಮಾರುತ್ರ ಸಿಗಲಿಲ್ಲ. ಕೊನೆಗೆ ತಿರುಗ ಅಮೀನನಿಗೆ ಶ್ರೀರಂಗಪಟ್ಟಣದ ಕೋರ್ಟಿಗೆ ವರ್ಗವಾದ್ದರಿಂದ ಊರಿಗೇ ಹುಡುಕೊಂಡು ಬಂದಿದ್ದ. ತಿಪ್ಪಯ್ಯ ಸತ್ತಿದ್ದು ಗೊತ್ತಾಗಿದ್ದರೂ ಅವನ ಮನೆ ಕಡೆಯಿಂದ ಏನಾದರೂ ವಸೂಲು ಮಾಡಬೇಕು ಅನ್ನೋ ಲೆಕ್ಕಾಚಾರದಲ್ಲಿ ಮೊದಲು ಭಾಗಮ್ಮನ ಅಣ್ಣ ಶ್ರೀನಿವಾಸಯ್ಯನ ಮನೆಗೆ ಹೋಗಿ ಮುಖಕ್ಕೆ ಪೂಜೆ ಮಾಡಿಕೊಂಡು ಅಲ್ಲಿ ಚೆನ್ನಾಗಿ ಬೈಸಿಕೊಂಡದ್ದರಿಂದ ತಿಪ್ಪಯ್ಯನ ಸಂಸಾರದ ಕೈಯಿಂದಲೇ ಏನಾದರೂ ಸರಿ ಬಾಕಿ ವಸೂಲಿ ಮಾಡಲೇಬೇಕು ಅನ್ನೋ ನಿರ್ಧಾರವನ್ನು ಗಟ್ಟಿ ಮಾಡಿಕೊಂಡಿದ್ದ.

    ಭಾಗಮ್ಮ ಮನೇಲಿ ಇರಲೇ ಇಲ್ಲ. ಇವನ ವೇಷಭೂಷಣ, ಮುಖ ಚಹರೆ, ಗತ್ತು ಎಲ್ಲ ನೋಡಿದೋರು ಸರಪರ ಅಂತ ಓಡಾಡಿ ಭಾಗಮ್ಮನ ಕರಕೊಂಡು ಬಂದರೂ ಅಮೀನ ಜಗಲಿ ಮೇಲೆ ಮರಿ ದೊರೆ ತರ ಕೂತಿದ್ದ. ಮನೆ ಹತ್ತಿರ ಬಂದವಳೇ ಭಾಗಮ್ಮ ಇವನ್ನು ನೋಡಿದರೂ ನೋಡದೇ ಇದ್ದ ಹಾಗೆ ಒಳಗಡೆ ಹೋಗಿ ಸೇರಿಕೋಂಡಳು. ಅಮೀನನೆ ಮಾತಿಗೆ ಶುರು ಮಾಡಿದ . ಇಷ್ಟೋತ್ತಿಗಾಗಲೇ ಸುತ್ತ ನಾಲ್ಕಾರು ಜನ ಸೇರಿದ್ದರು. ಸ್ಪಲ್ಪ ಅನೂಕೂಲಸ್ಥರಾಗಿದ್ದೋರು, ಕುಳ ಅಂತ ಅನ್ನಿಸಿಕೊಂಡೋರು ಅಮೀನನ್ನ ಬಹುವಚನದಲ್ಲಿ ಮಾತಾಡಿಸಿ ಗೌರವ ಸೂಚಿಸ್ತ ಜಗುಲಿ ಮೇಲೆ ಅಮೀನನ ಎದುರಿಗೆ ಕುಳಿಕೊಂಡುಬಿಟ್ಟರು.

    ಅಮೀನ ಹೇಳಿದ್ದನ್ನೆಲ್ಲಾ ಭಾಗಮ್ಮ ಕಿವಿಯಾರ ಮನಸಾರ ಕೇಳಿಸಿಕೊಂಡಳು. ಅವನು ಸುಳ್ಳು ಹೇಳ್ತಿದ್ದಾನೆ ಅಂತ ಏನೂ ಅನಿಸಲಿಲ್ಲ ಅವಳಿಗೆ. ಅದೆಷ್ಟೋ ವ್ಯವಹಾರ ಮಾಡಿ ಕೈ ಮೈ ಎಲ್ಲ ಸುಟ್ಟುಕೊಂಡಿದ್ದ ಅವಳ ಗಂಡ ಇದನ್ನು ತಾನೆ ಯಾಕೆ ಮಾಡಿರೋಲ್ಲ ಅಂತ ಅನುಮಾನನೂ ಬಂತು. ಆದರೆ ಈಗ, ಯಾವತ್ತೋ ಸತ್ತು ಹೋದ ಮನುಷ್ಯನ ಸಾಲ ತೀರಿಸು, ಈಗಲೇ ಪೈಸಲ್ ಮಾಡು ಅಂತ ಇದೆ ಮೇಲೆ ಬಂದು ಕೂತುಕೊಂಡರೆ…… ಭಾಗಮ್ಮ ಏನೂ ಮಾತಾಡಲೇ ಇಲ್ಲ. ಕೊನೆ ಮನೆ ಶಾಸ್ತ್ರಿಗಳ ಮನೇನಲ್ಲಿ ಮೆಣಸಿನ ಪುಡಿ ಮುಗಿದಿತ್ತು. ಮೆಣಸಿನಕಾಯಿನ ಮನೆಯಿಂದಲೇ ಹುರಕೊಂಡು ಹೋಗಬೇಕು ಅಂತ ತಂದಿಟ್ಟುಕೊಂಡಿದ್ದಳು. ಅದರ ತೊಟ್ಟನ್ನ ಮುರೀತಾ ಮುರೀತಾ, ಎದುರುಗಡೆ ಇದ್ದ ಮೆಣಸಿನಕಾಯಿ ಗುಡ್ಡೇನೆ ನೋಡ್ತಾ ಕೂತಕೊಂಡಿದ್ದಳು.

    ಹೊರಗಡೆ ಜಗುಲಿ ಮೇಲೆ ಕೂತಿದ್ದೋರಗೆಲ್ಲ ಅಮೀನನ ವೇಷಭೂಷಣ ಮಾತು ಎಲ್ಲ ನೋಡಿ, ಅವನ ಪರವಾಗೆ ಮಾತಾಡಬೇಕು ಅಂತ ಆಸೆ ಆದರೂ ಭಾಗಮ್ಮನ ಎದೆ ಸೀಳಿದರೂ ಎರಡು ಕಾಸು ಹುಟ್ಟೋಲ್ಲ ಅಂತ ಗೊತ್ತಿದ್ದರಿಂದ ಅಮೀನನ ಮುಖನೇ ನೋಡ್ತಾ ಕೂತಿದ್ದರು. ಎಷ್ಟೋತ್ತಾದರೂ ಯಾರೂ ಬಾಯಿ ಬಿಡದೇ ಇದ್ದದ್ದರಿಂದ ಅಮೀನನೆ ಜಗಲಿ ಇಳಿದು ಬಾಗಿಲ ಹತ್ತಿರ ಬಂದು ಒಳಗಡೆ ತಲೆ ತುರಿಸುವ ಹಾಗೆ ಮಾಡಿ ‘ ಈವತ್ತೇ ಅಂತ ಏನಿಲ್ಲ. ಮುಂದಿನ ಅಮವಾಸ್ಯೆ ಕಳೆದ ಮೇಲೆ ಬರ್ತೀನಿ. ದುಡ್ಡೇ ಆಗಬೇಕು ಅಂತಾನು ಇಲ್ಲ ನನಗೆ . ದುಡ್ಡಿಗೆ ಯಾವುದಾದರೂ ಪದಾರ್ಥ ಕೊಟ್ಟರೂ ಸಾಕು’. ಜಗಲಿ ಏರಿ ಕುಳಿತಿದ್ದ ಕುಲಸ್ಥರಿಗೂ ಈ ಮಾತು ಸರಿ ಎನ್ನಿಸಿ ಅವರು ಕೂಡ ಅಮೀನನ ಹಿಂದೆ ಹೊರಟು ದುರ್ಗದಿಂದ ಹೊರಟು ಮಂಡ್ಯದ ಮೇಲೆ ಶ್ರೀರಂಗಪಟ್ಟಣ ಸೇರೋ ರಾಯಲ್ ಮೋಟಾರ್ ಬಸ್ ನಿಲ್ಲುವ ಸಂತೆ ಮಾಳದ ತನಕವು ಅವನ ಜೊತೆಯೇ ಹೋದರು.

    ಅಮೀನನಲ್ಲವೇ? ಹೇಳಿದಂತೆಯೆ ಬಂದ. ಆವತ್ತೂ ಭಾಗಮ್ಮ ಮನೇಲಿ ಇರಲಿಲ್ಲ. ಅಮೀನ ಏನು ಹೇಳಬೇಕಾಗೇ ಇರಲಿಲ್ಲ. ಊರವರೆ ಅವನ ಮುಖ ನೋಡಿದ ತಕ್ಷಣ ಓಡಿ ಹೋಗಿ ಭಾಗಮ್ಮನ ಕರಕೊಂಡು ಬಂದರು. ಎರಡಮಾವಾಸ್ಯ ಮಧ್ಯೆ ಎಷ್ಷು ದುಡ್ಡು ಹುಟ್ಟುತ್ತೆ? ಆದೂ ಭಾಗಮ್ಮನಿಗೆ. ಅಮೀನ ಮನೇಲಿರೋ ಪದಾರ್ಥನೆ ತಗೊಂಡೋಗ್ತಿನಿ, ತಿಂಗಳಿಗೊಂದು ಸಲ ಐದಾರು ರೂಪಾಯ ಖರ್ಚು ಮಾಡಿಕೊಂಡು ನಾನು ಪಶ್ಚಿಮ ವಾಹಿನಿಯಿಂದ ಇವರ ಮುಖ ನೊಡೋಕೆ ಬರಬೇಕೆ’ ಅಂತಾ ಹೇಳಿ ನ್ಯಾಯ ಒಪ್ಪಿಸಿದ. ಒಂದು ಸಣ್ಣ ಕೊಳದಪ್ಪಲೆ, ಅಡಿಗೆ ಮನೆ ಚಿಕ್ಕ ಹಂಡೆ, ಒಂದು ದಪ್ಪ ಬೀಸೋ ಕಲ್ಲು ಇಷ್ಟನ್ನು ನಾಲ್ಕು ಜನದ ಎದುರಿಗೇನೆ ಹೊರೆಸಿಕೊಂಡು ಹೊರಟ. ಆಳು ತೂಕ ಇದೆ, ಬೀಸೋ ಕಲ್ಲದು ಇಲ್ಲೇ ಯಾರಿಗಾದರೂ ಮಾರಿ ಅಂತ ಊರಿನೋರು ಹೇಳಿದರು. ಅಮೀನ ಇಲ್ಲ ಇಲ್ಲ ಹೀಗೆ ತುದಿಗಾಲಲ್ಲಿ ನಿಂತು ಸೀಯೋಕೆ ಹೋದರೆ ಏನು ಬೆಲೆ ಹುಟ್ಟೋಲ್ಲ. ಬಸ್ ಕಂಡಕ್ಟರ್ಗೆ ನಾನು ಅಮೀನ ಅಂತ ಗೊತ್ತು’ ಅಂತ ಗಟ್ಟಿಯಾಗಿ ಹೇಳ್ತಾ, ಹೇಳ್ತಾ ನಡೆದದ್ದನ್ನೆಲ್ಲಾ ನೋಡ್ತಾ ನಿಂತಿದ್ದ ಮೇಲುಸಕ್ಕರೆ ಗೋವಿಂದ ಶೆಟ್ಟಿ ಕೈಲಿ ಎಲ್ಲವನ್ನು ಹೊರೆಸಿಕೊಂಡು ಸಂತೆ ಮಾಳದ ಕಡೆಗೆ ಹೋದ, ಬಸ್ಸು ಹಿಡಿಯೋಕೆ.

    ಅಮೀನ ಹಾಗೆ ಬೀಸೋ ಕಲ್ಲು ಸಮೇತ ಎಲ್ಲವನ್ನು ಹೊರೆಸಿಕೊಂಡು ಹೋದ ಮೇಲೇನೆ ಭಾಗಮ್ಮನಿಗೆ ಅರಳು ಮರಳಾದ್ದು. ಹುಚ್ಚು ಹಿಡಿದದ್ದು ಅಂತ ಊರಿನೋರೆಲ್ಲ ಅಂದುಕೊಂಡರು. ಬೀಸೋಕಲ್ಲ ತಗೋಂಡೋಗೋಕೆ ಮುಂಚೇನೆ ಭಾಗಮ್ಮ ಮನೇಲಿದ್ದಾಗ ತನ್ನಷ್ಟಕ್ಕೆ ತಾನು ಮಾತಾಡಿಕೊಳ್ಳೋಳು, ಅತ್ತು ಕರೆದು ಮಾಡೋಳು, ತಿಪ್ಪಯ್ಯನ್ನ ಮನಸಾರೆ ಬಯ್ಯೋಳು, ಅಣ್ಣ- ಅತ್ತಿಗೇನ ಜಾಲಾಡೋಳು ಬೀಸೋಕಲ್ಲಿನ ಶಬ್ದದಲ್ಲಿ ಅದು ಯಾರಿಗೂ ಕೇಳಿಸ್ತಾ ಇರಲಿಲ್ಲ ಅಷ್ಟೇ. ಒಂದು ಮನೇದೆ ಕೆಲಸ ಭಾಗಿ ಮಾಡ್ತಾ ಇದ್ದದ್ದು. ಎಷ್ಟು ಮನೇದು ಅಂತ ಹಿಟ್ಟು, ತರಿ ಎಲ್ಲನು ಅದರಲ್ಲಿ ಬೀಸಿದೋಳು ಅವಳು? ಬೀಸೋಕಲ್ಲಿನ ಹಿಡಿ ಹಿಡಕೋಳ್ಳೋಕೆ ಅದೆಷ್ಟು ತ್ರಾಣ ಬೇಕು? ಅಷ್ಟು ದಪ್ಪನಾದ ಹಿಡಿ ಅದು.

    ಈವಾಗ ಅಮೀನ ಬಂದು ಹೋದ ಮೇಲೆ ಬೀಸೋ ಕಲ್ಲೆ ಇಲ್ಲವಲ್ಲ. ಜಗುಲಿ ಮೇಲೆ ಕುತ್ಕೋಂಡು ಮಾತಾಡೋಕೆ ಶುರು ಮಾಡಿದಳು. ಯಾರಾದರೂ ಮನೆ ಎದುರಿಗೆ ಹೋಗ್ತಾ ಇದ್ದರೆ ಅವರ ಹಿಂದುಗಡೆ ಹೋಗಿ ಅವರು ಮನೆ ಸೇರೋ ತನಕ ಇವಳು ಲೊಟ ಲೊಟ ಅಂತ ವಟಗುಟ್ಟಕೊಂಡು ಹೋಗೋಳು. ಯಾರು ಇಲ್ಲದೆ, ಕೆಲಸಾನೂ ಇಲ್ಲದೆ ಕೈ ಖಾಲಿ ಇದ್ರೆ ಮನೇಲೆಲ್ಲಾ ಓಡಾಡ್ತಾ ಒಡಾಡ್ತಾ ತಾನೇ ಮಾತಾಡಿಕೊಳ್ಳೋಳು.

    ಅಮೀನ ಭಾಗಮ್ಮನ ಬೀಸೋಕಲ್ಲು ಹೊತ್ತುಕೊಂಡು ಹೋದದ್ದು ಊರವರಿಗೂ ತೊಂದರೆಯಾಯ್ತು. ‘ಏ ಭಾಗೀ ಏನಾದರೂ ಮಾಡಿ ಒಂದು ಬೀಸೋಕಲ್ಲು ಹೊಂಚಕೊಳೆ’ ಎಂದು ಸುಖನಾತಿ ರಾಗದಲ್ಲಿ ಊರವರೆಲ್ಲಾ ಹೇಳ್ತಾ ಇದ್ದರೂ ಭಾಗಿಗೆ ಬೀಸೋಕಲ್ಲು ಹೇಗೆ ಸಿಗುತ್ತೆ? ಅವಳು ಅದಕ್ಕೆ ದುಡ್ಡು ಹೇಗೆ ಕೊಡ್ತಾಳೆ? ಅಂತ ಕೇಳಿಕೊಳ್ಳೋಕು ಹೋಗಲಿಲ್ಲ, ಹೇಳಕೊಡೋಕು ಹೋಗಲಿಲ್ಲ? ಭಾಗಮ್ಮನಿಗೂ ಬೀಸೋ ಕಲ್ಲು ಶಬ್ದ ಕೇಳಿ ಕೇಳಿ ಕಿವಿ ತುಂಬಾ ಅದೇ ರೂಢಿಯಾಗಿ ಬಿಟ್ಟಿದ್ದರಿಂದ ಅದನ್ನೇ ಕೇಳ್ತಾ ಕೇಳ್ತಾ ಇರಬೇಕು ಅಂತ ಆಸೆಯಾಗ್ತಾ ಇದ್ರು ಅದನ್ನ ಹೇಗೆ ಹೇಳಬೇಕು, ಅದು ಹೇಳಕೊಳೋ ಆಸೇನೆ ಅಂತಾನು ಗೋತ್ತಾಗ್ತಾ ಇರಲಿಲ್ಲ. ಊರನೋರ ಸುಖನಾತಿ ರಾಗ ಮಾತ್ರ ಮುಂದುವರಿದೇ ಇತ್ತು. ಬೀಸೋಕಲ್ಲ ತಗೋಳೆ, ಬೀಸೋಕಲ್ಲ ಹೊಂಚಹಾಕೆ.

    ಭಾಗಮ್ಮನಿಗೆ ಕೂಡ ವಿಶ್ವೇಶ್ವರಯ್ಯನೋರ ಕತೆ, ಪ್ರತೀತಿಯೆಲ್ಲಾ ತಿಳಿದಿತ್ತು. ಅವರು ನಾಲೆ ಕೆಲಸಕ್ಕೆಂದು ಮೋಟರಿನಲ್ಲಿ ಬರೋದು, ಅಮಲ್ದಾರ್, ಶೇಖದಾರ್, ಅವರು ಇವರೆಲ್ಲ ಅವರ ಹಿಂದುಗಡೆ ಬರೋದು. ದಿವಾನರಾದ ಮೇಲು ವಿಶ್ವೇಶ್ವರಯ್ಯ ಖಾಯಿಲೆ ತಾಯಿನ ಬಂಗ್ಲೇಲಿ ಇಟ್ಟುಕೊಂಡು ಉಪಚಾರ ಮಾಡೋದು, ಅಂತ ದೊಡ್ಡ ಮನುಷ್ಯನ ಜೊತೆ ಬದುಕೋ ಅದೃಷ್ಟ ಇಲ್ಲದೆ ಅವರ ಹೆಂಡತಿ ಬೇರೆ ಯಾರ ಜೊತೆಯೋ ಓಡಿ ಹೋದ್ದು – ಎಲ್ಲ ಕತೇನು ಭಾಗಮ್ಮ ಕೇಳಿದ್ದಳು. ಊರಿನ ಜನವೆಲ್ಲ ಬೀಸೋಕಲ್ಲು ತಗೊಳೆ, ಬೀಸೋಕಲ್ಲು ತಗೊಳೆ ಅಂತ ಜ್ಞಾಪಕ ಮಾಡ್ತ ಮಾಡ್ತಾ ಅದನ್ನೇ ಯೋಚನೆ ಮಾಡಿ, ಯೋಚನೆ ಮಾಡಿ ಯಾವುದೋ ಒಂದು ಕ್ಷಣದಲ್ಲಿ ಅವಳಿಗೆ ದಿವಾನ್ ವಿಶ್ವೇಶ್ವರಯ್ಯನೋರ ಹತ್ತಿರ ಹೋಗಿ ತನ್ನ ಅಹವಾಲು ಹೇಳಿಕೊಂಡು, ಒಂದು ಬೀಸೋ ಕಲ್ಲು ತೆಗೆಸಕೊಬೇಕು ಅಂತ ಅನ್ನಿಸೋಕೆ ಶುರುವಾಗಿ ಬಿಟ್ಟಿತ್ತು. ಆಮೇಲಿಂದ ಅವಳು ಅರಳು ಮರಳು ಮಾತಿನಲ್ಲಿ, ಲೊಟಕಾಟದಲ್ಲಿ ಅವಳು ವಿಶ್ವೇಶ್ವರಯ್ಯನವರ ಎದುರಿಗೇನೆ ನಿಂತುಕೊಂಡು ಅಹವಾಲು ಹೇಳ್ತಾ ಇದ್ದದ್ದು ಅವರು ಕೇಳಿಸಿಕೊಳ್ತಾ ಇದ್ದದ್ದು ಎಲ್ಲ ಸೇರಿಕೊಂಡಿತು. ಊರಿನೋರಿಗೆ ಯಾರಿಗೂ ಗೊತ್ತಾಗಲಿಲ್ಲ, ಅಷ್ಟೆ ಭಾಗಿ ಕೂಡ ತಾನು ದಿವಾನರನ್ನು ಬೀಸೋಕಲ್ಲು ಕೇಳೋ ಸಂಗತಿ ಯಾರಿಗೂ ಗೊತ್ತಾಗಬಾರದು ಅಂತ ಅಂದುಕೊಂಡಿದ್ದಳು.

    ತನ್ನಷ್ಟಕ್ಕೆ, ತನಗೆ ತಾನೇ ಭಾಗಿ ದಿವಾರನ್ನು ಕಾಣೋ ಆಸೇನ ನೂರು ಸಲ, ಸಾವಿರ ಸಲ ಹೇಳಿಕೊಂಡರೂ ಬೇರೆ ಯಾರಿಗೂ ಹೇಳೋಕೆ ಹೋಗಲಿಲ್ಲ. ಎಲ್ಲರ ಮನೆ ಕೆಲಸ ಎಲ್ಲ ಮುಗಿಸಿದ ಮೇಲೆ ಮಧ್ಯಾಹ್ನ ಅನ್ನದೆ, ಸಂಜೆ ಅನ್ನದೆ ಊರ ಹೊರಗಿನ ಸಂತೆ ಮಾಳದ ಹತ್ತಿರ ಬಂದು ತುದಿಗಾಲ ಮೇಲೆ ನಿಂತ್ಕೊಂಡು ಕಣ್ಣಿಗೆ ಕಾಣುವ ತನಕವು ರಸ್ತೇನ ನೋಡ್ತಾ ನಿಂತಿರೋಳು. ದಿವಾನರ ಪ್ರೋಗ್ರಾಂ ಇವಳಿಗೆ ಗೊತ್ತಾಗಿದೆ. ಅದಕ್ಕೆ ಊರ ಬಾಗಿಲಲ್ಲಿ ಕಾಯ್ತಾ ನಿಂತಿದ್ದಾಳೆ ಅಂತ ಅನ್ನಕೊಬೇಕು ಹಾಗೆ. ದಿನ ಕಾದಳು, ತಿಂಗಳು ಕಾದಳು, ವರ್ಷನು ಕಾದರಿಬೇಕು. ದಿವಾನರ ಮೋಟರು ಬರಲಿಲ್ಲ. ಭಾಗಿ ಕಾಯುವುದನ್ನು ಬಿಡಲಿಲ್ಲ.

    ಕೊನೆಗೊಂದು ದಿನ ಬೇಸಿಗೆ ಇನ್ನೇನು ಇಳಿಯೋಕೆ ಶುರುವಾಗುತ್ತೆ ಅಂತ ಅನ್ನಕೊಳೋ ಒಂದು ದಿವಸದಲ್ಲಿ ದಿವಾನರು ಬಂದೇ ಬಿಟ್ಟರು. ಮೋಟಾರಿನಲ್ಲಿ ಧೂಳೆಬ್ಬಿಸುತ್ತಾ, ಮೋಟರ್ ನೋಡಿದವಳಿಗೆ ಅದು ದಿವಾನರದೆ ಮೋಟರ್ ಅಂತಾ ಹೇಗೆ ತಿಳೀತೋ ಸಂತೋಷದಿಂದ ಊರೊಳಗೆ ಓಡಿಹೋಗಿ ಮನೆ ಒಳಗಡೆ ಸೇರಿಕೊಂಡುಬಿಟ್ಟಳು. ಆವತ್ತು ರಾತ್ರಿ ನಿದ್ದೆ ಕಣ್ಣರಪ್ಪೆ ಹತ್ರ ಇರಲಿ, ಇವಳ ಮನೆ ಜಗುಲಿ ಹತ್ರನು ಬರಲಿಲ್ಲ. ನಿದ್ದೆಯಿಲ್ಲವಲ್ಲ, ಅಮೀನ ತಗೊಂಡೋಗಿದ್ದನಲ್ಲ; ಬೀಸೋಕಲ್ಲು, ಅದರ ಜಾಗ ಖಾಲಿ ಇತ್ತಲ್ಲ ಅದನ್ನೇ ನೋಡ್ತಾ ನೋಡ್ತಾ ನಿರುಕಿಸ್ತಾ ಮಲಗಿಕೊಂಡಿದ್ದಳು.

    ದಿವಾನರು ಬಂದ ಮೇಲೆ ಊರಿನೋರಿಗೆ ಗೊತ್ತಿರಲ್ಲವೆ? ಎಲ್ಲರ ಮನೇಲು ಅವರದ್ದೇ ಸುದ್ದಿ. ಅವರ ಜೊತೆ ಯಾರ್ಯಾರು ಬಂದಿದಾರೆ, ಎಷ್ಟು ದಿನ ಇರ್ತಾರೆ, ನಾಲೆ ಕೆಲಸ ಎಲ್ಲಿ ತನಕ ಬಂತು, ನಾಲೆ ನೀರು ಯಾರ ಯಾರ ಜಮೀನಿಗೆ ಸಿಗುತ್ತೆ? ಎಲ್ಲರ ಬಾಯಲ್ಲು ಇದೇ ಮಾತು . ಈ ಸಲ ದಿವಾನರದು ಮೂರು ನಾಲ್ಕು ದಿನದ ಮೊಕ್ಕಾಂ ಅಂತ ಎಲ್ಲರೂ ಮಾತಾಡಿಕೊಳ್ಳೋರು. ಶುಕ್ರವಾರ ಸಂಜೆ ಸುತ್ತಮುತ್ತಲ ಊರನೋರೆಲ್ಲ ಸೇರಿ ದಿವಾನರಿಗೆ ಒಳ್ಳೆದಾಗಲಿ ಅಂತ ಈಶ್ವರನ ಗುಡೀಲಿ ಪಂಚಾಮೃತದ ಅಭಿಷೇಕ ಮಾಡಿಸ್ತಾರೆ. ಶನಿವಾರ ಬೆಳ್ಳಿಗೆ ದಿವಾನರು ಎದ್ದು ಮದ್ದೂರಿನ ತನಕ ಮೋಟರಿನಲ್ಲಿ ಹೋಗಿ ಅಲ್ಲಿಂದ ರೈಲಿನಲ್ಲಿ ಬೆಂಗಳೂರಿಗೆ ಹೋಗ್ತಾರೆ. ಎಲ್ಲನು ಭಾಗಮ್ಮನ ಕಿವಿ ಮೇಲೆ ಬೀಳೋದು.

    ಒಂದು ದಿನ ಭಾಗಮ್ಮ ಬೆಳಿಗ್ಗೆ ಕೋಳಿ ಕೂಗೋ ಹೊತ್ತಿಗೆ ಎದ್ದು ದಿವಾನರು ಮೊಕ್ಕಾಂ ಮಾಡಿದ್ದ ಪಂಚಾಯತಿ ಆಫೀಸಿನ ಮುಂದುಗಡೆ ಕೂತೇ ಬಿಟ್ಟಳು . ದಿವಾನರ ಮೋಟರ್ ಅಲ್ಲೇ ನಿಂತಿತ್ತು. ದಿವಾನರ ಕಡೆಯಿಂದ ಒಂದಿಷ್ಟು ಜನ ಜಗುಲಿ ಮೇಲೆ ಮಲಗಿದ್ದ್ರು. ಗೂರ್ಖಾ ಒಬ್ಬ ಮಾತ್ರ ಆ ಕಡೆಯಿಂದ ಈ ಕಡೆಗೆ , ಈ ಕಡೆಯಿಂದ ಆ ಕಡೆಗೆ ಓಡಾಡ್ತಾ ಇದ್ದ. ಇವನ ಕಣ್ಣಿಗೆ ಬಿದ್ದರೆ ಏನಾದರೂ ಕೇಳಬೋದು, ಗದರಿಸಿ ಬೆದರಿಸಿ ಓಡಿಸಬಹುದು ಅಂತ ಭಾಗಮ್ಮ ಪಂಚಾಯತಿ ಆಫೀಸ್ ಎದುರಿಗೆ ಇದ್ದ ಒಂದು ಸುಮಾರಾದ ದೊಡ್ಡ ಮರದ ಹಿಂದೆ ಅವಿತುಕೊಂಡ ಹಾಗೆ ನಿಂತುಕೊಂಡಳು.

    ಬೆಳಕು ಸ್ವಲ್ಪ ಸ್ವಲ್ಪ ಆಗ್ತ ಗೂರ್ಖಾ, ಜಗುಲಿ ಮೇಲೆ ಮಲಗಿದ್ದೋರು ಎಲ್ಲ ಎದ್ದು ಜಗುಲಿ ಮೇಲಿನ ಅಲ್ಲಿ ಇಲ್ಲಿ ಅಂತ ಒಂದಿಷ್ಟು ಒಡಾಡಿ ಎಲ್ಲರೂ ಒಟ್ಟಿಗೆ ಕೆರೆ ಕಡೆಗೆ ಹೊರಟರು. ಭಾಗಮ್ಮ ಈಗ ಧೈರ್ಯವಾಗಿ ಜಗುಲಿ ಹತ್ತಿರಕ್ಕೇ ಬಂದಳು. ಅವಳು ಬರೋ ಹೊತ್ತಿಗೆ ಒಬ್ಬ ಬೋಳು ತಲೆ ಮುದುಕಪ್ಪ, ಬನೀನ್ ಪಂಚೆನಲ್ಲಿ ಜಗುಲಿ ಮೇಲಿದ್ದ ಬಲಗಡೆ ಭಾಗದ ರೂಮಿನಿಂದ ಹೊರಬಂತು. ಕೈನಲ್ಲಿ ಹಿಡಿಕೊಂಡಿದ್ದ ಪುಸ್ತಕ, ಪೇಪರ್‌ನ ಜಗುಲಿ ಮೇಲೆ ಒಂದು ಮೂಲೇಲಿದ್ದ ಟೇಬಲ್ ಮೇಲೆ ಇಟ್ಟು, ಎರಡು ಕೈನೂ ಹಿಂದಕ್ಕೆ ಕಟ್ಟಿಕೊಂಡು ಶತಪಥ ಓಡಾಡೋಕೆ ಶುರು ಮಾಡಿತು. ಆಳುಕಾಳುಗಳು, ಕೈಕೆಳಗಿನ ಅಧಿಕಾರಿಗಳೆಲ್ಲ ಎದ್ದ ಮೇಲೆ ತಾನೇ ದಿವಾನರು ಏಳೋದು, ಇನ್ನೂ ಮಲಗಿರಬೇಕು ಅಂತ ತನಗೆ ತಾನೇ ಹೇಳಿಕೊಂಡು, ಶತಪಥ, ಹಾಕ್ತಿದ್ದ ಮುದುಕನನ್ನೇ ಭಾಗಮ್ಮ ನೋಡ್ತಾ ನಿಂತುಕೊಂಡಳು.

    ಶತಪಥ ಹಾಕ್ತಿದ್ದ ಮುದುಕ ಒಂದು ಸಲ ಇವಳ ಕಡೆ ತಿರುಗದೋನೇ ‘ ಯಾರಮ್ಮಾ ನೀನು, ಈ ಬೆಳಿಗ್ಗೆ, ಬೆಳಿಗ್ಗೆ…’ ಇದ್ದಕ್ಕಿದ್ದಂತೆ ಮಾತಾಡಿದ್ದರಿಂದ ಮಾತು ಸ್ವಲ್ಪ ಬಿರುಸಾಗಿ ಇತ್ತು. ‘ ದಿವಾನರು ಇನ್ನೂ ಎದ್ದಿಲ್ಲವಾ? ಭಾಗಿ ತನಗೆ ಮಾತ್ರವೇ ಕೇಳಿಸುವಂತೆ ಕೇಳಿದಳು. ಮುದುಕಪ್ಪನಿಗೆ ಸರಿಯಾಗಿ ಕೇಳಿಸಲೇ ಇಲ್ಲ. ಮೊದಲು ಕೇಳಿದ್ದಕ್ಕಿಂತಲೂ ಜೋರಾಗಿ ‘ಯಾರಮ್ಮಾ ನೀನು’ ಅಂತ ಇನ್ನೊಂದು ಸಲ ಕೇಳಿದರು. ಭಾಗಮ್ಮ ಜಗುಲಿ ಮೇಲಿದ್ದ ರೂಮಿನ ಕಡೆ ತೋರಿಸಿ ಗಂಟಲು ದೊಡ್ಡದು ಮಾಡಿ ‘ದಿವಾನರು ಇನ್ನೂ ಎದ್ದಿಲ್ಲವೇನೋ…’ ಅಂತ ಕೇಳಿದಳು. ಮುದುಕಪ್ಪನಿಗೆ ಯಾರಿದು ಈ ಮುದುಕಿ, ಈ ಸರಹೊತ್ತಿನಲ್ಲಿ ಅನಿಸಿ ‘ಯಾರಮ್ಮಾ ನೀನು, ಏನುಬೇಕು? ಅಂತ ಕೇಳ್ತಾ ಜಗುಲಿಯಿಂದ ಕೆಳಗಿಳಿಯೋಗೆ ಶುರು ಮಾಡಿತು. ಭಾಗಮ್ಮ ಹೆದರಿ ಓಡಿಬಿಟ್ಟಳು.

    ಒಂದಷ್ಟು ದೂರ ಓಡಿಹೋಗಿ ಬೀದಿ ಕೊನೆಯಲ್ಲಿ ಮರೆಯಾದ ಹಾಗೆ ನಿಂತುಕೊಂಡು ಮುದುಕಪ್ಪನ್ನೇ ನೋಡೋಕೆ ಶುರು ಮಾಡಿದಳು ಭಾಗಮ್ಮ. ಮುದುಕಪ್ಪ ಈಗ ಕೈಕಟ್ಟಿಕೊಂಡು ಓಡಾಡೋದನ್ನ ನಿಲ್ಲಿಸಿ ಜಗಲಿ ಮೆಟ್ಟಿಲು ಮೇಲೆ ಕೂತಕೊಂಡು ಪೇಪರ್, ಪುಸ್ತಕ ನೋಡೋಕೇ ಶುರು ಮಾಡಿತು. ದಿವಾನರು ಏಳಲಿ, ಎದ್ದ ತಕ್ಷಣ ಓಡಿಹೋಗಿ ಎಲ್ಲ ಹೇಳಿ, ಬೀಸೋಕಲ್ಲು ಕೇಳ್ತೀನಿ ಅಂತ ಭಾಗಮ್ಮ ತನಗೆ ತಾನೇ ಹೇಳಿಕೊಂಡು ಕಾಯ್ತಾ ನಿಂತುಕೊಂಡಳು.

    ಭಾಗಮ್ಮ ಹೀಗೆ ರಸ್ತೆ ಕೋನೇಲಿ ನಿಂತಿದ್ದ ಹಾಗೇನೆ, ಕೆರೆ ಕಡೆ ಹೋಗಿದ್ದ ದಿವಾನರ ಕಡೆಯವರು ಗುಂಪಾಗಿ ಮಾತಾಡಿಕೊಂಡು ಬರ್ತಿರುವುದು ಕಂಡಿತು. ಕಂಡವಳೇ ಭಾಗಮ್ಮ, ಎದ್ದೆನೋ ಬಿದ್ದನೋ ಅಂತಾ ಓಡಿ ಬಂದು ಪಂಚಾಯತಿ ಜಗುಲಿ ಮುಂದೆ ನಿಂತುಕೊಂಡು ಏದುಸಿರು ಬಿಡುತ್ತಾ, ‘ಏನುಸ್ವಾಮಿ, ದಿವಾನರು ಇನ್ನೂ ಏಳಲಿಲ್ಲವಾ? ಮಲಗಿಕೊಳ್ಳಲಿ ಬಿಡಿ, ನಮ್ಮ ಊರಲ್ಲಾದರೂ ದಿವನಾಗಿ… ಮನೇಲಂತು ಸುಖ ಇಲ್ಲ – ಸಂಸಾರ ಅಂತು ಕೇಳಿಕೊಂಡು ಬಂದಿಲ್ಲ’ ಅಂದು ತಲೆ ಚಚ್ಚಿಕೊಳ್ಳಲು ಪ್ರಾರಂಭಿಸಿದಳು. ಇವಳು ಹೀಗಂದ ತಕ್ಷಣವೇ, ಮುದುಕಪ್ಪ ಮೆಟ್ಟಲಿಳಿದು ಇವಳ ಕಡೆಗೆ ಬರುತ್ತಾ, ‘ಏನಮ್ಮಾ ನೀನು ಯಾರು, ಯಾರು ಬೇಕು? ಏನು ಬೇಕು? ಅಂತ ಕೇಳಿದ್ದೆ ಭಾಗಮ್ಮ ಹಿಂದಕ್ಕೆ ಹಿಂದಕ್ಕೆ ಓಡಿ ಹೋಗಲು ನೋಡಿದಳು. ಮುದುಕಿ ಇನ್ನೂ ಓಡಿ ಹೊರಟು ಹೋಗುತ್ತಲ್ಲಾ ಅಂತ ಮುದುಕಪ್ಪ ನಿಂತ ಜಾಗದಲ್ಲೇ ನಿಂತುಕೊಂಡ ತಕ್ಷಣವೆ, ಭಾಗಮ್ಮ ಬಡ ಬಡ ಅಂತಾ ಅಮೀನ ಬಂದದ್ದು, ಬೀಸೋಕಲ್ಲು ತಗೊಂಡೋದ್ದು, ತನಗೆ ಈಗ ಅದು ಬೇಕಾಗಿರೋದು ಎಲ್ಲನು ಕೇಳಿಕೊಂಡಳು. ಹೇಳಿಕೋಳ್ಳುತ್ತಿದ್ದ ಹಾಗೇನೆ ಕೆರೆ ಕಡೆ ಹೋಗಿದ್ದ ದಿವಾನರ ಕಡೆಯವರು ಇನ್ನೇನು ಪಂಚಾಯತಿ ಜಗುಲಿ ಹತ್ತಿರಕ್ಕೆ ಬರ್ತಾ ಇದ್ದದ್ದು ಕಾಣಿಸಿತು. ಭಾಗಮ್ಮ ಓಡೇಬಿಟ್ಟಳು.

    ದಿವಾನರಿಗೆ ಹೇಳದೇ ಹೋದರೇನೂ, ಅವರ ಕಡೆಯೋರಿಗೆ ಹೇಳಿದೀನಲ್ಲ. ಆ ಮನುಷ್ಯ ಇಟ್ಟುಕೊಂಡಿದ್ದ ಪೇಪರ್, ಪುಸ್ತಕ ಎಲ್ಲ ನೋಡಿದರೆ ಆತನು ಅಧಿಕಾರಸ್ಥನೇ ಇರಬೇಕು. ಏನಾದರೂ ಸಹಾಯ ಮಾಡಬೋದು. ಬೀಸೋಕಲ್ಲು ವ್ಯವಸ್ಥೆ ಮಾಡಬಹುದು-ಅಂತ ಆಸೆಯಿಂದಲೇ ಭಾಗಮ್ಮ ಘಂಟೆ, ಗಳಿಗೆಗಳನ್ನು ಕಾಯ್ತ ಇದ್ದಳು. ದಿವಾನರನ್ನು ನೋಡೋಕೆ ಯಾರ್ಯಾರು ಬಂದಿದ್ದರು, ಯಾರ ಯಾರ ಜಮೀನ ಹತ್ರ ದಿವಾನರು ಹೋಗಿದ್ರು , ಯಾರ ಜಮೀನಿನಲ್ಲಿ ಅವರು ಬಾಯಾರಿಕೆಗೆ ಶರಬತ್ತು ಕುಡಿದರು, ಯಾರ ಮನೇಲಿ ಅವರಿಗೆ ಊಟ ಇಟ್ಟುಕೊಂಡಿದ್ದರು, ಎಲ್ಲಾನೂ ಭಾಗಮ್ಮನ ಕಿವಿಗೆ ಬೀಳೋದು. ಅಪ್ಪಿ ತಪ್ಪಿಯಾದರೂ ದಿವಾನರು ಬೀಸೋಕಲ್ಲಿನ ಬಗ್ಗೆ, ಭಾಗಮ್ಮನ ಬಗ್ಗೆ ಯಾರ ಕೈಲೂ ಹೇಳಿರಲಿಲ್ಲ ಅಂತಾ ಕಾಣುತ್ತೆ ಅದು ಭಾಗಮ್ಮನ ಕಿವಿಗೂ ಬೀಳಲೇ ಇಲ್ಲ. ಏನ್ ಮಾಡೋದು? ನಾನು ದಿವಾನರನ್ನೇ ನೇರ ನೋಡಬೇಕಿತ್ತು. ಆ ಅಧಿಕಾರಸ್ಥ ಮನುಷ್ಯ ಅವತ್ತು ನಾನು ಹೇಳಿದ್ದನ್ನೆಲ್ಲ ಕೇಳಿಸಿಕೊಂಡನಲ್ಲ, ಅವನೇ ಹೇಳಬೇಕಿತ್ತು ದಿವಾನರಿಗೆ. ದಿವಾನರ ಮನಸ್ಸಿಗೆ ಬಂದರೆ ಅದೇನು ದೊಡ್ಡ ವಿಷಯಾನಾ ? ಸ್ಥಳದಲೇ ನಿಂತಲ್ಲೇ ಬೀಸೋಕಲ್ಲು ಹುಕುಂ ಮಾಡಬಹುದಿತ್ತು. ಇನ್ನೊಂದು ಸಲ ಹೋಗಿ ಖುದ್ದಾಗಿ ಅವರನ್ನೇ ಕಂಡರೆ ಕೆಲಸ ಕೈ ಹತ್ತಬಹುದು. ಆದರೆ ದಿವಾನರನ್ನು ನೋಡೋಕೆ ಹೋದರೆ ಅವರ ಸುತ್ತ ಅದೆಷ್ಟೊಂದು ಜನ ಇರ್ತಾರೆ. ಅವರಿಗೆಲ್ಲ ಯಾಕೆ ನನ್ನ ಕತೆ ಗೋತ್ತಾಗಬೇಕು?

    ಅಳೆದು ಸುರಿದು ಯೋಚನೆ ಮಾಡಿ ಭಾಗಮ್ಮ ಶುಕ್ರವಾರ ಬೆಳಿಗ್ಗೆ ಸರಿಹೊತ್ತಿಗೆ ಸರಿಯಾಗಿ ತಿರುಗಿ ಪಂಚಾಯತಿ ಆಫೀಸ್ ಹತ್ತಿರ ಬಂದು ನಿಂತಿದ್ದಳು. ಅವತ್ತಿನಂತೆ ಅದೇ ಗೂರ್ಖಾ, ದಿವಾನರ ಕಡೆ ಜನ ಎಲ್ಲ ಎದ್ದು ಬಯಲು ಕಡೆಗೆ ಹೊರಟ ಮೇಲೆ ಇವಳು ಜಗಲಿ ಹತ್ತಿರ ಬಂದು ಕೂತುಕೊಂಡೇಬಿಟ್ಟಳು. ಏನಾದರೂ ಸರಿಯೇ, ಇವತ್ತು ದಿವಾನರನ್ನು ನೋಡಲೇಬೇಕೆಂಬ ಮೊಂಡುತನದಿಂದ ಭಾಗಮ್ಮನಿಗೆ ಒಂದು ತರಹ ಧೈರ್ಯ ಬಂದುಬಿಟ್ಟಿತ್ತು. ಜಗಲಿಯ ಬಲಭಾಗಕ್ಕಿದ್ದ ರೂಮಿನ ಬಾಗಿಲ ಕಡೆಗೇ ಅವಳ ಕಣ್ಣೆಲ್ಲ ಮೈಯಾಗಿ ನೋಡುತ್ತಿತ್ತು.

    ಒಂದು ಸ್ವಲ್ಪ ಹೊತ್ತಾದ ಮೇಲೆ ಸೂಟು, ಬೂಟು, ಪೇಟ ಹಾಕಿಕೊಂಡ ಭದ್ರಾವತಿ ದಾಸಪ್ಪನವರು ಹೊರಗೆ ಬಂದ ತಕ್ಷಣ ಭಾಗಮ್ಮ ಓಡಿಹೋಗಿ ಅವರ ಕಾಲಿಗೆ ಅಡ್ಡ ಬಿದ್ದು ‘ದೊಡ್ಡ ಮನಸ್ಸು ಮಾಡಬೇಕು. ಇಡೀ ಸೀಮೇಗೆ ನಾಲೆ ಮಾಡಿಸೋರಿಗೆ ಒಂದು ಬೀಸೋಕಲ್ಲು ಕೊಡಸೋದು ಬಹಳ ಕಷ್ಟವೇ ಮೊನ್ನೆನೆ ಬಂದು ನಿಮ್ಮ ಕಡೆಯೋರಿಗೆ ಹೇಳಿದೆ. ದಿವಾನರಿಗೆ ಅವರು ಏನೂ ಹೇಳಲಿಲ್ಲ ಅಂತಾ ಕಾಣುತ್ತೆ. ಮನಸ್ಸು ಮಾಡಬೇಕು. ಹಿಡಿದಿದ್ದ ಕಾಲನ್ನು ಬಿಟ್ಟು ಎದ್ದೋಳು ತಿರುಗ ಅವರ ಪಾದಗಳನ್ನು ಸ್ಪರ್ಶಿಸಿ ಕಣ್ಣಿಗೊತ್ತಿಕೊಂಡು ‘ಸೀಮೆಗೆಲ್ಲಾ ಅನ್ನ ಕೊಡ್ತಿ, ನೀರು ಕೊಡ್ತಿ, ದೇವರು ನಿನಗೂ ಒಳ್ಳೇದು ಮಾಡೇ ಮಾಡ್ತಾನೆ. ಒಳ್ಳೆ ಸಂಸಾರ ಕೊಡ್ತಾನೆ. ಹೋದೋಳು ಹೋಗಲಿ, ಬರೋಳು ಬಂದೇ ಬರ್ತಾಳೆ. ನನ್ನಂತೋಳದು ಸ್ವಲ್ಪ ನೋಡಪ್ಪ’ ಅಂತ ಹೇಳ್ತಾ ನಿಂತಿದ್ದ ಹಾಗೇನೆ ಸೂಟು ಬೂಟು ಪೇಟ ಹಾಕಿಕೊಂಡಿದ್ದ ಅಷ್ಟೇ ಎತ್ತರದ ಇನ್ನೊಂದು ಮನುಷ್ಯ ಬಂದು ಭಾಗಮ್ಮನ ಹತ್ತಿರ ನಿಂತುಕೊಂಡಿತು. ಭಾಗಮ್ಮನಿಗೆ ಏನು ತೋಚದೆ ಹೆದರಿಕೆಯಾಗಿ ಕಿಟಾರ್ ಅಂತ ಕಿರುಚಿಕೊಂಡು ಓಡಿ ಹೋಗಿಬಿಟ್ಟಳು.

    ಭಾಗಮ್ಮ ಅವತ್ತು ಮೊದಲನೇ ದಿವಸ ಬನೀನ್, ಬೋಳುತಲೆ, ಪಂಚೆ, ಪುಸ್ತಕದ ಜೊತೆ ನೋಡಿದ್ದು ಸರ್. ಎಂ.ವಿ. ಯವರನ್ನೆ, ದಿವಾನರನ್ನೆ… ದಿವಾನರಿಗೆ ಅವತ್ತು ದಿನಕ್ಕಿಂತಲೂ ಬಲು ಬೇಗ ಎಚ್ಚರವಾಗಿತ್ತು. ಹೇಗಿದ್ದರೂ ಎಚ್ಚರ ಆಯ್ತಲ್ಲಾ ಅಂತ ಅಂದುಕೊಂಡು, ಇಷ್ಟೊತ್ತಿಗೇನೆ ಬೆಳಿಗ್ಗೆ ಯಾರೂ ನೋಡೋಕೆ ಮಾಡೋಕೆ ಬಂದಿರೋಲ್ಲವಲ್ಲ ಅಂತ ಉಟ್ಟ ಬಟ್ಟೇಲಿ ಜಗುಲಿಗೆ ಬಂದಿದ್ದರು. ಭಾಗಮ್ಮ ಅವಾಗಲೇ ಬಂದು ಎಲ್ಲವನ್ನು ಹೇಳಿಕೊಂಡಿದ್ದು. ಶುಕ್ರವಾರ ಬೆಳಿಗ್ಗೆ ಬಂದು ಅವಳು ಸೂಟು, ಬೂಟು ಪೇಟದ ಸಮೇತ ಮೊದಲು ನೋಡಿದ ಮನುಷ್ಯ ಭದ್ರಾವತಿ ದಾಸಪ್ಪ ಅಂತಾ, ದಿವಾನರ ಖಾಸಾ ಕಾರ್ಯದರ್ಶಿ. ದಿವಾನರು ತಮ್ಮ ಹತ್ತಿರ, ತಮ್ಮ ಆಫೀಸಿನಲ್ಲಿ ಕೆಲಸ ಮಾಡೋರೆಲ್ಲ ತಮ್ಮಷ್ಟೇ ಟಿಪ್ ಟಾಪ್ ಆಗಿರಬೇಕೆಂದು ಅವರುಗಳಿಗೂ ತಮ್ಮದೇ ರೀತಿಯ ಬಟ್ಟೆ ಭೂಷಣಗಳನ್ನು ಕೊಡಿಸ್ತಾ ಇದ್ದದ್ದರಿಂದ ಫೋಟೋ, ಪೇಪರ್ ಇಲ್ಲದೆ ಇದ್ದ ಕಾಲದಲ್ಲಿ ಎಷ್ಟೋ ಜನ ದಾಸಪ್ಪನೋರನ್ನೆ ದಿವಾನರು ಅಂತಾ ತಿಳಕೊಂಡು ಕಟ್ಟ ಸುಖ ಹೇಳಿಕೊಳ್ಳೋರು. ದಿವಾನರಿಗೆ ಇದೇನೂ ತಿಳಿದೇ ಇರಲಿಲ್ಲ. ಹಾಗೆ ದಾಸಪ್ಪನವರಿಗೆ ಹೇಳಿಕೊಂಡ ಕಷ್ಟ ಸುಖಾನೂ, ದಾಸಪ್ಪ ದಿವಾನರಿಗೆ ಹೇಳಿ ಸರ್ಕಾರದ ಕಡೆಯಿಂದ ಏನೇನು ಕೆಲಸ ಆಗಬೇಕಾಗಿತ್ತೋ ಆ ಕೆಲಸ ಆಗೇ ಆಗೋದು. ಭಾಗಮ್ಮನ ವಿಷಯದಲ್ಲಿ ಇದು ತಿರವು ಮುರುವಾಗಿತ್ತು. ದಿವಾನರಿಗೇ ಕಷ್ಟ ಸುಖ ಹೇಳಿಕೊಂಡಿದ್ದರೂ, ದಿವಾನರ ಕಡೆಯವರನ್ನು ದಿವಾನರು ಅಂತ ತಿಳಿದು ಅವರ ಕಾಲಿಗೆ ಬಿದ್ದಿದ್ದಳು. ಅಹವಾಲು ಮಾತ್ರ ದಿವಾನರಿಗೇ ಸರಿಯಾಗಿ ಹೇಳಿಕೊಂಡಿದ್ದಳು.

    ಭಾಗಮ್ಮ ಆಕಡೆ ಓಡಿಹೋದ ತಕ್ಷಣ ದಿವಾನರು-ದಾಸಪ್ಪನೋರು ಒಬ್ಬರೊಬ್ಬರ ಮುಖ ನೋಡಿಕೊಂಡರು. ದಿವಾನರು ‘ನನ್ನ ಈ ಹೆಂಗಸು ಮೊನ್ನೇನೆ ನೋಡಿದಾರೆ’ ಅಂತ ಹೇಳಿ ಮೆಟ್ಟಿಲಿಳಿದು ವಾಕಿಂಗ್‌ಗೆ ಹೊರಟರು. ದಾಸಪ್ಪನು ಕೂಡ ಅವರ ಹಿಂದೆ ಹೊರಟರು.

    ಬೀಸೋಕಲ್ಲು ತಗೊಂಡು ಹೋಗುವಾಗ ಅಮೀನ ಎರಡಮಾವಾಸ್ಯೆ ವಾಯದೆ ಕೊಟ್ಟಿದ್ದ ಹಾಗೆ ದಿವಾನರು ವಾಯಿದೆ ಕೊಡದೆ ಹೋಗಿದ್ದರೂ ಬಲು ಬೇಗನೆ ಹತ್ತು ರೂಪಾಯಿನ ಮನಿಯಾರ್ಡರ್ ಭಾಗಮ್ಮನ ವಿಳಾಸಕ್ಕೆ ಬಂತು. ಭಾಗಮ್ಮನೆ ಸ್ವಲ್ಪ ಸುಳ್ಳು ತಟವಟ, ಹೇಳೋಕೆ ಶುರು ಮಾಡಿದಳು. ದಿವಾನರು ಊರಿಗೆ ಈಚಿಗೆ ಬಂದದ್ದರಿಂದ ದಿವಾನರು ಖುದ್ದು ಕಳಿಸಿದಾರೆ ಅಂತ ಹೇಳಿದರೆ ತಾನೇ ಹೋಗಿ ದಿವಾವನರನ್ನು ಅಂಗಲಾಚಿದೆ ಅಂತಾ ಎಲ್ಲರಿಗೂ ಗೊತ್ತಾಗುತ್ತೆ ಅನ್ನೋ ಯೋಚನೆನೆ ಹಿಡಿದು, ಮೈಸೂರು ಮಹಾರಾಜರೆ ಗೂಢಚಾರರ, ಚಿತ್ರಗುಪ್ತರ ಮೂಲಕ ತನ್ನ ಕಷ್ಟ ತಿಳಕೊಂಡು ತನಗೆ ಖುದ್ದು ಕಳಿಸ್ತಾ ಇದಾರೆ ಅಂತ ಊರಲ್ಲೆಲ್ಲ ಪ್ರಚಾರ ಮಾಡಿದಳು.

    ಕೆಸ್ತೂರಿನ ಸಂತೆಗೆ ಅದೇ ಮೇಲುಸಕ್ಕರೆ ಗೋವಿಂದಶೆಟ್ಟಿನ ಜತೆ ಮಾಡಿಕೊಂಡು ಹೋಗಿ ಬೀಸೋಕಲ್ಲು ತಗೊಂಬಂದ ಮೇಲೆ ಊರವರ ಪ್ರಕಾರ ಭಾಗಮ್ಮನಿಗೆ ಹುಚ್ಚು ಅರಳು-ಮರಳು ಎಲ್ಲ ಕಡಿಮೆಯಾಯ್ತು. ಆದರೆ ಅವಳು ಮಾತ್ರ ಮೊದಲಿನಂತೆಯೇ ಬೀಸೋಕಲ್ಲಿನ ಶಬ್ದದ ಜೊತೆಗೆ ತನ್ನ ಬೈಗುಳ, ಅಳು, ಅಲವತ್ತು ಕೊಳ್ಳುವುದನ್ನು ಸೇರಿಸೋಕೆ ಶುರು ಮಾಡಿದಳು. ಬೀಸೋಕಲ್ಲಿನ ಶಬ್ದಾನೇ ತುಂಬಾ ಜೋರು ಮಾಡಿದಾಗ ಮಾತ್ರ ಯಾರಿಗೂ ಕೇಳಲಾರದು ಅನ್ನುವಂತೆ ತಾನು ದಿವಾನರನ್ನು ನೋಡಿದ್ದು, ಅವರ ಕಾಲಿಗೆ ಬಿದ್ದ ಸಂಗತೀನು ಹೇಳುವಳು. ಅಷ್ಟೇ ಅಲ್ಲ, ವಿಶ್ವೇಶ್ವರಯ್ಯನವರು ಇಡೀ ಭೂಮಿಗೆ ದಿವಾನರಾಗಬೇಕು, ಆಗ್ತಾರೆ. ಅವರ ಖಾಯಿಲೆ ತಾಯಿಗೆ ಸತ್ತು ಸ್ವರ್ಗ ಸುಖ ಸಿಗುತ್ತೆ. ವಿಶ್ವೇಶ್ವರಯ್ಯನವರಿಗೆ ಹೊಸ ಸಂಸಾರ ಬರುತ್ತೆ. ಮನೆ ತುಂಬಾ ಗಂಡು ಮಕ್ಕಳಾಗುತ್ತೆ ಅನ್ನೋ ಮಾತನ್ನೂ ಸೇರಸೋಳು.

    ದಿವಾನರು ಪಂಚಾಮೃತದ ಅಭಿಷೇಕ, ಕ್ಯಾಂಪು ಎಲ್ಲಾನು ಮುಗಿಸಿಕೊಂಡು ಶನಿವಾರ ಬೆಂಗಳೂರಿಗೆ ಬಂದು ಮನೆ ತಲುಪಿದಾಗ ಸಂಜೆ ಆಗ್ತಾ ಇತ್ತು. ಅವರ ಸಾಕುಮಗ ಅಪ್ಪನಂತೆಯೆ ಸೂಟು ಬೂಟು ಪೇಟ, ಟೈ ಧರಿಸಿ ವಾಕಿಂಗ್‌ಗೆ ಹೊರಟು ನಿಂತಿದ್ದರು. ಎಷ್ಟು ಹೊತ್ತಿನಲ್ಲಿ ವಾಕಿಂಗ್‌ಗೆ ಹೋಗಬೇಕು, ಎಷ್ಟು ಸಮಯ ಹೋಗಬೇಕು ಅನ್ನೋದನ್ನ ದಿವಾನರೆ ಕಟ್ಟುನಿಟ್ಟು ಮಾಡಿದ್ದರಿಂದ ದಿವಾನರ ಮುಖ ನೋಡಿದ ತಕ್ಷಣ ಅವರು ಕೋಟು, ಶರಟನ್ನು ಹಿಂದಕ್ಕೆ ಸರಸಿ ಗಡಿಯಾರ ನೋಡಿಕೊಂಡರು-ದಿವಾನರು ನಿಗದಿ ಮಾಡಿದ್ದ ಸಮಯಕ್ಕೆ ಸರಿಯಾಗಿ ಹೊರಟಿದ್ದರಿಂದ ಅವರಿಗೆ ಖುಷಿಯೇ ಆಯ್ತು.

    ದಿವಾನರೇ ಸಾಕು ಮಗನನ್ನು ಬೆರಳು ಸನ್ನೆ ಮಾಡಿ ಮನೆ ಒಳಗೆ ಕೂಗಿದರು. ಸೊಸೆ ಎಲ್ಲಿ ಎಂದು ವಿಚಾರಿಸಿದರು. ಅದೇನು ಮಾತು ಕತೆ ನಡೀತೋ, ಅದಾದ ಹತ್ತು ನಿಮಿಷಕ್ಕೇ ದಿವಾನರ ಸಾಕು ಮಗ – ಸೊಸೆ ಇಬ್ಬರೂ ವಾಕಿಂಗ್‌ಗೆ ಹೊರಟರು. ಸೊಸೆನ ಆತುರ ಆತುರವಾಗಿ ಹೊರಡಿಸಿರಬೇಕು ಅಂತಾ ಕಾಣುತ್ತೆ. ಹೆಜ್ಜೆ ಹಾಕ್ತಾ ಹಾಕ್ತಾನೆ ಮುಡಿಲಿರೋ ಹೂವನ್ನು ಸರಿ ಮಾಡಕೋತಾ ಇದ್ದರು.

    ಅವತ್ತೇ ಅಲ್ಲ, ಅದಾದ ಮೇಲೆ ಪ್ರತಿದಿವಸನೂ ಅದೇ ಹೊತ್ತಿನಲ್ಲಿ ದಿವಾನರ ಸಾಕುಮಗ ಸೊಸೆ ವಾಕಿಂಗ್‌ಗೆ ಹೋಗೋದು. ವಾಕಿಂಗ್‌ನಿಂದ ಬಂದಮೇಲೆ ಸಾಕುಮಗ ಕಾರಲ್ಲಿ ಕ್ಲಬ್ಬಿಗೆ ಹೋಗುತ್ತಿದ್ದ. ಅಲ್ಲಿ ದಿವಾನರು ಸಾಕುಮಗನ ಆಗಮನವನ್ನು ಕಿರುಗಣ್ಣಿನಿಂದಲೇ ಗಮನಿಸಿ ಕೇರಂ ಬೋರ್ಡುನಲ್ಲಿ ಉಳಿದಿದ್ದ ಪಾನುಗಳನ್ನು ಹೊಡೆಯೋಕೆ ರೆಡಿಯಾಗೋರು.

    ಈ ಕತೆ ಇಷ್ಟೆಲ್ಲಾ ತಿಳಿದ ಮೇಲೆ ನಾನು ನನ್ನ ಹೆಂಡತಿ ಯಾವಾಗ ಊರಿಗೆ ಹೋದರೂ ಒಂದು ಗಳಿಗೆ ಬಿಡುವು ಮಾಡಿಕೊಂಡು ಭಾಗಮ್ಮನ ಮನೆಗೆ ಹೋಗ್ತಾ ಇದ್ದಿವಿ. ನಾವು ಯಾರೂ ಅಂತ ಅವಳಿಗೆ ಗೊತ್ತಿಲ್ಲ. ದಿವಾನರನ್ನೇ ನೋಡಿದೋಳಿಗೆ ನಾವ್ಯಾರು ಅನ್ನೋದು ಯಾಕೆ ಗೊತ್ತಾಗಬೇಕು. ನನ್ನ ಕುತೂಹಲಕ್ಕೆ, ಆಸೆಗೆ ಸರ್ ಎಂ.ವಿ. ಪೋಟೋ ಅವಳ ಮನೇಲಿ ಇರಬಹುದೆ ಅಂತ ಆಸೆಯಿಂದ ಹುಡುಕಿದ್ದೇನೆ, ಇಲ್ಲ . ದಶಾವತಾರದ ಪೋಟೋ, ಲಕ್ಷ್ಮಿಯ ಪೋಟೋ, ವಸ್ತ್ರಾಪಹರಣದ ಪೋಟೋ ಎಲ್ಲ ಇದೆ. ಸರ್ ಎಂ.ವಿ ಪೋಟೋ ಮಾತ್ರ ಇಲ್ಲ. ಮೊದಲೊಂದೆರಡು ಸಲ ಹೋದಾಗ ಇದಕ್ಕೆ ಮನಸ್ಸು ಪಿಚ್ ಅನಿಸೋದು. ಆಮೇಲೆ ಅದೇ ರೂಢಿಯಾಗಿ ಹೋಯ್ತು. ಭಾಗಮ್ಮನ ಮನೆಗೆ ಹೋಗೋ ಬಳಕೆನು ಕಡಿಮೆಯಾಯ್ತು. ಆವಾಗ ಈವಾಗ ಗೂನ್‌ಬೆನ್ನಿನ ಜೊತೆ ಸರಸರ ಅಂತಾ ಓಡಾಡೋ ಭಾಗಮ್ಮನ್ನ ಊರ ಬೀದೀಲಿ ನೋಡೋದು, ಅಷ್ಟೇ.

    ಎರಡು ಮೂರು ವರ್ಷದ ಹಿಂದೆ ಭಾಗಮ್ಮ ಸತ್ತು ಹೋದಳು. ಬೆಂಗಳೂರಿಗೆ ಬಂದಿದ್ದ ಯಾರೋ ಸಂಬಂಧಿಗಳು ಈ ಸುದ್ದಿ ಹೇಳಿದರು. ಆವಾಗ ಎರಡು ಮೂರು ದಿವಸವೆಲ್ಲ ಭಾಗಮ್ಮ, ಬೀಸೋಕಲ್ಲು ಸರ್ ಎಂ ವಿ ಯವರದೇ ನೆನಪು, ಯೋಚನೆ . ನಾನು ನನ್ನ ಹೆಂಡತಿ ಯಾವಾಗಲೂ ಅದೇ ವಿಷಯಾನ ಮಾತಾಡ್ತಾ ಇದ್ದೆವು. ‘ ನೋಡಿ, ಭಾಗಮ್ಮ , ಸರ್ ಎಂ ವಿ ಫೋಟೋನ ಅವಳ ಮನೇನಲ್ಲಿ ಇಟ್ಟುಕೊಳ್ಳದೇ ಹೋದ್ರೆ ಏನು, ಅವರ ಮನೆ ಇದೆಯಲ್ಲ ಮುದ್ದೇನಹಳ್ಳಿಯಲ್ಲಿ ಸ್ಮಾರಕದ್ದು ಅಂತಾ, ಅಲ್ಲಿ ಅವರು ಕೊಡಿಸಿದ ಬೀಸೋಕಲ್ಲು ಇರಲಿ, ಮುಂದಿನ ಸಲ ಊರಿಗೆ ಹೋದಾಗ ತಗೊಂಬಂದು ಮುದ್ದೇನಹಳ್ಳಿಗೆ ಕೊಡೋಣ.

    ಹೆಂಡತಿ ಹೇಳಿದ್ದು ನನಗೂ ಸರಿ ಎನಿಸಿತು. ಮುಂದಿನ ಸಲ ಊರಿಗೆ ಹೋದಾಗ ಭಾಗಮ್ಮನ ಮನೆ ಹತ್ತಿರ ಹೋದೆವು. ಅವಳ ಮನೆಗೆ ಬೀಗ ಹಾಕಿತ್ತು. ಬಾಡಿಗೆಗೆ ಹೊಸದಾಗಿ ಯಾರೂ ಬಂದಿರಲಿಲ್ಲ. ಒಬ್ಬ ಮಗ ಸೊಲ್ಲಾಪುರ, ಇನ್ನೊಬ್ಬ ಮಗ ಗೋವಾ ಅಂತೆ. ಯಾರೋ ಕಾಗದ ಬರೆದದ್ದಕ್ಕೆ ಸತ್ತ ಐದನೇ ದಿನ ಒಬ್ಬ, ಏಳನೇ ದಿನ ಒಬ್ಬ ಬಂದು ಊರಲ್ಲಿ ತಿಥಿ ಸಮಾರಾಧನೆ ಮಾಡಿ ಹೊರಟುಹೋದರಂತೆ. ಇಬ್ಬರು ಮಕ್ಕಳು ಸಂತೆಮಾಳದಲ್ಲಿರೋ ಹೋಟೆಲಲ್ಲಿ ವಾಸ ಮಾಡಿಕೊಂಡು ದಿನ ಊರೊಳಕ್ಕೆ ಬಂದು ತಿಥಿ ಸಮಾರಾಧನೆ ಮಾಡೋರಂತೆ.

    ಮನೆ ಮಾಲೀಕ ಶೇಷಗಿರಿನ ಹಿಡಿದು ಬೀಗ- ಬಾಗಿಲು ತೆಗೆಸಿದಾಗ ಬೀಸುಕಲ್ಲಿನ ಒರಳಲ್ಲಿ ಜಿರಳೆಗಳು, ಜಿರಳೆ ಮೊಟ್ಟೆಗಳು. ಬೀಸುಕಲ್ಲನ್ನು ಈಚೆಗೆ ತೆಗೆಸಿ ಅದರ ಮೇಲೆ ಕೂತಿದ್ದ ಜೇಡ, ಕಸ, ಜಿರಳೆ ಮೊಟ್ಟೆ ಎಲ್ಲವನ್ನೂ ಒರೆಸಿ ಬೆಂಗಳೂರಿಗೆ ತಂದು ಆಮೇಲೆ ಒಂದು ಭಾನುವಾರ ಬೆಳಿಗ್ಗೆ ಮುದ್ದೇನಹಳ್ಳಿಗೆ ಹೋಗಿ ನಮಗೆ ತಿಳಿದಿದ್ದ ಸರ್ ಎಮ್ ವಿ ಕತೆಗೆಂದು ಸ್ಮಾರಕವಾಗಿ ಬೀಸೋ ಕಲ್ಲನ್ನು ಅಲ್ಲೇ ಬಿಟ್ಟು ಬಂದೆವು. ಸ್ಮಾರಕದ ಮ್ಯಾನೇಜರ್ ಸರ್ ಎಮ್ ವಿ ಹಸ್ತಾಕ್ಷರವಿರುವ ಒಂದು ಫೋಟೋ ನಮಗೆ ಕೊಟ್ಟ.

    ನೀವು ಆಕಡೆ ಹೋದಾಗ ಭಾಗಮ್ಮನ ಬೀಸೋ ಕಲ್ಲನ್ನ, ಅಲ್ಲ ದಿವಾನರು ಭಾಗಮ್ಮನಿಗೆ ಕೊಡಿಸಿದ ಬೀಸೋಕಲ್ಲನ್ನ ತಪ್ಪದೇ ನೋಡಬೇಕು.

    ಈಗ ನಮ್ಮ ಮನೆ ಹಾಲಿನಲ್ಲಿರುವ ಸರ್ ಎಮ್ ವಿ ಫೋಟೋ, ಸ್ಮಾರಕಕ್ಕೆ ಬೀಸೋಕಲ್ಲು ಕೊಡೋಕ್ಕೆ ಹೋಗಿದ್ದಾಗ ಮ್ಯಾನೇಜರ್ ಕೊಟ್ಟದ್ದು. ನಾನು ಆ ಫೋಟೋನಾ ನೋಡುವಾಗಲೆಲ್ಲಮಕ್ಕಳು ಯಾರದು, ಯಾರದು ಅಂತ ಕೇಳ್ತಾರೆ. ಸರ್ ಎಂ ವಿ ಬಡವರಾಗಿ ಹುಟ್ಟಿದ್ದು, ಕಷ್ಟಪಟ್ಟು ಓದಿದ್ದು, ದಿವಾನರಾಗಿ ದೇಶದ ಬದುಕಿಗೆ ಹೊಸ ದಿಕ್ಕು ಕೊಟ್ಟಿದ್ದು ಎಲ್ಲಾನೂ ಅವರಿಗೆ ಅರ್ಥವಾಗುವ ಹಾಗೆ ಹೇಳೋಕೆ ಪ್ರಯತ್ನ ಮಾಡ್ತೀನಿ. ಭಾಗಮ್ಮನ ಕತೆ, ಬೀಸೋಕಲ್ಲು ಕತೆ, ಯಾಕೆ ಚಿಕ್ಕ ವಯಸ್ಸಿಗೆ ದೊಡ್ಡವರಾದ ಮೇಲೆ ಹೇಳಬಹುದಲ್ಲವೇ ಅಂತಾ.

    ಎಲ್ಲಿ? ಆವಾಗ ಕತೆ ಹೇಳಿದಾಗ ಬೀಸೋ ಕಲ್ಲನ್ನ ಮಕ್ಕಳು ನೋಡಬೇಕು ಅಂದರೆ ಮುದ್ದೇನಹಳ್ಳಿ ಸ್ಮಾರಕಕ್ಕೆ ಕರಕೊಂಡು ಹೋಗಬೇಕೇನೋ?

    (ಚಿತ್ರ : ಕಿರಣ ಮಾಡಾಳು)

    spot_img

    More articles

    2 COMMENTS

    1. ಬೀಸೋಕಲ್ಲು ನಮಗೆ ಒಂದು ಬರೀ ಕಲ್ಲು. ಆದರೆ ಆ ಮುದುಕಿಯ ಜೀವನ ನಡೆಯುತ್ತಿದ್ದದ್ದೇ ಆ ಬೀಸೋಕಲ್ಲಿನಿಂದ. ಹಾಗಾಗಿ ಕಷ್ಟಪಡಬೇಕಾಯಿತು.

    LEAVE A REPLY

    Please enter your comment!
    Please enter your name here

    Latest article

    error: Content is protected !!