29.4 C
Karnataka
Monday, May 13, 2024

    ಅಮೋಘ ಪರಂಪರೆಯ ಅಮೂಲ್ಯ ಕೊಡುಗೆ

    Must read

    ಇಪ್ಪತ್ತ ನೆಯ ಶತಮಾನದ ಪೂರ್ವಾರ್ಧದಲ್ಲಿ ಎರೆಡೆರಡು ಪ್ರಾಪಂಚಿಕ ಯುದ್ಧಗಳನ್ನು ಕಂಡ ವಿಶ್ವ ಮತ್ತೆ ಆ ತರಹದ ಯುದ್ಧಗಳನ್ನು ತಡೆಯುವ ನಿಟ್ಟಿನಲ್ಲಿ, ಶಾಂತಿ ಬಯಸುವ 280 ಸಮಾನ ಮನಸ್ಕ ದೇಶಗಳೊಂದಿಗೆ ವಿಶ್ವ ಸಂಸ್ಥೆ ಅನ್ನುವ ಒಕ್ಕೂಟವನ್ನು 24 ಅಕ್ಟೊಬರ್ 1945 ರಂದು ಅಸ್ತಿತ್ವಕ್ಕೆ ತರುತ್ತದೆ. ಇದರ ಮೂಲ ಉದ್ದೇಶ ಒಕ್ಕೂಟ ದೇಶಗಳ ಭದ್ರತೆ, ಶಾಂತಿ ಮತ್ತು ಸೌಹಾರ್ದಾಯುತ ಸಂಬಂಧಗಳನ್ನು ಪೋಷಿಸಿ ಬೆಳೆಸುವುದಾಗಿರುತ್ತದೆ, ಯಾವುದೇ ದೇಶದ ಆತ್ಮಾಭಿಮಾನಕ್ಕೆ ಬಾರದ ರೀತಿಯಲ್ಲಿ.

    ವಿಶ್ವದ ಆಗ್ರಗಣ್ಯ ದೇಶಗಳಾದ ಅಮೇರಿಕಾ, ರಷ್ಯಾ , ಬ್ರಿಟನ್, ಜಪಾನ್, ಫ್ರಾನ್ಸ್ ಗಳನ್ನು ಒಳಗೊಂಡಂತಹ ಈ ಒಕ್ಕೂಟ ಅಮೇರಿಕಾದ ನೇತೃತ್ವದಲ್ಲಿ, ಅಲ್ಲಿಯ ನೆಲದಲ್ಲಿಯೇ (ಸ್ಯಾನ್ ಫ್ರಾನ್ಸಿಸ್ಕೊ) ಸ್ಥಾಪನೆಯಾಗಿ ಇಲ್ಲಿಯವರೆಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಕೆಲಸಮಾಡಿಕೊಂಡು ಬಂದಿದೆ. ಇಂತಹ ಒಕ್ಕೂಟಕ್ಕೆ 1945 ರ ಬ್ರಿಟಿಷ್ ಭಾರತವೂ ಸದಸ್ಯತ್ವವನ್ನು ಪಡೆಯುತ್ತದೆ.

    ಶಾಂತಿ, ಸೌಹಾರ್ದತೆ ಅನ್ನುವುದು ಎಲ್ಲೇ ಇರಲಿ ಅಲ್ಲಿ ಭಾರತದ ಪಾತ್ರ ಬಹು ಮುಖ್ಯವಾಗಿರಬೇಕಿತ್ತು. ಕಾರಣಾಂತರಗಳಿಂದ ಸ್ವಾತಂತ್ರ ಭಾರತ ವಿಶ್ವಸಂಸ್ಥೆಯಲ್ಲಿ ಅಷ್ಟೊಂದು ಸಕ್ರಿಯವಾಗಿ ಭಾಗಿ ಆಗಲಿಲ್ಲ .ವಿಶ್ವವೆಲ್ಲವೂ ಮೃಗಸಮಾನವಾದ ಅವಸ್ಥೆಯಲ್ಲಿದ್ದಾಗ ಭಾರತ ಆಧ್ಯಾತ್ಮ ಚಿಂತನೆಗಳ ಕಣಜವಾಗಿತ್ತು ಅನ್ನುವುದು ಅತಿಶಯೋಕ್ತಿ ಅಲ್ಲ ಬದಲಿಗೆ ಕಹಿ ಸತ್ಯ!

    ಗ್ರೀಕ್ ಯೋಧ ಅಲೆಕ್ಸಾoಡರ್ ಭಾರತದ ಕಡೆ ತನ್ನ ರಾಜ್ಯ ವಿಸ್ತರಣೆಯ ದಂಡೆಯಾತ್ರೆ ಮಾಡುವ ಎಷ್ಟೋ ಶತಮಾನಗಳ ಮೊದಲು ಇಲ್ಲಿಯ ವಿಕ್ರಮಾದಿತ್ಯನು ಆಗ್ಗೆ ನಿವಾಸ ಯೋಗ್ಯ ವಿಶ್ವವನ್ನು (ಬಹುಪಾಲು ಈಗಿನ ಏಷ್ಯಾ ಖಂಡ) ತನ್ನ ಅಧೀನಕ್ಕೆ ತೆಗೆದುಕೊಂಡು ರಾಜ್ಯಭಾರ ಮಾಡಿದ್ದನು. (ವಿದೇಶಿಯರ ಚರಿತ್ರೆ ಇದನ್ನು ದಾಖಲಿಸಲಿಲ್ಲ ಅಂತ ಇದನ್ನು ಕಟ್ಟು ಕಥೆ ಅನ್ನುವ ಬುದ್ಧಿಜೀವಿಗಳೂ ನಮ್ಮಲ್ಲಿದ್ದಾರೆ!) ನಿನ್ನನ್ನು ನೀನು ಜಯಿಸದೆ, ವಿಶ್ವವನ್ನು ಜಯಿಸಿದರೂ ಪ್ರಯೋಜನವಿಲ್ಲ ಅನ್ನುವ ಅಧ್ಯಾ ತ್ಮಿಕ ತತ್ವಕ್ಕೆ ಶರಣಾದ ಎಷ್ಟೋ ಶೂರ ಚಕ್ರವರ್ತಿಗಳು, ಸಾಮ್ರಾಟರು ಇಲ್ಲಿ ವಾನಪ್ರಸ್ತ ಆಶ್ರಮ ಸ್ವೀಕರಿಸಿ ಸಾಧುಗಳಾಗಿದ್ದಾರೆ. ಇಂತಹ ಘಟನೆಗಳು ಪ್ರಪಂಚದ ಯಾವ ಸಂಸ್ಕೃತಿಯ ಇತಿಹಾಸದಲ್ಲೂ ಸಿಗುವುದಿಲ್ಲ, ಆದರೆ ಇಲ್ಲಿ ಅದು ಜೀವನ ಪದ್ಧತಿ ಆಗಿತ್ತು!

    ಪ್ರಕೃತಿಯನ್ನು ನೋಡುತ್ತಾ, ಅದನ್ನು ಅಭ್ಯಸಿ ಸುತ್ತಾ, ಅದಕ್ಕೆ ಧಕ್ಕೆ ತಾರದೇ, ಅದರ ನಿಯಮಗಳನ್ನು ಅನುಸರಿಸಿ ಜೀವನಕ್ರಮವನ್ನು ರೂಪಿಸಿಕೊಂಡ ಯಾವುದಾದರೂ ಸಂಸ್ಕೃತಿ ಪ್ರಪಂಚದಲ್ಲಿ ಇದ್ದರೇ ಅದು ಈ ನೆಲದ್ದು ಮಾತ್ರ. ಇದರಲ್ಲಿ ಯಾವುದೇ ಅನುಮಾನ ಯಾರಿಗೂ ಬೇಡ. ಇಲ್ಲಿಯ ದಾರ್ಶನಿಕರ ಕಾಣ್ಕೆ ಗಳು, ಉಪದೇಶಿಸಿದ ತತ್ವಗಳು , ಸಾರಿದ ಜೀವನದ ಸಂದೇಶಗಳು ಇದನ್ನು ಸಿದ್ದಪಡಿಸುತ್ತವೆ. ಪ್ರಕೃತಿಯ ಕೂಸಾದ ನೀನು ಪ್ರಕೃತಿಗೆ ಹೊರೆಯಾಗದೆ, ಪೋಶಿಸಿದ ಅದನ್ನು ಕೃತಜ್ಞತೆ ಯಿಂದ ಸ್ಮರಿಸು, ಬದಲಾಗಿ ನಿನ್ನ ಅಹಂಕಾರದ ಗುರುತಾಗಿ ನಿನ್ನ ಹೆಜ್ಜೆ ಗುರುತನ್ನೂ ಇಲ್ಲಿ ಬಿಡಬೇಡ ಅನ್ನುವ ಪರಮ ಸಾತ್ವಿಕ ಸಾರವನ್ನು ಮಾನವ ಕುಲಕ್ಕೆ ಹೇಳಿದ ಕಿವಿಮಾತುಗಳು ಇಲ್ಲಿಯ ಮಹಾನ್ ಪರಂಪರೆಗೆ ಸಾಕ್ಷಿಯಾಗಿವೆ.

    ಇಂತಹ ಅಮೋಘ ಪರಂಪರೆಯ ಒಂದು ಅಮೂಲ್ಯ ತುಣುಕು ಯೋಗ ! ಇದನ್ನು ಯಾರು, ಯಾವಾಗ, ಏಕೆ, ಎಲ್ಲಿ ಹೇಗೆ ಕಂಡು ಹಿಡಿದರು ಅನ್ನುವಂತಹ ಈಗಿನ ಬುದ್ದಿವಂತರ ಪ್ರಶ್ನೆಗಳಿಗೆ ಉತ್ತರ ಸಿಗುವುದು ಕಷ್ಟ. ಇಂತಹ ಪ್ರಶ್ನೆಗಳೇ ಆಗ ಅಪ್ರಸ್ತುತ ಅನ್ನಿಸಿರಬೇಕು. ಜೀವನ ಕ್ರಮಕ್ಕಾಗಿ ರೂಪುಗೊಂಡ ಸಾಧಾರಣ ವಿಧಾನಗಳಲ್ಲಿ ಇದೂ ಒಂದು ಅಷ್ಟೇ. ಕೃಷ್ಣ ಭಗವದ್ಗೀತೆಯಲ್ಲಿ ಇದರ ಬಗ್ಗೆ ಅರ್ಜುನನಿಗೆ ಹೇಳಿದ್ದಾನೆ ಅಂತ ಇದರ ಉಲ್ಲೇಖಕ್ಕೆ 5000 ವರ್ಷ ಅನ್ನುವವರಿದ್ದಾರೆ ಬಿಟ್ಟರೆ ಇದರ ಉಗಮ ಯಾರಿಂದ, ಯಾವಾಗ ಆಯ್ತು ಅಂತ ಹೇಳೋರು ಯಾರೂ ಇಲ್ಲ. ನಂತರ ಪತಾಂಜಲಿ ಅನ್ನುವ ಸಾಧಕ ಸುಮಾರು 2500 ಸಾವಿರ ವರ್ಷಗಳ ಹಿಂದೆ ಇದರ ಮಹತ್ವ, ಗುಣವಿಶೇಷ ವನ್ನು ಬರಹದ ರೂಪದಲ್ಲಿ ದಾಖಲಿಸಿದ ಅಂತ ಹೇಳುವವರಿದ್ದಾರೆ. ಇಲ್ಲಿಯ ಹಲವಾರು ವಿಷಯಗಳು ಹೀಗೆಯೇ ಇವೆ. ಯಾಕಂದ್ರೆ ಸೂರ್ಯನನ್ನು ಮೊದಲು ನೋಡಿದವರು ಯಾರು ಹಾಗಂತ ಎಲ್ಲಿ ಯಾರು ದಾಖಲಿಸಿಟ್ಟರು ನೋಡಿದ್ದನ್ನು ಅಂತ ಕೇಳಿದ ಹಾಗೆ ಆಗ್ತದೆ! ಮಾನವ ಕಲ್ಯಾಣಕ್ಕಾಗಿ ಇರುವ ಸತ್ಯಗಳನ್ನು ಕಂಡುಕೊಂಡರೂ ಅದರ ವಾರಸತ್ವವನ್ನು ಹೊಂದುವುದು ಅಪರಾಧ ಅಂತ ಭಾವಿಸಿದ್ದ ದಾರ್ಶನಿಕರು ಎಲ್ಲಿಯೂ ತಮ್ಮ ಹೆಸರನ್ನು ದಾಖಲಿಸಲು ನಿರಾಕರಿಸಿದ್ದಾರೆ.

    ಪಕ್ಷಿ ನೋಟದಲ್ಲಿ ಯೋಗವನ್ನು ಈ ಪರಂಪರೆಯ ಕಣ್ಣಿಂದ ದರ್ಶಿಸುವುದಾದರೆ , ಸೂಕ್ಷ್ಮ ಶರೀರ( ಮನಸ್ಸು) ಮತ್ತು ಸ್ಟೂಲ ಶರೀರ( ದೇಹ) ಎರಡನ್ನೂ ಸಮನ್ವಯದಲ್ಲಿರಿಸಿ ಆಧ್ಯಾತ್ಮಿಕತೆಯ ಪ್ರಯಾಣಕ್ಕೆ ಸಜ್ಜುಗೊ ಳ್ಳುವುದಕ್ಕೆ ಬೇಕಾದ ಸಾಧನ! ಅಂತ ಹೇಳಬಹುದು.
    ಈ ಪ್ರಯಾಣಕ್ಕೆ ಹೊರಡುವ ಮೊದಲು ಬೇಕಾಗುವ ಏಕಾಗ್ರತೆ , ಶಾಂತಿ, ಹೊರಟಾದ ಮೇಲೆ ಬೇಕಾಗುವ ಶಕ್ತಿ ಎಲ್ಲವೂ ಯೋಗದಲ್ಲಿ ಇದೆ. ಇದರ ಮುಖಾಂತರ ಪ್ರಯಾಣ ಮಾಡಿ ಗಮ್ಯ ತಲುಪಿರುವವರ ದೊಡ್ಡ ಪಟ್ಟಿಯೇ ಈ ನೆಲದ ಇತಿಹಾಸದಲ್ಲಿದೆ. ಇಂದಿಗೂ ಇದರ ಪ್ರಯೋಜನ ಪಡೆಯುವವರು ಕೆಲವು ಲಕ್ಷ ಸಂಖ್ಯೆಯಲ್ಲಿದ್ದಾರೆ.

    ಇಂತಹ ಯೋಗವನ್ನು ಭಾರತ ಸರ್ಕಾರ ವಿಶ್ವ ಸಂಸ್ಥೆಗೆ ಪರಿಚಯಿಸಲು ಬರೋಬ್ಬರಿ 70 ವರ್ಷ ತೆಗೆದುಕೊಂಡಿತು! 2015 ಡಿಸೇಂಬರ್ 11ರಂದು ವಿಶ್ವ ಸಂಸ್ಥೆಯ 280 ದೇಶಗಳ ಪೈಕಿ 177 ದೇಶಗಳು ಭಾರತದ ಈ ಯೋಗವನ್ನು ಪ್ರತಿವರ್ಷ ಜೂನ್ 21 ರಂದು ವಿಶ್ವ ಯೋಗ ದಿನ ಅಂತ ಆಚರಿಸಲು ಒಪ್ಪಿಗೆ ನೀಡಿದವು. ಅಂದಿನಿಂದ ಇಂದಿನ ವರೆಗೆ ಒಟ್ಟು 9 ವರ್ಷ ಈ ಜೂನ್ 21 ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಿ ಕೊಂಡು ಬರಲಾಗುತ್ತಿದೆ.

    ಇಂದಿನ ಕಲುಷಿತ ಮಾನಸಿಕ ವಾತಾವರಣದಲ್ಲಿ ಪ್ರತಿಯೊಂದು ವಸ್ತುವೂ, ವಿಷಯವೂ ಧಾರ್ಮಿಕವಾಗಿ ಗುರುತಿಸಿಕೊಂಡು ಈ ಯೋಗ ಅನ್ನುವುದು ಒಂದು ನಿರ್ದಿಷ್ಟ ಧರ್ಮದ್ದು! ! ಇದನ್ನು ಪ್ರಪಂಚದಾದ್ಯಂತ ಆಚರಿಸಬಾರದು ಅಂತ ಕೆಲವು ದೇಶಗಳು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಭಾರತವು ಇದು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದು ಅಲ್ಲ ಬದಲಾಗಿ ಈಗಿನ ಮಾನವನ ಮಾನಸಿಕ ಆರೋಗ್ಯಕ್ಕೆ ಬಹಳ ಅಗತ್ಯ ಅನ್ನುವುದನ್ನು ಪುರಾವೆ ಸಹಿತ ವಿಶ್ವ ಸಂಸ್ಥೆ ಗೆ ಮನವರಿಕೆ ಮಾಡಿ ಕೊಡಬೇಕಾಯ್ತು!

    ಅಷ್ಟರಮಟ್ಟಿಗೆ ಯೋಗವನ್ನು ಪ್ರಪಂಚಕ್ಕೆ ಪರಿಚಯಿಸಿ ಭಾರತ ತನ್ನ ಭವ್ಯ ಪರಂಪರೆಯ ಔದಾರ್ಯವನ್ನು ವಿಶ್ವ ಸಂಸ್ಥೆಯ ಮುಖಾಂತರ ಮೆರೆದಿರುವುದು ಪ್ರತಿಯೊಬ್ಬ ಭಾರತೀಯನಿಗೂ ಗೌರವ ತರುವಂತಹ ವಿಷಯ. ಇಂದು ಮಾನವ ಕುಲಕ್ಕೆ ಬೇಕಾಗಿರುವ ಅತ್ಯಂತ ತುರ್ತು ಔಷಧಿಗಳಾದ ಶಾಂತಿ, ಸೌಹಾರ್ದಾತೆ, ಮಾನಸಿಕ ಸ್ಥಿರತೆ , ಸದ್ಭುದ್ಧಿ ಗಳನ್ನು ಭಾರತ ಪ್ರಪಂಚಕ್ಕೆ ಕೊಡುವಂತಾಗಿ ವಿಶ್ವಕ್ಕೆ ತನ್ನ ಪರಂಪರೆಯ ದರ್ಶನವನ್ನು ಮನವರಿಕೆ ಮಾಡಲಿ. ಅಂದ ಹಾಗೆ ಇಂದು ಕರ್ಕಾಟಕ ಸಂಕ್ರಮಣ. ಅತೀ ದೊಡ್ಡ ಹಗಲಿನ ದಿನ.

    ಎಲ್ಲರಿಗೂ ವಿಶ್ವ ಯೋಗ ದಿನದ ಶುಭಾಶಯಗಳು.

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!