26.7 C
Karnataka
Friday, May 10, 2024

    ಕೋವಿಡ್‌ – 19;ಸ್ವಾವಲಂಬನೆ ಮತ್ತು ಆತ್ಮ ಸ್ಥೈರ್ಯ

    Must read

    ಕೋವಿಡ್-19‌ ಸಾಂಕ್ರಾಮಿಕ ಪಿಡುಗು ನಮ್ಮನ್ನು ಭಾದಿಸಲು ಪ್ರಾರಂಭವಾಗಿ ಒಂದು ವರ್ಷದ ಮೇಲಾಯಿತು. ಇನ್ನೂ ಅದರ ನರ್ತನ ನಿಂತಿಲ್ಲ. ಎರಡು ಅಲೆಗಳು ಮುಗಿದಿವೆ. ಮೂರನೇ ಅಲೆ ಬಂದೇ ಬರುತ್ತದೆ ಎಂಬ ಸುದ್ಧಿಯು ಸಹ ವರದಿಯಾಗುತ್ತಿದೆ. ಒಂದಲ್ಲಾ ಒಂದು ರೀತಿಯಲ್ಲಿ ಮಾನವ ಕುಲವನ್ನು ಅಲುಗಾಡಿಸುತ್ತಲೇ ಇದೆ. ಇಡೀ ಪ್ರಪಂಚದಾದ್ಯಂತ ನಾಗರಿಕರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ.

    ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ, ಪತಿ, ಪತ್ನಿ ಹೀಗೆ ಕುಟುಂಬದ ಸದಸ್ಯರನ್ನು ಮತ್ತು ಸ್ನೇಹಿತರನ್ನು ಕಳೆದುಕೊಂಡವರು ಎಷ್ಟೋ ಮಂದಿ. ಇದುವರೆವಿಗೂ ನಮ್ಮ ದೇಶದಲ್ಲಿ ಮೂರುವರೆ ಲಕ್ಷಕ್ಕೂ ಹೆಚ್ಚು ಜನರು ಹಾಗೂ ವಿಶ್ವದಲ್ಲಿ ಮೂವತ್ತೈದು ಲಕ್ಷಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಾನಸಿಕವಾಗಿ ಜನರು ಕುಂದು ಹೋಗಿದ್ದಾರೆ. ಜೊತೆಗೆ, ಉದ್ಯೋಗ, ಸಾರ್ವಜನಿಕ ಆರೋಗ್ಯ, ಕೈಗಾರಿಕೆ, ಪರಿಸರ, ಆಹಾರ ಪದ್ಧತಿ, ಆರ್ಥಿಕ ವ್ಯವಸ್ಥೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ವಿನಾಶಕಾರಿ ಪರಿಣಾಮವನ್ನು ಬೀರಿದೆ.

    ಉದಾಹರಣೆಗೆ, ನಮ್ಮ ದೇಶದಲ್ಲಿ, 2020ರಲ್ಲಿ ಕೋವಿಡ್‌ ಪರಿಣಾಮವಾಗಿ 12.2ಕೋಟಿ ಜನ ಉದ್ಯೋಗ ಕಳೆದುಕೊಂಡರು, ಎರಡನೇ ಅಲೆಯ ಪರಿಣಾಮವಾಗಿ 2021ರ ಫೆಬ್ರವರಿ ತಿಂಗಳಿನಿಂದ ಮೇ ತಿಂಗಳವರೆವಿಗೆ, ಎಪ್ಪತ್ತೈದು ಲಕ್ಷ ಜನ ಕೆಲಸ ಕಳೆದುಕೊಂಡಿದ್ದಾರೆ. ಅದಕ್ಕೆ ಕೋವಿಡ್‌ – 19 ಪಿಡುಗನ್ನು “ಅಪೋಕ್ಯಾಲಿಪ್ಸ್”‌ ಎಂದು ಕರೆಯಬಹುದಾಗಿದೆ.

    ಫೆಬ್ರವರಿ 2020ರ ಮುಂಚಿನ ದಿನಗಳಲ್ಲಿ ಕ್ವಾರಂಟೈನ್‌, ಮಾಸ್ಕ್, ಲಾಕ್ ಡೌನ್‌, ಸಾಮಾಜಿಕ ಅಂತರ, ಈ ಶಬ್ಧಗಳು ಹಲವಾರು ಜನರಿಗೆ ಗೊತ್ತೇ ಇರಲಿಲ್ಲ. ಆದರೆ, ಈಗ ದಿನನಿತ್ಯ, ಸಾಮಾನ್ಯ ಪ್ರಜೆಯು ಬಳಸುವ ಪದಗಳಾಗಿವೆ. ಇದುವರೆವಿಗೂ, ನಮ್ಮ ದೇಶದಲ್ಲಿ ಸುಮಾರು ಮೂರು ಕೋಟಿ ಜನರಿಗೆ ಸೋಂಕು ತಗುಲಿದ್ದು, ಎರಡು ಕೋಟಿ ಎಂಬತ್ತೆಂಟು (2.88 ಕೋಟಿ) ಜನರು ಗುಣಮುಖರಾಗಿದ್ದಾರೆ. ಅದೃಷ್ಟವಶಾತ್‌, ಬಹಳಷ್ಟು ಜನರಲ್ಲಿ ಕಾಯಿಲೆಯ ತೀವ್ರತೆ ಕಂಡುಬಂದಿರುವುದಿಲ್ಲ. ತೀವ್ರತೆಯಿಲ್ಲದಿರುವ ಜನರಿಗೆ ಮನೆಯಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿ ಬೇರೆಯವರ ಸಂಪರ್ಕವಿಲ್ಲದೇ ಐಸೋಲೇಷನ್‌ ನಲ್ಲಿದ್ದು, ಚಿಕಿತ್ಸೆಯನ್ನು ತೆಗೆದುಕೊಂಡು ಗುಣಮುಖರಾಗಬಹುದು.

    ಆತ್ಮ ಸ್ಥೈರ್ಯ ಮತ್ತು ಸ್ವಾವಲಂಬನೆ ಮುಖ್ಯ

    ಈ ಸಂದರ್ಭದಲ್ಲಿ ಬಹಳ ಮುಖ್ಯವಾಗಿ ಸೋಂಕಿತರಿಗೆ ಇರಬೇಕಾಗಿದ್ದು, ಆತ್ಮ ಸ್ಥೈರ್ಯ ಮತ್ತು ಸ್ವಾವಲಂಬನೆ (self reliance). ಮಾನಸಿಕ ಆರೋಗ್ಯವನ್ನು ಕೆಡಿಸಿಕೊಳ್ಳದೆ, ಧೈರ್ಯವಾಗಿ ಪರಿಸ್ಥಿತಿಯನ್ನು ಹೆದರಿಸುವ ಮನಸ್ಥಿತಿ ಮತ್ತು ಧೃಡತೆ ಬಹಳ ಮುಖ್ಯ. ಈ ರೋಗವು, ಒಬ್ಬರಿಂದ ಒಬ್ಬರಿಗೆ ಬಹಳ ಬೇಗ ಹರಡುವುದರ ಕಾರಣ, ಯಾರೂ ಸಹ ಸೋಂಕಿತನ ನೇರ ಸಂಪರ್ಕಕ್ಕೆ ಬರುವುದಿಲ್ಲ. ಇಂತಹ ಸಮಯದಲ್ಲಿ ಸ್ವಾವಲಂಬನಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸ್ವಾವಲಂಬನೆ ಅಂದರೆ, ಅನ್ಯರ ಸಹಾಯಕ್ಕೆ ಅವಲಂಬಿಸಿದೆ, ಸ್ವಂತ ಶಕ್ತಿ, ಸಾಮರ್ಥ್ಯ ಹಾಗೂ ಸಂಪನ್ಮೂಲಗಳನ್ನು ಅವಲಂಬಿಸುವುದು. ಮಾನಸಿಕವಾಗಿ ನೊಂದುಕೊಳ್ಳದೆ, ಸ್ವಾವಲಂಬಿಯಾಗುವುದು ಬಹಳ ಮುಖ್ಯ.

    ಸ್ವಾವಲಂಬನೆಯಿಂದ ಹಲವಾರು ಅನುಕೂಲಗಳನ್ನು ಸಹ ನಾವು ಕಾಣಬಹುದು. ನಮ್ಮ ಸಾಮರ್ಥ್ಯವೇನು ಎಂದು ತಿಳಿದುಕೊಳ್ಳಲು ಅವಕಾಶ, ನಮ್ಮ ಚೈತನ್ಯವನ್ನು ವೃದ್ಧಿಸಿಕೊಳ್ಳಲು ಅವಕಾಶ, ಮನಸ್ಸು ದೃಢಗೊಳ್ಳುವಿಕೆ, ಜವಾಬ್ದಾರಿಯುತ ನಡತೆ, ಹೀಗೆ ಹಲವಾರು ಸಕರಾತ್ಮಕ ಪರಿಣಾಮಗಳು, ನಮಗೆ ತಿಳಿಯದೇ ನಮ್ಮ ವ್ಯಕ್ತಿತ್ವದಲ್ಲುಂಟಾಗುತ್ತವೆ.

    ಅಭಿವೃದ್ಧಿಯ ದೃಷ್ಟಿಯಿಂದ ದೇಶಕ್ಕೂ ಸಹ ಸ್ವಾವಲಂಬನೆ ಬಹಳ ಮುಖ್ಯ. 2020ರ ಮೇ ತಿಂಗಳಿನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು “ಸ್ವಾವಲಂಬನೆ ಕೇಂದ್ರದ ನೀತಿಯ ಮೂಲ ಉದ್ದೇಶ ಹಾಗೂ ದೇಶದ ನೂತನ ಪದ್ಧತಿ” ಎಂದು ನುಡಿದರು. “ಆತ್ಮ ನಿರ್‌ ಭರ್‌ ಭಾರತ್”‌ ಕಾರ್ಯಕ್ರಮವನ್ನು ಘೋಷಿಸಿದರು.

    ಉದಾಹರಣೆಗೆ ಕೋವಿಡ್‌ ವಿರುದ್ಧ ನಡೆಯುತ್ತಿರುವ ಸಂಗ್ರಾಮದಲ್ಲಿ ಬಹಳ ಮುಖ್ಯವಾದ ಲಸಿಕೆ ಕಾರ್ಯಕ್ರಮವನ್ನು ತೆಗೆದುಕೊಳ್ಳೋಣ. ಚಾರಿತ್ರಿಕವಾಗಿ, ನಮ್ಮ ದೇಶದಲ್ಲಿ ಸಿಡುಬು ಕಾಯಿಲೆ ವಿರುದ್ಧದ ಲಸಿಕೆಯನ್ನು ಮೊಟ್ಟ ಮೊದಲಿಗೆ 1802ರಲ್ಲಿ ಇಂಗ್ಲೆಂಡಿನಿಂದ ತರಿಸಿಕೊಳ್ಳಲಾಯಿತು. 1802ರ ಜೂನ್‌ 14ರಂದು, ಮುಂಬೈ ನಗರದ ಮಗುವಿಗೆ ಮೊದಲ ಲಸಿಕೆಯನ್ನು ನೀಡಲಾಯಿತು. ನಂತರ, 1897ರಲ್ಲಿ ಪ್ಲೇಗ್‌ ವಿರುದ್ಧದ ಲಸಿಕೆಯನ್ನು ಮೊಟ್ಟ ಮೊದಲಿಗೆ ನಮ್ಮ ದೇಶದಲ್ಲಿ ತಯಾರು ಮಾಡಲಾಯಿತು. ಕಳೆದ ನೂರ ಇಪ್ಪತ್ತು ವರ್ಷಗಳಲ್ಲಿ ಲಸಿಕೆ ತಯಾರು ಮಾಡುವ ಕ್ಷೇತ್ರದಲ್ಲಿ ಅಪಾರವಾದ ಅಭಿವೃದ್ಧಿಯನ್ನು ಸಾಧಿಸಲಾಗಿದೆ. ನಮ್ಮ ದೇಶದ ಜನಸಂಖ್ಯೆಯ ನಿಬಂಧನೆಗೊಳಪಟ್ಟು, ಸ್ವಾವಲಂಬಿಗಳಾಗಿದ್ದೇವೆ ಎಂದು ಹೇಳಬಹುದು.

    ಕೋವಿಡ್‌ ಲಸಿಕೆಯ ಅವಶ್ಯಕತೆಯ ಬಗ್ಗೆ ಅವಲೋಕಿಸೋಣ. ನಮ್ಮ ದೇಶದ ಜನಸಂಖ್ಯೆ ನೂರ ಮೂವತ್ತು ಕೋಟಿ. ಇಷ್ಟು ಜನಸಂಖ್ಯೆಗೆ, ಎರಡು ಡೋಸ್‌ ಗಳ ಲೆಕ್ಕದಲ್ಲಿ ಎಷ್ಟು ಲಸಿಕೆಗಳು ಅವಶ್ಯಕತೆಯಿದೆ ಎಂದು ನೀವೆ ಊಹಿಸಿಕೊಳ್ಳಿ. ಅಧಿಕ ಸಂಖ್ಯೆಯಲ್ಲಿ ಲಸಿಕೆಯನ್ನು ತಯಾರು ಮಾಡುವ ಸಾಮರ್ಥ್ಯವಿಲ್ಲದಿದ್ದ ಪಕ್ಷದಲ್ಲಿ, ಬೇರೆ ದೇಶಗಳಿಂದ ಆಮದು ಮಾಡಿಕೊಂಡು, ಲಸಿಕೆಯನ್ನು ಕೊಡಲು ಸಾಧ್ಯವಾಗುತ್ತಿರಲಿಲ್ಲ. ಮೊದಲ ಹಂತದಲ್ಲಿ ನಮ್ಮ ದೇಶದ ನಾಗರಿಕರು, ಲಸಿಕೆಯನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದ ಸಮಯದಲ್ಲಿ, ಲಸಿಕೆಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಿ, ಪ್ರಶಂಸೆಗೆ ಪಾತ್ರವಾದೆವು. ಈ ಉದಾಹರಣೆ ಒಂದೇ ಸಾಕು, ಸ್ವಾವಲಂಬನೆಯ ಮಹತ್ವವನ್ನು ದೃಢಪಡಿಸಲು.

    ಅಮೇರಿಕಾ ದೇಶದ ಪ್ರಬಂಧಕಾರ ಹಾಗೂ ತತ್ವಜ್ಞಾನಿ ‘ರಾಲ್ಫ್‌ ವಾಲ್ಡೊ ಎಮರ್‌ ಸನ್‌’ ಹೇಳಿರುವಂತೆ, “Self Reliance gives a person in Society the freedom they need to discover one’s true self and attain one’s true independence.”
    ಕೋವಿಡ್‌ 19 ಪಿಡುಗನ್ನು ನಿಯಂತ್ರಿಸುವ, ಹರಡುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು, ಲಾಕ್‌ ಡೌನ್‌ ರೂಪದಲ್ಲಿ ನಿರ್ಬಂಧನೆಗಳನ್ನು ಹೇರಿವೆ. ನಮ್ಮ ಆರೋಗ್ಯದ ದೃಷ್ಟಿಯಿಂದ, ಬೇರೆಯವರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹಾಗೂ ಸಾಮಾಜಿಕ ಜವಾಬ್ದಾರಿಯೂ ಆಗಿರುವುದರಿಂದ, ಮನೆಯಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿಯುಂಟಾಗಿದೆ. ಕಳೆದ ಎರಡು ತಿಂಗಳಿನಿಂದ ನಾವೆಲ್ಲರೂ ಮನೆಯಲ್ಲಿಯೇ ಇದ್ದೇವೆ. ಹೊರಗಡೆ ಬರಲು ಭಯಭೀತರಾಗಿದ್ದೇವೆ.

    ಈ ಪರಿಸ್ಥಿತಿ ಮನುಷ್ಯನ ಸ್ವಾಭಾವಿಕ ವರ್ತನೆಗೆ ವಿರುದ್ಧವಾದದ್ದು. ಅದರಲ್ಲೂ ಯುವಕರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ, ಮನೆಯಲ್ಲಿಯೇ ಕುಳಿತಿರುವುದು ಮಾನಸಿಕವಾಗಿ ಹಿತವಲ್ಲದ ಪರಿಸ್ಥಿತಿ. ಮಾನಸಿಕ ಬೇಸರ, ಸಾಮಾಜಿಕ ಸಂಪರ್ಕ ಕಡಿತಗೊಳಿಕೆ, ಆತಂಕ, ಸಿಟ್ಟು, ನಿರುತ್ಸಾಹ, ಆಶಾಭಂಗ ಭವಿಷ್ಯದ ಬಗ್ಗೆ ಭಯ, ನಿದ್ದೆಯ ವೇಳಾಪಟ್ಟಿಯಲ್ಲಿ ಏರುಪೇರು, ಆಹಾರ ಪದ್ಧತಿಯಲ್ಲಿ ಏರುಪೇರು, ದೇಹಕ್ಕೆ ಸರಿಯಾದ ವ್ಯಾಯಾಮವಿಲ್ಲದೇ ಇರುವುದು ಹೀಗೆ ಹತ್ತು ಹಲವಾರು ಸಮಸ್ಯೆಗಳು ಉದ್ಭವಗೊಳ್ಳಬಹುದು. ಇದರಿಂದ ಆರೋಗ್ಯದ ಮೇಲೆ ಅಗಾಧವಾದ ಪರಿಣಾಮ ಬೀರಬಹುದು. ರಕ್ತದ ಒತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಡಯಾಬಿಟೀಸ್‌, ಉಸಿರಾಟದ ತೊಂದರೆ, ಮಾನಸಿಕ ಕಾಯಿಲೆಗಳು ಹೀಗೆ ಹಲವಾರು ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೆಂದು ಅಧ್ಯಯನಗಳಿಂದ ತಿಳಿದುಬಂದಿದೆ.

    ಇಂತಹ ಪರಿಸ್ಥಿತಿಯಿಂದ ಹೊರಗೆ ಬರಲು, ಆತ್ಮಸ್ಥೈರ್ಯ ಬಹಳ ಮುಖ್ಯ. ಧೈರ್ಯವಾಗಿ ಹೆದರಿಸುವ ಮಾನಸಿಕ ಶಕ್ತಿಯ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಪದ್ಧತಿಗಳನ್ನು ಅನುಸರಿಸಬೇಕಾಗಿದೆ. ಕೆಲವೊಂದು ಕ್ರಮಗಳನ್ನು ಪಟ್ಟಿ ಮಾಡಲಾಗಿದೆ. ಇದನ್ನು Life style Management ಎಂದು ಕರೆಯುತ್ತಾರೆ. ಆರೋಗ್ಯಕರ, ಸಮತೋಲನ ಆಹಾರವನ್ನು ಸೇವಿಸುವುದು. ಒಂದೇ ಬಾರಿ ಹೆಚ್ಚು ಆಹಾರವನ್ನು ತೆಗೆದುಕೊಳ್ಳುವ ಬದಲು, ಸ್ವಲ್ಪ ಸ್ವಲ್ಪವೇ ಹಲವು ಬಾರಿ ಸೇವಿಸುವುದು ಉತ್ತಮ. ಹಣ್ಣು ತರಕಾರಿಗಳನ್ನು ಹೆಚ್ಚು ಸೇವಿಸುವುದು.
    ಹೆಚ್ಚು ಕೊಬ್ಬು, ಸಕ್ಕರೆ ಮತ್ತು ಉಪ್ಪು ಇರುವ ಪದಾರ್ಥಗಳನ್ನು ಕಡಿಮೆ ಸೇವಿಸುವುದು. ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಸೇವಿಸುವುದು. ವ್ಯಾಯಾಮವಿಲ್ಲದೆ ಜಡ ಜೀವನ ಶೈಲಿಯಿಂದ ದೂರವಿರುವುದು. ವ್ಯವಸ್ಥಿತವಾಗಿ ವ್ಯಾಯಾಮ, ಯೋಗ ಮಾಡುವುದು.
    ಹೆಚ್ಚು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು.
    ಚೆನ್ನಾಗಿ ನಿದ್ದೆ ಮಾಡುವುದು, ಕಡಿಮೆ ನಿದ್ದೆಯಿಂದ, ಇಮ್ಯೂನಿಟಿ ಮಟ್ಟ ಕಡಿಮೆಯಾಗುತ್ತದೆ ಎಂಬ ವಿಷಯ ಅಧ್ಯಯನಗಳಿಂದ ತಿಳಿದುಬಂದಿದೆ.
    ಟಿ.ವಿ, ಕಂಪ್ಯೂಟರ್‌ ನೋಡುವ ಮತ್ತು ಕುಳಿತು ಕೆಲಸ ಮಾಡುವುದನ್ನು ಕಡಿಮೆ ಮಾಡುವುದು.

    ನಿಮಗೆ ಇಷ್ಟವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಉದಾಹರಣೆ:- ಓದುವುದು, ಸಂಗೀತ ಕೇಳುವುದು ಇತ್ಯಾದಿ.ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಜೊತೆ ಸಂಪರ್ಕದಲ್ಲಿರುವುದು. ಋಣಾತ್ಮಕ ಸುದ್ಧಿಗಳಿಂದ ದೂರವಿರುವುದು. ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು. ಆಗ, ಋಣಾತ್ಮಕ ವಿಷಯಗಳು, ನಮ್ಮ ಮನಸ್ಸಿಗೆ ಬರದಂತೆ ತಡೆಗಟ್ಟಬಹುದು (Idle brain is a devil’s workshop).
    ಸಕಾರಾತ್ಮಕ ದೃಷ್ಟಿಯನ್ನು ಬೆಳೆಸಿಕೊಳ್ಳುವುದು.

    ಮಕ್ಕಳ ಮೇಲಿನ ಪರಿಣಾಮಗಳು

    ಕೊರೋನಾದಿಂದ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಹೆಚ್ಚು ಪರಿಣಾಮಗಳನ್ನು ನಾವು ಕಾಣಬಹುದು. ಕಳೆದ ಒಂದೂವರೆ ವರ್ಷದಿಂದ ಶಾಲೆಗಳು ಮುಚ್ಚಲ್ಪಟ್ಟಿವೆ. ಪೋಷಕರು, ಮಕ್ಕಳನ್ನು ಹೊರಗಡೆ ಕಳುಹಿಸಲು ಭಯ ಪಡುತ್ತಿದ್ದಾರೆ. ಮನೆಯಲ್ಲಿಯೇ ಮಕ್ಕಳನ್ನು ಕೂಡಿಹಾಕಿದಂತಾಗಿದೆ. ಇದರಿಂದ ಮಕ್ಕಳಿಗೆ ಆಟ, ಶಾಲೆಯ ಪಾಠ, ಸಹಪಾಠಿಗಳ ಜೊತೆ ಕಾಲ ಕಳೆಯುವ, ಆಟವಾಡುವ ಅವಕಾಶಗಳಿಂದ ವಂಚಿತರಾಗಿದ್ದಾರೆ. ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಮಕ್ಕಳಿಗೆ ಬೇಸರ, ಸಿಟ್ಟು, ಆತಂಕ, ಭಯ ಮುಂತಾದ ಋಣಾತ್ಮಕವಾದಂತ ಗುಣಗಳು ಹೆಚ್ಚಾಗಿವೆ. ಭಾವನಾತ್ಮಕವಾಗಿ ಕುಂದಿದ್ದಾರೆ. ಇಂತಹ ಸಮಯದಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾದದ್ದು. ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.

    ಬಹಳ ಮುಖ್ಯವಾಗಿ, ಮೊದಲನೆಯದಾಗಿ ಪೋಷಕರು, ಮಕ್ಕಳ ಜೊತೆ, ಕೋವಿಡ್‌ ಬಗ್ಗೆ ಮಾತನಾಡುವಾಗ, ಆತಂಕಗೊಳ್ಳದೆ, ಪ್ರಶಾಂತಭಾವದಿಂದ ನಕಾರಾತ್ಮಕ ಪದಗಳನ್ನು ಬಳಸದೆ, ಸಂಭಾಷಣೆಯಲ್ಲಿ ತೊಡಗಬೇಕು.ಮಕ್ಕಳು ದೈನಂದಿನ ಕ್ರಮವನ್ನು ಪಾಲಿಸುವಂತೆ ನೋಡಿಕೊಳ್ಳುವುದು. ಸೃಜನಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವಂತೆ ಉತ್ತೇಜಿಸುವುದು.
    ವಿನೋದದಿಂದ ಕೂಡಿದ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಸಹಾಯ ಮಾಡುವುದು. ಪೋಷಕರು, ಮಕ್ಕಳು ಜೊತೆ ಗೂಡಿ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಉತ್ತಮ. ಮಕ್ಕಳ ಅಭಿರುಚಿ, ಆಸಕ್ತಿಗಳಿಗೆ ಅನುಗುಣವಾಗಿ ಉತ್ತೇಜನ ನೀಡುವುದು. ಶೈಕ್ಷಣಿಕವಾಗಿ ಉತ್ತಮವಾಗಿರುವ ವೀಡಿಯೋಗಳನ್ನು, ಬೇರೆ ಡಿಜಿಟಲ್‌ ಮಾಧ್ಯಮಗಳ ಮೂಲಕ ವೀಕ್ಷಿಸಲು ಅನುವು ಮಾಡಿಕೊಡುವುದು. ಉತ್ತಮ ಪುಸ್ತಕಗಳನ್ನು ಓದುವಂತೆ ಉತ್ತೇಜಿಸುವುದು. ಮಕ್ಕಳ ಜೊತೆ, ಪೋಷಕರು ಗುಣಮಟ್ಟದ ಸಮಯವನ್ನು ಕಳೆಯುವುದು. ಯಾವುದೇ ಕಾರಣಕ್ಕೂ ಮಕ್ಕಳು ಧೈರ್ಯ ಹೀನರಾಗದಂತೆ ನೋಡಿಕೊಳ್ಳುವುದು.
    ಆರೋಗ್ಯ ಕಾಪಾಡಿಕೊಳ್ಳಲು, ಕೋವಿಡ್‌ ನಿಯಮಗಳನ್ನು ಪಾಲಿಸುವಂತೆ ತಿಳಿಯಪಡಿಸುವುದು.

    ಕೋವಿಡ್‌ ನಮ್ಮನ್ನು ಬಿಟ್ಟು ಹೋಗಿಲ್ಲ. ಬೇಜವಾಬ್ದಾರಿಯಿಂದ ನಡೆದುಕೊಂಡರೆ ಮತ್ತೆ ಮೂರನೇ ಅಲೆ ಬರುವುದು ಖಂಡಿತ. ಆದ್ದರಿಂದ, ನಾವೆಲ್ಲರೂ ಕೋವಿಡ್‌ ನಿಯಮಗಳಾದ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಪದೇ ಪದೇ ಕೈಗಳನ್ನು ಸಾಬೂನಿನಿಂದ ತೊಳೆಯುವುದು ಈ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ, ಲಸಿಕೆಯನ್ನು ಪಡೆಯುವುದು ಬಹಳ ಮುಖ್ಯ. ಲಸಿಕೆಯೊಂದೇ, ಕೋವಿಡ್‌ ಗೆ ರಾಮಬಾಣ ಎಂಬ ವಿಷಯವನ್ನು ಮರೆಯಬಾರದು.
    Stay home, stay safe, profect yourself and your family.

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ.
    spot_img

    More articles

    4 COMMENTS

    1. ಇದು ಸರ್ಕಾರದ ವಾಣಿಯೇ?
      ಲೇಖನ, ಅತ್ಯುತ್ತಮ. Stay safe, stay well, how long,? Politically thinking, make hey when Sun shines by any means seems like chorus Mantra of political WILL.

    2. Very Good and usefull LEKANA .People must meticulously follow direction given by the medical experts Government should make necessary arrangements to adminlster vaccine in a systamatic way without giving chance for underdealing.A good and timely article.Thanks to the writer. Also thanks to Kannadapress.com.

    LEAVE A REPLY

    Please enter your comment!
    Please enter your name here

    Latest article

    error: Content is protected !!