22.9 C
Karnataka
Monday, May 25, 2026
    Home Blog Page 97

    ಅಮ್ಮ ತುಂಬಿದ ಆತ್ಮಸ್ಥೈರ್ಯ


    ಕೋವಿಡ್ ಎರಡನೇ ಅಲೆ ಕಡಿಮೆಯಾಗುತ್ತಿದೆ.ಈ ಅಲೆಯನ್ನು ಅನೇಕರು ಮೆಟ್ಟಿನಿಂತು ಎದುರಿಸಿ ಬಂದಿದ್ದಾರೆ. ಗೆದ್ದವರ ಪಾಸಿಟಿವ್ ಕಥೆಗಳನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ. ಈ ಗೆಲವು ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ. ಕರೋನಾ ಒಂದೇ ಅಲ್ಲ ಯಾವ ರೋಗ ಬಂದರು ಧೈರ್ಯದಿಂದ ಎದುರಿಸಿದಾಗ ಜಯಿಸಲು ಸಾಧ್ಯ.


    60 ಸೆಕೆಂಡ್ ನಲ್ಲಿ 60 ಯೋಚನೆ

    ಹೋದ ವರ್ಷ (2020) ಲಾಕ್ ಡೌನ್ ನಲ್ಲಿ ನಾವೆಲ್ಲಾ ತರಹ ತರಹದ ಅಡಿಗೆ  ಮಾಡಿದ್ವಿ  ಅಲ್ವಾ. ಹಾಗೆ ನಾನು ಮಾಡಿದ್ದೆ ಪಾನಿಪುರಿ ! ಆ ದಿನ  ಭಾನುವಾರ  ಸಂಜೆ ಎಲ್ಲರೂ ಖುಷಿ ಯಾಗಿ  ಪಾನಿಪುರಿ ತಿನ್ನೋಕೆ  ರೆಡಿ ಆದ್ವಿ. ನಾನು ಪಾನಿಪುರಿ ಎಲ್ಲ ರೆಡಿ ಮಾಡಿಕೊಂಡು  ಒಬ್ಬೊಬ್ರಿಗೆ ಪ್ಲೇಟ್ ನಲ್ಲಿ ಹಾಕಿ ಕೊಟ್ಟೆ. ಮನೋಜ್( ನನ್ನ ಪತಿ), ಕ್ಷಿತಿಜ್,  ಆರ್ಯ ( ಮಗ, ಮಗಳು) ಎಲ್ರೂ ” ತುಂಬಾ   ಚೆನ್ನಾಗಿದೆ ಅಮ್ಮ” ಅಂತ ತಿಂದರು.  ಕೊನೆಗೆ ನಾನು ಒಂದು ಪ್ಲೇಟ್  ಮಾಡಿಕೊಂಡೆ . ಒಂದು ಪಾನಿಪುರಿ ಬಾಯಲ್ಲಿ ಇಟ್ಕೊಂಡೆ ಯಾಕೊ ಏನೋ  ಮಿಸ್ಸಿಂಗ್  ಅನ್ನಿಸ್ತು.   ಇನ್ನ ಸ್ವಲ್ಪ  ಚಟ್ನಿ ಹಾಕೋಬೇಕೇನೋ ಅಂತ ಸ್ವಲ್ಪ ಚಟ್ನಿ  ಹಾಕಿಕೊಂಡೆ,  ಆದ್ರೆ ಏನು ರುಚಿ ಆಗ್ಲಿಲ್ಲ.  ಕೊನೆಗೆ ಸ್ವೀಟ್ ಹಾಕೊಂಡೆ ಅದೂ ಯಾಕೋ ರುಚಿ ಆಗ್ಲಿಲ್ಲ.  ಎಲ್ಲಾ ಕಡೆ  ಕೊರೋನ ಇರೋದರಿಂದ  ಸ್ವಲ್ಪ ಯೋಚನೆ ಶುರು ಆಯಿತು.  ಏನೊ ಹೊಗ್ಲಿ ಬಿಡು  ನಾಳೆ  ಸರಿ ಹೋಗಬಹುದು ಅಂದುಕೊಂಡೆ.

    ಮರುದಿನ ಸ್ನಾನ ಮಾಡಿ   ದೇವರ ಪೂಜೆ  ಮಾಡೋವಾಗ  ಊದಿನ ಕಡ್ಡಿ ಹಚ್ಚಿದೆ.  ಪ್ರತಿ ದಿನ ಘಮ ಘಮ ವಾಸನೆ ಬರೋ  ಊದಿನ ಕಡ್ಡಿ  ಏನೂ ವಾಸನೆಯೇ  ಬರಲಿಲ್ಲ. ಏನಪ್ಪ ಇದು ಅಂತ  ಕ್ಷಿತಿಜ್ ನ   ಕರೆದು ಕೇಳಿದೆ ನಿನಗೆ ಊದಿನ್ಕಡ್ಡಿ  ವಾಸನೆ  ಬರ್ತಿದೆಯ ಅಂತ,  ಆವನು ಹೌದು  ಅಂದ.  ಸರಿ ನನ್ನ ಡೌಟ್  ಇನ್ನೂ  ಜಾಸ್ತಿ ಆಯ್ತು . ನಮ್ಮ ಸ್ನೇಹಿತರೊಬ್ಬರು ನಮ್ಮ ಊರಿನ ಪ್ರಖ್ಯಾತ ಡಾಕ್ಟರ್ ಜಿತೇಂದ್ರ ಗುಪ್ತ ಅಂತ ( ಜಿತೇನ್ ಅಂತ ಕರೀತೀವಿ) .ಅವರು ಇಲ್ಲಿ ಕೊರೊನ ಪೇಷಂಟ್ ಗಳನ್ನ  ಟ್ರೀಟ್ ಮಾಡ್ತಾರೆ.   ಆವರಿಗೆ  ಮೊದಲು ಟೆಕ್ಸ್ಟ್ ಮೆಸೇಜ್ ಮಾಡ್ದೆ , ನಾನು ಟೆಸ್ಟ್ ಮಾಡಿಸಿಕೊಳ್ಳಲಾ ಅಂತ.      ನನ್ಗೆ ಬೇರೆ ಏನೂ symptoms  ಇರಲಿಲ್ಲ, ಜ್ವರ,  ನೆಗಡಿ, ಕೆಮ್ಮು, ಏನೂ ಇಲ್ಲ. ಅವರು ಟೇಸ್ಟ್ ಮತ್ತೆ ಸ್ಮೆಲ್ ಇಲ್ಲ ಅಂದ್ರೆ ಕೊರೋನ ಟೆಸ್ಟ್ ಮಾಡಿಸಿಬಿಡು ಅಂದ್ರು.

    ಪಾಸಿಟೀವ್ ಅಂತ ಗೊತ್ತಾದ ಆ ಕ್ಷಣ

    ಆಮೇಲೆ 3  ದಿನದಲ್ಲಿ ಬಂತು  ನೋಡಿ ರಿಸಲ್ಟ್ ! ಪಾಸಿಟೀವ್!! ಒಂದೇ  ಸಲ ಶಾಕ್ ಆಯಿತು.. ಒಂದು  ನಿಮಿಷದಲ್ಲಿ ಮುಂದೆ  ಏನಪ್ಪ ಅಂತ  ಯೋಚನೆ ಬಂತು. ಟಿವಿ ನ್ಯೂಸ್ ಚಾನೆಲ್ ಗಳಲ್ಲಿ ಒನ್ ಮಿನಿಟ್ ನಲ್ಲಿ  60 ನ್ಯೂಸ್ ಅಂತ   ತೋರಿಸ್ತಾರಲ್ಲ ಹಂಗೆ ಒಂದೇ ಒಂದು  ಮಿನಟ್ ನಲ್ಲಿ    ಏನ್ ಏನ್ ಮಾಡ್ಬೇಕು ಅಂತ ಎಲ್ಲಾ ಯೋಚನೆಗಳು flash ಆಗೋಕೆ ಶುರು ಆಯಿತು.  ಯಾವ ರೂಂ ನಲ್ಲಿ quarantine ಆಗಬೇಕು? ಆಸ್ಪತ್ರೆಗೆ ಅಡ್ಮಿಟ್ ಆಗಬೇಕಾ? ಹುಡುಗರನ್ನ ಯಾರು ನೋಡಿಕೊಳ್ಳುತ್ತಾರೆ?  ಅವರಿಗೆ ಅಡಿಗೆ ಹೇಗೆ  ಮಾಡೋದು? ಅಣ್ಣ ಅಮ್ಮನ್ಗೆ ಹೇಳಬೇಕಾ ಬೇಡವಾ?ಆಫೀಸ್ ಕೆಲಸ ಹೇಗೆ ಮಾಡೋದು? ಅಕಸ್ಮಾತ್ ಜಾಸ್ತಿ ಆದರೆ ಏನ್ ಮಾಡ್ಬೇಕು? ಮೆಡಿಕಲ್ ಇನ್ಶುರೆನ್ಸ್ ಕವರ್ ಆಗುತ್ತಾ? ಹೀಗೆ 28 ಪ್ರಶ್ನೆ ಗಳು ತಲೆಯಲ್ಲಿ .

    ಮನೋಜ್ ನಂಗೆ ಧೈರ್ಯ ಕೊಟ್ಟು ನೀನು ಏನೂ ಯೋಚ್ನೆ ಮಾಡ್ಬೇಡ ನಾನು ಎಲ್ಲಾ ನೋಡ್ಕೋತೀನಿ ಅಂದ್ರು. ಜಿತೇನ್  ಅವರು ಫೋನ್ ಮಾಡಿ ಹೇಳಿದ್ರು ಏನೂ ಯೋಚನೆ ಮಾಡಬೇಡ ನಾನು ಎಲ್ಲಾ ನೋಡ್ಕೊತೀನಿ.  ಏನೂ ಸಿಂಪ್ಟಮ್ಸ್ ಇಲ್ಲವಾದ್ದರಿಂದ ಮನೆಯಲ್ಲಿ ಕ್ವಾರಂಟೈನ್ ಆಗು ಅಂದ್ರು. ಏನಾದ್ರೂ ವ್ಯತ್ಯಾಸ ಅನ್ನಿಸಿದ್ರೆ ನಂಗೆ ಫೋನ್ ಮಾಡು ಅಂದ್ರು.

    ಇಷ್ಟರಲ್ಲಿ ನನ್ನ ತಮ್ಮ ಪವನ್ ಫೋನ್ ಮಾಡಿದ. ನಮ್ಮ ತಳಮಳ ನೋಡಿ ಅವನಿಗೆ ಗೊತ್ತಾಗಿರ್ಬೇಕು. ಅಷ್ಟರಲ್ಲಿ ಅಮ್ಮನ ಫೋನ್ ಕೂಡ ಬಂತು ಅವರಿಂದಲೂ ನಮಗೆ ಮುಚ್ಚಿಡಲು ಆಗಲಿಲ್ಲ ಅವರೆಲ್ಲ ಸ್ವಲ್ಪ ಹೆದರಿದರು ಆದ್ರೆ ನಾನೇ ಅವರಿಗೆ ಸಮಾಧಾನ ಮಾಡಿದೆ.

    ಇನ್ನು ನೆಕ್ಟ್ ಸ್ಟೆಪ್ ಅಂದ್ರೆ ಒಂದು ರೂಂ ನಲ್ಲಿ ನನಗೆ ಬೇಕಾಗುವ ಎಲ್ಲಾ ಸಾಮಾನನ್ನು ರೆಡಿ ಮಾಡಿಕೊಂಡು ಅಲ್ಲೇ ವಾಸ ಶುರು ಮಾಡಿದೆ.  ಹುಡುಗರಿಗೆ ನನ್ನ ಹತ್ತಿರ ಬರಬೇಡಿ ಅಂತ ಹೇಳಿದೆ.  ಪಾಪ ಅವರೇ ನನಗೆ ಸಮಾಧಾನ ಮಾಡಿದ್ರು ” ಅಮ್ಮಾ ನಿನಗೆ ಏನು ಬೇಕು ನಮಗೆ ಹೇಳು ಅಂದ್ರು” ಆರ್ಯ 5 ವರ್ಷದವಳು, ಅವಳು ನನ್ನ ಬಿಟ್ಟು ಇರಲೇ ಇಲ್ಲ ಇಲ್ಲಿಯ ತನಕ. ಅವಳದೇ ಯೋಚನೆ ಇತ್ತು ಆದ್ರೆ ಅವಳು ತುಂಬಾನೇ ಸಹಕರಿಸಿದಳು. ನನ್ನ ಹತ್ರ ಮಾತಾಡ್ಬೇಕು ಅನ್ಸಿದ್ರೆ ಫೇಸ್ ಟೈಮ್ ಮಾಡ್ತಿದ್ಲು.

    ಅಮ್ಮ ಅಣ್ಣ ನಂಗೋಸ್ಕರ  ಎಲ್ಲಾ ದೇವರಿಗೆ  ಪ್ರಾರ್ಥಿಸಿದ್ರು.
    ದಿನಾ ರಾತ್ರಿ ನನ್ನ ಬಗ್ಗೆ ವಿಚಾರಿಸುತ್ತ ಇದ್ರು.  ಪವನ್, ನಯನಾ ಕೂಡ ದಿನವೂ ನಮ್ಮ ಬಗ್ಗೆ ವಿಚಾರಿಸ್ತಿದ್ರು. ನಮ್ಮ ಫ್ರೆಂಡ್ಸ್ ದಿನಾ ಅಡಿಗೆ ಮಾಡಿ ನಮ್ಮ ಮನೆ ಬಾಗಿಲಿಗೆ ತಂದು ಇಡುತ್ತಿದ್ದರು.  ಮನೋಜ್ ನಂಗೆ  ಮೂರು ಹೊತ್ತೂ ಟೆಂಪ್ರೇಚರ್ ಚೆಕ್ ಮಾಡು,  ಆಕ್ಸಿ ಮೀಟರ್ ಚೆಕ್ ಮಾಡು ಅಂತ ವಿಚಾರಿಸ್ತಿದ್ರು.  ಟೈಮ್ ಟೈಮ್ ಗೆ ಊಟ ತಿಂಡಿ ಕೊಡ್ತಿದ್ರು.  ಎಲ್ಲರೂ ನನಗೆ ತುಂಬಾ ಧೈರ್ಯ ಕೊಟ್ರು.

    ನನಗೆ ಬೇರೆ ಯಾವ ಸಿಂಪ್ಟಮ್ಸ್ ಗಳು ಇಲ್ಲವಾದುದರಿಂದ ಬರೀ ವಿಟಮಿನ್ D  ವಿಟಮಿನ್ C ಮತ್ತು ಝಿಂಕ್ ಟ್ಯಾಬ್ಲೆಟ್ ತಗೋಳ್ಳಿಕ್ಕೆ ಹೇಳಿದ್ರು ಡಾಕ್ಟ್ರು . ಅಮ್ಮಾ ಕೆಲವು ಮನೆ ಔಷಧಿ ಗಳನ್ನು ಹೇಳಿದ್ರು. ದಿನ ಸ್ವಲ್ಪ ಸ್ಟೀಮ್ ಮಾಡಿ ಕೊಳ್ತಿದ್ದೆ. ಹಣ್ಣುಹಂಪಲು ತಿಂತಿದ್ದೆ. ಆಫೀಸ್ ಕೆಲ್ಸ ಮಾಡಿಕೊಳ್ತಿದ್ದೆ.  ಅರಿಶಿನ ಬಳಸ್ತಿದ್ದೆ.  ಬೇಜಾರಾದ್ರೆ Nerflix ನೋಡ್ತಿದ್ದೆ, ಇಲ್ಲ ಹಾಡು ಕೇಳ್ತಿದ್ದೆ.  ಒಂದು ರೀತಿಯ staycation   ಆಗಿತ್ತು ನನಗೆ.  ಟೈಮ್ ಟೈಮ್ ಕಾಫಿ ,ತಿಂಡಿ ,ಊಟ ಸಪ್ಲೆ ಬರ್ತಿತ್ತು. ಮತ್ತಿನ್ನೇನು ಮಜವೋ ಮಜಾ…..:-) ಮಕ್ಕಳು ಪಾಪ ಫೇಸ್ ಟೈಮ್ ಮಾಡಿ ಮಾತಾಡಿಸ್ತಿದ್ರು.  ಅವರುಗಳನ್ನು ಮನೋಜ್
    ಚೆನ್ನಾಗಿ ನೋಡ್ಕೊಂಡ್ರು. ಒಂದು ದಿನ ಆರ್ಯ ನನಗೆ ಅಮ್ಮ… ಡ್ಯಾಡಿಗೆ ಜಡೆ ಹಾಕೋಕೆ ಬರೋದಿಲ್ಲ ಅಂತ ಪಿಸುಗುಟ್ಟಿದ್ದಳು. ನಾನು ಅದನ್ನ ಕೇಳಿ ಜೋರಾಗಿ ನಕ್ಕೆ . ಹೀಗೇ ತಮಾಷೆಯಾಗಿ ಟೈಂ ಪಾಸ್ ಮಾಡಿಸ್ತಾ ಇದ್ರು ಹುಡುಗರು.

    quarantine ನಡುವೆಯೇ ಬಂತು ಮಗನ ಬರ್ತ್ ಡೇ

    ಇಷ್ಟರಲ್ಲಿ ನನ್ನ ಮಗನ ಬರ್ತಡೇ ಬಂತು ಇದೇ ಮೊದಲ ಸಲ  ನಾನು ಅವನ ಬರ್ತಡೇ ಗೆ ಏನೂ ಮಾಡೋಕೆ ಆಗೋಲ್ಲ ವಲ್ಲಪ್ಪಾ ಅಂತ ಬೇಜಾರಾಯ್ತು.  ಏನ್ ಮಾಡೋದು ಅಂತ ಯೋಚನೆ ಮಾಡ್ಬೇಕಾದ್ರೆ ಒಂದು  ಐಡಿಯಾ ಬಂತು.  ಯಾಕೆ  Drive through birthday  ಮಾಡ್ಬಾರ್ದು ಅಂತ. ಸ್ವಲ್ಪ ಯಾರ್ಡ್ ಡೆಕೊರೇಶನ್ಸ್ ಗಳನ್ನ  ಅಮೆಜಾನ್ ನಿಂದ ಆರ್ಡರ್ ಮಾಡಿದೆ. ಮನೋಜ್  ಅವುಗಳನ್ನು ನಮ್ಮ ಮನೆ ಮುಂದೆ ಡೆಕೊರೇಟ್ ಮಾಡಿದ್ರು.  ಒಂದು ಬೋರ್ಡ್ ಹಾಕಿದ್ವಿ ” ಇವತ್ತು ನಮ್ಮ ಮಗನ ಬರ್ತ್ ಡೇ ವಿಶ್ ಮಾಡೋಕೆ ಹಾರ್ನ್ ಮಾಡಿ” ಅಂತ ( USA ನಲ್ಲಿ ಯಾರೂ  ಕಾರ್  ಹಾರ್ನ್  ಮಾಡಲ್ಲ ಹೆಚ್ಚಾಗಿ )  ಆದ್ರೆ ಅವತ್ತು ಎಲ್ಲಾ ಕಾರುಗಳು ನಮ್ಮ ಮನೆ ಮುಂದೆ ಹಾರನ್ ಮಾಡಿ ಕ್ಷಿತಿಜ್ ಗೆ ವಿಶ್ ಮಾಡಿದ್ರು.

    ನಮ್ಮ ಫ್ರೆಂಡ್ಸ್ ಕೇಕ್ ಮತ್ತೆ  ಗಿಫ್ಟ್ ತೊಗೊಂಡು ಬಂದ್ರು. ಎಲ್ಲಾ ಮನೆಯ ಹೊರಗಿನ ಗಾರ್ಡನ್ ನಲ್ಲಿ ಸಣ್ಣ ಸೆಲೆಬ್ರೇಷನ್ ಮಾಡಿದ್ರು.  ನಾನು ದೂರದಿಂದ  ಎಲ್ಲಾ ನೋಡಿದೆ .ಕ್ಷಿತಿಜ್ ಗೆ ಈ ರೀತಿಯ ಹೊಸ ತರಹ  ಬರ್ತಡೇ ಸೆಲೆಬ್ರೇಷನ್ ತುಂಬಾ ಇಷ್ಟ ಆಯ್ತು. ಅವನ ಫ್ರೆಂಡ್ಸೆಲ್ಲಾ ಕಾರ್ ನಿಂದ  ವಿಶ್ ಮಾಡಿ ಮಾತಾಡ್ಸಿ ಹೋದ್ರು. ಹೀಗೆ ಮುಗಿಯಿತು ಹದಿನಾಲ್ಕು ದಿನ.

    ಹಿರಿಯರ ಆಶೀರ್ವಾದ,  ಕಿರಿಯರ ಪ್ರೀತಿ, ಎಲ್ಲರ ಪ್ರಾರ್ಥನೆ, ಸಹಕಾರದಿಂದ ನಂಗೆ ಹೆಚ್ಚು ಏನೂ ತೊಂದರೆ ಆಗದೆ ಬೇಗ ಕ್ವಾರಂಟೈನ್ ಮುಗಿಸಿ ಹೊರಬಂದೆ.  ಆಮೇಲೆ CT ಸ್ಕ್ಯಾನ್ ಮತ್ತು ಎಕ್ಸ್ ರೇ ಎಲ್ಲಾ ಮಾಡಿಸಿ ನನಗೆ ಸಂಪೂರ್ಣ ಗುಣ ಆಗಿದೆ ಅಂತ ಖಚಿತಪಡಿಸಿಕೊಂಡ್ವಿ.

    ಒಟ್ಟಿನಲ್ಲಿ ಧೈರ್ಯ  ಒಂದು ಇದ್ದರೆ ಎಲ್ಲವನ್ನೂ ಸಾಧಿಸಬಹುದು  ಅಂತಾರಲ್ಲ ಹಾಗೆ.  ಅಮ್ಮ ಹೇಳಿದ ಹಾಗೆ ಆತ್ಮಸ್ಥೈರ್ಯ, ಒಳ್ಳೆಯ ಆಲೋಚನೆ ಮಾಡಿ ಎಲ್ಲಾ ಸರಿ ಹೋಗುತ್ತೆ.  ಎಂತಹ ಶತ್ರುಗಳನ್ನು ಬೇಕಾದರೂ ಸದೆ ಬಡಿಯಬಹುದು. ನಾನು ನನ್ನನ್ನು ಚೆನ್ನಾಗಿ ನೋಡಿಕೊಂಡ ನನ್ನ ಗಂಡ, ಮಕ್ಕಳಿಗೆ , ಅಣ್ಣ , ಅಮ್ಮ,  ತಮ್ಮನಿಗೆ,  ನಮ್ಮ ಸ್ನೇಹಿತರಿಗೆ ಹಾಗೂ ನಮ್ಮ ಡಾಕ್ಟರಿಗೆ ಸದಾ ಚಿರರುಣಿ. 


    ಕೊರೋನಾ ಗೆದ್ದವರು ತಮ್ಮ ಅನುಭವದ ಕಥೆಯನ್ನು [email protected] ಗೆ ಇ ಮೇಲ್ ಮಾಡಿ. ಸೂಕ್ತವಾದುವನ್ನು ಪ್ರಕಟಿಸಲಾಗುವುದು

    ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ವಿಷಯವಾರು ತಜ್ಞರ ನೇಮಕ


    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಸಕ್ತ ವರ್ಷದಿಂದಲೇ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ವಿಷಯವಾರು ತಜ್ಞರ ಸಮಿತಿಗಳನ್ನು ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥ ನಾರಾಯಣ ತಿಳಿಸಿದರು.

    ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಎಲ್ಲ ಸಮಿತಿಗಳು ಜೂನ್‌ 30ರೊಳಗೆ ವರದಿಗಳನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ ಎಂದಿದ್ದಾರೆ.

    ವಿಷಯವಾರು ತಜ್ಞರ ಸಮಿತಿಯ ಮುಖ್ಯಸ್ಥರ ವಿವರ ಹೀಗಿದೆ:

    ಸಾಮಾಜಿಕ ವಿಜ್ಞಾನ:
    ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ (ಅಧ್ಯಕ್ಷರು), ಪ್ರೊ.ಬಿ.ಪಿ.ವೀರಭದ್ರಪ್ಪ, ಪ್ರೊ.ಬಿ.ಕೆ.ತುಳಸೀಮಾಲಾ, ಪ್ರೊ.ಎನ್.ಆರ್.ಭಾನುಮೂರ್ತಿ, ಪ್ರೊ.ಹರೀಶ್‌ ರಾಮಸ್ವಾಮಿ, ಪ್ರೊ.ಜಿ.ಸರ್ವಮಂಗಳ, ಪ್ರೊ.ವಿ.ಎ.ಅಮಿನಾಭಾವಿ, ಪ್ರೊ.ಎ.ರಾಮೇಗೌಡ, ಪ್ರೊ.ಸಂಗೀತಾ ಮನೆ, ಪ್ರೊ.ಎನ್.ನರಸಿಂಹಮೂರ್ತಿ, ಪ್ರೊ.ನಿರಂಜನ, ಪ್ರೊ.ಆರ್.‌ಆನ್.‌ ಮನಗೊಳಿ, ಪ್ರೊ.ಗೋಪಾಲಕೃಷ್ಣ ಜೋಶಿ ಸದಸ್ಯರು.

    ಭಾಷೆ ಮತ್ತು ಭಾಷಾಶಾಸ್ತ್ರ:
    ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ್‌ (ಅಧ್ಯಕ್ಷರು), ಪ್ರೊ.ಎಸ್.ಸಿ.ರಮೇಶ್‌, ಪ್ರೊ.ಕೆ.ಇ,ದೇವನಾಥನ್‌, ಪ್ರೊ.ಲಿಂಗರಾಜ ಗಾಂಧಿ, ಪ್ರೊ.ರಚೇಲ್‌ ಕುರಿಯನ್‌, ಪ್ರೊ.ಗಂಗಾಧರಯ್ಯ, ಪ್ರೊ.ಗೋಪಾಲಕೃಷ್ಣ ಜೋಶಿ ಸದಸ್ಯರು.

    ಲಲಿತ ಕಲೆ ಮತ್ತು ದೃಶ್ಯ ಮಾಧ್ಯಮ:
    ಸಂಗೀತ ಮತ್ತು ಕಲಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ (ಅಧ್ಯಕ್ಷರು), ಪ್ರೊ.ಜಯಕುಮಾರ್‌ ರೆಡ್ಡಿ, ಪ್ರೊ.ಎಸ್.‌ಎನ್.ಸುಶೀಲ, ಪ್ರೊ.ಕೆ.ರಾಮಕೃಷ್ಣಯ್ಯ, ಪ್ರೊ.ಗೋಪಾಲಕೃಷ್ಣ ಜೋಶಿ ಸದಸ್ಯರು.

    ವಿಜ್ಞಾನ ಮತ್ತು ಗಣಿತ ಶಾಸ್ತ್ರ:
    ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್‌ (ಅಧ್ಯಕ್ಷರು), ಪ್ರೊ.ಟಿ.ಡಿ.ಕೆಂಪರಾಜು, ಪ್ರೊ.ಎಸ್.‌ವಿ.ಹಲಸೆ, ಪ್ರೊ.ಸಿದ್ದು ಪಿ.ಹಲಗೂರು, ಪ್ರೊ..ಎಸ್.ಎಂ.ಶಿವಪ್ರಸಾದ್‌, ಪ್ರೊ.ಶ್ರೀಧರ್‌, ಪ್ರೊ.ಮಂಜುನಾಥ ಪಟ್ಟಾಭಿ, ಪ್ರೊ.ಯು.ಎಸ್.ಮಹಾಬಲೇಶ್ವರ್‌, ಪ್ರೊ.ಪಿ.ಎಂ.ಪಾಟೀಲ್‌, ಪ್ರೊ.ಪರಮೇಶ್ವರ್‌ ವಿ.ಪಂಡಿತ್‌, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು).

    ರಾಸಾಯನಿಕ ಮತ್ತು ಜೀವವಿಜ್ಞಾನ ಶಾಸ್ತ್ರ:
    ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ (ಅಧ್ಯಕ್ಷರು), ಪ್ರೊ.ಎಲ್.ಗೋಮತಿ ದೇವಿ, ಪ್ರೊ.ದಯಾನಂದ ಅಗಸರ್‌, ಪ್ರೊ.ಜಿ.ಆರ್.‌ನಾಯಕ್‌, ಪ್ರೊ.ವಿ.ಆರ್.ದೇವರಾಜ್‌, ಪ್ರೊ.ಬಾಲಕೃಷ್ಣ ಕಲ್ಲೂರಾಯ, ಪ್ರೊ.ಎಚ್.ಎಸ್.ಭೋಜನಾಯಕ್‌, ಪ್ರೊ.ಲಕ್ಷ್ಮೀ ಇನಾಂದಾರ್‌, ಪ್ರೊ.ವಿ.ಕೃಷ್ಣ, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು)

    ಭೂ ವಿಜ್ಞಾನ:
    ಕೆಬಿಎನ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಂ.ಪಠಾಣ್‌ (ಅಧ್ಯಕ್ಷರು), ಪ್ರೊ.ಅಶೋಕ್‌ ಅಂಜಗಿ, ಪ್ರೊ.ಪಿ.ಮಾದೇಶ್‌, ಪ್ರೊ.ಆಸ್ಪ್ಯಾಕ್‌ ಅಹಮದ್‌, ಪ್ರೊ.ಎಸ್.‌ವಿ.ಕೃಷ್ಣಮೂರ್ತಿ, ಪ್ರೊ.ಎನ್.‌ನಂದಿನಿ, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು)

    ವಾಣಿಜ್ಯ ಮತ್ತು ನಿರ್ವಹಣೆ:
    ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿಎಸ್.‌ಯಡಪಡಿತ್ತಾಯ (ಅಧ್ಯಕ್ಷರು), ಪ್ರೊ.ಎಂ.ರಾಮಚಂದ್ರಗೌಡ, ಪ್ರೊ.ಆರ್‌.ಎಲ್.ಹೈದರಾಬಾದ್‌, ಪ್ರೊ.ಎಚ್.‌ಎಸ್.‌ಅನಿತಾ, ಪ್ರೊ..ಡಿ.ಆನಂದ್‌, ಪ್ರೊ.ವಿಜಯ್‌ ಬೂತಪುರ್‌, ಪ್ರೊ.ಸಿಂಥಿಯಾ ಮೆನೇಜಸ್‌, ಪ್ರೊ.ಮುಸ್ತೈರಿ ಬೇಗಂ, ಪ್ರೊ.ಸುದರ್ಶನ್‌ ರೆಡ್ಡಿ, ಡಾ.ಅಲೋಯಿಸಿಸ್‌ ಎಡ್ವರ್ಡ್‌, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು).

    ಎಂಜಿನಿಯರಿಂಗ್:‌
    ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ (ಅಧ್ಯಕ್ಷರು), ಪ್ರೊ.‌ಕೆ.ಆರ್.ವೇಣುಗೋಪಾಲ್‌, ಪ್ರೊ.ಕೆ.ಎನ್.ಬಿ.ಮೂರ್ತಿ, ಪ್ರೊ.ಎಸ್.ವಿದ್ಯಾಶಂಕರ್‌, ಪ್ರೊ.ಪುಟ್ಟರಾಜು, ಪ್ರೊ.ಶ್ರೀನಿವಾಸ ಬಲ್ಲಿ, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು).

    ಪ್ರೊ.ಗೋಪಾಲಕೃಷ್ಣ ಜೋಶಿ ಅವರು ಎಲ್ಲ ವಿಷಯ ಸಮಿತಿಗಳಿಗೆ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.

    ಈ ಮಧ್ಯಾಹ್ನದ ಹೆಡ್ ಲೈನ್

    ದೇಶ

    ಈ ಹೊತ್ತಿನ ಹೆಡ್ ಲೈನ್

    ದೇಶ

    ಜಲ ಸಂಪನ್ಮೂಲ ಇಲಾಖೆ ಟೆಂಡರ್; ವಿಶ್ವನಾಥ್ ಆರೋಪಕ್ಕೆ ಇಲಾಖೆ ಕಾರ್ಯದರ್ಶಿಯಿಂದ ಸ್ಪಷ್ಟನೆ


    ರಾಜ್ಯದ ಜಲ ಸಂಪನ್ಮೂಲ ಇಲಾಖೆಯಲ್ಲಿನ ಎಲ್ಲಾ ಟೆಂಡರ್ ಪ್ರಕ್ರಿಯೆಗಳನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ನಡೆಸಲಾಗಿದೆ. ಅಲ್ಲದೆ, ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.

    ಶಾಸಕ ಎಚ್.ವಿಶ್ವನಾಥ್ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಸರಕಾರದ ಸ್ಪಷ್ಟನೆ ಹೀಗಿದೆ;

    ಭದ್ರಾ ಮೇಲ್ದಂಡೆ ಮತ್ತು ಕಾವೇರಿ ನೀರಾವರಿ ಯೋಜನೆಗಳಿಗೆ ಆರ್ಥಿಕ ಇಲಾಖೆಯ ಸಹಮತಿ ಹಾಗೂ ಸಮ್ಮತಿ ಇಲ್ಲದೆಯೇ 20 ಸಾವಿರ ಕೋಟಿ ರೂ. ಟೆಂಡರ್ ಆಹ್ವಾನಿಸಿರುವುದಾಗಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 21,473.67 ಕೋಟಿ ರೂ. ಮೊತ್ತದ ಸಮಗ್ರ ಪರಿಷ್ಕೃತ ಯೋಜನಾ ವರದಿಯ ಶಿಫಾರಸ್ಸಿನ ಅನ್ವಯ ಸರಕಾರವು ದಿನಾಂಕ: 16-12-2020 ರಂದು ಆರ್ಥಿಕ ಇಲಾಖೆ ಸಹಮತಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

    ಅಂತೆಯೇ, ದಿನಾಂಕ: 24-12-2020 ರಂದು ನಡೆದ ಕೇಂದ್ರ ಜಲಶಕ್ತಿ ಮಂತ್ರಾಲಯದ ತಾಂತ್ರಿಕ ಸಲಹಾ ಸಮಿತಿಯಲ್ಲಿ ಈ ಯೋಜನೆಗೆ 16,125.48 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ.

    ಭದ್ರಾ ಮೇಲ್ದಂಡೆ ಯೋಜನೆಯಡಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ 5,57,022 ಎಕರೆ ಬರಪೀಡಿತ ಮಧ್ಯ ಕರ್ನಾಟಕದ ಬವಣೆ ನೀಗಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿತ್ತು. ದಿನಾಂಕ: 25-03-2021 ರಂದು ನಡೆದ ಸಭೆಯಲ್ಲಿ ಈ ಕಡತವನ್ನು ಕೇಂದ್ರ ಸರಕಾರದ ಹೂಡಿಕೆ ತೀರುವಳಿ ಮಂಡಳಿ (ಇನ್‌ವೆಸ್ಟ್‌ಮೆಂಟ್ ಕ್ಲಿಯರೆನ್ಸ್ ಬೋರ್ಡ್) ಗೆ ನೀಡಲಾಗಿದೆ. ಪ್ರಸ್ತುತ ಉನ್ನತಾಧಿಕಾರ ಸಮಿತಿಯ ಮುಂದೆ ತೀರುವಳಿಗಾಗಿ ಪ್ರಸ್ತಾವನೆ ಸಲ್ಲಿಕೆ ಹಂತದಲ್ಲಿ ಇದೆ.

    ಈ ಯೋಜನೆಗೆ ಸಂಬಂಧಿಸಿದಂತೆ ದಿನಾಂಕ:02-12-2020 ರಲ್ಲಿ ನಡೆದ ನಿರ್ದೇಶಕ ಮಂಡಳಿಯ 16ನೇ ಸಭೆಯಲ್ಲಿ ಮಂಜೂರಾತಿ ಪಡೆಯಲಾಗಿದೆ. ಅಲ್ಲದೆ, 21,473 ಕೋಟಿ ರೂ. ಯೋಜನೆಗೆ ಆರ್ಥಿಕ ಇಲಾಖೆಯ ಸಹಮತಿ ಮತ್ತು ಸಮ್ಮತಿಯೊಂದಿಗೆ ಅನುಮೋದಿತವಾಗಿದೆ. ಈ ಯೋಜನೆಯ ಜಾರಿಗೆ ಕೇಂದ್ರ ಸರಕಾರವು ರಾಷ್ಟ್ರೀಯ ಯೋಜನೆಯಡಿ 16,125.4 ಕೋಟಿ ರೂ.ಗಳನ್ನು ಭರಿಸಲಿದೆ. ಈ ಯೋಜನೆಯನ್ನು 2023-24 ರೊಳಗೆ ಪೂರ್ಣಗೊಳಿಸುವ ಷರತ್ತಿನೊಂದಿಗೆ ಕೇಂದ್ರ ಸರಕಾರವು ಅನುದಾನ ಮಂಜೂರು ಮಾಡಿದೆ. ಹೀಗಾಗಿ ಈ ಯೋಜನೆಯ ಜಾರಿಗೆ ಆರ್ಥಿಕ ಸಂಪನ್ಮೂಲದ ಕೊರತೆ ಇಲ್ಲ.

    ಇಪ್ಪತ್ತು ಸಾವಿರ ಕೋಟಿ ರೂ. ಟೆಂಡರ್ ಕರೆದಿದ್ದು, ಇದಕ್ಕೆ ಅನುಮತಿ ಇಲ್ಲ ಎಂಬ ಆರೋಪಕ್ಕೆ ಸಂಬಂದಿಸಿ; ದಿನಾಂಕ:25-03-2021 ರಂದು ಜರುಗಿದ ಸಭೆಯಲ್ಲಿ ಕೇಂದ್ರ ಸರಕಾರದ ಷರತ್ತುಗಳಿಗೆ ಒಳಪಟ್ಟು ಅನುಮೋದನೆ ನೀಡಲಾಗಿದೆ. ಎಲ್ಲಾ ಕಾಮಗಾರಿಗಳನ್ನು 2023-24 ನೇ ಸಾಲಿನ ಒಳಗೆ ಪೂರ್ಣ ಗೊಳಿಸಬೇಕಿರುವುದರಿಂದ ಡ್ರಿಪ್ ಕಾಮಗಾರಿ ಅಂದಾಜು ಪಟ್ಟಿಗಳನ್ನು ಡ್ರಿಪ್ ಸಮಿತಿಯ ಐದು ಸಭೆಗಳಲ್ಲಿ ಸವಿವರವಾಗಿ ಚರ್ಚಿಸಿ ಹಾಗೂ ನಿಗಮದ ಅಂದಾಜು ಪರಿಶೀಲನಾ ಸಮಿತಿಯಿಂದ ಅನುಮತಿ ಪಡೆದು ಕರ್ನಾಟಕ ಸಾರ್ವಜನಿಕ ಸಂಗ್ರಹಗಳಲ್ಲಿನ ಖರೀದಿಗಳಲ್ಲಿ ಪಾರದರ್ಶಕತಾ ಅಧಿನಿಯಮದಲ್ಲಿನ ನಿಯಮಾನುಸಾರ 4026.60 ಕೋಟಿ ಮೊತ್ತಕ್ಕೆ ಏಳು ಪ್ಯಾಕೇಜ್‍ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. ಇದು ಪ್ರಕ್ರಿಯೆಯ ವಿವಿಧ ಹಂತಗಳಲಿವೆ. ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ವರ್ಷ ಟೆಂಡರ್ ಪ್ರಕ್ರಿಯೆ ಮಾಡಲಾಗಿಲ್ಲ ಹೀಗಾಗಿ ಪ್ರಸ್ತುತ ಟೆಂಡರ್ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಈ ಯೋಜನೆಯ ಜಾರಿಗೆ ಸಚಿವ ಸಂಪುಟದ ಅನುಮೋದನೆಯನ್ನು ಪಡೆಯಲಾಗಿದೆ.

    ಬಿಜೆಪಿಯ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್‌ ಸದಸ್ಯ ಎಚ್.‌ವಿಶ್ವನಾಥ್‌ ಮಾಡಿರುವ ಆರೋಪಗಳಿಗೆ ಜಲ ಸಂಪನ್ಮೂಲ ಇಲಾಖೆಯ ಸರಕಾರದ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಪೇಶ್ವೆ ಅವರಿಂದ ಪ್ರಕಟಣೆ ಮೂಲಕ ಸ್ಪಷ್ಟನೆ ಕೊಡಿಸಲಾಗಿದೆ

    ರಾಜ್ಯದಲ್ಲಿ ಸದ್ಯಕ್ಕಂತು ನಾಯಕತ್ವ ಬದಲಿಲ್ಲ

    ನಾಯಕತ್ವ ಬದಲಾವಣೆ ಕುರಿತು ಹೇಳಿಕೆ ಕೊಟ್ಟವರ ವಿರುದ್ಧ ಕೆಲವೇ ದಿನಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ನಿರ್ಧರಿಸಿದೆ ಎಂದು ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ಅವರು ಪತ್ರಕರ್ತರಿಗೆ ತಿಳಿಸಿದರು.

    ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ನಡೆದ ರಾಜ್ಯ ಕೋರ್ ಕಮಿಟಿ ಸಭೆಯ ಬಳಿಕ ಅವರು ಮಾತನಾಡಿದರು.

    ನಾಯಕತ್ವದ ಪ್ರಶ್ನೆ ಚರ್ಚೆ ಆಗಿಲ್ಲ ಎಂದ ಅವರು, ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅದರಲ್ಲಿ ಯಾವುದೇ ಬದಲಾವಣೆ ಇಲ್ಲವೇ ಇಲ್ಲ ಎಂದು ರಾಜ್ಯ ಉಸ್ತುವಾರಿಗಳಾದ ಅರುಣ್ ಸಿಂಗ್ ಅವರು ತಿಳಿಸಿದ್ದಾರೆ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಕಟೀಲ್ ಅವರು ಇದೇ ಮಾತನ್ನು ತಿಳಿಸಲು ಹೇಳಿದ್ದಾರೆ ಎಂದರು.

    ಸಂಪುಟ ಪುನಾರಚನೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅದು ಮಾಧ್ಯಮದಲ್ಲಿ ಬರುತ್ತಿರುವ ಸುದ್ದಿಯಷ್ಟೇ ಎಂದು ಸ್ಪಷ್ಟಪಡಿಸಿದರು.
    ಜೂನ್ 26ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿಯನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು. ಜಿಲ್ಲಾ ಕಾರ್ಯಕಾರಿಣಿಯನ್ನು ಜುಲೈ 1ರಿಂದ 15ರವರೆಗೆ ಮತ್ತು 16ರಿಂದ ಮಂಡಲ ಕಾರ್ಯಕಾರಿಣಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

    ರಾಜ್ಯದ ಬಿಜೆಪಿ ಸರಕಾರ ಮತ್ತು ಪಕ್ಷದ ಇಮೇಜ್ ಜಾಸ್ತಿ ಮಾಡಲು ಪಕ್ಷ ಮತ್ತು ಸರಕಾರ ಜೊತೆಜೊತೆಯಾಗಿ ಕೆಲಸ ಮಾಡಲು ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
    ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ ಕಾಂಗ್ರೆಸ್ ಪಕ್ಷವು ಈ ದೇಶಕ್ಕೆ ದ್ರೋಹ ಬಗೆದಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಜೂನ್ 25ರಂದು ತುರ್ತು ಪರಿಸ್ಥಿತಿಯ ನೆನಪಿಗಾಗಿ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಕರಾಳ ದಿನಾಚರಣೆ ಮಾಡಲು ಪಕ್ಷ ನಿರ್ಧರಿಸಿದೆ. ಆ ದಿನ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಪರಿಸ್ಥಿತಿ ವೇಳೆ ಜೈಲಿನಲ್ಲಿದ್ದವರನ್ನು ಗುರುತಿಸುವ ಕಾರ್ಯ ನಡೆಯಲಿದೆ ಎಂದ ಅವರು, ನಾನೂ ಕೂಡ ಆಗ ಜೈಲಿನಲ್ಲಿದ್ದೆ ಎಂದು ನೆನಪಿಸಿದರು. ಆಗ ಪತ್ರಿಕಾ ಮುದ್ರಣವೂ ಬ್ಯಾನ್ ಆಗಿತ್ತು ಎಂದರು.

    ಜೂನ್ 21ರಂದು ಯೋಗ ದಿನಾಚರಣೆ ನಡೆಯಲಿದೆ. ಕೋವಿಡ್ ನಿಯಮಗಳನ್ನು ಪಾಲಿಸಿ ಪ್ರತಿ ತಾಲ್ಲೂಕಿನಲ್ಲೂ ಯೋಗ ದಿನ ಆಚರಿಸಬೇಕು. ಅದರಲ್ಲಿ ಕಲಾವಿದರು, ಪ್ರಮುಖ ವ್ಯಕ್ತಿಗಳು, ಕ್ರೀಡಾಪಟುಗಳು, ಸಾರ್ವಜನಿಕರು ಭಾಗವಹಿಸಲು ಅವರಿಗೆ ಆಹ್ವಾನ ಕೊಡಬೇಕು ಎಂದು ನಿರ್ಧರಿಸಲಾಗಿದೆ ಎಂದರು.

    ಜೂನ್ 23ರಂದು ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಮತ್ತು ಜುಲೈ 6ರಂದು ಅವರ ಜನ್ಮ ದಿನ ಇದ್ದು, ಈ ಅವಧಿಯಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಚಿಂತನೆಗಳು, ಜೀವನಸ್ಫೂರ್ತಿ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಸಂಕಿರಣಗಳನ್ನು ಆಯೋಜಿಸಲಾಗುವುದು ಎಂದರು.

    ಅನಾಥ ಮಕ್ಕಳಿಗೆ 10 ಲಕ್ಷ ರೂಪಾಯಿ ನೀಡುವ ಕೇಂದ್ರ ಸರಕಾರದ ಯೋಜನೆ ಮತ್ತು 80 ಕೋಟಿ ಜನರಿಗೆ ಉಚಿತ ಪಡಿತರ ಕೊಡುವ ಕಾರ್ಯಕ್ರಮ, ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಒಂದು ಲಕ್ಷ ನೀಡುತ್ತಿರುವುದು- ಇದಕ್ಕಾಗಿ ಪಕ್ಷವು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ತಿಳಿಸಿದರು.
    ಮಂಬರುವ ಜಿಲ್ಲಾ ಪಂಚಾಂಯತ್, ತಾಲ್ಲೂಕು ಪಂಚಾಯತ್ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾ ಘಟಕಗಳಿಗೆ ಸೂಚಿಸಲು ನಿರ್ಧರಿಸಲಾಗಿದೆ. ಕೋವಿಡ್‍ನಿಂದ ಮೃತಪಟ್ಟ ವಿವಿಧ ಕ್ಷೇತ್ರಗಳ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ ಎಂದರು.


    ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಕ್ರಮ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್


    ಪಕ್ಷದ ವಿರುದ್ಧ ಯಾರೂ ಮಾತನಾಡಬಾರದು. ಪಕ್ಷಕ್ಕೆ ನಷ್ಟ ಉಂಟಾಗುವ ರೀತಿಯಲ್ಲಿ ಎರಡರಿಂದ ಮೂರು ಜನರು ಕೆಲಸ ಮಾಡುತ್ತಿದ್ದಾರೆ. ಅಂಥ ಕೆಲವರ ವಿರುದ್ಧ ಪಕ್ಷವು ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಬಿಜೆಪಿ ಉಸ್ತುವಾರಿಗಳೂ ಆದ ಅರುಣ್ ಸಿಂಗ್ ಅವರು ಇಂದು ತಿಳಿಸಿದರು.

    ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಪಕ್ಷದ ವಿರುದ್ಧ ಮಾತನಾಡುವವರಿಗೆ ಹಾಗೆ ಮಾಡದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

    ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷವಾಗಿದೆ. ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡಬೇಕು. ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಅವರ ವಿಫಲತೆಗಳ ಕುರಿತು ಮಾತನಾಡಬೇಕು ಎಂದರು.
    ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಹಾಗೂ ಶ್ರೀ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ನಮ್ಮ ಪಕ್ಷದ ಮುಖಂಡರು ಮುಂದಾಗಬೇಕು ಎಂದು ಅವರು ಸೂಚಿಸಿದರು.

    ಪೌಷ್ಟಿಕಾಂಶ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಕೆನೆಭರಿತ ಹಾಲಿನ ಪುಡಿ

    ರಾಜ್ಯದ ಮುಖ್ಯಮಂತ್ರಿಗಳ‌ ಆಶಯದಂತೆ ಕೋವಿಡ್ ಸಂದರ್ಭದಲ್ಲಿ‌ ವಿದ್ಯಾರ್ಥಿಗಳಿಗೆ ಪೋಷಕಾಂಶದ ಆಹಾರವನ್ನು ಒದಗಿಸುವ ಭಾಗವಾಗಿ ಜೂನ್, ಜುಲೈ 2021ರ ಮಾಹೆಗಳಿಗೆ ಕೆನೆಭರಿತ‌ ಹಾಲಿನ ಪುಡಿಯನ್ನು ವಿತರಿಸಲು ಶಿಕ್ಷಣ‌ ಇಲಾಖೆಯು ಇಂದು 16371 ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿದೆ‌ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಶಾಲೆಗಳು ಭೌತಿಕವಾಗಿ ನಡೆಯದೇ‌ ಇದ್ದರೂ ಮಧ್ಯಾಹ್ನ ಉಪಹಾರದ ಆಹಾರ ಧಾನ್ಯಗಳು, ಅಡುಗೆ ಎಣ್ಣೆ ಸೇರಿದಂತೆ ಪೂರಕ‌ ಸಾಮಗ್ರಿಗಳನ್ನು ನಿರಂತರವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ದೊರಕಬೇಕು ಎನ್ನುವ ಸದುದ್ದೇಶದಿಂದ
    ಈಗ ಜೂನ್ ಹಾಗೂ ಜುಲೈ ಮಾಹೆಗಳಿಗೆ ಸಂಬಂಧಿಸಿದಂತೆ ಪ್ರತಿ‌ ವಿದ್ಯಾರ್ಥಿಗೆ ಪ್ರತಿ‌ ಮಾಹೆಗೆ ಅರ್ಧ ಕಿಲೋಗ್ರಾಂ ಕೆನೆಭರಿತ‌ ಹಾಲಿನ ಪುಡಿಯನ್ನು ಒದಗಿಸಲು ಆಲೋಚಿಸಿದ್ದೇವೆ. ಆ ಮೂಲಕ ನಮ್ಮ ವಿದ್ಯಾರ್ಥಿಗಳ ಆರೋಗ್ಯಕ್ಕೆ‌ ಪರಿಪೂರ್ಣ ಬೆಂಬಲವನ್ನು ದೊರಕಿಸುವ, ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶ ಸರ್ಕಾರದ್ದಾಗಿದೆ‌ ಎಂದಿದ್ದಾರೆ.

    ಸರ್ಕಾರದ ಈ ನಿರ್ಧಾರವು ನಮ್ಮ ಮಕ್ಕಳ ಪೌಷ್ಟಿಕತೆಗೆ ಪೂರಕವಾಗುವುದಷ್ಟೇ ಅಲ್ಲ, ಸಂಕಷ್ಟದಲ್ಲಿರುವ ಗ್ರಾಮೀಣ ಹಾಲು ಉತ್ಪಾದಕರ, ರೈತರ ಆರ್ಥಿಕ ಮಟ್ಟ ಸುಧಾರಿಸಲು‌ ನೆರವಾಗಲಿದೆ ಎಂದು ಸಹ ಸಚಿವ ಸುರೇಶ್ ಕುಮಾರ್‌ ಹೇಳಿದ್ದಾರೆ. ಸಾರ್ವಜನಿಕ ಶಿಕ್ಷಣ‌ ಇಲಾಖೆಯ ಆಯುಕ್ತರಿಗೆ ಈ ಹಾಲಿನ ಪುಡಿಯ ಪ್ಯಾಕೆಟ್ ವಿತರಣಾ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿ‌ ನಿಗದಿ ಪಡಿಸಲಾಗಿದೆ ಎಂದಿರುವ ಸಚಿವರು ತಮ್ಮ ಇಲಾಖೆಯು ಸಲ್ಲಿಸಿದ ಪ್ರಸ್ತಾವನೆಗೆ ಅತಿಶೀಘ್ರದಲ್ಲಿ ಅನುಮೋದನೆ ನೀಡಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

    ವೈರಾಣು ಇನ್ನೂ ನಮ್ಮ ನಡುವೆಯೇ ಇದ್ದು, ಅದು ರೂಪಾಂತರಗೊಳ್ಳುವ ಸಾಧ್ಯತೆಯಿದೆ, ಹೀಗಾಗಿ ನಾವು ಸನ್ನದ್ಧವಾಗಿರಬೇಕು: ಪ್ರಧಾನಿ

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಕೋವಿಡ್-19 ಮುಂಚೂಣಿ ಕಾರ್ಮಿಕರಿಗಾಗಿ `ವೈಯಕ್ತೀಕರಿಸಿದ ಕ್ರ್ಯಾಶ್ ಕೋರ್ಸ್’ ಕಾರ್ಯಕ್ರಮಕ್ಕೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಈ ತರಬೇತಿ ಕಾರ್ಯಕ್ರಮವನ್ನು 26 ರಾಜ್ಯಗಳಲ್ಲಿರುವ 111 ತರಬೇತಿ ಕೇಂದ್ರಗಳಲ್ಲಿ ನಡೆಸಲಾಗುವುದು. ಈ ಉಪಕ್ರಮದಲ್ಲಿ ಸುಮಾರು ಒಂದು ಲಕ್ಷ ಮುಂಚೂಣಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು. ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ. ಮಹೇಂದ್ರ ನಾಥ್ ಪಾಂಡೆ ಸೇರಿದಂತೆ ಅನೇಕ ಕೇಂದ್ರ ಸಚಿವರು, ರಾಜ್ಯಗಳ ಸಚಿವರು, ತಜ್ಞರು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು, ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು ಕೊರೊನಾ ವಿರುದ್ಧದ ಹೋರಾಟದಲ್ಲಿ ನಮ್ಮ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು. ವೈರಾಣು ಇನ್ನೂ ನಮ್ಮ ನಡುವೆಯೇ ಇದ್ದು, ಅದು ರೂಪಾಂತರಗೊಳ್ಳುವ ಸಾಧ್ಯತಯಿದೆ ಎಂದು ಅವರು ಎಚ್ಚರಿಸಿದರು. ವೈರಾಣು ನಮ್ಮ ಮುಂದೆ ಒಡ್ಡಬಹುದಾದ ಸವಾಲುಗಳು ಎಂಥವು ಎಂಬುದನ್ನು ಎರಡನೇ ಅಲೆಯು ನಿರೂಪಿಸಿದೆ. ಈ ಸವಾಲುಗಳನ್ನು ಎದುರಿಸಲು ದೇಶ ಸನ್ನದ್ಧವಾಗಿರಬೇಕು, ಈ ನಿಟ್ಟಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುಂಚೂಣಿ ಕಾರ್ಯಕರ್ತರನ್ನು ತರಬೇತುಗೊಳಿಸುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು.

    ಕೋವಿಡ್‌ ಸಾಂಕ್ರಾಮಿಕವು ವಿಶ್ವದ ಪ್ರತಿಯೊಂದು ದೇಶ, ಸಂಸ್ಥೆ, ಸಮಾಜ, ಕುಟುಂಬ ಮತ್ತು ವ್ಯಕ್ತಿಯ ಸಾಮರ್ಥ್ಯವನ್ನು ಪರೀಕ್ಷಿಸಿದೆ ಎಂದು ಪ್ರಧಾನಿ ನೆನಪಿಸಿದರು. ಇದೇ ವೇಳೆ, ವಿಜ್ಞಾನ, ಸರಕಾರ, ಸಮಾಜ, ಸಂಸ್ಥೆ ಅಥವಾ ವ್ಯಕ್ತಿಗಳಾಗಿ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಇದು ನಮಗೆ ಎಚ್ಚರಿಕೆ ಗಂಟೆಯಾಗಿದೆ ಎಂದರು. ಭಾರತವು ಈ ಸವಾಲನ್ನು ಸ್ವೀಕರಿಸಿತು ಮತ್ತು ಪ್ರಸ್ತುತ ದೇಶದಲ್ಲಿರುವ ಪಿಪಿಇ ಕಿಟ್‌ ಉತ್ಪಾದನೆ, ಟೆಸ್ಟಿಂಗ್‌ ಮತ್ತಿತರ ಕೋವಿಡ್‌ ಆರೈಕೆ ಹಾಗೂ ಚಿಕಿತ್ಸೆ ಸಂಬಂಧಿತ ವೈದ್ಯಕೀಯ ಮೂಲಸೌಕರ್ಯದ ಸ್ಥಿತಿಗತಿಯು ನಮ್ಮ ಪ್ರಯತ್ನಗಳ ಸಾಫಲ್ಯತೆಗೆ ಸಾಕ್ಷಿಯಾಗಿದೆ ಎಂದರು.

    ದೂರದ ಆಸ್ಪತ್ರೆಗಳಿಗೂ ವೆಂಟಿಲೇಟರ್ ಮತ್ತು ಆಮ್ಲಜನಕ ಸಾಂದ್ರಕವನ್ನು ಒದಗಿಸಲಾಗಿದೆ. ಸಮರೋಪಾದಿಯಲ್ಲಿ 1500ಕ್ಕೂ ಹೆಚ್ಚು ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈ ಎಲ್ಲಾ ಪ್ರಯತ್ನಗಳ ನಡುವೆ, ನುರಿತ ಮಾನವ ಶಕ್ತಿಯ ಪಾತ್ರವೂ ನಿರ್ಣಾಯಕವಾಗಿದೆ. ಇದಕ್ಕಾಗಿ ಮತ್ತು ಕೊರೊನಾ ಯೋಧರ ಪ್ರಸ್ತುತ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಲಕ್ಷ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ಈ ತರಬೇತಿ ಎರಡು-ಮೂರು ತಿಂಗಳಲ್ಲಿ ಮುಗಿಯಬೇಕು ಎಂದು ಪ್ರಧಾನಿ ಹೇಳಿದರು.

    ಇಂದು ಆರಂಭಿಸಲಾದ ಈ ಆರು ಕೋರ್ಸ್‌ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬೇಡಿಕೆಗಳ ಪ್ರಕಾರ ದೇಶದ ಉನ್ನತ ತಜ್ಞರು ವಿನ್ಯಾಸಗೊಳಿಸಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಮನೆ ಆರೈಕೆ, ಪ್ರಾಥಮಿಕ ಆರೈಕೆ, ಸುಧಾರಿತ ಆರೈಕೆ, ತುರ್ತು ಆರೈಕೆ, ಮಾದರಿ ಸಂಗ್ರಹ, ಮತ್ತು ವೈದ್ಯಕೀಯ ಪರಿಕರ ನೆರವು ಎಂಬ ಆರು ವೈಯಕ್ತೀಕರಿಸಿದ ಉದ್ಯೋಗ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೊರೊನಾ ಯೋಧರಿಗೆ ತರಬೇತಿ ನೀಡಲಾಗುವುದು. ಇದು ಹೊಸ ಕೌಶಲ್ಯ ಕಲಿಕೆ ಮತ್ತು ಈಗಾಗಲೇ ಈ ರೀತಿಯ ಕೆಲಸದಲ್ಲಿ ಕೊಂಚ ತರಬೇತಿ ಹೊಂದಿರುವವರಿಗೆ ಕೌಶಲ್ಯ ಸುಧಾರಣೆಯನ್ನು ಇದು ಒಳಗೊಂಡಿರುತ್ತದೆ. ಈ ಅಭಿಯಾನವು ಆರೋಗ್ಯ ವಲಯದ ಮುಂಚೂಣಿ ಕಾರ್ಯಕರ್ತರಿಗೆ ಹೊಸ ಶಕ್ತಿಯನ್ನು ನೀಡುತ್ತದೆ ಮತ್ತು ನಮ್ಮ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದರು.

    ಕರೋನಾ ಅವಧಿಯು ಕೌಶಲ್ಯ, ಮರು ಕೌಶಲ್ಯ ಮತ್ತು ಕೌಶಲ್ಯ ಸುಧಾರಣೆ ಎಷ್ಟು ಮುಖ್ಯ ಎಂಬುದನ್ನು ಸಾಬೀತುಪಡಿಸಿದೆ. ದೇಶದಲ್ಲಿ ಮೊದಲ ಬಾರಿಗೆ ಪ್ರತ್ಯೇಕವಾಗಿ ʻಸ್ಕಿಲ್ ಇಂಡಿಯಾ ಅಭಿಯಾನʼವನ್ನು ಅನ್ನು ಪ್ರಾರಂಭಿಸಲಾಯಿತು, ಕೌಶಲ್ಯ ಅಭಿವೃದ್ಧಿ ಸಚಿವಾಲಯವನ್ನು ಸ್ಥಾಪಿಸಲಾಯಿತು ಮತ್ತು ದೇಶಾದ್ಯಂತ ಪ್ರಧಾನ ಮಂತ್ರಿಯವರ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ತೆರೆಯಲಾಯಿತು ಎಂದು ಪ್ರಧಾನಿ ಹೇಳಿದರು. ಇಂದು ʻಸ್ಕಿಲ್ ಇಂಡಿಯಾʼ ಅಭಿಯಾನವು ದೇಶದ ಲಕ್ಷಾಂತರ ಯುವಕರಿಗೆ ಇಂದಿನ ಅಗತ್ಯಗಳಿಗೆ ಅನುಗುಣವಾಗಿ ತರಬೇತಿ ಪಡೆಯಲು ಸಹಾಯ ಮಾಡುತ್ತಿದೆ. ಕಳೆದ ವರ್ಷದಿಂದ ಕೌಶಲ್ಯ ಅಭಿವೃದ್ಧಿ ಸಚಿವಾಲಯವು ಸಾಂಕ್ರಾಮಿಕದ ನಡುವೆಯೂ ದೇಶಾದ್ಯಂತ ಲಕ್ಷಾಂತರ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಿದೆ ಎಂದು ಪ್ರಧಾನಿ ಹೇಳಿದರು.

    ನಮ್ಮ ಜನಸಂಖ್ಯೆಯ ಗಾತ್ರವನ್ನು ಗಮನಿಸಿದರೆ, ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ಕಳೆದ 7 ವರ್ಷಗಳಲ್ಲಿ ಹೊಸ ಏಮ್ಸ್, ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ಹೊಸ ನರ್ಸಿಂಗ್ ಕಾಲೇಜುಗಳನ್ನು ಪ್ರಾರಂಭಿಸಲು ಸರಕಾರ ಗುರಿ ನಿರ್ದೇಶಿತ ವಿಧಾನದಲ್ಲಿ ಕೆಲಸ ಮಾಡಿದೆ. ಅದೇ ರೀತಿ, ವೈದ್ಯಕೀಯ ಶಿಕ್ಷಣ ಮತ್ತು ಸಂಬಂಧಿತ ಸಂಸ್ಥೆಗಳಲ್ಲಿ ಸುಧಾರಣೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಆರೋಗ್ಯ ವೃತ್ತಿಪರರನ್ನು ಸನ್ನದ್ಧಗೊಳೀಸುವ ನಿಟ್ಟಿನಲ್ಲಿ ಈಗ ನಡೆಯುತ್ತಿರುವ ಕೆಲಸದ ಗಂಭೀರತೆ ಮತ್ತು ವೇಗವು ಅಭೂತಪೂರ್ವವಾದುದು ಎಂದು ಪ್ರಧಾನಿ ಹೇಳಿದರು.

    ಹಳ್ಳಿಗಳಲ್ಲಿನ ಆಸ್ಪತ್ರೆಗಳಲ್ಲಿ ನಿಯೋಜಿಸಲಾದ ಆಶಾ ಕಾರ್ಯಕರ್ತೆಯರು, ಸೂಲಗಿತ್ತಿಯರು (ಎಂಎನ್‌ಎಂ), ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತರಂತಹ ವೈದ್ಯಕೀಯ ವೃತ್ತಿಪರರು ನಮ್ಮ ಆರೋಗ್ಯ ಕ್ಷೇತ್ರದ ಬಲವಾದ ಆಧಾರಸ್ತಂಭಗಳಲ್ಲಿ ಒಂದೆನಿಸಿದ್ದಾರೆ. ಆದರೆ, ಆಗಾಗ್ಗೆ ಅವರು ಚರ್ಚೆಯಿಂದ ಹೊರಗುಳಿಯುತ್ತಾರೆ ಎಂದು ಪ್ರಧಾನಿ ಹೇಳಿದರು. ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಹೆಗಲು ನೀಡುವ ಮೂಲಕ ಸೋಂಕನ್ನು ತಡೆಗಟ್ಟುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದ ಪ್ರಧಾನಿ, ಪ್ರತಿಯೊಬ್ಬ ದೇಶವಾಸಿಯ ಸುರಕ್ಷತೆಗಾಗಿ ಎಲ್ಲ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಆರೋಗ್ಯ ಕಾರ್ಯಕರ್ತರು ಮಾಡಿದ ಕಾರ್ಯವನ್ನು ಶ್ಲಾಘಿಸಿದರು. ದೂರದ ಪ್ರದೇಶಗಳಲ್ಲಿ ಮತ್ತು ಗುಡ್ಡಗಾಡು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಅವರ ಪಾತ್ರ ದೊಡ್ಡದೆಂದು ಬಣ್ಣಿಸಿದರು.

    ಜೂನ್ 21ರಿಂದ ಪ್ರಾರಂಭವಾಗಲಿರುವ ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಂತೆ ಅನೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು. 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಗೂ ಜೂನ್ 21ರಿಂದ ಲಸಿಕೆ ವಿಚಾರದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಸಿಗುವ ಪ್ರಾಧಾನ್ಯತೆಯೇ ದೊರೆಯಲಿದೆ. ಕೊರೊನಾ ಶಿಷ್ಟಾಚಾರದ ಪಾಲನೆಯೊಂದಿಗೆ ಪ್ರತಿಯೊಬ್ಬ ನಾಗರಿಕನಿಗೂ ಉಚಿತ ಲಸಿಕೆಗಳನ್ನು ನೀಡಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದರು.

    ತರಬೇತಿ ಪಡೆಯಲಿರುವವರಿಗೆ ಶುಭ ಹಾರೈಸಿದ ಪ್ರಧಾನಿ, ಕಲಿಕಾರ್ಥಿಗಳ ಹೊಸ ಕೌಶಲ್ಯಗಳು ದೇಶವಾಸಿಗಳ ಜೀವ ಉಳಿಸುವಲ್ಲಿ ಬಳಕೆಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

    ಹೆದರಬೇಡಿ, ಡಾಕ್ಟರ್ ಮೇಲೆ ನಂಬಿಕೆ ಇಡಿ


    ಕೋವಿಡ್ ಎರಡನೇ ಅಲೆ ಕಡಿಮೆಯಾಗುತ್ತಿದೆ.ಈ ಅಲೆಯನ್ನು ಅನೇಕರು ಮೆಟ್ಟಿನಿಂತು ಎದುರಿಸಿ ಬಂದಿದ್ದಾರೆ. ಗೆದ್ದವರ ಪಾಸಿಟಿವ್ ಕಥೆಗಳನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ. ಈ ಗೆಲವು ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ. ಕರೋನಾ ಒಂದೇ ಅಲ್ಲ ಯಾವ ರೋಗ ಬಂದರು ಧೈರ್ಯದಿಂದ ಎದುರಿಸಿದಾಗ ಜಯಿಸಲು ಸಾಧ್ಯ.


    Nobody thought that I will get covid

    ಕೋವಿಡ್ ಮೊದಲ ಅಲೆ  ಬಂದಾಗಲೇ ನಾವು ಎಲ್ಲಾ ಎಚ್ಚರಿಕೆಯನ್ನೂ ತೆಗೆದುಕೊಳ್ತಾಯಿದ್ವಿ.  ಕೋವಿಡ್  ಶಿಷ್ಟಾಚಾರಗಳನ್ನೆಲ್ಲಾ (protocols)  ಫಾಲೋ ಮಾಡ್ತಾ ಇದ್ವಿ.ಮಾಸ್ಕ್ ಹಾಕ್ಕೊಳೋದು, ಸೋಷಿಯಲ್ ಡಿಸ್ಟೆನ್ಸಿಂಗ್ ಎಲ್ಲಾನೂ ಮಾಡ್ತಾ ಇದ್ವಿ. ಹಾಗಾಗಿ ನಾವು ಅಂದುಕೊಂಡ್ವಿ we are safe ಅಂತ.

    ಅವತ್ತಿ ಏಪ್ರಿಲ್ 4 .ಭಾನುವಾರ .ಮನೆ ಸಮೀಪದ ಆಸ್ಪತ್ರೇಲೆ ವ್ಯಾಕ್ಸಿನೇಷನ್ ಹಾಕಿಸ್ಕೊಂಡೆ .ಆಮೇಲೆ  ಜ್ವರ ಬರುತ್ತೆ ಅಂತ
    ಗೊತ್ತಿದ್ದ   ಕಾರಣ ಟ್ಯಾಬ್ಲೆಟ್ಸ್ ತಗೋತಾ ಇದ್ದೆ. ಎರಡು ದಿನವಾದ್ರೂ  ಜ್ವರ ಕಮ್ಮಿನೇ ಆಗ್ಲಿಲ್ಲ . ಮೂರು ದಿನ, ನಾಲ್ಕು ದಿನ, ಐದು ದಿನವೂ ಆಯ್ತು.  ಆದಿನ ಶನಿವಾರ. ನಂಗೆ ಜಾಸ್ತಿನೇ ಜ್ವರ ಇತ್ತು.  ಮೈ ಕೈ ನೋವೂ ಜಾಸ್ತಿ ಇತ್ತು ಹಾಗೇ vomitting sensation ಸಹ ಇತ್ತು.   ಹಾಗಾಗಿ ಹಾಸ್ಪಿಟಲ್ ಗೆ ಅಡ್ಮಿಟ್  ಆಗಿಬಿಡೋಣ, ಅಲ್ಲಿ  ಡ್ರಿಪ್ಸ್ ಕೊಟ್ರೆ ಸ್ವಲ್ಪ  ಸುಸ್ತು, vomiting ಎಲ್ಲಾ ಕಮ್ಮಿ ಆಗಬಹುದು ಅಂತ ಯೋಚಿಸಿ ಆಸ್ಪತ್ರೆಗೆ ಹೋದ್ವಿ.

    ಅಡ್ಮಿಟ್   ಆಗೋದಾದ್ರೆ ಆಗಿ ಅಥವಾ  ಕೋವಿಡ್ ಟೆಸ್ಟ್  ಮಾಡಿಸಿದ ನಂತರ   ಬಂದು ಅಡ್ಮಿಟ್ ಆಗಿ.  ಆದ್ರೆ  ಟೆಸ್ಟ್ ರಿಪೋರ್ಟ್ ಪಾಸಿಟೀವ್ ಬಂದ್ರೆ ನಮ್ಮಲ್ಲಿ   ಕೋವಿಡ್ ಗೆ ಟ್ರೀಟ್ ಮೆಂಟ್ ಕೊಡಲ್ಲ ಅಂತ ಅಲ್ಲಿನ   ಡಾಕ್ಟರ್ ಹೇಳಿದ್ರು.   “ನಂಗೆ ತುಂಬಾ ವೀಕ್ ನೆಸ್  ಇದೆ ಹಾಗೇ vomiting ಸಹ ಜಾಸ್ತಿ ಇದೆ ದಯವಿಟ್ಟು ಅಡ್ಮಿಟ್ ಮಾಡಿಕೊಳ್ಳಿ ಅಂತ ನಾನು ಡಾಕ್ಟರ್ ನ ರಿಕ್ವೆಸ್ಟ್ ಮಾಡಿಕೊಂಡೆ. ದೇವರ ದಯೆಯಿಂದ ಅವರು ಒಪ್ಪಿದರು. ಹಾಗಾಗಿ ಅದೇ ದಿನ ಅಡ್ಮಿಟ್ ಆದೆ.  ಅವತ್ತೇ ಕೋವಿಡ್ ಟೆಸ್ಟ್ ಕೂಡ ಮಾಡಿದ್ರು, ಡ್ರಿಪ್ಸ್ ಹಾಕಿದ್ರು , chest x –  ray ನೂ ತೆಗೆದರು.

    ಮರುದಿನ ಬೆಳಗ್ಗೆ 10 ಗಂಟೆಗೆ ಡಾಕ್ಟರ್ ರೌಂಡ್ಸ್ ಗೆ ಬಂದಾಗ ಹೇಳಿದ್ರು ನಿಮ್ಮ ಟೆಸ್ಟ್ ರಿಪೋರ್ಟ್ ಪಾಸಿಟೀವ್ ಅಂತ!!  Really it was a shock to me and to my family.  Nobody thought that I will get covid. ಆಗ ಯೋಚನೆ ಶುರುವಾಯಿತು. ಹಾಸ್ಪಿಟಲ್ ನವರು ಕೋವಿಡ್ ಗೆ ಟ್ರೀಟ್ ಮೆಂಟ್ ಕೊಡೋಲ್ಲ ಡಿಸ್ಚಾರ್ಜ್ ಆಗಿ ಅಂದ್ರು. ನಮಗೆ ಸ್ವಲ್ಪ ಪ್ಯಾನಿಕ್ ಆಯ್ತು.  ಹತ್ತಿರದ ಆಸ್ಪತ್ರೆಗಳನ್ನೆಲ್ಲ ಹುಡುಕಿದ್ವಿಬೆಡ್ ಸಿಗುತ್ತಾ  ಅಂತ .ಎಲ್ಲೂ ಖಾಲಿ ಇರ್ಲಿಲ್ಲ.  ಇಲ್ಲಿಂದ 3 – 4 ಕಿಲೋಮೀಟರ್ ದೂರದ ಒಂದು ಆಸ್ಪತ್ರೆಯಲ್ಲಿ ಬೆಡ್ ಇದೆ ಅಂತ ತಿಳಿಯಿತು. ಆದರೆ ಅಲ್ಲಿ ಮೊದಲು ಬಂದವರಿಗೆ ಆದ್ಯತೆ ಎಂದರು. 

    ಆ ಟೈಮ್ ನಲ್ಲಿ ನನ್ನ ಅದೃಷ್ಟ ಚೆನ್ನಾಗಿತ್ತು. ಗೌರ್ನಮೆಂಟ್ ಗೈಡ್ ಲೈನ್ಸ್ ಪ್ರಕಾರ ಕೋವಿಡ್ ಟ್ರೀಟ್ ಮೆಂಟ್ ಆ ದಿನದಿಂದಲೇ  ಶುರು ಮಾಡ್ತಾ ಇದಾರೆ ಹಾಗಾಗಿ ನಾನು ದಾಖಲಾಗಿದ್ದ ಆಸ್ಪತ್ರೆಯವರೇ ಹೇಳಿದ್ರು .  ಹಾಗಾಗಿ ನಾನು ಆ ದಿನವೇ ಕೋವಿಡ್ ವಾರ್ಡಿಗೆ  ಅಡ್ಮಿಟ್ ಆದೆ.   ರಾತ್ರಿನೇ ಟ್ರೀಟ್ಮೆಂಟ್ ಶುರು ಮಾಡಿದ್ರು.  ಅಲ್ಲಿಯ ಡಾಕ್ಟರ್ಸ್,  ಸ್ಟಾಫ್ ನರ್ಸ್ ಗಳೆಲ್ಲ ತುಂಬ ಸಪೋರ್ಟಿವ್ ಆಗಿದ್ರು. ರಾತ್ರಿಯಿಂದ್ಲೇ ನನಗೆ ಫ್ಯಾಬಿ ಫ್ಲೂ ಮಾತ್ರೆ   ಕೊಟ್ರು, 34  ಮಾತ್ರೆಗಳ  ಕೋರ್ಸ್ ಅದು. ಆಂಟಿ ಬಯಾಟಿಕ್ ಸಹ ಶುರುಮಾಡಿದರು.

    ಮಾನಸಿಕವಾಗಿ ಗಟ್ಟಿ ಆಗೋಕ್ಕೆ ಪ್ರಯತ್ನ ಮಾಡ್ತಾ ಇದ್ದೆ. ಟಿವಿ  ನೋಡ್ತಾ ಇರಲಿಲ್ಲ.  ನನ್ನ ಮನಸ್ಸಿಗೆ ಮುದ ನೀಡುವ  ಹಾಡುಗಳನ್ನು  ಕೇಳ್ತಾ ಇದ್ದೆ. ಕಾಮಿಡಿ ಶೋಸ್ ನೋಡ್ತಾ ಇದ್ದೆ.

    ಮೊದಲ  5 ದಿನ ಜ್ವರ ಇತ್ತು.  ಪ್ಯಾರಸಿಟಮಾಲ್ ಇಂಜೆಕ್ಷನ್ ಕೊಡೋರು.  ಡಾಕ್ಟರ್ಸ  2  – 3 ರೌಂಡ್ಸ್  ಬರೋರು.     ಕನ್ಸಲ್ಟಿಂಗ್ ಡಾಕ್ಟರ್  ಪ್ರತಿದಿನ  ಬೆಳಿಗ್ಗೆ 10 ರಿಂದ  – 10.30ರ ಹೊತ್ತಿಗೆ  ಬಂದು ವಿಚಾರಿಸಿಕೊಳ್ಳೋರು.

    4ನೇ ದಿನದಿಂದ ನನಗೆ Remdesivir ಶುರುಮಾಡಿದರು.  7ನೇ ದಿನದಿಂದ ನನ್ನ ದೇಹ ಟ್ರೀಟ್ ಮೆಂಟ್ ಗೆ ಸ್ಪಂದಿಸಲು ಶುರುವಾಯಿತು.  ಆಗ ಡಾಕ್ಟರ್ ಹೇಳಿದ್ರು improve ಆಗ್ತಾ ಇದೀರ , ಸ್ವಲ್ಪ ನಿಧಾನ ಅಷ್ಟೆ ಅಂತ. ಆರು ದಿನದ ಮೇಲೆ  remdesivir ಜೊತೆ ಆಂಟಿ ಬಯಾಟಿಕ್ ನಿಲ್ಲಿಸಿದರು. ನಿಧಾನವಾಗಿ ನಾನು ಇಂಪ್ರೂವ್ ಆಗುತ್ತಿದ್ದೆ.

    ಇಷ್ಟು ಮೆಡಿಸಿನ್ ತಗೋತಾ ಇದ್ನಲ್ಲ ತುಂಬಾನೇ ಹಸಿವು ಆಗೋದು. ಸಮತೋಲನ ಆಹಾರ  ದೇಹಕ್ಕೆ ಬೇಕಾಗಿತ್ತು . ಅದನ್ನು  ಆಸ್ಪತ್ರೆಯವರೇ ಅರೇಂಜ್ ಮಾಡಿದ್ರು. ಬೆಳಿಗ್ಗೆ ಬ್ರೇಕ್ ಫಾಸ್ಟ್ ,ಮಧ್ಯಾಹ್ನ, ರಾತ್ರಿ, ಚಪಾತಿ , ಪಲ್ಯ, ಅನ್ನ, ರಸಂ , ಸಾಯಂಕಾಲ ಫ್ರೂಟ್ಸ್  ಹೀಗೆ ಒಳ್ಳೆಯ ಆಹಾರ ಕೊಟ್ಟರು.

    ಹತ್ತರಿಂದ ಹನ್ನೊಂದು ದಿನ ಇದ್ದೆ  ಆಸ್ಪತ್ರೆಯಲ್ಲಿ.  ಮೊದಲು ನಾನು  4 ಲೀಟರ್ ಆಕ್ಸಿಜನ್ ಮೇಲಿದ್ದೆ.  Almost 7 ದಿನ ಆಕ್ಸಿಜನ್ ಮೇಲೇ ಇದ್ದೆ .  ಆಮೇಲೆ ನಿಧಾನವಾಗಿ 2 ಗಂಟೆಗಳ ಕಾಲ ಆಕ್ಸಿಜನ್ ಕೊಡೋದು ಮತ್ತೆ  ತೆಗೆಯುವುದು ಹೀಗೆ ಮಾಡೋರು. ನಂತರ 2 ಲೀಟರ್ ಗೆ ಇಳಿಸಿದರು. ಕೊನೆಯ ಮೂರು ದಿನ  ಆಕ್ಸಿಜನ್  ಇಲ್ಲದೆ ಟ್ರೀಟ್ ಮಾಡಿದ್ರು.

    ದಿನವೂ ನನ್ನ ಕುಟುಂಬದವರ ಜೊತೆ ಮಾತನಾಡುತ್ತಿದ್ದೆ, ಹಾಗಾಗಿ ಮನೋಧೈರ್ಯ, ಮನೋಬಲ ಜಾಸ್ತಿ ಆಗ್ತಾ ಇತ್ತು.
    ಈ ಕೋವಿಡ್ ಬಗ್ಗೆ ನಾವು ಮಾತೇ ಆಡ್ತಿರಲಿಲ್ಲ. ಕಾರಣ ಆಸ್ಪತ್ರೆಯ ವಾತಾವರಣ ಸ್ವಲ್ಪ ಹೆದರಿಕೆ ಹುಟ್ಟಿಸುತ್ತಿತ್ತು.

    ಅಂತೂ ಎಲ್ಲರ ಹಾರೈಕೆಯಿಂದ ನಾನು ಕೋವಿಡ್ ನಿಂದ ಹುಷಾರಾಗಿ ಮನೆಗೆ ಬಂದೆ. ಈಗಲೂ ಎರಡು ಮೂರು ತಿಂಗಳು ಕೇರ್ ಫುಲ್ ಆಗಿರಬೇಕು ಅಂತ ಡಾಕ್ಟರ್ ಹೇಳಿದ್ದಾರೆ.

    ಒಟ್ಟಿನಲ್ಲಿ ನನ್ನ ಈ ಅನುಭವದಿಂದ ಎಲ್ರಿಗೂ  ಹೇಳುವುದು ಏನಂದ್ರೆ ಕೋವಿಡ್ ಬಂದ ತಕ್ಷಣ ಹೆದರಬೇಡಿ.  ಡಾಕ್ಟರ್ ಕೊಡೋ ಔಷಧಿಯನ್ನು ಸರಿಯಾಗಿ ತೆಗೆದುಕೊಳ್ಳಿ,  ಪೂರಕ ಔಷಧಿಗಳು, ಒಳ್ಳೆಯ ಆಹಾರ ಸೇವಿಸಿ, ಹಣ್ಣು ತರಕಾರಿಗಳನ್ನು ಜಾಸ್ತಿ ಬಳಸಿ.

    14 ದಿನಗಳು ಮುಗಿದು ಮನೆಗೆ ಬಂದ ಮೇಲೂ ಡಾಕ್ಟರ್ ಅಡ್ವೈಸ್ ಪ್ರಕಾರ ಸ್ವಲ್ಪ ದಿನ  ಕ್ವಾರನ್ಟೈನ್  / ಪ್ರತ್ಯೇಕವಾಗಿ ಇರಬೇಕಾಗುತ್ತದೆ. ಈಗ ನಾನು ಆರೋಗ್ಯವಾಗಿದ್ದೇನೆ. ಇಲ್ಲಿಗೆ ನನ್ನ ಕೋವಿಡ್ ಅನುಭವದ ಲೇಖನ ಮುಗಿಸುತ್ತಿರುವೆ. 


    ಕೊರೋನಾ ಗೆದ್ದವರು ತಮ್ಮ ಅನುಭವದ ಕಥೆಯನ್ನು [email protected] ಗೆ ಇ ಮೇಲ್ ಮಾಡಿ. ಸೂಕ್ತವಾದುವನ್ನು ಪ್ರಕಟಿಸಲಾಗುವುದು

    ಬಹುದಿನಗಳ ದೈಹಿಕ ಶಿಕ್ಷಕರ ಬೇಡಿಕೆಗೆ ಅಸ್ತು:148 ದೈಹಿಕ ಶಿಕ್ಷಕರಿಗೆ ಮುಂಬಡ್ತಿ

    ಸರ್ಕಾರಿ ಪ್ರೌಢ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಬಹುಕಾಲದ ಬೇಡಿಕೆಯಾಗಿದ್ದ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಸರ್ಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-1 ಹುದ್ದೆಯಿಂದ ಗ್ರೂಪ್-ಬಿ ವೃಂದದ ದೈಹಿಕ ಶಿಕ್ಷಣ ಪರಿವೀಕ್ಷಕರ 148 ಹುದ್ದೆಗಳಿಗೆ ಮುಂಬಡ್ತಿಯನ್ನು ನೀಡಿ ಆದೇಶ ಹೊರಡಿಸುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಕರ ಸಂಘದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    2016ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪದೋನ್ನತಿ ಪ್ರಕ್ರಿಯೆ ನಡೆದಿದ್ದು, ಐದು ವರ್ಷಗಳ ಕಾಲ ಪ್ರೌಢ ಶಾಲಾ ದೈಹಿಕ ಶಿಕ್ಷಕರಿಗೆ ಯಾವುದೇ ಪದೋನ್ನತಿ ನೀಡಿರಲಿಲ್ಲ. ನೆನೆಗುದಿಗೆ ಬಿದ್ದಿದ್ದ ಬಡ್ತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಆಡಳಿತಾತ್ಮಕ ಸಮಸ್ಯೆ ಬಗೆಹರಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಜೂನ್ 21ರಂದು ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ   ಮಾಡಲಾಗುತ್ತಿದ್ದು, ಕೋವಿಡ್ ನಿಯಮಗಳನ್ನು ಪಾಲಿಸಿ ದೈಹಿಕ ಶಿಕ್ಷಕರು ಕೌನ್ಸೆಲಿಂಗ್ ನಲ್ಲಿ ಭಾಗವಹಿಸಿ ತಮ್ಮ ಇಚ್ಛಾನುಸಾರ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು  ಸಚಿವರು ತಿಳಿಸಿದ್ದಾರೆ. ಆದೇಶದ ಪ್ರತಿ ಇಲ್ಲಿದೆ.

    ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿ ನೀಡಬೇಕೆಂಬುದು ಕರ್ನಾಟಕ ರಾಜ್ಯ ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಬೇಡಿಕೆಯಾಗಿತ್ತು. ಈಗ ಆ ಪ್ರಕ್ರಿಯೆ ಮುಗಿದಿದ್ದು, ಮುಂಬಡ್ತಿ ಹೊಂದಲಿರುವ ದೈಹಿಕ ಶಿಕ್ಷಣ ಪರಿವೀಕ್ಷಕರು ಇಲಾಖೆಯಲ್ಲಿ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಗುಣಮಟ್ಟದ ಶಿಕ್ಷಣದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಬೇಕೆಂದು ಸುರೇಶ್ ಕುಮಾರ್ ಹೇಳಿದ್ದಾರೆ.

    error: Content is protected !!