25.6 C
Karnataka
Sunday, May 12, 2024

    Mother’s Day :ಅಮ್ಮನಿಂದ ಮಾತ್ರ ಇದು ಸಾಧ್ಯ

    Must read

    ಏನಾದ್ರು ಒಂದೆರಡು ಕೆಲಸ ಜಾಸ್ತಿ ಮಾಡ್ಬಿಟ್ರೆ ನಾವುಗಳು ‘ಅಮ್ಮಾ’ ಅಂತೀವಿ . ಅದೇ ಅಮ್ಮ ದಿನದಲ್ಲಿ ಎಷ್ಟು ಕೆಲಸ ಮಾಡ್ತಾರೆ ಅಲ್ವಾ ? ಬೆಳಿಗ್ಗೆ ಅವರು ಎದ್ದ ಮೇಲೆ ಎದ್ದು ಅಲಾರಮ್ನ ಆಫ್ ಮಾಡಿ ಮನೆ ಮುಂದೆ ಕಸ ಗುಡಿಸಿ ನೀರಾಕಿ , ರಂಗೋಲೆ ಬಿಡೋದ್ರೊಂದಿಗೆ ದಿನವನ್ನ ಶುರು ಮಾಡ್ತಾರೆ .

    ಗೇಟಿನ ಚೀಲದಲ್ಲಿದ್ದ ಹಾಲಿನ ಪಾಕೆಟ್ಟು ಎತ್ಕೊಂಡು , ಬಾಗಿಲ ಹತ್ರ ಬಿದ್ದಿರೋ ನ್ಯೂಸ್ ಪೇಪರ್ರನ್ನು ಎತ್ತಿಕೊಂಡು ಅದರ ಮೇಲೆ ಒಂದು ಕಣ್ಣಾಡಿಸಿ , ಅಡುಗೆ ಮನೆಗೆ ಎಂಟ್ರಿ ಕೊಡ್ತಾರೆ .ಇಲ್ಲಿ ಮಾಡೊ ಮೊದಲ ಕೆಲಸ ಗ್ಯಾಸ್ ಆನ್ ಮಾಡಿ ಹಾಲು ಬಿಸಿ ಮಾಡೋದು. ಅದು ಉಕ್ಕು ಬರೋಷ್ಟರಲ್ಲಿ  ಏನ್ ತಿಂಡಿ ಮಾಡೋದು ಅಂತ ಯೋಚನೆ ಮಾಡಿರ್ತಾರೆ . ಕಾಫಿ ಮಾಡಿ ಮನೆಯವರನ್ನು ಎಬ್ಬಿಸಿ ಅವರಿಗೆ ಕಾಫಿ ಕೊಟ್ಟು  ತಿಂಡಿಯ ಕಡೆ ಹೊರಡ್ತಾರೆ . ಕೊತ್ತಂಬರಿ ಕರಿಬೇವು ಹೀಗೆ ಎನಿದೆಯೋ ಏನಿಲ್ವೋ ಅಂತ ಚೆಕ್ ಮಾಡಿ ತಿಂಡಿ ರೆಡಿ ಮಾಡ್ತಾರೆ . ಈ ಪ್ರೋಸಸ್ ಒಳಗಡೇನೆ ಕಸದ ಗಾಡಿ ಸೌಂಡ್ ಕೇಳಿಸ್ಕೊಂಡು ಕಸ ಹಾಕಿ ಬಂದ್ಬಿಟ್ಟಿರ್ತಾರೆ .

    ತರಕಾರಿ ಗಾಡಿಯವರ ಹತ್ತಿರ ಎಳೇದ , ನಾಟೀನ , ಫಾರಮ್ಮಾ , ಚೆನ್ನಾಗಿದೆಯ ಅಂತೆಲ್ಲಾ ನೋಡಿ , ಚೌಕಾಸೀನು ಮಾಡಿ ತರಕಾರಿ ತಗೊಂಡು ಅದನ್ನ ನೆನೆಯಾಕಿ ಬಿಡಿಸಿ ಒಂದಷ್ಟನ್ನ ಫ್ರಿಡ್ಜಲ್ಲೂ ಇಟ್ಟ್ಬಿಡ್ತಾರೆ . ನಂತರ ಮನೆ ಗುಡಿಸಿ ಮನೆ ಒರೆಸಿ ಕನ್ನಡಿ ಥರ ಇಟ್ಟಿರ್ತಾರೆ .ಆಮೇಲೆ ತನ್ನನ್ನ ತಾನು ಗಮನಕ್ಕೆ ತಗೊಂಡು ತನಗಲ್ಲದೇ ಇದ್ರು ತನ್ನ ದೇವರಿಗೋಸ್ಕರ ಅಂತ ಸ್ನಾನ ಮಾಡಿ ದೇವರಿಗೆ ಕಡ್ಡಿ ಹಚ್ತಾರೆ . ಅಲ್ಲೂ ಅಷ್ಟೇ ತನಗೇನೂ ಕೇಳ್ಕೊಳ್ಳದೇ ತನ್ನವರು ಚೆನ್ನಾಗಿರಲಿ ಅಂತ ಮನೆಯವರಿಗೋಸ್ಕರ ಬೇಡ್ಕೊಂತಾರೆ . ಆಮೇಲೆ ತಣ್ಣಗಾಗಿ ಅಡುಗೆಮನೆ ಕಟ್ಟೆ ಮೇಲೆ ಕುಂತಿದ್ದ ತಿಂಡೀನ ಬಿಸಿ ಕಾಫಿ ಜೊತೆ ತಿಂತಾರೆ . ಮನೆಯವರಿಗೆ ಏನ್ ಇಷ್ಟ ಅಂತ ಮೊದಲೇ ತಿಳ್ಕೊಂಡು ಅದೇ ಸಾರು ಮಾಡಿ , ಅಕ್ಕಿ ತೊಳೆದು ಅನ್ನಕ್ಕೆ ಇಡ್ತಾರೆ .ಹ್ಯಾಂಗರ್ರಲ್ಲಿ ಬಚ್ಚಲು ಮನೆಯಲ್ಲಿ ಹುಡುಕಿ ಆ ಬಟ್ಟೆಗಳನ್ನ ನೆನೆಸ್ತಾರೆ . ಇದೆಲ್ಲಾ ಮಾಡ್ತಾಯಿದ್ರೂ ಕುಕ್ಕರ್ ಎಷ್ಟು ವಿಷಿಲ್ ಹೊಡೀತು ಅಂತ ಅದರ ಮೇಲೆ ಕಿವಿ ಇಟ್ಟಿರ್ತಾರೆ , ಆಮೇಲೆ ಅಡುಗೆ ಮನೆ ಕ್ಲೀನಿಂಗ್ ಮಾಡಿ , ಮಧ್ಯಾಹ್ನದ ಊಟದ ಉಪಚಾರ ಮುಗಿಸ್ತಾರೆ. ಅವರೆಲ್ಲರದೂ ಊಟ ಆದ ನಂತರ ತಾನು ಒಂದೆರಡು ತುತ್ತು ತಿಂತಾರೆ , ಉಫ್ ಅಂತ ಸಿಂಕಲ್ಲಿ ಸಿಂಕ್ ಆಗಿರೋ ಪ್ಲೇಟು ಗ್ಲಾಸು ಬಾಣಲಿ ಎಲ್ಲಾ ತೊಳೆದು ಸ್ಟ್ಯಾಂಡಲ್ಲಿ ಜೋಡಿಸಿಡ್ತಾರೆ . ಬಚ್ಚಲು ಮನೆಯಲ್ಲಿ ನೆನಸಿಟ್ಟಿರೋ ಬಟ್ಟೆ ಒಗೆದು ಜಾಲಿಸಿ ಮಾಡಿ ಮೇಲೆ ಒಣಗಾಕಿ, ತಮ್ಮ ಬೇಸಿಕ್ ಫೋನ್ ತಗೊಂಡು ಅದರಲ್ಲಿರೋ ಮಿಸ್ ಕಾಲ್ಗಳನ್ನ ನೋಡ್ತಾರೆ . ಒಂದಿಬ್ಬರಿಗೆ ಮಾತಾಡ್ತಾರೆ .

    ಮಗನಿಗೋ ಮಗಳಿಗೋ ಫೋನ್ ಮಾಡಿ ಎಲ್ಲಿದೀಯ ಎಷ್ಟು ಹೊತ್ತಿಗೆ ಬರ್ತೀಯ ಅಂತ ವಿಚಾರಿಸ್ಕೋತಾರೆ . ಆಮೇಲೆ ಎನೋ ಮರೆತಿದೀನಲ್ಲ ಎಂದು ಮಾಡಿ ಮೇಲೆ ಹೋಗಿ ಒಣಗಾಕಿರೋ ಬಟ್ಟೆ ತಂದು ಮಡಚಿಡ್ತಾರೆ . ಒಂದು ಅರ್ಧ ಗಂಟೆ ಅಕ್ಕ ಪಕ್ಕದ ಮನೆಯವರ ಜೊತೆ ನಿಮ್ಮನೇಲಿ ಏನ್ ತಿಂಡಿ ಏನ್ ಸಾರು ? ಏರಿಯಾ ವಿಚಾರ , ಕಷ್ಟ ಸುಖ ಎಲ್ಲಾ ಮಾತಾಡ್ತಾರೆ .ಇಷ್ಟೊತ್ತಿಗಾಗ್ಲೇ ಸಂಜೆ ಆಗಿರುತ್ತೆ …. ಒಂದು ರೌಂಡ್ ಕಾಫಿ ಮಾಡಿ ಕೊಟ್ಟು ತಾನೂ ಕುಡಿದು ….ಅದನ್ನೆಲ್ಲಾ ತೊಳೆದು ಸ್ಟ್ಯಾಂಡ್ ಗೆ ಹಾಕ್ತಾರೆ . …ಪುನಃ ರಾತ್ರಿ ಏನ್ ಮಾಡೋದು ಊಟಕ್ಕೆ ಅಂತ ಕೇಳ್ಕೊಂಡು ಅದನ್ನ ರೆಡಿ ಮಾಡಕ್ಕೆ ಶುರು ಮಾಡ್ತಾರೆ . ಮತ್ತೆ ಊಟಕ್ಕೆ ಬಡಿಸಿ ….ತಾನು ತಿಂದು ….ಅಡುಗೆ ಮನೆ ಒರೆಸಿ ಪಾತ್ರೆ ಪಗಡೆ ತೊಳೆದು … ಅಡುಗೆ ಮನೆಯನ್ನು , ಸಿಂಕನ್ನು ಒಮ್ಮೆ ಸಮಾಧಾನವಾಗಿ ನೋಡ್ತಾರೆ .

    ಆಯಾಸ ಆಗಿರುತ್ತೆ …ಹೋಗಿ ಹಾಸಿಗೆ ಮೇಲೆ ಬಿದ್ಕೊಂಡು ಪುನಃ ಗ್ಯಾಸ್ ಆಫ್ ಮಾಡಿದೀನೋ ಇಲ್ವೋ ಅಂತ ಎದ್ದು ಹೋಗಿ ಚೆಕ್ ಮಾಡ್ತಾರೆ .ಹಾಸಿಗೆ ಮೇಲೂ ಕಣ್ ಬಿಟ್ಕೊಂಡು ಬೆಳಿಗ್ಗೆ ಏನ್ ತಿಂಡಿ ಮಾಡೊದು ಅಂತ ಯೋಚನೆ ಮಾಡ್ಕೊಂಡೇ ಮಲಗಿರ್ತಾರೆ . ಇಷ್ಟೆಲ್ಲಾ ಕೆಲಸಗಳನ್ನು ಮಾಡುತ್ತಲೇ ಎರಡೂವರೆ ಸೀರಿಯಲ್ಗಳನ್ನು ,ಒಂದೂವರೆ ಸಿನಿಮಾಗಳನ್ನು ,ಎರಡ್ಮೂರು ನ್ಯೂಸ್ಗಳನ್ನು ನೋಡಿರುತ್ತಾರೆ .

    ಇಷ್ಟೆಲ್ಲಾ ಸಾಧ್ಯನ ? ಹೌದು ಸಾಧ್ಯ…ಅದು ‘ ಅಮ್ಮ’ನಿಂದ ಮಾತ್ರ ಸಾಧ್ಯ . ಸೇವೆ ಮಾಡಿ ಮಾಡಿ ತನ್ನ ಬದುಕನ್ನೇ ಸವೆದು ತನ್ನವರ ಬದುಕನ್ನ ಸವೀತಾಯಿರೋ ಅಮ್ಮಂದಿರೆಲ್ಲರಿಗೂ ಹೃದಯಪೂರ್ವಕ ವಂದನೆಗಳು . ಅಮ್ಮಂದಿರ ದಿನದ ಶುಭಾಶಯಗಳು.

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ.

    ಮಾಸ್ತಿ
    ಮಾಸ್ತಿhttps://kannadapress.com
    ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆ ಇರುವ ಸಂಭಾಷಣೆಕಾರ ಮಾಸ್ತಿ ಮೂಲತಃ ಕೋಲಾರ ಜಿಲ್ಲೆಯವರು. ಸುಂಟರಗಾಳಿ ಚಿತ್ರದಿಂದ ಆರಂಭವಾದ ಇವರ ಸಿನಿಮಾ ಜರ್ನಿ ನಟ, ಸಹ ನಿರ್ದೇಶಕ, ಈಗ ಕಥೆಗಾರ, ಸಂಭಾಷಣೆಕಾರ ಮತ್ತು ಚಿತ್ರಕಥೆಗಾರರಾಗಿ ಮುಂದುವರೆದಿದೆ. ಟಗರು ಇವರ ವೃತ್ತಿ ಜೀವನದ ಮೈಲಿಗಲ್ಲು.
    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!