25 C
Karnataka
Monday, May 13, 2024

    ಕ್ಲಾಸ್ ಎಂದರೆ ಆನ್ಲೈನ್ ಕ್ಲಾಸ್

    Must read

    ಕೊರೋನ ಕರಿಛಾಯೆ ಪ್ರಪಂಚದಾದ್ಯಾಂತ ಗಾಢವಾಗಿ ಹಬ್ಬಿ ಸದ್ಯದ ಪರಿಸ್ಥಿತಿಯಲ್ಲಿ ’ಕ್ಲಾಸ್ ಎಂದರೆ ಆನ್ಲೈನ್ ಕ್ಲಾಸ್ ಎನ್ನಿರಯ್ಯ’ ಎಂಬ ಸಂದಿಗ್ದತೆ.

    ಪಾಪ …. ಇಷ್ಟರವರೆಗೆ ತರಗತಿಯ ಗೋಡೆ -ಗೋಡೆಗಳಲ್ಲಿ ತಮ್ಮದೇ ಶಾಸನವ ಕೆತ್ತುತ್ತಾ, ಕಿವಿಯ ತಮಟೆ ಒಡೆದು ಹೋಗುವ ಹಾಗೆ ಚೀರುತ್ತಾ, ಗೆಳೆಯರೊಂದಿಗೆ ಮೋಜು -ಮಸ್ತಿ ಮಾಡುತ್ತಾ ಹಕ್ಕಿಗಳಂತಿದ್ದ ವಿದ್ಯಾರ್ಥಿಗಳಿಗೆ ಪಂಜರದಲ್ಲಿಟ್ಟ ಅನುಭವ.

    ಅತ್ತ ಶಾಲೆ ಶುರುವಾಗಿಲ್ಲ ಎಂಬ ಬೇಸರ, ಇತ್ತ ಆನ್ಲೈನ್ ಕ್ಲಾಸಿಗೆ ಒಗ್ಗಿಕೊಳ್ಳಲೇಬೇಕಾದ ಅನಿವಾರ್ಯತೆ. ಎಲ್ಲದರ ಮದ್ಯೆ ಬಳಲಿ -ಬೆಂಡಾಗಿರುವುದಂತು ನಿಜ. ಈ ಸಂದಿಗ್ದತೆಯಲ್ಲಿ ಹೊಸ ಮೋಜನ್ನು ಕಂಡುಕೊಳ್ಳುತ್ತಿದೆ ವಿದ್ಯಾರ್ಥಿ ವರ್ಗ.

    ಮೊದ-ಮೊದಲು ಆನ್ಲೈನ್ ಕ್ಲಾಸ್ ಬಗ್ಗೆ ಗಂಧ -ಗಾಳಿ ಗೊತ್ತಿಲ್ಲದ ವಿದ್ಯಾರ್ಥಿಗಳ ಪಜೀತಿ ಕೇಳಿದರೆ ನಗು ಬರುವುದಂತು ಖಂಡಿತ. ಅದಕ್ಕೆ ನಾನೂ ಹೊರತಲ್ಲ. ಆನ್‌ಲೈನ್‌ ಕ್ಲಾಸ್‌ ಎಂದರೆ ಮನೇಲೇ ಕೂತು ಪಾಠ ಕೇಳ್ಬಹುದು, ತರಗತಿ ಮಜವಾಗಿರವಾಗಿರಬಹುದೆಂದು ಯೋಚಿಸಿ , ಸರಿಯಾದ ಸಮಯಕ್ಕೆ ಫೋನನ್ನು ಮುಖಾರವಿಂದದ ಎದುರು ಹಿಡಿದು ಕುಂತರೆ….ಕಾದಿದ್ದೇ ಬಂತು, ಕ್ಲಾಸ್‌ ಶುರುವಾಗಲೇ ಇಲ್ಲ. ದಡ್ಡ ಶಿಖಾಮಣಿಗಳಿಗೆ ತರಗತಿ ಮುಗಿದಿದ್ದೂ ಗೊತ್ತಾಗಲಿಲ್ಲ! ಜೂಮ್, ಗೂಗಲ್ ಮೀಟ್ ಎಂಬ ಆಪ್ ಉಂಟು ಅದನ್ನು ಡೌನ್ಲೋಡ್ ಮಾಡಬೇಕು ಅನ್ನೋದು ತಿಳಿಯದೇ ಹೋದದ್ದು ಆನ್ಲೈನ್‌ ದುರಂತ!

    ಹಾಗೋ ಹೀಗೋ ಗೆಳೆಯರನ್ನು ಕಾಡಿ -ಬೇಡಿ ಆಪ್ ಇನ್ಸ್ಟಾಲ್ ಮಾಡಿಟ್ಟು ಮರುದಿನ ಮೀಟನ್ನು ಓಪನ್ ಮಾಡಿ ಕುಳಿತಿದ್ದರೆ, ಮತ್ತೆ ಕ್ಲಾಸ್‌ ಶುರುವಾಗಲಿಲ್ಲ. ಚಿಂತೆ ಮುಖದಲ್ಲಿ ಬೆವರಾಗಿ ಹರಿಯತೊಡಗಿತು. ತಕ್ಷಣವೆ ಗೆಳೆಯರಿಗೆ ಪೋನು ಹಚ್ಚಿದರೆ ಬ್ಯುಸಿ ಎಂದು ಬಂತು .ಆಗಲೇ ಏನೋ ಸುಟ್ಟ ವಾಸನೆ ಬಂದರೂ ಎದೆಗುಂದದೆ ಪುನಃ ಆಪ್ ಓಪನ್ ಮಾಡಿದೆ. ಕ್ಲಾಸ್ ಇನ್ನು ಶುರುವಾಗಲೇ ಇಲ್ಲ… ಒಂದು ತಾಸಿನ ನಂತರ ಗೆಳೆಯರ ಕರೆ ಬಂತು ಕ್ಲಾಸಿಗೆ ಯಾಕೆ ಜಾಯಿನ್ ಆಗಲಿಲ್ಲ ಎಂದು ಪ್ರಶ್ನಿಸಿದರು! ಕ್ಲಾಸ್ಗೊಂದು ಲಿಂಕ್ ಇರುತ್ತೆ, ಅದ್ರ ಮೂಲಕ ಜಾಯಿನ್ ಆಗಬೇಕು ಎಂಬ ದಿವ್ಯಜ್ಞಾನ ನಂತರ ಸಿಕ್ಕಿತು. ಅಂತೂ ಕ್ಲಾಸ್‌ಗೆ ಜಾಯಿನ್‌ ಆಗಿದ್ದು ಆಯಿತು, ಮೊದಲೆರಡು ದಿನ ಆದ ವಿಚಿತ್ರ ಅನುಭವಗಳ ನೆನೆದು ನಕ್ಕಿದ್ದೂ ಆಯಿತು!

    ಮೀಟು ಕೈಗೆಟುಕಿದ ನಂತ್ರ ಇನ್ನೇನು…ಕ್ಲಾಸ್‌ ಬಗ್ಗೆ ಕಲಿತಿದ್ದೇ ಕಲಿತಿದ್ದು. ಬಹಳ ದಿನಗಳಿಂದ ಕಾಣದ ಸಹಪಾಠಿಗಳ ಮೊಗವ ವಿಡಿಯೋದಲ್ಲಿ ಕಂಡಾಗ ಅದೇನೋ ಖುಷಿ. ಕ್ಲಾಸ್ ನಲ್ಲಿ ಮಾಡುತ್ತಿದ್ದ ತರ್ಲೆ -ತಮಾಷೆ ರಪ್ ಅಂತ ಕಣ್ಣ ಮುಂದೆ ಬಂದು ಹೋಯಿತು. ಇನ್ನೂ ನೆಟ್ವರ್ಕ್ ಸಮಸ್ಯೆಯಿಂದ ಶಿಕ್ಷಕರು ಲೆಫ್ಟ್ ಆದಾಗ, ಅಲ್ಲಿವರೆಗೂ ಸಾಚಾಗಳಂತೆ ವರ್ತಿಸುತ್ತಿದ್ದ ನಮ್ಮೊಳಗೇ ಅವಿತು ಕುಳಿತಿರುವ ನಾನಾ ಪ್ರತಿಭೆಗಳು ಹೊರ ಬರುತ್ತವೆ. ಸಂಭಾಷಣೆ ತೀರಾ ಹಾಸ್ಯಮಯ. ತಕ್ಷಣ ಗುರುಗಳು ರೀಜಾಯಿನ್ ಆದಾಗ ಸಿಂಹ ಕಂಡಂತೆ ಗಪ್ಚುಪ್ ಆಗುತ್ತೆ ಕ್ಲಾಸ್!

    ಇನ್ನೂ ತರಗತಿ ನಡೆಯುತ್ತಿರುವಾಗಲೆ ನಡೆಯುವ ಲೈವ್ ಕಾಮೆಂಟ್ರಿ ಕ್ರಿಕೆಟ್ ಮ್ಯಾಚ್ ನಂತೆ ಕುತೂಹಲಕಾರಿ. ವಾಟ್ಸಪ್ ಇದರ ಪ್ಲಾಟ್ಫಾರಂ . ಶಿಕ್ಷಕರ ಹಾವ -ಭಾವ, ವಿದ್ಯಾರ್ಥಿಗಳ ಪ್ರತ್ಯುತ್ತರದ ಬಗ್ಗೆ ವಾದ, ಎಲ್ಲರ ವೇಷಭೂಷಣ ಇದರ ಮುಖ್ಯ ಚರ್ಚಾ ವಿಷಯ. ಶಾಲೆಯ ಗಂಟೆ ಶಬ್ದವೊಂದು ಬಿಟ್ಟು ಮತ್ತೆಲ್ಲ ಇಲ್ಲಿ ಸಾಧ್ಯ. ಈಗೀಗ ಅನಿಸುವುದುಂಟು’ ಏನೋ ನವನವೀನ ಈ ಆನ್ಲೈನ್ ಕ್ಲಾಸ್ ’!

    Photo by Startup Stock Photos from Pexels

    ಪ್ರಜ್ಞಾ
    ಪ್ರಜ್ಞಾ
    ಮಂಗಳೂರು ವಿವಿ ಕಾಲೇಜಿನ ದ್ವಿತೀಯ ಬಿ ಎ ವಿದ್ಯಾರ್ಥಿನಿ
    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!