23.9 C
Karnataka
Monday, May 25, 2026
    Home Blog Page 89

    ಆಗಸ್ಟ್ 22: ಶಿಕ್ಷಕರ ಅರ್ಹತಾ- KARTET-2021 -ಪರೀಕ್ಷೆ

    ಒಂದರಿಂದ ಎಂಟನೇ ತರಗತಿಗಳ  ಶಾಲಾ ಶಿಕ್ಷಕರ ನೇಮಕಾತಿ ಅರ್ಹತೆ ಪಡೆಯಲು ಅಗತ್ಯವಾದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2021) ಆಗಸ್ಟ್ 22ರಂದು ನಡೆಯಲಿದೆ ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಒಂದರಿಂದ ಐದನೇ ತರಗತಿ ಶಿಕ್ಷಕರಾಗಲು ಟಿಇಟಿಗೆ ಅರ್ಜಿ ಸಲ್ಲಿಸುವವರು ಪಿಯುಸಿ ಹಾಗೂ ಡಿ.ಇಡಿ., ಉತ್ತೀರ್ಣರಾಗಿರಬೇಕು ಹಾಗೂ ಆರರಿಂದ ಎಂಟನೇ ತರಗತಿ ಶಿಕ್ಷಕರಾಗಲು ಅರ್ಜಿ ಸಲ್ಲಿಸುವವರು ಪದವಿ ಮತ್ತು ಡಿ.ಇಡಿ., ಅಥವಾ ಪದವಿಯೊಂದಿಗೆ ಬಿಇಡಿ ಅಥವಾ ಬಿ.ಎ.ಇಡಿ/ ಬಿ.ಎಸ್.ಸಿ.ಇಡಿ ಯಲ್ಲಿ ಉತ್ತೀರ್ಣರಾಗಿರಬೇಕು. ಕೊನೆ ವರ್ಷಗಳ ಡಿಇಡಿ,  ಬಿಇಡಿ, ಬಿಎಇಡಿ/ ಬಿಎಸ್ಸಿಇಡಿ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷೆಯಲ್ಲಿರುವವರೂ ಸಹ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಅರ್ಹ ಅಭ್ಯರ್ಥಿಗಳು ಇಲಾಖೆಯ ವೆಬ್-ಸೈಟ್ ಮೂಲಕ  ಅರ್ಜಿ ಸಲ್ಲಿಸಬಹುದಾಗಿದೆ. ಇಂದಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದ್ದು ಜುಲೈ 20 ಕೊನೆಯ ದಿನವಾಗಿದೆ. ಆ. 22ರಂದು ಬೆಳಗ್ಗೆ 9.30ರಿಂದ 12 ಗಂಟೆ ಮತ್ತು ಮಧ್ಯಾಹ್ನ 2 ಗಂಟೆಯಿಂದ 4.30ರವರೆಗೆ ಪರೀಕ್ಷೆಗಳು ನಡೆಯಲಿವೆ.  ಪತ್ರಿಕೆ 150 ಅಂಕಗಳನ್ನು ಹೊಂದಿರುತ್ತವೆ.  ಪ್ರವೇಶ ಪತ್ರಗಳನ್ನು ದಿನಾಂಕ ಆ. 12ರಿಂದ ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

    ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರವು ಜೀವಿತಾವಧಿಯವರೆಗೆ ಮಾನ್ಯತೆ ಹೊಂದಿರುತ್ತದೆ.  ಹೆಚ್ಚಿನ ಸಂಖ್ಯೆಯ ಅರ್ಹ ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

    ಅದರ ಸಂಪೂರ್ಣ ವಿವರ ಈ ಕೆಳಗಿನ ಪಿಡಿಎಫ್ ಅಡಕದಲ್ಲಿದೆ. ಸ್ಕ್ರಾಲ್ ಮಾಡುವ ಮೂಲಕ ಮುಂದಿನ ಪುಟಗಳನ್ನು ನೋಡಬಹುದು.

    ವೈದ್ಯೋ ನಾರಾಯಣೋ ಹರಿಃ

    ಇಂದು ವೈದ್ಯರ ದಿನ. ದೇಶದ ಆರೋಗ್ಯ ರಕ್ಷಕರಾಗಿರುವ ಇವರಿಗೆ ನಮ್ಮ ನಮನ. ಕೋವಿಡ್ ಸಂಕಟದ ಸಮಯದಲ್ಲಂತೂ ತಮ್ಮ ಜೀವವನನ್ನು ಪಣಕ್ಕಿಟ್ಟೂ ಮುಂಚೂಣಿ ಕಾರ್ಯಕರ್ತರಾಗಿ ನೂರಾರು ಜೀವಗಳನ್ನು ಉಳಿಸಿದ ವೈದ್ಯ ಕುಲಕ್ಕೆ ಕೋಟಿ ನಮಸ್ಕಾರ.

    ಈ ದಿನದಂದು ನಾವು ವೈದ್ಯರಿಗೊಂದು ನಮನ ಎಂಬ ವಿಶೇಷ ಪಾಡ್ಕಾಸ್ಟ್ ಪ್ರಸ್ತುತ ಪಡಿಸುತ್ತಿದ್ದೇವೆ. ನಮ್ಮ ಬಳಗದ ಭಾರತಿ ಶ್ರೀನಿವಾಸ್ ಪಾಡ್ಕಾಸ್ಟ್ ಮೂಲಕ ವೈದ್ಯ ಲೋಕಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

    ಆಲಿಸಿ ಪ್ರತಿಕ್ರಿಯಿಸಿ.

    ದ್ವಿತ್ವ: ಪುನೀತ್ ಅಭಿನಯದ ಹೊಸ ಚಿತ್ರ

    ಯುವರತ್ನ ನಂತರದ ಪುನೀತ್ ರಾಜ್ ಕುಮಾರ್ ಅಭಿನಯಿಸುವ ಹೊಸ ಚಿತ್ರ ಯಾವುದು ಎಂಬ ಅಭಿಮಾನಿಗಳ ನಿರೀಕ್ಷೆಗೆ ಇಂದು ಉತ್ತರ ಸಿಕ್ಕಿದೆ. ಲೂಸಿಯಾ ಪವನ್ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ದ್ವಿತ್ವ ಎಂದು ಹೆಸರಿಡಲಾಗಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ವಿಜಯ್ ಕಿರಗಂದೂರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

    ಇಂದು ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರ ತಂಡ ಇದೊಂದು ವಿಭಿನ್ನ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಲಿದೆ ಎಂದಿದೆ. ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

    ಲಸಿಕೀಕರಣ ಮುಗಿಯುತ್ತಿದ್ದಂತೆ ಕಾಲೇಜು ಆರಂಭ ಕುರಿತು‌ ನಿರ್ಧಾರ


    ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಿಬ್ಬಂದಿಯ ಲಸಿಕೀಕರಣ ಕಾರ್ಯಕ್ರಮವನ್ನು ಚುರುಕುಗೊಳಿಸಬೇಕು. ಸಾಧ್ಯವಾದಷ್ಟು ಇದೇ 7ರೊಳಗೆ ಮುಗಿಸಲು ಆದ್ಯತೆ‌ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಎಲ್ಲ ವಿವಿಗಳ ಕುಲಪತಿಗಳಿಗೆ ಸಲಹೆ ನೀಡಿದರು.

    ಕೋವಿಡ್ ‌ಲಸಿಕೆಯನ್ನು‌ ಹೆಚ್ಚು ತ್ವರಿತವಾಗಿ‌ ಕೊಡಿಸುವ ಸಂಬಂಧ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಗುರುವಾರ ವಿಡಿಯೊ ಸಂವಾದ ನಡೆಸಿದ ನಂತರ ಅವರು‌ ಸುದ್ದಿಗಾರರ ಜತೆ ಮಾತನಾಡಿದರು.

    ರಾಜ್ಯದಲ್ಲಿ ಇನ್ನೆರಡು ತಿಂಗಳ ಒಳಗಾಗಿ ಒಟ್ಟು ಜನಸಂಖ್ಯೆಯಲ್ಲಿ ಶೇ.50ರಷ್ಟು ಜನರಿಗೆ ಲಸಿಕೆ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಭೌತಿಕ ತರಗತಿಗಳು ಆರಂಭಕ್ಕೆ ಮುನ್ನವೇ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕು ಹಾಗೂ ನಿತ್ಯವೂ ಪೂರೈಕೆಯಾಗುವ  ಲಸಿಕೆಯನ್ನು ಸಂಬಂಧಿಸಿದ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿಕೊಂಡು ಪಡೆದುಕೊಳ್ಳಬೇಕು ಎಂದರು.

    ಯಾವುದೇ ಕಾರಣಕ್ಕೂ ಶೈಕ್ಷಣಿಕ ಚಟುವಟಿಕೆ ನಿಲ್ಲಬಾರದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಬಾರದು. ಈ ಹಿನ್ನೆಲೆಯಲ್ಲಿ ಲಸಿಕೆಯೇ ಪರಿಹಾರ. ಇದನ್ನು ಎಲ್ಲ ಕುಲಪತಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಡಿಸಿಎಂ ಹೇಳಿದರು.

    ಎಲ್ಲ ವಿವಿಗಳಲ್ಲಿ ಲಸಿಕೀಕರಣ ಮುಗಿದ ನಂತರ ನೇರ ತರಗತಿಗಳನ್ನು ಆರಂಭ ಮಾಡುವ ಕುರಿತು ನಿರ್ದರಿಸಲಾಗುವುದು., ಈಗ ನಡೆಯುತ್ತಿರುವ ಆನ್‌ಲೈನ್‌ ತರಗತಿಗಳು ಅಬಾಧಿತ ಎಂದರು.

    ಪದವಿ ವಿದ್ಯಾರ್ಥಿಗಳಿಗೆ ಹೆಲ್ಪ್‌ಲೈನ್‌

    ವಿದ್ಯಾರ್ಥಿಗಳಿಗೆ ಈಗಾಗಲೇ ಡಿಜಿಟಲ್‌ ವೇದಿಕೆಗಳ ಮೂಲಕ ಎಲ್ಲ ಮಾಹಿತಿ ಸಿಗುತ್ತಿದ್ದಾಗ್ಯೂ ಅವರ ಮತ್ತಷ್ಟು ಅನುಕೂಲಕ್ಕಾಗಿ ಹೆಲ್ಪ್‌ಲೈನ್‌ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಈ ಸಂದರ್ಭದಲ್ಲಿ ಡಿಸಿಎಂ ಹೇಳಿದರು.

    ಹೆಲ್ಪ್‌ಲೈನ್‌ ವ್ಯವಸ್ಥೆಯನ್ನು ಆಯಾ ವಿವಿ ವ್ಯಾಪ್ತಿಯಲ್ಲಿ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ಸಂಪೂರ್ಣ ಸಹಕಾರವನ್ನು ಸರಕಾರ ನೀಡುತ್ತದೆ. ಕಾಲ್‌ ಸೆಂಟರ್‌ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯ ಆಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಇದೊಂದು ಅತ್ಯುತ್ತಮ ಉಪಕ್ರಮ ಆಗಲಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಡಾ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ಕರಿಸಿದ್ದಪ್ಪ ಸೇರಿದಂತೆ ಮೈಸೂರು, ಮಂಗಳೂರು, ಬೆಳಗಾವಿ, ಶಿವಮೊಗ್ಗ ಮುಂತಾದ ವಿವಿಗಳ ಕುಲಪತಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

    ಸಹಕಾರಿ ಅಧಿಕಾರಿಗಳಿಂದ ರೈತರಿಗೆ ಅನುಕೂಲವಾಗಲಿ

    ಸಹಕಾರ ಸಂಘಗಳಿಗೂ ರೈತರಿಗೂ ನೇರ ಸಂಬಂಧವಿದೆ. ಹೀಗಾಗಿ ಇಲ್ಲಿ ಕೆಲಸ ಮಾಡುವವರು ನೇರವಾಗಿ ಅನ್ನದಾತರಿಗೆ ಸಂಬಂಧಿಸಿದ, ಅವರಿಗೆ ಅನುಕೂಲವನ್ನು ಮಾಡಿಕೊಡುವ ಜವಾಬ್ದಾರಿಯುತ ಸ್ಥಾನದಲ್ಲಿರುತ್ತಾರೆ. ಹೀಗಾಗಿ ಇಲ್ಲಿ ಸಮಯ ಪರಿಪಾಲನೆ, ಶಿಸ್ತು, ಪಾರದರ್ಶಕತೆ ಬಹಳ ಮುಖ್ಯವಾಗುತ್ತದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಪ್ರೊಬೆಷನರಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಕಿವಿಮಾತು ಹೇಳಿದರು.

    ವಿಕಾಸಸೌಧದಲ್ಲಿ ಪ್ರೊಬೆಷನರಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಆಡಳಿತಾತ್ಮಕ ವಿಷಯಗಳ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರ ಸಭೆಯಲ್ಲಿ ಮಾತನಾಡಿದ ಸಚಿವರು, ಇಲ್ಲಿ ಈಗ ನೂತನವಾಗಿ ಸೇರ್ಪಡೆಯಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಇನ್ನೂ 30 ವರ್ಷಗಳ ಕಾಲ ಇಲ್ಲಿಯೇ ಕಾರ್ಯ ನಿರ್ವಹಣೆ ಮಾಡಬೇಕಿದೆ. ಹೀಗಾಗಿ ಸಹಕಾರ ಕ್ಷೇತ್ರ ಮತ್ತು ಇಲಾಖೆಗಳಲ್ಲಿ ಆರಂಭದ 2 ವರ್ಷಗಳಲ್ಲಿ ಕಲಿಯುವ ಕೆಲಸದ ಮೇಲೆ ಮುಂದಿನ ಯಶಸ್ಸು ನಿಂತಿರುತ್ತದೆ ಎಂದು ಸಚಿವರಾದ ಸೋಮಶೇಖರ್ ಅವರು ಹೇಳಿದರು.

    ಸಹಕಾರಿಗಳಿಗೆ ಗೌರವ ಕೊಡಿ
    ಇಲ್ಲಿ ಪ್ರಮುಖವಾಗಿ ಸಹಕಾರಿಗಳಿಗೆ ಗೌರವವನ್ನು ಕೊಡಬೇಕು. 45 ಸಾವಿರ ಸಹಕಾರ ಸಂಘಗಳು ಇದ್ದು, ಬಹುತೇಕ ಸಂಘಗಳು ರೈತರಿಗೆ ಸಂಬಂಧಪಟ್ಟ ಸಹಕಾರಿ ಸಂಘಗಳೇ ಆಗಿವೆ. ಹೀಗಾಗಿ ಇಲ್ಲಿ ಕಾರ್ಯ ನಿರ್ವಹಣೆ ಮಾಡುವವರು ಸೇವಾ ಮನೋಭಾವವನ್ನು ಉಳ್ಳವರಾಗಿರಬೇಕು. ಇಂದಿನ ಕೆಲಸವನ್ನು ಇಂದೇ ಮಾಡಿ ಮುಗಿಸಬೇಕು. ಆಗ ಹೆಚ್ಚಿನ ಹೊರೆ ಯಾರ ಮೇಲೂ ಬೀಳದು ಎಂದು ಸಚಿವರಾದ ಎಸ್ ಟಿ ಎಸ್ ಸಲಹೆ ನೀಡಿದರು.

    ಕುಟುಂಬಕ್ಕೂ ಕೊಡಿ ಸಮಯ
    ಇಲ್ಲಿ ನೀವು ದಕ್ಷತೆಯಿಂದ ಕಾರ್ಯನಿರ್ವಹಣೆಯನ್ನು ಮಾಡಬೇಕು ನಿಜ. ಸಹಕಾರ ಕೆಲಸದ ಜೊತೆ ಜೊತೆಯಲ್ಲಿಯೇ ನೀವು ನಿಮ್ಮ ಕುಟುಂಬದವರಿಗೂ ಸಮಯವನ್ನು ಮೀಸಲಿಡಬೇಕು. ಮತ್ತು ಅವರ, ನಿಮ್ಮ ಆರೋಗ್ಯದ ಕಡೆಯೂ ಗಮನಹರಿಸಿಕೊಳ್ಳಬೇಕು. 100 ವರ್ಷಗಳ ಇತಿಹಾಸ ಇರುವ ಸಹಕಾರಿ ಕ್ಷೇತ್ರಕ್ಕೆ ಇಂದು ಹೊಸದಾಗಿ ಸೇರ್ಪಡೆಗೊಂಡಿರುವ ಯುವ ಸಮೂಹ ನೀವಾಗಿದ್ದೀರಿ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ದಕ್ಷ ಸೇವೆಯನ್ನು ನೀಡಿ. ನಿಮ್ಮ ಅತ್ಯುತ್ತಮ ಸೇವೆಯು ಸಹಕಾರಿ ಇಲಾಖೆಗೆ ಮುಂದಿನ ದಾರಿದೀಪವಾಗಲಿ ಎಂದು ಆಶಿಸುತ್ತೇನೆ ಎಂಬುದಾಗಿ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

    ಮಾಜಿ ಸಹಕಾರ ಸಚಿವರಾದ ಜಿ.ಟಿ.ದೇವೇಗೌಡ , ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ತುಷಾರ್ ಗಿರಿನಾಥ್, ಸಹಕಾರ ಇಲಾಖೆಯ ನಿಬಂಧಕರಾದ ಜಿಯಾವುಲ್ಲ, ಅಪೆಕ್ಸ್ ಬ್ಯಾಂಕ್ ಮ್ಯಾನೇಜಿಂಗ್ ಡೈರೆಕ್ಟರ್ ದೇವರಾಜ್ , ಕೆಎಂಎಫ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ , ಇಲಾಖೆ ಹಿರಿಯ ಅಧಿಕಾರಿಗಳಾದ ದಿವಾಕರ್, ವೆಂಕಟಸ್ವಾಮಿ, ಗೋಪಾಲಕೃಷ್ಣ ರವರು, ಆಪ್ತ ಕಾರ್ಯದರ್ಶಿಗಳಾದ ಶ್ರೀನಿವಾಸ ಗೌಡ , ಸಹಕಾರ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ದಿನೇಶ್ ಗೂಳಿಗೌಡ ರವರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

    ಕನ್ನಮಂಗಲದಲ್ಲಿ ಮಿನಿ ಲಾಲ್ ಬಾಗ್, ಕಾಡುಗೋಡಿಯಲ್ಲಿ ಟ್ರೀ ಪಾರ್ಕ್, ನಿಂಬೆಕಾಯಿಪುರದಲ್ಲಿ ಜನಪದರು ರಂಗಮಂದಿರ ಲೋಕಾರ್ಪಣೆ

    ಬೆಂಗಳೂರಿನ ಜನರ ಜೀವನ ಮಟ್ಟದಲ್ಲಿ ಎಲ್ಲ ರೀತಿಯ ರೀತಿಯಲ್ಲಿಯೂ ಉತ್ಕೃಷ್ಟತೆಯನ್ನು ಸಾಧಿಸುವ ಮೂಲಕ ಬೆಂಗಳೂರನ್ನು ವಿಶ್ವದರ್ಜೆಯ ನಗರವಾಗಿ ರೂಪಿಸುವುದರ, ಜೊತೆಗೆ ಹಸಿರು ಬೆಂಗಳೂರು ಎಂಬ ಹೆಗ್ಗಳಿಕೆಯನ್ನು ಕಾಪಾಡಿಕೊಳ್ಳಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಇಂದು ಕಾಡುಗೋಡಿಯಲ್ಲಿ ವೃಕ್ಷೋದ್ಯಾನ, ಕನ್ನಮಂಗಲದಲ್ಲಿ ಸಸ್ಯಶಾಸ್ತ್ರೀಯ ತೋಟ ,ಕನ್ನಮಂಗಲ ಕೆರೆ ಉದ್ಘಾಟನಾ ಕಾರ್ಯಕ್ರಮ ಹಾಗೂ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಪರಿವೀಕ್ಷಣೆ ಹಾಗೂ ಜನಪದರು ರಂಗ ಮಂದಿರ ಉದ್ಘಾಟನೆ ಸಮಾರಂಭಗಳಲ್ಲಿ ಪಾಲ್ಗೊಂಡ ಅವರು ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದ್ದು, ಮೂಲಸೌಕರ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಹಸರೀಕರಣ, ಸ್ವಚ್ಚತೆ ಹಾಗೂ ಸುಗಮ ಸೇವಾ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

    ಪರಿಸರ ಸಂರಕ್ಷಣೆ, ಹಸಿರೀಕರಣಗಳ ಕಡೆ ಇಂದು ಬೆಂಗಳೂರು ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಕಾಡುಗೋಡಿಯ ಟ್ರೀ-ಪಾರ್ಕ್, ಕನ್ನಮಂಗಲದ ಸಸ್ಯೋದ್ಯಾನ, ಅಭಿವೃದ್ಧಿ ಪಡಿಸಲಾದ ಕನ್ನಮಂಗಲ ಕೆರೆ, ನಿಂಬೆಕಾಯಿಪುರದ ಗ್ರಾಮದ “ಜನಪದರು” ರಂಗಮಂದಿರವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ.ಕಾಡುಗೋಡಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ 22 ಎಕರೆಯಲ್ಲಿ ನಿರ್ಮಾಣವಾಗಿರುವ ಟ್ರೀ ಪಾರ್ಕ್ ಹಸಿರು ಬೆಂಗಳೂರು ನಿರ್ಮಾಣಕ್ಕೆ ಪೂರಕವಾಗಿದೆ ಎಂದರು.

    ಕಾಡುಗೋಡಿಯ ಟ್ರೀ-ಪಾರ್ಕ್

    ಬೆಂಗಳೂರು ಮಿಷನ್-2022ರಲ್ಲಿ ಬೆಂಗಳೂರು ನಾಗರಿಕರಿಗೆ ಉತ್ತಮ ಹಸಿರು ಪರಿಸರವನ್ನು ಒದಗಿಸುವ ನಮ್ಮ ವಚನಕ್ಕೆ ಬದ್ಧರಾಗಿರುವುದಕ್ಕೆ ಈ ವೃಕ್ಷೋದ್ಯಾನ ಸಾಕ್ಷಿಯಾಗಿದೆ. ಈ ವೃಕ್ಷೋದ್ಯಾನದಲ್ಲಿ ರಾಶಿವನ, ನಕ್ಷತ್ರವನ, ಹಾಗೂ ಔಷಧಿಯ ಸಸಿಗಳನ್ನು ನೆಡಲಾಗಿದ್ದು, ಸಾರ್ವಜನಿಕರ ವಿಹಾರಕ್ಕೆ ಅನುಕೂಲತೆಗಳು ಹಿರಿಯ ನಾಗರಿಕರಿಗೆ ಒಪನ್-ಜಿಮ್, ಮಕ್ಕಳಿಗೆ ಆಟದ ಅಂಗಳ ಹಾಗೂ ನೈಸರ್ಗಿಕ ಪಥಗಳ ನಿರ್ಮಾಣವಾಗಿರುವುದು ಈ ಭಾಗದ ಸಾವಿರಾರು ನಾಗರಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಅಟಲ್ ಬಿಹಾರಿ ಸಸ್ಯಶಾಸ್ತ್ರೀಯ ತೋಟ

    ಬೆಂಗಳೂರು ಪೂರ್ವದ ಕನ್ನಮಂಗಲದಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ನಿರ್ಮಿಸಿರುವ 70ಎಕರೆ ಸಸ್ಯಶಾಸ್ತ್ರೀಯ ತೋಟ (ಮಿನಿ ಲಾಲ್‍ಬಾಗ್) ಇನ್ನು ಮುಂದೆ ಮಾಜಿ ಪ್ರದಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಯವರ ಸ್ಮರಣಾರ್ಥ ಅಟಲ್ ಬಿಹಾರಿ ಸಸ್ಯಶಾಸ್ತ್ರೀಯ ತೋಟ ಎಂದು ಕರೆಯಲ್ಪಡುತ್ತದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದರು.ಉತ್ಕೃಷ್ಟ ತಳಿಯ ಹಲವು ಹಣ್ಣುಗಳ ಔಷಧಿಗಳ ಗಿಡಗಳು, ಅಲಂಕಾರಿಕಾ ಹಾಗೂ ಸುಗಂಧಿತ ಸಸ್ಯಗಳನ್ನು ಒಳಗೊಂಡ ಈ ಸಸ್ಯ ತೋಟವು ಜೀವ ವೈವಿಧ್ಯತೆಯ ತಾಣವಾಗಿದೆ ಎಂದು ಅವರು ಹೇಳಿದರು.

    ಈಗಾಗಲೇ ಇರುವ ಸಸ್ಯ ಸಂಪತ್ತಿನ ಜೊತೆ, ನಾಗರಿಕರ ಅನುಕೂಲಕ್ಕಾಗಿ ಹಲವಾರು ಸೌಕರ್ಯಗಳನ್ನು ಅಭಿವ್ರದ್ಧಿ ಪಡಿಸಲಾಗಿದೆ. ವಾಯುವಿಹಾರಿಗಳ ಪಥ, ಕುಡಿಯುವ ನೀರಿನ ಘಟಕ, ಶೌಚಾಲಯಗಳು ಒಳಗೊಂಡಂತೆ ಹಲವು ಅಭಿವೃದ್ಧಿ ಕಾರ್ಯಗಳು ಹಮ್ಮಿಕೊಳ್ಳಲಾಗಿದೆ.

    ಮುಂದಿನ ದಿನಗಳಲ್ಲಿ ಈ ಸಸ್ಯಶಾಸ್ತ್ರೀಯ ತೋಟವು ಸಸ್ಯಕಾಶಿಯಾಗಿ ಸಾರ್ವಜನಿಕರಿಗೆ ಶುದ್ದ ಹವೆ, ಆರೋಗ್ಯವಾದ ಬದುಕು ನೀಡಲು ಸಹಾಯವಾಗುತ್ತದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಅರಣ್ಯ ಇಲಾಖೆ ಸಿದ್ಧ ಮಾಡಿರುವ ಟ್ರೀ ಸೆನ್ಸಸ್ ಆಪ್ ಬಿಡುಗಡೆ ಮಾಡಿದರು.

    ಕನ್ನಮಂಗಲ ಕೆರೆ

    ಮಹದೇವಪುರದ ಬಿದರಹಳ್ಳಿ ಹೋಬಳಿಯಲ್ಲಿರುವ ಕನ್ನಮಂಗಲ ಕೆರೆಯನ್ನು ಉದ್ಘಾಟನೆ ಮಾಡಿರುವುದು ನನಗೆ ಸಂತೋಷ ತಂದಿದೆ ಎಂದ ಅವರು ಹದಿನೆಂಟು ಎಕರೆ ಪ್ರದೇಶದಲ್ಲಿರುವ ಕನ್ನಮಂಗಲ ಕೆರೆಯು ಸುಂದರವಾಗಿ ರೂಪುಗೊಂಡಿದೆ, ಸಚಿವರು ಅರವಿಂದ ಲಿಂಬಾವಳಿಯವರ ನೇತೃತ್ವದಲ್ಲಿ ಸ್ಥಳೀಯ ಸ್ವಯಂ ಸೇವಕ ನಿವಾಸಿಗಳ ಗುಂಪಿನ ಸಹಕಾರದೊಂದಿಗೆ ಹೊಸ ರೂಪ ಹೊಂದಿದೆ. ಸ್ಥಳೀಯ ನಿವಾಸಿಗಳು ಹಾಗೂ ಹಲವು ಸಂಸ್ಥೆಗಳು ಇಡೀ ಕೆರೆಯನ್ನು ಸ್ವಚ್ಚಗೊಳಿಸಿ ಅತಿಕ್ರಮಣವನ್ನು ನಿವಾರಿಸಿ ಅಂತರ್ಜಲ ಮಟ್ಟವನ್ನು ಏರಿಸಲು ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
    ಹಳ್ಳಿಗಳಿಗೆ ಅಂತರ್ಜಲದ ಮರುಪೂರಣವನ್ನು ಹೆಚ್ಚಸಲು ಈ ಕೆರೆ ನೆರವಾಗಲಿದೆ ಎಂದರು.

    ನಿಂಬೆಕಾಯಿಪುರದ ಗ್ರಾಮದ “ಜನಪದರು” ರಂಗಮಂದಿರ

    ಈ ಭಾಗದ ಸಂಸ್ಕøತಿಯ ಪ್ರತೀಕವಾಗಿ ಸಿದ್ದಗೊಂಡು ನಿಂತಿರುವ ನಿಂಬೆಕಾಯಿಪುರದ ಗ್ರಾಮದ “ಜನಪದರು” ರಂಗಮಂದಿರವು ಈ ಭಾಗದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆಯಲಿ ಎಂದು ತಿಳಿಸಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರೂ.3.5 ಕೋಟಿ ವೆಚ್ಚದಲ್ಲಿ ಒಂದು ಎಕರೆ ವಿಶಾಲ ಜಾಗದಲ್ಲಿ ನಿರ್ಮಿಸಿರುವ ಈ ರಂಗಮಂದಿರ ಅತ್ಯಂತ ವಿಶಿಷ್ಟವಾದದ್ದು, ಏಕೆಂದರೆ ಭಾರತೀಯ ರಂಗಭೂಮಿ ಮಟ್ಟಿಗೆ ತಿರುಗು ರಂಗಮಂದಿರವನ್ನು (ರಿವಾಲ್ವಿಂಗ್ ಸ್ಟೇಜ್) ಹೊಂದಿರುವ ಏಕೈಕ ರಂಗಮಂದಿರ ಎಂಬ ಹೆಗ್ಗಳಿಕೆ ಇದರದ್ದಾಗಿದೆ ಎಂದು ಅವರು ರಂಗಮಂದಿರ ನಿರ್ಮಾಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಭಾ ಕಾರ್ಯಕ್ರಮದ ನಂತರ ಮಹದೇವಪುರ ಕ್ಷೇತ್ರದ ಮತ್ತೊಂದು ಹಳೆಯ ಮತ್ತು ಇತಿಹಾಸ ಪ್ರಸಿದ್ದವಾದ “ಎಲೆ ಮಲ್ಲಪ್ಪ ಶೆಟ್ಟಿ ಕೆರೆ” ಪರಿವೀಕ್ಷಣೆ ಮಾಡಿದ ಮುಖ್ಯಮಂತ್ರಿಗಳು 508 ಎಕರೆ ವಿಸ್ತೀರ್ಣದ ಈ ಕೆರೆಯನ್ನು ಬೆಂಗಳೂರು – ಮಿಷನ್-2022 ರ ಅಡಿಯಲ್ಲಿ ಅಭಿವೃದ್ಧಿ ಪಡಿಸುವುದರ ಬಗ್ಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ಕುರಿತಂತೆ ಸಮಗ್ರವಾದ ಅಭಿವೃದ್ಧಿ ನೀಲ ನಕ್ಷೆ ಸಿದ್ಧಪಡಿಸಿ, ಶೀಘ್ರದಲ್ಲಿಯೇ ಕಾರ್ಯ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

    ಸಚಿವ ಅರವಿಂದ ಲಿಂಬಾವಳಿ ಮಾತನಾಡಿ ಮಹದೇವಪುರ ಕ್ಷೇತ್ರವನ್ನು ಅಭಿವೃದ್ಧಿಯ ಜೊತೆಗೆ ಹಸಿರೀಕರಣ ಮಾಡಲು ನಿರ್ಧಾರ ಮಾಡಿದ್ದೇವೆ ಕನ್ನಮಂಗಲ ಸಸ್ಯ ತೋಟ, ಕಾಡುಗೋಡಿ ವೃಕ್ಷೋದ್ಯಾನ ಹೇಗೆ ಇದಕ್ಕೆ ಪೂರಕವಾಗಿದೆ ಯೊ ಹಾಗೆಯೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಜನಪದರು ರಂಗಮಂದಿರ ನೆರವಾಗಲಿದೆ ಎಂದರು. ಬೆಂಗಳೂರಿನ ಅತಿ ದೊಡ್ಡ ಕೆರೆಗಳಲ್ಲಿ ಎರಡನೆಯದು ಎಂದು ಹೆಸರು ಪಡೆದ ಎಲ್ಲೇ ಮಲ್ಲಪ್ಪ ಶೆಟ್ಟಿಕೆರೆ ಅಭಿವೃದ್ಧಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಆರ್.ಶಂಕರ್ ಅವರು ಸಹ ಭಾಗವಹಿಸಿದ್ದರು.

    ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ , ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್,ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಶ್ರೀಮತಿ ಮಂಜುಳಾ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ , ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ಕುಮಾರ್ ಗೋಗಿ, ಬಿಬಿಎಂಪಿ ಮುಖ್ಯ ಆಡಳಿತಾಧಿಕಾರಿ ಗೌರವ್ ಗುಪ್ತ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೇ. ಮಂಜುನಾಥ್, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಸೇರಿದಂತೆ ಹಲವಾರು ಗಣ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

    ಡಿಗ್ರಿ ಕಾಲೇಜು ಪ್ರಿನ್ಸಿಪಾಲ್ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿ; ಸಂದರ್ಶನ ಇಲ್ಲ,ಲಿಖಿತ ಪರೀಕ್ಷೆಯೊಂದೇ ಆಧಾರ

    ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿರುವ ಬೆನ್ನಲ್ಲೇ ರಾಜ್ಯ ಸರಕಾರವು ಇನ್ನು ಆರು ತಿಂಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 1,242 ಸಹಾಯಕ ಪ್ರಾಧ್ಯಾಪಕರು ಹಾಗೂ 310 ಪ್ರಾಂಶುಪಾಲರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಪ್ರಕಟಿಸಿದರು.

    ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂದರ್ಶನ ಇಲ್ಲದೆಯೇ ಲಿಖಿತ ಪರೀಕ್ಷೆ ಮೂಲಕವೇ ಇಷ್ಟೂ ಹುದ್ದೆಗಳನ್ನು ತುಂಬಲಾಗುತ್ತಿದೆ ಎಂದರು.

    ಈ ಪ್ರಸ್ತಾವನೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಆರು ತಿಂಗಳ ಒಳಗಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದಲ್ಲದೆ, ಎಲ್ಲ ಪ್ರಕ್ರಿಯೆ ಪಾರದರ್ಶಕವಾಗಿರುತ್ತದೆ.20 ದಿನದೊಳಗೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಅರ್ಹತೆ ಆಧಾರದ ಮೇಲೆಯೇ ಇಡೀ ನೇಮಕಾತಿ ಆಗಲಿದೆ ಎಂದು ಡಿಸಿಎಂ ಹೇಳಿದರು.

    2009ರ ನಂತರ ಪ್ರಾಂಶುಪಾಲರನ್ನು ನೇಮಕಾತಿ ಮಾಡಿರಲಿಲ್ಲ. ಇದಕ್ಕೆ 55 ವರ್ಷ ವಯೋಮಿತಿ ಇದೆ. ಅದೇ 2017ರ ನಂತರ ಸಹಾಯಕ ಪ್ರಾಧ್ಯಾಪಕರ ನೇಮಕವೂ ಆಗಿರಲಿಲ್ಲ ಎಂದ ಅವರು, ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ 500 ಅಂಕಕ್ಕೆ ನಡೆಯುತ್ತದೆ. (ಕನ್ನಡ 100, ಇಂಗ್ಲಿಷ್‌ 100, ಜಿಕೆ 50 ಆಯ್ಕೆ ವಿಷಯಗಳಿಗೆ 250 ಅಂಕ ಇರುತ್ತದೆ.) ಪ್ರಾಂಶುಪಾಲರ ಆಯ್ಕೆ ಪರೀಕ್ಷೆ 100 ಅಂಕ ಇರುತ್ತದೆ. ಎಲ್ಲ ಪ್ರಶ್ನೆಗಳು ಬಹುಆಯ್ಕೆ ಮಾದರಿಯಲ್ಲಿ ಇರುತ್ತವೆ. ಪ್ರಾಥಮಿಕ ಅರ್ಹತೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿರುತ್ತದೆ ಎಂದು ಅವರು ಮಾಹಿತಿ ನೀಡಿದರು.

    ಅರ್ಹತೆಯನ್ನು ಹೊರತುಪಡಿಸಿ ಬೇರೆ ಯಾವ ಮಾನದಂಡವೂ ಈ ನೇಮಕಾತಿಯಲ್ಲಿ ಇರುವುದಿಲ್ಲ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಈ ಕ್ರಮ ವಹಿಸಲಾಗಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು

    ಶಿಕ್ಷಕರ ವರ್ಗಾವಣೆಗೆ ಇಂದಿನಿಂದ ಚಾಲನೆ

    ರಾಜ್ಯದ ಶಿಕ್ಷಕ ಸಮೂಹದ ಬಹುದಿನಗಳ ನಿರೀಕ್ಷೆಯಾಗಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಬುಧವಾರ ಅಧಿಸೂಚನೆ ಹೊರಡಿಸಲಾಗಿದ್ದು, ಶಿಕ್ಷಕರು ಕೌನ್ಸೆಲಿಂಗ್ ಮೂಲಕ ತಮಗೆ ಅನುಕೂಲವಾದ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    2019-20ನೇ ಸಾಲಿನ ಸಾಮಾನ್ಯ ವರ್ಗಾವಣೆಗಳಲ್ಲಿನ ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆಯ ಮೇಲೆ ಅಥವಾ ಸಮರ್ಪಕ ಮರು ಹಂಚಿಕೆಯ ಮೇರೆಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಬಂಧಿಸಿದಂತೆ ತಾಲೂಕಿನ ಹೊರಗೆ ಅಥವಾ ಪ್ರೌಢಶಾಲಾ ಶಿಕ್ಷಕರಿಗೆ ಸಂಬಂಧಿಸಿದಂತೆ ಜಿಲ್ಲೆಯ ಹೊರಗೆ ವರ್ಗಾವಣೆಗೊಂಡ ಶಿಕ್ಷಕರಿಗೆ ವರ್ಗಾವಣೆ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಲೂಕು ಇಲ್ಲವೇ ಜಿಲ್ಲೆಯೊಳಗೆ ಸ್ಥಳ ನಿಯುಕ್ತಿ ಪ್ರಯೋಜನ ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇದರೊಂದಿಗೆ 2020-21ನೇ ಸಾಲಿನ ಮತ್ತು 2021-22ನೇ ಸಾಲಿನ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗಳೂ ನಡೆಯಲಿವೆ ಎಂದು ಅವರು ವಿವರಿಸಿದ್ದಾರೆ.

    ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‍ನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಮತ್ತು ಪ್ರೌಢಶಾಲಾ ಶಿಕ್ಷಕರ ಕೌನ್ಸೆಲಿಂಗ್‍ನ್ನು ಇಲಾಖೆಯ ಆಯಾ ವಿಭಾಗೀಯ ಜಂಟಿ ನಿರ್ದೇಶಕರು ನಡೆಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

    ಜೂ. 30ಕ್ಕೆ ಲಭ್ಯವಿರುವ ಖಾಲಿ ಹುದ್ದೆಗಳ ಮಾಹಿತಿಯನ್ನು ಜು. 12ಕ್ಕೆ ಪ್ರಕಟಿಸಲಾಗುತ್ತದೆ. 2019-20ರಲ್ಲಿ ತಾಲೂಕಿನಿಂದ/ಜಿಲ್ಲೆಯಿಂದ ಹೊರಗೆ ಕಡ್ಡಾಯ/ ಹೆಚ್ಚುವರಿ ಪ್ರಕ್ರಿಯೆಯಲ್ಲಿ ವರ್ಗಾವಣೆಗೊಂಡ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಪಟ್ಟಿಯನ್ನು ಜು. 19ಕ್ಕೆ, ಈಗಾಗಲೇ ವರ್ಗಾವಣೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿರುವ ಶಿಕ್ಷಕರ ಅಂತಿಮ ಪಟ್ಟಿಯನ್ನು ಜು. 22ರಂದು ಪ್ರಕಟಿಸಲಾಗುತ್ತದೆ. ಇದರ ಹೊರತಾದ ಆಸಕ್ತ ಶಿಕ್ಷಕರು ಜೂ. 23ರಿಂದ29ರೊಳಗೆ ಅರ್ಜಿ ಸಲ್ಲಿಸಬಹುದು. ಈ ಎಲ್ಲ ಶಿಕ್ಷಕರ ಕ್ರೂಢೀಕೃತ ತಾತ್ಕಾಲಿಕ ಪಟ್ಟಿಯನ್ನು ಆ. 02ರಂದು ಪ್ರಕಟಿಸಲಾಗುತ್ತದೆ. ಹಾಗೂ ಆಕ್ಷೇಪಣೆಗಳನ್ನು ಆ. 3ರಿಂದ 8ರವರೆಗೆ ಸಲ್ಲಿಸಬಹುದಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಮೇಲಿನ ಪಟ್ಟಿಯಲ್ಲಿನ ಅರ್ಜಿಗಳನ್ನು ಆ. 10ರಿಂದ ಆ.15ರವರೆಗೆ ಪರಿಶೀಲಿಸಿ ಪುರಸ್ಕೃತ/ತಿರಸ್ಕೃತರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ತಿರಸ್ಕೃತ ಪಟ್ಟಿಯಲ್ಲಿನ ಅಹವಾಲುಗಳಿದ್ದರೆ ಆಯಾ ವಿಭಾಗೀಯ ಜಂಟಿ ನಿರ್ದೇಶಕರು ಆ. 17ರಿಂದ 21ರವರೆಗೆ ಆಲಿಸುವರು. ಆ. 30ರಂದು ಕೌನ್ಸೆಲಿಂಗ್ ಜೇಷ್ಠತಾ ಕ್ರಮಾಂಕದ ಪಟ್ಟಿಯನ್ನು ಪ್ರಕಟಿಸಿ ಆ. 31ರಿಂದ ಸೆ.2ವರೆಗೆ ಆಕ್ಷೇಪಣೆಗಳನ್ನು ಸ್ವೀಕರಿಸುವರು. ಸೆ. 6ರವರೆಗೆ ಆಕ್ಷೇಪಣೆಗಳ ಪರಿಶೀಲನೆ ನಡೆಯುವುದು. ಸೆ. 8ರಂದು ಅಂತಿಮ ಕೌನ್ಸೆಲಿಂಗ್ ಅರ್ಹತಾ/ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ ಸೆ. 15ರಿಂದ ಪ್ರಾಥಮಿಕ ಮತ್ತು ಸೆ. 21ರಿಂದ ಪ್ರೌಢಶಾಲಾ ಶಿಕ್ಷಕರಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ. ಆಯಾ ವಿಭಾಗದ ವಿಭಾಗೀಯ ಜಂಟಿ ನಿರ್ದೇಶಕರು ವರ್ಗಾವಣಾ ಕುಂದುಕೊರತೆ ನಿವಾರಣಾಧಿಕಾರಿಯಾಗಿರುತ್ತಾರೆ ಎಂದು ಸಚಿವರು ಹೇಳಿದ್ದಾರೆ.

    ಹೆಚ್ಚುವರಿ/ಕಡ್ಡಾಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜು. 12ರಂದು ಆರಂಭವಾಗಿ ಕೌನ್ಸೆಲಿಂಗ ಸೆ. 21ರಂದು ಮತ್ತು 2020-21ನೇ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜು. 27ರಂದು ಆರಂಭವಾಗಿ 2022ರ ಜನವರಿ 14ರಂದು ಕೌನ್ಸೆಲಿಂಗ್ ನಡೆಯಲಿದೆ ಎಂದು ಸಚಿವರು ವಿವರಿಸಿದ್ದಾರೆ.


    2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು/ ತತ್ಸಮಾನ ವೃಂದದ ಶಿಕ್ಷಕರು ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ಸಹ ಕೌನ್ಸೆಲಿಂಗ್ ಮೂಲಕ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

    ಇದರಲ್ಲಿ ತೀವ್ರ ಅನಾರೋಗ್ಯ, ವಿಕಲಚೇತನ ಶಿಕ್ಷಕರು, ವಿಧವೆ/ವಿಧುರ/ವಿಚ್ಛೇದಿತ ಶಿಕ್ಷಕ/ಶಿಕ್ಷಕಿ, ಮೃತ ಸೈನಿಕರ ಶಿಕ್ಷಕ ಪತಿ ಅಥವಾ ಪತ್ನಿ, ಕೇಂದ್ರ/ರಾಜ್ಯ ಸರ್ಕಾರ ಇಲ್ಲವೇ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರನ್ನು ಮದುವೆಯಾಗಿರುವ ಶಿಕ್ಷಕ/ಶಿಕ್ಷಕಿಯರಿಗೆ ವರ್ಗಾವಣೆಯಲ್ಲಿ ಅವಕಾಶವಿರಲಿದ್ದು, ಇದಕ್ಕಾಗಿ ಅವರು ಅರ್ಹ ಪೂರಕ ದಾಖಲೆಗಳನ್ನು ಒದಗಿಸಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.

    ಇದಕ್ಕಾಗಿ ಪ್ರತ್ಯೇಕ ವರ್ಗಾವಣಾ ವೇಳಾಪಟ್ಟಿಯನ್ನು ಆಯಾ ಬಿಇಒ ಮತ್ತು ಡಿಡಿಪಿಐ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ.

    2020-21ನೇ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜು. 27ರಿಂದ ಆರಂಭವಾಗಿ 2022ರ ಫೆ. 26ರವರೆಗೆ ಕೌನ್ಸೆಲಿಂಗ್ ನಡೆಯಲಿದೆ.

    ಎಲ್ಲ ಅಡೆತಡೆಗಳನ್ನು ನಿವಾರಿಸಿ ಕೊನೆಗೂ ವರ್ಗಾವಣಾ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಶಿಕ್ಷಕರು ಸಹಕಾರ ನೀಡುವ ಮೂಲಕ ಇದರ ಅನುಕೂಲತೆ ಪಡೆದುಕೊಳ್ಳಬೇಕೆಂದು ರಾಜ್ಯದ ಶಿಕ್ಷಕರ ಸಮೂಹದಲ್ಲಿ ಸುರೇಶ್ ಕುಮಾರ್ ಕೋರಿದ್ದಾರೆ.

    ಸಂಸ್ಕೃತ ದೈನಿಕ ಸುಧರ್ಮಾ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಅಯ್ಯಂಗಾರ್ ನಿಧನ

    ವಿಶ್ವದ ಏಕೈಕ ಸಂಸ್ಕೃತ ದೈನಿಕ ಸುಧರ್ಮಾ ಪತ್ರಿಕೆ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಅಯ್ಯಂಗಾರ್ (64) ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ ಸಂಸ್ಕೃತ ಪತ್ರಿಕೆಯ ಕೆಲಸದಲ್ಲಿರುವಾಗಲೇ ಅವರು ತೀವ್ರ ಹೃದಯಾಘಾತಕ್ಕೆ ಒಳಗಾದರು.

    2019ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿದ್ದ ಸಂಪತ್ ಕುಮಾರ್ ಕಳೆದ ನಾಲ್ಕು ದಶಕಗಳಿಂದ ಸುಧರ್ಮಾ ಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ಸಂಸ್ಕೃತ ಭಾಷೆ ಉಳಿವಿಗೆ ಶ್ರಮಿಸಿದ್ದರು.

    ಕೋವಿಡ್ : ಸಕ್ರಿಯ ಪ್ರಕರಣ ಮತ್ತಷ್ಟು ಇಳಿಕೆ

    ದೇಶಾದ್ಯಂತ ನಡೆಯುತ್ತಿರುವ ಕೋವಿಡ್-19 ಲಸಿಕಾ ಆಂದೋಲನದಲ್ಲಿ ಇದುವರೆಗೆ 33.28 ಲಸಿಕಾ ಡೋಸ್|ಗಳನ್ನು ಹಾಕಲಾಗಿದೆ.

    ಭಾರತದಲ್ಲಿ ಕಳೆದ 24 ತಾಸುಗಳಲ್ಲಿ 45,951 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

    ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 5,37,064ಕ್ಕೆ ಇಳಿಕೆ ಕಂಡಿದೆ.

    ಸಕ್ರಿಯ ಪ್ರಕರಣಗಳ ಪ್ರಮಾಣವು ಒಟ್ಟು ಕೊರೊನಾ ಪ್ರಕರಣಗಳ ಶೇಕಡ 1.77 ರಷ್ಟಿದೆ.

    ದೇಶದಲ್ಲಿ ಇದುವರೆಗೆ 2,94,27,330 ಸೋಂಕಿತರು ಗುಣಮುಖರಾಗಿದ್ದಾರೆ.

    ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 60,729 ರೋಗಿಗಳು ಗುಣಮುಖರಾಗಿದ್ದಾರೆ.

    ಸತತ 48ನೇ ದಿನದಲ್ಲಿ ದೈನಂದಿನ ಗಳ ಚೇತರಿಕೆ ಪ್ರಕರಣಗಳ ಪ್ರಮಾಣವು ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಪ್ರಕರಣಗಳ ಪ್ರಮಾಣವನ್ನು ಹಿಂದಿಕ್ಕುತ್ತಿದೆ.

    ಇದರೊಂದಿಗೆ ಚೇತರಿಕೆ ದರ ಇದೀಗ 96.92%ಗೆ ಸುಧಾರಣೆ ಕಂಡಿದೆ.

    ವಾರದ ಪಾಸಿಟಿವಿಟಿ ದರ ಸತತ 5% ಮಟ್ಟದ ಕೆಳಗೆ ಮುಂದುವರಿದಿದ್ದು, ಅದೀಗ 2.69% ಇದೆ.

    ದೈನಂದಿನ ಪಾಸಿಟಿವಿಟಿ ದರವೂ ಸತತ 23ನೇ ದಿನದಲ್ಲಿ 5% ಮಟ್ಟದ ಕೆಳಗಿದ್ದು, ಅದೀಗ 2.34%ರಷ್ಟಿದೆ.

    ಗಂಟಲು ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ದೇಶಾದ್ಯಂತ ಇಲ್ಲಿಯ ತನಕ 41.01 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

    error: Content is protected !!