ಜುಲೈ 3ನೇ ವಾರದಲ್ಲಿ ನಡೆಯಲಿರುವ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಆದ್ಯತೆಯ ಮೇಲೆ ಕೋವಿಡ್-19ರ ಲಸಿಕೆ ನೀಡಲು ಅಗತ್ಯ ಕ್ರಮಗಳನ್ನು ವಹಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ . ಸುರೇಶ್ ಕುಮಾರ್ ರಾಜ್ಯದ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗಲಿರುವ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯ ಪಟ್ಟಿಯನ್ನು ಆಯಾ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ನೀಡಲಿದ್ದು, ಅವರೆಲ್ಲರಿಗೂ ಪರೀಕ್ಷೆ ಆರಂಭಕ್ಕೂ ಮುನ್ನವೇ ಲಸಿಕೆ ದೊರೆಯುವಂತೆ ಕ್ರಮ ವಹಿಸಬೇಕೆಂದು ಸಚಿವರು ತಿಳಿಸಿದ್ದಾರೆ.
ಈ ಬಾರಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ 6000ಕ್ಕೂ ಹೆಚ್ಚಿನ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿರುವುದರಿಂದ ಹೆಚ್ಚಿನ ಶಿಕ್ಷಕರು, ಸಿಬ್ಬಂದಿ ಮತ್ತು ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವರೆಲ್ಲರಿಗೂ ಆದ್ಯತೆಯ ಮೇಲೆ ಲಸಿಕೆ ನೀಡಬೇಕಾದ ಅಗತ್ಯವಿದೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.
ಪರೀಕ್ಷೆಗಳು ಹೆಚ್ಚಿನ ಸುರಕ್ಷತಾ ವಾತಾವರಣದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಎಲ್ಲರೂ ಲಸಿಕೆ ಪಡೆಯುವುದು ಅಗತ್ಯವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಜುಲೈ 3ನೇ ವಾರದಲ್ಲಿ ನಡೆಯಲಿರುವ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಈಗಾಗಲೇ ಕೋವಿಡ್ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರು ನಗರದ ಶಿಕ್ಷಕರನ್ನು ಕೋವಿಡ್ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ . ಸುರೇಶ್ ಕುಮಾರ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬರೆದ ಪತ್ರದಲ್ಲಿ ಪರೀಕ್ಷಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕಾದ ಶಿಕ್ಷಕರು ಕೋವಿಡ್ ಲಸಿಕೆ ಪಡೆಯುವುದು ಮತ್ತು ಪರೀಕ್ಷಾ ಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಿರುವುದು ಮತ್ತು ಈಗಾಗಲೇ ಶೈಕ್ಷಣಿಕ ಚುಟುವಟಿಕೆಗಳು ಪ್ರಾರಂಭಗೊಂಡಿದ್ದು, ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಹ ನಡೆಯುತ್ತಿರುವುದರಿಂದ ಶಿಕ್ಷಕರು ಶಾಲಾ ಕರ್ತವ್ಯದಲ್ಲಿ ಭಾಗಿಯಾಗಿರಬೇಕಿರುವುದರಿಂದ ತಕ್ಷಣವೇ ಶಿಕ್ಷಕರನ್ನು ಕೋವಿಡ್ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕೆಂದು ಸಚಿವರು ತಿಳಿಸಿದ್ದಾರೆ.
ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳು, ಬೋಧಕ ಹಾಗೂ ಸಹಾಯಕ ಸಿಬ್ಬಂದಿಗೆ ಆದ್ಯತೆ ಮೇಲೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ
ತಿಳಿಸಿದ್ದಾರೆ.ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಅವರು, ಸಂಬಂಧಪಟ್ಟ ಅಧಿಕಾರಿಗಳ ಸಮನ್ವಯದೊಂದಿಗೆ ಹಾಗೂ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಲಸಿಕೆ ಆಭಿಯಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪದವಿ ಕಾಲೇಜು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಗೆ #COVID19 ಲಸಿಕಾಕರಣ ನಡೆಸುವ ಕುರಿತು ನಿರ್ಧರಿಸಲಾಗಿದೆ.
— Dr. Ashwathnarayan C. N. (@drashwathcn) June 24, 2021
ಮುಖ್ಯಮಂತ್ರಿಗಳ ಆಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಲಸಿಕೆ ಹಾಕಿದ ನಂತರ ಪದವಿ ತರಗತಿಗಳನ್ನು ಆರಂಭಿಸುವ ಬಗ್ಗೆ ಚರ್ಚಿಸಲಾಯಿತು. ಕಾಲೇಜು ಆರಂಭಕ್ಕೆ ಮೊದಲೇ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಗೆ ಲಸಿಕೆ ನೀಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದಿರುವ ಅವರು ಆಯಾ ಕಾಲೇಜುಗಳಲ್ಲಿಯೇ ಲಸಿಕೆ ಅಭಿಯಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇವರೆಲ್ಲರೂ ಲಸಿಕೆ ಪಡೆಯಲು ಆಯಾ ಸಂಸ್ಥೆಗಳಲ್ಲಿ ನೀಡಲಾಗುವ ದೃಢೀಕರಣ ಪತ್ರ ಹಾಜರುಪಡಿಸಬೇಕು. ಪ್ರತಿ ಕಾಲೇಜಿನ ಮುಖ್ಯಸ್ಥರು ಹಾಗೂ ಇನ್ನೊಬ್ಬ ಅಧಿಕಾರಿಯನ್ನು ನೋಡೆಲ್ ಅಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಲಸಿಕೀಕರಣಕ್ಕೆ ಪ್ರತ್ಯೇಕ ಮಾರ್ಗಸೂಚಿ (ಎಸ್‌ಒಪಿ) ಇರುತ್ತದೆ. ಅದರಂತೆಯೇ ಲಸಿಕೀಕರಣ ನಡೆಸಲಾಗುವುದು. ಅಲ್ಲದೆ, ನೋಡೆಲ್ ಅಧಿಕಾರಿಗಳು ಆಯಾ ಶಿಕ್ಷಣ ಸಂಸ್ಥೆಯಲ್ಲಿನ ಎಲ್ಲ ಅರ್ಹರಿಗೂ ತಪ್ಪದೇ ಲಸಿಕೆ ಕೊಡಿಸಬೇಕು ಹಾಗೂ ಅದರ ಬಗ್ಗೆ ಖಾತರಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.
ಲಸಿಕೀಕರಣದ ನಂತರ ನೇರ ತರಗತಿ:
ಈ ವಿಭಾಗದ ಎಲ್ಲರಿಗೂ ಮೊದಲ ಡೋಸ್ ಲಸಿಕೆ ಹಾಕಿದ ನಂತರ ನೇರ ತರಗತಿಗಳನ್ನು ಆರಂಭ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಕಲಾನಿಧಿ-2021 ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಮಾಹಿತಿ ನೀಡಿದ ಅವರು, ಲಸಿಕೆ ಕೊಡಲಿ ಬಿಡಲಿ ಕಲಿಕೆ ನಿಲ್ಲುವುದಿಲ್ಲ. ಡಿಜಿಟಲ್ ವೇದಿಕೆಯಲ್ಲಿ ಕಲಿಕೆ ಮುಂದುವರಿದಿದೆ. ವ್ಯಾಕ್ಸಿನ್ ಪಡೆದ ಮೇಲೆ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಬಹುದು ಅಥವಾ ತಾವಿದ್ದಲ್ಲಿಯೇ ಆನ್‌ಲೈನ್ ಕ್ಲಾಸ್ ಹಾಜರಾಗಬಹುದು. ಹಾಜರಾತಿ ಮಾತ್ರ ಕಡ್ಡಾಯ ಎಂದರು.
ಮೊದಲ ಡೋಸ್ ಪಡೆದ ನಂತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲಾರಂಭಿಸುತ್ತದೆ. ಒಂದು ವೇಳೆ ನೇರ ತರಗತಿಗೆ ಹಾಜರಾದ ನಂತರವೂ ಸೋಂಕು ಬಂದರೆ ಜೀವಕ್ಕೆ ಹಾನಿ ಆಗುವುದಿಲ್ಲ. ಹೀಗಾಗಿ ಎಲ್ಲ ವಿದ್ಯಾರ್ಥಿ, ಸಿಬ್ಬಂದಿ ಲಸಿಕೆ ಪಡೆಯಬೇಕು ಎಂದು ಅವರು ಕೋರಿದರು.
ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಪತ್ತೆಯಾಗಿದ್ದರೂ ಸರಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿದೆ. ಯಾವುದಕ್ಕೂ ಕೊರತೆ ಇಲ್ಲ. ಸದ್ಯಕ್ಕೆ ನಮ್ಮಲ್ಲಿ ಲಭ್ಯ ಇರುವ ಲಸಿಕೆಗಳು ಡೆಲ್ಟಾ ಪ್ಲಸ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವ ಶಕ್ತಿ ಹೊಂದಿವೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಕೂಸು ಹುಟ್ಟುವ ಮುನ್ನವೆ ಕುಲಾವಿ ಅನ್ನವಂಥ ಸ್ಥಿತಿ ನಿರ್ಮಾಣವಾಗಿದೆೆ. ಸಿಎಂ ಹುದ್ದೆ ಯಾರಿಗೆ ಎಂಬುದರ ಬಗ್ಗೆ ವಾದ ವಿವಾದಗಳು ನಡೆಯುತ್ತಲೇ ಇವೆ. ಇಂದು ಸಂಸದ ಡಿ ಕೆ ಸುರೇಶ್ ಈ ಬಗ್ಗೆ ಮಾತನಾಡಿದ್ದಾರೆ.
‘ನಿಜವಾದ ಕಾಂಗ್ರೆಸ್ಸಿಗರು, ಕಾಂಗ್ರೆಸ್ ನಾಯಕರು ಪಕ್ಷ ಸಂಘಟನೆಯತ್ತ ಗಮನಹರಿಸುತ್ತಾರೆ. ಅವರು ಪಕ್ಷದ ಶಿಸ್ತು ಕಲಿತಿರುತ್ತಾರೆ. ಆದರೆ ಅಧಿಕಾರಕ್ಕಾಗಿಯೇ ಪಕ್ಷಕ್ಕೆ ಬಂದಿರುವವರು, ಅಧಿಕಾರಕ್ಕೆ ಜೋತು ಬಿದ್ದಿರುವವರು ಹೀಗೆಲ್ಲಾ ಮಾತನಾಡಿ, ಗೊಂದಲ ಸೃಷ್ಟಿಸುತ್ತಾರೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಭವಿಷ್ಯದ ಸಿಎಂ ವಿಚಾರವಾಗಿ ಪಕ್ಷದಲ್ಲಿ ಎದ್ದಿರುವ ಚರ್ಚೆ ಸಂಬಂಧ ಬುಧವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಅವರು ಹೇಳಿದ್ದಿಷ್ಟು:
ಗೊಂದಲ ಸೃಷ್ಟಿಸುತ್ತಿರುವವರ ವಿರುದ್ಧ ಶಿಸ್ತು, ಅಶಿಸ್ತು ಕ್ರಮ ಕೈಗೊಳ್ಳುವ ವಿಚಾರ ಪಕ್ಷದ ಹೈಕಮಾಂಡ್ ಗೆ ಸೇರಿದ್ದರು. ವರಿಷ್ಠರು ಅದನ್ನು ನೋಡಿಕೊಳ್ಳುತ್ತಾರೆ.
‘ಸಿಎಂ ಸ್ಥಾನದ ಬಗ್ಗೆ ಮಾತನಾಡುತ್ತಿರುವವರಿಗೆ ಒಳ್ಳೆಯದಾಗಲಿ. ಸದ್ಯಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿಲ್ಲ. ಸಿಎಂ ಸ್ಥಾನ ಖಾಲಿಯೂ ಇಲ್ಲ. ಕಾಂಗ್ರೆಸ್ ನ ಈಗಿನ ಶಾಸಕರು ಮುಂದಿನ ಶಾಸಕಾಂಗ ಪಕ್ಷದ ಸದಸ್ಯರಲ್ಲ. 2023 ಕ್ಕೆ ಚುನಾವಣೆ ಇದೆ. ಚುನಾವಣೆ ಗೆಲ್ಲುವ ಬಗ್ಗೆ ಶಾಸಕರು ಕೆಲಸ ಮಾಡಬೇಕಿದೆ. ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ನಾವು ಭಾವಿಸಿದ್ದೇವೆ. ಕೆಲವರು ಈಗಲೇ ಮುಖ್ಯಮಂತ್ರಿ ಆಗುವುದಾದರೆ ದೇವರು ಅವರಿಗೆ ಒಳ್ಳೆಯದು ಮಾಡಲಿ’ ಎಂದರು.
ಅದು ಶಾಸಕರ ಅಭಿಪ್ರಾಯವೇ ಹೊರತು ನನ್ನ ಅಭಿಪ್ರಾಯವಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್ ಅವರು, ‘ಅವರು ಅವರ ವೈಯಕ್ತಿಕ ಅಭಿಪ್ರಾಯ ಹೇಳಬಹುದು, ನಾನು ನನ್ನ ವೈಯಕ್ತಿಕ ಅಭಿಪ್ರಾಯ ಹೇಳಬಹುದು. ಆದರೆ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕಲ್ಲ, ಅದು ಮುಖ್ಯ’ ಎಂದರು.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ಶಾಸಕರ ಹೇಳಿಕೆ ಬಗ್ಗೆ ಗಮನ ಸೆಳೆದಾಗ ಉತ್ತರಿಸಿದ ಸುರೇಶ್ ಅವರು, ‘ಚುನಾವಣೆ ನೇತೃತ್ವದ ಬಗ್ಗೆ ಚರ್ಚೆ ಮಾಡಲು ಸಮಯ ಬಹಳ ದೂರವಿದೆ. ಈಗ ಕರೋನಾ ಇದ್ದು, ಅದನ್ನು ನಿಭಾಯಿಸಲು ಏನು ಮಾಡಬೇಕು ಎಂಬುದನ್ನು ಅವರು ಹೇಳಬೇಕು’ ಎಂದು ತಿಳಿಸಿದರು.
ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿದರು ಎಂಬಂತೆ, ವಿರೋಧ ಪಕ್ಷದವರು ಸಿಎಂ ಸ್ಥಾನದ ಬಗ್ಗೆ ಮಾತನಾಡುತ್ತಿರಲು ಕಾರಣ ಏನು? ಇದು ಗೊಂದಲ ಸೃಷ್ಟಿಸುವುದಿಲ್ಲವೇ ಎಂಬ ಪ್ರಶ್ನೆಗೆ, ಪ್ರತಿಕ್ರಿಯಿಸಿದ ಅವರು, ‘ಮಲಗಿದ್ದವರೆಲ್ಲ ಈಗ ಎದ್ದಿದ್ದಾರೆ, ಹೀಗಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿದ್ದು, ವಿರೋಧ ಪಕ್ಷದ ಶಾಸಕರಂತೆ ಕೆಲಸ ಮಾಡಬೇಕಿದೆ. ಅವರ ಹೇಳಿಕೆಗಳು ಬರೀ ಕಾರ್ಯಕರ್ತರಲ್ಲಿ ಮಾತ್ರವಲ್ಲ, ಎಲ್ಲರಲ್ಲೂ ಗೊಂದಲ ಉಂಟು ಮಾಡುತ್ತದೆ. ಕೆಲವರು ಸುದ್ದಿವಾಹಿನಿಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಮನಸ್ಥಿತಿ ಉಳ್ಳವರು. ನಿಜವಾದ ಕಾಂಗ್ರೆಸ್ ನಾಯಕರಾರೂ ಈ ರೀತಿ ಮಾತನಾಡುವುದಿಲ್ಲ, ಅನಗತ್ಯ ಭಾವನೆ ವ್ಯಕ್ತಪಡಿಸುವುದಿಲ್ಲ. ಅವರು ಕಾಂಗ್ರೆಸ್ ಶಿಸ್ತನ್ನು ಕಲಿತಿರುತ್ತಾರೆ. ಅಧಿಕಾರಕ್ಕಾಗಿಯೇ ಕಾಂಗ್ರೆಸ್ ಗೆ ಬಂದವರನ್ನು, ಅದಕ್ಕೆ ಜೋತು ಬಿದ್ದವರನ್ನು ಯಾರು, ಏನೂ ಮಾಡಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು.
ಅಶಿಸ್ತು ತೋರಿದವರಿಗೆ ಯಾವ ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ‘ಶಿಸ್ತು, ಅಶಿಸ್ತಿನ ವಿಚಾರವನ್ನು ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತದೆ. ಯಾರು ಅಧಿಕಾರಕ್ಕೆ ಅಂಟಿಕೊಂಡಿದ್ದಾರೋ ಅವರು ಅಶಿಸ್ತನ್ನು ಅಭ್ಯಾಸ ಮಾಡಿಕೊಂಡಿದ್ದು, ನಿಜವಾದ ಕಾಂಗ್ರೆಸಿಗರು ಕಾಂಗ್ರೆಸ್ ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿದ್ದಾರೆ’ ಎಂದರು.
ಶಾಸಕಾಂಗ ಪಕ್ಷದ ನಾಯಕರು ಇದನ್ನು ನಿಯಂತ್ರಿಸಬೇಹುದಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್ ಅವರು, ‘ನಾನು ಆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯನವರು, ಪಕ್ಷದ ರಾಜ್ಯ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ನೇಮಕವಾಗಿದ್ದಾರೆ. ಅವರಿಬ್ಬರೂ ಅವರವರ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯದಲ್ಲಿರುವವರಿಗೆ ಏನು ಕೆಲಸ? ಅವರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಬೇಕಾದ ಜವಾಬ್ದಾರಿ ಇದೆ. ಕರೋನಾ ಸಮಯದಲ್ಲಿ ಆಡಳಿತ ಪಕ್ಷದ ವೈಫಲ್ಯ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿದೆ. ಸಿಎಂ ಹುದ್ದೆ ಸೇರಿ ಸದ್ಯಕ್ಕೆ ಯಾವುದೇ ಸ್ಥಾನ ಖಾಲಿ ಇಲ್ಲ. ಖಾಲಿ ಆದಾಗ ಯಾರ್ಯಾರು ಚರ್ಚೆಗೆ ಬರುತ್ತಾರೋ ಅವರಿಗೆಲ್ಲ ಆಗ ಸವಾಲು ಮಾಡೋಣ’ ಎಂದರು.
18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಿ ನಂತರ ಕಾಲೇಜು ಆರಂಭಿಸುವ ಕುರಿತು ಪ್ರಾಥಮಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಲೇಜು ಆರಂಭದ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಈ ಬಗ್ಗೆ ಪ್ರಾಥಮಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು. ಕಾಲೇಜು ವಿದ್ಯಾರ್ಥಿಗಳೆಲ್ಲರಿಗೂ ಲಸಿಕೆ ನೀಡಿದ ಬಳಿಕ ಕಾಲೇಜು ಆರಂಭಿಸಬಹುದು ಎಂದು ತಾಂತ್ರಿಕ ಸಲಹಾ ಸಮಿತಿಯು ಮುಖ್ಯಮಂತ್ರಿಗಳ ಸಭೆಯಲ್ಲಿ ಸಲಹೆ ನೀಡಿತ್ತು. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಮತ್ತೆ ಚರ್ಚಿಸಲಾಗುವುದು. ವಿದ್ಯಾರ್ಥಿಗಳ ಕ್ಷೇಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಆದ್ದರಿಂದ ಲಸಿಕೆ ಕೊಟ್ಟೇ ಕಾಲೇಜು ಆರಂಭಿಸಬೇಕೆಂದರೆ ಯಾವ ರೀತಿ, ಎಷ್ಟು ದಿನದೊಳಗೆ ಲಸಿಕಾ ಕಾರ್ಯಕ್ರಮ ಮಾಡಬೇಕೆಂದು ಚರ್ಚಿಸಲಾಗುವುದು ಎಂದರು.
ಮೊದಲು ಉನ್ನತ ಶಿಕ್ಷಣ, ನಂತರ ಪ್ರೌಢಶಾಲೆ ಆರಂಭಿಸಬೇಕಾಗುತ್ತದೆ. ಹೀಗೆ ಹಂತಹಂತವಾಗಿ ಆರಂಭಿಸಬೇಕಾಗುತ್ತದೆ. ಸಣ್ಣ ಮಕ್ಕಳಿಗೆ ಮೊದಲೇ ಶಾಲೆ ಆರಂಭಿಸಲಾಗುವುದಿಲ್ಲ. ಇದರಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚಿದೆ ಎಂದರು.
ಸಚಿವರು ಹೇಳಿದ ಇತರೆ ಅಂಶಗಳು
ರಾಜ್ಯದಲ್ಲಿ 2 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿದ್ದು, ದಕ್ಷಿಣ ಭಾರತದಲ್ಲೇ ರಾಜ್ಯ ನಂ.1 ಆಗಿದೆ. ಲಸಿಕೆ ಪಡೆದವರು ಸೋಂಕಿಗೊಳಗಾಗಿರುವುದು ತೀರಾ ಕಡಿಮೆ.
ಜಿನೋಮಿಕ್ ಸೀಕ್ವೆನ್ಸ್ ನಿಂದ ರೂಪಾಂತರಿ ವೈರಾಣು ಪತ್ತೆ ಮಾಡಲಾಗುತ್ತಿದೆ. ಡೆಲ್ಟಾ ಪ್ಲಸ್ ವೈರಾಣುವಿನ ಒಂದು ಪ್ರಕರಣ ಮೈಸೂರಿನಲ್ಲಿ ಕಂಡುಬಂದಿದ್ದು, ರೋಗಿಯನ್ನು ಐಸೋಲೇಟ್ ಮಾಡಲಾಗಿದೆ. ಅವರ ಸಂಪರ್ಕಿತರಿಗೆ ವೈರಾಣು ಹರಡಿಲ್ಲ. ಸೀಕ್ವೆನ್ಸ್ ಗೆ 6 ಲ್ಯಾಬ್ ರೂಪಿಸಲಾಗುತ್ತಿದೆ.
ಸರ್ಕಾರಿ ಆಸ್ಪತ್ರೆಗಳಲ್ಲೇ ಹಾಸಿಗೆ ಖಾಲಿ ಇದೆ. ಖಾಸಗಿಯಲ್ಲಿ ನಾನ್ ಕೋವಿಡ್ ರೋಗಿ ಬಂದರೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. 3 ನೇ ಅಲೆ ಬಂದರೆ ಆಗ ಹಾಸಿಗೆ ಕೇಳಲಾಗುವುದು.
ಎತ್ತಿನಹೊಳೆ ಯೋಜನೆ ಬೇಗ ಅನುಷ್ಠಾನವಾಗಲು ಒತ್ತಡ ಹೇರಲಾಗುವುದು. ಈ ಭಾಗದ ಪ್ರತಿನಿಧಿಗಳು ಸೇರಿ ಸಿಎಂಗೆ ಮನವರಿಕೆ ಮಾಡಿಕೊಡಲಾಗಿದೆ. ಕೋವಿಡ್ ನಿಂದಾಗಿಯೂ ಸ್ವಲ್ಪ ಸಮಸ್ಯೆಯಾಗಿದೆ.
ಕೇಂದ್ರ ಸರ್ಕಾರ ಒಂದೇ ದಿನ 80 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಿರುವುದನ್ನು ಕಾಂಗ್ರೆಸ್ ಮುಖಂಡರು ಸ್ವಾಗತಿಸಬೇಕಿತ್ತು. ರಾಜಕೀಯದಲ್ಲಿ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು ಎಂದರು.
ರಾಜ್ಯದಲ್ಲಿ ನೊಂದಾಯಿಸಿರುವ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಎಲ್ಲಾ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಮಾತ್ರ ಅನ್ವಯಿಸುವಂತೆ ಜೂನ್ 2021ರ ಮಾಹೆಗೆ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆಯ ಶೇಕಡ 50 ರಷ್ಟಕ್ಕೆ ವಿನಾಯಿತಿ ನೀಡಿ ಸಾರಿಗೆ ಇಲಾಖೆ ಆದೇಶಿಸಿದೆ.
ಕೋವಿಡ್-19 ರ 2ನೇ ಅಲೆಯ ಹಿನ್ನೆಲೆಯಲ್ಲಿ, ಪ್ರಯಾಣಿಕ ವಾಹನ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸಿ ಆದೇಶಿಸಿರುವುದರಿಂದ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957 ರ ಕಲಂ 16(1) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.
ಹೋಟೆಲ್-ರೆಸಾರ್ಟ್-ವಸತಿಗೃಹಗಳ ಕೊರೋನಾ ಕಾಲದ ವಿದ್ಯುತ್, ನೀರಿನ ಶುಲ್ಕವನ್ನು ಮನ್ನಾ ಮಾಡುವುದು ಸೇರಿದಂತೆ ಈ ಉದ್ಯಮ ನೆಲಕಚ್ಚದಂತೆ ಅಗತ್ಯ ನೆರವನ್ನು ನೀಡಬೇಕೆಂದು ವಿಧಾನಸಭೆಯ ಪ್ರತಿ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದ ಮುಖ್ಯಾಂಶಗಳು ಹೀಗಿದೆ:
ಕರ್ನಾಟಕ ಸರ್ಕಾರಕ್ಕೆ ಹೋಟೆಲ್ ಕಾರ್ಮಿಕರು, ದೀಪಾಲಂಕಾರದ ಕೆಲಸಗಾರರು, ಫೋಟೋಗ್ರಾಫರ್ ಗಳು ಸೇರಿ ಇನ್ನಿತರೆ ನಾನಾ ಜನ ಸಮುದಾಯಗಳು ಪಡುತ್ತಿರುವ ಕಷ್ಟ ಕಣ್ಣಿಗೆ ಬಿದ್ದಿಲ್ಲ.
ಬೆಂಗಳೂರು ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ಸಾವಿರಾರು ಹೋಟೆಲ್‍ಗಳು ಬಂದ್ ಆಗಿ ಮಾರಾಟಕ್ಕಿವೆ. ಹೋಟೆಲ್, ಕ್ಯಾಂಟೀನ್ ಕಟ್ಟಡಗಳ ಬಾಡಿಗೆ ಕಟ್ಟಲಾಗದೆ ಮಾಲೀಕರು ಪರಿತಪಿಸುತ್ತಿದ್ದಾರೆ.
ಬ್ಯಾಂಕ್ ಸಾಲದ ಬಡ್ಡಿ ಬೆಳೆಯುತ್ತಲೆ ಇರುವ ಕಾರಣ ಸಣ್ಣ ಮತ್ತು ಮಧ್ಯಮ ಹೋಟೆಲ್‍ಗಳ ಮಾಲಿಕರು ಮಾತ್ರವಲ್ಲ ದೊಡ್ಡ ಹೋಟೆಲ್‍ಗಳ ಮಾಲಿಕರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮತ್ತೊಂದು ಕಡೆ ಹೋಟೆಲ್ ಕಾರ್ಮಿಕರು ಎರಡು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದೆ. ಬೆಂಗಳೂರು ನಗರ ಮತ್ತು ಅಕ್ಕ ಪಕ್ಕದ ನಾಲ್ಕೈದು ಜಿಲ್ಲೆಗಳಲ್ಲೇ 20 ಸಾವಿರಕ್ಕೂ ಅಧಿಕ ಮಂದಿ ಹೋಟೆಲ್ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಇವರ ಕುಟುಂಬ ನಿರ್ವಹಣೆ ಮಾಡಲಾಗದೆ ಸಂಕಷ್ಟದಲ್ಲಿದ್ದಾರೆ.
ಈ ಕಾರ್ಮಿಕರ ಮಕ್ಕಳು ಶಿಕ್ಷಣ ತೊರೆಯಬೇಕಾದ ಸ್ಥಿತಿ ಬಂದೊದಗಿದೆ. ಇಡಿ ಸೇವಾ ವಲಯವೆ ಸ್ಥಗಿತಗೊಂಡಿರುವುದರಿಂದ ಪ್ರವಾಸೋದ್ಯಮವನ್ನೆ ನೆಚ್ಚಿಕೊಂಡಿದ್ದ ವಸತಿ ಗೃಹಗಳ ಮಾಲೀಕರು ಮತ್ತು ಕೆಲಸಗಾರರೂ ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ.
ಶುಭ ಕಾರ್ಯಗಳು ನಡೆಯದಿರುವುದರಿಂದ, ಧಾರ್ಮಿಕ ಕಾರ್ಯಗಳು, ಹಬ್ಬಗಳ ಆಚರಣೆಗೂ ಅವಕಾಶ ಇಲ್ಲವಾಗಿದ್ದರಿಂದ ಫೋಟೋಗ್ರಾಫರ್ ಗಳು, ಡೆಕೊರೇಟರ್ ಗಳು, ದೀಪದ ಅಲಂಕಾರ ಮಾಡುವ ಕೆಲಸಗಾರರು ಸೇರಿ ಪ್ರತಿಯೊಂದೂ ದುಡಿಯುವ ವರ್ಗದ ಸಹಸ್ರ ಸಹಸ್ರ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ.
ಇವರೆಲ್ಲರ ಸಂಕಷ್ಟ ಮತ್ತು ನೋವುಗಳು ಸರ್ಕಾರಕ್ಕೆ ಕಾಣಬೇಕಿತ್ತು. ಸರ್ಕಾರ ಕುರುಡಾಗಿರುವುದರಿಂದ ಈ ಶ್ರಮಿಕ ವರ್ಗಗಳೆ ಸ್ವತಃ ಸರ್ಕಾರವನ್ನು ಇನ್ನಿಲ್ಲದಂತೆ ಒತ್ತಾಯಿಸುತ್ತಿದ್ದರೂ ಅವರಿಗೆ ಸೂಕ್ತವಾದ ನೆರವು ಸಿಕ್ಕಿಲ್ಲ.
ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಘೋಷಿಸಿದ ಪ್ಯಾಕೇಜ್‍ನಲ್ಲಿ ಅರ್ಧದಷ್ಟು ಕೂಡ ತಲುಪಬೇಕಾದವರಿಗೆ ತಲುಪಲಿಲ್ಲ. ಕಾರ್ಮಿಕ ನಿಧಿ ಹೊರತುಪಡಿಸಿ ಕೇವಲ 800-900 ಕೋಟಿಯಷ್ಟು ಹಣ ನೆಪಮಾತ್ರಕ್ಕೆ ಹಂಚಿಕೆಯಾಗಿದೆ.
ಎರಡನೇ ಅಲೆ ಸಂದರ್ಭದಲ್ಲೂ ಸರ್ಕಾರ ಘೋಷಿಸಿರುವ 2 ಸಾವಿರ ಕೋಟಿ ರೂಗಳ ಪ್ಯಾಕೇಜು ರಾಜ್ಯದ ಜನರಿಗೆ ಮಾಡಿರುವ ಅವಮಾನ ಎಂದು ಮತ್ತೊಮ್ಮೆ ಹೇಳಬೇಕಾಗಿದೆ. ಈ 2 ಸಾವಿರ ಕೋಟಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಘೋಷಿಸಿರುವ ಅವರದೆ ಹಣದ ಪ್ಯಾಕೇಜು ಬಿಟ್ಟರೆ ಉಳಿಯುವುದು ಕೇವಲ 1500 ಕೋಟಿ ರೂಗಳು ಮಾತ್ರ. ಅತಿ ಕಡಿಮೆ ಪ್ಯಾಕೇಜು ಘೋಷಿಸಿದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೊದಲಿಗೆ ನಿಂತಿದೆ ಎಂಬ ಆರೋಪದಿಂದ ಹೊರಬರಬೇಕಾದರೆ ರಾಜ್ಯ ಸರ್ಕಾರ ಈಗಲಾದರೂ ಉತ್ತಮ ಪ್ಯಾಕೇಜನ್ನು ಘೋಷಿಸಿ ಅಕ್ಕ ಪಕ್ಕದ ರಾಜ್ಯಗಳ ಮುಂದೆ ಮರ್ಯಾದೆ ಉಳಿಸಿಕೊಳ್ಳಬೇಕಿದೆ.
ಆದ್ದರಿಂದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ತಲಾ 10000 ರೂಗಳನ್ನು ಘೋಷಿಸಬೇಕೆಂದು ಮತ್ತೊಮ್ಮೆ ಒತ್ತಾಯಿಸುತ್ತಿದ್ದೇನೆ. ಜೊತೆಗೆ ಈ ಕೆಳಕಂಡ ವಲಯಗಳ ಜನರೂ ಸಹ ಉಳಿದವರಂತೆ ತೀವ್ರ ಬಿಕ್ಕಟ್ಟಿನಲ್ಲಿದ್ದಾರೆ. ಆದ್ದರಿಂದ;
ಹೋಟೆಲ್, ವಸತಿ ಗೃಹ, ಫೋಟೋಗ್ರಾಫರ್ ಗಳು, ಅಲಂಕಾರಿಕ ವೃತ್ತಿಯಲ್ಲಿ ತೊಡಗಿರುವವರಿಗೆ ತಕ್ಷಣ ಸೂಕ್ತ ಪ್ಯಾಕೇಜ್ ಘೋಷಣೆ ಮಾಡಬೇಕು.
ಹೋಟೆಲ್, ಕ್ಯಾಂಟೀನ್ ಮಾಲೀಕರ ಬ್ಯಾಂಕ್ ಸಾಲ ವಸೂಲಾತಿಯನ್ನು ಮುಂದೂಡಬೇಕು. ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ಜೊತೆಗೆ ಎಲ್ಲಾ ಉತ್ಪಾದಕ ಮತ್ತು ಸೇವಾ ವಲಯಗಳ ಜನರು ಮಾಡಿರುವ ಸಾಲದ ಮೇಲಿನ ಬಡ್ಡಿಯನ್ನೂ ಮನ್ನಾ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
ಕೋವಿಡ್ ಸಂಕಷ್ಟ ಕಾಲದಲ್ಲಿ ಉನ್ನತ ಶಿಕ್ಷಣ ಕಲಿಕೆಯನ್ನು ವಿದ್ಯಾರ್ಥಿಗಳು ಅತ್ಯಂತ ಸರಳ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿಗಳನ್ನು ವಿತರಣೆ ಮಾಡುವ ರಾಜ್ಯದ ಮಹಾತ್ವಾಕಾಂಕ್ಷಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದರು.
ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ʼಕಲಿಕಾ ನಿರ್ವಹಣಾ ವ್ಯವಸ್ಥೆʼಯ ಮೂಲಕ ಬೋಧನೆ- ಕಲಿಕೆಗಾಗಿ ಟ್ಯಾಬ್ಲೆಟ್ ಪಿಸಿಗಳನ್ನು ನೀಡಲಾಗಿದ್ದು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬುಧವಾರ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಹತ್ತು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್ಲೆಟ್ ಪಿಸಿಗಳನ್ನು ವಿತರಿಸಿದರು.
ಏಕಕಾಲದಲ್ಲೇ ರಾಜ್ಯದ ವಿವಿಧ ಜಿಲ್ಲೆಗಳ ಕಾಲೇಜುಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಬ್ಲಾಂಕ್ವೆಟ್ ಹಾಲ್ ವೇದಿಕೆಗೆ ವರ್ಚುಯಲ್ ಮೂಲಕ ಲಿಂಕ್ ಆಗಿ ಟ್ಯಾಬ್‌ಗಳನ್ನು ವಿತರಣೆ ಮಾಡಿದರು. ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು, ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರೂ ಆನ್‌ಲೈನ್ ವೇದಿಕೆ ಮೂಲಕ ಟ್ಯಾಬ್‌ಗಳನ್ನು ವಿತರಣೆ ಮಾಡಿದರು.
ಸ್ಮಾರ್ಟ್ ಕ್ಲಾಸ್ ರೂಂ ಲೋಕಾರ್ಪಣೆ
ಬ್ಯಾಂಕ್ವೆಟ್ ಹಾಲ್‌ನಲ್ಲಿ ಸ್ಥಾಪಿಸಲಾಗಿದ್ದ ಮಾದರಿ ಸ್ಮಾಟ್‌ಕ್ಲಾಸ್ ರೂಂ ಅನ್ನು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಿ ಅದರ ವ್ಯವಸ್ಥೆ ವೀಕ್ಷಿಸಿದರು.
ಅದರ ಮೂಲಕ ವಿದ್ಯಾರ್ಥಿಗಳು ಹೇಗೆ ಕಲಿಯುತ್ತಾರೆ ಎಂಬುದನ್ನು ಅವರು ಗಮನಿಸಿದರಲ್ಲದೆ ಈ ಕುರಿತ ಮಾಹಿತಿಯನ್ನು ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಂದ ಪಡೆದುಕೊಂಡರು. ಸ್ಮಾರ್ಟ್‌ಕ್ಲಾಸ್ ರೂಂನ ತಾಂತ್ರಿಕ ನೈಪುಣ್ಯತೆ ಹಾಗೂ ಬೋಧನೆ-ಕಲಿಕೆ ವಿಧಾನದ ಬಗ್ಗೆ ಯಡಿಯೂರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ ಸಂಕಷ್ಟ ಕಾಲದಲ್ಲಿ ತಮ್ಮ ನೆರವಿಗೆ ಬಂದ ಕಲಿಕಾ ನಿರ್ವಹಣಾ ವ್ಯವಸ್ಥೆ, ಟ್ಯಾಬ್‌ಗಳು ಹಾಗೂ ಸ್ಮಾರ್ಟ್‌ಕ್ಲಾಸ್ ರೂಂಗಳ ಉಪಯೋಗದ ಬಗ್ಗೆ ಇಬ್ಬರು ವಿದ್ಯಾರ್ಥಿಗಳು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸಮಕ್ಷಮದಲ್ಲಿ ಅಭಿಪ್ರಾಯ ಹಂಚಿಕೊಂಡರು.
163 ಕೋಟಿ ರೂ. ವೆಚ್ಚ: ಸಿಎಂ
ರಾಜ್ಯದಲ್ಲಿನ 430 ಸರಕಾರಿ ಪ್ರಥಮ ದರ್ಜೆ ಕಾಲೇಜು, 87 ಸರಕಾರಿ ಪಾಲಿಟೆಕ್ನಿಕ್ ಹಾಗೂ 14 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 1.55 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ಉಚಿತವಾಗಿ ನೀಡಲಾಗಿದೆ. ಈ ಯೋಜನೆಗೆ ಸರಕಾರ 163 ಕೋಟಿ ರೂ. ವೆಚ್ಚ ಮಾಡಿದೆ ಎಂದು ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದರು.
ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ನಗರ- ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಯಲ್ಲಿ ತಾರತಮ್ಯ ನಿವಾರಿಸುವುದು, ಅವರ ನಡುವೆ ಡಿಜಿಟಲ್ ಅಂತರವನ್ನು ಅಳಿಸಿಹಾಕುವ ಮತ್ತೂ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಇಂಥ ಉತ್ತಮ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿಗಳು ನುಡಿದರು.
ಅಲ್ಲದೆ 27.77 ಕೋಟಿ ರೂ. ವೆಚ್ಚದಲ್ಲಿ ಕಲಿಕಾ ನಿರ್ವಹಣೆ ವ್ಯವಸ್ಥೆ ವಿದ್ಯಾರ್ಥಿಗಳು ಕಲಿಯುವುದಕ್ಕೆ ಅನುವಾಗುವಂತೆ 2,500 ಸ್ಮಾರ್ಟ್‌ಕ್ಲಾಸ್ ರೂಂಗಳನ್ನು ರಾಜ್ಯಾದ್ಯಂತ ಸ್ಥಾಪಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚು ಪೂರಕವಾಗಲಿದೆ ಎಂದು ಅವರು ನುಡಿದರು.
ಇಡೀ ದೇಶದಲ್ಲಿಯೇ ಮೊದಲ ಉಪಕ್ರಮ: ಡಿಸಿಎಂ
ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ಗಳ ಮೂಲಕ ಕಲಿಕಾ ನಿರ್ವಹಣಾ ವ್ಯವಸ್ಥೆ ಮಾಡಿರುವ ರಾಜ್ಯದ ಕ್ರಮ ದೇಶದಲ್ಲೇ ಪ್ರಥಮ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಇದೇ ವೇಳೆ ಮಾತನಾಡುತ್ತಾ ಹೇಳಿದರು.
ಇದೊಂದು ಉದಾತ್ತ ಕಾರ್ಯಕ್ರಮ. ಇದರಲ್ಲಿ ಉನ್ನತ ಶಿಕ್ಷಣ ಇಲಾಖೆಯ ಜತೆಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಕೈಜೋಡಿಸಿವೆ. ಮೂರು ಇಲಾಖೆಗಳ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸ ಉಂಟು ಮಾಡಿದೆ ಎಂದಿ ಡಿಸಿಎಂ ಹೇಳಿದರು.
ರಾಜ್ಯದ ಉನ್ನತ ಶಿಕ್ಷಣದಲ್ಲಿ ಸುಧಾರಣೆಗಳ ಪರ್ವವೇ ಆರಂಭವಾಗಿದೆ. ಈ ವರ್ಷವೇ ರಾಷ್ಟ್ರೀಯ ಶಿಕ್ಷಣ ನೀತಿಯೂ ಜಾರಿಗೆ ಬರುತ್ತದೆ. ಅದಕ್ಕೆ ಮೊದಲೇ ಕಲಿಕಾ ನಿರ್ವಹಣೆ ವ್ಯವಸ್ಥೆ ಜಾರಿಗೆ ಬಂದಿದ್ದು, ಅದನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ಕೋಡಲಾಗಿದೆ. ಜಾಗತಿಕ ಮಟ್ಟದ ಆಧುನಿಕ ಕಲಿಕಾ ಮಟ್ಟಕ್ಕೆ ತಕ್ಕಂತೆ ಕಲಿಕೆಯನ್ನು ನಿರಂತರವಾಗಿ ಮುಂದುವರಿಸುವುದು ಹಾಗೂ ಆನ್‌ಲೈನ್ ಮೂಲಕವೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ಗಳು ನೆರವಾಗುತ್ತವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪ್ರಭಾಕರ್ ಟ್ಯಾಬ್ಲೆಟ್ ಪಿಸಿಗಳ ಬಗ್ಗೆ ಮಾಹಿತಿ ಹಾಗೂ ಅವುಗಳ ಮೂಲಕ ಸಮಗ್ರ ಕಲಿಕಾ ವ್ಯವಸ್ಥೆ ಕಲಿಕೆ-ಬೋಧನೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ನಾಗಲಾಂಬಿಕೆ ದೇವಿ, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಮಾರ್ಟ್‌ಕ್ಲಾಸ್ ರೂಂ ಉದ್ಘಾಟಿಸಿ ನಿರ್ಗಮಿಸಿದ ನಂತರ, ಪುನಾ ಅಲ್ಲಿಗೆ ಆಗಮಿಸಿದ ಡಿಸಿಎಂ ಡಾ.ಅಶ್ವತ್ಥನಾರಾಯಣ, ಸ್ಮಾರ್ಟ್‌ಕ್ಲಾಸ್ ರೂಂನಲ್ಲಿ ಪಾಠ ಕೇಳಿದರು.ಈ ವೇಳೆಯಲ್ಲಿ ಕನ್ನಡ ಪ್ರಾಧ್ಯಾಪಕರೊಬ್ಬರು ಸ್ಮಾರ್ಟ್‌ಕ್ಲಾಸ್ ರೂಂನಿದಲೇ ಮೊದಲ ಪಾಠ ಆರಂಭಿಸಿದರು. ಹೈಸ್ಪೀಡ್ ಇಂಟರ್‌ನೆಟ್, ಆಧುನಿಕ ಫಿಚರ್‌ಗಳುಳ್ಳ ಟ್ಯಾಬ್ಲೆಟ್ ಪಿಸಿ ಮೂಲಕ ಕಲಿಕಾ ನಿರ್ವಹಣಾ ವ್ಯವಸ್ಥೆ ಅಡಿಯಲ್ಲಿ ನಡೆದ ಈ ಬೋಧನೆ- ಕಲಿಕೆಯ ಮಾದರಿಯನ್ನು ಅವರು ನೇರವಾಗಿ ವಿದ್ಯಾರ್ಥಿಯಂತೆಯೇ ವೀಕ್ಷಿಸಿದರು.
ವಿದ್ಯಾರ್ಥಿಗಳ ಜತೆಯಲ್ಲಿ ಪಾಠವನ್ನು ಆಸಕ್ತಿಯಿಂದ ಕೇಳಿದ ಡಿಸಿಎಂ, ತಂತ್ರಜ್ಞಾನದ ಮೂಲಕ ಕನ್ನಡ ಪಾಠ ಕೇಳಿ ಚಕಿತರಾದರು. ಅಲ್ಲದೆ, ಸ್ಮಾರ್ಟ್‌ಕ್ಲಾಸ್ ರೂಂನ ಪರಿಣಾಮಕಾರಿ ದಕ್ಷತೆಯನ್ನು ವೀಕ್ಷಿಸಿ ಸಂತಸಪಟ್ಟರು. ಬೋಧನೆಗೆ ಈ ವ್ಯವಸ್ಥೆ ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂದು ಬೋಧಕರಿಂದಲೇ ಮಾಹಿತಿ ಪಡೆದರಲ್ಲದೆ, ತಮ್ಮ ಜತೆ ಕೂತು ಪಾಠ ಕೇಳಿದ ವಿದ್ಯಾರ್ಥಿಗಳ ಜತೆಗೂ ಸಂವಾದ ನಡೆಸಿದರು.
ಕೋಲಾರ ಜಿಲ್ಲೆಯ ಮಾಲೂರಿನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಈ ವೇಳೆ ಪಾಠ ಮಾಡಿದರು. ನಂತರ ಮಹಾರಾಣಿ ಅಮ್ಮಣ್ಣಿ ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ಶಾಲಿನಿ ಅವರು ರಾಸಾಯನ ಶಾಸ್ತ್ರ ಕ್ಲಾಸ್ ನಡೆಸಿಕೊಟ್ಟರು. ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಅವರೂ ಪಾಠ ಕೇಳಿಸಿಕೊಂಡರು
ಮರಳಿ ಕಾಲೇಜಿಗೆʼ ಎನ್ನುವ ಘೋಷವಾಕ್ಯದಡಿ ಕಾಲೇಜುಗಳನ್ನು ಆರಂಭಿಸಲು ಸರಕಾರ ಚಿಂತನೆ ನಡೆಸಿದೆ. ಹೀಗಾಗಿ, ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲು ಸರಕಾರ ಉದ್ದೇಶಿಸಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಬುಧವಾರ ನಡೆದ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳ ವಿತರಣಾ ಕಾರ್ಯಕ್ರಮದ ನಂತರ ಮಾಧ್ಯಮಗಳ ಜತೆ ಮಾತನಾಡಿದರು ಅವರು.
3ನೇ ಅಲೆಯ ಮುನ್ನೆಚ್ಚರಿಕೆಯೂ ಸೇರಿ ಎಲ್ಲ ಅಂಶಗಳನ್ನು ಒಳಗೊಂಡ ವರದಿಯನ್ನು ಡಾ.ದೇವಿಶೆಟ್ಟಿ ನೇತೃತ್ವದ ಸಮಿತಿ ನೀಡಿದೆ. ಮೊದಲು ಕಾಲೇಜುಗಳನ್ನು ತೆರೆಯಿರಿ ಎಂದು ವರದಿ ಶಿಫಾರಸು ಮಾಡಿದೆ. ಜುಲೈ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಉದ್ದೇಶವಿದೆ ಎಂದರು.
ಕೇಂದ್ರ ಸರಕಾರ ನೀಡುವ ಮಾರ್ಗಸೂಚಿಗೆ ಸರಕಾರ ಕಾಯುತ್ತಿದೆ. ಈಗಾಗಲೇ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ನೀಡುವ ಕೆಲಸ ಸಾಗಿದೆ. ಅದರಲ್ಲೂ ವಿದ್ಯಾರ್ಥಿಗಳನ್ನು ಆದ್ಯತಾ ಗುಂಪಿಗೆ ಸೇರಿಸಿ ವ್ಯಾಕ್ಸಿನ್ ನೀಡಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಲಸಿಕೆ ಮಾತ್ರ ಪರಿಹಾರ:
ಕೋವಿಡ್ ಡೆಲ್ಟಾ ಪ್ಲಸ್ ಮಾರಿ ರಾಜ್ಯಕ್ಕೆ ಕಾಲಿಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ಲಸಿಕೆ ಪಡೆದಿದ್ದರೆ ಯಾವುದೇ ರೂಪಾಂತರಿ ವೈರಸ್ ಬಂದರೂ ತೊಂದರೆ ಆಗುವುದಿಲ್ಲ. ಎಲ್ಲರೂ ಈಗ ಲಸಿಕೆ ಪಡೆಯಬೇಕು. ಅದೊಂದೇ ಪರಿಹಾರ ಎಂದು ಡಿಸಿಎಂ ಹೇಳಿದರು
ಕೋವಿಡ್-19 ಸಾಂಕ್ರಾಮಿಕ ಇಳಿಮುಖ ಕಾಣುತ್ತಿರುವ ಹಿನ್ನೆಲೆಯಲ್ಲಿ ಜುಲೈನಲ್ಲಿ ನಡೆಯಲಿರುವ 2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಾಮಾಣಿತ ಕಾರ್ಯಾಚರಣೆ ವಿಧಾನ- ಎಸ್ ಒ ಪಿ ಬಿಡುಗಡೆ ಮಾಡಲಾಗಿದ್ದು, ಇದರ ಆಧಾರದ ಮೇಲೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ . ಸುರೇಶ್ ಕುಮಾರ್ ತಿಳಿಸಿದ್ದಾರೆ.
ಜುಲೈ 3ನೇ ವಾರದಲ್ಲಿ ನಡೆಸಲುದ್ದೇಶಿಸಿರುವ ಎಸ್ ಎಸ್ ಎಲ್ ಸಿ ಪರೀಕ್ಷೆ ಸಂಬಂಧದಲ್ಲಿ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರೂಪಿಸಿ ನೀಡಿದ ಎಸ್ ಒ ಪಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗಲಿರುವ ಶಿಕ್ಷಕರು, ಸಿಬ್ಬಂದಿ ಮತ್ತು ಅಧಿಕಾರಿಗಳು ಜಿಲ್ಲಾಡಳಿತದ ಸಹಕಾರದಿಂದ ಕೋವಿಡ್ ಲಸಿಕೆ ಪಡೆಯಬೇಕೆಂದು ಎಸ್ ಒ ಪಿಯಲ್ಲಿ ಸೂಚಿಸಲಾಗಿದೆ. ಪರೀಕ್ಷಾ ವೇಳೆಯೊಳಗೆ ಒಂದು ಡೋಸ್ ಲಸಿಕೆಯನ್ನಾದರೂ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಎಸ್ ಒ ಪಿ ಅನುಷ್ಠಾನಗೊಳಿಸಲು ಮಾಡಿಕೊಂಡಿರುವ ಸಿದ್ಧತೆಗಳನ್ನು ಪರೀಕ್ಷಾ ಪೂರ್ವದಲ್ಲಿ ಪರಿಶೀಲಿಸುವುದು ಮತ್ತು ಅನುಷ್ಠಾನವನ್ನು ಜಿಲ್ಲಾಧಿಕಾರಿಗಳು, ಸಿಇಒ ಮತ್ತು ಎಸ್ ಪಿಯವರು ಖಾತರಿಪಡಿಸುವುದರೊಂದಿಗೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕೆಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪ್ರತಿದಿನವೂ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ಪರೀಕ್ಷೆ ನಂತರ ಸೋಂಕು ನಿವಾರಕ ದ್ರಾವಣದಿಂದ ಸ್ಥಳೀಯಾಡಳಿತ ಸಂಸ್ಥೆಗಳ ನೆರವಿನಿಂದ ಪರೀಕ್ಷಾ ಕೇಂದ್ರ, ಪರೀಕ್ಷಾ ಕೊಠಡಿ, ಪೀಠೋಪಕರಣ ಮತ್ತು ಶೌಚಾಲಯಗಳನ್ನು ಸ್ಯಾನಿಟೈಜೇಷನ್ ಮಾಡುವುದು, ಪರೀಕ್ಷಾ ಕೇಂದ್ರಕ್ಕೆ ಆಗಮನ ಮತ್ತು ನಿರ್ಗಮನ ಹಾಗೆಯೇ ಕೊಠಡಿ ಪ್ರವೇಶ ಸಮಯದಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳುವುದು. ಪರೀಕ್ಷಾ ಕೇಂದ್ರದ ಪ್ರವೇಶದ ಸಂದರ್ಭದಲ್ಲಿ ಮಕ್ಕಳ ಕೈಗೆ ಸ್ಯಾನಿಟೈಜ್ ಮಾಡುವುದು. ಪರೀಕ್ಷಾ ಕೊಠಡಿಯಲ್ಲಿ 12 ಮಕ್ಕಳಿರಬೇಕು. ಒಂದು ಡೆಸ್ಕ್ ಗೆ ಒಬ್ಬ ಪರೀಕ್ಷಾರ್ಥಿ ಮಾತ್ರವೇ ಇರಬೇಕು. ಮಕ್ಕಳು ಯಾವ ಸಮಯದಲ್ಲೂ ಗುಂಪು ಗೂಡುವುದನ್ನು ತಡೆಯುವುದು. ಮನೆಯಿಂದ ನೀರಿನ ಬಾಟಲ್ ಮತ್ತು ಊಟದ ಡಬ್ಬಿ ತರುವುದಕ್ಕೆ ಅವಕಾಶ ಕಲ್ಪಿಸುವುದು. ಪರೀಕ್ಷಾ ಕೊಠಡಿಯಲ್ಲಿ ಮಳೆ ನೀರು ಇರುಚಲು ಸಿಂಪಡಿಸದಂತೆ ಕ್ರಮ ವಹಿಸುವುದು. ಗ್ರಾಮೀಣ ವಿಭಾಗದ ಅಭ್ಯರ್ಥಿಗಳು ಸಾಧ್ಯವಾದಷ್ಟು ತಾಲೂಕು ಕೇಂದ್ರಗಳಿಗೆ ಹೋಗದಂತೆ ಪರೀಕ್ಷಾ ಕೇಂದ್ರಗಳನ್ನು ರಚಿಸುವುದನ್ನು ಖಾತರಿಪಡಿಸಿಕೊಳ್ಳಬೇಕೆಂದು ಎಸ್ ಒಪಿ ಯಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಶೇಷ ಕೊಠಡಿ:ಕೆಮ್ಮು, ನೆಗಡಿ, ಜ್ವರ ಮೊದಲಾದುವುಗಳಿಂದ ಬಳಲುತ್ತಿರುವ ಇಲ್ಲವೇ ಈ ಲಕ್ಷಣಗಳಿರುವ ಅಭ್ಯರ್ಥಿಗಳಿಗಾಗಿ ಕನಿಷ್ಠ 2 ಕೊಠಡಿಗಳನ್ನು ವಿಶೇಷ ಕೊಠಡಿಗಳನ್ನಾಗಿ ಕಾಯ್ದಿರಿಸಬೇಕೆಂದೂ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದ ಪ್ರವೇಶವಾದೊಡನೆ ನೇರವಾಗಿ ಆರೋಗ್ಯ ತಪಾಸಣಾ ಕೌಂಟರ್ ಪ್ರವೇಶಿಸುವಂತೆ ನಿರ್ದೇಶಿಸುವುದು. ಆರೋಗ್ಯ ಕೌಂಟರ್ ಗಳು ಬೆಳಗ್ಗೆ 8.30ಕ್ಕೆ ಅರಂಭವಾಗಿ ಪರೀಕ್ಷಾ ಪ್ರಕ್ರಿಯೆ ಮುಗಿಯುವ ತನಕ ತೆರದಿರಲಿವೆ. ಥರ್ಮಲ್ ಸ್ಕ್ಯಾನರ್, ಪಲ್ಸ್ಆಕ್ಸಿಮೀಟರ್, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಿರುವುದನ್ನು ಖಾತರಿಪಡಿಸಬೇಕೆಂದು ಸೂಚಿಸಲಾಗಿದೆ. ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಆರೋಗ್ಯ ಕೌಂಟರ್ ಗಳಲ್ಲೇ ಮಾಸ್ಕ್ ನೀಡಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ತುರ್ತು ಚಿಕಿತ್ಸಾ ವಾಹನ:ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಪ್ರತಿ ತಾಲೂಕಿಗೊಂದು ತುರ್ತು ಚಿಕಿತ್ಸಾ ವಾಹನವನ್ನು ಮೀಸಲಿಡುವುದು. ಪರೀಕ್ಷಾ ಸಿಬ್ಬಂದಿಯೂ ಯಾವುದೇ ಸಂದರ್ಭದಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಅಗತ್ಯ ಬಿದ್ದರೆ ಸಿಬ್ಬಂದಿ ಫೇಸ್ ಶೀಲ್ಡ್ ಬಳಸುವುದು. ಗಡಿ ಭಾಗದ ಪರೀಕ್ಷಾ ಕೇಂದ್ರಗಳಿಗೆ ಹೊರ ರಾಜ್ಯದಿಂದ ಬರುವ ಪರೀಕ್ಷಾರ್ಥಿಗಳಿಗೆ ಅನುವಾಗುವಂತೆ ಪರೀಕ್ಷೆಗಳ ದಿವಸದಂದು ರಾಜ್ಯದ ಗಡಿ ಪ್ರವೇಶಕ್ಕೆ ಜಿಲ್ಲಾಡಳಿತದ ಸಮನ್ವಯದೊಂದಿಗೆ ಕ್ರಮ ವಹಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.sop ಪ್ರತಿ ಇಲ್ಲಿದೆ.
ಕೋವಿಡ್ ಕೇರ್ ಸೆಂಟರ್ ಸ್ಥಾಪನೆ:ಪರೀಕ್ಷಾರ್ಥಿಗಳಿಗೆ ಕೋವಿಡ್ ಪಾಸಿಟೀವ್ ಕಂಡು ಬಂದಿದ್ದರೆ ಅಂತಹ ಪರೀಕ್ಷಾರ್ಥಿಗೆ ತಾಲೂಕಿಗೊಂದು ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿಯೇ ಅವರಿಗೆ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಸೋಂಕು ತಗುಲಿದ್ದು, ಪರೀಕ್ಷಾರ್ಥಿ ಐಸೋಲೇಷನ್ ನಲ್ಲಿದ್ದರೆ ಅವರನ್ನು ತಪಾಸಣೆ ನಡೆಸಿ ಆರೋಗ್ಯವಾಗಿರುವುದು ಕಂಡುಬಂದರೆ ಸಮೀಪದ ವಿದ್ಯಾರ್ಥಿ ಕೋವಿಡ್ ಕೇರ್ ಸೆಂಟರ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಕೋವಿಡ್ ಆರೈಕೆ ಕೇಂದ್ರದಲ್ಲಿ ಒಂದು ಅಂಬುಲೆನ್ಸ್ ವಾಹನ ಕಾಯ್ದಿರಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ರವಾನೆ, ಪರೀಕ್ಷೆ ನಂತರ ಒಎಂಆರ್ ಶೀಟ್ ಗಳ ರವಾನೆ ಕುರಿತು ನಿಗದಿತ ಸೂಚನೆಗಳನ್ನು ಒದಗಿಸಲಾಗಿದ್ದು, ಹಾಗೂ ಆರೋಗ್ಯಕರ ವಾತಾವರಣದಲ್ಲಿ ಪರೀಕ್ಷೆ ಯಶಸ್ಸಿಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಜೂ. 28ರಂದು ವಿಡಿಯೋ ಕಾನ್ಫೆರೆನ್ಸ್:ಪರೀಕ್ಷೆಯನ್ನು ಸುಲಲಿತ ಹಾಗೂ ಆರೋಗ್ಯಕರ ಪರಿಸರದಲ್ಲಿ ನಡೆಸುವ ಸಲುವಾಗಿ ಜೂ. 28ರಂದು ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಸ್.ಪಿ ಗಳು, ಡಿಎಚ್ಒ, ಖಜಾನಾಧಿಕಾರಿಗಳು ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ಸಭೆಯಲ್ಲಿ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಆಯುಕ್ತರು ಭಾಗಿಯಾಗುವರು ಎಂದು ಸಚಿವರು ತಿಳಿಸಿದ್ದಾರೆ