35.9 C
Karnataka
Thursday, May 9, 2024

    ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ – ಇಂದಿನ ಅವಶ್ಯಕತೆ

    Must read

    ಅಮೇರಿಕಾ ದೇಶದ ತತ್ವಜ್ಞಾನಿ, ಮನಶಾಸ್ತ್ರಜ್ಞ ಮತ್ತು ಶೈಕ್ಷಣಿಕ ಸುಧಾರಕ ಜಾನ್‌ ಡಿವಿ ಪ್ರಗತಿಶೀಲ ಶಿಕ್ಷಣವನ್ನು ಪ್ರತಿಪಾದಿಸಿದವರು. ಶಿಕ್ಷಣ, ವಿದ್ಯಾರ್ಥಿಗಳು ಸ್ವತಃ ಪ್ರಯೋಗಗಳನ್ನು ಮಾಡುವುದರ ಜೊತೆಗೆ ಕಲಿಕೆ ಅನುಭವದ ಪ್ರಕ್ರಿಯೆ ಆಗಬೇಕೆಂಬ ಆಶಯವನ್ನು ಹೊಂದಿದ್ದ ಶಿಕ್ಷಣ ತಜ್ಞರಲ್ಲೊಬ್ಬರು. ವಿಮರ್ಶಾತ್ಮಕ ಚಿಂತನೆಯನ್ನು (ಕ್ರಿಟಿಕಲ್ ಥಿಂಕಿಂಗ್)‌ ಪ್ರಚೋದಿಸುವ ಮತ್ತು ಪ್ರಪಂಚದ ನೈಜ ಸಮಸ್ಯೆಗಳನ್ನು ಬಿಡಿಸುವ ವಾತಾವರಣವನ್ನು ತರಗತಿಗಳಲ್ಲಿ ಸೃಷ್ಟಿಸುವ ಅವಶ್ಯಕತೆಯಿದೆ ಎಂದು ವಾದಿಸಿದವರು. ಇಂತಹ ಕಲಿಕೆಯ ವಿಧಾನ, ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುವುಮಾಡಿಕೊಡುತ್ತದೆ ಎಂದು ಎಲ್ಲರಿಗೂ ಮನದಟ್ಟು ಮಾಡಿದಂತವರು.

    ಕಾಲಿನ್ಸ್‌ ಮತ್ತು ಓಬ್ರೈನ್ ರ (ಗ್ರೀನ್‌ ವುಡ್‌ ಶೈಕ್ಷಣಿಕ ನಿಘಂಟಿನ ಸಂಪಾದಕರು) ಪ್ರಕಾರ, ವಿದ್ಯಾರ್ಥಿಯು ಪ್ರಭಾವಿತನಾಗಿ, ವಿಷಯ, ಕಲಿಕಾ ಚಟುವಟಿಕೆಗಳು, ಅಧ್ಯಯನ ಸಾಮಾಗ್ರಿಗಳು ಮತ್ತು ಕಲಿಕೆಯ ವೇಗವನ್ನು ವಿದ್ಯಾರ್ಥಿಯೇ ನಿರ್ಧರಿಸಿ, ಶಿಕ್ಷಣವನ್ನು ಪಡೆಯುವ ಬೋಧನಾ ವಿಧಾನವನ್ನು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣವೆಂದು ಕರೆಯಬಹುದಾಗಿದೆ.

    ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ, ವಿದ್ಯಾರ್ಥಿಗಳನ್ನು ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯ ಹೃದಯ ಭಾಗದಲ್ಲಿ ಇರಿಸಲಾಗುತ್ತದೆ. ಈ ಪದ್ದತಿಯಲ್ಲಿ, ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಕಲಿಕಾ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯು, ಏಕಮುಖ ಸಂಚಾರವಾಗದೆ, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವೆ ಸಂಭಾಷಣೆ ಅಥವಾ ಸಂವಾದದ ಮೂಲಕ ಜ್ಞಾನಾರ್ಜನೆಗೆ ಅನುವು ಮಾಡಿಕೊಡುತ್ತದೆ. ಪರಿಕಲ್ಪನಾ ಕಲಿಕೆಗೆ ಹೆಚ್ಚು ಒತ್ತನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳ ಅಭಿರುಚಿ ಮತ್ತು ಅವರ ಕಲಿಕಾ ಧ್ಯೇಯಗಳನ್ನು ಪರಿಗಣಿಸಿ ಬೋಧನಾ ಕ್ರಮವನ್ನು ರೂಪಿಸಲಾಗುತ್ತದೆ. ಈ ಪದ್ಧತಿಯಲ್ಲಿ ಚರ್ಚೆಗಳಿಗೆ, ಗುಂಪು ಚರ್ಚೆಗಳಿಗೆ, ವಿಮರ್ಶಾತ್ಮಕ ಚಿಂತನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ.

    ಸ್ವಲ್ಪ ವಿಷಯಾಂತರ ಮಾಡಿ, ನಮ್ಮ ದೇಶದಲ್ಲಿ ಪ್ರಸ್ತುತದಲ್ಲಿ ಬಹಳಷ್ಟು ಚಾಲ್ತಿಯಲ್ಲಿರುವ ಬೋಧನಾ ಕಲಿಕೆಯ ಪ್ರಕ್ರಿಯೆಯನ್ನು ಅವಲೋಕಿಸಿದರೆ ನಮಗೆ ಕಾಣುವುದು ಶಿಕ್ಷಕ ಕೇಂದ್ರಿತ ಶಿಕ್ಷಣ (ಟೀಚರ್‌ ಸೆಂಟ್ರಿಕ್‌ ಶಿಕ್ಷಣ). ಈ ಪದ್ದತಿಯಲ್ಲಿ ಶಿಕ್ಷಕರು ಬೋಧನಾ ಕಲಿಕೆಯ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸಿ, ವಿದ್ಯಾರ್ಥಿಗಳು ಕೇವಲ ನಿಷ್ಕ್ರಿಯ ಕೇಳುಗರ (ಪಾಸ್ಸೀವ್‌ ಲಿಜನರ್ಸ್‌) ಪಾತ್ರ ವಹಿಸುತ್ತಾರೆ. ಶಿಕ್ಷಕರು ಪ್ರಧಾನ ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ. ಏಕ ಮುಖ ಸಂಚಾರದ ರೀತಿಯಲ್ಲಿ ವಿಷಯಗಳು, ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ವರ್ಗಾವಣೆಯಾಗುತ್ತವೆ. ಅನೇಕ ವೇಳೆ, ಈ ಏಕತಾನತೆಯಿಂದ ವಿದ್ಯಾರ್ಥಿಗಳು ಆಸಕ್ತಿಯನ್ನು ಕಳೆದುಕೊಂಡು, ಬೇಸರಗೊಳ್ಳುವ ಸಂದರ್ಭಗಳಿವೆ.

    ವಿಶೇಷವಾಗಿ ಸಾಂಪ್ರದಾಯಿಕ ಶಿಕ್ಷಕ ಕೇಂದ್ರಿತ ಶಿಕ್ಷಣ ಪದ್ದತಿಯಲ್ಲಿ, ಪರೀಕ್ಷೆಗಳನ್ನು ಪಾಸು ಮಾಡುವ ಗುರಿಯನ್ನು ಹೊಂದಿದ್ದು, ವಿಷಯಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳದೆ, ಗಟ್ಟು ಹೊಡೆಯುವ ಸಂಸ್ಕೃತಿಯನ್ನು ಉತ್ತೇಜಿಸಲಾಗುತ್ತದೆ. ಪರಿಕಲ್ಪನಾ ಕಲಿಕೆಗೆ ಹೆಚ್ಚು ಅವಕಾಶವಿರುವುದಿಲ್ಲ. ಜೊತೆಗೆ, ಶಿಕ್ಷಕರನ್ನೇ ಅವಲಂಭಿಸುವ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವ ಅವಕಾಶಗಳು ಹೆಚ್ಚಾಗುತ್ತವೆ. ಉತ್ತಮ ರೀತಿಯಲ್ಲಿ ಕಲಿಕೆಯ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ವಿರುದ್ಧವಾಗಿ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ, ಶಿಕ್ಷಕರು ವಿಷಯ ಅಥವಾ ಜ್ಞಾನವನ್ನು ನೀಡುವ ಪೂರೈಕೆದಾರರಾಗದೆ ಜ್ಞಾನಾರ್ಜನೆಯ ಪ್ರಕ್ರಿಯೆಯಲ್ಲಿ ಕೇವಲ ಅನುವುಗಾರರಾಗುತ್ತಾರೆ (ಪೆಸಿಲಿಟೇಟರ್ಸ್).‌ ವಿದ್ಯಾರ್ಥಿ ಕೇಂದ್ರಿತ ವಿದ್ಯಾರ್ಥಿಗಳಲ್ಲಿ ನಿರಂತರ ಆಸಕ್ತಿಯನ್ನುಂಟು ಮಾಡುತ್ತದೆ.

    ವಿದ್ಯಾರ್ಥಿ ಕೇಂದ್ರಿತ ಶಿಕ್ಷಣಕ್ಕೆ ಸಂಬಂಧಿಸಿದಂತೆ, ನನ್ನ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ಅಮೇರಿಕಾ ದೇಶಕ್ಕೆ ನೀಡಿದ ಒಂದು ಭೇಟಿಯಲ್ಲಿ ನನ್ನ ಮಗನ ಪ್ರಯತ್ನದಿಂದ ಹ್ಯೂಸ್ಟನ್‌ ನಗರದಲ್ಲಿರುವ ಟೌನ್‌ ವೆಸ್ಟ ಎಲಿಮೆಂಟಿರಿ ಶಾಲೆಯನ್ನು ಭೇಟಿ ಮಾಡುವ ಮತ್ತು ಮೂರನೇ ತರಗತಿಯ ಮಕ್ಕಳೊಡನೆ ಸಂವಾದ ಮಾಡಲು ಅನುಮತಿ ದೊರಕಿತು. ನಾವು ತರಗತಿಯ ಕೊಠಡಿಯ ಒಳಗೆ ಪ್ರವೇಶಿಸಿದಾಗ, ನಮಗೆ ಆಶ್ಚರ್ಯವೇ ಕಾದಿತ್ತು. ತರಗತಿಯಲ್ಲಿ ವಿದ್ಯಾರ್ಥಿಗಳಿಗಾಗಲಿ ಅಥವಾ ಶಿಕ್ಷಕರಿಗಾಗಲಿ ಯಾವುದೇ ಬಿಗುವಿನ ವಾತಾವರಣವಿರದೇ ವಿಶ್ರಾಂತ ವಾತಾವರಣ ಎದ್ದು ಕಾಣುತ್ತಿತ್ತು. ಮಕ್ಕಳಲ್ಲಿ ಯಾವುದೇ ಉದ್ವೇಗವಿಲ್ಲದೆ, ತಮ್ಮ ತಮ್ಮ ಚಟುವಟಿಕೆಗಳಲ್ಲಿ ಕಾರ್ಯ ಮಗ್ನರಾಗಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಮೇಜು ಮತ್ತು ಒಂದು ಕುರ್ಚಿಯನ್ನು ನೀಡಲಾಗಿತ್ತು. ವಿದ್ಯಾರ್ಥಿಗಳು ಅವರವರ ಆಸಕ್ತಿಗೆ ಅನುಸಾರವಾಗಿ ಚಟುವಟಿಕೆಗಳಲ್ಲಿ ತೊಡಗಿದ್ದರು.

    ಉದಾಹರಣೆಗೆ ಹೇಳುವುದಾದರೆ, ಕೆಲವು ವಿದ್ಯಾರ್ಥಿಗಳು ಗಣಿತದ ಮಾದರಿಗಳನ್ನು ತಯಾರು ಮಾಡುತ್ತಿದ್ದರೆ, ಇನ್ನು ಕೆಲವರು ವಿಜ್ಞಾನದ ಪ್ರಾಜೆಕ್ಟ್ ಗಳಲ್ಲಿ ಮಗ್ನರಾಗಿದ್ದರು. ಮೂರನೇ ಗುಂಪಿನ ವಿದ್ಯಾರ್ಥಿಗಳು ಸ್ಕೆಚಿಂಗ್‌ ಮಾಡುತ್ತಿದ್ದರು. ಹೀಗೆ, ವಿದ್ಯಾರ್ಥಿಗಳು ಅವರವರ ಆಸಕ್ತಿಗೆ ಅನುಗುಣವಾಗಿ ವಿದ್ಯಾರ್ಜನೆ ಮಾಡುತ್ತಿದ್ದರು. ಯಾವುದೇ ನಿಬಂಧನೆಯಿರಲಿಲ್ಲ. ಶಿಕ್ಷಕರು ಕೇವಲ ಮಾರ್ಗದರ್ಶನ ನೀಡುತ್ತಿದ್ದರು ಹಾಗೂ ವಿದ್ಯಾರ್ಥಿಗಳ ವೈಯಕ್ತಿಕ ಆಸಕ್ತಿಗಳನ್ನು ಉತ್ತೇಜಿಸುತ್ತಿದ್ದರು. ಬಹುಶಃ ಈ ತರಗತಿಯಲ್ಲಿದ್ದ ವಾತಾವರಣ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣಕ್ಕೆ ಶಾಸ್ತ್ರೀಯ (ಕ್ಲಾಸಿಕ್)‌ ಉದಾಹರಣೆ ಎಂದು ಹೇಳಬಹುದು.

    ಶಿಕ್ಷಕರ ಪಾತ್ರ

    ಈಗಾಗಲೆ ತಿಳಿಸಿರುವಂತೆ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ, ಶಿಕ್ಷಕರು ವಿಷಯ ವಿತರಣೆಗಾರರಲ್ಲ (ಕಂಟೆಂಟ್‌ ಡೆಲಿವರರ್ಸ್)‌, ಆದರೆ ಕೇವಲ ಅನುವುಗಾರರು (ಪೆಸಿಲಿಟೇಟರ್ಸ್).‌ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ ಹೆಚ್ಚು ಮಹತ್ವವನ್ನು ಪಡೆದಿರುವ ಶೈಕ್ಷಣಿಕ ಸ್ಕ್ಯಾಪೋಲ್ಡಿಂಗ್‌ ನ್ನು ಅಳವಡಿಸಿಕೊಳ್ಳ ಬೇಕಾಗುತ್ತದೆ. ಇದರಿಂದ, ವಿದ್ಯಾರ್ಥಿಗಳು ಸ್ವತಂತ್ರವಾಗಿ ಚಿಂತನೆ ಮಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುಲು ಸಾಧ್ಯವಾಗುತ್ತದೆ. ಹೆಚ್ಚು ಪ್ರಚಲಿತದಲ್ಲಿರುವ ಮಾತೆಂದರೆ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ ಶಿಕ್ಷಕರು ವಿಷಯ ವಿತರಕರ (ಕಂಟೆಂಟ್‌ ಡಿಸ್ಪೆನ್ಸರ್)‌ ಪಾತ್ರದಿಂದ ವಿಷಯ ಸಂಪನ್ಮೂಲಕಾರರ ಪಾತ್ರಕ್ಕೆ (ಕಂಟೆಂಟ್‌ ರಿಸೋಸರ್ಸ್) ಬದಲಾಗ ಬೇಕಾಗುತ್ತದೆ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ, ಶಿಕ್ಷಕರು ಅನೇಕ ಪಾತ್ರಗಳನ್ನು ವಹಿಸಬೇಕಾಗುತ್ತದೆ. ಉದಾಹರಣೆಗೆ, ವಿಷಯ ತಜ್ಞರು, ಮಾರ್ಗದರ್ಶಕರು, ವಿವಿಧ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಮತ್ತು ಭಾಷಾ ಹಿನ್ನಲೆಯಿಂದ ಬಂದಿರುವ ವಿದ್ಯಾರ್ಥಿಗಳ ನಡುವೆ ಬಲವಾದ ಮತ್ತು ವಿಶ್ವಾಸಾರ್ಹ ಸಂಬಂಧಗಳನ್ನು ಬೆಳೆಸಿಕೊಂಡು, ವಿದ್ಯಾರ್ಥಿಗಳ ಆತ್ಮ ವಿಶ್ವಾಸವನ್ನು ಹೆಚ್ಚು ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡಬೇಕಾಗುತ್ತದೆ.

    ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ಅನುಕೂಲಗಳು.

    1. ವಿದ್ಯಾರ್ಥಿಗಳು ಅವರ ವಿದ್ಯೆಯನ್ನು ಸ್ವತಃ ಅವರೇ ಸೃಷ್ಟಿಸಕೊಳ್ಳಬಲ್ಲ ಅವಕಾಶಗಳನ್ನು ಒದಗಿಸುತ್ತದೆ.

    ಯಾವ ವಿಷಯವನ್ನು ಕಲಿಯ ಬೇಕು, ಯಾವಾಗ ಕಲಿಯ ಬೇಕು ಮತ್ತು ಹೇಗೆ ಕಲಿಯ ಬೇಕು ಎಂಬ ಅಂಶಗಳನ್ನು ವಿದ್ಯಾರ್ಥಿಗಳೇ ನಿರ್ಧಾರ ಮಾಡಲು ಉತ್ತೇಜಿಸಲಾಗುತ್ತದೆ.

    • ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಕಲಿಯುವ ನಮ್ಯತೆ (ಪ್ಲೆಕ್ಷಿಬಿಲಿಟಿ)‌ ಯನ್ನು ಒದಗಿಸುತ್ತದೆ.
    • ಕಲಿಯುವ ಪ್ರಕ್ರಿಯೆಯು ಆಸಕ್ತಿದಾಯಕವಾಗಿ ಮತ್ತು ಆನಂದದಾಯಕವಾಗಿರುತ್ತದೆ.
    • ಜ್ಞಾನ ಸಂಪತ್ತು ಮತ್ತು ಸ್ವಯಂ ನಿರ್ದೇಶನದಿಂದ ಕೌಶಲ್ಯಗಳನ್ನು ಪಡೆಯುಲು ಅನುವು ಮಾಡಿಕೊಡುತ್ತದೆ.
    • ತರಗತಿಗಳ ಹೊರಗೂ ಸಹ, ವಿದ್ಯಾರ್ಥಿಗಳು ಬೆಳೆಯಲು ಅಂದರೆ ಅವರ ಜೀವನದಲ್ಲಿ ಬೆಳೆಯಲು ಸಕ್ರಿಯಗೊಳಿಸುತ್ತದೆ.
    • ಕುತೂಹಲ ಮತ್ತು ಸಹಕಾರಿಕೆ ಕಲಿಕೆಗಳನ್ನು ಉತ್ತೇಜಿಸುವುದರ ಮೂಲಕ, ಉತ್ತಮ ರೀತಿಯ ಜ್ಞಾನ ಸಂಪಾದನೆಗೆ ಅನುವುಮಾಡಿಕೊಡುತ್ತದೆ.
    • ವಿದ್ಯಾರ್ಥಿಗಳು, ಸ್ವತಂತ್ರವಾಗಿ ಆಲೋಚಿಸಲು, ಸಂಶೋಧನಾ ವಿಧಾನವನ್ನು ಅವರೇ ನಿರ್ಧರಿಸಲು ಮತ್ತು ಅವರ ಪ್ರಗತಿಯನ್ನು ಅವರೇ ಮೌಲ್ಯ ಮಾಪನ ಮಾಡಲು ಅವಕಾಶಗಳಿರುತ್ತವೆ.
    • ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಸಮಸ್ಯೆಗಳನ್ನು ಬಿಡಿಸುವ ಸಾಮರ್ಥ್ಯ, ಹೀಗೆ ಹಲವಾರು ಜೀವನದ ಕೌಶಲ್ಯಗಳನ್ನು ಬೋಧಿಸುತ್ತದೆ.
    • ಪರಿಕಲ್ಪನಾ ಕಲಿಕೆ, ವಿಷಯಗಳ ಬಗ್ಗೆ ಆಳವಾದ ಮತ್ತು ಸ್ಪಷ್ಟ ತಿಳುವಳಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ.
    • ನವೀನತೆಯಿಂದ ಕೂಡಿದ ಬೋಧನಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಶಿಕ್ಷಕರಿಗೆ ಅವಕಾಶಗಳು ದೊರಕುತ್ತವೆ.
    • ಅನ್ವೇಷಣೆಯ ಮೂಲಕ ಕಲಿಯುವ ವಿಧಾನವನ್ನು ಪೋಷಿಸುತ್ತದೆ.
    • ಜೀವನದ ಸವಾಲುಗಳನ್ನು ಧೈರ್ಯದಿಂದ, ಆತ್ಮ ವಿಶ್ವಾಸದಿಂದ ಎದುರಿಸುವ ಸಾಮರ್ಥ್ಯವನ್ನು ನೀಡುತ್ತದೆ.

    ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ವಿಧಾನಗಳು.

    ಈಗಾಗಲೇ ಮೇಲೆ ತಿಳಿಸಿರುವಂತೆ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ಕೇಂದ್ರ ಬಿಂದುವಿನಲ್ಲಿರಿಸಿ ಬೋಧನಾ ಕ್ರಮವನ್ನು ವಿನ್ಯಾಸಗೊಳಿಸಲಾಗುತ್ತದೆ. ವಿಷಯದ ಬಗ್ಗೆ ಇರುವ ಪೂರ್ವ ಜ್ಞಾನವನ್ನು ಸಕ್ರಿಯಗೊಳಿಸುವುದು, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮತ್ತು ಕಲಿಕಾ ಶೈಲಿಯನ್ನು ಆಧರಿಸಿ ಬೋಧನಾ ಕ್ರಮವನ್ನು ಬದಲಿಸುವುದು, ವಿದ್ಯಾರ್ಥಿಗಳ ಅನುಭವಗಳಿಗೆ ಸಂಬಂಧ ಕಲ್ಪಿಸುವುದು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ವೇಗಕ್ಕೆ ಅನುಗುಣವಾಗಿ ಬೋಧಿಸುವುದು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ಪ್ರಮುಖ ಲಕ್ಷಣಗಳು.

    ಅನುಭವದ ಕಲಿಕೆ (ಎಕ್ಸ್‌ಪೀರಿಯನ್ಸಲ್)‌ ಮತ್ತು ಭಾಗವಹಿಸುವ ಕಲಿಕೆ (ಪಾರ್ಟಿಸಿಪೇಟೀವ್) ಗಳು ಒಳಗೊಂಡಂತೆ ಕೆಲವು ವಿಧಾನಗಳನ್ನು ಪಟ್ಟಿ ಮಾಡುವ ಪ್ರಯತ್ನ ಮಾಡೋಣ.

    1. ಸಂವಾದಾತ್ಮಕ ಅಥವಾ ಪ್ರಶ್ನೆ – ಉತ್ತರ ಅಧಿವೇಶನಗಳು, ಬಹುಶಃ ಸಾಕ್ರೆಟಿಕ್ ವಿಧಾನಕ್ಕೆ ಸರಿ ಸಮಾನವಾದುದು.

    ಸಾಕ್ರೆಟಿಕ್‌ ವಿಧಾನದಲ್ಲಿ, ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ತನಿಖಾತ್ಮಕ ಪ್ರಶ್ನೆಗಳನ್ನು, ವಿದ್ಯಾರ್ಥಿಗಳನ್ನು ಪ್ರಚೋಧಿಸುವ ರೀತಿಯಲ್ಲಿ ಅವಿಚ್ಚಿನ್ನವಾಗಿ ಕೇಳುವುದು. ಇದರಿಂದ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಅಭಿಪ್ರಾಯಗಳನ್ನು ಪಡೆಯಲು ಹಾಗೂ ಅವರ ವಿಷಯಾನುಗ್ರಹಿಕೆಯನ್ನು ಅಳತೆ ಮಾಡಲು ಸಾಧ್ಯವಾಗುತ್ತದೆ.

    • ಬ್ರೈನ್‌ ಸ್ಟಾರ್ಮಿಂಗ್‌ ಅಧಿವೇಶನಗಳು.
    • ಸಹಕಾರಿಕೆ ಕಲಿಕೆ ( ಕೊಲಾಬರೇಟಿವ್‌ ಕಲಿಕೆ)
    • ಪೀರ್‌ ಲರ್ನಿಂಗ್‌ ( ಸಮಾನರ ಜೊತೆಗೂಡಿ ಕಲಿಯುವುದು)
    • ವಿಷಯ ಅಧ್ಯಯನ ಪದ್ಧತಿ (ಕೇಸ್‌ ಸ್ಟಡಿ ಪದ್ಧತಿ)
    • ಸಮಸ್ಯಾಧಾರಿತ ಕಲಿಕೆ (ಪ್ರಾಬ್ಲಮ್‌ ಬೇಸಡ್‌ ಲರ್ನಿಂಗ್)‌
    • ಯೋಜನಾಧಾರಿತ ಕಲಿಕೆ (ಪ್ರಾಜೆಕ್ಟ್‌ ಬೇಸಡ್‌ ಲರ್ನಿಂಗ್)‌
    • ಪ್ರಾಯೋಗಿಕ ತರಗತಿಗಳು.
    • ಚರ್ಚಾ ಸ್ಪರ್ಧೆಗಳು ಮತ್ತು ರಸ ಪ್ರಶ್ನೆಗಳು.
    • ವಿದ್ಯಾರ್ಥಿ ಉಪನ್ಯಾಸಗಳು.
    • ಜಿಗ್‌ ಸಾ ತಂತ್ರದ ಮೂಲಕ ಕಲಿಕೆ.
    • ಕ್ರೀಡೆಗಳ ಮೂಲಕ ಬೋಧನೆ.
    • ಗುಂಪು ಚರ್ಚೆಗಳು.
    • ಪ್ಲಿಪಡ್‌ ತರಗತಿಗಳು.
    • ಶೈಕ್ಷಣಿಕ ಸ್ಪರ್ಧಾತ್ಮಕ ಚಟುವಟಿಕೆಗಳು.
    • ಜಡ್‌ ಟು ಎ ಪದ್ಧತಿ.

    ವಿದ್ಯಾರ್ಥಿ ಕೇಂದ್ರಿತ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಮಾಡುವುದು ಹೇಗೆ.

    1. ಮೊದಲನಯದಾಗಿ, ಶಿಕ್ಷಕರ ಮನೋಭಾವವನ್ನು ಪರಿವರ್ತನೆ ಮಾಡುವುದು. ಅನುವುಗಾರರ ಪಾತ್ರವನ್ನು ಸಂತಸದಿಂದ ಒಪ್ಪಿಕೊಳ್ಳುವಂತೆ ಮನ ಪರಿವರ್ತನೆ ಮಾಡುವುದು ಬಹಳ ಮುಖ್ಯ.
    2. ವಿದ್ಯಾರ್ಥಿಗಳಿಗೆ ತಮ್ಮ ಧ್ಯೇಯಗಳನ್ನು/ಗುರಿಗಳನ್ನು ಅವರೇ ನಿರ್ಧರಿಸಲು ಉತ್ತೇಜಿಸುವುದು.
    3. ಹೊಸ ಹೊಸ ವಿಷಯಗಳನ್ನು ವಿದ್ಯಾರ್ಥಿಗಳೇ ಸ್ವಂತ ಪ್ರಯತ್ನದಿಂದ ಕಲಿಯಲು ಪ್ರೇರೇಪಿಸುವುದು.
    4. ಚರ್ಚೆಗಳನ್ನು ಮತ್ತು ಸಂವಾದಗಳನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ನಡೆಸುವುದು.
    5. ಸಮಾನರ ಜೊತೆಗೂಡಿ ಕಲಿಯುವ ಪದ್ಧತಿ ಅಳವಡಿಸುವುದು.
    6. ಸಹಕಾರಿ ಕಲಿಕೆಯನ್ನು ಉತ್ತೇಜಿಸುವುದು.
    7. ಅನುಭವದ ಕಲಿಕೆ ಮತ್ತು ಭಾಗವಹಿಸುವ ಕಲಿಕೆಗಳನ್ನು ಉತ್ತೇಜಿಸಿ, ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು.

    ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಲ್ಲಿ ಸಂಕಲನಾತ್ಮಕ ಮೌಲ್ಯಮಾಪನಕ್ಕಿಂತ (ಸಮ್ಮೇಟೀವ್ ಅಸೆಸ್‌ಮೆಂಟ್), ರಚನಾತ್ಮಕ ಮೌಲ್ಯಮಾಪನಕ್ಕೆ (ಪಾರ್ಮೆಟೀವ್‌ ಅಸೆಸ್‌ಮೆಂಟ್)‌ ಹೆಚ್ಚು ಒತ್ತು ಕೊಡಬೇಕಾಗಿರುವ ಅವಶ್ಯಕತೆಯಿರುತ್ತದೆ. ನಾವಿನ್ಯತೆಯಿಂದ ಕೂಡಿದ ಬೋಧನಾ ಕ್ರಮಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ, ಶಿಕ್ಷಣದ ಎಲ್ಲಾ ಹಂತಗಳಲ್ಲಿ ಇಂದಿಗೆ ಬಹಳಷ್ಟು ಅವಶ್ಯಕತೆಯಿದೆ. ನೂತನ ರಾಷ್ಟೀಯ ಶಿಕ್ಷಣ ನೀತಿ 2020 ಉದ್ದೇಶವೂ ಸಹ ಇದೇ ಆಗಿರುತ್ತದೆ. ಆದರೆ ನಮ್ಮ ದೇಶದ ಪ್ರಸ್ತುತದ ಪರಿಸ್ಥಿತಿಯಲ್ಲಿ, ಒಂದು ತರಗತಿಯಲ್ಲಿ ಎಂಬತ್ತರಿಂದ ನೂರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವಾಗ, ಅನುಷ್ಠಾನಕ್ಕೆ ತರುವುದು ಕಷ್ಟದ ಸಂಗತಿ. ಆದರೆ, ಅಳವಡಿಸಿಕೊಳ್ಳದಿರಲು ಸಹ ಸಾಧ್ಯವಿಲ್ಲ. ಬಹುಶಃ ಪ್ರಾರಂಭದಲ್ಲಿ, ಹೈಬ್ರಿಡ್‌ ಪದ್ಧತಿಯನ್ನು ಅಂದರೆ ಶಿಕ್ಷಕ ಕೇಂದ್ರಿತ ಶಿಕ್ಷಣ ಮತ್ತು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ, ಎರಡನ್ನೂ ಸೇರಿಸಿ, ಜಾರಿಗೆ ತಂದು ಕ್ರಮೇಣ ಪೂರ್ಣ ಪ್ರಮಾಣದ ಬದಲಾವಣೆಗೆ ಪ್ರಯತ್ನಿಸಬಹುದು,

    ಕನ್ಪೂಸಿಯಸ್‌ನ ವಾಕ್ಯದಿಂದ, ಲೇಖನವನ್ನು ಮುಕ್ತಾಯ ಮಾಡಲು ಬಯಸುತ್ತೇನೆ,

    I hear and I forget, I see and I remember, I do and I understand.

    ‌   

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ.
    spot_img

    More articles

    1 COMMENT

    1. Good article. To implement this system, firstly the teachers’ mindset should change and they require proper training to empower themselves.

    LEAVE A REPLY

    Please enter your comment!
    Please enter your name here

    Latest article

    error: Content is protected !!