24.5 C
Karnataka
Friday, May 10, 2024

    ಕೋವಿಡ್ ನಿಂದ ಕೆಲವರು ಮಾತ್ರ ದೀರ್ಘ ಕಾಲ ಬಳಲಲು ಕಾರಣ ಏನು?

    Must read

    ಇದೀಗ ಒಂಭತ್ತು ತಿಂಗಳು ತುಂಬಿದ ಈ ಕೊರೋನ ವೈರಸ್ಸಿನ ಬಗ್ಗೆ ಇನ್ನೂ ಹೊಸ ಹೊಸ ವಿಚಾರಗಳು ತಿಳಿಯುತ್ತಲೇ ಇವೆ. ಜಗತ್ತಿನ ಮಿಲಿಯನ್ ಗಟ್ಟಲೆ ಜೀವಗಳನ್ನು ಆಹುತಿ ತೆಗೆದುಕೊಂಡು ಕೋಟ್ಯಂತರ ಜನರ ದೇಹಗಳನ್ನು ತನ್ನ ಸಂತಾನವರ್ಧನೆಗೆ ಬಳಸಿಕೊಂಡಿರುವ ಈ ವೈರಸ್ಸು ನಮ್ಮ ದೇಹದ ಮೇಲೆ ದೀರ್ಘಕಾಲದ ಪರಿಣಾಮಗಳನ್ನು ಬೀರಬಲ್ಲದೇ ಎನ್ನುವ ಬಗ್ಗೆ ಹೊಸ ಕಾಳಜಿಗಳು ಹುಟ್ಟಿಕೊಂಡು ಜಗತ್ತಿನಾದ್ಯಂತ ಹಲವು ಅಧ್ಯಯನಗಳನ್ನು ಆರಂಭಿಸಲಾಗಿದೆ.

    ಈ ಬಗ್ಗೆ ಸೆಪ್ಟಂಬರ್ 3 ರಂದು ಪ್ರತಿಷ್ಠಿತ ಬ್ರಿಟಿಷ್ ಮೆಡಿಕಲ್ ಜರ್ನಲ್ (BMJ) ಏರ್ಪಡಿಸಿದ್ದ ಒಂದು ವೆಬಿನಾರ್ ನಲ್ಲಿ ಕೊರೋನಾ ರೋಗದ ಅಧ್ಯಯನದಲ್ಲಿ ತೊಡಗಿಕೊಂಡಿರುವ ಹಲವು ತಜ್ಞರು ಚರ್ಚೆಯನ್ನು ನಡೆಸಿದರು. ನಂತರ ಅವರು ತಮ್ಮ ಚರ್ಚೆ ಮತ್ತು ಅಧ್ಯಯನವನ್ನು ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ   ಪ್ರಕಟಿಸಿದ್ದಾರೆ.

    ಅವರು ಆರಿಸಿಕೊಂಡ ವಿಚಾರ  ’ದೀರ್ಘ ಕೋವಿಡ್ ’ ( Long COVID ) ಎಂಬುದು. ಏನು ಹಾಗೆಂದರೆ?

    ಕೊರೋನಾ ಸೋಂಕಿತರಲ್ಲಿ ಬಹುತೇಕರು ಬೇಗನೆ ಗುಣಮುಖರಾಗುತ್ತಾರೆ. ಆದರೆ ಕೆಲವರಲ್ಲಿ ಈ ಸೋಂಕಿನ ರೋಗ ಲಕ್ಷಣಗಳು ಹಲವು ವಾರ ಅಥವಾ ತಿಂಗಳುಗಳ ಕಾಲ ಹಾಗೇ ಉಳಿದು  ಆಗಾಗ ಉಲ್ಬಣಗೊಂಡು ಕಾಡಬಲ್ಲವು. ಇದನ್ನು ಲಾಂಗ್ ಕೋವಿಡ್ ಎಂದು ಕರೆಯಲಾಗಿದೆ.

    ಕೋವಿಡ್ ನೆಗೆಟಿವ್ ಆದ ನಂತರವೂ ರೋಗ ಲಕ್ಷಣಗಳು ಕೆಲವರನ್ನು ಬಹುಕಾಲ ಕಾಡುವುದರಿಂದ ಕ್ಷಿಪ್ರವಾಗಿ ಗುಣಮುಖರಾಗುವ ಇತರರಿಂದ ಇವರನ್ನು ಬೇರೆಯೆಂದು ಗುರುತಿಸಲು  ’ದೀರ್ಘ ’ ಎನ್ನುವ ಪದವನ್ನು ಬಳಸಲಾಗುತ್ತಿದೆ.ಆದರೆ ಲಾಂಗ್ ಕೋವಿಡ್ ಎಂಬ ಪದ ವೈಜ್ಞಾನಿಕವಾಗಿ ಇನ್ನೂ ಪರಿಗಣಿಸಲ್ಪಟ್ಟಿಲ್ಲ. ಇದಿನ್ನೂ ವೈದ್ಯರು ಮತ್ತು ಜನಬಳಕೆಯಲ್ಲಿ ಮಾತ್ರ ಇರುವ ಪದ.

    ಹಲವು ಲಕ್ಷಣಗಳು

    ಕೊರೋನಾಕ್ಕೆ ಹಲವು ಲಕ್ಷಣಗಳಿವೆ. ಬೇರೆ ಬೇರೆ ಜನರನ್ನು ಇದು ಬೇರೆ ಬೇರೆ ರೀತಿ ಕಾಡಬಲ್ಲದು. ಗುಣಮುಖರಾಗುವ ಜನರಲ್ಲೂ ವೈವಿಧ್ಯತೆಗಳಿವೆ. ಕೆಲವರು ಅತಿ ಬೇಗ ಸುಧಾರಿಸಿಬಿಡುತ್ತಾರೆ. ಮತ್ತೆ ಕೆಲವರು ತಿಂಗಳಾನುಕಾಲ ಹೋರಾಡಿದ ನಂತರ ಗುಣಮುಖರಾಗುತ್ತಾರೆ. ಆದರೆ ಇಂಥವರಲ್ಲಿ ಕೆಲವರು ಗುಣಮುಖರಾದ ನಂತರವೂ ಹಲವು ತಿಂಗಳುಗಳ ಕಾಲ ನಾನಾ ತೊಂದರೆಗಳಿಂದ ಬಳಲುತ್ತಿದ್ದಾರೆ. ಇನ್ನು ಕೆಲವರು ಈ ದೀರ್ಘಕಾಲದ ಹೋರಾಟದಲ್ಲಿ ಯಶಸ್ವಿಯಾಗುವುದಿಲ್ಲ ಆದರೆ ಇಂಥವರ ಸಂಖ್ಯೆ ಕಡಿಮೆ ಎನ್ನುವುದೇ ಸಮಾಧಾನದ ಸಂಗತಿ.

    ’ದೀರ್ಘ ಕೋವಿಡ್ ’ ಚರ್ಚೆಯಲ್ಲಿ ಭಾಗವಹಿಸಿದ ಇಂಗ್ಲೆಂಡಿನ ಡಾ. ನಿಸ್ರೀನ್ ಆಲ್ವನ್ ಸೌಂಥಾಂಟನ್ ಆಸ್ಪತ್ರೆಯ ಪಬ್ಲಿಕ್ ಹೆಲ್ತ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸಮಾಡುತ್ತಿದ್ದಾರೆ. ಈಕೆಗೆ ಸ್ವತಃ ದೀರ್ಘಕಾಲದ ಕೊರೋನಾ ವೈರಸ್ಸಿನ ಸೋಂಕು ತಗುಲಿತ್ತು.

    ಕೋವಿಡ್ ಸೋಂಕು ಬಂದರೆ ಎರಡು ವಾರ ಮನೆಯಲ್ಲಿರಿ. ಅಷ್ಟರಲ್ಲಿ ಸಾಮಾನ್ಯವಾಗಿ ಗುಣವಾಗಿರುತ್ತೀರಿ ಎಂದೇ ಬಹುತೇಕ ಸಂದೇಶಗಳು ಹೇಳುವುದು. ಕ್ವಾರಂಟೈನ್ ಕಾಲವೂ ಇಷ್ಟು ಕಾಲ ಮಾತ್ರ.ಇದೇ ಕಾರಣಕ್ಕೆ ಕೋವಿಡ್ ಎಂದರೆ ಎರಡು ವಾರದ ಸೋಂಕು ಎನ್ನುವ ಭಾವನೆಗಳೂ ಜನರಲ್ಲಿವೆ.ಹೀಗೆ ಕೆಲವು ದಿನಗಳಲ್ಲಿ ಅಥವಾ 2-3 ವಾರದಲ್ಲಿ ಪರಿಪೂರ್ಣವಾಗಿ ವಾಸಿಯಾಗುವ ಕೊರೋನಾ ಸೋಂಕನ್ನು ಸಾಮಾನ್ಯ ಕೋವಿಡ್ ಎನ್ನಬಹುದು.ದೀರ್ಘ ಕೋವಿಡ್ ನಲ್ಲಿ ಕೊರೋನಾ ಸೋಂಕಿನ ಪರೀಕ್ಷೆ  ಋಣಾತ್ಮಕವಾಗಿ ಬಂದಿದ್ದರೂ ಸೋಂಕಿನ ಲಕ್ಷಣಗಳು ಮುಂದುವರೆಯಬಲ್ಲವು.

    ಆಗಸ್ಟ್ ನ ಮೊದಲಿಗೇ ಕೊರೊನಾದಿಂದ ಆಸ್ಪತ್ರೆಗೆ ಸೇರಿದ ಎಸ್. ಪಿ. ಬಾಲಸುಬ್ರಮಣ್ಯಂ ಸುಮಾರು 7 ವಾರಗಳ ಕಾಲ ಅದರೊಂದಿಗೆ ಹೋರಾಡಿದ್ದನ್ನೂ ನಾವು ಇಲ್ಲಿ ನೆನೆಯಬಹುದು. ಸೆಪ್ಟಂಬರಿನ ಮೊದಲಿಗೆ ಇವರ ಕೋವಿಡ್ ಪರೀಕ್ಷೆ ನೆಗಟಿವ್ ಎಂದು ತಿಳಿದಿತ್ತು. ಆದರೆ ಅವರಲ್ಲಿ ಆಯಾಸ ಮತ್ತು ಕೆಲವು ಲಕ್ಷಣಗಳು ಮುಂದುವರೆದವು. ಸೆಪ್ಟಂಬರ್ 25 ರಂದು ಹೃದಯ ಮತ್ತು ಉಸಿರಾಟಗಳೆರಡರದ್ದೂ ತೊಂದರೆಯಾಗಿ ಅವರು ಅಸುನೀಗಿದರು.ಕೋಟ್ಯಂತರ ಜನರು ಮಮ್ಮಲ ಮರುಗಿದರು.

    ಅತ್ಯಧಿಕ ಆಯಾಸ ಲಾಂಗ್ ಕೋವಿಡ್ ನ ಅತ್ಯಂತ ಮುಖ್ಯ ಲಕ್ಷಣ ಎಂದು ಡಾ.ನಿಸ್ರೀನ್ ಹೇಳುತ್ತಾರೆ. ಇದರ ಜೊತೆ ಜೊತೆಗೆ ಕೋವಿಡ್ ಸೋಂಕಿನ ಹಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಎಲ್ಲಕ್ಕಿನ್ನ ಮುಖ್ಯವಾಗಿ ಈ ರೋಗಲಕ್ಷಣಗಳು ಬಿಟ್ಟು ಬಿಟ್ಟು ಬಂದು- ಹೋಗಿ ಮಾಡುತ್ತವೆ ಎನ್ನುತ್ತಾರಿವರು. 

    ನಾವೆಲ್ಲ “ ಇದೀಗ ಎಸ್ಪಿಬಿ ಚೇತರಿಸಿಕೊಳ್ಳುತ್ತಿದ್ದಾರೆ “ ಎಂದು ಕೇಳಿದ ಕೆಲವೇ ದಿನಗಳಲ್ಲಿ “ಅವರ ಸ್ಥಿತಿ ಚಿಂತಾಜನಕವಾಗಿದೆ…” ಎಂದು  ಆಸ್ಪತ್ರೆಗಳು ಹೇಳಿಕೆ ಕೊಟ್ಟದ್ದನ್ನು ನಾವಿಲ್ಲಿ ಸ್ಮರಿಸಬಹುದು. ಅವರ ಪರೀಕ್ಷೆ ನೆಗೆಟಿವ್ ಬಂದಾಗಲೂ ಅವರ ಸಾವಿನ ಕಾರಣವನ್ನು  ’ಕೋವಿಡ್ ಸಾವು ’ ಎಂದು ಕರೆದರು. ಕೋವಿಡ್  ಸೋಂಕು ಶ್ವಾಸಕೋಶಗಳ ಜೊತೆಗೆ ಮನಷ್ಯರ ಹೃದಯ,ಮೂತ್ರಪಿಂಡ, ಯಕೃತ್ತು, ನರ ವ್ಯವಸ್ಥೆಗಳ ಮೇಲೆಯೂ ದಾಳಿ ಮಾಡಬಲ್ಲದು ಎಂಬುದು ಈಗಾಗಲೇ ಧೃಡವಾಗಿರುವ ವಿಚಾರ.

    ನಿಸ್ರೀನ್ ಪ್ರಕಾರ ರೋಗಿಗೂ, ರೋಗಿ ಸುಧಾರಿಸಿಕೊಳ್ಳಲಿ ಎಂದು ಕಾಯುತ್ತಿರುವ ರೋಗಿಯ ಹಿತೈಷಿಗಳಿಗೂ ಪದೇ ಪದೇ ನಿರಾಸೆ ಮಾಡುವ ವಿಚಾರಗಳಿವು. 74 ವರ್ಷ ವಯಸ್ಸಾಗಿದ್ದ , ಸ್ಥೂಲಕಾಯದ ಎಸ್ಪಿಬಿ ಯವರಿಗೆ ಐವತ್ತು ವರ್ಷದೊಳಗಿನವರಿಗೆ ಹೋಲಿಸಿದರೆ ಶೇಕಡ 90 ರಷ್ಟು ಹೆಚ್ಚು ಅಪಾಯವಿತ್ತು.ಅವರು ಸಿಗರೇಟು ಸೇದುತ್ತಿದ್ದ ವಿಚಾರವೂ ಇಲ್ಲಿ ತನ್ನ ಪಾತ್ರವನ್ನು ತೋರಿತು ಎನ್ನಲಾಗಿದೆ. 

    74 ವರ್ಷದ, ಅಮೆರಿಕಾದ ವೈದ್ಯರ ಪ್ರಕಾರ ಸ್ಥೂಲಕಾಯದ, ಜಂಕ್ ಆಹಾರಗಳ ಪ್ರಿಯರಾದ ಅಮೆರಿಕಾದ ಅಧ್ಯಕ್ಷ ಡೊನಾಲ್ದ್ ಟ್ರಂಪ್ ಇಂತವೇ ಮೂರು ಅಪಾಯಗಳನ್ನು  ಹೊಂದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಕೂಡಲೇ ಅವರನ್ನು ಮಿಲಿಟರಿ ಆಸ್ಪತ್ರೆಯಲ್ಲಿಟ್ಟು ಪ್ರಾಯೋಗಿಕ ರಿಜೆನೆರಾನ್ಸ್ ಪಾಲಿಕ್ಲೋನಲ್ ಆಂಟಿಬಾಡಿ ಕಾಕ್ ಟೈಲ್ ನೀಡಿ ಚಿಕಿತ್ಸೆಯನ್ನು ಶುರುಮಾಡಲಾಯಿತು.

    ಬಹುಕಾಲ ಕಾಡಬಹುದು

    ದೀರ್ಘ ಕೋವಿಡ್ ಎರಡು ರೀತಿಯಲ್ಲಿ ಬಹುಕಾಲ ಕಾಡಬಹುದು ಎನ್ನಲಾಗಿದೆ. ಮೊದಲನೆಯದಾಗಿ ಈಗಾಗಲೇ ಹಲವು ಖಾಯಿಲೆಗಳಿಂದ ನರಳುತ್ತಿರುವ ಕೆಲವರು ಕೊರೋನಾದಿಂದ ಅಲ್ಪ ಸ್ವಲ್ಪ ಚೇತರಿಸಿಕೊಂಡಿದ್ದರೂ ಅದರಿಂದ ಜರ್ಜರಿತರಾಗುವ ಅವರು ತಮ್ಮ ಇತರೆ ಖಾಯಿಲೆಗಳು ಮತ್ತು ಸಮಸ್ಯೆಗಳು ಉಲ್ಬಣವಾಗುವ ಕಾರಣ  ಬಹುಕಾಲ ಸುಧಾರಿಸಿಕೊಳ್ಳಬೇಕಾಗುತ್ತದೆ. ಮತ್ತು ಎರಡನೆಯದಾಗಿ ಮೊದಲಿಂದಲೂ ಕೊರೋನಾ ಲಕ್ಷಣಗಳು ಬಹಳ ಕಡಿಮೆಯಿದ್ದು ಅವೇ ಲಕ್ಷಣಗಳಿಂದ ಬಹುಕಾಲ ಬಳಲುವವರು.

    ಸುಮಾರು ಆರು ತಿಂಗಳ ಕಾಲ ದೀರ್ಘ  ಕೋವಿಡ್ ಲಕ್ಷಣಗಳಿಂದ ಬಳಲಿದ ಪಾಲ್ ಗಾರ್ನರ್ ಎಂಬಾತ ಮೊದಲ ಎರಡು ತಿಂಗಳಲ್ಲಿ ಕೋವಿಡ್ ರೋಗ ಲಕ್ಷಣಗಳು ಪದೇ ಪದೇ ಅವನನ್ನು ಬಳಲಿಸಿತೆಂದೂ ನಂತರದ ನಾಲ್ಕು ತಿಂಗಳು ಸತತ ಸುಸ್ತಿನೊಂದಿಗೆ ಸಣ್ಣದಾಗಿ ಇತರೆ ಲಕ್ಷಣಗಳು ಕೂಡ ಇದ್ದವೆಂದು ಹೇಳುತ್ತಾನೆ. ಅಂದರೆ ಇವನಲ್ಲಿ ವೈರಸ್ಸು ಇಲ್ಲದಿದ್ದರೂ ರೋಗ ಲಕ್ಷಣಗಳು ಸತತವಾಗಿ 6 ತಿಂಗಳುಗಳ ಕಾಲ ಮುಂದುವರೆದಿದ್ದವು. ಕೊರೋನಾ ನೆಗೆಟಿವ್ ಆಗಿದ್ದರೂ ಈ ರೀತಿ ದೀರ್ಘಕಾಲದ ಲಕ್ಷಣಗಳಿಂದ ಬಳಲುತ್ತಿರುವ ಸಾವಿರಾರು ಜನರಿದ್ದಾರೆ. 

    ಆದ್ದರಿಂದ ಸೋಂಕಿನಿಂದ ಮುಕ್ತರಾದವರನ್ನು  “ಮತ್ತೆ ಸೋಂಕು ಬಂದಿರಬಹುದೇ ? “ ಎನ್ನುವ ಸಂದೇಹದಿಂದ ನೋಡುವ ಅಗತ್ಯವಿಲ್ಲ. ಆದರೆ ಅವರನ್ನು ಲಕ್ಷಣಗಳು ಕೆಲಕಾಲ ನಲುಗಿಸಬಲ್ಲವು ಎಂಬ ಅರಿವಿದ್ದರೆ ಒಳ್ಳೆಯದು. ಇಂಥವರ ಬಗ್ಗೆ ಸಹಾನುಭೂತಿಯಿರಲಿ. ಕೆಲಸಕೊಟ್ಟಿರುವ ಧಣಿಗಳು, ಉದ್ಯಮಿಗಳು, ಸಂಸ್ಥೆಗಳು ಇವರ ವಿಶೇಷ ಅಗತ್ಯಗಳನ್ನು ಅರಿತುಕೊಳ್ಳಲಿ.

    ದೀರ್ಘ ಕಾಲೀನ ಕೋವಿಡ್ ನಿಂದ ಬಳಲುತ್ತಿರುವವರು ’ತಮ್ಮನ್ನು ಜನರು ಅರ್ಥಮಾಡಿಕೊಳ್ಳುತ್ತಿಲ್ಲ’ ಎನ್ನುವ ನೋವುನ್ನೂ ತೋಡಿಕೊಂಡಿದ್ದಾರೆ. ಸೋಂಕು ಮುಕ್ತರಾದ ಕಾರಣ ಇವರಿಗೆ ಬೇಕಾದ ನೆರವು,ಬಿಡುವು, ರಜಾಗಳು ದೊರೆಯದೆ ಅವರು ಮಾನಸಿಕವಾಗಿಯೂ ಬಳಲಬಲ್ಲರು.ಆದ್ದರಿಂದ ಕೊರೋನಾ ಸೋಂಕಿನ ಈ ವಿಧದ ಬಗ್ಗೆಯೂ ಅರಿವು ಮೂಡಬೇಕು ಎನ್ನುವುದು ಈ ಬರಹದ ಮುಖ್ಯ ಉದ್ದೇಶವಾಗಿದೆ. 

    ಯಾರಲ್ಲಿ ಹೆಚ್ಚು?

    ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಜೆನೆಟಿಕ್ಸ್ ಆಫ್ ಎಪಿಡೆಮಿಯಾಲಜಿಯ ಪ್ರೊಫೆಸರ್ ಮತ್ತು ಕೋವಿಡ್ ಲಕ್ಷಣಗಳ ಅಧ್ಯಯನದ ಮುಖ್ಯಸ್ಥರಾಗಿರುವ ಡಾ. ಟಿಂ ಸ್ಪೆಕ್ಟರ್ ಪ್ರಕಾರ ದೀರ್ಘ ಕೋವಿಡ್ ಬರುವವರು ಸೋಂಕು ತಗುಲಿದ ಮೊದಲ ವಾರದಲ್ಲೇ ನಿಲ್ಲದ ಕೆಮ್ಮು, ಒಡೆದ ಧ್ವನಿ, ತಲೆನೋವು, ಭೇದಿ,ಊಟ ತಿನ್ನಲಾಗದಿರುವುದು ಮತ್ತು ಉಸಿರಾಟದ ತೊಂದರೆಯ ಲಕ್ಷಣಗಳನ್ನು ತೋರಿಸುತ್ತಾರೆ. ಇಂತವರು ಮಿಕ್ಕವರಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚಾಗಿ ದೀರ್ಘ ಕೋವಿಡ್ ಗೆ ಬಲಿಯಾಗುತ್ತಾರಂತೆ.

    ಗಂಡಸರಿಗೆ ಹೋಲಿಸಿದರೆ ಹೆಂಗಸರಲ್ಲಿ ಇದು ದುಪ್ಪಟ್ಟು ಉಂಟಾಗುತ್ತದೆ ಎನ್ನಲಾಗಿದೆ.ಸಾಮಾನ್ಯವಾಗಿ ಕಡಿಮೆ ಕಾಲ ಅಥವಾ ಶಾರ್ಟ್ ಕೋವಿಡ್ ಬರುವವರಿಗಿಂತ ಇವರ ವಯಸ್ಸು ಕನಿಷ್ಠ ನಾಲ್ಕು ವರ್ಷ ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ.ದೀರ್ಘ ಕಾಲೀನ ಕೋವಿಡ್ ನ ಮುಖ್ಯ ಲಕ್ಷಣ ಎಂದರೆ ಅದು ಆಯಾಸ/ಸುಸ್ತು ಎನ್ನುವ ಈತ ಮೂರು ವಾರಕ್ಕಿಂತ ಹೆಚ್ಚು ಕಾಲ ಕೋವಿಡ್ ಇದ್ದ ಶೇಕಡ 80 ಜನರು ತಿಂಗಳಾನುಗಟ್ಟಲೆ ಪದೇ ಪದೇ ಸುಸ್ತನ್ನು ಅನುಭವಿಸಿದ್ದನ್ನು ವರದಿ ಮಾಡಿದ್ದಾರೆ.

    ಇದಕ್ಕೆ ಪೂರಕವಾಗಿ ಡಾ. ವೇಲೆಂಟಿನಾ ಪಂಟ್ಮ್ಯಾನ್ ಎಂಬಾಕೆ ದೀರ್ಘ ಕೋವಿಡ್ ವೈರಸ್ಸಿನಿಂದ  ಮುಕ್ತರಾದವರ ಬಹುತೇಕರ ಹೃದಯದಲ್ಲಿ ಉರಿಯೂತ ( Inflammation) ಕಾಣಿಸಿಕೊಂಡದ್ದನ್ನು ತನ್ನ ಅಧ್ಯಯನಗಳ ಮೂಲಕ ಜಗತ್ತಿಗೆ ತಿಳಿಸಿದ್ದಾಳೆ. ತನ್ನ ಈ ಅಧ್ಯಯನವನ್ನು ಜಮ (JAMA) ದಲ್ಲಿ ಹಂಚಿಕೊಂಡಿರುವ ಈಕೆ ಕೊರೋನಾ ಸೋಂಕಿತರಲ್ಲಿ ಉಸಿರಾಟ ಮತ್ತು ಶ್ವಾಸಕೋಶಗಳ ಬಗ್ಗೆಯೇ ಹೆಚ್ಚು ಒತ್ತುಕೊಡುತ್ತಿದ್ದ ಬಗ್ಗೆ ಹೇಳುತ್ತ ವೈರಸ್ಸುಗಳು ಹೃದಯದ ಮೇಲೆಯೂ ದಾಳಿ ಮಾಡಬಲ್ಲವು ಎಂದು ಹೇಳುತ್ತಾಳೆ. ಇದೇ ಕಾರಣಕ್ಕೆ ಈಗಾಗಲೇ ಹೃದಯದ ತೊಂದರೆಗಳಿಂದ ಬಳಲುತ್ತಿರುವ ರೋಗಿಗಳು ಕೋವಿಡ್ ವೈರಸ್ಸಿನಿಂದ ಸೋಂಕಿತರಾದರೆ ಅತ್ಯಂತ ಬೇಗನೆ ನಿತ್ರಾಣರಾಗುತ್ತಾರೆ ಎನ್ನಲಾಗಿದೆ.

    ಬದಲಾಗುತ್ತಿರುವ ಚಿತ್ರ

    ಅದು ಅಲ್ಪಕಾಲದ ಕೋವಿಡ್ ಆಗಲಿ ಅಥವಾ ದೀರ್ಘಕಾಲದ ಕೋವಿಡ್ ಆಗಿರಲಿ ಸಾವಿನ ಸಂಖ್ಯೆ ಕಡಿಮೆಯೇ. ಆದರೆ ಮೊದಲ ಮೂರು ವಾರದಲ್ಲಿ ತೀವ್ರ ನಿಗಾ ಘಟಕ ಬೇಕಾಗದ ಜನರು ಗುಣಮುಖರಾಗುವ ಸಾಧ್ಯತೆ ಹೆಚ್ಚು. ಒಮ್ಮೆ ವೆಂಟಿಲೇಟರುಗಳ ಅಗತ್ಯ ಬಿದ್ದನಂತರ ಅವರ ಗುಣಮುಖರಾಗಬೇಕಾದಲ್ಲಿ ಆ ಪ್ರಯಾಣ ದೀರ್ಘಕಾಲ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ ಎನ್ನಲಾಗಿದೆ.

    ಆದರೆ ಗುಣಮುಖರಾಗುವದು ಇಲ್ಲವೇ ಸಾಯುವುದು ಇವೆರಡನ್ನು ಬಿಟ್ಟು ದೀರ್ಘಕಾಲ ಕಾಡುವ ಕೋವಿಡ್ ಬಗ್ಗೆ ಇತ್ತೀಚೆಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ.  ಏಕೆಂದರೆ ದೀರ್ಘಕಾಲದ ಕೋವಿಡ್ ಬಂದವರಲ್ಲಿ ದೈಹಿಕವಾಗಿ ಆರೋಗ್ಯವಾಗಿದ್ದವರು, ಚಟುವಟಿಕೆಗಳಿಂದ ಕೂಡಿದ್ದ ಜನರು ಎಲ್ಲರೂ ಇದ್ದು ಅವರ ಬದುಕು ಕೋವಿಡ್ ಕಾರಣ ತಳಕಂಬಳಕ ಆದದ್ದು ವಿಷಾದದ ಸಂಗತಿಯಾಗಿದೆ.ಕೆಲವರಲ್ಲಿ ಆಯಾಸ, ಮೈ-ಕೈ ನೋವು,ಕೀಲು ನೋವಿನ ಜೊತೆ, ಮರೆವು,ಏಕಾಗ್ರತೆಯ ನಾಶ, ಖಿನ್ನತೆ ಮತ್ತು ಮಾನಸಿಕ ರೋಗದ ಲಕ್ಷಣಗಳು, ಕೂದಲುದುರುವಿಕೆ ಕೂಡ ಕಂಡು ಬಂದಿವೆ. ಒಂದು ವರ್ಷದ ನಂತರಇದರ ಪೂರ್ಣ ಚಿತ್ರ ಹೇಗಿರಬಹುದೆಂಬುದರ ಬಗ್ಗೆ ಸಧ್ಯಕ್ಕೆ ತಿಳಿದಿಲ್ಲ.

    ಆಸ್ಪತ್ರೆಗೆ ದಾಖಲಾಗಬೇಕಾಗುವ ರೋಗಿಗಳಲ್ಲಿ ಕೋವಿಡ್ ಹೇಗೆ ವರ್ತಿಸುತ್ತದೆ ಎಂದು ಅಧ್ಯಯನ ಮಾಡಲು ಇಂಗ್ಲೆಂಡಿನ ಲೆಸ್ಟರ್ ಎನ್ನುವ ನಗರದ ಆಸ್ಪತ್ರೆಗಳಲ್ಲಿ ಇಡೀ ಪ್ರಪಂಚದಲ್ಲೇ  ದೊಡ್ಡದು ಎನ್ನುವಂಥ ಅಧ್ಯಯನವೊಂದು ನಡೆಯುತ್ತಿದೆ.ಇದರಲ್ಲಿ ಶ್ವಾಸಕೋಶ, ಹೃದಯ, ಮಾನಸಿಕ ಆರೋಗ್ಯ, ಜೀವ ನಿರೋಧಕ ಶಕ್ತಿ, ಮೂತ್ರಕೋಶ ಹೀಗೆ ವೈದ್ಯಕೀಯ ಲೋಕದ ಹಲವಾರು ವಿಭಾಗಕ್ಕೆ ಸೇರಿದ ತಜ್ಞರು ಒತ್ತಟ್ಟಿಗೆ ಬಂದು ಕೆಲಸಮಾಡುತ್ತಿದ್ದಾರೆ.

    ಇವರ ಮುಖ್ಯ ಉದ್ದೇಶ ದೀರ್ಘಕಾಲದ ಕೋವಿಡ್ ಯಾರಿಗ ಬರುತ್ತದೆ, ಏಕೆ ಬರುತ್ತದೆ, ಹೇಗೆ ವರ್ತಿಸುತ್ತದೆ ಮತ್ತು ಅದನ್ನು ಹೇಗೆ ನಿಯಂತ್ರಿಸಬಹುದು, ಅವರಲ್ಲಿ ಯಾರು ಬದುಕುಳಿಯುತ್ತಾರೆ ಮತ್ತು ಯಾರು ಯಾವ ಕಾರಣಕ್ಕೆ ಸಾಯುತ್ತಾರೆ ಎನ್ನುವುದನ್ನು ಆಳವಾಗಿ ಅಧ್ಯಯನ ಮಾಡುವುದೇ ಆಗಿದೆ.

    ಇದಕ್ಕೂ ಕಾರಣಗಳಿವೆ. ಈ ಹಿಂದೆ ಏಪ್ರಿಲ್ ನಲ್ಲೇ ಯೂರೋಪಿನ ಒಕ್ಕೂಟ, ಇನ್ನೋವೇಟ್ ಯು.ಕೆ. ಮತ್ತು ಪರ್ಸ್ಪೆಕ್ಟಮ್  ಎನ್ನುವವರ ಸಹಭಾಗತ್ವದಲ್ಲಿ 160 ರೋಗಿಗಳ ಮೇಲೆ ಅಧ್ಯಯನ ಶುರುವಾಗಿತ್ತು. ಇವರೆಲ್ಲರೂ ದೀರ್ಘ ಕೋವಿಡ್ ನಿಂದ ಬಳಲುತ್ತಿದ್ದರು. ಇವರಲ್ಲಿ ಶೇಕಡಾ 50 ರಷ್ಟು ಜನರಲ್ಲಿ ಹೃದಯ, ಮೂತ್ರಪಿಂಡ ಮತ್ತು ಯಕೃತ್ತ ನ್ನು ಕೊರೋನಾ ವೈರಸ್ಸು ತೊಂದರೆಗೀಡುಮಾಡಿತ್ತು.ಇದೇ ಕಾರಣಕ್ಕೆ ಈಗಿನ ಅಧ್ಯಯನದಲ್ಲಿ ಎಲ್ಲ ವಿಭಾಗದ ನಿಪುಣರೂ ಒತ್ತಟ್ಟಿಗೆ ಸೇರಿ ಕೆಲಸಮಾಡುತ್ತಿದ್ದಾರೆ.

    ಕಾಲ ಕ್ರಮೇಣ ಜನಸಾಮಾನ್ಯರಿಗೆ ಕೋವಿಡ್ ನ ವರ್ತನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳು ಲಭ್ಯವಾಗುತ್ತ ಹೋಗುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ.

    ಇದಕ್ಕೆ ಮದ್ದಿದೆಯೇ?

    ದೀರ್ಘಕಾಲದ ಕೋವಿಡ್ ನಿಂದ ನರಳಿ ಸುಧಾರಿಸಿಕೊಳ್ಳುವವರ ಆರೋಗ್ಯಕ್ಕೆ ಆರೋಗ್ಯಕರ ಆಹಾರ ಸೇವನೆ, ಆರಾಮ ಮತ್ತು ಲಘು ವ್ಯಾಯಾಮಗಳೇ ಸಧ್ಯಕ್ಕಿರುವ ಚಿಕಿತ್ಸೆ. ಅದರಿಂದಲೇ ಅವರಲ್ಲಿ ಉಳಿಯುವ ದೀರ್ಘಕಾಲದ ಸಮಸ್ಯೆಗಳು ನಿಧಾನವಾಗಿ ಸುಧಾರಿಸುತ್ತವೆ ಎನ್ನಲಾಗಿದೆ. ಮ್ಯಾಟ್ ಎಂಬ ನಲವತ್ತರ ಪ್ರಾಯದ ವ್ಯಕ್ತಿಗೆ ಕೋವಿಡ್ ಬಂದು ಹೋದ ನಂತರ  ಕೇವಲ ಹತ್ತು ನಿಮಿಷಗಳ ಕಾಲ ಟಿ.ವಿ. ಅಥವಾ ಯಾವುದೇ ಪರದೆಗಳನ್ನು ನೋಡಿದರೆ ತಲೆನೋವು ಬರುತ್ತದಂತೆ. ಐದು ನಿಮಿಷದ ನಡಿಗೆ ಅತ್ಯಂತ ತ್ರಾಸವಾಗಿ ಉಸಿರಾಡಲು ಆಗುವುದಿಲ್ಲ ಎಂದಿದ್ದಾನೆ. ಇವನಿಗೆ ಮಾರ್ಚ್ ತಿಂಗಳಲ್ಲಿ ಕೋವಿಡ್ ಬಂದುಹೋಗಿ ಆರು ತಿಂಗಳು ಕಳೆದಿದ್ದರೂ ದೀರ್ಘಕಾಲೀನ ಲಕ್ಷಣಗಳು ಇನ್ನೂ ಉಳಿದಿವೆಯಂತೆ.

    ಕೊರೋನ ಬಿಟ್ಟು ಹೋದ ನಂತರದ ಮೂರು ವಾರಗಳ ನಂತರವೂ ರೋಗ ಲಕ್ಷಣಗಳಿದ್ದರೆ ವೈದ್ಯರ ಬಳಿ ತೋರಿಸಿಕೊಳ್ಳುವುದು ಒಳಿತು. ನಿಮ್ಮ ಸುಸ್ತು, ಸೋಲಿಗೆ ರಕ್ತ ಪರೀಕ್ಷೆ ಮಾಡಿಸಿಕೊಂಡು ಇನ್ನೇನಾದರೂ ಕಾರಣಗಳಿವೆಯೇ ಎಂದು ತಿಳಿಯುವುದು ಒಳ್ಳೆಯದು. ದೇಹಕ್ಕೆ ಆಯಾಸ ತರುವ ಯಾವುದೇ ವ್ಯಾಯಾಮವನ್ನು ನಿಲ್ಲಿಸುವುದು ಒಳ್ಳೆಯದು. ಪೌಷ್ಟಿಕ ಆಹಾರ ಸೇವನೆ ಮತ್ತ ಲಘು ವ್ಯಾಯಾಮ ನಿಯಮಿತವಾಗಿ ಮಾಡಬೇಕು ಎಂದು ತಜ್ಞರು ಹೇಳಿದ್ದಾರೆ.

    ದೀರ್ಘ ಕಾಲದ ಕೋವಿಡ್ ಇರುವವರಿಗೆ ಯಾವುದು ಅವರಲ್ಲಿ ಸುಸ್ತು ಸೋಲನ್ನು ತರಬಲ್ಲದು ಎಂಬ ಅರಿವು ಮೂಡುತ್ತದೆ. ಅಂಥವನ್ನು ಮಾಡದಿದ್ದರೆ ಒಳ್ಳೆಯದು.ಸಧ್ಯಕ್ಕೆ ರೋಗಿಗಳು ಮಾಡಬಹುದಾದ್ದು ಇಷ್ಟು ಮಾತ್ರವೇ ಎನ್ನುವ ಡಾ.ನಸ್ರೀನ್ ವೈದ್ಯರುಗಳ ನಡುವೆ ಈ ದೀರ್ಘಕಾಲದ ಲಕ್ಷಣಗಳನ್ನು ಸುಧಾರಿಸುವ ಮಾರ್ಗಗಳ ಬಗ್ಗೆ ಒಂದು ನಿಚ್ಚಳ ರೂಪು ರೇಖೆ ಮತ್ತು ಮಾರ್ಗಸೂಚಿ ತಯಾರಾಗಬೇಕು ಎನ್ನುತ್ತಾರೆ.

    ದೀರ್ಘಕಾಲದ ಕೋವಿಡ್ ರೋಗಿಗಳು ನಾನಾತರದ ಲಕ್ಷಣಗಳನ್ನು ಹೇಳಿದರೂ ಅವರನ್ನು ಒಂದು ವಿಭಾಗದಿಂದ ಇನ್ನೊಂದಕ್ಕೆ ಅಲಸದೆ ಅವರ ಎಲ್ಲ ಲಕ್ಷಣಗಳನ್ನು ತಿಳಿಸಿಕೊಡಬಲ್ಲ ಮಾರ್ಗಸೂಚಿ ಇದ್ದರೆ ಒಬ್ಬರೇ ವೈದ್ಯರು ಅವರನ್ನು ಸುಧಾರಿಸಬಹುದು ಎನ್ನುವ ಆಶಯಗಳನ್ನು ವ್ಯಕ್ತಪಡಿಸುತ್ತಾರೆ.  ಆ ಮೂಲಕ ಭಯ ಮತ್ತು ಆತಂಕಗಳನ್ನು ಸುಧಾರಿಸಬಹುದು ಎನ್ನುತ್ತಾರೆ.

    ಇನ್ನೂ ಆಸಕ್ತಿಯ ವಿಚಾರವೆಂದರೆ, ಮೇ ವೇಳೆಗೆ ಯು.ಕೆ.ಯಲ್ಲಿ ದೀರ್ಘ ಕೋವಿಡ್ ನಿಂದ ಬಳಲಿದ 640 ಜನರಿದ್ದ ಒಂದು ಸಮೀಕ್ಷೆ ನಡೆಯಿತು. ಇವರಲ್ಲಿ ಕೇವಲ ಶೇಕಡ 23.1 ಜನರಿಗೆ ಮಾತ್ರ ಕೋವಿಡ್ ಪರೀಕ್ಷೆ ಪಾಸಿಟಿವ್ ಎಂಬ ಫಲಿತಾಂಶ ದೊರಕಿತ್ತು.ಶೇಕಡ 27.5 ಜನರಿಗೆ ಪರೀಕ್ಷೆ ನೆಗೆಟಿವ್ ಎಂಬ ಫಲಿತಾಂಶ ಬಂದಿತ್ತು. ಮಿಕ್ಕ ಶೇಕಡ 50.1 ಜನರಿಗೆ ಕೋವಿಡ್ ಸೋಂಕು ಬಂದು ಹೋಗಿರಬೇಕು ಎಂದು ನಂಬಲಾಗಿತ್ತು. ಆದರೆ ಪರೀಕ್ಷೆಯೇ ಆಗಿರಲಿಲ್ಲ.

     ಏಕೆಂದರೆ ಪರೀಕ್ಷೆಗಳು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಎಲ್ಲರಿಗೂ ವ್ಯಾಪಕವಾಗಿ ದೊರಕುತ್ತಿರಲಿಲ್ಲ. ಆದರೆ, ಇವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇವರು ತಮ್ಮ ಮನೆಗಳಲ್ಲೇ ಕ್ವಾರಂಟೈನ್ ಮಾಡಿಕೊಂಡು ಗುಣ ಮುಖರಾದೆವು ಎಂದುಕೊಂಡಿದ್ದರು. ಮೇ ತಿಂಗಳ 18 ನೇ ತಾರೀಖಿನ ನಂತರವಷ್ಟೇ ಅವರಿದ್ದ ದೇಶದಲ್ಲಿ ಎಲ್ಲ ಸಾರ್ವಜನಿಕರಿಗೂ ಪರೀಕ್ಷೆಗಳು ಸುಲಭವಾಗಿ ಲಭ್ಯವಾದದ್ದು. ಆ ವೇಳೆಗೆ ಅವರು ಗುಣಮುಖರಾಗಿದ್ದರು.ಆದರೆ,ಕೋವಿಡ್  ನ ಕೆಲವು ಲಕ್ಷಣಗಳು ಇವರನ್ನು ಬಹಳ ಕಾಲ ಕಾಡಿದ್ದವು. ದೀರ್ಘಕಾಲದ ಕೋವಿಡ್ ನಿಂದ ಇನ್ನೂ ಬಳಲುತ್ತಿರುವ ಇವರೆಲ್ಲ ಅಂತರ್ಜಾಲದಲ್ಲಿ ತಮ್ಮದೇ ಗುಂಪನ್ನು ನಿರ್ಮಿಸಿಕೊಂಡಿದ್ದಾರೆ. 

    ಈ ವಿಚಾರವಿನ್ನೂ ಅಧ್ಯಯನದ ಹಂತದಲ್ಲಿರುವ ಕಾರಣ ಇವರ ಪರಿಸ್ಥಿತಿಗೊಂದು ಹೆಸರಿಲ್ಲ. ಇದೇ ರೀತಿ ಕನಿಷ್ಠ 6 ತಿಂಗಳ ಕಾಲ ಸೋಲು ಸುಸ್ತನ್ನು ಅನುಭವಿಸುವುದನ್ನು ಕ್ರಾನಿಕ್ ಫೆಟಿಗ್ ಸಿಂಡ್ರೋಮ್ (Chronic Fatigue Syndrome) ಎನ್ನುತ್ತಾರೆ. ಮುಂದೊಮ್ಮೆ  CFS ನ್ನು ಧೀರ್ಘ ಕೊರೋನಾ ಬಂದು ಹೋದವರಿಗೆ ಜೋಡಿಸಬಹುದು.  

    ಮುಂದಿನ ತಿಂಗಳು, ವರ್ಷಗಳಲ್ಲಿ ನಮಗೆ ಈ ಸೋಂಕಿನ ಬಗ್ಗೆ ಮತ್ತೂ ಹೆಚ್ಚಿನ ಮಾಹಿತಿಗಳು ದೊರೆಯುತ್ತ ಹೋಗುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.


    ಡಾ. ಪ್ರೇಮಲತ ಬಿ
    ಡಾ. ಪ್ರೇಮಲತ ಬಿhttps://kannadapress.com/
    ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ಸದ್ಯ ಇಂಗ್ಲೆಂಡಿನಲ್ಲಿ ವಾಸ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಕಥೆ, ಕವನಗಳು ಲೇಖನಗಳು,ಅಂಕಣ ಬರಹ, ಮತ್ತು ಪ್ರಭಂದಗಳನ್ನು ಬರೆದಿದ್ದಾರೆ. ’ಬಾಯೆಂಬ ಬ್ರಹ್ಮಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ.’ ಕೋವಿಡ್ ಡೈರಿ ’ ಎನ್ನುವ ಅಂಕಣ ಬರಹದ ಪುಸ್ತಕ 2020 ರಲ್ಲಿ ಪ್ರಕಟವಾಗಿದೆ.ಇವರ ಸಣ್ಣ ಕಥೆಗಳು ಸುಧಾ, ತರಂಗ, ಮಯೂರ, ಕನ್ನಡಪ್ರಭ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
    spot_img

    More articles

    11 COMMENTS

    1. ದೀರ್ಘ ಕೋವಿಡ್… ಅಥವಾ ನ್ಯೂ ನಾರ್ಮಲ್… ಜೀವನ ಮುಂದುವರಿಯಲಿ ಉಸಿರು ಇರುವವರೆಗೂ

      • ವಿಚಾರವನ್ನು ಆ ದೃಷ್ಟಿಯಿಂದಲೂ ನೋಡಬಹುದು. ಆದರೆ ಭಾರತದಲ್ಲಿ ಇದುವರೆಗೆ 63ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡನಿಂದ ಗುಣಮುಖರಾದ ವರದಿಗಳಿವೆ.
        ಇವರಲ್ಲಿ ಕೆಲವರಲ್ಲಿ ಧೀರ್ಘ ಕಾಲದವರೆಗೆ ಲಕ್ಷಣಗಳು ಉಳಿಯಬಹುದು. ಅಂಥವರ ಕಥೆಗಳು ನಿಧಾನವಾಗಿ ಹೆಚ್ಚು ಹೊರಬರುತ್ತವೆ. ಸಧ್ಯಕ್ಕೆ ಈ ಬಗ್ಗೆ ಅರಿವು ಇದ್ದರೆ ಹೆದರಿಕೊಂಡು ವೈದ್ಯರ ಬಳಿ ಎಡತಾಕುವ ಗಾಬರಿಯನ್ನು ಕಡಿಮೆ ಮಾಡಬಹುದೇನೋ. ಧನ್ಯವಾದಗಳು.

    2. ಸಾಕಷ್ಟು ವಿವರಗಳನ್ನು ನೀಡುವ ನಿಮ್ಮ ಲೇಖನ ಕೋವಿಡ್ ನ ಹಲವು ಮುಖಗಳನ್ನು ತೋರಿಸಿದೆ. ಮಾಹಿತಿ ಪೂರ್ಣ ಲೇಖನ. ಧನ್ಯವಾದಗಳು

      • ಧನ್ಯವಾದಗಳು.
        ಹೌದು ಈ ಹೊಸ ಸೋಂಕಿನ ಬಗ್ಗೆ ಇನ್ನೂ ಹಲವು ವಿಚಾರಗಳು ಹೊರಬರುತ್ತಲೇ ಇವೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!