23.5 C
Karnataka
Monday, May 20, 2024

    ಟಾಕೀಸ್ ತೆರೆದರೂ ಸ್ಟಾರ್ ನಟರ ಚಿತ್ರಗಳಿಲ್ಲದೆ ಪ್ರೇಕ್ಷಕರು ಬರುವುದು ಅನುಮಾನ; ಸಂದಿಗ್ಧ ಸ್ಥಿತಿಯಲ್ಲಿ ಗ್ರಾಮೀಣ ಚಿತ್ರಮಂದಿರ

    Must read

    ಅದೊಂದು ಕಾಲ ನಮೋ ವೆಂಕಟೇಶ… ಎಂಬ ಘಂಟಸಾಲ ಹಾಡಿನ ಸಾಲು ಕೇಳಿದೊಡಣೆಯೇ ಲೇ… ಪಿಚ್ಚರ್ ಸ್ಟಾಟ್ ಆತ್ಕಣಲೇ… ಅಂತ ಪಂಚೆ ಮೇಲೆ ಕಟ್ಟಿ ಎದ್ನೊ..ಬಿದ್ನೊ..ಎಂದು ಓಡುತ್ತಿದ್ದೆವು. ಸೆಕೆಂಡ್ ಶೋಗೆ ಎತ್ತಿನ ಗಾಡಿ ಗಲ್..ಗಲ್.. ಸದ್ದಿನೊಂದಿಗೆ ಚಿತ್ರಮಂದಿರದತ್ತ ಬಿರ್ರನೆ ಧಾವಿಸುತ್ತಿದ್ದೆವು. ದೊಡ್ಡವರು ಟಿಕೆಟ್ ತಗಂಡ ತಕ್ಷಣ ..ಧಡ ಧಡ ಓಡಿ ಜಾಗ ಹಿಡಿಯುತ್ತಿದ್ದ ಗ್ರಾಮೀಣ ಚಿತ್ರಮಂದಿರ ವೈಭವ ನೆನಪಿನಂಗಳದಲ್ಲಿ ಅಚ್ಚಳಿಯದೆ ಉಳಿದಿದೆ.

    ದೊಡ್ಡ ಮಕ್ಕಳಿಗೆ ದುಡ್ಡು ಕೇಳ್ತಾರೆ ಅಂತ ಅಜ್ಜಿ ಎತ್ತಿಕೊಂಡ ನೆನಪು. ಚಿಲ್ಲರೆ ಹಿಡಿದು ಅಣ್ಣ.. ಬಿಡಣ.. ಅಂತ ಹಲ್ಲುಗಿರಿಯುವ ಮಕ್ಕಳು. ಗೇಟ್ ಕೀಪರ್ ಬಿಟ್ಟನೆಂದರೆ ಟಣ್ ಅಂತ ಒಳಗೆ ಹಾರಿ ಕುಳಿತುಕೊಳ್ಳುವ ಚಿಣ್ಣರು. ಆಗ ನೆಲ, ಬೆಂಚ್, ಕುರ್ಚಿ ಮೂರು ವರ್ಗಗಳು. ಮಣ್ಣು ಭರಿತ ನೆಲದಲ್ಲೇ ಟೂರಿಂಗ್ ಟಾಕೀಸ್ ಚಿತ್ರ ಪ್ರದರ್ಶನ. ಹೈಸ್ಕೂಲು ಓದುವಾಗ ಸ್ನೇಹಿತರ ಗುಂಪು ಸ್ಕ್ರೀನ್ ಕೆಳಗೆ ಕಾಲು ಚಾಚಿ ಅಂಗಾತ ಮಲಗಿ ನೋಡಿದ ಸಿನಿಮಾಗಳೆಷ್ಟೋ..

    60-70ರ ದಶಕದಲ್ಲಿ ಚಿತ್ರಮಂದಿರಗಳೇ ಮನರಂಜನೆಯ ತಾಣ. ಕಪ್ಪು-ಬಿಳುಪು ಚಿತ್ರದಿಂದ ಬಣ್ಣದ ಚಿತ್ರಗಳಿಗೆ ಬದಲಾದ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದ ಟೂರಿಂಗ್ ಟಾಕೀಸ್ ಗಳಿಗೆ ಉತ್ತುಂಗ ಕಾಲ. ಭಕ್ತಿ ಪ್ರಧಾನ, ಐತಿಹಾಸಿಕ, ಸಾಮಾಜಿಕ ಚಿತ್ರಗಳಿಗೆ ಎಲ್ಲಿಲ್ಲದ ರಶ್. ಎರಡು- ಮೂರು ವಾರಗಳು ಸಿನಿಮಾ ಓಡುತ್ತಿದ್ದವು. ಫೈಟಿಂಗ್ ಸೀನ್ ನಲ್ಲಿ ಸೀಟಿ, ಕೇಕೆ, ಭಾವುಕತೆಯಲ್ಲಿ ಕಣ್ಣೀರು ಹಾಕಿದವರೆಷ್ಟೊ.

    ರಾಜ್ಯಾದ್ಯಂತ ಬಹುತೇಕ ಟೂರಿಂಗ್ ಟಾಕೀಸ್ ಗಳಲ್ಲಿ ಚಿತ್ರ ವೀಕ್ಷಣೆಯ ಸೊಗಡು ಜವಾರಿಯೇ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತನಾಗ್, ಅಂಬರೀಶ್ ಸಿನಿಮಾಗಳ ಸುಗ್ಗಿ. ಅವರ ಸ್ಟೈಲ್ ಕಾಪಿ ಮಾಡಿದವರಿಲ್ಲ. ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲ್, ಜನನಾಯಕ, ಹಂತದಂತಹ ಸಾಲು ಸಾಲು ಸಿನಿಮಾಗಳಿಗೆ ಹಳ್ಳಿಗಳಿಂದ ಬಂದ ಎತ್ತಿನಗಾಡಿಗಳನ್ನೆ ಎಣಿಕೆ ಮಾಡುವ ಅಚ್ಚರಿ.  ಈ ಚಿತ್ರಣ 2000 ಇಸವಿವರೆಗೂ ಚಿತ್ರಮಂದಿರಗಳ ಹೈ ಕಲೆಕ್ಷನ್ ಇದ್ದೇ ಇತ್ತು.

    ಸಿನಿಮಾ ಸಮಯ ಕಸಿದ ಟೀವಿ

    ನನ್ನೂರಲ್ಲಿ ಕಪ್ಪು ಬಿಳುಪು ಟಿವಿ 1986ರಲ್ಲಿ  ಕಾಲಿಟ್ಟಾಗ ಮರಡೋನಾ ಫುಟ್ ಬಾಲ್ ಫೈನಲ್ ಸಮಯ. ಒಂದೆರಡು ಮನೆಯಲ್ಲಿದ್ದ ಟಿವಿ ನೋಡಲು ಮಗಿಬೀಳುತ್ತಿದ್ದೆವು. ಅಂದಿನಿಂದ 2000ದ ವರೆಗೆ ದೂರದರ್ಶನದಲ್ಲಿ ವಾರಕ್ಕೊಂದು ಸಿನಿಮಾ ಪ್ರಸಾರ. ಚಿತ್ರಮಂದಿರಗಳ ಮೇಲೆ ಹೆಚ್ಚು ಪರಿಣಾಮ ಬೀರಿರಲಿಲ್ಲ. 2001ರ ಸುಮಾರಿಗೆ ಆರಂಭವಾದ ಖಾಸಗಿ ಚಾನಲ್ ಗಳು ಧಾರಾವಾಹಿಗಳಿಂದ ಚಿತ್ರಮಂದಿರಗಳಿಗೆ ಹೋಗುವ ಪ್ರೈಮ್ ಟೈಂ ಕಸಿದುಕೊಂಡವು. ಸಿನಿಮಾಗಳಿಗೆ ಮೀಸಲಾದ ಚಾನಲ್ ಗಳು ನಿತ್ಯ ಸಿನಮಾ ಎಡಬಿಡದೆ ಪ್ರಸಾರ ಮಾಡಿದವು. ಉಚಿತ ಚಾನಲ್ ಗಳಿಂದ ಚಿತ್ರಮಂದಿರಗಳಿಗೆ ಹೋಗುವವರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿತು. 2005 ರ ಹೊತ್ತಿಗೆ ಅನೇಕ ಗ್ರಾಮೀಣ ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚಲ್ಪಟ್ಟವು. ತಮ್ಮ ಗತಕಾಲದ ವೈಭವದ ಸ್ಮರಣೆಯಲ್ಲಿ ಗೋಡೆ ಕುಸಿದು, ರೂಫಿಂಗ್ ಹಾರಿ, ಗೋಡೌನ್ ಗಳಾಗಿ ನಿಂತಿವೆ. ಚಿತ್ರ ಮಂದಿರದ ಮಾಲೀಕರ ಬದಲಿ ಉದ್ಯಮಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. ಕೆಲವರು ಆರ್ಥಿಕ ದುಸ್ಥಿತಿ ತಲುಪಿದ್ದಾರೆ.

    ರಾಜ್ಯದಲ್ಲಿ 1500 ಚಿತ್ರಮಂದಿರಗಳಿದ್ದವು. ಕಲೆಕ್ಷನ್ ಇಲ್ಲದೇ 800 ಚಿತ್ರಮಂದಿರಗಳಿಗೆ ಕುಸಿದಿದೆ. ತಾಲ್ಲೂಕಿನಲ್ಲಿ  10 ರಿಂದು 15 ಚಿತ್ರಮಂದಿರಗಳಿಂದ 3 ರಿಂದ 4 ಚಿತ್ರಮಂದಿರಗಳು ಮಾತ್ರ ಆರಂಭಿಸಿವೆ. ಇದಕ್ಕೆ ಕಾರಣ ಟಿವಿ ಮಾಧ್ಯಮ. ಸದಭಿರುಚಿಯ ಚಿತ್ರಗಳ ಕೊರತೆ. ಚಿತ್ರ ವಿತರಣೆ ಸಮಸ್ಯೆ,  ಆಧುನಿಕ ತಂತ್ರಜ್ಞಾನ ಅಳವಡಿಸಿ ಪುನರುಜ್ಜೀವನಗೊಳಿಸದೆ ಇರುವುದು, ಶುಚಿತ್ವದ ಕೊರತೆ, ಆಸನದ ಕೊರತೆ ಹೀಗೆ ಅನೇಕ ಕಾರಣಗಳ ಸಮಾಗಮದಿಂದ ಚಿತ್ರಮಂದಿರಗಳಿಗೆ ಜನರ ನಿರಾಸಕ್ತಿ ಮಡುಗಟ್ಟಿದೆ.

    ಕರ್ನಾಟಕ ಏಕಪರದೆ ಹಾಗೂ ಮಲ್ಟಿಪ್ಲೆಕ್ಟ್ ಚಿತ್ರಮಂದಿರಗಳಿವೆ. ಏಕ ಪರದೆ ಚಿತ್ರಮಂದಿರಗಳಲ್ಲಿ ನಗರ, ಜಿಲ್ಲಾ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಎ.ಬಿ.ಸಿ.ಡಿ ಎಂದು ವಿಭಾಗಿಸಲಾಗಿದೆ. ಎಲ್ಲಾ ಹಂತದ ಚಿತ್ರಮಂದಿರಗಳಿಗೆ ಏಕರೂಪದ ಸಿನಿಮಾಟೊಗ್ರಫಿ ಕಾಯ್ದೆಯಗೆ ಒಳಪಡಿಸಲಾಗಿದೆ.

    ಕೋವಿಡ್ ಕಾಲದ ಸ್ಥಿತಿ

    ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದ ಪರಿಣಾಮ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಸುಮಾರು 8 ಸಾವಿರ ಚಿತ್ರಮಂದಿರ ಕಾರ್ಮಿಕರಿಗೆ ಸರ್ಕಾರದ ಯಾವುದೇ ಸವಲತ್ತು ದೊರೆತಿಲ್ಲ. ಪಡಿತರ ಆಹಾರ ಕಿಟ್ ಗಳನ್ನು ನೀಡಿಲ್ಲ. ಮಾಲೀಕರು ವೇತನ ಕೊಡಲು ಆಶಕ್ತರಾದ ಕಾರಣ ಅವರ ಜೀವನಕ್ಕೆ ಮಾರ್ಗೋಪಾಯ ಹುಡುಕಲು ಹೆಣಗಾಡುತ್ತಿದ್ದಾರೆ.

     ಸುಮಾರು 100 ವರ್ಷಗಳಿಂದ ಸಾರ್ವಜನಿಕ ಮನರಂಜನೆ ನೀಡುತ್ತಿವೆ. ಜಿಎಸ್ ಟಿ, ವಿದ್ಯುತ್ ಶುಲ್ಕ, ನೀರಿನ ಕಂದಾಯ, ಆಸ್ತಿ ತೆರಿಗೆ, ಬ್ಯಾಂಕ್ ಗಳ ಸಾಲದ ಕಂತು ಬಾಕಿ ಇರುತ್ತವೆ. ಫ್ಯಾನ್ ಫಾಲೋವರ್ಸ್ ಇರುವ ನಾಯಕ ನಟರ ಸಿನಿಮಾಗಳಿಗೆ ಗ್ರಾಮೀಣ ಭಾಗದ ಚಿತ್ರಮಂದಿರಗಳಿಗೆ ಕಲೆಕ್ಷನ್. ಸಾಲು, ಸಾಲು ಚಿತ್ರ ಬಿಡುಗಡೆ ನಿರೀಕ್ಷೆ ಇದ್ದ ಮಾಲೀಕರಿಗೆ ಕೋವಿಡ್ ಬರಸಿಡಿಲಿನಂತೆ ಅಪ್ಪಳಿಸಿದೆ.

    ಒಟಿಟಿ, ಮೊಬೈಲ್, ಟಿವಿಗಳಿಂದ ಚಿತ್ರಮಂದಿರದ ಸಂಭ್ರಮದ ವೀಕ್ಷಣೆಯಿಂದ ಏಕತಾನತೆ ಮೂಡಿದೆ. ಜನರ ಗುಂಪಿನೊಂದಿಗೆ, ಕೇಕೆ, ಸಿಳ್ಳೆ, ಚಪ್ಪಾಳೆಗಳಿಂದ ಕೂಡಿದ ಸಿನಿಮಾ ವೀಕ್ಷಣೆ ಸಂಭ್ರಮ ಕಳೆದು ಹೋಗಬಾರದು. ಚಿತ್ರಮಂದಿರಗಳ ಸಂಭ್ರಮ ಕಾಪಾಡುವುದು ಸರ್ಕಾರದ, ನಿರ್ಮಾಪಕರ, ಚಿತ್ರ ರಸಿಕರ, ಉದ್ಯಮದ ಕಲಾವಿದರ, ನಿರ್ದೇಶಕರ, ಕಾರ್ಮಿಕರ ಕರ್ತವ್ಯವಾಗಿದೆ. ಸರ್ಕಾರದ ಕೃಪಾ ದೃಷ್ಟಿಯಿಂದ ಚಿತ್ರಮಂದಿರಗಳು ಜೀವಂತಿಕೆ ಪಡೆಯಲಿ. ಆ ಮೂಲಕ ಮಾಲೀಕರ, ಕಾರ್ಮಿಕರ ಜೀವನ ಸಂರಕ್ಷಣೆಗೆ ಮುಂದಾಗಲಿ

    ಪುನರಾರಂಭಿಸಲು ನಿರಾಸಕ್ತಿ

    ಇದೇ 15 ರಿಂದ ಚಿತ್ರಮಂದಿರಗಳಿಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ವಯ ಚಿತ್ರಮಂದಿರ ಪುನರರಾಂಭಕ್ಕೆ ಅವಕಾಶ ನೀಡಲಾಗಿದೆ. ಗ್ರಾಮೀಣ ಚಿತ್ರಮಂದಿರಗಳ ಮಾಲೀಕರಲ್ಲಿ ನಿರಾಸಕ್ತಿ ಇದೆ. ಪ್ರತಿ ಚಿತ್ರ ಪ್ರದರ್ಶನಕ್ಕೂ ಸ್ಯಾನಿಟೈಸರ್ ಮಾಡಬೇಕು. ಒಬ್ಬ ವೀಕ್ಷಕನಿಗೆ ರೂ.10 ಖರ್ಚು ತಗುಲಿದೆ.

    ಎಚ್.ಎಸ್.ಪ್ರಕಾಶ್.

    ಈಗ ಟಿಕೆಟ್ ದರ ರೂ.80 ಇದೆ. ಅದರಲ್ಲಿ ಶೇ.12 ಜಿಎಸ್ ಟಿ ಕಡಿತಗೊಳ್ಳುತ್ತದೆ. ಹೆಸರಾಂತ ನಟರ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿಲ್ಲ. ಹಾಗಾಗಿ ಚಿತ್ರಮಂದಿರದ ಕಡೆ ಹೆಜ್ಜೆ ಹಾಕುವ ಪ್ರೇಕ್ಷಕರಿಲ್ಲ ಎನ್ನುತ್ತಾರೆ ವೆಂಕಟೇಶ್ವರ ಚಿತ್ರಮಂದಿರದ ಮಾಲೀಕ ಎಚ್.ಎಸ್.ಪ್ರಕಾಶ್.

    ಪ್ರಮುಖ ಬೇಡಿಕೆಗಳು

    1.ವಾರ್ಷಿಕ ಪರವಾನಗಿ ಶುಲ್ಕ ರೂ.22500ಕ್ಕೆ ಏರಿಸಲಾಗಿದೆ. ಈ ಮೊದಲು ರೂ.1500 ಇತ್ತು. ಇದನ್ನು ಕಡಿತಗೊಳಿಸಬೇಕು.

    2.ಚಲನ ಚಿತ್ರಮಂದಿರವನ್ನು ಉದ್ಯಮ ಅಡಿಯಲ್ಲಿದೆ. ಹಾಗಾಗಿ ವಿದ್ಯುತ್ ದರ ಪ್ರತಿ ಯುನಿಟ್ ಗೆ ರೂ.3.50ಕ್ಕೆ ನಿಗದಿಗೊಳಿಸಬೇಕು. ಸದ್ಯ ರೂ. 8 ವಿಧಿಸಲಾಗುತ್ತಿದೆ.

    3.ಕಟ್ಟಡದ ವಿಸ್ತೀರ್ಣಕ್ಕೆ ಮಾತ್ರ ತೆರಿಗೆ ವಿಧಿಸಬೇಕು. ಹೊರ ಆವರಣ ಸೇರಿಸಬಾರದು.

    4.ಸಿನಿಮಾ ಪ್ರದರ್ಶನ ರದ್ದಾಗಿರುವಾಗ ನೀರಿನ ಕಂದಾಯಕ್ಕೆ ವಿನಾಯಿತಿ ನೀಡಬೇಕು.

    5.ಹಿಂತಿರುಗಿಸದ ಮುಂಗಡ ಕಟ್ಟಲು ಮಾಲೀಕರಿಗೆ ನಷ್ಟ ಉಂಟುಮಾಡುತ್ತದೆ. ಕಲೆಕ್ಷನ್ ಆಧಾರದಲ್ಲಿ ಮುಂಗಡ ಪಡೆಯಬೇಕು.

    ಇಂತಹ ಗೊಂದಲಗಳನ್ನು ನಿವಾರಿಸಲು ಮುಂದಾದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಪುನರರಾಂಭಿಸಲು ಚಿಂತನೆ ನಡೆಸಲಾಗುವುದು ಎನ್ನುತ್ತಾರೆ ಪ್ರಕಾಶ್.

    ಕೆ ಎಸ್ ವೀರೇಶ ಪ್ರಸಾದ್
    ಕೆ ಎಸ್ ವೀರೇಶ ಪ್ರಸಾದ್https://kannadapress.com/
    ವೃತ್ತಿ ಯಿಂದ ವಿಜ್ಞಾನ ಶಿಕ್ಷಕ . ಪ್ರವೃತ್ತಿಯಿಂದ ಪತ್ರಕರ್ತ.
    spot_img

    More articles

    12 COMMENTS

    1. ಚಿತ್ರ ಮತ್ತು ಚಿತ್ರಮಂದಿರ ಇವೆರಡನ್ನು ನಂಬಿ ಬದುಕುತ್ತಿರುವ ಮಾಲೀಕ ಮತ್ತು ನೌಕರರ ಕೋವಿಡ್ ನಲ್ಲಿ ಎದ್ರಿಸುತ್ತಿರುವ ಕಷ್ಟಗಳನ್ನು ವಿವರಿಸಿದ್ದೀರಿ… ಮತ್ತು ಅಂದಿನ ಚಿತ್ರ ಪ್ರೇಮವನ್ನು ಸೊಗಸಾಗಿ ವಿವರಿಸಿದ್ದೀರಿ… ಓದಿದ ಮೇಲೆ ಪರಿಹಾರ ಸಿಗುವುದು ಬಿಡಿ ಮೊದಲಿನ ಆ ಸಂಭ್ರಮ ಬರಲಾರದು ಅನ್ನೋ ದೃಢವಾಗಿ ನಿರ್ಧಾರ ವಾಗಿದೆ.

    2. ಸಿನಿಮಾ ಮಂದಿರಗಳ ಅಂಕಿ ಅಂಶ
      ಹಾಗು ಬದಲಾವಣೆ ಎಲ್ಲಾ ಸೊಗಸಾಗಿ ವಿವರಿಸಿದ ವೀರೇಶ್ ಪ್ರಸಾದ್ ಅವರಿಗೆ ಧನ್ಯವಾದಗಳು..

    3. ಚಿತ್ರ ಮಂದಿರದ ಮಾಲಿಕರು ಮತ್ತು ನೌಕರರ ನೋವು ಗಳನ್ನು ತಮ್ಮ ಬರವಣಿಗೆಯಲ್ಲಿ ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ ಅಭಿನಂದನೆಗಳು ಕೆ ಎಸ್ ವಿ.

    4. ನಿಮ್ಮ ಬರಹ ಬಾಲ್ಯವನ್ನು ಒಮ್ಮೆ ಮರುಕಳಿಸಿತು.
      ಆಧುನಿಕ ಕಾಲದ ವಾಹಿನಿಗಳು ಬಂದು ಚಲನಚಿತ್ರಗಳ ಮೇಲೆ ಬೀರಿದ ಪ್ರಭಾವ ಮತ್ತು ತದನಂತರ ಕೋವಿಡ್ ನಿಂದ ಉಂಟಾದ ಪರಿಣಾಮ ಮತ್ತು ಬದಲಾವಣೆ ಇವತ್ತಿನ ಗ್ರಾಮೀಣ ಪ್ರದೇಶದ ಚಿತ್ರಮಂದಿರಗಳು ತೆರೆಯಲು ಆಗುವ ಅನಾನುಕೂಲ ಬಗ್ಗೆ ಕೂಲಂಕಷವಾಗಿ ಬರೆದಿರುವ ನಿಮ್ಮ ಬರಹ ಪ್ರಭಾವ ಬೀರುವಲ್ಲಿ ಯಶಸ್ವಿಯಾಗುವಷ್ಟು ಗಟ್ಟಿಯಾಗಿದೆ

    5. ತಮ್ಮ ಈ ಬರಹ ನನ್ನನ್ನು ಬಾಲ್ಯದ ದಿನಗಳ ನೆನಪಿನ ಅಂಗಳಕ್ಕೆ ತಲುಪಿಸಿ ಮಾಸಲು ಹಿಡಿದಿದ್ದ ಗತ ಸವಿ ನೆನಪುಗಳು ಸ್ಪಷ್ಟವಾಗಿ ಮರುಕಳಿಸಿ ಮನೋಲ್ಲಾಸ ತರಿಸಿದವು ತಮಗೆ ವಂದನೆಗಳು. ಮತ್ತು ಚಿತ್ರಮಂದಿರಗಳ ಮಾಲೀಕರ ಬವಣೆಗಳನ್ನು ಅತೀ ಸೂಕ್ಷ್ಮವಾಗಿ ಮತ್ತು ಮಾರ್ಮಿಕವಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ್ದೀರಿ.

    6. ವೀರೇಶ್ , ನಾವು ಚಿಕ್ಕವನರಿದ್ದಾಗ ಟೂರಿಂಗ್ ಟಾಕೀಸಿನಲ್ಲಿ ಸಿನಿಮಾ ನೋಡುವಾಗ ಸಿಗುತ್ತಿದ್ದ ಖುಷಿ , ಈ ನಿನ್ನ ಲೇಖನ ಓದಿದಾಗ ಸಿಕ್ಕಿತು. ತುಂಬಾ ಸೊಗಸಾಗಿ ಅಂಕಿಅಂಶಗಳ ಸಮೇತ ವಿಸ್ತಾರವಾಗಿ ವಿಮರ್ಶಿದ್ದೀಯ. ಇಂತಹ ಸದಭಿರುಚಿಯ ಲೇಖನಗಳನ್ನು ನಿರೀಕ್ಷಿಸುತ್ತೇನೆ. ಅಭಿನಂದನೆಗಳು.

    7. ಲೇಖನ ಅರ್ಥಪೂರ್ಣ ವಾಗಿದೆ. ಒಂದು ಕಾಲದಲ್ಲಿ ನಮ್ಮೆಲ್ಲರ ಸಂಭ್ರಮದ ಕ್ಷಣಗಳ ಸಾಕ್ಷಿಯಾದ ಸಿನಿಮಾ ಮಂದಿರದ ದಯಾನೀಯ ಪರಿಸ್ಥಿತಿ ಶೋಚನೀಯ. ಬದಲಾಗುತ್ತಿರುವ ಜೀವನ ಇಂತಹುಗಳನ್ನು ನುಂಗಿ,ಹೊಸತಿಗೆ ಎಡೆ ಮಾಡುತ್ತಿರುವುದು ವಿಪರ್ಯಾಸವೋ, ಅನಿವಾರ್ಯವೋ ಗೊತ್ತಿಲ್ಲ. ಕಾಲನ ಗರ್ಭದ ಅಗಾಧತೆ ಅಮೋಘ!!!

    8. ಲೇಖನ ಸೊಗಸಾಗಿದೆ. ಚಿತ್ರಮಂದಿರಗಳು ಈ ಕೋವಿಡ್ 19ನಿಂದ ಎದುರಿಸುತ್ತಿರುವ ಸಮಸ್ಯೆ ಯಾವಾಗ ದೂರ ಆಗುತ್ತೋ ಗೊತ್ತಿಲ್ಲ. ಆದಷ್ಟು ಬೇಗ ಪರಿಹಾರ ಸಿಗಲಿ. ಚಿತ್ರೋದ್ಯಮದ ಎಲ್ಲ ಕಲಾವಿದರಿಗೂ ಒಳ್ಳೆದಾಗಲಿ. ಸಮಸ್ಯೆ ಬಗ್ಗೆ ಬೆಳಕು ಚಲ್ಲಿ ಉತ್ತಮ ಲೇಖನ ಬರೆದ ವೀರೇಶ್ ಪ್ರಸಾದ್ ಧನ್ಯವಾದಗಳು 🙏

    9. ವಿ.ಪಿ ಬರೆದ ಈ ಲೇಖನ ಓದಿದಾಗ ದುಮ್ಮಿ ಟೆಂಟ್ ನೆನಪಾಯಿತು. ಆಗಿನ ಸಿನಿಮಾ ನೋಡುವಾಗಿನ ಸಂಭ್ರಮ, ಕುತೂಹಲ ಎಲ್ಲವೂ ಕಣ್ಮುಂದೆ ಬಂದಿತು.‌ಚಿತ್ರಮಂದಿರದವರ ಸಮಸ್ಯೆ ಸ್ವಲ್ಪ ಮಟ್ಟಿಗಾದರೂ ಆದಷ್ಟು ಬೇಗ ದೂರವಾಗಲಿ.‌ಕಾರಣ ಈಗಿನ ಪರಿಸ್ಥಿತಿ ಬ್ಲೇಡ್ ಮಧ್ಯ ಬಂದು ನಿಂತಿರುವ ಹಾಗಿದೆ ಹಿಂದೆನೂ ಹೋಗೋಕೆ ಆಗಲ್ಲ ಅದೇ ರೀತಿ ಮುಂದೆ ಹೋಗೋದು ಅಸಾಧ್ಯ. ಆದಷ್ಟು ಬೇಗ ಸಮಸ್ಯೆ ಗಳಿಂದ ಹೊರ ಬರಲಿ.ಮತ್ತೊಮ್ಮೆ ಕಷ್ಟದಲ್ಲರುವವರ ಪರವಾಗಿ ಲೇಖನ ಬರೆದು ಸಂಬಂಧ ಪಟ್ಟವರ ಗಮನಸೆಳೆಯುವ ಲೇಖನ ಬರೆದ ವಿ.ಪಿಗೆ ವಂದನೆಗಳು

    LEAVE A REPLY

    Please enter your comment!
    Please enter your name here

    Latest article

    error: Content is protected !!