ಎಲ್ಲವೂ ಮೊಬೈಲ್ ಆಗಿರುವ ಈ ದಿನದಲ್ಲಿ ಅನೇಕರಿಗೆ ಅಂಚೆ ಮೂಲಕ ಬರುತ್ತಿದ್ದ ಪತ್ರಗಳ ನೆನಪೇ ಇದ್ದಂತೆ ಇಲ್ಲ. ಎಂತೆಂಥ ಪತ್ರಗಳಿವೆ ಗೊತ್ತಾ. ವಿಶ್ವ ಅಂಚೆ ದಿನದ ಹಿನ್ನೆಲೆಯಲ್ಲಿ ಈ ಲೇಖನ ಓದಿ.
ಸುಮಾವೀಣಾ, ಹಾಸನ
ಒಬ್ಬರು ಮತ್ತೊಬ್ಬರಿಗೆ ಬರವಣಿಗೆಯ ಮೂಲಕ ಸಂವಹನ ನಡೆಸುವುದನ್ನು ಪತ್ರಲೇಖನ ಎಂದು ಕರೆಯಬಹುದು.ಸಂವಹನ, ಸಂಪರ್ಕ ಈ ಪದಗಳ ಉದ್ದೇಶ ಮನದಿಂಗಿತವನ್ನು ಅರುಹುವುದೇ ಆಗಿದೆ.“ಪತ್ರ” ಪದವನ್ನು ತೆಗೆದುಕೊಂಡರೆ ಪತ್ರೆಯ ಬದಲಾದ ರೂಪವೇ ಪತ್ರ ಎನ್ನಬಹುದು. ಅಂದರೆ ಪತ್ರೆಯ ಮೇಲೆ ಬರೆದ ಲೇಖನ “ಪತ್ರಲೇಖನ” ಎಂದಾಯಿತು.ಈಗ ಕಾಗದದ ಮೇಲೆ ಬರೆಯುವುದಾದರೂ ಹಳೆಯ ಪದ ಪತ್ರದ ಬಳಕೆಯಿದೆ.ಪಂಡಿತರೆಲ್ಲ ‘ಪತ್ರ’ ಬರೆದಿದ್ದೇನೆ “ಪತ್ರ ತಲುಪಿತು” ಎಂದು ಹೇಳುತ್ತಾರೆ.‘ಪತ್ರ’ ಸಂಸ್ಕೃತ ಪದ ‘ಕಾಗದ’ ಹಿಂದುಸ್ಥಾನಿ ಮೂಲದ ಕಾಗಜ಼್ನಿಂದ ಬಂದಿರುವ ಅನ್ಯದೇಶಿ ಪದ.ಅಷ್ಟೇನೂ ಓದು ಬರಹ ಬಾರದವರು ಪತ್ರಕ್ಕೆ ‘ಕಾಗದ’,’ಕಾದಗ’ ಎಂದೇ ಕರೆಯುವುದು, ಹಾಗಾಗಿ ಕನ್ನಡದ ‘ಓಲೆ’ ಸರಿಯಾದ ಪದ ಪ್ರಯೋಗ.
ದೇಶೀಯ ಶಬ್ದ
‘ಓಲೆ’ ಇದೊಂದು ದೇಶೀಯ ಶಬ್ದ. ‘ತಾಳೆಯಗರಿ’ ಎಂಬುದು ಇದರ ಅರ್ಥ. ಹಾಗಾಗಿ ‘ಓಲೆಗರಿ’ ಎಂಬ ಪದವೂ ಬಳಕೆಯಲ್ಲಿದೆ. ಹಿಂದೊಂದು ಕಾಲದಲ್ಲಿ ತಾಳೆಗರಿಗಳನ್ನು ಮಡಿಸಿ ಸುಂದರ ಆಕಾರ ಕೊಟ್ಟು ಕಿವಿಗೆ ಆಭರಣವಾಗಿ ಧರಿಸುತ್ತಿದ್ದರು.ಕಾಲಕ್ರಮೇಣ ಬೆಂಡನ್ನು ಅಲಂಕಾರದ ಆಭರಣವಾಗಿಸಿಕೊಂಡರು.ಆ ಕಾರಣಕ್ಕಾಗಿ ಅದನ್ನು ‘ಬೆಂಡೋಲೆ’ ಎಂದೂ ಕರೆದರು. ನಂತರ ಮುತ್ತು, ರತ್ನ, ವಜ್ರ, ಚಿನ್ನಗಳಿಂದ ತಯಾರಾದ ಕಿವಿಯ ಆಭರಣಗಳಿಗೆ ಓಲೆ ಪದವನ್ನು ಸೇರಿಸಿಕೊಂಡು ಮುತ್ತಿನೋಲೆ, ರತ್ನದೋಲೆ… ಹೀಗೆ ಕರೆದದ್ದಾಯಿತು.‘ತಾಳೆಗರಿ’ ಎಂಬ ಸೀಮಿತ ಅರ್ಥದಲ್ಲಿದ್ದ ‘ಓಲೆ’ ಕಿವಿಯ ಆಭರಣ ಎಂಬ ವಿಶಾಲಾರ್ಥ ಪಡೆದುಕೊಂಡಿದೆ. ಇದರ ಜೊತೆಗೆ ಕಾಗದ, ಪತ್ರ ಎಂಬ ಅರ್ಥದಲ್ಲೂ ಬಳಕೆಯಲ್ಲಿದೆ.‘ಓಲೆ’ ಎಂಬ ಪದ ರೂಪ ವ್ಯತ್ಯಾಸವಾಗದೇ ಇದ್ದರೂ ‘ಅರ್ಥವ್ಯತ್ಯಾಸ’ ಹಾಗು ‘ಅರ್ಥವಿಕಾಸ’ ಪಡೆದುಕೊಂಡಿದೆ.
ಪ್ರಸ್ತುತ ‘ಓಲೆ’ ಪದವನ್ನು ಪತ್ರಗಳಿಗೆ ಅನ್ವಯಿಸಿ ಹೇಳುತ್ತೇವೆ. ಹಿಂದೆ ತಾಳೆಗರಿಗಳನ್ನು ಇನ್ನೂ ತೇವಾಂಶ ಇರುವಾಗಲೇ ಬಿಸಿನೀರಿನಲ್ಲಿ ಕುದಿಸಿ ನೆರಳಿನಲ್ಲಿ ಒಣಗಿಸಿ ನುಣುಪಾದ ಗಾರೆಯ ಕಲ್ಲಿನಿಂದ ಉಜ್ಜಿ ಮೃದುಗೊಳಿಸುತ್ತಿದ್ದರು.ಆಗ ಎರಡು ಬದಿಗಳು ಸಮತಲವಾಗುತ್ತಿದ್ದವು. ಅಂತಹವುಗಳನ್ನು.ಪತ್ರಗಳನ್ನು ಬರೆಯಲೋ, ಗ್ರಂಥಗಳನ್ನು ಬರೆಯಲೋ ಬಳಸುತ್ತಿದ್ದರು. ಓಲೆಗರಿಗಳಿಂದ ರಚಿತವಾದ ಸಂದೇಶವನ್ನು ಸಂವಹಿಸುವವನಿಗೆ ‘ಓಲೆಕಾರ’ ಎಂದು ಕರೆಯುತ್ತಿದ್ದುದುಂಟು.ಧಾರವಾಡ ಕನ್ನಡದಲ್ಲಿ ‘ವಾಲಿಕಾರ’. ನಾವು ಆಧುನೀಕರು ಕಾಗದದಲ್ಲಿ ಬರೆದ ಸಂದೇಶ ತಲುಪಿಸುವ ಸಂದೇಶ ವಾಹಕರಿಗೆ ಪೋಸ್ಟ್ಮ್ಯಾನ್ ಎಂದು ಕರೆಯುತ್ತೇವೆ.
ಓಲೆಗರಿ ಹೆಚ್ಚು ತಾಳಿಕೆ ಬಾಳಿಕೆ
ರಾಸಾಯನಿಕ ಕ್ರಿಯೆಯಿಂದ ತಯಾರಾದ ಕಾಗದಕ್ಕಿಂತಲೂ ಪ್ರಕೃತಿ ಸಹಜವಾದ ಓಲೆಗರಿ ಹೆಚ್ಚು ತಾಳಿಕೆ ಬಾಳಿಕೆ ಬರುವಂತಹದ್ದು. ಬಹುಬೇಗ ಹುಳುಗಳ ಹೊಡೆತಕ್ಕೆ ಇವುಗಳು ಬಲಿಯಾಗುತ್ತಿರಲಿಲ್ಲ. ರಾಜ ಮಹಾರಾಜರ ಕಾಲದಲ್ಲಿ ಬರೆಯುತ್ತಿದ್ದ ಪತ್ರಗಳು ರೇಷ್ಮೆ ವಸ್ತುಗಳಿಂದ, ಮುತ್ತು ರತ್ನಗಳಿಂದ ಅಲಂಕೃತವಾಗಿ ಸುರುಳಿ ಸುತ್ತಿ ಸೈನಿಕರ ಮುಖೇನ ಅದನ್ನು ತಲುಪಿಸುತ್ತಿದ್ದರು.ಈಗ ನಾವು ನೋಡುವ ಪತ್ರಗಳು ಚಪ್ಪಟೆಯಾಗಿರುತ್ತವೆ. ರಾಜ ತನ್ನ ಪತ್ರದ ಕಡೆಯಲ್ಲಿ ರಾಜಮುದ್ರೆಯನ್ನು ಒತ್ತುತ್ತಿದ್ದ.ಇಂದಿಗೆ ಸರಕಾರಿ, ವಾಣಿಜ್ಯ ಪತ್ರಗಳಲ್ಲಿ ಅಧಿಕಾರಿಗಳ ಉಧ್ಯಮಿಗಳ ಸೀಲ್ ಮತ್ತು ಸಹಿ ಇರುತ್ತದೆ.ಅದರಲ್ಲಿ ಅವರ ಪದನಾಮ, ವಿಳಾಸ ಎಲ್ಲವೂ ಅಡಕವಾಗಿರುತ್ತದೆ.
ಅಂಚೆ ಮೂಲಕ
ಅಂಚೆ ಇಲಾಖೆಯ ಮೂಲಕ ಪತ್ರ ರವಾನೆಯಾಗುತ್ತದೆ.ಎಂದರೆ ದಿನಾಂಕ ಹಾಗೂ ಊರಿನ ಹೆಸರನ್ನುಳ್ಳ ಮುದ್ರೆ ಖಂಡಿತಾ ಇರುತ್ತದೆ.ಭಾರತದಲ್ಲಿ ಏಪ್ರಿಲ್ ೧, ೧೭೭೪ ರಲ್ಲಿ ಪ್ರಥಮ ಬಾರಿಗೆ ಅಂಚೆ ಇಲಾಖೆ ಕಾರ್ಯಾರಂಭ ಮಾಡಿತು. ಸದ್ಯ ೨೧-೨೨ ಕಿ.ಮೀ.ಗೊಂದು ಅಂಚೆ ಕಛೇರಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ. ಅಂಚೆ, ಟಪಾಲು ಇತ್ಯಾದಿ ವ್ಯವಹಾರಗಳನ್ನು ನೋಡಿಕೊಳ್ಳುವುದಕ್ಕೆ ಅಂಚೆ ಕಛೇರಿ ಎಂದು ಕರೆಯುತ್ತೇವೆ. ಇಲ್ಲಿ ‘ಅಂಚೆ’ ದೇಶೀಪದವಾದರೆ ಅನ್ಯದೇಶ್ಯ ಪದ ‘ಕಚೇರಿ’, ಇದು ಮರಾಠಿಯ ಕಚೇರಿಯಿಂದ ಹಾಗೂ ಹಿಂದಿಯ ಕಛಹರಿಯಿಂದ ಬಂದಿದೆ. ಹಾಗಾದರೆ ‘ಅಂಚೆ ಕಛೇರಿ’ ಅಂದರೆ ‘ಟಪಾಲು ವ್ಯವಹಾರ’ ನೋಡುವುದು ಎಂದಾಯಿತಲ್ಲ. ಈಗ ಪತ್ರ, ಓಲೆ, ಕಾಗದ ಯಾವುದೂ ಇಲ್ಲ, ಎಲ್ಲಾ ಪೇಪರ್‌ಲೆಸ್ ಆಗಿ ಮೊಬೈಲ್ ಸಂದೇಶ, ಇ-ಮೇಲ್, ವಾಟ್ಸಪ್, ಫೇಸ್‌ಬುಕ್ ಸಂದೇಶಗಳು ರಾರಾಜಿಸುತ್ತಿವೆ. ಆಯ ತಪ್ಪಿದರೆ ಸಂದೇಶಗಳಲ್ಲಿ ಬರೇ ಸಂದೇಹಗಳು ಏನಂತೀರಿ…?
ಪತ್ರಗಳಲ್ಲಿ ವೈಯುಕ್ತಿಕ, ಸರಕಾರಿ, ಅರೆಸರಕಾರಿ ವಾಣಿಜ್ಯ ಪತ್ರಗಳು, ಆಮಂತ್ರಣ ಪತ್ರಿಕೆಗಳು ಎಂದೆಲ್ಲಾ ಹೇಳಬಹುದು.ಹಿಂದೆ ‘ಮದುವೆ ಪತ್ರಿಕೆ ಆಯ್ತು’ ಎಂದು ಹೇಳುತ್ತಿದ್ದರು.ಈಗ ‘ಮದುವೆ ಕಾಗದ’ ‘ಪ್ರಿಂಟ್ ಕೊಡೋಕೆ ಬಂದಿದ್ವಿ’ ಅನ್ನುತ್ತಾರೆ.ಸರಿಯಾದ ಪದ ಪ್ರಯೋಗ, ಶುಭಾಶಯ ಪತ್ರಗಳು ಸಮಾರಂಭಗಳ ಆಹ್ವಾನ ಪತ್ರಿಕೆಗಳೂ ಪತ್ರಗಳೇ’’ ಕೆಲವೊಂದು ದಾಖಲೆಗಳನ್ನು ಅಂದರೆ ಜನನ, ಮರಣ, ಆದಾಯ, ವಾಸಸ್ಥಳ ಪತ್ರಗಳೂ ಇವೆ. ಅಂದರೆ ಇವು ಸರಕಾರದ ಅಧಿಕಾರಿಗಳಿಂದ ಅಧೀಕೃತವಾಗಿ ಪರಿಶೀಲಿಸಿದ ಪ್ರಮಾಣೀಕರಿಸಿದ ಪತ್ರಗಳು, ನಡತೆ ಪ್ರಮಾಣ ಪತ್ರ, ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಪದವಿ ಪ್ರಮಾಣ ಪತ್ರಗಳು ಇವೆಯಲ್ಲ!ಎಲ್ಲಾ ಅಸಲಿಯೋ ಇಲ್ಲ ನಕಲಿಯೋ ನನಗೆ ತಿಳಿದಿಲ್ಲ.
‘ಕಾಗದ ಪತ್ರ’ ಎನ್ನುವುದು ದ್ವಿರುಕ್ತಿ.ಚಿರಾಸ್ತಿಗೆ ಸಂಬಂಧಿಸಿದ ಪತ್ರಗಳನ್ನು ಕ್ರಯಪತ್ರ, ಭೋಗ್ಯಪತ್ರ, ಬಾಡಿಗೆ ಕರಾರು ಪತ್ರ ಮುಂತಾದ ಪತ್ರಗಳ ಬಗೆಯನ್ನೂ ನೋಡಬಹುದು.ಈ ದಾಖಲೆಗಳನ್ನು ಪತ್ರ ರೂಪಕ್ಕಿಳಿಸಲು ಪತ್ರಬರಹಗಾರರೇ ಇರುತ್ತಾರೆ.ಸರಕಾರಕ್ಕೆ ಇಂತಿಷ್ಟು ಶುಲ್ಕ ಪಾವತಿಸಿದ ಸ್ಟಾಂಪ್ ಹಚ್ಚಿದ ಕಾಗದಗಳಲ್ಲಿ ಇವರು ವಿಷಯ ದಾಖಲಿಸುತ್ತಾರೆ. ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಸಲ್ಲಿಸುವ ಪತ್ರಕ್ಕೆ ನಾಮಪತ್ರ ಎನ್ನುತ್ತೇವೆ. ಉದ್ದಿಮೆಗಳನ್ನು ನಡೆಸಲು ಅನುಮತಿ ನೀಡುವ ಪರವಾನಗಿಗಳು, ಪತ್ರಿಕಾ ಸಂಪಾದಕರಿಗೆ ಬರೆಯುವ ಪತ್ತ, ಬ್ಯಾಂಕ್ ನೋಟೀಸು, ಕರಪತ್ರಗಳೂ ಪತ್ರಗಳೇ..
ಓಲೆಗಳು ಬಂದುವೆಂದರೆ ಹಿಂದೆ ಬಂಧುಗಳು ಬಂದಷ್ಟೇ ಸಂತೋಷಿಸುತ್ತಿದ್ದರು.ಕಾಗದದಲ್ಲಿ ಉಕ್ತವಾದ ಸಾಲುಗಳನ್ನು ಮತ್ತೆ ಮತ್ತೆ ಓದಿ ಆನಂದಿಸುತ್ತಿದ್ದರು. ಹೊಸ ಉತ್ಸಾಹ ಪಡೆಯುತ್ತಿದ್ದರು. ಅನಕ್ಷರಸ್ಥರೇ ಹೆಚ್ಚಾಗಿದ್ದ ಕಾಲದಲ್ಲಿ ಊರಿಗೊಬ್ಬ ಅಕ್ಷರಸ್ಥ ಇದ್ದರೆ ಅವನಿಗೆ ಅದೇ ಕೆಲಸ ಪತ್ರ ಓದುವುದು, ಪತ್ರ ಬರೆಯುವುದು.ಆನಂತರ ಅಂಚೆಯಣ್ಣನಿಗೆ ಆ ಜವಾಬ್ದಾರಿ.ಕೆಲವೊಮ್ಮೆ ಪತ್ರಗಳೂ ಅದರ ಸಂದೇಶಗಳು ದುರುಪಯೋಗವಾದದ್ದೂ ಇದೆ.ಹೆಣ್ಣು ಮಕ್ಕಳಿಗಂತೂ ಹಬ್ಬದ ಸಮಯದಲ್ಲಿ ತಾಯಿ ಮನೆಯವರು ಹಬ್ಬಕ್ಕೆ ಕರೆದು ಕಾಗದ ಬರೆಯುತ್ತಾರೆ, ಬಾಗಿನಕ್ಕೆ ಹಣ ಕಳುಹಿಸುತ್ತಾರೆ ಎಂತಲೇ ಅಂಚೆಯಣ್ಣನನ್ನು ಕಾಯುತ್ತಿದ್ದುದು ಇದೆ.ಹಿಂದೆ ತವರಿನ ಸಂದೇಶಗಳನ್ನು ಹೆಣ್ಣು ಮಕ್ಕಳಿಗೆ ತಲುಪಿಸುವಲ್ಲಿ ಬಳೆಗಾರರದ್ದೂ ಪಾತ್ರವಿತ್ತು. ಎಂಬುದನ್ನು ಕೆ.ಎಸ್.ನ.ರವವರ “ಬಳೆಗಾರಚನ್ನಯ್ಯ” ಗೀತೆ ನೆನಪಿಸುತ್ತದೆ.
ಅಂಚೆಕಾರ್ಡು, ಇನ್‌ಲ್ಯಾಂಡ್ ಶೀಟ್ (ಇದರ ಅಪಭ್ರಂಶ ಇಂಗ್ಲೆಂಡ್ ಶೀಟ್ ಎಂದೂ ಕರೆಯುವುದಿದೆ), ಎನ್‌ವಲಪ್, ನಂತರ ಬೇರೆ ಹಾಳೆಗಳಲ್ಲಿ ಬರೆದು ಲಕೋಟೆಗಳಲ್ಲಿ ಹಾಕಿ ಅದು ತೂಗುವ ತೂಕಕ್ಕೆ ಸರಿಯಾದ ಮೌಲ್ಯದ ಅಂಚೆ ಚೀಟಿಗಳನ್ನು ಹಚ್ಚುವುದಿತ್ತು.ಕಾರ್ಡುಗಳೆಂದರೆ ಖುಲ್ಲಂ ಖುಲ್ಲ ಯಾರು ಬೇಕಾದರೂ ಓದಬಹುದು, ಇನ್‌ಲ್ಯಾಂಡ್ ಶೀಟ್ ಎಂದರೆ ಒಳ ಮೈಯಲ್ಲಿ ವಿಚಾರ ಅರುಹಿ ಹೊರ ಮೈಯ್ಯಲ್ಲಿ ವಿಳಾಸ ಬರೆಯುವುದು ಇತ್ತು.ಈಗ ಕಡಿಮೆಯಾಗಿದೆ. ಕಾಗದ ಬರೆದು ಅಂಚೆಪೆಟ್ಟಿಗೆಯೊಳಗೆ ಹಾಕಿದ ಮೇಲೆ ತಲುಪಿತೋ ಇಲ್ಲವೋ ಎಂಬ ಕಳವಳ ಇರುತ್ತಿತ್ತು.ಅದನ್ನು ತಪ್ಪಿಸಲು ರಿಪ್ಲೆಕಾರ್ಡು, ರಿಜಿಸ್ಟ್ರೆಡ್ ಪೋಸ್ಟ್, ಅದಕ್ಕೆ ಸ್ವೀಕೃತಿ ಪತ್ರ. ವೇಗದ ಅಂಚೆ ಚಾಲ್ತಿಯಲ್ಲಿದೆ.ಇವೆಲ್ಲ ವಿಳಾಸದಾರರಿಗೇ ಖುದ್ದಾಗಿ ತಲುಪಬೇಕು ಅನ್ನುವ ಕಾರಣಕ್ಕೆ.ಕೆಲ ಜಿಪುಣಾಗ್ರೇಸರರು ಹಣ ಖರ್ಚಾಗುತ್ತದೆಂದು ಡ್ಯೂ ಬೀಳುವಂತೆ ಮಾಡಿ ತಾವು ಅಂದುಕೊಂಡವರಿಗೆ ಕಾಗದ ತಲುಪುವಂತೆ ಮಾಡುತ್ತಿದ್ದರು.ಈಗ ಪತ್ರ ತಲುಪಿದ ಬಗ್ಗೆ ಖಾತ್ರಿ ಮಾಡಿಕೊಳ್ಳಲು ಮೊಬೈಲ್ ಆ್ಯಪ್ ಇದೆ.ನಾವು ಕಳುಹಿಸಿದ ಅಂಚೆ ಎಲ್ಲಿದೆ ಯಾವಾಗ ತಲುಪುತ್ತದೆ, ಯಾವಾಗ ವಿಳಾಸದಾರರು ತೆಗೆದುಕೊಂಡಿದ್ದಾರೆ ಎಂಬುದನ್ನು ಕ್ಷಣಾರ್ಧದಲ್ಲಿ ಗ್ರಹಿಸಬಹುದು.
ಕೆಂಪು ಬಣ್ಣದ ಅಂಚೆ ಪಟ್ಟಿಗೆ
ಅಂಚೆ ಪೆಟ್ಟಿಗೆಗಳ ಬಗ್ಗೆ ಒಂದೆರಡು ಮಾತು.ಭಾರತದಲ್ಲಿ ಹೆಚ್ಚಿಗೆ ಕೆಂಪು ಬಣ್ಣದ ಅಂಚೆ ಪಟ್ಟಿಗೆಗಳನ್ನು ಕಾಣಬಹುದು.ಕೆಂಪು ನೆಲಮಟ್ಟದಲ್ಲಿ ಇರುತ್ತದೆ ಇಲ್ಲ ಗೋಡೆಗೆ ತೂಗಿಸಿರುತ್ತಾರೆ. ಸಿಲಿಂಡರಿನಾಕಾರದ, ಚೌಕಾಕಾರದ ವಿನ್ಯಾಸದಲ್ಲಿ ಅಂಚೆ ಪೆಟ್ಟಿಗೆಗಳು ಇರುತ್ತವೆ. ಹಸಿರು, ನೀಲಿ ಪೆಟ್ಟಿಗೆಗಳಿದ್ದರೂ ಅವುಗಳು ಅಪರೂಪ. ದೇಶ ಅಲ್ಲಿನ ಆಡಳಿತ ವ್ಯವಸ್ಥೆ ಇತ್ಯಾದಿಗಳ ಮೇಲೆ ಅಂಚೆ ಪೆಟ್ಟಿಗೆಯ ಬಣ್ಣ ನಿರ್ಧಾರವಾಗಿರುತ್ತದೆ. ವಿಳಾಸದಾರರಿಗೆ ತಲುಪಿಸಲು ಪಿನ್‌ಕೋಡ್ ನಂಬರ್ ಇರುತ್ತದೆ.ಒಂದೇ ಹೆಸರಿನ ಊರುಗಳಿಂದ ಆಗುವ ಗೊಂದಲಗಳನ್ನು ಪಿನ್‌ಕೋಡ್‌ಗಳು ತಪ್ಪಿಸುತ್ತವೆ. ಸರ್ಕಾರಿ ಅಂಚೆ ವ್ಯವಸ್ಥೆಯನ್ನು ಮೀರಿಸಲೆಂದೇ ಖಾಸಗಿ ಕೊರಿಯರ್ ವ್ಯವಸ್ಥೆ ಇದೆ. ಆದರೆ ಸರಕಾರವೇ ಗ್ರೇಟ್ ಬಿಡಿ!. ಸಾಗರದಾಚೆಗೂ ಭಾರತೀಯ ಅಂಚೆ ಕಚೇರಿ ಇದೆ.
ಅಂದ ಹಾಗೆ ಪತ್ರಲೇಖನ ಪರಿಣಾಮಕಾರಿಯಾಗಿ ಇದ್ದರೆ ಅದರ ಉದ್ದೇಶ ಸಫಲ.ಯಾವುದೇ ಅಂಶ ಅಪೂರ್ಣವಾಗಿಯಾಗಲಿ, ಅರ್ಥ ಸಂದಿಗ್ಧತೆಯಿಂದಲಿ ಕೂಡಿರಬಾರದು.ಬರೆದವರ ಗುರುತು, ಬರೆದ ಸ್ಥಳ, ದಿನಾಂಕ ಯಾರನ್ನು ಉದ್ದೇಶಿಸಿ ಯಾವ ಸಂದರ್ಭದಲ್ಲಿ ಬರೆಯಲಾಗಿದೆ ಎಂಬ ಅಂಶಗಳು ನಿರ್ದಿಷ್ಟವಾಗಿರಬೇಕು.ಸ್ವವಿಳಾಸ, ದಿನಾಂಕ, ಸಂಭೋದನೆ, ವಿಸಯ, ನಿರೂಪಣೆ, ಮುಕ್ತಾಯ ಹಸ್ತಾಕ್ಷರ ಇರಬೇಕು.ಇಲ್ಲಿ ‘ಸಾಮಾನ್ಯ ಪತ್ರಗಳು’ ಅಂದರೆ ವೈಯುಕ್ತಿಕ ಪತ್ರಗಳಿಗೆ ಭಾಷೆ ಹೀಗೆ ಇರಬೇಕು ಎಂಬುದಿಲ್ಲ. ಭಾವುಕರಾಗಿ, ಕೋಪಿಷ್ಠರಾಗಿ, ದುಃಖಿತರಾಗಿ, ಹಾಸ್ಯವಾಗಿ ಕೂಡ ಪತ್ರಗಳನ್ನು ಬರೆಯಬಹುದು.ಆದರೆ ಸರಕಾರಿ ಪತ್ರಗಳು, ವಾಣಿಜ್ಯ ಪತ್ರಗಳಲ್ಲಿ ಭಾವುಕತೆಗೆ ಅವಕಾಶವಿರುವುದಿಲ್ಲ. ಹೇಳುವುದನ್ನು ನಿಖರವಾಗಿ, ನೇರವಾಗಿ ಸರಳವಾಗಿ ಹೇಳಬೇಕು. ‘ಕೈ ಮುಗಿಯುತ್ತೇನೆ’, ‘ಕಾಲು ಹಿಡಿಯುತ್ತೇನೆ’, ‘ಕೆಲಸವಾಗದೆ ಇದ್ದರೆ ಕಾಲು ಮುರಿಯುತ್ತೇವೆ’ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ.
ಕರೆಯೋಲೆಗಳು
ಇನ್ನು ಕರೆಯೋಲೆಗಳ ಕಡೆಗೆ ಹೊರಳೋಣ, ಪದವೇ ಎಷ್ಟು ಸೊಗಸಾಗಿದೆ.ನಮ್ಮನ್ನು ಕರೆಯುವ, ಆಹ್ವಾನಿಸುವ ಓಲೆಗಳು ಅಥವಾ ಪತ್ರಗಳು.ಆತ್ಮೀಯ ಕರೆಯೋಲೆ, ಪ್ರೀತಿಯ, ಒಲವಿನ, ಮಮತೆಯ ಇತ್ಯಾದಿ ಪದಗಳೊಂದಿಗೆ ಓಲೆ ಸೇರಿಕೊಂಡಿರುತ್ತದೆ. ಶುಭಾಶಯ ಪತ್ರಗಳು ಒಂದು ಬಗೆ ಶುಭ+ಆಶಯ ಎಷ್ಟು ಚೆನ್ನಾಗಿದೆ ಪದ..! ಮದುವೆಗಳಲ್ಲಿ ಮೊದಲ ಕಾಗದವನ್ನು ಕುಲದೇವರಿಗೆ, ದೇವಸ್ಥಾನಕ್ಕೆ, ಕುಲಗುರುಗಳ ಮಠಕ್ಕೆ ಕೊಡುವುದೆ ಎಲ್ಲಿಗೂ ಕೊಡಲಿಲ್ಲ ಎಂದರೂ ಧರ್ಮಸ್ಥಳ ಮಂಜುನಾಥನಿಗಂತೂ ಹೆಚ್ಚಿನವರು ಮದುವೆ ಕಾಗದ ತಲುಪಿಸುತ್ತಾರೆ.ಈಗ ವಾಟ್ಸಪ್‌ನಲ್ಲಿ ಕರೆಯೋಲೆ ಕಳುಹಿಸುತ್ತಾರೆ. ‘ವಾಟ್ಸಪ್ ಕರಯೋಲೆಗೆ’ ವಾಟ್ಸಪ್ ಹಾರೈಕೆ ಸರಿ ಅಲ್ವ !
ಖಾಸಗಿ ಶುಭ ಕರ‍್ಯಕ್ರಮಗಳಾದ ಮದುವೆ, ನಾಮಕರಣ, ಗೃಹಪ್ರವೇಶ, ಉದ್ದಿಮೆಗಳ ಪ್ರಾರಂಭ, ಶಾಲಾ ವಾರ್ಷಿಕೋತ್ಸವ, ಸರಕಾರಿ ಸಮಾರಂಭಗಳ ಆಹ್ವಾನ ಪತ್ರಿಕೆ ಮೊದಲಾದವು ಇವೆ. ಶಿವಗಣಾರಾಧನೆಯ, ವೈಕುಂಠ ಸಮಾರಾಧನೆಯ ಆಮಂತ್ರಣ ಪತ್ರಿಕೆ ಮರೆತಿದ್ದಾರೆ ಅಂದುಕೊಳ್ಳಬೇಡಿ ಅದನ್ನೂ ಅವಶ್ಯವಾಗಿ ಸೇರಿಕೊಳ್ಳಿ.ಇಂತಹ ಪತ್ರಗಳಲ್ಲಿ ಕಾರ್ಯಕ್ರಮ ಎಲ್ಲಿ, ಯಾವಾಗ, ಯಾವ ಸ್ಥಳ, ಎಷ್ಟು ಗಂಟೆಗೆ ಭೋಜನ ಇತ್ಯಾದಿಗಳಿಗೇ ಆದ್ಯತೆ, ಅದನ್ನೇ ಕೆಂಪು ಅಕ್ಷರಗಳಲ್ಲಿ ಮುದ್ರಿಸಿರುತ್ತಾರೆ. ನಾವು ಮುಖ್ಯವಾಗಿ ನೋಡೋದು ಅದನ್ನೇ ಅಲ್ವೆ !.
ಹಿಂದೆ ಇಂತಹ ಪತ್ರಿಕೆಗಳಲಿ ವಿಳಾಸ ಬರೆಯಲೆಂದೇ ಮೂರು ನಾಲ್ಕು ಗೆರೆ ಎಳೆದಿರುತ್ತಿದ್ದರು.ಈಗ ಗೆರೆಗಳ ಜಾಗದಲ್ಲಿ ನಿಮ್ಮ ಹೆಸರು ನಮ್ಮ ಮನದಲ್ಲಿದೆ, ನಿಮ್ಮ ಹೆಸರು ಹಸುರಾರಾಗಿದೆ ಇತ್ಯಾದಿ ಇತ್ಯಾದಿ ಬರೆದಿರುತ್ತಾರೆ. ವಿಳಾಸದಾರರ ಹೆಸರೇ ಇರಲ್ಲ. ಎಲ್ಲಿಗೆ ಬಂದು ತಲುಪಿದ್ದೇವೆ ನೋಡಿ!.ಕಡೆ ಪಕ್ಷ ಹೆಸರು ಬರೆಯುವ ವ್ಯವಧಾನ ತಾಳ್ಮೆ ನಮ್ಮಲ್ಲಿ ಮಾಯವಾಗಿದೆ.
ಮುಂದೆ ಪತ್ರದ ಒಕ್ಕಣೆಗೆ ಬರೋಣ ಮಕ್ಕಳನ್ನು ವ್ಯಾಸಂಗಕ್ಕೆ ಕಳುಹಿಸಿದರೆ ಆಗ ಅಪ್ಪ ಗದರಿ ‘ಹೆಚ್ಚು ಹಣ ಖರ್ಚು ಮಾಡಬೇಡ, ‘ಕಾಲಹರಣ ಮಾಡಬೇಡ ಎಂದು ಬರೆದರೆ, ಅಮ್ಮ ಮುದ್ದಿನಿಂದ “ಆರೋಗ್ಯ ಸರಿಯಾಗಿ ನೋಡಿಕೊ, ಕೋಡುಬಳೆ, ರವೆಉಂಡೆ, ನಿಪ್ಪಟ್ಟು ಕಳಿಸುತ್ತೇನೆ’’ ಎಂದು ಬರೆಯುವುದು.ಮಕ್ಕಳು “ಚೆನ್ನಾಗಿ ಓದದೆ ಇದ್ದರೂ “ಚೆನ್ನಾಗಿ ಓದಿ ಕೊಳ್ಳುತ್ತೇನೆ ವ್ಯಾಸಂಗ ಉತ್ತಮವಾಗಿದೆ ಪ್ರವಾಸ ಹೊರಡುತ್ತಿದ್ದೇವೆ ಹಣ ಕಳುಹಿಸಿ” ಎಂದು ಬರೆಯುತ್ತಿದ್ದರು.ಇನ್ನು ಕೆಲವರು ಎಷ್ಟೇ ಕಷ್ಟವಿದ್ದರೂ ನಾನು ‘ಕ್ಷೇಮವಾಗಿದ್ದೇನೆ’, ‘ಸುಖವಾಗಿದ್ದೇನೆ’ ಎಂದು ಬರೆಯುವುದಿತ್ತು.ಅತ್ತೆ ಮನೆ ಸೊಸೆಯಾದರೆ ಅದು ದೂರುಗಳ ಸರಪಳಿಯೇ ಸರಿ.ದೂರದಲ್ಲಿ ಸೈನ್ಯದಲ್ಲಿದದ ಸೈನಿಕರುಗಳಿಗೆ ಮನೋಸ್ಥೈರ್ಯ ತುಂಬಲು ಪತ್ರಗಳೇ ಸಂಜೀವಿನಿಯಾಗಿರುತ್ತಿದ್ದವು. ಈಗ ವೀಡಿಯೊ ಕಾಲ್ ಮಾಡಿ ಮಾತನಾಡುತ್ತಾರೆ ಬಿಡಿ.
ಕೆಲವರಿಗೆ ಕೆಟ್ಟ ಚಾಳಿ, ಅದೇನೆಂದರೆ ಬೇರೆಯವರ ಪತ್ರಗಳನ್ನು ಓದುವುದು, ಪತ್ರಗಳು ಹರಿದು ಚಿಂದಿಯಾಗಿ ಕಸದ ಬುಟ್ಟಿಯಲ್ಲಿ ಬಿದ್ದಿದ್ದರೂ ಅದನ್ನೆಲ್ಲಾ ಒಟ್ಟುಗೂಡಿಸಿ ಓದುವುದು. ಕೆಲವರು ಪತ್ರಗಳನ್ನು ಮುಚ್ಚಿಡುತ್ತಾರೆ.ಸನ್ನಿವೇಶಗಳು ಕುತ್ತಿಗೆಗೆ ಬಂದಾಗ ಹೇಳಿ ಒಳ್ಳೆಯವರಾಗೂ ನೀಚರಿಗೇನೂ ಕಡಿಮೆಯಲ್ಲ ಬಿಡಿ. ಇನ್ನು ಕೆಲವರು ಮೊದಲು ಅವರು ಓದಿದ ನಂತರ ಬೇರೆಯವರಿಗೆ ಕೊಡುವುದು ಕೆಲವೊಮ್ಮೆ ವಿಷಯ ಕುತೂಹಲಕ್ಕೆ ಪತ್ರ ಓದುವ ಮುನ್ನವೇ ಪತ್ರ ಛಿದ್ರವಾಗುವುದೂ ಇತ್ತೆನ್ನಿ. ಎಸ್.ಎಂ.ಎಸ್. ಯುಗ ಬರುವುದಕ್ಕೂ ಪೂರ್ವದಲ್ಲಿ ವಿದ್ಯಾರ್ಥಿಗಳ ಫಲಿತಾಂಶವನ್ನು ಖಾಸಗಿ ಶಾಲೆಗಳು ಅಂಚೆಯ ಮೂಲಕ ಕಳುಹಿಸುತ್ತಿತ್ತು. ಬುದ್ಧಿವಂತ ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ತೆಗೆದುಕೊಂಡವರು ಅಂಚೆಯಣ್ಣನನ್ನು ಪುಸಲಾಯಿಸಿ “ನಾವೇ ಮನೆಗೆ ಕೊಡುತ್ತೇವೆ” ಎಂದು ಅದಕ್ಕೊಂದು ಗತಿ ಕಾಣಿಸಿಬಿಡುತ್ತಿದ್ದರು.
ಸುಳ್ಳು ಪತ್ರಗಳು
ಅತ್ಯಂತ ಸುಳ್ಳು ಪತ್ರಗಳು ಎಂದರೆ ಕೆಲವೊಮ್ಮೆ ಪ್ರೇಮಪತ್ರಗಳು.ನಿಜವಾದ ಪ್ರೀತಿಯಿಂದ ಪ್ರೇಮ ಪತ್ರಗಳನ್ನು ಬರೆದ ಓದುಗರಿದ್ದರೆ ಸಿಟ್ಟಾಗಬೇಡಿ ನಿಮ್ಮ ಪತ್ರಗಳ ವಿಚಾರಕ್ಕೆ ನಾನು ಬರಲಾರೆ ನಿಮ್ಮ ಪ್ರೀತಿ ಚಿರಾಯುವಾಗಿರಲಿ.ನಾನು ಹೇಳುತ್ತಿರುವುದು ಡಮ್ಮಿ ಪತ್ರಗಳ ಬಗ್ಗೆ. ಬೇರೆಯವರಿಗೆ ಅರ್ಥವಾಗಬಾರದೆಂದು ಉಲ್ಟ ಬರೆಯುವುದು, ಕ್ಯಾಡಲ್‌ನ ಪ್ರಯೋಗ ಏನೇನೋ? ಬರೆದವರಿಗೆ ಗೊತ್ತಿರುತ್ತೆ ಬಿಡಿ! ಆದರೆ ಪೋಷಕರಿಗೆ ಪತ್ರಗಳು ಸಿಕ್ಕಿದರಂತೂ ಊರು ಹಬ್ಬವಾಗುತ್ತಿತ್ತು.ಇನ್ನೊಂದು ಜಾತಿಯ ಸುಳ್ಳುಪತ್ರವೆಂದರೆ ರಜಾ ಅರ್ಜಿ. ಯಾವುದೇ ಶುಭಸಮಾರಂಭಕ್ಕೆ ಹೋಗಲು ಇಲ್ಲದ ರೋಗ ಬರಿಸಿಕೊಂಡು ಹೋಗುವುದು.
ಮತ್ತೆ ಅತ್ಯಂತ ಅಪಾಯಕಾರಿ ಪತ್ರಗಳೆಂದರೆ ಅನಾಮಧೇಯ ಪತ್ರಗಳು.ಒಂದು ರೀತಿಯ ಮನೆಹಾಳು ಪತ್ರಗಳು.ಆಗುವ ಮದುವೆಗಳಿಗೆ ವಿಘ್ನ ತರಲು ಇಲ್ಲ ಬೇರೆಯವರ ಬಗ್ಗೆ ಈರ್ಷೆಯಿಂದ, ಅವರ ಏಳಿಗೆ ಸಹಿಸದೆ ಬರೆಯುವುದು.ಆನಂತರ ತಮಾಷೆ ನೋಡುವುದು ವಿಕೃತಿಯ ಪರಮಾವಧಿ. ಇವುಗಳನ್ನು ಹೇಡಿಗಳು ಬರೆಯುತ್ತಾರೆ ಎನ್ನಬಹುದೋ?ಗೊತ್ತಿಲ್ಲ.
ನನಗೀಗ ಹೊಳೆಯುತ್ತಿರುವುದು ಹಿರಿಯರು ಹೇಳಿದಂತೆ ಪತ್ರಗಳನ್ನು ಬರೆಯುತ್ತಿದ್ದ ಸನ್ನಿವೇಶ. ಅವರು ಹೇಳಿದಂತೆಯೇ ನಾವುಗಳು ಬರೆಯಬೇಕಾಗಿತ್ತು.ವ್ಯಾಕರಣ ದೋಷವಾದರೂ, ಪುನರುಕ್ತಿಗಳಿದರೂ ಮಾತನಾಡದೆ ಬರೆದು ಮುಗಿಸಬೇಕಾಗಿತ್ತು.ಸಾಂಪ್ರದಾಯಿಕವಾಗಿ ಸ್ವಸ್ತಿಶ್ರೀ ಇಲ್ಲ ಕ್ಷೇಮ, ಶ್ರೀ, ದಿನಾಂಕ, ಊರಿನ ಹೆಸರು, ತೀರ್ಥರೂಪು, ಎಲ್ಲರೂ ಕ್ಷೇಮ, ನಿಮ್ಮ ಕ್ಷೇಮಕ್ಕೆ ಕಾಗದ ಬರೆಯಿರಿ ಇತ್ಯಾದಿ ಇತ್ಯಾದಿ ಬರೆದು ಇನ್ನೇನು ಹೆಚ್ಚಿನ ವಿಷಯವಿಲ್ಲ ಇದ್ದರೆ ಮುಂದಿನ ಕಾಗದದಲ್ಲಿ ಎಂದು ಬರೆದು ಸಹಿ ಮಾಡಲು ಕೊಡಬೇಕಾಗಿತ್ತು.ಬಹಳ ಕಷ್ಟದ ಕೆಲಸವಾಗಿತ್ತು ಬಿಡಿ.
ಮಕ್ಕಳು ನಮಗೂ ಪತ್ರ ಬರೆಯಲು ಬರುತ್ತದೆ ಎಂಬ ಅಹಂನಲ್ಲಿ ತೀರ್ಥರೂಪುರವರಲ್ಲಿ ಮಾಡುವ ಆಶೀರ್ವಾದಗಳು ಬೇಡುವ ನಮಸ್ಕಾರಗಳು ಇಲ್ಲ ಪೂಜ್ಯ ‘ಪಿತಾಜಿ’ ಎನ್ನುವುದರ ಬದಲು ‘ಪಿಶಾಚಿ’ ಎಂದು ಬರೆದು ಇಂತಿ ತಮ್ಮ ವಿಶ್ವಾಸಿ ಎಂದು ಬರೆದು ಕಳುಹಿಸಿದರೆ ತಂದೆ-ತಾಯಿಗಳ ಪಾಡು ಯೋಚಿಸಬೇಕಾದ್ದೆ.ಪತ್ರಲೇಖನವನ್ನು ಸಂಭ್ರಮಿಸಬೇಕೋ ಪತ್ರಲೇಖನ ಸರಿಪಡಿಸಬೇಕೋ ತಿಳಿಯುತ್ತಿರಲಿಲ್ಲ. ಎದುರು ಸಿಕ್ಕಾಗ ತಲೆಗೊಂದು ಮೊಟಕುವುದು ಅಷ್ಟೇ. ನಿಮಗೂ ಇಂತಹ ಕೆಲ ವಿಚಾರ ನಿನಪಾಗುತ್ತಿರಬಹುದು. ಅಲ್ವ! ಕೆಲ ಬುದ್ಧಿವಂತರು ಪತ್ರ ಬರೆದಿದ್ದೇವೆ ಎಂಬ ಹೆಚ್ಚುಗಾರಿಕೆಯಲ್ಲಿ ‘ಇಂದ’ ವಿಳಾಸವನ್ನು ‘ಗೆ’ ವಿಳಾಸವನ್ನು ಅದಲು ಬದಲು ಮಾಡುತ್ತಿದ್ದುದು ನೆನಪಿದೆ.
ಕೆಲವರಿಗೆ ಪತ್ರದಲ್ಲಿರುವ ತಪ್ಪುಗಳನ್ನು ಹೇಳಿಕೊಂಡು ನಗುವುದೇ ಖಯಾಲಿಯಾಗಿರುತ್ತಿತ್ತು, ಈಗ ಅವಕಾಶವೇ ಇಲ್ಲ!.ಕಾಗದಗಳನ್ನು ಬರೆಯುತ್ತಿದ್ದ ಆ ಕಾಲವೇ ಚೆನ್ನಾಗಿತ್ತು.ಪತ್ರಲೇಖನವೂ ಒಂದು ಕಲೆಯಲ್ಲವೆ, ಭಾವನಾತ್ಮಕತೆ, ಸೃಜಶೀಲತೆ ಪತ್ರಗಳಲ್ಲಿತ್ತು.ಎಷ್ಟೋ ದಿನಗಳವರೆಗೆ ಜೋಪಾನವಾಗಿ ಇಡುತ್ತಿದ್ದೆವು.ಈಗ ಫೋನ್ ಮೆಮೊರಿ ತುಂಬಿ ಹೋಗುತ್ತದೆ, ಸಿಸ್ಟಮ್ ಹ್ಯಾಂಗ್ ಆಗುತ್ತದೆ ಎಂದು ನಿರ್ಧಾಕ್ಷಿಣ್ಯವಾಗಿ ಡಿಲೀಟ್ ಮಾಡುತ್ತೇವೆ. ಅಂದಿನ ದಿನಮಾನಗಳಲ್ಲಿ ಕಾಗೆಗಳು ಮನೆಗಳ ಮೇಲೆ ಬಂದು ಕೂಗಿದರೆ ಕಡೇ ಪಕ್ಷ ಕಾಗದವಾದರೂ ಬರುವೆ ಎಂದು ಹೇಳೋರು. ಅಂದರೆ ಕಾಗದಕ್ಕೂ ಅಷ್ಟು ಬೆಲೆಯಿತ್ತು !ಕಾಗದ ಬರೆಯಲು ಅವರಿಗೆ ಬಾರದೆ ಇದ್ದರೂ ಮತ್ತೊಬ್ಬರಲ್ಲಿ ಬರೆಸುವವರು ಇದ್ದರು, ಈಗ ಬರೆಯಲು ಬಂದರೂ ಟೈಪ್ ಮಾಡುತ್ತೇವೆ. ಕೆಲವರು ಅದೂ ಮಾಡಲ್ಲ ಧ್ವನಿ ಸಂದೇಶ ರವಾನಿಸುತ್ತಾರೆ. ನಾವು ಹೇಳಿದಂತೆ ಟೈಪ್ ಮಾಡಲು ಆ್ಯಪ್ಗಳು ಬಂದಿವೆ.ಒಮ್ಮೊಮ್ಮೆ ಕೆಲವರಿಗೆ ಅನಿವಾರ್ಯವಾಗಿ ಪತ್ರಗಳನ್ನು ಬರೆಯಲೇಬೇಕೆಂದಾಗ ನಕಲು ಮಾಡುವ ಚಾಳಿ. ಹಾಗೆ ನಕಲು ಮಾಡುವಾಗ ಎಚ್ಚರದಿಂದ ಇರಬೇಕು. ಇಲ್ಲ ಅಭಾಸಗಳು ಖಂಡಿತ. ಹೆರಿಗೆ ರಜೆ ಹಾಕುವ ಮಹಿಳೆಯ ರಜಾ ಅರ್ಜಿಯನ್ನು ಪುರುಷನೊಬ್ಬ ನಕಲು ಮಾಡಿದರೆ ಹೇಗೆ ?. ಹೌದು ತಾನೆ !
ಇಲ್ಲಿಯವರಗೂ ಬಹುಪಾಲು ಅಂಚೆ ಪೆಟ್ಟಿಗೆಗೆ ಹಾಕುವ ಪತ್ರಗಳ ಸಮಾಚಾರವಾಯಿತು. ಅಂಚೆ ಪೆಟ್ಟಿಗೆಗೆ ಹಾಕದ ಹಾಕಲಾರದ ಅನೇಕ ಪತ್ರಗಳೂ ಇವೆ. ಇಂತಹ ಪತ್ರಗಳನ್ನು ಯಾರು ಬರೆಯುತ್ತಾರೆ ? ಎಂದರೆ ಬರೆಯೋದಿಲ್ಲವೇ ?ಮನೆ ಬಿಟ್ಟು ಹೋಗುವವರು ಬರೆಯುತ್ತಾರೆ.“ಏನೋ ತಪ್ಪಾಗಿದೆ” “ನನ್ನನ್ನು ಹುಡುಕಲು ಪ್ರಯತ್ನಿಸಬೇಡಿ” ಎಂದು ಬರೆದು ಮೇಜಿನ ಮೇಲೋ ಬಾಗಿಲಿಗೋ ಸಿಕ್ಕಿಸಿ ಹೊರಟಿರುತ್ತಾರೆ.
ಜನಜಂಗುಳಿಯಿದ್ದ ಸಮಾರಂಭಗಳಲ್ಲಿ ತಮಾಷೆ ನೋಡಲೆಂದೇ ಹೇಗೋ ಬೆದರಿಕೆ ಪತ್ರಗಳನ್ನು ರವಾನಿಸುವುದು ಇದೆ. ಆತ್ಯಹತ್ಯೆ ಮಾಡಿಕೊಳ್ಳುವವರು “ನನ್ನ ಸಾವಿಗೆ ನಾನೇ ಕಾರಣ” ಎಂದೋ “ಇಂತಹವರೆ ಕಾರಣರು ಅವರಿಗೆ ಶಿಕ್ಷೆ ಕೊಡಿ” ಎಂದೋ ಬರೆದಿಡುವ ಪತ್ರಗಳು ಸಾಮಾನ್ಯ.
ಒಂದಷ್ಟೇ ವರ್ಷಗಳ ಹಿಂದೆ ಫೋನ್ ಇಲ್ಲದ ಕಾಲದಲ್ಲಿ ದಂಪತಿಗಳಿಬ್ಬರೂ ಕೆಲಸಕ್ಕೆ ಹೋಗಬೇಕಾದಲ್ಲಿ ಮನೆಗೆ ಬೇಗ ಬರುವವರಿಗೆ ಸಂದೇಶ ತಲುಪಿಸಲು ಪತ್ರಗಳನ್ನು ಬರೆದು ಗಂಡಸರಿಗಾದರೆ ಟಿ.ವಿ. ಬಳಿ ಹೆಂಗಸರಿಗಾದರೆ ಡ್ರೆಸ್ಸಿಂಗ್ ಟೇಬಲ್ ಬಳಿ ಇಟ್ಟು ಹೋಗುತ್ತಿದ್ದರು. ತುಂಬಾ ಮರೆಗುಳಿಗಳಾಗಿದ್ದವರೂ ತಮಗೆ ತಾವೇ ದಿಕ್ಸೂಚಿ ಎಂಬಂತೆ ಪತ್ರಗಳನ್ನು ಇಲ್ಲ ಟಿಪ್ಪಣಿಗಳನ್ನು ಬರೆದಿಡುತ್ತಿದ್ದರು. ಈಗೆಲ್ಲ ಗೂಗಲ್ ಕ್ಯಾಲೆಂಡರ್‌ನಲ್ಲಿ ರಿಮೈಂಡರ್‌ಗೆ ಹಾಕುವುದಲ್ವೆ !
ಈಗ ಮೊಬೈಲ್ ಮಯ
ತರಗತಿಗಳನ್ನು ಅಧ್ಯಾಪಕರು ಪಾಠ ಮಾಡುವಾಗ ಮುಂದೆ ಮಾಡಬೇಕಾದ ಕ್ಲಾಸ್ ಬಂಕ್ಕ್ ಯೋಜನೆಗೆ ಸಂದೇಶಗಳು ಬೆಂಚಿಂದ ಬೆಂಚಿಗೆ ರೂಪಾಂತರಗಳಲ್ಲಿ ರವಾನೆಯಾಗುತ್ತಿದ್ದವು. ಅತೀ ಬುದ್ಧಿವಂತರೂ ಅಧ್ಯಾಪಕರಿಗೆ ಕಾಟ ಕೊಡಲು ಅಸಂಬದ್ಧ ಪ್ರಶ್ನೆಗಳನ್ನು ಚೀಟಿ ಸಂದೇಶಗಳ ಮೂಲಕ ಬೇರೆಯವರಿಂದ ಕೇಳಿಸುವುದೆಲ್ಲ ಹಳೆಯದು. ಆದರೆ ಅಧ್ಯಾಪಕರು ವಿದ್ಯಾರ್ಥಿಗಳಿಗಿಂತ ಬುದ್ಧಿವಂತರಾಗಿ ಬೆಲ್ ಆಗುವ ಸಮಯಕ್ಕೆ ಪ್ರಶ್ನೆಗಳನ್ನು ಪಡೆದು ಈಗ ಸಮಯವಾಯಿತು ನಾಳಿನ ತರಗತಿಯಲ್ಲಿ ಹೇಳುತ್ತೇನೆ ಎಂದು ಮರುದಿನ ತಿಳಿದುಕೊಂದು ಬಂದು ಹೇಳುತ್ತಿದ್ದರು. ಈಗ ಅಂತಹ ಸಂದೇಶಗಳೆಲ್ಲ ಮೊಬೈಲ್‌ನಲ್ಲಿ ರವಾನೆಯಾಗುತ್ತಿರುತ್ತವೆ. ಸೈಲೆಂಟ್ ಮೋಡ್‌ನಲ್ಲಿ ಇರಿಸಿಕೊಂಡ ವಿದ್ಯಾರ್ಥಿಗಳ ಮೊಬೈಲ್‌ನ ವೈಬರೇಟರ್ ಸದ್ದಿಗೆ ಅಧ್ಯಾಪಕರು ಅಲರ್ಟ್ ಆಗುತ್ತಾರೆ. ಆದರೆ ವಿದ್ಯಾರ್ಥಿಗಳು ಏನೂ ಗೊತ್ತಿಲ್ಲವೆಂಬಂತೆ ಬಂಡೆಕಲ್ಲಿನಂತೆ ಕುಳಿತುಕೊಂಡಿರುತ್ತಾರೆ.ಬೋರ್ಡಿಂಗ್ ಶಾಲೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳದ್ದೇ ಬೇರೆ ಕತೆ, ಎಲ್ಲಾ ಕಾಗದಗಳನ್ನು ಶಾಲೆಯವರು ಮೊದಲು ಓದುತ್ತಿದ್ದರು. ಹಾಗಿದ್ದಾಗ ಮೊದಲು ಶಾಲೆಯನ್ನು ಶಾಲೆಯವರನ್ನು ಹೊಗಳೆ ಬರೆದು ಉಳಿದದ್ದನ್ನು ಸೇರಿಸಬೇಕಾಗಿತ್ತು.
ಇನ್ನು ಹಲವು ಬಗೆಯ ಪತ್ರಗಳಿವೆ. ಬೇಡಿಕೆಗಳನ್ನು ಈಡೇರಿಸುವಂತೆ, ‘ನನ್ನ ಗಂಡನಿಗೆ ಬುದ್ಧಿ ಕಲಿಸು’ ಎಂದೋ, “ಇಂಥ ಹುಡುಗಿಯ ಇಲ್ಲ ಹುಡುಗನ ಜೊತೆ ಮದುವೆ ಮಾಡಿಸು ನಾನು ಇಂತಹದ್ದನ್ನು ಕೊಡುತ್ತೇನೆ” ಎಂದು ವ್ಯವಹಾರ ಕುದುರಿಸಿ ದೇವಸ್ಥಾನದ ಹುಂಡಿಗಳಿಗೆ ಹಾಕುವ ಪತ್ರಗಳು ಇವೆ. ಮತ ಪೆಟ್ಟಿಗೆಯಲ್ಲಿ ಹಾಕುವ ಟೀಕಾಪತ್ರಗಳು, ಗಲಾಟೆ ಮಾಡಬಾರದು, ನೋಟ್ಸ್ ಎಲ್ಲಾ ಬರೆದು ತೋರಿಸಬೇಕೆಂದು ಶಿಕ್ಷಕರು ವಿದ್ಯಾರ್ಥಿಗಳಿಂದ ಬರೆಸಿಕೊಳ್ಳುವ ತಪ್ಪೊಪ್ಪಿಗೆ ಪತ್ರ, ಕ್ಷಮಾಪಣಾ ಪತ್ರಗಳೂ ಇವೆ. ಕ್ಷಮೆ ಕೋರಿ ವಿದ್ಯಾರ್ಥಿ ಪತ್ರ ಬರೆಯಲ್ಲ ನಮಗೆ ಕ್ಷೇಮ ತೋರಿ ಎಂದು ಬರೆಯುತ್ತಾರೆ. ಇನ್ನೊಂದು ಪೋಲಿಸ್ ಠಾಣೆಯಲ್ಲಿ ಇನ್ನು ಮುಂದೆ ಯಾರ ತಂಟೆ-ತಕರಾರಿಗೆ ಹೋಗುವುದಿಲ್ಲವೆಂದು ಬರೆಸುವೆ ಮುಚ್ಚಳಿಕೆಯ ಪತ್ರ.ಈಗ ಇಂತಹ ಪತ್ರಗಳಿಗೆ ಬದಲಾಗಿ ಅವರ ತಪ್ಪೊಪ್ಪಿಗೆ, ಹೇಳಿಕೆಗಳನ್ನು ಆಡಿಯೋ-ವೀಡಿಯೋ ಮಾಡಿಕೊಳ್ಳುತ್ತಾರೆ ಬಿಡಿ.
ಬದಲಾದ ದಿನಮಾನಗಳಲ್ಲಿ ಅಂಚೆ ವ್ಯವಸ್ಥೆ ತನ್ನದೇ ಆದ ಛಾಪು ಮೂಡಿಸಿದೆ ಆದರೆ ಅದಕ್ಕೂ ವಿಘ್ನ ಲಾಕ್ಡೌನ್ ಕಾಲದಲ್ಲಿ ಆಗಿತ್ತು. ಇದೀಗ ಅನ್ಲಾಕ್ ಪ್ರಕ್ರಿಯೆಯಿಂದ ಚಟುವಟಿಕೆಗಳು ಗರಿಗೆದರಿವೆ.ಒಟ್ಟಾರೆಯಾಗಿ ಈ ಓಲೆ ಪತ್ರ, ಕಾಗದ ಏನಾದರೂ ಕರೆಯಿರಿ ನಮ್ಮ ಸಂವೇದನೆಯ ಸಂವಾಹಕ ತಡ ಮಾಡಬೇಡಿ ನಿಮ್ಮ ಸಂವೇದನೆಯನ್ನು ಪತ್ರದ ಮೂಲಕ ನಿಮ್ಮ ಇಷ್ಟ ಮಿತ್ರರಿಗೆ ಸಂವಹಿಸಿ. ಪತ್ರಗಳು ಇತಿಹಾಸ ಹೇಳುತ್ತವೆ. ಪತ್ರ ಮುಖೇನ ತಾವೂ ಇತಿಹಾಸ ಸೃಜಿಸಿ.

ಸುಮಾ ವೀಣಾ
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.‘’ನಲವಿನ ನಾಲಗೆ’”ಎಂಬ ಪ್ರಬಂಧಸಂಕಲನ ಹೊರತಂದಿದ್ದಾರೆ.
ಇದರೊಂದಿಗೆ ಪ್ರಕಟವಾಗಿರುವ ಚಿತ್ರ ಬರೆದವರು ಕಿರಣ ಆರ್ . ಅಂಚೆ ಕಾರ್ಡನಲ್ಲೇ ಈ ಚಿತ್ರವನ್ನು ಅವರು ರಚಿಸಿದ್ದಾರೆ



ತುಂಬಾ ಅದ್ಭುತವಾಗಿ ಮೂಡಿಬಂದಿದೆ ಪತ್ರ ಗಳಲ್ಲೂ ಇಷ್ಟು ವಿಧವಾದ ಪತ್ರಗಳು ಇವೆ ಎನ್ನುವ ವಿಷಯ ಗೊತ್ತಿಲ್ಲದವರಿಗೆ ಅರ್ಥ ವಾಗುವ ಹಾಗೆ ಮನವರಿಕೆ ಮಾಡಿದ್ದು ತುಂಬಾ ಒಳ್ಳೇದು. ಏನೇ ಆಗಲಿ ಈ ಮೊಬೈಲ್ ಬಂದು ಬರವಣಿಗೆ ಮಾಯವಾಗಿದೆ. ಯಾರಿಗೂ ಬರೆಯಲು ವ್ಯವಧಾನವಿಲ್ಲ ಮುಂಚೆ ತಮಗೆ ಬೇಕಾದವರಿಂದ ಪತ್ರ ಬರುವುದನ್ನೇ ಎದುರುನೋಡುತ್ತ ಬಾಗಿಲಲ್ಲಿ ನಿಂತು ಕೊಂಡು ಕಾಯುವ ಜನರಿಲ್ಲ ಅಂದಿನ ಅ ಕಾತುರತೆ ಮಾಯವಾಗಿದೆ. ಎಷ್ತ್ತೋ ಜನರಿಗೆ ಬರವಣಿಗೆ ಬಗ್ಗೆ ಮರೆತು ಹೋಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಮೊಬೈಲ್ ಬಂದು ಜನರ ನಡುವಿನ ಭಾವನಾತ್ಮಕ ಸಂಬಂಧ ಮರೆಯಾಗುತ್ತಾ ಬಂದಿದೆ. ಮೇಡಂ ನಿಜಕ್ಕೂ ನಿಮ್ಮ ಲೇಖನ ಹಳೆಯ ನೆನಪು ಮತ್ತೆ ಮರು ಕಳಿಸುವಂತೆ ಮಾಡಿತು. ನಿಮ್ಮ ನಿರೂಪಣೆ ತುಂಬಾ ಅಮೋಘವಾಗಿದೆ ಧನ್ಯವಾದಗಳು.
ಧನ್ಯವಾದಗಳು
ಪತ್ರ ಗಳು ಇತಿಹಾಸ ನನ್ನು ಹೇಳುತ್ತದೆ. ನಿಜವಾಗಿ ಹೌದು. ಇವತಷ್ಟೇ ನನ್ನ ಮಗ ಮತ್ತು ಮಗಳು ಬೇರೆ ಕಡೆ ಓದುತಿದ್ದ ಸಮಯದಲ್ಲಿ ಮೊಬೈಲ್ ಫೋನ್ ಇದ್ದರೂ ನಮ್ಮ ಮನೆಯಲ್ಲಿ ಪತ್ರ ಬರೆದು ವಿಚಾರ ವಿನಿಮಯ ಮಾಡಿಕೊಂಡಿದ್ದ ಹಳೇ ಪತ್ರ ಗಳನ್ನು ಓದಿದೆ. ಅದರ ಖುಷಿನೇ ಬೇರೆ. ಮದುವೆಯಾದ ಹೊಸತರಲ್ಲಿ ಹೇಗೆಲ್ಲಾ ಇರಬೇಕೆಂದು ನನ್ನಪ್ಪ ಬರೆದ ಪತ್ರಗಳು ಈಗಲೂ ಇವೆ. ಇತ್ತೀಚಿನ ದಿನಗಳಲ್ಲಿ ಕೂಡ ನಾನು ಹುಟ್ಟು ಹಬ್ಬದ ಶುಭಾಶಯವನ್ನು ಪತ್ರ ಬರೆದೇ ಕೋರಿದೆ.ಪತ್ರಗಳನ್ನು ಬರೆದು. ಪೋಸ್ಟ್ ಮಾಡಿ ಅಲ್ಲಿಂದ ಉತ್ತರ ಬರುವ ತನಕ ಕಾಯುವ ಚಡಪಡಿಕೆ ಇದೆಯಲ್ಲ ಅದೆಲ್ಲಾ ಈಗಿನವರಿಗೆ ಇಲ್ಲ. ಲೇಖಕಿ ತುಂಬಾ ಸೊಗಸಾಗಿ ಹೇಳಿದಾರೆ.
ಪತ್ರ ತಲುಪಿದ್ದಕ್ಕೆ ಉತ್ತರಿಸಿ ಎಂದು ಪತ್ರದ ಕೊನೆಯ ವಾಕ್ಯ ಆಗುತಿತ್ತು. ಇನ್ನು ಕೇಲವು ವೇಳೆ ಶುಭ ಕಾರ್ಯಗಳಿಗೆ ಬನ್ನಿರಿ ಎಂಬ ಪತ್ರ ಕಾರ್ಯಕ್ರಮ ಮುಗಿದ ಮೇಲೆ ಬರುತ್ತಿದ್ದವು. ಪಾತ್ರಗಳಲ್ಲೂ ಶುಭದ ಸಂಕೇತ ಗುರುತಿಸಲು ಪತ್ರದ ಅಂಚಿಗೆ ಕುಂಕುಮ ಹಚ್ಚುವ ಪದ್ಧತಿ ಇತ್ತು. ಇನ್ನು ಸಾವಿನ ಸುದ್ದಿ ಹೊತ್ತ ಪತ್ರಗಳಿಗೆ ಈ ಭಾಗ್ಯ ಇರುತ್ತಿರಲಿಲ್ಲ. ಅದರ ಮೇಲೆಯೇ ಪತ್ರ ಎಂತಹದು ಎಂದು ತಿಳಿಯುತ್ತಿತ್ತು. ಪತ್ರದ ಮೇಲೆ ಶ್ರೀ, ಕ್ಷೇಮ, ದಿನಾಂಕ, ಉಭಯಕುಶೋಲೋಪರಿ ಸಾಂಪ್ರತ ಎಂದೆಲ್ಲಾ ನಮೂದಿಸಿದ್ರೆ ಅದು ಶುಭದ ಸಂಕೇತ ವಾಗಿರುತ್ತಿತ್ತು. ಮನಸಿನ ಭಾವನೆಗಳನ್ನು ಅಕ್ಷರಗಳ ಮೂಲಕ ಅಭಿವ್ಯಕ್ತಿ ಗೊಳಿಸಲು ಮತ್ತು ಕಾವ್ಯ ಮಯವಾಗಿ ಬರೆಯಲು ಈ ಅಂಚೆ ಪತ್ರ ರಹದಾರಿಯಾಗಿತ್ತು ಎಂದರೆ ತಪ್ಪಲ್ಲ. ಇನ್ನು ಪ್ರೇಮಿಗಳಿಗಂತೂ ಅಂಚೆಯಣ್ಣ ತರುತ್ತಿದ್ದ ಪತ್ರಗಳನ್ನು ಜಾತಕ ಪಕ್ಷಿಯಂತೆ ಕಾಯುತಿದ್ದರು. ಆ ಎಲ್ಲಾ ಅನುಭೂತಿಗಳನ್ನು ವರ್ಣಿಸಲು ಪದಗಳು ಸಾಲವು.
ಒಂದು ಸುಂದರ ಕಥಾ ಹಂದರವನ್ನೇ ಸೃಷ್ಟಿಸಿದ ಸುಮಾ ವೀಣಾ ರವರಿಂದ ಮತ್ತಷ್ಟು ಲೇಖನ ಗಳು ಬರಲಿ ಎಂದು ಆಶಿಸುತ್ತೇನೆ ಮತ್ತು ಅವರನ್ನು ಅಭಿನಂದಿಸುತ್ತೇನೆ 🙏🙏🙏
ಒಳ್ಳೆಯ ಲೇಖನ; ಒದಿ ಸಂತೋಷವಾಯಿತು
ಇಂದಿನ ಮೊಬೈಲ್, ಟೆಲಿಫೋನ್, ಪ್ರವಾಹದಲ್ಲಿ ಪತ್ರಗಳು, ಅದರಲ್ಲೂ ಕಾರ್ಡ್, ಇಂಗ್ಲಂಡ್ ಲೆಟರ್, ಕವರ್ ಇವುಗಳ ಹೆಸರೇ ಮರೆಯಾಗುತ್ತಿವೆ . ಭಾವನೆಗಳನ್ನು ಬರಹದ ಲ್ಲಿ ವ್ಯಕ್ತಪಡಿಸುವ ಹಾಗೆ ಮಾತುಗಳಲ್ಲಿ ಸಾಧ್ಯವಿಲ್ಲ. ನಿಮ್ಮ ಲೇಖನದಿಂ ದ ನಾನು ಜೋಪಾನವಾಗಿ ಇಟ್ಟಿದ್ದ ಪತ್ರಗಳನ್ನು ಪುಟ್ಟ ಮಕ್ಕಳಿಗೆ ತೋರಿ ಸುವ ಹಾಗೆ ಆಯ್ತು. ಉತ್ತಮ ಲೇಖನ.ಧನ್ಯವಾದಗಳು