23.9 C
Karnataka
Monday, May 25, 2026
    Home Blog Page 90

    ದೇಶದ ತೆರಿಗೆ ನೀತಿ ಬಗ್ಗೆ ಸಿದ್ಧರಾಮಯ್ಯ ವ್ಯಾಖ್ಯಾನ


    ಪ್ರಸ್ತುತ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ತೆರಿಗೆ ನೀತಿ ದೇಶದ ಮಧ್ಯಮ ಮತ್ತು ದುಡಿಯುವ ವರ್ಗಗಳ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತು ರಾಜ್ಯ ವಿಧಾನ ಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.


    ಮಹಾಭಾರತದಲ್ಲಿ ಭೀಷ್ಮನು ಧರ್ಮರಾಯನಿಗೆ, ‘ರಾಜನು ತೋಟವನ್ನು ಕಾಯುವ ಮಾಲಿಯಂತಿರಬೇಕೆ ಹೊರತು ಇದ್ದಿಲನ್ನು ಮಾರುವವನಂತಾಗಬಾರದು. ಹಣ್ಣಿನ ಮರಗಳನ್ನು ಕಡಿದು ಇದ್ದಿಲು ಮಾರುವಂತಹ ಸ್ವಭಾವದ ರಾಜನು ಜನಪೀಡಕನಾಗಿರುತ್ತಾನೆ. ಆಕಳನ್ನು ಪ್ರೀತಿಯಿಂದ ಸಾಕುವ ಗೋವಳಿಗನು ನವಿರಾಗಿ ಹಾಲು ಕರೆದುಕೊಳ್ಳುವಂತೆ ತೆರಿಗೆ ಇರಬೇಕು. ಹಾಲು ಕರೆಯುವ ನೆಪದಲ್ಲಿ ರಕ್ತ ಹೀರಿಕೊಂಡರೆ ಹಸು ಮತ್ತು ಕರುಗಳೆರಡೂ ಮರಣ ಹೊಂದುತ್ತವೆ. ಕರುವಿಗೂ ಹಾಲು ಸಿಗುವಂತಾದರೆ ಅದು ಮುಂದೆ ಎತ್ತಾಗಿ ಅಥವಾ ಹಸುವಾಗಿ ರಾಜ್ಯದ ಸಂಪತ್ತನ್ನು ಹೆಚ್ಚಿಸುತ್ತದೆ. ಇಲ್ಲದಿದ್ದರೆ ತೆರಿಗೆ ಮೂಲಗಳೆಲ್ಲ ಬತ್ತಿ ಹೋಗಿ ರಾಜ್ಯ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ತೆರಿಗೆಯು, ದುಂಬಿಯು ಹೂವಿನಿಂದ ಮಕರಂದವನ್ನು ಹೀರುವ ರೀತಿಯಲ್ಲಿರಬೇಕು. ಇದರಿಂದ ಹೂವು ಫಲ ಕಟ್ಟುತ್ತದೆ ಜೇನು ಸಂತತಿಯನ್ನೂ ಹೆಚ್ಚಿಸಿಕೊಳ್ಳುತ್ತದೆ’ ಎಂದು ತೆರಿಗೆ ನೀತಿಯನ್ನು ಬೋಧಿಸುತ್ತಾನೆ. ಮಾತೆತ್ತಿದರೆ ರಾಮಾಯಣ, ಮಹಾಭಾರತದ ಹೆಸರುಗಳನ್ನು ಪ್ರಸ್ತಾಪಿಸುವ ಪ್ರಧಾನಿ ಮೋದಿಯವರಿಗೆ ಯಾರಾದರೂ ಭೀಷ್ಮರ ಈ ಮಾತುಗಳನ್ನು ಓದಿ ಹೇಳಬೇಕು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

    ಮನಮೋಹನ್‌ಸಿಂಗ್ ರವರು ಅಧಿಕಾರದಲ್ಲಿದ್ದಾಗ ಇಡೀ ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆಗಳಲ್ಲಿ ಭಾರತ 5 ನೇ ಸ್ಥಾನದಲ್ಲಿತ್ತು. ಆದರೆ 2020 ರ ಜಿ.ಡಿ.ಪಿ. ಬೆಳವಣಿಗೆಯನ್ನು ಆಧರಿಸಿ ಕೌಶಿಕ್ ಬಸು ಮುಂತಾದ ಅರ್ಥಶಾಸ್ತ್ರಜ್ಞರು ವಿಶ್ವದ 193 ದೇಶಗಳಲ್ಲಿ ಭಾರತ 164 ನೇ ಸ್ಥಾನಕ್ಕೆ ಕುಸಿದಿದೆ ಎಂದು ಅಂದಾಜು ಮಾಡಿದ್ದಾರೆ. ನಮ್ಮ ಪಕ್ಕದಲ್ಲೇ ಇರುವ ಬಾಂಗ್ಲಾದೇಶದ ತಲಾವಾರು ಜಿ.ಡಿ.ಪಿ. ಶೇ. 4 ರಷ್ಟು ಬೆಳವಣಿಗೆ ಹೊಂದಿದೆ. ಬಾಂಗ್ಲಾದಲ್ಲಿ ತಲಾವಾರು ಜಿ.ಡಿ.ಪಿ. 1888 ಡಾಲರ್ ಇದೆ. 2020 ರಲ್ಲಿ ಭಾರತದ ತಲಾವಾರು ಜಿ.ಡಿ.ಪಿ. 1877 ಡಾಲರ್‌ಗೆ ಕುಸಿದಿದೆ. 2014 ರಲ್ಲಿ ಬಾಂಗ್ಲಾದೇಶಕ್ಕಿಂತ ಸುಮಾರು 40 ಪಟ್ಟು ಮುಂದೆ ಇದ್ದ ದೇಶದ ಆರ್ಥಿಕತೆ ನೆಲ ಕಚ್ಚುವಂತಾಗಿದೆ ಎಂದಿದ್ದಾರೆ.

    2004 ರಲ್ಲಿ ವಾಜಪೇಯಿಯವರ ನೇತೃತ್ವದ ಕೇಂದ್ರ ಸರ್ಕಾರವು ಜನರಿಂದ ಶೇ.72 ರಷ್ಟು ಮತ್ತು ಕಾರ್ಪೊರೇಟ್ ಬಂಡವಾಳಿಗರಿಂದ ಶೇ.28 ರಷ್ಟು ತೆರಿಗೆಯನ್ನು ಸಂಗ್ರಹಿಸುತಿತ್ತು. ಆದರೆ 2010 ಕ್ಕೆ ಬರುವ ವೇಳೆಗೆ ಮನಮೋಹನಸಿಂಗ್ ಅವರು ಜನರಿಂದ ಸಂಗ್ರಹಿಸುವ ತೆರಿಗೆಯನ್ನು ಶೇ.58 ಕ್ಕೆ ಇಳಿಸಿದರು. ಕಾರ್ಪೊರೇಟ್ ಕಂಪೆನಿಗಳಿಂದ ಸಂಗ್ರಹಿಸುವ ತೆರಿಗೆಯನ್ನು ಶೇ 28 ರಿಂದ ಶೇ.40 ಕ್ಕೆ ಹೆಚ್ಚಿಸಿದರು. ಅವರು ಅಧಿಕಾರದಿಂದ ಇಳಿದಾಗಲೂ ತೆರಿಗೆ ಸಂಗ್ರಹಣೆಯಲ್ಲಿ ಪರೋಕ್ಷ ತೆರಿಗೆ ಶೇ.63 ಮತ್ತು ಪ್ರತ್ಯಕ್ಷ ತೆರಿಗೆ ಶೇ.37 ರಷ್ಟು ಇತ್ತು.

    ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಇದ್ದರೆ ಜನ ನೆಮ್ಮದಿಯಿಂದಿರುತ್ತಾರೆ. ಆದರೆ ಮೋದಿಯವರ ಸರ್ಕಾರದ ನೀತಿಗಳಿಂದಾಗಿ ಜನರ ಮೇಲಿನ ತೆರಿಗೆ ಹೊರೆ ಹೆಚ್ಚಾಗುತ್ತಿದೆ. ಎಂದರೆ, “15 ನೇ ಹಣಕಾಸು ಆಯೋಗವು ಅಂದಾಜು ಮಾಡಿರುವಂತೆ 2024-25 ಕ್ಕೆ ಕಾರ್ಪೊರೇಟ್ ತೆರಿಗೆ ಸಂಗ್ರಹದ ಗುರಿ ಕೇವಲ ಶೇ. 34.75 ರಷ್ಟು ಹೆಚ್ಚಾಗುತ್ತದೆ. ಅದೇ ಸಂದರ್ಭದಲ್ಲಿ ಜನರು ಪಾವತಿಸುವ ಜಿ.ಎಸ್‌ಟಿ ಯು ಶೇ.45.48 ರಷ್ಟು ಹಾಗೂ ಪೆಟ್ರೋಲ್, ಡೀಸೆಲ್ ಮುಂತಾದವುಗಳ ಮೇಲೆ ವಿಧಿಸುತ್ತಿರುವ ಸುಂಕಗಳು ಶೇ. 62 ರಷ್ಟು ಹೆಚ್ಚಾಗುತ್ತವೆ” ಎಂದಿದೆ. ಅಂದರೆ ಜನರು ಇನ್ನಷ್ಟು ಅನುಭವಿಸಬೇಕಾಗಿದೆ ಎಂದು ಅರ್ಥವಾಗುತ್ತದೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

    ಏಕೆ ಈ ಮಟ್ಟದ ತೆರಿಗೆ ಸುಲಿಗೆ ಎಂದರೆ ಮೋದಿ ಸಮರ್ಥಕರು, “ಕಾಂಗ್ರೆಸ್ ಸರ್ಕಾರ ಮಾಡಿದ್ದ ಸಾಲದ ಬಡ್ಡಿ ತೀರಿಸಲು ಮೋದಿ ಅವರು ತೆರಿಗೆ ವಸೂಲಿ ಮಾಡಿದ್ದಾರೆ” ಎನ್ನುವ ಹಾಸ್ಯಾಸ್ಪದ ಕಾರಣ ನೀಡುತ್ತಿದ್ದಾರೆ.ವಾಸ್ತವ ಏನೆಂದರೆೆ, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 2014 ರ ಮಾರ್ಚ್ವರೆಗೆ 67 ವರ್ಷಗಳ ಆಡಳಿತದಲ್ಲಿ ಮಾಡಿದ್ದ ಸಾಲ 53.11 ಲಕ್ಷ ಕೋಟಿ ರೂಗಳು. ಆದರೆ 2014 ರ ಜೂನ್ ನಿಂದ 2021 ರ ವೇಳೆಗೆ 7 ವರ್ಷದಲ್ಲಿ ಮಾಡಿರುವ ಸಾಲ 82.7 ಲಕ್ಷ ಕೋಟಿ ರೂಪಾಯಿ. ಈ ಎರಡೂ ಸೇರಿ ಈ ವರ್ಷದ ಅಂತ್ಯಕ್ಕೆ 135.87 ಲಕ್ಷ ಕೋಟಿಗಳಾಗುತ್ತವೆ. ಮತ್ತೊಂದು ಕಡೆ ಕಾರ್ಪೊರೇಟ್ ಬಂಡವಾಳಿಗರ ಸುಮಾರು 11 ಲಕ್ಷ ಕೋಟಿಗಳಷ್ಟು ಸಾಲವನ್ನು ಎನ್‌ಪಿಎ (ವಸೂಲಾಗದ ಸಾಲ) ಎಂದು ಘೋಷಿಸಲಾಗಿದೆ. 2018 ರಿಂದ ಈಚೆಗೆ ಕಳೆದ ನಾಲ್ಕು ವರ್ಷಗಳಲ್ಲಿ 7 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ರೈಟ್ ಆಫ್ ಮಾಡಲಾಗಿದೆ ಎನ್ನುತ್ತಾರೆ ಸಿದ್ಧರಾಮಯ್ಯ


    ಭಾರತ ಮತ್ತು ಇತರೆ ದೇಶಗಳ ತೆರಿಗೆ ಪದ್ಧತಿ:

    ಜಗತ್ತಿನ ಮುಂದುವರೆದ ದೇಶಗಳು ಮತ್ತು ನಮ್ಮ ಅಕ್ಕ ಪಕ್ಕದ ದೇಶಗಳ ತೆರಿಗೆ ವ್ಯವಸ್ಥೆ ಹೇಗಿದೆ ಎಂಬುದರ ಮಾಹಿತಿ ಇದು. ಈ ದೇಶಗಳು ಹೇಗೆ ಮುಂದುವರೆದಿವೆ? ಏಕೆ ಮುಂದುವರೆದಿವೆ? ಅತ್ಯಂತ ಕಡಿಮೆ ಕಾರ್ಪೊರೇಟ್ ತೆರಿಗೆ ವಿಧಿಸುತ್ತಿರುವ ದೇಶ ಭಾರತ. ಹಾಗೆಯೇ ಕೋಟ್ಯಂತರ ಆದಾಯವಿರುವವರಿಗೂ ಸಹ ಅತ್ಯಂತ ಕಡಿಮೆ ಆದಾಯ ತೆರಿಗೆ ವಿಧಿಸುತ್ತಿರುವುದೂ ಸಹ ಭಾರತದಲ್ಲೆ. ಆದರೆ ಇದೇ ಸಂದರ್ಭದಲ್ಲಿ ಕಡಿಮೆ ಆದಾಯದವರಿಗೆ 5-10% ತೆರಿಗೆ ಇದೆ. ಅಂದರೆ 10 ಲಕ್ಷ ದುಡಿಯುವವರು ಶೇ. 20 ರಷ್ಟು ತೆರಿಗೆ ಕಟ್ಟಬೇಕು. 15 ಲಕ್ಷದ ಒಂದು ರೂಪಾಯಿ ದುಡಿಯುವವರು ಶೇ.30 ರಷ್ಟು ತೆರಿಗೆ ಕಟ್ಟಬೇಕು. ಅದೇ ಸಂದರ್ಭದಲ್ಲಿ ಸಾವಿರಾರು ಕೋಟಿ ಆದಾಯ ಇರುವವರೂ ಶೇ.30 ಕಟ್ಟಬೇಕು. ನಮ್ಮ ದೇಶದಲ್ಲಿ ಅತಿ ಹೆಚ್ಚು ಆದಾಯವಿರುವವರು ಮತ್ತು ಕಾರ್ಪೊರೇಟ್ ಬಂಡವಾಳಿಗರು ಕಡಿಮೆ ತೆರಿಗೆ ಕಟ್ಟುತ್ತಾರೆ. ಅದೆ ಸಂದರ್ಭದಲ್ಲಿ ಪರೋಕ್ಷ ತೆರಿಗೆ ಕಟ್ಟುವ ನಮ್ಮ ದೇಶದ ಜನರು ಅಮೆರಿಕ, ಚೀನಾ, ಇಂಗ್ಲೆಂಡ್ ಮಾತ್ರವಲ್ಲ ಪಾಕಿಸ್ತಾನ, ಬಾಂಗ್ಲಾದೇಶದ ಜನರಿಗಿಂತಲೂ ಹೆಚ್ಚು ತೆರಿಗೆಯನ್ನು ಪಾವತಿಸುತ್ತಾರೆ.

    2014 ರಲ್ಲಿ 20 ವರ್ಷದ ಯುವಕನಿಗೆ 2024 ರ ವೇಳೆಗೆ 30 ವರ್ಷ ವಯಸ್ಸಾಗುತ್ತದೆ. 30 ವರ್ಷದವರಿಗೆ 40 ವರ್ಷ ವಯಸ್ಸಾಗುತ್ತದೆ. ಅಲ್ಲಿಗೆ ಬದುಕು ಕಟ್ಟಿಕೊಳ್ಳುವ ಅವರ ಕನಸುಗಳೆಲ್ಲ ಕಣ್ಣೆದುರೇ ಕಮರಿ ಹೋಗಿವೆ. ದೇಶವೊಂದರ ದೊಡ್ಡ ಸಂಪತ್ತುಗಳಲ್ಲಿ ಮಾನವ ಸಂಪತ್ತೂ ಒಂದು. ಯಾವ ದೇಶ ದುಡಿಯುವ ಕೈಗಳಿಗೆ ಉದ್ಯೋಗ ನೀಡುತ್ತದೊ ಅಂಥಹ ದೇಶದ ಅಭಿವೃದ್ಧಿ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಆ ದೇಶದ ಆರ್ಥಿಕತೆ ವಿನಾಶದ ಹಾದಿ ಹಿಡಿಯುತ್ತದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.

    ರಫ್ತನ್ನು ಜಾಸ್ತಿ ಮಾಡಿ ಆಮದನ್ನು ಕಡಿಮೆ ಮಾಡಬೇಕು

    ಯಾವುದೇ ದೇಶ ಸ್ವಾವಲಂಬಿಯಾಗುವುದು ಎಂದರೆ ರಫ್ತನ್ನು ಜಾಸ್ತಿ ಮಾಡಿ ಆಮದನ್ನು ಕಡಿಮೆ ಮಾಡಬೇಕು. ಹಾಗಾಗಬೇಕಾದರೆ ಆಮದು ಶುಲ್ಕವನ್ನು ಅಂದರೆ ಕಸ್ಟಮ್ಸ್ ತೆರಿಗೆಗಳನ್ನು ಹೆಚ್ಚಿಸಬೇಕು. ಆದರೆ ಮೇಕ್ ಇನ್ ಇಂಡಿಯಾ ಎಂದು ಘೋಷಣೆ ಮಾಡಿದ ಭಾರತದಲ್ಲಿ ಇಂದು ಆಗುತ್ತಿರುವುದೇನು? 2013-14 ರಲ್ಲಿ ರೂ.32.20 ಲಕ್ಷ ಕೋಟಿ ಮೌಲ್ಯದಷ್ಟು ಆಮದು ಮಾಡುತ್ತಿದ್ದರೆ, 2019-20 ರಲ್ಲಿ ಅದು ಇನ್ನಷ್ಟು ಹೆಚ್ಚಾಗಿ ಹತ್ತತ್ತಿರ ರೂ.35 ಲಕ್ಷ ಕೋಟಿ ಮೌಲ್ಯದಷ್ಟು ವಸ್ತುಗಳ ಆಮದನ್ನು ಮಾಡಿಕೊಳ್ಳಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಘೋಷಣೆ ನಿಜವೇ ಆಗಿದ್ದರೆ, ರಫ್ತಿನ ಪ್ರಮಾಣ ಸಿಕ್ಕಾಪಟ್ಟೆ ಹೆಚ್ಚಾಗಬೇಕಾಗಿತ್ತು. ಆದರೆ ಇಲ್ಲಿ ಸುಮಾರು ರೂ.1.25 ಲಕ್ಷ ಕೋಟಿ ಮೌಲ್ಯದಷ್ಟು 2013-14ಕ್ಕೆ ಹೋಲಿಸಿದರೆ ಕಡಿಮೆ ರಫ್ತು ಮಾಡುತ್ತಿದ್ದೇವೆ.

    2015 ರಲ್ಲಿ ಮನಮೋಹನ್ ಸಿಂಗ್‌ರವರು ಅಧಿಕಾರದಿಂದ ಇಳಿದ ನಂತರದ ವರ್ಷದಲ್ಲೆ ರಫ್ತಿನ ಪ್ರಮಾಣ ರೂ. 19 ಲಕ್ಷ ಕೋಟಿಗಳಿಗೆ ಇಳಿಯಿತು. 2016 ರಲ್ಲಿ ರೂ.19 ಲಕ್ಷ ಕೋಟಿಗಳಿಗಿಂತಲೂ ಕಡಿಮೆಯಾಗುತ್ತದೆ. ಇದೇ ಅವಧಿಯ ಕಸ್ಟಮ್ಸ್ ತೆರಿಗೆಯ ಸಂಗ್ರಹಣೆ ಕೂಡ ವೇಗವಾಗಿ ಕಡಿಮೆಯಾಗುತ್ತಿದೆ. ಅಂದರೆ ಆಮದು ವಸ್ತುಗಳ ಮೇಲೆ ಅತ್ಯಂತ ಕಡಿಮೆ ಮಟ್ಟದ ತೆರಿಗೆಯನ್ನು ವಿಧಿಸಲಾಗುತ್ತಿದೆ. ಕಸ್ಟಮ್ಸ್ ತೆರಿಗೆ 1,72,085 ಕೋಟಿಗಳಿಂದ 1,09,282 ಕೋಟಿ ರೂಗಳಿಗೆ ಇಳಿಕೆಯಾಗಿದೆ. ಆಮದು ಶುಲ್ಕ ಕಡಿಮೆ ಮಾಡಿದರೆ ವಿದೇಶಿ ವಸ್ತುಗಳ ಬೆಲೆ ಕಡಿಮೆಯಾಗಿ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡರೆ ನಿಮ್ಮ ಮೇಕ್ ಇನ್ ಇಂಡಿಯಾ ಘೋಷಣೆ ಬರೀ ಘೋಷಣೆ ಎಂದು ಎನ್ನಿಸಿಕೊಳ್ಳುವುದಿಲ್ಲವೆ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

    ಮೇಕ್ ಇನ್ ಇಂಡಿಯಾ

    ಯಾವಾಗ ಪ್ರಧಾನಿ ಮೋದಿಯವರು ಮೇಕ್ ಇನ್ ಇಂಡಿಯಾ ಎಂದು 2014 ರಲ್ಲಿ ಘೋಷಣೆ ಮಾಡಿದರೋ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿಬಿಟ್ಟರು. ರೇಷ್ಮೆ ಮೇಲಿನ ಆಮದು ತೆರಿಗೆ ಶೇ. 30 ರಿಂದ ಶೇ.5 ಕ್ಕೆ ಇಳಿಯಿತು. ಅನೇಕ ಕೃಷಿ ಉತ್ಪನ್ನಗಳ ಮೇಲಿನ ತೆರಿಗೆ ಕಡಿಮೆಯಾಯಿತು. ಒಂದು ಕೆ.ಜಿ.ಗೆ 750/-ನಂತೆ ಮಾರಾಟವಾಗುತ್ತಿದ್ದ ಮೆಣಸು ಈಗ ರೂ.250/- ಕ್ಕೆ ಇಳಿದು ಬಿಟ್ಟಿದೆ. ರೇಷ್ಮೆ ಬೆಳೆಗಾರರು ಮತ್ತು ರೈತರ ಆತ್ಮಹತ್ಯೆಗಳು ಹೆಚ್ಚಾಗಲು ಇದು ಪ್ರಮುಖ ಕಾರಣ.
    ಇಂಥ ಹಲವಾರು ಕಾರಣಗಳಿಂದಾಗಿ, ಪ್ರಧಾನಿ ಮೋದಿಯವರು ಮಾಡಿದ ಘೋಷಣೆಗಳನ್ನು, ಮಾತುಗಳನ್ನು ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಅರ್ಥ ಮಾಡಿಕೊಂಡರೆ ಮಾತ್ರ ನಿಜ ಏನೆಂದು ಅರ್ಥವಾಗುತ್ತದೆ ಎಂದು ಸಿದ್ಧರಾಮಯ್ಯ ವಿಶ್ಲೇಷಿಸಿದ್ದಾರೆ.

    ಮೇಕ್ರೀ ಸರ್ಕಲ್‌ ಬಳಿ ಬಳ್ಳಾರಿ ರಸ್ತೆ ಮೇಲೆ ಸ್ಕೈವಾಕ್‌ ನಿರ್ಮಾಣಕ್ಕೆ ಭೂಮಿಪೂಜೆ

    ಬೆಂಗಳೂರಿನ ಮೇಕ್ರಿ ವೃತ್ತದ ಬಳಿ ಇರುವ ರಮಣ ಮಹರ್ಷಿ ಧ್ಯಾನ ಕೇಂದ್ರದಿಂದ ಅರಮನೆ ಮೈದಾನಕ್ಕೆ ಪಾದಚಾರಿಗಳಿಗೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ಎಸ್ಕಲೇಟರ್‌ ಸಹಿತ  ಸ್ಕೈವಾಕ್‌ ನಿರ್ಮಾಣ ಕಾಮಗಾರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಬುಧವಾರ ಬೆಳಗ್ಗೆ ಭೂಮಿಪೂಜೆ ನೆರೆವೇರಿಸಿದರು.

    ಬಳ್ಳಾರಿ ಹೆದ್ದಾರಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪಾದಚಾರಿಗಳು ದಾಟುವ ವ್ಯವಸ್ಥೆ ಇಲ್ಲದಿರುವುದರಿಂದ ಬಹಳ ಸಮಸ್ಯೆ ಆಗಿತ್ತಲ್ಲದೆ, ಅಪಘಾತಗಳು ಉಂಟಾಗಿ ಪ್ರಾಣ ನಷ್ಟವೂ ಉಂಟಾಗಿತ್ತು. ವಾಹನ ದಟ್ಟಣಿಯಿಂದ ಕೂಡಿರುವ ಈ ರಸ್ತೆಯಲ್ಲಿ ಸ್ಕೈವಾಕ್‌ ಅಗತ್ಯವನ್ನು ಮನಗಂಡ ಡಿಸಿಎಂ, ಅದರ ನಿರ್ಮಾಣಕ್ಕಿಂದು ಚಾಲನೆ ನೀಡಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿದ ಅವರು. “ಇದು ಅತ್ಯಂತ ಅಗತ್ಯವಾಗಿದ್ದ ಯೋಜನೆ. ಪಾದಚಾರಿಗಳ ಸುರಕ್ಷತೆಗೆ ಬೇಕಾಗಿತ್ತು. ಬಳ್ಳಾರಿ ರಸ್ತೆಯು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾದ್ದರಿಂದ ವಾಹನ ದಟ್ಟಣೆ ಜಾಸ್ತಿ” ಎಂದರು.

    ಪ್ರಕಾಶ್‌ ಆರ್ಟ್ಸ್‌ ಕಂಪನಿಗೆ ಯೋಜನೆ ವಹಿಸಲಾಗಿದ್ದು, ಅವರೇ ಮೇಲು ಸೇತುವೆಯನ್ನು ನಿರ್ಮಾಣ ಮಾಡಿ ನಿರ್ವಹಣೆಯನ್ನೂ ಮಾಡಲಿದ್ದಾರೆ. ಜತೆಗೆ, ವರ್ಷಕ್ಕೆ 12 ಲಕ್ಷ ರೂ. ಪರವಾನಗಿ ಶುಲ್ಕವನ್ನು ಬಿಬಿಎಂಪಿಗೆ ಪಾವತಿಸಲಿದ್ದಾರೆ. ಮೇಲು ಸೇತುವೆಯ ಎರಡೂ ಕಡೆ ಎಸ್ಕಲೇಟರ್‌ಗಳು ಇರುತ್ತವೆ. ಈ ಸೌಲಭ್ಯದಿಂದ ವಿಕಲಾಂಗರು, ಮಹಿಳೆಯರು, ವೃದ್ಧರು ಮತ್ತು ಮಕ್ಕಳಿಗೆ ಅನುಕೂಲವಾಗುತ್ತದೆ. ಜತೆಗೆ ಲಿಫ್ಟ್‌ ಕೂಡ ಇರುತ್ತದೆ ಎಂದರು ಡಿಸಿಎಂ.

    ಈ ಸ್ಕೈವಾಕ್‌ ನಿರ್ಮಾಣಕ್ಕೆ 4 ಕೋಟಿ ರೂ. ವೆಚ್ಚವಾಗುತ್ತಿದ್ದು, ಆರು ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.ಪಾಲಿಕೆ ಮಾಜಿ ಸದಸ್ಯೆ ಸರ್ವಮಂಗಳ ಕೇಶವಮೂರ್ತಿ ಇದ್ದರು.

    ಡಿಗ್ರಿ ಕಾಲೇಜು: ಪ್ರಿನ್ಸಿಪಾಲ್ ಮತ್ತು ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗೆ ಅನುಮತಿ

    ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 310 ಪ್ರಾಂಶುಪಾಲರು ಮತ್ತು 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ರಾಜ್ಯ ಸರಕಾರ ಅನುಮತಿ ನೀಡಿದೆ.

    ಈ ಬಗ್ಗೆ ಸರಕಾರದ ಅಪರ ಮುಖ್ಯಕಾರ್ಯದರ್ಶಿಗಳು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ. ಆಯುಕ್ತರಿಗೆ ಬರೆದ ಪತ್ರ ಕನ್ನಡಪ್ರೆಸ್. ಕಾಮ್ ಗೆ ಲಭ್ಯವಾಗಿದೆ.ವಿಶೇಷ ನೇಮಕಾತಿ ನಿಯಮಗಳ ಅನ್ವಯ ಈ ನೇಮಕಾತಿ ನಡೆಯಲಿದೆ.

    ಆ ಪತ್ರದ ಪ್ರತಿ ಇಲ್ಲಿದೆ.

    ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ನಾಳೆ ಸರಕಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ಕನ್ನಡಪ್ರೆಸ್.ಕಾಮ್ ಗೆ ತಿಳಿಸಿವೆ.

    10 ದಿನದಲ್ಲಿ ಎಲ್ಲ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೂ ಲಸಿಕೆ

    ಇನ್ನು 10 ದಿನಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೂ ಕೋವಿಡ್ ಲಸಿಕೆ ನೀಡುವುದು ಹಾಗೂ ಅಗಸ್ಟ್ ಒಳಗೆ 360 ಘಟಕಗಳಿಂದ ಆಮ್ಲಜನಕ ಉತ್ಪಾದನೆ ಸೇರಿ 2,800 ಟನ್ ಆಕ್ಸಿಜನ್  ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಮಂಗಳವಾರ ರಾಜ್ಯದಲ್ಲಿನ ಆಮ್ಲಜನಕ ವ್ಯವಸ್ಥೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸುವ ಸಂಬಂಧ ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ, ವಿದ್ಯಾರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೋರಿದರು.

    ಸೋಮವಾರ 94,000 ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲಾಯಿತು. ರಾಜ್ಯದೆಲ್ಲೆಡೆ ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಜವಾಬ್ದಾರಿ ವಹಿಸಲಾಗಿದ್ದು, ಇನ್ನು ಹತ್ತು ದಿನದಲ್ಲಿ ಎಂಜಿನಿಯರಿಂಗ್, ಮೆಡಿಕಲ್, ಪ್ಯಾರಾ ಮೆಡಿಕಲ್, ಡಿಪ್ಲೊಮೋ, ಜಿಸಿಐಟಿ, ಐಟಿಐ, ಪಾಲಿಟೆಕ್ನಿಕ್ ಮತ್ತು ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಚುರುಕಾಗಿ ಲಸಿಕೆ ಕೊಡಲಾಗುವುದು. ಅಲ್ಲದೆ, ಮುಖ್ಯಮಂತ್ರಿಗಳ ಕೌಶಲ್ಯ ಯೋಜನೆ ಅಡಿ ನೋಂದಾಯಿಸಿಕೊಂಡಿರುವ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಾಗಲಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ಜೂನ್ ತಿಂಗಳಲ್ಲಿ 60 ಲಕ್ಷ ಲಸಿಕೆ ನೀಡಲಾಗಿದ್ದು, ಜುಲೈನಲ್ಲಿ ಇನ್ನು ಹೆಚ್ಚು ಕೊಡಲಾಗುವುದು. ಈಗಾಗಲೇ ಕೇಂದ್ರದಿಂದ ಉತ್ತಮವಾಗಿ ಲಸಿಕೆ ಪೂರೈಕೆ ಆಗುತ್ತಿದ್ದು, ಖಾಸಗಿ ಕ್ಷೇತ್ರದಿಂದಲೂ ವ್ಯಾಕ್ಸಿನ್ ಪಡೆದು ಜನರಿಗೆ ಕೊಡಲಾಗುವುದು. ಲಸಿಕೆ ಅಭಿಯಾನದಲ್ಲಿ ಇಡೀ ದೇಶದಲ್ಲೇ ರಾಜ್ಯವೂ 3ನೇ ಸ್ಥಾನದಲ್ಲಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಆಕ್ಸಿಜನ್ ಉತ್ಪಾದನೆ & ಸಂಗ್ರಹ:ಎರಡನೇ ಅಲೆಯ ಸಂಕಷ್ಟ ದೃಷ್ಟಿಯಲ್ಲಿ ಇಟ್ಟುಕೊಂಡು ಮೂರನೇ ಅಲೆಗೆ ಸರ್ವ ಸನ್ನದ್ಧವಾಗಿದೆ ಸರಕಾರ. ಆಮ್ಲಜನಕ ಕೊರತೆ ಆಗದಂತೆ ಕಟ್ಟೆಚ್ಚರ ವಹಿಸಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ (ಸರಕಾರಿ & ಖಾಸಗಿ) ಇಲಾಖೆಗಳ ವ್ಯಾಪ್ತಿಯಲ್ಲಿ 400 ಮೆ.ಟನ್ ಆಮ್ಲಜನಕ ಉತ್ಪಾದನೆ ಆಗುವುದಿದೆ. ಕೆಲವೆಡೆ ಈಗಾಗಲೇ ಉತ್ಪಾದನೆ ಆಗುತ್ತಿದ್ದರೆ, ಇನ್ನು ಕೆಲವೆಡೆ ಘಟಕಗಳನ್ನು ಅಳವಡಿಸಲಾಗುತ್ತಿದೆ. ಇನ್ನು ಕೇಂದ್ರ ಸರಕಾರ, ಪಿಎಂ ಕೇರ್, ಸಿಎಸ್ಆರ್ ಹಾಗೂ ರಾಜ್ಯ ಸರಕಾರ ಖರೀದಿ ಮಾಡಿರುವ 40 ಸೇರಿ 187 ಆಮ್ಲಜನಕ ಘಟಕಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ. ಇವುಗಳ ಅಳವಡಿಕೆ ಕಾರ್ಯ ವಿವಿಧ ಹಂತಗಳಲ್ಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

    ಕೆಲ ಘಟಕಗಳು ಈ ತಿಂಗಳ ಒಳಗಾಗಿ ಉತ್ಪಾದನೆ ಆರಂಭಿಸುವುದಿದ್ದು, ಉಳಿದವು ಆಗಸ್ಟ್ ನಲ್ಲಿ ಪೂರ್ಣ ಉತ್ಪಾದನೆ ಶುರು ಮಾಡಲಿವೆ. ವೈದ್ಯಕೀಯ ಶಿಕ್ಷಣ ಇಲಾಖೆಗೆ ಕೇಂದ್ರವು ನೀಡಿರುವ 17 ಸೇರಿ ಸಿ ಎಸ್ ಆರ್ ನಿಂದ ಬಂದಿರುವವು ಸೇರಿ 40 ಆಕ್ಸಿಜನ್ ಜನರೇಟರ್ ಗಳಿವೆ. ಇದಲ್ಲದೆ, ರಾಜ್ಯ ಸರಕಾರ 35 ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಆಕ್ಸಿಜನ್ ಜನರೇಟರ್ ಗಳ ಅಳವಡಿಕೆ ಮತ್ತು ಸಂಗ್ರಹಕ್ಕೆ ಆರ್ಥಿಕ ನೆರವು ನೀಡಲಾಗಿದೆ. ಇಲ್ಲಿಯೂ ಕೂಡ ಅಗಸ್ಟ್ ನಿಂದಲೇ ಆಮ್ಲಜನಕ ಉತ್ಪಾದನೆಯಾಗಲಿದೆ. ಒಟ್ಟು 360 ಘಟಕಗಳಿಂದ ಆಮ್ಲಜನಕ ಲಭ್ಯವಾಗಲಿದೆ. ಜತೆಗೆ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿಪತ್ತು ಪರಿಹಾರ ನಿಧಿ, ಸಿಎಸ್ಆರ್ ನೆರವು ಇತ್ಯಾದಿಗಳಿಂದ ಘಟಕಗಳನ್ನು ಹಾಕಲಾಗಿದೆ. ಬುಧವಾರದ ಹೊತ್ತಿಗೆ ಆ ಮಾಹಿತಿ ಸಿಗುತ್ತದೆ. ರಾಜ್ಯದಲ್ಲಿ ನಿಖರವಾಗಿ ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದನೆ ಆಗುತ್ತದೆ ಎಂಬುದನ್ನು ತಿಳಿದುಕೊಂಡು ಮತ್ತಷ್ಟು ಕ್ರಮ ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

    ಆಮ್ಲಜನಕ ಸಂಗ್ರಹಕ್ಕೂ ಕ್ರಮ:ಆಮ್ಲಜಕನ ಉತ್ಪಾದನೆ ಜತೆಗೆ ಅದರ ಅತ್ಯುತ್ತಮ ಸಂಗ್ರಹಣಾ ವ್ಯವಸ್ಥೆಗೂ ಆದ್ಯತೆ ನೀಡಲಾಗಿದೆ ಎಂದ ಡಿಸಿಎಂ, ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲೇ 1806ಮೆ.ಟನ್ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 500 ಮೆ.ಟನ್ ಆಮ್ಲಜನಕವನ್ನು ಹೆಚ್ಚುವರಿ ಸಂಗ್ರಹ ಮಾಡುವ ಗುರಿ ಇದ್ದು, ಅದಕ್ಕೆ ಬೇಕಾದ ಎಲ್ಲ ಕ್ರಮವನ್ನು ಈಗಾಗಲೇ ವಹಿಸಲಾಗಿದೆ. ಅಗಸ್ಟ್ ತಿಂಗಳ ಒಳಗೆ ಇದೆಲ್ಲ ಪೂರ್ಣವಾಗಿ ಅನುಷ್ಠಾನಕ್ಕೆ ಬರಲಿದೆ ಎಂದರು.

    ಜಾಗತಿಕ ಟೆಂಡರ್:ಆರೋಗ್ಯ ಇಲಾಖೆಯಲ್ಲಿ 1806 ಟನ್ ಸಂಗ್ರಹ ಸಾಮರ್ಥ್ಯದ ಯೋಜನೆಗೆ ಹಣಕಾಸು ಇಲಾಖೆಯ ಒಪ್ಪಿಗೆ ಸಿಕ್ಕ ಕೂಡಲೇ ಜಾಗತಿಕ ಟೆಂಡರ್ ಕರೆಯಲಾಗುವುದು. ನಮ್ಮ ದೇಶದಲ್ಲಿ ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ ಗಳನ್ನು ತಯಾರಿಸುವ ಎರಡೇ ಕಂಪನಿಗಳಿರುವ ಕಾರಣಕ್ಕೆ ಗ್ಲೋಬಲ್ ಟೆಂಡರ್ ಕರೆಯಲಾಗುವುದು ಎಂದು ಡಿಸಿಎಂ ಹೇಳಿದರು.

    ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ತಲಾ 6 ಮೆ.ಟನ್ ಹಾಗೂ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ತಲಾ 20 ಮೆ.ಟನ್ ಸಂಗ್ರಹ ಮಾಡುವ ಗುರಿ ಇದೆ. ಕೆಲ ಮೆಡಿಕಲ್ ಕಾಲೇಜ್ ಗಳಲ್ಲಿ 40-50 ಮೆ.ಟನ್ ಸಂಗ್ರಹ ಸಾಮರ್ಥ್ಯವುಳ್ಳ ಆಕ್ಸಿಜನ್ ಟ್ಯಾಂಕರ್ ಗಳಿವೆ. ಇಂಥ ಟ್ಯಾಂಕರ್ ಗಳನ್ನು ತಯಾರಿಸಲು ಈ ಟೆಂಡರ್ ಕರೆಯಲಾಗುತ್ತಿದೆ. ಈ ಎಲ್ಲ ಲೆಕ್ಕದಂತೆ 2,500-2,800 ಟನ್ ಆಕ್ಸಿಜನ್ ಸಂಗ್ರಹ ಮಾಡುವ ವ್ಯವಸ್ಥೆ ರಾಜ್ಯದಲ್ಲಿ ಆಗಲಿದೆ. ಜತೆಗೆ ಜಂಬೋ ಮತ್ತು ಡ್ಯೂರಾ ಸಿಲಿಂಡರ್ ಗಳ ಮೂಲಕ 45 ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ. ಅಲ್ಲದೆ, 9 ಜಿಲ್ಲೆಗಳಲ್ಲಿ ಆಕ್ಸಿಜನ್ ರೀ ಫಿಲ್ಲಿಂಗ್ ಸೌಲಭ್ಯ ಇಲ್ಲ, ಅದನ್ನೂ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.ಜತೆಗೆ, ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲೇ ಆಕ್ಸಿಜನ್ ಸಂಗ್ರಹ ಘಟಕಗಳಿಲ್ಲ. ಕೂಡಲೇ ಅಳವಡಿಸಿಕೊಳ್ಳಬೇಕು ಎಂದು ಸರಕಾರ ನೊಟೀಸ್ ಜಾರಿ ಮಾಡಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ಆಕ್ಸಿಜನ್ ಬೆಡ್ ಸಂಖ್ಯೆಯೂ ಹೆಚ್ಚಳ:ರಾಜ್ಯದಲ್ಲಿ ಈಗ 58,000 ಆಕ್ಸಿಜನ್ ಬೆಡ್ ಗಳಿದ್ದು, ಈ ಪ್ರಮಾಣವನ್ನು 84,000ಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಜತೆಗೆ, ಎಲ್ಲ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಐಸಿಯು ಘಟಕಗಳನ್ನು ಆದ್ಯತೆಯ ಮೇರೆಗೆ ಅಳವಡಿಸಲಾಗುತ್ತಿದೆ ಎಂದ ಅವರು, ನೀಡಿದರು.

    ಅರಿವಳಿಕೆ ತಜ್ಞ ಡಾ.ರಾಘವೇಂದ್ರ ನೇತೃತ್ವದ ಆಮ್ಲಜನಕ ನಿರ್ವಹಣೆ ಸಮಿತಿ ವರದಿ ನೀಡಿದ್ದು ಆ ಪ್ರಕಾರ ಮೂಲಸೌಕರ್ಯ ಕಲ್ಪಿಸಲು ಕ್ರಮ ಜರುಗಿಸಲಾಗಿದೆ ಎಂದರು.

    ಆರೋಗ್ಯ ಇಲಾಖೆ ಹೆಚ್ವುವರಿ ಮುಖ್ಯ ಕಾರ್ಯದರ್ಶಿ ಜಾವೇದ ಅಕ್ತರ್, ಲಸಿಕೆ ಉಸ್ತುವಾರಿ ಅಧಿಕಾರಿ ವಂದಿತಾ ಶರ್ಮಾ, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿಲ ಕುಮಾರ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಗಿರೀಶ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಇದ್ದರು

    ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪರಿಸರ ಶಿಕ್ಷಣ


    ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಡಾ.ಶ್ಯಾಮಪ್ರಸಾದ್‌ ಮುಖರ್ಜಿ ಸ್ಮರಣಾರ್ಥ ರಾಜ್ಯದಲ್ಲಿ 11 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಬಿಜೆಪಿ ಹಾಕಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನ ಬಿಜೆಪಿ ನಗರ ಕಚೇರಿಯಲ್ಲಿ ಮಂಗಳವಾರ ಡಾ.ಶ್ಯಾಮಪ್ರಸಾದ್ ಮುಖರ್ಜಿ ಜಯಂತಿ ಪ್ರಯುಕ್ತ ಸಸಿಗಳ ಬೀಜದ ಉಂಡೆ ತಯಾರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಪಕ್ಷದ ಯುವಮೋರ್ಚಾ ಕಾರ್ಯಕರ್ತರು ಬೀಜದ ಉಂಡೆಗಳನ್ನು ತಯಾರು ಮಾಡುತ್ತಿದ್ದು, ರಾಜ್ಯದೆಲ್ಲೆಡೆ ಬಹಳ ಉತ್ಸಹಾದಿಂದ ಈ ಕಾರ್ಯ ನಡೆಯುತ್ತಿದೆ ಎಂದರು.

    ಎಲ್ಲೆಲ್ಲಿ ಸಸಿಗಳನ್ನು ನೆಡಬೇಕು ಎಂಬುದನ್ನು ಗುರುತಿಸಲಾಗುವುದು. ಗಿಡವನ್ನು ನೆಟ್ಟ ನಂತರ ಸ್ಥಳೀಯ ಮಟ್ಟದಲ್ಲೇ ಅದನ್ನು ಆರೈಕೆ ಮಾಡುವ ಕೆಲಸವನ್ನೂ ಮಾಡಲಾಗುವುದು ಎಂದು ಡಿಸಿಎಂ ಹೇಳಿದರು.

    ಈ ವರ್ಷದಿಂದಲೇ ಜಾರಿಗೆ ಬರುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪರಿಸರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಎಲ್ಲ ಶೈಕ್ಷಣಿಕ ಹಂತಗಳಲ್ಲೂ ಪರಿಸರವನ್ನು ವಿಶೇಷ ಒತ್ತು ನೀಡಿ ಬೋಧಿಸಲಾಗಿದೆ ಎಂದು ಇದೇ ವೇಳೆ ಉಪ ಮುಖ್ಯಮಂತ್ರಿಗಳು ತಿಳಿಸಿದರು.

    ಭಾರತವು ಕೈಗಾರಿಕೆ ಇನ್ನಿತರೆ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ಹಸಿರನ್ನು ಹೆಚ್ಚಿಸುವ ಕೆಲಸಮಾಡಲಾಗುತ್ತಿದೆ. ಜಾಗತಿಕ ಹವಾಮಾನದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕ್ಕೆ ನಾಯಕತ್ವ ವಹಿಸಿ ಕೆಲಸ ಮಾಡುತ್ತಿದ್ದಾರೆ. ಕಳೆದ 7 ವರ್ಷಗಳಲ್ಲಿ ದೇಶಾದ್ಯಂತ ಅರಣ್ಯದ ಪ್ರಮಾಣ ಶೇ.24ಕ್ಕೆ ವಿಸ್ತರಿಸಲಾಗಿದೆ. ಜತೆಗೆ, ವನ್ಯಜೀವಿಗಳನ್ನು ರಕ್ಷಿಸಿ ಅವುಗಳ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಪಕ್ಷವೂ ಕಾರ್ಯೋನ್ಮುಖವಾಗಿದೆ ಎಂದರು ಅವರು.

    ರಾಜ್ಯದಲ್ಲಿ ಮಾಲಿನ್ಯ ನಿಯಂತ್ರಕ್ಕೆ ಹೆಚ್ಚು ಹೆಚ್ಚಾಗಿ ಅಸಂಪ್ರದಾಯಿಕ ಇಂಧನ ಮೂಲಗಳನ್ನು ಬಳಕೆ ಮಾಡವುದು, ಸೌರಶಕ್ತಿ ಉತ್ಪಾದನೆಗೆ ಒತ್ತು ಹಾಗೂ ಎಲೆಕ್ಟ್ರಿಕ್‌ ವಾಹನಗಳ ಬಳಕೆ ಭಾರೀ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

    ಯುವಮೋರ್ಚಾ ಅಧ್ಯಕ್ಷ ಡಾ.ಸಂದೀಪ್‌, ಪಕ್ಷದ ಕೇಂದ್ರ ವಿಭಾಗದ ಅಧ್ಯಕ್ಷ ಮಂಜುನಾಥ್‌, ಬೆಂಗಳೂರು ಉತ್ತರ ಅಧ್ಯಕ್ಷ ನಾರಾಯಣ ಗೌಡ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ದಶರಥ್‌, ಪ್ರಶಾಂತ್‌, ಅಭಿಲಾಶ್‌ ರೆಡ್ಡಿ, ಪುನೀತ್‌, ಗಂಗಾಧರ್‌, ಅನಿಲ್‌ ಶೆಟ್ಟಿ ಸೇರಿ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

    ಮತ್ತಷ್ಟು ಇಳಿಕೆ ಕಂಡ ಕೋವಿಡ್ ಹೊಸ ಪ್ರಕರಣ;ಪಾಸಿಟಿವಿಟಿ ದರ ಶೇ 2.74

    ದೇಶಾದ್ಯಂತ ಕೋವಿಡ್-19 ಹೊಸ ಪ್ರಕರಣಗಳ ಸಂಖ್ಯೆ ದಿನೇದಿನೆ ಇಳಿಮುಖ ಕಾಣುತ್ತಿದ್ದು, 102ನೇ ದಿನಗಳ ನಂತರ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ 40 ಸಾವಿರ ಮಟ್ಟದಿಂದ ಕೆಳಕ್ಕೆ ಇಳಿದಿದೆ.

    ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 37,566 ಹೊಸ ಪ್ರಕರಣಗಳು ಪತ್ತೆಯಾಗಿವೆ.

    ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇಕಡ 1.82ರಷ್ಟಿದೆ.

    ದೇಶದಲ್ಲಿ ಇಲ್ಲಿಯ ತನಕ 2,93,66,601 ಸೋಂಕಿತರು ಗುಣಮುಖರಾಗಿದ್ದಾರೆ.

    ಕಳೆದ 24 ತಾಸುಗಳಲ್ಲಿ 56,994 ರೋಗಿಗಳು ಗುಣಮುಖರಾಗಿದ್ದಾರೆ.
    ಸತತ 47ನೇ ದಿನದಲ್ಲೂ ದೈನಂದಿನ ಚೇತರಿಕೆ ಪ್ರಮಾಣ ದಿನಿತ್ಯ ಕಾಣಿಸಿಕೊಳಅಳುತ್ತಿರುವ ಹೊಸ ಪ್ರಕರಣಗಳ ಪ್ರಮಾಣವನ್ನು ಹಿಂದಿಕುತ್ತಿದೆ.

    ಒಟ್ಟಾರೆ ಚೇತರಿಕೆ ದರ 96.87%ಗೆ ಸುಧಾರಣೆ ಕಂಡಿದೆ.
    ವಾರದ ಪಾಸಿಟಿವಿಟಿ ದರ 5% ಮಟ್ಟದಿಂದ ಕೆಳಗೆ ಮುಂದುವರಿದಿದ್ದು, ಅದೀಗ 2.74%ಗೆ ತಗ್ಗಿದೆ.

    ದೈನಂದಿನ ಪಾಸಿಟಿವಿಟಿ ದರ(ಸೋಂಕಿತರ ಪ್ರಮಾಣ)ವೂ ಸಹ ಸತತ 22ನೇ ದಿನದಲ್ಲಿ 5% ಮಟ್ಟದಿಂದ ಕೆಳಗಿದ್ದು, ಅದೀಗ 2.12%ಗೆ ಕುಸಿದಿದೆ.

    ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ಇದುವರೆಗೆ 40.81 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

    ದೇಶವ್ಯಾಪಿ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕೆ ಆಂದೋಲನದಡಿ, ಇದುವರೆಗೆ 32.90 ಕೋಟಿ ಲಸಿಕೆ ಡೋಸ್|ಗಳನ್ನು ನೀಡಲಾಗಿದೆ.


    ತೃತೀಯ ಲಿಂಗಿಗಳಗಳನ್ನು ಗೌರವಿಸೋಣ, ಅವರ ಸ್ವಾಭಿಮಾನದ ಬದುಕಿಗೆ ಕೈಜೋಡಿಸೋಣ: ಡಿ.ಕೆ. ಶಿವಕುಮಾರ್

    ‘ಭೂಮಿಯ ಮೇಲೆ ಹುಟ್ಟಿದ ಎಲ್ಲ ಜೀವಿಗೂ ತಮ್ಮದೇ ಆದ ಗೌರವವಿದೆ. ಹೀಗಿರುವಾಗ ಗಂಡು, ಹೆಣ್ಣು, ತೃತೀಯ ಲಿಂಗಿಗಳು ಎಂಬ ತಾರತಮ್ಯ ಸರಿಯಲ್ಲ. ಎಲ್ಲರನ್ನೂ ಸಮಾನವಾಗಿ ಗೌರವಿಸಬೇಕು. ತೃತೀಯ ಲಿಂಗಿಗಳ ಸ್ವಾಭಿಮಾನದ ಬದುಕಿಗೆ ನಾವೆಲ್ಲರೂ ಕೈಜೋಡಿಸೋಣ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

    ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೆಸರಾಂತ ಹೋರಾಟಗಾರ್ತಿ ಡಾ. ಅಕ್ಕಯ್ ಪದ್ಮಶಾಲಿ ಅವರ ಆತ್ಮಕತೆ ಅಕ್ಕಯ್ ಪುಸ್ತಕವನ್ನು ಬೆಂಗಳೂರಿನಲ್ಲಿ ಸೋಮವಾರ ಬಿಡುಗಡೆ ಮಾಡಿ,
    ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು:

    ‘ನಾನು ಇಲ್ಲಿಗೆ ಬರುವ ಪರಿಸ್ಥಿತಿಯಲ್ಲೇ ಇರಲಿಲ್ಲ. ನಾನು ನಿನ್ನೆ ಬೆಳಗ್ಗೆ ಆರೂವರೆಗೆ ಮನೆ ಬಿಟ್ಟು, ಇಂದು ಬೆಳಗ್ಗೆ ಆರೂವರೆಗೆ ವಾಪಾಸಾಗಿದ್ದೇನೆ. ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿ, ಪಕ್ಷದಿಂದ ಪರಿಹಾರ ನೀಡುವ ಕಾರ್ಯಕ್ರಮದಲ್ಲಿದ್ದೆ. ಆ 36 ಕುಟುಂಬಗಳ ಕಥೆ, ಸರ್ಕಾರ, ಅಧಿಕಾರಿಗಳು, ಸೇವೆ ಮಾಡಬೇಕಾದವರು ತೋರಿದ ಪ್ರೀತಿ, ವಾತ್ಸಲ್ಯ, ಮಮಕಾರ ಕೇಳಿದರೆ ನೋವಾಗುತ್ತೆ. ಸದ್ಯದಲ್ಲೇ ನಾನು ಆ ನೋವಿನ ಕಥೆಗಳನ್ನು ಬಿಡುಗಡೆ ಮಾಡುತ್ತೇನೆ.

    ಅಕ್ಕಯ್ ಪದ್ಮಶಾಲಿ ಅವರು ಆತ್ಮಕಥನದಲ್ಲಿ ಕುಟುಂಬ, ಹೊರಗಿನ ಸಮಾಜ ತಮ್ಮನ್ನು ಯಾವ ರೀತಿ ನೋಡುತ್ತಿತ್ತು, ತಮಗಾದ ಗಾಯಗಳು, ಅನುಭವಿಸಿದ ಯಾತನೆಗಳನ್ನು ವಿವರಿಸಿದ್ದಾರೆ.

    ಯಾರೇ ಆಗಲಿ ನೋವು ಅನುಭವಿಸದೇ ಸಾಧನೆ ಮಾಡಲಾಗುವುದಿಲ್ಲ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ನಾನು ಅಧಿಕಾರ ಸ್ವೀಕರಿಸುವಾಗ ಹೇಳಿದ್ದೆ. ಅದೇ ರೀತಿ ಅಕ್ಕಯ್ ಪದ್ಮಶಾಲಿ ಅವರು ಕೂಡ ಅನೇಕ ಪೆಟ್ಟುಗಳನ್ನು ತಿಂದು ಇಂದು ಈ ಮಟ್ಟಕ್ಕೆ ಬಂದು ನಿಂತಿದ್ದಾರೆ. ಅದಕ್ಕಾಗಿ ನನ್ನಿಂದ ಹಿಡಿದು ಅಮೆರಿಕದ ಅಧ್ಯಕ್ಷರವರೆಗೂ ಎಲ್ಲರೂ ಅವರನ್ನು ಕರೆಯುತ್ತಿದ್ದಾರೆ.

    ಒಂದು ರಾಜಕೀಯ ಪಕ್ಷದ ಅಧ್ಯಕ್ಷನಾಗಿ ನಾನು ನಿಮ್ಮ ಜತೆ ಇದ್ದೇನೆ ಎಂದು ಹೇಳಲು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಮೊದಲು ಮನುಷ್ಯತ್ವ. ಆಮೇಲೆ ಗಂಡು, ಹೆಣ್ಣು, ಬೇರೆ, ಬೇರೆ ವಿಚಾರ ಬರುತ್ತವೆ. ಪ್ರತಿಯೊಬ್ಬರೂ ಒಂದೊಂದು ಜೀವ. ಆ ಜೀವಕ್ಕೆ ನಾವು ಏನು ಗೌರವ ಕೊಡಬೇಕೋ ಅದನ್ನು ಕೊಡಬೇಕು. ನಮ್ಮ ಧರ್ಮದಲ್ಲಿ ಇಲಿಯನ್ನು ಗಣೇಶನ ವಾಹನ, ಕಾಗೆಯನ್ನು ಶನೇಶ್ವರನ ವಾಹನ, ನವಿಲು ಸುಬ್ರಹ್ಮಣ್ಯನ ವಾಹನ ಎಂದು ಪೂಜನೀಯ ಸ್ಥಾನ ನೀಡುತ್ತಾ ಬಂದಿದ್ದೇವೆ.

    ನಮ್ಮ ಊರುಗಳಲ್ಲಿ ಈ ಹಿಂದೆ ದೇವರಿಗೆ ಕೋಣಗಳನ್ನು ಬಲಿ ಕೊಡುತ್ತಿದ್ದರು. ಈಗ ಕುರಿ, ಕೋಳಿ ಕೊಡುತ್ತಾರೆ. ಸಂಸ್ಕೃತದಲ್ಲಿ ಒಂದು ಶ್ಲೋಕ ಇದೆ. ಅದರರ್ಥ, ಈ ದೇವರಲ್ಲೂ ಬಹಳ ತಾರತಮ್ಯ ಇದೆ. ದೇವರು ಬಲಿ ತೆಗೆದುಕೊಳ್ಳುವಾಗ ಹುಲಿ, ಆನೆ, ಸಿಂಹವನ್ನು ಬಲಿ ಪಡೆಯುವುದಿಲ್ಲ. ಕುರಿ, ಮೇಕೆ ಅಥವಾ ಕೋಣವನ್ನು ಮಾತ್ರ ಬಲಿ ತೆಗೆದುಕೊಳ್ಳುತ್ತದೆ. ಬಲಿಷ್ಠವಾಗಿರುವುದನ್ನು ಮುಟ್ಟುವುದಿಲ್ಲ. ಅದೇ ರೀತಿ ಈ ಸಮಾಜದಲ್ಲಿ ನೀವು ಬಲಿ ಆಗಿದ್ದೀರಿ.

    ಈ ಹೊಸ ಯುಗದಲ್ಲಿ ಇದನ್ನು ಹೇಗೆ ತಪ್ಪಿಸಬೇಕು? ಈ ವರ್ಗದವರಿಗೆ ಆರ್ಥಿಕ, ಸಾಮಾಜಿಕ, ಮಾನಸಿಕ ಶಕ್ತಿಯನ್ನು ಹೇಗೆ ತುಂಬಬೇಕು ಎಂಬುದರ ಬಗ್ಗೆ ಚಿಂತನೆ ಮಾಡೋಣ. ನೀವೂ ನಾಯಕರಾಗಿ ಬೆಳೆಯಬೇಕು, ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಿಮ್ಮ ಧ್ವನಿ ಇರಬೇಕು. ಆ ಬಗ್ಗೆ ಸೂಕ್ತ ವೇದಿಕೆಯಲ್ಲಿ ಮಾತನಾಡುತ್ತೇನೆ.

    ಬೇರೆ ದೇಶಗಳಲ್ಲಿ ತೃತೀಯ ಲಿಂಗಿಗಳ ವಿಚಾರವಾಗಿ ಸಾಕಷ್ಟು ಚರ್ಚೆ ಆಗುತ್ತಿದೆ. 1988ರಲ್ಲಿ ನಾನು ಉತ್ತರ ಕೊರಿಯಾದ ಪ್ಯೊಗ್ಯೊಂಗ್ ನಲ್ಲಿ ನಡೆದ ವರ್ಲ್ಡ್ ಯೂಥ್ ಅಂಡ್ ಸ್ಟೂಡೆಂಟ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದೆ. ಅಲ್ಲಿ ಎಲ್ಲ ದೇಶಗಳ ಸಂಸ್ಕೃತಿಯ ಪ್ರದರ್ಶನ ಏರ್ಪಡಿಸಲಾಗಿತ್ತು. ಅಲ್ಲಿ ತೃತೀಯ ಲಿಂಗಿಗಳ ಸಂಸ್ಕೃತಿ ಪ್ರದರ್ಶನ ಅತ್ಯುತ್ತಮ ಎಂದು ಆಯ್ಕೆಯಾಯಿತು.

    ಈ ಸಮಾಜದ ಮೂಲ ರಾಮಾಯಣ, ಮಹಾಭಾರತ ಕಾಲದಿಂದಲೂ ಇದೆ. ಅರ್ಜುನ, ಕೃಷ್ಣ ಏನೆಲ್ಲ ರೂಪ ತೊಟ್ಟರು ಎಂಬುದನ್ನು ನೋಡಿದ್ದೇವೆ. ಹೀಗಾಗಿ ನಿಮಗೆ ಯಾವುದೇ ಕೀಳರಿಮೆ ಬೇಡ.

    ಅಕ್ಕಯ್ ಪದ್ಮಶಾಲಿ ಅವರು ರಾಜಕೀಯಕ್ಕೆ ಬಂದಿದ್ದು, ಅವರು ನಮ್ಮ ಜತೆ ಇರುತ್ತಾರೆ. ಅವರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ ಸೂಕ್ತ ವೇದಿಕೆಯಲ್ಲಿ ನಾನು ಈ ಬಗ್ಗೆ ಮಾತನಾಡುತ್ತೇನೆ. ಗಂಡಿನ ರೂಪ ಕಳೆದುಕೊಂಡು, ಹೆಣ್ಣಿನ ರೂಪ ಹೊತ್ತಿರುವ ಈ ವರ್ಗದವರು ಸಮಾಜ ನೀಡಿರುವ ಕೊಡುಗೆಗಳು ಹಾಗೂ ಮನುಷ್ಯರನ್ನು ಮನುಷ್ಯರನ್ನಾಗಿ ನೋಡುತ್ತಾ ಹೇಗೆ ಸಾಗಬೇಕು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಮುನ್ನುಡಿ ನೀಡುತ್ತೇನೆ. ಮಾನವೀಯತೆಯೇ ಒಂದು ಧರ್ಮ. ಅದಕ್ಕೆ ನಾವು ಹೆಚ್ಚಿನ ಗೌರವ ನೀಡಬೇಕು.

    ಈ ಸಮಾಜದವರು ತಮ್ಮ ಕಾಲ ಮೇಲೆ ನಿಂತು ಹೇಗೆ ಜೀವನ ನಡೆಸಬಹುದು ಎಂಬುದರ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲು ನೀವು ಶಕ್ತಿ ತುಂಬಬೇಕು. ಅವರನ್ನು ರಸ್ತೆಯಲ್ಲಿ ಭಿಕ್ಷೆ ಬೇಡಲು ನಿಲ್ಲಿಸಬಾರದು. ಅವರನ್ನು ಕಂಡರೆ ಸಮಾಜ ಗೌರವ ನೀಡುವಂತಾಗಬೇಕು. ಆ ಬಗ್ಗೆ ನೀವು ಚಿಂತನೆ ಮಾಡಬೇಕು. ಮುಂದೆ ನಾವೆಲ್ಲ ಸೇರಿ ಒಟ್ಟಾಗಿ ಕೆಲಸ ಮಾಡೋಣ.

    ಕರಣೆಗೆ ನಿಮ್ಮ ಸವಾಲಿನ ಜೊತೆ ನಾವು ನಿಲ್ಲುತ್ತೇವೆ. ನಿಮ್ಮ ರೀತಿಯಲ್ಲೇ ನಮ್ಮದೂ ಬೇರೆ, ಬೇರೆ ಅನೇಕ ನೋವಿನ ಕಥೆಗಳಿವೆ. ಅದನ್ನು ಬರೆಯುತ್ತಾ ಕೂತರೆ ಬೇರೆಯದೇ ಆಗುತ್ತದೆ. ನಾವು ಅದನ್ನು ಸಹಿಸಿಕೊಂಡು, ಭಕ್ತ ಕುಂಬಾರ ಮಣ್ಣು ತುಳಿದಂತೆ, ತುಳಿಸಿಕೊಂಡು, ತುಳಿಸಿಕೊಂಡು ಸಮಾಜಕ್ಕೆ ಒಳ್ಳೆಯದು ಮಾಡಲು ಪ್ರಯತ್ನಿಸುತ್ತಿದ್ದೇವೆ. ನಾವು, ನೀವೆಲ್ಲ ಸೇರಿ ಕೆಲಸ ಮಾಡೋಣ. ನಾನು ಯಾವಾಗಲು ಹೇಳುವ ಹಾಗೆ ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂಬಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ನಾವು ನಮ್ಮ ಮೂಲವನ್ನು ಮರೆಯುವುದು ಬೇಡ.

    ಖ್ಯಾತ ರಂಗಕರ್ಮಿ ಪ್ರಸನ್ನ, ಸಾಮಾಜಿಕ ಹೋರಾಟಗಾರ್ತಿ ರೂತ್ ಮನೋರಮಾ, ಅಕ್ಕಯ್ ಪದ್ಮಶಾಲಿ, ಲೇಖಕ ಡಾ. ಡೊಮಿನಿಕ್, ಹಿರಿಯ ಪತ್ರಕರ್ತ, ಪ್ರಕಾಶಕ ಜಿ.ಎನ್. ಮೋಹನ್, ಶಾಸಕಿ ಸೌಮ್ಯಾರೆಡ್ಡಿ, ಶಾಸಕ ಎ. ಮಂಜು, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಉಪಸ್ಥಿತರಿದ್ದರು.

    ಜುಲೈ 2ನೇ ವಾರದಲ್ಲಿ 2ನೇ ಪಿಯು ಫಲಿತಾಂಶ

    2020-21ನೇ ಸಾಲಿನ ದ್ವಿತೀಯ ಪಿಯುಸಿ ತರಗತಿಗಳ ಫಲಿತಾಂಶಗಳನ್ನು ಜುಲೈ 2ನೇ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಫಲಿತಾಂಶಗಳನ್ನು ಯಾವ ಆಧಾರದಲ್ಲಿ ಘೋಷಣೆ ಮಾಡಬೇಕೆಂಬ ಕುರಿತು 12 ಮಂದಿ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿಯ ಸಲಹೆಯನ್ನು ಪರಿಶೀಲಿಸಿ ಫಲಿತಾಂಶ ಘೋಷಣೆ ಮಾಡಲಾಗುವುದು.

    ಯಾವುದೇ ವಿದ್ಯಾರ್ಥಿ ಪರೀಕ್ಷೆಯ ಫಲಿತಾಂಶ ಕುರಿತು ಸಂತೃಪ್ತಿ ಇಲ್ಲದೇ ಹೋದಲ್ಲಿ ಮುಂದೆ ಭೌತಿಕವಾಗಿ ನಡೆಯಲಿರುವ ಪರೀಕ್ಷೆಗೆ ಹಾಜರಾಗಬಹುದಾಗಿದೆ ಎಂದು ಸಚಿವರು ಹೇಳಿದರು.

    ರಾಣಿ ಚನ್ನಮ್ಮ ವಿವಿ: ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಜುಲೈ 15ರಿಂದ ಭೌತಿಕ ತರಗತಿ

    ಕೋವಿಡ್ ಲಸಿಕೆ ಪಡೆದ ತಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಜುಲೈ 15ರನಂತರ ಭೌತಿಕ ತರಗತಿಗಳನ್ನು ಆರಂಭಿಸುವುದಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.
    ಎಂ ರಾಮಚಂದ್ರ ಗೌಡ ಅವರು ಪ್ರಕಟಿಸಿದರು.

    ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಇಂದು ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ದೇಶದ ಎಲ್ಲಾ ನಾಗರಿಕರಿಗೂ ಉಚಿತವಾಗಿ ಲಸಿಕೆ ಸಿಗಬೇಕೆಂಬುದು ನಮ್ಮ ಪ್ರಧಾನ ಮಂತ್ರಿಗಳ ಆಶಯ. ಅದರಂತೆ ಸರಕಾರ ಎಲ್ಲೆಡೆಯೂ ಉಚಿತ ಲಸಿಕೆಯ ವ್ಯವಸ್ಥೆ ಮಾಡಿದೆ. ಈ ಸೌಲಭ್ಯವನ್ನು ಬಳಸಿಕೊಂಡು ರಾಜ್ಯದಲ್ಲಿಯೇ ಮೊಟ್ಟ ಮೊದಲನೆಯದಾಗಿ ಸರಕಾರಿ ಕಾಲೇಜೊಂದು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಲು ಮುಂದಾಗಿದ್ದು ಪ್ರಶಂಸನೀಯ ಎಂದರು. ಇದಕ್ಕೆ ಸಹಕಾರ ನೀಡಿದ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಸಿಬ್ಬಂದಿ ವರ್ಗವನ್ನು ಅವರು ಅಭಿನಂದಿಸಿದರು.

    ತಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಮೂರು ಜಿಲ್ಲೆಯ ಕಾಲೇಜುಗಳ ಪ್ರಾಂಶುಪಾಲರು, ಸಂಗೊಳ್ಳಿ ರಾಯಣ್ಣ ಕಾಲೇಜಿನ ಮೇಲ್ಪಂಕ್ತಿಯನ್ನು ಅನುಸರಿಸಿ ತಮ್ಮ ತಮ್ಮ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಿಸಲು ಕಾರ್ಯಪ್ರವೃತ್ತರಾಗುವಂತೆ ಅವರು ಕರೆ ನೀಡಿದರು.ಕೋವಿಡ್ ಲಸಿಕೆಯ ಬಗ್ಗೆ ಯಾವುದೇ ಭೀತಿ ಇಲ್ಲದೆ ವಿದ್ಯಾರ್ಥಿಗಳು ಲಸಿಕೆ ಪಡೆದು ತಮ್ಮ ಮನೆಯವರಿಗೂ ಲಸಿಕೆ ಪಡೆಯಲು ಪ್ರೇರೇಪಿಸುವಂತೆ ಅವರು ಕೋರಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಎಂ ಜಯಪ್ಪ,ಸರ್ಕಾರದ ಆದೇಶದಂತೆ ನಾವು ಮೊದಲ ಹಂತದಲ್ಲಿ 215 ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆಯನ್ನು ನೀಡಿದ್ದೇವೆ. ಮುಂಬರುವ ದಿನಗಳಲ್ಲಿ ಮಹಾವಿದ್ಯಾಲಯದ ಒಟ್ಟು 1450 ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ಕೋವಿಡ್ ಲಸಿಕೆಯನ್ನು ನೀಡಲಾಗುವುದು ಎಂದರು. ಈ ಕಾರ್ಯದಲ್ಲಿ ನೆರವಾದ ವಂಟಮೂರಿ ಕಾಲೋನಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗೆ ಅವರು ಅಭಿನಂದನೆ ತಿಳಿಸಿದರು.

    ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ . ಬಸರಾಜ ಪದ್ಮಶಾಲಿ,
    ವಾಣಿಜ್ಯ ಪ್ರಾಧ್ಯಾಪಕರ ಸಂಘದ ರಾಜ್ಯ ಅಧ್ಯಕ್ಷರಾದ ಪ್ರೊ. ಸಿ ಆರ್ ಗುಡಸಿ ಹಾಗೂ ವಿಶ್ವವಿದ್ಯಾಯಲದ ವೈದ್ಯಾಧಿಕಾರಿ ಡಾ. ಯಶೋಧಾ ಪೋತದಾರ ಅವರು ಉಪಸ್ಥಿತರಿದ್ದರು.ವೈದ್ಯಾಧಿಕಾರಿಗಳಾದ ಡಾ. ಜಯಾನಂದ ಡಿ ಅವರು ಮಾತನಾಡಿ ಲಸಿಕೆ ಹಾಕಿಸಿಕೊಳ್ಳುವ ಅಗತ್ಯವನ್ನು ವಿವರಿಸಿದರು.

    ಉಪಪ್ರಾಚಾರ್ಯರಾದ ಅನಿಲ ರಾಮದುರ್ಗ ಅವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು, ಡಾ ಮಲ್ಲೇಶ ದೊಡ್ಡಲಕ್ಕಣ್ಣವರ ವಂದಿಸಿದರು.ಡಾ ಜ್ಯೋತಿ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು.

    ಜುಲೈ 1 ರಿಂದ ಚಂದನದಲ್ಲಿ ಶಾಲಾ ಪಾಠ ಪ್ರವಚನ ಆರಂಭ

    ಜುಲೈ1ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದ್ದರೂ ಕೋವಿಡ್ ಹಿನ್ನೆಲೆಯಲ್ಲಿ ಭೌತಿಕ ತರಗತಿಗಳು ಆರಂಭವಾಗುತ್ತಿಲ್ಲ. ನಮ್ಮ‌ ಮಕ್ಕಳು ಕಲಿಕೆಯಿಂದ ವಂಚಿತರಾಗದಿರಲು ಕ್ರಿಯಾ ಯೋಜನೆಯನ್ನು ರೂಪಿಸಬೇಕೆನ್ನುವುದು ಎಲ್ಲರ ಒಲವಾಗಿದ್ದು, ಆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಈ ಕುರಿತು ಶಿಕ್ಷಣ ತಜ್ಞರ ಜೊತೆ ಸುದೀರ್ಘ ಸಭೆ‌ ನಡೆಸಲಾಗಿದೆ. ಡಾ.ದೇವಿಶೆಟ್ಟಿ ಅವರ ವರದಿಯನ್ನು ಸಹ ಸಭೆಯಲ್ಲಿ‌ ಅವಲೋಕಿಸಿದ್ದು, ವಿಶೇಷವಾಗಿ ಗ್ರಾಮೀಣ ಭಾಗದ ನಮ್ಮ‌ ಮಕ್ಕಳು ಕಲಿಕೆಯಿಂದ ವಂಚಿತರಾಗದಿರಲು ಕ್ರಿಯಾಯೋಜನೆಯನ್ನು ರೂಪಿಸಬೇಕೆನ್ನುವುದು ಎಲ್ಲರ ಒಲವಾಗಿದೆ ಎಂದು ತಿಳಿಸಿದರು.

    ವಿದ್ಯಾಗಮ 2.0

    ಕಳೆದ ಸಾಲಿನಲ್ಲಿ ನಾವು ಜಾರಿಗೆ ತಂದ ಯಶಸ್ವಿ ಉಪಕ್ರಮವಾದ ವಿದ್ಯಾಗಮ 2.0 ಅನುಷ್ಠಾನ ಮಾಡಬೇಕೆನ್ನುವುದು ಎಲ್ಲರ‌ ಅಪೇಕ್ಷೆಯಾಗಿದೆ. ಆರೋಗ್ಯ ಇಲಾಖೆ ಹಲವಾರು ಆಯಾಮಗಳನ್ನು ಅವಲೋಕಿಸಿ ಶಾಲೆ ತೆರೆಯಲು ಅನುಮತಿಯನ್ನು ನೀಡಬೇಕಾಗುತ್ತದೆ. ಅದಕ್ಕಾಗಿಯೇ, ವಿಷಯ ಪರಿಣಿತರು, ಸರ್ಕಾರದ ತಾಂತ್ರಿಕ‌‌ಸಲಹಾ‌ ಸಮಿತಿ ಸದಸ್ಯರು, ಮಕ್ಕಳ ತಜ್ಞರು ಸೇರಿದಂತೆ ಈ‌ ಬಗ್ಗೆ ನಿರಂತರವಾದ ಸಲಹೆಗಳನ್ನು ನೀಡುವ ಶಿಕ್ಷಣ ಟಾಸ್ಕ್ ಫೋರ್ಸ್ ರಚನೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇನ್ನೆರಡು ಮೂರು ದಿನಗಳಲ್ಲಿ ಈ ಕುರಿತಂತೆ ಅಧಿಕೃತ ಆದೇಶ ಹೊರಬೀಳಲಿದೆ ಎಂದರು.

    ಈ ಸಮಿತಿ ವರ್ಷ ಪೂರ್ತಿ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಅವಲೋಕಿಸಲಿದೆ. ಕಾಲಕಾಲಿಕ ವರದಿಗಳನ್ನು ಸಲ್ಲಿಸಲಿದೆ. ಇಂದಿನ ಸಂದರ್ಭದಲ್ಲಿ‌‌ ಕೇಂದ್ರೀಕೃತ ನಿರ್ಧಾರಗಳಿಗಿಂತಾ ಸ್ಥಳೀಯ ಅವಶ್ಯಕತೆಗೆ‌ ಅನುಗುಣವಾದ‌ ನಿರ್ಧಾರಗಳು‌ ಮುಖ್ಯವಾಗುತ್ತವೆ. ಉದ್ದೇಶಿತ ಟಾಸ್ಕ್ ಫೋರ್ಸ್ ಈ‌ ರೀತಿಯ ನಿರಂತರತೆಗೆ, ಶಿಕ್ಷಣ ಉತ್ತರ ದಾಯಿತ್ವಕ್ಕೆ‌ ಪೂರಕವಾಗಿ‌ ಕಾರ್ಯ ನಿರ್ವಹಿಸಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಕಲಿಕೆಯ‌ ಮಟ್ಟವನ್ನು ಅಳೆಯುವುದು, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ‌ ತರಬಹುದಾದ ಸುಧಾರಣೆಗಳನ್ನು ಅವಲೋಕಿಸುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ಈ‌ ಸಮಿತಿ ನಿರ್ವಹಿಸಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

    ಚಂದನ ಮತ್ತು ದೀಕ್ಷಾ ಪೋರ್ಟಲ್ ನಲ್ಲಿ ಪಾಠಗಳು ಲಭ್ಯ

    ಇನ್ನು ಇದೇ‌ ಜುಲೈ ಒಂದರಿಂದ 1-10 ನೇ ತರಗತಿಗಳ ಮಕ್ಕಳ ಉಪಯೋಗಕ್ಕಾಗಿ ದೂರದರ್ಶನದ‌ ಚಂದನ ವಾಹಿನಿಯ ಮೂಲಕ ಪಾಠಗಳನ್ನು ನಾವು ಪ್ರಾರಂಭಿಸುತ್ತಿದ್ದೇವೆ. ದೀಕ್ಷಾ ಪೋರ್ಟಲ್ ನಲ್ಲಿ ಎಲ್ಲ ಪಾಠಗಳ ವಿಡಿಯೋಗಳು, ಆಡಿಯೋಗಳು ಲಭ್ಯವಾಗುವಂತೆ ಮಾಡಿದ್ದೇವೆ. ಸುಮಾರು 22000 ಇ-ಕಂಟೆಂಟ್ ಅಲ್ಲಿ ಲಭ್ಯವಿದೆ ಎಂದು ಸಚಿವರು ಹೇಳಿದರು.

    ಮಕ್ಕಳ ವಾಣಿ- ಯೂ ಟ್ಯೂಬ್ ಚಾನೆಲ್ ನಲ್ಲಿಯೂ ಪಾಠಗಳು ಲಭ್ಯವಿರಲಿದೆ. ಶಿಕ್ಷಕರು ಮಕ್ಕಳನ್ನು ಸಂಪರ್ಕಿಸಿ ಅವರ ಕಲಿಕೆಯನ್ನು ಪರಾಮರ್ಶೆ‌ ಮಾಡಲಿದ್ದಾರೆ. ಕಳೆದ ಸಾಲಿನಲ್ಲಿ‌ ಆದ ಕಲಿಕೆಯ ನಷ್ಟವನ್ನು ಸರಿತೂಗಿಸುವ ಜವಾಬ್ದಾರಿಯನ್ನು‌ ನಾವು ಹೊರಲಿದ್ದೇವೆ. ಕೋವಿಡ್ ಸಮಯದಲ್ಲಿ ವಾರ್ಷಿಕ‌ ಪರೀಕ್ಷೆಯೆನ್ನುವ ಪರಿಕಲ್ಪನೆಯ ಆಚೆಯೂ ನಾವು ಆಲೋಚನೆ ಮಾಡಬೇಕಾಗಿದೆ. ಅದಕ್ಕಾಗಿ, ಈಗಿನಿಂದಲೇ ಶಿಕ್ಷಕರು ಸಿದ್ಧತೆಗಳನ್ನು ಪ್ರಾರಂಭಿಸಿಕೊಳ್ಳಲಿದ್ದಾರೆ. ನಿರಂತರ ಮೌಲ್ಯಮಾಪನ ಈ ಬಾರಿ‌ ಹಿಂದೆಂದಿಗಿಂತಲೂ ಪರಿಣಾಮಕಾರಿಯಾಗಿರಲಿದೆ ಎಂದು ಸಚಿವರು ಹೇಳಿದರು.

    error: Content is protected !!