22 C
Karnataka
Tuesday, May 21, 2024

    ಭದ್ರಾ ಮೇಲ್ದಂಡೆ ಕಾಮಗಾರಿ ಕಿಕ್ ಬ್ಯಾಕ್ ಆರೋಪ: ಎಸಿಬಿ ತನಿಖೆಗೆ ಸಿದ್ಧರಾಮಯ್ಯ ಆಗ್ರಹ

    Must read

    ಭದ್ರಾ ಮೇಲ್ದಂಡೆ ಕಾಮಗಾರಿಯ ರೂ. 20,000 ಕೋಟಿ ಟೆಂಡರ್ ನಲ್ಲಿ ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ಅವರು ಶೇಕಡಾ ಹತ್ತರಷ್ಟು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ಆರೋಪವನ್ನು ಭ್ರಷ್ಟಾಚಾರ ನಿರೋಧ ದಳ (ಎಸಿಬಿ)ದ ತನಿಖೆಗೆ ಒಪ್ಪಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಆಗ್ರಹಿಸಿದ್ದಾರೆ.

    ಎರಡು ಕಾರಣಗಳಿಗಾಗಿ ಈ ಆರೋಪ ಗಂಭೀರ ಸ್ವರೂಪದ್ದಾಗಿದೆ. ಮೊದಲನೆಯದಾಗಿ ಆರೋಪ ನೇರವಾಗಿ ಮುಖ್ಯಮಂತ್ರಿಗಳ ಮಗನ ಮೇಲೆ ಮಾಡಲಾಗಿದೆ, ಎರಡನೆಯದಾಗಿ ಆಡಳಿತ ಪಕ್ಷದ ವಿಧಾನಪರಿಷತ್ ಸದಸ್ಯರೇ ಈ ಆರೋಪ ಮಾಡಿದ್ದಾರೆ. ತರಾತುರಿಯಲ್ಲಿ ನೀರಾವರಿ ಇಲಾಖೆ ಸ್ಪಷ್ಟನೆ ನೀಡಿದ್ದನ್ನು ನೋಡಿದರೆ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಸ್ಪಷ್ಟವಾಗಿದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

    ಬಿಐಇಸಿಯಲ್ಲಿ ನಿರ್ಮಿಸಲಾಗಿದ್ದ ಕೋವಿಡ್ ಕೇರ್ ಸೆಂಟರ್ ನ ಹಾಸಿಗೆ ಮತ್ತು ಬೆಡ್ ಗಳ ಖರೀದಿ-ಮಾರಾಟದಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಭ್ರಷ್ಟಾಚಾರ ಎಸಗಿದ್ದಾರೆ ಮತ್ತು ಭೂಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಎಚ್.ವಿಶ್ವನಾಥ್ ಅವರ ಇನ್ನೊಂದು ಆರೋಪದ ಬಗ್ಗೆಯೂ ತನಿಖೆ ನಡೆಯಬೇಕು ಎಂದಿದ್ದಾರೆ.

    ಆಡಳಿತ ಪಕ್ಷದ ಶಾಸಕರು ಮತ್ತು ಈಗಿನ ಬಿಜೆಪಿ ಸರ್ಕಾರದ ರೂವಾರಿಯೇ ತಾನೆಂದು ಹೇಳಿಕೊಳ್ಳುತ್ತಿರುವ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರೇ ಈ ಸರ್ಕಾರವನ್ನು ‘ಗುತ್ತಿಗೆದಾರರ ಸರ್ಕಾರ’ ಎಂದು ಬಣ್ಣಿಸಿರುವುದು ನೋಡಿದರೆ ಅವರ ಬಳಿ ಬೇರೆ ಸಚಿವರ ಭ್ರಷ್ಟಾಚಾರದ ಮಾಹಿತಿಯೂ ಇದ್ದ ಹಾಗಿದೆ. ಎಸಿಬಿ ಅವರನ್ನೂ ಕರೆದು ವಿಚಾರಣೆಗೆ ಒಳಪಡಿಸಿದರೆ ಸತ್ಯ ಬಯಲಿಗೆ ಬರಬಹುದು ಈ ಎಲ್ಲ ಆರೋಪಗಳ ಬಗ್ಗೆ ಸಮಗ್ರ ಸ್ವರೂಪದ ತನಿಖೆ ನಡೆಯಬೇಕು.

    ಮುಖ್ಯಮಂತ್ರಿಗಳು ಮತ್ತು ಅವರ ಮಗನ ವಿರುದ್ಧ ಈ ರೀತಿ ಬಹಿರಂಗವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಶಾಸಕರ ವಿರುದ್ದ ಯಾವುದೇ ಶಿಸ್ತಿನ ಕ್ರಮ ಕೈಗೊಳ್ಳದೆ ಅವರಿಗೆ ಇನ್ನಷ್ಟು ಅವಕಾಶ ನೀಡುತ್ತಿರುವುದನ್ನು ನೋಡಿದರೆ ಒಂದೋ ಬಿಜೆಪಿಯ ಹೈಕಮಾಂಡ್ ಈ ಆರೋಪಗಳನ್ನು ಒಪ್ಪಿಕೊಂಡಿದೆ ಇಲ್ಲವೇ ಭ್ರಷ್ಟಾಚಾರದಲ್ಲಿ ಅದೂ ಕೂಡಾ ಪಾಲು ಪಡೆದಿದೆ ಎಂದೇ ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

    ಜಂಟಿ ಸದನ ಸಮಿತಿ ರಚನೆಗೆ ಡಿ.ಕೆ. ಶಿವಕುಮಾರ್ ಆಗ್ರಹ

    ‘ನೀರಾವರಿ ಇಲಾಖೆಯಲ್ಲಿ ನಿಯಮಾವಳಿ ಉಲ್ಲಂಘಿಸಿ 20 ಸಾವಿರ ಕೋಟಿ ರುಪಾಯಿ ಕಾಮಗಾರಿ ಟೆಂಡರ್ ಕರೆಯಲಾಗಿದೆ ಎಂದು ಬಿಜೆಪಿ ನಾಯಕರೇ ಆರೋಪ ಮಾಡಿದ್ದು, ಈ ಬಗ್ಗೆ ಮೌನ ವಹಿಸುವ ಮೂಲಕ ಮುಖ್ಯಮಂತ್ರಿಗಳು ಈ ಆರೋಪ ನಿಜ ಎಂದು ಒಪ್ಪಿಕೊಂಡಿರುವಂತೆ ಕಾಣುತ್ತದೆ. ಹೀಗಾಗಿ ಹಗರಣದ ತನಿಖೆಗೆ ಸರಕಾರ ಜಂಟಿ ಸದನ ಸಮಿತಿ ರಚಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.


    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!