25.6 C
Karnataka
Sunday, May 12, 2024

    ನಾವು ಕಂಡ ಮೊದಲ ಸಾಹುಕಾರ ಅಪ್ಪ

    Must read

    ಮಾತಾಡಿಸ್ತಿದ್ರು …..ವಿಚಾರಿಸ್ತಿದ್ರು …..ತಮಾಷೆ ಮಾಡ್ತಿದ್ರು …..ನಗಿಸ್ತಿದ್ರು …..ಅವರು ಊಟಕ್ಕೆ ಕೂರ್ತಿದಿದ್ದೇ ಮಕ್ಕಳು ತಿಂದ್ರ ಅಂತ ಕೇಳ್ತಾ , ಅವರು ತಿಂತಾ ನಮ್ಮನ್ನ ಕರೆದು ತಟ್ಟೆಯಲ್ಲಿದ್ದ ತರಕಾರೀನೋ , ಒಂದು ತುತ್ತು ಅನ್ನಾನೋ ತಿನ್ನಿಸ್ತಿದ್ರು . ನಮಗೆ ಮೊದಲು ಹೋಟೆಲ್ಲಿಗೆ ಕರ್ಕೊಂಡು ಹೋಗಿದ್ದವರು , ಮೊದಲ ಡ್ರಾಮಾ ಮೊದಲ ಸಿನಿಮಾ ಮೊದಲ ಸರ್ಕಸ್ ತೋರಿಸಿದ್ದವರು ,ನಮ್ಮ ಮೊದಲ ಹೀರೋ ಅವರು, ಟೂರು ಹೊಡೆಸಿದ್ದವರು ,ಅಟಿಕೆ ಕೊಡಿಸಿದ್ದವರು , ಬಟ್ಟೆ ಹೊಲಿಸಿದ್ದವರು , ನಾವು ಕಂಡ ಮೊದಲ ಸಾಹುಕಾರ ಅಪ್ಪ .

    ಅವರ ಜೇಬಿನಲ್ಲಿ ಸದಾ ದುಡ್ಡಿರುತ್ತಿತ್ತು . ಮನೆಯ ದಿನಸಿಗೇ ಆಗಲಿ ನಮ್ಮ ಮುನಿಸಿಗೇ ಆಗಲಿ ನನ್ ಷರ್ಟ ತಗೊಂಡ್ ಬಾ ಅನ್ನೋವ್ರು ಅದರಿಂದ ದುಡ್ಡು ತೆಗೆದು ಕೊಡೋವ್ರು . ನಮ್ಮ ಮೊದಲ ಪಾಕೆಟ್ ಮೊನಿ ಕೊಟ್ಟವರು , ನಮ್ಮ ಮಣ್ಣಿನ ಹುಂಡಿಗೆ ಹಣ ಹಾಕಿದವರು ಅವರು . ಅಪ್ಪ ನಮ್ಮ ಕಣ್ಣಿಗೆ ಯಾವಾಗಲೂ ಪರ್ಫೆಕ್ಟ್ . ಪಕ್ಕಾ ಜಂಟಲ್ಮನ್. ಯಾವತ್ತೂ ಐರನ್ ಬಟ್ಟೆ ಇಲ್ಲದೇ ಹೊರಗೆ ಹೋಗುತ್ತಿರಲಿಲ್ಲ. ಅವರು ಹಾಕುವ ವಾಚು , ಧರಿಸುವ ಚಪ್ಪಲಿ ,ಕಟ್ಟುವ ಬೆಲ್ಟು , ಬರೆಯುವ ಪೆನ್ನು ಪ್ರತಿಯೊಂದು ವಿಶೇಷವಾಗಿ ಇರೋವು . ಅವರು ಮನೆಗೆ ಬೇಗ ಬಂದರೆ ಕೇಳುತ್ತಿದ್ದ ಪ್ರಶ್ನೆ ಮಕ್ಕಳೆಲ್ಲಿ ? ಅವರು ಲೇಟಾಗಿ ಬಂದ್ರೂ ಕೇಳುತ್ತಿದ್ದ ಪ್ರಶ್ನೆ ಮಕ್ಕಳು ತಿಂದ್ರ ? ಮಲಗ್ಬಿಟ್ರ ? ನಾವು ಹುಷಾರು ತಪ್ಪಿದಾಗ ಅವರು ಒದ್ದಾಡುತ್ತಿದ್ದರು . ನಮಗೆ ಗಾಯವಾದರೆ ಅವರು ನೋವು ತಿಂತಿದ್ರು .

    ಸಸಿಗಳಂತಿದ್ದ ನಾವು ಗಿಡಗಳಾಗುತ್ತಿದ್ದಂತೆ ಸಣ್ಣದಾಗಿ ಬಗ್ಗಿಸಲು ಶುರು ಮಾಡಿದರು .ಇದು ತಿನ್ನು, ಇದು ಮಾಡು , ಇದೇ ಓದು , ಹಿಂಗೇ ಇರು , ಇದೇ ಕೋರ್ಸ್ ತಗೋ , ಹೇಳಿದ್ ಮಾತು ಕೇಳು, ಹಂಗೆಲ್ಲಾ ಮಾತಾಡ್ಬೇಡ, ನಿನಗೆ ಅರ್ಥ ಆಗಲ್ಲ, ನಿನಗೆ ಗೊತ್ತಾಗಲ್ಲ …ಹೀಗೆ ಕಿವಿ ಹಿಂಡುವುದು, ಗದರುವುದು ಶುರು ಮಾಡುತ್ತಾರೆ .ಆಗ ನಮಗೆ ಅಪ್ಪ ಯಾಕೋ ಈ ನಡುವೆ ಸ್ವಲ್ಪ ಸ್ಟ್ರಿಕ್ಟ್ ಆದಂಗ್ ಕಾಣ್ತಾರೆ ಅಂತ ಸ್ವಲ್ಪ ಬೇಸರ ಆಗೋದು . ನಮಗೇನೇ ಬೇಕು ಅಂದ್ರೂ ಅಮ್ಮನ ಮೂಲಕವೇ ಹೇಳುವುದು ಕೇಳುವುದು ಮಾಡತೊಡಗಿದೆವು .ನಮ್ಮ ತಪ್ಪುಗಳಿಗೆ ಅಮ್ಮನನ್ನು ಬೈಯ್ಯುತ್ತಿದ್ದರು. ಎಷ್ಟೋ ಸಾರಿ ವಾದ ಮಾಡುತ್ತಿದ್ದೆವು ಆಗ ಅಮ್ಮ ಬಿಡಿಸಿ ಅವರೆದುರು ನಮ್ಮನ್ನ ಬಯ್ದು ಕಳುಹಿಸುತ್ತಿದ್ದಳು . ಅಪ್ಪನೆದರು ಮಕ್ಕಳು ಬಾಯಿ ಕೊಡುವುದು ಅಮ್ಮನಿಗೂ ಇಷ್ಟವಿರಲಿಲ್ಲ . ಅವರಿಗೆ ಗೊತ್ತು ಅಪ್ಪನ ಬದುಕಿನ ಒದ್ದಾಟ ಗುದ್ದಾಟ ಎಲ್ಲವೂ ಮನೆಗಾಗಿಯೇ ಮಕ್ಕಳಿಗಾಗಿಯೇ ಅಂತ .

    ಕ್ವಾರ್ಟ್ರೆಸ್ಸು ಬಾಡಿಗೆ ಲೀಸು ಆ ಮನೆ ಈ ಮನೆ ಅಂತೆಲ್ಲಾ ಒದ್ದಾಡಿ ಜಿದ್ದಿಗೆ ಬಿದ್ದು ಹೊಟ್ಟೆ ಬಟ್ಟೆ ಕಟ್ಟಿ ಹಣ ಉಳಿಸಿ ಹಣ ಹೊಂದಿಸಿ ಸಾಲ ಮಾಡಿ ಸೈಟು ತಗೊಂಡು ಓಡಾಡಿ ನಿಂತು ಒಂದು ಸ್ವಂತ ಮನೆ ಕಟ್ಟಿ , ಅಪ್ಲಿಕೇಷನ್ನು ಸೀಟು ಅಲಾಟ್ಮೆಂಟು ಡೊನೇಷನ್ನು ಎಂಬ ಹತ್ತು ಸಮಸ್ಯೆಗಳ ಮಧ್ಯೆ ಎಜುಕೇಷನ್ನು ಕೊಡಿಸಿ , ಎಂಪ್ಲಾಯ್ಮೆಂಟು ಲಾಸ್ಟ್ ಡೇಟು ಎಕ್ಸಾಮು ಇನ್ಫ್ಲೂಯೆನ್ಸು ವೇಕೆನ್ಸಿ ಅನ್ನೋ ನೂರು ಸ್ಪರ್ಧೆಗಳ ಮಧ್ಯೆ ನೌಕರಿ ಕೊಡಿಸಿ , ಸಂಬಂಧ ಹುಡುಕಿ ವಿಚಾರಿಸಿ ಹಣ ಕೂಡಿಟ್ಟು ಪತ್ರಿಕೆ ಹೊಡಿಸಿ ಚೌಟ್ರಿ ಹುಡುಕಿ ವರೊಪಚಾರ ನಿಶ್ಚಿತಾರ್ಥ ಅಂತ ಮದುವೆ ಮಾಡ್ಸಿ… ಅಬ್ಬಾ… ಏನ್ ಸ್ಟ್ರಾಂಗ್ ಗುರೂ ನಮ್ಮಪ್ಪ ! ಅಂತ ಅಂದ್ಕೋತಿದ್ವಿ. ಇಲ್ಲ ಬೇರೆ ಯಾರಿಂದಾನೂ ಆಗಲ್ಲ ಅದು ಅಪ್ಪನಿಂದ ಮಾತ್ರ ಸಾಧ್ಯ .ಅಪ್ಪ ಇದಾರೆ ಅಂದ್ರೆ ಧೈರ್ಯ. ಅಪ್ಪ ಇದಾರೆ ಅಂದ್ರೆ ಭಯ .ಗೌರವ ಸಂಸ್ಕಾರ ಶಿಸ್ತು ಸಾಧನೆ ಪ್ರತಿಯೊಂದಕ್ಕೂ ಉದಾಹರಣೆ ಅಪ್ಪ ” ಅನ್ನೋ ಮಟ್ಟಿಗೆ ಆಗಿದ್ದರು .

     ಅವರೂ ಮನುಷ್ಯರೇ ಅವರಲ್ಲೂ ಕೋಪ ಇತ್ತು ಲೋಪ ಇತ್ತು.ದುಡಿದಿದ್ರೂ ದುಡುಕಿದ್ರೂ , ನಮ್ಮನ್ನೆಲ್ಲಾ ಹೆದರಿಸ್ತಿದ್ದ ಗದರಿಸ್ತಿದ್ದ ಅಪ್ಪಾನೂ ಒಮ್ಮೊಮ್ಮೆ ತಪ್ಪು ಮಾಡಿದಾಗ ಅಮ್ಮನಿಗೆ ಹೆದರುತ್ತಿದ್ರು . ಒಂದಾದ ಮೇಲೆ ಇನ್ನೊಂದು , ಇನ್ನೊಂದಾದ ಮೇಲೆ ಮತ್ತೊಂದು ಜವಾಬ್ದಾರಿ ಮುಗಿಸಿ , ಒತ್ತಡ , ಅನಾರೊಗ್ಯಕ್ಕೆ ಸಿಲುಕಿ ಅವರೂ ಬಳಲಿದ್ದರು. ಅವರಿಗೂ ವಯಸ್ಸಾಗಿತ್ತು .ಮಗುವಿನಿಂದಲೂ ನೋಡ್ಕೊಂಡು ಬರ್ತಿದ್ದ ಅಪ್ಪ ಸಮಯ ಹೋಗ್ತಿದ್ದಂತೇ ನಮ್ಮ ಮುಂದೆಯೇ ಮಗುವಾಗಿಬಿಟ್ಟಿದ್ದರು . ಯಾವ ದೇಹದ ಮೇಲೆ ನಾವು ಕೂತು ಉಪ್ಪು ಮೂಟೆ ಆಡಿದ್ವೋ ಆ ದೇಹ ಮುಪ್ಪಾಗಿತ್ತು . ಯಾವ ಶಕ್ತಿಯುತ ತೋಳಲ್ಲಿ ನಾವು ಬೆಳದಿದ್ವೋ ಆ ತೋಳು ಶಕ್ತಿ ಕಳೆದುಕೊಂಡು ಆಸರೆ ಬಯಸಿ ಹಾಸಿಗೆ ಸೇರಿತ್ತು.

    ಬದುಕು ಕಲಿಸಿದ ಅಪ್ಪ ಒಂದು ದಿನ ನಮ್ಮನ್ನು ಬದುಕಲು ಬಿಟ್ಟು ಹೋಗಿಬಿಡುತ್ತಾರೆ . ಯಜಮಾನ ಅನ್ನೋ ಪದಕ್ಕೆ ಸೂಕ್ತ ಅರ್ಥ ಅವರೇ ಅವರನ್ನು ಬಿಟ್ಟರೆ ಆ ಜಾಗ ತುಂಬಲೂ ಯಾರಿಂದಲೂ ಸಾಧ್ಯವಿಲ್ಲ . ಪರಿಪೂರ್ಣ ಬದುಕನ್ನು ಅನುಭವಿಸಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿ ಕರ್ತವ್ಯಗಳನ್ನು ಮುಗಿಸಿ ಹೊರಟಿರುತ್ತಾರೆ . ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಕಲಿಸಿದ ವಿದ್ಯೆ, ತೋರಿಸಿದ ದಾರಿ , ಮೂಡಿಸಿದ ಭರವಸೆ , ಬೆಳೆಸಿದ ರೀತಿ , ಅವರ ಆದರ್ಶಗಳು ಯಾವತ್ತಿಗೂ ನಮ್ಮೊಂದಿಗಿರುತ್ತವೆ . ಇವತ್ತು ನಾವು ತಲೆಯೆತ್ತಿ ಬದುಕುತ್ತಿದ್ದೇವೆಂದರೆ ಅದಕ್ಕೆ ಕಾರಣ ” ಅಪ್ಪ ” ಎನ್ನುವ ಆಕಾಶ. 

    ಮಾಸ್ತಿ
    ಮಾಸ್ತಿhttps://kannadapress.com
    ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆ ಇರುವ ಸಂಭಾಷಣೆಕಾರ ಮಾಸ್ತಿ ಮೂಲತಃ ಕೋಲಾರ ಜಿಲ್ಲೆಯವರು. ಸುಂಟರಗಾಳಿ ಚಿತ್ರದಿಂದ ಆರಂಭವಾದ ಇವರ ಸಿನಿಮಾ ಜರ್ನಿ ನಟ, ಸಹ ನಿರ್ದೇಶಕ, ಈಗ ಕಥೆಗಾರ, ಸಂಭಾಷಣೆಕಾರ ಮತ್ತು ಚಿತ್ರಕಥೆಗಾರರಾಗಿ ಮುಂದುವರೆದಿದೆ. ಟಗರು ಇವರ ವೃತ್ತಿ ಜೀವನದ ಮೈಲಿಗಲ್ಲು.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!