ಡ್ರಗ್ಸ್ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ. ಡ್ರಗ್ಸ್ ಮಾರಾಟ ಜಾಲವನ್ನು ಮೆಟ್ಟಿ ನಿಲ್ಲುವುದೇ ನಮ್ಮ ಸಂಕಲ್ಪ ಎಂದು ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆ ಅಂಗವಾಗಿ ಬೆಂಗಳೂರು ನಗರ ಪೊಲೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಾರ್ಕ್ ವೆಬ್ ಮೂಲಕ ಸರಬರಾಜಾಗುತ್ತಿದ್ದ ಮಾದಕ ವಸ್ತುಗಳನ್ನು ನಮ್ಮ ಪೊಲೀಸರು ನಿಯಂತ್ರಿಸಿದ್ದಾರೆ. ಡಾರ್ಕ್ ವೆಬ್ ಅಪರಾಧ ಪತ್ತೆಯಿಂದ ಹಲವಾರು ಹೊಸ ವಿಚಾರಗಳು ಬೆಳಕಿಗೆ ಬಂದಿವೆ. ಅದರ ಆಧಾರದ ಮೇಲೆ ಹಲವಾರು ದಾಳಿಗಳು ನಡೆದಿವೆ. ಅಂತಾರಾಷ್ಟ್ರೀಯ ಮಟ್ಟದ ಪ್ಲೇಯರ್ ಗಳನ್ನು ಪತ್ತೆ ಮಾಡಿ ಬಂಧಿಸಲಾಗುವುದು. ಡ್ರಗ್ಸ್ ವಿರುದ್ಧದ್ಧ ಹೋರಾಟ ಮುಂದುವರಿಯಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕರ್ನಾಟಕ ಪೊಲೀಸರ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ
ಡ್ರಗ್ಸ್ ವಿರುದ್ಧದ ನಮ್ಮ ಹೋರಾಟದಲ್ಲಿ ಕರ್ನಾಟಕ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಕರ್ನಾಟಕ ಪೊಲೀಸರ ಡ್ರಗ್ ವಿರೋಧಿ ಕಾರ್ಯಾಚರಣೆಯಿಂದ ಬೇರೆ ಎಲ್ಲ ತನಿಖಾ ಏಜೆನ್ಸಿಗಳು ಜಾಗೃತವಾದವು ಅನ್ನುವುದು ಬಹಳ ಮುಖ್ಯ. ಸಾಮಾನ್ಯವಾಗಿ ಇದುವರೆಗೆ ಬೇರೆ ಏಜೆನ್ಸಿಗಳು ಅಪರಾಧ ತಡೆ ಕುರಿತು ಜಾಗೃತಿ ಮೂಡಿಸುತ್ತಿದ್ದವು. ಆದರೆ ಈಗ ಕರ್ನಾಟಕ ಪೊಲೀಸರು ಅಪರಾಧ ಪತ್ತೆ ವಿಚಾರದಲ್ಲಿ ಬೇರೆ ಸಂಸ್ಥೆಗಳನ್ನು ಜಾಗೃತಗೊಳಿಸುತ್ತಿವೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಅವರು ಹೇಳಿದರು.
50 ಕೋಟಿ ಮೊತ್ತದ ಮಾದಕವಸ್ತುಗಳ ನಾಶ
2020 21 ನೇ ಸಾಲಿನಲ್ಲಿ ರಾಜ್ಯದಲ್ಲಿ ವಶಪಡಿಸಿಕೊಳ್ಳಲಾಗಿ ರುವ 3000 ಕೆಜಿ ಗಿಂತಲೂ ಹೆಚ್ಚು ತೂಕದ 50 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ನ್ಯಾಯಾಲಯದ ಆದೇಶದ ಪ್ರಕಾರ ನಾಶಪಡಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಮಾದಕ ವಸ್ತುಗಳು ಅಪಾರ ಪ್ರಮಾಣದ ಜನರ ಆರೋಗ್ಯವನ್ನು ಹಾಳು ಮಾಡುತ್ತಿದ್ದವು. ಆ ಅಪಾಯವನ್ನು ನಮ್ಮ ಪೊಲೀಸರು ತಪ್ಪಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಅಂತರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆ ಅಂಗವಾಗಿ ಬೊಮ್ಮಾಯಿ ಪೊಲೀಸರಿಗೆ ಮಾದಕವಸ್ತು ತಡೆ ಮತ್ತು ನಾಶಪಡಿಸುವ ಕುರಿತು ಪ್ರಮಾಣ ವಚನ ಬೋಧಿಸಿದರು.
ಇದುವರೆಗಿನ ಡ್ರಗ್ಸ್ ವಿರುದ್ಧದ ಹೋರಾಟದ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಮಾಣದ ವಿವಿಧ ರೀತಿಯ ಮಾದಕ ವಸ್ತುಗಳನ್ನು ಒಂದೇ ವರ್ಷದಲ್ಲಿ ವಶಪಡಿಸಿಕೊಂಡಿರುವುದು ಐತಿಹಾಸಿಕ. ಇದು ಕರ್ನಾಟಕ ಪೊಲೀಸರ ಸಣ್ಣ ಸಾಧನೆಯೇನಲ್ಲ. ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ದಾಳಿಗಳು ನಡೆದವು. ಇದರ ಜಾಡು ಹಿಡಿದು ರಾಜ್ಯದ ಇತರ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದ ಮಾದಕ ವಸ್ತುಗಳ ಜಾಲವನ್ನು ನಮ್ಮ ಪೊಲೀಸರು ಭೇದಿಸಿದರು. ಅದೆಷ್ಟೋ ಯುವಕರು, ಕುಟುಂಬಗಳು ಮಾದಕ ವಸ್ತುಗಳಿಂದ ಹಾಳಾಗುವುದನ್ನು ತಪ್ಪಿಸಿದರು ಎಂದು ಬಸರಾಜ್ ಬೊಮ್ಮಾಯಿ ಹೇಳಿದರು.
ಕೇಂದ್ರ ಸರ್ಕಾರ NDPS (ನಾರ್ಕೋಟಿಕ್ ಡ್ರಗ್ಸ್ ಸೈಕ್ಯಾಟ್ರಿಕ್ ಸಬಸ್ಟನ್ಸ್) ಕಾನೂನನ್ನು ರೂಪಿಸಿದೆ. ಈ ಕಾನೂನನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಹಾಗೂ ಮತ್ತಷ್ಟು ಗಟ್ಟಿಯಾಗಿ ಜಾರಿಗೊಳಿಸಬೇಕೆಂಬುದು ನಮ್ಮ ದೃಢ ನಿರ್ಧಾರ.ಹೀಗಾಗಿ ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಲು ನಿಯಮಗಳನ್ನು ರೂಪಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಸಂಬಂಧ ನ್ಯಾಷನಲ್ ಲಾ ಸ್ಕೂಲ್ ಜತೆ ಸಭೆ ನಡೆದಿದ್ದು ಕಾನೂನಿನನ್ವಯ ನಿಯಮ ರೂಪಿಸಿ ಜಾರಿಗೆ ತರಲು ಅಧ್ಯಯನ ನಡೆಯುತ್ತಿದೆ.
ಬಸವರಾಜ್ ಬೊಮ್ಮಾಯಿ,ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು
ಲಸಿಕೆ ಕುರಿತಾದ ಸಾಮಾನ್ಯ ಪ್ರಶ್ನೆಗಳಿಗೆ ʻಎನ್‌ಟಿಎಜಿಐʼಯ ಕೋವಿಡ್-19 ಕಾರ್ಯಪಡೆ ಅಧ್ಯಕ್ಷ ಡಾ. ಎನ್.ಕೆ. ಅರೋರಾ ಅವರು ಉತ್ತರಿಸಿದ್ದಾರೆ.
ಶೀಘ್ರದಲ್ಲೇ ನಾವು ಭಾರತದಲ್ಲೇ ತಯಾರಿಸಿದ ಝೈಡಸ್ ಕ್ಯಾಡಿಲ್ಲಾ ಸಂಸ್ಥೆಯ ವಿಶ್ವದ ಮೊದಲ ʻಡಿಎನ್ಎ-ಪ್ಲಾಸ್ಮಿಡ್ʼ ಲಸಿಕೆಯನ್ನು ಪಡೆಯಲಿದ್ದೇವೆ. ಶೀಘ್ರದಲ್ಲೇ ನಿರೀಕ್ಷಿಸಬಹುದಾದ ಮತ್ತೊಂದು ಲಸಿಕೆಯೆಂದರೆ ʻಬಯೋಲಾಜಿಕಲ್ ಇʼ. ಇದೊಂದು ಪ್ರೋಟೀನ್ ಉಪ-ಘಟಕ ಲಸಿಕೆಯಾಗಿದೆ ಎಂದು ʻರಾಷ್ಟ್ರೀಯ ಲಸಕೀಕರಣದ ತಾಂತ್ರಿಕ ಸಲಹಾ ಗುಂಪಿನʼ (ಎನ್‌ಟಿಎಜಿಐ) ಕೋವಿಡ್-19 ಕಾರ್ಯಪಡೆಯ ಅಧ್ಯಕ್ಷ ಡಾ. ನರೇಂದ್ರ ಕುಮಾರ್ ಅರೋರಾ ಮಾಹಿತಿ ನೀಡಿದ್ದಾರೆ.
“ಈ ಲಸಿಕೆ ಸೆಪ್ಟೆಂಬರ್ ವೇಳೆಗೆ ಲಭ್ಯವಾಗುವ ವಿಶ್ವಾಸವನ್ನು ನಾವು ಹೊಂದಿದ್ದೇವೆ. 2 – 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಬಹುದಾದ ಭಾರತ ಮೂಲದ ʻಎಂ-ಆರ್‌ಎನ್‌ಎ ಲಸಿಕೆಯೂ ಸೆಪ್ಟೆಂಬರ್ ವೇಳೆಗೆ ಲಭ್ಯವಾಗಲಿದೆ. ಸೀರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಜಾನ್ಸನ್ & ಜಾನ್ಸನ್ ಅವರ ʻನೊವ್ಯಾಕ್ಸ್ʼ ಎಂಬ ಇತರ ಎರಡು ಲಸಿಕೆಗಳನ್ನು ಸಹ ಶೀಘ್ರದಲ್ಲೇ ನಿರೀಕ್ಷಿಸಬಹುದು. ಜುಲೈ ಮೂರನೇ ವಾರದ ವೇಳೆಗೆ ಭಾರತ್ ಬಯೋಟೆಕ್ ಮತ್ತು ʻಎಸ್‌ಐಐʼ ನ ಉತ್ಪಾದನಾ ಸಾಮರ್ಥ್ಯವನ್ನು ಅಗಾಧವಾಗಿ ಹೆಚ್ಚಿಸಲಾಗುವುದು. ಇದರಿಂದ ದೇಶದಲ್ಲಿ ಲಸಿಕೆಯ ಪೂರೈಕೆ ಹೆಚ್ಚಾಗಲಿದೆ. ಆಗಸ್ಟ್ ವೇಳೆಗೆ ನಾವು ಒಂದು ತಿಂಗಳಲ್ಲಿ 30-35 ಕೋಟಿ ಡೋಸ್‌ಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ”. ಇದರಿಂದ ಒಂದು ದಿನದಲ್ಲಿ ಒಂದು ಕೋಟಿ ಜನರಿಗೆ ಲಸಿಕೆ ಹಾಕಲು ಸಾಧ್ಯವಾಗುತ್ತದೆ ಎಂದು ಡಾ.ಅರೋರಾ ಹೇಳಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ʻಒಟಿಟಿʼ ವೇದಿಕೆ – ʻಇಂಡಿಯಾ ಸೈನ್ಸ್ ಚಾನೆಲ್ʼಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಹಾಗೂ ಭಾರತದ ಕೋವಿಡ್-19 ಲಸಿಕೆ ಅಭಿಯಾನದ ವಿವಿಧ ಆಯಾಮಗಳ ಬಗ್ಗೆ ಮಾತನಾಡಿದರು.
ಹೊಸ ಲಸಿಕೆಗಳು ಎಷ್ಟು ಪರಿಣಾಮಕಾರಿಯಾಗಿರುತ್ತವೆ?
ಒಂದು ನಿರ್ದಿಷ್ಟ ಲಸಿಕೆಯು ಶೇಕಡ 80ರಷ್ಟು ಪರಿಣಾಮಕಾರಿ ಎಂದು ನಾವು ಹೇಳಿದಾಗ, ಲಸಿಕೆಯು ಕೋವಿಡ್-19 ರೋಗದ ಸಾಧ್ಯತೆಗಳನ್ನು ಶೇಕಡ80 ರಷ್ಟು ಕಡಿಮೆ ಮಾಡುತ್ತದೆ ಎಂದರ್ಥ. ಸೋಂಕು ಮತ್ತು ರೋ ಗದ ನಡುವೆ ವ್ಯತ್ಯಾಸವಿದೆ. ಒಬ್ಬ ವ್ಯಕ್ತಿಯು ಕೋವಿಡ್ ಸೋಂಕಿಗೆ ಒಳಗಾದರೂ ಲಕ್ಷಣ ರಹಿತನಾಗಿದ್ದರೆ, ಈ ವ್ಯಕ್ತಿಗೆ ಸೋಂಕು ಮಾತ್ರ ಇರುತ್ತದೆ. ಆದಾಗ್ಯೂ, ಸೋಂಕಿನಿಂದ ವ್ಯಕ್ತಿಯು ರೋಗಲಕ್ಷಣಗಳನ್ನು ಹೊಂದಿದ್ದರೆ, ಈ ವ್ಯಕ್ತಿಗೆ ಕೋವಿಡ್ ಕಾಯಿಲೆ ಇದೆ ಎಂದರ್ಥ. ವಿಶ್ವದ ಎಲ್ಲಾ ಲಸಿಕೆಗಳು ಕೋವಿಡ್ ರೋಗವನ್ನು ತಡೆಯುತ್ತವೆ. ಲಸಿಕೆಯ ನಂತರ ತೀವ್ರ ರೋಗದ ಸಾಧ್ಯತೆ ಬಹಳ ಕಡಿಮೆ, ಲಸಿಕೆಯ ನಂತರ ಸಾಯುವ ಸಾಧ್ಯತೆಗಳೂ ಅತ್ಯಲ್ಪ. ಲಸಿಕೆಯ ಪರಿಣಾಮಕಾರಿತ್ವವು 80% ಆಗಿದ್ದರೆ, ಲಸಿಕೆ ಪಡೆದವರಲ್ಲಿ 20% ಜನರು ಸೌಮ್ಯ ಕೋವಿಡ್‌ಗೆ ತುತ್ತಾಗಬಹುದು ಎಂದರ್ಥ.
ಭಾರತದಲ್ಲಿ ಲಭ್ಯವಿರುವ ಲಸಿಕೆಗಳು ಕೊರೊನಾ ವೈರಸ್ ಹರಡುವಿಕೆಯನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ. 60%-70% ಜನರಿಗೆ ಲಸಿಕೆ ಹಾಕಿದರೆ, ವೈರಸ್ ಹರಡುವಿಕೆಯನ್ನು ತಡೆಯಬಹುದು.
ಅತ್ಯಂತ ಸುಲಭವಾಗಿ ಸೋಂಕಿಗೆ ತುತ್ತಾಗಬಹುದಾದ ಜನಸಮುದಾಯಕ್ಕೆ ಮೊದಲು ಲಸಿಕೆ ಹಾಕುವ ಸಲುವಾಗಿ ಹಾಗೂ ಆ ಮೂಲಕ ಸಾವು ಮತ್ತು ನಮ್ಮ ಆರೋಗ್ಯ ವ್ಯವಸ್ಥೆ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಸರಕಾರವು ವಯೋವೃದ್ಧರಿಗೆ ಮೊದಲ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿತು.
ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಸಾಕಷ್ಟು ತಪ್ಪು ಮಾಹಿತಿಗಳಿವೆ. ದಯವಿಟ್ಟು ಈ ಬಗ್ಗೆ ಸ್ಪಷ್ಟನೆ ನೀಡಬಹುದೇ?
ಇತ್ತೀಚೆಗೆ, ನಾನು ಹರಿಯಾಣ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ಲಸಿಕೆ ಬಗ್ಗೆ ಜನರಲ್ಲಿ ಇರುವ ಹಿಂಜರಿಕೆಯ ಕಾರಣ ಅರಿಯಲು ಅಲ್ಲಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರೊಂದಿಗೆ ಮಾತನಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ಜನರು ಕೋವಿಡ್ ಅನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅದನ್ನು ಸಾಮಾನ್ಯ ಜ್ವರವೆಂದು ತಿಳಿಯುತ್ತಾರೆ. ಅನೇಕ ಸಂದರ್ಭಗಳಲ್ಲಿ ಕೋವಿಡ್ ಸೌಮ್ಯವಾಗಿರಬಹುದು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಆದರೆ ಅದು ತೀವ್ರ ಸ್ವರೂಪ ಕ್ಕೆ ಬಂದಾಗ, ಅದು ಆರ್ಥಿಕ ಹೊರೆಗೆ ಮತ್ತು ಜೀವಹಾನಿಗೂ ಕಾರಣವಾಗಬಹುದು.
ಲಸಿಕೆಯ ಮೂಲಕ ಕೋವಿಡ್‌ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ನಿಜಕ್ಕೂ ತುಂಬಾ ಉತ್ತೇಜನಕಾರಿ ವಿಷಯ. ಭಾರತದಲ್ಲಿ ಲಭ್ಯವಿರುವ ಕೋವಿಡ್-19 ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂಬುದನ್ನು ನಾವೆಲ್ಲರೂ ದೃಢವಾಗಿ ನಂಬಬೇಕು. ಎಲ್ಲಾ ಲಸಿಕೆಗಳೂ ಚಿಕಿತ್ಸಾತ್ಮಕ ಪ್ರಯೋಗಗಳು ಸೇರಿದಂತೆ ಜಾಗತಿಕವಾಗಿ ಗುರುತಿಸಲ್ಪಟ್ಟ ಎಲ್ಲಾ ರೀತಿಯ ಕಠಿಣ ಪರೀಕ್ಷೆಗಳಿಗೆ ಒಳಗಾಗಿವೆ ಎಂದು ಪ್ರತಿಯೊಬ್ಬರಿಗೂ ಭರವಸೆ ನೀಡಲು ನಾನು ಬಯಸುತ್ತೇನೆ.
ಅಡ್ಡ ಪರಿಣಾಮಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಎಲ್ಲಾ ಲಸಿಕೆಗಳು ಸೌಮ್ಯ ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ. ಇದರಲ್ಲಿ ಸೌಮ್ಯ ಜ್ವರ, ಆಯಾಸ, ಚುಚ್ಚುಮದ್ದಿನ ಸ್ಥಳದಲ್ಲಿ ನೋವು ಇತ್ಯಾದಿಗಳು ಒಂದೆರಡು ದಿನ ಇರುತ್ತವೆ. ಇದು ಯಾವುದೇ ಗಂಭೀರ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ.
ಮಕ್ಕಳು ಇತರೆ ಸಾಮಾನ್ಯ ಲಸಿಕೆಗಳನ್ನು ಪಡೆದಾಗಲೂ ಅವರಲ್ಲಿ ಜ್ವರ, ಊತ ಮುಂತಾದ ಕೆಲವು ಅಡ್ಡ ಪರಿಣಾಮಗಳು ಕಂಡು ಬರುತ್ತವೆ. ಅಡ್ಡ ಪರಿಣಾಮಗಳ ಹೊರತಾಗಯೂ ಲಸಿಕೆಯಿಂದ ಮಗುವಿಗೆ ಒಳಿತಾಗುತ್ತದೆ ಎಂಬುದು ಕುಟುಂಬದ ಹಿರಿಯರಿಗೆ ಅರಿವಿರುತ್ತದೆ. ಅದೇ ರೀತಿ, ಕೋವಿಡ್ ಲಸಿಕೆಯು ನಮ್ಮ ಕುಟುಂಬಕ್ಕೆ ಮತ್ತು ನಮ್ಮ ಸಮಾಜಕ್ಕೆ ಮುಖ್ಯ ಎಂದು ಹಿರಿಯರು ಅರ್ಥಮಾಡಿಕೊಳ್ಳುವ ಸಮಯ ಇದು. ಆದ್ದರಿಂದ, ಸೌಮ್ಯ ಅಡ್ಡ ಪರಿಣಾಮಗಳು ಲಸಿಕೆ ಪಡೆಯದಂತೆ ನಮ್ಮನ್ನು ತಡೆಯಬಾರದು.
ಲಸಿಕೆ ಪಡೆದ ನಂತರ ಒಬ್ಬ ವ್ಯಕ್ತಿಗೆ ಜ್ವರ ಕಾಣಿಸಿಕೊಳ್ಳದಿದ್ದರೆ ಲಸಿಕೆ ಕೆಲಸ ಮಾಡುತ್ತಿಲ್ಲ ಎಂಬ ವದಂತಿಗಳಿವೆ. ಅದು ಎಷ್ಟರಮಟ್ಟಿಗೆ ನಿಜ?
ಕೋವಿಡ್ ಲಸಿಕೆಯ ನಂತರ ಹೆಚ್ಚಿನ ಜನರು ಯಾವುದೇ ಅಡ್ಡ ಪರಿಣಾಮವನ್ನು ಎದುರಿಸುವುದಿಲ್ಲ, ಹಾಗೆಂದ ಮಾತ್ರಕ್ಕೆ ಆ ಲಸಿಕೆಗಳು ಪರಿಣಾಮಕಾರಿಯಾಗಿಲ್ಲ ಎಂದು ಅರ್ಥವಲ್ಲ. ಲಸಿಕೆಯ ನಂತರ ಕೇವಲ 20% – 30% ಜನರಲ್ಲಿ ಮಾತ್ರ ಜ್ವರ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಮೊದಲ ಡೋಸ್ ನಂತರ ಜ್ವರ ಬರಬಹುದು ಮತ್ತು ಎರಡನೇ ಡೋಸ್ ನಂತರ ಯಾವುದೇ ಜ್ವರ ಕಾಣಿಸಿಕೊಳ್ಳದಿರಬಹುದು. ಅಥವಾ ಇದಕ್ಕೆ ತದ್ವಿರುದ್ಧವಾಗಿಯೂ ಇರಬಹುದು. ಈ ಪರಿಣಾಮಗಳು ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ ಮತ್ತು ಅತ್ಯಂತ ಅನಿರೀಕ್ಷಿತ.
ಎರಡೂ ಲಸಿಕೆಗಳನ್ನು ತೆಗೆದುಕೊಂಡ ನಂತರವೂ ಜನರು ಕೋವಿಡ್-19 ಸೋಂಕಿಗೆ ಒಳಗಾದ ಕೆಲವು ಪ್ರಕರಣಗಳು ವರದಿಯಾಗಿವೆ. ಆದ್ದರಿಂದ, ಕೆಲವರು ಲಸಿಕೆಗಳ ಪರಿಣಾಮಕಾರಿತ್ವವನ್ನು ಪ್ರಶ್ನಿಸುತ್ತಿದ್ದಾರೆ.
ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ನಂತರವೂ ಸೋಂಕು ಉಂಟಾಗಬಹುದು. ಆದರೆ, ಅಂತಹ ಸಂದರ್ಭಗಳಲ್ಲಿ, ರೋಗದ ತೀವ್ರತೆ ಖಂಡಿತವಾಗಿಯೂ ಸೌಮ್ಯವಾಗಿರುತ್ತದೆ. ಗಂಭೀರ ಕಾಯಿಲೆಯ ಸಾಧ್ಯತೆಗಳು ಬಹುತೇಕ ಶೂನ್ಯ. ಇದಲ್ಲದೆ, ಅಂತಹ ಘಟನೆಯ ಸಂಭವನೀಯತೆಯನ್ನು ತಪ್ಪಿಸಲು, ಲಸಿಕೆಯ ನಂತರವೂ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವಂತೆ ಜನರಿಗೆ ಹೇಳಲಾಗುತ್ತದೆ. ಜನರು ವೈರಸ್ ಅನ್ನು ಹರಡಬಹುದು, ಅಂದರೆ ವೈರಸ್ ನಿಮ್ಮ ಮೂಲಕ ಕುಟುಂಬ ಸದಸ್ಯರು ಮತ್ತು ಇತರರಿಗೆ ಹರಡಬಹುದು. 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಿದದ್ದರೆ, ಆಗ ಸಾವಿನ ಪ್ರಮಾಣ ಮತ್ತು ಆಸ್ಪತ್ರೆಗಳ ಮೇಲಿನ ಹೊರೆ ಊಹಿಸಲಾಗುತ್ತಿರಲಿಲ್ಲ. ಈಗ, ಎರಡನೇ ಅಲೆಯೂ ಇಳಿಮುಖವಾಗಿದೆ. ಇದರ ಶ್ರೇಯಸ್ಸು ಲಸಿಕೆಗೆ ಸಲ್ಲುತ್ತದೆ.
ದೇಹದಲ್ಲಿ ಪ್ರತಿಕಾಯಗಳು ಎಷ್ಟು ಕಾಲ ಉಳಿಯುತ್ತವೆ? ಸ್ವಲ್ಪ ಸಮಯದ ನಂತರ ನಾವು ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕೇ?
ಲಸಿಕೆಯ ನಂತರ, ದೇಹದಲ್ಲಿ ಅಭಿವೃದ್ಧಿಯಾಗುವ ರೋಗ ನಿರೋಧಕ ಶಕ್ತಿಯನ್ನು ಗೋಚರಿಸುವಂತಹ ಮತ್ತು ಅಳೆಯಬಹುದಾದ ಪ್ರತಿಕಾಯಗಳ ಮೂಲಕ ಕಂಡುಹಿಡಿಯಬಹುದು ಎಂಬುದು ಸಹಜ ವಿಚಾರ. ಇದರ ಹೊರತಾಗಿಯೂ ಅಗೋಚರ ರೋಗ ನಿರೋಧಕ ಶಕ್ತಿಯೂ ಅಭಿವೃದ್ಧಿಹೊಂದುತ್ತದೆ. ಇದನ್ನು ಸ್ಮರಣೆ ಶಕ್ತಿಯನ್ನು ಹೊಂದಿರುವ ʻಟಿ-ಸೆಲ್ಸ್ʼ ಎಂದು ಕರೆಯಲಾಗುತ್ತದೆ. ಲಸಿಕೆ ನಂತರ ಈ ವೈರಸ್ ದೇಹ ಪ್ರವೇಶಿಸಲು ಪ್ರಯತ್ನಿಸಿದಾಗಲೆಲ್ಲಾ, ಇಡೀ ದೇಹವು ಜಾಗೃತಗೊಳ್ಳುತ್ತದೆ ಮತ್ತು ಅದರ ವಿರುದ್ಧ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಹೀಗಾಗಿ, ಪ್ರತಿಕಾಯವನ್ನು ಹೊಂದಿರುವುದು ಮಾತ್ರವೇ ನಮ್ಮ ದೇಹದ ರೋಗನಿರೋಧಕ ಶಕ್ತಿಯ ಏಕೈಕ ಸಂಕೇತವಲ್ಲ. ಆದ್ದರಿಂದ, ಲಸಿಕೆಯ ನಂತರ ಪ್ರತಿಕಾಯ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ, ಈ ಬಗ್ಗೆ ಚಿಂತೆಮಾಡಿ ನಿದ್ರೆಯನ್ನು ದೂರ ಮಾಡಿಕೊಳ್ಳಬೇಡಿ.
ಎರಡನೆಯದಾಗಿ, ಕೋವಿಡ್-19 ಒಂದು ಹೊಸ ರೋಗ. ಇದು ಕೇವಲ ಒಂದೂವರೆ ವರ್ಷಗಳ ಹಿಂದಷ್ಟೇ ಕಾಣಿಸಿಕೊಂಡಿದೆ. ಲಸಿಕೆ ನೀಡಿಕೆಯೂ ಕೇವಲ 6 ತಿಂಗಳಿಂದ ಈಚೆಗಷ್ಟೇ ಶುರುವಾಗಿದೆ. ಇತರ ಎಲ್ಲಾ ಲಸಿಕೆಗಳಂತೆ, ಇದರ ರೋಗನಿರೋಧಕತೆಯೂ ಕನಿಷ್ಠ ಆರು ತಿಂಗಳಿನಿಂದ ಒಂದು ವರ್ಷದವರೆಗೆ ಇರುತ್ತದೆ ಎಂದು ತೋರುತ್ತದೆ. ಕಾಲ ಕಳೆದಂತೆ ಕೋವಿಡ್-19 ರ ಬಗ್ಗೆ ನಮ್ಮ ತಿಳಿವಳಿಕೆ ಹೆಚ್ಚಾಗುತ್ತದೆ. ಅಲ್ಲದೆ, ʻಟಿ-ಸೆಲ್ʼ ಗಳಂತಹ ಕೆಲವು ಅಂಶಗಳನ್ನು ಅಳೆಯಲು ಸಾಧ್ಯವಿಲ್ಲ. ಲಸಿಕೆಯ ನಂತರ ಎಷ್ಟು ಸಮಯದವರೆಗೆ ಜನರನ್ನು ಗಂಭೀರ ಕಾಯಿಲೆ ಮತ್ತು ಮರಣದಿಂದ ಕಾಪಾಡಬಹುದು ಎಂಬುದನ್ನು ಇನ್ನೂ ಕಾದು ನೋಡಬೇಕು. ಆದರೆ, ಸದ್ಯದ ಮಟ್ಟಿಗೆ, ಲಸಿಕೆ ಪಡೆದ ಎಲ್ಲಾ ವ್ಯಕ್ತಿಗಳು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಸುರಕ್ಷಿತವಾಗಿರುತ್ತಾರೆ ಎಂಬುದಂತೂ ನಿಜ.
ಒಮ್ಮೆ ನಾವು ಒಂದು ನಿರ್ದಿಷ್ಟ ಕಂಪನಿಯ ಲಸಿಕೆಯನ್ನು ತೆಗೆದುಕೊಂಡ ನಂತರ, ನಾವು ಆ ನಿರ್ದಿಷ್ಟ ಲಸಿಕೆಯನ್ನು ಮಾತ್ರ ಪುನರಾವರ್ತಿಸಬೇಕೆ? ನಾವು ಭವಿಷ್ಯದಲ್ಲಿ ಬೂಸ್ಟರ್ ಡೋಸ್‌ಗಳನ್ನು ತೆಗೆದುಕೊಳ್ಳಬೇಕಾದರೆ, ನಾವು ಅದೇ ಕಂಪನಿಯ ಲಸಿಕೆಯನ್ನು ಪಡೆಯಬೇಕೇ?
ಕಂಪನಿಗಳ ಬದಲಿಗೆ, ನಾವು ವೇದಿಕೆಗಳ ಬಗ್ಗೆ ಮಾತನಾಡೋಣ. ಒಂದೇ ರೋಗಕ್ಕೆ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ವಿಭಿನ್ನ ಪ್ರಕ್ರಿಯೆಗಳು ಮತ್ತು ವೇದಿಕೆಗಳನ್ನು ಬಳಸಿರುವುದು ಇಡೀ ಮಾನವನ ಇತಿಹಾಸದಲ್ಲಿ ಇದೇ ಮೊದಲು. ಈ ಲಸಿಕೆಗಳಿಗೆ ಉತ್ಪಾದನಾ ಪ್ರಕ್ರಿಯೆಗಳು ವಿಭಿನ್ನವಾಗಿರುವುದರಿಂದ, ದೇಹದ ಮೇಲೆ ಅವುಗಳ ಪರಿಣಾಮವೂ ಒಂದೇ ರೀತಿಯಾಗಿರುವುದಿಲ್ಲ. ಎರಡು ಡೋಸ್‌ಗಳಲ್ಲಿ ಬೇರೆ ಬೇರೆ ಲಸಿಕೆಯನ್ನು ಪಡೆಯುವ ಪ್ರಕ್ರಿಯೆಯನ್ನು, ಅಥವಾ ಮತ್ತೆ ಬೂಸ್ಟರ್ ಡೋಸ್‌ನಲ್ಲಿ (ಅಗತ್ಯವಿದ್ದರೆ) ವಿಭಿನ್ನ ಲಸಿಕೆ ಪಡೆಯುವುದನ್ನು ಪರಸ್ಪರ ವಿನಿಮಯ ಎಂದು ಕರೆಯಲಾಗುತ್ತದೆ. ಈ ರೀತಿ ಮಾಡಬಹುದೇ ಎಂಬುದು ಒಂದು ಪ್ರಮುಖ ವೈಜ್ಞಾನಿಕ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಕಂಡುಕೊಳ್ಳಲು ಪ್ರಯತ್ನ ಮುಂದುವರಿದಿದೆ. ವಿವಿಧ ರೀತಿಯ ಕೋವಿಡ್-19 ಲಸಿಕೆಗಳನ್ನು ನೀಡಲಾಗುತ್ತಿರುವ ಅಪರೂಪದ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ರೀತಿಯ ಪರಸ್ಪರ ವಿನಿಮಯವನ್ನು ಕೇವಲ ಮೂರು ಕಾರಣಗಳಿಗಾಗಿ ಮಾತ್ರ ಸ್ವೀಕರಿಸಬಹುದು ಅಥವಾ ಗುರುತಿಸಬಹುದು: 1) ಇದು ರೋಗನಿರೋಧಕ ಶಕ್ತಿ ಹೆಚ್ಚಳ ಅಥವಾ ಉತ್ತಮಗೊಳಿಸುವುದು, 2) ಲಸಿಕೆ ವಿತರಣೆಯ ಕಾರ್ಯಕ್ರಮವನ್ನು ಸುಲಭಗೊಳಿಸುವುದು; 3) ಸುರಕ್ಷತೆಯ ಖಾತರಿ. ಆದರೆ ಲಸಿಕೆಗಳು ಸಂಪೂರ್ಣವಾಗಿ ವೈಜ್ಞಾನಿಕ ವಿದ್ಯಮಾನವಾಗಿರುವುದರಿಂದ ಲಸಿಕೆಗಳ ಕೊರತೆಯ ಕಾರಣದಿಂದಾಗಿ ಅವುಗಳ ಪರಸ್ಪರ ವಿನಿಮಯವನ್ನು ಪ್ರೋತ್ಸಾಹಿಸಬಾರದು.
ಕೆಲವು ದೇಶಗಳಲ್ಲಿ ಲಸಿಕೆಗಳ ಮಿಶ್ರಣ ಮತ್ತು ಹೊಂದಾಣಿಕೆ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಭಾರತವೂ ಅಂತಹ ಯಾವುದೇ ಸಂಶೋಧನೆಯಲ್ಲಿ ತೊಡಗಿದೆಯೇ?
ಈ ರೀತಿಯ ಸಂಶೋಧನೆ ಅಗತ್ಯವಾಗಿದ್ದು, ಭಾರತದಲ್ಲಿ ಇಂತಹ ಕೆಲವು ಸಂಶೋಧನೆಗಳನ್ನು ಶೀಘ್ರದಲ್ಲೇ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಕೆಲವೇ ವಾರಗಳಲ್ಲಿ ಇದು ಪ್ರಾರಂಭವಾಗಬಹುದು.
ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ಅಧ್ಯಯನಗಳನ್ನು ನಡೆಸಲಾಗುತ್ತಿದೆಯೇ? ಮಕ್ಕಳಿಗೆ ಲಸಿಕೆಯನ್ನು ಯಾವಾಗ ನಿರೀಕ್ಷಿಸಬಹುದು?
2 ರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ಕೊವಾಕ್ಸಿನ್ ಪ್ರಯೋಗಗಳನ್ನು ಪ್ರಾರಂಭಿಸಲಾಗಿದೆ. ದೇಶಾದ್ಯಂತ ಅನೇಕ ಕೇಂದ್ರಗಳಲ್ಲಿ ಮಕ್ಕಳ ಮೇಲಿನ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ನಾವು ಫಲಿತಾಂಶಗಳನ್ನು ಪಡೆಯಲಿದ್ದೇವೆ. ಮಕ್ಕಳಿಗೆ ಸೋಂಕು ಉಂಟಾಗಬಹುದು, ಆದರೆ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. ಆದಾಗ್ಯೂ, ಮಕ್ಕಳು ವೈರಸ್ ಹರಡಲು ಮಾಧ್ಯಮವಾಗಬಹುದು. ಆದ್ದರಿಂದ, ಮಕ್ಕಳಿಗೂ ಲಸಿಕೆ ಹಾಕಬೇಕು.
ಲಸಿಕೆಗಳು ಬಂಜೆತನಕ್ಕೆ ಕಾರಣವಾಗುತ್ತವೆಯೇ?
ಪೋಲಿಯೊ ಲಸಿಕೆ ಬಂದಾಗ ಮತ್ತು ಭಾರತ ಹಾಗೂ ವಿಶ್ವದ ಇತರ ಭಾಗಗಳಲ್ಲಿ ಆ ಲಸಿಕೆಯನ್ನು ನೀಡುತ್ತಿದ್ದ ಸಮಯದಲ್ಲಿಯೂ ಇದೇ ರೀತಿಯ ವದಂತಿ ಹರಡಿತ್ತು. ಪೋಲಿಯೊ ಲಸಿಕೆ ಪಡೆಯುವ ಮಕ್ಕಳು ಭವಿಷ್ಯದಲ್ಲಿ ಬಂಜೆತನವನ್ನು ಎದುರಿಸಬಹುದು ಎಂಬ ತಪ್ಪು ಮಾಹಿತಿಯನ್ನು ಆ ಸಮಯದಲ್ಲಿ ಸೃಷ್ಟಿಸಲಾಯಿತು. ಈ ರೀತಿಯ ತಪ್ಪು ಮಾಹಿತಿಯು ಲಸಿಕೆ ವಿರೋಧಿ ಲಾಬಿಯ ಕೆಲಸ. ಎಲ್ಲಾ ಲಸಿಕೆಗಳು ತೀವ್ರ ವೈಜ್ಞಾನಿಕ ಸಂಶೋಧನೆಗಳ ಫಲವಾಗಿ ಸೃಷ್ಟಿಯಾಗಿವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಯಾವುದೇ ಲಸಿಕೆಗಳು ಈ ರೀತಿಯ ಅಡ್ಡ ಪರಿಣಾಮವನ್ನು ಹೊಂದಿಲ್ಲ. ಈ ರೀತಿಯ ಪ್ರಚಾರವು ಜನರನ್ನು ದಾರಿತಪ್ಪಿಸುತ್ತದೆ ಎಂದು ನಾನು ಬಲವಾಗಿ ಪ್ರತಿಪಾದಿಸಲು ಬಯಸುತ್ತೇನೆ. ಕೊರೊನಾ ವೈರಸ್‌ನಿಂದ ನಮ್ಮನ್ನು, ಕುಟುಂಬವನ್ನು ಮತ್ತು ಸಮಾಜವನ್ನು ರಕ್ಷಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ, ಪ್ರತಿಯೊಬ್ಬರೂ ಮುಂದೆ ಬಂದು ಲಸಿಕೆ ಪಡೆಯಬೇಕು.(PIB)
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ರೂ.185 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲು ಟೆಂಡರ್ ಅಂತಿಮವಾಗಿದ್ದು, ಅತೀ ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಸಿ.ಪಿ. ಯೋಗೇಶ್ವರ ತಿಳಿಸಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಸಂಸ್ಥೆಯಿಂದ ಈ ಬೃಹತ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಜೋಗಕ್ಕೆ ಜಲಮಾರ್ಗ
ಕೇರಳ ಹಾಗೂ ಗೋವಾ ರಾಜ್ಯಗಳಿಂದ ಜೋಗ ಜಲಪಾತಕ್ಕೆ 35 ಕಿ.ಮೀ. ಉದ್ದದ ಜಲಮಾರ್ಗದಲ್ಲಿ ಪ್ರವಾಸಿಗರು ಆಗಮಿಸಲು ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ.
ಸರ್ಕಾರಿ ರಜಾ ದಿನಗಳಂದು ಲಿಂಗನಮಕ್ಕಿ ಜಲಾಶಯದಿಂದ ಪ್ರಥಮ ಹಂತವಾಗಿ 200 ಕ್ಯೂಸೆಕ್ಸ್ ನೀರನ್ನು ಹರಿಸಿ ಜೋಗದ ಸೊಬಗನ್ನು ಪ್ರವಾಸಿಗರಿಗೆ ಉಣಿಸಲಾಗುವುದು. ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣವನ್ನು 300 ಕ್ಯೂಸೆಕ್ಸ್ʼಗೆ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಸಾವಿರ ಪ್ರವಾಸಿಗರು ವಾಸ್ತವ್ಯ ಮಾಡಲು 2 ಹೋಟೆಲ್ʼಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು ಸಚಿವರು.
ರಾಜ್ಯದ ಪ್ರತಿಷ್ಠಿತ ಯೋಜನೆಯಾಗಿರುವ ಹೆಲಿ ಟೂರಿಸಂ ಸರ್ಕೀಟ್ʼಗೆ ಜೋಗ ಜಲಪಾತವನ್ನು ಸೇರ್ಪಡೆ ಮಾಡಲಾಗಿದೆ. ಒಟ್ಟಾರೆ ವರ್ಷದ 365 ದಿನಗಳು ಜೋಗದ ಸೊಬಗನ್ನು ರಾಜ್ಯ, ಹೊರ ರಾಜ್ಯಗಳು ಹಾಗೂ ದೇಶ ವಿದೇಶಗಳ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು ಎಂದು ಅವರು ಹೇಳಿದರು.
ಬೆಂಗಳೂರಿನ ಖನಿಜ ಭವನದಲ್ಲಿರುವ ಅರಣ್ಯ ಹಾಗೂ ವಸತಿ ವಿಹಾರಧಾಮ ಕಚೇರಿಯಲ್ಲಿ ಸಚಿವ ಯೋಗೇಶ್ವರ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂಧನ ಇಲಾಖೆಯ ಕಾರ್ಯದರ್ಶಿ ಪೊನ್ನುರಾಜ್, ಪ್ರವಾಸೋದ್ಯಮ ಕಾರ್ಯದರ್ಶಿ ಪಂಕಜ ಕುಮಾರ್ ಪಾಂಡೆ, ಜೆ.ಎಲ್.ಆರ್. ಹಾಗೂ ಕೆ.ಎಸ್.ಟಿ.ಡಿ.ಸಿ. ಎಂ.ಡಿಗಳಾದ ಕುಮಾರ್ ಪುಷ್ಕರ್ ಹಾಗೂ ವಿಜಯ ಶರ್ಮ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸಿಂಧು ರೂಪೇಶ್ ಮತ್ತಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು
ಪರೀಕ್ಷೆ ಬರೆದಿದ್ದೇವೆ. ಅತೀ ಶೀಘ್ರದಲ್ಲಿ ಫಲಿತಾಂಶ ಪ್ರಕಟಣೆಯಾಗಲಿದೆ ಎಂದು ಪ್ರವಾಸೋದ್ಯಮ ಸಚಿವರಾದ ಯೋಗೇಶ್ವರ ಅವರು ಬಿಜೆಪಿಯ ಇತ್ತೀತಿನ ಬೆಳವಣಿಗೆಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಮಾರ್ಮಿಕವಾಗಿ ಹೇಳಿದ್ದಾರೆ.
ನನ್ನ ವೈಯಕ್ತಿಕ ಸಮಸ್ಯೆ ಹಾಗೂ ರಾಜ್ಯ ಸರ್ಕಾರ ಮತ್ತು ರಾಜ್ಯ ಬಿಜೆಪಿಯ ಮೂಲಭೂತ ಸಮಸ್ಯೆಗಳ ಬಗ್ಗೆ ಹೈಕಮಂಡ್ ಗೆ ವಿವರಣೆ ನೀಡಿದ್ದೇನೆ. ಸರ್ಕಾರ ಹಾಗೂ ಪಕ್ಷದ ಮೂಲಭೂತ ಸಮಸ್ಯೆಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಏನೇ ಆಗಲಿ ಪರೀಕ್ಷೆ ಬರೆಯಲಾಗಿದ್ದು, ಅತೀ ಶೀಘ್ರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂಬ ಖಚಿತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಬ್ಬ ಜವಾಬ್ದಾರಿ ಸಚಿವನಾಗಿ ನಾನು ನನ್ನ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದೇನೆ. ನನ್ನ ವೈಯಕ್ತಿಕ ನೋವುಗಳು ಹಾಗೂ ಸಮಸ್ಯೆಗಳನ್ನು ನಮ್ಮ ದೆಹಲಿ ನಾಯಕರ ಮುಂದೆ ಹೇಳಿದ್ದೇನೆ. ಪಕ್ಷಕ್ಕೆ ದಕ್ಕೆ ಉಂಟಾಗಬಾರದು ಹಾಗೂ ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ಹಿನ್ನಲೆಯಲ್ಲಿ, 4 ಗೋಡೆಗಳ ಮಧ್ಯೆ ವಿವರಣೆ ನೀಡಿದ್ದೇನೆ.
ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ನನಗೆ ತುಂಬಾ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ನಮ್ಮ ಬಿಜೆಪಿ. ಪಕ್ಷದ ನಾಯಕರುಗಳು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಜೊತೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಬೇಡ. ಇದಕ್ಕೆ ಕೊನೆಯಾಡಬೇಕು. ಈ ವಿಷಯದಲ್ಲಿ ರಾಜಿ ಪ್ರಶ್ನೆ ಇಲ್ಲ. ಕರ್ನಾಟಕದಲ್ಲಿ ಅತೀ ಉತ್ತಮವಾದ ಸರ್ಕಾರ ಇರಬೇಕು ಪಕ್ಷ ಸಂಘಟನೆ ಸಹ ರಾಜ್ಯದ ಇತರ ಭಾಗಗಳಂತೆ ಹಳೇ ಮೈಸೂರು ಭಾಗದಲ್ಲೂ ನಡೆಯಬೇಕು.
ನನಗೆ ಕೋಲಾರ ಜಿಲ್ಲೆ ಉಸ್ತುವಾರಿ ನೀಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಧ್ಯಕ್ಕೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ರವರು ಇದ್ದಾರೆ. ಈ ನಿಟ್ಟಿನಲ್ಲಿ ನನಗೆ ಕೋಲಾರ ಉಸ್ತುವಾರಿ ನೀಡುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ನಾನು ಹಾಗೂ ರಮೇಶ್ ಜಾರಕಿಹೊಳಿ 20 ವರ್ಷದ ಸ್ನೇಹಿತರು. ಅವರ ಇತ್ತೀಚಿನ ರಾಜಕೀಯ ನಿಲುವಿನ ಬಗ್ಗೆ ನಾನು ಚರ್ಚಿಸಿಲ್ಲ. ಭೇಟಿ ಸಹ ಮಾಡಿಲ್ಲ. ರಮೇಶ್ ಜಾರಕಿಹೊಳಿ ರವರು ಮುಂಬೈ ಗೆ ಹೋಗಿ ರಾಜೀನಾಮೆ ನೀಡುವ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಅವರ ಪ್ರಚಲಿತ ರಾಜಕೀಯ ನಿರ್ಣಯದ ಬಗ್ಗೆ ಗೊತ್ತಿಲ್ಲ. ರಮೇಶ್ ಜಾರಕಿಹೊಳೆ ರವರು ರಾಜೀನಾಮೆ ಕೊಡುವುದಿಲ್ಲ ಎಂದು ಇದೇ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕೋವಿಡ್ ಡೆಲ್ಟಾ ಪ್ಲಸ್ ವೈರಾಣುವಿನ ಬಗ್ಗೆ ಹೆಚ್ಚೇನೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಡೆಲ್ಟಾ ಪ್ಲಸ್ ವೈರಾಣುವಿನ ಒಂದು ಪ್ರಕರಣ ಬೆಂಗಳೂರಿನಲ್ಲಿ ಮತ್ತು ಇನ್ನೊಂದು ಪ್ರಕರಣ ಮೈಸೂರಿನಲ್ಲಿ ಕಂಡುಬಂದಿದೆ. ಇಬ್ಬರೂ ಸೌಮ್ಯ ಲಕ್ಷಣಗಳನ್ನು ಹೊಂದಿದ ರೋಗಿಗಳಾಗಿದ್ದಾರೆ. ಮೈಸೂರಿನ ರೋಗಿ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಹೊಸ ವೈರಾಣುವಿನಿಂದ ಸೋಂಕಿತರಿಗೆ ಹೆಚ್ಚು ಸಮಸ್ಯೆಯೇನೂ ಆಗಿಲ್ಲ. ಇವರ ಸಂಪರ್ಕಿತರಿಗೂ ಪರೀಕ್ಷೆ ಮಾಡಿಸಿ ನೋಡಿದಾಗಲೂ ನೆಗೆಟಿವ್ ವರದಿ ಬಂದಿದೆ. ಆದ್ದರಿಂದ ಈ ವೈರಾಣು ಬಗ್ಗೆ ವಿಶೇಷವಾಗಿ ಆತಂಕಪಡುವ ಅಗತ್ಯವಿಲ್ಲ. ಪ್ರತೀ ದಿನ ಜೀನೋಮ್ ಸೀಕ್ವೆನ್ಸಿಂಗ್ ಆಗುತ್ತಿರುತ್ತದೆ. ಈ ವೇಳೆ ವೈರಾಣು ಪತ್ತೆಯಾಗುತ್ತದೆ ಎಂದರು.
ಕೇರಳದಲ್ಲಿ ಸೋಂಕು ಹೆಚ್ಚಿದ್ದು, ಪಾಸಿಟಿವಿಟಿ ದರ 10%ಕ್ಕಿಂತ ಅಧಿಕವಾಗಿದೆ. ನಮ್ಮ ರಾಜ್ಯ ಕೇರಳ ಗಡಿ ಹಂಚಿಕೊಳ್ಳುವುದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಅದೇ ರೀತಿ ಮಹಾರಾಷ್ಟ್ರ ಕೂಡ ಗಡಿ ಹಂಚಿಕೊಂಡಿದೆ. ಗಡಿಭಾಗದ ಜಿಲ್ಲೆಗಳಲ್ಲಿ ಹೆಚ್ಚು ಪರೀಕ್ಷೆ ಮಾಡಬೇಕು, ಮುಂಜಾಗ್ರತಾ ಕ್ರಮ ವಹಿಸಬೇಕು, ಅಲ್ಲಿಂದ ಒಳಬರುವ ಪ್ರಯಾಣಿಕರಿಗೆ ರಾಂಡಮ್ ಪರೀಕ್ಷೆ ಮಾಡಬೇಕು ಎಂದು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದರು ಸಚಿವರು.
ಗಡಿಭಾಗಗಳನ್ನು ಮುಚ್ಚುವುದು ಸಮಂಜಸವಲ್ಲ. ಆದರೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಸ್, ರೈಲು ಎಲ್ಲಿಂದ ಬಂದರೂ ಆಯಾ ನಿಲ್ದಾಣಗಳಲ್ಲಿ ಎಚ್ಚರ ವಹಿಸಬೇಕು. ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಹುಬ್ಬಳ್ಳಿಯ ನಾಲ್ಕು ವೈದ್ಯಕೀಯ ಕಾಲೇಜುಗಳು ಹಾಗೂ ಮಂಗಳೂರು ಮತ್ತು ವಿಜಯಪುರ ಜಿಲ್ಲಾಸ್ಪತ್ರೆಗಳಲ್ಲಿ ಒಟ್ಟು 6 ಜೀನೋಮ್ ಸೀಕ್ವೆನ್ಸ್ ಲ್ಯಾಬ್ ಆರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಭೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮ ಕುರಿತು ಚರ್ಚೆಯಾಗಲಿದೆ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಚಿಕಿತ್ಸೆಯಲ್ಲಿ ಕೆಲ ವ್ಯತ್ಯಾಸ ಇದೆ. ಈ ಬಗ್ಗೆ ತಜ್ಞರು ತಿಳಿಸಿದ್ದಾರೆ ಎಂದು ಡಾ.ಸುಧಾಕರ್ ಹೇಳಿದರು.
500 ಆಮ್ಲಜನಕ ಸಾಂದ್ರಕ ಹಸ್ತಾಂತರ
ಸ್ನೇಹ ಚಾರಿಟೇಬಲ್ ಟ್ರಸ್ಟ್ ವತಿಯಿಂದ 500 ಆಕ್ಸಿಜನ್ ಸಾಂದ್ರಕ, 10 ಸಾವಿರ ಕಾನ್ಸಂಟ್ರೇಟರ್ ಟ್ಯೂಬ್, ಸರಕಾರಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡರು. ಕೋವಿಡ್ ನಿಯಂತ್ರಣಕ್ಕೆ 28 ಕೋಟಿ ರೂ. ಮೊತ್ತದ ಸಹಕಾರ ನೀಡುವುದಾಗಿ ಟ್ರಸ್ಟ್ ತಿಳಿಸಿದೆ. ಪೋಸ್ಟ್ ಕೋವಿಡ್ ಗಾಗಿ ಆಸ್ಪತ್ರೆ ನಿರ್ಮಿಸುವ ಕಾರ್ಯವನ್ನೂ ಮಾಡಲಾಗಿದೆ. ಇದಕ್ಕಾಗಿ ಟ್ರಸ್ಟ್ʼಗೆ ಕೃತಜ್ಞತೆಗಳು ಎಂದು ಸಚಿವರು ಹೇಳಿದರು.
46 ವರ್ಷಗಳ ಹಿಂದೆ ಇದೇ ದಿನ ದೇಶದಲ್ಲಿ ಎಮರ್ಜೆನ್ಸಿ ಘೋಷಣೆ. ಆಗ ಒಂಭತ್ತು ವರ್ಷದ ಹುಡುಗನಾಗಿದ್ದ ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ ಆ ನೆನಪುಗಳನ್ನು ಹಂಚಿಕೊಳ್ಳುವುದರ ಜೊತೆ ಈ ಎಮರ್ಜೆನ್ಸಿ ಮುಂದೆ ದೇಶದಲ್ಲಿ ಮಾಡಿದ ರಾಜಕೀಯ ಪರಿಣಾಮಗಳನ್ನು ವಿಶ್ಲೇಷಿಸಿದ್ದಾರೆ.
ಬಾಲ್ಯದ ನೆನಪುಗಳೆ ಹಾಗೇ. ಸಣ್ಣ ವಯಸ್ಸಿನಲ್ಲಿ ಸ್ಮೃತಿಪಟಲದಲ್ಲಿ ಕುಳಿತ ನೆನಪುಗಳು ಆಗಾಗ್ಗೆ ಕಾಡುತ್ತಲೇ ಇರುತ್ತವೆ. ಆ ನೆನಪುಗಳು ಮಾಸುವುದೇ ಇಲ್ಲ. ಅವುಗಳ ಪರಿಣಾಮವೂ ಗಾಢವಾಗಿಯೇ ಇರುತ್ತವೆ. ನನ್ನ ಬಾಲ್ಯದ ಅಂಥದ್ದೊಂದು ನೆನಪು ಎಮರ್ಜೆನ್ಸಿ. ಅರ್ಥಾತ್ ತುರ್ತುಪರಿಸ್ಥಿತಿ!
ದೇಶದಲ್ಲಿ25 ಜೂನ್ 1975ರಲ್ಲಿಎಮರ್ಜೆನ್ಸಿ ಘೋಷಣೆಯಾದಾಗ ನನಗೆ ಒಂಭತ್ತು ವರ್ಷ. ನಾನು ಆಗ ಮೈಸೂರಿನ ವಿಎಂವಿ ಬಾಲಬೋಧಿನಿ ಸರಕಾರಿ ಶಾಲೆಯ ವಿದ್ಯಾರ್ಥಿ. ಕರಾಳ ತುರ್ತು ಪರಿಸ್ಥಿತಿ ದೇಶದಲ್ಲಿಎರಡು ವರ್ಷಗಳ ಕಾಲ ಇತ್ತು. ತುರ್ತು ಪರಿಸ್ಥಿತಿಯ ದಿನಗಳು ಚೆನ್ನಾಗಿ ನೆನಪಿವೆ.
ಬಾಲ್ಯದಲ್ಲಿ ನಾನು ಕೇಳಿದ ಪ್ರತಿಭಟನೆಯ ಮೊದಲ ಸ್ಲೋಗನ್ ಇದು. ಹಾಗೂ ಈ ಹೊತ್ತಿನವರೆಗೂ ನನ್ನ ಮನಸ್ಸಿನಲ್ಲಿಅಚ್ಚೊತ್ತಿರುವ ಪವರ್‌ಫುಲ್ ಸ್ಲೋಗನ್ ಕೂಡಾ. ಜೆಪಿ ಚಳವಳಿಯ ಈ ಘೋಷಣೆ ನಮ್ಮ ಮನೆಯಿದ್ದ ಮೈಸೂರಿನ ವಿದ್ಯಾರಣ್ಯಪುರಂ ಬಡಾವಣೆಯ ಚಾಮುಂಡಿಪುರಂ ಸರ್ಕಲ್‌ನಲ್ಲಿ ಅನುರಣಿಸುತ್ತಿತ್ತು. ನಮ್ಮ ಸರಕಾರಿ ಶಾಲೆಗೆ ಬರುತ್ತಿದ್ದ ಪ್ರತಿಭಟನಾಕಾರರು ಇಂತಹ ಘೋಷಣೆಯನ್ನು ಮುಗಿಲೆತ್ತರಕ್ಕೆ ಆವೇಶಭರಿತರಾಗಿ ಕೂಗುತ್ತಿದ್ದರು. ಶಾಲೆ ಬಿಡಿಸುತ್ತಿದ್ದ ಪ್ರತಿಭಟನಾಕಾರರ ಮಧ್ಯೆ ನಾವು ಕೆಲವು ಹುಡುಗರು ಸೇರಿಕೊಂಡು ಬಿಡುತ್ತಿದ್ದೆವು. ನಮಗೆ ಪರಿಚಯವಿದ್ದ ನಮ್ಮ ಏರಿಯಾದ ಕೆಲವು ಯುವಕರು ನಮ್ಮನ್ನು ಕರೆಯುತ್ತಿದುದು ಇದಕ್ಕೆ ಕಾರಣ. ನಮಗೇನೂ ಎಮರ್ಜೆನ್ಸಿ ಅಂದ್ರೇನು? ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಧೋರಣೆ, ಜಯಪ್ರಕಾಶ ನಾರಾಯಣ್ ಅವರ ಸಂಪೂರ್ಣ ಕ್ರಾಂತಿಯ ಕರೆ ಇದ್ಯಾವುದೂ ಗೊತ್ತಿರಲಿಲ್ಲ. ಪ್ರತಿಭಟನೆ ನಮ್ಮ ಏರಿಯಾ ದಾಟುತ್ತಿದ್ದಂತೆ ಮನೆ ದಾರಿ ಹಿಡಿಯುತ್ತಿದ್ದೆವು. ಪ್ರತಿಭಟನಾ ಮೆರವಣಿಗೆಯಲ್ಲಿನಮಗೆಲ್ಲಾ ನಿಂಬೆಹುಳಿ ಪೇಪರ್‌ಮೆಂಟ್ ಕೊಡುತ್ತಿದುದು ಚೆನ್ನಾಗಿ ನೆನಪಿದೆ.
ತುರ್ತು ಪರಿಸ್ಥಿತಿ ಹೋರಾಟದಲ್ಲಿಮೈಸೂರಿನಲ್ಲಿ ಪ್ರೊ.ಎಂ.ಎಸ್.ವೇಣುಗೋಪಾಲ್, ಎಚ್.ಗಂಗಾಧರನ್, ವೇದಾಂತ ಹೆಮ್ಮಿಗೆ, ಎ.ವಿ.ರಾಮಕೃಷ್ಣ, ಎನ್.ಆರ್.ಚಂದ್ರಶೇಖರ್, ಎ.ರಾಮಣ್ಣ, ನಾ.ಶ್ರೀನಿವಾಸ್, ಈಚನೂರು ಕುಮಾರ್, ಎಚ್.ಕೆ.ಅನಂತ, ಪ್ರದ್ಯುಮ್ನ, ಭಾವಸಾರ್ ವಿಶ್ವನಾಥರಾವ್, ರಘು, ಶ್ರೀಕಂಠಯ್ಯ, ಗೋಪಾಲ್ , ಸುಬ್ರಮಣ್ಯ ಭಟ್, ಶಾಂತರಾಜು, ರಾಘವೇಂದ್ರ , ಶಾಂತಪ್ಪ ಹೀಗೆ ಅನೇಕರು ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು.
ದೇಶದಲ್ಲಿಒಂದು ತಲೆಮಾರಿನ ಅನೇಕರಿಗೆ ಕಾಂಗ್ರೆಸ್ ವಿರೋಧಿ ಭಾವನೆ ಹುಟ್ಟಿಕೊಂಡಿದ್ದೇ ಈ ಎಮರ್ಜೆನ್ಸಿ ಹಾಗೂ ನಂತರದ ವರ್ಷಗಳಲ್ಲಿಎಂಬುದು ನನ್ನ ಭಾವನೆ. ಕಾಂಗ್ರೆಸ್ಸಿನ ವಂಶಪಾರಂಪರ್ಯದ ಆಡಳಿತ, ಇಂದಿರೆಯ ಮಗ ಸಂಜಯ್ ಗಾಂಧಿ ಅವರ ಆಟೋಟೋಪ, ಕಾಂಗ್ರೆಸ್ಸಿನ ಜೀ ಹುಜೂರ್ ಸಂಸ್ಕೃತಿ, ಭ್ರಷ್ಟಾಚಾರದ ಹಗರಣಗಳು ಒಂದು ತಲೆಮಾರಿನವರಿಗೆ ಕಾಂಗ್ರೆಸ್ ವಿರೋಧಿ ಭಾವನೆ ಮನೆಮಾಡಲು ಕಾರಣವಾಯಿತು. ಇವತ್ತಿಗೂ ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶದಲ್ಲಿ ಕಾಂಗ್ರೆಸ್ ವಿರೋಧಿ ವೋಟುಗಳು ಲಾಗಾಯ್ತಿನಿಂದಲೂ ಇರುವುದಕ್ಕೆ ಇವೇ ಮುಖ್ಯ ಕಾರಣಗಳು. ಕಾಂಗ್ರೆಸ್ ವಿರೋಧಿ ಕೆಲವು ಮತದಾರರು ಎಷ್ಟರಮಟ್ಟಿಗೆ ತಮ್ಮ ನಿಲುವನ್ನು ಹೊಂದಿದ್ದಾರೆ ಎಂದರೆ ಕಾಂಗ್ರೆಸ್-ಬಿಜೆಪಿ ಎರಡನ್ನೂ ದೂರ ಇಟ್ಟು ತೃತೀಯ ಪರ್ಯಾಯ ಶಕ್ತಿಯ ಕಡೆ ವಾಲುತ್ತಾರೆ. ತೃತೀಯ ಪರ್ಯಾಯ ಶಕ್ತಿ ಸಮರ್ಥವಾಗಿ ಕಂಡು ಬರದಿದ್ದರೆ ಬಿಜೆಪಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ವಿನಾ ಕಾಂಗ್ರೆಸ್ ಕೈ ಹಿಡಿಯುವುದಿಲ್ಲ.
ತುರ್ತು ಪರಿಸ್ಥಿತಿ ಹಾಗೂ ಮತ್ತಿತರ ಕಾರಣಗಳು ಈ ಮತದಾರರನ್ನು ಬಿಜೆಪಿ ಕಡೆ ವಾಲಿಸುತ್ತದೆ ವಿನಾ ಕಾಂಗ್ರೆಸ್‌ನತ್ತ ತಿರುಗಿಯೂ ನೋಡುವುದಿಲ್ಲ. ಕರ್ನಾಟಕದಲ್ಲಿ ತೃತೀಯ ಶಕ್ತಿಯಾಗಿದ್ದ ಜನತಾ ಪರಿವಾರ ತನ್ನ ಆಂತರಿಕ ಬೇಗುದಿಯಿಂದ ಕುಸಿದಾಗ ಇಲ್ಲಿನ ಬಹುತೇಕ ನಾಯಕರು ಕಮಲದ ತೆಕ್ಕೆಗೆ ಬಿದ್ದರೇ ವಿನಾ ಕಾಂಗ್ರೆಸ್ ಪಾಳಯಕ್ಕೆ ಜಿಗಿಯಲಿಲ್ಲ ಎಂಬುದನ್ನು ಗಮನಿಸಬಹುದು.
ತುರ್ತು ಪರಿಸ್ಥಿತಿಯ ಹೋರಾಟ ಬಿಹಾರ, ಉತ್ತರಪ್ರದೇಶ, ಗುಜರಾತ್, ಮಹಾರಾಷ್ಟ್ರಗಳಲ್ಲಿ ಪ್ರಖರವಾಗಿತ್ತು. ಕರ್ನಾಟಕದಲ್ಲೂ ತುರ್ತುಪರಿಸ್ಥಿತಿ ಹೋರಾಟ ಕಾವು ಪಡೆದಿತ್ತು. ಜೆಪಿ ಚಳವಳಿಗಾರರು ಮೇಲೆ ಪೊಲೀಸ್ ದೌರ್ಜನ್ಯದ ಪ್ರಕರಣಗಳೂ ಇಲ್ಲಿಯೂ ನಡೆಯಿತು. ತುರ್ತು ಪರಿಸ್ಥಿತಿಯ ಹೋರಾಟಗಳು, ಚಳವಳಿಗಾರರಿಗೆ ಸಂದೇಶ ನೀಡುವ ಮಾಹಿತಿಗಳನ್ನು ಒಳಗೊಂಡ ಅನೇಕ ಭೂಗತ ಪತ್ರಿಕೆಗಳು ಪೊಲೀಸರ ಕಣ್ತಪ್ಪಿಸಿ ಚಳವಳಿಗಾರರ ಕೈಸೇರಿದವು. ಅಂತಹ ಒಂದು ಪತ್ರಿಕೆಯ ಹೆಸರು ಕಹಳೆ. ಮೈಸೂರಿನಲ್ಲಿಇಂತಹ ಒಂದು ಪತ್ರಿಕೆ ಟಾಬ್ಲಾಯ್ಡ್ ಆಕಾರದಲ್ಲಿ ಸ್ಟೇನ್‌ಸ್ಟಿಲ್‌ನಲ್ಲಿ ಮುದ್ರಣವಾಗಿ ಹೋರಾಟಗಾರರ ಕೈಸೇರುತ್ತಿತ್ತು.
ತುರ್ತು ಪರಿಸ್ಥಿತಿಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಖಶಿಖಾಂತ ವಿರೋಧಿಸಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ, ಜನಸಂಘ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸಮಾಜವಾದಿಗಳು, ಸಂಸ್ಥಾ ಕಾಂಗ್ರೆಸ್ ನಾಯಕರು ತುರ್ತು ಪರಿಸ್ಥಿತಿಯನ್ನು ಪ್ರತಿಭಟಿಸಿ ಬೀದಿಗಿಳಿದು ಹೋರಾಡಿ ಜೈಲು ಸೇರಿದರು. ಅನೇಕ ಸಾಹಿತಿಗಳು, ಕಲಾವಿದರು ಇಂದಿರಾ ಗಾಂಧಿ ಅವರ ಈ ನಡೆಯನ್ನು ಪ್ರತಿಭಟಿಸಿ ಕಾರಾಗೃಹವಾಸ ಅನುಭವಿಸಿದರು. ಅದು ಯಾವುದೇ ಪ್ರಚಾರಕ್ಕಾಗಿ ನಡೆದ ಚಳವಳಿ ಅಲ್ಲ. ಜನರ ಅಂತರಾಳದಿಂದ ಹೊರಹೊಮ್ಮಿದ ಪ್ರತಿಭಟನೆ ಅದು.
ಜೆಪಿ ಚಳವಳಿ ಎರಡು ಮಾರ್ಗದಲ್ಲಿ ನಡೆದಿತ್ತು. ಒಂದು-ಬೀದಿಗಿಳಿದು ಹೋರಾಟ ನಡೆಸಿ ಜೈಲು ಸೇರುವುದು. ಮತ್ತೊಂದು-ಭೂಗತರಾಗಿ ಚಟುವಟಿಕೆ ನಡೆಸುವುದು. ಆದರೆ, ಕಮ್ಯುನಿಸ್ಟರು ತುರ್ತು ಪರಿಸ್ಥಿತಿಯನ್ನು ವಿರೋಧಿಸಲಿಲ್ಲ. ಕಾಂಗ್ರೆಸ್ಸಿಗರು ತಮ್ಮ ಅಧಿನಾಯಕಿ ಇಂದಿರಾ ಗಾಂಧಿ ಅವರು ಹೇರಿದ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿ ಮಾತಾಡಿದರು. ದೇಶದಲ್ಲಿಇಂದಿರಾ ಗಾಂಧಿ ಸರಕಾರದ 20 ಅಂಶಗಳ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೆ ಬಂದಿದ್ದೇ ಈ ಅವಧಿಯಲ್ಲಿ ಎಂಬುದು ಕಾಂಗ್ರೆಸ್ಸಿಗರ ವಾದವಾಯಿತು. ಜೆಪಿ ಚಳವಳಿಯ ಹೋರಾಟಗಾರರು ಆ ಕಾಲದಲ್ಲಿತುರ್ತು ಪರಿಸ್ಥಿತಿ ಬಗ್ಗೆ ಪ್ರಶ್ನಿಸಿದಾಗ ಮೈಸೂರಿನ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೀಗೆ ಉತ್ತರಿಸಿದ್ದರು- ನಮಗೆಲ್ಲಿದೆ (ಕಾಂಗ್ರೆಸ್) ತುರ್ತು ಪರಿಸ್ಥಿತಿ? ಅದು ಇರೋದು ನಿಮಗೆ (ಹೋರಾಟಗಾರರಿಗೆ).
ತುರ್ತು ಪರಿಸ್ಥಿತಿಯಲ್ಲಿಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿತ್ತು. ಪತ್ರಿಕೆಗಳ ಮೇಲೆ ದಿಗ್ಭಂಧನವಿತ್ತು. ಪತ್ರಿಕೆಗಳು ಮುದ್ರಣವಾಗುವ ಮುನ್ನ ಅಧಿಕಾರಿಯೊಬ್ಬರು ಪತ್ರಿಕಾ ಕಚೇರಿಗೆ ಬಂದು ಅವುಗಳನ್ನು ಪರಿಶೀಲಿಸಿ ಅನುಮತಿಸಿದರೆ ಮಾತ್ರ ಪ್ರಿಂಟ್ ಆಗಬೇಕಿತ್ತು. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಸಂಪಾದಕೀಯ ಸ್ಥಳವನ್ನು ಖಾಲಿ ಬಿಟ್ಟು ಪ್ರತಿಭಟಿಸಿದ್ದು ಭಾರತೀಯ ಪತ್ರಿಕೋದ್ಯಮದಲ್ಲಿದಾಖಲಾಯಿತು.
ಸಂಪಾದಕೀಯ ಸ್ಥಳ ಖಾಲಿ ಬಿಟ್ಟಿದ್ದ ಇಂಡಿಯನ್ ಎಕ್ಸ್ ಪ್ರೆಸ್ | ಚಿತ್ರ ಕೃಪೆ ವಿಕಿಪಿಡಿಯಾ
ಎಮರ್ಜೆನ್ಸಿಯಲ್ಲಿಮುಖ್ಯವಾಗಿ ಕೇಳಿ ಬಂದ ಹೆಸರು ಮೀಸಾ ಹಾಗೂ ಡಿಐಆರ್. ಮೀಸಾ ಅಂದರೆ ಮೇಂಟೆನೆನ್ಸ್ ಆಫ್ ಇಂಟರ್‌ನಲ್ ಸೆಕ್ಯೂರಿಟಿ ಆ್ಯಕ್ಟ್. ಡಿಐಆರ್ ಅಂದರೆ ಡಿಫೆನ್ಸ್ ಆಫ್ ಇಂಡಿಯಾ ರೂಲ್. ಈ ಎರಡು ಕಾಯ್ದೆಗಳಡಿಯಲ್ಲಿಹೋರಾಟಗಾರರನ್ನು ಬಂಧಿಸಿ ಜೈಲಿಗೆ ಅಟ್ಟಲಾಗುತ್ತಿತ್ತು.
ನಮ್ಮ ಮನೆಗೆ ಸಮೀಪವಿದ್ದ ಚಾಮುಂಡಿಪುರಂ ಸರ್ಕಲ್ ತುರ್ತು ಪರಿಸ್ಥಿತಿ ಹಾಗೂ ನಂತರ ಕಾಂಗ್ರೆಸ್ ವಿರೋಧಿ ಹೋರಾಟಗಳಲ್ಲಿ ಮೈಸೂರಿನ ಪ್ರಮುಖ ಸ್ಥಳಗಳಲ್ಲಿಒಂದು. ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರದೇಶವಿದು. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಆಡ್ವಾಣಿ, ವಿಜಯರಾಜೇ ಸಿಂಧಿಯಾ, ಸಿಕಂದರ್ ಭಕ್ತ್ ಹೀಗೆ ಆಗಿನ ಜನಸಂಘ ಹಾಗೂ ನಂತರದ ಬಿಜೆಪಿಯ ರಾಷ್ಟ್ರೀಯ ನಾಯಕರು ಮೈಸೂರಿಗೆ ಆಗಮಿಸಿದಾಗ ಇಲ್ಲಿಯೂ ಅವರ ಬಹಿರಂಗ ಸಭೆ ನಡೆಯುತ್ತಿತ್ತು. ನಮ್ಮ ಬಾಲ್ಯದ ದಿನಗಳಲ್ಲಿನಮ್ಮ ಏರಿಯಾದ ಹುಡುಗರು ಈ ರಾಷ್ಟ್ರೀಯ ನಾಯಕರ ಭಾಷಣ ಕೇಳಲು ಮುಂದಿನ ಸಾಲಿನ ಜಮಖಾನೆ ಮೇಲೆ ಕುಳಿತು ಬಿಡುತ್ತಿದ್ದೆವು. ಜೆಪಿ ಚಳವಳಿ ನಂತರ ಕೇಂದ್ರದಲ್ಲಿಅಧಿಕಾರಕ್ಕೆ ಬಂದ ಜನತಾಪಕ್ಷದ ಸರಕಾರ ತನ್ನ ಒಳಜಗಳ, ಪ್ರತಿಷ್ಠೆಯಿಂದ ಎರಡೇ ವರ್ಷಗಳಲ್ಲಿ ಪತನಗೊಂಡಿದ್ದು ಮತ್ತೊಂದು ರಾಜಕೀಯ ಇತಿಹಾಸವಾಗಿದೆ.
ಗಾಂಧೀಜಿ ಅವರ ನೇತೃತ್ವದಲ್ಲಿಹೋರಾಟ ನಡೆದು ದೇಶ ಸ್ವಾತಂತ್ರ್ಯ ಪಡೆಯಿತು. ಆದರೆ, ಗಾಂಧೀಜಿ ಯಾವುದೇ ಅಧಿಕಾರಕ್ಕೆ ಆಸೆಪಡಲಿಲ್ಲ. ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದೇ ಕರೆಯಲಾದ ತುರ್ತು ಪರಿಸ್ಥಿತಿ ಹೋರಾಟದ ನಾಯಕತ್ವ ವಹಿಸಿದ್ದ ಜಯಪ್ರಕಾಶ್ ನಾರಾಯಣ್ ಅವರು ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದು ತಾವು ಮಾತ್ರ ಯಾವ ಅಧಿಕಾರಕ್ಕೂ ಹಂಬಲಿಸಲಿಲ್ಲ.
ಜೆಪಿ ಚಳವಳಿ ದೇಶದಲ್ಲಿಅಂದಿನ ಯುವ ತಲೆಮಾರಿನವರಲ್ಲಿ ನಾಯಕತ್ವ ಹುಟ್ಟು ಹಾಕಿತು. ಋುತುಮಾನಗಳು ಉರುಳಿದಂತೆ ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ಸೇರಿದವರೇ ರಾಜಕೀಯವಾಗಿ ಕಾಂಗ್ರೆಸ್ ಮನೆ ಬಾಗಿಲು ಬಡಿದರು. ಯಾರು ನೆಹರೂ, ಇಂದಿರಾ ಗಾಂಧಿ ಅವರ ವಂಶಪಾರಂಪರ್ಯದ ರಾಜಕಾರಣವನ್ನು ವಿರೋಧಿಸಿದ್ದರೋ ಅವರೇ ಮುಂದೆ ತಮ್ಮ ಮಕ್ಕಳಿಗೂ ರಾಜಕೀಯ ಭವಿಷ್ಯ ಕಲ್ಪಿಸಿಕೊಟ್ಟರು. ತುರ್ತು ಪರಿಸ್ಥಿತಿಯ ಕೂಸಾದ ಜನತಾ ಪರಿವಾರವೇ ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿತು.
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಯಾದವ್, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್, ಕೇಂದ್ರದಲ್ಲಿ ಸಚಿವರಾಗಿದ್ದ ದಿವಂಗತ ರಾಮವಿಲಾಸ ಪಾಸ್ವಾನ್ ಜೆಪಿ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದವರು. ಲಾಲೂ ಅವರು ತುರ್ತು ಪರಿಸ್ಥಿತಿಯ ದಿನಗಳಲ್ಲಿ ಜನಿಸಿದ ತಮ್ಮ ಮಗಳಿಗೆ ಮೀಸಾ ಭಾರತಿ ಎಂದೇ ಹೆಸರಿಟ್ಟಿದ್ದಾರೆ. ಇದೇ ಲಾಲೂ ಪ್ರಸಾದ್ ಯಾದವ್ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಕೇಂದ್ರದಲ್ಲಿ ಸಚಿವರೂ ಆಗಿದ್ದರು.
ಹೀಗೆ ನನ್ನ ಬಾಲ್ಯದ ಅನೇಕ ನೆನಪುಗಳಲ್ಲಿ ನಮ್ಮ ಏರಿಯಾದಲ್ಲಿನಡೆದ ಎಮರ್ಜೆನ್ಸಿಯ ಹೋರಾಟವೂ ಒಂದು.
ಕೋವಿಡ್ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಕಲಿಕಾ ನಿರಂತರತೆ, ಕಲಿಕಾ ಸಾಮಗ್ರಿ, ಕಲಿಕಾ ನಿರಂತರ ಮೌಲ್ಯಮಾಪನ ಕುರಿತು ಕಾಲಕಾಲಕ್ಕೆ ಸಲಹೆ ನೀಡಲು ಸಮಾಜದ ವಿವಿಧ ಸ್ತರಗಳ ವ್ಯಕ್ತಿಗಳು, ಶಿಕ್ಷಣ ತಜ್ಞರನ್ನೊಳಗೊಂಡ ಕಾರ್ಯಪಡೆಯನ್ನು ರಚಿಸಿ, ವಿದ್ಯಾರ್ಥಿ ಕಲಿಕೆಯ ಪರಾಮರ್ಶೆಗೆ ನಿರಂತರ ಸೂತ್ರವನ್ನು ರಚಿಸಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಕೋವಿಡ್ ಕಾಲಘಟ್ಟದಲ್ಲಿ ಶಾಲಾರಂಭ ಸೇರಿದಂತೆ ಮಕ್ಕಳ ಕಲಿಕಾ ನಿರಂತರತೆ ಮತ್ತು ಡಾ. ದೇವಿಶೆಟ್ಟಿ ಸಮಿತಿ ವರದಿ ಕುರಿತು ಚರ್ಚಿಸಲು ಶುಕ್ರವಾರ ವಿವಿಧ ಶಿಕ್ಷಣ ತಜ್ಞರು, ಶಿಕ್ಷಣ ಕುರಿತ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಸಭೆಯ ನಂತರ ಮಾತನಾಡಿದ ಅವರು, ಸಭೆಯಲ್ಲಿ ಶಾಲಾರಂಭ ಕುರಿತು ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿದ್ದು, ಎಲ್ಲ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.
ನಾವು ಭೌತಿಕ ತರಗತಿಗಳ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೂ ಮೊದಲು ಆರೋಗ್ಯ ಇಲಾಖೆಯ ಸಲಹೆ ಪಡೆದೇ ಮುಂದುವರೆಯಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ಶಾಲೆಗಳಿಂದ ಮಕ್ಕಳನ್ನು ಬಹುಕಾಲ ದೂರ ಉಳಿಸುವುದು ಮಕ್ಕಳ ಹಿತರಕ್ಷಣೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗೆಯೇ ಯಾವುದೇ ಶಾಲೆಯಿಂದ ಕೋವಿಡ್ ಹರಡಿದ ನಿದರ್ಶನಗಳಿಲ್ಲವಾದ್ದರಿಂದ ಶಾಲೆಗಳನ್ನು ಸಾಧ್ಯವಾದಷ್ಟು ಬೇಗ ತೆರೆಯಬಹುದು ಮತ್ತು ಶಾಲಾರಂಭವನ್ನು ಆಯಾ ಪ್ರದೇಶವಾರು ಕೋವಿಡ್ ಕನಿಷ್ಠ ಪಾಸಿಟಿವಿಟಿ ಆಧಾರದಲ್ಲಿ ತೆರೆಯಬಹುದೆಂಬ ಡಾ. ದೇವಿಶೆಟ್ಟಿ ವರದಿಯ ಅಂಶಗಳ ಕುರಿತು ಪ್ರಧಾನವಾಗಿಟ್ಟುಕೊಂಡು ಅಭಿಪ್ರಾಯ ವ್ಯಕ್ತಪಡಿಸಿದ ಪ್ರತಿಯೊಬ್ಬ ಪ್ರತಿನಿಧಿಗಳು, ಯಾವುದಾದರೂ ರೂಪದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಪರ್ಕ ಏರ್ಪಡಲೇಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆಂದು ಸಚಿವರು ತಿಳಿಸಿದರು.
ಸ್ಕೂಲ್ ಅನ್‍ಲಾಕ್: ರಾಜ್ಯದ ವಿವಿಧೆಡೆ ಮಕ್ಕಳು ಬಹುಕಾಲ ಶಾಲೆಯಿಂದ ಹೊರಗುಳಿದಿರುವುದರಿಂದ ಪೋಷಕರು ಮತ್ತು ಮಕ್ಕಳು ಶಾಲೆಗೆ ಬರಲು ಕಾತರರಾಗಿರುವುದು ಸಮೀಕ್ಷೆಯಿಂದ ವ್ಯಕ್ತವಾಗಿದೆ ಎಂದು ಕೆಲ ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳು ಪ್ರತಿಪಾದಿಸಿದರೆ, ಹಲವಾರು ಮಂದಿ ದೇಶದ ವಿವಿಧೆಡೆ ಅನುಸರಿಸಿದ ಕಳೆದ ವರ್ಷ ಪ್ರಾರಂಭಿಸಿದ್ದ ನಮ್ಮ ರಾಜ್ಯದ ಸುಧಾರಿತ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸಿ ಶಿಕ್ಷಕರು ಮಕ್ಕಳನ್ನು ತಲುಪುವುದು, ಲಾಕ್‍ಡೌನ್ ಅನ್‍ಲಾಕ್ ಮಾಡಿದಂತೆ ವಿಕೇಂದ್ರೀಕರಣ ರೂಪದಲ್ಲಿ ಸ್ಕೂಲ್ ಅನ್‍ಲಾಕ್ ಮಾಡುವ ಕುರಿತೂ ಸಲಹೆಗಳು ವ್ಯಕ್ತವಾಗಿವೆ ಸುರೇಶ್ ಕುಮಾರ್ ಹೇಳಿದರು.
ಶಾಲಾರಂಭದ ವಿಷಯದಲ್ಲಿ ಎಲ್ಲ ಕಡೆಯೂ ಒಂದೇ ಬಾರಿಗೆ ಶಾಲೆ ತೆರೆಯದಿದ್ದರೂ ತೊಂದರೆಯೇನೂ ಇಲ್ಲ, ಆದರೆ ಆಯಾ ತಾಲೂಕು, ಗ್ರಾಮಪಂಚಾಯ್ತಿ ಇಲ್ಲವೇ ಜಿಲ್ಲಾ ಹಾಗೆಯೇ ಗ್ರಾಮೀಣ ಪ್ರದೇಶ, ನಗರ ಪ್ರದೇಶ, ಹೋಬಳಿ, ತಾಲೂಕು ಕೇಂದ್ರವಾರು ತರಗತಿ ಆರಂಭಿಸುವುದು ಇಲ್ಲವೇ ಇತರೆ ರೂಪದಲ್ಲಿ ಮಕ್ಕಳನ್ನು ಉಪಾಧ್ಯಾಯರು ತಲುಪುವ ವಿಷಯಗಳ ಕುರಿತೂ ಪ್ರತಿನಿಧಿಗಳು ವಿವಿಧ ಸಲಹೆಗಳನ್ನು ನೀಡಿದರಲ್ಲದೇ ಭೌತಿಕವಾಗಿ ಶಾಲೆಗಳನ್ನು ತೆರೆಯುವ ಕುರಿತು ಆಲೋಚಿಸಬೇಕೆಂದೂ ಪ್ರತಿಪಾದಿಸಿದರು ಎಂದು ಸುರೇಶ್ ಕುಮಾರ್ ತಿಳಿಸಿದರು.
ಆನ್-ಲೈನ್ , ದೂರದರ್ಶನ ಚಂದನಾ ಮೂಲಕ ಸಂವೇದಾ ಪಾಠಗಳು, ಯೂ-ಟ್ಯೂಬ್, ವಾಟ್-ಸ್‌ಪ್ ಮೂಲಕ ಹಾಗೆಯೇ ಮಕ್ಕಳು ವಾರದಲ್ಲಿ ಒಂದು ದಿನ ಶಾಲೆಗೆ ಬಂದು ಸಿದ್ಧಪಾಠಗಳನ್ನು ತೆಗೆದುಕೊಂಡು ಹೋಗಿ ಇನ್ನೊಂದು ದಿನ ಅವುಗಳೊಂದಿಗೆ ಬಂದು ಸಂಶಯಗಳ ನಿವಾರಣೆಗೆ ಶಿಕ್ಷಕರನ್ನು ಭೇಟಿ ಮಾಡುವಂತಹುದು, ಶಾಲೆಗೆ ಬರಲಾಗದ ಮಕ್ಕಳಿಗೆ ಆಯಾ ಗ್ರಾಮಪಂಚಾಯ್ತಿ ಅಧಿಕಾರಿಗಳ ಇಲ್ಲವೇ ಸ್ವಯಂ ಸೇವಕರ ಮೂಲಕ ಸಿದ್ಧಪಠ್ಯಗಳನ್ನು ನೀಡುವಂತಹ ಸಲಹೆಗಳೂ ವ್ಯಕ್ತವಾದವು.
ವಿಶೇಷವಾಗಿ ಡಾ. ದೇವಿಶೆಟ್ಟಿ ವರದಿಯಂತೆ ತರಗತಿವಾರು, ಆಯಾ ಪ್ರದೇಶದ ಪಾಸಿಟಿವಿಟಿ ದರದ ಅನ್ವಯ ಶಾಲಾ ತರಗತಿಗಳನ್ನು ತೆರೆಯುವುದಾಗಲಿ ಇಲ್ಲವೇ ಶಾಲಾವರಣದಲ್ಲಿ ವಿದ್ಯಾಗಮ ತರಗತಿಗಳನ್ನು ನಡೆಸುವುದರ ಕುರಿತು ಆದ್ಯತೆ ನೀಡಬೇಕೆಂಬುದು ಬಹುತೇಕರ ಸಲಹೆಯಾಗಿದ್ದು, ಸದ್ಯದಲ್ಲೇ ಟಾಸ್ಕ್‍ಫೋರ್ಸ್ ರಚಿಸಿ ಒಂದು ತೀರ್ಮಾನಕ್ಕೂ ಬರಲಾಗುವುದು ಎಂದೂ ಸುರೇಶ್ ಕುಮಾರ್ ತಿಳಿಸಿದರು.
ಈ ಬಾರಿ ನಿರಂತರ ಮೌಲ್ಯಾಂಕನ: ಕೋವಿಡ್‍ನಂತಹ ಸಂದರ್ಭದಲ್ಲಿ ಮಕ್ಕಳ ಮೌಲ್ಯಾಂಕನ ಮಾಡಲು ಅನುಕೂಲವಾಗುವಂತೆ ಈ ವರ್ಷದಿಂದ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲೂ ನಿರಂತರ/ ತ್ರೈಮಾಸಿಕ, ಅರ್ಧವಾರ್ಷಿಕ/ ವಾರ್ಷಿಕ ಮೌಲ್ಯಾಂಕನ ಪದ್ಧತಿಯನ್ನೂ ಅಳವಡಿಸಿಕೊಳ್ಳಬೇಕೆಂಬ ಕುರಿತೂ ಚಿಂತನೆ ನಡೆಸಲಾಗಿದ್ದು, ಈ ಕುರಿತಂತೆಯೂ ಕಾರ್ಯಪಡೆ ವರದಿ ನೀಡಲಿದೆ ಎಂದೂ ಸಚಿವರು ವಿವರಿಸಿದರು.
ಮಕ್ಕಳಿಗೆ ಆದಷ್ಟು ಬೇಗ ಪಠ್ಯಪುಸ್ತಕ ಪೂರೈಸಲು ಕ್ರಮ ವಹಿಸುವುದು ಹಾಗೆಯೇ ಮಧ್ಯಾಹ್ನ ಉಪಹಾರ ಸಾಮಗ್ರಿಗಳನ್ನು ಸಮಸ್ಯೆಯಿಲ್ಲದೇ ವಿತರಣೆ ಕುರಿತಂತೆಯೂ ಹೆಚ್ಚಿನ ಗಮನ ಹರಿಸಬೇಕೆಂದು ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
28ರಂದು ಈ ಕುರಿತೂ ಚರ್ಚೆ:ಸುರಕ್ಷಿತ ವಾತಾವರಣದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವ ಸಂಬಂಧದಲ್ಲಿ ಜೂ. 28ರಂದು ಜಿಲ್ಲಾಧಿಕಾರಿಗಳು, ಸಿಇಒ, ಎಸ್‍ಪಿ, ಡಿಎಚ್‍ಒಗಳು ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಮತ್ತು ರಾಜ್ಯದ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯವರು ಭಾಗಿಯಾಗಲಿರುವುದರಿಂದ ಈ ವಿಷಯಗಳ ಕುರಿತೂ ಅವರೊಂದಿಗೂ ಚರ್ಚೆ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಸಂಗೀತ ಕಲಾವಿದರ ನೆರವಿಗಾಗಿ ರೂಪಿಸಲಾಗಿರುವ ʼಕಲಾನಿಧಿ- 2021ʼ ಸಂಗೀತ ಕಾರ್ಯಕ್ರಮ ನಾಳೆ ಶುಕ್ರವಾರದಿಂದ (ಜನ್ 25,26 ಮತ್ತು 27 )ಭಾನುವಾರದವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಲಿದ್ದು, ಎಲ್ಲರೂ ವೀಕ್ಷಿಸಿ ಉದಾರವಾಗಿ ದೇಣಿಗೆ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ತೇಜಸ್ವಿ ಸೂರ್ಯ, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ರೂಪಿತವಾಗಿದೆ. ಶುಕ್ರವಾರ ಮತ್ತು ಶನಿವಾರ ಸಂಜೆ 7ರಿಂದ 10 ಗಂಟೆವರೆಗೆ ಹಾಗೂ ಭಾನುವಾರ 4ರಿಂದ 10 ಗಂಟೆ ತನಕ ಕಾರ್ಯಕ್ರಮ ಪ್ರಸಾರ ಆಗಲಿದೆ ಎಂದರು.
ಯುಟ್ಯೂಬ್ ಸೇರಿ ನಮ್ಮ ಮೂವರ ಜಾಲತಾಣಗಳ (FB LIVE) ಖಾತೆಗಳಲ್ಲಿ ಕಲಾನಿಧಿ ಕಾರ್ಯಕ್ರಮ ಪ್ರಸಾರವಾಗಲಿದೆ. ಜಾಗತಿಕ ಮಟ್ಟದ ಪ್ರಸಿದ್ಧ ಗಳಿಸಿರುವ ಗಾಯಕರಾದ ವಿಜಯ ಪ್ರಕಾಶ್, ಸೋನು ನಿಗಮ್ ಸೇರಿದಂತೆ ನೂರಕ್ಕೂ ಹೆಚ್ಚು ಖ್ಯಾತ ಕಲಾವಿದರು, ಅನೇಕ ಉದಯೋನ್ಮುಖ ಸಂಗೀತಗಾರರು ತಮ್ಮ ಸಂಗೀತ ಸುಧೆ ಹರಿಸಿದ್ದಾರೆ. ಪ್ರತಿಯೊಬ್ಬರೂ ವೀಕ್ಷಿಸಿ ಕಲಾವಿದರ ಕಷ್ಟಕ್ಕೆ ಮಿಡಿಯಬೇಕು. ಕಾರ್ಯಕ್ರಮ ವೀಕ್ಷಣೆ ಮಾಡುತ್ತಿರುವಾಗಲೇ ತೆರೆಯ ಮೇಲೆ ಯಾವ ಖಾತೆಗೆ ಹಣ ವರ್ಗಾಯಿಸಬೇಕು ಎಂಬ ಮಾಹಿತಿಯೂ ಕಾಣಿಸಿಕೊಳ್ಳುತ್ತದೆ ಎಂದು ಡಿಸಿಎಂ ಕೋರಿದರು.
ಈ ವಾರಾಂತ್ಯದಲ್ಲಿ ದೇಶದ ಖ್ಯಾತ ಸಂಗೀತಕಲಾವಿದರು,ಕೋವಿಡ್ ನ ಈ ಸಂದರ್ಭದಲ್ಲಿ ಸಹಕಲಾವಿದರ ಸಹಾಯಾರ್ಥವಾಗಿ 'ಕಲಾನಿಧಿ 2021' ಕಾರ್ಯಕ್ರಮ ನಡೆಸಿಕೊಡಲಿದ್ದು, ಜೂನ್ 25 ರಿಂದ 27ರ ವರೆಗೆ ಸಂಜೆ ಪ್ರೈಮ್ ಟೈಮ್ ನಲ್ಲಿ ಇದು ಪ್ರಸಾರಗೊಳ್ಳಲಿದೆ
ಇದೊಂದು ಅಪರೂಪದ ಕಾರ್ಯಕ್ರಮ. ಸಂಕಷ್ಟದ ಒತ್ತಡ ಕಾಲದಲ್ಲಿ ಸಂಗೀತ ಔಷಧದಂತೆ ಕೆಲಸ ಮಾಡುತ್ತದೆ. ಸಂಗೀತ ಆಲಿಸುವುದರಿಂದ ನಮ್ಮ ಮಿದುಳಿನ ಎಲ್ಲ ಭಾಗಗಳು ಚುರುಕಾಗಿ ಕೆಲಸ ಮಾಡುತ್ತವೆ. ಇದು ವೈಜ್ಞಾನಿಕವಾಗಿ ಸಾಭೀತಾಗಿರುವ ಅಂಶ ಎಂದು ಡಿಸಿಎಂ ತಿಳಿಸಿದರು.
ಬ್ಯಾಂಕ್ ಖಾತೆಗೇ ಹಣ:ದೇಣಿಗೆಯಿಂದ ಸಂಗ್ರಹವಾಗುವ ಹಣವನ್ನು ಸಂಕಷ್ಟದಲ್ಲಿರುವ ಸಂಗೀತ ಕಲಾವಿದರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಕೈಗೆ ನಗದು ಕೊಡುವ ವ್ಯವಹಾರವೇ ಇರುವುದಿಲ್ಲ. ಹೀಗಾಗಿ ಕಲಾನಿಧಿ ಕಾರ್ಯಕ್ರಮದ ಎಲ್ಲ ಹಣಕಾಸು ವ್ಯವಹಾರವೂ ಸಂಪೂರ್ಣ ಪಾರದರ್ಶಕ. ಆದ್ದರಿಂದ ಎಲ್ಲರೂ ಇಂಥ ಮಹತ್ತರ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದು ಡಾ.ಅಶ್ವತ್ಥನಾರಾಯಣ ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ನೋಡಿದ ನಂತರ ಆಸಕ್ತರು ದೇಣಿಗೆಯನ್ನು ಅನ್ ಲೈನ್ ಮೂಲಕ ಪಾವತಿ ಮಾಡಲು ಅವಕಾಶ ಇರುತ್ತದೆ. ಸಂಕಷ್ಟದಲ್ಲಿ ಇರುವ ಕಲಾವಿದರಿಗೆ ನೆರವಾಗಲು ಇದೊಂದು ಅವಕಾಶ’ ಎಂದು ಹೇಳಿದರು
ಮುಂದಿನ ಮುಖ್ಯಮಂತ್ರಿ ಕುರಿತ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ರೀತಿಯ ಕಂಪನಗಳನ್ನು ಎಬ್ಬಿಸಿದ ಬೆನ್ನಹಿಂದೆಯೇ ಈ ಬಗ್ಗೆ ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡಬಾರದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಶಾಸಕರಲ್ಲಿ ಮನವಿ ಮಾಡಿದ್ದಾರೆ.
“ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ” ಎಂದು ಶಾಸಕರು ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಅವರು ಶಾಸಕರಲ್ಲಿ ಈ ಮನವಿ ಮಾಡಿದ್ದಾರೆ.
ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಹೀಗಾಗಿ ಮುಂದಿನ ಮುಖ್ಯಮಂತ್ರಿ ಎಂದು ಈಗಲೇ ಹೇಳಿಕೆ ನೀಡಬಾರದು. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಚುನಾವಣೆ ಬಳಿಕ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಧರಿಸುತ್ತದೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಜುಲೈ 3ನೇ ವಾರದಲ್ಲಿ ನಡೆಯಲಿರುವ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಆದ್ಯತೆಯ ಮೇಲೆ ಕೋವಿಡ್-19ರ ಲಸಿಕೆ ನೀಡಲು ಅಗತ್ಯ ಕ್ರಮಗಳನ್ನು ವಹಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ . ಸುರೇಶ್ ಕುಮಾರ್ ರಾಜ್ಯದ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗಲಿರುವ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯ ಪಟ್ಟಿಯನ್ನು ಆಯಾ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ನೀಡಲಿದ್ದು, ಅವರೆಲ್ಲರಿಗೂ ಪರೀಕ್ಷೆ ಆರಂಭಕ್ಕೂ ಮುನ್ನವೇ ಲಸಿಕೆ ದೊರೆಯುವಂತೆ ಕ್ರಮ ವಹಿಸಬೇಕೆಂದು ಸಚಿವರು ತಿಳಿಸಿದ್ದಾರೆ.
ಈ ಬಾರಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ 6000ಕ್ಕೂ ಹೆಚ್ಚಿನ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿರುವುದರಿಂದ ಹೆಚ್ಚಿನ ಶಿಕ್ಷಕರು, ಸಿಬ್ಬಂದಿ ಮತ್ತು ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವರೆಲ್ಲರಿಗೂ ಆದ್ಯತೆಯ ಮೇಲೆ ಲಸಿಕೆ ನೀಡಬೇಕಾದ ಅಗತ್ಯವಿದೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.
ಪರೀಕ್ಷೆಗಳು ಹೆಚ್ಚಿನ ಸುರಕ್ಷತಾ ವಾತಾವರಣದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಎಲ್ಲರೂ ಲಸಿಕೆ ಪಡೆಯುವುದು ಅಗತ್ಯವಾಗಿದೆ ಎಂದು ಸಚಿವರು ಹೇಳಿದ್ದಾರೆ.