25.1 C
Karnataka
Sunday, May 24, 2026
    Home Blog Page 88

    ಆಡಳಿತ ಸುಧಾರಣಾ ಆಯೋಗದ ವರದಿ ಸಲ್ಲಿಕೆ

    ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಇಂದು ತನ್ನ ಮೊದಲ ವರದಿಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸಲ್ಲಿಸಿತು.

    ಆಯೋಗದ ಅಧ್ಯಕ್ಷರು ಹಾಗೂ ನಿವೃತ್ತ ಮುಖ್ಯಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಡಾ|| ಇ.ವಿ.ರಮಣರೆಡ್ಡಿ ಹಾಗೂ ಸಮಿತಿ ಸದಸ್ಯ ಎನ್.ಎಸ್.ಪ್ರಸನ್ನಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ರಾಜ್ಯದ ನಾಲ್ಕೂ ಪ್ರಾದೇಶಿಕ ಆಯುಕ್ತರ ಕಾರ್ಯಾಲಯವನ್ನು ರದ್ದುಮಾಡಬಹುದು. ಬೆಂಗಳೂರಿನಲ್ಲಿ ಕಂದಾಯ ಆಯುಕ್ತಾಲಯ ಸ್ಥಾಪಿಸಬಹುದು. 800 ಆನ್ ಲೈನ್ ಸೇವೆಗೆ ಅಟಲ್ ಜಿ ಜನಸ್ನೇಹಿ ಕೇಂದ್ರ ಏಕಗವಾಕ್ಷಿ ಆಗಬೇಕು. ಗ್ರಾಮ ಲೆಕ್ಕಾಧಿಕಾರಿಗಳನ್ನು ಗ್ರಾಮ ಅಧಿಕಾರಿಯಾಗಿ ಮರು ನಾಮಕರಣ ಮಾಡಬಹುದು ಮುಂತಾದ ಶಿಫಾರಸ್ಸಗಳನ್ನು ಮಾಡಿದೆ.

    ಸಾರ್ವಜನಿಕರಿಗೆ ಹತ್ತಿರವಾದ 3 ಇಲಾಖೆಗಳನ್ನು ಮೊದಲ ಹಂತದಲ್ಲಿ ತೆಗೆದುಕೊಳ್ಳಲಾಗಿದೆ. ಕಂದಾಯ, ಆಹಾರ ಮತ್ತು ನಾಗರಿಕೆ ಪೂರೈಕೆ ಇಲಾಖೆ ಹಾಗೂ ಸಾರಿಗೆ ಇಲಾಖೆಗೆ ಸಂಬಂಧಿಸಿದ 856 ಶಿಫಾರಸ್ಸು ಗಳನ್ನು ಮಾಡಲಾಗಿದೆ.

    ಶಿಫಾರಸ್ಸಿನ ವಿವರಗಳು ಇಲ್ಲಿವೆ

    ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು ವಿಜ್ಞಾನ ವಿಷಯಗಳ ಬಗ್ಗೆ ಬರೆದ ಸುಧೀಂದ್ರ ಹಾಲ್ದೊಡ್ಡೇರಿ


    20 ವರ್ಷಗಳ ಕಾಲ ಸುಧೀಂದ್ರ ಹಾಲ್ದೊಡ್ಡೇರಿ ಅವರೊಂದಿಗೆ ಕೆಲಸ ಮಾಡಿದ, ಆತ್ಮೀಯ ಒಡನಾಟ ಹೊಂದಿದ್ದ ಕನ್ನಡದ ಕಟ್ಟಾಳು ರಾ.ನಂ.ಚಂದ್ರಶೇಖರ ಅವರು ಶುಕ್ರವಾರ (ಜುಲೈ 2) ಅಗಲಿದ ತಮ್ಮ ಚಿರಕಾಲದ ಗೆಳೆಯನನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ.


    ರಾ. ನಂ. ಚಂದ್ರಶೇಖರ

    ನ್ನಡದ ಪ್ರಸಿದ್ಧ ವಿಜ್ಞಾನ ಲೇಖಕ ʼಸುಧೀಂದ್ರ ಹಾಲ್ದೊಡ್ಡೇರಿʼ ಎಂದೇ ಪ್ರಸಿದ್ಧರಾಗಿದ್ದ ಎಚ್.ಎನ್. ಸುಧೀಂದ್ರ ಪತ್ರಕರ್ತರಾಗಿ ದೊಡ್ಡ ಹೆಸರಾಗಿದ್ದ ಎಚ್.ಆರ್.ನಾಗೇಶರಾವ್ (ಸುದ್ದಿಮನೆ ನಾಗೇಶರಾವ್)-ಎಚ್.ಎನ್.ಪ್ರೇಮಾ ದಂಪತಿಯ ಹಿರಿಯ ಪುತ್ರ. ಮದ್ರಾಸಿನ ಐ.ಐ.ಟಿ.ಯಿಂದ ಥರ್ಮಲ್ ಟರ್ಬೋ ಮೆಷಿನ್ಸ್ ವಿಷಯದಲ್ಲಿ ಎಂ.ಟೆಕ್. ಪದವಿಗಳನ್ನು ಪಡೆದಿದ್ದ ಸುಧೀಂದ್ರ ಅವರು ವಿಜ್ಞಾನಿಯಾಗಿ, ವಿಜ್ಞಾನ ಬರಹಗಾರರಾಗಿ ಕನ್ನಡ ನಾಡು-ನುಡಿಗೆ ನೀಡಿದ ಕಾಣಿಕೆ ಅನನ್ಯ-ಅಪೂರ್ವ.

    ವೃತ್ತಿಯಿಂದ ವಿಜ್ಞಾನಿಯಾಗಿದ್ದ ಸುಧೀಂದ್ರ ಹಾಲ್ದೊಡ್ಡೇರಿ ಅವರು, ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು. ವಿಜ್ಞಾನ ಬರಹಗಾರರಾಗಿ 2001ರಿಂದ ʼವಿಜಯ ಕರ್ನಾಟಕ’ದಲ್ಲಿ ಸತತವಾಗಿ 18 ವರ್ಷ ವಿಜ್ಞಾನ-ತಂತ್ರಜ್ಞಾನದ ಬಗ್ಗೆ ಬರೆದ ʼನೆಟ್ ನೋಟ’ ಅಂಕಣ ಭಾರತೀಯ ಭಾಷೆಗಳಲ್ಲಿ ಅಳಿಸಲಾಗದ ದಾಖಲೆ. 2500ಕ್ಕೂ ಹೆಚ್ಚಿನ ಸಂಖ್ಯೆಯ ವಿಜ್ಞಾನ ಲೇಖನಗಳನ್ನು ಕನ್ನಡದ ಬಹುತೇಕ ಎಲ್ಲ ಪತ್ರಿಕೆ/ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದ ಸುಧೀಂದ್ರ ಅವರು ಬಹುದೊಡ್ಡ ವಿಜ್ಞಾನಿಯಾಗಿದ್ದರು. ʼಡೆಕ್ಕನ್ ಹೆರಾಲ್ಡ್’ ಪತ್ರಿಕೆ ಸೇರಿದಂತೆ ಕೆಲವು ವೃತ್ತಿ ಸಂಬಂಧಿತ ಟ್ರೇಡ್ ಮ್ಯಾಗಝಿನ್‍ಗಳಿಗೆ ತಂತ್ರಜ್ಞಾನ ವಿಷಯಗಳ ಬಗ್ಗೆ ಇಂಗ್ಲಿಷ್‍ನಲ್ಲೂ ಲೇಖನಗಳನ್ನು ಬರೆದಿದ್ದಾರೆ. ʼಇಂಟರ್‍ನೆಟ್ ಎಂಬ ಮಾಯಾಜಾಲ’, ʼಬೆಳಕಿಂಡಿ’, ʼಮಕ್ಕಳಿಗಾಗಿ ಕಂಪ್ಯೂಟರ್ʼ, `ಕಂಪ್ಯೂಟರ್ ಎಲ್ಲಿಂದ ಎಲ್ಲಿಯವರೆಗೆ’, ʼಸದ್ದು, ಸಂಶೋಧನೆ ನಡೆಯುತ್ತಿದೆ!’, ʼಬಾಹ್ಯಾಕಾಶ ವೆಂಬ ಬೆರಗಿನಂಗಳ’ ಪುಸ್ತಕಗಳನ್ನು ರಚಿಸಿದ್ದಾರೆ. ಇಷ್ಟೆಲ್ಲ ಬರೆದ ಅವರು ಬಹು ಪ್ರತಿಷ್ಠಿತ ರಕ್ಷಣಾ ಸಂಸ್ಥೆ ಡಿಆರ್‌ಡಿಒದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದರು.

    ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ವೈಜ್ಞಾನಿಕ ಸಹಾಯಕರಾಗಿ (1985-86). ಆ ಎರಡು ವರ್ಷಗಳ ಅವಧಿಯಲ್ಲಿ ಅವರು ಪೃಥ್ವಿ ಕ್ಷಿಪಣಿಯ ರಾಕೆಟ್ ಮೋಟಾರ್ ಕೇಸಿಂಗ್‍ನ ಸಾಮರ್ಥ್ಯ ವಿಶ್ಲೇಷಣಾ ವಿಷಯದಲ್ಲಿ ಕೆಲಸ ಮಾಡಿದ್ದರು. ಕೇಂದ್ರ ಸರ್ಕಾರದ ʼರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯ (ಡಿ.ಆರ್.ಡಿ.ಒ.) ವಿಜ್ಞಾನಿಯಾಗಿ 1986ರಲ್ಲಿ ಆಯ್ಕೆಯಾದಾಗ ಅವರು ನೇಮಕಗೊಂಡಿದ್ದು ಎಚ್.ಎ.ಎಲ್.ನ ಸಿ.ಆರ್.ಇ. ಕಚೇರಿಗೆ. ಎಚ್‌ಎಎಲ್‍ನಲ್ಲಿ ಅವರು ವಿಮಾನಗಳ ತಯಾರಿಕೆಗೆ ಸಂಬಂಧಿಸಿದ ಹಲವು ನೆಲೆಗಳಲ್ಲಿ ಕೆಲಸ ಮಾಡಿದ್ದರು. ಹೆಲಿಕಾಪ್ಟರ್ ವಿಭಾಗದ ಚೀತಾ, ಚೇತಕ್ ಹೆಲಿಕಾಪ್ಟರ್‌ಗಳು ಸಿಯಾಚಿನ್ ಸೇರಿದಂತೆ ಅತಿ ಎತ್ತರದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವಾಗಿನ ಸಮಸ್ಯೆಗಳ ನಿವಾರಣೆಗೆಂದು ವಾಯುಪಡೆ ರೂಪಿಸಿದ್ದ ತಾಂತ್ರಿಕ ತನಿಖಾ ಸಮಿತಿಯ ಸದಸ್ಯರಾಗಿ ದೊಡ್ಡ ಕೊಡುಗೆ ನೀಡಿದ್ದರು. ಜತೆಗೆ ʼಸ್ವದೇಶಿ ಜೆಟ್ ಟ್ರೇನರ್ ವಿಮಾನ’, ʼಹಾಕ್ ಅಡ್ವಾನ್ಸ್‍ಡ್ ಜೆಟ್ ಟ್ರೇನರ್ ವಿಮಾನ’, `ಹಿಂದೂಸ್ತಾನ್ ಟರ್ಬೋ ಟ್ರೇನರ್ ವಿಮಾನ’ಗಳ ವಾಯುಪಡೆಯ ತಾಂತ್ರಿಕ ಪರಿಶೀಲನಾ ಸಮಿತಿಗಳ ಸದಸ್ಯರಾಗಿದ್ದರು. 2008ರಲ್ಲಿ ಎಚ್.ಎ.ಎಲ್‍ನ ಎ.ಆರ್.ಡಿ.ಸಿ. ವಿಭಾಗದಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಇಂಧನ ಪೂರೈಕೆ ವ್ಯವಸ್ಥೆ ಮತ್ತು ಪ್ರೊಪಲ್ಷನ್ ಸಮೂಹದ ಮುಖ್ಯಸ್ಥರಾಗಿ ಎಲ್.ಸಿ.ಎ. ಮತ್ತು ಐ.ಜೆ.ಟಿ. ವಿಮಾನಗಳ ಯಾಂತ್ರಿಕ ವ್ಯವಸ್ಥೆಗಳ ವಿನ್ಯಾಸ, ಮೊದಲ ಮಾದರಿ ತಯಾರಿಕೆ, ವಿಮಾನ/ಎಂಜಿನ್‍ಗಳಲ್ಲಿ ಅಳವಡಿಕೆ, ಪರೀಕ್ಷೆ, ಹಾರಾಟ ದೃಢೀಕರಣ ಕಾರ್ಯಗಳ ಜವಾಬ್ದಾರಿ ವಹಿಸಿಕೊಂಡಿದ್ದರು. ಎಚ್.ಎ.ಎಲ್ ತಯಾರಿಸಿದ ಹಲವು ಯುದ್ಧ ವಿಮಾನಗಳ ಪ್ರಮಾಣೀಕರಣಕ್ಕೆ ಅಗತ್ಯವಾದ ಪರೀಕ್ಷೆಗಳನ್ನು ಆಯೋಜಿಸುವುದರಲ್ಲೂ ತಮ್ಮ ಕಾಣಿಕೆ ನೀಡಿದ್ದಾರೆ.

    ಸ್ವಯಂ ನಿವೃತ್ತಿ ಪಡೆದ ನಂತರ ಜೈನ್ ಹಾಗೂ ಅಲಯನ್ಸ್ ವಿಶ್ವವಿದ್ಯಾಲಯಗಳಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ ಇವರು ಕೆಲಸ ಮಾಡಿದರು. ನಂತರ ‘ಕ್ವೆಸ್ಟ್ ಗ್ಲೋಬಲ್ ಎಂಜಿನಿಯರಿಂಗ್’ ಕಂಪನಿಯ ರೋಲ್ಸ್-ರಾಯ್ಸ್ ಆಫ್-ಶೋರ್ ಡೆವಲಪ್‍ಮೆಂಟ್ ಸೆಂಟರ್‌ನಲ್ಲಿ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು. ಹಲವು ಖಾಸಗಿ ವೈಮಾಂತರಿಕ್ಷ ಕಂಪನಿಗಳಿಗೆ ಸಲಹೆಗಾರರಾಗಿದ್ದಾರೆ. ವೃತ್ತಿ ಸಂಬಂಧಿತ ಕಾರ್ಯಗಳಿಗಾಗಿ ಎರಡು ಬಾರಿ ಅಮೆರಿಕ, ಒಮ್ಮೆ ಬ್ರೆಜಿಲ್, ರಷ್ಯ ಹಾಗೂ ಜರ್ಮನಿ ದೇಶಗಳಿಗೆ ಭೇಟಿ ಇತ್ತಿದ್ದಾರೆ. ದೇಶದ ಆಯಕಟ್ಟಿನ ವಾಯುನೆಲೆಗಳಲ್ಲಿ ವಿಮಾನ / ಹೆಲಿಕಾಪ್ಟರ್ ಪರೀಕ್ಷಾರ್ಥ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು.

    ವೃತ್ತಿ-ಪ್ರವೃತ್ತಿ ಎರಡರಲ್ಲೂ ಮಾನ್ಯತೆ ಪಡೆದ ಸಾಧಕ

    ವೈಮಾನಿಕ ಕ್ಷೇತ್ರದಲ್ಲಿನ ಅವರ ಕೊಡುಗೆಗೆ 1999ರಲ್ಲಿ ʼಡಿ.ಆರ್.ಡಿ.ಒ. ಪುರಸ್ಕಾರ’, 2002ರ ‘ರಾಷ್ಟ್ರೀಯ ವಿಜ್ಞಾನ ದಿನದ ಪದಕ’, 2004 ಮತ್ತು 2005ರಲ್ಲಿ ಸತತವಾಗಿ `ಡಿ.ಆರ್.ಡಿ.ಒ. ಉತ್ತಮ ಕಾರ್ಯಪಡೆ ಪ್ರಶಸ್ತಿ’ಗಳನ್ನು ಪಡೆದಿದ್ದರು.

    ವಿಜ್ಞಾನ ಸಾರಸ್ವತ ಲೋಕಕ್ಕೆ ಅವರು ನೀಡಿರುವ ಕೊಡುಗೆಗಾಗಿ ʼಕನ್ನಡ ವಿಜ್ಞಾನ ಪರಿಷತ್ತು ರಜತೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ʼವಿಷನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ’ಯ ಶ್ರೇಷ್ಠ ವಿಜ್ಞಾನ ಸಂವಹನಾಕಾರ ಪ್ರಶಸ್ತಿ’ ಹಾಗೂ ʼಕರ್ನಾಟಕ ಕಾರ್ಮಿಕ ಲೋಕ’ದ ಪುರಸ್ಕಾರಗಳು ದೊರೆತಿವೆ. ಅವರ ಕಣ್ಮರೆಯಾದ ದಿನ ಕನ್ನಡ ಪುಸ್ತಕ ಪ್ರಾಧಿಕಾರದ ಡಾ.ಅನುಪಮ ನಿರಂಜನ ಹೆಸರಿನಲ್ಲಿ ನೀಡುವ ʼಅತ್ಯತ್ತಮ ವಿಜ್ಞಾನ ಲೇಖಕʼ ಪ್ರಶಸ್ತಿ ಬಂದಿದೆ.

    ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕ್ಯಾಡೆಮಿಯ ಸದಸ್ಯರಾಗಿ ಸುಧೀಂದ್ರ ಅವರು ಅನೇಕ ವಿಶ್ವವಿದ್ಯಾಲಯ ಹಾಗೂ ಶೈಕ್ಷಣಿಕ ಸಂಸ್ಥೆಗಳ ಅಕ್ಯಾಡೆಮಿಕ್ ಕೌನ್ಸಿಲ್ ಮತ್ತು ʼಬೋರ್ಡ್ ಆಫ್ ಸ್ಟಡೀಸ್’ನ ಸದಸ್ಯರಾಗಿ, ಶಾಲಾ-ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಗಳನ್ನು ನೀಡುವುದರ ಜತೆಗೆ ಆಕಾಶವಾಣಿ, ಎಫ್.ಎಂ.ರೇಡಿಯೊ, ದೂರದರ್ಶನ, ಖಾಸಗಿ ಟಿವಿ ಚಾನೆಲ್‍ಗಳ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅವರು ಸಲ್ಲಿಸಿದ ಸೇವೆ ಸಾರ್ಥಕವಾದ್ದು.

    ಸುಧೀಂದ್ರ ಅವರ ಕುಟುಂಬದಲ್ಲಿ ಎಲ್ಲರೂ ಕಲಾಪ್ರೇಮಿಗಳು. ತಂದೆ ನಾಗೇಶರಾಯರು ಪತ್ರಕರ್ತರು, ಹಾಸ್ಯ ಲೇಖಕರು ತಾಯಿ ಪ್ರೇಮಾ ಹಾಗೂ ಮಡದಿ ಎಂ.ವಿ.ಸೌಮ್ಯ ಸುಮಾ ರಂಗೋಲಿ, ಚಿತ್ತಾರಗಳಲ್ಲಿ ಪರಿಣಿತರು, ಕಿರಿಯ ಮಗಳು ಮಾಧುರ್ಯ ಸುಧೀಂದ್ರ ಚಿತ್ರಕಲೆ, ಪೇಂಟಿಂಗ್ ಹಾಗೂ ಕಾರ್ಟೂನ್‍ಗಳ ರಚನೆಯಲ್ಲಿ ಆಸಕ್ತರು. ಇತ್ತ ಹಿರಿಯ ಮಗಳು ಮೇಘನಾ ಸುಧೀಂದ್ರ ಬರಹಗಾರಳಾಗಿ-ಅಂಕಣಕಾರಳಾಗಿ ಗುರುತಿಸಿಕೊಂಡಿದ್ದಾರೆ. ʼಜಯನಗರದ ಹುಡುಗಿ’ ಇತರೆ ಪುಸ್ತಕಗಳು ಈಗಾಗಲೇ ಪ್ರಕಟವಾಗಿದೆ. (ಲೇಖನ ಕೃಪೆ: cknewsnow.com)

    ಇದನ್ನು ಓದಿ : ಸುಧೀಂದ್ರ ಹಾಲ್ದೊಡ್ಡೇರಿ ನಿಧನ

    ರಾಜ್ಯದ ಪಾಲಿನ GST ಕಂತು ಬಿಡುಗಡೆ ಮಾಡಲು ನಿರ್ಮಲಾ ಸೀತಾರಾಮನ್ ಒಪ್ಪಿಗೆ

    ಕೇಂದ್ರ ಪುರಸ್ಕೃತ ಯೋಜನೆಗಳಿಗೆ ತನ್ನ ಪಾಲಿನ ಹಣ ಬಿಡುಗಡೆ ಮಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಬೆಂಗಳೂರಿನಲ್ಲಿ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಭರವಸೆ ನೀಡಿದ್ದಾರೆಂದು ಬೊಮ್ಮಾಯಿ ತಿಳಿಸಿದರು.ರಾಜ್ಯದಲ್ಲಿನ ಆರ್ಥಿಕ ಪರಿಸ್ಥಿತಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ನಿರ್ಮಲಾ ಸೀತಾರಾಮನ್ ಜತೆ ಚರ್ಚೆ ನಡೆಸಲಾಯಿತು.

    ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಡಿ ರಾಜ್ಯಸರ್ಕಾರಕ್ಕೆ ಬಿಡುಗಡೆಯಾಗಬೇಕಿರುವ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡಿಕೊಳ್ಳಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿರ್ಮಲಾ ಸೀತಾರಾಮನ್, ತ್ವರಿತ ಗತಿಯಲ್ಲಿ ಕೇಂದ್ರ ಪ್ರಯೋಜಿತ ಯೋಜನೆಗಳಿಗೆ ತನ್ನ ಪಾಲಿನ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು ಎಂದು ಸಚಿವ ಬೊಮ್ಮಾಯಿ ಹೇಳಿದರು.

    ಕಳೆದ ವರ್ಷದ ಜಿಎಸ್ಟಿ ಪರಿಹಾರ ಬಾಕಿ 11800 ಕೋಟಿ ರೂಪಾಯಿ ಹಣವನ್ನು ರಾಜ್ಯಕ್ಕೆ ನೀಡಲು ಕ್ರಮಕೈಗೊಳ್ಳಲಾಗುವುದು. ಕಳೆದ ಬಾರಿಯಂತೆ ಜಿಎಸ್ಟಿ ಪರಿಹಾರ 18000 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ಸಾಲ ಪಡೆದು ರಾಜ್ಯಕ್ಕೆ ಒದಗಿಸುವುದಾಗಿ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದರೆಂದು ಬೊಮ್ಮಾಯಿ ವಿವರಿಸಿದರು.

    2021- 22 ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸಂಗ್ರಹವಾಗಿರುವ ಜಿಎಸ್ಟಿ ಪಾಲಿನ ಮೊದಲ ಕಂತನ್ನು ರಾಜ್ಯಕ್ಕೆ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಅದಕ್ಕೆ ಸಚಿವರು ಒಪ್ಪಿಗೆ ನೀಡಿದರು. ಕೋವಿಡ್ ನಿರ್ವಹಣೆ ಮತ್ತು ಕೋವಿಡ್ ಮೂರನೇ ಅಲೆ ತಯಾರಿಗೆ ಬೇಕಾದ ಹಣಕಾಸಿನ ವ್ಯವಸ್ಥೆಗಳ ಕುರಿತು ಸಭೆಯಲ್ಲಿ ಚರ್ಚೆಯಾಯಿತು. ಕೋವಿಡ್ ನಿರ್ವಹಣೆಗೆ ಯಾವುದೇ ರೀತಿಯ ಹಣಕಾಸಿನ ಅಭಾವ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ಅವರು ನೀಡಿದರು ಎಂದು ಸಚಿವರು ತಿಳಿಸಿದ್ದಾರೆ.

    ರಾಜ್ಯ ಸರ್ಕಾರ ಕೋವಿಡ್ ಎರಡನೆ ಅಲೆಯನ್ನು ನಿರ್ವಹಣೆ ಮಾಡಿದ ರೀತಿ, ಬಡವರಿಗೆ ನೀಡಲಾದ ಪ್ಯಾಕೇಜ್, ಕೋವಿಡ್ ನಿಂದ ಸಾವನ್ನಪ್ಪಿದ ಬಿಪಿಎಲ್ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ, ಖಾಸಗಿ ಆಸ್ಪತ್ರೆಗಳ ಸಹಕಾರದೊಂದಿಗೆ ಕೋವಿಡ್ ಎರಡನೇ ಅಲೆಯನ್ನು ನಿರ್ವಹಣೆ ಮಾಡಿದ ರಾಜ್ಯ ಸರ್ಕಾರದ ಕ್ರಮಕ್ಕೆ ನಿರ್ಮಲಾ ಸೀತಾರಾಮನ್ ಹರ್ಷ ವ್ಯಕ್ತಪಡಿಸಿದರು.

    ಕೋವಿಡ್ ಲಸಿಕೆ ಪಡೆದವರಿಗೆ ಸಸಿ ನೀಡಿ ಪ್ರೇರಣೆ ನೀಡಿದ ಗ್ರಾಮ ಪಂಚಾಯಿತಿ ಸದಸ್ಯರು

    ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮ ಪಂಚಾಯಿತಿಗೆ ಬಹುತೇಕ ಯುವ ಸದಸ್ಯರು ಆರಿಸಿ ಬಂದಿದ್ದಾರೆ. ಸದಾ ಪ್ರಯೋಗಾತ್ಮಕ ಸಾಮಾಜಿಕ ಕಳಕಳಿ ಜಾಗೃತ ಕಾರ್ಯಕ್ರಮಗಳಿಂದ ಗಮನ ಸೆಳೆದಿದ್ದಾರೆ. ಕೋವಿಡ್ ಲಸಿಕೆ ಅಭಿಯಾನಕ್ಕೆ ಪ್ರೇರಣೆ ನೀಡಲು ಸಸಿಗಳನ್ನು ನೀಡಿ ವಿಶಿಷ್ಟತೆ ಮೆರೆದಿದ್ದಾರೆ.

    ಒಂದೇ ಕಾರ್ಯಕ್ರಮದಲ್ಲಿ ಎರಡು ಘನೋದ್ದೇಶದ ಈಡೇರಿಕೆಗೆ ನಾಂದಿ ಹಾಡಿದ್ದಾರೆ. ಲಸಿಕೆಗೆ ಉತ್ತೇಜನ ಹಾಗೂ ಹಸಿರೀಕರಣದ ಮಹದಾಸೆ. ಲಸಿಕೆಗೆ ನೂಕು ನುಗ್ಗಲು ತಪ್ಪಿಸಲು ವಾರ್ಡ್ ಪ್ರಕಾರ ಲಸಿಕಾ ಕಾರ್ಯಕ್ರಮವನ್ನು ನಿಗದಿಗೊಳಿಸಿದ್ದಾರೆ. ಅದಕ್ಕಾಗಿ ಸ್ವಂತ ಖರ್ಚಿನಲ್ಲಿ ಸಾರ್ವಜನಿಕರಿಗೆ ಅನುಕೂಲ ಸ್ಥಳ ನಿಯೋಜಿಸುತ್ತಿದ್ದಾರೆ. ಲಸಿಕೆ ಕೊಡುವ ಮಾಹಿತಿಯನ್ನು ಆಯಾ ವಾರ್ಡ್ ಸದಸ್ಯರು ಮನೆಗಳಿಗೆ ತೆರಳಿ ಮಾಹಿತಿ ನೀಡುತ್ತಾರೆ. ಲಸಿಕೆ ಲಭ್ಯತೆ ಅನುಸರಿಸಿ ಸರಾಗವಾಗಿ ಲಸಿಕೆ ಪಡೆಯಲು ಸ್ಥಳದಲ್ಲೇ ಹಾಜರಿದ್ದು ಗಮನ ಹರಿಸುತ್ತಾರೆ. ಆನಂತರ ಅರಣ್ಯ ಇಲಾಖೆಯಿಂದ ಪಡೆದ ಸಸಿಗಳನ್ನು ಕೊಟ್ಟು ಬೀಳ್ಕೊಡುವುದು ಗಮನ ಸೆಳೆದಿದೆ.

    ಇಲ್ಲಿನ ಎರಡನೇ ವಾರ್ಡ್ ನಲ್ಲಿ ಸುಮಾರು 400 ಸಸಿಗಳನ್ನು ಕೊಡಲಾಗಿದೆ. ಹೊನ್ನೆ, ಹಲಸು, ಹುಣಸೆ ಸೇರಿದಂತೆ ಹಲವು ಬಗೆಯ ಸಸಿಗಳು ಲಭ್ಯವಿದೆ. ಮಹಿಳೆಯರು ವಿಶೇಷವಾಗಿ ಸಸಿ ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರ ಮನೆಗಳಿಗೆ ತೆರಳಿ ಗಿಡಗಳನ್ನು ನೀಡಿ ಗೌರವಿಸಿದ್ದಾರೆ. ಗ್ರಾಮದ ರಸ್ತೆ, ದೇಗುಲಗಳಲ್ಲಿ ವಿವಿಧ ಬಗೆಯ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ. ಪ್ರಕೃತಿ ವಿನಾಶದ ದಾರುಣ ಸ್ಥಿತಿಯಲ್ಲಿ ಹಸಿರೀಕರಣದ ಉದಾತ್ತ ಯುವ ಚಿಂತನೆ ಮಾದರಿ ಆಗಿದೆ.

    ಮರಗಿಡಗಳಿಂದ ಬರಡಾದ ಪರಿಸರವನ್ನು ಹಚ್ಚ ಹಸಿರಿನಿಂದ ಕಂಗೊಳಿಸುವಂತಾಗಿಸಲು ಅಳಿಲು ಸೇವೆ. ಹವಾಮಾನ ವೈಪರಿತ್ಯದಿಂದ ರೈತರ ಇಳುವರಿ ಅನಿಶ್ಚಿತ. ತೂಗೂಯ್ಯಲೆಯ ಮಳೆ ಭರವಸೆ ಕುಸಿದಿದೆ. ಈ ನಿಟ್ಟಿನಲ್ಲಿ ಹಸರೀಕರಣ ಎಲ್ಲರ ಬದ್ಧತೆ ಆಗಬೇಕು. ಈ ನಿಟ್ಟಿನಲ್ಲಿ ಜಾಗೃತಿಗೆ ಸದಾ ಸಿದ್ದ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಆಸೀಫ್, ಜಿ.ಎಸ್. ಶಿವರಾಜ್, ಪಿ.ಆರ್.ರುದ್ರೇಶ್, ಉಲ್ಲಾಸ್.

    ಸುಧೀಂದ್ರ ಹಾಲ್ದೊಡ್ಡೇರಿ ನಿಧನ

    ಅನಾರೋಗ್ಯದಿಂದ ಬಳಲುತ್ತಿದ್ದ DRDO ಮಾಜಿ ವಿಜ್ಞಾನಿ,ಎಚ್ ಎ ಎಲ್ ನ ಹಿರಿಯ ನಿವೃತ್ತ ಎಂಜಿನಿಯರ್ ಹಾಗೂ ಸುಪ್ರಸಿದ್ಧ ವಿಜ್ಞಾನ ಬರಹಗಾರ​ ಸುಧೀಂದ್ರ ಹಾಲ್ದೊಡ್ಡೇರಿ ಈಗ್ಗೆ ಸ್ವಲ್ಪ ಹೊತ್ತಿಗೆ ಮುಂಚೆ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.

    ಕಳೆದ ಹತ್ತು ದಿನಗಳ ಹಿಂದೆ ತೀವ್ರ ಹೃದಯಾಘಾತಕ್ಕೀಡಾಗಿದ್ದ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು.ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಅವರ ಮೆದುಳಿಗೆ ಆಮ್ಲಜನಕ ಪೂರೈಕೆ ಸರಿಯಾಗಿ ಆಗದ ಕಾರಣ ಮೆದುಳು ನಿಷ್ಕ್ರಿಯವಾಗುವ ಹಂತ ತಲುಪಿತ್ತು. ವೈದ್ಯರು ಸಾಕಷ್ಟು ಪ್ರಯತ್ನ ಪಟ್ಟರು ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ.

    ವಿಜ್ಞಾನ ವಿಷಯಗಳನ್ನು ಅತ್ಯಂತ ಸರಳವಾಗಿ ಅವರು ಕನ್ನಡದಲ್ಲಿ ಬರೆಯುತ್ತಿದ್ದರು. ನಿವೃತ್ತಿಯ ನಂತರ ಫೇಸ್ ಬುಕ್ ಲ್ಲಿ ಸಕ್ರಿಯರಾಗಿದ್ದ ಅವರು ವೈಜ್ಞಾನಿಕ ಸಂಗತಿಗಳ ಬಗ್ಗೆ ಯಾರೇ ಪ್ರಶ್ನೆ ಕೇಳಿದರು ಉತ್ತರ ನೀಡುತ್ತಿದ್ದರು. ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇಂದು ಬೆಳಿಗ್ಗೆಯಷ್ಟೇ ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ ವಿಜ್ಞಾನ ಸಾಹಿತ್ಯ ಪ್ರಶಸ್ತಿ ಅವರಿಗೆ ಸಂದಿರುವ ಬಗ್ಗೆ ಪ್ರಾಧಿಕಾರ ಪ್ರಕಟಿಸಿತ್ತು.

    ಸಂತಾಪ : ಸುಧೀಂದ್ರ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಮಗಳ ಅಂತಿಮ ವಿದಾಯ

    ಅಪ್ಪನನ್ನು ಅತೀವವಾಗಿ ಪ್ರೀತಿಸುತ್ತಿದ್ದ ಲೇಖಕಿ ಜಯನಗರದ ಹುಡುಗಿ ಮೇಘನಾ ಸುಧೀಂದ್ರ ತಮ್ಮ ಅಪ್ಪನ ಬಗ್ಗೆ ಫೇಸ್ ಬುಕ್ ನಲ್ಲಿ ಅಂತಿಮ ವಿದಾಯ ಸಲ್ಲಿಸಿದ್ದಾರೆ.

    .

    ಬೆಂಗಳೂರಲ್ಲಿ ನಿಗೂಢ ಸದ್ದು

    ರಾಜಧಾನಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅನೇಕರು ಟ್ವೀಟ್ ಮಾಡಿದ್ದಾರೆ.

    ಆರ್ ಆರ್ ನಗರ,ಕತ್ತರಿಗುಪ್ಪೆ ಕೆಂಗೇರಿ, ಮಾಗಡಿ, ಎಲೆಕ್ಟ್ರಾನಿಕ್ ಸಿಟಿ, ಬಿಡದಿ, ಬನಶಂಕರಿ, ಕುಮಾರಸ್ವಾಮಿ ಲೇಔಟ್ ಸೇರಿದಂತೆ ಹಲವೆಡೆಗಳಲ್ಲಿ ಮಧ್ಯಾಹ್ನ 12:23ರರ ಸುಮಾರಿ ಭಾರಿ ಸದ್ದು ಕೇಳಿಬಂದಿದ್ದು, ಮನೆ ಕಿಟಕಿ, ಬಾಗಿಲುಗಳೇ ಅಲುಗಾಡಿದ ಅನುಭವವಾಗಿದೆ. ಕತ್ತರಿಗುಪ್ಪೆಯಲ್ಲಿ ಕಿಟಕಿ ಅಲುಗಾಡಿದ ಅನುಭವವಾಯಿತು ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ರಾಜಾಜಿನಗರ ಪ್ರದೇಶದಲ್ಲಿ ಶಬ್ದ ಕೇಳಿಸಿತಾದರು ಅದರ ಪ್ರಮಾಣ ಕಡಿಮೆ ಇತ್ತು.

    ಭೂಮಿಯ ಒಳಗಿನಿಂದ ಬಂದಿರುವ ಶಬ್ಧದಂತಿದ್ದು, ಸ್ಫೋಟದ ರೀತಿ ಶಬ್ಧ ಕೇಳಿಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ತಜ್ಞರು ಹೇಳಿದ್ದಾರೆ.

    ಅನೇಕ ಬೆಂಗಳೂರಿಗರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನಕ್ಕೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ

    ಕನ್ನಡ ಪುಸ್ತಕ ಪ್ರಾಧಿಕಾರದ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಪೂರ್ಣ ಗೊಂಡಿದ್ದು, ಹಿರಿಯ ಸಾಹಿತಿ, ಚಿಂತಕ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರನ್ನು ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಹೇಳಿದ್ದಾರೆ.

    ಡಾ. ಎಂ.ಎನ್. ನಂದೀಶ್ ಹಂಚೆ

    ಕನ್ನಡ ಪುಸ್ತಕ ಪ್ರಾಧಿಕಾರದಿಂದ ನೀಡಲಾಗುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನಕ್ಕೆ ನೀಡಲಾಗಿದೆ.

    ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಮೈಸೂರಿನ ಸಯ್ಯದ್ ಇಸಾಕ್ ಅವರನ್ನು ಆಯ್ಕೆ ಮಾಡಲಾಗಿದೆ.

    ಡಾ|| ಅನುಪಮ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಯನ್ನು ಡಾ|| ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೆ ನೀಡಲಾಗಿದೆ ಎಂದು ಡಾ. ಎಂ.ಎನ್. ನಂದೀಶ್ ಹಂಚೆ ತಿಳಿಸಿದ್ದಾರೆ.

    ಪುಸ್ತಕ ಬಹುಮಾನಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಕೆಲವು ದಿನಗಳಲ್ಲೇ ಪ್ರಕಟ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

    ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ರೂ.1.00ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ ರೂ.75,000-00 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ರೂ.50,000-00 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.ಡಾ|| ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ ರೂ.25,000-00 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

    ಭಕ್ತಿಯಿದ್ದಲ್ಲಿ ಭಗವಂತ

    ಜಯಶ್ರೀ ಅಬ್ಬೀಗೇರಿ

    ಒಂದೂರಲ್ಲಿ ಅಜ್ಜಿ ಮೊಮ್ಮಗ ಮಾತ್ರ ಒಂದು ಮನೆಯಲ್ಲಿ ವಾಸವಾಗಿದ್ದರು. ಒಂದು ದಿನ ಸತ್ಸಂಗದ ಪ್ರಭಾ ವಲಯಕ್ಕೆ ಒಳಗಾಗಿ ತನ್ನ ಮುಂದಿನ ಜೀವನವನ್ನೆಲ್ಲ ಸಂತರ ಸಾನಿಧ್ಯದಲ್ಲಿ ಕಳೆಯಬೇಕೆಂದು ಅಜ್ಜಿ ನಿರ್ಧರಿಸಿದಳು. ಆದರೆ ಈ ನಿರ್ಧಾರಕ್ಕೆ ಅಡ್ಡಿಯಾಗುವ ಸಮಸ್ಯೆಯೊಂದು ಆಕೆಯನ್ನು ಕಾಡತೊಡಗಿತು.

    ಮನೆಯಲ್ಲಿದ್ದ ಮೊಮ್ಮಗನ ವಯಸ್ಸು ಕೇವಲ ಐದಾರು ವರ್ಷ ಆತನ ತಂದೆ ತಾಯಿ ತೀರಿ ಹೋಗಿದ್ದರಿಂದ ಆಕೆಯೇ ಸಾಕಿ ಸಲುಹುತ್ತಿದ್ದಳು. ಆತನನ್ನು ಬಿಟ್ಟು ಹೋಗಲು ಮನಸ್ಸು ಒಪ್ಪುತ್ತಿಲ್ಲ. ಸಮಸ್ಯೆಯನ್ನು ಹೇಗಾದರೂ ಬಗೆಹರಿಸಿ ಸಂತರ ಸಾನಿಧ್ಯದಲ್ಲಿರಬೇಕೆಂದು ಯೋಚಿಸಿದಳು. ಕೊನೆಗೆ ಧೈರ್ಯ ಮಾಡಿ ನೆರೆಯ ಮನೆಯವರಿಗೆ ಮೊಮ್ಮಗನನ್ನು ಒಪ್ಪಿಸಿದಳು. ಪೋಷಣೆಗೆ ಬೇಕಾದ ಹಣದ ವ್ಯವಸ್ಥೆಯನ್ನೂ ಮಾಡಿದಳು.

    ಇದೆಲ್ಲ ಮುಗಿದ ಸಂಜೆಯೇ ‘ನಾನು ಇನ್ನು ಮುಂದೆ ತಮ್ಮ ಸಾನಿಧ್ಯದಲ್ಲಿಯೇ ಇರುತ್ತೇನೆ. ಆಶೀರ್ವದಿಸಿ. ಪೂಜ್ಯರೆ.’ ಎಂದಳು. ಸಂತರು ‘ಆಗಲಿ ನಾಳೆ ನೋಡೋಣ. ಈಗ ತಾವು ಸಾಧಕಿಯರ ಆಶ್ರಮದಲ್ಲಿ ವಿಶ್ರಮಿಸಿ.’ ಎಂದರು. ಉಳಿದೆಲ್ಲ ಸಾಧಕಿಯರು ಸಂಜೆಯ ಪ್ರಾರ್ಥನೆ ಮಾಡಿ ವಿಶ್ರಮಿಸಿದರು. ಆದರೆ ಅಜ್ಜಿ ಮಾತ್ರ ಕಣ್ಣಿಗೆ ಕಣ್ಣು ಹಚ್ಚಲಿಲ್ಲ.! ರಾತ್ರಿಯೆಲ್ಲ ತನ್ನ ಮೊಮ್ಮಗನದೇ ಚಿಂತೆ. ನನ್ನ ಬಿಟ್ಟು ಹೇಗಿದ್ದಾನೇನೋ ಎಂಬ ಆತಂಕ. ಆತನದೇ ಚಿತ್ರ ಕಣ್ಮುಂದೆ ಪದೇ ಪದೇ ಬಂದಂತೆ. ಅಜ್ಜಿ, ಅಜ್ಜಿ ಎಂದು ಕೂಗಿ ಕರೆದಂತೆ ಭಾಸವಾಗುತ್ತಿತ್ತು.

    ಬೆಳಿಗ್ಗೆ ಆಗುವುದನ್ನೇ ಕಾಯುತ್ತಿದ್ದ ಅಜ್ಜಿ ಸಂತರಲ್ಲಿಗೆ ಹೋಗಿ ನನ್ನ ಮೊಮ್ಮಗನನ್ನು ಮರೆಯಲಾಗುತ್ತಿಲ್ಲ ಏನು ಮಾಡಲಿ ಪೂಜ್ಯರೆ? ಎಂದಳು. ‘ಚಿಂತಿಸಬೇಡಿ, ನೀವು ಮನೆಗೆ ಹೋಗಿ ನಿಮ್ಮ ಮೊಮ್ಮಗನನ್ನು ಬಾಲಕೃಷ್ಣ ಎಂದು ತಿಳಿದು ಆತನ ಸೇವೆಯಲ್ಲಿಯೇ ಇರಿ.’ ಸಂತರ ಆಜ್ಞೆಯಂತೆ ಅಜ್ಜಿ ಮನೆಗೆ ಹೋದಳು ಮುದ್ದು ಮೊಮ್ಮಗ ಬಾಲಕೃಷ್ಣನಂತೆ ಕಂಡ. ಮನೆ ನಂದಗೋಕುಲವಾಯಿತು.ಭಕ್ತಿ ಗೀತೆಗಳನ್ನು ಹೇಳಿಕೊಳ್ಳುತ್ತ ಮೊಮ್ಮಗನಲ್ಲಿ ಬಾಲ ಕೃಷ್ಣನನ್ನು ಕಾಣುತ್ತ ಲಾಲಿಸಿ ಪಾಲಿಸಿದಳು. ಆ ಬಾಲ ಗೋಪಾಲನ ಸೇವೆಯಲ್ಲಿ ನಿತ್ಯವೂ ಆಡಿ ಹಾಡಿ ಕುಣಿದು ಧನ್ಯತಾ ಭಾವ ಹೊಂದಿದಳು. ಪರಮ ಸತ್ಯ ಪರಮಾತ್ಮ ಎಲ್ಲೆಲ್ಲೂ ಇದ್ದಾನೆ. ಎಂಬ ಅರಿವು ಆಕೆಯಲ್ಲಿ ಮೂಡಿತು. ಹೀಗಾಗಿ ಪ್ರಪಂಚವೇ ಪರಮಾತ್ಮನ ಪವಿತ್ರ ಸದನವೆನಿಸಿತು.

    ಮೇಲಿನ ದೃಷ್ಟಾಂತದಲ್ಲಿರುವಂತೆ ಈ ಪ್ರಪಂಚ ಪರಮಾತ್ಮನ ಪವಿತ್ರ ಸದನ. ಆದರೆ ಸಂಸಾರದ ವ್ಯಾಮೋಹದಲ್ಲಿರುವ ನಮಗೆ ಭಕ್ತಿಯ ಬಗೆಗೆ ಮುಕ್ತಿಯ ಬಗೆಗೆ ಎಳ್ಳಷ್ಟೂ ವಿಚಾರವೇ ಇಲ್ಲ ಎನ್ನುವವರೇ ಅಧಿಕ ಸಂಖ್ಯೆಯಲ್ಲಿ ಸಿಗುತ್ತಾರೆ ‘.ನನ್ನೊಳಗಿನ ನನ್ನನ್ನು ನಾನು ಕಂಡುಕೊಳ್ಳಲು ಇರುವ ಮಾರ್ಗವೇ ಆಧ್ಯಾತ್ಮ.’ ಆತ್ಮನೊಂದಿಗೆ ನಿರಂತರ ಅನುಸಂದಾನ ಮಾಡಿಕೊಳ್ಳುವ ಮಾರ್ಗ. ಇದು ಮನಃಶಾಂತಿಗೆ ರಾಜಮಾರ್ಗವೆನ್ನುವವರು ಆ ಪಥದಲ್ಲಿ ಸಾಗುತ್ತಿದ್ದಾರೆ. ಕೆಲವರು ಡಾಂಭಿಕ ಭಕ್ತಿ ಮೆರೆಯುತ್ತ ತಿರುಗುತ್ತಾರೆ. ಇನ್ನೂ ಕೆಲವರು ತಮಗೆ ಕಷ್ಟ ಕಾರ್ಪಣ್ಯ ಬಂದಾಗ ಮಾತ್ರ ದೇವರನ್ನು ಸಂಪರ್ಕಿಸುತ್ತಾರೆ.

    ದೇವರ ಸ್ವರೂಪಕ್ಕೆ ನಿರ್ಧಿಷ್ಟ ಆಕಾರವಿಲ್ಲ. ದೇವರನ್ನು ನಂಬುವುದಿಲ್ಲ ಎನ್ನುವ ನಾಸ್ತಿಕರೂ ಇದ್ದಾರೆ.ದೇವರು ಅಂದರೆ ನಂಬಿಕೆ ಅಂಥದ್ದರಲ್ಲಿ ದೇವರನ್ನು ನಂಬದೇ ಇರಲು ಸಾಧ್ಯವೇ? ಆ ನಂಬಿಕೆಯ ಮೇಲೆಯೇ ಜಗತ್ತು ನಿಂತಿದೆ. ಜಗತ್ತಿನಿಂದ ನಾನು ಬೇರೆಯಲ್ಲ ‘ವಿಶ್ವಾಸೋ ಫಲದಾಯಕಃ’ಎನ್ನುವ ಉಕ್ತಿಯ ನಂಬಿದವರು ಹಲವರು. ಒಟ್ಟಿನಲ್ಲಿ ಅವರವರ ಭಾವಕ್ಕೆ ಅವರವರ ಭಕುತಿಗೆ ದೇವರಿದ್ದಾನೆ. ಕಾಯಕವೇ ಕೈಲಾಸವೆನ್ನುವಂತೆ ಕೆಲವರು ದುಡಿಮೆಯಲ್ಲೇ ದೇವರನ್ನು ಕಾಣುತ್ತಾರೆ.

    ಮೂರ್ತಿಪೂಜೆಯಲ್ಲಿ ನಂಬಿಕೆಯಿಲ್ಲ ಎನ್ನುವವರು ಒಂದೆಡೆಯಾದರೆ ಚಂಚಲ ಮನಸ್ಸನ್ನು ಒಂದೆಡೆ ನಿಲ್ಲಿಸಲು ಒಂದು ಬಾಹ್ಯ ಉಪಾಧಿ ಬೇಕು ಹೀಗಾಗಿ ಹಿರಿಯರು ಕಂಡುಕೊಂಡ ದಾರಿಯಾದ ಮೂರ್ತಿಗೆ ಪ್ರಾಣ ಪ್ರತಿಷ್ಟೆ ಮಾಡಿ ಗರ್ಭಗುಡಿಯಲ್ಲಿಟ್ಟು ಆರಾಧಿಸುವುದರಿಂದ ಅದನ್ನು ದೇವರೆಂದೇ ಪರಿಭಾವಿಸುತ್ತೇವೆ.ದೇವರ ಸನ್ನಿಧಿಯಲ್ಲಿ ನಾವಿದ್ದೇವೆ ಎಂಬ ನಂಬಿಕೆ ಬಲಗೊಳ್ಳುತ್ತದೆ ಹೀಗಾಗಿ ಮೂರ್ತಿಪೂಜೆಯೇ ಶ್ರೇಷ್ಠವೆನ್ನುವ ಆಸ್ತಿಕರು ಆ ದಾರಿಯಲ್ಲಿ ನಡೆಯುವರು.

    ಇಡೀ ಸೃಷ್ಟಿ ದೈವಸೃಷ್ಟಿಯಾಗಿದೆ. ಜಗವೇ ದೇವರ ರಾಜ್ಯವಾಗಿದೆಯೆಂದು ಎಲ್ಲ ಧರ್ಮಗಳು ಸಾರುತ್ತಿರುವಾಗ ದೇವರಿಲ್ಲದ ಜಗವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.ಆತನ ಬಲದಿಂದಲೇ ಜಗತ್ತು ಸುಂದರವಾಗಿದೆ. ಬದುಕು ಆ ದೇವನಿತ್ತ ಅಮೂಲ್ಯ ಕಾಣಿಕೆ. ಆತನಿಗೆ ಕೃತಜ್ಞರಾಗದಿದ್ದರೆ ಹೇಗೆ?

    ದೇಗುಲವೆಂಬುದು ಒಂದು ಪವಿತ್ರ ತಾಣವೆಂಬ ಭಾವ ಸಂಸ್ಕೃತಿ ಸಂಸ್ಕಾರದಿಂದ ಬೇರೂರಿದೆ. ಹೀಗಾಗಿ ಕೆಟ್ಟದ್ದನ್ನೆಲ್ಲ ಹೊರಗಿಟ್ಟು ಭಕ್ತಿಯಿಂದ ದೇವಸ್ಥಾನದೊಳಗೆ ಹೋಗಬೇಕೆಂಬ ಎಚ್ಚರ ನಮ್ಮಲ್ಲಿ ಜಾಗೃತಗೊಳ್ಳುತ್ತದೆ. ಆದ್ದರಿಂದಲೇ ದೈವ ಸನ್ನಿಧಿಯಲ್ಲಿ ಸುರಕ್ಷಿತ ಭಾವ ಒಡಮೂಡುತ್ತದೆ. ಭಕ್ತಿಯಿದ್ದರೆ ಕಲ್ಲೂ ದೇವರಾಗುತ್ತದೆ. ಇಲ್ಲದಿದ್ದರೆ ದೇವರ ಮೂರ್ತಿಯೂ ಕಲ್ಲು ಎನಿಸುತ್ತದೆ. ಸಂಪಾದನೆ ವೃತ್ತಿಯಲ್ಲಿ ಕಳೆದು ಹೋಗುವ, ಎಷ್ಟೋ ಸಲ ಬಿಡುವಿಲ್ಲದ, ನಾವು ಎಂದೋ ಒಂದು ದಿನ, ದಿನಾಂಕ ನಿಗದಿ ಮಾಡಿ ಹಾಗೆ ನಿಗದಿಪಡಿಸಿದ ದಿನದಂದು ಭೇಟಿ ಇಲ್ಲವಾಗುವ ಸಂಭವವೂ ಉಂಟು. ಮರೆತು ಕೂತಿದ್ದಕ್ಕೆ ನಮ್ಮನ್ನು ನಾವೇ ಹಳೆದುಕೊಳ್ಳುವ ಹಾಗಾಗುತ್ತದೆ. ದೈವಭಕ್ತಿಯನ್ನೆಲ್ಲ ಹಗುರವಾಗಿ ಭಾವಿಸುವಂತಿಲ್ಲ ಎಂಬ ಅರಿವು ಜೀವಂತಿಕೆಯಿಂದ ಸ್ಪಂದನಶೀಲತೆಯಿಂದ ಭಕ್ತಿಯಲ್ಲಿ ತೊಡಗಿದವರನ್ನು ಕಂಡಾಗ ಆಗದೇ ಇರದು. ದೈವಲೀಲೆಗಳ ವಿಸ್ತಾರದ ಅರಿವು ಪುರಾಣ ಪುಣ್ಯ ಕತೆಗಳಲ್ಲಿ ಕೇಳಿದ ಮೇಲೆ ಮನೆಯಲ್ಲಿಯ ಹಿರಿಯರು ಗುರುಗಳು ಪೂಜ್ಯರು ಸಾಧು ಸಂತರು ಭಕ್ತಿಯಲ್ಲಿ ತನ್ಮಯತೆ ಕಂಡ ಅನುಭವಿಗಳು ನಾನು ಮಾತ್ರ ಅದೇನೂ ಇಲ್ಲದ ಕುರಿಮರಿ! ಎಂದೆನಿಸದೇ ಇರದು.

    ಭಕ್ತಿ ಇಲ್ಲದ ಬಡವ ನಾನಯ್ಯ
    ಕಕ್ಕಯ್ಯನ ಮನೆಯಲ್ಲೂ ಬೇಡಿದೆ
    ಚೆನ್ನಯ್ಯನ ಮನೆಯಲ್ಲೂ ಬೇಡಿದೆ
    ದಾಸಯ್ಯನ ಮನೆಯಲ್ಲೂ ಬೇಡಿದೆ
    ಎಲ್ಲ ಪುರಾತರು ನೆರೆದು
    ಭಕ್ತಿ ಭಿಕ್ಷವನಿಕ್ಕಿದೆಡೆ ಎನ್ನ ಪಾತ್ರೆ ತುಂಬಿತ್ತು
    ಕೂಡಲಸಂಗಮ ದೇವ

    ಜೇನುಹುಳುಗಳು ಹೂವಿಂದ ಹೂವಿಗೆ ಹಾರಿ ಅವುಗಳ ಮಕರಂದವನ್ನು ಹೀರಿ ತಮ್ಮ ದೇಹದೊಳಗಿನ ರಾಸಾಯನಿಕ ಅಂಶವನ್ನು ಎಲ್ಲ ಹೂಗಳ ಮಕರಂದದ ಜೊತೆ ಬೆರೆಸಿ ಜೇನುಗೂಡಲ್ಲಿ ಸಂಗ್ರಹಿಸುವುದರ ಮೂಲಕ ಜೇನು ತುಪ್ಪವನ್ನು ಸೃಷ್ಟಿಸುತ್ತವೆ. ಅಂತೆಯೇ ಸರ್ವ ಶರಣರ ಮನೆಯಲ್ಲಿ ಬೇಡಿದ ಭಕ್ತಿಯ ಮಕರಂದದಿಂದ ಭಕ್ತಿಯ ಜೇನು ಸಂಗ್ರಹಿಸಿದರು ಅಣ್ಣ ಬಸವಣ್ಣ. ಸರ್ವ ಸಮತ್ವ ಭಾವದಿಂದ ಕೂಡಿದ ಭಕ್ತಿಯನ್ನು ಲಿಂಗತತ್ವ ಬಯಸುತ್ತದೆ. ಮಾನವ ವಿಮೋಚನೆಯ ತತ್ವವೇ ಲಿಂಗತತ್ವ. ಹೇಗೆ ಜೇನು ಹುಳುಗಳಿಂದ ಮಾತ್ರ ಜೇನು ತುಪ್ಪ ಪಡೆಯಲು ಸಾಧ್ಯವೋ ಹಾಗೆಯೇ ಪ್ರಖರವಾದ ಮಾನವೀಯ ಪ್ರಜ್ಞೆಯಿಂದ ಕೂಡಿದ ಭಕ್ತಿ ಮಾರ್ಗದಿಂದ ಮಾತ್ರ ಸಕಲ ಜೀವಿಗಳಿಗೆ ಲೇಸನ್ನು ತಲುಪಿಸಲು ಸಾಧ್ಯವೆಂದ ಬಸವಣ್ಣ.. ಭಕ್ತಿ ಭಿಕ್ಷೆಯಿಂದ ಅವರ ಅನುಭವದ ಪಾತ್ರೆ ತುಂಬಿಸಿಕೊಂಡರು.ಸತ್ಯ ನ್ಯಾಯದ ಅಂತರಂಗ ಕಂಡುಕೊಂಡರು.

    ಹೀಗಾಗಿ ವರ್ಗ ವರ್ಣ ಜಾತಿ ಮತ ಪಂಥ ಲಿಂಗ ಭೇದಗಳಿಂದ ಮಾನವ ಕುಲವನ್ನು ಮೇಲಕ್ಕೆತ್ತುವ ಸಿದ್ಧಾಂತವನ್ನು ರೂಪಿಸಲು ಸಾಧ್ಯವಾಯಿತು. . ನಾಗರಿಕ ಸಂಸ್ಕೃತಿಯಲ್ಲಿ ವಿಶ್ವಮಾನವನ ಉದಯವಾಗುವುದು. ಮಾನವೀಯ ಪ್ರಜ್ಞೆಯಿಲ್ಲದವನೇ ನಿಜವಾದ ಬಡವ ಎಂದಿದ್ದಾರೆ ಬಸವಣ್ಣ. ಯಾವುದೇ ಕಾಯಕ ದೊಡ್ಡದಲ್ಲ ಚಿಕ್ಕದಲ್ಲ. ಸತ್ಯಶುದ್ಧ ಕಾಯಕಗಳೆಲ್ಲ ಪವಿತ್ರವಾದವುಗಳು ಎಂಬ ಆತ್ಮವಿಶ್ವಾಸ ಕಾಯಕಜೀವಿಗಳಲ್ಲಿ ತುಂಬಿದರು. ಎಲ್ಲಿಯವರೆಗೆ ಕಾಯಕ ಜೀವಿಗಳಿಗೆ ಬೆಲೆ ಕೊಡುವುದಿಲ್ಲವೋ ಅಲ್ಲಿಯವರೆಗೆ ನಾಗರಿಕ ಸಮಾಜವನ್ನು ನಿರ್ಮಿಸಲು ಸಾಧ್ಯವಿಲ್ಲವೆಂಬುದನ್ನು ಭಕ್ತಿಯ ಪರಿಕಲ್ಪನೆಯ ಮೂಲಕ ತೋರಿಸಿಕೊಟ್ಟರು.

    ಒಂದು ಲಕ್ಷ ಕೋಟಿಯಷ್ಟು ಲೆಕ್ಕಾಚಾರವನ್ನು ಒಂದೇ ಕ್ಷಣದಲ್ಲಿ ಮಾಡಬಲ್ಲ ಕಂಪ್ಯೂಟರ್‌ನ್ನು ಮನುಷ್ಯ ಕಂಡು ಹಿಡಿದಿದ್ದಾನೆ. ಸಾವಿರಾರು ಮೈಲಿ ದೂರದ ನೂರಾರು ಉಪಗ್ರಹಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾನೆ. ಹುಲುಮಾನವನಾದ ಮನುಷ್ಯನಲ್ಲೇ ಇಂಥ ಯೋಗ್ಯತೆಯಿದ್ದರೆ ಆ ದೇವರು ಇನ್ನೆಷ್ಟು ಶಕ್ತಿವಂತನಾಗಿರಬಹುದು ಯೋಚಿಸಿ! ನಾವು ಕಲ್ಪಿಸಲಾಗಲಿ ಅಳೆಯಲಾಗಲಿ ಅಸಾಧ್ಯವಾದಷ್ಟು ಬಲ ಜ್ಞಾನ ಬುದ್ಧಿಶಕ್ತಿ ದೇವರಲ್ಲಿದೆ ಎಂಬುದನ್ನು ಮನಗಾಣಬೇಕು. ದೇವರ ಬುದ್ಧಿಶಕ್ತಿ ಮತ್ತು ಜ್ಞಾನವನ್ನು ಅಲ್ಪವೆಂದು ಭಾವಿಸದೇ ಭಕ್ತಿ ಮಾರ್ಗದಲ್ಲಿ ನಡೆದು ಜೀವನ ಪಾವನಗೊಳಿಸಿಕೊಳ್ಳುವುದು ಒಳ್ಳೆಯದಲ್ಲವೇ?

    ಜಿ ಎಸ್ ಟಿ ಯಶಸ್ಸಿಗೆ ತೆರಿಗೆ ಸಲಹೆಗಾರರ ಕೊಡುಗೆ ಅಪಾರ

    ಸರಕು ಮತ್ತು ಸೇವಾ ತೆರಿಗೆ ( GST )ವ್ಯವಸ್ಥೆ ದೇಶದಲ್ಲಿ ಯಶಸ್ವಿಯಾಗಲು ತೆರಿಗೆ ಸಲಹೆಗಾರರ ಕೊಡುಗೆ ಅಪಾರವಾಗಿದೆ ಎಂದು ಜಿಎಸ್ಟಿ ಮಂಡಳಿಯ ಕರ್ನಾಟಕದ ಪ್ರತಿನಿಧಿ, ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು.

    ಗುರುವಾರ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘ ಆಯೋಜಿಸಿದ್ದ ನಾಲ್ಕನೇ ವರ್ಷದ GST ದಿನದ ಅಂಗವಾಗಿ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ವರ್ಚುವಲ್ ಮೂಲಕ ಅವರು ಮಾತನಾಡಿದರು.

    ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಬಗ್ಗೆ ಹತ್ತು ವರ್ಷಗಳ ಕಾಲ ಚರ್ಚೆಯಾಗಿದೆ. ಇಷ್ಟು ವರ್ಷಗಳ ಸುದೀರ್ಘ ಚರ್ಚೆಯ ನಂತರ ಜಿಎಸ್ಟಿ ಜಾರಿಯಾಗಿದೆ. ಒಂದು ರಾಷ್ಟ್ರ ಒಂದು ತೆರಿಗೆ ಪರಿಕಲ್ಪನೆಯ ಜತೆ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಹಲವಾರು ವೈರುಧ್ಯ ಮತ್ತು ವೈವಿಧ್ಯತೆ ರಾಜ್ಯಗಳನ್ನು ಒಗ್ಗೂಡಿಸಿಕೊಂಡು ಹೋಗೋದು ಬಹುದೊಡ್ಡ ಕೆಲಸ. ಈ ದೊಡ್ಡ ಕೆಲಸದ ಹಿಂದಿರುವ ಎಂಜಿನ್ ಎಂದರೆ ಪ್ರಧಾನಿ ನರೇಂದ್ರ ಮೋದಿ ಎಂದು ಅವರು ಬಣ್ಣಿಸಿದರು.

    ದೇಶದಲ್ಲಿ GST ಜಾರಿಯಾದಾಗ ಹಳೇ ಪದ್ಧತಿಯಿಂದ ಹೊಸ ಪದ್ಧತಿಗೆ ಹೊಸ ಪದ್ಧತಿಗೆ ತಮ್ಮನ್ನು ತಾವು ಪರಿವರ್ತನೆ ಗೊಳಿಸಿಕೊಂಡವರು ಎಂದರೆ ತೆರಿಗೆ ಸಲಹೆಗಾರರು. ಅವರು ಹೊಸ ತೆರಿಗೆ ಪದ್ಧತಿಯನ್ನು ಅನುಷ್ಠಾನಕ್ಕೆ ತಂದರುಮ. ಜನರಲ್ಲಿ ಗೊಂದಲ ಸೃಷ್ಟಿಯಾಗದಂತೆ ಮುತುವರ್ಜಿ ವಹಿಸಿದರು. ಈ ಕಾರಣದಿಂದಾಗಿ ದೇಶದಲ್ಲಿ ಇಂದು ಜಿಎಸ್ಟಿ ತೆರಿಗೆ ವ್ಯವಸ್ಥೆ ನಾಲ್ಕು ವರ್ಷಗಳನ್ನು ಪೂರೈಸಿದೆ. ನಮ್ಮ ಮುಂದೆ ಮುಂದಿನ 40 ವರ್ಷಗಳಲ್ಲಿ ತೆರಿಗೆ ವ್ಯವಸ್ಥೆಯಲ್ಲಿ ಇನ್ನಷ್ಟು ಸರಳಿಕರಣ ಮಾಡಬೇಕಾದದ್ದು ಅಗತ್ಯವಾಗಿದೆ. ಒಟ್ಟಾರೆ ದೇಶಕಟ್ಟುವ ಕೆಲಸದಲ್ಲಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ತೆರಿಗೆ ಸಲಹೆಗಾರರು ನಿರ್ವಹಿಸುವ ಪಾತ್ರ ಬಹುಮುಖ್ಯವಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

    ಸುದ್ದಿ ಬಿತ್ತರಿಸುವ ಭರದಲ್ಲಿ ಸಾರ ಮರೆಯದಿರಿ: ಪತ್ರಕರ್ತರಿಗೆ ಮುಖ್ಯಮಂತ್ರಿ ಸಲಹೆ

    ಬೆರಳ ತುದಿಯಲ್ಲಿ ಮಾಹಿತಿ ಲಭ್ಯವಾಗಿಸುವ ತಂತ್ರಜ್ಞಾನದ ಯುಗದಲ್ಲಿ ಸುದ್ದಿ ಬಿತ್ತರಿಸುವ ರಭಸದಲ್ಲಿ ಸುದ್ದಿಯ ಸಾರವನ್ನು ಮರೆಯುವಂತಾಗಬಾರದು ಎಂಬ ಎಚ್ಚರವೂ ಇಂದು ಅಗತ್ಯ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

    ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಸುಮಾರು ಎರಡು ಶತಮಾನಗಳ ಹಿಂದೆ ಹರ್ಮನ್ ಮೊಗ್ಲಿಂಗ್ ಪ್ರಾರಂಭ ಮಾಡಿದ ಮಂಗಳೂರು ಸಮಾಚಾರ ಕನ್ನಡದ ಮೊತ್ತ ಮೊದಲ ಪತ್ರಿಕೆ. ಹೀಗೆ ಕರ್ನಾಟಕದಲ್ಲಿ ಆರಂಭಗೊಂಡ ಪತ್ರಿಕೋದ್ಯಮ ಇಂದು ಹಲವು ಸ್ಥಿತ್ಯಂತರಗಳನ್ನು ಕಂಡಿದೆ. ಅಂತರ್ಜಾಲ ಹಾಗೂ ತಂತ್ರಜ್ಞಾನದಿಂದಾಗಿ ಪತ್ರಿಕೋದ್ಯಮದ ಸ್ವರೂಪವೇ ಇಂದು ಬದಲಾಗಿದೆ. ಅದಾಗ್ಯೂ ಸತ್ಯ, ಪ್ರಾಮಾಣಿಕತೆ, ವಸ್ತುನಿಷ್ಠತೆಯ ನೆಲೆಗಟ್ಟಿನಲ್ಲಿ ವರದಿಗಳು ಮೂಡಿಬಂದಾಗ ಮಾತ್ರ ಮಾಧ್ಯಮದ ನಿಜ ಧ್ಯೇಯವನ್ನು ಸಾಧಿಸಿದಂತಾಗುತ್ತದೆ ಎಂದು ಮುಖ್ಯಮಂತ್ರಿಗಳು ನುಡಿದರು.

    ಮಾಧ್ಯಮ ಕ್ಷೇತ್ರ ಹಾಗೂ ಪತ್ರಕರ್ತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಪತ್ರಕರ್ತರು ಅತ್ಯಂತ ಕ್ರಿಯಾಶೀಲರಾಗಿ ದುಡಿದಿದ್ದಾರೆ. ಅನೇಕರು ಅಸುನೀಗಿದ್ದಾರೆ. ಕೋವಿಡ್‍ನಿಂದ ಮೃತಪಟ್ಟ 31 ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ.ಗಳ ನೆರವು ನೀಡಲಾಗಿದೆ ಎಂದು ಅವರು ನುಡಿದರು.

    ರಾಜ್ಯ ಸರ್ಕಾರ ಪತ್ರಕರ್ತರ ಕಾರ್ಯವನ್ನು ಮನಗಂಡು ಕೋವಿಡ್ ವಾರಿಯರ್ಸ್ ಎಂದು ಘೋಷಿಸಿ ಪತ್ರಿಕಾ ವಿತರಕರೂ ಸೇರಿದಂತೆ ಸುಮಾರು 25 ಸಾವಿರಕ್ಕೂ ಹೆಚ್ಚು ಪತ್ರಕರ್ತರು ಮತ್ತು ಅವರ ಕುಟುಂಬದವರಿಗೆ ಉಚಿತವಾಗಿ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆಯನ್ನು ಹಾಕಿಸಲಾಗಿದೆ. ಪತ್ರಕರ್ತರ ಕ್ಷೇಮ ನಿಧಿಗೆ 5 ಕೋಟಿ ರೂ.ಗಳ ನೆರವನ್ನು ಆಯವ್ಯಯದಲ್ಲಿ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ನೆರವು, 56 ಕೋಟಿ ಜಾಹೀರಾತು ಬಾಕಿ ಬಿಡುಗಡೆ, ಹೆಲ್ತ್ ಕಾರ್ಡ್ ಸೌಲಭ್ಯ ನೀಡಿರುವುದನ್ನು ಸ್ಮರಿಸಿ, ಅಭಿನಂದನೆ ಸಲ್ಲಿಸಿದರು.

    ತಮಿಳುನಾಡಿನ ಮಾದರಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಪತ್ರಕರ್ತರಿಗೆ ಆರ್ಥಿಕ ನೆರವು ನೀಡಬೇಕು. ಗ್ರಾಮೀಣ ಪತ್ರಕರ್ತರಿಗೆ ಹೆಲ್ತ್ ಕಾರ್ಡ್ ಮತ್ತು ಬಸ್ ಪಾಸ್ ಸೌಲಭ್ಯ ಒದಗಿಸಬೇಕು. ಕನ್ನಡದ ಮೊಟ್ಟ ಮೊದಲ ಪತ್ರಿಕೆ ಹೊರ ತಂದ ಹರ್ಮನ್ ಮೊಂಗ್ಲಿನ್ ಅವರ ನೆನಪಿಗಾಗಿ ಮಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ತಗಡೂರು ಒತ್ತಾಯಿಸಿದರು.ಪತ್ರಕರ್ತರ ಬೇಡಿಕೆಯನ್ನು ಪರಿಶೀಲನೆ ಮಾಡುವುದಾಗಿ ಸಿಎಂ ಭರವಸೆ ನೀಡಿದರು.

    ಕಲಬುರ್ಗಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಪತ್ರಕರ್ತರು ಈ ವರ್ಚುವಲ್ ಸಮಾರಂಭದಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ಮುಖ್ಯಮಂತ್ರಿಯವರ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಮಾಧ್ಯಮ ಸಲಹೆಗಾರ ಎನ್. ಭೃಂಗೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಪಿ.ಎಸ್. ಹರ್ಷ, IFWJ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕಟ್ಟಡ ಸಮಿತಿ ಅಧ್ಯಕ್ಷ ಮದನಗೌಡ,ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮತ್ತಿಕೆರೆ ಜಯರಾಂ, ಲೋಕೇಶ್, ಪುಂಡಲೀಕ ಬಾಳೋಜಿ, ಬ ಮಲ್ಲಿಕಾರ್ಜುನ, ಸಂಜೀವ ರಾವ್ ಕುಲಕರ್ಣಿ, ಡಾ.ಉಮೇಶ್ವರ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಕೆಂಚೇಗೌಡ
    ಉಪಸ್ಥಿತರಿದ್ದರು.

    error: Content is protected !!