25.1 C
Karnataka
Sunday, May 24, 2026
    Home Blog Page 87

    ನವೆಂಬರ್‌ 17-18 & 19ರಂದು ಬೆಂಗಳೂರು ಟೆಕ್‌ ಸಮಿಟ್‌; ಪ್ರಧಾನಿ ಮೋದಿ, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‌ ಅವರಿಗೆ ಆಹ್ವಾನ


    ರಾಜ್ಯ ಸರಕಾರ ಆಯೋಜಿಸುವ ಪ್ರತಿಷ್ಠಿತ ಬೆಂಗಳೂರು ಟೆಕ್‌ ಸಮಿಟ್‌-‌2021 (ಬಿಟಿಎಸ್) ನವೆಂಬರ್‌ 17-18 & 19ರಂದು ನಡೆಯಲಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಟೆಕ್‌ ಸಮಿಟ್‌ಗೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ಜತೆ ಪೂರ್ವಭಾವಿ ಸಭೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಳೆದ ವರ್ಷ ಈ ಸಮಿಟ್‌ಗೆ ʼನೆಕ್ಸ್ಟ್‌ ಇಸ್‌ ನೌʼ (Next is Now) ಎಂಬ ಟ್ಯಾಗ್‌ಲೈನ್‌ ಇತ್ತು. ಈ ವರ್ಷ ʼಡ್ರೈವ್‌ ಇನ್‌ ದಿ ನೆಕ್ಸ್ಟ್‌ʼ (Driving thr Next) ಎನ್ನುವ ಟ್ಯಾಗ್‌ಲೈನ್‌ ನಿಗದಿ ಮಾಡಲಾಗಿದೆ ಎಂದರು.

    ಕೋವಿಡ್‌ ಕಾರಣಕ್ಕೆ ಈ ವರ್ಷವೂ ವರ್ಚುಯಲ್‌ ಮತ್ತು ಭೌತಿಕ ವೇದಿಕೆ ಒಳಗೊಂಡಂತೆ ಹೈಬ್ರಿಡ್‌ ಪದ್ಧತಿಯಲ್ಲಿ ಆಯೋಜಿಸಲಾಗುತ್ತಿದೆ ಎಂದರು ಅವರು.

    ಪ್ರಧಾನಿ ಮೋದಿ ಅವರಿಂದ ಉದ್ಘಾಟನೆ:

    ಈ ಟೆಕ್‌ ಶೃಂಗಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸುವ ಉದ್ದೇಶ ಇದ್ದು ಅವರನ್ನು ಆಹ್ವಾನಿಸಲಾಗುವುದು. ಅದೇ ರೀತಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‌ ಅವರನ್ನು ಸಮಿಟ್‌ಗೆ ಆಹ್ವಾನಿಸಲು ನಿರ್ಧರಿಸಲಾಗಿದೆ. ಜತೆಗೆ, ತಂತ್ರಜ್ಞಾನ ಮತ್ತು ಹೆಲ್ತ್‌ಕೇರ್‌ ಕ್ಷೇತ್ರದ ಪ್ರಮುಖ ಕಂಪನಿಗಳ ಮುಖ್ಯಸ್ಥರನ್ನು ಕರೆಯುವ ಉದ್ದೇಶ ಇದೆ ಎಂದರು.

    ಬಿಯಾಂಡ್‌ ಬೆಂಗಳೂರು:

    ಟೆಕ್‌ ಸಮಿಟ್‌ಗೆ ಪೂರ್ವಭಾವಿಯಾಗಿ ಬಿಯಾಂಡ್‌ ಬೆಂಗಳೂರು ಉಪಕ್ರಮದ ಅಡಿಯಲ್ಲಿ  ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಟೆಕ್‌ ಸಮಿಟ್‌ಗಳನ್ನು ನಡೆಸಲಾಗುವುದು. ಈ ಕಾರ್ಯಕ್ರಮಗಳನ್ನೂ ದೊಡ್ಡ ಪ್ರಮಾಣದಲ್ಲೇ ನಡೆಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

    ಹಿಂದಿನ ಶೃಂಗದಲ್ಲಿ ಗ್ಲೋಬಲ್‌ ಅಲೆಯನ್ಸ್‌ ಒಕ್ಕೂಟಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಈ ಬಾರಿ ಭಾರತೀಯ ಹೂಡಿಕೆದಾರರ ಮೈತ್ರಿಕೂಟಕ್ಕೆ ಮಹತ್ವ ಕೊಡಲಾಗುತ್ತಿದೆ. ಈ ಮೂಲಕ ವಿವಿಧ ರಾಜ್ಯಗಳು ಹಾಗೂ ಎತ್ತರದ ಸಾಧನೆ ಮಾಡಿರುವ ಖಾಸಗಿ ಕಂಪನಿ, ವ್ಯಕ್ತಿಗಳು ಭಾಗಿಯಾಗವಂತೆ ಮಾಡಲಾಗುತ್ತಿದೆ ಎಂದು ಡಿಸಿಎಂ ವಿವರಿಸಿದರು.

    ಈ ಮೂರು ನಗರಗಳಲ್ಲಿ ನಡೆಯಲಿರುವ ಸಭೆಗಳಲ್ಲಿ ವರ್ಚುಯಲ್‌ ವೇದಿಕೆಯಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಐಟಿ ಸಚಿವ ರವಿಶಂಕರ್‌ ಪ್ರಸಾದ್‌, ಆರೋಗ್ಯ ಸಚಿವ ಡಾ.ಹರ್ಷವರ್ಧನ್‌, ಸಾರಿಗೆ ಸಚಿವ ನಿತಿನ್‌ ಗಡ್ಕರಿ ಭಾಗವಹಿಸಲಿದ್ದಾರೆ. ಜತೆಗೆ, ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.‌ಯಡಿಯೂರಪ್ಪ ಅವರು ಪಾಲ್ಗೊಳ್ಳುವರು ಎಂದು ಡಿಸಿಎಂ ಮಾಹಿತಿ ನೀಡಿದರು.

    ಈ ಸಭೆಗಳಲ್ಲಿ ರಾಜ್ಯದ ಉದ್ಯಮಶೀಲತಾ ಗುಣಮಟ್ಟದ ಚೌಕಟ್ಟು ಮಾಹಿತಿ ನೀಡಿದರು.

    ಜಿಲ್ಲೆಗಳಲ್ಲಿ ನಡೆಯುವ ಟೆಕ್‌ ಸಮಿಟ್‌ ಪೂರ್ವಭಾವಿ ಸಭೆಗಳಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM), ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ (ER &D) ಹಾಗೂ ಭಾರತೀಯ ಎಲೆಕ್ಟ್ರಾನಿಕ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ (IESA)ಗೆ ಸಂಬಂಧಿಸಿದ ವರದಿಗಳನ್ನು ಅನಾವರಣ ಮಾಡಲಾಗುವುದು ಎಂದು ಡಿಸಿಎಂ ತಿಳಿಸಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಕೂಡ ಈ ಬಾರಿಯ ಬಿಟಿಎಸ್ ನಲ್ಲಿ ಹೆಚ್ಚಿನ ಪಾತ್ರ ವಹಿಸಲಿವೆ ಎಂದು ಅವರು ತಿಳಿಸಿದರು.

    ರಾಜ್ಯದ ಮಾಹಿತಿ ತಂತ್ರಜ್ಞಾನ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲ ಕೃಷ್ಣ, ಜೈವಿಕ ತಂತ್ರಜ್ಣಾನ ವಿಷನ್ ಗ್ರೂಪ್ ನ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಶಾ, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕರೂ ಆದ ಮುಖ್ಯಮಂತ್ರಿಗಳ ಸಲಹೆಗಾರ ಪ್ರಶಾಂತ್‌ ಪ್ರಕಾಶ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಡಿಸಿಎಂ ಕಾರ್ಯದರ್ಶಿ ಪಿ.ಪ್ರದೀಪ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

    ದ್ವಿತೀಯ ಪಿಯುಸಿ ಫಲಿತಾಂಶ ಮಾರ್ಗಸೂಚಿ ಪ್ರಕಟ; ಅತಿ ಶೀಘ್ರವೇ ರಿಸಲ್ಟ್

    ಕೋವಿಡ್-19 ಸೋಂಕು ಪ್ರಸರಣದಿಂದಾಗಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಎಸ್ ಎಸ್ ಎಲ್ ಸಿಯಲ್ಲಿ ಪಡೆದ ಅಂಕಗಳು, ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿದ ಅಂಕಗಳು ಮತ್ತು ಕೃಪಾಂಕಗಳ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸಿ ಅತಿ ಶೀಘ್ರದಲ್ಲಿ ಫಲಿತಾಂಶಗಳನ್ನು ಘೋಷಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಈ ಕುರಿತಂತೆ ಅಧಿಕೃತ ಸರ್ಕಾರದ ಆದೇಶ ಪ್ರಕಟಣೆಗೆ ಕ್ರಮ ವಹಿಸಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾರ್ಗದರ್ಶಿ ಸೂತ್ರಗಳನ್ನು ರಚಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಗೆ ಅನುಗುಣವಾಗಿ ಫಲಿತಾಂಶಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಒಂದು ವೇಳೆ ಘೋಷಿತ ಫಲಿತಾಂಶದಿಂದ ಪಡೆದ ಅಂಕಗಳು ತೃಪ್ತಿಕರವೆನಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳು ಮುಂದಿನ ದಿನಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಳ್ಳುವ ಖಾಸಗಿ ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ಒದಗಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಪುನರಾವರ್ತಿತ ಅಭ್ಯರ್ಥಿಗಳ (ರಿಪೀಟರ್ಸ್ ) ತೇರ್ಗಡೆ :
    ಕೋವಿಡ್-19 ಸೋಂಕು ಪ್ರಸರಣದ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದ ಪುನರಾವರ್ತಿತ ಅಭ್ಯರ್ಥಿಗಳನ್ನು ಉತ್ತೀರ್ಣಗೊಳಿಸಲು ಇಲಾಖೆ ನಿರ್ಧರಿಸಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕನಿಷ್ಠ ಉತ್ತೀರ್ಣ ಅಂಕಗಳನ್ನು ಮತ್ತು ಶೇ. 5ರಷ್ಟು ಕೃಪಾಂಕಗಳನ್ನು ನೀಡಿ ಫಲಿತಾಂಶ ಘೋಷಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

    ಕೋವಿಡ್-19 ಸೋಂಕು ಪ್ರಸರಣದ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ನಿರ್ಧಾರ ಕೈಗೊಂಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಪುನರಾವರ್ತಿತ ಅಭ್ಯರ್ಥಿಗಳನ್ನೂ ಸಹ ಉತ್ತೀರ್ಣಗೊಳಿಸಬೇಕೆಂದು ಕೆಲವರು ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಪುನರಾವರ್ತಿತ ಅಭ್ಯರ್ಥಿಗಳನ್ನೂ ಈ ವರ್ಷದ ಮಟ್ಟಿಗೆ ಉತ್ತೀರ್ಣಗೊಳಿಸುವ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದು, ಸರ್ಕಾರದ ನಿಲುವನ್ನು ಹೈಕೋರ್ಟ್ ಸಮ್ಮತಿಸಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಈ ಬಗ್ಗೆ ಸರಕಾರ ಹೊರಡಿಸಿರುವ ಆದೇಶದ ಪೂರ್ಣ ಪಾಠ ಇಲ್ಲಿದೆ.

    ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕೂ ಅನುಕೂಲ, ತಮಿಳುನಾಡಿಗೂ ಅನುಕೂಲ ಎಂದ ಬೊಮ್ಮಾಯಿ

    ತಮಿಳುನಾಡು ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ಸಣ್ಣ ವಿಷಯಗಳನ್ನು ದೊಡ್ಡದಾಗಿ ಬಿಂಬಿಸುವ ಮೂಲಕ ರಾಜಕೀಯ ಸಾಹಸ ಪ್ರದರ್ಶನ ಮಾಡುತ್ತಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು.ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮಿಳುನಾಡು ನೀರಿನ ವಿಷಯವಾಗಿ ಯಾವಾಗಲೂ ಕರ್ನಾಟಕದೊಂದಿಗೆ ತಕರಾರು ಮಾಡುತ್ತಲೇ ಬಂದಿದೆ ಎಂದರು.

    ಅದು ಕಾವೇರಿ ನದಿನೀರು ಹಂಚಿಕೆ ಇರಬಹುದು, ಕಾವೇರಿ ಕಣಿವೆಯಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳೇ ಆಗಿರಬಹುದು. ಅವುಗಳ ಬಗ್ಗೆ ತಮಿಳುನಾಡು ತಕರಾರು ಮಾಡುತ್ತಲೇ ಬಂದಿದೆ. ಕಾವೇರಿ ನ್ಯಾಯ ಮಂಡಳಿ ರಚನೆ ಆದ ಮೇಲೆ ಅವರಿಗೆ ಕಷ್ಟವಾಗುತ್ತಿದೆ ಎಂದು ಅವರು ಹೇಳಿದರು.

    ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕೂ ಅನುಕೂಲವಾಗುತ್ತದೆ. ತಮಿಳುನಾಡು ರಾಜ್ಯಕ್ಕೂ ಅನುಕೂಲ ಆಗುತ್ತದೆ. ಅವರ ಪಾಲಿನ ನೀರು ಹರಿಸಲಾಗುವುದು. ಅದಕ್ಕೆಎಲ್ಲಿಯೂ ತಡೆ ಉಂಟಾಗುವುದಿಲ್ಲ. ಹೆಚ್ಚುವರಿ ನೀರನ್ನು ಮಾತ್ರ ಕರ್ನಾಟಕ ಬಳಕೆ ಮಾಡುತ್ತದೆ. ಉಭಯ ರಾಜ್ಯಗಳಿಗೆ ಯೋಜನೆಯಿಂದ ಲಾಭವಾಗುತ್ತದೆ. ಆದರೂ ಕೂಡ ಈ ಯೋಜನೆಯನ್ನು ತಮಿಳುನಾಡು ಸರ್ಕಾರ ವಿರೋಧಿಸುತ್ತಿದೆ. ಅದೇ ರೀತಿ ಮಾರ್ಕಂಡೇಯ ಯೋಜನೆಗೆ ತಮಿಳುನಾಡಿನ ತಕರಾರು ಮೊದಲಿನಿಂದಲೂ ಇದೆ. ಅಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದೊಂದು ರಾಜಕೀಯ ಸಾಹಸ. ಸಣ್ ವಿಷಯಗಳನ್ನು ದೊಡ್ಡದು ಮಾಡಿ ರಾಜಕೀಯ ಸಾಹಸ ಪ್ರದರ್ಶನ ಮಾಡಲಾಗುತ್ತಿದೆ. ರಾಜಕೀಯಕ್ಕೆ ಏನು ಬೇಕು ಅದನ್ನು ತಮಿಳುನಾಡು ಮಾಡುತ್ತಿದೆ. ಆದರೆ ನಾವು ಕಾನೂನಾತ್ಮಕವಾಗಿ ಸರಿಯಾಗಿ ಇದ್ದೇವೆ. ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದರು.

    ತಮಿಳುನಾಡು ರಾಜ್ಯಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬರೆದಿರುವ ಪತ್ರಕ್ಕೆ ತಮಿಳುನಾಡು ಸ್ಪಂದಿಸಲೇ ಬೇಕಾಗುತ್ತದೆ. ಏಕೆಂದರೆ ಇದು ಕುಡಿಯುವ ನೀರಿನ ಯೋಜನೆ. ಕೆ ಆರ್ ಎಸ್ ಬಿಟ್ಟರೆ ಕಾವೇರಿ ನದಿ ನೀರನ್ನು ಶೇಖರಿಸಿಡಲು ಬೇರೆ ಸ್ಥಳ ಇಲ್ಲ. ಮೇಕೆದಾಟು ಯೋಜನೆಯಿಂದ ಸಂಕಷ್ಟ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಾಗುತ್ತದೆ. ಅವರಿಗೂ ಅನುಕೂಲ ನಮಗೂ ಅನುಕೂಲ ಎಂದು ಬಸವರಾಜ ಬೊಮ್ಮಾಯಿ ಯೋಜನೆ ಬಗ್ಗೆ ವಿವರಿಸಿದರು.

    ಇಂಧನದ ಮೇಲೆ ವಿಧಿಸಲಾಗುತ್ತಿರುವ ಸೆಸ್ ದೇಶಕ್ಕೆ ಸಂಬಂಧ ಪಟ್ಟ ವಿಚಾರ. ಸೆಸ್ ನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಿಳಿಸುತ್ತಿವೆ. ಇಂಧನ ನಿರ್ವಹಣೆ ವೆಚ್ಚ, ಇಂಧನ ಮೂಲಬೆಲೆ ಮತ್ತು ಪರಿವರ್ತನ ವೆಚ್ಚ ಎಷ್ಟಿದೆ ಎಂಬುದನ್ನು ಎಲ್ಲ ರಾಜ್ಯಗಳು ಕುಳಿತು ಚರ್ಚೆ ಮಾಡಬೇಕಾಗುತ್ತದೆ. ಜನರ ಮೇಲಿನ ಈ ಭಾರವನ್ನು ಕಡಿಮೆ ಮಾಡುವುದಕ್ಕೆ ಎಲ್ಲರೂ ಒಪ್ಪಿಗೆ ನೀಡಬೇಕಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸಮಸ್ಯೆಗಳು ಎದುರಾದಾಗ ಚರ್ಚೆ ಮಾಡಿ ನಿರ್ಧಾರ ಮಾಡಿರುವ ಉದಾಹರಣೆಗಳಿವೆ. ಆ ರೀತಿ ಎಲ್ಲ ರಾಜ್ಯಗಳು ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟರು.‌

    ಆಸೆಗೆ ಕಡಿವಾಣ ಹಾಕಿ, ಕೈಗೆಟುಕಿದ್ದರ ಆನಂದ ಪಡೆಯಿರಿ

    ಷೇರುಪೇಟೆ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಈಕ್ವಿಟಿ ಷೇರುಗಳು. ಅವುಗಳಲ್ಲಿ ಅಗ್ರಮಾನ್ಯ ಪ್ರವರ್ತಕರ ಕಂಪನಿಗಳು, ವಿಶೇಷವಾಗಿ ಹೂಡಿಕೆದಾರರನ್ನು, ತಾನು ವಿತರಿಸುತ್ತಿದ್ದ ಕಾರ್ಪೊರೇಟ್‌ ಫಲಗಳ ಗಾತ್ರದಿಂದ ಹರ್ಷಿತಗೊಳಿಸುತ್ತಿದ್ದ ಕಂಪನಿಗಳಾದ ಟಾಟಾ ಸಮೂಹ, ಇನ್ಫೋಸಿಸ್‌, ರಿಲಯನ್ಸ್ ಇಂಡಸ್ಟ್ರೀಸ್‌, ಕಾಲ್ಗೇಟ್‌, ಹಿಂದೂಸ್ಥಾನ್‌ ಯುನಿಲೀವರ್‌, ಲಾರ್ಸನ್‌ ಅಂಡ್‌ ಟೋಬ್ರೊ ನಂತಹ ಕಂಪನಿಗಳು ಮುಖ್ಯವಾಗಿದ್ದವು.

    ಜಾಗತೀಕರಣಕ್ಕೂ ಮುಂಚೆ ಷೇರುಗಳು ಎಂದರೆ ಈಕ್ವಿಟಿ ಮತ್ತು ಪ್ರಿಫರನ್ಸ್‌ ಷೇರುಗಳು ಮಾತ್ರ. ನಂತರದಲ್ಲಿ ಡಿ ವಿ ಆರ್‌ ಎಂಬ ಮತದಾನ ವ್ಯತ್ಯಯದ ಷೇರುಗಳು ತೇಲಿಬಂದವು. ಡಿ ವಿ ಆರ್‌ ಗಳಿಗೆ ಹೆಚ್ಚಿನ ಬೆಂಬಲ ದೊರೆಯಲಿಲ್ಲ. ಈಕ್ವಿಟಿ ಷೇರುಗಳಿಗೆ ಹೋಲಿಸಿದಲ್ಲಿ, ಡಿ ವಿ ಆರ್‌ ಗಳು ಕೇವಲ ಶೇ. 25 ರಷ್ಟು ಮಾತ್ರ ಮತದಾನದ ಹಕ್ಕು ಪಡೆದಿರುತ್ತವೆ. ಆದರೆ ಇದನ್ನು ಸರಿದೂಗಿಸಲು ಈಕ್ವಿಟಿ ಷೇರುಗಳಿಗೆ ನೀಡುವ ಡಿವಿಡೆಂಡ್‌ ಗಿಂತ ಶೇ.5 ರಷ್ಟನ್ನು ಹೆಚ್ಚಿಗೆ ನೀಡಲಾಗುವುದು. ಆದರೂ ಡಿ ವಿ ಆರ್‌ ಗಳಿಗೆ ಬೆಂಬಲ ದೊರೆಯುತ್ತಿಲ್ಲ. ಕಾರಣ ಡಿ ವಿ ಆರ್‌ ವಿತರಿಸಿದ ಕಂಪನಿಗಳು ಸೂಕ್ತ ಪ್ರಮಾಣದ ಡಿವಿಡೆಂಡ್‌ ಗಳನ್ನು ವಿತರಿಸುತ್ತಿಲ್ಲ.

    ಡಿ ವಿ ಆರ್‌ ವಿತರಿಸಿದ ಕಂಪನಿಗಳು:

    ಟಾಟಾ ಮೋಟಾರ್ಸ್‌, ಪೆಂಟಲೂನ್‌ ಫ್ಯಾಷನ್ಸ್‌, ಜೈನ್‌ ಇರ್ರಿಗೇಷನ್‌, ಗುಜರಾತ್‌ ಎನ್‌ ಆರ್‌ ಇ ಕೋಕ್‌ ಕಂಪನಿಗಳು ಡಿ ವಿ ಆರ್‌ ಗಳನ್ನು ವಿತರಿಸಿವೆ. ಇವುಗಳಲ್ಲಿ ಗುಜರಾತ್‌ ಎನ್‌ ಆರ್‌ ಇ ಕೋಕ್‌ ಕಂಪನಿಯು ವಹಿವಾಟಿನಿಂದ ಡಿಲೀಸ್ಟ್‌ ಆಗಿದೆ. ಪೆಂಟಲೂನ್‌ ಫ್ಯಾಷನ್ಸ್‌ ಕಂಪನಿಯು 2016 ರಲ್ಲಿ ಆದಿತ್ಯ ಬಿರ್ಲಾ ಫ್ಯಾಷನ್‌ ಅಂಡ್‌ ರೀಟೇಲ್‌ ನಲ್ಲಿ ವಿಲೀನಗೊಂಡಿದೆ. ಜೈನ್‌ ಇರಿಗೇಷನ್‌ ಮತ್ತು ಟಾಟಾ ಮೋಟಾರ್‌ ಡಿ ವಿ ಆರ್‌ ಗಳು ಮಾತ್ರ ವಹಿವಾಟಾಗುತ್ತಿವೆ. 2016 ರಿಂದಲೂ ಡಿವಿಡೆಂಡ್‌ ಘೋಷಿಸದೇ ಇರುವ ಟಾಟಾ ಮೋಟಾರ್ಸ್‌ ಷೇರು ಈಗ ರೂ.340 ರ ಸಮೀಪ ವಹಿವಾಟಾಗುತ್ತಿದ್ದು ಈ ಕಂಪನಿಯ ಡಿ ವಿ ಆರ್‌ ಗಳು ಷೇರುಗಳಿಗಿಂತ ಅತಿ ಕಡಿಮೆ ದರದಲ್ಲಿಅಂದರೆ ರೂ.155 ರ ಸಮೀಪ ವಹಿವಾಟಾಗುತ್ತಿವೆ. ಸಧ್ಯ ಈ ಕಂಪನಿಯು ಲಾಭ ಗಳಿಸುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಆಕರ್ಷಕ ಡಿವಿಡೆಂಡ್‌ ನಿರೀಕ್ಷಿಸಬಹುದಾಗಿದೆ. ಈ ಅಂಶವನ್ನಾಧರಿಸಿ ಡಿ ವಿ ಆರ್‌ ಗಳು ಹೂಡಿಕೆಗೆ ಉತ್ತಮವೆನಿಸುತ್ತವೆ.

    ಬದಲಾದ ಸಂಪನ್ಮೂಲ ಸಂಗ್ರಹಣೆ ವೈಖರಿ:

    ಪ್ರಿಫರನ್ಸ್ ಷೇರುಗಳು, ವ್ಯತ್ಯಯ ಮತದಾನದ ಷೇರುಗಳು ಕಣ್ಮರೆಯಾದ ನಂತರ ಮಹತ್ತರವಾದ ಬದಲಾವಣೆಗಳನ್ನು ಸಂಪನ್ಮೂಲ ಸಂಗ್ರಹಣಾ ವಿಧದಲ್ಲಿ ಕಾಣಬಹುದಾಗಿದೆ. ವಿತ್ತೀಯ ವಲಯದಲ್ಲಿ ವಿಶೇಷವಾಗಿ ಬ್ಯಾಂಕಿಂಗ್‌ ವಲಯದಲ್ಲಿ ಟೈರ್‌ 1 ಮತ್ತು ಟೈರ್‌ 2 ಪರ್ಪೆಚುಯಲ್‌ ಬಾಂಡ್‌ ಗಳ ಯೋಜನೆ ಅಳವಡಿಸಿಕೊಳ್ಳಲಾಯಿತು. ಇದರಲ್ಲಿ ಅಡಕವಾಗಿರುವ ಅಪಾಯದ ಮಟ್ಟವು ಯೆಸ್‌ ಬ್ಯಾಂಕ್‌ ನಲ್ಲಿ ಮಾಡಿದ್ದ ಸುಮಾರು ರೂ.8,400 ಕೋಟಿ ಮೌಲ್ಯದ ಬಾಂಡ್ ಗಳನ್ನು ಶೂನ್ಯೀಕರಿಸಿದಾಗ( ಹೂಡಿಕೆದಾರರ ಹಣ ಹಿಂದಿರುಗಿಸದೆ, ರದ್ದು ಮಾಡಿದ ಕ್ರಮ) ಮತ್ತು ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ನ ಸುಮಾರು ರೂ.318 ಯ ಬಾಂಡ್‌ ಗಳನ್ನು ಶೂನ್ಯೀಕರಿಸದಾಗ ಅರಿವಾಯಿತು.

    ಈಗಲೂ ಐಸಿಐಸಿಐ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಇಂಡಿಯನ್‌ ಓವರ್ಸೀಸ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ, ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹಲವಾರು ವಿಧದ ಬಾಂಡ್‌ ಗಳು ಮತ್ತು ಪರ್ಪೆಚುಯಲ್‌ ಬಾಂಡ್‌ ಗಳ ಯೋಜನೆಗಳನ್ನು ತೇಲಿಬಿಟ್ಟು ಸಂಪನ್ಮೂಲ ಸಂಗ್ರಹಣೆ ಮಾಡಿವೆ.

    ಬಾಂಡ್‌ ಗಳು ಮತ್ತು ಪರ್ಪೆಚುಯಲ್‌ ಬಾಂಡ್‌ ಯೋಜನೆ:

    ಬ್ಯಾಂಕ್‌ ಬಡ್ಡಿಯ/ ಸಾಲದ ಹೊರೆಯ ಹೊಣೆಯಿಂದ ತಪ್ಪಿಸಿಕೊಳ್ಳಲು ಕಾರ್ಪೊರೇಟ್‌ ಗಳು, ಪೇಟೆಗಳು ಚಟುವಟಿಕೆ ಭರಿತವಾಗಿರುವ ಸಮಯದಲ್ಲಿ ಹೆಚ್ಚಿನ ಬೆಲೆಯಲ್ಲಿ ಬಾಂಡ್‌ ಮೌಲ್ಯವನ್ನು ಷೇರುಗಳಾಗಿ ಪರಿವರ್ತನೆ ಮಾಡುವ ಫಾರಿನ್‌ ಕರೆನ್ಸಿ ಕನ್ವರ್ಟಬಲ್‌ ಬಾಂಡ್‌ ಗಳನ್ನು 2007 ರ ಸಮಯದಲ್ಲಿ ತೇಲಿಬಿಟ್ಟವು. ನಂತರ ಪೇಟೆಯ ಕುಸಿತದ ಕಾರಣ ಬಾಂಡ್‌ ಮೌಲ್ಯವನ್ನು ಹಿಂದಿರುಗಿಸಲಾಗದೆ ಭಾರಿ ತೊಂದರೆಗಳನ್ನು ವಿಶೇಷವಾಗಿ ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿ ಕಂಪನಿಗಳು ಎದುರಿಸಬೇಕಾಯಿತು.

    ಎಫ್‌ ಸಿ ಸಿ ಬಿ ಪ್ರಮಾದ :

    ಆ ಸಮಯದಲ್ಲಿ ತುಲಿಪ್‌ ಟೆಲಿ ಕಂಪನಿಯು ಕನ್ವರ್ಷನ್‌ ದರ ಪ್ರತಿ ಷೇರಿಗೆ ರೂ.2,274 ಎಂದು ನಿಗದಿಪಡಿಸಿತು. ಈ ಕಂಪನಿ 2005 ರಲ್ಲಿ ಪ್ರತಿ ಷೇರಿಗೆ ರೂ.120 ರಂತೆ ಐ ಪಿ ಒ ಮೂಲಕ ವಿತರಣೆ ಮಾಡಿತ್ತು. 2012 ರಲ್ಲಿ ಎಫ್‌ ಸಿ ಸಿ ಬಿ ಗಳ ಬಾಕಿ 140 ದಶ ಲಕ್ಷ ಅಮೇರಿಕನ್‌ ಡಾಲರ್‌ ಮೌಲ್ಯ ಮೊತ್ತವನ್ನು ಹಿಂದಿರುಗಿಸಲು ವಿಫಲವಾಯಿತು. 2014 ರ ವೇಳೆಗೆ ಸುಮಾರು ರೂ.85 ಕೋಟಿ ಹಾನಿಗೊಳಗಾಗಿ, ನಂತರ ತನ್ನ ಅಸ್ಥಿತ್ವವನ್ನೇ ಉಳಿಸಿಕೊಳ್ಳಲು ವಿಫಲವಾಯಿತು.

    ರೋಲ್ಟಾ ಇಂಡಿಯಾ ಸಹ 2012 ರ ಸಮಯದಲ್ಲಿ ಎಫ್‌ ಸಿ ಸಿ ಬಿ ಮೂಲಕ ಪ್ರತಿ ಷೇರಿನ ಪರಿವರ್ತನೆಯ ದರವನ್ನು ರೂ.368.50 ಯಂತೆ ನಿಗದಿಪಡಿಸಿತಾದರೂ, ಷೇರಿನ ದರದಲ್ಲಿ ಉಂಟಾದ ಭಾರಿ ಕುಸಿತದ ಕಾರಣ ಬಾಂಡ್‌ ಗಳ ಮೊತ್ತವನ್ನು ಹಿಂದಿರುಗಿಸಬೇಕಾಯಿತು. ಆ ಸಮಯದಲ್ಲಿ ಸುಮಾರು ರೂ.765 ಕೋಟಿ ಹಣವನ್ನು ಹಿಂದಿರುಗಿಸಲು ಯಶಸ್ವಿಯಾಯಿತು. ಆದರೆ ಈ ಆಘಾತದಿಂದ ಚೇತರಿಕೆ ಕಾಣಲು ಸಾಧ್ಯವಾಗಲಿಲ್ಲ.

    ಇದೇ ರೀತಿ ಈಗ ವಹಿವಾಟಿನಿಂದ ಅಮಾನತುಗೊಂಡಿರುವ ಆಮ್‌ ಟೆಕ್‌ ಆಟೋ ರೂ.210 ರಂತೆ, ಭಾರತಿ ಶಿಪ್‌ ಯಾರ್ಡ್‌ ಪ್ರತಿ ಷೇರಿಗೆ ರೂ.498 ರಂತೆ ಪರಿವರ್ತಿಸುವ ಬೆಲೆಯನ್ನು ನಿಗದಿಪಡಿಸಿದ್ದವು. ಈಗ ರೂ.45 ರ ಸಮೀಪ ವಹಿವಾಟಾಗುತ್ತಿರುವ ಅಬ್ಬಾನ್‌ ಆಫ್‌ ಷೋರ್‌ ಪ್ರತಿ ಷೇರಿಗೆ ರೂ.2,789 ರಂತೆ ಪರಿವರ್ತನೆಯ ಬೆಲೆ ನಿಗದಿಪಡಿಸಿ ಅನಿವಾರ್ಯವಾಗಿ 2011 ರಲ್ಲಿ ಹಿಂದಿರುಗಿಸಿತಾದರೂ, ಮತ್ತೆ 2013 ರಲ್ಲಿ ರೂ.2,200 ಕೋಟಿ ಮೌಲ್ಯದ ಎಫ್‌ ಸಿ ಸಿ ಬಿ ವಿತರಿಸಲು ಪ್ರಯತ್ನಿಸಿತು. ಈ ಎಫ್‌ ಸಿ ಸಿ ಬಿ ಗೊಂದಲದಲ್ಲಿ ಹೆಚ್ಚು ತೊಂದರೆಗೊಳಗಾದವೆಂದರೆ ಮಧ್ಯಮ ಮತ್ತು ಕೆಳಮಧ್ಯಮ ವಲಯದ ಕಂಪನಿಗಳೆಂಬುದು ಗಮನಾರ್ಹ. ಹಾಗೆಂದು ಎಲ್ಲಾ ಎಫ್‌ ಸಿ ಸಿ ಬಿ ವಿತರಿಸಿದ ಎಲ್ಲಾ ಕಂಪನಿಗಳೂ ವಿಫಲವಾಗಿವೆ ಎಂದಲ್ಲ. ಯಶಸ್ಸು ಕಂಡ ಕಂಪನಿಗಳು ಇವೆ. ಒಟ್ಟಿನಲ್ಲಿ ಅಯಾ ಸಂದರ್ಭದಲ್ಲಿರುವ ಪರಿಸ್ಥಿತಿಯಕಲನ್ನಾಧರಿಸಿ ವಿಶ್ಲೇಷಿಸಲಾಗುವುದು. ಹೂಡಿಕೆ ನಿರ್ಧಾರ ಮಾಡುವಾಗ ನಮ್ಮ ಸ್ವಂತ ತೀರ್ಮಾನ ಅತ್ಯವಶ್ಯಕ.

    ಪ್ರೈವೇಟ್‌ ಈಕ್ವಿಟಿ, ವೆಂಚರ್‌ ಕ್ಯಾಪಿಟಲ್‌ ಹೂಡಿಕೆ ಮತ್ತು ಐಪಿಒ :

    ಇತ್ತೀಚೆಗೆ ತೇಲಿಬಿಡಲಾಗುತ್ತಿರುವ ಐ ಪಿ ಒ ಗಳು ಅತಿ ಹೆಚ್ಚಿನ ದರಗಳಲ್ಲಿ ವಿತರಣೆಯಾಗುತ್ತಿವೆ. ಈ ಷೇರುಗಳು ಲಿಸ್ಟಿಂಗ್‌ ಆದ ಆರಂಭಿಕ ದಿನಗಳಲ್ಲಿ ಅತಿ ಹೆಚ್ಚಿನ ಬೆಲೆಗಳಲ್ಲಿ ವಹಿವಾಟಾಗುವುದು ಇದೆ. ಈ ರೀತಿ ಹೆಚ್ಚಾದಾಗ ಅವುಗಳ ಬಗ್ಗೆ ಸಕಾರಾತ್ಮಕ ಸುದ್ಧಿಗಳು ಹೆಚ್ಚು ಪ್ರಚಲಿತದಲ್ಲಿರುತ್ತವೆ. ಆದರೆ ಸುರಕ್ಷತೆಯ ದೃಷ್ಠಿಯಿಂದ ಸಣ್ಣ ಹೂಡಿಕೆ ದಾರರು ಸಾಧ್ಯವಾದಷ್ಟು ನಿರ್ಗಮಿಸಿ ನಗದೀಕರಿಸಿಕೊಳ್ಳುವುದು ಉತ್ತಮ. ಕಾರಣ ಈಗಿನ ಐಪಿಒ ಗಳು ಆ ಕಂಪನಿಗಳಲ್ಲಿ ಐ ಪಿ ಒ ಗೂ ಮೊದಲೇ ಫಂಡಿಂಗ್‌ ಒದಗಿಸಿರುವ ಸಂಸ್ಥೆಗಳು ತಮ್ಮ ಹೂಡಿಕೆಗೆ ಪ್ರತಿಫಲ ಪಡೆದುಕೊಳ್ಳಲಿ ಎಂಬುದಾಗಿರುವದರಿಂದ ಸಣ್ಣ ಹೂಡಿಕೆದಾರರು ಎಚ್ಚರಿಕೆಯ ನಡೆ ಅನುಸರಿಸಬೇಕು. ಪೂರ್ವಪರ ವಿಶ್ಲೇಷಿಸಿ ಹೂಡಿಕೆ ತೀರ್ಮಾನ ತೆಗೆದುಕೊಳ್ಳಬೇಕು.

    ಜಿ ಆರ್‌ ಇನ್ಫ್ರಾ ಪ್ರಾಜೆಕ್ಟ್ಸ್‌ ಲಿ:ಬುಧವಾರ 7 ರಿಂದ ಆರಂಭವಾಗುವ ಈ ಕಂಪನಿಯ ಐಪಿಒ ವಿಚಾರ ಹೀಗಿದೆ. ಈ ಕಂಪನಿಯ ರೂ.5 ರ ಮುಖಬೆಲೆಯ ರೂ.962.33 ಕೋಟಿ ಮೌಲ್ಯದ ಷೇರುಗಳಲ್ಲಿ 1.15,08,704 ಷೇರುಗಳು ಆಫರ್‌ ಫಾರ್‌ ಸೇಲ್‌ ಮೂಲಕ ವಿತರಿಸಲಾಗುವುದು. ಅಂದರೆ ಈಗಾಗಲೇ ಹೂಡಿಕೆ ಮಾಡಿರುವ ಸಂಸ್ಥೆಗಳೊಂದಿಗೆ ಪ್ರವರ್ತಕರೂ ಸೇರಿ ತಮ್ಮ ಭಾಗಿತ್ವದ ಸ್ವಲ್ಪ ಷೇರುಗಳನ್ನು ಮಾರಾಟಮಾಡುವುದಾಗಿದೆ. ಇವರುಗಳು ಖರೀದಿಸಿರುವ ಷೇರಿನ ಬೆಲೆ ರೂ.2.50 ಯಿಂದ ರೂ.130.80 ರ ವರೆಗೂ ಇದೆ. ಅಂದರೆ ಈ ಅಲ್ಪ ಬೆಲೆಯಲ್ಲಿ ಖರೀದಿಸಿದವರಿಗೆ ರೂ.837 ರಂತೆ ಮಾರಾಟಮಾಡಲು ಒದಗಿಸುವ ವೇದಿಕೆ ಈ ಐ ಪಿ ಒ ಆಗಿದೆ.

    ಕ್ಲೀನ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ಲಿ :ಬುಧವಾರ 7 ರಿಂದ ಆರಂಭವಾಗುವ ಈ ಕಂಪನಿಯ ಐ ಪಿ ಒ ವಿಚಾರ ಹೀಗಿದೆ. ಈ ಕಂಪನಿಯ ಷೇರಿನ ಮುಖಬೆಲೆ ರೂ.1, ನಿಗದಿ ಪಡಿಸಿದ ವಿತರಣೆಯ ʼಪ್ರೈಸ್‌ ಬ್ಯಾಂಡ್‌ʼ ರೂ.880 ರಿಂದ ರೂ.900. ರೂ.1,5,46.62 ಕೋಟಿ ಮೌಲ್ಯದ ವಿತರಣೆಯು ಪೂರ್ಣವಾಗಿ ಆಫರ್‌ ಫಾರ್‌ ಸೇಲ್‌ ಮೂಲಕ ಅಂದರೆ ಪ್ರವರ್ತಕರು ಮತ್ತು ಕೆಲವು ಷೇರುದಾರರು ಸೇರಿ ತಮ್ಮ ಭಾಗಿತ್ವವನ್ನು ಮಾರಾಟಮಾಡುತ್ತಿದ್ದಾರೆ. ಇವರುಗಳು ಪಡೆದುಕೊಂಡಿರುವ ಷೇರಿನ ಬೆಲೆ, ಪೇಟೆಯ ನಿಯಂತ್ರಕ ಸೆಬಿಯ ದಾಖಲೆಯಂತೆ ಕಂಪನಿಯು ROC ಗೆ ಸಲ್ಲಿಸಿರುವ ʼರೆಡ್‌ ಹೆರಿಂಗ್‌ ದಾಖಲೆಯಂತೆʼ ಕೆಲವು ಪೈಸೆಗಳಷ್ಠೆ. ಒಂದು ರೂಪಾಯಿಯೂ ಬಿದ್ದಿಲ್ಲ. ಅಂತಹ ಷೇರನ್ನು ರೂ.900 ರಂತೆ ವಿತರಿಸಲು ಪ್ರಯತ್ನಿಸುತ್ತಿದ್ದಾರೆ ಎಂದರೆ ವಿತರಕರ ಚಿಂತನೆ ಏನಿರಬಹುದೆಂದು ನಿರ್ಧರಿಸಿ ತೀರ್ಮಾನಿಸಿ.

    ಮುಂದಿನ ದಿನಗಳಲ್ಲಿ ಐ ಪಿ ಒ ಗಳ ಮಹಾಪೂರವೇ ಇದೆ. ಪೇಟಯು ಉತ್ತುಂಗದಲ್ಲಿ, ಉನ್ಮಾದದಲ್ಲಿರುವಾಗ ಹೆಚ್ಚಿನ ಬೆಲೆಯ ಐ ಪಿ ಒ ಗಳು ನುಸುಳುತ್ತವೆ. ಆದರೆ ಆಯ್ಕೆ ಮಾತ್ರ ಅವುಗಳ ಯೋಗ್ಯತೆ, ವಿತರಣೆಯ ಬೆಲೆ ಮುಂತಾದವುಗಳನ್ನು ತೂಗಿ, ಅರಿತು ನಿರ್ಧರಿಸುವುದು ಅತಿ ಮುಖ್ಯ. ದುಡುಕಿದರೆ ಹೂಡಿಕೆ ಮಾಡಿದ ಬಂಡವಾಳಕ್ಕೇ ಕುತ್ತಾಗಬಹುದು. ಪ್ರಚಾರವೇ ಬೇರೆ, ಪ್ರಚಲಿತ ವಾಸ್ತವವೇ ಬೇರೆ ಇರಬಹುದು.

    ಈಗಾಗಲೇ ಕರೋನದ ಕ್ರೂರ ಪ್ರಭಾವಕ್ಕೊಳಗಾಗಿರುವ ಸಮಾಜದ ಆರ್ಥಿಕತೆಯನ್ನು ಚುರುಕುಗೊಳಿಸಲು ಸರ್ಕಾರಗಳು ನಿಯಂತ್ರಣವನ್ನು ಸಡಿಲಿಸಿದ ಸಮಯದಲ್ಲಿ ಅತಿ ಹೆಚ್ಚಿನ ಎಚ್ಚರದ ನಿರ್ಧಾರ ಅಗತ್ಯ. ಈಗಾಗಲೇ ವಿದ್ಯುತ್‌ ದರ ಹೆಚ್ಚಿಸಲಾಗಿದೆ, ಸದ್ದಿಲ್ಲದೆ ಬಿ ಡಿ ಎ ವಿಧಿಸಲಾದ ತೆರಿಗೆ ಪ್ರಮಾಣವನ್ನು ಹಲವು ಪಟ್ಟು ಹೆಚ್ಚಿಸಿದೆ, ಮುಂದೆ ನೀರಿನ, ಹಾಲಿನ, ಬಸ್ಸಿನ ದರ ಹೆಚ್ಚಳವೂ ಸಾಧ್ಯವಿದೆ. ಹೀಗಿರುವಾಗ ಹೆಚ್ಚಿನ ಹಣ ಸಂಪಾದನೆಯ ಆಸೆಯಿಂದ ಕೈಲಿರುವ ಹಣಕ್ಕೆ ಕುತ್ತು ತಂದುಕೊಳ್ಳದ ರೀತಿಯಲ್ಲಿ ಚಟುವಟಿಕೆ ನಡೆಸುವುದು ಅನಿವಾರ್ಯ. ಹಾಗೆಂದು ಷೇರುಪೇಟಯ ಚಟುವಟಿಕೆಯೇ ಅಪಾಯ ಎಂದು ಭಾವಿಸುವ ಅಗತ್ಯವಿಲ್ಲ. ಈಗಿನ ಸಂದರ್ಭವು ದೀರ್ಘಕಾಲೀನ ಹೂಡಿಕೆಗಿಂತ, ವಹಿವಾಟಿಗೆ ಅನುಕೂಲಕರವಾಗಿದೆ. ಹಿಂದಿನ ವಾರ ಕಂಪನಿಗಳಾದ ಕ್ಲಾರಿಯಂಟ್‌ ಕೆಮಿಕಲ್ಸ್‌, ಇಂಡಿಯಾ ಗ್ಲೈಕಾಲ್ಸ್‌, ಗುಜರಾತ್‌ ಫ್ಲೋರೋ, ಟಾಟಾ ಕೆಮಿಕಲ್ಸ್‌, ಜೆ ಕೆ ಟೈರ್ಸ್, ಸ್ಟರ್ಲಿಂಗ್‌ ಅಂಡ್‌ ವಿಲ್ಸನ್‌, ಪವರ್‌ ಮೆಕ್‌ ಪ್ರಾಜೆಕ್ಟ್‌, ಸ್ಟೀಲ್‌ ಆಥಾರಿಟೀಸ್‌, ಹ್ಯಾಪಿಯೆಸ್ಟ್‌ ಮೈಂಡ್ಸ್‌, ಭಾರತ್‌ ಡೈನಾಮಿಕ್ಸ್‌, ಹೆಚ್‌ ಸಿ ಎಲ್‌ ಟೆಕ್‌, ಕ್ಯಾಡಿಲ್ಲಾ ಹೆಲ್ತ್‌, ಇಂಡಿಯನ್‌ ಓವರ್ಸಿಸ್‌ ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌, ಮಹೀಂದ್ರ ಅಂಡ್‌ ಮಹೀಂದ್ರ, ಕೆಂಕಾನ್‌ ಸ್ಪೆಷಾಲಿಟಿ ಕೆಮಿಕಲ್ಸ್‌, ಟಾಟಾ ಎಲಾಕ್ಸಿ, ದಿಲೀಪ್‌ ಬ್ಯುಲ್ಡ್ ಕಾನ್‌ ಮುಂತಾದ ಅನೇಕ ಕಂಪನಿಗಳು ಪ್ರದರ್ಶಿಸಿದ ಏರಿಳಿತಗಳು ಈ ವಾದವನ್ನು ದೃಢೀಕರಿಸುತ್ತದೆ.

    ಶ್ವಾನ ನಿದ್ದೆಯಂತೆ ಸದಾ ಎಚ್ಚರವಾಗಿದ್ದು, ಬಕ ಧ್ಯಾನದಂತೆ ಸದಾ ದೊರೆತಂತ ಲಾಭ ಗಳಿಕೆಯ ಅವಕಾಶಗಳನ್ನು ಬಳಸಿಕೊಂಡಲ್ಲಿ ಗಜ ಸ್ನಾನದ ತೃಪ್ತಿ ಖಂಡಿತಾ ದೊರೆಯುತ್ತದೆ. ಆಸೆಗೆ ಕಡಿವಾಣ ಹಾಕಿ, ಕೈಗೆಟುಕಿದ್ದರ ಆನಂದ ಪಡೆದಲ್ಲಿ ಯಶಸ್ವೀ ಹೂಡಿಕೆದಾರರಾಗುವಿರಿ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ತಿಂದು ಬದುಕುವವರಿಗಿಂತ ತಿಳಿದು ಬದುಕುವವರಾಗಬೇಕು

    ಸುಮಾ ವೀಣಾ

    ಮನುಷ್ಯ ಬೇರೆ! ಮಾನವಿಯತೆ ಬೇರೆ! ಹೌಸ್ ಮತ್ತು ಹೋಂ ನಡುವೆ ವ್ಯತ್ಯಾಸವಿದೆಯಲ್ಲಾ ಹಾಗೆ. ಸಮಾಜ ಆರೋಗ್ಯಕರವಾಗಿ ಇರಬೇಕು ಎಂದರೆ  ಉಪಕಾರ,ಉಪಕಾರ ಸ್ಮರಣೆ ಇರಬೇಕು ಅದನ್ನೆ ಕೃತಜ್ಞತೆ ಎನ್ನುವುದು.  ಇದು ಮಾನವನಲ್ಲಿ ಅವಶ್ಯವಾಗಿ ಇರಲೇಬೇಕು.ಅದನ್ನು ಬಿಟ್ಟು ದುರಹಂಕಾರ , ಒಣಪ್ರತಿಷ್ಠೆ  ಸೇರಿದರೆ ಮಾನವ ಸಮಾಜ ಅಪಮೌಲ್ಯಗಳ ಗೂಡಾಗುತ್ತದೆ. ನೈತಿಕ ಅಧಃಪತನದ ಗೂಡಾಗುತ್ತದೆ.

     ನಮ್ಮ ಜಾನಪದರ ಉಪಕಾರ ಸ್ಮರಣೆಯ ಕುರಿತು ಯೋಚಿಸುವುದಾದರೆ

    ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ |   ಎಳ್ಳು-ಜೀರಿಗೆ ಬೆಳೆಯೋಳ |   ಭೂಮ್ತಾಯ ಎದ್ದೊಂದು ಘಳಿಗೆ ನೆನೆದೇನು |

    ಬೆಳಗಾಗೆದ್ದು ದಿನಚರಿ ಆರಂಭಿಸುವಾಗ ಭೂಮಾತೆ ಸ್ತುತಿಸಲ್ಪಡುತ್ತಾಳೆ. ಕಲಿಗಾಲ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ ರೈತರಿಲ್ಲಿ ಆದಿ ವಂದ್ಯನು. ಪರಿಶ್ರಮದಿಂದ ದುಡಿದು ಮನುಕುಲಕ್ಕೆ ಅನ್ನವನ್ನು ಕೊಡುವ ರೈತನೇ ಇಲ್ಲಿ ಅಗ್ರವಂದ್ಯನು. ಎಳ್ಳು- ಜೀರಿಗೆ ಸಂಬಂಧ ಸೂಚಕವಾಗಿದೆ. ಭೂಮಿತಾಯಿಗೆ ವಂದಿಸುವ  ಮೂಲಕ ಉಪಕಾರ ಸ್ಮರಣ ಮಾಡಿರುವುದು ಅವರ ವ್ಯಕ್ತಿತ್ವದ ಘನತೆಯನ್ನು ಎತ್ತಿ  ತೋರಿಸುತ್ತದೆ.

    ಹಾಲುಂಡ ತವರಿಗೆ ಏನೆಂದು ಹಾಡಲಿ |ಹೊಳೆದಂಡೆಲಿರುವ ಗರಿಕೆಯ ಕುಡಿಹಾಂಗೆ |ಹಬ್ಬಲಿ ಅವರ ರಸಬಳ್ಳಿ

     ಜಾನಪದ ಹೆಣ್ಣು ಮಗಳು ತಾನು ಹುಟ್ಟಿದ, ಲೋಕದ ಬೆಳಕನ್ನು ಕಂಡ ತವರನ್ನು ಕುರಿತು ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸುವ ಹಾಗು ಶುಭ ಹಾರೈಕೆಯನ್ನು ಬಯಸುವ ತ್ರಿಪದಿ.  ಹೊಳೆ ದಂಡೆಯ ಗರಿಕೆಯ ಕುಡಿ ಯಾವಾಗಲು ಸಮೃದ್ಧಿಯಾಗಿರುತ್ತದೆ. ಎಂಥ ಬರಡು ನೆಲದಲ್ಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತದೆ. ಅದರಲ್ಲೂ ಹೊಳೆ ತೀರದಲ್ಲಂತೂ ಹೇರಳವಾಗಿರುತ್ತದೆ.  ಹಾಗೆ ತನ್ನ ತವರು ಉತ್ತರೋತ್ತರ ಯಶಸ್ಸು ಕಾಣಲಿ ಎಂಬುದು ಜಾನಪದ ಹೆಣ್ಣ ಮಗಳ ಆಶಯವಾಗಿದೆ.

     ‘ಅಲ್ಪದಲ್ಲಿ ಕಲ್ಪ’ ಎಂಬಂತೆ ಅತ್ಯಂತ ಚಿಕ್ಕ ವಿಚಾರದಲ್ಲೂ ಕೃತಜ್ಞತಾ ಭಾವ ಇರಬೇಕೆಂದು ಹೇಳುವ ತ್ರಿಪದಿ

    ಕಲ್ಲು ಕೊಟ್ಟವ್ವಗೆ ಎಲ್ಲ ಭಾಗ್ಯವೂ ಬರಲಿ |ಪಲ್ಲಕ್ಕಿ ಮೇಲೆ ಮಗ ಬರಲಿ ಆ ಮನೆಗೆ | ಮಲ್ಲಿಗೆ ಮುಡಿಯೋ ಸೊಸೆ ಬರಲಿ

    ಎಂಥ ಹಾರೈಕೆ ಅಲ್ಲವೇ! ಭಾಗ್ಯ, ಪಲ್ಲಕ್ಕಿ, ತನಗೊಂದು ಬೀಸುವ ಕಲ್ಲನ್ನು ಎರವಲು ಕೊಟ್ಟಂಥ ಮನೆಗೆ ಶ್ರೇಯಸ್ಸನ್ನು ಬಯಸುವ ರೀತಿ ಅನುಕರಣನೀಯ. ಮಲ್ಲಿಗೆ  ಇವೆಲ್ಲವೂ ಸಿರಿ, ಸೌಭಾಗ್ಯ, ಹಾಗು ಮಾಧುರ್ಯದ ಲಕ್ಷಣವೇ ಆಗಿವೆ. 

    ನವನಾಗರಿಕರಲ್ಲಿ ಈ ಕೃತಜ್ಞತಾ ಭಾವ ಮರೀಚಿಕೆಯಾಗಿದೆ ಕೆಲಸ ಆದ ಮೇಲೆ ಮೂತಿ ತಿರುಗಿಸಿ ನನಗೂ ಅದಕ್ಕೂ ಸಂಬಂಧವಿಲ್ಲ ” ಧಿಂ ರಂಗ” ಎಂದು ಇದ್ದುಬಿಡುತ್ತಾರೆ. ಅಂಥವರ ಕೃತಘ್ನತೆಯನ್ನು ಧಿಕ್ಕರಿಸುವ ಕೃತಜ್ಞತಾ ಸಂಸ್ಕೃತಿಯನ್ನು ಹೇಳುವ ಈ ತ್ರಿಪದಿಗಳು ಮಾನವನಿಗೆ ಸಂಸ್ಕಾರದ ಪಾಠವನ್ನು ಹೇಳುತ್ತವೆ. ಕೃತಜ್ಞತೆಗೆ ಇನ್ನೊಂದು ಹೆಸರು ನಾಯಿ . ಕೃತಜ್ಞತೆ ಇಲ್ಲದಿದ್ದರೆ ಮನುಷ್ಯ  ಅದಕ್ಕಿಂತ ಕೀಳು . ತಿಂದು ಬದುಕುವವರಿಗಿಂತ ತಿಳಿದು ಬದುಕುವವರಾಗಬೇಕಲ್ವೇ!

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಮೂರು ತಿಂಗಳೊಳಗೆ ಶೇ.80 ಜನರಿಗೆ ಕೋವಿಡ್ ಲಸಿಕೆ ಹಾಕಿಸುವ ಸವಾಲಿಗೆ ಸರ್ಕಾರ ಸಿದ್ಧವೇ ಎಂದು ಕೇಳಿದ ಡಿ ಕೆ ಶಿವಕುಮಾರ್

    ಕೋವಿಡ್ 3ನೇ ಅಲೆಯಿಂದ ಜನರನ್ನು ರಕ್ಷಿಸಲು ಸೆಪ್ಟೆಂಬರ್ ಅಂತ್ಯದೊಳಗೆ ರಾಜ್ಯದ ಶೇ. 80 ಜನರಿಗೆ ಲಸಿಕೆ ಹಾಕುವ ಸವಾಲಿಗೆ ಸಿದ್ದವಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ”ಮೂರು ತಿಂಗಳೊಳಗೆ ರಾಜ್ಯದ ಶೇಕಡ 80 ವಯಸ್ಕರಿಗೆ ಎರಡು ಡೋಸ್ ಲಸಿಕೆ ಹಾಕಿದರೆ ಕೊರೊನಾ 3 ನೇ ಅಲೆಯಿಂದ ರಾಜ್ಯದ ರಕ್ಷಣೆ ಮಾಡಬಹುದಾಗಿದೆ” ಎಂದು ಹೇಳಿದರು.

    ”ಅಕ್ಟೋಬರ್‌ ತಿಂಗಳಲ್ಲಿ ಕೊರೊನಾ 3ನೇ ಅಲೆ ತೀವ್ರವಾಗುವ ಸೂಚನೆಯನ್ನು ತಜ್ಞರು ನೀಡಿದ್ದಾರೆ. ಶೇ.80 ವಯಸ್ಕರಿಗೆ ಸೆಪ್ಟೆಂಬರ್ 30 ರೊಳಗೆ ಎರಡು ಡೋಸ್ ಲಸಿಕೆ ನೀಡಿದರೆ 3ನೇ ಅಲೆಯಿಂದ ರಕ್ಷಣೆ ಪಡೆಯಬಹುದು ಮತ್ತು ಅದರ ತೀವ್ರತೆ ತಡೆಯಬಹುದು. ಅದಕ್ಕಾಗಿಯೇ ಈ ಸವಾಲಿಗೆ ಸರ್ಕಾರ ಸಿದ್ದವಿದೆಯೇ? ಎಂದು ಪ್ರಶ್ನೆ ಮಾಡುತ್ತಿದ್ದೇನೆ” ಎಂದರು.

    ” ವ್ಯಾಕ್ಸಿನೇಷನ್ ಬಗ್ಗೆ ಕೇವಲ ಮಾತನಾಡಿದರೆ ಸಾಲದು. ಕೇವಲ ಒಂದು ಡೋಸ್ ಲಸಿಕೆ ಹಾಕಿದರೆ ಕೋವಿಡ್ ತೀವ್ರತೆಯನ್ನು ತಗ್ಗಿಸಲಾಗದು. ಕೊರೊನಾದಿಂದ ಪೂರ್ಣ ರಕ್ಷಣೆ ಸಾಧ್ಯವಾಗಲು ಎರಡೂ ಡೋಸ್ ಪಡೆದಿರಬೇಕು ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಹೀಗಾಗಿ ಸೆಪ್ಟೆಂಬರ್‌ ಅಂತ್ಯದೊಳಗೆ ಶೇ.80 ವಯಸ್ಕರಿಗೆ ಎರಡೂ ಡೋಸ್ ಹಾಕುವ ಹೊಣೆಗಾರಿಕೆ ಯನ್ನು ಸರ್ಕಾರ ನಿರ್ವಹಿಸಲೇಬೇಕು. ಈ ಸವಾಲಿನಲ್ಲಿ ವಿಫಲವಾದರೆ, 3ನೇ ಅಲೆಯ ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿಯಾಗಬೇಕಾಗುತ್ತದೆ” ಎಂದು ಕೆಪಿಸಿಸಿ ಅಧ್ಯಕ್ಷರು ಎಚ್ಚರಿಸಿದರು.

    ಈ ಸವಾಲು ಅಸಾಧ್ಯವಾದುದೇನೂ ಅಲ್ಲ. ವಿದೇಶಗಳಿಗೆ ಲಸಿಕೆ ಕಳಿಸುವುದನ್ನು ತಗ್ಗಿಸಿ ನಮ್ಮ ಜನರಿಗೆ ವ್ಯಾಕ್ಸಿನೇಷನ್‌ ಮಾಡಲು ಒತ್ತು ಕೊಡಬೇಕು. ಬಿಜೆಪಿ ನಾಯಕರು ಲಸಿಕೆ ನೀಡಿಕೆಯಲ್ಲೂ ಅಪರ- ತಪರಾ ಮಾಡುವುದನ್ನು ನಿಲ್ಲಿಸಿ, ಎಲ್ಲರಿಗೂ ಲಸಿಕೆ ಹಾಕಿಸಿ ಜನರನ್ನು ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಬೇಕು” ಎಂದು ತಾಕೀತು ಮಾಡಿದರು.

    ”ಕೇಂದ್ರದಲ್ಲಿ ಅವರದೇ ಪಕ್ಷದ ಸರ್ಕಾರ ಇದ್ದರೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅವಶ್ಯಕ ಪ್ರಮಾಣದ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ವ್ಯಾಕ್ಸಿನೇಷನ್ ಬಗ್ಗೆ ಒಂದು ದಿನದ ಅಬ್ಬರದ ಪ್ರಚಾರ ಪಡೆದು ಸರ್ಕಾರ ಸುಮ್ಮನಾದರೆ ಹೇಗೆ? ಲಸಿಕೆ ಹಾಕುವ ಪ್ರಮಾಣ ಕಡಿಮೆಯಾಗಿದೆ.

    ”ಡೆಲ್ಟಾ ರೂಪಾಂತರಿ ವೈರಾಣು ವಿರುದ್ದ ರಕ್ಷಣೆಗಾಗಿ ಕೋವಿಶೀಲ್ಡ್ 2 ನೇ ಲಸಿಕೆಯನ್ನು 8 ವಾರಗಳೊಳಗೆ ಕೊಡಬೇಕು. ಅದಕ್ಕಾಗಿ ಸರ್ಕಾರ ಮಾರ್ಗಸೂಚಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಲಿ” ಎಂದು ಸಲಹೆ ಮಾಡಿದರು.

    ” ಕಾಂಗ್ರೆಸ್ ಪಕ್ಷದ ನಾಯಕರು ಸ್ವಂತ ಖರ್ಚಿನಲ್ಲಿ ವ್ಯಾಕ್ಸಿನೇಷನ್‌ ಶಿಬಿರಗಳನ್ನು ನಡೆಸಿ, 1 ಲಕ್ಷ ಮಂದಿಗೆ ಉಚಿತವಾಗಿ ಲಸಿಕೆ ಹಾಕಿಸಿದ್ದಾರೆ. ಉತ್ಪಾದಕರಿಂದ ನೇರವಾಗಿ ಲಸಿಕೆ ಖರೀದಿಸಲು ಅನುಮತಿ ಕೇಳಿದರೂ ಸರ್ಕಾರ ಕೊಡಲಿಲ್ಲ. ಈ ಉದ್ದೇಶಕ್ಕೆ ಶಾಸಕರ ನಿಧಿ ಬಳಸುವ ಸದಾಶಯಕ್ಕೆ ಸರ್ಕಾರ ಸಮ್ಮತಿಸಲಿಲ್ಲ. ನಮ್ಮ ಸಹಾಯ ಅಗತ್ಯವಿಲ್ಲ ಎಂದರೆ ತೊಂದರೆ ಇಲ್ಲ. ಕಾಲಮಿತಿಯಲ್ಲಿ ಸರ್ಕಾರ ತ್ವರಿತವಾಗಿ ಎಲ್ಲರಿಗೂ ಲಸಿಕೆ ಹಾಕಿಸಿ, ಜನರನ್ನು ರಕ್ಷಣೆ ಮಾಡಲಿ” ಎಂದು ಶಿವಕುಮಾರ್ ಹೇಳಿದರು.

    ಲಸಿಕೆ ಹಾಕಿಸಿಕೊಳ್ಳುವ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲು ಕೆಪಿಸಿಸಿ ಮಕ್ಕಳಿಗಾಗಿ ವ್ಯಾಕ್ಸಿನೇಟ್ ಕರ್ನಾಟಕ ಅಭಿಯಾನ ನಡೆಸಿದೆ. ವಯಸ್ಕರು ವ್ಯಾಕ್ಸಿನ್ ಪಡೆಯಲು ಪ್ರೇರಣೆಯಾಗುವಂತೆ 20 ಸಾವಿರಕ್ಕೂ ಹೆಚ್ಚು ಮಕ್ಕಳು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಉತ್ತಮ ವಿಡಿಯೋ ಮಾಡಿದ 22 ಮಕ್ಕಳಿಗೆ ಆ್ಯಂಡ್ರಾಯ್ಡ್ ಟ್ಯಾಬ್ ಗಳನ್ನು ಬಹುಮಾನವಾಗಿ ಪಕ್ಷದ ವತಿಯಿಂದ ನೀಡಲಾಗಿದೆ. ನಾವಂತೂ ಜನರನ್ನು ಲಸಿಕೆ ಪಡೆಯಲು ಪ್ರೇರೇಪಿಸುತ್ತಿದ್ದೇವೆ. ಆದರೆ, ಲಸಿಕೆ ದಾಸ್ತಾನು ಕೊರತೆಯೇ ಪ್ರಮುಖ ಸಮಸ್ಯೆಯಾಗಿದೆ. ಆಡಳಿತ ನಡೆಸುವವರು ಎಚ್ಚೆತ್ತುಕೊಂಡು ಕೆಲಸ ಮಾಡಲಿ” ಎಂದು ಕಿವಿಮಾತು ಹೇಳಿದರು.

    ”ಮೂರು ತಿಂಗಳೊಳಗೆ ಶೇಕಡ 80 ಜನರಿಗೆ ಎರಡು ಡೋಸ್ ಲಸಿಕೆ ಹಾಕಿಸಿ, ಕೋವಿಡ್ 3 ನೇ ಅಲೆಯಿಂದ ಜನರನ್ನು ರಕ್ಷಣೆ ಮಾಡುವಂತೆ ಸರ್ಕಾರಕ್ಕೆ ತಾಕೀತು ಮಾಡಲು ಪಕ್ಷದ ವತಿಯಿಂದ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗುವುದು” ಎಂದು ಶಿವಕುಮಾರ್ ತಿಳಿಸಿದರು

    ಮಲ್ಲೇಶ್ವರಂ: ಮೊದಲ ಡೋಸ್ ಲಸಿಕೆ ಪಡೆಯದವರ ಪಟ್ಟಿ ಸಲ್ಲಿಸಲು ಸಂಘ ಸಂಸ್ಥೆಗಳಿಗೆ ಮನವಿ

    ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆಯ ಮೊದಲನೇ ಡೋಸ್ ಇನ್ನೂ ಯಾರಿಗೆ ಆಗಿಲ್ಲವೋ ಅಂಥವರ ಹೆಸರುಗಳ ಪಟ್ಟಿಯನ್ನು ತಮ್ಮ ಕಚೇರಿಗೆ ಸಲ್ಲಿಸುವಂತೆ ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಮನವಿ ಮಾಡಿದ್ದಾರೆ.

    ಈ ಕುರಿತು ಕ್ಷೇತ್ರ ವ್ಯಾಪ್ತಿಯ ಸಂಘ ಸಂಸ್ಥೆಗಳಿಗೆ ಅವರು ಪತ್ರ ಬರೆದಿದ್ದಾರೆ. ಕೋವಿಡ್ ಲಸಿಕೆಯ ಒಂದನೇ ಡೋಸ್ ಹಾಕಿಸಿಕೊಳ್ಳಬೇಕಾಗಿರುವವರ 18 ವರ್ಷವಾದವರ ಪಟ್ಟಿಯನ್ನು ತಮ್ಮ ಕ್ಷೇತ್ರ ಕಚೇರಿಗೆ ಸಲ್ಲಿಸಲು ಅಥವಾ +91 80 23563944 ಸಂಖ್ಯೆಯನ್ನು ಬೆಳಿಗ್ಗೆ 9ರಿಂದ- ಸಂಜೆ 5ರೊಳಗೆ ಸಂಪರ್ಕಿಸಿ ಮಾಹಿತಿ ಕೊಡಲು ಕೋರಿದ್ದಾರೆ.

    ಮೇ ತಿಂಗಳಿಂದ ಇಲ್ಲಿಯವರೆಗೆ ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲಿ 81 ಲಸಿಕಾ ಶಿಬಿರಗಳನ್ನು ನಡೆಸಲಾಗಿದ್ದು, 18ರಿಂದ 45 ವಯೋಮಾನದೊಳಗಿನ 40,043 ನಾಗರಿಕರು ಪ್ರಯೋಜನ ಪಡೆದಿದ್ದಾರೆ. 45 ವರ್ಷವಾದವರನ್ನು ಸರ್ಕಾರಿ ಲಸಿಕಾ ಕೇಂದ್ರಗಳಿಗೆ ತೆರಳಲು ಉತ್ತೇಜಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಮಲ್ಲೇಶ್ವರಂ ಕ್ಷೇತ್ರವು 18 ವರ್ಷ ಮೇಲ್ಪಟ್ಟವರಿಗೆ ಶೇ 100ರಷ್ಟು ಲಸಿಕೆ ಪೂರೈಸಿದ ಮೊದಲ ಕ್ಷೇತ್ರವಾಗಬೇಕೆಂಬ ಗುರಿಯೊಂದಿಗೆ ಕೆಲಸ ಮಾಡಲಾಗುತ್ತಿದೆ, ಲಸಿಕಾ ವ್ಯಾಪ್ತಿಗೆ ಎಲ್ಲರನ್ನೂ ಒಳಪಡಿಸಲು ಅಗತ್ಯ ಸಹಕಾರ ನೀಡಬೇಕು. ಈ ಸಂಬಂಧ ಯಾವುದೇ ಮಾಹಿತಿಯನ್ನು [email protected] ಗೆ ಇ-ಮೇಲ್ ಕೂಡ ಮಾಡಬಹುದು ಎಂದು ತಿಳಿಸಿದ್ದಾರೆ.

    ಮಾಲ್ ಗಳು ಓಪನ್, ಸಿನಿಮಾ ಮಂದಿರ ಸದ್ಯಕ್ಕೆ ಬಂದ್, ನೈಟ್ ಕರ್ಫ್ಯೂ ಮುಂದುವರಿಕೆ, ವಾರಾಂತ್ಯ ಕರ್ಫ್ಯೂ ರದ್ದು

    ಕೋವಿಡ್ 19 ನಿಯಂತ್ರಣಕ್ಕೆ ರಾಜ್ಯದಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳನ್ನು ಸಡಿಲಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಕೊಡಗು ಜಿಲ್ಲೆ ಹೊರತು ಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಡಿಲಿಕೆಗಳು ಅನ್ವಯವಾಗುತ್ತವೆ.

    ರಾತ್ರಿ ಕರ್ಫ್ಯೂ ಅನ್ನು ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ. ವಾರಾಂತ್ಯದ ಕರ್ಫ್ಯೂ ಇರುವುದಿಲ್ಲ. ಈ ಸಡಿಲಿಕೆ ಮತ್ತು ನಿರ್ಬಂಧಗಳು ಸೋಮವಾರ ಜುಲೈ 5 ರ ಬೆಳಿಗ್ಗೆ 5ರಿಂದ ಜುಲೈ 19 ರ ಬೆಳಿಗ್ಗೆ 5 ರ ವರೆಗೂ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಕಟಿಸಿದ್ದಾರೆ.

    ಜಾರಿಯಲ್ಲಿರುವ ಸಡಿಲಿಕೆ/ನಿರ್ಬಂಧಗಳು:

    1. ಸರ್ಕಾರಿ/ಖಾಸಗಿ ಕಚೇರಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೇ. 100 ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
    2. ಮಾಲ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
    3. ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಶೇ. 100 ರಷ್ಟು ಪ್ರಯಾಣಿಕರೊಂದಿಗೆ ಸಂಚರಿಸಲು ಅವಕಾಶ ನೀಡಲಾಗಿದೆ.
    4. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.
    5. ಮದುವೆ ಹಾಗೂ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನರೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.
    6. ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಮಾತ್ರ ಅವಕಾಶ ನೀಡಲಾಗಿದೆ.
    7. ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ.
    8. ಅಂತ್ಯ ಸಂಸ್ಕಾರಕ್ಕೆ 20 ಸದಸ್ಯರು ಭಾಗವಹಿಸಲು ಅವಕಾಶ ನೀಡಲಾಗಿದೆ.
    9. ಕೊರೋನಾ ಕರ್ಫ್ಯೂ (ನೈರ್ಟ್ ಕರ್ಫ್ಯೂ) ರಾತ್ರಿ 9.00 ರಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
    10. ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವುದಿಲ್ಲ.
    11. ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ, ಪ್ರತಿಭಟನೆಗಳಿಗೆ ಹಾಗೂ ಇತರೆ ಸಮಾರಂಭಗಳಿಗೆ ಅವಕಾಶವಿಲ್ಲ.
    12. ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಪ್ರತ್ಯೇಕವಾಗಿ ತೀರ್ಮಾನಿಸಲಾಗುವುದು.
    13. ಪಬ್ ಗಳು ಕಾರ್ಯನಿರ್ವಹಿಸಲು ಅವಕಾಶವಿಲ್ಲ. ಬಾರ್ ಗಳಿಗೆ ಅವಕಾಶ ನೀಡಲಾಗಿದೆ.
    14. ಚಿತ್ರಮಂದಿರಗಳು ಕಾರ್ಯನಿರ್ವಹಣೆಗೆ ಅವಕಾಶವಿಲ್ಲ.

    ಜಿಲ್ಲೆಯಲ್ಲಿರುವ ಪರಿಸ್ಥಿತಿಗನುಗುಣವಾಗಿ ಆಯಾಯ ಜಿಲ್ಲೆಯ ಜಿಲ್ಲಾಡಳಿತಗಳು ಇನ್ನೂ ಹೆಚ್ಚಿನ ನಿರ್ಬಂಧಗಳು ಅವಶ್ಯವಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಎಲ್ಲಾ ಮಾಲ್ ಗಳು, ಹೋಟೆಲ್ ಗಳು, ಅಂಗಡಿಗಳು ಕೋವಿಡ್ ನಿಯಮಗಳನ್ನು ಪಾಲಿಸಬೇಕು. ನಿಯಮಪಾಲಿಸದಿದ್ದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಕೋವಿಡ್-19 ನಿಯಂತ್ರಿಸುವ ದೃಷ್ಟಿಯಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳಾದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆ ಕಡೆಗೆ ಗಮನ ಹರಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಈ ಸಡಿಲಿಕೆಯ ಪರಿಣಾಮ ಗಮನಿಸಿ 19 ರ ನಂತರ ಸಡಿಲಿಕೆಗಳನ್ನು ಮುಂದುವರಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಕಾಂಗ್ರೆಸ್ ಸೇರಲು ಯಾರು ಬೇಕಾದರು ಅರ್ಜಿ ಹಾಕಲಿ ಎಂದ ಡಿಕೆಶಿ;ಆ 17 ಜನರನ್ನು ಸೇರಿಸಿಕೊಳ್ಳುವ ಮಾತೇ ಇಲ್ಲ ಎಂದ ಸಿದ್ಧರಾಮಯ್ಯ

    ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಇಂದು ಮತ್ತೊಮ್ಮೆ ಸಾಬೀತಾಯಿತು. ಪಕ್ಷ ಬಿಟ್ಟು ಬಿಜೆಪಿ ಸೇರಿರುವ 17 ಜನರಲ್ಲ ಯಾರೇ ಬಂದರು ಪಕ್ಷ ಸೇರಲು ಅರ್ಜಿಹಾಕಬಹುದು ಎಂದು ಡಿಕೆ ಶಿವಕುಮಾರ್ ಹೇಳಿದರೆ ಆ 17 ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮಾತೇ ಇಲ್ಲ ಎಂದು ಸಿದ್ಧರಾಮಯ್ಯ ಮತ್ತೊಮ್ಮೆ ಹೇಳಿದ್ದಾರೆ.

    ‘ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ, ಕೆಲಸ ಮಾಡಲು ಇಚ್ಛಿಸುವ ಯಾರೇ ಆದರೂ ಪಕ್ಷ ಸೇರಲು ಅರ್ಜಿ ಹಾಕಬಹುದು. ನಾನು ಕೇವಲ 17 ಜನರನ್ನು ಉದ್ದೇಶಿಸಿ ಈ ಮಾತು ಹೇಳುತ್ತಿಲ್ಲ. ಯಾರೇ ಅರ್ಜಿ ಹಾಕಿದರೂ ಪಕ್ಷ ಅದನ್ನು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ.

    ‘ಯಾರು ಕಾಂಗ್ರೆಸ್ ಸಿದ್ಧಾಂತ, ನಾಯಕತ್ವ ನಂಬಿ ಪಕ್ಷ ಸೇರಲು ಬಯಸುತ್ತಾರೋ ಅವರು ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿಗೆ ಅರ್ಜಿ ಹಾಕಲಿ. ಅವರು ಪರಿಶೀಲಿಸಿ, ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ತೆಗೆದುಕೊಳ್ಳಬಾರದು ಅಂತಾ ನಿರ್ಧರಿಸುತ್ತಾರೆ. ಮುಂದೆ ಯಾವುದೇ ಗೊಂದಲ ಉದ್ಭವಿಸಬಾರದು ಎಂದು ನಾವು ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಆನಂತರ ರಾಜ್ಯಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾರಿಗೆ ಇಚ್ಛೇ ಇದೆಯೋ ಅವರು ಅರ್ಜಿ ಹಾಕಲಿ, ಆಮೇಲೆ ಆ ಬಗ್ಗೆ ತೀರ್ಮಾನ ಮಾಡೋಣ.

    ನಮ್ಮಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಅಭಿಪ್ರಾಯ ಇರುತ್ತದೆ. ಇಲ್ಲಿ ವೈಯಕ್ತಿಕ ಅಭಿಪ್ರಾಯ ಮುಖ್ಯ ಅಲ್ಲ. ಪಕ್ಷದ ಒಟ್ಟಾರೆ ಅಭಿಪ್ರಾಯ ಮುಖ್ಯ. ಪಕ್ಷ ತೊರೆದು ಮಂತ್ರಿಯಾಗಿರುವ 17 ಜನರಲ್ಲಿ ಯಾರೂ ಪಕ್ಷ ಸೇರುವ ಬಗ್ಗೆ ಸಂಪರ್ಕ ಮಾಡಿಲ್ಲ. ನಾನು ಕೇವಲ ಈ 17 ಜನರನ್ನು ಉದ್ದೇಶಿಸಿ ಮಾತ್ರ ಈ ಮಾತು ಹೇಳುತ್ತಿಲ್ಲ. ಯಾರು ಬೇಕಾದರೂ ಅರ್ಜಿ ಹಾಕಬಹುದು. ನೀವು ಬೇಕಾದದರೂ ಅರ್ಜಿ ಹಾಕಿ ಎಂದು ಡಿ ಕೆ ಶಿವಕುಮಾರ್ ಹೇಳಿದರು.

    ಪ್ರಳಯವಾದರೂ 17 ಮಂದಿಯನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ

    ಪ್ರಳಯವಾದರೂ 17 ಮಂದಿಯನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ನಾನು ವಿಧಾನಸಭೆಯಲ್ಲಿ ಹೇಳಿದ್ದು ನಿಜ ಎಂದು ಹೇಳಿದ ಸಿದ್ಧರಾಮಯ್ಯ ಈ ಬಗ್ಗೆ ಅಧ್ಯಕ್ಷರ ಜೊತೆ ಮಾತನಾಡುತ್ತೇನೆ ಎಂಂದರು.

    ಪಕ್ಷ ಬಿಟ್ಟು ಹೋದ 17 ಶಾಸಕರು ಮಾತ್ರವಲ್ಲ ಯಾರು ಬೇಕಾದರೂ ಕಾಂಗ್ರೆಸ್ ಸೇರಲು ಅರ್ಜಿ ಹಾಕಿಕೊಳ್ಳಬಹುದು ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ ಅಷ್ಟೆ 17 ಮಂದಿಯನ್ನೂ ಸೇರಿಸಿಕೊಳ್ಳುವುದಾಗಿ ಯಾರೂ ಹೇಳಿಲ್ಲ. ಈ ಕುರಿತು ನಾನು ಅಧ್ಯಕ್ಷರ ಜೊತೆ ಮಾತನಾಡುತ್ತೇನೆ ಎಂದರು.
    .

    ಉತ್ತರಾಖಂಡಕ್ಕೆ ಹೊಸ ಮುಖ್ಯಮಂತ್ರಿ

    ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಖಟಿಮಾ ಶಾಸಕ ಪುಷ್ಕರ್ ಸಿಂಗ್ ಧಾಮಿ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷ ಆಯ್ಕೆ ಮಾಡಿದೆ. ಇಂದೇ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ.

    ನಿನ್ನೆ ರಾಜೀನಾಮೆ ಸಲ್ಲಿಸಿದ ತೀರ್ಥ್ ಸಿಂಗ್ ರಾವತ್ ಕಳೆದ ಮಾರ್ಚ್ 10ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದರು. ವಿಧಾನಸಭೆ ಸದಸ್ಯರಲ್ಲದ ಅವರು ಆರು ತಿಂಗಳಲ್ಲಿ ವಿಧಾನಸಭೆಗೆ ಆಯ್ಕೆ ಯಾಗಬೇಕಿತ್ತು. ವಿಧಾನಸಭೆಗೆ ಸಧ್ಯದಲ್ಲೇ ಸಾರ್ವತ್ರಿಕ ಚುನಾವಣೆ ನಡೆಯಬೇಕಾಗಿರುವುದರಿಂದ ಚುನಾವಣೆ ಆಯೋಗ ಒಂದು ಸ್ಥಾನಕ್ಕೆ ಚುನಾವಣೆ ನಡೆಸುವ ಸಂಭವ ಇರಲಿಲ್ಲ. ಹೀಗಾಗಿ ಅಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಬಾರದೆಂದು ರಾವತ್ ನಿನ್ನೆ ರಾಜೀನಾಮೆ ನೀಡಿದ್ದರು. ಉತ್ತರಾಖಂಡದಲ್ಲಿ ವಿಧಾನಪರಿಷತ್ ಇಲ್ಲ.

    ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಪುಷ್ಕರ್ ಸಿಂಗ್ 1975 ರ ಸೆಪ್ಟೆಂಬರ್ 16ರಂದು ಜನಿಸಿದ್ದರು. ಮಾನವ ಸಂಪನ್ಮೂಲದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಲ್ ಎಲ್ ಬಿ ಪದವೀಧರರು.

    error: Content is protected !!