23.9 C
Karnataka
Monday, May 25, 2026
    Home Blog Page 91

    ನಾಡಿದ್ದಿನಿಂದಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ

    ಕಳೆದ ಎರಡ್ಮೂರು ವರ್ಷಗಳಿಂದ ಕಾಯುತ್ತಿದ್ದ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗೆ ಮಹೂರ್ತ ಕೂಡಿಬಂದಿದ್ದು, ಜೂ. 30ರಿಂದಲೇ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ವರ್ಗಾವಣೆ ಪ್ರಕ್ರಿಯೆ ವಿವರಗಳನ್ನು ಪ್ರಕಟಿಸಿದ ಅವರು, ಅಧಿಕೃತ ವೇಳಾಪಟ್ಟಿ ಹಾಗೂ ಅಧಿಸೂಚನೆ ಜೂ. 30ಕ್ಕೆ ಪ್ರಕಟಗೊಳ್ಳಲಿದ್ದು, ಅಂದಿನಿಂದಲೇ ವರ್ಗಾವಣಾ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ ಎಂದರು.

    2019-20ನೇ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಗೆ ಒಳಗಾಗಿದ್ದ ಶಿಕ್ಷಕರಿಗೆ ನ್ಯಾಯ ದೊರಕಿಸುವುದು ನಮ್ಮ ಜವಾಬ್ದಾರಿಯಾಗಿತ್ತು. ಅವರ ಸಂಕಷ್ಟಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ವಿಧಾನ ಮಂಡಲದಲ್ಲಿ ನಾವು ಉಭಯ ಸದನಗಳಲ್ಲಿ ಅನುಮೋದನೆ ಪಡೆದು ಕಾಯ್ದೆ ಅಧಿಸೂಚಿಸಿದ ಸಂದರ್ಭದಲ್ಲಿ ಕೆಲವು ಶಿಕ್ಷಕರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದರು. ಅದಕ್ಕಾಗಿ ನಾವು ಸುಗ್ರೀವಾಜ್ಞೆಯ ಮೂಲಕ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದೆವು. ಸಚಿವ ಸಂಪುಟದ ಅನುಮೋದನೆಯನ್ನು ಪಡೆದು ರಾಜ್ಯಪಾಲರು ಒಪ್ಪಿದ ಬಳಿಕ ಸುಗ್ರೀವಾಜ್ಞೆಯನ್ನು‌ ನಾವು ಹೊರತಂದಿದ್ದೇವೆ. ಪೂರಕ‌ ನಿಯಮಗಳನ್ನು ಸಹ ಅಂತಿಮಗೊಳಿಸಿ, ವರ್ಗಾವಣಾ‌ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ವರ್ಗಾವಣೆ ಪ್ರಕ್ರಿಯೆ ಹಿಂದಿನ ಘಟನಾವಳಿಗಳನ್ನು ಸಚಿವರು ಮೆಲುಕು ಹಾಕಿದರು.

    ಕಡ್ಡಾಯ/ ಹೆಚ್ಚುವರಿ ವರ್ಗಾವಣೆಗೊಂಡ ಶಿಕ್ಷಕರಿಗೆ ಮೊದಲ ಆದ್ಯತೆ

    2019-2020ರಲ್ಲಿ ಕಡ್ಡಾಯ/ ಹೆಚ್ಚುವರಿ ವರ್ಗಾವಣೆಗೊಂಡ ಶಿಕ್ಷಕರಿಗೆ ಮೊದಲ ಆದ್ಯತೆ ದೊರೆಯಲಿದೆ. ಈ ಬಾರಿಗೆ ಸಂಬಂಧಿಸಿದಂತೆ ವಲಯ ಅಥವಾ ಹೆಚ್ಚುವರಿ ವರ್ಗಾವಣೆ ಯಾವುದೂ ಇರುವುದಿಲ್ಲ. 2019-20ರಲ್ಲಿ ಕಡ್ಡಾಯ/ಹೆಚ್ಚುವರಿ ವರ್ಗಾವಣೆಗೊಳಗಾಗಿದ್ದ ಶಿಕ್ಷಕರಿಗೆ ಮೊದಲ ಆದ್ಯತೆಯ ಕೌನ್ಸೆಲಿಂಗ್ ಇರಲಿದೆ. ಈಗಾಗಲೇ ಸ್ವೀಕೃತಗೊಂಡಿರುವ 75000 ಅರ್ಜಿಗಳಿಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ಪ್ರಕ್ರಿಯೆ ಪ್ರಾರಂಭ ಮಾಡಲಾಗುತ್ತದೆ. ಈ ಶಿಕ್ಷಕರನ್ನು‌ ಹೊರತುಪಡಿಸಿ‌ ಹೆಚ್ಚುವರಿಯಾಗಿ ಅರ್ಹರಾಗುವ ಶಿಕ್ಷಕರಿಗೂ ಸಹ ಎರಡನೇ ಹಂತದ ಅವಕಾಶ ಕಲ್ಪಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಶಿಕ್ಷಕರು ಜವಾಬ್ದಾರಿ ಮೆರೆಯಬೇಕಿದೆ
    ಸಾವಿರಾರು ಶಿಕ್ಷಕರು ಚಾತಕಪಕ್ಷಿಗಳ ಹಾಗೆ ಕಾಯುತ್ತಿದ್ದಾರೆ. ಇದು ಸರ್ಕಾರ ಅವರಿಗಾಗಿ ಕಷ್ಟಪಟ್ಟು ಹೊರತಂದಿರುವ ಅತ್ಯಂತ ಶಿಕ್ಷಕ‌ಸ್ನೇಹಿ‌‌ ಕಾಯ್ದೆಯಾಗಿದೆ. ಇದನ್ನು ಅನುಷ್ಠಾನಗೊಳಿಸಿಕೊಂಡು ಅದರ‌ ಪ್ರಯೋಜನವನ್ನು ಪಡೆಯುವುದು, ತಮ್ಮ‌ ಸಮುದಾಯದ ಹಿತಕ್ಕೆ ಮಿಡಿಯುವುದೂ‌ ಅವರ ಕರ್ತವ್ಯವಾಗಿದೆ. ಎಲ್ಲ‌ ಶಿಕ್ಷಕರೂ ಇದನ್ನು ಸ್ವಾಗತಿಸುವ ಜವಾಬ್ದಾರಿ ಹೊಂದಿದ್ದಾರೆ. ಯಾವುದೇ ಅಡೆತಡೆಗಳಿಲ್ಲದೇ ಇದನ್ನು ಅನುಷ್ಠಾನ ಮಾಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದು ಸಚಿವರು ವಿವರಿಸಿದರು.

    ಈ ಬಾರಿ ವರ್ಗಾವಣಾ‌ ಪ್ರಕ್ರಿಯೆಯೂ‌ ಅತ್ಯಂತ‌ ಪಾರದರ್ಶಕವಾಗಿರಲಿದೆ. ಶಿಕ್ಷಕ ಮಿತ್ರ ಆಪ್ ಮೂಲಕ ಶಿಕ್ಷಕರು‌ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ‌ ಪಾಲ್ಗೊಳ್ಳಬಹುದು. ಸ್ಥಳ ಆಯ್ಕೆಯನ್ನೂ ಮಾಡಿಕೊಳ್ಳಬಹುದು. ಹಾಗಾಗಿ ಇಂತಹುದೊಂದು ಶಿಕ್ಷಕರ‌ ಪರವಾದ‌ ಸಂಪೂರ್ಣ ಪಾರದರ್ಶಕವಾದ ವ್ಯವಸ್ಥೆಯನ್ನು ಪ್ರತಿಯೊಬ್ಬರೂ ಸ್ವಾಗತಿಸಿ, ಬಳಸಿ ಪ್ರಯೋಜನ ಪಡೆಯಬೇಕೆಂದು ಸುರೇಶ್ ಕುಮಾರ್ ಮನವಿ ಮಾಡಿದರು.

    ಜುಲೈ 19 ಮತ್ತು 22 ರಂದು SSLC ಪರೀಕ್ಷೆ; ನಾಡಿದ್ದೇ ಹಾಲ್ ಟಿಕೆಟ್

    ಜುಲೈ 19 ಹಾಗೂ 22ರಂದು SSLC ಪರೀಕ್ಷೆ ನಡೆಯಲಿದೆ . ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ಈ ವಿಷಯ ಪ್ರಕಟಿಸಿದರು.

    ಎಲ್ಲಾ ರೀತಿಯ ಮುಂಜಾಗೃತಾ ಕ್ರಮಕೈಗೊಂಡು ಪರೀಕ್ಷೆ ನಡೆಸಲಾಗುವುದು. ಪಾಲಕರು ಆತಂಕ ಪಡಬೇಕಿಲ್ಲ ಎಂದರು.

    ಜುಲೈ 19ರಂದು ಕೋರ್ ವಿಷಯಗಳ ಪರೀಕ್ಷೆ ನಡೆಯಲಿದ್ದು, ಬೆಳಿಗ್ಗೆ 10:30ರಿಂದ 2:30ರವರೆಗೆ ಸಮಯ ನಿಗದಿ ಮಾಡಲಾಗಿದೆ. ಜುಲೈ 22ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ.

    ಈ ಬಾರಿ ಪರೀಕ್ಷೆಗೆ 8,76,581 ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. 73,066 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು. ಜೂನ್ 30 ಅಂದರೆ ನಾಡಿದ್ದೇ ಹಾಲ್ ಟಿಕೆಟ್ ಬಿಡುಗಡೆ ಮಾಡಲಾಗುತ್ತದೆ. ಎಂದರು.

    ಕೋವಿಡ್‌ – 19;ಸ್ವಾವಲಂಬನೆ ಮತ್ತು ಆತ್ಮ ಸ್ಥೈರ್ಯ

    ಕೋವಿಡ್-19‌ ಸಾಂಕ್ರಾಮಿಕ ಪಿಡುಗು ನಮ್ಮನ್ನು ಭಾದಿಸಲು ಪ್ರಾರಂಭವಾಗಿ ಒಂದು ವರ್ಷದ ಮೇಲಾಯಿತು. ಇನ್ನೂ ಅದರ ನರ್ತನ ನಿಂತಿಲ್ಲ. ಎರಡು ಅಲೆಗಳು ಮುಗಿದಿವೆ. ಮೂರನೇ ಅಲೆ ಬಂದೇ ಬರುತ್ತದೆ ಎಂಬ ಸುದ್ಧಿಯು ಸಹ ವರದಿಯಾಗುತ್ತಿದೆ. ಒಂದಲ್ಲಾ ಒಂದು ರೀತಿಯಲ್ಲಿ ಮಾನವ ಕುಲವನ್ನು ಅಲುಗಾಡಿಸುತ್ತಲೇ ಇದೆ. ಇಡೀ ಪ್ರಪಂಚದಾದ್ಯಂತ ನಾಗರಿಕರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ.

    ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ, ಪತಿ, ಪತ್ನಿ ಹೀಗೆ ಕುಟುಂಬದ ಸದಸ್ಯರನ್ನು ಮತ್ತು ಸ್ನೇಹಿತರನ್ನು ಕಳೆದುಕೊಂಡವರು ಎಷ್ಟೋ ಮಂದಿ. ಇದುವರೆವಿಗೂ ನಮ್ಮ ದೇಶದಲ್ಲಿ ಮೂರುವರೆ ಲಕ್ಷಕ್ಕೂ ಹೆಚ್ಚು ಜನರು ಹಾಗೂ ವಿಶ್ವದಲ್ಲಿ ಮೂವತ್ತೈದು ಲಕ್ಷಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಾನಸಿಕವಾಗಿ ಜನರು ಕುಂದು ಹೋಗಿದ್ದಾರೆ. ಜೊತೆಗೆ, ಉದ್ಯೋಗ, ಸಾರ್ವಜನಿಕ ಆರೋಗ್ಯ, ಕೈಗಾರಿಕೆ, ಪರಿಸರ, ಆಹಾರ ಪದ್ಧತಿ, ಆರ್ಥಿಕ ವ್ಯವಸ್ಥೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ವಿನಾಶಕಾರಿ ಪರಿಣಾಮವನ್ನು ಬೀರಿದೆ.

    ಉದಾಹರಣೆಗೆ, ನಮ್ಮ ದೇಶದಲ್ಲಿ, 2020ರಲ್ಲಿ ಕೋವಿಡ್‌ ಪರಿಣಾಮವಾಗಿ 12.2ಕೋಟಿ ಜನ ಉದ್ಯೋಗ ಕಳೆದುಕೊಂಡರು, ಎರಡನೇ ಅಲೆಯ ಪರಿಣಾಮವಾಗಿ 2021ರ ಫೆಬ್ರವರಿ ತಿಂಗಳಿನಿಂದ ಮೇ ತಿಂಗಳವರೆವಿಗೆ, ಎಪ್ಪತ್ತೈದು ಲಕ್ಷ ಜನ ಕೆಲಸ ಕಳೆದುಕೊಂಡಿದ್ದಾರೆ. ಅದಕ್ಕೆ ಕೋವಿಡ್‌ – 19 ಪಿಡುಗನ್ನು “ಅಪೋಕ್ಯಾಲಿಪ್ಸ್”‌ ಎಂದು ಕರೆಯಬಹುದಾಗಿದೆ.

    ಫೆಬ್ರವರಿ 2020ರ ಮುಂಚಿನ ದಿನಗಳಲ್ಲಿ ಕ್ವಾರಂಟೈನ್‌, ಮಾಸ್ಕ್, ಲಾಕ್ ಡೌನ್‌, ಸಾಮಾಜಿಕ ಅಂತರ, ಈ ಶಬ್ಧಗಳು ಹಲವಾರು ಜನರಿಗೆ ಗೊತ್ತೇ ಇರಲಿಲ್ಲ. ಆದರೆ, ಈಗ ದಿನನಿತ್ಯ, ಸಾಮಾನ್ಯ ಪ್ರಜೆಯು ಬಳಸುವ ಪದಗಳಾಗಿವೆ. ಇದುವರೆವಿಗೂ, ನಮ್ಮ ದೇಶದಲ್ಲಿ ಸುಮಾರು ಮೂರು ಕೋಟಿ ಜನರಿಗೆ ಸೋಂಕು ತಗುಲಿದ್ದು, ಎರಡು ಕೋಟಿ ಎಂಬತ್ತೆಂಟು (2.88 ಕೋಟಿ) ಜನರು ಗುಣಮುಖರಾಗಿದ್ದಾರೆ. ಅದೃಷ್ಟವಶಾತ್‌, ಬಹಳಷ್ಟು ಜನರಲ್ಲಿ ಕಾಯಿಲೆಯ ತೀವ್ರತೆ ಕಂಡುಬಂದಿರುವುದಿಲ್ಲ. ತೀವ್ರತೆಯಿಲ್ಲದಿರುವ ಜನರಿಗೆ ಮನೆಯಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿ ಬೇರೆಯವರ ಸಂಪರ್ಕವಿಲ್ಲದೇ ಐಸೋಲೇಷನ್‌ ನಲ್ಲಿದ್ದು, ಚಿಕಿತ್ಸೆಯನ್ನು ತೆಗೆದುಕೊಂಡು ಗುಣಮುಖರಾಗಬಹುದು.

    ಆತ್ಮ ಸ್ಥೈರ್ಯ ಮತ್ತು ಸ್ವಾವಲಂಬನೆ ಮುಖ್ಯ

    ಈ ಸಂದರ್ಭದಲ್ಲಿ ಬಹಳ ಮುಖ್ಯವಾಗಿ ಸೋಂಕಿತರಿಗೆ ಇರಬೇಕಾಗಿದ್ದು, ಆತ್ಮ ಸ್ಥೈರ್ಯ ಮತ್ತು ಸ್ವಾವಲಂಬನೆ (self reliance). ಮಾನಸಿಕ ಆರೋಗ್ಯವನ್ನು ಕೆಡಿಸಿಕೊಳ್ಳದೆ, ಧೈರ್ಯವಾಗಿ ಪರಿಸ್ಥಿತಿಯನ್ನು ಹೆದರಿಸುವ ಮನಸ್ಥಿತಿ ಮತ್ತು ಧೃಡತೆ ಬಹಳ ಮುಖ್ಯ. ಈ ರೋಗವು, ಒಬ್ಬರಿಂದ ಒಬ್ಬರಿಗೆ ಬಹಳ ಬೇಗ ಹರಡುವುದರ ಕಾರಣ, ಯಾರೂ ಸಹ ಸೋಂಕಿತನ ನೇರ ಸಂಪರ್ಕಕ್ಕೆ ಬರುವುದಿಲ್ಲ. ಇಂತಹ ಸಮಯದಲ್ಲಿ ಸ್ವಾವಲಂಬನಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸ್ವಾವಲಂಬನೆ ಅಂದರೆ, ಅನ್ಯರ ಸಹಾಯಕ್ಕೆ ಅವಲಂಬಿಸಿದೆ, ಸ್ವಂತ ಶಕ್ತಿ, ಸಾಮರ್ಥ್ಯ ಹಾಗೂ ಸಂಪನ್ಮೂಲಗಳನ್ನು ಅವಲಂಬಿಸುವುದು. ಮಾನಸಿಕವಾಗಿ ನೊಂದುಕೊಳ್ಳದೆ, ಸ್ವಾವಲಂಬಿಯಾಗುವುದು ಬಹಳ ಮುಖ್ಯ.

    ಸ್ವಾವಲಂಬನೆಯಿಂದ ಹಲವಾರು ಅನುಕೂಲಗಳನ್ನು ಸಹ ನಾವು ಕಾಣಬಹುದು. ನಮ್ಮ ಸಾಮರ್ಥ್ಯವೇನು ಎಂದು ತಿಳಿದುಕೊಳ್ಳಲು ಅವಕಾಶ, ನಮ್ಮ ಚೈತನ್ಯವನ್ನು ವೃದ್ಧಿಸಿಕೊಳ್ಳಲು ಅವಕಾಶ, ಮನಸ್ಸು ದೃಢಗೊಳ್ಳುವಿಕೆ, ಜವಾಬ್ದಾರಿಯುತ ನಡತೆ, ಹೀಗೆ ಹಲವಾರು ಸಕರಾತ್ಮಕ ಪರಿಣಾಮಗಳು, ನಮಗೆ ತಿಳಿಯದೇ ನಮ್ಮ ವ್ಯಕ್ತಿತ್ವದಲ್ಲುಂಟಾಗುತ್ತವೆ.

    ಅಭಿವೃದ್ಧಿಯ ದೃಷ್ಟಿಯಿಂದ ದೇಶಕ್ಕೂ ಸಹ ಸ್ವಾವಲಂಬನೆ ಬಹಳ ಮುಖ್ಯ. 2020ರ ಮೇ ತಿಂಗಳಿನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು “ಸ್ವಾವಲಂಬನೆ ಕೇಂದ್ರದ ನೀತಿಯ ಮೂಲ ಉದ್ದೇಶ ಹಾಗೂ ದೇಶದ ನೂತನ ಪದ್ಧತಿ” ಎಂದು ನುಡಿದರು. “ಆತ್ಮ ನಿರ್‌ ಭರ್‌ ಭಾರತ್”‌ ಕಾರ್ಯಕ್ರಮವನ್ನು ಘೋಷಿಸಿದರು.

    ಉದಾಹರಣೆಗೆ ಕೋವಿಡ್‌ ವಿರುದ್ಧ ನಡೆಯುತ್ತಿರುವ ಸಂಗ್ರಾಮದಲ್ಲಿ ಬಹಳ ಮುಖ್ಯವಾದ ಲಸಿಕೆ ಕಾರ್ಯಕ್ರಮವನ್ನು ತೆಗೆದುಕೊಳ್ಳೋಣ. ಚಾರಿತ್ರಿಕವಾಗಿ, ನಮ್ಮ ದೇಶದಲ್ಲಿ ಸಿಡುಬು ಕಾಯಿಲೆ ವಿರುದ್ಧದ ಲಸಿಕೆಯನ್ನು ಮೊಟ್ಟ ಮೊದಲಿಗೆ 1802ರಲ್ಲಿ ಇಂಗ್ಲೆಂಡಿನಿಂದ ತರಿಸಿಕೊಳ್ಳಲಾಯಿತು. 1802ರ ಜೂನ್‌ 14ರಂದು, ಮುಂಬೈ ನಗರದ ಮಗುವಿಗೆ ಮೊದಲ ಲಸಿಕೆಯನ್ನು ನೀಡಲಾಯಿತು. ನಂತರ, 1897ರಲ್ಲಿ ಪ್ಲೇಗ್‌ ವಿರುದ್ಧದ ಲಸಿಕೆಯನ್ನು ಮೊಟ್ಟ ಮೊದಲಿಗೆ ನಮ್ಮ ದೇಶದಲ್ಲಿ ತಯಾರು ಮಾಡಲಾಯಿತು. ಕಳೆದ ನೂರ ಇಪ್ಪತ್ತು ವರ್ಷಗಳಲ್ಲಿ ಲಸಿಕೆ ತಯಾರು ಮಾಡುವ ಕ್ಷೇತ್ರದಲ್ಲಿ ಅಪಾರವಾದ ಅಭಿವೃದ್ಧಿಯನ್ನು ಸಾಧಿಸಲಾಗಿದೆ. ನಮ್ಮ ದೇಶದ ಜನಸಂಖ್ಯೆಯ ನಿಬಂಧನೆಗೊಳಪಟ್ಟು, ಸ್ವಾವಲಂಬಿಗಳಾಗಿದ್ದೇವೆ ಎಂದು ಹೇಳಬಹುದು.

    ಕೋವಿಡ್‌ ಲಸಿಕೆಯ ಅವಶ್ಯಕತೆಯ ಬಗ್ಗೆ ಅವಲೋಕಿಸೋಣ. ನಮ್ಮ ದೇಶದ ಜನಸಂಖ್ಯೆ ನೂರ ಮೂವತ್ತು ಕೋಟಿ. ಇಷ್ಟು ಜನಸಂಖ್ಯೆಗೆ, ಎರಡು ಡೋಸ್‌ ಗಳ ಲೆಕ್ಕದಲ್ಲಿ ಎಷ್ಟು ಲಸಿಕೆಗಳು ಅವಶ್ಯಕತೆಯಿದೆ ಎಂದು ನೀವೆ ಊಹಿಸಿಕೊಳ್ಳಿ. ಅಧಿಕ ಸಂಖ್ಯೆಯಲ್ಲಿ ಲಸಿಕೆಯನ್ನು ತಯಾರು ಮಾಡುವ ಸಾಮರ್ಥ್ಯವಿಲ್ಲದಿದ್ದ ಪಕ್ಷದಲ್ಲಿ, ಬೇರೆ ದೇಶಗಳಿಂದ ಆಮದು ಮಾಡಿಕೊಂಡು, ಲಸಿಕೆಯನ್ನು ಕೊಡಲು ಸಾಧ್ಯವಾಗುತ್ತಿರಲಿಲ್ಲ. ಮೊದಲ ಹಂತದಲ್ಲಿ ನಮ್ಮ ದೇಶದ ನಾಗರಿಕರು, ಲಸಿಕೆಯನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದ ಸಮಯದಲ್ಲಿ, ಲಸಿಕೆಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಿ, ಪ್ರಶಂಸೆಗೆ ಪಾತ್ರವಾದೆವು. ಈ ಉದಾಹರಣೆ ಒಂದೇ ಸಾಕು, ಸ್ವಾವಲಂಬನೆಯ ಮಹತ್ವವನ್ನು ದೃಢಪಡಿಸಲು.

    ಅಮೇರಿಕಾ ದೇಶದ ಪ್ರಬಂಧಕಾರ ಹಾಗೂ ತತ್ವಜ್ಞಾನಿ ‘ರಾಲ್ಫ್‌ ವಾಲ್ಡೊ ಎಮರ್‌ ಸನ್‌’ ಹೇಳಿರುವಂತೆ, “Self Reliance gives a person in Society the freedom they need to discover one’s true self and attain one’s true independence.”
    ಕೋವಿಡ್‌ 19 ಪಿಡುಗನ್ನು ನಿಯಂತ್ರಿಸುವ, ಹರಡುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು, ಲಾಕ್‌ ಡೌನ್‌ ರೂಪದಲ್ಲಿ ನಿರ್ಬಂಧನೆಗಳನ್ನು ಹೇರಿವೆ. ನಮ್ಮ ಆರೋಗ್ಯದ ದೃಷ್ಟಿಯಿಂದ, ಬೇರೆಯವರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹಾಗೂ ಸಾಮಾಜಿಕ ಜವಾಬ್ದಾರಿಯೂ ಆಗಿರುವುದರಿಂದ, ಮನೆಯಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿಯುಂಟಾಗಿದೆ. ಕಳೆದ ಎರಡು ತಿಂಗಳಿನಿಂದ ನಾವೆಲ್ಲರೂ ಮನೆಯಲ್ಲಿಯೇ ಇದ್ದೇವೆ. ಹೊರಗಡೆ ಬರಲು ಭಯಭೀತರಾಗಿದ್ದೇವೆ.

    ಈ ಪರಿಸ್ಥಿತಿ ಮನುಷ್ಯನ ಸ್ವಾಭಾವಿಕ ವರ್ತನೆಗೆ ವಿರುದ್ಧವಾದದ್ದು. ಅದರಲ್ಲೂ ಯುವಕರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ, ಮನೆಯಲ್ಲಿಯೇ ಕುಳಿತಿರುವುದು ಮಾನಸಿಕವಾಗಿ ಹಿತವಲ್ಲದ ಪರಿಸ್ಥಿತಿ. ಮಾನಸಿಕ ಬೇಸರ, ಸಾಮಾಜಿಕ ಸಂಪರ್ಕ ಕಡಿತಗೊಳಿಕೆ, ಆತಂಕ, ಸಿಟ್ಟು, ನಿರುತ್ಸಾಹ, ಆಶಾಭಂಗ ಭವಿಷ್ಯದ ಬಗ್ಗೆ ಭಯ, ನಿದ್ದೆಯ ವೇಳಾಪಟ್ಟಿಯಲ್ಲಿ ಏರುಪೇರು, ಆಹಾರ ಪದ್ಧತಿಯಲ್ಲಿ ಏರುಪೇರು, ದೇಹಕ್ಕೆ ಸರಿಯಾದ ವ್ಯಾಯಾಮವಿಲ್ಲದೇ ಇರುವುದು ಹೀಗೆ ಹತ್ತು ಹಲವಾರು ಸಮಸ್ಯೆಗಳು ಉದ್ಭವಗೊಳ್ಳಬಹುದು. ಇದರಿಂದ ಆರೋಗ್ಯದ ಮೇಲೆ ಅಗಾಧವಾದ ಪರಿಣಾಮ ಬೀರಬಹುದು. ರಕ್ತದ ಒತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಡಯಾಬಿಟೀಸ್‌, ಉಸಿರಾಟದ ತೊಂದರೆ, ಮಾನಸಿಕ ಕಾಯಿಲೆಗಳು ಹೀಗೆ ಹಲವಾರು ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೆಂದು ಅಧ್ಯಯನಗಳಿಂದ ತಿಳಿದುಬಂದಿದೆ.

    ಇಂತಹ ಪರಿಸ್ಥಿತಿಯಿಂದ ಹೊರಗೆ ಬರಲು, ಆತ್ಮಸ್ಥೈರ್ಯ ಬಹಳ ಮುಖ್ಯ. ಧೈರ್ಯವಾಗಿ ಹೆದರಿಸುವ ಮಾನಸಿಕ ಶಕ್ತಿಯ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಪದ್ಧತಿಗಳನ್ನು ಅನುಸರಿಸಬೇಕಾಗಿದೆ. ಕೆಲವೊಂದು ಕ್ರಮಗಳನ್ನು ಪಟ್ಟಿ ಮಾಡಲಾಗಿದೆ. ಇದನ್ನು Life style Management ಎಂದು ಕರೆಯುತ್ತಾರೆ. ಆರೋಗ್ಯಕರ, ಸಮತೋಲನ ಆಹಾರವನ್ನು ಸೇವಿಸುವುದು. ಒಂದೇ ಬಾರಿ ಹೆಚ್ಚು ಆಹಾರವನ್ನು ತೆಗೆದುಕೊಳ್ಳುವ ಬದಲು, ಸ್ವಲ್ಪ ಸ್ವಲ್ಪವೇ ಹಲವು ಬಾರಿ ಸೇವಿಸುವುದು ಉತ್ತಮ. ಹಣ್ಣು ತರಕಾರಿಗಳನ್ನು ಹೆಚ್ಚು ಸೇವಿಸುವುದು.
    ಹೆಚ್ಚು ಕೊಬ್ಬು, ಸಕ್ಕರೆ ಮತ್ತು ಉಪ್ಪು ಇರುವ ಪದಾರ್ಥಗಳನ್ನು ಕಡಿಮೆ ಸೇವಿಸುವುದು. ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಸೇವಿಸುವುದು. ವ್ಯಾಯಾಮವಿಲ್ಲದೆ ಜಡ ಜೀವನ ಶೈಲಿಯಿಂದ ದೂರವಿರುವುದು. ವ್ಯವಸ್ಥಿತವಾಗಿ ವ್ಯಾಯಾಮ, ಯೋಗ ಮಾಡುವುದು.
    ಹೆಚ್ಚು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು.
    ಚೆನ್ನಾಗಿ ನಿದ್ದೆ ಮಾಡುವುದು, ಕಡಿಮೆ ನಿದ್ದೆಯಿಂದ, ಇಮ್ಯೂನಿಟಿ ಮಟ್ಟ ಕಡಿಮೆಯಾಗುತ್ತದೆ ಎಂಬ ವಿಷಯ ಅಧ್ಯಯನಗಳಿಂದ ತಿಳಿದುಬಂದಿದೆ.
    ಟಿ.ವಿ, ಕಂಪ್ಯೂಟರ್‌ ನೋಡುವ ಮತ್ತು ಕುಳಿತು ಕೆಲಸ ಮಾಡುವುದನ್ನು ಕಡಿಮೆ ಮಾಡುವುದು.

    ನಿಮಗೆ ಇಷ್ಟವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಉದಾಹರಣೆ:- ಓದುವುದು, ಸಂಗೀತ ಕೇಳುವುದು ಇತ್ಯಾದಿ.ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಜೊತೆ ಸಂಪರ್ಕದಲ್ಲಿರುವುದು. ಋಣಾತ್ಮಕ ಸುದ್ಧಿಗಳಿಂದ ದೂರವಿರುವುದು. ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು. ಆಗ, ಋಣಾತ್ಮಕ ವಿಷಯಗಳು, ನಮ್ಮ ಮನಸ್ಸಿಗೆ ಬರದಂತೆ ತಡೆಗಟ್ಟಬಹುದು (Idle brain is a devil’s workshop).
    ಸಕಾರಾತ್ಮಕ ದೃಷ್ಟಿಯನ್ನು ಬೆಳೆಸಿಕೊಳ್ಳುವುದು.

    ಮಕ್ಕಳ ಮೇಲಿನ ಪರಿಣಾಮಗಳು

    ಕೊರೋನಾದಿಂದ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಹೆಚ್ಚು ಪರಿಣಾಮಗಳನ್ನು ನಾವು ಕಾಣಬಹುದು. ಕಳೆದ ಒಂದೂವರೆ ವರ್ಷದಿಂದ ಶಾಲೆಗಳು ಮುಚ್ಚಲ್ಪಟ್ಟಿವೆ. ಪೋಷಕರು, ಮಕ್ಕಳನ್ನು ಹೊರಗಡೆ ಕಳುಹಿಸಲು ಭಯ ಪಡುತ್ತಿದ್ದಾರೆ. ಮನೆಯಲ್ಲಿಯೇ ಮಕ್ಕಳನ್ನು ಕೂಡಿಹಾಕಿದಂತಾಗಿದೆ. ಇದರಿಂದ ಮಕ್ಕಳಿಗೆ ಆಟ, ಶಾಲೆಯ ಪಾಠ, ಸಹಪಾಠಿಗಳ ಜೊತೆ ಕಾಲ ಕಳೆಯುವ, ಆಟವಾಡುವ ಅವಕಾಶಗಳಿಂದ ವಂಚಿತರಾಗಿದ್ದಾರೆ. ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಮಕ್ಕಳಿಗೆ ಬೇಸರ, ಸಿಟ್ಟು, ಆತಂಕ, ಭಯ ಮುಂತಾದ ಋಣಾತ್ಮಕವಾದಂತ ಗುಣಗಳು ಹೆಚ್ಚಾಗಿವೆ. ಭಾವನಾತ್ಮಕವಾಗಿ ಕುಂದಿದ್ದಾರೆ. ಇಂತಹ ಸಮಯದಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾದದ್ದು. ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.

    ಬಹಳ ಮುಖ್ಯವಾಗಿ, ಮೊದಲನೆಯದಾಗಿ ಪೋಷಕರು, ಮಕ್ಕಳ ಜೊತೆ, ಕೋವಿಡ್‌ ಬಗ್ಗೆ ಮಾತನಾಡುವಾಗ, ಆತಂಕಗೊಳ್ಳದೆ, ಪ್ರಶಾಂತಭಾವದಿಂದ ನಕಾರಾತ್ಮಕ ಪದಗಳನ್ನು ಬಳಸದೆ, ಸಂಭಾಷಣೆಯಲ್ಲಿ ತೊಡಗಬೇಕು.ಮಕ್ಕಳು ದೈನಂದಿನ ಕ್ರಮವನ್ನು ಪಾಲಿಸುವಂತೆ ನೋಡಿಕೊಳ್ಳುವುದು. ಸೃಜನಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವಂತೆ ಉತ್ತೇಜಿಸುವುದು.
    ವಿನೋದದಿಂದ ಕೂಡಿದ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಸಹಾಯ ಮಾಡುವುದು. ಪೋಷಕರು, ಮಕ್ಕಳು ಜೊತೆ ಗೂಡಿ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಉತ್ತಮ. ಮಕ್ಕಳ ಅಭಿರುಚಿ, ಆಸಕ್ತಿಗಳಿಗೆ ಅನುಗುಣವಾಗಿ ಉತ್ತೇಜನ ನೀಡುವುದು. ಶೈಕ್ಷಣಿಕವಾಗಿ ಉತ್ತಮವಾಗಿರುವ ವೀಡಿಯೋಗಳನ್ನು, ಬೇರೆ ಡಿಜಿಟಲ್‌ ಮಾಧ್ಯಮಗಳ ಮೂಲಕ ವೀಕ್ಷಿಸಲು ಅನುವು ಮಾಡಿಕೊಡುವುದು. ಉತ್ತಮ ಪುಸ್ತಕಗಳನ್ನು ಓದುವಂತೆ ಉತ್ತೇಜಿಸುವುದು. ಮಕ್ಕಳ ಜೊತೆ, ಪೋಷಕರು ಗುಣಮಟ್ಟದ ಸಮಯವನ್ನು ಕಳೆಯುವುದು. ಯಾವುದೇ ಕಾರಣಕ್ಕೂ ಮಕ್ಕಳು ಧೈರ್ಯ ಹೀನರಾಗದಂತೆ ನೋಡಿಕೊಳ್ಳುವುದು.
    ಆರೋಗ್ಯ ಕಾಪಾಡಿಕೊಳ್ಳಲು, ಕೋವಿಡ್‌ ನಿಯಮಗಳನ್ನು ಪಾಲಿಸುವಂತೆ ತಿಳಿಯಪಡಿಸುವುದು.

    ಕೋವಿಡ್‌ ನಮ್ಮನ್ನು ಬಿಟ್ಟು ಹೋಗಿಲ್ಲ. ಬೇಜವಾಬ್ದಾರಿಯಿಂದ ನಡೆದುಕೊಂಡರೆ ಮತ್ತೆ ಮೂರನೇ ಅಲೆ ಬರುವುದು ಖಂಡಿತ. ಆದ್ದರಿಂದ, ನಾವೆಲ್ಲರೂ ಕೋವಿಡ್‌ ನಿಯಮಗಳಾದ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಪದೇ ಪದೇ ಕೈಗಳನ್ನು ಸಾಬೂನಿನಿಂದ ತೊಳೆಯುವುದು ಈ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ, ಲಸಿಕೆಯನ್ನು ಪಡೆಯುವುದು ಬಹಳ ಮುಖ್ಯ. ಲಸಿಕೆಯೊಂದೇ, ಕೋವಿಡ್‌ ಗೆ ರಾಮಬಾಣ ಎಂಬ ವಿಷಯವನ್ನು ಮರೆಯಬಾರದು.
    Stay home, stay safe, profect yourself and your family.

    ಲಸಿಕೆ ಆಂದೋಲನ; ಅಮೆರಿಕವನ್ನು ಹಿಂದಿಕ್ಕಿದ ಭಾರತ

    ದೇಶಾದ್ಯಂತ ಜರುಗುತ್ತಿರುವ ಕೋವಿಡ್-19 ಬೃಹತ್ ಲಸಿಕಾ ಆಂದೋಲನದಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ್ದು, ಲಸಿಕೆ ನೀಡಿಕೆ ಪ್ರಮಾಣದಲ್ಲಿ ಅಮೆರಿಕವನ್ನು ಹಿಂದಿಕ್ಕಿದೆ.ಇದುವರೆಗೆ ದೇಶಾದ್ಯಂತ 32.36 ಕೋಟಿ ಲಸಿಕೆ ಡೋಸ್|ಗಳನ್ನು ನೀಡಲಾಗಿದೆ.

    ಭಾರತದಲ್ಲಿ ನಿನ್ನೆ ಒಂದೇ ದಿನ ಅಂದರೆ ಕಳೆದ 24 ತಾಸುಗಳಲ್ಲಿ 46,148 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

    ಭಾರತದ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 5,72,994ಕ್ಕೆ ಇಳಿಕೆ ಕಂಡಿದ್ದು, 6 ಲಕ್ಷದ ಮಟ್ಟದಿಂದ ಕೆಳಗೆ ಕಾಯ್ದುಕೊಂಡಿದೆ.

    ಸಕ್ರಿಯ ಪ್ರಕರಣಗಳ ಪ್ರಮಾಣವು ಒಟ್ಟು ಪ್ರಕರಣಗಳ 1.89% ಇದೆ.

    ದೇಶಾದ್ಯಂತ ಇಲ್ಲಿಯ ತನಕ 2,93,09,607 ಸೋಂಕಿತರು ಗುಣಮುಖರಾಗಿದ್ದಾರೆ.

    58,578 ರೋಗಿಗಳು ಕಳೆದ 24 ತಾಸುಗಳಲ್ಲಿ ಚೇತರಿಸಿಕೊಂಡಿದ್ದಾರೆ.

    ದೈನಂದಿನ ಚೇತರಿಕೆ ಪ್ರಮಾಣ ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಪ್ರಕರಣಗಳನ್ನು ಹಿಂದಿಕ್ಕುತ್ತಿದ್ದು, 46ನೇ ದಿನದಲ್ಲಿ ಈ ಪ್ರವೃತ್ತಿ ಮುಂದುವರಿದಿದೆ.

    ಚೇತರಿಕೆ ದರ 96.80%ಗೆ ಸುಧಾರಣೆ ಕಂಡಿದೆ.

    ವಾರದ ಪಾಸಿಟಿವಿಟಿ ದರ 5% ಮಟ್ಟದ ಕೆಳಗೆ ಮುಂದುವರಿದಿದ್ದು, ಅದೀಗ 2.81%ಗೆ ಇಳಿಕೆ ಕಂಡಿದೆ.

    ಸತತ 21ನೇ ದಿನದಲ್ಲಿ ದೈನಂದಿನ ಪಾಸಿಟಿವಿಟಿ ದರವೂ 5% ಮಟ್ಟದಿಂದ ಕೆಳಗಿದ್ದು, ಅದೀಗ 2.94%ಗೆ ತಗ್ಗಿದೆ.

    ದೇಶಾದ್ಯಂತ ಗಂಟಲು ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ಇದುವರೆಗೆ ದೇಶದಲ್ಲಿ 40.63 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

    ಒಂದು ವಚನ ಎರಡು ದೃಷ್ಠಿ

    ಸುಮಾ ವೀಣಾ

    ಮನ ಮನ ಬೆರೆಸಿದಲ್ಲಿ ತನು ಕರಗದಿದ್ದಡೆ | ಸೋಂಕಿನಲ್ಲಿ ಪುಳಂಕಗಳು ಹೊರಹೊಮ್ಮದಿದ್ದಡೆ | ಕಂಡಾಗಳಶ್ರುಜಲಗಳು ಸುರಿಯದಿದ್ದಡೆ | ನುಡಿವಲ್ಲಿ ಗದ್ಗದಂಗಳು ಪೊಣ್ಮದಿದ್ದಡೆ|  ಕೂಡಲಸಂಗಮದೇವರ ಭಕ್ತಿಗಿದು ಚಿಹ್ನ?|ಎನ್ನಲ್ಲಿ ಇವಿಲ್ಲವಾಗಿ, ಆನು ಡಂಬಕ ಕಾಣಿರೇ!

    ಮಹಾನ್ ಮಾನವತಾವಾದಿ ಬಸವಣ್ಣನವರ ವಚನಗಳು ಮನುಷ್ಯನ ವ್ಯಕ್ತಿತ್ವ ವಿಕಸನದ ಸದಾಶಯವನ್ನು ಹೊಂದಿವೆ. ಪ್ರಸ್ತುತ  ಒಂದೇ ವಚನದ ಮೂಲಕ ದೈವ ಹಾಗು ಮಾನವನ ಜೊತೆಗೆ ಸಾಮಾಜಿಕರಿಗೆ ಇರಬೇಕಾದ ಅವಿನಾಭಾವ ಸಂಬಂಧದ ಕುರಿತು ಅನನ್ಯವಾಗಿ ಮಾತಾನಾಡಿದ್ದಾರೆ. ನಾಣ್ಯಕ್ಕೆ ಎರಡು ಮುಖಗಳಿದ್ದಂತೆ ಪ್ರಸ್ತುತ ವಚನದಲ್ಲಿ ಒಂದೆಡೆ ದೈವೀ ಸಂಬಂಧ ಇನ್ನೊಂದು ಮಾನವ ಸಂಬಂಧ  ಎಂಬ ಎರಡೂ ಆಯಾಮಗಳಲ್ಲೂ ಪರಿಶುದ್ಧತೆ ಹಾಗು ಆರೋಗ್ಯ ಬದುಕನ್ನು  ಓದುಗರು ಅಧ್ಯಾಹಾರ ಮಾಡಿಕೊಳ್ಳಬಹುದಾಗಿದೆ.

    ದೇವಾಲಯವನ್ನು ಪ್ರವೇಶಿಸಿದಾಗ ಚಿತ್ತಶುದ್ಧಿ ಅಹಂಕಾರ ಇರಬಾರದು. ಆತನನ್ನು ನೋಡಿದಾಗ ತನಗರಿವಿಲ್ಲದಂತೆ ತನು ಬಾಗಬೇಕು.  ಭಗವಂತನನ್ನು ಸ್ಪರ್ಶಿಸಿದ ಕೂಡಲೆ ವರ್ಣನಾತೀತವಾದ ರೋಮಾಂಚನಾ  ಭಾವ ಸ್ಫುರಿಸಬೇಕು. ಲಿಂಗರೂಪಿ ರೂಪಿ ಭಗವಂತನನ್ನು ನೋಡಿದ ಕೂಡಲೆ ದೇಹ ಬಗ್ಗಿಸಿ ಮನ ತಗ್ಗಿಸಿ ತನಗರಿವಿಲ್ಲದಂತೆ ಆನಂದ ಭಾಷ್ಪ ಸುರಿಸಬೇಕು.  ತನಗನ್ನಿಸಿದ    ಭಾವನೆಗಳನ್ನು ಗದ್ಗದಿತ ಮಾತುಗಳಲ್ಲಿ ಹಂಚಿಕೊಳ್ಳಬೇಕು. ಭಗವಂತನ ಆರಾಧನೆಗೆ ಮಂತ್ರಗಳ ಅವಶ್ಯಕತೆಯಿಲ್ಲ ಪ್ರೀತಿ ತುಂಬಿದ  ಮುಗ್ಧ ಮಾತುಗಳ  ಸಿಂಚನವಾದರೆ ಸಾಕು. ಇವೆಲ್ಲವೂ ನಡೆದಾಗಲೇ ಆತನಲ್ಲ್ಲಿರುವುದು ನಿಷ್ಕಲ್ಮಶ ಭಕ್ತಿ ಎಂದು ವೇದ್ಯವಾಗುತ್ತದೆ. ಇಲ್ಲದೆ ಹೋದರೆ ಆತ ಧೃಢ ಭಕ್ತಿ ಇಲ್ಲದ ಬೂಟಾಟಿಕೆಯ ಭಕ್ತಿಯುಳ್ಳವನೆಂದು ಅರಿಯುವುದು ಎಂದಿದ್ದಾರೆ.

    ಎರಡನೆ ಆಯಾಮದಲ್ಲಿ ಮನುಷ್ಯ ಎಂದರೆ ಆತನಲ್ಲಿ ಮಾನವೀಯ ಮೌಲ್ಯಗಳು ಹರಳುಗಟ್ಟಿರಬೇಕು. ತನ್ನ ಸಂಬಂಧಿಯನ್ನೋ, ಸ್ನೇಹಿತನನ್ನೋ ಕಂಡಾಗ ಅವರನ್ನು ನಮಸ್ಕರಿಸಲೋ, ಆಲಿಂಗಿಸಲೋ, ಹಸ್ತಲಾಘವ ಮಾಡಲೋ ಆತನ ಶರೀರ ಮುಂದೆ ಹೋಗಬೇಕು. ಪರಸ್ಪರ ದೇಹಗಳು ಸ್ಪರ್ಶಕ್ಕೊಳಗಾದಾಗ ಆತ್ಮೀಯತೆಯ, ಸ್ವಂತಿಕೆಯ ಭವ ಉಂಟಾಗಬೇಕು. ಅಂತಹ ಆತ್ಮೀಯರನ್ನು ಕಂಡ ಸವಿನೆನಪಿಗೆ ಆನಂದ ಭಾಷ್ಪ ಧಾರಾಕಾರವಾಗಿ ಸುರಿಯಬೇಕು. ಪ್ರೀತಿಯ ಸಲುವಾಗಿ ಆತ್ಮಬಂಧುರತೆ ಹೆಚ್ಚಾಗಿ ನುಡಿವ ಮಾತುಗಳು ಗದ್ಗದಿತವಾಗಬೇಕು. ಇದು ನಿಜವಾದ ಅಂತಃಕರಣವುಳ್ಳ ಮನುಷ್ಯನ ಲಕ್ಷಣವಾಗಿರುತ್ತದೆ.

    ಬಂಧುವನ್ನೋ, ಸ್ನೇಹಿತರನ್ನೋ ಕಂಡಾಗ ಆತ್ಮಬಂಧುವನ್ನೇ ಕಂಡ ಭಾವನಾ ತೀವ್ರತೆಗೆ ಒಳಗಾಗಬೇಕು ಇಲ್ಲವಾದರೆ ಒಳ್ಳೆಯ ಬಂಧು,ಸ್ನೇಹಿತ, ವ್ಯಕ್ತಿ ಎಂದು ಕರೆಸಿಕೊಳ್ಳದೆ ವಂಚಕನೆಂದು ತನ್ನ ಬಣ್ಣವನ್ನು ತಾನೇ ಬಯಲು ಮಾಡಿಕೊಳ್ಳುತ್ತಾನೆ ಎಂದು ಬಸವಣ್ಣ ಹೇಳಿದ್ದಾರೆ. ಮನಸ್ಸು ಹೂವಿನ ಮಕರಂದದಂತೆ ಮಧುರವಾಗಿರಬೇಕು.ಅದು ಬಿಟ್ಟು ಮನಸ್ಸು ಮೆಣಸಿನ ಹಾಗೆ ಖಾರವಾಗಿ,ಸಿಡುಕು,ದುಡುಕುಗಳಿಂದ ಆವಕವಾಗದ್ದರೆ   ಆ ವ್ಯಕ್ತಿ ಆತ್ಮಬಂಧುರತೆಯ ಅನುಭೂತಿಯನ್ನು ಪಡೆಯಲಾರ ಎಂದು ಭಕ್ತಿ ಭಂಡಾರಿ ಬಸವಣ್ಣನವರು ಪ್ರಸ್ತುತ ವಚನದಲ್ಲಿ ಓದುಗರಿಗೆ ಬಹಳ ಮಾರ್ಮಿಕವಾಗಿ ಹೇಳಿದ್ದಾರೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಇದನ್ನು ಬಿಟ್ಟರೆ ನನಗೆ ಬೇರೆ ಬದುಕಿಲ್ಲ… ಬದುಕಿನಲ್ಲಿ ಬೇರೆ ಬಣ್ಣಗಳಿಲ್ಲ..


    ಕುಂದಾಪುರ ಮೂಲದ ರಂಜಿತ್ ರಾವ್ ನಿರ್ದೇಶಿಸಿದ ರಾಹುಲ್, ಕೃಷ್ಣಾ ಭಟ್, ಬಿಗ್ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಮುಂತಾದವರು ನಟಿಸಿರುವ ಮೊದಲ ಚಿತ್ರ ಪ್ರಾಯಶಃ ಚಿತ್ರೀಕರಣ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಯುವ ನಿರ್ದೇಶಕ ರಂಜಿತ್ ರಾವ್ ಅವರನ್ನು ಕವಯತ್ರಿ ಮಾಲಿನಿ ಗುರುಪ್ರಸನ್ನ ಮಾತನಾಡಿಸಿದ್ದಾರೆ.


    Ranjith Rao

    ಪ್ರಾಯಶಃ ಏನು?

    ನೀವು ನೋಡುವ ದೃಷ್ಟಿಕೋನವೇ ಬೇರೆ, ಸತ್ಯವೇ ಬೇರೆ ಆಗಿರಬಹುದು .. ಯಾವುದು ಸತ್ಯ ಯಾವುದು ಸುಳ್ಳು . ಒಂದು ಘಟನೆಯ ಹಿಂದೆ ಅದೆಷ್ಟು ತಯಾರಿ ಇರುತ್ತದೆ ಅದೆಷ್ಟು ಸತ್ಯಗಳು ಅಡಗಿರುತ್ತವೆ, ಅದೆಷ್ಟು ಸುಳ್ಳುಗಳು ಎದುರಾಗುತ್ತವೆ .. ಇದರ ಒಟ್ಟು ಚಿತ್ರಣವೇ ಪ್ರಾಯಶಃ ..

    ಇದರ ಪಯಣದ ಕುರಿತು ಹೇಳುವ ಮುನ್ನ ಈ ಹೊಸ ನಿರ್ದೇಶಕನ ಪಯಣದ ಕುರಿತು ಹೇಳಬಹುದೇ

    ನನ್ನ ಬಾಲ್ಯದಲ್ಲಿಯೇ ನಿರ್ದೇಶನದ ಕುರಿತು ನೂರು ಕನಸು ಕಟ್ಟಿಕೊಂಡವನು ನಾನು .. ನಿಮಗೆ ಅಚ್ಚರಿಯಾಗಬಹುದು ಇದನ್ನು ಮೊದಲು ಗುರುತಿಸಿದ್ದು ಮತ್ತು “ಇವ ಚಿತ್ರರಂಗಕ್ಕೆ ಹೋಗಬಹುದು ” ಎಂದು ಹೇಳಿದ್ದು ನನ್ನ ತಂದೆ . ಶಾಲಾ ಕಾಲೇಜಿನಲ್ಲಿ ನಾನು ನಾಟಕಗಳಲ್ಲಿ ನಟಿಸುತ್ತಿದ್ದರೂ ನಾನು ನಟನಾಗಲು ಬಂದವನಲ್ಲ ಎಂಬ ಸ್ಪಷ್ಟ ಅರಿವು ನನ್ನಲ್ಲಿತ್ತು. ಇದು ಮತ್ತೂ ಸ್ಪಷ್ಟವಾಗಿದ್ದು ನಾನು ಎಂಜಿನಿಯರಿಂಗ್ ಪ್ರವೇಶಿಸಿದ ಮೇಲೆ . ನಾನು ಮೊದಲ ವರ್ಷದಲ್ಲಿದ್ದಾಗಲೇ ಮನೋಹರ್ ವಿ. ಸರ್ ಅವರನ್ನು ಭೇಟಿಯಾಗಿದ್ದೆ . ಮತ್ತೊಂದು ಭೈರವಿ ಯಂತ್ರ ಎಂಬ ಜಾಹೀರಾತು ಚಿತ್ರ ಮಾಡಿದೆ. ಒಂದಿಷ್ಟು ದುಡ್ಡು, ಅನುಭವ ದಕ್ಕಿತು. ನಂತರ ಆ ತುಡಿತಗಳನ್ನು ತಾಳಲಾರದ ಹೊತ್ತಲ್ಲಿ ಕಿರುತೆರೆ ಪ್ರವೇಶ ಮಾಡಿದ್ದು. ನನಗೆ ಬಹಳ ಒಳ್ಳೆಯ ಗುರುಗಳೇ ಸಿಕ್ಕಿದರು. ಎಂ. ಎನ್. ಜಯಂತ್ ಸರ್ ನನಗೆ ಒಂದೇ ವರ್ಷದಲ್ಲಿ ಎಪಿಸೋಡ್ ಡೈರೆಕ್ಟರ್ ಜವಾಬ್ದಾರಿ ವಹಿಸಿದರು.. ಆ ನಂಬಿಕೆ , ಪ್ರೀತಿ ಬಹಳ ದೊಡ್ಡದು.. ಚುಕ್ಕಿ, ಪುನರ್ವಿವಾಹ,ಅಂಬಾರಿ , ಜೊತೆಜೊತೆಯಲಿ ಹೀಗೆ ಹಲವು ಧಾರಾವಾಹಿಗಳಿಗೆ ನಿರ್ದೇಶನ ಮಾಡುತ್ತಿದ್ದಾಗ ಮತ್ತೆ ಮರುಕಳಿಸಿದ್ದು ಈ ಹಿರಿತೆರೆಯ ಹುಚ್ಚು .. ಆ ಸೆಳೆತ ಬಿಡಲಾರದೆ ಕಿರುತೆರೆಯ ನಿರ್ದೇಶನಕ್ಕೆ ವಿದಾಯ ಹೇಳಿದೆ.

    ಕಿರುತೆರೆ ಜೀವನ ಭದ್ರತೆಯನ್ನು ಕೊಟ್ಟಿತ್ತು ಅಲ್ಲವಾ..

    ಖಂಡಿತಾ.. ಆ ಮಟ್ಟಿಗಿನ ಭದ್ರತೆ ಕಿರುತೆರೆ ಕೊಟ್ಟಿತ್ತು .ಹಿರಿತೆರೆ ಒಂದು ರೀತಿಯಲ್ಲಿ ಜೂಜು ಎಂಬುದೂ ಗೊತ್ತಿತ್ತು .. ಕೇವಲ ಭದ್ರತೆಯೇ ಬೇಕೆಂದಿದ್ದರೆ ನಾನು ಎಂಜಿನಿಯರ್ ಆಗಿಯೇ ಬದುಕು ಕಟ್ಟಿಕೊಳ್ಳಬಹುದಿತ್ತು. ಬದುಕು ಇನ್ನೂ ಸುಭದ್ರವಾಗಿರುತ್ತಿತ್ತು . ಅದು ನನ್ನ ದಾರಿ ಅಲ್ಲ ಎಂಬುದನ್ನು ನಾನು ಕಂಡುಕೊಂಡ ಮೇಲೆ ಹಿರಿತೆರೆಯ ಮೇಲೆ ನನ್ನ ಗಮನವನ್ನು ಕೇಂದ್ರೀಕರಿಸಿದೆ..

    ಈಗ ಈ ಚಿತ್ರದ ಪಯಣದ ಬಗ್ಗೆ ಹೇಳಬಹುದೇ?

    Rahul

    ಇದು ಅಪ್ಪಟ ಪ್ಯಾಶನ್ ಚಿತ್ರ. ನಮ್ಮಲ್ಲಿ “ಇಲ್ಲ” ಗಳೇ ಹೆಚ್ಚಿತ್ತು . ಈ ಕಥೆ ಹಲವು ವರ್ಷಗಳಿಂದ ನನ್ನ ತಲೆಯಲ್ಲಿತ್ತು. ಈ ಕಂಟೆಂಟ್ ಮಾಡಿದ್ದೂ ನಾನು ಚಿತ್ರ ಮಾಡಲೆಂದು ಅಲ್ಲ .. ಈ ಕಥೆಯನ್ನು ಯಾರಾದರೂ ನಿರ್ದೇಶಕರಿಗೆ ಹೇಳುವ ಹುಮ್ಮಸ್ಸಿನಲ್ಲಿದ್ದೆ . ಇದನ್ನು ಬೇರೆಯವರೆದುರಿಗೆ ಹೇಳುವಾಗ ನಾನೇ ಇದನ್ನು ಚೆನ್ನಾಗಿ ಹೇಳಬಲ್ಲೆ ಎನ್ನಿಸಲಾರಂಭಿಸಿತು. ಈ ಕಥೆ ನನ್ನಲ್ಲಿ ಹುಟ್ಟಿದ್ದು .. ನಾನಷ್ಟೇ ಇದನ್ನು ಬೇರೆಬೇರೆ ರೀತಿಯಲ್ಲಿ ಹೇಳಬೇಕು ಎನ್ನಿಸಿತು. ಸ್ಕ್ರಿಪ್ಟ್ ಮಾಡಲು ಕೂತೆ. ಮೊದಲ ಸ್ಕ್ರಿಪ್ಟ್ ಮಾಡಿದ್ದು ನಾನೇ. ನಂತರ ಎರಡನೆಯ ಸ್ಕ್ರಿಪ್ಟ್ ಸಮಯದಲ್ಲಿ ರಾಹುಲ್, ಪವನ್ ಮುಂತಾದವರು ಸೇರಿಕೊಂಡು ಇದೇ ಫೈನಲ್ ಡ್ರಾಫ್ಟ್ ಅಂತ ಮಾಡಿ ಜಯಂತ್ ಸರ್ ಕಡೆ ಕಳಿಸಿದ್ವಿ.. ಅವರು ಇದರಲ್ಲಿ ಎಷ್ಟು ತಪ್ಪುಗಳಿವೆ ಅಂತ ಮಾರ್ಕ್ ಮಾಡಿ ಕಳಿಸಿ ನಮ್ಮ ಜೊತೆ ಕೂತು ಪ್ರತಿಯೊಂದು ಕಡೆಯೂ ಫೈನಲ್ ಓಕೆ ಮಾಡಿದ್ದು ಜಯಂತ್ ಸರ್.

    ಯಾವ ಇಲ್ಲ ಗಳು?

    ಅವೇ ಹೆಚ್ಚು. ನಾವು ಪ್ರೊಡಕ್ಷನ್ ಮಾಡುತ್ತೇವೆ.. ಶೂಟಿಂಗ್ , ವಸತಿ, ನಟನೆ ಇದಕ್ಕೆಲ್ಲ ಆಗುವ ವೆಚ್ಚ ಭರಿಸುತ್ತೇವೆ ಎಂಬ ಕಲ್ಪನೆಯೇ ಇರಲಿಲ್ಲ. ನಮ್ಮನ್ನು ನಂಬಿ ಹಣ ಹಾಕುವ ನಿರ್ಮಾಪಕರು ಸಿಕ್ಕರೆ ಚಿತ್ರದ ಅರ್ಧ ಜವಾಬ್ದಾರಿ ಮುಗಿದಂತೆ.. ಅವರು ನಮಗೆ ವ್ಯವಸ್ಥೆ ಮಾಡಿಕೊಟ್ಟರೆ ನಮ್ಮ ಸಂಪೂರ್ಣ ಗಮನವನ್ನು ನಿರ್ದೇಶನದ ಕಡೆ ತೊಡಗಿಸಿಕೊಳ್ಳಬಹುದು. ಆದರೆ ಹಾಗಾಗಲಿಲ್ಲ. ಒಂದು ವೇಳೆ ಅರ್ಧಕ್ಕೆ ಕೈ ಕೊಟ್ಟರೆ ? ಹೀಗಾಗಿ ಹಣ ಹೊಂದಿಸುವ ಜವಾಬ್ದಾರಿ ನಮ್ಮ ಮೇಲೇ ಬಿತ್ತು. ಒಂದಿಷ್ಟು ಹಣ ಕೈಗೆ ಬಂದ ಕೂಡಲೇ ಅದು ಮುಗಿಯುವವರೆಗೆ ಶೂಟಿಂಗ್ ಮಾಡುವುದು , ನಂತರ ಬ್ರೇಕ್ ಮಾಡುವುದು .. ಮತ್ತೆ ದುಡ್ಡು ಹೊಂದಿಸುವುದು .. ಈ ನಿರ್ದೇಶನ , ದುಡ್ಡು ಹೊಂದಿಸುವುದು ಎರಡೂ ಏಕಕಾಲಕ್ಕೆ ನಿರ್ವಹಿಸಬೇಕಿದ್ದು ನನಗೆ ಬಹಳ ಚಾಲೆಂಜಿಂಗ್ ಆಗಿತ್ತು .

    krishna Bhat

    ನಾಯಕಿಯ ಹುಡುಕಾಟವೇ ಒಂದು ಎಪಿಸೋಡ್ .. ಕೃಷ್ಣಾ ಎಲ್ಲ ರೀತಿಯಲ್ಲೂ ಪಾತ್ರಕ್ಕೆ ಹೇಳಿಮಾಡಿಸಿದ ಆಯ್ಕೆ. ಅವರು ನಮಗೆ ಒಂದು ವರ್ಷದ ಹುಡುಕಾಟದ ನಂತರ ಸಿಕ್ಕಿದ್ದು .

    ಚಿತ್ರದ ಮೊದಲ ಹೆಜ್ಜೆ ?

    ಮೊದಲು ಆರಂಭವಾಗಿದ್ದೇ ಹಾಡುಗಳ ಸಂಯೋಜನೆ.. ನಮಗೆ ಯಾವುದೇ ಸಮಯದ ಮಿತಿ ಇಲ್ಲದಿದ್ದರಿಂದ ಸಾಂಗ್ ಕಂಪೋಸಿಶನ್ ಅರಾಮಾಗಿ ಕೂತು ಮಾಡಿದ್ವಿ..ದೊಡ್ಡ ದೊಡ್ಡ ಆರ್ಟಿಸ್ಟ್ಗಳು ಬಂದ್ರು.. ಅದರ ಮಿಕ್ಸಿಂಗ್ ಮಾಸ್ಟರಿಂಗ್ ಲಂಡನ್ನಿನಲ್ಲಿ ಆಗಿದ್ದು.. ಅದನ್ನು ನಾವು ನಿರೀಕ್ಷಿಸಿಯೇ ಇರಲಿಲ್ಲ. ಅದೇನು ಬೇಕು ಆ ಹಾಡುಗಳೇ ಮಾಡಿಸಿಕೊಂಡವು. ನಮ್ಮವರೇ ಆದ ವಿಜಯ ಕೃಷ್ಣ ಬಹಳ ಎಫರ್ಟ್ ಹಾಕಿದ್ರು…

    ಶೂಟಿಂಗ್ ಶುರುವಾದ ನಂತರ ?

    ಶೂಟಿಂಗ್ ಸಮಯದಲ್ಲಿಯೂ ಕೆಲವು ಮರೆಯಲಾಗದ ಘಟನೆಗಳಿವೆ.. ನಮ್ಮ ಚಿತ್ರದ ನಾಯಕ ರಾಹುಲ್, ಶೋಭರಾಜ್, ವಿನೀತ್ ಮತ್ತಿತರ ಅನೇಕ ನಟರು ಮಂಗಳೂರಿನವರೇ ಆಗಿದ್ದರಿಂದ ಆ ಊರಿನಲ್ಲಿ ಶೂಟಿಂಗ್ ನಮಗೆ ಬಹಳ ಸುಲಭವಾಯಿತು. ಅಲ್ಲಿನ ಲೊಕೇಶನ್ಸ್ ನಮ್ಮ ಕತೆಗೆ ಪೂರಕವಾಗಿತ್ತು…

    ಒಮ್ಮೆ ಇಲ್ಲಿ ಬ್ಯಾಂಬೂ ಬಜಾರಿನಲ್ಲಿ ರಾತ್ರಿ ಶೂಟಿಂಗ್ ನಡೆಯಬೇಕಿತ್ತು . ತುಂಬಾ ರಿಯಲಿಸ್ಟಿಕ್ ಆಗಿ ತೋರಿಸಬೇಕಿತ್ತು. ಅಲ್ಲಿದ್ದ ಮುಸ್ಲಿಂ ಬಂಧುಗಳು ಮಧ್ಯರಾತ್ರಿಯವರೆಗೂ ಊಟ ನಿದ್ರೆಯ ಯೋಚನೆ ಬಿಟ್ಟು ನಮ್ಮೊಡನೆ ಸಹಕರಿಸಿದ್ದು, ಅರ್ಧ ರಾತ್ರಿಯ ನಂತರವೇ ಮನೆಗೆ ಹೋಗುತ್ತಿದ್ದುದು ಈಗಲೂ ಆಗಾಗ ನೆನಪಾಗುವ ಮಧುರ ನೆನಪು. ನನಗೂ ಅವ್ರಿಗೂ ಯಾವ ನಂಟು.. ನನ್ನ ಚಿತ್ರದ ಶಾಟ್ಸ್ ಚೆನ್ನಾಗಿ ಬರಲಿ ಎಂದು ಅವರು ಏಕೆ ಅಷ್ಟು ಶ್ರಮ ತೆಗೆದುಕೊಂಡಿದ್ದು ? ಯಾವ ಬಂಧ ಇದು? ಗೊತ್ತಿಲ್ಲ.. ನನ್ನ ಅದೃಷ್ಟ .. ನಾಯಕ , ನಾಯಕಿ ಸೇರಿದಂತೆ ಚಿತ್ರದ ನಟನಟಿಯರೆಲ್ಲರೂ ತಮ್ಮ ಬೆಸ್ಟ್ ತೆಗೆದುಕೊಟ್ಟರು. ಪ್ರತಿಯೊಬ್ಬ ಕಲಾವಿದರೂ ಅತ್ಯುತ್ತಮವಾಗಿ ಅಭಿನಯಿಸಿದರು.

    ಬಿಗ್ಬಾಸ್ ಖ್ಯಾತಿಯ ಶೈನ್ ಶೆಟ್ಟಿಯನ್ನು ಹಾಕಿಕೊಂಡಿದ್ದೀರಿ…?

    shine shetty

    ಶೂಟಿಂಗ್ ಸಂದರ್ಭದಲ್ಲಿ ಅವರಿನ್ನೂ ಬಿಗ್ಬಾಸ್ಗೆ ಹೋಗಿರಲಿಲ್ಲ..ಅದರ ಮೊದಲೇ ನಟನೆಯ ಹಂತ ಮುಗಿದಿತ್ತು. ಬಿಗ್ಬಾಸ್ ನಂತರ ಅವರು ಡಬ್ಬಿಂಗ್ ಮಾಡಿಕೊಟ್ಟರು. ಶೈನ್ ಶೆಟ್ಟಿಯವರದು ಬಹಳ ವಿಶಿಷ್ಠವಾದ ಪಾತ್ರ. ಚಿತ್ರ ನೋಡುವವರಿಗೆ ಅದೊಂದು ವಿಭಿನ್ನ ಅನುಭವ ನೀಡುವುದು ಖಂಡಿತಾ.

    ಕಡಿಮೆ ಸವಾಲು ಅನ್ನಿಸಿದ್ದು ? ಖುಷಿ ಅನ್ನಿಸಿದ್ದು?

    ಸವಾಲುಗಳನ್ನು ಹಗುರಾಗಿಸಿದ್ದು ಈ ಚಿತ್ರದೊಳಗೆ ಯಾವ ಯಾವ ಟೆಕ್ನಿಷಿಯನ್ಸ್ ಒಳಬರುತ್ತಾ ಹೋದರೋ ಅವರೆಲ್ಲ ಚಿತ್ರದ ಭಾಗವೇ ಆಗುತ್ತಾ ಹೋದರು. ಯಾರೂ ಹಣಕ್ಕಾಗಿ ಕೆಲಸ ಮಾಡಲಿಲ್ಲ. ಈ ಚಿತ್ರವನ್ನು ಮಾಡೇ ಮಾಡುತ್ತೇವೆ ಎಂದು ಪಣ ತೊಟ್ಟು ಕುಳಿತರು. ಈ ಚಿತ್ರದೊಟ್ಟಿಗೆ ಎಮೋಷನಲಿ ಕನೆಕ್ಟ್ ಆಗ್ತಾ ಹೋದರು. ನಿಜ ಹೇಳಬೇಕೆಂದರೆ ಅನೇಕ ಟೆಕ್ನಿಷಿಯನ್ಸ್ , ಆರ್ಟಿಸ್ಟ್ಗಳು ಒಂದು ಪೈಸೆಯನ್ನೂ ಮುಟ್ಟಿಲ್ಲ. ಮೂರು ವರ್ಷದಿಂದ ಈ ಕನಸಿನಲ್ಲಿ ನಾವೆಲ್ಲರೂ ಒಟ್ಟಿಗಿದ್ದೇವೆ. ಈಗ ಇದು ರಂಜಿತ್ ಚಿತ್ರವೋ, ರಾಹುಲ್ ಚಿತ್ರವೋ ಆಗಿ ಉಳಿದಿಲ್ಲ … ಎಲ್ಲರ ಚಿತ್ರವಾಗಿಬಿಟ್ಟಿದೆ. ಒಂದು ಕಲರ್ ಗ್ರೇಡಿಂಗ್ ಆಗ್ತಿದೆ ಅಂದ್ರೆ ಆ ಫ್ರೇಮ್ ನೋಡಲು ಇಡೀ ಟೀಮಿನವರು ಓಡೋಡಿ ಬರುತ್ತಾರೆ .. ಅದೇ ಒಂದು ಖುಷಿ.. ಲಾಕ್ಡೌನ್ ನಮಗೆ ಒಂದು ರೀತಿಯಲ್ಲಿ ಅನುಕೂಲವೇ ಆಯಿತು. ಫ್ರೀ ಇದ್ದ ಟೆಕ್ನಿಷಿಯನ್ಸ್ ಕೆಲಸಗಳನ್ನು ಸರಾಗವಾಗಿ ಮಾಡಿಕೊಟ್ಟರು.. ತುಂಬಾ ಸಮಯ ನಾವು ವಿನಿಯೋಗಿಸಲು ಲಾಕ್ಡೌನ್ ಕಾರಣವಾಯಿತು. ಮತ್ತು ಈ ಚಿತ್ರದ ಜರ್ನಿ ಯನ್ನೇ ನಾನು ಎಂಜಾಯ್ ಮಾಡುತ್ತಿದ್ದೇನೆ .. ಇದು ಗೆಲ್ಲುತ್ತದೆಯಾ? ಸೋಲುತ್ತದೆಯಾ? ಹಣ ತಂದುಕೊಡುತ್ತದೆಯಾ ನನಗೆ ಗೊತ್ತಿಲ್ಲ.. ಇನ್ನೊಂದು ಚಿತ್ರದ ಪಯಣವನ್ನು ನಾನು ಇಷ್ಟು ಎಂಜಾಯ್ ಮಾಡ್ತೀನಾ ಇಲ್ಲವಾ ಗೊತ್ತಿಲ್ಲ ..

    ಈಗ ಚಿತ್ರ ಬಿಡುಗಡೆ? ಹೇಗೆ?

    ಓ ಟಿ ಟಿ ಗೆ ಕಳಿಸಿದ್ದೇವೆ ಕ್ವಾಲಿಟಿ ಚೆಕಿಂಗ್ ಗೆ. .. ಥೀಯೇಟರ್ ಕನಸು ಹೋಗಿಲ್ಲ. ಅಷ್ಟರಲ್ಲಿ ಎಲ್ಲ ಕಳೆಯಲಿ ಎಂಬ ಆಸೆ, ಕಳೆದಿರುತ್ತದೆ ಎಂಬ ಕನಸು.. ಎರಡೂ ನಮ್ಮ ಗುರಿ ..

    ಯಾರಿಗಾದರೂ ಧನ್ಯವಾದ ಹೇಳುವುದಿದೆಯಾ?

    ಎಷ್ಟು ಜನಕ್ಕೆ ಹೇಳಲಿ..
    ರಾಹುಲ್, ಶೈನ್ ಶೆಟ್ಟಿ, ಕೃಷ್ಣಾ ಭಟ್, ಶೋಭರಾಜ್ ಪವೂರ್ , ಮಧು ಹೆಗಡೆ, ಸುನೀಲ್ ಸಾಗರ್, ವಿನೀತ್, ಅನನ್ಯ ಶೆಟ್ಟಿ,
    ಪ್ರಶಾಂತ್ ಪಾಟೀಲ್, ಅಶೋಕ್, ವಿಜಯ್ ಕೃಷ್ಣ, ದಯಾ ಎಂ.ಬಿ., ನಿಖಿಲ್, ದೀಪಕ್ ಕೃಷ್ಣ ಹೀಗೇ
    ನನ್ನ ಇಡೀ ಟೀಮ್ ಗೆ ಮತ್ತು ಏನು ಮಾಡಿದರೂ ನನ್ನ ಬೆಂಬಲಿಸುವ ಮನೆ ಮಂದಿಗೆ, ಇವನಿಗೆ ಒಳ್ಳೆಯದಾಗಲಿ ಎಂದು ನನ್ನನ್ನು ನಂಬಿ ಹಣ ಕೊಟ್ಟವರಿಗೆ .. ಎಷ್ಟು ಜನಕ್ಕೆ ಹೇಳಲಿ .. ಎಲ್ಲರಿಗೂ ಧನ್ಯವಾದ , ಕೃತಜ್ಞತೆ..
    ಈ ಚಿತ್ರವನ್ನು ನೋಡಿ , ಈ ಚಿತ್ರದಲ್ಲಿ ಸತ್ವವಿದೆ ಎಂದು ಅನ್ನಿಸಿದರೆ ಗೆಲ್ಲಿಸಿ .. ಮತ್ತೆ ಇಲ್ಲಿಗೇ ಬರುತ್ತೇನೆ.. ಮತ್ತೊಂದು ಚಿತ್ರವನ್ನೇ ಮಾಡಲು.. ಏಕೆಂದರೆ ಇದನ್ನು ಬಿಟ್ಟರೆ ನನಗೆ ಬೇರೆ ಬದುಕಿಲ್ಲ… ಬದುಕಿನಲ್ಲಿ ಬೇರೆ ಬಣ್ಣಗಳಿಲ್ಲ..

    ಕಾರ್ಪೊರೇಟ್ ಫಲಗಳ ಪ್ರಭಾವ, ಷೇರಿನ ದರಗಳಲ್ಲಿ ವಿಪ್ಲವ

    ಎಂಬತ್ತು- ತೊಂಭತ್ತರ ದಶಕಗಳಲ್ಲಿ ಷೇರುಪೇಟೆಯ ಹೂಡಿಕೆ ಎಂದರೆ ಕಂಪನಿಗಳು ಘೋಷಿಸಿ – ವಿತರಿಸುವ ಕಾರ್ಪೊರೇಟ್ ಫಲಗಳಾದ ಡಿವಿಡೆಂಡ್, ಬೋನಸ್ ಷೇರುಗಳೇ ಹೂಡಿಕೆ ನಿರ್ಧಾರದ ಕೇಂದ್ರ ಬಿಂದುಗಳಾಗಿದ್ದವು. ಒಂದು ಕಂಪನಿ ವಿತರಿಸಬಹುದಾದ ಡಿವಿಡೆಂಡ್ ಪ್ರಮಾಣ, ಅದಕ್ಕನುಗುಣವಾಗಿ ಕಂಪನಿಗಳು ಪ್ರದರ್ಶಿಸುವ ಆಂತರಿಕ ಸಾಧನೆಗಳು ಮುಖ್ಯವಾಗಿರುತ್ತಿದ್ದವು.

    ಅಂದಿನ ದಿನಗಳಲ್ಲಿ ಸುದ್ಧಿಸಮಾಚಾರಗಳು ಸುಲಭವಾಗಿ ಲಭ್ಯವಾಗುತ್ತಿರಲಿಲ್ಲ, ಕಾರಣ ತಾಂತ್ರಿಕತೆಯು ಸಂಪೂರ್ಣವಾಗಿ ಅಳವಡಿಕೆಯಾಗಿರಲಿಲ್ಲ, ಅದರ ಬೆಳವಣಿಗೆಯಿನ್ನೂ ಅಂಬೆಗಾಲಿಡುವ ಹಂತದಲ್ಲಿತ್ತು. ಕೇವಲ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ಧಿಯೇ ನಿರ್ಧಾರಗಳಿಗೆ ಮೂಲವಾಗುತ್ತಿತ್ತು. ಅಲ್ಲದೆ ಈಗಿನಂತೆ ಕಂಪನಿಗಳಲ್ಲುಂಟಾಗುವ ಪ್ರತಿಯೊಂದು ಸೂಕ್ಷ್ಮವಾದ ಬದಲಾವಣೆಯನ್ನು ಸ್ಟಾಕ್ ಎಕ್ಸ್ ಚೇಂಜ್ ಗಳಿಗೆ ತಿಳಿಸುವ ಮತ್ತು ಅದನ್ನು ತಕ್ಷಣದಲ್ಲಿಯೇ ಲಭ್ಯವಾಗುವಂತಹ ಅಂತರ್ಜಾಲ ವ್ಯವಸ್ಥೆ ಇರದ ಕಾರಣ ಮಾಹಿತಿಗಳು ಕೇವಲ ಕೆಲವೇ ವಹಿವಾಟುದಾರರಿಗೆ ಲಭ್ಯವಾಗುತ್ತಿದ್ದು, ಅವರು ಅದನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳಲು ಸಾಧ್ಯತೆ ಇತ್ತು. ಆಗಿನ ದಿನಗಳಲ್ಲಿ ಕಂಪನಿಗಳ ಆಂತರಿಕ ಸಾಧನೆಯೇ ಹೂಡಿಕೆಗೆ ಪೂರಕ ಅಂಶವಾಗಿತ್ತು. ಆದರೆ ಬದಲಾದ ವಾತಾವರಣ, ದೃಷ್ಟಿಕೋನ, ವಿದ್ಯಮಾನ, ಚಿಂತನೆಗಳೊಂದಿಗೆ ಬೃಹತ್ ಸಂಖ್ಯಾಗಾತ್ರದ ಹೂಡಿಕೆದಾರರ ಬೆಳವಣಿಗೆ, ವಿದೇಶಿ ವಿತ್ತೀಯ ಸಂಸ್ಥೆಗಳೊಂದಿಗೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು, ಸಾಹುಕಾರಿ ಹೂಡಿಕೆದಾರರ ಆಸಕ್ತಿ ಹೆಚ್ಚಿದ ಕಾರಣ, ಪೇಟೆಯೊಳಗೆ ಹರಿದು ಬರುತ್ತಿರುವ ಹಣದ ಹೊಳೆ ಎಲ್ಲವೂ ಷೇರುಪೇಟೆಯ ಹೂಡಿಕೆಯ ಶೈಲಿಯನ್ನೇ ಬದಲಿಸಿಬಿಟ್ಟಿದೆ.

    ಫಂಡಮೆಂಟಲ್ಸ್ ಮತ್ತು ಟೆಕ್ನಿಕಲ್ಸ್ ಮಿಶ್ರಣ ಅನಿವಾರ್ಯ

    Photo by Gilly on Unsplash

    ಟೆಕ್ನಿಕಲ್ಸ್ ಎಂಬ ಮಾದರಿಯು ಎಷ್ಠು ಅಗಾಧವಾಗಿ ಬೆಳೆದಿದೆ ಎಂದರೆ ಕಂಪನಿಗಳ ಸಾಮರ್ಥ್ಯವನ್ನರಿಯಲು ಕೇಂದ್ರ ಬಿಂದುವಾದ ಆಂತರಿಕ ಸಾಧನೆಗಳನ್ನು ಹೊರತು ಪಡಿಸಿ ಎಲ್ಲಾ ಕೋನಗಳನ್ನೂ ಇದು ಒಳಗೊಂಡಿದೆ. ಈ ದಿಶೆಯಲ್ಲಿ ಒಂದು ಹೂಡಿಕೆ ಯಶಸ್ಸುಕಾಣಬೇಕಾದಲ್ಲಿ ಈ ಎರಡೂ ವಿಧಗಳಾದ ಫಂಡಮೆಂಟಲ್ಸ್ ಮತ್ತು ಟೆಕ್ನಿಕಲ್ಸ್ ವಿಧಗಳ ಮಿಶ್ರಣವನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

    ಈಗಿನ ದಿನಗಳಲ್ಲಿ ನಾವುಗಳು ಮೂಲವಾದ ಅಂಶಗಳನ್ನು ಕಡೆಗಣಿಸಿ, ಹೊರಗಿನದಕ್ಕೆ ಹೆಚ್ಚಿನ ಆದ್ಯತೆ ನೀಡುವ ಕಾರಣ ಗೊಂದಲಕ್ಕೊಳಗಾಗುವ ಸಂದರ್ಭಗಳೇ ಹೆಚ್ಚು. ಅಲಂಕಾರಿಕ ವಿಶ್ಲೇಷಣೆಗಳಿಗೆ ಹೆಚ್ಚು ಹೆಚ್ಚು ವೇಟೇಜ್ ನೀಡುವ ಪ್ರವೃತ್ತಿಯು ಯಶಸ್ಸಿನಿಂದ ವಂಚಿತರನ್ನಾಗಿಸುತ್ತಿದೆ. ನಮ್ಮಲ್ಲಿ ಹೆಚ್ಚುತ್ತಿರುವ ದುರಾಸೆಗಳೇ ಮೂಲ ಕಾರಣವಾಗಿದೆ. ಕೆಲವು ಉದಾಹರಣೆಗಳನ್ನು ಗಮನಿಸೋಣ.ಈ ಆಪ್ ನಲ್ಲಿ ವಿಮೆ ಮಾಡಿದಲ್ಲಿ ನೀವು ಕಮೀಷನ್ ಕೊಡಬೇಕಾಗಿಲ್ಲ ಎಂಬುದನ್ನೇ ಹೈಲೈಟ್ ಮಾಡುವ ಜಾಹಿರಾತಿಗೆ ಹೆಚ್ಚು ಸ್ಪಂದಿಸುವ ನಾವು, ಮೂಲತ: ಅವಶ್ಯವಿರುವ ವಿಮಾ ಯೋಜನೆಗೆ ಹೆಚ್ಚಿನ ಆದ್ಯತೆ ನೀಡದೆ ಕೇವಲ ಹೊರಗಿನ ಕಮಿಷನ್ ಎಂಬ ವೆಚ್ಚದ ಮೇಲೆ ಗಮನಹರಿಸುತ್ತೇವೆ. ವಿಮಾ ಯೋಜನೆಯನ್ನಾಧರಿಸಿ ನಿರ್ಧರಿಸಿದಲ್ಲಿ ಕೊಡಬೇಕಾದ ಕಮಿಷನ್ ಕೊಟ್ಟರೂ ಸಹ ಲಾಭದಾಯಕವಾಗಬಹುದು ಎಂಬ ಅಂಶವನ್ನು ಕಡೆಗಣಿಸುತ್ತೇವೆ. ಇದು ಆರ್ಥಿಕ ಸಾಕ್ಷರತೆಯನ್ನು ಮೂಲೆಗುಂಪಾಗಿಸಿದಂತಾಗಿದೆ.

    ಈಚಿನ ದಿನಗಳಲ್ಲಿ ಬರುತ್ತಿರುವ ಐಪಿಒ ಗಳು ವಿತರಣೆಯ ಬೆಲೆ ಅತಿ ಹೆಚ್ಚಾಗಿದ್ದು, ವಿತರಣೆಯಲ್ಲಿ ಪಡೆದ ರೀಟೇಲ್ ಗ್ರಾಹಕರಲ್ಲಿ ಹೆಚ್ಚಿನವರಲ್ಲಿ ದೀರ್ಘಕಾಲೀನ ಹೂಡಿಕೆ ಎಂಬ ಚಿಂತನೆಯನ್ನು ಹೊಂದಿರುವುದು ಸಹಜವಾಗಿದೆ. ಇನ್ಫೋಸಿಸ್ ನಂತಹ ಕಂಪನಿಗಳು ನೀಡಿರುವ, ಅವು ವೃದ್ಧಿಸಿರುವ ಬಂಡವಾಳದ ಪ್ರಮಾಣವನ್ನಾಧರಿಸಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಈಗ ಹೂಡಿಕೆ ಎಂಬುದು ಒಂದು ವ್ಯವಹಾರಿಕ ಪ್ರಕ್ರಿಯೆ ಎಂಬುದನ್ನು ಮರೆತುಬಿಡುತ್ತಾರೆ.

    ಇನ್ಫೋಸಿಸ್ ಕಂಪನಿಯ ಐಪಿಒ ಬಂದಾಗ ಈಗಿನ ಪ್ರಮಾಣದಲ್ಲಿ ಎಫ್ ಐ ಐ ಗಳು ಭಾಗವಹಿಸುತ್ತಿರಲಿಲ್ಲ. ಆ ಸಂದರ್ಭದಲ್ಲಿ ಷೇರುಗಳು ಭೌತಿಕ ಪತ್ರಗಳಾಗಿದ್ದು, ಡಿಮ್ಯಾಟ್ ನಲ್ಲಿರದ ಕಾರಣ ಚಟುವಟಿಕೆಯು ಒತ್ತಾಯಪೂರ್ವಕವಾಗಿ ದೀರ್ಘಕಾಲೀನ ಹೂಡಿಕೆ ಮಾಡಲೇಬೇಕಿತ್ತು. ಖರೀದಿಸಿದ ಷೇರುಗಳು ವರ್ಗಾವಣೆಗೆ ಕಳುಹಿಸಿದರೆ ಅದು ಹಿಂದಿರುಗಿ ಬರಲು ಅಧಿಕ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಮೊದಲಿನಿಂದಲೂ ಡಿಮ್ಯಾಟ್ ನಲ್ಲಿ ದೊರೆಯುವ ಷೇರುಗಳು ವಹಿವಾಟಿಗೆ ಸಿದ್ದವಾಗಿರುತ್ತವೆ. ಅಲ್ಲದೆ ಈಗಿನಂತೆ ಆಂಕರ್ ಇನ್ವೆಸ್ಟರ್ಸ್ ಯೋಜನೆ ಇರಲಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ಲಿಸ್ಟಿಂಗ್ ಆದ ಕಂಪನಿಗಳು ಆರಂಭಿಕ ಶೂರತ್ವದಿಂದ ಮಿಂಚಿ ನಂತರ ಮೂಲೆಗುಂಪಾಗಿ ನೀರಸಮಯವಾಗಿರುತ್ತವೆ.

    ಇಂಡಿಗೋ ಪೇಂಟ್ಸ್, ನಝಾರಾ ಟೆಕ್ನಾಲಜೀಸ್, ರೇಲ್ ಟೆಲ್ ಕಾರ್ಪೊರೇಷನ್, ಸೂರ್ಯೋದಯ ಸ್ಮಾಲ್ ಫೈನಾನ್ಸ್, ಹಿಂದಿನ ವಾರ ಲಿಸ್ಟಿಂಗ್ ಆದ ಸೋನಾ ಬಿ ಎಲ್ ಡಬ್ಲು ಪ್ರಿಸಿಷನ್ ಫೋರ್ಜಿಂಗ್ಸ್ ಷೇರು ಎರಡನೇ ದಿನದ ಮಧ್ಯಂತರದಲ್ಲಿ ರೂ.414 ರ ಗರಿಷ್ಠ ತಲುಪಿ ದಿನದ ಅಂತ್ಯದಲ್ಲಿ ರೂ.364 ಕ್ಕೆ ಕುಸಿಯುವಂತಹುದು ವ್ಯವಹಾರಿಕ ಬೆಳವಣಿಗೆಯಾಗಿದ್ದು ಕಂಪನಿಯ ಆಂತರಿಕ ಬೆಳವಣಿಗೆಯಲ್ಲ. ಇಲ್ಲಿ ಅಲ್ಪ ಸಮಯದಲ್ಲಿ ಲಭ್ಯವಿರುವ ಅಸಹಜ ಲಾಭವು ಹೆಚ್ಚಿನ ನಿರೀಕ್ಷೆಯನ್ನು ಬಿತ್ತಿ ಅವಕಾಶ ವಂಚಿತರನ್ನಾಗಿಸುತ್ತದೆ.

    ಕ್ಲಾರಿಯಂಟ್ ಕೆಮಿಕಲ್ಸ್ (ಇಂಡಿಯಾ) ಲಿ:

    ಸಾಂದರ್ಭಿಕ ಚಿತ್ರ :ಕ್ಲಾರಿಯಂಟ್ ಕೆಮಿಕಲ್ಸ್ (ಇಂಡಿಯಾ) ಲಿ:

    ಈ ಕಂಪನಿಯು ಹಿಂದಿನ ತಿಂಗಳು ಪ್ರತಿ ಷೇರಿಗೆ ರೂ.15 ರಂತೆ ಡಿವಿಡೆಂಡ್ ಘೊಷಿಸಿದೆ. ಇದನ್ನು ವಿತರಿಸಲು ಆಗಸ್ಟ್ ನಲ್ಲಿ ರಿಕಾರ್ಡ್ ಡೇಟನ್ನು ಪ್ರಕಟಿಸಿದೆ. ಆದರೆ ಈ ತಿಂಗಳಲ್ಲಿ ಷೇರಿನ ಬೆಲೆಯು ರೂ.481 ರ ಸಮೀಪದಿಂದ ರೂ.612 ರವರೆಗೂ ಏರಿಳಿತ ಪ್ರದರ್ಶಿಸಿದೆ. ಶುಕ್ರವಾರ 25 ರಂದು ರೂ.577 ರ ಸಮೀಪದಿಂದ ರೂ.612 ರವರೆಗೂ ಏರಿಕೆ ಕಂಡು ರೂ.583 ರಲ್ಲಿ ಕೊನೆಗೊಂಡಿದೆ. ಇದೇ ರೀತಿ ಈ ತಿಂಗಳ 7 ರಂದು ರೂ.60 ರಷ್ಟು, 8 ರಂದು ರೂ.30 ರಷ್ಟು, 14 ರಂದು ಷೇರಿನ ಬೆಲೆ ರೂ.538 ರಿಂದ ರೂ.605 ರವರೆಗೂ ಏರಿಕೆ ಪ್ರದರ್ಶಿಸಿ ರೂ.584 ರಲ್ಲಿ ಕೊನೆಗೊಂಡಿದೆ. 16 ರಂದು ಸುಮಾರು ರೂ.30 ರಷ್ಟು, 18 ರಂದು ಸುಮಾರು ರೂ.35 ರಷ್ಟು ಏರಿಳಿತಗಳನ್ನು ಪ್ರದರ್ಶಿಸಿರುವುದರ ಹಿಂದೆ ಕಂಪನಿ ವಿತರಿಸಲಿರುವ ಡಿವಿಡೆಂಡ್ ಪ್ರಮಾಣವೇ ಮೂಲವಾಗಿದೆ.

    ಟಾಟಾ ಸ್ಟೀಲ್ ಲಿ:

    ಸಾಂದರ್ಭಿಕ ಚಿತ್ರ : ಟಾಟಾ ಸ್ಟೀಲ್‌ ಕಂಪನಿಯ ಜೇಮ್ ಷೆಡ್ ಪುರ ಘಟಕ

    ಟಾಟಾ ಸ್ಟೀಲ್‌ ಕಂಪನಿಯ ತ್ರೈಮಾಸಿಕ ಫಲಿತಾಂಶವು ಅತ್ಯುತ್ತಮವಾಗಿದ್ದ ಕಾರಣ ಷೇರಿನ ಬೆಲೆಯು ರೂ.1,246 ರ ವಾರ್ಷಿಕ ಗರಿಷ್ಠತಲುಪಿತು. ಕಂಪನಿಯು ಪ್ರತಿ ಷೇರಿಗೆ ರೂ.25 ರಂತೆ ಡಿವಿಡೆಂಡ್‌ ನ್ನು ಘೋಷಿಸಿತು. ಮೇ ತಿಂಗಳಲ್ಲಿ ಘೋಷಿಸಿದ ಫಲಿತಾಂಶ ಮತ್ತು ಡಿವಿಡೆಂಡ್‌ ವಿತರಣೆಗೆ ಜೂನ್‌ 17 ನಿಗಧಿತ ದಿನವಾಗಿಸಿತ್ತು. ಮೇ ತಿಂಗಳ ಕೊನೆವಾರದಲ್ಲಿ ಷೇರಿನ ಬೆಲೆ ರೂ.1,070 ರವರೆಗೂ ಕುಸಿಯಿತು. ಈ ದರವು ‌ ಕಂ-ಡಿವಿಡೆಂಡ್ ಸೌಲಭ್ಯದ್ದಾಗಿದ್ದು, ಎಕ್ಸ್‌ ಡಿವಿಡೆಂಡ್‌ ದಿನದವರೆಗೂ ಚಟುವಟಿಕೆ ಭರಿತವಾಗಿದ್ದು ಜೂನ್‌ 16 ರಂದು ಷೇರಿನ ಬೆಲೆ ರೂ.1,180 ರವರೆಗೂ ಏರಿಕೆ ಕಂಡಿತು. ಎಕ್ಸ್‌ ಡಿವಿಡೆಂಡ್‌ ದಿನವಾದ 17 ರಂದು ರೂ.1,096 ವರೆಗೂ ತಲುಪಿತ್ತು ಅಲ್ಲಿಂದ ಶುಕ್ರವಾರ 25 ರಂದು ರೂ.1,170 ರವರೆಗೂ ಏರಿಕೆ ಪಡೆದುಕೊಂಡಿತು. ಆಂದರೆ ಕಂ- ಡಿವಿಡೆಂಡ್‌ ದರದ ಗರಿಷ್ಠ ರೂ.1,246 ರಿಂದ ರೂ.1,070 ರವರೆಗೂ ಕುಸಿದ ನಂತರ ಎಕ್ಸ್‌ ಡಿವಿಡೆಂಡ್‌ ರೂ.1,096 ರಿಂದ ರೂ.1,170 ಕ್ಕೆ ಜಿಗಿದಿರುವುದಕ್ಕೆ ಕಾರಣ ಕಾರ್ಪೊರೇಟ್‌ ಫಲದ ಪ್ರಭಾವವಾಗಿದೆ. ಮೇ ತಿಂಗಳ ಅಂತ್ಯದಲ್ಲಿ ಖರೀದಿಸಿದವರಿಗೆ ಡಬಲ್‌ ದಮಾಕಾ, ಕ್ಯಾಪಿಟಲ್‌ ವೃದ್ಧಿಯೊಂದಿಗೆ ಡಿವಿಡೆಂಡ್‌ ಸಹ ಲಭ್ಯ.

    ಪವರ್‌ ಗ್ರಿಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿ:

    ಸಾಂದರ್ಭಿಕ ಚಿತ್ರ : ಪವರ್ ಗ್ರಿಡ್ ಅಕಾಡೆಮಿ ಆಫ್ ಲೀಡರ್ ಷಿಪ್ (PAL)

    ಈ ಕಂಪನಿಯು ಜೂನ್‌ 17 ರಂದು ಡಿವಿಡೆಂಡ್‌ ನೊಂದಿಗೆ ಬೋನಸ್‌ ಷೇರು ಪ್ರಕಟಿಸುವುದೆಂದು ಷೇರಿನ ಬೆಲೆ ರೂ.251 ರವರೆಗೂ ಏರಿಕೆ ಕಂಡಿತು. ಆದರೆ ಡಿವಿಡೆಂಡ್‌ ಮತ್ತು ಬೋನಸ್‌ ಘೋಷಿಸಿದ ನಂತರ ಷೇರಿನ ಬೆಲೆ ರೂ.228 ಕ್ಕೆ ಕುಸಿದು ಈಗ ರೂ.230 ರ ಸಮೀಪವಿದೆ. ಜುಲೈ 20 ರ E G M ಮುಗಿದ ನಂತರ ಬೋನಸ್‌ ಷೇರಿಗೆ ನಿಗದಿತ ದಿನ ಪ್ರಕಟವಾಗಬಹುದು. ಅಲ್ಲಿಯವರೆಗೂ ಷೇರಿನ ಬೆಲೆ ಏರಿಳಿತಗಳನ್ನು ಪ್ರದರ್ಶಿಸುವ ಸಾಧ್ಯತೆ ಇದೆ.

    ಗುಡ್‌ ಇಯರ್‌ ಇಂಡಿಯಾ ಲಿ :

    ಈ ಕಂಪನಿಯು ತನ್ನ ಸ್ಥಿರತೆಯ ಸಾಧನೆಯನ್ನು ಪ್ರದರ್‌ಶಿಸಿದೆ. ಪ್ರತಿ ಷೇರಿಗೆ ರೂ.18 ರಂತೆ ಡಿವಿಡೆಂಡ್‌ ನೊಂದಿಗೆ ಸ್ಪೆಷಲ್‌ ಡಿವಿಡೆಂಡ್‌ ಎಂದು ರೂ.80 ನ್ನು ಘೋಷಿಸಿದೆ. ಅಂದರೆ ಒಂದು ಷೇರಿಗೆ ರೂ.98 ರಂತೆ ಡಿವಿಡೆಂಡ್‌ ವಿತರಿಸಲು ಆಗಷ್ಠ್‌ 6 ನಿಗದಿತ ದಿನವಾಗಿದೆ. ಡಿವಿಡೆಂಡ್‌ ಘೋಷಣೆಯಾದ ನಂತರ ಷೇರಿನ ಬೆಲೆಯು ರೂ.950 ರವರೆಗೂ ಕುಸಿದಿದ್ದು ಶುಕ್ರವಾರ ರೂ.1,070 ನ್ನು ದಾಟಿದೆ. ಆಗಸ್ಠ್‌ 6 ರವರೆಗೂ ಡಿವಿಡೆಂಡ್‌ ಗೆ ಅವಕಾಶವಿದ್ದು ಬೆಲೆ ಕುಸಿತವು ಹೂಡಿಕೆಗೆ ಯೋಗ್ಯವಾಗಬಹುದು.

    ಇದೇ ರೀತಿ ಪ್ರಮುಖ ಕಂಪನಿಗಳಾದ ಟೆಕ್‌ ಮಹೀಂದ್ರ, ಹೆಚ್‌ ಸಿ ಎಲ್‌ ಟೆಕ್‌, ಲಾರ್ಸನ್‌ ಅಂಡ್‌ ಟೋಬ್ರೊ, ಸಿ ಇ ಎಸ್‌ ಇ, ಹ್ಯಾಪಿಯೆಸ್ಟ್‌ ಮೈಂಡ್ಸ್‌, ಪಿರಮಲ್‌ ಎಂಟರ್‌ ಪ್ರೈಸಸ್‌, ಗಳು ಹೆಚ್ಚಿನ ಏರಿಳಿತಗಳನ್ನು ಡಿವಿಡೆಂಡ್‌ ಘೋಷಿಸಿದ ನಂತರದಲ್ಲಿ ಪ್ರದರ್ಶಿಸಿವೆ.

    ಡಿವಿಡೆಂಡ್‌ ವಿತರಣೆ ಬಾಕಿ ಇರುವ ಕಂಪನಿಗಳು:

    ಪ್ರತಿ ಷೇರಿಗೆ ರೂ.58 ರಂತೆ ಡಿವಿಡೆಂಡ್‌ ಘೋಷಿಸಿರುವ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌, ರೂ.22.75 ರ ಡಿವಿಡೆಂಡ್‌ ಪ್ರಕಟಿಸಿರುವ ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌, ಪ್ರತಿ ಷೇರಿಗೆ ರೂ.10 ರಂತೆ ಡಿವಿಡೆಂಡ್‌ ಪ್ರಕಟಿಸಿರುವ ರೂಪಾ ಅಂಡ್‌ ಕಂಪನಿ, ಯುನಿ ಅಬೆಕ್ಸ್‌ ಅಲಾಯ್‌, ಪ್ರತಿ ಷೇರಿಗೆ ರೂ.200 ರಂತೆ ಲಾಭಾಂಶ, 1:1 ಅನುಪಾತದ ಬೋನಸ್‌ ಮತ್ತು ರೂ.5 ರಿಂದ ರೂ.2 ಕ್ಕೆ ಮುಖಬೆಲೆ ಸೀಳಿಕೆ ಪ್ರಕಟಿಸಿರುವ ಟೈಡ್‌ ವಾಟರ್‌ ಹೌಸ್‌, ಅಮರರಾಜ ಬ್ಯಾಟರೀಸ್‌, ನಂತಹ ಅನೇಕ ಕಂಪನಿಗಳು ಮುಂದಿನ ದಿನಗಳಲ್ಲಿ ಹೂಡಿಕೆದಾರರಿಗೆ ಲಾಭದಾಯಕವಾಗಬಹುದು. ನೆನಪಿರಲಿ, ಷೇರಿನ ಮೌಲ್ಯಕ್ಕೆ ಹೋಲಿಕೆ ಮಾಡಿದಾಗ ಡಿವಿಡೆಂಡ್‌ ಪ್ರಮಾಣ ಆಕರ್ಷಕವಲ್ಲದಿದ್ದರೂ, ಅದು ಏರಿಳಿತಗಳಿಗೆ ಪೂರಕ ಅಂಶವಾಗಿರುತ್ತದೆ.

    ಮಿಡ್‌ ಕ್ಯಾಪ್‌, ಸ್ಮಾಲ್‌ ಕ್ಯಾಪ್‌, ಅಲ್ಪ ಮೌಲ್ಯದ ಷೇರುಗಳ ಆಯ್ಕೆಗೆ ಮುನ್ನ ಗಮನಿಸಿರಿ:

    ಪೇಟೆಯ ಇಂಡೆಕ್ಸ್‌ ಗಳು ಗರಿಷ್ಠದಲ್ಲಿರುವಾಗ ಮಿಡ್‌ ಕ್ಯಾಪ್‌, ಸ್ಮಾಲ್‌ ಕ್ಯಾಪ್‌, ಅಲ್ಪ ಮೌಲ್ಯದ ಷೇರುಗಳನ್ನು ಹೆಚ್ಚು ಹೆಚ್ಚು ಶಿಫಾರಸುಮಾಡಲಾಗುತ್ತಿದೆ. ಇಲ್ಲಿ ಹೂಡಿಕೆದಾರರು ಗಮನದಲ್ಲಿರಿಸಿ ನಿರ್ಧರಿಸಲು ಕೆಲವು ಉದಾಹರಣೆಗಳನ್ನು ನೀಡಲಾಗಿದೆ.

    • ಈಗ ರೂ.32 ಸಮೀಪವಿರುವ ಜಿ ಎಂ ಆರ್‌ ಇನ್‌ ಫ್ರಾಸ್ಟ್ರಕ್ಚರ್‌ ಕಂಪನಿಯ ಷೇರಿನ ಬೆಲೆ 2008 ರಲ್ಲಿ ರೂ.250 ರ ಸಮೀಪವಿತ್ತು. 2009 ರಲ್ಲಿ ಷೇರಿನ ಮುಖಬೆಲೆಯನ್ನು ರೂ.2 ರಿಂದ ರೂ.1 ಕ್ಕೆ ಸೀಳಲಾಯಿತಾದರೂ ಷೇರಿನ ಬೆಲೆ ರೂ.125 ತಲುಪದಾಗಾದೆ, ಆಗ ಹೂಡಿಕೆ ಮಾಡಿದವರು 12 ವರ್ಷವಾದರೂ ತಮ್ಮ ಹೂಡಿಕೆ ಹಣವನ್ನು ಹಿಂಪಡೆಯಲು ಅಸಾಧ್ಯವಾಗಿದೆ.
    • ಬಾಂಬೆ ರೇಯಾನ್‌ ಫ್ಯಾಷನ್ಸ್‌ ಕಂಪನಿಯ ಷೇರಿನ ಬೆಲೆ 2018 ರಲ್ಲಿ ರೂ.130 ರಲ್ಲಿದ್ದು ಇಂದು ರೂ.11 ರ ಸಮೀಪವಿದೆ. ಕಂಪನಿಯು ಹೆಚ್ಚಿನ ಹಾನಿಯಲ್ಲಿದೆ.
    • 2014 ರಲ್ಲಿ ಷೇರಿನ ಬೆಲೆ ರೂ.560 ರಲ್ಲಿದ್ದ ಅಬ್ಬಾನ್‌ ಆಫ್‌ ಷೋರ್‌ ಈಗ ರೂ.45 ರ ಸಮೀಪವಿದೆ.
    • 2008 ರಲ್ಲಿ ರೂ.122 ರ ಸಮೀಪವಿದ್ದ ಜಯಪ್ರಕಾಶ್‌ ಪವರ್‌ ವೆಂಚರ್ಸ್ ಷೇರಿನಬೆಲೆ ರೂ.5.60 ರ ಸಮೀಪವಿದೆ.
    • 2014 ರಲ್ಲಿ ರೂ.700 ರಲ್ಲಿದ್ದ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್‌ ಷೇರಿನ ಬೆಲೆ ರೂ.83 ರ ಸಮೀಪವಿದೆ. ಈ ವರ್ಷ ರೂ.19ರ ಕನಿಷ್ಠ ಬೆಲೆಗೆ ಕುಸಿದಿದ್ದನ್ನು ಮರೆಯುವಂತಿಲ್ಲ.

    ಇಂತಹ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಹೂಡಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವುದು ಅವಶ್ಯಕ. ಇಂದಿನ ಷೇರುಪೇಟೆಯಲ್ಲಿ ಯಶಸ್ಸು ಕಾಣಲು ಸದಾ ಎಚ್ಚರವಾಗಿರುವಂತಹ ಶ್ವಾನ ನಿದ್ದೆ, ಸದಾ ಲಾಭಗಳಿಕೆಯ ಅವಕಾಶ ಕೈಗೆಟುಕಿಸಿ ಕೊಳ್ಳಬಹುದಾದ ಬಕ ಧ್ಯಾನ, ಇವುಗಳು ಅಳವಡಿಕೆಯಾದರೆ ಗಜ ಸ್ನಾನದ ತೃಪ್ತಿ ದೊರೆಯುತ್ತದೆ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಬಿಜೆಪಿ ಕಾರ್ಯಕರ್ತರಿಗೆ ಆರೋಗ್ಯ ತರಬೇತಿ

    ಕೋವಿಡ್ ಸಂದರ್ಭದಲ್ಲಿ ರಾಜ್ಯಾದ್ಯಂತ ನಮ್ಮ ಕಾರ್ಯಕರ್ತರು ತಮ್ಮ ಜೀವವನ್ನೇ ಪಣವಾಗಿಟ್ಟು 4,531 ಶವಸಂಸ್ಕಾರಗಳನ್ನು ಮಾಡಿದ್ದಾರೆ. ಅವರ ಸಮಾಜಮುಖಿ ಚಿಂತನೆ ಮತ್ತು ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಅವರನ್ನು ಮಂಡಲ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದ ಕಾರ್ಯಕಾರಿಣಿಯಲ್ಲಿ ಸನ್ಮಾನಿಸಲು ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ಸೂಚಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

    ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಸಮಾರೋಪ ಸಮಾರಂಭದ ಬಳಿಕ ಕ್ಯಾಪ್ಟನ್ ಕಾರ್ಣಿಕ್ ಅವರು ಮಾತನಾಡಿದರು.

    ಬೆಳಿಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕಾರ್ಯಕಾರಿಣಿಯನ್ನು ವರ್ಚುಯಲ್ ಸಭೆಯ ಮೂಲಕ ಉದ್ಘಾಟಿಸಿ ಮುಂಬರುವ ಜಿಲ್ಲಾ ಪಂಚಾಯ್ತ್, ತಾಲ್ಲೂಕು ಪಂಚಾಯ್ತ ಚುನಾವಣೆಗೆ ಸಿದ್ಧರಾಗಲು ಕಾರ್ಯಕರ್ತರಿಗೆ ಕರೆ ನೀಡಿದ್ದರು.

    ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ರಾಜ್ಯ ಸರಕಾರ ನೀಡುವ ಒಂದು ಲಕ್ಷ ರೂಪಾಯಿ ಮತ್ತು ಕೇಂದ್ರ ಸರಕಾರ ಘೋಷಿಸಿದ ಅನಾಥ ಮಕ್ಕಳ ರಕ್ಷಣೆಗಾಗಿ ಬ್ಯಾಂಕ್‍ನಲ್ಲಿ 10 ಲಕ್ಷ ರೂಪಾಯಿ ಠೇವಣಿ ಇಡುವ ಹಾಗೂ 21 ವರ್ಷಗಳವರೆಗೆ ಅವರನ್ನು ನೋಡಿಕೊಳ್ಳುವ ವಿಚಾರವನ್ನು ಜನಮಾನಸಕ್ಕೆ ತಿಳಿಸಬೇಕು ಎಂದು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ ಎಂದರು.

    ವೈದ್ಯಕೀಯ ಸವಲತ್ತುಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ಕೊಡುವುದರಲ್ಲಿ ವಿಫಲರಾದ ಕಾಂಗ್ರೆಸ್‍ನಿಂದಾಗಿ ನಾವು ಈ ಎರಡು ಅಲೆಗಳ ವೇಳೆ ಇದನ್ನು ಸಮರ್ಥವಾಗಿ ನಿಭಾಯಿಸಲು ಸ್ವಲ್ಪ ಎಡರುತೊಡರು ಉಂಟಾಗಿದೆ ಎಂದು ತಿಳಿಸಿದ್ದಾಗಿ ಹೇಳಿದರು.
    ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಮಧ್ಯಾಹ್ನದ ನಂತರದ ಅವಧಿಯಲ್ಲಿ ಪಕ್ಷವು ಮುಂದಿನ ಎರಡ್ಮೂರು ತಿಂಗಳುಗಳಲ್ಲಿ ಸಂಘಟನಾತ್ಮಕವಾಗಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದರ ಕುರಿತು ನಮ್ಮ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್‍ಕುಮಾರ್ ಅವರು ಮಾಹಿತಿ ನೀಡಿದರು. ಸೇವಾ ಹೀ ಸಂಘಟನ್ ಅನ್ನು ಇನ್ನೂ ವಿಸ್ತರಿಸುವುದು, ಲಸಿಕಾ ಅಭಿಯಾನದಲ್ಲಿ ತೊಡಗಿಸಿಕೊಳ್ಳುವುದು, ಪ್ರತಿ ಬೂತ್ ಅನ್ನು ಲಸಿಕಾಯುಕ್ತ ಬೂತ್ ಆಗುವುದಕ್ಕಾಗಿ ಪ್ರಯತ್ನ ನಡೆಯಬೇಕು ಎಂದು ಮಾರ್ಗದರ್ಶನ ಮಾಡಿದರು ಎಂದು ತಿಳಿಸಿದರು.

    ನಮ್ಮ ಬೂತ್‍ನಲ್ಲಿ ಇರುವ ಕಾರ್ಯಕರ್ತರನ್ನು ಜೋಡಿಸಿಕೊಂಡು ಒಟ್ಟು 2 ಲಕ್ಷ ಕಾರ್ಯಕರ್ತರಿಗೆ ಆರೋಗ್ಯ ಸಂಬಂಧ ಮೂಲ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಆಕ್ಸಿಮೀಟರ್ ಬಳಕೆ ಹೇಗೆ, ರಕ್ತದೊತ್ತಡ ತಿಳಿಯುವುದು ಹೇಗೆ, ಕೋವಿಡ್ ಕಿಟ್ ಬಳಕೆ, ಏನಾದರೂ ಆರೋಗ್ಯ ಸಮಸ್ಯೆ ಬಂದರೆ ತುರ್ತು ಪರಿಹಾರ ಹೇಗೆ ಎಂಬಂಥ ತರಬೇತಿ ಕೊಡಲು ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಅವರು ಉಲ್ಲೇಖಿಸಿದರು. ಇವತ್ತು ನಡೆದ ಹೈಬ್ರಿಡ್ ಕಾರ್ಯಕಾರಿಣಿ ಮಾದರಿಯಲ್ಲೇ ಜುಲೈ 1ರಿಂದ ಜುಲೈ 15ರವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಹೈಬ್ರಿಡ್ ಕಾರ್ಯಕಾರಿಣಿ ಮಾಡಲು ಸೂಚಿಸಿದ್ದಾರೆ ಎಂದು ವಿವರಿಸಿದರು.
    ಜುಲೈ 16ರಿಂದ ಜುಲೈ 30ರವರೆಗೆ ಮಂಡಲ ಮಟ್ಟದ ಹೈಬ್ರಿಡ್ ಕಾರ್ಯಕಾರಿಣಿಗಳನ್ನು ನಡೆಸಲು ಉಲ್ಲೇಖಿಸಿದ್ದಾರೆ. ಇ ಚಿಂತನ್ ಪ್ರಶಿಕ್ಷಣ ವರ್ಗವನ್ನು ಮಂಡಲ- ಜಿಲ್ಲಾ- ರಾಜ್ಯ ಮಟ್ಟದಲ್ಲಿ ಆಯ್ದ ಏಳೆಂಟು ವಿಷಯಗಳನ್ನು ಜೋಡಿಸಿಕೊಂಡು ನಡೆಸಲು ಸೂಚನೆ ನೀಡಿದ್ದಾರೆ ಎಂದರು.

    ಪಕ್ಷದ ಬೂತ್ ಅಧ್ಯಕ್ಷರಿಗೆ ನಾಮಫಲಕ ಹಂಚುವ ಕಾರ್ಯವನ್ನು ನಡೆಸಲಾಗುವುದು. ಡಿಸೆಂಬರ್ ನಲ್ಲಿ ನಡೆಯಬಹುದಾದ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಸಮಾವೇಶ ನಡೆಸುವುದು, ರಾಜ್ಯ ಮಟ್ಟದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಮಾವೇಶ ಏರ್ಪಡಿಸುವುದರ ಕುರಿತು ಚರ್ಚಿಸಲಾಗಿದೆ ಎಂದರು.
    ಜೂನ್ 25, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾರ್ಯಕರ್ತರು ಅನುಭವಿಸಿದ ಚಿತ್ರಹಿಂಸೆ, ಪ್ರಜಾಪ್ರಭುತ್ವದ ರಕ್ಷಣೆ ಕುರಿತು ಪಕ್ಷದ ರಾಜ್ಯ ಪ್ರಕೋಷ್ಠಗಳ ಸಂಚಾಲಕರು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯರೂ ಆದ ಭಾನುಪ್ರಕಾಶ್ ಅವರು ಸಮಾರೋಪ ಸಮಾರಂಭದಲ್ಲಿ ಮಾಹಿತಿ ನೀಡಿದ್ದಾರೆ.

    ದೇಶದಲ್ಲಿನ ಸರ್ವಾಧಿಕಾರಿ ಪ್ರವೃತ್ತಿ, ನಿರಂಕುಶ ಪ್ರಭುತ್ವ ಮತ್ತು ಪ್ರಜಾಪ್ರಭುತ್ವವನ್ನು ಬೆಂಬಲಿಸಿದ ಮಾಧ್ಯಮ ಮಿತ್ರರು, ಸಾಮಾಜಿಕ ಸಂಘಟಕರನ್ನು, ಧುರೀಣರನ್ನು ಹಾಗೂ ರಾಜಕೀಯ ಮುಖಂಡರನ್ನು ಚಿತ್ರಹಿಂಸೆಗೆ ಒಳಪಡಿಸಿದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು ಎಂದು ವಿವರಿಸಿದರು.

    ಕಾಂಗ್ರೆಸ್‍ನ ಮಾನಸಿಕತೆಯಲ್ಲೇ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಚಿಂತನೆ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಾವೆಲ್ಲರೂ ಇಂಥ ವಾತಾವರಣ ಬರದಂತೆ ಸಂಘಟಿತ ಪ್ರಯತ್ನ ಮಾಡಬೇಕಿದೆ ಎಂದು ಸೂಚಿಸಿದರು ಎಂದರು.

    ಆ ಕರಾಳ ದಿನಗಳ ಕಹಿ ನೆನಪು


    46 ವರ್ಷಗಳ ಹಿಂದೆ ದೇಶದಲ್ಲಿ ಎಮರ್ಜೆನ್ಸಿ ಘೋಷಣೆ. ಆಗ ಕೊಪ್ಪಳದಲ್ಲಿ ಹೈಸ್ಕೂಲ್ ಓದುತ್ತಿದ್ದ ಹಿರಿಯ ಪತ್ರಕರ್ತ ವಾದಿರಾಜ ದೇಸಾಯಿ ಆ ನೆನಪುಗಳನ್ನು ಹಂಚಿಕೊಂಡಿದ್ದಾರೆ.


    ಆಪತ್ಕಾಲೀನ ಪರಿಸ್ಥಿತಿ ಅಥವಾ ತುರ್ತು ಪರಿಸ್ಥಿತಿ (1975ರ ಜೂನ್ ತಿಂಗಳ 25) ಜಾರಿಯಾದಾಗ ನಾನು ಕೊಪ್ಪಳದ ಸರಕಾರಿ ಹೈಸ್ಕೂಲ್ ವಿದ್ಯಾರ್ಥಿ. ನಮಗೆ ತುರ್ತು ಪರಿಸ್ಥಿತಿ ಎಂದರೇನು ಎಂಬುದು ಗೊತ್ತಿರಲಿಲ್ಲ . ಆದರೆ ನಮ್ಮ ಮನೆಯಲ್ಲಿ ಹಿರಿಯರು ” ಯಾವುದೇ ಕಾರಣಕ್ಕೂ ಇಂದಿರಾ ಗಾಂಧಿಯ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಬೇಡಿ” ಎಂದು ಎಚ್ಚರಿಕೆಯ ಕಿವಿಮಾತು ಹೇಳುತ್ತಿದ್ದರು. ನಮ್ಮ ಊರಿನಲ್ಲಿ ಈ ಸಂಬಂಧ ಯಾವುದೇ ಪ್ರತಿಭಟನೆ ನಡೆದದ್ದು ಕಂಡು ಬರಲಿಲ್ಲ, ಕೇಳಲೂ ಇಲ್ಲ.

    ಆದರೆ ನಮ್ಮ ಸುತ್ತಮುತ್ತಲಿನ ನಿವಾಸಿಗಳಾದ ಕೆಲವು ನಾಗರಿಕರನ್ನು ಪೊಲೀಸರು ಬಂಧಿಸಿ, ಸೆರೆಮನೆಗೆ ಕಳುಹಿಸಿದ್ದು ಮಾತ್ರ ಗೊತ್ತಾಯಿತು.ಇವೆಲ್ಲ ಪೊಲೀಸರ ಮಧ್ಯರಾತ್ರಿಯ ಪೌರುಷಗಳಾಗಿದ್ದವು. ಆಗಾಗ್ಗೆ ಅವರನ್ನು ಊರಿನ ಪ್ರಮುಖ ಬೀದಿಯಲ್ಲಿ ಸಾರ್ವಜನಿಕರೆದುರಿಗೆ, ಅದರಲ್ಲಿಯೂ, ಕಾಲ್ನಡಿಗೆಯಲ್ಲಿ ಕೋರ್ಟಿಗೆ ಕರೆತರುತ್ತಿದ್ದರು. “ಇವರೇನು ಕ್ರಿಮಿನಲ್ ಗಳಾ?” ಎಂದು ನಾವು ಅನುಮಾನದಂತೆ ನೋಡುವಂತಿತ್ತು ಆ ನೋಟ. ಈ ರೀತಿ ಬಂಧಿತರಲ್ಲಿ ನನ್ನ ಬಾಲ್ಯದ ಸ್ನೇಹಿತನ ತಂದೆ (ಉತ್ತರ ಕರ್ನಾಟಕದ ಪ್ರಸಿದ್ಧ ಪತ್ರಿಕೆಯ ವರದಿಗಾರರೂ ಆಗಿದ್ದರು ) ಕೂಡ ಸೇರಿದ್ದರು. ಇನ್ನು ನಾಲ್ಕೈದು ಜನ ಯುವಕರು ಸಹ ನನಗೆ ಚಿರಪರಿಚಿತರಾಗಿದ್ದರು. ಇವರೆಲ್ಲ ಸಭ್ಯ, ಒಳ್ಳೆಯ ಮನೆತನದ ಹಿನ್ನೆಲೆಯ ವರೇ ಆಗಿದ್ದರು.ನಮ್ಮ ಮನೆಗೆ ಹತ್ತಿರದಲ್ಲಿದ್ದ ಖಾಸಗಿ ವೈದ್ಯರನ್ನೂ ಬಂಧಿಸಲಾಗಿತ್ತು.

    ನನಗೆ ತಿಳಿದಂತೆ ಆಗ ಈ ಎಲ್ಲ ಬಂಧಿತರು ಯಾರೂ ಯಾವ ತಪ್ಪನ್ನು ಸಹ ಮಾಡಿರಲಿಲ್ಲ. ಅಂತಹ ವಿಷಯ ನನ್ನ ಕಿವಿಗೂ ಬಿದ್ದಿರಲಿಲ್ಲ. ಆದರೂ ಜೈಲಿಗೆ ಹೋಗಿ ಬಂದರು. ಉಳಿದಂತೆ ಆಗ ಕಾಂಗ್ರೆಸ್ಸಿನ ಮುಖಂಡರು ಅಥವಾ ನಮ್ಮೂರಿನ ಸೋ ಕಾಲ್ಡ್ ಸ್ವಾತಂತ್ರ್ಯಯೋಧರು, ಬುದ್ಧಿಜೀವಿಗಳು ಯಾರೂ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದುದು ನನ್ನ ಕಿವಿಗೆ ಬೀಳಲಿಲ್ಲ.

    ಇನ್ನು ಕನ್ನಡಪ್ರಭ ಮತ್ತು ಇಂಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆಗಳು ಆ ಅವಧಿಯಲ್ಲಿ, ಸರಕಾರದ ಅವಕೃಪೆಗೆ ಒಳಗಾಗಿ, ತುಂಬಾ ಕಡಿಮೆ ಅಂದರೆ ಆರೆಂಟು ಪುಟಗಳಲ್ಲಿ ಮಾತ್ರ ಪ್ರಕಟವಾಗುತ್ತಿದ್ದುದು ನೆನಪಿದೆ.
    ಅಲ್ಲದೇ ರಾಯಚೂರಿನಿಂದ ಪ್ರಕಟವಾಗುವ, “ರಾಯಚೂರ ವಾಣಿ ” ದಿನಪತ್ರಿಕೆಯೂ ಜೂನ್ 26ರ ಸಂಚಿಕೆಯಲ್ಲಿ ಸಂಪಾದಕೀಯ ಸ್ಥಳವನ್ನು ಖಾಲಿ ಬಿಟ್ಟು ಮುದ್ರಣಗೊಂಡಿತ್ತು. ಈ ಮೂಲಕ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವನ್ನು ವಿರೋಧಿಸಿತ್ತು. ತುರ್ತುಪರಿಸ್ಥಿತಿಯ ಅವಧಿ ಮುಗಿದ ನಂತರವೇ ನಮಗೆ ಆ ದಿನಗಳ ಕರಾಳ ಮುಖದ ಪರಿಚಯವಾಗಿದ್ದು. ಅಷ್ಟರ ಮಟ್ಟಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಆಗಿದ್ದು ಮಾತ್ರ ಸುಳ್ಳಲ್ಲ. .

    ಇನ್ನು ಕಡೆಯದಾಗಿ ಒಂದು ಮಾತು. ಆ ಬಂಧಿತರ ಕುಟುಂಬದವರ ಮನಸ್ಸುಗಳಲ್ಲಿ , ಆ ಕರಾಳ ದಿನಗಳು ಕಹಿ ನೆನಪುಗಳಾಗಿ ಇಂದಿಗೂ ಹಚ್ಚ ಹಸುರಾಗಿ ಉಳಿದಿರುವುದೂ ಅಷ್ಟೇ ಸತ್ಯ.


    ಕನ್ನಡಪ್ರಭ , ವಿಜಯ ಕರ್ನಾಟಕ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ವಾದಿರಾಜ ದೇಸಾಯಿ ನಾಡಿನ ಹಿರಿಯ ಪತ್ರಕರ್ತರು.
    .

    ಆಧ್ಯಾತ್ಮಿಕ ಕೇಂದ್ರವಾಗಿ, ಪ್ರವಾಸೋದ್ಯಮ ತಾಣವಾಗಿ ಹಾಗೂ ಸುಸ್ಥಿರ ಸ್ಮಾರ್ಟ್ ಸಿಟಿಯಾಗಿ ಅಯೋಧ್ಯೆ ಅಭಿವೃದ್ಧಿ

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು.ಉತ್ತರ ಪ್ರದೇಶ ಸರಕಾರದ ಅಧಿಕಾರಿಗಳು ಅಯೋಧ್ಯೆಯ ಅಭಿವೃದ್ಧಿಯ ವಿವಿಧ ವಿಷಯಗಳನ್ನು ಒಳಗೊಂಡ ಅಂಶಗಳ ಬಗ್ಗೆ ಪ್ರದರ್ಶಿಕೆಯನ್ನು ಮಂಡಿಸಿದರು.

    ಅಯೋಧ್ಯೆಯನ್ನು ಆಧ್ಯಾತ್ಮಿಕ ಕೇಂದ್ರವಾಗಿ, ಜಾಗತಿಕ ಪ್ರವಾಸೀ ತಾಣವಾಗಿ ಮತ್ತು ಸುಸ್ಥಿರ ಅಭಿವೃದ್ಧಿಯ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ.

    ಅಯೋಧ್ಯೆಯನ್ನು ಸಂಪರ್ಕಿಸುವ ಪ್ರಸ್ತಾವಿತ ವಿವಿಧ ಮೂಲಸೌಕರ್ಯಗಳ ಯೋಜನೆಗಳ ಬಗ್ಗೆ ಮತ್ತು ಬರಲಿರುವ ವಿವಿಧ ಯೋಜನೆಗಳ ಬಗ್ಗೆ ಪ್ರಧಾನ ಮಂತ್ರಿ ಅವರಿಗೆ ಮಾಹಿತಿ ಒದಗಿಸಲಾಯಿತು. ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣದ ವಿಸ್ತರಣೆ, ಬಸ್ ನಿಲ್ದಾಣ, ರಸ್ತೆಗಳು, ಮತ್ತು ಹೆದ್ದಾರಿಗಳ ಬಗ್ಗೆ ಚರ್ಚಿಸಲಾಯಿತು.

    ಹೊಸದಾಗಿ ರೂಪುಗೊಳ್ಳಲಿರುವ ಪಟ್ಟಣ (ಗ್ರೀನ್ ಫೀಲ್ಡ್ ಟೌನ್ ಶಿಪ್ ) ಬಗ್ಗೆ ಚರ್ಚಿಸಲಾಯಿತು. ಇದು ಭಕ್ತಾದಿಗಳಿಗೆ ವಸತಿಗೃಹಗಳ ಸೌಲಭ್ಯ, ಆಶ್ರಮಗಳಿಗೆ ಸ್ಥಳಾವಕಾಶ, ಮಠಗಳು, ಹೊಟೇಲುಗಳು, ವಿವಿಧ ರಾಜ್ಯಗಳಿಗೆ ಭವನಗಳಿಗೆ ಸ್ಥಳಾವಕಾಶವನ್ನು ಒಳಗೊಂಡಿದೆ. ಪ್ರವಾಸೀ ಸೌಲಭ್ಯ ಕೇಂದ್ರ, ವಿಶ್ವ ದರ್ಜೆಯ ಮ್ಯೂಸಿಯಂ ನಿರ್ಮಾಣವೂ ಆಗಲಿದೆ.

    ಸರಯೂ ನದಿ ಸುತ್ತ ಮುತ್ತ ಮತ್ತು ಅದರ ಘಾಟ್ ಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ವಿಶೇಷ ಗಮನ ಹರಿಸಲಾಗುವುದು. ಸರಯೂ ನದಿಯಲ್ಲಿ ಹಡಗು ಸಂಚಾರವನ್ನು ನಿಯಮಿತಗೊಳಿಸಲಾಗುವುದು.

    ನಗರವನ್ನು ಸೈಕಲ್ ಸವಾರರಿಗೆ ಮತ್ತು ಪಾದಚಾರಿಗಳಿಗೆ ಸಾಕಷ್ಟು ಸ್ಥಳಾವಕಾಶ ಲಭ್ಯವಾಗುವಂತೆ ಸುಸ್ಥಿರವಾಗಿ ಅಭಿವೃದ್ಧಿಪಡಿಸುವುದನ್ನು ಖಾತ್ರಿಗೊಳಿಸಲಾಗುವುದು. ಸಂಚಾರ ನಿರ್ವಹಣೆಯನ್ನು ಸ್ಮಾರ್ಟ್ ಸಿಟಿ ಮೂಲಸೌಕರ್ಯ ಬಳಸಿ ಆಧುನಿಕ ರೀತಿಯಲ್ಲಿ ಮಾಡಲಾಗುವುದು.

    ಅಯೋಧ್ಯಾವು ಪ್ರತಿಯೊಬ್ಬ ಭಾರತೀಯರ ಸಾಂಸ್ಕೃತಿಕ ಪ್ರಜ್ಞೆಯನ್ನು ರೂಪಿಸಿದಂತಹ ನಗರ ಎಂದು ವಿವರಿಸಿದ ಪ್ರಧಾನ ಮಂತ್ರಿ ಅವರು ಅಯೋಧ್ಯಾವು ನಮ್ಮ ಸಂಪ್ರದಾಯದ ಅತ್ಯುತಮವಾದುದನ್ನು ಮತ್ತು ನಮ್ಮ ಅಭಿವೃದ್ಧಿ ಪರಿವರ್ತನೆಯ ಶ್ರೇಷ್ಟವಾದ ಅಂಶಗಳನ್ನು ಸ್ಪಷ್ಟಪಡಿಸುವಂತಿರಬೇಕು ಎಂದರು.

    ಅಯೋಧ್ಯೆ ಆಧ್ಯಾತ್ಮಿಕವಾದುದು ಮತ್ತು ಮಹೋನ್ನತವಾದುದು. ಈ ನಗರಕ್ಕೆ ಸಂಬಂಧಿಸಿ ಮಾನವ ನಂಬಿಕೆಗಳು ಭವಿಷ್ಯದ ಮೂಲಸೌಕರ್ಯಗಳ ಜೊತೆ ಸರಿಹೊಂದುವಂತಿರಬೇಕು, ಅದು ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಸಹಿತ ಪ್ರತಿಯೊಬ್ಬರಿಗೂ ಪ್ರಯೋಜನಕಾರಿಯಾಗಿರಬೇಕು.

    ಬರಲಿರುವ ತಲೆಮಾರಿನ ಜನರು ಅವರ ಜೀವಿತ ಕಾಲದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡುವ ಆಶಯವನ್ನು ಹೊಂದಿರುವಂತಾಗಬೇಕು ಎಂದು ಪ್ರಧಾನ ಮಂತ್ರಿ ಹೇಳಿದರು.

    ಅಯೋಧ್ಯೆಯಲ್ಲಿಯ ಅಭಿವೃದ್ಧಿ ಕಾರ್ಯಗಳು ಸದ್ಯೋಭವಿಷ್ಯದಲ್ಲಿ ಅಸ್ತಿತ್ವ ಕಾಣುವಂತೆ ಮುಂದುವರೆಯಬೇಕು ಎಂಬುದರತ್ತ ಬೆಟ್ಟು ಮಾಡಿದ ಪ್ರಧಾನ ಮಂತ್ರಿ ಅವರು ಇದೇ ಸಮಯದಲ್ಲಿ ಅಯೋಧ್ಯೆಯ ಪ್ರಗತಿಯ ಮುಂದಿನ ನೆಗೆತಕ್ಕಾಗಿ ಅಯೋಧ್ಯೆಯನ್ನು ಕೊಂಡೊಯ್ಯುವ ಕಾರ್ಯವೂ ಆರಂಭಗೊಳ್ಳಬೇಕು. ಅಯೋಧ್ಯೆಯ ಗುರುತಿಸುವಿಕೆಯನ್ನು ಆಚರಿಸುವುದು ನಮ್ಮ ಸಾಮೂಹಿಕ ಪ್ರಯತ್ನವಾಗಬೇಕು ಮತ್ತು ಅದರ ಸಾಂಸ್ಕೃತಿಕ ಕಂಪನವನ್ನು ನವೀನ ರೀತಿಯಲ್ಲಿ ಜೀವಂತವಾಗಿಡಬೇಕು ಎಂದೂ ಹೇಳಿದರು.

    ಶ್ರೀ ರಾಮ ಜನರನ್ನು ಒಗ್ಗೂಡಿಸುವ ಸಾಮರ್ಥ್ಯ ಹೊಂದಿದ್ದಂತೆ, ಅಯೋಧ್ಯೆಯ ಅಭಿವೃದ್ಧಿ ಕಾರ್ಯವೂ ಯುವಕರನ್ನು ಒಳಗೊಂಡಂತಹ ಆರೋಗ್ಯ ಪೂರ್ಣ ಸಾರ್ವಜನಿಕ ಸಹಭಾಗಿತ್ವದ ಸ್ಫೂರ್ತಿಯಲ್ಲಿ ಸಾಗಬೇಕು ಎಂದು ಪ್ರಧಾನ ಮಂತ್ರಿ ಹೇಳಿದರು. ನಗರದ ಈ ಅಭಿವೃದ್ಧಿ ಕೆಲಸದಲ್ಲಿ ಪ್ರತಿಭಾವಂತ ಯುವಜನತೆಯ ಕೌಶಲ್ಯಗಳ ಬಳಕೆಯಾಗಬೇಕು ಎಂದು ಅವರು ಕರೆ ನೀಡಿದರು.

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಮತ್ತು ಉತ್ತರ ಪ್ರದೇಶ ಸರಕಾರದ ಇತರ ಸಚಿವರು ಸಭೆಯಲ್ಲಿ ಹಾಜರಿದ್ದರು.


    error: Content is protected !!