28.1 C
Karnataka
Friday, May 10, 2024

    ಸಂಖ್ಯಾ ದರ್ಶನ!

    Must read

    ಕಳೆದವಾರ 3ನೇ ಏಪ್ರಿಲ್ 2023 ನಮ್ಮೆಲ್ಲರ ಅವಿಭಾಜ್ಯ ಅಂಗವಾಗಿರುವ ಈ ಮೊಬೈಲ್ ಫೋನಿನ 50ನೇ ವರ್ಷದ ಹುಟ್ಟು ಹಬ್ಬ! ಹೌದು 3ನೇ ಏಪ್ರಿಲ್ 1973 ರಂದು ಅಮೇರಿಕಾದ ಎಂಜಿನಿಯರ್ ಮಾರ್ಟಿನ್ ಕೂಪರ್ ಪ್ರಥಮ ಮೊಬೈಲ್ ನಿಂದ ನ್ಯೂಯಾರ್ಕ್ 6ನೇ ಅವೆನ್ಯೂ ನಿಂದ ಮೊದಲನೆಯ ಕರೆಯನ್ನು ಮಾಡಿ ಇದರ ಜನಕ ಅಂತ ಅನ್ನಿಸಿಕೊಂಡ. ಇದನ್ನು ತಯಾರಿಸಿದ್ದ ಕಂಪನಿಯ ಹೆಸರು ಮೊಟೊರಾಲಾ ಮತ್ತು ಇದರ ಹೆಸರು Dynatac 8000X. ಇದರ ತೂಕ 1100 ಗ್ರಾಮ್. ಇದನ್ನು 24 ಘಂಟೆ ಚಾರ್ಜ್ ಮಾಡಿದರೆ, 25 ನಿಮಿಷ ಬಳಸಬಹುದಿತ್ತು. ಇದನ್ನು ಬ್ಯಾಟರಿ ಸೆಲ್ ಗಳಿಂದ ಚಾರ್ಜ್ ಮಾಡೋದ್ರಿಂದ ಇದಕ್ಕೆ ಸೆಲ್ ಫೋನ್ ಅಂತಾನೂ ಹೆಸರು ಬಂತು!

    ನಂತರ ಇದರ ಬೆಳವಣಿಗೆ, ಇದರ ಅನಿವಾರ್ಯತೆ, ಇಡೀ ಮಾನವ ಜನಾಂಗದ ಅವಿಭಾಜ್ಯ ಅಂಗ ಆದದ್ದು ಮುಂದೊಂದು ದಿನ ಇತಿಹಾಸವಾಗಬಹುದು. ಮಾನವನ ಇತಿಹಾಸದಲ್ಲಿ ಅವಿಷ್ಕರಿಸಲ್ಪಟ್ಟ ಯಾವುದೇ ವೈಜ್ಞಾನಿಕ ಸಾಧನ ಇದರಷ್ಟು ವೇಗವಾಗಿ ಬೆಳೆದು,ಎಲ್ಲಾ ವಯೋಮಾನದ ಮಾನವರನ್ನು ತನ್ನ ತೆಕ್ಕೆಗೆ ಬೀಳಿಸಿ ಕೊಂಡಿದ್ದು ಯಾವುದೂ ಇಲ್ಲ.

    ಅಪ್ಪಾ, ಈ 1 ರಿಂದ 9 ಸಂಖ್ಯೆಗಳನ್ನು ಇಂಡೋ ಅರೇಬಿಕ್ ಸಂಖ್ಯೆಗಳು ಅಂತ ಯಾಕೆ ಕರೆದರು ಅಂತ 5ನೇ ತರಗತಿಯಲ್ಲಿ ಪ್ರಥಮವಾಗಿ ರೋಮನ್ ಸಂಖ್ಯೆ ಕಲಿಯುವಾಗ ಕೇಳಿದ್ದೆ. ವ್ಯಾಪಾರ ವ್ಯವಹಾರಗಳನ್ನು ಅರಬ್ಬರೊಂದಿಗೆ ನಾವುಗಳು ಮಾಡುವಾಗ ಬಹುಶಃ ಈ ಸಂಖ್ಯೆಗಳು ಸುಮಾರು 5ನೇ ಶತಮಾನದಲ್ಲಿ ಹುಟ್ಟಿಕೊಂಡಿರಬೇಕು. ನಾವು ಅರೇಬಿಕ್ ಸಂಖ್ಯೆ ಅಂತಾನೂ ಅವರು ಹಿಂದೂ ಸಂಖ್ಯೆ ಅಂತಾನೂ ಅಂದಿದ್ದಾರೆ. ನಂತರ ರೋಮನ್ ಸಂಖ್ಯೆ ಉಪಯೋಗಿಸುತ್ತಿದ್ದ ಯೂರೋಪ್ ನ್ನು ಇವುಗಳು ತಲುಪಿದಾಗ ಅವರು ಇವನ್ನು ಇಂಡೋ ಅರೇಬಿಕ್ ನ್ಯೂಮೆರಿಕಲ್ಸ್ ಅಂದಿದ್ದಾರೆ. ಇವುಗಳ ವಿನ್ಯಾಸದಲ್ಲಿ ಇಬ್ಬರ ಕೊಡುಗೆ ಇವೆ ಅಂತ ಸಂಶೋಧಕರು ಹೇಳ್ತಾರೆ ಆದ್ರೆ ನನಗೆ ಇವು ನಮ್ಮವೇ ಅನ್ನುವ ವಿಶ್ವಾಸ ಬಲವಾಗಿದೆ. ಯಾಕಂದ್ರೆ ಅರಬ್ಬರು ಕಂಡು ಹಿಡಿದಿದ್ರೆ ಇವುಗಳನ್ನು ಅವರ ಲಿಪಿಯಂತೆ ಬಲದಿಂದ ಎಡಕ್ಕೆ ಬರೀ ಬೇಕಾಗಿತ್ತು ಆದರೆ ಹಾಗಾಗದೆ ನಮ್ಮ ಲಿಪಿಗಳಂತೆ ಎಡಗಡೆಯಿಂದ ಬರೆಯುತ್ತಿದ್ದೇವೆ ಅಂದಿದ್ದರು!

    ಅಷ್ಟೇ ಅಲ್ಲ ಈ ಸಂಖ್ಯೆಗಳನ್ನು ಹೊತ್ತ ನಮ್ಮ ದೇಶದವನೊಬ್ಬ ಅರಬ್ಬ ದೊರೆಯ ಆಸ್ಥಾನದಲ್ಲಿ ಇವುಗಳನ್ನು ಪರಿಚಯಿಸಿದ್ದನ್ನು ಅರಬ್ಬರೇ ಉಲ್ಲೇಖಿಸಿದ್ದಾರೆ ಅಂದಿದ್ದರು. ಅದೇನೇ ಇರಲಿ ಈ ಸಂಖ್ಯೆಗಳು, ಅಕ್ಷರಗಳು ನನ್ನನ್ನು ಚಿಕ್ಕ ವಯಸ್ಸಿನಲ್ಲಿಯೇ ಕೌತುಕದೊಂದಿಗೆ ಆವರಿಸಿಕೊಂಡು ಬಿಟ್ಟಿದ್ದವು. ಇವುಗಳನ್ನು ಹೀಗೆಯೇ ಯಾಕೆ ಬರೀತಾರೆ ಅಂತ ಒಮ್ಮೆ ಕೇಳಿದ್ದ ನನ್ನನ್ನು ಅಪ್ಪ ಸುಮ್ಮನೆ ಸ್ವಲ್ಪ ಹೊತ್ತು ನೋಡಿ ಬಿಟ್ಟಿದ್ದರು!

    ಸಂಖ್ಯಾ, ಯೋಗ, ನ್ಯಾಯ, ವೈಶೇಷಿಕ, ಪೂರ್ವ ಮೀಮಾಂಸ, ಉತ್ತರ ಮೀಮಾಂಸ …..ಈ ಆರು ತತ್ವಗಳನ್ನು “ಷಡ್ ದರ್ಶನ” ಗಳು ಅಂತ ಕರೆದಿದ್ದಾರೆ ನಮ್ಮ ದಾರ್ಶನಿಕರು ಅಂತ ಮತ್ತೆ ಅಪ್ಪ ಸರಿ ಸುಮಾರು ಅದೇ ವಯಸ್ಸಲ್ಲಿ ಒಂದು ಬೇಸಿಗೆಯ ಮಧ್ಯಾನ್ಹ ಹೇಳಿದ್ದು, ಅಲ್ಲಿ ಈ ಸಂಖ್ಯಾ ಎನ್ನುವ ಶಬ್ದ ನನ್ನಲ್ಲಿ ಕುತೂಹಲ ಕೆರಳಿಸಿತ್ತು!

    ಆದರೆ ಈ ಸಂಖ್ಯಾ ಎನ್ನುವುದನ್ನು ನಮ್ಮ ದಾರ್ಶನಿಕರು ಜ್ಞಾನ ಅಂದಿದ್ದಾರೆ, ಜ್ಞಾನವೇ ಮುಕ್ತಿಗೆ ಮಾರ್ಗ ಅಂತ ಹೇಳುವ ತತ್ವಕ್ಕೆ ಸಂಖ್ಯಾ ದರ್ಶನ ಅಂದಿದ್ದಾರೆ ಅಂತ ಅಪ್ಪ ಹೇಳಿದಾಗ ನಿರಾಶೆ ಆಗಿತ್ತು! ಆದರೂ ಜ್ಞಾನ, ಸಂಖ್ಯೆ ಎರಡೂ ಶಬ್ದಗಳು ನನ್ನ ಸ್ಮೃತಿಪಟಲದಲ್ಲಿ ಹಾಗೇ ಸ್ಥಾನ ಮಾಡಿಕೊಂಡು ಆಗಾಗ ನನ್ನ ತಲೆ ತಿನ್ನುತ್ತಿದ್ದವು.

    ಈ ಆರು ದರ್ಶನಗಳನ್ನು ಆಸ್ತಿಕ ದರ್ಶನಗಳು ಅಂದು ಇವುಗಳು ವೇದ ಹೇಳಿದ್ದನ್ನು ಒಪ್ಪಿ, ದೇವರ ಇರುವನ್ನು ನಂಬುತ್ತವೆ ಅಂದಿದ್ದರು. ವೇದವನ್ನು ಒಪ್ಪದ, ದೇವರ ಅಸ್ತಿತ್ವವನ್ನು ನಿರಾಕರಿಸುವ ಇನ್ನೂ ಆರು ದರ್ಶನಗಳು ಇದ್ದು, ಅವುಗಳನ್ನು ನಾಸ್ತಿಕ ದರ್ಶನಗಳು ಅಂದಿದ್ದಾರೆ. ಅವು ಚಾರ್ವಾಕ, ಸೌತಂತ್ರಿಕ, ವೈಭಾಷಿಕ, ಯೋಗಾಕಾರ, ಮಾಧ್ಯಮಿಕ ಮತ್ತು ಅರ್ಹತ (ಜೈನ). ಮೊದಲ ನಾಲ್ಕು ದರ್ಶನಗಳು ಬುದ್ಧನ ಹೇಳಿಕೆಗೆ ಹತ್ತಿರವಿದ್ದು ಅವುಗಳ ಅನುಚರರಿಗೆ ಬುದ್ಧರು ಅಂದು, ಕೊನೆ ಎರಡು ದರ್ಶನಗಳನ್ನು ಜೈನ ದರ್ಶನ ಅಂದಿದ್ದಾರೆ ಅಂತ ಹೇಳಿದ್ದರು.

    ಆಗ ಇವ್ಯಾವೂ ನನಗೆ ಹಿಡಿಸದೆ ಈ ಸಂಖ್ಯಾ ದರ್ಶನ ಆಕರ್ಷಿಸಿತ್ತು. ಯಾಕೋ ಗೊತ್ತಿಲ್ಲ. ಆಳದಲ್ಲಿ ಇದೂ ದೇವರ ಇರುವನ್ನು ಒಪ್ಪದೇ ಜ್ಞಾನಕ್ಕೆ ಸರ್ವಶ್ರೇಷ್ಟತೆಯನ್ನು ಕೊಟ್ಟಿದೆ. ಹಾಗೆ ನೋಡಿದರೆ ಈ ಆಸ್ತಿಕ ಷಡ್ ದರ್ಶನಗಳು ದೇವರ ಇರುವನ್ನು ಎಲ್ಲೂ ಪ್ರತಿಪಾದಿಸಿಲ್ಲ! ಹಾಗೆ ದೇವರ ಇರುವನ್ನು ಒಪ್ಪಿ ಈ ಸೃಷ್ಟಿ ಅವನಿಂದಲೇ ಆಗಿದೆ ಅಂದ್ರೆ ಇಲ್ಲಿಯ ಕೆಡುಕುಗಳಿಗೂ ದೇವರು ಹೊಣೆ ಆಗಬೇಕಾದೀತು ಅಂತಲೋ, ದೇವರ ಇರುವು ಇವರು ಪ್ರತಿಪಾದಿಸುವ ತರ್ಕಗಳಿಗೆ ಸರಿ ಹೊಂದುವುದಿಲ್ಲ ಅಂತಲೋ ಒಟ್ಟು ನಿರಾಕರಿಸಿದ್ದಾರೆ!

    ದೇವರ ವಿಷಯ ಹೊರಗಿಟ್ಟು ನೋಡಿದ್ರೆ, ಈಗಿನ ಅರ್ಥದಲ್ಲಿ ತುಂಬಾ ತರ್ಕ ಬದ್ಧವಾದ, ವೈಜ್ಞಾನಿಕವಾದ ವಿಷಯಗಳ ಮಂಡನೆಗಳನ್ನು ಈ ದರ್ಶನಗಳಲ್ಲಿ ಕಾಣಬಹುದು. ಅದು ಯಾಕೆ ವೇದಗಳನ್ನು ಆಧರಿಸಿ ಇವುಗಳ ವಿಂಗಡಣೆ ಆಯ್ತೋ, ಇವುಗಳನ್ನು ಆಧರಿಸಿ ಧರ್ಮಗಳಾದವೂ, ಯಾರು ಮಾಡಿದರೋ ಕಾಣೆ!

    ನಮ್ಮ ನೆಲದ ವಿಶೇಷತೆಯೇ ಅದು. ಇಲ್ಲಿ ದಾರ್ಶನಿಕರು ತಾವು ಕಂಡು ಕೊಂಡದ್ದನ್ನು ಹೇಳಿದ್ದಾರೆಯೇ ಹೊರತು, ಯಾರ ಮೇಲೂ ಬಲವಂತವಾಗಿ ಹೇರಿಲ್ಲ! ಅವರವರ ವಿವೇಚನೆಗೆ ಬಿಟ್ಟು ಸಾತ್ವಿಕ ಚರ್ಚೆಗೆ ಅನುವು ಮಾಡಿಕೊಟ್ಟಿದ್ದಾರೆ. ಹಾಗಾಗಿ ಇಲ್ಲಿ ಇನ್ನೂ ಸಂಶಯಗಳು, ಚರ್ಚೆಗಳು ಚಾಲ್ತಿಯಲ್ಲಿವೆ….ಕೃಷ್ಣನೂ ಅರ್ಜುನನಿಗೆ ಭಗವದ್ಗೀತೆ ಉಪದೇಶಿಸಿ ಕೊನೆಯಲ್ಲಿ ನಿನ್ನ ವಿವೇಚನೆಗೆ ಬಿಟ್ಟಿದ್ದೇನೆ ಅಂದಿದ್ದಾನೆ. ಅಂದಿದ್ದರು ಅಪ್ಪ ಇತ್ತೀಚಿಗೆ!

    ಜ್ಞಾನ ವಿಶೇಷತೆಯ ಸಾಂಖ್ಯ ಎನ್ನುವ ಶಬ್ದಕ್ಕೆ ಆಧುನಿಕ 1 ರಿಂದ 9 ರ ಚಿಹ್ನೆಗಳಿಗೆ ಸಂಖ್ಯೆಗಳು ಅಂದದ್ದು ಯಾಕಿರಬಹುದು ಅನ್ನೋ ನನ್ನ ಕುತೂಹಲ ಇಂಗಿರಲಿಲ್ಲ!

    ಆಧುನಿಕ ಗಣಿತ, ವಿಜ್ಞಾನಕ್ಕೆ ಈ ಸಂಖ್ಯೆಗಳ ಕೊಡುಗೆ ಎಷ್ಟೆಂದು ವರ್ಣಿಸಲು ಈ ಲೇಖನ ಸಾಕಾಗಲ್ಲ. ಎಲ್ಲಾ ದಾರ್ಶನಿಕರೂ ತಮ್ಮ ತಮ್ಮ ತತ್ವಗಳನ್ನು ಪ್ರಚುರಪಡಿಸಿ, ಈ ತತ್ವಗಳು ಇಡೀ ವಿಶ್ವವನ್ನು ಆವರಿಸುತ್ತವೆ ಅಂತ ಹೇಳಿರುವ ಹೇಳಿಕೆಗಳು ಸಾಕಷ್ಟಿವೆ. ಹಾಗೆ ಈ ಸಾಂಖ್ಯರೂ ಹೇಳಿದ್ದನ್ನು ಅಪ್ಪ ಆಗಾಗ ನೆನಪಿಸುತ್ತಿದ್ದರು. ಜ್ಞಾನಕ್ಕೆ ಅತೀ ಅವಶ್ಯವಾದ ಈ ಚಿಹ್ನೆಗಳಿಗೆ ಸಂಖ್ಯೆ ಎಂದು ಇವುಗಳು ಈ ದಿನ ವಿಶ್ವವನ್ನು ಆವರಿಸಿರುವುದನ್ನು ಕಂಡಾಗ ಒಮ್ಮೊಮ್ಮೆ ಕಂಗಾಲಾಗಿದ್ದೇನೆ. ಸಂಖ್ಯೆಗಳೇ ನಮ್ಮ ದೈನಂದಿನ ಗುರುತಾಗಿದೆ. ಈಗಂತೂ ನಮ್ಮೆಲ್ಲಾ ಜಾತಕ ಹೇಳೋ ಆಧಾರ್ ಅನ್ನೋ ಸಂಖ್ಯೆಗಳು ನಮ್ಮ ಅಸ್ತಿತ್ವನ್ನು ನಿರ್ಧರಿಸಿ ಬಿಟ್ಟಿವೆ! ನಾವು ಉಪಯೋಗಿಸುವ ಮೊಬೈಲ್ ಸಂಖ್ಯೆಯಿಂದಾಗಿ ಈ ಸಂಖ್ಯೆಗಳೇ ನಮ್ಮ ಎಲ್ಲವೂ ಆಗಿ ಬಿಟ್ಟಿವೆ! ದೇವರನ್ನು, ಅಪ್ಪ ಅಮ್ಮನನ್ನು ನೆನೆಸದೇ ಇಂದು ಇರಬಹುದೇನೋ ಆದರೆ ಈ ಸಂಖ್ಯೆಗಳನ್ನು ಉಪಯೋಗಿಸದೆ ಜೀವನ ಅಸಾಧ್ಯ ಅನ್ನುವ ಸ್ಥಿತಿಗೆ ನಾವು ಬಂದಿದ್ದೇವೆ! ಈ ಸಾಂಖ್ಯ ದಾರ್ಶನಿಕರು ಇದನ್ನೇ ಹೇಳಲು ಪ್ರಯತ್ನಿಸಿದ್ದರಾ??

    ಕಪಿಲಾ ಮುನಿಯನ್ನು ಈ ದರ್ಶನದ ದಾರ್ಶನಿಕ ಅಂದು ವೈಶೇಷಿಕ ದರ್ಶನದ ದಾರ್ಶನಿಕ ಕನಾದ ಅಂದಿದ್ದಾರೆ. ಈಗ ಈ ಕನಾದನ ವೈಶೇಷಿಕ ಅಣು, ಪರಮಾಣು ಬಗ್ಗೆ ಹೇಳಿದೆ, ಅತೀ ಚಿಕ್ಕ ಸ್ಥಿತಿಯನ್ನು ಕಣ ಅಂತ ಕನಾದ ತನ್ನ ಹೆಸರನ್ನು ಕೊಟ್ಟಿದ್ದಾನೆ ಅಂತಿದ್ದಾರೆ.

    ನಾವು ಇಂದು ಉಪಯೋಗಿಸುತ್ತಿರುವ, ಇಡೀ ಜಗತ್ತನ್ನು ಮತ್ತೊಂದು ಮುಖದೆಡೆಗೆ ಕೊಂಡು ಹೋಗುತ್ತಿರುವ ಮೊಬೈಲ್, ಕಾಂಪುಟರ್ ಅನ್ನೋ ವೈಜ್ಞಾನಿಕ ಸಾಧನೆಗಳಿಗೆ ಆಹಾರವೇ ಈ ಸಂಖ್ಯೆಗಳು! ಈ ಯುಗವನ್ನು ಡಿಜಿಟಲ್ ಅಂದ್ರೆ ಸಂಖ್ಯೆಗಳ ಯುಗ ಅಂದಿದ್ದಾರೆ! ಸುಮಾರು 100 ವರ್ಷಗಳ ಹಿಂದೆ ಈ ಸಂಖ್ಯೆಗಳ ಪ್ರಾಮುಖ್ಯತೆ ಇಷ್ಟಾಗಬಹುದು ಎಂಬುದನ್ನು ಆಗಿನ ಪೀಳಿಗೆಯವರು ಊಹಿಸಲೂ ಸಾಧ್ಯವಿಲ್ಲ. ಆದರೂ ಸಾವಿರಾರು ವರ್ಷಗಳ ಹಿಂದೆ ಇವುಗಳ ಪ್ರಾಮುಖ್ಯತೆ ಹೇಳುವ ಸಂಖ್ಯಾ ದರ್ಶನವನ್ನು ನಾವು ತಪ್ಪಾಗಿ ಅರ್ಥೈಸಿಕೊಂಡೆವಾ? ಮತ್ತದೇ ದೇವರು,ವೇದ, ಆಸ್ತಿಕ,ನಾಸ್ತಿಕ ಅಂತ ನಮಗೆ ಆಗ ಗೊತ್ತಿರುವ ವಿಷಯಗಳಷ್ಟರಲ್ಲೇ ಇದನ್ನೂ ತಂದೆವಾ? ಶೂನ್ಯದಿಂದ ಏನೂ ಸೃಷ್ಟಿ ಆಗಲ್ಲ ಅಂತಲೂ, (ಕಾರಣ ಇಲ್ಲದೆ ಕಾರ್ಯ ಇಲ್ಲ) ಏನನ್ನೂ ನಾಶ ಪಡಿಸಲು, ಸೃಷ್ಠಿಸಲು ಆಗಲ್ಲ, ಒಂದು ವಿಧದಿಂದ ಮತ್ತೊಂದು ವಿಧಕ್ಕೆ ಬದಲಾಯಿಸಬಹುದು(Energy neither created nor destroyed but can only change from one form to another) ಎನ್ನುವಂತಹ ಮಹತ್ತರ ವೈಜ್ಞಾನಿಕ ವಿಷಯಗಳನ್ನು ತಿಳಿಸಿದ್ದ ಸಂಖ್ಯಾ ದರ್ಶನವನ್ನು ನಾವು ಬೇರೆ ದೃಷ್ಟಿಕೋನದಿಂದ ನೋಡಿ ಬಿಟ್ಟೆವಾ??

    ದರ್ಶನಗಳಲ್ಲೇ ಪುರಾತನವಾದ ಇದು ಪುರುಷ,ಪ್ರಕೃತಿಯ ಮೇಲೆ ಸೃಷ್ಠಿಯ ವಿಷಯ ಹೇಳುವ ಈ ಸಂಖ್ಯಾ ದರ್ಶನಕ್ಕೆ 24 ತತ್ವಗಳಿವೆ.
    5 ಕರ್ಮೇಂದ್ರಿಯಗಳು
    5 ಪಂಚ ವಾಯುಗಳು
    5 ಪಂಚೇಂದ್ರಿಯಗಳು
    5 ಪಂಚ ಭೂತಗಳು
    4 ಮನಸ್ಸು,ಬುದ್ಧಿ, ಪುರುಷ, ಪ್ರಕೃತಿ

    ಹೀಗಾಗಿ ಇವರಿಗೆ ಇದನ್ನು ಸಂಖ್ಯೆಗಳಲ್ಲಿ ಹೇಳುವ ಅನಿವಾರ್ಯತೆ ಉಂಟಾಗಿ ಪ್ರಥಮವಾಗಿ ಸಂಖ್ಯೆಗಳ ಉಗಮಕ್ಕೆ ಕಾರಣರಾಗಿ ತಮ್ಮ ತತ್ವಕ್ಕೆ ಸಾಂಖ್ಯ ದರ್ಶನ ಅಂತ ಹೆಸರಿಟ್ಟರಾ?

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!