22.9 C
Karnataka
Monday, May 25, 2026
    Home Blog Page 95

    ಅಮರನಾಥ್ ಯಾತ್ರೆ ಈ ವರ್ಷವೂ ರದ್ದು

    ಕೋವಿಡ್ ಕಾರಣದಿಂದಾಗಿ ಸತತ ಎರಡನೇ ವರ್ಷ ಅಮರನಾಥ್ ಯಾತ್ರೆಯನ್ನು ರದ್ದು ಪಡಿಸಲಾಗಿದೆ.

    ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಕರ್ನಲ್ ಮನೋಜ್ ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಅಮರನಾಥ್ ದೇವಾಲಯ ಆಡಳಿತ ಮಂಡಳಿ ಸಭೆ ಈ ನಿರ್ಧಾರವನ್ನು ಕೈಗೊಂಡಿದೆ.

    ನಮಗೆ ಭಕ್ತರ ಭಾವನೆ ಅರ್ಥವಾಗುತ್ತದೆ. ಆದರೆ ಕೋವಿಡ್ ಸಾಂಕ್ರಾಮಿಕದಿಂದಾಗಿ ಆಗಬಹುದಾದ ಹಾನಿಯನ್ನು ಗಮನಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಆದರೆ ಪವಿತ್ರ ಅಮರನಾಥ್ ಗುಹೆಯಲ್ಲಿ ಪೂಜಾ ವಿಧಿ ವಿಧಾನಗಳು ಎಂದಿನಂತೆ ನಡೆಯಲಿದ್ದು ಅದರ ಲೈವ್ ಪ್ರಸಾರ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

    ಹಿಮಾಲಯದಲ್ಲಿ ಸಮುದ್ರಮಟ್ಟದಿಂದ 3800 ಮೀಟರ್ ಎತ್ತರದಲ್ಲಿರುವ ಅಮರನಾಥ್ ಗುಹಾ ದೇವಾಲಯದ ಯಾತ್ರೆ ಇದೇ 28ರಿಂದ ಆರಂಭವಾಗಬೇಕಿತ್ತು. 56 ದಿನಗಳ ಈ ಯಾತ್ರೆ ಆಗಸ್ಟ್ 22ರಂದು ಮುಕ್ತಾಯವಾಗುತಿತ್ತು.

    ‘ವಸುಧೈವ ಕುಟುಂಬಕಂ’ ಮಂತ್ರ ಜಾಗತಿಕ ಮನ್ನಣೆ ಪಡೆಯುತ್ತಿದೆ: ಪ್ರಧಾನಮಂತ್ರಿ

    ಸಾಂಕ್ರಾಮಿಕದ ನಡುವೆಯೂ ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ –“ಯೋಗಕ್ಷೇಮಕ್ಕೆ ಯೋಗ’ ಎಂಬುದಾಗಿದ್ದು, ಅದು ಜನರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ, ಪ್ರತಿಯೊಂದು ದೇಶದ, ಸಮಾಜದ ಮತ್ತು ವ್ಯಕ್ತಿಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಿರುವ ಅವರು, ನಾವೆಲ್ಲರೂ ಒಗ್ಗೂಡಿ, ಪರಸ್ಪರರನ್ನು ಬಲಪಡಿಸೋಣ ಎಂದು ತಿಳಿಸಿದ್ದಾರೆ. ಅವರು ಇಂದು ಏಳನೇ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.

    ಸಾಂಕ್ರಾಮಿಕದ ಸಂದರ್ಭದಲ್ಲಿ ಯೋಗದ ಪಾತ್ರದ ಬಗ್ಗೆ ಅವರು ಮಾತನಾಡಿದರು. ಸಂಕಷ್ಟದ ಸಮಯದಲ್ಲಿ ಜನರಿಗೆ ಎದುರಾಗಿದ್ದ ಸಂಕಷ್ಟಕ್ಕೆ ಯೋಗ ಬಲದ ಮೂಲವೆಂದು ಸಾಬೀತಾಗಿದೆ ಎಂದು ಹೇಳಿದರು. ಸಾಂಕ್ರಾಮಿಕದ ಸಮಯದಲ್ಲಿ ಯೋಗ ದಿನವನ್ನುಕೆಲವು ದೇಶಗಳು ಮರೆಯುವುದು ಸುಲಭ, ಏಕೆಂದರೆ ಇದು ಅವರ ಸಂಸ್ಕೃತಿಗೆ ಅಂತರ್ಗತವಾಗಿಲ್ಲ ಆದರೂ, ಜಾಗತಿಕವಾಗಿ ಯೋಗದ ಉತ್ಸಾಹ ಹೆಚ್ಚಾಗಿದೆ ಎಂದು ಅವರು ಉಲ್ಲೇಖಿಸಿದರು.

    ವಿಶ್ವಾದ್ಯಂತ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಜನರಲ್ಲಿ ಆತ್ಮವಿಶ್ವಾಸ ಮತ್ತು ಬಲ ತುಂಬುವಲ್ಲಿ ಯೋಗ ನೆರವಾಗಿದೆ ಎಂದರು. ಮುಂಚೂಣಿಯ ಕೊರೊನಾ ಯೋಧರು ಯೋಗವನ್ನು ತಮ್ಮ ರಕ್ಷಾ ಕವಚ ಮಾಡಿಕೊಂಡಿದ್ದರು ಮತ್ತು ಯೋಗದ ಮೂಲಕ ತಮ್ಮನ್ನು ಸ್ವಯಂ ಬಲಪಡಿಸಿಕೊಂಡಿರು ಮತ್ತು ಜನರು, ವೈದ್ಯರು, ದಾದಿಯರು ವೈರಾಣುವಿನ ಪ್ರಭಾವ ನಿಭಾಯಿಸಲು ಯೋಗವನ್ನು ಹೇಗೆ ತೆಗೆದುಕೊಂಡರು ಎಂಬುದನ್ನು ಪ್ರಧಾನಮಂತ್ರಿ ತಿಳಿಸಿದರು. ನಮ್ಮ ಶ್ವಾಸಕೋಶದ ವ್ಯವಸ್ಥೆ ಬಲಪಡಿಸುವ, ಉಸಿರಾಟದ ವ್ಯಾಯಾಮಗಳಾದ ಪ್ರಾಣಾಯಾಮ ಮತ್ತು ಅನುಲೋಮ –ವಿಲೋಮದ ಮಹತ್ವವನ್ನು ತಜ್ಞರು ಪ್ರತಿಪಾದಿಸುತ್ತಿದ್ದಾರೆ ಎಂದರು.

    ತಮಿಳು ಸಂತ ತಿರುವಳ್ಳವರ್ ಅವರ ಶ್ರೇಷ್ಠ ನುಡಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು ಯೋಗ ರೋಗದ ಮೂಲಕ್ಕೆ ಹೋಗಿ ಅದನ್ನು ಗುಣಪಡಿಸುವ ಸಾಧನವಾಗಿದೆ ಎಂದರು. ಜಾಗತಿಕವಾಗಿ, ಯೋಗದಿಂದ ರೋಗ ಗುಣಪಡಿಸುವ ಗುಣಲಕ್ಷಣಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು. ಯೋಗದ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಧ್ಯಯನ ಮಾಡಲಾಗುತ್ತಿದೆ ಮತ್ತು ಮಕ್ಕಳು ತಮ್ಮ ಆನ್‌ ಲೈನ್ ತರಗತಿಗಳಲ್ಲಿ ಯೋಗ ಮಾಡುತ್ತಿದ್ದಾರೆ. ಇದು ಕರೋನಾ ವಿರುದ್ಧ ಹೋರಾಡಲು ಮಕ್ಕಳನ್ನು ಸಜ್ಜುಗೊಳಿಸುತ್ತಿದೆ ಎಂದು ಅವರು ಹೇಳಿದರು.

    ಪ್ರಧಾನಮಂತ್ರಿಯವರು ಯೋಗದ ಸಮಗ್ರ ಸ್ವರೂಪವನ್ನು ಒತ್ತಿ ಹೇಳಿ, ಇದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತದೆ ಎಂದು ಹೇಳಿದರು. ಯೋಗವು ನಮ್ಮ ಆಂತರಿಕ ಶಕ್ತಿಯೊಂದಿಗೆ ಸಂಪರ್ಕವನ್ನು ಸಾಧಿಸುತ್ತದೆ ಮತ್ತು ಎಲ್ಲಾ ರೀತಿಯ ನಕಾರಾತ್ಮಕತೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಯೋಗದ ಸಕಾರಾತ್ಮಕತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಯೋಗ “ ನಿಂದ ಒಕ್ಕೂಟಕ್ಕೆ ಬದಲಾಯಿಸುತ್ತದೆ. ಅನುಭವಕ್ಕೆ ಸಾಬೀತಾದ ಮಾರ್ಗ, ಏಕತೆಯ ಸಾಕಾರವೆಂದರೆ ಯೋಗ.” ಎಂದ ಅವರು, ಈ ನಿಟ್ಟಿನಲ್ಲಿ ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರನ್ನು ಉಲ್ಲೇಖಿಸಿ, “ನಮ್ಮ ಆತ್ಮದ ಅರ್ಥವು ದೇವರು ಮತ್ತು ಇತರರಿಂದ ಪ್ರತ್ಯೇಕವಾಗಿರುವುದರಲ್ಲಿ ಕಂಡುಬರುವುದಿಲ್ಲ, ಆದರೆ ಯೋಗ, ಒಗ್ಗೂಡುವಿಕೆಯ ನಿರಂತರ ಸಾಕಾರವಾಗಿದೆ.” ಎಂದರು.

    ಭಾರತ ಯುಗ ಯುಗಗಳಿಂದ ಪಾಲಿಸುತ್ತಿರುವ “ವಸುದೈವ ಕುಟುಂಬಕಂ’’ ಮಂತ್ರ ಈಗ ಜಾಗತಿಕ ಮನ್ನಣೆ ಪಡೆಯುತ್ತದೆ. ಮಾನವ ಕುಲಕ್ಕೆ ಭೀತಿ ಇದ್ದಾಗ, ನಾವೆಲ್ಲರೂ ಪರಸ್ಪರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ. ಯೋಗ ನಮಗೆ ಸಹಜವಾಗೇ ಸಮಗ್ರ ಆರೋಗ್ಯದ ಮಾರ್ಗ ತೋರಿಸುತ್ತದೆ. “ಯೋಗ ನಮಗೆ ಸಂತಸದ ಜೀವನ ಮಾರ್ಗ ತೋರುತ್ತದೆ. ಯೋಗ ಸಾಮೂಹಿಕ ಆರೋಗ್ಯದಲ್ಲಿ ಧನಾತ್ಮಕ ಪಾತ್ರ ವಹಿಸುತ್ತದೆ, ರೋಗತಡೆಯ ಪಾತ್ರ ನಿರ್ವಹಿಸುತ್ತದೆ ಎಂದು ನಾನು ನಂಬಿದ್ದೇನೆ. ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.

    ಭಾರತ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಇಂದು ಮಹತ್ವದ ಕ್ರಮ ಕೈಗೊಂಡಿವೆ ಎಂದು ಪ್ರಧಾನಮಂತ್ರಿ ಪ್ರಕಟಿಸಿದರು. ಎಂ-ಯೋಗ ಆಪ್ ಅನ್ನು ವಿಶ್ವ ಪಡೆಯಲಿದ್ದು, ಇದು ಹಲವು ಭಾಷೆಗಳಲ್ಲಿ ಸಾಮಾನ್ಯ ಯೋಗ ಶಿಷ್ಟಾಚಾರದ ಆಧಾರದಲ್ಲಿ ಯೋಗ ತರಬೇತಿಯ ವಿಡಿಯೋಗಳನ್ನು ಒದಗಿಸುತ್ತದೆ ಎಂದರು. ಆಧುನಿಕ ತಂತ್ರಜ್ಞಾನ ಮತ್ತು ಸನಾತನ ವಿಜ್ಞಾನದ ಸಮ್ಮಿಲನಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಹೇಳಿದ ಪ್ರಧಾನಮಂತ್ರಿ, ಎಂ-ಯೋಗ ಆಪ್ ಪ್ರಪಂಚದಾದ್ಯಂತ ಯೋಗ ಪಸರಿಸಲು ಸಹಾಯ ಮಾಡುತ್ತದೆ ಮತ್ತು ‘ಒಂದು ವಿಶ್ವ ಒಂದು ಆರೋಗ್ಯ’ ಪ್ರಯತ್ನಕ್ಕೆ ಕೊಡುಗೆ ನೀಡುತ್ತದೆ ಎಂದು ಆಶಿಸಿದರು.

    ಭಗವದ್ಗೀತೆಯ ಉಲ್ಲೇಖ ಮಾಡಿದ ಪ್ರಧಾನಮಂತ್ರಿಯವರು, ಯೋಗವು ಎಲ್ಲರಿಗೂ ಪರಿಹಾರವನ್ನು ನೀಡುವುದರಿಂದ ನಾವು ಸಾಮೂಹಿಕ ಯೋಗದತ್ತ ಸಾಗುವುದನ್ನು ಮುಂದುವರಿಸಬೇಕಾಗಿದೆ ಎಂದರು. ಯೋಗವನ್ನು ಅದರ ಅಡಿಪಾಯ ಮತ್ತು ಸಾರವನ್ನು ಪ್ರತಿಯೊಬ್ಬ ವ್ಯಕ್ತಿಗೂ ತಲುಪಿಸುವುದು ಮುಖ್ಯ. ಯೋಗವನ್ನು ಎಲ್ಲರ ಬಳಿಗೆ ತೆಗೆದುಕೊಂಡು ಹೋಗಲು ಯೋಗಾಚಾರ್ಯರು ಮತ್ತು ನಾವೆಲ್ಲರೂ ಕೊಡುಗೆ ನೀಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು.(PIB)


    ಎಲ್ಲೆಡೆ ಯೋಗ ದಿನ, ಲಸಿಕೆ ಅಭಿಯಾನ ಶುರು, ಅನ್ ಲಾಕ್ ಆಗುತ್ತಿದೆ ರಾಜ್ಯ

    ದೇಶ

    ಪಠ್ಯಕ್ರಮದಲ್ಲಿ ಯೋಗ ಶಿಕ್ಷಣ ಅಳವಡಿಕೆ

    ಯೋಗ ಶಿಕ್ಷಣವನ್ನು ರಾಜ್ಯದ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಉನ್ನತ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ,  ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿರು.

    “ಮನುಕುಲದ ಮಾನಸಿಕ- ದೈಹಿಕ ಸದೃಢತೆಗಾಗಿ ಹಿರಿಯರು ಕೊಟ್ಟು ಹೋಗಿರುವ ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ. ಮಕ್ಕಳ ಏಕಾಗ್ರತೆ ಮತ್ತು ಬೆಳವಣಿಗೆಗೆ ಇದು ಅತಿ ಹೆಚ್ಚು ಪರಿಣಾಮಕಾರಿ” ಎಂದರು.

    ಈ ವರ್ಷದಿಂದಲೇ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯೋಗವನ್ನು ಪಠ್ಯವನ್ನಾಗಿ ಅಳವಡಿಸುವ ಅಂಶವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ವಹಿಸಿದೆ. ಮಕ್ಕಳು ಆರಂಭದಿಂದಲೇ ಶೈಕ್ಷಣಿಕವಾಗಿ ಬೆಳವಣಿಗೆ ಸಾಧಿಸುವುದರ ಜತೆಗೆ, ಯೋಗದ ಮೂಲಕ ದೈಹಿಕ-ಮಾನಸಿಕವಾಗಿ ಸದೃಢರಾಗಲಿದ್ದಾರೆ ಎಂದು ಡಿಸಿಎಂ ಹೇಳಿದರು.

    ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಗೋವಿಂದರಾಜು ಅವರು ಯೋಗವನ್ನು ಶಿಕ್ಷಣದ ಪಠ್ಯದಲ್ಲಿ ಸೇರಿಸಬೇಕೆಂದು ಮನವಿ ಮಾಡಿದರು. ಅದಕ್ಕೆ ಡಿಸಿಎಂ ಸ್ಪಂದಿಸಿ ಈ ಪ್ರತಿಕ್ರಿಯೆ ನೀಡಿದರು.

    ಯೋಗ ದಿನಾಚರಣೆಗೆ ಸಾನ್ನಿಧ್ಯ ವಹಿಸಿ ಆಸೀರ್ವಚನ ನೀಡಿದ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರು, “ಯೋಗವು ಯಾವುದೇ ದೇಶ, ಜಾತಿ, ಧರ್ಮಕ್ಕೆ ಸೀಮಿತವಾದುದ್ದಲ್ಲ. ಇದು ಮನುಷ್ಯನ ಅಸ್ತಿತ್ವಕ್ಕೆ ಸೇರಿರುವಂಥದ್ದು. ಮನುಷ್ಯನನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯಲು ನಮ್ಮ ಹಿರಿಯರು ಸಂಶೋಧಿಸಿದ ವಿಜ್ಞಾನವೇ ಯೋಗ” ಎಂದು ನುಡಿದರು.

    ಯೋಗ ಭಾರತಕ್ಕೆ ಸೇರಿದ್ದು ಎಂದು ಜಗತ್ತು ಅದನ್ನು ಬಳಸದೇ ಇರಬಾರದು. ಹಾಗೆ ಮಾಡಿದರೆ ಜಗತ್ತಿಗೇ ನಷ್ಟ. ಯುರೋಪಿಯನ್‌ ವಿಜ್ಞಾನಿ ಲಾವಾಶಿಯರ್‌ ಅವರು ಆಮ್ಲಜನಕವನ್ನು ಸಂಶೋಧಿಸಿದರು ಎಂಬ ಕಾರಣಕ್ಕೆ ನಾವು ಅದನ್ನು ಬಳಸದೇ ಇದ್ದರೆ ನಮಗೇ ನಷ್ಟ. ಹಾಗೆಯ ಯೋಗವೂ ಕೂಡ. ಯೋಗ ಜಗತ್ತಿನ ಪ್ರತಿಯೊಬ್ಬರ ಜೀವನ ಶೈಲಿ ಆಗಬೇಕು ಎಂದು ಸ್ವಾಮೀಜಿ ಅವರು ಆಶಯ ವ್ಯಕ್ತಪಡಿಸಿದರು.

    ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಯೋಗ ಮಾರ್ಗದರ್ಶನ ನೀಡಿದರು. ಯೋಗ ಪಟುಗಳಿಂದ ಶ್ರೀಗಳವರು ʼಕಟ್ಟಿ ಚಕ್ರಾಸನʼ, ʼತ್ರಿಕೋನಾಸನʼ, ʼಊರ್ಧ್ವ ತಾಡಾಸನʼ, ʼಪಾದ ಹಸ್ತಾಸನʼ, ʼಉಸ್ಟ್ರಾಸನʼ, ʼಶಶಾಂಕಾಸನʼ, ʼಮಂಡೂಕಾಸನʼ, ʼಮಕರಾಸನʼ, ʼಭುಜಂಗಾಸನʼ, ʼಬಾಲ ಕ್ರೀಡಾಸನʼ, ʼಶಲ್ಬಾಸನʼ, ʼಉತ್ಥಾನ ಪಾದಾಸನʼ, ʼಅರ್ಧಪವನ ಮುಕ್ತಾಸನʼ, ʼಪವನ ಮುಕ್ತಾಸನʼ ಜತೆಗೆ, ʼಕಪಾಲಬಾತಿʼ, ʼಪ್ರಾಣಯಾಮʼ, ʼನಾಡಿ ಶೋಧನʼ, ʼಶೀಥಲಿ ಪ್ರಾಣಯಾಮʼ, ʼಭ್ರಾಮರಿ ಪ್ರಾಣಯಾಮʼ ಮಾಡಿಸಿದರು.‌

    ಕ್ರೀಡಾ ಮತ್ತು ಯವಜನ ಸಬಲೀಕರಣ ಖಾತೆ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಪ್ರಭಾಕರ್, ಯುವಜನ ಸೇವೆ ಇಲಾಖೆ ಆಯುಕ್ತ ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

    ಹಿಂದೆಂದಿಗಿಂತಲೂ ಇಂದು ಪ್ರಸ್ತುತವಾದ ಯೋಗ; ಯೋಗಾಭ್ಯಾಸ ಮಾಡಿರಿ, ರೋಗಗಳನ್ನು ಗೆಲ್ಲಿರಿ

    ಕೋವಿಡ್-19 ಸಾಂಕ್ರಾಮಿಕದಿಂದ ಇಡೀ ವಿಶ್ವವು ಬಿಕ್ಕಟ್ಟು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಅದರ ಮಹತ್ವವನ್ನು ಎತ್ತಿ ತೋರಿದೆ. ಇಮ್ಯುನಿಟಿ ಹೆಚ್ಚಿಸಲು ಎಷ್ಟೇ ಔಷಧಿ ಇರಲಿ, ಬಹುತೇಕರು ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಮಾಡಿ ಆರೋಗ್ಯ ಕಾಪಾಡಿಕೊಂಡ ಉದಾಹರಣೆಗಳಿವೆ.

    ಶ್ವಾಸದ ಶಕ್ತಿಯನ್ನು ಪರೀಕ್ಷೆಗೆ ಒಡ್ಡಿದಂತಹ ರೋಗವಿದು. ಯೋಗವು ಶ್ವಾಸದ ಶಕ್ತಿಯನ್ನೇ ಉತ್ತಮಪಡಿಸುವಂತಹುದು. ದೇಹವನ್ನು ಸಮಗ್ರವಾಗಿ ಸದೃಢಗೊಳಿಸುವ ಹಾಗೂ ಅದಕ್ಕೆ ಪೂರಕವಾಗಿ ಶ್ವಾಸದ, ಮನಸ್ಸಿನ ಶಕ್ತಿಯನ್ನು ಅಪಾರವಾಗಿ ಹೆಚ್ಚಿಸುವ ಯೋಗ ಹಿಂದೆಂದಿಗಿಂತಲೂ ಇಂದು ಅತ್ಯಗತ್ಯವಾಗಿದೆ.

    ಪತಂಜಲಿ ಮಹರ್ಷಿ ಕ್ರಿ.ಪೂ.200ರಲ್ಲಿ ಯೋಗಸೂತ್ರಗಳನ್ನು ರಚಿಸಿದರು. ಇಂದು ಅದು ಅಸಂಖ್ಯ ಪ್ರಭಾವಗಳಿಗೆ ಒಳಗೊಂಡು ವಿವಿಧಾರ್ಥಗಳನ್ನು ಪಡೆದುಕೊಂಡು ಬಳಕೆಯಲ್ಲಿದೆ. ಆದಾಗ್ಯೂ ಪ್ರಸ್ತುತ ಕಾಲಘಟ್ಟದಲ್ಲಿ ಯೋಗದ ಮಹತ್ವವನ್ನು ಜಗತ್ತಿಗೆ ಸಾರಿ ಕೋಟ್ಯಂತರ ಮಂದಿಗೆ ಯೋಗವನ್ನು ಜೀವನ ವಿಧಾನವನ್ನಾಗಿಸಲು ಶ್ರಮಿಸಿದ ಹಲವರಿದ್ದಾರೆ.

    ಕರ್ನಾಟಕದ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಬಿ.ಕೆ.ಎಸ್.ಅಯ್ಯಂಗಾರ್ಯರು ತಮ್ಮದೇ ಆದ ರೀತಿಯಲ್ಲಿ ಯೋಗ ಪ್ರಚಾರಕ್ಕೆ ಜೀವನ ಮುಡಿಪಾಗಿಸಿದರು. ಅಯ್ಯಂಗಾರ್ಯರು ವಿಶ್ವದಾದ್ಯಂತ ಯೋಗದ ಮಹತ್ವ ಸಾರಿ ಹೇಳಿದರು. ಅದಕ್ಕಾಗಿ ಅವರು ರಚಿಸಿದ “ಯೋಗದೀಪಿಕಾ” ಇಂದು ವಿಶ್ವದಲ್ಲಿ ಅಸಂಖ್ಯ ಯೋಗಾಭ್ಯಾಸಿಗಳಿಗೆ ಮಾರ್ಗದರ್ಶನ ನೀಡುವ ಮಹತ್ವದ ಗ್ರಂಥವಾಗಿದೆ.

    ಯೋಗವೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಎಂದು ಪತಂಜಲಿಯ ಯೋಗಸೂತ್ರಗಳು ಹೇಳುತ್ತವೆ. ಇವೆಲ್ಲವೂ ಅಂತಿಮವಾಗಿ ಪರಮಾತ್ಮನನ್ನು ತನ್ನಲ್ಲೇ ಕಂಡುಕೊಳ್ಳುವ ಸಾಧನಗಳಷ್ಟೇ ಎಂದು ಪತಂಜಲಿಯು ವಿವರಿಸುತ್ತಾನೆ. ಇವುಗಳಲ್ಲಿ ಶ್ರೀಸಾಮಾನ್ಯರಲ್ಲಿ ಅತ್ಯಂತ ಜನಪ್ರಿಯವಾಗಿರುವುದು ಆಸನ ಮತ್ತು ಪ್ರಾಣಾಯಾಮ.

    ಯೋಗವೆನ್ನುವುದು ಒಂದು ಜೀವನಶೈಲಿ, ಒಂದು ಆಧ್ಯಾತ್ಮಿಕ ಸ್ಥಿತಿ, ತನ್ನಲ್ಲೇ ಪರಮಾತ್ಮನನ್ನು ಕಂಡುಕೊಳ್ಳುವ ಉನ್ನತ ಸ್ಥಿತಿ. ಆದರೆ ಅದೇನೇ ಇರಲಿ, ಇಂದು ಯೋಗವು ಒಂದು ಶರೀರದ ಆರೋಗ್ಯ ಕಾಪಾಡುವ ಸಾಧನವಾಗಿ ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿರುವುದು ಅಷ್ಟೇ ಸತ್ಯ.

    ಊರ್ಧ್ವ ಕುಕ್ಕುಟಾಸನ

    ಯಾವುದೇ ವಯಸ್ಸಿರಲಿ, ಯಾವುದೇ ಸ್ಥಳದಲ್ಲಿರಲಿ ಯೋಗಾಭ್ಯಾಸ ಮಾಡಿ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರಬಲ ಅಸ್ತ್ರವಾಗಿದೆ. ಪ್ರಸ್ತುತ ಸಾಂಕ್ರಾಮಿಕದ ಸಂದರ್ಭದಲ್ಲಿ ಯೋಗಾಭ್ಯಾಸದ ಮಹತ್ವವನ್ನು ಇಡೀ ವಿಶ್ವವು ಪುನರುಚ್ಛರಿಸುತ್ತಿರುವುದು ಶತಮಾನಗಳಿಂದ ನಡೆದುಬಂದ ಅದರ ಶಕ್ತಿಗೆ ಸಾಕ್ಷಿಯಾಗಿದೆ.

    ಏಕಹಸ್ತ ಪದ್ಮ ಮಯೂರಾಸನ

    ಹಲವು ಕಾಯಿಲೆಗಳಿದ್ದು ಯೋಗಾಭ್ಯಾಸದಿಂದ ಅವುಗಳಿಂದ ಮುಕ್ತರಾದವರನ್ನು ನಾವು ಕಂಡಿದ್ದೇವೆ. ರೋಗಕ್ಕೆ ರೋಗ ಬಂದ ಜಾಗದಲ್ಲಿ ಚಿಕಿತ್ಸೆ ನೀಡಬೇಕು ಎನ್ನುವುದು ಆಧುನಿಕ ವೈದ್ಯ ಪದ್ಧತಿಯ ವಿಧಾನ. ಆದರೆ ದೇಹ, ಮನಸ್ಸು ಹಾಗೂ ಶ್ವಾಸಗಳ ಸಮೀಕರಣದಿಂದ ರೋಗವನ್ನು ದೂರವಿರಿಸಬೇಕು ಎನ್ನುವುದು ಯೋಗದ ಮೂಲತತ್ವ.
    ಬಿ.ಕೆ.ಎಸ್.ಅಯ್ಯಂಗಾರ್ಯರು ತಮ್ಮ ಕೃತಿಯಲ್ಲಿ ದೇಹದ ಪ್ರತಿಯೊಂದು ಕಾಯಿಲೆಯನ್ನು ನಿಯಂತ್ರಿಸಲು ವಿವಿಧ ಯೋಗಾಭ್ಯಾಸಗಳನ್ನು ಸಲಹೆ ಮಾಡಿದ್ದಾರೆ. ಕೆಲವು ಕಾಯಿಲೆಗಳನ್ನು ಯೋಗಾಭ್ಯಾಸದಿಂದ ಶಾಶ್ವತವಾಗಿ ದೂರ ಮಾಡಲು ಸಾಧ್ಯ. ಆದರೆ ಸರಿಯಾದ ಗುರುವಿನ ಮಾರ್ಗದರ್ಶನವಿಲ್ಲದೆ ಯೋಗಾಭ್ಯಾಸ ಮಾಡುವುದು ಒಳ್ಳೆಯದಲ್ಲ. ದೇಹವನ್ನು ವಿವಿಧ ಭಂಗಿಗಳಿಗೆ ಬಾಗಿಸುವ ಆಸನಗಳು, ಪ್ರಾಣಾಯಾಮಗಳನ್ನು ಮಾರ್ಗದರ್ಶನದಲ್ಲಿ ನಿರ್ವಹಿಸುವುದು ಅತ್ಯಗತ್ಯ.

    ಯೋಗಾಭ್ಯಾಸದ ಸ್ಪರ್ಧೆಗಳು ನಡೆಯುತ್ತಿರುವುದರಿಂದ ಖ್ಯಾತಿ ಪಡೆಯಲು ಒಂದು ಮಾರ್ಗವೂ ಆಗಿದೆ. ಯೋಗ ಸ್ಪರ್ಧೆಗಳ ವಿಜೇತರನ್ನು ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಂತೆ ಕಾಣಲಾಗುತ್ತಿದೆ. ಹೀಗಾಗಿ ಇದು ಇಂದು ಒಂದು ಕ್ರೀಡೆಯೂ ಹೌದು.

    ತ್ರಿಪುರ ಹಲಾಸನ

    ಒಟ್ಟಿನಲ್ಲಿ ಈ ವಿಶ್ವ ಯೋಗ ದಿನದಂದು ನೀವು ಯೋಗಾಭ್ಯಾಸ ಮಾಡುತ್ತಿದ್ದಲ್ಲಿ ಮತ್ತಷ್ಟು ಆಳವಾಗಿ ವಿಸ್ತರಿಸಿ ಅಥವಾ ಯೋಗಾಭ್ಯಾಸಿಗಳಲ್ಲದೇ ಇದ್ದಲ್ಲಿ ಹೊಸದಾಗಿ ಯೋಗಾಭ್ಯಾಸ ಪ್ರಾರಂಭಿಸಿ. ನಿಮ್ಮ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಿ.
    ವಿಶ್ವ ಯೋಗದ ದಿನದ ಶುಭಾಶಯಗಳು!

    ಚಿತ್ರ: ಯೋಗಪಟು ದೊಡ್ಡಬಳ್ಳಾಪುರದ ಹಲವು ಪುರಸ್ಕಾರಗಳನ್ನು ಪಡೆದಿರುವ ಯೋಗಪಟು ಡಿ.ಸಿ. ಬಾಬು

    ಯೋಗವನ್ನು ವಾಣಿಜ್ಯಕರಣ ಮಾಡದ ನಿಜವಾದ ಯೋಗ ಗುರು ಮಲ್ಲಾಡಿಹಳ್ಳಿ ಸ್ವಾಮೀಜಿ

    ಯೋಗ ಅಂದರೆ ಸೇರುವಿಕೆ,ಕೂಡಿಕೊಳ್ಳೋದು ಅಂತ ಸಾಮಾನ್ಯ ಭಾಷೆಯ ಅರ್ಥ. ಇಂದು ನಾವೆಲ್ಲಾ ಮಾತಾಡುವ ಯೋಗದ ವಿಶಾಲವಾದ ಅರ್ಥ ದೇಹ, ಮನಸ್ಸನ್ನು ಕೂಡಿಸೋದು ಅಂತ. ಆರೋಗ್ಯವಾದ ದೇಹದಲ್ಲಿ,ಆರೋಗ್ಯವಾದ ಮನಸ್ಸು ಇರುತ್ತೆ ಅಂತ ಕಂಡುಕೊಂಡು ಇವೆರಡನ್ನೂ ಆರೋಗ್ಯವಾಗಿ ಇಡುವ ಕ್ರಿಯೆಯಾಗಿ ಯೋಗವನ್ನು ಅರ್ಥೈಸಲಾಗಿದೆ ಈಗ. ಆದರೆ ಇದು ಅಷ್ಟಾಂಗ ಯೋಗ ಮಾರ್ಗದ ಒಂದು ಮೆಟ್ಟಿಲು ಮಾತ್ರ. ಯೋಗದ ಅಷ್ಟಾಂಗಗಳು ಕೆಳಗಿನಂತೆ ಇವೆ.

    1.ಯಮ ( ನಮ್ಮ ಜೀವನ ಕ್ರಮ,ಉದಾ:ಅಹಿಂಸೆಯನ್ನು ಅಳವಡಿಸಿಕೊಳ್ಳೋದು)
    2.ನಿಯಮ (ನಮ್ಮ ನೈತಿಕತೆ)
    3.ಆಸನ (ಯೋಗದ ಆಸನ)
    4.ಪ್ರಾಣಾಯಾಮ (ಕ್ರಮಬದ್ಧ ಉಸಿರಾಟ)
    5.ಪ್ರತ್ಯಾಹಾರ (ಇಂದ್ರಿಯ ನಿಗ್ರಹ)
    6.ಧಾರಣ (ಏಕಾಗ್ರತೆ)
    7.ಧ್ಯಾನ
    8.ಸಮಾಧಿ

    ಇದನ್ನು ಸಿದ್ಧಿಯೋಗ ಅಂತಲೂ ಕರೀತಾರೆ. ಆಸನದ ವಿಷಯಕ್ಕೆ ಬಂದಾಗ ಅವರವರ ದೇಹ ಪ್ರಕೃತಿಗೆ ಅನುಕೂಲಕ್ಕಾಗಿ ಆರು ಆಸನಗಳಿವೆ.ಅವು ವಿರಾಸನ, ಭದ್ರಾಸನ, ಪದ್ಮಾಸನ,ವಜ್ರಾಸನ, ಸ್ವಸ್ತಿಕಾಸನ,ಸಿದ್ಧಾಸನ….ಮನಸ್ಸಿಗೆ, ದೇಹಕ್ಕೆ ಕಿರಿಕಿರಿಯಾಗದೆ ಯಾರು ಎರಡೂವರೆ ಗಂಟೆಗಳ ಕಾಲ ಮೇಲಿನ ಆರು ಆಸನಗಳಲ್ಲಿ ಕದಲದೇ ಒಂದರಲ್ಲಿ ಕೂಡುತ್ತಾರೋ ಅವರು ಆ ಆಸನದಲ್ಲಿ ಸಿದ್ಧಿ ಮಾಡಿಕೊಳ್ಳಬಹುದು. ಮೇಲಿನ ಆರೂ ಆಸನಗಳು ಯಾರಿಗೆ ಸಿದ್ಧಿಸುವುದಿಲ್ಲವೋ ಅವರು ಸುಖಾಸನ ಅಂದ್ರೆ ಅವರ ದೇಹ ಯಾವ ರೀತಿ ಕುಳಿತುಕೊಂಡರೆ ಒಗ್ಗುತ್ತೋ ಹಾಗೆ ಕುಳಿತು ಮುಂದುವರಿಸಬಹುದು.

    ಸ್ವಾಮೀಜಿ ಮತ್ತು ಸೂರ್ ದಾಸ್ ಜಿ

    ನನ್ನ ಯೋಗಗುರು, ಭಿಕ್ಷೆಬೇಡಿ ತಂದು ಸಾಕಿ, ವಿದ್ಯೆಕಲಿಸಿದ ಅಭಿನವ ಧನ್ವಂತರಿ,ಯೋಗಾಚಾರ್ಯರಾದ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಗಳು ಯಾವಾಗಲೂ ಹೇಳುತ್ತಿದ್ದುದು ಯಮ,ನಿಯಮ ಒಳಗೊಂಡ ಅಷ್ಟಾಂಗ ಇಲ್ಲದೇ ಬರೀ ಆಸನ/ಯೋಗ ಉಪಯೋಗಕ್ಕೆ ಬರುವುದಿಲ್ಲ ಅಂತ! ಆರೋಗ್ಯಕ್ಕಾಗಿ ಮಾಡುವ ಯೋಗಾಸನದಲ್ಲಿ ಕನಿಷ್ಠ ಯಮ,ನಿಯಮ ಇರಲೇ ಬೇಕು ಅನ್ನುವುದು ಅವರ ನಿಲುವಾಗಿತ್ತು!

    ನಮಗೆಲ್ಲ ಕನಿಷ್ಠ ಯಮ,ನಿಯಮ ಅಳವಡಿಸಿಕೊಂಡು ಯೋಗಾಸನಕ್ಕೆ ಅಣಿಯಾಗಬೇಕು ಅಂತ ಪದೇ ಪದೇ ಹೇಳುತ್ತಿದ್ದರು. ಅವರಿಗೆ ಯೋಗ ಶಿಕ್ಷಕರಿಂದ ಯೋಗ ಕಲಿಸಲ್ಪಟ್ಟಿರಲಿಲ್ಲ, ಬದಲಾಗಿ ಸಮಾಧಿ ಸ್ಥಿತಿಯನ್ನು ಬೇಕಾದಾಗ ತಲುಪಿ,ಮತ್ತೆ ಹಿಂತಿರುಗಿ ಬರಬಲ್ಲ ಸಾಧಕರಿಂದ ಭೋಧಿಸಲ್ಪಟ್ಟಿತ್ತು. ಯೋಗ ಮಾರ್ಗದಲ್ಲಿ ಭಗವಂತನನ್ನು ಕಾಣುವ ಎಲ್ಲ ಅರ್ಹತೆ ಅವರಲ್ಲಿದ್ದರೂ, ಆ ಮಾರ್ಗದಲ್ಲಿಯೇ ಸಾಧನೆ ಮಾಡಬೇಕೆಂಬ ಹಂಬಲ ಇದ್ದಾಗ್ಯೂ ಆ ಮಾರ್ಗ ಹಿಡಿಯದೇ ಸಮಾಜ ಸೇವೆಯ ಮಾರ್ಗದಲ್ಲಿ ಭಗವಂತನನ್ನು ಕಂಡದ್ದೂ ಅವರ ಗುರುಗಳ ಅಪ್ಪಣೆ ಮೆರೆಗೇ.

    ನನಗೆ ಯೋಗ,ನಮ್ಮ ಸ್ವಾಮೀಜಿ ಬೇರೆ ಬೇರೆ ಅಂತ ಅನ್ನಿಸೋದೇ ಇಲ್ಲ. ಹಾಗಾಗಿ ಯೋಗದ ಬಗ್ಗೆ ಎಲ್ಲೇ ಮಾತಾಡುವಾಗ ನನ್ನ ಸ್ವಾಮೀಜಿ ಅರಿವಿಲ್ಲದೆಯೇ ನನ್ನಲ್ಲಿ ಬಂದುಬಿಡುತ್ತಾರೆ. ಒಬ್ಬ ಸಾಧಾರಣ ಮನುಷ್ಯ ಜೀವಿತ ಕಾಲದಲ್ಲಿ ಅಷ್ಟೊಂದು ತರಹದ ವಿದ್ಯೆಗಳಲ್ಲಿ ಪರಿಣಿತಿ ಪಡೆದು ಒಂದು ಆಶ್ರಮ ಕಟ್ಟಿ ತಾವು ಕಲಿತ ವಿದ್ಯೆಗಳನ್ನು ಉಚಿತವಾಗಿ ಸಮಾಜಕ್ಕೆ ಕಲಿಸಿ ಧನ್ಯತೆ ಹೊಂದುವ ಅವರ ಭಾವ ನನ್ನನ್ನು ಯಾವಾಗಲೂ ಕಾಡುತ್ತದೆ.

    ನನ್ನ ಹಿಂದೆ ಯಾವುದೇ ಕುಲದ ಭಕ್ತರಿಲ್ಲ, ನಾನು ಯಾವ ಮಠದ ಅಧಿಪತಿಯೂ ಅಲ್ಲ, ಎಲ್ಲಿಯೂ ಯಾರೂ ನನಗೆ ಯಾವುದೇ ಮಠದ ಪಟ್ಟ ಕಟ್ಟಿಲ್ಲ. ನನ್ನನ್ನು ಸ್ವಾಮೀಜಿ ಅನ್ನ ಬೇಡಿ, ನಾನೊಬ್ಬ ವಿನಮ್ರ ಸೇವಕ, ಅಂತ ಹೇಳುತ್ತಿದ್ದ ಶ್ರೀ ಗಳು ನನ್ನನ್ನು ಎಳೆಯ ಬಾಲ್ಯದಲ್ಲಿಯೇ ಆವರಿಸಿಬಿಟ್ಟಿದ್ದರು. ನಮ್ಮಂತವರು ಅವರನ್ನು ಕಂಡು ಮನದಾಳದಿಂದ ಸ್ವಾಮಿಜೀ ಅಂದಿದ್ದೇವೆ ಬಿಟ್ಟರೆ, ಅವರನ್ನು ಅವರು ಕರೆದುಕೊಂಡಿದ್ದು ತಿರುಕ ಅಂತ! ಒಂದೊಂದು ಸಾರಿ ಈಗಿನ ನಮ್ಮ ಸುತ್ತಲಿನ ಹಲವಾರು ಸ್ವಾಮಿಜಿಗಳನ್ನು ಕಂಡಾಗ, ಅವರನ್ನು ನಾವು ಸ್ವಾಮೀಜಿ ಅಂದು ಅವಮಾನ ಮಾಡಿದೆವೇನೂ ಅನ್ನುವ ಅನುಮಾನ ನನಗೆ ತುಂಬಾ ಸಾರಿ ಬಂದಿದೆ. ಅವರನ್ನು ಅವಧೂತ ಅನ್ನಬೇಕಿತ್ತು, ಸುಮ್ಮನೆ ಸ್ವಾಮೀಜಿ ಅಂದು ತಪ್ಪು ಮಾಡಿಬಿಟ್ಟೆವು ನಾವು.

    ಶಿಸ್ತು,ಆರೋಗ್ಯ,ಶಿಕ್ಷಣ ಗಳನ್ನು ಗ್ರಾಮೀಣ ಭಾರತಕ್ಕೆ ತಲುಪಿಸುವ ಗುರಿ ಇಟ್ಟುಕೊಂಡು ಅಲೆಮಾರಿಯಾಗಿ ಬಂದವರು ನಮ್ಮ ಶ್ರೀಗಳು. ಜೀವನದುದ್ದಕ್ಕೂ ಅಲೆಮಾರಿಗಳಾಗಿಯೇ ಉಳಿದವರು. ಮಲ್ಲಾಡಿಹಳ್ಳಿಯಲ್ಲಿ ತಮ್ಮ ಧ್ಯೇಯ ಸಾಧನೆಗೆ ಆಶ್ರಮ ಕಟ್ಟಿ ಉಚಿತ ಶಿಕ್ಷಣದ ಮೂಲಕ ರಾಷ್ಟಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡು ತಿರುಕನೆಂದು ಕರೆದುಕೊಂಡು ಊರೂರು ಸುತ್ತಿದವರು. ಲಕ್ಷ,ಲಕ್ಷ ಗ್ರಾಮೀಣ ಭಾಗದ ಜನರಿಗೆ ಜ್ಯೋತಿ ಆದವರು. ಅವರು ಯಾರನ್ನೇ ಆಗಲಿ ಸಂಬೋಧಿಸುತ್ತಿದು ರಾಷ್ಟ್ರೀಯರೇ ಅಂತ. ಸೇವೆ,ಸೇವೆ ಸೇವೆ ಅಂತ ಮೇಲೆ ಮೂರು ಸಾರಿ ಬರೆದೇ ಅವರ ಪತ್ರಗಳು ಶುರು ಆಗುತ್ತಿದ್ದವು. ಕೊನೆಯಲ್ಲಿ ತಮ್ಮ ವಿನಮ್ರ ಸೇವಕ ಅಂತ ಬರೆದು ಮುಗಿಸುತ್ತಿದ್ದರು.

    ರಾಷ್ಟ್ರೀಯತೆಯ ಯಜ್ಞದಲ್ಲಿ ತಮ್ಮನ್ನು ತಾವು ಸಮಿಧೆಯಂತೆ ಉರಿಸಿಕೊಂಡು ಬಿಟ್ಟರು,ತಮ್ಮ ಗುರುಗಳ ಆಜ್ಞಾಪಾಲಕರಾಗಿ! ಈಗ ಈ ಶಬ್ದಗಳು,ರಾಷ್ಟ್ರೀಯತೆ,ಸೇವೆ,ಸ್ವಾಮೀಜಿ ಮುಂತಾದುವು ಅರ್ಥ ಕಳೆದುಕೊಂಡಿವೆ. ಇವುಗಳೆಲ್ಲೆವುದರ ಜೀವಂತ ಮೂರ್ತಿಯಂತೆ ಇದ್ದವರು ನಮ್ಮ ಶ್ರೀಗಳು.

    ಪ್ರಶಸ್ತಿಗಳಿಗಾಗಿ ಗುಂಪುಗಾರಿಕೆ ಮಾಡಿಕೊಂಡು,ಸಿಕ್ಕವರನ್ನು ಓಲೈಸಿಕೊಳ್ಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವವರನ್ನು ದಿನವೂ ನೋಡುತ್ತಿದ್ದೇನೆ. ಎಲ್ಲಿಯೇ ಎಂತಹುದೇ ಸಭೆ,ಸಮಾರಂಭ ಆದಲ್ಲಿ ನನ್ನನ್ನು ಅಗ್ರಸ್ಥಾನದಲ್ಲಿ ಕುಳ್ಳಿರಿಸಿ, ಸನ್ಮಾನ ಮಾಡಬೇಕು ಎನ್ನುವಂತಹ ಮಹಾತ್ಮರನ್ನು,ಸಮಾಜ ಸೇವಕರನ್ನು ನೋಡುತ್ತಿದ್ದೇನೆ. ಆಗಿನ ಮುಖ್ಯಮಂತ್ರಿಗಳು ಆಶ್ರಮಕ್ಕೆ ಬಂದು ಪ್ರಶಸ್ತಿ ತೊಗಳ್ಳಿ ಅಂದ್ರೆ, ನಯವಾಗಿ ನಿರಾಕರಿಸಿ,ಅದನ್ನು ನೀವೇ ಇಟ್ಟುಕೊಂಡು ನನ್ನ ಜೋಳಿಗೆಗೆ ಏನಾದ್ರು ಧನ ಸಹಾಯ ಮಾಡಿ ಅಂದಿದ್ದರು. ಸಭೆ,ಸಮಾರಂಭಗಳಲ್ಲಿ ವೇದಿಕೆ ಮೇಲಿರದೆ, ಕೈಯಲ್ಲಿ ಬೆತ್ತ ಹಿಡಿದು ನಮ್ಮಗಳ ಮಧ್ಯೆ ಇರುತ್ತಿದ್ದರು. ಯಾವುದೇ ಪವಾಡ, ಮಾಯ, ಮಾಟ, ಮಂತ್ರ,ತಂತ್ರ ಇಲ್ಲದೇ ಸರ್ವರ ಗೌರವ ಗಳಿಸಿಕೊಂಡವರು. ಹಾಗಾಗಿ ಏನೋ ಮತ್ಯಾರೂ ಇವರ ಎತ್ತರದಲ್ಲಿ ಇದುವರೆಗೂ ನನಗೆ ಕಾಣಸಿಕ್ಕಿಲ್ಲ.

    ಯೋಗ,ವ್ಯಾಯಾಮ,ಆಯುರ್ವೇದ, ಸಿದ್ಧಔಷಧಿ, ನಾಟಕ,ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲೂ ತಮ್ಮ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಗುರುಗಳ ಗುರುವಾಗಿದ್ದ ಮುಸ್ಲಿಂ ಗುರುವನ್ನೂ ಹೊಂದಿದ್ದ ನನ್ನ ಶ್ರೀಗಳು ಎಂದಿಗೂ ಮತಗಳ ವಿಷಯದಲ್ಲಿ ಭೇದ, ಭಾವ ತೋರುವುದು ಅಸಾಧ್ಯವಾಗಿತ್ತು. ಅದು ಅವರಿಗೆ ತಿಳಿಯದ, ಹತ್ತಿರವೂ ಸುಳಿಯಲು ಸಾಧ್ಯವಾಗದ ವಿಷಯ. ಭಾರತೀಯತೆ,ಭಾರತೀಯ ಅವರ ಬಂಧುವಾಗಿದ್ದ. ಧಾರ್ಮಿಕ ಸ್ವಾಮಿಗಳಿಗೂ ಆಧ್ಯಾತ್ಮಿಕ ಸ್ವಾಮಿಗಳಿಗೂ ವ್ಯತ್ಯಾಸ ತಿಳಿಯ ಬಯಸುವವರು, ನಮ್ಮ ಸ್ವಾಮಿಗಳನ್ನು ಒಮ್ಮೆ ಸುಮ್ಮನೆ ಓದಿ. ನಾನವರನ್ನು ಯಾರೊಂದಿಗೆ ಹೋಲಿಸುವುದನ್ನೂ ಆಕ್ಷೇಪಿಸುತ್ತೇನೆ.

    ಇಂತಹ ದಿವ್ಯಚೇತನದ ಒಡನಾಟದಲ್ಲಿ ನನಗೆ ಯೋಗದ ಪರಿಚಯ 44 ವರ್ಷಗಳ ಹಿಂದೆಯೇ ಆಗಿದೆ ಅಂತ ಹೇಳಲು ಎದೆ ಉಬ್ಬಿ ಬರುತ್ತದೆ. ಅವರು ಬೆನ್ನಿಗೆ ಗುದ್ದಿದ್ದ ಗುದ್ದುಗಳು ಇಂದಿಗೂ ನನ್ನ ಬೆನ್ನು ಮರೆತಿಲ್ಲ. ಅಂತಹ ಕಠಿಣ ಶಿಕ್ಷಣದ ಪ್ರತಿಪಾದಕರು ಅವರು! ಮುಂಬರುವ ದಿನಗಳಲ್ಲಿ ವಿಶ್ವಕ್ಕೆ ಯೋಗದ ಅನಿವಾರ್ಯತೆ ತುಂಬಾ ಇರುತ್ತದೆ ಅಂತ ಅಂದೇ ಹೇಳುತ್ತಿದ್ದರು. ಸನ್ನಡತೆಯ,ಸಧೃಢತೆಯ ನಾಗರಿಕರೇ ದೇಶದ ಆಸ್ತಿ ಅಂತ ನಂಬಿದ್ದರು. ತನ್ನಲ್ಲಿಗೆ ಬರುತ್ತಿದ್ದವರಿಗೆ ಹುಚ್ಚುಚ್ಚು ಕೆಲಸಕ್ಕೆ ಬಾರದ್ದನ್ನ, ಆಮಿಷ ತೋರಿಸಿ ಹೇಳಿದವರೇ ಅಲ್ಲ, ಅದು ಅವರಿಗೆ ಬೇಕೂ ಆಗಿರಲಿಲ್ಲ. ಆಸ್ಪತ್ರೆಯ ಮಂಚದ ಮೇಲೆ ಡಜನ್ ಬಾಳೇ ಹಣ್ಣು ಕೊಟ್ಟು ತಮ್ಮದು ಅನ್ನೋದನ್ನ ಪ್ರಚಾರ ಮಾಡುವವರನ್ನು ನೋಡುವಾಗ ಅಯ್ಯೋ ಅನ್ನಿಸಿ ಕನಿಕರ ಆಗುತ್ತದೆ.

    ಆರೋಗ್ಯ, ಶಿಕ್ಷಣ ಎಲ್ಲರಿಗೂ ಉಚಿತವಾಗಿ ಸಿಕ್ಕಾಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ. ಇವೆರಡೂ ಕ್ಷೇತ್ರಗಳಲ್ಲಿ ನಮ್ಮ ಶ್ರೀ ಗಳು ಕಾರ್ಯ ಸದಾ ಸ್ಮರಣೀಯ ಮತ್ತು ಅನುಕರಣೀಯ. ತಮ್ಮಲ್ಲಿಗೆ ಬಂದ ಪ್ರತಿಯೊಬ್ಬರಿಗೂ ಜಾತಿ,ಧರ್ಮ,ಮತ ಯಾವುದೆಂದು ಎಂತಹ ಸಂಧರ್ಭದಲ್ಲಿಯೂ ಕೇಳದೆ ತಾವು ಕಲಿತದ್ದನ್ನು ಉಚಿತವಾಗಿ, ಉನ್ನತ ಶ್ರೇಣಿಯ ಭಾರತವನ್ನು ಕಾಣಲು ಧಾರೆ ಎರೆದಿದ್ದಾರೆ, ಯಾರದೇ ನಂಬಿಕೆಗಳಿಗೆ ಧಕ್ಕೆ ತರದೆ. ಇದಕ್ಕಿಂತಲೂ ಮಾನವತಾವಾದಿಯನ್ನು ಇಂದು ಕಾಣಲು ಸಾಧ್ಯವೇ?

    ಮುನ್ನೂರ ಅರವತ್ತೆಂಟು ಆಸನಗಳನ್ನು ಕರಗತಮಾಡಿಕೊಂಡು ಹೋದಲ್ಲೆಲ್ಲಾ ಪ್ರದರ್ಶನಗಳನ್ನು ಮಾಡುತ್ತಾ ಅಂದಿನ ಯುವಕರಿಗೆ ಪ್ರೇರಣೆಯಾಗಿ ಸ್ವಸ್ಥ ಸಮಾಜದ ಅನಿವಾರ್ಯತೆಯನ್ನು ಮನನ ಮಾಡಿಸಿದ್ದಾರೆ. ನಾನಾ ಕಾರಣಗಳಿಂದ ದೂರವಾಗಿದ್ದ ಈ ನೆಲದ ಹಲವಾರು ಪುರಾತನ ವಿದ್ಯೆಯನ್ನು ಪುನಃ ಸ್ಥಾಪನೆ ಮಾಡುವ ಉದ್ದೇಶವನ್ನು ಸದಾ ಜೀವಂತ ಇಟ್ಟವರು. ಅವರ ಮಲ್ಲ ಯುದ್ಧ, ಕತ್ತಿ ವರಸೆಗಳ ಜ್ಞಾನ ಇಂದಿನ ಜನಾಂಗಕ್ಕೆ ಕೌತುಕ ಮೂಡಿಸುತ್ತದೆ. ಸಾವಿರಾರು ವನೌಷಧಿ, ತುಪ್ಪ, ಎಣ್ಣೆಗಳ ಮಿಶ್ರಣದಿಂದ ತಯಾರು ಮಾಡುತ್ತಿದ್ದ ಆಶ್ರಮದ ವ್ಯಾಯಾಮ ಶಾಲೆಯ ಮಣ್ಣು ಆಗ ನಮಗೆಲ್ಲ ಆಶ್ಚರ್ಯದ ವಿಷಯ. ಯಾವುದೇ ವಿಧಿ,ವಿಧಾನಗಳಿಗೆ, ಕಟ್ಟುಪಾಡುಗಳಿಗೆ ತಮ್ಮನ್ನು ಬಲಿಕೊಡದೆ, ತಾವೇ ಕಟ್ಟುನಿಟ್ಟಾದ ಜೀವನವನ್ನು ಅಳವಡಿಸಿಕೊಂಡು ತಮ್ಮ ಗುರಿ ಸಾಧನೆಗೆ ಟೊಂಕ ಕಟ್ಟಿಕೊಂಡವರು. ಅದರಲ್ಲಿ ಬ್ರಹ್ಮಚರ್ಯ ಅಂತಹ ಒಂದು ಮಾತ್ರ.

    ಇಂದು ಯೋಗವನ್ನು ದಿನಾಚರಣೆ ಅಂತ ಭಾರತ ಸರ್ಕಾರ ಘೋಷಿಸಿ ಆಚರಿಸುತ್ತಿರುವುದು ಅವರ ಆತ್ಮ ಎಲ್ಲೇ ಇದ್ದರೂ ತಿಳಿದು ಉಲ್ಲಾಸಗೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಶುಭ ಸಂದರ್ಭದಲ್ಲಿ ಅವರನ್ನು ನೆನೆಯದೇ ಇರುವುದು, ನನ್ನಂತಹ ಲಕ್ಷ,ಕೋಟಿ ಜನರಿಗೆ ನೆನಪಿಸಿಕೊಳ್ಳದೇ ಇರುವುದೂ ಅಸಾಧ್ಯ. ಇಂದು ದೇಶಾದ್ಯಂತ ಯೋಗ ಅನ್ನುವ ಹೆಸರಲ್ಲಿ ಕೋ್ಟ್ಯಂತರ ಭಾರತೀಯರು ತಮಗೆ ತಿಳಿದ ರೀತಿ ಯೋಗ ಮಾಡುವುದು ಆ ದಿವ್ಯ ಚೇತನಕ್ಕೆ ಸಂತಸದ ವಿಷಯ. ಆ ಅಮರ ಚೇತನಕ್ಕೆ ನನ್ನ ಮನದಾಳದ ನಮನಗಳು. ಅವರು ಪ್ರತಿಪಾದಿಸಿದ ಯೋಗವನ್ನು ಇಂದು ಆಚರಣೆಗೆ ಸಾರ್ವತ್ರಿಕವಾಗಿ ತರುವುದು ಅಸಾಧ್ಯವಾದರೂ ಭಾರತ ಇಂದು ಯೋಗದ ಬಗ್ಗೆ ಅರಿತಿರುವುದು, ಆಚರಿಸುತ್ತಿರುವುದು ಆ ಚೇತನಕ್ಕೆ ತುಂಬಾ ಖುಷಿ ಕೊಡುವ ಸಂಗತಿ.

    ಹತ್ತು ಬೀಜ ಬಿತ್ತು, ಒಂದು ಖಂಡಿತಾ ಫಲ ಕೊಡುತ್ತದೆ….ಅನ್ನುವ ನಂಬಿಕೆಯಿಂದ ತಮ್ಮ ಜೀವನವನ್ನು ಸವೆಸಿದ ನನ್ನ ಯೋಗಾಚಾರ್ಯ ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಗಳ ಪದತಲದಲ್ಲಿ ನನ್ನ ಶಿರ ಬಾಗಿಸಿ, ಸಮಸ್ತ ಭಾರತೀಯರಿಗೆ ನನ್ನ ಯೋಗ ದಿನಾಚರಣೆಯ ಶುಭಾಶಯಗಳನ್ನು ತಿಳಿಯ ಬಯಸುತ್ತೇನೆ.

    ಆರೋಗ್ಯವೇ ಭಾಗ್ಯ.

    ಭಾನುವಾರದ ಹೆಡ್ ಲೈನ್

    ದೇಶ

    ನೋವಿನ ಮೇಲೆ ಮತ್ತೆ ಮತ್ತೆ ನೋವುಗಳು ಬಂದರೆ ಎಂಥ ಗಟ್ಟಿಗರಿಗು ಅದನ್ನು ಸಹಿಸಲಾಗುವುದಿಲ್ಲ

    ಸುಮಾ ವೀಣಾ

    ಗಂಡಸ್ಯೋಪರಿ ಸ್ಫೋಟಕಂ– ‘ಶಕ್ತಿಕವಿ ರನ್ನ’ನ ಸಾಹಸ ಭೀಮ ವಿಜಯಂನ ‘ದುರ್ಯೋಧನ ವಿಲಾಪಂ’ ಭಾಗದ   27 ನೆ ಪದ್ಯದ ನಂತರದ ವಚನದಲ್ಲಿ ಈ ಮಾತು ಬರುತ್ತದೆ.  ಮಹಾಭಾರತ  ಯುದ್ಧದಲ್ಲಿ ದುರ್ಯೋಧನ ತನ್ನ ಬಂಧು ಭಾಂದವರನ್ನೆಲ್ಲ ಕಳೆದುಕೊಂಡು ಭೀಷ್ಮರನ್ನು ಭೇಟಿಯಾಗಲೆಂದು  ಸಂಜಯನ ಸಂಗಡ ನಡೆದುಕೊಂಡು ಬರುತ್ತಿರುತ್ತಾನೆ. ಆ ಸಂದರ್ಭದಲ್ಲಿ ಗುರು ದ್ರೋಣಾಚಾರ್ಯ, ಅಭಿಮನ್ಯು, ಲಕ್ಷಣಕುಮಾರ, ದುಶ್ಯಾಸನ  ಮೊದಲಾದವರ ಶವಗಳನ್ನು ಕಂಡು ಮಮ್ಮಲಮರುಗುತ್ತಾನೆ.  ಆ ಸಂದರ್ಭವೇ ಆತನಿಗೆ ಸಹಿಸಲಾರದಷ್ಟು ನೋವನ್ನು ಕೊಟ್ಟಿರುತ್ತದೆ   ಅದು ಸಾಲದೆಂಬಂತೆ ತನ್ನ ಪ್ರಾಣ ಸ್ನೇಹಿತ ಕರ್ಣನ  ಕಳೇಬರವನ್ನು ನೋಡಬೇಕಾದ ಸಂದರ್ಭ  ಎದುರಾದಾಗ  ಕವಿ ರನ್ನ “ಗಂಡಸ್ಯೋಪರಿ ಸ್ಫೋಟಕಂ” ಎಂಬ  ಮಾತನ್ನು ಹೇಳುತ್ತಾರೆ.

    “ಗಾಯದ ಮೇಲೆ ಬರೆ”, “ಕುರುವಿನ ಮೇಲೆ ಬೊಕ್ಕೆ”  ಮೊದಲಾದ  ಮಾತುಗಳನ್ನು  ಹೇಳಬಹುದು.  ಮೊದಲೆ  ನೋವು  ಹಿಂಸೆ ಆಗುತ್ತಿರುತ್ತದೆ ಅದರ ಮೇಲೆ ಮತ್ತೆ ನೋವುಂಟಾದರೆ , ಬರೆ ಎಳೆದರೆ ಇನ್ಯಾವುದೋ  ವೃಣವಾದರೆ ಅದನ್ನು ಸಹಿಸಲು ಸಾಧ್ಯವಾಗುತ್ತದೆಯೇ ಖಂಡಿತಾ ಇಲ್ಲ. ಮೊದಲ ಹೊಡೆತದಿಂದ ಏನಾಗುತ್ತಿದೆ ಎಂದು ತಿಳಿಯುವ ಮೊದಲೆ  ಇನ್ನೊಂದು ನೋವು  ಉಂಟಾದರೆ ಅದನ್ನು ಸಹಿಸಲು ಸಾಧ್ಯವೇ ಆಗುವುದಿಲ್ಲ. ದೈಹಿಕವಾಗಿ ಮಾನಸಿಕವಾಗಿ  ಕುಸಿದು ಹೋಗಿ ಬಿಡುತ್ತಾನೆ.

    ಅಂತಹದ್ದೆ ನೋವು ದುರ್ಯೋಧನನಿಗೂ ಎದುರಾಗುತ್ತದೆ ವಿದ್ಯೆ ಕಲಿಸಿದ ಗುರು, ತನ್ನ ಮಗ, ಪ್ರಾಣ ಪ್ರಿಯನಾಗಿದ್ದ ದುಶ್ಯಾಸನ   ಇವರುಗಳ ಶವವನ್ನು ನೋಡಿಯೇ   ಜನಕಂಗೆ ತಿಲಾಂಜಲಿ ಕುಡುವುದುಚಿತ, ಕ್ರಮವಿಪರ್ಯಮಂ  ಮಾಡುವುದೇ ಇತ್ಯಾದಿಗಳನ್ನು ಹೇಳಿ  ಮುನ್ನಡೆಯುವಾಗ ಕರ್ಣನ ಶವ ನೋಡಿ  ನೀನಿಲ್ಲದ ಮೇಲೆ ಈರಾಜ್ಯ,  ಅಧಿಕಾರವಿದ್ದು ಪ್ರಯೋಜನವೇನು ಎನ್ನುತ್ತಾ ದುಃಖಿಸುತ್ತಾನೆ. 

    ದಿನ ನಿತ್ಯದ  ಬದುಕಿನಲ್ಲಿ ಸಾಮಾಜಿಕರ ಮೇಲೂ ಇಂಥ ಘಟನೆಗಳು ಎದುರಾಗುತ್ತಿರುತ್ತವೆ.  ಕೊರೊನಾ ಸಾಂಕ್ರಾಮಿಕ ವ್ಯಾಧಿಯಿಂದ ಚೇತರಿಸಿಕೊಂಡ ಹಲವರಲ್ಲಿ ಬ್ಲ್ಯಾಕ್ ಫಂಗಸ್ , ವೈಟ್ ಫಂಗಸ್ ಸೋಂಕು ಕಾಣಿಸಿಕೊಂಡು ಇನ್ನಿಲ್ಲದ ಹಾಗೆ   ಕಾಡಿದ್ದು ನಿಜ.  ಹಾಗೆ ಕೊರೊನಾದಿಂದ ಕುಟುಂಬದಲ್ಲಿ  ತೀರಿಕೊಂಡಿದ್ದಾರೆ ಅನ್ನುವ  ಹೊತ್ತಿಗೆ ಧುತ್ತನೆ   ಇನ್ನೊಂದು ಸಾವನ್ನು ಅದೇ ಮನೆಯಲ್ಲಿ ನೋಡಬೇಕಾದ  ದುಃಖದ  ಸನ್ನಿವೇಶಗಳು ಅದೆಷ್ಟೋ ಎದುರಾದದ್ದನ್ನು  ಕಂಡಿದ್ದೇವೆ.

    ಇಂಥ ಸಂದರ್ಭಗಳನ್ನು ನೋಡಿಯೇ “ಬಾಣಲೆಯಿಂದ ಬೆಂಕಿಗೆ”,  “ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ” , “ಗಾಯದ ಮೇಲೆ ಉಪ್ಪು ಸವರಿದಂತೆ”  ಮೊದಲಾದ ಮಾತುಗಳನ್ನು ಹೇಳಿರುವುದು.  ನೋವಿನ  ಮೇಲೆ ಮತ್ತೆ ಮತ್ತೆ ನೋವುಗಳು ಬಂದರೆ ಎಂಥ ಗಟ್ಟಿಗರಿಗು ಅದನ್ನು ಸಹಿಸಲಾಗುವುದಿಲ್ಲ   ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾನೆ ಎನ್ನುವ ಸೂಕ್ಷ್ಮವನ್ನು   ರನ್ನನ “ಗಂಡಸ್ಯೋಪರಿ ಸ್ಫೋಟಕಂ”   ಎಂಬ ಮಾತು ತಿಳಿಸುತ್ತದೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಗೊತ್ತೇ ಆಗದ ಹಾಗೆ ಮನೆಗೆ ಬಂದೇ ಬಿಟ್ಟಿತ್ತು


    ಕೋವಿಡ್ ಎರಡನೇ ಅಲೆ ಕಡಿಮೆಯಾಗುತ್ತಿದೆ.ಈ ಅಲೆಯನ್ನು ಅನೇಕರು ಮೆಟ್ಟಿನಿಂತು ಎದುರಿಸಿ ಬಂದಿದ್ದಾರೆ. ಗೆದ್ದವರ ಪಾಸಿಟಿವ್ ಕಥೆಗಳನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ. ಈ ಗೆಲವು ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ. ಕರೋನಾ ಒಂದೇ ಅಲ್ಲ ಯಾವ ರೋಗ ಬಂದರು ಧೈರ್ಯದಿಂದ ಎದುರಿಸಿದಾಗ ಜಯಿಸಲು ಸಾಧ್ಯ.


    ನಮಗೆಲ್ಲಿ ಬರುತ್ತೆ ಕೋವಿಡ್ ಎಂದು ಕೊಂಡಿದ್ದೆವು

    ನಮ್ಮ ದೇಶದಲ್ಲಿ ಬಹಳಷ್ಟು ಜನ ಕೋವಿಡ್ ನ ಎರಡನೇ ಅಲೆಯಿಂದ ಸೋಂಕಿತರಾಗಿದ್ದಾರೆ. ಇದರ ಭಯದಿಂದ ನಮ್ಮ ಕುಟುಂಬ ಸಹ ಸಾಕಷ್ಟು ಮುಂಜಾಗೃತಾ ಕ್ರಮಗಳಾದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಮತ್ತು ಯಾವುದೇ ಪದಾರ್ಥವನ್ನು ಖರೀದಿಸಿದಾಗ ಅದನ್ನು ಒಂದು ಅಥವಾ ಎರಡು ದಿನಗಳ ಕಾಲ ಐಸೋಲೇಟ್ ಮಾಡಿ ಉಪಯೋಗಿಸುತ್ತಾ ಬಂದಿದ್ದೇವೆ . ಹೀಗಾಗಿ ನಾವು ಸೋಂಕಿತರಾಗುವುದಿಲ್ಲ ಎಂದು ಭಾವಿಸಿದ್ಧೆವು.

    ಆದರೆ ಮೇ 3 ರಂದು, ನನಗೆ ಮತ್ತು ನನ್ನ ತಾಯಿಗೆ ಜ್ವರ ಮತ್ತು ಗಂಟಲು ಕೆರೆತ ಶುರುವಾಯಿತು.  ಮಾತ್ರೆಯನ್ನು ಸೇವಿಸಿದ ನಂತರವೂ ನಮಗೆ ಇಡೀ ದಿನ ಜ್ವರ ಕಡಿಮೆಯಾಗಲಿಲ್ಲ. ಮರುದಿನ ಕೋವಿಡ್ ಗುಣ ಲಕ್ಷಣಗಳು ಕಡಿಮೆಯಾಗದೇ ಇದ್ದದ್ದರಿಂದ, RT- PCR test ಮಾಡಿಸಲು ನಿರ್ಧರಿಸಿದೆವು.   ಟೆಸ್ಟ ವರದಿಯಲ್ಲಿ ಕೋವಿಡ್ ಇರುವುದು ದೃಢಪಟ್ಟಿತು.

    ತೀವ್ರ ಲಕ್ಷಣಗಳು ಕಂಡು ಬಾರದಿದ್ದಕ್ಕೆ, ನಮ್ಮ ಮನೆಯಲ್ಲೇ isolate ಆಗಲು ಬಿಬಿಎಂಪಿಯವರು ಸಲಹೆ ನೀಡಿದರು.
    ಮನೆಯೊಳಗೆ ಕೋವಿಡ್ ಪ್ರೊಟೋಕಾಲ್ ಅನುಸರಿಸಿದೆವು.
    ಕೂಡಲೇ ವೈದ್ಯರನ್ನು ಸಹ ಸಂಪರ್ಕಿಸಿ , ಅವರ ಸಲಹೆಯನ್ನು ಪ್ರತಿದಿನ ಪಾಲಿಸಿದೆವು. 

    ಮೇ 5, ನನ್ನ ತಂದೆಯವರಿಗೂ ಕೋವಿಡ್ ಇರುವುದು, ದೃಢವಾಯಿತು. ಆದರೆ ಅವರಿಗೆ ಯಾವುದೇ ಲಕ್ಷಣಗಳು ಕಾಣಲಿಲ್ಲ.

    ನಮಗೆ ಪ್ರತಿ ದಿನ BBMP ಅವರು ವೈದ್ಯಕೀಯ ಸಲಹೆಯನ್ನು ನೀಡುತಿದ್ದರು. ಮೊದಲ ಕೆಲ ದಿನಗಳು ಕೋವಿಡ್ ನ ಎಲ್ಲ ಲಕ್ಷಣಗಳಾದ, ಮೈ ಕೈ ನೋವ್ವು , ಸುಸ್ತು, ವಾಂತಿ  ಹಾಗು ರುಚಿ ಮತ್ತು ವಾಸನೆಯು ಇಲ್ಲದಾಯಿತು.

    ದೇಹದ ಪ್ರತಿರಕ್ಷೆಯನ್ನು ಹೆಚ್ಚಿಸಲು vitamin C ಹಾಗು zinc tablet ಗಳನ್ನು ಸೇವಿಸಿದೆವು. 10 ದಿವಸಗಳ ನಂತರ ನಮಗೆ ಕೋವಿಡ್  ಲಕ್ಷಣಗಳು ಕಡಿಮೆ ಆಯ್ತು.

    14 ದಿನ quarantine ಅವಧಿಯಲ್ಲಿ ನಮಗೆ ದೈಹಿಕ ಆರೋಗ್ಯ ಒತ್ತಡ ಇದ್ದರೂ,  ನಮಗೆ ಯಾವುದೇ ಮಾನಸಿಕ ಒತ್ತಡ ಇರಲಿಲ್ಲ, ಕಾರಣ ನಮ್ಮ  ಪ್ರಿಯವಾದ ಬಂಧು ಮಿತ್ರರು, ಸ್ನೇಹಿತರು  ಎಲ್ಲಾ ನಮ್ಮನ್ನು ತುಂಬಾ ವಿಚಾರಿಸಿಕೊಳ್ಳುತ್ತಿದ್ದರು ಮತ್ತು ಸಣ್ಣ ಚಟುವಟಿಕೆಗಳಾದ ಯೋಗ ಮಾಡುತ್ತಿದ್ದೆವು.  ಮನೋರಂಜನೆಗಾಗಿ ಕಾಮೆಡಿ ಶೋ ನೋಡ್ತ ಇದ್ವಿ.

    ಈ ನನ್ನ ಅನುಭವದ ಪ್ರಕಾರ ಸಕಾಲದಲ್ಲಿ ಸಿಗುವ ವೈದ್ಯಕೀಯ  ನೆರವು,  ಒಳ್ಳೆಯ ಆಹಾರ, ಔಷಧಿ , ವಿಶ್ರಾಂತಿ ಇದ್ದರೆ, ಎಲ್ಲರು ಈ ಸೋಂಕಿನಿಂದ ಆದಷ್ಟು ಬೇಗ ಗುಣಮುಖರಾಗಬಹುದು, ಹೆದರುವ ಅಗತ್ಯವಿಲ್ಲ.


    ಕೊರೋನಾ ಗೆದ್ದವರು ತಮ್ಮ ಅನುಭವದ ಕಥೆಯನ್ನು [email protected] ಗೆ ಇ ಮೇಲ್ ಮಾಡಿ. ಸೂಕ್ತವಾದುವನ್ನು ಪ್ರಕಟಿಸಲಾಗುವುದು

    ಫಾರಿನ್ ಹೋಗುವವರಿಗೆ 22ರಿಂದ ಲಸಿಕೆ; 28 ದಿನದಲ್ಲೇ ಎರಡನೇ ಡೋಸ್

    ವ್ಯಾಸಂಗ ಅಥವಾ ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವವರಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಇದೇ 22ರಿಂದ ಕೋವಿಡ್ ಲಸಿಕೆ  ಹಾಕಲಾಗುವುದು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಟೊಕಿಯೋದಲ್ಲಿ ನಡೆಯುವ ಒಲಿಂಪಿಕ್‌ ಕ್ರೀಡಾಕೂಟಕ್ಕೆ ತೆರಳುವ ಕ್ರೀಡಾಪಟುಗಳು ಸೇರಿ ವಿದೇಶಕ್ಕೆ ವ್ಯಾಸಂಗ- ಉದ್ಯೋಗಕ್ಕೆ ತೆರಳುವ ಎಲ್ಲರೂ ಇಲ್ಲಿ ಬಂದು ಲಸಿಕೆ ಪಡೆಯಬಹುದು. ಮಂಗಳವಾರ ಬೆಳಿಗ್ಗೆ 10.30ಗಂಟೆಯಿಂದ ಲಸಿಕೆ ನೀಡಲಾಗುವುದು ಎಂದರು.

    ಈ ಮೊದಲೇ ಸೆಂಟ್ರಲ್‌ ಕಾಲೇಜ್‌ನಲ್ಲಿ ವಿದೇಶಕ್ಕೆ ತೆರಳುವ 1,500ಕ್ಕೂ ಹೆಚ್ಚು ವಿದ್ಯಾರ್ಥಿ/ ಉದ್ಯೋಗಿಗಳಿಗೆ ಮೊದಲ ಡೋಸ್‌ ಕೊಡಲಾಗಿದೆ ಎಂದು ಡಿಸಿಎಂ ಹೇಳಿದರು.

    ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳ ಬಗ್ಗೆ ಡಿಸಿಎಂ ನೀಡಿದ ವಿವರ ಹೀಗಿದೆ:

    • ಇದಕ್ಕಾಗಿ ಪಾಲಿಕೆಯ 8 ವಲಯಗಳ ಆಯುಕ್ತರನ್ನು ‘ಸಮರ್ಥ ಅಧಿಕಾರಿ’ (competent authority) ಗಳನ್ನಾಗಿ ನೇಮಿಸಲಾಗಿದ್ದು, ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಪೂರ್ವ ವಲಯದ ಆರೋಗ್ಯಾಧಿಕಾರಿಯನ್ನು ‘ಸಮರ್ಥ ಅಧಿಕಾರಿ’ ಎಂದು ಗುರುತಿಸಲಾಗಿದೆ.
    • ಈ ವರ್ಗದ ಜನರಿಗೆ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ 28 ದಿನಗಳಲ್ಲೇ ಎರಡನೇ ಡೋಸ್‌ ನೀಡಲಾಗುವುದು.
    • ಲಸಿಕೆ ಕೇಂದ್ರಕ್ಕೆ ಬರುವ ಅರ್ಹ ಲಸಿಕಾಂಕ್ಷಿಗಳ ಸ್ವಯಂ ಘೋಷಣಾ ಪತ್ರ ಸೇರಿ ಇತರೆ ದಾಖಲೆಗಳನ್ನು ಪರಿಶೀಲಿಸಬೇಕು. ಲಸಿಕೆ ಪಡೆದ ದೃಢೀಕರಣ ಪತ್ರವನ್ನು ತಕ್ಷಣೇ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿಸಬೇಕು.
    • ಈಗಾಗಲೇ ಮೊದಲ ಡೋಸ್‌ ಪಡೆದಿರುವವರು ತಮ್ಮ ಪಾಸ್‌ಪೋರ್ಟ್‌ ಸಂಖ್ಯೆಯನ್ನು ದಾಖಲು ಮಾಡಿರದಿದ್ದರೆ ಎರಡನೇ ಡೋಸ್‌ ಪಡೆಯಲು ಬರುವಾಗ ಕಡ್ಡಾಯವಾಗಿ ದಾಖಲಿಸಿಕೊಳ್ಳುವುದು.
    error: Content is protected !!