22.7 C
Karnataka
Tuesday, May 21, 2024

    ಯೋಗವನ್ನು ವಾಣಿಜ್ಯಕರಣ ಮಾಡದ ನಿಜವಾದ ಯೋಗ ಗುರು ಮಲ್ಲಾಡಿಹಳ್ಳಿ ಸ್ವಾಮೀಜಿ

    Must read

    ಯೋಗ ಅಂದರೆ ಸೇರುವಿಕೆ,ಕೂಡಿಕೊಳ್ಳೋದು ಅಂತ ಸಾಮಾನ್ಯ ಭಾಷೆಯ ಅರ್ಥ. ಇಂದು ನಾವೆಲ್ಲಾ ಮಾತಾಡುವ ಯೋಗದ ವಿಶಾಲವಾದ ಅರ್ಥ ದೇಹ, ಮನಸ್ಸನ್ನು ಕೂಡಿಸೋದು ಅಂತ. ಆರೋಗ್ಯವಾದ ದೇಹದಲ್ಲಿ,ಆರೋಗ್ಯವಾದ ಮನಸ್ಸು ಇರುತ್ತೆ ಅಂತ ಕಂಡುಕೊಂಡು ಇವೆರಡನ್ನೂ ಆರೋಗ್ಯವಾಗಿ ಇಡುವ ಕ್ರಿಯೆಯಾಗಿ ಯೋಗವನ್ನು ಅರ್ಥೈಸಲಾಗಿದೆ ಈಗ. ಆದರೆ ಇದು ಅಷ್ಟಾಂಗ ಯೋಗ ಮಾರ್ಗದ ಒಂದು ಮೆಟ್ಟಿಲು ಮಾತ್ರ. ಯೋಗದ ಅಷ್ಟಾಂಗಗಳು ಕೆಳಗಿನಂತೆ ಇವೆ.

    1.ಯಮ ( ನಮ್ಮ ಜೀವನ ಕ್ರಮ,ಉದಾ:ಅಹಿಂಸೆಯನ್ನು ಅಳವಡಿಸಿಕೊಳ್ಳೋದು)
    2.ನಿಯಮ (ನಮ್ಮ ನೈತಿಕತೆ)
    3.ಆಸನ (ಯೋಗದ ಆಸನ)
    4.ಪ್ರಾಣಾಯಾಮ (ಕ್ರಮಬದ್ಧ ಉಸಿರಾಟ)
    5.ಪ್ರತ್ಯಾಹಾರ (ಇಂದ್ರಿಯ ನಿಗ್ರಹ)
    6.ಧಾರಣ (ಏಕಾಗ್ರತೆ)
    7.ಧ್ಯಾನ
    8.ಸಮಾಧಿ

    ಇದನ್ನು ಸಿದ್ಧಿಯೋಗ ಅಂತಲೂ ಕರೀತಾರೆ. ಆಸನದ ವಿಷಯಕ್ಕೆ ಬಂದಾಗ ಅವರವರ ದೇಹ ಪ್ರಕೃತಿಗೆ ಅನುಕೂಲಕ್ಕಾಗಿ ಆರು ಆಸನಗಳಿವೆ.ಅವು ವಿರಾಸನ, ಭದ್ರಾಸನ, ಪದ್ಮಾಸನ,ವಜ್ರಾಸನ, ಸ್ವಸ್ತಿಕಾಸನ,ಸಿದ್ಧಾಸನ….ಮನಸ್ಸಿಗೆ, ದೇಹಕ್ಕೆ ಕಿರಿಕಿರಿಯಾಗದೆ ಯಾರು ಎರಡೂವರೆ ಗಂಟೆಗಳ ಕಾಲ ಮೇಲಿನ ಆರು ಆಸನಗಳಲ್ಲಿ ಕದಲದೇ ಒಂದರಲ್ಲಿ ಕೂಡುತ್ತಾರೋ ಅವರು ಆ ಆಸನದಲ್ಲಿ ಸಿದ್ಧಿ ಮಾಡಿಕೊಳ್ಳಬಹುದು. ಮೇಲಿನ ಆರೂ ಆಸನಗಳು ಯಾರಿಗೆ ಸಿದ್ಧಿಸುವುದಿಲ್ಲವೋ ಅವರು ಸುಖಾಸನ ಅಂದ್ರೆ ಅವರ ದೇಹ ಯಾವ ರೀತಿ ಕುಳಿತುಕೊಂಡರೆ ಒಗ್ಗುತ್ತೋ ಹಾಗೆ ಕುಳಿತು ಮುಂದುವರಿಸಬಹುದು.

    ಸ್ವಾಮೀಜಿ ಮತ್ತು ಸೂರ್ ದಾಸ್ ಜಿ

    ನನ್ನ ಯೋಗಗುರು, ಭಿಕ್ಷೆಬೇಡಿ ತಂದು ಸಾಕಿ, ವಿದ್ಯೆಕಲಿಸಿದ ಅಭಿನವ ಧನ್ವಂತರಿ,ಯೋಗಾಚಾರ್ಯರಾದ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಗಳು ಯಾವಾಗಲೂ ಹೇಳುತ್ತಿದ್ದುದು ಯಮ,ನಿಯಮ ಒಳಗೊಂಡ ಅಷ್ಟಾಂಗ ಇಲ್ಲದೇ ಬರೀ ಆಸನ/ಯೋಗ ಉಪಯೋಗಕ್ಕೆ ಬರುವುದಿಲ್ಲ ಅಂತ! ಆರೋಗ್ಯಕ್ಕಾಗಿ ಮಾಡುವ ಯೋಗಾಸನದಲ್ಲಿ ಕನಿಷ್ಠ ಯಮ,ನಿಯಮ ಇರಲೇ ಬೇಕು ಅನ್ನುವುದು ಅವರ ನಿಲುವಾಗಿತ್ತು!

    ನಮಗೆಲ್ಲ ಕನಿಷ್ಠ ಯಮ,ನಿಯಮ ಅಳವಡಿಸಿಕೊಂಡು ಯೋಗಾಸನಕ್ಕೆ ಅಣಿಯಾಗಬೇಕು ಅಂತ ಪದೇ ಪದೇ ಹೇಳುತ್ತಿದ್ದರು. ಅವರಿಗೆ ಯೋಗ ಶಿಕ್ಷಕರಿಂದ ಯೋಗ ಕಲಿಸಲ್ಪಟ್ಟಿರಲಿಲ್ಲ, ಬದಲಾಗಿ ಸಮಾಧಿ ಸ್ಥಿತಿಯನ್ನು ಬೇಕಾದಾಗ ತಲುಪಿ,ಮತ್ತೆ ಹಿಂತಿರುಗಿ ಬರಬಲ್ಲ ಸಾಧಕರಿಂದ ಭೋಧಿಸಲ್ಪಟ್ಟಿತ್ತು. ಯೋಗ ಮಾರ್ಗದಲ್ಲಿ ಭಗವಂತನನ್ನು ಕಾಣುವ ಎಲ್ಲ ಅರ್ಹತೆ ಅವರಲ್ಲಿದ್ದರೂ, ಆ ಮಾರ್ಗದಲ್ಲಿಯೇ ಸಾಧನೆ ಮಾಡಬೇಕೆಂಬ ಹಂಬಲ ಇದ್ದಾಗ್ಯೂ ಆ ಮಾರ್ಗ ಹಿಡಿಯದೇ ಸಮಾಜ ಸೇವೆಯ ಮಾರ್ಗದಲ್ಲಿ ಭಗವಂತನನ್ನು ಕಂಡದ್ದೂ ಅವರ ಗುರುಗಳ ಅಪ್ಪಣೆ ಮೆರೆಗೇ.

    ನನಗೆ ಯೋಗ,ನಮ್ಮ ಸ್ವಾಮೀಜಿ ಬೇರೆ ಬೇರೆ ಅಂತ ಅನ್ನಿಸೋದೇ ಇಲ್ಲ. ಹಾಗಾಗಿ ಯೋಗದ ಬಗ್ಗೆ ಎಲ್ಲೇ ಮಾತಾಡುವಾಗ ನನ್ನ ಸ್ವಾಮೀಜಿ ಅರಿವಿಲ್ಲದೆಯೇ ನನ್ನಲ್ಲಿ ಬಂದುಬಿಡುತ್ತಾರೆ. ಒಬ್ಬ ಸಾಧಾರಣ ಮನುಷ್ಯ ಜೀವಿತ ಕಾಲದಲ್ಲಿ ಅಷ್ಟೊಂದು ತರಹದ ವಿದ್ಯೆಗಳಲ್ಲಿ ಪರಿಣಿತಿ ಪಡೆದು ಒಂದು ಆಶ್ರಮ ಕಟ್ಟಿ ತಾವು ಕಲಿತ ವಿದ್ಯೆಗಳನ್ನು ಉಚಿತವಾಗಿ ಸಮಾಜಕ್ಕೆ ಕಲಿಸಿ ಧನ್ಯತೆ ಹೊಂದುವ ಅವರ ಭಾವ ನನ್ನನ್ನು ಯಾವಾಗಲೂ ಕಾಡುತ್ತದೆ.

    ನನ್ನ ಹಿಂದೆ ಯಾವುದೇ ಕುಲದ ಭಕ್ತರಿಲ್ಲ, ನಾನು ಯಾವ ಮಠದ ಅಧಿಪತಿಯೂ ಅಲ್ಲ, ಎಲ್ಲಿಯೂ ಯಾರೂ ನನಗೆ ಯಾವುದೇ ಮಠದ ಪಟ್ಟ ಕಟ್ಟಿಲ್ಲ. ನನ್ನನ್ನು ಸ್ವಾಮೀಜಿ ಅನ್ನ ಬೇಡಿ, ನಾನೊಬ್ಬ ವಿನಮ್ರ ಸೇವಕ, ಅಂತ ಹೇಳುತ್ತಿದ್ದ ಶ್ರೀ ಗಳು ನನ್ನನ್ನು ಎಳೆಯ ಬಾಲ್ಯದಲ್ಲಿಯೇ ಆವರಿಸಿಬಿಟ್ಟಿದ್ದರು. ನಮ್ಮಂತವರು ಅವರನ್ನು ಕಂಡು ಮನದಾಳದಿಂದ ಸ್ವಾಮಿಜೀ ಅಂದಿದ್ದೇವೆ ಬಿಟ್ಟರೆ, ಅವರನ್ನು ಅವರು ಕರೆದುಕೊಂಡಿದ್ದು ತಿರುಕ ಅಂತ! ಒಂದೊಂದು ಸಾರಿ ಈಗಿನ ನಮ್ಮ ಸುತ್ತಲಿನ ಹಲವಾರು ಸ್ವಾಮಿಜಿಗಳನ್ನು ಕಂಡಾಗ, ಅವರನ್ನು ನಾವು ಸ್ವಾಮೀಜಿ ಅಂದು ಅವಮಾನ ಮಾಡಿದೆವೇನೂ ಅನ್ನುವ ಅನುಮಾನ ನನಗೆ ತುಂಬಾ ಸಾರಿ ಬಂದಿದೆ. ಅವರನ್ನು ಅವಧೂತ ಅನ್ನಬೇಕಿತ್ತು, ಸುಮ್ಮನೆ ಸ್ವಾಮೀಜಿ ಅಂದು ತಪ್ಪು ಮಾಡಿಬಿಟ್ಟೆವು ನಾವು.

    ಶಿಸ್ತು,ಆರೋಗ್ಯ,ಶಿಕ್ಷಣ ಗಳನ್ನು ಗ್ರಾಮೀಣ ಭಾರತಕ್ಕೆ ತಲುಪಿಸುವ ಗುರಿ ಇಟ್ಟುಕೊಂಡು ಅಲೆಮಾರಿಯಾಗಿ ಬಂದವರು ನಮ್ಮ ಶ್ರೀಗಳು. ಜೀವನದುದ್ದಕ್ಕೂ ಅಲೆಮಾರಿಗಳಾಗಿಯೇ ಉಳಿದವರು. ಮಲ್ಲಾಡಿಹಳ್ಳಿಯಲ್ಲಿ ತಮ್ಮ ಧ್ಯೇಯ ಸಾಧನೆಗೆ ಆಶ್ರಮ ಕಟ್ಟಿ ಉಚಿತ ಶಿಕ್ಷಣದ ಮೂಲಕ ರಾಷ್ಟಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡು ತಿರುಕನೆಂದು ಕರೆದುಕೊಂಡು ಊರೂರು ಸುತ್ತಿದವರು. ಲಕ್ಷ,ಲಕ್ಷ ಗ್ರಾಮೀಣ ಭಾಗದ ಜನರಿಗೆ ಜ್ಯೋತಿ ಆದವರು. ಅವರು ಯಾರನ್ನೇ ಆಗಲಿ ಸಂಬೋಧಿಸುತ್ತಿದು ರಾಷ್ಟ್ರೀಯರೇ ಅಂತ. ಸೇವೆ,ಸೇವೆ ಸೇವೆ ಅಂತ ಮೇಲೆ ಮೂರು ಸಾರಿ ಬರೆದೇ ಅವರ ಪತ್ರಗಳು ಶುರು ಆಗುತ್ತಿದ್ದವು. ಕೊನೆಯಲ್ಲಿ ತಮ್ಮ ವಿನಮ್ರ ಸೇವಕ ಅಂತ ಬರೆದು ಮುಗಿಸುತ್ತಿದ್ದರು.

    ರಾಷ್ಟ್ರೀಯತೆಯ ಯಜ್ಞದಲ್ಲಿ ತಮ್ಮನ್ನು ತಾವು ಸಮಿಧೆಯಂತೆ ಉರಿಸಿಕೊಂಡು ಬಿಟ್ಟರು,ತಮ್ಮ ಗುರುಗಳ ಆಜ್ಞಾಪಾಲಕರಾಗಿ! ಈಗ ಈ ಶಬ್ದಗಳು,ರಾಷ್ಟ್ರೀಯತೆ,ಸೇವೆ,ಸ್ವಾಮೀಜಿ ಮುಂತಾದುವು ಅರ್ಥ ಕಳೆದುಕೊಂಡಿವೆ. ಇವುಗಳೆಲ್ಲೆವುದರ ಜೀವಂತ ಮೂರ್ತಿಯಂತೆ ಇದ್ದವರು ನಮ್ಮ ಶ್ರೀಗಳು.

    ಪ್ರಶಸ್ತಿಗಳಿಗಾಗಿ ಗುಂಪುಗಾರಿಕೆ ಮಾಡಿಕೊಂಡು,ಸಿಕ್ಕವರನ್ನು ಓಲೈಸಿಕೊಳ್ಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವವರನ್ನು ದಿನವೂ ನೋಡುತ್ತಿದ್ದೇನೆ. ಎಲ್ಲಿಯೇ ಎಂತಹುದೇ ಸಭೆ,ಸಮಾರಂಭ ಆದಲ್ಲಿ ನನ್ನನ್ನು ಅಗ್ರಸ್ಥಾನದಲ್ಲಿ ಕುಳ್ಳಿರಿಸಿ, ಸನ್ಮಾನ ಮಾಡಬೇಕು ಎನ್ನುವಂತಹ ಮಹಾತ್ಮರನ್ನು,ಸಮಾಜ ಸೇವಕರನ್ನು ನೋಡುತ್ತಿದ್ದೇನೆ. ಆಗಿನ ಮುಖ್ಯಮಂತ್ರಿಗಳು ಆಶ್ರಮಕ್ಕೆ ಬಂದು ಪ್ರಶಸ್ತಿ ತೊಗಳ್ಳಿ ಅಂದ್ರೆ, ನಯವಾಗಿ ನಿರಾಕರಿಸಿ,ಅದನ್ನು ನೀವೇ ಇಟ್ಟುಕೊಂಡು ನನ್ನ ಜೋಳಿಗೆಗೆ ಏನಾದ್ರು ಧನ ಸಹಾಯ ಮಾಡಿ ಅಂದಿದ್ದರು. ಸಭೆ,ಸಮಾರಂಭಗಳಲ್ಲಿ ವೇದಿಕೆ ಮೇಲಿರದೆ, ಕೈಯಲ್ಲಿ ಬೆತ್ತ ಹಿಡಿದು ನಮ್ಮಗಳ ಮಧ್ಯೆ ಇರುತ್ತಿದ್ದರು. ಯಾವುದೇ ಪವಾಡ, ಮಾಯ, ಮಾಟ, ಮಂತ್ರ,ತಂತ್ರ ಇಲ್ಲದೇ ಸರ್ವರ ಗೌರವ ಗಳಿಸಿಕೊಂಡವರು. ಹಾಗಾಗಿ ಏನೋ ಮತ್ಯಾರೂ ಇವರ ಎತ್ತರದಲ್ಲಿ ಇದುವರೆಗೂ ನನಗೆ ಕಾಣಸಿಕ್ಕಿಲ್ಲ.

    ಯೋಗ,ವ್ಯಾಯಾಮ,ಆಯುರ್ವೇದ, ಸಿದ್ಧಔಷಧಿ, ನಾಟಕ,ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲೂ ತಮ್ಮ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಗುರುಗಳ ಗುರುವಾಗಿದ್ದ ಮುಸ್ಲಿಂ ಗುರುವನ್ನೂ ಹೊಂದಿದ್ದ ನನ್ನ ಶ್ರೀಗಳು ಎಂದಿಗೂ ಮತಗಳ ವಿಷಯದಲ್ಲಿ ಭೇದ, ಭಾವ ತೋರುವುದು ಅಸಾಧ್ಯವಾಗಿತ್ತು. ಅದು ಅವರಿಗೆ ತಿಳಿಯದ, ಹತ್ತಿರವೂ ಸುಳಿಯಲು ಸಾಧ್ಯವಾಗದ ವಿಷಯ. ಭಾರತೀಯತೆ,ಭಾರತೀಯ ಅವರ ಬಂಧುವಾಗಿದ್ದ. ಧಾರ್ಮಿಕ ಸ್ವಾಮಿಗಳಿಗೂ ಆಧ್ಯಾತ್ಮಿಕ ಸ್ವಾಮಿಗಳಿಗೂ ವ್ಯತ್ಯಾಸ ತಿಳಿಯ ಬಯಸುವವರು, ನಮ್ಮ ಸ್ವಾಮಿಗಳನ್ನು ಒಮ್ಮೆ ಸುಮ್ಮನೆ ಓದಿ. ನಾನವರನ್ನು ಯಾರೊಂದಿಗೆ ಹೋಲಿಸುವುದನ್ನೂ ಆಕ್ಷೇಪಿಸುತ್ತೇನೆ.

    ಇಂತಹ ದಿವ್ಯಚೇತನದ ಒಡನಾಟದಲ್ಲಿ ನನಗೆ ಯೋಗದ ಪರಿಚಯ 44 ವರ್ಷಗಳ ಹಿಂದೆಯೇ ಆಗಿದೆ ಅಂತ ಹೇಳಲು ಎದೆ ಉಬ್ಬಿ ಬರುತ್ತದೆ. ಅವರು ಬೆನ್ನಿಗೆ ಗುದ್ದಿದ್ದ ಗುದ್ದುಗಳು ಇಂದಿಗೂ ನನ್ನ ಬೆನ್ನು ಮರೆತಿಲ್ಲ. ಅಂತಹ ಕಠಿಣ ಶಿಕ್ಷಣದ ಪ್ರತಿಪಾದಕರು ಅವರು! ಮುಂಬರುವ ದಿನಗಳಲ್ಲಿ ವಿಶ್ವಕ್ಕೆ ಯೋಗದ ಅನಿವಾರ್ಯತೆ ತುಂಬಾ ಇರುತ್ತದೆ ಅಂತ ಅಂದೇ ಹೇಳುತ್ತಿದ್ದರು. ಸನ್ನಡತೆಯ,ಸಧೃಢತೆಯ ನಾಗರಿಕರೇ ದೇಶದ ಆಸ್ತಿ ಅಂತ ನಂಬಿದ್ದರು. ತನ್ನಲ್ಲಿಗೆ ಬರುತ್ತಿದ್ದವರಿಗೆ ಹುಚ್ಚುಚ್ಚು ಕೆಲಸಕ್ಕೆ ಬಾರದ್ದನ್ನ, ಆಮಿಷ ತೋರಿಸಿ ಹೇಳಿದವರೇ ಅಲ್ಲ, ಅದು ಅವರಿಗೆ ಬೇಕೂ ಆಗಿರಲಿಲ್ಲ. ಆಸ್ಪತ್ರೆಯ ಮಂಚದ ಮೇಲೆ ಡಜನ್ ಬಾಳೇ ಹಣ್ಣು ಕೊಟ್ಟು ತಮ್ಮದು ಅನ್ನೋದನ್ನ ಪ್ರಚಾರ ಮಾಡುವವರನ್ನು ನೋಡುವಾಗ ಅಯ್ಯೋ ಅನ್ನಿಸಿ ಕನಿಕರ ಆಗುತ್ತದೆ.

    ಆರೋಗ್ಯ, ಶಿಕ್ಷಣ ಎಲ್ಲರಿಗೂ ಉಚಿತವಾಗಿ ಸಿಕ್ಕಾಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ. ಇವೆರಡೂ ಕ್ಷೇತ್ರಗಳಲ್ಲಿ ನಮ್ಮ ಶ್ರೀ ಗಳು ಕಾರ್ಯ ಸದಾ ಸ್ಮರಣೀಯ ಮತ್ತು ಅನುಕರಣೀಯ. ತಮ್ಮಲ್ಲಿಗೆ ಬಂದ ಪ್ರತಿಯೊಬ್ಬರಿಗೂ ಜಾತಿ,ಧರ್ಮ,ಮತ ಯಾವುದೆಂದು ಎಂತಹ ಸಂಧರ್ಭದಲ್ಲಿಯೂ ಕೇಳದೆ ತಾವು ಕಲಿತದ್ದನ್ನು ಉಚಿತವಾಗಿ, ಉನ್ನತ ಶ್ರೇಣಿಯ ಭಾರತವನ್ನು ಕಾಣಲು ಧಾರೆ ಎರೆದಿದ್ದಾರೆ, ಯಾರದೇ ನಂಬಿಕೆಗಳಿಗೆ ಧಕ್ಕೆ ತರದೆ. ಇದಕ್ಕಿಂತಲೂ ಮಾನವತಾವಾದಿಯನ್ನು ಇಂದು ಕಾಣಲು ಸಾಧ್ಯವೇ?

    ಮುನ್ನೂರ ಅರವತ್ತೆಂಟು ಆಸನಗಳನ್ನು ಕರಗತಮಾಡಿಕೊಂಡು ಹೋದಲ್ಲೆಲ್ಲಾ ಪ್ರದರ್ಶನಗಳನ್ನು ಮಾಡುತ್ತಾ ಅಂದಿನ ಯುವಕರಿಗೆ ಪ್ರೇರಣೆಯಾಗಿ ಸ್ವಸ್ಥ ಸಮಾಜದ ಅನಿವಾರ್ಯತೆಯನ್ನು ಮನನ ಮಾಡಿಸಿದ್ದಾರೆ. ನಾನಾ ಕಾರಣಗಳಿಂದ ದೂರವಾಗಿದ್ದ ಈ ನೆಲದ ಹಲವಾರು ಪುರಾತನ ವಿದ್ಯೆಯನ್ನು ಪುನಃ ಸ್ಥಾಪನೆ ಮಾಡುವ ಉದ್ದೇಶವನ್ನು ಸದಾ ಜೀವಂತ ಇಟ್ಟವರು. ಅವರ ಮಲ್ಲ ಯುದ್ಧ, ಕತ್ತಿ ವರಸೆಗಳ ಜ್ಞಾನ ಇಂದಿನ ಜನಾಂಗಕ್ಕೆ ಕೌತುಕ ಮೂಡಿಸುತ್ತದೆ. ಸಾವಿರಾರು ವನೌಷಧಿ, ತುಪ್ಪ, ಎಣ್ಣೆಗಳ ಮಿಶ್ರಣದಿಂದ ತಯಾರು ಮಾಡುತ್ತಿದ್ದ ಆಶ್ರಮದ ವ್ಯಾಯಾಮ ಶಾಲೆಯ ಮಣ್ಣು ಆಗ ನಮಗೆಲ್ಲ ಆಶ್ಚರ್ಯದ ವಿಷಯ. ಯಾವುದೇ ವಿಧಿ,ವಿಧಾನಗಳಿಗೆ, ಕಟ್ಟುಪಾಡುಗಳಿಗೆ ತಮ್ಮನ್ನು ಬಲಿಕೊಡದೆ, ತಾವೇ ಕಟ್ಟುನಿಟ್ಟಾದ ಜೀವನವನ್ನು ಅಳವಡಿಸಿಕೊಂಡು ತಮ್ಮ ಗುರಿ ಸಾಧನೆಗೆ ಟೊಂಕ ಕಟ್ಟಿಕೊಂಡವರು. ಅದರಲ್ಲಿ ಬ್ರಹ್ಮಚರ್ಯ ಅಂತಹ ಒಂದು ಮಾತ್ರ.

    ಇಂದು ಯೋಗವನ್ನು ದಿನಾಚರಣೆ ಅಂತ ಭಾರತ ಸರ್ಕಾರ ಘೋಷಿಸಿ ಆಚರಿಸುತ್ತಿರುವುದು ಅವರ ಆತ್ಮ ಎಲ್ಲೇ ಇದ್ದರೂ ತಿಳಿದು ಉಲ್ಲಾಸಗೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಶುಭ ಸಂದರ್ಭದಲ್ಲಿ ಅವರನ್ನು ನೆನೆಯದೇ ಇರುವುದು, ನನ್ನಂತಹ ಲಕ್ಷ,ಕೋಟಿ ಜನರಿಗೆ ನೆನಪಿಸಿಕೊಳ್ಳದೇ ಇರುವುದೂ ಅಸಾಧ್ಯ. ಇಂದು ದೇಶಾದ್ಯಂತ ಯೋಗ ಅನ್ನುವ ಹೆಸರಲ್ಲಿ ಕೋ್ಟ್ಯಂತರ ಭಾರತೀಯರು ತಮಗೆ ತಿಳಿದ ರೀತಿ ಯೋಗ ಮಾಡುವುದು ಆ ದಿವ್ಯ ಚೇತನಕ್ಕೆ ಸಂತಸದ ವಿಷಯ. ಆ ಅಮರ ಚೇತನಕ್ಕೆ ನನ್ನ ಮನದಾಳದ ನಮನಗಳು. ಅವರು ಪ್ರತಿಪಾದಿಸಿದ ಯೋಗವನ್ನು ಇಂದು ಆಚರಣೆಗೆ ಸಾರ್ವತ್ರಿಕವಾಗಿ ತರುವುದು ಅಸಾಧ್ಯವಾದರೂ ಭಾರತ ಇಂದು ಯೋಗದ ಬಗ್ಗೆ ಅರಿತಿರುವುದು, ಆಚರಿಸುತ್ತಿರುವುದು ಆ ಚೇತನಕ್ಕೆ ತುಂಬಾ ಖುಷಿ ಕೊಡುವ ಸಂಗತಿ.

    ಹತ್ತು ಬೀಜ ಬಿತ್ತು, ಒಂದು ಖಂಡಿತಾ ಫಲ ಕೊಡುತ್ತದೆ….ಅನ್ನುವ ನಂಬಿಕೆಯಿಂದ ತಮ್ಮ ಜೀವನವನ್ನು ಸವೆಸಿದ ನನ್ನ ಯೋಗಾಚಾರ್ಯ ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಗಳ ಪದತಲದಲ್ಲಿ ನನ್ನ ಶಿರ ಬಾಗಿಸಿ, ಸಮಸ್ತ ಭಾರತೀಯರಿಗೆ ನನ್ನ ಯೋಗ ದಿನಾಚರಣೆಯ ಶುಭಾಶಯಗಳನ್ನು ತಿಳಿಯ ಬಯಸುತ್ತೇನೆ.

    ಆರೋಗ್ಯವೇ ಭಾಗ್ಯ.

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    7 COMMENTS

      • ಕಾರ್ಯದರ್ಶಿಗಳು
        ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿ
        ಮಲ್ಲಾಡಿಹಳ್ಳಿ 577531
        ಹೊಳಲ್ಕೆರೆ ತಾಲೂಕು
        ಚಿತ್ರದುರ್ಗ ಜಿಲ್ಲೆ

    1. ಮೊದಲು ನಿಮಗೆ ಧನ್ಯವಾದಗಳು. Bm. ಯೋಗ ಅಂದ ತಕ್ಷಣ ನಮ್ಮ ಕಣ್ಣು ಮುಂದೆ ಬರುವುದೇ ಸ್ವಾಮೀಜಿಯವರ ಚಿತ್ರ. ಇಂತ ಮಹಾನ್ ಅವಧೂತರ ಒಡನಾಟದಲ್ಲಿ ಬೆಳೆದ ನಾವೇ ಅದೃಷ್ಟವಂತರು. ನಿಮ್ಮ ಲೇಖನ ಓದುತ್ತಿದಂತೆ ಮತ್ತೆ 40ವರ್ಷ ಹಿಂದೆ ಹೋಗಿ ಹಳೆಯ ನೆನಪು ಗಲ್ಲೆಲ್ಲ ಮತ್ತೆ ಮರುಕಳಿಸಿ ಮನಸು ಉಲ್ಹಾಸ ಗೊಂಡಿತು. ಬೀದಿಗೊಂದು ಯೋಗಶಾಲೆಗೂ ನಾಯಿ ಕೊಡೆಯಂತ್ತೆ ತಲೆ ಎತ್ತಿವೆ. ಹಣದ ಆಸೆಗೇ ಅರೆಬರೆ ಯೋಗಾಸನ ಕಲಿಸುವುದನ್ನು ನೋಡಿದರೆ. ನಮ್ಮ ಸ್ವಾಮೀಜಿ ಎಷ್ಟು ಎತ್ತಿರ ಎನ್ನುವುದು
      ಅರ್ಥ ಆಗುತ್ತೇ. ಅಂತ ಮಹಾನ್ ಸಂತರ ಬಳಿ ಬೆಳೆದ ನಾವೇ ಧನ್ಯ ವಂತರು. ಒಟ್ಟಿನಲ್ಲಿ ಯೋಗಕ್ಕೆ ಮತ್ತೊಂದು ಹೆಸರೇ ನಮ್ಮ ಸ್ವಾಮೀಜಿ. ಅವರ ಸಾಧನೆ ಅಜರಾಮರ. ಇಂತ ನೆನಪು ಮಾಡಿಕೊಟ್ಟಿದಕ್ಕೆ ಧನ್ಯವಾದಗಳು. Bm. 🙏🙏🥰

    2. ಸ್ವಾಮೀಜಿ ಬಗ್ಗೆ ಸುದೀರ್ಘ ಲೇಖನವನ್ನು ಬರೆದ ಲೇಖಕರಿಗೆ ಧನ್ಯವಾದಗಳು. ನಾನೂ ಸಹ ಚಿಕ್ಕ ವಯಸ್ಸಿನಲ್ಲಿ ಸ್ವಾಮೀಜಿ ಯವರನ್ನು ಹತ್ತಿರದಿಂದ ನೋಡಿದವರಲ್ಲಿ ಒಬ್ಬಳು. ಲೇಖನ ಓದಿ ನೆನಪು ಗಳು ಮರುಕಳಿಸಿದವು.

    3. ತಿರುಕರ ಪ್ರಚಾರದಲ್ಲಿ ನಾವು ಒಬ್ಬರು…ಲೇಖನ ಓದಿ ಖುಷಿಯಾಯಿತು.. ಪಲ್ಲಕ್ಕಿ…. ತಿರುಕ … ಚಲನಚಿತ್ರದ ನಿರ್ದೇಶಕ

    4. ಪ್ರೀಯ ಮಂಜುನಾಥ್🙏

      ಮಲ್ಲಾಡಿ ಹಳ್ಳಿ ಸ್ವಾಮೀಜಿ ಕುರಿತ ನಿಮ್ಮ ಲೇಖನ ಸಮಯೋಚಿತ ಹಾಗೂ ಬಹಳ ಸಮಗ್ರವಾಗಿ ಅವರ ಪೂರ್ಣ ಪ್ರಮಾಣದ ಜೀವಿತದ ಉದ್ದೇಶವನ್ನು ಚಿತ್ರಿಸಿದೆ.

      ಅವರು ಒಬ್ಬ ವಿಶಿಷ್ಠ ಹಾಗೂ ಅಸಾಮಾನ್ಯ ಅವದೂತರೆ ಸರಿ !

      ನಿಮ್ಮ ಲೇಖನ ಕ್ಕಾಗಿ ಧನ್ಯವಾದಗಳು.

      👌👌👍🙏🙏🙏
      💐💐💐💐💐

      ನಿಮಗೆ ಶುಭವಾಗಲಿ

      H. L. ಶಿವಾನಂದ
      ಬೆಂಗಳೂರು

    LEAVE A REPLY

    Please enter your comment!
    Please enter your name here

    Latest article

    error: Content is protected !!