22.9 C
Karnataka
Monday, May 25, 2026
    Home Blog Page 96

    ಆರ್ಥಿಕ ಪೇಟೆಯಲ್ಲಿ ಐಪಿಒ ಗಳ ತಾಂಡವ

    ಷೇರುಪೇಟೆಯಲ್ಲಿ ಹಣವನ್ನು ಬಹಳ ಸರಳವಾಗಿ ಸಂಪಾದಿಸಬಹುದು. ಇಲ್ಲಿ‌ ಷೇರುಗಳನ್ನು ಖರೀದಿಸಿ ದೀರ್ಘಕಾಲೀನ ಹೂಡಿಕೆ ಮಾಡಬಹುದು. ಅಲ್ಪಕಾಲೀನದ ಮಾರ್ಜಿನ್ ಟ್ರೇಡಿಂಗ್‌, ಡೇ ಟ್ರೇಡಿಂಗ್‌, ಬೈಟುಡೇ- ಸೆಲ್‌ ಟುಮಾರೊ ಯೋಜನೆ, ಡೆರಿವೆಟಿವ್ಸ್‌ ನಲ್ಲಿ ಬ್ಯಾಂಕ್‌ ನಿಫ್ಟಿ, ಆಪ್ಷನ್ಸ್‌, ಫ್ಯೂಚರ್ಸ್‌, ಅಲ್ಲದೆ ನಿರಂತರ ಆದಾಯಕ್ಕೆ ಆಕರ್ಷಕ ಬಡ್ಡಿದರದ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್‌ ಗಳ ಬಾಂಡ್‌ ಗಳಲ್ಲಿ ವ್ಯವಹರಿಸಬಹುದು. ಸವರಿನ್‌ ಗೋಲ್ಡ್‌ ಬಾಂಡ್‌ ಗಳ ವಹಿವಾಟು ನಡೆಸಬಹುದು. ಇಷ್ಟೆಲ್ಲಾ ಅವಕಾಶಗಳಿದ್ದರೂ ನಮ್ಮ ದೇಶದ ಸುಮಾರು 7 ಕೋಟಿ ಜನರು ಮಾತ್ರ ಭಾಗವಹಿಸುತ್ತಿರುವುದು ನಮ್ಮ ಜನರಲ್ಲಿ ಮೂಡಿರುವ ಭಯ ಮತ್ತು ತಪ್ಪು ಕಲ್ಪನೆಯಾಗಿದೆ.

    ಇನ್ಫೋಸಿಸ್‌ ಷೇರುದಾರರ ವಿಜೃಂಭಣೆ:

    ಬೆಂಗಳೂರು ಇನ್ಫೋಸಿಸ್‌ಕಚೇರಿ ಕಟ್ಟಡ | ಚಿತ್ರ ಕೃಪೆ ವಿಕಿಪಿಡಿಯಾ

    ಸಾಮಾನ್ಯವಾಗಿ ಷೇರುಪೇಟೆಯ ಬಗ್ಗೆ ಮಾತನಾಡುವಾಗ ತೇಲಿಬರುವ ನುಡಿ ಮುತ್ತುಗಳೆಂದರೆ 1994 ರಲ್ಲಿ ಇನ್ಫೋಸಿಸ್‌ ಕಂಪನಿಯ 100 ಷೇರನ್ನು ರೂ.95 ರಂತೆ ಖರೀದಿಸಿದವರ ಹೂಡಿಕೆ ಇಂದು ಸುಮಾರು 1,02,400 ಷೇರುಗಳಾಗಿ ಬೆಳೆದಿದೆ2005 ಅಲ್ಲದೆ ಲಕ್ಷೋಪಲಕ್ಷ ರೂಪಾಯಿಗಳನ್ನು ಡಿವಿಡೆಂಡ್‌ ರೂಪದಲ್ಲಿ ವಿತರಿಸಿದ್ದಾರೆ ಎಂಬುದಾಗಿದೆ.

    ಪ್ರವರ್ತಕರ ಉದ್ದೇಶ:

    ಇದೇ ರೀತಿ ಹೂಡಿಕೆದಾರರ ಬಂಡವಾಳವನ್ನು ಹಲವು ಪಟ್ಟು ಹೆಚ್ಚಿಸಿದ ಅನೇಕ ಕಂಪನಿಗಳಿವೆ. ವಿಪ್ರೊ, ಎಚ್‌ ಡಿ ಎಫ್‌ ಸಿ, ಟಿಸಿಎಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಮುಂತಾದವುಗಳು ಸಹ ಹೂಡಿಕೆದಾರರನ್ನು ಆಕರ್ಷಕ ಕಾರ್ಪೊರೇಟ್‌ ಫಲಗಳನ್ನು ವಿತರಿಸುವ ಮೂಲಕ ಹರ್ಷೋಲ್ಲಾಸಗಳಲ್ಲಿ ತೇಲಿಸಿವೆ. ಅವರ ಬಂಡವಾಳವನ್ನು ಹಲವು ಪಟ್ಟು ಹೆಚ್ಚಸಿವೆ. ಅಂದರೆ ಹೂಡಿಕೆ ಮಾಡಿದವರು ತಮ್ಮ ಹೂಡಿಕೆಯನ್ನು ಹತ್ತಾರು ವರ್ಷಗಳ ಕಾಲ ಮುಂದುವರೆಸಬೇಕು, ಹಾಗಿದ್ದಾಗ ಮಾತ್ರ ಉತ್ತಮ ಫಲ, ಫಲಿತಾಂಶ ಪಡೆಯಲು ಸಾಧ್ಯ ಎಂಬುದು ನಿರ್ವಿವಾದ.

    ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಷೇರು ವಿತರಿಸಿದ ಕಂಪನಿಯ ಮೂಲ ಉದ್ದೇಶ. ವಿತರಣೆಯ ಸಮಯದಲ್ಲಿ ಕಂಪನಿಯ ಪ್ರವರ್ತಕರಿಗೆ ಕೇವಲ ಕಂಪನಿಗ ಅವಶ್ಯವಿರುವ ಸಂಪನ್ಮೂಲ ಸಂಗ್ರಹಿಸಿ, ಆಶ್ವಾಸನೆ ನೀಡಿದ ಅಂಶಗಳನ್ನು ಈಡೇರಿಸುವುದಾಗಿತ್ತು. ಹಾಗಾಗಿ ಐಪಿಒ ವಿತರಣೆ ಬೆಲೆಗಳನ್ನು ಕಡಿಮೆ ಬೆಲೆಯಲ್ಲಿ ನಿಗದಿಪಡಿಸಿದ್ದವು. ಹಾಗಾಗಿ ಷೇರುದಾರರನ್ನು ಸಂತೋಷಪಡಿಸುವ ಮಟ್ಟದಲ್ಲಿ ಕಾರ್ಪೊರೇಟ್‌ ಫಲಗಳನ್ನು ಹಂಚಿವೆ.

    ಎಲ್ಲಾ ಐಪಿಒಗಳು ಅನುಕೂಲಕರವಲ್ಲ. ಕೆಲವು ಉದಾಹರಣೆಗಳು ಇಂತಿವೆ.

    ಜೆಟ್‌ ಏರ್ವೇಸ್‌:2005 ರಲ್ಲಿ ಪ್ರತಿ ಷೇರಿಗೆ ರೂ.1.100 ರಂತೆ ವಿತರಿಸಿದ ಜೆಟ್‌ ಏರ್ವೇಸ್‌ ಷೇರು ರೂ.90 ರ ಸಮೀಪ, Z ಗುಂಪಿನಲ್ಲಿ ವಹಿವಾಟಾಗುತ್ತಿದೆ.

    ಪಿ ಎನ್‌ ಬಿ ಹೌಸಿಂಗ್‌ ಫೈನಾನ್ಸ್‌:2016 ರಲ್ಲಿ ಪ್ರತಿ ಷೇರಿಗೆ ರೂ.775 ರಂತೆ ವಿತರಿಸಿದ ಪಿ ಎನ್‌ ಬಿ ಹೌಸಿಂಗ್‌ ಫೈನಾನ್ಸ್‌ ನವೆಂಬರ್‌ 2018 ರಲ್ಲಿ ರೂ.1,000 ದಾಟಿ ಇಳಿದ ಮೇಲೆ, ಇತ್ತೀಚೆಗೆ ಕಂಪನಿಯ ಸ್ಟೇಕ್‌ ಸೇಲ್‌ ಆದ ನಂತರ ರೂ.924 ರವರೆಗೂ ಏರಿಕೆ ಕಂಡು ಕೇವಲ 8-10 ದಿನಗಳಲ್ಲಿ ರೂ.700 ರ ಸಮೀಪಕ್ಕೆ ಕುಸಿದು, ಈಗಲೂ ವಿತರಣೆ ಬೆಲೆ ತಲುಪದಾಗಿದೆ.

    ಆಂಜನೇಯ ಲೈಫ್‌ ಕೇರ್‌ ಲಿಮಿಟೆಡ್:2011‌ ರಲ್ಲಿ ಪ್ರತಿ ಷೇರಿಗೆ ರೂ.240 ರಂತೆ ಷೇರು ವಿತರಣೆ ಮಾಡಿ ಷೇರುಪೇಟೆಯಲ್ಲಿ ಲಿಸ್ಟಿಂಗ್‌ ಮಾಡಿಕೊಂಡ ಈ ಕಂಪನಿ ಷೇರು 2013 ರಲ್ಲಿ ರೂ.700 ರ ಗಡಿದಾಟಿತಾದರೂ ಚೇತರಿಸಿಕೊಳ್ಳಲಾಗದೆ ಕುಸಿಯ ತೊಡಗಿತು. ನಂತರ ಕಂಪನಿಯು ತನ್ನ ಹೆಸರನ್ನು ಡಾಕ್ಟರ್‌ ಡಾಟ್ಸನ್ಸ್‌ ಲ್ಯಾಬ್‌ ಎಂದು ಬದಲಿಸಿಕೊಂಡರೂ ಸುಧಾರಣೆಗೊಳ್ಳಲು ವಿಫಲವಾಗಿ, ಡಿಲೀಸ್ಟ್‌ ಆಗಿ ನಿರ್ಗಮಿಸಿದೆ. ಈ ಕಂಪನಿಯ ವಿತರಣೆಯ ಸಮಯದಲ್ಲಿ ಈ ವಿತರಣೆಗೆ ಅತ್ಯುತ್ತಮ ಕಂಪನಿ ರೇಟಿಂಗ್‌ ಸಹ ನೀಡಲಾಗಿತ್ತು.

    ನಾರಾಯಣ ಹೃದಯಾಲಯ ಲಿಮಿಟೆಡ್:‌2015 ರಲ್ಲಿ ಪ್ರತಿ ಷೇರಿಗೆ ರೂ.250 ರಂತೆ ಐಪಿಒ ಮೂಲಕ ವಿತರಣೆ ಮಾಡಿದ ನಂತರ 2018 ರಲ್ಲಿ ರೂ.191, 2019 ರಲ್ಲಿ ರೂ.181 ರವರೆಗೂ ಕುಸಿದ ನಂತರ 2021 ರಲ್ಲಿ ರೂ.566 ರವರೆಗೂ ಏರಿಕೆ ಕಂಡು ರೂ.458 ರ ಸಮೀಪವಿದೆ. ಈ ಕಂಪನಿಯು ಉತ್ತಮ ಬ್ರಾಂಡ್‌ ಹೊಂದಿದ್ದು ಚೇತರಿಕೆ ಕಾಣಲು ಹೆಚ್ಚಿನ ಸಮಯವನ್ನು ತೆಗೆದುಕೊಂಡಿದೆ.

    ಹೆಲ್ತ್‌ ಕೇರ್‌ ಗ್ಲೋಬಲ್‌ ಎಂಟರ್‌ ಪ್ರೈಸಸ್‌ :2016 ರಲ್ಲಿ ಪ್ರತಿ ಷೇರಿಗೆ ರೂ.218 ರಂತೆ ಐಪಿಒ ಮೂಲಕ ವಿತರಣೆ ಮಾಡಿ ಸಧ್ಯ ರೂ.193 ರ ಸಮೀಪ ವಹಿವಾಟಾಗುತ್ತಿದೆ.

    • 2011 ರಲ್ಲಿ ಪ್ರತಿ ಷೇರಿಗೆ ರೂ.100 ರಂತೆ ವಿತರಣೆ ಮಾಡಿದ ಬ್ರೂಕ್ಸ್‌ ಲ್ಯಾಬೊರೇಟರೀಸ್‌ ಷೇರು ರೂ.95 ರ ಸಮೀಪ ವಹಿವಾಟಾಗುತ್ತಿದೆ.
    • ಅದೇ ವರ್ಷ ರೂ.150 ರಂತೆ ವಿತರಣೆಯಾದ ತಕ್ಷೀಲ್‌ ಸೊಲುಷನ್ಸ್ ಕಂಪನಿ ಷೇರು ವಹಿವಾಟಿನಿಂದ ಡಿಲೀಸ್ಟ್‌ ಆಗಿದೆ.
    • ಅದೇ ಸಮಯದಲ್ಲಿ ಪ್ರತಿ ಷೇರಿಗೆ ರೂ.60 ರಂತೆ ವಿತರಣೆಯಾದ ತಿಜಾರಿಯಾ ಪೊಲಿಪೈಪ್ಸ್‌ ಷೇರಿನ ಬೆಲೆ ಈಗ ರೂ.9 ರ ಸಮೀಪವಿದೆ.
    • 2010 ರಲ್ಲಿ ಪ್ರತಿ ಷೇರಿಗೆ ರೂ.355 ರಂತೆ ವಿತರಣೆ ಮಾಡಿ ಪೇಟೆ ಪ್ರವೇಶಿಸಿದ ಟೆಕ್‌ ಪ್ರೋ ಸಿಸ್ಟಮ್ಸ್‌ ಷೇರು ಈಗ ಡಿಲೀಸ್ಟ್‌ ಆಗಿ ಷೇರುದಾರರ ಬಂಡವಾಳ ಕರಗಿಸಿದೆ.
    • ಪ್ರತಿ ಷೇರಿಗೆ ರೂ.175 ರಂತೆ ವಿತರಣೆ ಮಾಡಿದ ಎರೊಸ್‌ ಇಂಟರ್‌ ನ್ಯಾಶನಲ್‌ ಮೀಡಿಯಾ ಕಂಪನಿ ಷೇರಿನ ಬೆಲೆ ಪ್ರಸ್ತುತ ರೂ.29 ರಲ್ಲಿದೆ.

    ಅಂದರೆ ಯಾವುದಾದರೂ ಒಂದು ವಿಶ್ಲೇಷಣೆ ಬಂದಾಗ ಕೇವಲ ಆ ಅಂಶಗಳಿಗೆ ಅಂಟಿಕೊಂಡು ನಿರ್ಧರಿಸುವ ಮುನ್ನ ಅದರ ಹಿಂದೆ ಅಡಕವಾಗಿರುವ ಅಪಾಯ ಮತ್ತು ಅನುಕೂಲಗಳನ್ನೂ ಸಹ ಪರಿಶೀಲಿಸಿ, ತೂಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳವುದು ಬಂಡವಾಳ ಸುರಕ್ಷತೆಗೆ ಅತಿ ಮುಖ್ಯ.

    • ವಿತರಣೆಯಲ್ಲಿ ಪ್ರವರ್ತಕರು ಹೊಂದಿರುವ ಭಾಗಿತ್ವದ ಬೆಲೆಯನ್ನು ಸಹ ಪ್ರಕಟಿಸುವರು. ಉದಾಹರಣೆಗೆ
    1. ಸೋನಾ ಬಿ ಎಲ್‌ ಡಬ್ಲು ಪ್ರಿಸಿಷನ್‌ ಫೋರ್ಜಿಂಗ್ಸ್‌ ಲಿ ಕಂಪನಿಯ ವಿತರಣೆ ಬೆಲೆ ಬ್ಯಾಂಡ್‌ ರೂ.285 ರಿಂದ ರೂ.291. ಇಲ್ಲಿ ಕಂಪನಿಯ ಪ್ರವರ್ತಕರಾದ ಸಿಂಗಪೂರ್ VIIಟಾಪ್ಕೊ III PTE ಲಿ 52‌,500 ದಶಲಕ್ಷ ಷೇರುಗಳನ್ನು ಮಾರಾಟವು ಸೇರಿದ್ದು ಹೊಸದಾಗಿ ವಿತರಣೆಯಾಗುತ್ತಿರುವುದು ಮಾತ್ರ 3,000 ದಶಲಕ್ಷ ಷೇರುಗಳು ಮಾತ್ರ. ಮತ್ತೊಂದು ಪ್ರಮುಖ ಅಂಶ ಎಂದರೆ ಪ್ರವರ್ತಕರ ಭಾಗಿತ್ವದ ಷೇರಿನ ಖರೀದಿ ಬೆಲೆ ಪ್ರತಿ ಷೇರಿನ ಬೆಲೆ(Cost of acquisition) ರೂ.32.34 ಮಾತ್ರ. ಅಂದರೆ ರೂ.32.34 ರ ಷೇರನ್ನು ಪ್ರವರ್ತಕರು ರೂ.291 ರಲ್ಲಿ ಮಾರಾಟಮಾಡುತ್ತಿರುವ ಪ್ರಕ್ರಿಯೆಯಲ್ಲಿ ಸಂಪಾದನೆಯಾಗುತ್ತಿರುವುದು ಯಾರಿಗೆ ಎಂದು ತಿಳಿಯುತ್ತದೆ. ಈ ಬೆಲೆಯಲ್ಲಿ ಖರೀದಿ ಮಾಡಿದಲ್ಲಿ ಲಾಭ ಗಳಿಕೆ ಸಾಧ್ಯವೇ ಎಂಬ ಅಂಶವನ್ನು ವಿಶ್ಲೇಷಿಸಿಕೊಂಡು ನಿರ್ಧರಿಸಬೇಕು.
    2. ಕೃಷ್ಣ ಇನ್ಸ್‌ ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಲಿ. ಕಂಪನಿಯು ರೂ.815 ರಿಂದ ರೂ.825 ರ ಬ್ಯಾಂಡ್‌ ನಲ್ಲಿ ವಿತರಿಸಿದೆ. ಇದರಲ್ಲಿ ಪ್ರವರ್ತಕರಾದ ಡಾ.ಭಾಸ್ಕರ್‌ ರಾವ್‌ ರವರಾದಿಯಾಗಿ ಇತರೆ ಪ್ರವರ್ತಕರೂ ಸೇರಿ 60 ಲಕ್ಷ ಷೇರುಗಳನ್ನು ಮಾರಾಟಮಾಡುತ್ತಿದ್ದು, ಇತರೆ ಷೇರುದಾರರೂ ಸೇರಿ ಒಟ್ಟು 2.35 ಕೋಟಿ ಷೇರನ್ನು ಆಫರ್‌ ಫಾರ್‌ ಸೇಲ್‌ ಮಾಡುತ್ತಿದ್ದು ಹೊಸದಾಗಿ ಕೇವಲ ರೂ.200 ಕೋಟಿ ಮೌಲ್ಯದ್ದಾಗಿದೆ. 200 ಕೋಟಿ ರೂಪಾಯಿ ಅಂದರೆ ಸುಮಾರು 25 ಲಕ್ಷ ಷೇರುಗಳು ಮಾತ್ರ. ಪ್ರವರ್ತಕರು / ಷೇರುದಾರರು ಪಡೆದ ಷೇರಿನ ಬೆಲೆ (Cost of acquisition) ರೂ.5.15 ರಿಂದ ರೂ.360 ರವರೆಗೂ ಇದ್ದು, ಈ ಬೆಲೆಯ ಷೇರನ್ನು ರೂ.825 ರಲ್ಲಿ ವಿತರಿಸಿದಲ್ಲಿ ಆರಂಭದಲ್ಲಿಯೇ ಲಾಭ ಯಾರಿಗೆ ಮತ್ತು ಲೀಸ್ಟಿಂಗ್‌ ಆದ ಮೇಲೆ ದೊರೆಯಬಹುದಾದ ಬೆಲೆ ಏನು? ಎಂಬುದನ್ನು ತುಲನಾತ್ಮಕವಾಗಿ ಪರಿಶೀಲಿಸಿ ನಿರ್ಧರಿಸಬೇಕಲ್ಲವೇ?
    3. ಡೋಡ್ಲ ಡೈರಿ ಲಿ ಕಂಪನಿಯು ವಿತರಣೆ ಮಾಡಿದ ಬ್ಯಾಂಡ್‌ ರೂ.421 ರಿಂದ ರೂ.428. ಪ್ರವರ್ತಕರು / ಷೇರುದಾರರು 1.09 ಕೋಟಿ ಷೇರನ್ನು ಮಾರಾಟಮಾಡುತ್ತಿದ್ದರೆ ಹೊಸದಾಗಿ ವಿತರಣೆಯಾಗುತ್ತಿರುವುದು ಮಾತ್ರ ಸುಮಾರು 11.7 ಲಕ್ಷ ಷೇರು ಮಾತ್ರ. ಪ್ರವರ್ತಕರು ಮತ್ತು ಷೇರುದಾರರು ಹೊಂದಿರುವ ಷೇರಿನ ಬೆಲೆ (Cost of acquisition) ರೂ.0.37 ರಿಂದ ರೂ.213.39 ಮಾತ್ರ.

    ಈ ಮಟ್ಟದ ಪ್ರೀಮಿಯಂ ನಲ್ಲಿ ಷೇರು ವಿತರಣೆಯಾದಲ್ಲಿ ಷೇರು ಅಲ್ಲಾಟ್‌ ಅದವರು ಯಾವ ರೀತಿ ಲಾಭ ಗಳಿಸಬಹುದು ಎಂಬುದನ್ನು ವಾಸ್ತವವಾಗಿ ಸ್ಟಾಕ್‌ ಎಕ್ಸ್‌ ಚೇಂಜ್‌ ಗಳಲ್ಲಿ ಷೇರುಗಳು ಲಿಸ್ಟಿಂಗ್‌ ಆದಾಗ ಮಾತ್ರ ಅರಿವಾಗುವುದು. ಲಿಸ್ಟಿಂಗ್‌ ದಿನದ ಪೇಟೆಯ ವಾತಾವರಣವೂ ಸಹ ಮುಖ್ಯ ಕಾರಣವಾಗಿರುತ್ತದೆ.

    ಐಪಿಒ ಗಳಲ್ಲಿ ಷೇರುದಾರರು ಮಾರಾಟಮಾಡುವ ಆಫರ್‌ ಫಾರ್‌ ಸೇಲ್‌ ಅಂದರೆ ಹೆಚ್ಚಿನ ಪ್ರಕರಣಗಳಲ್ಲಿ ಅದು ವೆಂಚರ್‌ ಕ್ಯಾಪಿಟಲ್‌ ಅಥವಾ ಪ್ರೈವೇಟ್‌ ಈಕ್ವಿಟಿ ಇನ್ವೆಸ್ಟರ್‌ ಸಂಸ್ಥೆಗಳಾಗಿರುತ್ತವೆ. ಈ ಸಂಸ್ಥೆಗಳು ಕಂಪನಿಗಳು ತಮ್ಮ ಕಾರ್ಯ ನಿರ್ವಹಿಸುತ್ತಿರುವಾಗ ಅಥವಾ ಸ್ಟಾರ್ಟ್‌ ಅಪ್‌ ಸಂದರ್ಭದಲ್ಲಿ ಅವುಗಳಿಗೆ ಅವಶ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಒದಗಿಸಿ ಬೆಂಬಲಿಸಿರುತ್ತಾರೆ. ಐಪಿಒ ಸಂದರ್ಭದಲ್ಲಿ ಆ ಷೇರು ಮಾರಾಟಮಾಡಿ ತಮ್ಮ ಹಣವನ್ನು ಹಿಂಪಡೆಯುತ್ತವೆ.

    ಮತ್ತೊಂದು ಪ್ರಮುಖವಾದ ಅಂಶವೆಂದರೆ, ಕಂಪನಿಗಳು ಐಪಿಒ ಗಳಿಗೂ ಮುಂಚೆ ಅನಧಿಕೃತವಾದ ಅಂದರೆ ಲಿಸ್ಟಿಂಗ್‌ ಆಗದೆ ಇರುವ ಕಂಪನಿಗಳ ಷೇರಿನ ದರಗಳನ್ನು ಬಿಂಬಿಸುವ ʼ ಗ್ರೇ ಮಾರ್ಕೆಟ್‌ʼ ವೇದಿಕೆ. ಇದಕ್ಕೆ ಯಾವುದೇ ನಿಯಮಗಳು ಅನ್ವಯವಾಗದ ವೇದಿಕೆ. ಆದರೆ ಇತ್ತೀಚೆಗೆ ಗ್ರೇ ಮಾರ್ಕೆಟ್‌ ದರಗಳಿಗೆ ಹೆಚ್ಚು ಹೆಚ್ಚು ಪ್ರಚಾರ ನೀಡಿ ಸಂಬಂಧಿತ ಐಪಿಒ ಗಳಿಗೆ ಅರ್ಜಿ ಸಲ್ಲಿಸಲು ಪ್ರೇರೇಪಿಸಲಾಗುತ್ತಿದೆ. ಇದಕ್ಕೆ ಯಾವ ರೀತಿಯ ಲಂಗು ಲಗಾಮು ಇಲ್ಲದೆ ಇದ್ದು, ಇಲ್ಲಿ ವ್ಯವಹರಿಸಿದಲ್ಲಿ ಉಂಟಾಗುವ ತಗಾದೆಗಳಿಗೆ ಪರಿಹಾರವೇ ಇರದೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಕೇವಲ ಪ್ರೇರೇಪಿಸುವ ಧ್ಯೇಯದಿಂದ ಹೊರಬರುವ ಪ್ರೀಮಿಯಂ ದರಗಳಿಗೆ ಹೆಚ್ಚಿನ ಗಮನ ನೀಡುವುದು ಸರಿಯಲ್ಲ.

    ಕಮಿಷನ್‌ ಇಲ್ಲದೆ ವಿಮೆ ಮಾಡಿ, ಬ್ರೋಕರೇಜ್‌ ಇಲ್ಲದೆ ಷೇರು ವ್ಯವಹಾರ ಮಾಡಿ, ಲಾಭ ಗಳಿಸಿದಲ್ಲಿ ಮಾತ್ರ ಬ್ರೋಕರೇಜ್‌ ನೀಡಿ, ಮುಂತಾದವುಗಳಿಂದ ದೂರವಿದ್ದರೆ ಮಾತ್ರ ಸುರಕ್ಷತೆ. ಕಮೀಷನ್‌ ಬಗ್ಗೆ ಹೆಚ್ಚು ಯೋಚಿಸದೆ ಆ ವಿಮಾ ಯೋಜನೆಯಲ್ಲಿರುವ ಅನುಕೂಲಕರ ಅಂಶಗಳನ್ನು ವಿಮರ್ಶಿಸಿ ನಿರ್ಧರಿಸಬೇಕು. ಬ್ರೋಕರೇಜ್‌ ನೀಡುವುದು ಅವರಿಂದ ಪಡೆಯಬಹುದಾದ ಸೇವೆಗೆ ನೀಡುವ ಶುಲ್ಕವೇ ಹೊರತು ಅದು ಹೊರೆಯಾಗುವುದಿಲ್ಲ. ಅಲ್ಲದೆ ಬ್ರೋಕರೇಜ್‌ / ಕಮೀಷನ್‌ ಗಳು ನಮ್ಮ ಬೇಕಾಬಿಟ್ಟಿ ನಿರ್ಧಾರಗಳಿಗೆ ಬ್ರೆಕ್‌ ಹಾಕುತ್ತದೆ. ಬಂಡವಾಳ ಸುರಕ್ಷತೆಗೆ ಪೂರಕವಾಗಿರುತ್ತದೆ. ಹೆಚ್ಚಿನ ಅನುಕೂಲಗಳು ದೊರೆಯಬೇಕಾದರೆ, ವೃತ್ತಿಪರ ಶುಲ್ಕ ನೀಡುವುದು ತೃಪ್ತಿಕರವಾಗಿರುತ್ತದೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಐಪಿಒಗಳ ಬಗ್ಗೆ ಬರಬಹುದಾದ ವಿಶ್ಲೇಷಣೆಗಳನ್ನು ತುಲನಾತ್ಮಕವಾಗಿ ಪರಿಶೀಲಿಸಬೇಕಾಗಿರುವುದು ಸೂಕ್ತ. ಕೇವಲ ವರ್ಣರಂಜಿತ ವಿವರಣೆಗಳಿಗೆ ಸ್ಪಂದಿಸುವುದು ಅಪಾಯಕ್ಕೆ ಅಹ್ವಾನ.ಅಂದು ಜನ ಸಾಮಾನ್ಯರ ಹೂಡಿಕೆ ಬಗ್ಗೆ ಅತಿಯಾದ ಕಾಳಜಿ ಇತ್ತು, ಆದರೆ ಈಗ ಪ್ರವರ್ತಕರ ಮತ್ತು ಫಂಡಿಂಗ್ ಷೇರುದಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಹೂಡಿಕೆದಾರರಾಗಿ ನಮ್ಮ ಸುರಕ್ಷಾ ಚಕ್ರವನ್ನು ನಾವೇ ನಿರ್ಮಿಸಿಕೊಳ್ಳಬೇಕಾಗಿದೆ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಈ ಮಧ್ಯಾಹ್ನದ ಹೆಡ್ ಲೈನ್

    ದೇಶ

    ಜಗತ್ತಿನಲ್ಲಿ ಎಂದೂ ಬದಲಾಗದ ವ್ಯಕ್ತಿತ್ವ ಅಪ್ಪ


    ಇಂದು ಅಪ್ಪಂದಿರ ದಿನ. ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪತ್ರಿಕೋದ್ಯಮ ಪದವಿಯ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಪ್ರಿತೀಯ ಅಪ್ಪನ ಬಗ್ಗೆ ಬರೆದಿದ್ದಾರೆ.


    ಆತ್ಮಸಾಕ್ಷಿಯನ್ನು ಪ್ರಜ್ವಲಗೊಳಿಸುವ ದಿವ್ಯಶಕ್ತಿ

    ದಿವ್ಯಶ್ರೀ

    ಅಪ್ಪ ಬಾಲ್ಯ ಕಾಲದಲ್ಲಿ ಶಿಸ್ತುಸಂಸ್ಕಾರಗಳ ಕಲಿಕೆಯ ಸಂವಾಹಕ ಶಕ್ತಿ. ಯೌವನದ ಸಂದಭ೯ದಲ್ಲಿ ಆತ್ಮಸಾಕ್ಷಿಯನ್ನು ಪ್ರಜ್ವಲಗೊಳಿಸುವ ದಿವ್ಯಶಕ್ತಿ. ಗೃಹಸ್ಥ, ನಿವ೯ಹಣೆಯ ವೇಳೆ ಸರಿ-ತಪ್ಪುಗಳನ್ನು ಗುರುತಿಸಿ ವಿವೇಚನೆ ಹೊಳೆಸುವ ಹೊಂಬೆಳಕು.

    ಎಲ್ಲಕ್ಕಿಂತ ಹೆಚ್ಚಾಗಿ ಹೊಸಕಾಲವನ್ನು ಹಾದುಹೋಗುವುದಕ್ಕೆ ಬೇಕಾದ ಸಾಮಥ್ಯ೯ ದಾಟಿಸುವ ಚೈತನ್ಯ ಅಪ್ಪ. ಭಾವುಕತೆಯ ಕಣ್ಣಲ್ಲಿ ಅಥೈ೯ಸುವಾಗ ಅಪ್ಪನ ಆ ವ್ಯಕ್ತಿತ್ವದ ಅಗಾಧತೆಯ ಸಮಗ್ರತೆ ತಿಳಿವಿಗೆಟಕುವುದಿಲ್ಲ. ಅಪ್ಪ ಎಂಥದ್ದೇ ಬಿಕ್ಕಟ್ಟಿನ ಸಂದಭ೯ ಎದುರಾದರೂ ನ್ಯಾಯಯುತ ಮಾಗ೯ ಬಿಟ್ಟುಕೊಡಬಾರದು ಎಂಬ ಪ್ರಜ್ಞೆ ಮಕ್ಕಳೊಳಗೆ ಸಮ್ಮಿಳಿತಗೊಳಿಸುತ್ತಾನೆ. ಈ ಮೂಲಕ ಆತ್ಮವಿಶ್ವಾಸ, ನೈತಿಕ ಸ್ಥೈರ್ಯ ಜೊತೆಯಾಗುತ್ತವೆ.

    ಅಪ್ಪನ ವ್ಯಕ್ತಿತ್ವವನ್ನು ಪದಗಳ ಪುಂಜದೊಳಗೆ ಪೋಣೆಸೋದು ಕಷ್ಟ. ಅಪ್ಪ ಜೊತೆಯಲ್ಲಿದ್ದರೆ ಅದೇನೋ ಹೇಳತೀರದ ಭದ್ರತೆಯ ಭಾವ. ನೂರಾರು ಕಷ್ಟಗಳನ್ನು ಎದೆಯಲ್ಲೇ ಬಚ್ಚಿಟ್ಟುಕೊಂಡು ನಗುತ್ತಲೇ ಇರುವವನು ಅಪ್ಪ. ನನ್ನ ಆಸೆಗಳಿಗೆ ಮತ್ತು ಕನಸ್ಸುಗಳಿಗೋಸ್ಕರ ಮಗಳಿಗೇನೂ ಕಮ್ಮಿ ಇಲ್ಲದಂತೆ ಬೆಳೆಸಿದವರು.
    ಜಗತ್ತಿನಲ್ಲಿ ಎಂದೂ ಬದಲಾಗದ ವ್ಯಕ್ತಿತ್ವ ಅಪ್ಪ… ಇವರ ಪ್ರೀತಿ ಮುಂದೆ ಬೇರೆಲ್ಲವೂ ಶೂನ್ಯವೆನಗೆ…

    ಅಪ್ಪ ನನ್ನ ಜಗತ್ತು…

    ರಮ್ಯಾ ಡಿ

    ನನಗೆ ʼಅಪ್ಪʼ ಎಂದರೆ ಕೇವಲ ಒಂದು ಪದವಲ್ಲ ಅವರು ನನ್ನ ಜೀವ. ಅಪ್ಪನ ಬಗ್ಗೆ ಹೇಳಹೋರಟರೆ ಅದು ಒಂದೆರಡು ಮಾತಿನಲ್ಲಿ ಮುಗಿಯಲು ಸಾಧ್ಯವಿಲ್ಲ. ಚಿಕ್ಕಂದಿನಿಂದಲೇ ತುಂಬಾ ಪ್ರೀತಿಯಿಂದ ನೋಡಿಕೊಂಡ ಅಪ್ಪ, ನನಗೆ ಏನು ಬೇಕು ಏನು ಬೇಡ ಎಂಬುದನ್ನು ಹೇಳದೆಯೇ ಅರ್ಥಮಾಡಿಕೊಳ್ಳುತ್ತಿದ್ದರು. .

    ಅವರು ರಾತ್ರಿ ಕೆಲಸ ಮುಗಿಸಿ ಬರುವಾಗ ನನಗೆ ಏನಾದರೂ ತಿಂಡಿಯನ್ನು ತಂದೇ ತರುತ್ತಿದ್ದರು. ಅದ್ದಕಾಗಿಯೇ ಎಷ್ಟೋ ಸಲ ತಡರಾತ್ರಿಯವರೆಗೆ ಕಾದು ಕುಳಿತಿದ್ದದ್ದುಂಟು. ನಾನು ಏನೇ ತಪ್ಪು ಮಾಡಿದರೂ ಅಮ್ಮ ಹೊಡೆಯುತ್ತಿದ್ದರು, ಆದರೆ ಅಪ್ಪ ಸಮಾಧಾನದಿಂದ ಬುದ್ಧಿವಾದ ಹೇಳಿ ಪ್ರೀತಿಯಿಂದ ಪಾಠ ಕಲಿಸುತ್ತಿದ್ದರು.

    ನನಗೆ ತಾಯಿ ಜನ್ಮ ನೀಡಿದರೆ ತಂದೆ ಬದುಕುವುದನ್ನು ಕಲಿಸಿಕೊಟ್ಟಿದ್ದಾರೆ. ಒಳ್ಳೆಯ ಅಪ್ಪನೆನಿಸುವುದು ಕೆಲವರಿಗಷ್ಟೇ ಸಾಧ್ಯ. ಅದರಲ್ಲಿಯೂ ಅಪ್ಪಾ ನೀವು ನನಗೆ ತುಂಬಾ ಸ್ಪೆಷಲ್. ನನಗೆ ಯಾರಾದರೂ ನೋವು ಮಾಡಿದರೆ, ನಾನು ಬೇಸರದಲ್ಲಿದ್ದಾಗ ಸಮಾಧಾನಪಡಿಸಿ ಸಂತೋಷಪಡಿಸುವ ಏಕೈಕ ಜೀವ ನೀವೇ.

    ಅಪ್ಪಂದಿರ ದಿನಾಚರಣೆಯ ಶುಭಾಶಯಗಳು, ಲವ್ ಯು ಅಪ್ಪಾ…


    ದಿವ್ಯಶ್ರೀ ಪತ್ರಿಕೋದ್ಯಮದಲ್ಲಿ ಅಂತಿಮ ಬಿಎ ಹಾಗೂ ರಮ್ಯಾ ಡಿ ಪತ್ರಿಕೋದ್ಯಮದಲ್ಲಿ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದಾರೆ.


    ನಾವು ಕಂಡ ಮೊದಲ ಸಾಹುಕಾರ ಅಪ್ಪ

    ಮಾತಾಡಿಸ್ತಿದ್ರು …..ವಿಚಾರಿಸ್ತಿದ್ರು …..ತಮಾಷೆ ಮಾಡ್ತಿದ್ರು …..ನಗಿಸ್ತಿದ್ರು …..ಅವರು ಊಟಕ್ಕೆ ಕೂರ್ತಿದಿದ್ದೇ ಮಕ್ಕಳು ತಿಂದ್ರ ಅಂತ ಕೇಳ್ತಾ , ಅವರು ತಿಂತಾ ನಮ್ಮನ್ನ ಕರೆದು ತಟ್ಟೆಯಲ್ಲಿದ್ದ ತರಕಾರೀನೋ , ಒಂದು ತುತ್ತು ಅನ್ನಾನೋ ತಿನ್ನಿಸ್ತಿದ್ರು . ನಮಗೆ ಮೊದಲು ಹೋಟೆಲ್ಲಿಗೆ ಕರ್ಕೊಂಡು ಹೋಗಿದ್ದವರು , ಮೊದಲ ಡ್ರಾಮಾ ಮೊದಲ ಸಿನಿಮಾ ಮೊದಲ ಸರ್ಕಸ್ ತೋರಿಸಿದ್ದವರು ,ನಮ್ಮ ಮೊದಲ ಹೀರೋ ಅವರು, ಟೂರು ಹೊಡೆಸಿದ್ದವರು ,ಅಟಿಕೆ ಕೊಡಿಸಿದ್ದವರು , ಬಟ್ಟೆ ಹೊಲಿಸಿದ್ದವರು , ನಾವು ಕಂಡ ಮೊದಲ ಸಾಹುಕಾರ ಅಪ್ಪ .

    ಅವರ ಜೇಬಿನಲ್ಲಿ ಸದಾ ದುಡ್ಡಿರುತ್ತಿತ್ತು . ಮನೆಯ ದಿನಸಿಗೇ ಆಗಲಿ ನಮ್ಮ ಮುನಿಸಿಗೇ ಆಗಲಿ ನನ್ ಷರ್ಟ ತಗೊಂಡ್ ಬಾ ಅನ್ನೋವ್ರು ಅದರಿಂದ ದುಡ್ಡು ತೆಗೆದು ಕೊಡೋವ್ರು . ನಮ್ಮ ಮೊದಲ ಪಾಕೆಟ್ ಮೊನಿ ಕೊಟ್ಟವರು , ನಮ್ಮ ಮಣ್ಣಿನ ಹುಂಡಿಗೆ ಹಣ ಹಾಕಿದವರು ಅವರು . ಅಪ್ಪ ನಮ್ಮ ಕಣ್ಣಿಗೆ ಯಾವಾಗಲೂ ಪರ್ಫೆಕ್ಟ್ . ಪಕ್ಕಾ ಜಂಟಲ್ಮನ್. ಯಾವತ್ತೂ ಐರನ್ ಬಟ್ಟೆ ಇಲ್ಲದೇ ಹೊರಗೆ ಹೋಗುತ್ತಿರಲಿಲ್ಲ. ಅವರು ಹಾಕುವ ವಾಚು , ಧರಿಸುವ ಚಪ್ಪಲಿ ,ಕಟ್ಟುವ ಬೆಲ್ಟು , ಬರೆಯುವ ಪೆನ್ನು ಪ್ರತಿಯೊಂದು ವಿಶೇಷವಾಗಿ ಇರೋವು . ಅವರು ಮನೆಗೆ ಬೇಗ ಬಂದರೆ ಕೇಳುತ್ತಿದ್ದ ಪ್ರಶ್ನೆ ಮಕ್ಕಳೆಲ್ಲಿ ? ಅವರು ಲೇಟಾಗಿ ಬಂದ್ರೂ ಕೇಳುತ್ತಿದ್ದ ಪ್ರಶ್ನೆ ಮಕ್ಕಳು ತಿಂದ್ರ ? ಮಲಗ್ಬಿಟ್ರ ? ನಾವು ಹುಷಾರು ತಪ್ಪಿದಾಗ ಅವರು ಒದ್ದಾಡುತ್ತಿದ್ದರು . ನಮಗೆ ಗಾಯವಾದರೆ ಅವರು ನೋವು ತಿಂತಿದ್ರು .

    ಸಸಿಗಳಂತಿದ್ದ ನಾವು ಗಿಡಗಳಾಗುತ್ತಿದ್ದಂತೆ ಸಣ್ಣದಾಗಿ ಬಗ್ಗಿಸಲು ಶುರು ಮಾಡಿದರು .ಇದು ತಿನ್ನು, ಇದು ಮಾಡು , ಇದೇ ಓದು , ಹಿಂಗೇ ಇರು , ಇದೇ ಕೋರ್ಸ್ ತಗೋ , ಹೇಳಿದ್ ಮಾತು ಕೇಳು, ಹಂಗೆಲ್ಲಾ ಮಾತಾಡ್ಬೇಡ, ನಿನಗೆ ಅರ್ಥ ಆಗಲ್ಲ, ನಿನಗೆ ಗೊತ್ತಾಗಲ್ಲ …ಹೀಗೆ ಕಿವಿ ಹಿಂಡುವುದು, ಗದರುವುದು ಶುರು ಮಾಡುತ್ತಾರೆ .ಆಗ ನಮಗೆ ಅಪ್ಪ ಯಾಕೋ ಈ ನಡುವೆ ಸ್ವಲ್ಪ ಸ್ಟ್ರಿಕ್ಟ್ ಆದಂಗ್ ಕಾಣ್ತಾರೆ ಅಂತ ಸ್ವಲ್ಪ ಬೇಸರ ಆಗೋದು . ನಮಗೇನೇ ಬೇಕು ಅಂದ್ರೂ ಅಮ್ಮನ ಮೂಲಕವೇ ಹೇಳುವುದು ಕೇಳುವುದು ಮಾಡತೊಡಗಿದೆವು .ನಮ್ಮ ತಪ್ಪುಗಳಿಗೆ ಅಮ್ಮನನ್ನು ಬೈಯ್ಯುತ್ತಿದ್ದರು. ಎಷ್ಟೋ ಸಾರಿ ವಾದ ಮಾಡುತ್ತಿದ್ದೆವು ಆಗ ಅಮ್ಮ ಬಿಡಿಸಿ ಅವರೆದುರು ನಮ್ಮನ್ನ ಬಯ್ದು ಕಳುಹಿಸುತ್ತಿದ್ದಳು . ಅಪ್ಪನೆದರು ಮಕ್ಕಳು ಬಾಯಿ ಕೊಡುವುದು ಅಮ್ಮನಿಗೂ ಇಷ್ಟವಿರಲಿಲ್ಲ . ಅವರಿಗೆ ಗೊತ್ತು ಅಪ್ಪನ ಬದುಕಿನ ಒದ್ದಾಟ ಗುದ್ದಾಟ ಎಲ್ಲವೂ ಮನೆಗಾಗಿಯೇ ಮಕ್ಕಳಿಗಾಗಿಯೇ ಅಂತ .

    ಕ್ವಾರ್ಟ್ರೆಸ್ಸು ಬಾಡಿಗೆ ಲೀಸು ಆ ಮನೆ ಈ ಮನೆ ಅಂತೆಲ್ಲಾ ಒದ್ದಾಡಿ ಜಿದ್ದಿಗೆ ಬಿದ್ದು ಹೊಟ್ಟೆ ಬಟ್ಟೆ ಕಟ್ಟಿ ಹಣ ಉಳಿಸಿ ಹಣ ಹೊಂದಿಸಿ ಸಾಲ ಮಾಡಿ ಸೈಟು ತಗೊಂಡು ಓಡಾಡಿ ನಿಂತು ಒಂದು ಸ್ವಂತ ಮನೆ ಕಟ್ಟಿ , ಅಪ್ಲಿಕೇಷನ್ನು ಸೀಟು ಅಲಾಟ್ಮೆಂಟು ಡೊನೇಷನ್ನು ಎಂಬ ಹತ್ತು ಸಮಸ್ಯೆಗಳ ಮಧ್ಯೆ ಎಜುಕೇಷನ್ನು ಕೊಡಿಸಿ , ಎಂಪ್ಲಾಯ್ಮೆಂಟು ಲಾಸ್ಟ್ ಡೇಟು ಎಕ್ಸಾಮು ಇನ್ಫ್ಲೂಯೆನ್ಸು ವೇಕೆನ್ಸಿ ಅನ್ನೋ ನೂರು ಸ್ಪರ್ಧೆಗಳ ಮಧ್ಯೆ ನೌಕರಿ ಕೊಡಿಸಿ , ಸಂಬಂಧ ಹುಡುಕಿ ವಿಚಾರಿಸಿ ಹಣ ಕೂಡಿಟ್ಟು ಪತ್ರಿಕೆ ಹೊಡಿಸಿ ಚೌಟ್ರಿ ಹುಡುಕಿ ವರೊಪಚಾರ ನಿಶ್ಚಿತಾರ್ಥ ಅಂತ ಮದುವೆ ಮಾಡ್ಸಿ… ಅಬ್ಬಾ… ಏನ್ ಸ್ಟ್ರಾಂಗ್ ಗುರೂ ನಮ್ಮಪ್ಪ ! ಅಂತ ಅಂದ್ಕೋತಿದ್ವಿ. ಇಲ್ಲ ಬೇರೆ ಯಾರಿಂದಾನೂ ಆಗಲ್ಲ ಅದು ಅಪ್ಪನಿಂದ ಮಾತ್ರ ಸಾಧ್ಯ .ಅಪ್ಪ ಇದಾರೆ ಅಂದ್ರೆ ಧೈರ್ಯ. ಅಪ್ಪ ಇದಾರೆ ಅಂದ್ರೆ ಭಯ .ಗೌರವ ಸಂಸ್ಕಾರ ಶಿಸ್ತು ಸಾಧನೆ ಪ್ರತಿಯೊಂದಕ್ಕೂ ಉದಾಹರಣೆ ಅಪ್ಪ ” ಅನ್ನೋ ಮಟ್ಟಿಗೆ ಆಗಿದ್ದರು .

     ಅವರೂ ಮನುಷ್ಯರೇ ಅವರಲ್ಲೂ ಕೋಪ ಇತ್ತು ಲೋಪ ಇತ್ತು.ದುಡಿದಿದ್ರೂ ದುಡುಕಿದ್ರೂ , ನಮ್ಮನ್ನೆಲ್ಲಾ ಹೆದರಿಸ್ತಿದ್ದ ಗದರಿಸ್ತಿದ್ದ ಅಪ್ಪಾನೂ ಒಮ್ಮೊಮ್ಮೆ ತಪ್ಪು ಮಾಡಿದಾಗ ಅಮ್ಮನಿಗೆ ಹೆದರುತ್ತಿದ್ರು . ಒಂದಾದ ಮೇಲೆ ಇನ್ನೊಂದು , ಇನ್ನೊಂದಾದ ಮೇಲೆ ಮತ್ತೊಂದು ಜವಾಬ್ದಾರಿ ಮುಗಿಸಿ , ಒತ್ತಡ , ಅನಾರೊಗ್ಯಕ್ಕೆ ಸಿಲುಕಿ ಅವರೂ ಬಳಲಿದ್ದರು. ಅವರಿಗೂ ವಯಸ್ಸಾಗಿತ್ತು .ಮಗುವಿನಿಂದಲೂ ನೋಡ್ಕೊಂಡು ಬರ್ತಿದ್ದ ಅಪ್ಪ ಸಮಯ ಹೋಗ್ತಿದ್ದಂತೇ ನಮ್ಮ ಮುಂದೆಯೇ ಮಗುವಾಗಿಬಿಟ್ಟಿದ್ದರು . ಯಾವ ದೇಹದ ಮೇಲೆ ನಾವು ಕೂತು ಉಪ್ಪು ಮೂಟೆ ಆಡಿದ್ವೋ ಆ ದೇಹ ಮುಪ್ಪಾಗಿತ್ತು . ಯಾವ ಶಕ್ತಿಯುತ ತೋಳಲ್ಲಿ ನಾವು ಬೆಳದಿದ್ವೋ ಆ ತೋಳು ಶಕ್ತಿ ಕಳೆದುಕೊಂಡು ಆಸರೆ ಬಯಸಿ ಹಾಸಿಗೆ ಸೇರಿತ್ತು.

    ಬದುಕು ಕಲಿಸಿದ ಅಪ್ಪ ಒಂದು ದಿನ ನಮ್ಮನ್ನು ಬದುಕಲು ಬಿಟ್ಟು ಹೋಗಿಬಿಡುತ್ತಾರೆ . ಯಜಮಾನ ಅನ್ನೋ ಪದಕ್ಕೆ ಸೂಕ್ತ ಅರ್ಥ ಅವರೇ ಅವರನ್ನು ಬಿಟ್ಟರೆ ಆ ಜಾಗ ತುಂಬಲೂ ಯಾರಿಂದಲೂ ಸಾಧ್ಯವಿಲ್ಲ . ಪರಿಪೂರ್ಣ ಬದುಕನ್ನು ಅನುಭವಿಸಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿ ಕರ್ತವ್ಯಗಳನ್ನು ಮುಗಿಸಿ ಹೊರಟಿರುತ್ತಾರೆ . ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಕಲಿಸಿದ ವಿದ್ಯೆ, ತೋರಿಸಿದ ದಾರಿ , ಮೂಡಿಸಿದ ಭರವಸೆ , ಬೆಳೆಸಿದ ರೀತಿ , ಅವರ ಆದರ್ಶಗಳು ಯಾವತ್ತಿಗೂ ನಮ್ಮೊಂದಿಗಿರುತ್ತವೆ . ಇವತ್ತು ನಾವು ತಲೆಯೆತ್ತಿ ಬದುಕುತ್ತಿದ್ದೇವೆಂದರೆ ಅದಕ್ಕೆ ಕಾರಣ ” ಅಪ್ಪ ” ಎನ್ನುವ ಆಕಾಶ. 

    ಈ ರಾತ್ರಿಯ ಪ್ರಮುಖ ಹೆಡ್ ಲೈನ್

    ದೇಶ

    ಸೋಮವಾರದಿಂದ ನಿರ್ಬಂಧ ಮತ್ತಷ್ಟು ಸಡಿಲಿಕೆ; ಮೈಸೂರಿನಲ್ಲಿ ಮಾತ್ರ ಯಥಾ ಸ್ಥಿತಿ

    ರಾಜ್ಯದಲ್ಲಿರುವ ಕೋವಿಡ್ ಪಾಸಿಟಿವಿಟಿ ದರದ ಆಧಾರದ ಮೇಲೆ ಸೋಮವಾರದಿಂದ ಇನ್ನಷ್ಟು ರಿಯಾಯ್ತಿಗಳನ್ನು ನೀಡಲಾಗಿದೆ. ಕೋವಿಡ್ ಸಲಹಾ ಸಮಿತಿ ಸಭೆಯ ನಂತರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈ ವಿಷಯ ಪ್ರಕಟಿಸಿದರು. ರಾತ್ರಿ ಕರ್ಫೂ ಮತ್ತು ವೀಕೆಂಡ್ ಕರ್ಫ್ಯೂ ಮುಂದುವರಿಯಲಿದೆ. ಶೇಕಡ 10 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಮೈಸೂರಿಗೆ ಯಾವುದೇ ರಿಯಾಯ್ತಿ ಇಲ್ಲ.

    ಕಳೆದ ಒಂದು ವಾರದಲ್ಲಿ 16 ಜಿಲ್ಲೆಗಳಲ್ಲಿ ಶೇಕಡ 5 ಗಿಂತ ಕಡಿಮೆ ಪಾಸಿಟಿವಿಟಿ ದರ ಇದ್ದು, 13 ಜಿಲ್ಲೆಗಳಲ್ಲಿ 5ರಿಂದ ಶೇಕಡ10 ಇದೆ. ಆದರೆ, ಮೈಸೂರಿನಲ್ಲಿ ಶೇಕಡ 10ಗಿಂತ ಹೆಚ್ಚು ಪಾಸಿಟಿವಿಟಿ ದರ ಇದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಯಾವುದೇ ಸಡಿಲಿಕೆ ಇಲ್ಲ.

    ನಿರ್ಬಂಧಗಳ ಸಡಿಲಿಕೆಗಳನ್ನು ತಾಂತ್ರಿಕ ಸಲಹಾ ಸಮಿತಿಯ ಸಲಹೆಯ ಮೇರೆಗೆ ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಪಾಸಿಟಿವಿಟಿ ದರದ ಆಧಾರದ ಮೇಲೆ ಈ ಕೆಳಕಂಡಂತೆ ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು

    ಶೇ 5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ (ಬಿ.ಬಿ.ಎಂ.ಪಿ ಸೇರಿದಂತೆ), ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳಿಗೆ ಈ ಕೆಳಕಂಡ ಸಡಿಲಿಕೆಗಳನ್ನು ನೀಡಲಾಗಿದೆ.

    • ಎಲ್ಲಾ ಅಂಗಡಿಗಳನ್ನು ಸಂಜೆ 5.00 ಗಂಟೆವರೆಗೆ ತೆರೆಯಲು ಅನುವು ಮಾಡಿಕೊಡಲಾಗುವುದು.
    • ಎಸಿ. ಚಾಲನೆಗೊಳಿಸದೇ ಹೋಟೆಲ್‌, ಕ್ಲಬ್ಸ್‌, ರೆಸ್ಟೋರೆಂಟ್‌ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತು ತಿನ್ನಲು ಸಂಜೆ 5.00 ಗಂಟೆವರೆಗೆ ಶೇ 50 ಸಾಮರ್ಥ್ಯದೊಂದಿಗೆ ಅವಕಾಶ ಮಾಡಿಕೊಡಲಾಗುವುದು.
    • ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ.
    • ಬಸ್‌ ಮತ್ತು ಮೆಟ್ರೋ ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆಗೆ ಅವಕಾಶ ನೀಡಿದೆ.
    • ಹೊರಾಂಗಣ ಕ್ರೀಡೆಗಳಿಗೆ, ವೀಕ್ಷಕರಿಲ್ಲದೇ ಅನುಮತಿ ನೀಡಲಾಗಿದೆ.
    • ಸರ್ಕಾರಿ/ಖಾಸಗಿ ಕಚೇರಿಗಳಿಗೆ ಶೇ 50 ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿಸಿದೆ.
    • ಲಾಡ್ಜ್‌ ಗಳಲ್ಲಿ ಮತ್ತು ರೆಸಾರ್ಟ್‌ ಗಳಲ್ಲಿ ಶೇ 50 ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ.
    • ಜಿಮ್‌ ಗಳಲ್ಲಿ ಶೇ 50 ಸಾಮರ್ಥ್ಯದೊಂದಿಗೆ (ಹವಾ ನಿಯಂತ್ರಣ ಇಲ್ಲದೇ) ಅವಕಾಶ ನೀಡಿದೆ.

    ಶೇ 5 ಕ್ಕಿಂತ ಹೆಚ್ಚಿನ ಪಾಜಿಟಿವಿಟಿ ದರ ಇರುವ 13 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಿಗೆ ದಿನಾಂಕ: 11-06-2021 ಆದೇಶದಲ್ಲಿ ನೀಡಿರುವ ಸಡಿಲಿಕೆಗಳು ಮಾತ್ರ ಅನ್ವಯಿಸುತ್ತವೆ.

    ಶೇ. 10 ಕ್ಕಿಂತ ಹೆಚ್ಚಿನ ಪಾಜಿಟಿವಿಟಿ ದರ ಇರುವ ಮೈಸೂರು ಜಿಲ್ಲೆಯಲ್ಲಿ ಯಥಾಸ್ಥಿತಿ ನಿರ್ಬಂಧಗಳು ಮುಂದುವರೆಯುವುದು.

    ರಾಜ್ಯವ್ಯಾಪಿ ಅನ್ವಯವಾಗುವಂತೆ:
    • ಪ್ರತಿ ದಿನ ನೈಟ್‌ ಕರ್ಫ್ಯೂ ರಾತ್ರಿ 07.00 ಗಂಟೆಯಿಂದ ಬೆಳಗ್ಗೆ 05 ಗಂಟೆವರೆಗೆ ಇರುತ್ತದೆ.
    • ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 07.00 ಗಂಟೆಯಿಂದ ಸೋಮವಾರ ಬೆಳಿಗ್ಗ 05.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
    • ಬಸ್‌, ಮೆಟ್ರೋ ಸಂಚಾರವು ಶೇ. 50 ಪ್ರಯಾಣಿಕರಿಗೆ ಮಿತಿಗೊಳಿಸಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

    ಕಿಸಾನ್‌ ರೈಲಿನಲ್ಲಿ ರಾಜಧಾನಿ ದೆಹಲಿಗೆ ಹೊರಟ ಕೋಲಾರದ ಮಾವು

    ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ರುಚಿಯಾದ ʼಹಣ್ಣಿನ ರಾಜʼ ಮಾವಿಗೆ ಶುಕ್ರದೆಸೆ ಬಂದಿದೆ.ಇಸ್ರೇಲ್‌ ನೆರವಿನಿಂದ ಜಿಲ್ಲೆಯಲ್ಲಿ ಮಾವು ಕೃಷಿಗೆ ಉತ್ತೇಜನ ನೀಡಲು ಉಷ್ಕೃಷ್ಟತಾ ಕೇಂದ್ರಕ್ಕೆ ಚಾಲನೆ ನೀಡಿದ ನಂತರ ಜಿಲ್ಲೆಯಿಂದ ಕಿಸಾನ್‌ ರೈಲಿನ ಮೂಲಕ ಸ್ವಾದಿಷ್ಟ ಮಾವಿನ ಹಣ್ಣನ್ನು ರಾಜಧಾನಿ ದೆಹಲಿಗೆ ಕಳಿಸಲಾಯಿತು.

    ಶ್ರೀನಿವಾಸಪುರ ತಾಲೂಕಿನ ದೊಡ್ಡನತ್ತ ರೈಲು ನಿಲ್ದಾಣದಿಂದ ನವದೆಹಲಿಯ ಆದರ್ಶ ನಗರಕ್ಕೆ ಮಾವು ತುಂಬಿಕೊಂಡು ಹೊರಟ ಮೊದಲ ರೈಲಿಗೆ ಕೋಲಾರದ ಸಂಸದ ಮುನಿಸ್ವಾಮಿ ಶನಿವಾರ ಚಾಲನೆ ನೀಡಿದರು.

    ರಾಜ್ಯದಲ್ಲಿ ಈ ಬಾರಿ ಮಾವಿನ ಫಸಲು ವಿಪುಲವಾಗಿ ಬಂದಿದ್ದು, ಕೋವಿಡ್‌ನಿಂದ ಉತ್ತಮ ಬೆಲೆ ಸಿಗದಂಥ ಪರಿಸ್ಥಿತಿ ಉಂಟಾಗಿತ್ತು. ಇದೇ ವೇಳೆಯಲ್ಲಿ ಸಂಸದ ಮುನಿಸ್ವಾಮಿ ಅವರ ಒತ್ತಾಸೆಯಿಂದ ಕಿಸಾನ್‌ ರೈಲಿನ ಮೂಲಕ ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲ ಪ್ರದೇಶಗಳಿಗೆ ಕೋಲಾರದ ಮಾವನ್ನು ರವಾನೆ ಮಾಡಲಾಗುತ್ತಿದೆ. ಆ ಕಾರ್ಯ ಇಂದಿನಿಂದ ಆರಂಭವಾಗಿದೆ.

    ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಿರುವ ಕಿಸಾನ್ ವಿಶೇಷ ಸರಕು ಸಾಗಣೆ ರೈಲಿನಲ್ಲಿ ತರಕಾರಿ ಮತ್ತು ಹಣ್ಣನ್ನು ಎಲ್ಲೆಡೆ ಸಾಗಿಸಲಾಗುತ್ತಿದೆ. ಅದೂ ಈಗ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ಬಂದಿದೆ. ವಾರಕ್ಕೊಮ್ಮೆ ಸಂಚರಿಸುವ ಈ ರೈಲಿನಲ್ಲಿ ಬೇಡಿಕೆಯ ಆಧಾರದ ಮೇಲೆ ಮಾವಿನ ಹಣ್ಣನ್ನು ತುಂಬಿ ಕಳಿಸಲಾಗುವುದು ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.

    ಹಣ್ಣು ಹಾಳಾಗುವುದು ತಪ್ಪುತ್ತದೆ

    ಕಿಸಾನ್ ರೈಲು ಮೂಲಕ ಮಾವು ಸಾಗಣೆ ಮಾಡುವುದು ಉತ್ತಮ ಹಾಗೂ ರೈತರಿಗೆ ಲಾಭದಾಯ ಕೂಡ. ಈವರೆಗೆ ದಿಲ್ಲಿ ಸೇರಿದಂತೆ ಉತ್ತರ ಭಾರತದ ನಾನಾ ರಾಜ್ಯಗಳಿಗೆ ಲಾರಿಗಳ ಮೂಲಕವೇ ಮಾವು ಸಾಗಣೆಯಾಗುತ್ತಿತ್ತು. ಮೇಲಾಗಿ, ಮಾವು ಫಸಲು ಬರುವ ಹಂಗಾಮಿನಲ್ಲಿಯೇ ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಮುಂಗಾರು ಮಳೆ ತೀವ್ರವಾಗಿರುತ್ತದೆ. ಹೀಗಾಗಿ ಸಾಗಾಣೆ ಸಮಯ ಹೆಚ್ಚಾಗಿ ಹಣ್ಣು ಹಾಳಾಗುತ್ತಿತ್ತು.

    ದೆಹಲಿ ಮಟ್ಟಿಗೆ ಹೇಳುವುದಾದರೆ ರಸ್ತೆ ಮೂಲಕ ಸಾಗಣೆಗೆ ಕೊನೆಪಕ್ಷ 4ರಿಂದ 5 ದಿನ ಬೇಕಾಗುತ್ತಿತ್ತು. ಈಗ ಕಿಸಾನ್‌ ರೈಲು ಮೂಲಕ ಕೇವಲ 40 ಗಂಟೆಗಳ ಒಳಗಾಗಿ, ಆಂದರೆ, ಸೋಮವಾರ ಬೆಳಗಿನಜಾವಕ್ಕೆಲ್ಲ ಕೋಲಾರದ ಮಾವು ದಿಲ್ಲಿಯ ಮಾರುಕಟ್ಟೆ ಸೇರಲಿದೆ. ಹಣ್ಣು ತಾಜಾ ಇರುತ್ತದೆ ಮಾತ್ರವಲ್ಲದೆ ಕೆಡುವುದೂ ಇಲ್ಲ. ಇದರಿಂದ ರೈತರಿಗೆ ಹೆಚ್ಚು ಲಾಭ ಸಿಗುತ್ತದೆ ಎಂದು ಸಂಸದ ಮುನಿಸ್ವಾಮಿ ಮಾಹಿತಿ ನೀಡಿದರು.

    ರೈತ, ಗ್ರಾಹಕನಿಗೆ ಲಾಭದಾಯಕ

    ರೈಲು ಮೂಲಕ ಹಣ್ಣು ಸಾಗಿಸಿದರೆ ಸಾಗಣೆ ವೆಚ್ಚವೂ ಕಡಿಮೆ ಆಗುತ್ತದೆ. ರಸ್ತೆಯ ಮೂಲಕ ಸಾಗಣೆ ಮಾಡಿದರೆ ಪ್ರತೀ ಕೆ.ಜಿ. ಮಾವಿಗೆ ಕೊನೆಪಕ್ಷ 6ರಿಂದ 7 ರೂ. ವೆಚ್ಚ ಆಗುತ್ತದೆ. ಅದೇ ಈ ಕಿಸಾನ್ ರೈಲಿನಲ್ಲಿ ಕೇವಲ 2.50‌ ರೂ.ಗಳಿಂದ 3 ರೂ. ಮಾತ್ರ ಖರ್ಚಾಗುತ್ತದೆ. ಇದರಿಂದ ರೈತನಿಗೂ, ಗ್ರಾಹಕನಿಗೂ ಏಕಕಾಲದಲ್ಲಿ ಲಾಭವಾಗುತ್ತದೆ ಎಂದು ಮುನಿಸ್ವಾಮಿ ಹೇಳಿದರು.

    ಒಂದು ವೇಳೆ ಹೆಚ್ಚೆಚ್ಚು ಬೇಡಿಕೆ ಬಂದರೆ, ಇನ್ನೂ ಹೆಚ್ಚಿನ ಕಿಸಾನ್‌ ರೈಲುಗಳನ್ನು ಓಡಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹಿರಿಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

    ನೈರುತ್ಯ ರೈಲ್ವೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿ.ಆರ್.ಎಂ.) ಅಶೋಕ್ ವರ್ಮ, ವಾಣಿಜ್ಯ ವಿಭಾಗದ ಡಿ.ಆರ್.ಎಂ ಕೃಷ್ಣಾರೆಡ್ಡಿ, ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವೇಣುಗೋಪಾಲ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

    ರೈತರ ಬೇಡಿಕೆಯೂ ಇತ್ತು

    ಕೋಲಾರ ಜಿಲ್ಲೆಯ ಶ್ರೀನಿವಾಸಪಪುರ, ಮುಳಬಾಗಿಲು ತಾಲೂಕುಗಳಲ್ಲಿ ವ್ಯಾಪಕವಾಗಿ ಮಾವು ಬೆಳೆಯಲಾಗುತ್ತದೆ. ಸುಮಾರು 52 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇಂಥ ಹಿರಿಮೆ ಇದ್ದರೂ ನಾನಾ ಕಾರಣಗಳಿಂದ ರೈತರು ಫಸಲು ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದಾರೆ. ಕೀಟಬಾಧೆ, ರೋಗಬಾಧೆಯಿಂದ ಕೈಸುಟ್ಟುಕೊಳ್ಳುತ್ತಿದ್ದಾರೆ. ಉತ್ತಮ ಫಸಲು ಬಂದರೂ ಸೂಕ್ತ ಮಾರುಕಟ್ಟೆಗಾಗಿ ಒದ್ದಾಡುತ್ತಿದ್ದರು ರೈತರು. ಈ ಹಿನ್ನೆಲೆಯಲ್ಲಿ ಕಿಸಾನ್‌ ರೈಲು ಬೆಳೆಗಾರನಿಗೆ ವರದಾನವಾಗಿದೆ.

    ಇಡೀ ಕರ್ನಾಟಕದಲ್ಲಿ ಮಾವು ಬೆಳೆಗೆ ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಮಾವಿಗೆ ಬಹಳ ವಿಶೇಷ ಇದೆ. ಇಲ್ಲಿ ಬಹಳ ರುಚಿಕರವಾದ ಬಂಗಿನಪಲ್ಲಿ, ತೋತಾಪುರಿ, ರಸಪುರಿ, ಅಲ್ಫಾನ್ಸೋ, ಕೇಸರ್‌, ಸೆಂಧೂರ, ದಶಹರಿ, ಮಲ್ಲಿಕಾ, ತೋತಾಪುರಿ, ಮಲಗೋವಾ, ರಾಜಗಿರಾ, ನೀಲಂ ತಳಿಯ ಮಾವು ಬೆಳೆಯಲಾಗುತ್ತದೆ. ಈಗ ಉತ್ತರ ಭಾರತೀಯರು ಈ ತಳಿಗ ತಾಜಾ ಹಣ್ಣಿನ ರುಚಿಯನ್ನು ಸವಿಯಬಹುದಾಗಿದೆ

    ಕೃಷ್ಣಾ ನದಿ ನೀರು ಹಂಚಿಕೆ ಐತೀರ್ಪು; ಅಂತಿಮ ಅಧಿಸೂಚನೆಗೆ ಕರ್ನಾಟಕ- ಮಹಾರಾಷ್ಟ್ರ ಜಂಟಿ ಪ್ರಯತ್ನ

    ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ಬ್ರಿಜೇಶ್ ಮಿಶ್ರಾ ನ್ಯಾಯಾಧೀಕರಣ ನೀಡಿರುವ ಐ ತೀರ್ಪಿನ ಕುರಿತು ಅಂತಿಮ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟಿನಲ್ಲಿ ಜಂಟಿ ಹೋರಾಟಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಿರ್ಧರಿಸಿವೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಬೆಂಗಳೂರಿನಲ್ಲಿ ನಡೆದ ಕೃಷ್ಣಾ ಮತ್ತು ಭೀಮಾ ಪ್ರದೇಶದ ಕರ್ನಾಟಕ ಮತ್ತು ಮಹಾರಾಷ್ಟ್ರದ ಅಂತರರಾಜ್ಯ ಪ್ರವಾಹ ಪರಿಶೀಲನಾ ಸಮಿತಿಯ ಸಭೆಯ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

    ಕೃಷ್ಣ ನದಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಬೃಜೇಶ್ ಮಿಶ್ರಾ ನೇತೃತ್ವದ ನ್ಯಾಯಾಧಿಕರಣ ಐ ತೀರ್ಪು ನೀಡಿದೆ. ಆ ಪ್ರಕಾರ ಕರ್ನಾಟಕ ಮತ್ತು ಮಹಾರಾಷ್ಟ್ರ ನೀರು ಹಂಚಿಕೆ ಮಾಡಿಕೊಳ್ಳುತ್ತಿವೆ. ಆದರೆ ಈ ಐತೀರ್ಪಿನ ಕುರಿತು ಅಂತಿಮ ಅಧಿಸೂಚನೆ ಇದುವರೆಗೆ ಹೊರಬಿದ್ದಿಲ್ಲ. ಅಂತಿಮ ಅಧಿಸೂಚನೆ ಪ್ರಕಟಗೊಳ್ಳಬೇಕು ಎಂಬುದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳು ಒಟ್ಟಿಗೆ ಕುಳಿತುಕೊಂಡು ಚರ್ಚೆ ಮಾಡಿ ಆದಷ್ಟು ಬೇಗ ಅಧಿಸೂಚನೆ ಹೊರಡಿಸುವ ಸಲುವಾಗಿ ಸುಪ್ರೀಂಕೋರ್ಟಿನಲ್ಲಿ ಜಂಟಿ ಪ್ರಯತ್ನ ಮಾಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.

    ಮಹಾರಾಷ್ಟ್ರ ರಾಜ್ಯದ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಜಲಸಂಪನ್ಮೂಲ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    ಭದ್ರಾ ಮೇಲ್ದಂಡೆ ಕಾಮಗಾರಿ ಕಿಕ್ ಬ್ಯಾಕ್ ಆರೋಪ: ಎಸಿಬಿ ತನಿಖೆಗೆ ಸಿದ್ಧರಾಮಯ್ಯ ಆಗ್ರಹ

    ಭದ್ರಾ ಮೇಲ್ದಂಡೆ ಕಾಮಗಾರಿಯ ರೂ. 20,000 ಕೋಟಿ ಟೆಂಡರ್ ನಲ್ಲಿ ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ಅವರು ಶೇಕಡಾ ಹತ್ತರಷ್ಟು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ಆರೋಪವನ್ನು ಭ್ರಷ್ಟಾಚಾರ ನಿರೋಧ ದಳ (ಎಸಿಬಿ)ದ ತನಿಖೆಗೆ ಒಪ್ಪಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಆಗ್ರಹಿಸಿದ್ದಾರೆ.

    ಎರಡು ಕಾರಣಗಳಿಗಾಗಿ ಈ ಆರೋಪ ಗಂಭೀರ ಸ್ವರೂಪದ್ದಾಗಿದೆ. ಮೊದಲನೆಯದಾಗಿ ಆರೋಪ ನೇರವಾಗಿ ಮುಖ್ಯಮಂತ್ರಿಗಳ ಮಗನ ಮೇಲೆ ಮಾಡಲಾಗಿದೆ, ಎರಡನೆಯದಾಗಿ ಆಡಳಿತ ಪಕ್ಷದ ವಿಧಾನಪರಿಷತ್ ಸದಸ್ಯರೇ ಈ ಆರೋಪ ಮಾಡಿದ್ದಾರೆ. ತರಾತುರಿಯಲ್ಲಿ ನೀರಾವರಿ ಇಲಾಖೆ ಸ್ಪಷ್ಟನೆ ನೀಡಿದ್ದನ್ನು ನೋಡಿದರೆ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಸ್ಪಷ್ಟವಾಗಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

    ಬಿಐಇಸಿಯಲ್ಲಿ ನಿರ್ಮಿಸಲಾಗಿದ್ದ ಕೋವಿಡ್ ಕೇರ್ ಸೆಂಟರ್ ನ ಹಾಸಿಗೆ ಮತ್ತು ಬೆಡ್ ಗಳ ಖರೀದಿ-ಮಾರಾಟದಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಭ್ರಷ್ಟಾಚಾರ ಎಸಗಿದ್ದಾರೆ ಮತ್ತು ಭೂಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಎಚ್.ವಿಶ್ವನಾಥ್ ಅವರ ಇನ್ನೊಂದು ಆರೋಪದ ಬಗ್ಗೆಯೂ ತನಿಖೆ ನಡೆಯಬೇಕು ಎಂದಿದ್ದಾರೆ.

    ಆಡಳಿತ ಪಕ್ಷದ ಶಾಸಕರು ಮತ್ತು ಈಗಿನ ಬಿಜೆಪಿ ಸರ್ಕಾರದ ರೂವಾರಿಯೇ ತಾನೆಂದು ಹೇಳಿಕೊಳ್ಳುತ್ತಿರುವ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರೇ ಈ ಸರ್ಕಾರವನ್ನು ‘ಗುತ್ತಿಗೆದಾರರ ಸರ್ಕಾರ’ ಎಂದು ಬಣ್ಣಿಸಿರುವುದು ನೋಡಿದರೆ ಅವರ ಬಳಿ ಬೇರೆ ಸಚಿವರ ಭ್ರಷ್ಟಾಚಾರದ ಮಾಹಿತಿಯೂ ಇದ್ದ ಹಾಗಿದೆ. ಎಸಿಬಿ ಅವರನ್ನೂ ಕರೆದು ವಿಚಾರಣೆಗೆ ಒಳಪಡಿಸಿದರೆ ಸತ್ಯ ಬಯಲಿಗೆ ಬರಬಹುದು ಈ ಎಲ್ಲ ಆರೋಪಗಳ ಬಗ್ಗೆ ಸಮಗ್ರ ಸ್ವರೂಪದ ತನಿಖೆ ನಡೆಯಬೇಕು.

    ಮುಖ್ಯಮಂತ್ರಿಗಳು ಮತ್ತು ಅವರ ಮಗನ ವಿರುದ್ಧ ಈ ರೀತಿ ಬಹಿರಂಗವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಶಾಸಕರ ವಿರುದ್ದ ಯಾವುದೇ ಶಿಸ್ತಿನ ಕ್ರಮ ಕೈಗೊಳ್ಳದೆ ಅವರಿಗೆ ಇನ್ನಷ್ಟು ಅವಕಾಶ ನೀಡುತ್ತಿರುವುದನ್ನು ನೋಡಿದರೆ ಒಂದೋ ಬಿಜೆಪಿಯ ಹೈಕಮಾಂಡ್ ಈ ಆರೋಪಗಳನ್ನು ಒಪ್ಪಿಕೊಂಡಿದೆ ಇಲ್ಲವೇ ಭ್ರಷ್ಟಾಚಾರದಲ್ಲಿ ಅದೂ ಕೂಡಾ ಪಾಲು ಪಡೆದಿದೆ ಎಂದೇ ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

    ಜಂಟಿ ಸದನ ಸಮಿತಿ ರಚನೆಗೆ ಡಿ.ಕೆ. ಶಿವಕುಮಾರ್ ಆಗ್ರಹ

    ‘ನೀರಾವರಿ ಇಲಾಖೆಯಲ್ಲಿ ನಿಯಮಾವಳಿ ಉಲ್ಲಂಘಿಸಿ 20 ಸಾವಿರ ಕೋಟಿ ರುಪಾಯಿ ಕಾಮಗಾರಿ ಟೆಂಡರ್ ಕರೆಯಲಾಗಿದೆ ಎಂದು ಬಿಜೆಪಿ ನಾಯಕರೇ ಆರೋಪ ಮಾಡಿದ್ದು, ಈ ಬಗ್ಗೆ ಮೌನ ವಹಿಸುವ ಮೂಲಕ ಮುಖ್ಯಮಂತ್ರಿಗಳು ಈ ಆರೋಪ ನಿಜ ಎಂದು ಒಪ್ಪಿಕೊಂಡಿರುವಂತೆ ಕಾಣುತ್ತದೆ. ಹೀಗಾಗಿ ಹಗರಣದ ತನಿಖೆಗೆ ಸರಕಾರ ಜಂಟಿ ಸದನ ಸಮಿತಿ ರಚಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.


    error: Content is protected !!