22.7 C
Karnataka
Tuesday, May 21, 2024

    ಬದುಕನ್ನು ಮತ್ತಷ್ಟು ಸಂಭ್ರಮಿಸುವ ಬಗೆಯಿದು

    Must read

    ನಾವು ಬದುಕನ್ನು ಖುಷಿಯಾಗಿ ಕಳೆಯುವುದನ್ನು ಕಲಿತಿದ್ದೇವೆಯೇ? ಜೀವನದಲ್ಲಿ . ಅನಿರ್ದಿಷ್ಟತೆಯನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಈ ಕ್ಷಣವನ್ನು ಖುಷಿಯಿಂದ ಕಳೆಯಲು ಮನಸ್ಸು ಹಿಂದೇಟು ಹಾಕುತ್ತಿದೆಯಾ?

    ಬದುಕಿದ್ದಷ್ಟೂ ದಿನ ಎಲ್ಲರೊಂದಿಗೆ ಖುಷಿ ಖುಷಿಯಾಗಿ ಕಳೆಯುವುದಷ್ಟೇ ಜೀವನದ ಉದ್ದೇಶ ಆಗಿರಬೇಕು. ಇತರರನ್ನು ದ್ವೇಷಿಸಿ, ತೊಂದರೆ ಕೊಟ್ಟು ಬದುಕಿದ್ದಷ್ಟೂ ದಿನ ಮತ್ತೊಬ್ಬರ ಬಗ್ಗೆಯೇ ಅಸೂಯೆ, ಅಸಹನೆ, ದ್ವೇಷ ಮನೋಭಾವ ಬೆಳೆಸಿಕೊಳ್ಳುವುದರಿಂದ ಗಳಿಸುವಂತಹದ್ದೂ ಏನೂ ಇಲ್ಲ. ಕಳೆದುಕೊಳ್ಳುವುದೇ ಹೆಚ್ಚು.

    ಜೀವನದ ಕೊನೆಯ ಗಳಿಗೆಯ ಬಗ್ಗೆ ನಿಖರತೆ ಇಲ್ಲದೇ ಇರುವುದರಿಂದ ಈ ಕ್ಷಣವನ್ನು ಎಷ್ಟು ಸಾಧ್ಯವೋ ಅಷ್ಟು ಆನಂದಿಂದ ಎಲ್ಲರೊಂದಿಗೂ ಪ್ರೀತಿಭಾವದಿಂದ ಕಳೆದರೆ ಅದುವೇ ಜೀವನದ ಸಾರ್ಥಕ ಭಾವ. ಅದೇ ಬದುಕಿನ ಶ್ರೀಮಂತಿಕೆ.

    ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ಕಾಣದ ಶಕ್ತಿಗೆ ಒಂದು ನಮನ ಸಲ್ಲಿಸಿ. ಬದುಕನ್ನು ಖುಷಿಯಿಂದ ಕಳೆಯಲು ನನ್ನ ಬದುಕಿನಲ್ಲಿ ಒಳ್ಳೆಯದನ್ನೇ ಯೋಚನೆ ಮಾಡಲು, ಈ ಕ್ಷಣವನ್ನು ಖುಷಿಯಿಂದ ಕಳೆಯಲು, ಎಲ್ಲರನ್ನೂ ಪ್ರೀತಿಸಲು ಮತ್ತೊಂದು ಅಮೂಲ್ಯ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗ ಮಾಡಿಕೊಳ್ಳುತ್ತೇನೆ ಎನ್ನುವ ಪ್ರತಿಜ್ಞೆ ಮಾಡಿ ನೋಡಿ. ಇದೆಲ್ಲವುಗಳಿಂತ ಹೆಚ್ಚಾಗಿ ನಮ್ಮ ಬಳಿ ಏನಿದೆ ಏನಿಲ್ಲ ಎನ್ನುವುದಷ್ಟೇ ಮುಖ್ಯವಲ್ಲ. ಬದುಕನ್ನು ಹೇಗೆ ಕಳೆಯುತ್ತಿದ್ದೇವೆ ಎಂಬುದು ಮುಖ್ಯ.

    ಬದುಕನ್ನು ಆನಂದಿಸಲು
    ಪ್ರತಿ ಕ್ಷಣವನ್ನು ಸವಿಯಿರಿ. ಯಾವ ಕ್ಷಣ ನಮ್ಮ ಜೀವನದ ಕೊನೆ ಗಳಿಗೆ ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಪ್ರತಿಯೊಂದು ಅಂಶವನ್ನು ಗಮನದಲ್ಲಿಟ್ಟುಕೊಂಡು ಪ್ರತಿಕ್ಷಣವನ್ನು ಆನಂದದಿಂದ ಕಳೆಯುವ ಪ್ರಯತ್ನ ಮಾಡಬೇಕು.

    ಮಗುವನ್ನು ಗಮನಿಸಿ ನೋಡಿ ಸಣ್ಣ ಸಣ್ಣ ವಿಷಗಳಲ್ಲಿಯೂ ಆನಂದವನ್ನು ಹುಡುಕುತ್ತಿರುತ್ತದೆ. ಹರಿದಾಡುವ ಇರುವೆಯನ್ನು ನೋಡಿ ಖುಷಿ ಕಂಡುಕೊಳ್ಳುತ್ತಿರುತ್ತದೆ. ಅದೇ ರೀತಿ ನಾವೂ ಕೂಡಾ ಸಣ್ಣ ಸಣ್ಣ ವಿಷಯಗಳಲ್ಲಿಯೂ ಸಂತೋಷವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು.

    ಮಗುವಾಗಿದ್ದಾಗ ಕಳೆದ ಪ್ರತಿಕ್ಷಣವೂ ಆನಂದದಾಯಕವಾಗಿರುತ್ತದೆ.
    ಅದಷ್ಟೇ ಅಲ್ಲ ಮಳೆಯ ಸಿಂಚನಕ್ಕೆ ಮೈಯೊಡ್ಡಿ ಸಂಭ್ರಮಿಸಿದ್ದು, ಮೋಜಿನ ಆಟಗಳನ್ನು ಆಡಿದ್ದು, ಯಾವುದರ ಬಗ್ಗೆಯೂ ಚಿಂತೆ ಇಲ್ಲದೇ ನಿರಾಂತಕವಾಗಿದ್ದಿದು. ಹೀಗೆ ಸಣ್ಣಸಣ್ಣ ಖುಷಿಯೂ ಅವಶ್ಯಕವೇ.

    ದೈಹಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಿ. ನಿತ್ಯ ಎಕ್ಸರಸೈಸ್ ಮಾಡುವುದರಿಂದ ನಮ್ಮಲ್ಲಿ ಖುಷಿಯಾಗಿರಲು ಪ್ರೇರಣೆ ನೀಡುವಂತಹ ರಾಸಾಯನಿಕಗಳು ಬಿಟುಗಡೆಯಾಗುವಂತೆ ಮಾಡುತ್ತದೆ. ಎಂಡೋರ್ಫಿನ್‍ಗಳ ಬಿಡುಗಡೆಯಿಂದ ದೇಹದಲ್ಲಿ ನೋವು ಒತ್ತಡ ಕಡಿಮೆ ಆಗುತ್ತದೆ.

    ನಗು ಮುಖದಿಂದಿರಿ. ನಗು ಎಲ್ಲದಕ್ಕೂ ಔಷಧ ಎಂದಿದ್ದಾರೆ ಹ್ಯಾರಿ ವಾರ್ಡ್ ಬೀಚರ್. ವ್ಯಾಯಾಮ ಮಾಡುವುದರಿಂದ ದೇಹ ಉಲ್ಲಾಸಿತಗೊಳ್ಳುತ್ತದೆ. ಖುಷಿಯಾಗಿರಿಸುವಂತಹ ವಿಷಯಗಳತ್ತ ಗಮನಹರಿಸಿ. ಹೊಸ ತರದ ಆಹಾರ ಸೇವನೆ, ಹಾಸ್ಯಮಯ ಸಿನಿಮಾಗಳನ್ನು ನೋಡುವುದು, ಮಕ್ಕಳೊಂದಿಗೆ ಸಮಯ ಕಳೆಯುವುದು, ಮೋಜಿನ ಆಟಗಳನ್ನು ಕೈಗೊಳ್ಳುವುದು ಇವೇ ಮೊದಲಾದ ಮನಸ್ಸಿಗೆ ಖುಷಿ ನೀಡುವಂತಹ ವಿಚಾರಗಳತ್ತ ಗಮನ ಹರಿಸಿ. ಹೊಸತನ್ನು ಟ್ರೈ ಮಾಡುವುದರಿಂದ ಅದು ಆಹಾರವೇ ಆಗಿರಬಹುದು ಅದರಿಂದ ಸಿಗುವ ಖುಷಿ ಬೇರೆಯೇ ಆಗಿರುತ್ತದೆ.

    ಡೈರಿ ಬರೆಯುವ ಅಭ್ಯಾಸ ರೂಢಿಸಿಕೊಳ್ಳಿ. ಖುಷಿಯ ವಿಚಾರಗಳನ್ನು ದೈನಂದಿನ ಚಟುವಟಿಕೆಗಳನ್ನು ಅದರಲ್ಲಿ ನಮೂದಿಸುತ್ತಾ ಹೋಗಿ. ಮುಂದೊಂದು ಅದನ್ನು ತೆರೆದಾಗ ಆಗುವ ಖುಷಿ ಅಷ್ಟಿಷ್ಟಲ್ಲ.

    ಹೊಸ ವಿಷಯಗಳನ್ನು ಕಲಿಯಲು ಆರಂಭಿಸಿ. ಹೊಸ ವಿಷಯಗಳನ್ನು ಕಲಿತುಕೊಳ್ಳುವುದರಿಂದ ವಿಷಯಜ್ಞಾನ ಹೆಚ್ಚುವುದರ ಜತೆಗೆ ಖುಷಿಯೂ ಆಗುವುದು. ಮನಸ್ಸು, ಆಲೋಚನಾ ಕ್ರಮವನ್ನು ಹೆಚ್ಚು ಚಟುವಟಿಕೆಯಿಂದ ಕೂಡಿರುವಂತೆ ಮಾಡುವುದು. ದೇಹ ಮತ್ತಷ್ಟುಚಟುವಟಿಕೆಯಿಂದ ಕೂಡಿರುವುದರಿಂದ ಸಹಜವಾಗಿ ಸಂತೋಷವೂ ಹೆಚ್ಚುವುದು.

    • ಥ್ಯಾಂಕ್ಸ್ ಹೇಳುವುದು, ಉಡುಗೊರೆಗಳನ್ನು ನೀಡುವುದು, ಕುಟುಂಬದವರೊಂದಿಗೆ, ಬಂಧು ಬಾಂಧವರೊಡನೆ ಸಮಯ ಕಳೆಯುವುದು ಕೂಡಾ ಖುಷಿ ನೀಡುತ್ತದೆ. ಅದಕ್ಕಾಗಿ ಸಮಯ ಮೀಸಲಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕೈಚಾಚಿ ಬಂದವರಿಗೆ ಸಹಾಯ ಮಾಡುವುದು, ಕೆಲಸದ ಜಾಗದಲ್ಲಿ ಹೊಸಬರಿಗೆ ಸಹಾಯಮಾಡುವುದು, ಇವೇ ಮೊದಲಾದ ಸಣ್ಣ ಸಣ್ಣ ವಿಷಯಗಳೂ ಕೂಡಾ ಖುಷಿ ನೀಡುತ್ತದೆ.
    • ಭವಿಷ್ಯದ ಬಗ್ಗೆ ಯೋಜನೆ ರೂಪಿಸಿಕೊಳ್ಳಿ. ಆದರೆ ವರ್ತಮಾನದಲ್ಲಿ ಜೀವಿಸಿ. ಭವಿಷ್ಯದ ಬಗ್ಗೆಯೇ ಚಿಂತೆ ಮಾಡುತ್ತಾ,ಯೋಜನೆಗಳನ್ನು ರೂಪಿಸಿಕೊಳ್ಳುತ್ತಾ ಪ್ರಸ್ತುತ ಜೀವನದ ಸುಖದ ಕ್ಷಣಗಳನ್ನು ಮರೆತರೆ ಅದಕ್ಕರ್ಥವಿಲ್ಲ.ಖುಷಿಯಿಂದಿರುವ ವ್ಯಕ್ತಿಗಳು ಹೆಚ್ಚಾಗಿ ಈ ಕ್ಷಣವನ್ನು ಅನುಭವಿಸುತ್ತಿರುತ್ತಾರೆ ಎಂಬುದು ಸಂಶೋಧನೆಗಳಿಂದಲೂ ತಿಳಿದುಬಂದಿದೆ.
    • ಬದುಕಿನ ಸಣ್ಣ ಸಣ್ಣ ಯಶಸ್ಸನ್ನೂ ಆನಂದಿಸಿ. ಇದರಿಂದ ಜೀವನಕ್ಕೆ ಮತ್ತಷ್ಟು ಸೂರ್ತಿ ಮತ್ತು ಪ್ರೇರಣೆ ಸಿಗುತ್ತದೆ. ಸಣ್ಣದೇ ಆಗಿರಬಹುದು ಅದರೆ ಅದನ್ನು ಅನುಭವಿಸುವುದರಿಂದ ಸಿಗುವ ಖುಷಿಯ ಮೊತ್ತ ದೊಡ್ಡದೇ ಆಗಿರುತ್ತದೆ.
    • ತನ್ನ ಬಳಿ ಏನಿದೆಯೋ ಅದರ ಬಗ್ಗೆ ಹೆಮ್ಮೆ ಇರಲಿ. ಏನಿಲ್ಲವೋ ಅದರ ಬಗ್ಗ ಚಿಂತೆ ಬೇಡ. ಪಾಲಿಗೆ ಬಂದದ್ದು ಪಂಚಾಮೃತ ಅನ್ನುತ್ತಾರಲ್ಲ. ಅಂತಹ ಮನಸ್ಥಿತಿ ಇರಲಿ.
    • ಕುಟುಂಬ, ಗೆಳೆಯರ ಬಳಗವನ್ನು ಗೌರವಿಸಿ. ಅವರ ಬಗ್ಗೆ ಹೆಮ್ಮೆ ಇರಲಿ. ಪ್ರೀತಿಪಾತ್ರರನ್ನು ಗೌರವಿಸುವುದರಿಂದ ಆದರದಿಂದ ಕಾಣುವುದರಿಂದ ಪರಸ್ಪರ ಬಾಂಧವ್ಯ ಚೆನ್ನಾಗಿರುತ್ತದೆ. ಕಷ್ಟಕಾಲದಲ್ಲಿಯೂ ನೆರವಾಗುತ್ತಾರೆ.
    • ಜೀವನ ಅನ್ನೋದು ಕ್ಷಣಿಕ. ಬದುಕಿನ ಬಗ್ಗೆ ನಿಖರತೆ ಇಲ್ಲ, ಇಲ್ಲಿ ಯಾವುದೂ ಕೂಡಾ ಶಾಶ್ವತ ಅಲ್ಲ. ಹಾಗಿರುವಾಗ ಜೀವನವನ್ನು ಪ್ರತಿಕ್ಷಣ ಖುಷಿಯಿಂದ ಅನುಭವಿಸಲಿಕ್ಕಾಗಿಯೇ ಇದ್ದೇನೆ ಎನ್ನುವ ಭಾವ ಇರಲಿ.

    Photo by Belle Co from Pexels

    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ. ಪದವಿ ಪಡೆದಿದ್ದು ಉಜಿರೆಯ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಕಾಲೇಜಿನಲ್ಲಿ. ಪತ್ರಿಕೋದ್ಯಮ ಪದವಿ ಮಂಗಳೂರು ವಿವಿ. ಆಸಕ್ತಿದಾಯಕ ಓದು ಇವರ ಬರವಣಿಗೆಯ ವಿಶೇಷ.
    spot_img

    More articles

    4 COMMENTS

    1. ಬದುಕನ್ನು ಪ್ರೀತಿಸುವ ಪರಿವರ್ತನೆ ಗೆ ಪೂರಕ ಲೇಖನ. ನಿಮ್ಮ ಚಿಂತನೆಗಳು ಪ್ರಸ್ತುತ ದಿನಗಳಿಗೆ ಅಗತ್ಯ ಹಾಗು ಮಾರ್ಗಸೂಚಿ

    2. ನಿಜ ಮೇಡಂ ನಾವೂ ಮಕ್ಕಳಂತೆ ಖುಷಿ ಪಡಬೇಕು. ಯಾರ ಬದುಕಿಗೂ ನಾವು ನಮ್ಮ ಜೀವನ ಹೋಲಿಕೆ ಮಾಡಿಕೊಳ್ಳದೇ ಇರುವುದರಲ್ಲಿ ತೃಪ್ತಿಯ ಬದುಕು ನಮ್ಮದಾಗಬೇಕು. ನೀವು ಹೇಳಿರುವ ಅಂಶಗಳು ಉತ್ತಮವಾಗಿದೆ. ಏನೇ ಬಂದರೂ ನಗು ನಗುತ್ತಾ ಇದ್ದು ಧೈರ್ಯದಿಂದ ಎದುರಿಸಬೇಕು. ಥ್ಯಾಂಕ್ಸ್ ಮೇಡಂ ನಿಮ್ಮ ಲೇಖನಕ್ಕೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!