22.6 C
Karnataka
Monday, May 25, 2026
    Home Blog Page 94

    ಪದವಿ ಸೇರಿದಂತೆ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿ

    ಉನ್ನತ ಶಿಕ್ಷಣ ಕಲಿಕೆಯಲ್ಲಿ ಇಡೀ ದೇಶದಲ್ಲೇ ಮೊದಲು ಎನ್ನುವ ಹೆಗ್ಗಳಿಕೆಗೆ ಹೊಂದಿರುವ ʼಕಲಿಕಾ ನಿರ್ವಹಣಾ ವ್ಯವಸ್ಥೆʼ (Learning Management System) ಬೋಧನೆ-ಕಲಿಕೆಗೆ ಅನುಕೂಲವಾಗುವಂತೆ 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ಪಿಸಿಗಳನ್ನು ವಿತರಣೆ ಮಾಡುವ ಮಹತ್ವದ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ.

    ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಯಲ್ಲಿ ತಾರತಮ್ಯ ನಿವಾರಣೆ ಹಾಗೂ ಡಿಜಿಟಲ್‌ ಅಂತರವೂ ಅಳಿಸಿಹಾಕುವ ಧ್ಯೇಯದೊಂದಿಗೆ ಸರಕಾರ ಇಷ್ಟು ಬೃಹತ್‌ ಪ್ರಮಾಣದ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ಪಿಸಿಗಳನ್ನು ವಿತರಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದರು.

    ಈ ಕಾರ್ಯಕ್ರಮಕ್ಕಾಗಿ ಉನ್ನತ ಶಿಕ್ಷಣ ಇಲಾಖೆಯ ಜತೆಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಕೈಜೋಡಿಸಿವೆ ಎಂದು ಅವರು ಹೇಳಿದರು.

    ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಸಾಂಕೇತಿಕವಾಗಿ ಟ್ಯಾಬ್ಲೆಟ್‌ ಪಿಸಿಗಳನ್ನು ವಿತರಣೆ ಮಾಡುವರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಶಾಸಕರು ಆಯಾ ಜಿಲ್ಲೆಗಳಲ್ಲಿ ವಿತರಣೆ ಮಾಡುವರು. ವರ್ಚುಯಲ್‌ ವೇದಿಕೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲ ಸಚಿವರು ಜಿಲ್ಲೆಗಳಿಂದ ಭಾಗಿಯಾಗುವರು ಹಾಗೂ ಕೆಲ ವಿದ್ಯಾರ್ಥಿಗಳು ಕೂಡ ಅಭಿಪ್ರಾಯ ಹಂಚಿಕೊಳ್ಳುವರು ಎಂದು ಡಿಸಿಎಂ ಮಾಹಿತಿ ನೀಡಿದರು.

    ಈ ಕಾರ್ಯಕ್ರಮ ಉನ್ನತ ಶಿಕ್ಷಣ ಇಲಾಖೆಯ ʼವಿಜಯೀಭವʼ, ಜ್ಞಾನನಿಧಿ ಯುಟ್ಯೂಬ್‌ ಚಾನೆಲ್‌ಗಳಲ್ಲಿ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಫೇಸ್‌ಬುಕ್‌ & ಟ್ವಿಟ್ಟರ್‌ ಖಾತೆಗಳಲ್ಲಿ ನೇರ ಪ್ರಸಾರ ಆಗಲಿದೆ. ವೀಕ್ಷಣೆಗೆ ಈ ಲಿಂಕ್‌ ಕ್ಲಿಕ್‌ ಮಾಡಿ..
    https://youtube.com/c/VijayiBhava
    https://youtube.com/c/JnanaNidhiDCE
    https://www.facebook.com/Department-of-Collegiate-Education-100568944804207/
    https://twitter.com/collegiate_of?s=09

    ಟ್ಯಾಬ್ಲೆಟ್‌ ಪಿಸಿಗಳ ವಿತರಣೆ ಬಗ್ಗೆ ಡಿಸಿಎಂ ಡಾ.ಅಶ್ವತ್ಥನಾರಾಯಣ ವಿವರಣೆ ನೀಡಿದ್ದು ಹೀಗೆ.

    *ರಾಜ್ಯದ 430 ಸರಕಾರಿ ಪ್ರಥಮ ದರ್ಜೆ ಕಾಲೇಜು, 87 ಸರಕಾರಿ ಪಾಲಿಟೆಕ್ನಿಕ್ ಹಾಗೂ 14
    ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 1.55 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ಪಿಸಿಗಳನ್ನು ನೀಡಲಾಗುವುದು.

    *ಈ ಯೋಜನೆಗಾಗಿ ರಾಜ್ಯ ಸರಕಾರ 163 ಕೋಟಿ ರೂ. ವೆಚ್ಚ ಮಾಡಿದೆ.

    *ಇದರ ಜತೆಯಲ್ಲೇ ಸರಕಾರಿ ಕಾಲೇಜುಗಳಲ್ಲಿ 2,500 ಸ್ಮಾರ್ಟ್‌ ಕ್ಲಾಸ್‌ ರೂಂಗಳಿಗೆ ಚಾಲನೆ ನೀಡಲಾಗುತ್ತಿದ್ದು, ನಾಳೆಯ ಕಾರ್ಯಕ್ರಮದ ನಿಮಿತ್ತ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸ್ಮಾರ್ಟ್‌ ಕ್ಲಾಸ್‌ ರೂಂನ ಒಂದರ ಪ್ರಾತ್ಯಕ್ಷಿಕೆಯೂ ಇರುತ್ತದೆ.

    *ಯಾವುದೇ ವಿದ್ಯಾರ್ಥಿ ಸಾಮಾಜಿಕ, ಆರ್ಥಿಕ ಅಥವಾ ಇನ್ನಾವುದೇ ಕಾರಣದಿಂದ ಕೋವಿಡ್‌ ಕಾಲದಲ್ಲಿ ಕಲಿಕೆಯಿಂದ ವಂಚಿತರಾಗಬಾರದು ಎನ್ನುವುದೇ ಟ್ಯಾಬ್ಲೆಟ್‌ ಪಿಸಿ ಯೋಜನೆಯ ಮುಖ್ಯ ಉದ್ದೇಶ.

    *ಕೋವಿಡ್‌ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಎಲ್ಲೇ ಇದ್ದರೂ ಈ ಟ್ಯಾಬ್ಲೆಟ್‌ ಪಿಸಿಗಳ ಮೂಲಕ ಎಲ್‌ಎಂಎಸ್‌ ವ್ಯವಸ್ಥೆಯಲ್ಲಿ ಕಲಿಕೆ ಮುಂದುವರಿಸಬಹುದು.

    *ಈಗಾಗಲೇ ಕಲಿಕಾ ನಿರ್ವಹಣಾ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದೆ. ಅದರಂತೆ ವಿದ್ಯಾರ್ಥಿಗಳು ಸುಲಭ ವ್ಯಾಸಂಗಕ್ಕೆ ಈ ಟ್ಯಾಬ್ಲೆಟ್‌ಗಳು ಸಹಾಯಕ. ವಿದ್ಯಾರ್ಥಿಗಳ ಜ್ಞಾನಾರ್ಜನೆ ಮಟ್ಟವನ್ನೂ ಹೆಚ್ಚಿಸಲು ಇವು ಪೂರಕ. ಇಂದಿನ ಜಾಗತಿಕ ಮಟ್ಟದ ಆಧುನಿಕ ಕಲಿಕಾ ಮಟ್ಟಕ್ಕೆ ತಕ್ಕಂತೆ ಕಲಿಕೆಯನ್ನು ನಿರಂತರವಾಗಿ ಮುಂದುವರಿಸುವುದು ಹಾಗೂ ಆನ್‌ಲೈನ್‌ ಮೂಲಕವೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ಗಳು ನೆರವಾಗುತ್ತವೆ.

    *ಈ ಟ್ಯಾಬ್ಲೆಟ್‌ಗಳು ಉತ್ತಮವಾಗಿವೆ ಹಾಗೂ ಕಲಿಕೆಗೆ ಬೇಕಾದ ಎಲ್ಲ ಫೀಚರುಗಳನ್ನು ಒಳಗೊಂಡಿವೆ. ವೈಫೈ, ಸಿಮ್‌ ಬಳಕೆಯಿಂದ ಇವುಗಳಿಗೆ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸಬಹುದು. ವೈಫೈ ಲಭ್ಯತೆ ಇಲ್ಲದ ಕಡೆಗಳಲ್ಲಿ ಸಿಮ್‌ ಬಳಕೆಯ ಮೂಲಕವೇ ಆನ್‌ಲೈನ್‌ ತರಗತಿಯಲ್ಲಿ ಪಾಲ್ಗೊಳ್ಳಬಹುದು.

    *ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ಎಲ್ಲ ವಿದ್ಯಾರ್ಥಿಗಳು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರಾಗಿದ್ದು ಅವರ ಕಲಿಕೆಗೆ ಹೆಗಲು ಕೊಡಬೇಕಾದ ಹೊಣೆಗಾರಿಕೆ ಸರಕಾರದ್ದು. ಇಂಥ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ಗಳನ್ನು ನೀಡುವ ಮೂಲಕ ಗ್ರಾಮೀಣ ಕರ್ನಾಟಕದಲ್ಲಿ ಸರಕಾರಿ-ಖಾಸಗಿ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ನಡುವಿನ ಡಿಜಿಟಲ್‌ ತಾರತಮ್ಯವನ್ನು ಸಂಪೂರ್ಣವಾಗಿ ಅಳಿಸಿ ಹಾಕಿದಂತಾಗಿದೆ.


    ಕೋವಿಡ್‌ ಕಾರಣದಿಂದ ೨೧ನೇ ಶತಮಾನ ಡಿಜಿಟಲ್‌ ಶತಮಾನವೇ ಆಗಿದೆ. ಕಲಿಕೆಯ ಸ್ವರೂಪ ಬದಲಾಗಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ಅತ್ಯುತ್ತಮವಾಗಿ ಸಜ್ಜುಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಟ್ಯಾಬ್ಲೆಟ್‌ಗಳು ಪರಿಣಾಮಕಾರಿ ಪಾತ್ರವನ್ನು ಪೋಷಿಸುತ್ತವೆ.

    ಡಾ.ಸಿ.ಎನ್.ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ


    ಲಸಿಕೆಯೊಂದೆ ಆಪತ್ಪಾಂಧವ; ಕೋವಿಶೀಲ್ಡ್ ಅಂತರ ಮತ್ತೆ ಬದಲಿಸುವ ಅಗತ್ಯಇಲ್ಲ

    ಕೋವಿಡ್ ಲಸಿಕೆ ಕುರಿತು ಪರಿಷ್ಕೃತ ಮಾರ್ಗಸೂಚಿ ಜಾರಿಗೆ ಬಂದ ಮೊದಲ ದಿನ ನಿನ್ನೆ ಸುಮಾರು 81 ಲಕ್ಷ ಲಸಿಕೆ ಡೋಸ್ ಗಳನ್ನು ಹಾಕಿರುವುದು ಭಾರತದ ಲಸಿಕೆ ಹಾಕುವ ಸಾಮರ್ಥ್ಯದ ಸಂಕೇತವಾಗಿದೆ ಎಂದು ನೀತಿ ಆಯೋಗದ [ಆರೋಗ್ಯ] ಸದಸ್ಯ ಡಾ. ವಿ.ಕೆ. ಪಾಲ್ ಹೇಳಿದ್ದಾರೆ. ಅವರು ಡಿಡಿ ನ್ಯೂಸ್ ಜೊತೆ ಮಾತನಾಡಿದರು.

    ಮೊದಲ ದಿನದ ಲಸಿಕಾ ಅಭಿಯಾನದಲ್ಲಿ ಹಾಕಿರುವ ಸಂಖ್ಯೆಯನ್ನು ಗಮನಿಸಿದರೆ ಬರುವ ದಿನಗಳು ಮತ್ತು ವಾರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ಹಾಕುವ ಸಾಮರ್ಥ್ಯವನ್ನು ಇದು ಪ್ರದರ್ಶಿಸುತ್ತವೆ. “ ಇದೆಲ್ಲವೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಮತ್ತು ಸಮನ್ವಯತೆಯಿಂದ ಸಾಧ್ಯವಾಗಲಿದ್ದು, ಈ ಕಾರ್ಯವನ್ನು ಅಭಿಯಾನದ ಮಾದರಿಯಲ್ಲಿ ಕೊಂಡೊಯ್ಯಬೇಕಾಗುತ್ತದೆ “ ಎಂದು ಡಾ. ಪಾಲ್ ಹೇಳಿದರು.

    ಮೂರನೇ ಅಲೆ ಸಂಭವವಿದೆಯೋ ಇಲ್ಲವೋ ಅದು ನಮ್ಮ ಕೈಯಲ್ಲಿದೆ

    ಹೆಚ್ಚಿನ ಸಂಖ್ಯೆಯ ಜನತೆ ಲಸಿಕೆ ಹಾಕಿಸಿಕೊಂಡರೆ ಮತ್ತು ಕೋವಿಡ್ ನ ಸೂಕ್ತ ವರ್ತನೆಯನ್ನು ಅನುಸರಿಸಿದರೆ ಮೂರನೇ ಅಲೆಯನ್ನು ತಡೆಯಬಹುದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಡಾ. ಪಾಲ್ ಹೇಳಿದರು.

    “ಕೋವಿಡ್ ಸೂಕ್ತ ವರ್ತನೆಯನ್ನು ನಾವು ಅನುಸರಿಸಿದರೆ ಏಕೆ ಮೂರನೇ ಅಲೆಯಾದರೂ ಏಕೆ ಬರುತ್ತದೆ ? ಹಲವಾರು ದೇಶಗಳಿಗೆ ಎರಡನೇ ಅಲೆಯೂ ಬರಲಿಲ್ಲ. ನಾವು ಕೋವಿಡ್ ಸೂಕ್ತ ವರ್ತನೆ ಪರಿಪಾಲಿಸಿದರೆ ಈ ಪರಿಸ್ಥಿಯಿಂದ ಮುಂದೆ ಸಾಗಬಹುದು” ಎಂದರು.

    ಬೇಗ ಸಾಮಾನ್ಯ ಸ್ಥಿತಿಗೆ ಮರಳಲು ತ್ವರಿತ ಲಸಿಕಾ ಆಂದೋಲನವೊಂದೆ ದಾರಿ

    ಭಾರತದಲ್ಲಿ ಆರ್ಥಿಕತೆಯನ್ನು ಮುಕ್ತಗೊಳಿಸಲು ಮತ್ತು ಜನ ಜೀಲನ ಸಾಮಾನ್ಯವಾಗಸು ಮೊದಲು ಲಸಿಕೆ ಹಾಕಿಸಿಕೊಳ್ಳುವುದು ಪ್ರಮುಖವಾಗಿದೆ.

    .ನಾವು ದೈನಂದಿನ ಕೆಲಸಕ್ಕೆ ತೆರಳಲು, ನಮ್ಮ ಸಾಮಾಜಿಕ ಜೀವನವನ್ನು ನಿರ್ವಹಿಸಲು, ಶಾಲೆಗಳನ್ನು ತೆರೆಯಲು, ವ್ಯಾಪಾರ, ಆರ್ಥಿಕ ಚಟುವಟಿಕೆ ಬಗ್ಗೆ ಗಮನಕೊಡಲು : ಇದೆಲ್ಲವನ್ನೂ ಮಾಡಲು ತ್ವರಿತ ವೇಗದಲ್ಲಿ ಲಸಿಕೆ ಹಾಕಿಸಿಕೊಂಡಾಗ ಮಾತ್ರ ಸಾಧ್ಯ.

    .ಲಸಿಕೆಗಳು ಜೀವಗಳನ್ನು ರಕ್ಷಿಸುತ್ತವೆ, ಲಸಿಕೆ ಪಡೆಯಲು ಈಗ ಉತ್ತಮ ಸಮಯ.

    ನಮ್ಮ ಲಸಿಕೆಗಳು ಸುರಕ್ಷಿತವಲ್ಲ ಎಂದು ಯೋಚಿಸುವುದು ನಾವು ಮಾಡುವ ದೊಡ್ಡ ತಪ್ಪು ಎಂದು ಡಾ. ಪಾಲ್ ಹೇಳಿದರು. “ ಜಗತ್ತಿನ ಎಲ್ಲಾ ಲಸಿಕೆಗಳನ್ನು ನಮ್ಮ ದೇಶದಲ್ಲಿನ ಲಸಿಕೆಗಳಂತೆಯೇ ತುರ್ತು ಬಳಕೆಗಾಗಿನ ಅಧಿಕಾರವನ್ನು ಅನುಮೋದಿಸಲಾಗಿದೆ. ಸಮಾಜದ ವಿವಿಧ ವರ್ಗಗಳ ಜನತೆ ಇವುಗಳನ್ನು ಪಡೆದಿದ್ದಾರೆ. ಎರಡನೇ ಅಲೆಯನ್ನು ಹಿಮ್ಮೆಟ್ಟಿಸಲಾಗಿದೆ ಮತ್ತು ಕೋವಿಡ್ – 19 ಲಸಿಕೆ ಪಡೆಯಲು ಇದು ಉತ್ತಮ ಸಮಯ” ಎಂದು ಹೇಳಿದರು.

    ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಲಸಿಕೆ ಹಾಕಿದ ಪರಿಣಾಮ ಎರಡನೇ ಅಲೆಯಿಂದ ಅವರನ್ನು ರಕ್ಷಿಸಲಾಗಿದೆ. “ಕೇವಲ ಕೆಲವೇ ಕೆಲವು ಆರೋಗ್ಯ ಕಾರ್ಯಕರ್ತರು ಮಾತ್ರ ಸೋಂಕಿಗೆ ಒಳಗಾಗಿದ್ದಾರೆ. ಇಲ್ಲವಾಗಿದ್ದಲ್ಲಿ ಎರಡನೇ ಅಲೆ ಸಂದರ್ಭದಲ್ಲಿ ನಮ್ಮ ಆಸ್ಪತ್ರೆ ವ್ಯವಸ್ಥೆ ತಾನಾಗಿಯೇ ಕುಸಿದು ಬೀಳುತ್ತಿತ್ತು. ಹೀಗಾಗಿಯೇ ಲಸಿಕೆಯಿಂದ ಜನರನ್ನು ಸೋಂಕಿನಿಂದ ರಕ್ಷಿಸಲು ಸಾಧ್ಯವಾಗುತ್ತಿದೆ ಎಂಬುದನ್ನು ದಯವಿಟ್ಟು ಗಮನಿಸಿ” ಎಂದರು.

    ಭಾರತಕ್ಕೆ ಪ್ರತಿದಿನ 1.25 ಕೋಟಿ ಡೋಸ್ ಲಸಿಕೆ ಹಾಕುವ ಸಾಮರ್ಥ್ಯವಿದೆ

    ಭಾರತದಲ್ಲಿ ಲಸಿಕಾ ಕಾರ್ಯಕ್ರಮ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹೆಗಾರರ ಗುಂಪಿನ ಅಧ‍್ಯಕ್ಷ [ಎನ್.ಟಿ.ಎ.ಜಿ.ಐ], ಡಾ. ಎನ್.ಕೆ. ಅರೋರ ಸಹ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಅವರು ಮಾತನಾಡಿ, ಇಂದು ನೀಡಿದ ಲಸಿಕಾ ಡೋಸ್ ಗಳು ಅತಿ ದೊಡ್ಡ ಸಾಧನೆ. “ ಇಂದು ನಾವೇನು ಮಾಡಿದ್ದೇವೆಯೋ ಅದು ಅತಿ ದೊಡ್ಡ ಸಾಧನೆ, ಪ್ರತಿದಿನ ಒಂದು ಕೋಟಿ ಜನರಿಗೆ ಲಸಿಕೆ ಹಾಕುವುದು ನಮ್ಮ ಗುರಿ. ನಮಗೆ ಪ್ರತಿದಿನ ಸುಲಭವಾಗಿ 1.25 ಕೋಟಿ ಡೋಸ್ ಲಸಿಕೆ ಹಾಕುವ ಸಾಮರ್ಥ್ಯವಿದೆ” ಎಂದರು.

    ಪರಿಷ್ಕೃತ ಮಾರ್ಗಸೂಚಿ ಜಾರಿಗೆ ಬಂದ ಮೊದಲ ದಿನ ನಾವು ಇದನ್ನು ಸಾಧಿಸಿದ್ದೇವೆ ಮತ್ತು ಖಾಸಗಿ ವಲಯದಿಂದ ಉತ್ತಮ ಬೆಂಬಲ ದೊರೆತಲ್ಲಿ ವಿಶೇಷವಾಗಿ ಈ ಗುರಿ ಸಾಧಿಸಬಹುದು ಎಂದು ಡಾ. ಅರೋರ ಹೇಳಿದರು.

    ಈ ಹಿಂದೆಯೂ ಭಾರತ ಹೇಗೆ ಯಶಸ್ವಿಯಾಗಿದೆ ಎನ್ನುವ ಕುರಿತು ಮಾತನಾಡಿದ ಡಾ. ಅರೋರ, “ಇದು ಹಿಂದೆಂದೂ ಕಂಡಿದ್ದೇನು ಅಲ್ಲ. ನಾವು ಪೊಲೀಯೋ ಲಸಿಕೆಯನ್ನು 17 ಕೋಟಿ ಜನರಿಗೆ ಹಾಕಿದ್ದೇವೆ. ಭಾರತ ಏನಾದರೂ ಸಾಧಿಸಬೇಕು ಎಂದು ಬಯಸಿದರೆ ಅದನ್ನು ಸಾಧಿಸಿಯೇ ತೀರುತ್ತದೆ.” ಎಂದರು.

    ಸಾರ್ವಜನಿಕ ಮತ್ತು ಖಾಸಗಿ ವಲಯ ಕೈಜೋಡಿಸಿದರೆ ಉತ್ತಮ ಕೆಲಸ ಮಾಡಬಹುದು ಮತ್ತು ದೇಶದ ಸಮಸ್ಯೆಗಳನ್ನು ಬಗೆಹರಿಸಬಹುದು ಎನ್ನುವುದಕ್ಕೆ ಭಾರತದ ಕೋವಿಡ್ – 19 ಲಸಿಕೆ ಅಭಿಯಾನ ಒಂದು ಪ್ರಮುಖ ಉದಾಹರಣೆಯಗಿದೆ ಎಂದು ಅಭಿಪ್ರಾಯಪಟ್ಟರು.

    ಲಸಿಕೆ ಕುರಿತ ಹಿಂಜರಿಕೆ ತೊಡೆದುಹಾಕಲು ಸಾರ್ವಜನಿಕ ಪಾಲ್ಗೊಳ್ಳುವಿಕೆ ಮತ್ತು ಜಾಗೃತಿ ಅಗತ್ಯ

    ಲಸಿಕೆ ಕುರಿತ ತಪ್ಪು ಕಲ್ಪನೆ ಮತ್ತು ಊಹಾಪೋಹಗಳನ್ನು ನಿಯಂತ್ರಿಸಲು ಜನರ ಪಾಲ್ಗೊಳ್ಳುವಿಕೆ ಮತ್ತು ಜಾಗೃತಿ ಅತ್ಯಂತ ಮಹತ್ವ ಪಡೆದಿದೆ ಎಂದು ಎನ್.ಟಿ.ಎ.ಜಿ.ಐ ಅಧ‍್ಯಕ್ಷರು ಪ್ರತಿಪಾದಿಸಿದರು.

    “ಲಸಿಕೆ ಕುರಿತ ಭೀತಿ ನಿರ್ಮೂಲನೆ ಮಾಡಲು ಜನರ ಸಹಭಾಗಿತ್ವ ಮತ್ತು ಜನ ಜಾಗೃತಿ ಅತ್ಯಂತ ಅಗತ್ಯವಾಗಿದೆ. ಅಂತಿಮವಾಗಿ ಇದು ಜನರ ಕೈಯಲ್ಲಿದ್ದು, ಜನತೆ ಮುಂದೆ ಬರಬೇಕು ಮತ್ತು ಲಸಿಕೆಯನ್ನು ಹಾಕಿಸಿಕೊಳ್ಳಬೇಕು” ಎಂದರು.

    ಲಸಿಕಾಕರಣ ಬಗ್ಗೆ ಅರಿವು ಹೆಚ್ಚಿಸಲು ಸಿದ್ಧತೆಗಳನ್ನು ಮಾಡಬೇಕು ಮತ್ತು ಲಸಿಕೆ ಕುರಿತ ಹಿಂಜರಿಕೆಯನ್ನು ತೊಡೆದುಹಾಕಲು ತಳಮಟ್ಟದಲ್ಲಿ ಆಶಾ ಮತ್ತು ಮಂಚೂಣಿ ಕಾರ್ಯಕರ್ತರು ಈಗಾಗಲೇ ಕೆಲಸ ಆರಂಭಿಸಿದ್ದಾರೆ ಎಂದು ಹೇಳಿದರು.

    .ಲಸಿಕೆ ಪೂರೈಕೆಗೆ ಯಾವುದೇ ಸಮಸ್ಯೆಯಾಗದು

    ಲಸಿಕೆ ಲಭ್ಯತೆ ಕುರಿತಂತೆ ಯಾವುದೇ ಸಮಸ್ಯೆಯಾಗದು ಎಂದು ಅಧ್ಯಕ್ಷರು ಆಶ್ವಾಸನೆ ನೀಡಿದ್ದಾರೆ. “ ಮುಂದಿನ ತಿಂಗಳು 20 ರಿಂದ 22 ಕೋಟಿ ಲಸಿಕೆ ದೊರೆಯಲಿದೆ.” ಎಂದರು. ದೇಶದ ಪ್ರತಿಯೊಂದು ಮೂಲೆ ಮೂಲೆಗೆ, ಗುಡ್ಡಗಾಡು ಪ್ರದೇಶ, ಬುಡಕಟ್ಟು ಮತ್ತು ಬಹಳ ವಿರಳ ಜನಸಂಖ್ಯೆ ಹೊಂದಿರುವ ಪ್ರದೇಶಗಳಿಗೂ ಲಸಿಕೆ ದೊರೆಯುವಂತೆ ಮಾಡಲಾಗಿದ್ದು, ಆರೋಗ್ಯ ಮೂಲ ಸೌಕರ್ಯ ಉತ್ತಮವಾಗಿ ವಿಸ್ತರಿಸಿದೆ ಎಂದು ಡಾ. ಅರೋರ ಹೇಳಿದರು.

    ಪ್ರಸ್ತುತ ಕೋವಿಶೀಲ್ಡ್ ಲಸಿಕೆಯ ಡೋಸೆಜ್ ಗಳ ನಡುವಿನ ಅವಧಿಯಲ್ಲಿ ಬದಲಾವಣೆ ಅಗತ್ಯವಿಲ್ಲ

    ಕೋವಿಶೀಲ್ಡ್ ಲಸಿಕೆಯ ಡೋಸೆಜ್ ಗಳ ನಡುವಿನ ಅಂತರದ ಅವಧಿಯನ್ನು ಬದಲಾಯಿಸುವ ಕುರಿತಾದ ಪ್ರಶ್ನೆಗೆ ಅಧ್ಯಕ್ಷರು ಪ್ರತಿಕ್ರಿಯೆ ನೀಡಿ, ಮಧ್ಯಂತರ ಅವಧಿಯನ್ನು ಬದಲಾಯಿಸಲು ಈ ಸಮಯದಲ್ಲಿ ಯಾವುದೇ ಅಗತ್ಯವಿಲ್ಲ ಎಂದು ಹೇಳಿದರು.

    “ನಾವು ರಾಷ್ಟ್ರೀಯ ಲಸಿಕಾ ಜಾಡುಪತ್ತೆ ಕುರಿತ ವ್ಯವಸ್ಥೆಯಿಂದ ದತ್ತಾಂಶ ಸಂಗ್ರಹಿಸುತ್ತಿದ್ದೇವೆ ಮತ್ತು ಲಸಿಕೆಯ ಪರಿಣಾಮಕಾರಿತ್ವ, ಡೋಸ್ ಗಳ ಮಧ್ಯಂತರ ಅವಧಿ, ಪ್ರದೇಶವಾರು ಪರಿಣಾಮ, ರೂಪಾಂತರ ಕುರಿತು ಸೂಕ್ತ ಸಮಯದಲ್ಲಿ ಮೌಲ್ಯಮಾಪನ ಮಾಡಲಾಗುತ್ತಿದ್ದು, ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದರು.

    ಲಸಿಕೆಯ ಪ್ರತಿಯೊಂದು ಡೋಸ್ ನಿಂದ ಜನತೆ ಗರಿಷ್ಠ ಲಾಭ ಪಡೆಯಬೇಕು ಎನ್ನುವುದು ನಮ್ಮ ಮೂಲ ತತ್ವವಾಗಿದೆ. ಪ್ರಸ್ತುತ ನಮ್ಮ ಡೋಸೆಜ್ ನಿಂದ ಹೆಚ್ಚಿನ ಲಾಭ ಪಡೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ.” ಎಂದರು.


    .

    ಮತ್ತೆ ಬಿಗ್ ಬಾಸ್

    ಕೋವಿಡ್ ಕಾರಣದಿಂದ ಇದ್ದಕ್ಕಿದ್ದಂತೆ ನಿಂತಿದ್ದ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನಾಳೆ ಬುಧವಾರ ಸಂಜೆ 6ಕ್ಕೆ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ. ಈ ಬಗ್ಗೆ ಕಲರ್ಸ್ ಕನ್ನಡ ಮತ್ತು ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

    ಸುದೀಪ್ this is new this is fun ಎಂದು ತಮ್ಮ ಹೊಸ ಲುಕ್ ನ ಫೋಟೋ ಟ್ವೀಟ್ ಮಾಡಿದ್ದಾರೆ. ಸ್ಪರ್ಧಿಗಳು ತಮ್ಮ ಸೂಟ್ ಕೇಸ್ ಪ್ಯಾಕ್ ಮಾಡುತ್ತಿರುವ ಪ್ರೊಮೋಗಳು ಜನಪ್ರಿಯತೆ ಪಡೆದಿವೆ.

    ಕಲರ್ಸ ಕನ್ನಡದ ಬಿಸ್ನೆಸ್ ಹೆಡ್ ತಮ್ಮ ಫೇಸ್ ಬುಕ್ ಲ್ಲಿ ಎರಡನೇ ಇನ್ನಿಂಗ್ಸ್ ಗೆ ಸಿದ್ಧವಾಗಿರುವ ಬಿಗ್ ಬಾಸ್ ಮನೆಯ ಕಲರ್ ಫುಲ್ ಫೋಟ್ ಹಾಕಿದ್ದಾರೆ.

    ಸ್ಪರ್ಧಿಗಳು ಈಗಾಗಲೇ ಹೊರಗೆ ಒಮ್ಮೆ ಬಂದಿರುವದರಿಂದ ಅವರ ತಪ್ಪುಗಳು, ಜನರ ಅಭಿಪ್ರಾಯಗಳು ಗೊತ್ತಾಗಿರುತ್ತದೆ. ಈಗ ತಮ್ಮ ಆಟದ ಸ್ಟ್ರಾಟೆಜಿ ಯನ್ನು ಹೇಗೆ ಬದಲಿಸುತ್ತಾರೆ ಎಂಬುದೆ ಸದ್ಯದ ಕುತೂಹಲ.

    ಶಾಲೆ ಆರಂಭಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟ ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ: ಗಂಭೀರವಾಗಿ ಪರಿಶೀಲನೆ ಮಾಡಲಿದೆ ಸರಕಾರ

    ಕೊರೊನಾ ಕಾರಣ ಬಂದ್ ಆಗಿದ್ದ ಶಾಲೆಗಳನ್ನು ಆರಂಭಿಸುವುದಕ್ಕೆ ತಜ್ಞರು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸಲು ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರು, ವೈದ್ಯರ ಉನ್ನತ ಸಮಿತಿ ಸಲಹೆ ನೀಡಿದೆ.

    ಬೆಂಗಳೂರಿನಲ್ಲಿ ಮಂಗಳವಾರ ಡಾ.ದೇವಿಪ್ರಸಾದ್ ಶೆಟ್ಟಿ ಅವರು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದರು.

    ತಜ್ಞರ ವರದಿಯ ಶಿಫಾರಸು

    • ಸಮ, ಬೆಸ ಮಾದರಿಯಲ್ಲಿ ಶಾಲಾ ತರಗತಿಗಳನ್ನು ಆರಂಭಿಸುವುದಕ್ಕೆ ಸಲಹೆ ನೀಡಿರುವ ತಜ್ಞರು, ಮೊದಲ ಹಂತದಲ್ಲಿ ಕಾಲೇಜುಗಳನ್ನು ಆರಂಭಿಸುವುದು.
    • ಎರಡನೇ ಹಂತದಲ್ಲಿ 7ರಿಂದ 10ನೇ ತರಗತಿ, ಮೂರನೇ ಹಂತದಲ್ಲಿ 5ರಿಂದ 7ನೇ ತರಗತಿ ಆರಂಭಿಸಬೇಕು.
    • ಮಕ್ಕಳಿಗೆ ಮಾಸ್ಕ್ ಕಡ್ಡಾಯ. ಸರಕಾರವೇ ಮಾಸ್ಕ್ ನೀಡಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
    • ಕಡ್ಡಾಯವಾಗಿ ಶಿಕ್ಷಕರು, ಶಾಲೆಯ ಇತರೆ ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳಬೇಕು. ಶಾಲಾ ಆವರಣಕ್ಕೆ ಅನ್ಯರಿಗೆ ಪ್ರವೇಶ ನಿರ್ಬಂಧಿಸಬೇಕು. ಆರೋಗ್ಯವಂತ ಮಕ್ಕಳು ಮಾತ್ರ ಶಾಲೆಗೆ ಬರಬೇಕು.
    • ವಾರಕ್ಕೊಮ್ಮೆ ಸ್ಥಳೀಯ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಬೇಕು. ಮಕ್ಕಳಿಗೆ ಸರಕಾರವೇ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.
    • ಕೊರೊನಾ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಶಾಲಾ ಆವರಣ, ಸುತ್ತಮುತ್ತ ತಿನಿಸು ಮಾರಾಟವನ್ನು ನಿಷೇಧಿಸಬೇಕು.
    • ಪೋಷಕರು ಸಮ್ಮತಿಸಿದರೆ ಮಕ್ಕಳನ್ನ ಶಾಲೆಗೆ ಕರೆತರುವುದು ಬೇಡ. ಮಕ್ಕಳ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ.
    • ಆನ್‌ಲೈನ್ ಮತ್ತು ಆಫ್‌ಲೈನ್ ಎರಡು ಮಾದರಿಯ ಕಲಿಕೆಗೆ ಅವಕಾಶ ನೀಡಬಹುದು.
    • ಮಕ್ಕಳಿಗೆ ಸರಕಾರದಿಂದ ಪೌಷ್ಟಿಕ ಆಹಾರ ನೀಡಬೇಕು ಹಾಗೂ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಟಗಳನ್ನು ಆಡಿಸಬೇಕು. ಊಟವನ್ನ ಸ್ಥಳೀಯ ಮಟ್ಟದಲ್ಲೇ ನೀಡಬೇಕು.
    • ಶಾಲೆಗಳಲ್ಲಿ ದೈಹಿಕ ಅಂತರಕ್ಕೆ ಮೊದಲ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳ ಒಬ್ಬರ ವಸ್ತುಗಳು ಒಬ್ಬರು ಮುಟ್ಟದಂತೆ ನಿಗಾ ವಹಿಸಬೇಕು.
    • ದಿನದಲ್ಲಿ 2ರಿಂದ 3 ಗಂಟೆ ಮಾತ್ರ ತರಗತಿ ನಡೆಯಬೇಕು.
    • 12ರಿಂದ 18 ವರ್ಷದ ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ನೀಡುವುದಕ್ಕೆ ಅನುಮೋದನೆ ಕೊಡುವುದು ಉತ್ತಮ.
    • ಶಿಫಾರಸು ಮಾಡಿರುವ ಎಲ್ಲ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಇಲ್ಲದಿದ್ದರೆ ಮಕ್ಕಳಿಗೆ ಹೆಚ್ಚು ಅಪಾಯ ತಪ್ಪಿದ್ದಲ್ಲ.
    • ರಾಜ್ಯದಲ್ಲಿ 18 ವರ್ಷದೊಳಗಿನ 2.38 ಕೋಟಿ ಮಕ್ಕಳಿದ್ದು, ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಸೋಂಕು ಹರಡುತ್ತದೆ. ಮೂರನೇ ಅಲೆಯಲ್ಲಿ 3.40 ಲಕ್ಷ ಮಕ್ಕಳಿಗೆ ಸೋಂಕು ಹರಡುತ್ತದೆ ಎಂದು ಅಂದಾಜಿಸಲಾಗಿದೆ. ಮಕ್ಕಳಿಗೆ ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು.
    • *ಸುಮಾರು 6,801 ಐಸಿಯು, ಹೆಚ್​ಡಿಯು, ವೆಂಟಿಲೇಟರ್ ಬೆಡ್ 23,804 ಸಾಮಾನ್ಯ ಬೆಡ್‌ಗಳು ಬೇಕಾಗಬಹುದು. ಕೊವಿಡ್ ಕೇರ್ ಸೆಂಟರ್‌ಗಳಲ್ಲಿ 43,000 ಬೆಡ್ ಅಗತ್ಯವಿದೆ ಎಂದು ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಸಮಿತಿ ಒತ್ತಿ ಹೇಳಿದೆ.

    ಶಾಲೆ ಪುನಾರಂಭದ ಬಗ್ಗೆ ಏನೂ ಹೇಳಲಾಗದು: ಡಾ.ದೇವಿಶೆಟ್ಟಿ

    ಶಾಲೆಗಳ ಆರಂಭಕ್ಕೆ ಸಂಬಂಧಿಸಿದಂತೆ ವರಿಯಲ್ಲಿ ಕೆಲ ಮಹತ್ವದ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ. ಆದರೆ, ಆ ಬಗ್ಗೆ ಬಹಿರಂಗವಾಗಿ ಹೇಳಲಾರೆ. ಮುಖ್ಯಮಂತ್ರಿಗಳೇ ಮಾಹಿತಿ ನೀಡಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಡಾ.ದೇವಿಶೆಟ್ಟಿ ಮಾಧ್ಯಮಗಳ ಮುಂದೆ ಹೇಳಿದರು.

    ಈ ಹೊತ್ತಿನ ಸುದ್ದಿ

    ದೇಶ

    ಒಂದೇ ದಿನ 75 ಲಕ್ಷ ಡೋಸ್ ಲಸಿಕೆ

    ದೇಶ

    ಸಿಎಂ ಯಾರಾಗಬೇಕು ಅನ್ನುವುದನನ್ನು ನಿರ್ಧಾರ ಮಾಡೋರು ದೆಹಲಿ ನಾಯಕರು ಎಂದ ಡಿಕೆಶಿ

    ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗುಂಪಿಲ್ಲ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನೇ ಹೊರತು, ಯಾವುದೇ ಗುಂಪಿನ ನಾಯಕನಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ದೆಹಲಿಯಲ್ಲಿ ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ.

    ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ. ನನ್ನದು ಯಾವ ಗುಂಪು ಇಲ್ಲ, ಬೇರೆಯವರ ಗುಂಪೂ ಇಲ್ಲ. ಇರುವುದು ಒಂದೇ ಗುಂಪು, ಅದು ಕಾಂಗ್ರೆಸ್. ಎಲ್ಲರೂ ಇದೇ ಹಾದಿಯಲ್ಲಿ ಸಾಗುತ್ತಾರೆ. ಸಣ್ಣ-ಪುಟ್ಟ ವಿಚಾರಗಳನ್ನು ನಾನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ನನ್ನ ಹೆಸರನ್ನು ಯಾರೂ ಹೇಳಬಾರದು. ಸದ್ಯ ಮುಂಬರುವ ಚುನಾವಣೆಗಳಲ್ಲಿ ಗೆಲ್ಲಬೇಕು ಅದೇ ನಮ್ಮ ಗುರಿ ಎಂದು ಅವರು ಹೇಳಿದರು.

    ಈಗ ಸಿಎಂ ಸ್ಥಾನ ಖಾಲಿ ಇಲ್ಲ

    ಸಿಎಂ ಯಾರಾಗಬೇಕು ಎಂದು ತೀರ್ಮಾನ ಮಾಡೋರು ದೆಹಲಿ ನಾಯಕರು. ಸಿಎಂ ಸ್ಥಾನದ ಬಗ್ಗೆ ಬಿಜೆಪಿಯವರು ಮಾತನಾಡಬೇಕು. ನಮ್ಮ ಪಕ್ಷದವರಲ್ಲ. ನಾನು ಪ್ರತಿಜ್ಞೆ ಸ್ವೀಕಾರ ಮಾಡುವಾಗ ಸ್ಪಷ್ಟವಾಗಿ ಹೇಳಿದ್ದೆ, ವ್ಯಕ್ತಿ ಪೂಜೆಗೆ ಅವಕಾಶವಿಲ್ಲ, ಪಕ್ಷ ಪೂಜೆಗೆ ಮಾತ್ರ ಅವಕಾಶ ಎಂದು. ಆ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಇತ್ತೀಚೆಗೆ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆ ಬಗ್ಗೆ ಕೇಳುತ್ತಿರುವ ವಾದ ವಿವಾದಗಳಿಗೆ ಕುರಿತಂತೆ ಅವರು ಪ್ರತಿಕ್ರಿಯಿಸಿದರು.

    ನಾನು ಈ ಹಿಂದೆ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ನನಗೆ ಶೇ. 95 ರಷ್ಟು ಸಹಕಾರ ಸಿಗುತ್ತಿದೆ. ಉಳಿದ ಶೇ. 5 ರಷ್ಟು ಜನ ಕೊರೋನಾ ವಿಚಾರವಾಗಿ ಗಾಬರಿಯಾಗಿದ್ದಾರೆ. ಮನೆಯಿಂದ ಈಚೆ ಬರಲು ಹೆದರುತ್ತಿದ್ದಾರೆ. ಖರ್ಗೆ ಅವರು, ಸಿದ್ದರಾಮಯ್ಯ ಅವರು, ಹರಿಪ್ರಸಾದ್, ದೇಶಪಾಂಡೆ ಅವರು, ಹೆಚ್.ಕೆ ಪಾಟೀಲ್, ಕೆ.ಎಚ್ ಮುನಿಯಪ್ಪ ಅವರು ಹೇಳಿದ ಕಡೆಯೆಲ್ಲ ಹೋಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆ ಮೂಲಕ ಎಲ್ಲ ಹಿರಿಯ ನಾಯಕರು ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಕೊಟ್ಯಂತರ ರೂಪಾಯಿ ಸ್ವಂತ ಹಣ ಕೊಟ್ಟು ಲಸಿಕೆ ಹಾಕಿಸುತ್ತಿದ್ದಾರೆ. ಇದಕ್ಕಿಂತ ಇನ್ನೇನು ಸಹಕಾರ ಬೇಕು.

    ಮೈಸೂರು ಮೇಯರ್ ವಿಚಾರದ ಜವಾಬ್ದಾರಿಯನ್ನು ಕಾರ್ಯಾಧ್ಯಕ್ಷರಾದ ಧೃವನಾರಾಯಣ್ ಹಾಗೂ ಸ್ಫಳೀಯ ಅಧ್ಯಕ್ಷರಿಗೆ ನೀಡಿದ್ದೇನೆ. ಸ್ಥಳೀಯ ಪರಿಸ್ಥಿತಿ ಅವಲೋಕಿಸಿ ತೀರ್ಮಾನಿಸಲು ಹೇಳಿದ್ದೇನೆ ಎಂದರು.

    ರಾಜೀನಾಮೆ ನೀಡುವ ಬ್ಲಾಕ್ ಮೇಲ್ ಗಳು ನಡೆಯುತ್ತಲೇ ಇವೆ

    ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುತ್ತಾರೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯಲ್ಲಿ ರಾಜೀನಾಮೆ ನೀಡುವ ಬ್ಲಾಕ್ ಮೇಲ್ ಗಳು ನಡೆಯುತ್ತಲೇ ಇವೆ. ನಾನ್ಯಾಕೆ ಅವರ ವಿಚಾರ ಮಾತನಾಡಲಿ. ಅವರು ಪಕ್ಷಕ್ಕೆ ಬರುವ ಅರ್ಜಿ ಬಂದಾಗ ಆ ಬಗ್ಗೆ ಮಾತನಾಡೋಣ ಎಂದರು.

    ಬಿಜೆಪಿ ಶಾಸಕರೇ ಮಾಡಿರುವ ಭ್ರಷ್ಟಾಚಾರ ಆರೋಪಗಳ ಕುರಿತು ಚರ್ಚೆ ಮಾಡಲು ವರ್ಚುವಲ್ ಸಭೆ ಕರೆಯಿರಿ ಅಂತಾ ಅಗ್ರಹಿಸಿದ್ದೇವೆ. ಈ ವಿಚಾರವಾಗಿ ತನಿಖೆ ಮಾಡಲು ಜಂಟಿ ಸದನ ಸಮಿತಿ ರಚಿಸಲು ಒತ್ತಾಯಿಸಿದ್ದೇವೆ. ನೀರಾವರಿ ಖಾತೆ ಇಟ್ಟುಕೊಂಡಿರುವ ಮುಖ್ಯಮಂತ್ರಿಗಳು ಈ ಆರೋಪಗಳಿಗೆ ಉತ್ತರ ನೀಡದೇ, ಇವುಗಳನ್ನು ನಿಜ ಎಂದು ಒಪ್ಪಿಕೊಂಡಿದ್ದಾರೆ. ಕೊರೋನಾ ಪರಿಸ್ಥಿತಿಯಿಂದಾಗಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ದೊಡ್ಡಮಟ್ಟದ ಹೋರಾಟ ಮಾಡಲು ಆಗುತ್ತಿಲ್ಲ.

    ಸಿದ್ದರಾಮಯ್ಯ ಅವರ ಕಾಲದಲ್ಲಿ ಬಂದ ವಿಚಾರಗಳ ಬಗ್ಗೆ ಬಿಜೆಪಿಯವರ ಹೋರಾಟ ನೋಡಿದ್ದೇವೆ. ಕುಮಾರಸ್ವಾಮಿ ಅವರ ಸರ್ಕಾರ ಸಮಯದಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಯಡಿಯೂರಪ್ಪನವರು ಸಿಬಿಐಗೆ ಕೊಟ್ಟರು. ಈಗ ಅವರದೇ ಸರ್ಕಾರ, ಅವರದೇ ಪಕ್ಷದ ಶಾಸಕರು ಆರೋಪ ಮಾಡಿದ್ದು, ಈಗಲೂ ಸಿಬಿಐಗೆ ನೀಡಲಿ. ಹಳೇ ಪ್ರಕರಣದಲ್ಲಿ ಸಿಬಿಐನವರು ನಮ್ಮ ನಾಯಕರಾದ ಬ್ರಿಜೇಶ್ ಕಾಳಪ್ಪ ಅವರಿಗೆ ನೋಟೀಸ್ ಕೊಟ್ಟು ವಿಚಾರಣೆ ನಡೆಸಿದ್ದರು. ಪಕ್ಷದ ವಕ್ತಾರರಿಗೂ ಕದ್ದಾಲಿಕೆಗೂ ಏನು ಸಂಬಂಧ? ಎಂದು ಶಿವಕುಮಾರ್ ಪ್ರಶ್ನೆ ಮಾಡಿದರು.

    ನಾನು ಕೆಪಿಸಿಸಿ ಅಧ್ಯಕ್ಷನಾಗಿ ಪ್ರತಿಜ್ಞೆ ಸ್ವೀಕರಿಸಿದ ನಂತರ ಪಕ್ಷದ ದಿಲ್ಲಿ ನಾಯಕರನ್ನು ಅಧಿಕೃತವಾಗಿ ಭೇಟಿ ಮಾಡಿರಲಿಲ್ಲ. ಹೀಗಾಗಿ ಬಂದಿದ್ದೇನೆ. ಸೋನಿಯಾ ಗಾಂಧಿ ಅವರಿಗೆ ಆರೋಗ್ಯ ಸರಿ ಇಲ್ಲ. ಕೋರೋನಾ ಸಮಯದಲ್ಲಿ ದೂರದಿಂದಲೇ ಮಾತಕತೆ ಮಾಡಬೇಕಿದ್ದು, ಹೀಗಾಗಿ ಅವರ ಜತೆ ದೂರವಾಣಿಯಲ್ಲಿ ಮಾತನಾಡಲಾಗುವುದು. ರಾಹುಲ್ ಗಾಂಧಿ ಅವರ ಭೇಟಿಗೂ ಸಮಯ ಕೇಳಿದ್ದು, ಅವರು ಬಿಡುವಿದ್ದರೆ ಭೇಟಿ ಮಾಡುವೆ. ಪಕ್ಷದ ಕೆಲ ಪದಾಧಿಕಾರಿಗಳ ಬದಲಾವಣೆ ಆಗಬೇಕಿದ್ದು ಆ ಬಗ್ಗೆ ಪ್ರಧಾನ ಕಾರ್ಯದರ್ಶಿಗಳ ನಡುವೆ ಚರ್ಚಿಸುವೆ ಎಂದರು.

    ವೈರಸ್ ನ ಕೈಗೆ ಮನಸ್ಸನ್ನು ಕೊಡಬೇಡಿ


    ಕೋವಿಡ್ ಎರಡನೇ ಅಲೆ ಕಡಿಮೆಯಾಗುತ್ತಿದೆ.ಈ ಅಲೆಯನ್ನು ಅನೇಕರು ಮೆಟ್ಟಿನಿಂತು ಎದುರಿಸಿ ಬಂದಿದ್ದಾರೆ. ಗೆದ್ದವರ ಪಾಸಿಟಿವ್ ಕಥೆಗಳನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ. ಈ ಗೆಲವು ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ. ಕರೋನಾ ಒಂದೇ ಅಲ್ಲ ಯಾವ ರೋಗ ಬಂದರು ಧೈರ್ಯದಿಂದ ಎದುರಿಸಿದಾಗ ಜಯಿಸಲು ಸಾಧ್ಯ.


    ಪ್ರಾರಂಭಿಕ ಹಂತದಲ್ಲೇ ಎಚ್ಚೆತ್ತುಕೊಳ್ಳಬೇಕು! ಹೋರಾಡಬೇಕು! ಗೆಲ್ಲಬೇಕು!

    ‘ತಲೆನೋವು ಇದೆ, ಸ್ವಲ್ಪ ಜ್ವರ ಇದೇನ್  ಮಹಾ!’  ಎನ್ನುತ್ತಲೇ ಕಾಫಿ ಪುಡಿ ಡಬ್ಬಿ ತೆರೆದರೆ ಆ ದಿನ  ಘಮಬರಲಿಲ್ಲ, ನೋಡೋಣ ಎನ್ನುತ್ತಲೇ ಊದುಬತ್ತಿ ಸುವಾಸನೆ ತೆಗೆದುಕೊಳ್ಳಹೋದರೆ ಅದೂ  ತಿಳಿಯಲಿಲ್ಲ.
    ದಡಬಡಿಸಿ ನೀಲಗಿರಿ ಎಣ್ಣೆಯ ಪರಿಮಳ ತೆಗೆದುಕೊಳ್ಳ ಹೋದರೆ ಅದೂ ತಿಳಿಯದಾದಾಗ ದಡಬಡಿಸಿ  ಜಿಲ್ಲಾಸ್ಪತ್ರೆಗೆ ಹೋಗಿ ಗಂಟಲು ದ್ರವ ಪರೀಕ್ಷೆಗೆ ಕೊಟ್ಟಿದ್ದಾಯಿತು. ಸ್ವ್ಯಾಬ್ ಕೊಟ್ಟಲ್ಲಿಂದ ಮನಸ್ಸಿನಲ್ಲಿ ಏನೋ ತಳಮಳ ತಳಮಳ   ವರದಿ  ಪಾಸಿಟಿವ್ ಬರುತ್ತದೆಯೋ…? ನೆಗೆಟಿವ್ ಬರತ್ತದೆಯೋ…?  ಏನೋ ಎಂಬ   ತಹತಹವಿತ್ತು.

    ಅಂತೂ  ಸ್ವ್ಯಾಬ್ ಕೊಟ್ಟು ಮೂರನೆಯ  ದಿನಾಂತ್ಯಕ್ಕೆ  ಕರೆ ಬಂದೇ ಬಿಟ್ಟಿತು. ಆ ನಂಬರ್ ಅಪರಿಚಿತ ಅನ್ನಿಸಿತು. ಕರೆ ಸ್ವೀಕರಿಸಿದರೆ  ಆ ಧ್ವನಿ ಮತ್ತೂ ಅಪರಿಚಿತವಾಗಿತ್ತು. ಆದರೆ ಸೌಮ್ಯವಾಗಿತ್ತು.  ಮೇ ಎರಡನೇ ವಾರದಲ್ಲಿ ಕೊರೊನಾ   ಪಾಸಿಟಿವ್ ಸಂಖ್ಯೆಯಂತೂ ಮಿತಿಮೀರಿತ್ತು.  “ನಾವು ಹಿಮ್ಸ್ನಿಂದ ಕರೆ ಮಾಡುತ್ತಿದ್ದೇವೆ. ನೀವು ಸ್ವ್ಯಾಬ್ ಕೊಟ್ಟಿದ್ದು  ಪಾಸಿಟಿವ್ ಆಗಿದೆ, ಆದರೆ  ಗಾಬರಿಯಾಗುವುದು ಬೇಡ!” ಎಂದರು. ಅನಂತರ ಅವರಾಡಿದ ಮಾತುಗಳು ಏನೂ ಕೇಳಿಸಲೇ ಇಲ್ಲ ಭಯವಾಗಿತ್ತು, ತಲೆ ತಿರುಗಿ ಸುಸ್ತಾದಂತೆ ಅನ್ನಿಸಿತು .   ಸಾವರಿಸಿಕೊಂಡು  ಮತ್ತೆ ಅದೇ ಸಂಖ್ಯೆಗೆ ಕರೆ ಮಾಡಿದರೆ  ಮತ್ತೆ ಸೌಮ್ಯವಾಗಿಯೇ   “ಹಿಮ್ಸ್ನಿಂದ-Hassan Institute of Medical Sciences – ಕೋವಿಡ್ ಕಿಟ್ ಪಡೆಯಿರಿ ಐಸೋಲೇಟ್ ಆಗಿ ಮಾಸ್ಕ್ ಹಾಕಿ. ನಿಮ್ಮ ಮನೆಯವರೆಲ್ಲರ ಸ್ವ್ಯಾಬ್  ಟೆಸ್ಟ್ಗೆ ಕೊಡಿ” ಎಂದು ಹೇಳಿದರು . 

    ಗಂಟಲು ದ್ರವ ಕೊಟ್ಟ ನಂತರ   ನನ್ನ ಸುಪ್ತ ಮನಸ್ಸು  ಪರಿಸ್ಥಿತಿ ಎದುರಿಸಲು ತಯಾರಾಗಿದ್ದಂತೆ ಅನ್ನಿಸಿತು .   ಮತ್ತೆ ಮನೆ ಒಳಗೆ ಹೋಗಲೇ ಇಲ್ಲ ಮನೆಯ ಹೊರ ಕೊಠಡಿಯಲ್ಲಿ ಹೋಗಿ ಕುಳಿತೆ ಇದರ ನಡುವೆ ಮತ್ತೆ ಮತ್ತೆ ನೀವು ರೋಗಿ ಸಂಖ್ಯೆ ——- ಎಂದು ಐದಾರು ಸಂದೇಶಗಳು ಒಟ್ಟಿಗೆ ಬಂದವು.  ಮನೆಯವರು, ಮಗಳು “ಇದೇನ್ ಮಹಾ ಎಲ್ಲರಿಗೂ ಆಗುವಂಥದ್ದೆ  ನಾಳೆ ನಾವುಗಳು ಟೆಸ್ಟ್ಗೆ ಕೊಟ್ಟರೂ  ಪಾಸಿಟಿವ್ ಬರುತ್ತದೆ”  ಎನ್ನುತ್ತ ಧೈರ್ಯ ಹೇಳಿದರು. ಅಂತೂ ನನ್ನ  ಅಧಿಕೃತ ಕೊರೊನಾ ವಾಸ ಪ್ರಾರಂಭವಾಯಿತು. 

    ಮರುದಿನ ಮನೆಯವರು   ನನ್ನ ಕೋವಿಡ್ ಕಿಟ್ ಪಡೆಯಹೋದರೆ “ಇಲ್ಲ  ರೋಗಿಯೇ ಬರಬೇಕು “ ಎಂದು ಹಿಮ್ಸ್ನವರು ತಾಕೀತು ಮಾಡಿದಾಗ ಅಕ್ಷರಷಃ ಭಯವಾಯಿತು ಆದರೆ ಹಿಮ್ಸ್ ತಲುಪವ ಹೊತ್ತಿಗೆ ಅವರು ಹೇಳುವುದು ನಮ್ಮ ಅನುಕೂಲಕ್ಕೇ ಅಲ್ಲವೇ” ಅನ್ನಿಸಿತು  ಜೊತೆಗೆ ಖುಷಿ ಕೂಡ ಆಯಿತು.  ಕೆಲವು ಮಾತ್ರೆಗಳನ್ನು ಅಲ್ಲಿ ಕೊಟ್ಟರು ಇನ್ನು ಕೆಲವು ಮಾತ್ರೆಗಳನ್ನು ಹೊರಗಿನಿಂದ ತೆಗೆದುಕೊಂಡು ಮನೆಗೆ ಬರುವುದರೊಳಗಾಗಿ ಇನ್ನೊಂದು ಕರೆ  “ನಾವು ಡಿಎಚ್ಒ ಆಫೀಸಿನಿಂದ  ಆರೋಗ್ಯವಾಗಿದ್ದೀರ…..?  ಸಿಮ್ಟಮ್ಸ್ ಏನಿದೆ ಮಾತ್ರೆಗಳನ್ನು ತೆಗೆದುಕೊಂಡಿದ್ದೀರ ?……. ಜಾಗರೂಕರಾಗಿರಿ  ಆತಂಕ ಪಡುವ ಆವಶ್ಯಕತೆ ಇಲ್ಲ ಬೇಗ ಗುಣಮುಖರಾಗಿ”  ಎಂದು ಸಕಾರಾತ್ಮಕವಾಗಿ ಮಾತನಾಡಿದ್ದು ಮನಸ್ಸಿಗೆ  ಮತ್ತೆ ಸಮಾಧಾನವಾಯಿತು.  ನಮ್ಮ ಬಗ್ಗೆಯೂ ಕಾಳಜಿ ತೆಗೆದುಕೊಳ್ಳುವವರು ಇದ್ದಾರಲ್ಲ ಎಂದು ಅನ್ನಿಸಿತು.

    ವಾರ್ತಾಮಾಧ್ಯಮಗಳಲ್ಲಿ ಹೇಳುವಂತೆ ನಮ್ಮ ಸರಕಾರ ಬೇಜವಾಬ್ದಾರಿ ತೋರಿಸಿಲ್ಲ  ನಾಗರಿಕರಿಗೆ  ಎಷ್ಟು ಅಗತ್ಯ ಸೌಲಭ್ಯ ಒದಗಿಸಬಹುದೋ ಅಷ್ಟನ್ನು ಒದಗಿಸುತ್ತಿದೆ.  ನಮ್ಮ  ಮನೆಯ ಸದಸ್ಯರೊಬ್ಬರಿಗೆ ಸೌಖ್ಯವಿಲ್ಲ ಎಂದರೇ ನಮಗೆ ಅದನ್ನು ನಿಭಾಯಿಸಲು ಕಷ್ಟವಾಗುತ್ತದೆ ಆದರೆ ಸರಕಾರ ಸಾವಿರಾರು ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ಬಂದಾಗ  ಒಮ್ಮೆಲೆ   ಎಲ್ಲವನ್ನೂ  ಚೆನ್ನಾಗಿ ನಿಭಾಯಿಸಲಾಗಲಿಲ್ಲವೇನೋ ಆದರೆ  ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ ಅದರಲ್ಲೂ ನಮ್ಮ ಹಿಮ್ಸ್ ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯಪ್ರವೃತ್ತವಾಗಿದೆ  ಎಂದರೆ ಅತಿಶಯೋಕ್ತಿಯಲ್ಲ.

    ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಅಲ್ಲದೆ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿಯಿಂದ ಎರಡೆರಡು ಬಾರಿ  ಕರೆ ಬಂದು “ಟ್ಯಾಬ್ಲೆಟ್ನ್ನು ಗಳನ್ನು ಮನೆಗೆ ತಲುಪಿಸಬೇಕಿದ್ದರೆ ಕರೆ   ಮಾಡಿ” ಎನ್ನುತ್ತಾ ಮನೆಯ ಸದಸ್ಯರಂತೆ ಯೋಗಕ್ಷೇಮ ವಿಚಾರಿಸಿದ್ದೂ ಇದೆ. ಇವೆಲ್ಲವುಗಳಿಗಿಂತ ಮಿಗಿಲಾಗಿ ಕೋವಿಡ್ ರೋಗಿಗಳ ಆರೋಗ್ಯದ ಮೇಲೆ ನಿಗಾವಹಿಸಲಿರುವ ಸ್ವಯಂಚಾಲಿತ ಕರೆ ವಾರವಿಡೀ ಬರುತ್ತಿತ್ತು. ನಂತರ ಸ್ವಯಂಚಾಲಿತ ಸಂದೇಶಗಳು .  ಈ ಕರೆಗಳು,  ಸಂದೇಶಗಳೇ ನನ್ನ ಆತಂಕವನ್ನು ದೂರ  ಮಾಡಿದವು ಎಂದರೆ ತಪ್ಪಿಲ್ಲ.

    ನನಗೆ ಹೋಂ ಐಸೋಲೇಶನ್   ಪ್ರಾರಂಭಕ್ಕೆ  ಬೇಸರ  ಅನ್ನಿಸಿತ್ತು. ನನ್ನ ಮಗ ಬಾಗಿಲ ಬಳಿ ಬಂದು ಇಣುಕಿ ಚಂಗನೆ ನೆಗೆಯುತ್ತಿದ್ದ ಆ ಕ್ಷಣಕ್ಕೆ ಬೇಸರ ಮತ್ತೆ ಚಿಕ್ಕ ಮಕ್ಕಳಿಗೂ ಕೊರೊನಾ ಎಂಥ ಗಾಬರಿ ತರಿಸಿದೆಯಲ್ಲಾ ಎಂದು  ಅನ್ನಿಸುತ್ತಿತ್ತು.  ಎರಡು ಮೂರು ದಿನಗಳ ನಂತರ  ಅವನೆ ಬಂದು “ಮನೆ ಒಳಗೆ ಯಾವಾಗ ಬರುತ್ತೀರ”, “ಲಿವಿಂಗ್ ರೂಮಿಗೆ ಯಾವಾಗ  ಬರುತ್ತೀರ?” ಎಂದು ಪದೇ ಪದೇ ಕೇಳುತ್ತಿದ್ದ.  ಒಮ್ಮೆ ವಿಟಮಿನ್ ‘ಸಿ’ ಮಾತ್ರೆ ಕೊಟ್ಟೆ  ರುಚಿ ಕಂಡ ಅವನು ಮತ್ತೆ ಮತ್ತೆ ಬೇಕು  ಎನ್ನುತ್ತಿದ್ದ. ಇದರ ನಡುವೆ ನನ್ನ ದೊಡ್ಡಮ್ಮ ಅನಾರೋಗ್ಯ ನಿಮಿತ್ತ ಕಾಲವಾದರು ಅವರನ್ನು  ವಿಡಿಯೋ ಕಾಲ್ ಮೂಲಕ  ಅಂತಿಮವಾಗಿ ದರ್ಶಿಸಿದ್ದು ಬಹಳ ಬಹಳ  ಬೇಸರ ತರಿಸಿತು. ತಲೆನೋವು ಹೆಚ್ಚಾಯಿತು.  ತಲೆ ಕೆಡಿಸಿಕೊಳ್ಳಲಿಲ್ಲ. ನಿಗದಿತ ಔಷಧಿಯನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಂಡೆ ಅಲೋಪತಿ ಜೊತೆಗೆ ಆಯುರ್ವೇದದ  ಔಷಧಿಯನ್ನು ವೈದ್ಯರ ಸಲಹೆಯ ಮೇರೆಗೆ ಮುಂದುವರೆಸಿದೆ.   ಉಳಿದಂತೆ ಕಷಾಯ,ಸ್ಟೀಮ್,ಭ್ರಮರಿ ಪ್ರಾಣಾಯಾಮ, ಮಾಸ್ಕ್ ಧರಿಸುವುದು ,   ಇತ್ಯಾದಿಗಳನ್ನು ಮುಂದುವರೆಸಿಕೊಂಡೆ. ನಿಗದಿತ ಔಷಧಿ ಮುಗಿಯುವ  ವೇಳೆಗೆ  ಆರಾಮಾಗಿದ್ದೇನೆ ಅನ್ನಿಸಿತು.  ಯಾವೆಲ್ಲ ಔಷಧಿ ತೆಗೆದುಕೊಂಡೆ ಎನ್ನುವುದನ್ನು ಇಲ್ಲಿ  ಮತ್ತೊಮ್ಮೆ ತಿಳಿದಿರುವುದನ್ನೆ ಹೇಳುವುದು ಅನಗತ್ಯ ಅನ್ನಿಸುತ್ತದೆ . ಅನೇಕ ಬಾರಿ ಜಾಲತಾಣಗಳಲ್ಲಿ ಪತ್ರಿಕೆಗಳಲ್ಲಿ ಅವುಗಳ ವಿವರ ಸಾಕಷ್ಟು ಜನರಿಗೆ   ಲಭ್ಯವಾಗಿದೆ ಎಂದನ್ನಿಸುತ್ತದೆ. ಗಂಟಲು ದ್ರವದ ಮಾದರಿಯನ್ನು ಯಾವ ವಿಭಾಗದವರು ಮಾಡಿರುತ್ತಾರೆಯೋ ಅವರೇ ರೋಗಿಗಳ  ಆರೋಗ್ಯ ವಿಚಾರಿಸುತ್ತಾರೆ.   ತುರ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳನ್ನು ನಿಯಮಿತವಾಗಿ  ಸಂದೇಶಗಳ ಮೂಲಕ ಕಳುಹಿಸುತ್ತಿರುತ್ತಾರೆ. 

    ಕೊರೊನಾ ಸಂದಿಗ್ಧತೆಯಲ್ಲಿ ನನಗೆ ಧೈರ್ಯ ಅನ್ನುವ ಔಷಧಿಯನ್ನು ತನಿತನಿಯಾಗಿ ನೀಡುತ್ತಿದ್ದುದು ಜಿಲ್ಲಾ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ. ತೇಜಸ್ವಿನಿಯವರು.    ನಾನು ಕರೆ    ಮಾಡಿದಾಗಲೆಲ್ಲ ಉತ್ತಮವಾಗಿ ಸ್ಪಂದಿಸುತ್ತಿದ್ದರು.ಆರೋಗ್ಯ ವಿಚಾರಿಸುತ್ತಿದ್ದರು.ನಮ್ಮ ಜಿಲ್ಲೆಯ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ನಂದಿನಿ ಮೇಡಮ್  ಕೂಡ “ಆಸ್ಪತ್ರೆ ಸೇರುವುದಿದ್ದರೆ ಕರೆ ಮಾಡಿ ,ಧೈರ್ಯ ತೆಗೆದುಕೊಳ್ಳಿ”  ಎಂದಿದ್ದರು.  ಕೊರೊನಾ ವಿರುದ್ಧ  ಕುಟುಂಬ ಸಹಿತ ಗೆದ್ದಿದ್ದ  ಮುಂಬೈ ಗೆಳತಿ ಅಮೃತಾಶೆಟ್ಟಿ ಆಗಾಗ ಕರೆ ಮಾಡಿ  ಟಿಪ್ಸ್ ಗಳನ್ನು ಕೊಡುತ್ತಿದ್ದರು.  ಉಳಿದಂತೆ  ಮತ್ತೆ ಮತ್ತೆ ಯೋಗಕ್ಷೇಮ   ವಿಚಾರಿಸುತ್ತಿದ್ದ ಆತ್ಮೀಯರಾದ  ಉಷಾ ಮೇಡಂ, ಜಯಶ್ರೀ ಮೇಡಮ್, ಭವಾನಿ……. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮನೆಯವರು, ಮಗಳಂತೂ ಅತೀವ ಕಾಳಜಿ ವಹಿಸಿದರು. ನಾನಿದ್ದ ಕೊಠಡಿಗೆ  ಮಾಸ್ಕ್ ಧರಿಸಿ ಬಂದು ಅಂತರದಲ್ಲೆ  ಇದ್ದು ಹರಟುತಿದ್ದರು.   ಇವೆಲ್ಲಾ  ಕಡೆ ಕಡೆಗೆ  ಹತ್ತು ವರ್ಷಗಳ ಹಿಂದಿನ  ನನ್ನ ಪಿಜಿ ವಾಸದ ಜೊತೆಗೆ ಅಲ್ಲಿ  ಸಮಯಕ್ಕೆ ಸರಿಯಾಗಿ ಊಟತಿಂಡಿ  ಬರುತ್ತಿದ್ದುದನ್ನು  ನೆನಪಿಸಿದ್ದಂತು ಸತ್ಯ.  

    ಕೊರೊನಾ ಕಣ್ಣಿಗೆ ಕಾಣದ ವೈರಸ್ ನಿಂದ  ಎನ್ನುವುದು  ತಿಳಿದಿರುವುದೇ ಆದರೆ ಅದರ ಕೈಗೆ ನಮ್ಮ  ಮನಸ್ಸನ್ನು ಕೊಟ್ಟರೆ ನಮ್ಮನ್ನು ಸಂಪೂರ್ಣ ಆವರಿಸಿಕೊಳ್ಳುತ್ತದೆ. ಭಯ ಬಿಟ್ಟು ,ಆತ್ಮಸ್ಥೈರ್ಯವನ್ನು ಕುಗ್ಗಿಸಿಕೊಳ್ಳದೆ ಔಷಧಿ, ಸತ್ವಭರಿತ ಆಹಾರ ತೆಗೆದುಕೊಂಡು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಚ್ಯವನಪ್ರಾಶ, ಅಮೃತಾರಿಷ್ಟ, ಗಿಲಾಯ್,ದಶಮೂಲಾರಿಷ್ಟ ಇತ್ಯಾದಿಗಳನ್ನು ಗುಣವಾದ ಹದಿನೈದು ದಿನಗಳವರೆಗು ಮುಂದುವರೆಸಬಹುದು. ಒಟ್ಟಾರೆಯಾಗಿ ಏನೇ ಬಂದರೂ ಸಮಚಿತ್ತದಿಂದ ಸ್ವೀಕರಿಸಬೇಕು  ಸದಾ ಕ್ರಿಯಾಶೀಲರಾಗಬೇಕು ಅಷ್ಟೆ.   ಐಸೋಲೇಶನ್ ನಮ್ಮ ದೇಹಕ್ಕೆ ವಿನಾ ಮನಸ್ಸಿಗಲ್ಲ ಅಲ್ವ! ಆದರೆ ಅತೀ ಹುಂಬತನದಿಂದ ಏನೂ ಲಕ್ಷಣಗಳಿಲ್ಲ  ಎಂದು ಅನಗತ್ಯ ಓಡಾಟ  ಮಾಡಿದರೆ ಅದೊಂದು ಅಪರಾಧವೇ ಸರಿ! ಇನ್ನು ಖೇದದ ಸಂಗತಿ ಎಂದರೆ ಸೋಂಕಿತರನ್ನು ತುಚ್ಛೀಕರಿಸುವುದು . ಸಹಾಯ ಮಾಡಬೇಕೇ ಹೊರತು ಅವಮಾನ ಮಾಡಬಾರದು.

    ಕೊರೊನಾ ಭಯದಿಂದ ಹೊರಬರಲು ನಾವು ಅನುಸರಿಸಬೇಕಾದ ಮೊದಲ ತಂತ್ರ ಎಂದರೆ  ಅನಗತ್ಯ  ಭಯ ಹುಟ್ಟಿಸುವ ವಾರ್ತಾ  ಮಾಧ್ಯಮಗಳಿಂದ ದೂರವಿದ್ದು ಮನರಂಜನಾ ಮಾಧ್ಯಮದ ಕಡೆಗೆ ಹೊರಳುವುದು.  ಪುಸ್ತಕಗಳನ್ನು ಓದಬಹುದು.  ಬಹುಶಃ ನನ್ನ ಹಾಗೆ  ತಲೆನೋವು ಇದ್ದರೆ  ಎಲ್ಲರಿಗೂ ಸಾಧ್ಯವಾಗದು.   ಈಗಂತೂ  ಕಿಂಚಿತ್  ಕೊರೊನಾ ಲಕ್ಷಣಗಳು ಕಂಡರೂ  ಹಲವರು ಸ್ವಯಂ ವೈದ್ಯ ಮಾಡಿಕೊಳ್ಳುತ್ತಾರೆ. ಬೇಗ ಗುಣವಾಗಲಿ ಎಂದು ಅತಿಯಾದ ಪ್ರಮಾಣದಲ್ಲಿ ಔಷಧ ತೆಗೆದುಕೊಳ್ಳುವುದು ತಪ್ಪಿನ ಕೆಲಸ. ಇದು ಖಂಡಿತಾ ತಪ್ಪು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಲೇಬೇಕು.   ಸರಕಾರದಿಂದ ಬಿಡುಗಡೆಯಾಗಿರುವ  ಕೋವಿಡ್ ಮಾರ್ಗ ಸೂಚಿಯನ್ನು ಅನುಸರಿಸಲೇಬೇಕು ಇದು ನಮ್ಮ ನಾಗರಿಕ ಸೂಕ್ಷ್ಮ ಹಾಗು ಹೊಣೆಗಾರಿಕೆಯೂ ಹೌದು!  “ಥಿಂಕ್ ಪಾಸಿಟಿವ್” ಎಂದು ಕೊರೊನಾ ಪಾಸಿಟಿವ್ ಬಗ್ಗೆಯೇ  ಥಿಂಕ್ ಮಾಡುವುದರ ಬದಲು “ಖಂಡಿತಾ ಇದರಿಂದ ಹೊರಬರುವೆ” ಎಂಬುದನ್ನು ನಿರ್ಧರಿಸಬೇಕು. “ಬಂದ್ರೆ ಬರುತ್ತೆ” ಎನ್ನುವ  ಉದಾಸೀನ, “ಬಂದೇ ಬಿಡ್ತು” ಎನ್ನುವ  ಆತಂಕ  ಎರಡೂ ಇರಬಾರದು.  ಪತ್ರಿಕೆಗಳಲ್ಲಿ ಸಾವಿನ ಸಂಖ್ಯೆಯನ್ನು ಗಮನಿಸಿದರೆ ಏದುಸಿರು ಖಂಡಿತಾ!   ಆದರೆ ಗುಣಮುಖರಾದವರ ಸಂಖ್ಯೆಯನ್ನು  ನೋಡುವುದೂ  ಒಂಥರಾ ನಮ್ಮಾತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ.

    ಕೊರೊನಾ ಸೋಂಕಿತರು ಎಂದಮೇಲೆ ICMR  ನಲ್ಲಿ ನಮ್ಮ ದಾಖಲೆ ಇರುತ್ತದೆ . ಗುಣಮುಖರಾದ ಮೇಲೆ ನೀವೂ ಪ್ಲಾಸ್ಮದಾನ ಮಾಡಲು ಇಚ್ಛಿಸುವಿರಾ ಎಂಬ ಸಂದೇಶವೂ ಬಂದಿತ್ತು .   ಅಂದರೆ ಸರಕಾರ  ನಿಗದಿತ ವ್ಯವಸ್ಥೆಯ ಮೂಲಕ ಹೇಗೆ ನಿಗಾ ಮಾಡುತ್ತದೆ ಅನ್ನಿಸಿತು.  ಆದರೆ ಸರಕಾರ ಈಗ ಪ್ಲಾಸ್ಮಾ ಚಿಕಿತ್ಸೆಯನ್ನು ನಿರ್ಬಂಧಿಸಿದೆ. ಕೊರೊನಾ ಮುಟ್ಟಿದ ಮೇಲೆ ಅದನ್ನು  ಮೆಟ್ಟಿ ನಿಲ್ಲುವುದು  ಅಗತ್ಯ.  

    “ಅಂಜಿದಡೆ ಮಾಣದು,ಅಳಿಕಿದಡೆ ಮಾಣದು
    ಧೃತಿಉಗೆಟ್ಟು ಮನಧಾತುಗೆಟ್ಟಡೆ
    ಅಪ್ಪುದು ತಪ್ಪದು ಕೂಡಲಸಂಗಮದೇವಾ”
    ಎಂದು ವಿಶ್ವಗುರು ಬಸವಣ್ಣನವರು   ಹೇಳಿರುವಂತೆ  ಬಂದ ಸವಾಲುಗಳನ್ನು ಎದುರಿಸಬೇಕು  ಧೃತಿಗೆಡಬಾರದಷ್ಟೆ ಅನ್ನಿಸುತ್ತದೆ.  ಸ್ವಲ್ಪ  ಆರೋಗ್ಯದಲ್ಲಿ ಏರು ಪೇರಾದರೂ ಮೃತ್ಯು ಪ್ರಜ್ಞೆಯಲ್ಲಿ ನರಳಬೇಕಾದ ಅವಶ್ಯಕತೆಯಿಲ್ಲ. ರೋಗ ಬಂದ ನಂತರ ಗಲಿಬಿಲಿಯಾಗುವುದಕ್ಕಿಂತ  ರೋಗಬಾರದೆ ಇರುವ ಹಾಗೆ ತಡೆಯುವ ಉಪಕ್ರಮಗಳನ್ನು ರೂಢಿಸಿಕೊಳ್ಳಬೇಕು.  ಹಾಗೊಂದು ವೇಳೆ ಬಂದರೆ ಅದನ್ನು ಎದುರಿಸಲು ಮಾನಸಿಕ ತಯಾರಿಯನ್ನೂ ಮಾಡಿಕೊಳ್ಳಬೇಕು. ಪ್ರಾರಂಭಿಕ ಹಂತದಲ್ಲೇ ಎಚ್ಚೆತ್ತುಕೊಳ್ಳಬೇಕು! ಹೋರಾಡಬೇಕು! ಗೆಲ್ಲಬೇಕು!


    ಕೊರೋನಾ ಗೆದ್ದವರು ತಮ್ಮ ಅನುಭವದ ಕಥೆಯನ್ನು [email protected] ಗೆ ಇ ಮೇಲ್ ಮಾಡಿ. ಸೂಕ್ತವಾದುವನ್ನು ಪ್ರಕಟಿಸಲಾಗುವುದು

    ಅಗತ್ಯ ಸೇವೆ ಒದಗಿಸುವ ಕುಶಲಕೋಶ ಮೊಬೈಲ್ ಆಪ್

    ಎಲೆಕ್ಟ್ರಿಷಿಯನ್‌, ಪ್ಲಂಬರ್‌, ಜಿಮ್‌ ತರಬೇತುದಾರರು, ಪೇಂಟರ್‌, ಡ್ರೈ ಕ್ಲೀನರ್‌, ಕಾರ್ಪೆಂಟರ್‌ ಎಲ್ಲರೂ ನೋಂದಾಯಿಸಕೊಳ್ಳಬಹುದು

    ಜನಸಾಮಾನ್ಯರ ತುರ್ತು ಅಗತ್ಯ ಸೇವೆಗಳನ್ನು ಪಡೆಯಲು ಹಾಗೂ ಕುಶಲಕರ್ಮಿಗಳಿಗೆ ಉತ್ತಮ ಉದ್ಯೋಗಾವಕಾಶ ಒದಗಿಸಲು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ‘ಕುಶಲ ಕೋಶ’ ಮೊಬೈಲ್ ಅಪ್ಲೀಕೇಶನ್ ಅನ್ನು ತಯಾರಿಸಿದ್ದು, ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಲೋಕಾರ್ಪಣೆ ಮಾಡಿದರು.

    ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಕುಶಲ ಕೋಶ’ ಮೊಬೈಲ್ ಆಪ್ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಬಹಳ ಅನುಕೂಲವಾಗುವಂತಹ ಅಪ್ಲಿಕೇಶನ್ ಇದಾಗಿದೆ. ಜನರು ತಮಗೆ ಅಗತ್ಯವಿರುವ ಕಾರ್ಯಕ್ಕೆ ಸುಲಭದಲ್ಲಿ ಕೌಶಲ್ಯಯುತ ವ್ಯಕ್ತಿಗಳನ್ನು ಪತ್ತೆ ಹಚ್ಚಬಹುದು. ಜೊತೆಗೆ ಬೇರೆ ಬೇರೆ ಉದ್ಯೋಗದಲ್ಲಿ ಕೌಶಲ್ಯ ಹೊಂದಿರುವವರು ತಮ್ಮ ವಿವರವನ್ನು ಅಪ್ಲಿಕೇಶನ್‍ನಲ್ಲಿ ನೊಂದಾಯಿಸಿ, ಉದ್ಯೋಗವನ್ನೂ ಪಡೆದುಕೊಳ್ಳಬಹುದು.

    “ಕುಶಲ ಕೋಶ” ಈ ದ್ವಿಭಾಷಾ ಮೊಬೈಲ್‌ ಅಪ್ಲಿಕೇಷನ್ ಅನ್ನು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ಹಾಗೂ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಪ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.

    ಗೂಗಲ್‌ ಪ್ಲೇಸ್ಟೋರ್‌ ನಿಂದ ಕುಶಲಕೋಶ ಮೊಬೈಲ್ ಆಪ್ ಅನ್ನು ಡೌನ್‌ಲೋಡ್‌ ಮಾಡಿ, ಆನ್‌ಲೈನ್‌ ಮೂಲಕ ಯೋಗ ಶಿಕ್ಷಕರಿಂದ ಯೋಗಾಭ್ಯಾಸ ಮಾಡಬಹುದಾಗಿದೆ.ಯೋಗ ಶಿಕ್ಷಕರು ಈ ಅಪ್ಲಿಕೇಶನ್ ನಲ್ಲಿ ನೊಂದಣಿ ಮಾಡಿರುವ ವಿಳಾಸವನ್ನು ನಕ್ಷೆಯೊಂದಿಗೆ ಇದು ತೋರಿಸಲಿದೆ. ಈ ಅಪ್ಲಿಕೇಶನ್‌ನಲ್ಲಿ ಕರ್ನಾಟಕ ನಕ್ಷೆಯ ಮೇಲೆ ಕ್ಲಿಕ್‌ ಮಾಡಿದಾಕ್ಷಣ ನಿಮ್ಮ ಸುತ್ತಮುತ್ತಲಿನಲ್ಲಿ ಇರುವ 5 ಯೋಗ ಬೋಧಕರ ವಿಳಾಸವನ್ನು ಪತ್ತೆ ಹಚ್ಚುತ್ತದೆ.

    ಕೇವಲ ಯೋಗ ಶಿಕ್ಷಕರಿಗೆ ಸಹಾಯವಾಗುವುದು ಮಾತ್ರವಲ್ಲ, ಎಲೆಕ್ಟ್ರಿಷಿಯನ್‌, ಪ್ಲಂಬರ್‌, ಜಿಮ್‌ ತರಬೇತುದಾರರು, ಪೇಂಟರ್‌, ಡ್ರೈ ಕ್ಲೀನರ್‌, ಕಾರ್ಪೆಂಟರ್‌ ಸೇರಿದಂತೆ ಇತರೆ ವರ್ಗಗಳ ನುರಿತ ವ್ಯಕ್ತಿಗಳನ್ನು ಪತ್ತೆಹಚ್ಚಲು ಸಹಾಯವಾಗುವಂತೆಯೂ ಈ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಕೌಶಲ್ಯ ಹೊಂದಿರುವ ಸಿಬ್ಬಂದಿ ಈ ಅಪ್ಲಿಕೇಶನ್‌ನಲ್ಲಿ ತಮ್ಮ ವಿಳಾಸ ಹಾಗೂ ವಿವಿರಗಳನ್ನು ನೋಂದಣಿ ಮಾಡಿಕೊಳ್ಳಬಹುದು. ಅಲ್ಲದೆ ವಿಳಾಸ ಮತ್ತು ಸಂಪರ್ಕ ವಿವರಗಳ ಹೊರತಾಗಿ, ಯೂಟ್ಯೂಬ್‌ ಲಿಂಕ್‌, ವಾಟ್ಸಾಪ್‌ ಸಂಖ್ಯೆ, ಫೇಸ್‌ಬುಕ್‌ ಪುಟವನ್ನು ಸಹ ನೋಂದಾಯಿಸಬಹುದು.

    ಶಾಲಾರಂಭ: ಡಾ.ದೇವಿಶೆಟ್ಟಿ ವರದಿ ಪರಿಶೀಲನೆ ಬಳಿಕ ನಿರ್ಧಾರ

    ನಾಳೆ ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾಗಲಿದೆ ಎನ್ನಲಾಗುತ್ತಿರುವ ತಜ್ಞರ ಸಮಿತಿ ಅಧ್ಯಕ್ಷ ಡಾ.ದೇವಿಶೆಟ್ಟಿ ಅವರ ವರದಿಯು ತಮ್ಮ‌ ಕೈಸೇರಿದ ಬಳಿಕ ಅದನ್ನು ಕೂಲಂಕಶವಾಗಿ ಪರಿಶೀಲಿಸಿ, ಶಾಲಾ ಚಟುವಟಿಕೆಗಳ‌ ಕುರಿತಂತೆ ಮುಂದಿನ‌ ದಿನಗಳಲ್ಲಿ  ಸೂಕ್ತ‌ ನಿರ್ಣಯ ತೆಗೆದುಕೊಳ್ಳಲಾಗುವುದೆಂದು ಸಚಿವ ಸುರೇಶ್‌‌ಕುಮಾರ್ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತರಗತಿ ಕಲಿಕೆಯ ಬಗ್ಗೆ ವರದಿಯಲ್ಲಿ‌ ಉಲ್ಲೇಖವಿದೆ ಎಂದು ಮಾಧ್ಯಮಗಳಲ್ಲಿಯಷ್ಟೇ  ನೋಡಿದ್ದೇನೆ.‌ವರದಿ ತಮ್ಮ‌ ಕೈಸೇರಿದ ಬಳಿಕವಷ್ಟೇ ಪ್ರತಿಕ್ರಯಿಸಲು ಸಾಧ್ಯ ಎಂದರು.

    ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಡೆಸಿದ ಅಧ್ಯಯನದಲ್ಲಿ ಶಾಲೆಗಳು ನಡೆಯದ ಕಾರಣ ಶೇ.30ರಷ್ಟು ಮಕ್ಕಳು ಕಲಿಕೆಯಿಂದ ಹೊರಗುಳಿದು ಶೈಕ್ಷಣಿಕ ಚಟುವಟಿಕೆಗಳಿಂದ ಹೊರಗುಳಿದಿದ್ದಾರೆ ಎಂಬ ಅಂಶವು ಬಹಿರಂಗಗೊಂಡಿದೆ. ಈ ಅಧ್ಯಯನ ವರದಿಯ ಬೆಳಕಿನಲ್ಲಿ ನಾವು ಈ ವರ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಹೆಚ್ಚಿನ ರೀತಿಯ ಗಮನಹರಿಸುವ ಸವಾಲು ನಮ್ಮ ಮುಂದಿದೆ.

    ಸರ್ಕಾರಕ್ಕೆ ಶಾಲೆಗಳನ್ನು ತೆರೆಯಬೇಕೆಂಬ ಉತ್ಸುಕತೆ, ತರಗತಿ ಕಲಿಕೆ ಮುಖ್ಯವೆನ್ನುವುದು ಸಾಮಾನ್ಯ ಅಭಿಪ್ರಾಯವಾಗಿದ್ದರೂ ಹಲವಾರು ಅಂಶಗಳನ್ನು ಗಮನಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ  ಡಾ.ದೇವಿಶೆಟ್ಟಿ ಅವರು ಸಲ್ಲಿಸಲಿರುವ ವರದಿಯನ್ನು ಪರಿಪೂರ್ಣವಾಗಿ ಗಮನಿಸಿ ಕ್ಲಪ್ತ‌ ಸಮಯದಲ್ಲಿ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.

    error: Content is protected !!