25.1 C
Karnataka
Sunday, May 24, 2026
    Home Blog Page 86

    ಅನುದಾನ ಸದ್ಬಳಕೆಯಲ್ಲಿ ತುಮಕೂರು ರಾಜ್ಯದಲ್ಲಿಯೇ ಪ್ರಥಮ

    ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಳಕೆಯಲ್ಲಿ ತುಮಕೂರು ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಾ- ನಾರಾಯಣಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಅನುದಾನ ಬಳಕೆ ವಿಚಾರದಲ್ಲಿ ತುಮಕೂರು ಜಿಲ್ಲೆ ರಾಜ್ಯಕ್ಕೆ ಪ್ರಥಮ. ಕೋವಿಡ್ ನಿಂದ ಲಾಕ್ ಡೌನ್ ಆಗಿದ್ದರೂ ಕೆಲಸ ವೇಗವಾಗಿ ನಡೆದಿದೆ‌. ಬಹುತೇಕ ಜಿಲ್ಲೆಗಳಲ್ಲಿ ಅನುದಾನ ಬಳಕೆಯೇ ಆಗಿಲ್ಲ‌. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು ಆಸಕ್ತಿಯಿಂದ ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿಸಿದರು.

    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಹತ್ವ ಏನು ಎನ್ನುವುದನ್ನು ರಾಜ್ಯಕ್ಕೇ ತೋರಿಸಿಕೊಡುತ್ತೇನೆ. ಹಿಂದೆಂದೂ ಆಗಿರದಂತಹ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಪ್ರತಿ ತಾಲೂಕು, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡುತ್ತೇನೆ. ಅದಕ್ಕಾಗಿಯೆ ಎಲ್ಲ ಜಿಲ್ಲೆಗಳಿಗೆ ತೆರಳಿ ಪರಿಶೀಲನೆ ಮಾಡುತ್ತಿದ್ದೇನೆ. ತುಮಕೂರಿನಲ್ಲಿ ಭವ್ಯವಾದ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಹೈಟೆಕ್ ಆಗಲಿದೆ. ಅಲ್ಲಿ ಕಾಮಗಾರಿ ಆರಂಭವಾದಾಗ ತುಮಕೂರಿನ ಕ್ರೀಡಾಂಗಣವನ್ನು ರಾಜ್ಯಮಟ್ಟದ ಕ್ರೀಡಾ ಚಟುವಟಿಕೆಗೆ ಬಳಸಬೇಕು. ಅಷ್ಟು ವ್ಯವಸ್ಥಿತ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ ಎಂದು ಹೇಳಿದರು. ಕ್ರೀಡಾ ಇಲಾಖೆ ಅಡಿ ಬಾಕಿ ಇರುವ ಕಾಮಗಾರಿಗಳು ಶೀಘ್ರ ಮುಗಿಯಬೇಕು ಎಂದರು.
    ಜಿಲ್ಲೆಯಲ್ಲಿ ಹೊಸ ಬೆಳೆ ಬೆಳೆಯುತ್ತಿರುವ ಮೂಸಂಬಿ, ಡ್ರಾಗನ್ ಫ್ರೂಟ್ ಬಗ್ಗೆ ಮಾಹಿತಿ ಪಡೆದ‌ ಸಚಿವರು, ಬೆಳೆ ವಿಮೆಗೆ ಒತ್ತು ಕೊಡುವಂತೆಯೂ ತಿಳಿಸಿದರು.

    ಅಡಕೆ ಬೆಳೆಯ ಹನಿ ನೀರಾವರಿಗೆ ಸಬ್ಸಿಡಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಮನವಿ ಮಾಡಿದಾಗ, ಈ ಬಗ್ಗೆ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.

    ತುಮಕೂರು ಜಿಲ್ಲೆ ಒಂದು ಕಾಲದಲ್ಲಿ ಕಬ್ಬಡಿ, ಕೊಕ್ಕೋ ಕ್ರೀಡೆಗೆ ಬಹಳ ಹೆಸರುವಾಸಿಯಾಗಿತ್ತು. ಅದರೆ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಯೇ ಇಲ್ಲದಂತಾಗಿದೆ. ಹಾಗಾಗಿ ಕ್ರೀಡಾ ಚಟುವಟಿಕೆಗೆ ಒತ್ತು ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳಿಗೆ ನಿರ್ದೇಶಿಸಿದರು. ಅಲ್ಲದೆ ರೈತರು ಮತ್ತು ವರ್ತಕರ ನಡುವೆ ನೇರ ಮಾರುಕಟ್ಟೆ ಒದಗಿಸಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆನ್ ಲೈನ್ ಆ್ಯಪ್‌ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರಿಂದ ರೈತರಿಗೆ ಬಹಳ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ವೀರಭದ್ರಯ್ಯ, ಚಿದಾನಂದ ಗೌಡ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಸೇರಿದಂತೆ ಇತರರಿದ್ದರು.

    ನಾಳೆ ಕೇಂದ್ರ ಸಂಪುಟ ಪುನಾರಚನೆ ಬಹುತೇಕ ಖಚಿತ

    ಬಹು ನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ಪುನಾರಚನೆ ನಾಳೆ ಸಂಜೆ 6ಗಂಟೆಗೆ ನಡೆಯಬಹುದೆಂದು ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಎನ್ ಡಿ ಟೀವಿ ಪ್ರಕಾರ ಈ ವಿಸ್ತರಣೆಯಲ್ಲಿ ಯುವ ಜನರಿಗೆ ಆದ್ಯತೆ ಸಿಗಲಿದ್ದು ಅದು ಭಾರತೀಯ ಇತಿಹಾಸದಲ್ಲಿ ಅತ್ಯಂತ ಯಂಗ್ ಸಚಿವ ಸಂಪುಟ ಆಗಿರುತ್ತದೆ. ಮಹಿಳೆಯರಿಗೆ ಮತ್ತು ಆಡಳಿತದ ಅನುಭವ ಇರುವವರಿಗೆ ಆದ್ಯತೆ ನೀಡಲಾಗುತ್ತದೆ ಎನ್ನಲಾಗಿದೆ.

    ಪ್ರತಿಯೊಂದು ರಾಜ್ಯ ಮತ್ತು 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಪುನಾರಚನೆ ನಡೆಯುತ್ತದೆ ಎನ್ನಲಾಗಿದೆ. ಕಳೆದ ಎರಡು ತಿಂಗಳಿಂದ ಪ್ರಧಾನಿ ಹಾಲಿ ಸಚಿವರ ಮೌಲ್ಯ ಮಾಪನ ನಡೆಸಿದ್ದಾರೆ. ಹೀಗಾಗಿ ಸಾಧನೆ ತೋರದ ಹಲವು ಸಚಿವರನ್ನು ಕೈ ಬಿಡುವ ಸಂಭವ ಕಾಣುತ್ತಿದೆ. ಈಗಾಗಲೇ ಸಂಭನೀಯರು ಎನ್ನಲಾಗುತ್ತಿರುವ ಮಧ್ಯಪ್ರದೇಶದ ಸಂಸದ ಜ್ಯೋತಿರಾಧಿತ್ಯ ಸಿಂಧಿಯಾ, ಮಹಾರಾಷ್ಟ್ರದ ನಾರಾಯಣ ರಾಣೆ ಮತ್ತು ವರುಣ್ ಗಾಂಧಿ ದೆಹಲಿ ತಲುಪಿದ್ದಾರೆ. ಲೋಕ ಜನಶಕ್ತಿ ಪಾರ್ಟಿಯ ಪಶುಪತಿ ಪರಸ್ ಅವರ ಹೆಸರೂ ಕೇಳಿಬರುತ್ತಿದೆ. ಅಸ್ಸಾಂನಲ್ಲಿ ಮುಖ್ಯಮಂತ್ರಿ ಹುದ್ದೆ ತ್ಯಾಗ ಮಾಡಿದ ಸರ್ಬಾನಂದ ಸೋನವಾಲ್ ಕೂಡ ದೆಹಲಿ ತಲುಪಿದ್ದು ಅವರು ಕೇಂದ್ರ ಸಂಪುಟ ಸೇರುವುದು ಪಕ್ಕಾ ಎನ್ನಲಾಗುತ್ತಿದೆ.

    ನಾಳೆ ವಿಸ್ತರಣೆ ಬಹುತೇಕ ಖಚಿತ ಎಂದು ಹಿಂದೂಸ್ತಾನ್ ಟೈಮ್ಸ್ ಕೂಡ ವರದಿ ಮಾಡಿದೆ. ಜೆಡಿ ಯು ಗೂ ಈ ಬಾರಿ ವಿಸ್ತರಣೆಯಲ್ಲಿ ಪ್ರಾಮುಖ್ಯ ಸಿಗುವ ನಿರೀಕ್ಷೆ ಇದೆ. ಜೆಡಿ ಯು ನಿಂದ ಯಾರು ಸಂಪುಟ ಸೇರಬಹುದು ಎಂಬ ಪ್ರಶ್ನೆಗೆ ಅದನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಆ ಪಕ್ಷದ ಆರ್ ಸಿ ಸಿಂಗ್ ಮತ್ತು ಲಲನ್ ಸಿಂಗ್ ಈಗಾಗಲೇ ದೆಹಲಿ ವಿಮಾನ ಹತ್ತಿದ್ದಾರೆ.ಮೋದಿ ಬಂಗಾಳ ಪ್ರವಾಸದಲ್ಲಿ ಜೊತೆಯಾಗಿದ್ದ ಸಂಸದ ಶಂತನು ಠಾಕೂರ್ ಕೂಡ ಸಂಪುಟ ಸೇರುವ ನಿರೀಕ್ಷೆ ಇದೆ.

    ಕರ್ನಾಟಕದಿಂದ ಯಾರು ಸಂಪುಟ ಸೇರುವವರು ಎಂಬುದರ ಬಗ್ಗೆ ಖಚಿತವಾಗಿಲ್ಲ. ಆದರೆ ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ ದೆಹಲಿಗೆ ಪ್ರಯಾಣ ಬೆಳಿಸಿರುವುದನ್ನು ಸ್ಥಳೀಯ ಸುದ್ದಿ ವಾಹಿನಿಗಳು ಖಚಿತ ಪಡಿಸಿವೆ. ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಸಂಪುಟ ಸೇರಬಹುದು ಎಂದು ಹಿಂದೂಸ್ತಾನ್ ಟೈಮ್ಸ್ ಹೇಳುತ್ತಿದೆ. ಉಳಿದಂತೆ ಹಾವೇರಿ ಸಂಸದ ಶಿವಕುಮಾರ ಉದಾಸಿ ಮತ್ತು ಕಲಬುರ್ಗಿ ಸಂಸದ ಡಾ .ಜಾದವ್ ಅವರ ಹೆಸರು ಕೇಳಿಬರುತ್ತಿದೆ.

    ಇಂಡಿಯಾ ಟುಡೆ 20 ಹೊಸ ಮುಖಗಳು ಸಂಪುಟ ಸೇರಬಹುದು ಎಂದು ಹೇಳಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಲಕ್ಕೆ ಆದ್ಯತೆ ಸಿಗಬಹುದು ಎಂದು ಅದು ಅಂದಾಜಿಸಿದೆ.

    ಈಗ ಸಚಿವ ಸಂಪುಟದಲ್ಲಿ ಪ್ರಧಾನ ಮಂತ್ರಿಗಳನ್ನು ಹೊರತು ಪಡಿಸಿ 53 ಸದಸ್ಯರಿದ್ದು 81 ರವರೆಗೂ ವಿಸ್ತರಿಸುವ ಅವಕಾಶ ಇದೆ. ಆದರೆ ಮೋದಿ 81 ಸ್ಥಾನವನ್ನೂ ಭರ್ತಿ ಮಾಡುವ ಸಾಧ್ಯತೆ ತೀರಾ ವಿರಳ.

    ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇದುವರೆವಿಗೂ ಯಾವುದೇ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ.

    ಖಾದಿ ಪ್ರಾಕೃತಿಕ ಪೇಂಟ್‌: ಹಸುವಿನ ಸಗಣಿಯಿಂದ ಬಣ್ಣ

    ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ತಮ್ಮನ್ನು ʻಖಾದಿ ಪ್ರಾಕೃತಿಕ್‌ ಪೇಂಟ್‌ʼನ ʻಪ್ರಚಾರ ರಾಯಭಾರಿʼ ಆಗಿ ಘೋಷಿಸಿಕೊಂಡರು. ಸಗಣಿಯಿಂದ ತಯಾರಿಸುವ ಬಣ್ಣಗಳ ಉತ್ಪಾದನೆಗೆ ಯುವ ಉದ್ಯಮಿಗಳನ್ನು ಉತ್ತೇಜಿಸಲು ದೇಶಾದ್ಯಂತ ಪ್ರಚಾರ ಕೈಗೊಳ್ಳುವುದಾಗಿ ಹೇಳಿದರು.

    ಜೈಪುರದಲ್ಲಿ ಇಂದು ಭಾರತದ ಮೊದಲ ಮತ್ತು ಏಕೈಕ ಸಗಣಿಯಿಂದ ತಯಾರಿಸಿದ ಖಾದಿ ಪ್ರಕೃತಿಕ್ ಪೇಂಟ್‌ನ ಹೊಸ ಸ್ವಯಂಚಾಲಿತ ಉತ್ಪಾದನಾ ಘಟಕವನ್ನು ವರ್ಚ್ಯುಯಲ್‌ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದ ಸಚಿವರು ತಂತ್ರಜ್ಞಾನದ ಹೊಸ ಶೋಧವನ್ನು ಶ್ಲಾಘಿಸಿದರು. ಇದು ದೇಶದ ಗ್ರಾಮೀಣ ಮತ್ತು ಕೃಷಿ ಆಧಾರಿತ ಆರ್ಥಿಕತೆಯನ್ನು ಸಶಕ್ತಗೊಳಿಸುವಲ್ಲಿ ದೀರ್ಘಕಾಲೀನ ಪರಿಣಾಮ ಹೊಂದಿರಲಿದೆ ಎಂದು ಹೇಳಿದರು.

    ಲಕ್ಷಾಂತರ ಕೋಟಿ ರೂ.ಗಳ ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರೂ ಸಹ ಈ ಉತ್ಪಾದನಾ ಘಟಕವನ್ನು ಉದ್ಘಾಟಿಸಿದಷ್ಟು ಸಂತೋಷ ಮತ್ತು ತೃಪ್ತಿ ದೊರೆತಿರಲಿಲ್ಲ ಎಂದು ಗಡ್ಕರಿ ಹೇಳಿದರು. ಯಶಸ್ವಿ ಸಂಶೋಧನೆಗಾಗಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿ ಹಳ್ಳಿಯಲ್ಲಿ ಇದರ ಘಟಕವನ್ನು ಸ್ಥಾಪಿಸುವ ಗುರಿಯನ್ನು ಹೊಂದಲು ಕರೆ ನೀಡಿದರು.

    ಈ ಸಂದರ್ಭದಲ್ಲಿ ಗಡ್ಕರಿ ಅವರು ನಾಗ್ಪುರದ ತಮ್ಮ ನಿವಾಸದಲ್ಲಿ ಬಳಸಲು 1,000 ಲೀಟರ್‌ (ಡಿಸ್ಟೆಂಪರ್ ಮತ್ತು ಎಮಲ್ಷನ್‌ನ ತಲಾ 500 ಲೀಟರ್) ʻಖಾದಿ ಪ್ರಕೃತಿಕ ಪೇಂಟ್ʼಗಾಗಿ ಬೇಡಿಕೆ ಸಲ್ಲಿಸಿದರು.

    ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಘಟಕವಾಗಿರುವ ಜೈಪುರದ ʻಕುಮಾರಪ್ಪ ರಾಷ್ಟ್ರೀಯ ಹಸ್ತ ತಯಾರಿಕಾ ಕಾಗದ ಸಂಸ್ಥೆʼಯ (ಕೆಎಮ್‌ಎಚ್‌ಪಿಐ) ಕ್ಯಾಂಪಸ್‌ನಲ್ಲಿ ಹೊಸ ಘಟಕವನ್ನು ಸ್ಥಾಪಿಸಲಾಗಿದೆ. ಈ ಹಿಂದೆ ʻಪ್ರಾಕೃತಿಕ್ ಪೇಂಟ್ʼ ಅನ್ನು ಮಾದರಿ ಯೋಜನೆ ಅಡಿಯಲ್ಲಿ ಕೈಯಿಂದಲೇ ತಯಾರಿಸಲಾಗುತ್ತಿತ್ತು. ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಿರುವುದರಿಂದ ʻಪ್ರಾಕೃತಿಕ್ ಪೇಂಟ್‌ʼನ ಉತ್ಪಾದನಾ ಸಾಮರ್ಥ್ಯ ದ್ವಿಗುಣಗೊಳ್ಳಲಿದೆ. ಪ್ರಸ್ತುತ ʻಪ್ರಾಕೃತಿಕ್ ಪೇಂಟ್ʼನ ದೈನಂದಿನ ಉತ್ಪಾದನೆಯು 500 ಲೀಟರ್ ಆಗಿದ್ದು, ಇದನ್ನು ದಿನಕ್ಕೆ 1000 ಲೀಟರ್‌ಗಳಿಗೆ ಹೆಚ್ಚಿಸಲಾಗುವುದು.

    “ಹೊಸ ಘಟಕವು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳನ್ನು ಹೊಂದಿದ್ದು, ಗುಣಮಟ್ಟ ಹಾಗೂ ಏಕರೂಪತೆಯ ದೃಷ್ಟಿಯಿಂದ ಉತ್ಪನ್ನದ ಅತ್ಯುನ್ನತ ಮಾನದಂಡಗಳನ್ನು ಖಾತರಿಪಡಿಸುತ್ತದೆ,” ಎಂದು ʻಕೆವಿಐಸಿʼ ಅಧ್ಯಕ್ಷ ವಿನಯ್‌ ಕುಮಾರ್ ಸಕ್ಸೇನಾ ಅವರು ಹೇಳಿದರು.

    ʻಖಾದಿ ಪ್ರಾಕೃತಿಕ್ ಪೇಂಟ್ʼ ಅನ್ನು ಗಡ್ಕರಿ ಅವರು 2021ರ ಜನವರಿ 12 ರಂದು ಉದ್ಘಾಟಿಸಿದ್ದರು. ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ದೇಶಾದ್ಯಂತ ಸ್ವಯಂ ಉದ್ಯೋಗವನ್ನು ಸೃಷ್ಟಿಸುವ ಅವಳಿ ಉದ್ದೇಶಗಳೊಂದಿಗೆ ಈ ಪೇಂಟ್ ಅನ್ನು ಪರಿಚಯಿಸಲಾಗಿದೆ. ʻಡಿಸ್ಟೆಂಪರ್ʼ ಮತ್ತು ʻಎಮಲ್ಷನ್ʼ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುವ ಖಾದಿ ಪ್ರಾಕೃತಿಕ್ ಪೇಂಟ್ ಬ್ಯಾಕ್ಟೀರಿಯಾ ಪ್ರತಿರೋಧಕ, ಶಿಲೀಂಧ್ರ ಪ್ರತಿರೋಧಕ ಮತ್ತು ನೈಸರ್ಗಿಕ ಉಷ್ಣ ನಿರೋಧಕ ಗುಣಲಕ್ಷಣಗಳಂತಹ ಎಂಟು ಪ್ರಯೋಜನಗಳನ್ನು ಒಳಗೊಂಡಿದೆ. ಈ ಪೇಂಟ್ ಅಗ್ಗದ ದರದ, ಪರಿಸರ ಸ್ನೇಹಿ, ವಿಷಕಾರಿಯಲ್ಲದ ಹಾಗು ವಾಸನಾರಹಿತವಾದುದಾಗಿದೆ. (ಪಿಐಬಿ ವರದಿ)


    ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆ: ಸಚಿವ ಸುರೇಶ್ ಕುಮಾರ್

    ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಲಸಿಕೆ ಪಡೆಯುವುದರೊಂದಿಗೆ ಪರೀಕ್ಷೆ ಸುರಕ್ಷಿತ ವಾತಾವರಣದಲ್ಲಿ ಅಚ್ಚುಕಟ್ಟಾಗಿ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ಕುರಿತಂತೆ ಮಕ್ಕಳು ಮತ್ತು ಪೋಷಕರಲ್ಲಿ ಆತ್ಮ ವಿಶ್ವಾಸ ಮೂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಮಂಗಳವಾರ ಜಿಲ್ಲಾ ಶೈಕ್ಷಣಿಕ ಉಪನಿರ್ದೇಶಕರು ಮತ್ತು ಬಿಇಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಕುರಿತು ಪರಿಶೀಲನೆ ನಡೆಸಿ ಮಾರ್ಗದರ್ಶನ ನೀಡಿದ ನಂತರ ಮಾತನಾಡಿದ ಅವರು, ಹೊಸ ರೀತಿಯಲ್ಲಿ ನಡೆಯುತ್ತಿರುವ ಪರೀಕ್ಷೆಗಳನ್ನು ಬರೆಯುವ ಕುರಿತು ಮಕ್ಕಳ ಮನಃಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡು, ಕಳೆದ ಬಾರಿಯಂತೆ ಎಲ್ಲ ಅಧಿಕಾರಿಗಳು ಮತ್ತು ಶಿಕ್ಷಕರು ಈ ಬಾರಿಯೂ ಪರೀಕ್ಷೆಯ ಯಶಸ್ಸಿಗೆ ಸಹಕರಿಸಿ ಮಕ್ಕಳ ಹಿತಕ್ಕಾಗಿ ಶ್ರಮಿಸಬೇಕೆಂದು ಸೂಚನೆ ನೀಡಿದರು.

    ರಾಜ್ಯದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ತೀವ್ರವಾಗಿ ಇಳಿಮುಖ ಕಾಣುತ್ತಿರುವುದು ಪೋಷಕರು ಮತ್ತು ಮಕ್ಕಳಲ್ಲಿ ಸಂತಸದ ಭಾವನೆ ಮೂಡಿಸಿದ್ದು ಪರೀಕ್ಷೆಗೆ ಮಕ್ಕಳನ್ನು ಧೈರ್ಯವಾಗಿ ಕಳಿಸಲು ಪೋಷಕರು ಉತ್ಸುಕವಾಗಿರುವುದು ಕಂಡು ಬಂದಿದೆ ಎಂದು ಸಚಿವರು ಹೇಳಿದರು.

    ಶೇಕಡಾ 95 ಕ್ಕಿಂತ ಹೆಚ್ಚು ಸಂಖ್ಯೆಯ ಪರೀಕ್ಷಾ ಸಿಬ್ಬಂದಿ ಲಸಿಕೆಯನ್ನು ಈಗಾಗಲೇ ಪಡೆದುಕೊಂಡಿರುವುದು ಅತ್ಯಂತ ಭರವಸೆ ತಂದಿರುವ ಸಂಗತಿ. ಇನ್ನುಳಿದವರು ಇನ್ನೆರಡು ದಿನಗಳಲ್ಲಿ ಲಸಿಕೆ ಪಡೆಯಲಿದ್ದಾರೆ ಎಂದು ಡಿಡಿಪಿಐ ಗಳು ಅಂಕಿ – ಅಂಶ ಗಳ ಮೂಲಕ ತಿಳಿಸಿದ್ದಾರೆ. ಪರೀಕ್ಷೆಗಳ ಕುರಿತು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಆಯಾ ಹಂತದಲ್ಲಿ ಕೈಗೊಂಡ ಉಪಕ್ರಮಗಳನ್ನು ಆಲಿಸಿದ ಸಚಿವರು ಉತ್ತಮ ಕ್ರಮಗಳನ್ನು ಇತರೆ ಜಿಲ್ಲೆಗಳವರು ವಿನಿಮಯ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದರು. ಪರೀಕ್ಷೆ ಕುರಿತಂತೆ ಮಕ್ಕಳನ್ನು ನೇರವಾಗಿ ತಲುಪಿ ಆ ಕುರಿತು ಮಾರ್ಗದರ್ಶನ ನೀಡಲು ಮುಂದಾಗಬೇಕು. ಮಕ್ಕಳನ್ನು ಆಯಾ ಗ್ರಾಮಪಂಚಾಯ್ತಿ ಮಟ್ಟದ ಗ್ರಂಥಾಲಯಗಳಿಗೆ ಕರೆಸಿಕೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಲು ಕ್ರಮ ವಹಿಸಬೇಕು. ಇದನ್ನು ಆಯಾ ಬಿಇಒಗಳು ಬಿಆರ್‍ಸಿ/ ಸಿಆರ್‍ಸಿ ಮತ್ತು ಮುಖ್ಯ ಶಿಕ್ಷಕರ ಮೂಲಕ ಈ ಕ್ರಮಕ್ಕೆ ಮುಂದಾಗಬೇಕೆಂದು ಸುರೇಶ್ ಕುಮಾರ್ ಸಲಹೆ ನೀಡಿದರು.

    ಯಾವುದೇ ಕಾರಣದಿಂದಲೂ ಯಾವುದೇ ಒಂದು ಮಗುವೂ ಸಹ ಪರೀಕ್ಷೆಯಿಂದ ವಂಚಿತವಾಗದಂತೆ ಕ್ರಮ ವಹಿಸುವುದೂ ಸೇರಿದಂತೆ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರೂಪಿಸಿದ ಎಸ್‍ಒಪಿ ಅನುಷ್ಠಾನ ಕುರಿತು ಚರ್ಚಿಸಿ, ಅಗತ್ಯವಿರುವ ಮಕ್ಕಳಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ವಾಹನ ವ್ಯವಸ್ಥೆ ಮಾಡಲು ಸಚಿವರು ಸೂಚನೆ ನೀಡಿದರು. ಕಳೆದ ವರ್ಷ ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತವಾಗದೇ ಇರುವುದು ಮತ್ತು ಒಬ್ಬನೇ ಒಬ್ಬ ಕೊನೆಯ ಕುಗ್ರಾಮದ ವಿದ್ಯಾರ್ಥಿಯೊಬ್ಬನಿಗಾಗಿ ಒಂದು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿದ್ದನ್ನು ಅವರು ಸ್ಮರಿಸಿದರು.

    ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ನೀಡಿದ ಪ್ರಶ್ನೆ ಪತ್ರಿಕೆಗಳ ಒಎಂಆರ್ ಶೀಟ್ ಸೇರಿದಂತೆ ಆಯಾ ಜಿಲ್ಲೆಗಳಲ್ಲಿ ರೂಪಿಸಲಾದ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಮಕ್ಕಳು ಉತ್ತರಿಸಿ ಪರೀಕ್ಷಾ ಪದ್ಧತಿ ಕುರಿತು ಆತ್ಮವಿಶ್ವಾಸ ಮೂಡಿಸಿಕೊಂಡಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಆಯಾ ಶಾಲೆಗಳಲ್ಲಿ ಪರೀಕ್ಷೆ ನಡೆಸಿ ಮಾರ್ಗದರ್ಶನ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಮಕ್ಕಳ ಮನೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಿ ಅವುಗಳನ್ನು ಪಡೆದುಕೊಂಡು ಮಾರ್ಗದರ್ಶನ ನೀಡಲಾಗಿದೆ. ವೆಬಿನಾರ್, ವಾಟ್ಸಪ್‍ಗಳ ಮೂಲಕ ಹಾಗೆಯೇ ಕೆಲವೆಡೆಗಳಲ್ಲಿ ಮಕ್ಕಳ ಪೋಷಕರ ಉಪಸ್ಥಿತಿಯಲ್ಲಿ ಪ್ರಶ್ನೆ ಪತ್ರಿಕೆ ಉತ್ತರಿಸಲು ಮಕ್ಕಳಿಗೆ ತಿಳಿಹೇಳಲಾಗಿದ್ದು, ಪರೀಕ್ಷೆ ಕುರಿತು ಮಕ್ಕಳು ಮತ್ತು ಪೋಷಕರಲ್ಲಿ ವಿಶ್ವಾಸ ಮೂಡುವಂತಹ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದೂ ಸಚಿವರು ವಿವರಿಸಿದರು.

    ಈಗಾಗಲೇ ಆಯಾ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ ಪರೀಕ್ಷೆ ಸಿದ್ಧತೆ ಕುರಿತು ಚರ್ಚಿಸಿ ವಿವಿಧ ಇಲಾಖೆ ಅಧಿಕಾರಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಕುರಿತು ಸೂಚನೆ ನೀಡಿದ್ದಾರೆ. ಗ್ರಾಮ ಪಂಚಾಯತಿ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳು ಪರೀಕ್ಷಾ ಕೇಂದ್ರದ ಸ್ಯಾನಿಟೈಸೇಷನ್ ಮಾಡುವ ಕುರಿತು ಸೂಚನೆಗಳನ್ನು ನೀಡಿದ್ದಾರೆ. ಸಾರಿಗೆ ವ್ಯವಸ್ಥೆಯ ಕೊರತೆಯಿರುವ ಮಕ್ಕಳನ್ನು ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಪರೀಕ್ಷೆಗೆ ಬಹಳ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಬರುತ್ತಿರುವುದರಿಂದ ಮಕ್ಕಳು ಕೇಂದ್ರದಿಂದ ಹೊರಡುವಾಗ ಅವರಿಗೆ ಲಘು ಉಪಹಾರದ ವ್ಯವಸ್ಥೆಯನ್ನೂ ಕೆಲ ಜಿಲ್ಲೆಗಳಲ್ಲಿ ಮಾಡಲಾಗಿದೆ.

    ಅದೇ ರೀತಿ ಉಳಿದ ಜಿಲ್ಲೆಗಳಲ್ಲಿ ಲಘು ಉಪಹಾರ, ಬಿಸ್ಕತ್ ಇಲ್ಲವೇ ನೀರಿನ ವ್ಯವಸ್ಥೆ ಹಾಗೆಯೇ ಮಾಸ್ಕ್, ಸ್ಯಾನಿಟೈಸರ್ ಒದಗಿಸಲು ಯಾವುದೇ ಸಂಘಸಂಸ್ಥೆಗಳು ಮುಂದೆಬಂದರೆ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಚಿವರು ಸಲಹೆ ನೀಡಿದದರು. ಕೆಲ ಜಿಲ್ಲೆಗಳಲ್ಲಿ ಶಾಸಕರು, ಸಂಘ ಸಂಸ್ಥೆಗಳು ಉದಾರವಾಗಿ ಇಂತಹ ಕೊಡುಗೆಗಳಿಗೆ ಮುಂದೆ ಬಂದಿದ್ದು ಅವುಗಳನ್ನು ಪಡೆದುಕೊಳ್ಳಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು ಎಂದು ಸಚಿವರು ತಿಳಿಸಿದರು.

    ಜನಪ್ರತಿನಿಧಿಗಳ ಸಹಕಾರ:ಪರೀಕ್ಷೆ ಕುರಿತು ಕೆಲವೆಡೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಆಯಾ ಭಾಗದ ವಿಧಾನಸಭಾ ಸದಸ್ಯರು, ವಿಧಾನಪರಿಷತ್ತಿನ ಸದಸ್ಯರು ಅಧಿಕಾರಿಗಳ ಸಭೆ ನಡೆಸಿ ಪರೀಕ್ಷೆ ಯಶಸ್ಸಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಈಗಾಗಲೇ ಎರಡೆರಡು ಬಾರಿ ಸಭೆಗಳನ್ನು ನಡೆಸಿ ಸಿದ್ಧತೆ ಪರಿಶೀಲಿಸಿದ್ದಾರೆ. ಬ್ಲಾಕ್ ಮಟ್ಟದಲ್ಲಿ ಸಿಆರ್‍ಪಿ, ಬಿಆರ್‍ಪಿ ಹಂತದಲ್ಲಿ ಹಾಗೆಯೇ ಮುಖ್ಯೋಪಾಧ್ಯಾಯರು ಶಾಲಾ ಹಂತದಲ್ಲಿ ಪ್ರತಿಯೊಬ್ಬ ಮಕ್ಕಳನ್ನೂ ತಲುಪಿದ್ದು, ಪೋಷಕರು ಮತ್ತು ಮಕ್ಕಳೊಂದಿಗೆ ಪರೀಕ್ಷೆ, ಈ ವರ್ಷದ ಪರೀಕ್ಷಾ ಪದ್ಧತಿ ಕುರಿತು ಮತ್ತು ಪರೀಕ್ಷೆಯನ್ನು ಮಕ್ಕಳ ಮುಂದಿನ ವ್ಯಾಸಂಗದ ಆಯ್ಕೆಯ ಅನುಕೂಲಕ್ಕಾಗಿ ಮತ್ತು ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸುತ್ತಿರುವ ಕುರಿತು ವಿವರಣೆ ನೀಡಿ ಆತ್ಮವಿಶ್ವಾಸ ತುಂಬಿದ್ದಾರೆ.

    ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿರುವುದರಿಂದ ಪ್ರಮುಖವಾಗಿ ಪರೀಕ್ಷಾ ಪಾವಿತ್ರ್ಯತೆ ಕುರಿತು ಹೆಚ್ಚಿನ ಗಮನ ಹರಿಸಬೇಕು. ಯಾವುದೇ ಕಾರಣಕ್ಕಾಗಿಯೂ ಯಾವುದೇ ರೀತಿಯಲ್ಲೂ ಯಾವುದೇ ಪರೀಕ್ಷಾ ಕೇಂದ್ರಗಳು ಸಲ್ಲದ ಕಾರಣಕ್ಕಾಗಿ ಮಾಧ್ಯಮಗಳಿಗೆ ವಿಷಯವಸ್ತುವಾಗದಂತೆ ಎಚ್ಚರಿಕೆ ವಹಿಸಿ ಪರೀಕ್ಷೆಗಳನ್ನು ಯಶಸ್ವಿಗೊಳಿಸಬೇಕೆಂದು ಅವರು ಸಲಹೆ ನೀಡಿದರು. ಇಂತಹ ಕಾಲಘಟ್ಟದಲ್ಲಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಪರೀಕ್ಷಾರ್ಥಿಗಳಿಗಷ್ಟೇ ಅಲ್ಲ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಎಲ್ಲರಿಗೂ ಸಹ ನೆನಪಿನಲ್ಲುಳಿಯುವಂತಹ ಒಂದು ಅವಿಸ್ಮರಣೀಯ ಘಟನೆಯಾಗಲಿರುವುದರಿಂದ ಈ ಪರೀಕ್ಷೆಗೆ ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

    ಹೆಚ್ಚು ಮಳೆಯ ಜಿಲ್ಲೆಗಳಲ್ಲಿ ಸಾರಿಗೆ ವ್ಯವಸ್ಥೆ: ಪರೀಕ್ಷೆ ಮಳೆಗಾಲದ ಸಮಯದಲ್ಲಿ ನಡೆಯುತ್ತಿರುವುದರಿಂದ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮಕ್ಕಳು ಪರೀಕ್ಷೆಗೆ ಬಂದು ಹೋಗುವ ಕುರಿತು ಕೈಗೊಳ್ಳಲಾದ ಕ್ರಮಗಳನ್ನು ಆಲಿಸಿದರು. ಹಾಗೆಯೇ ದಕ್ಷಿಣ ಕನ್ನಡದಲ್ಲಿ ದೋಣಿಯಲ್ಲಿ ಬರಬೇಕಾದ ಮಕ್ಕಳ ಕುರಿತಂತೆ ಕೈಗೊಳ್ಳಲಾದ ಕ್ರಮದ ಕುರಿತು ಸಲಹೆ ನೀಡಿದರು. ಹೋಗಿ ಬರಲು ತೊಂದರೆಯಾಗುವಂತಹ ಕಡೆಗಳಲ್ಲಿ ವಿದ್ಯಾರ್ಥಿನಿಲಯಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕೆಂದು ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಸ್ಥಳೀಯ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಯಾವೊಬ್ಬ ವಿದ್ಯಾರ್ಥಿಗೂ ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದು. ಉತ್ತಮ ಮನಸ್ಥಿತಿಯಲ್ಲಿ ಹಾಜರಾಗಿ ಉತ್ತಮ ಮತ್ತು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯುಂತಹ ಪರಿಸರವಿರುವಂತೆ ಮತ್ತು ಮಳೆಯ ಇರುಚಲಿನಿಂದಲು ಪರೀಕ್ಷಾರ್ಥಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಸುರೇಶ್ ಕುಮಾರ್ ಸಲಹೆ ನೀಡಿದರು.

    ಪರೀಕ್ಷಾ ಸಿದ್ಧತೆ, ಸಿಬ್ಬಂದಿ ಲಸಿಕೆ ಪಡೆದಿರುವುದು, ಸ್ಥಳೀಯ ಹಂತದಲ್ಲಿ ಜಿಲ್ಲಾಧಕಾರಿಗಳ ನೇತೃತ್ವದ ಸಭೆಗಳ ಮಾಹಿತಿ, ಸ್ವಯಂ ಸೇವಕರ ನೇಮಕ, ಮಾಸ್ಕ್, ಸ್ಯಾನಿಟೈಜರ್ ವ್ಯವಸ್ಥೆ, ಎಸ್‍ಒಪಿ ಪಾಲನೆ ಕುರಿತು ಎಲ್ಲ 34 ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು.

    15-17ರಂದು ಅಣಕು ಪರೀಕ್ಷೆ:ಪರೀಕ್ಷಾ ಸಿದ್ಧತೆ ಕುರಿತಂತೆ ವಿವರಣೆ ಪಡೆದ ಸುರೇಶ್ ಕುಮಾರ್, ಜುಲೈ 15 ಮತ್ತು 17ರಂದು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಅಣಕು ಪರೀಕ್ಷೆಗಳನ್ನು ನಡೆಸುವುದಕ್ಕೆ ಸೂಚನೆ ನೀಡಿ, ಪರೀಕ್ಷಾ ಕೇಂದ್ರ ಪ್ರವೇಶದಿಂದ ಹಿಡಿದು ಪರೀಕ್ಷಾ ಕೊಠಡಿ ಪ್ರವೇಶ ಹಾಗೆಯೇ ಪರೀಕ್ಷೆ ನಂತರ ಮಕ್ಕಳು ಸಾಮಾಜಿಕ ಅಂತರದ ಮೂಲಕ ಪರೀಕ್ಷಾ ಕೇಂದ್ರದಿಂದ ಹೊರಬರುವ ತನಕ ಎಲ್ಲ ರೀತಿಯ ಕ್ರಮಗಳನ್ನು ಪಾಲಿಸುವಂತೆ ಸಚಿವರು ಸೂಚಿಸಿದರು.

    ಮಕ್ಕಳೊಂದಿಗೆ ಫೋನ್ ಇನ್ ಸಂವೇದನಾ:ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಭಾಗಿಯಾಗುತ್ತಿರುವ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಪರೀಕ್ಷೆಗೆ ಮಕ್ಕಳು ಸಜ್ಜಾಗಿರುವ ಕುರಿತು ಮಕ್ಕಳೊಂದಿಗೆ ತಾವು ಮಾತನಾಡು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಜುಲೈ 9 ಮತ್ತು 14ರಂದು ಫೋನ್ ಇನ್ ಸಂವೇದನಾ ಕಾರ್ಯಕ್ರಮ ನಡೆಯಲಿದೆ. ಪ್ರತಿಯೊಂದು ಜಿಲ್ಲೆಗಳಿಂದ 2000ಕ್ಕೂ ಹೆಚ್ಚು ಮಕ್ಕಳು ಈ ಸಂವೇದನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಂದು ಸುರೇಶ್ ಕುಮಾರ್ ತಿಳಿಸಿದರು.

    ಸಭೆಯಲ್ಲಿ ಸಾಶಿಇ ಆಯುಕ್ತ ವಿ. ಅನ್ಬುಕುಮಾರ್, ಅಪರ ಆಯುಕ್ತರಾದ ನಳಿನ್ ಅತುಲ್, ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    223 ಕೋಟಿ ರೂ. ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡರ 46 ಪಾರಂಪರಿಕ ತಾಣಗಳ ಅಭಿವೃದ್ಧಿ

    ನಾಡಪ್ರಭು ಕೆಂಪೇಗೌಡರ ಕಾಲದ ಸುಮಾರು 46 ಪಾರಂಪರಿಕ ತಾಣಗಳನ್ನು ಮೂರು ಸರ್ಕ್ಯುಟ್ ಗಳಲ್ಲಿ ಗುರುತಿಸಲಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯನ್ನೂ ದೃಷ್ಟಿಯಲ್ಲಿರಿಸಿಕೊಂಡು ಈ ತಾಣಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದರು.

    ಅವರು ಇಂದು ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಪರಿಕಲ್ಪನಾ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಇದರಲ್ಲಿ 132 ಕೋಟಿ ರೂ. ವೆಚ್ಚದಲ್ಲಿ ಮಾಗಡಿ ಸರ್ಕ್ಯುಟ್, 47 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಸರ್ಕ್ಯುಟ್ ಹಾಗೂ 44 ಕೋಟಿ ರೂ. ವೆಚ್ಚದಲ್ಲಿ ನಂದಿ ಸರ್ಕ್ಯುಟ್ ಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ.

    ಕೆಂಪೇಗೌಡರ ಪ್ರತಿಮೆಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 64 ಕೋಟಿ ರೂ. ವೆಚ್ಚದಲ್ಲಿ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಪ್ರತಿಮೆಯ ಸುತ್ತ ಥೀಮ್ ಪಾರ್ಕ್ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

    ರಾಮನಗರ ಜಿಲ್ಲೆಯ ಕೆಂಪಾಪುರ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ವೀರ ಸಮಾಧಿ ಅಭಿವೃದ್ಧಿ ಕಾರ್ಯಕ್ಕೆ ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಪರಿಕಲ್ಪನಾ ಯೋಜನೆ ಪ್ರಗತಿಯಲ್ಲಿದೆ. 32 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗೆ ಜಮೀನು ಕಳೆದುಕೊಳ್ಳುವ 46 ಕುಟುಂಬಗಳಿಗೆ ಪುನರ್ವಸತಿ, ರಸ್ತೆ ಅಭಿವೃದ್ಧಿ ಮತ್ತಿತರ ಮೂಲಸೌಕರ್ಯ ಒದಗಿಸುವ ಕುರಿತು ವ್ಯವಸ್ಥಿತ ಯೋಜನೆ ರೂಪಿಸಿ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

    ಕೆಂಪೇಗೌಡರ ಜೀವನಾಧಾರಿತ ಪುಸ್ತಕ, ಕಿರುಚಿತ್ರ ಸಿದ್ಧಪಡಿಸಲು ಹಾಗೂ ನಾಡಪ್ರಭು ಕೆಂಪೇಗೌಡರ ಆಡಳಿತಾವಧಿಯ ಕೋಟೆಗಳು, ಕೆರೆಗಳು ಮತ್ತು ಪಾರಂಪರಿಕ ತಾಣಗಳನ್ನು ಪ್ರವಾಸೋದ್ಯಮ ಇಲಾಖೆ, ಸಣ್ಣ ನೀರಾವರಿ, ಬಿಬಿಎಂಪಿ, ಲೋಕೋಪಯೋಗಿ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ, ಅರಣ್ಯ, ತೋಟಗಾರಿಕೆಮತ್ತಿತರ ಇಲಾಖೆಗಳ ಸಹಯೋಗದೊಂದಿಗೆ ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಪಡಿಸಲು ಯೋಜನೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು..

    ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್, ಮಾಗಡಿ ಶಾಸಕ ಮಂಜುನಾಥ್, ಪ್ರಾಧಿಕಾರದ ಸದಸ್ಯರು, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಬಾದಾಮಿ ಕ್ಷೇತ್ರದಿಂದಲೇ ಸಿದ್ಧರಾಮಯ್ಯ ಸ್ಪರ್ಧೆ

    ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ವಿಧಾನಸಭೆಯ ಪ್ರತಿ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ಬಾದಾಮಿ ಕ್ಷೇತ್ರದಿಂದ ನೂರಾರು ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಕ್ಷೇತ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ತಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹಲವರು ಅಭಿಮಾನದಿಂದ ಕರೆಯುತ್ತಿದ್ದಾರೆ. ಆದರೆ, ನಾನು ಬಾದಾಮಿಯಿಂದಲೇ ಕಣಕ್ಕಿಳಿಯುತ್ತೇನೆ. ಯಾವುದೇ ತೀರ್ಮಾನವನ್ನು ನಿಮ್ಮ ಅಭಿಪ್ರಾಯ ಪಡೆದಕೊಂಡೇ ಕೈಗೊಳ್ಳುತ್ತೇನೆ ಎಂದು ಹೇಳಿದರು.

    ಬಾದಾಮಿ ಕ್ಷೇತ್ರದ ಜನತೆ ಒಳ್ಳೆಯವರು. ವಿಧಾನಸಭೆ ಚುನಾವಣೆ ವೇಳೆ ನಾಮಪತ್ರ ಸಲ್ಲಿಸಿ ಒಂದು ದಿನ ಮಾತ್ರ ಪ್ರಚಾರ ಕೈಗೊಂಡಿದ್ದೆ. ಆದರೂ ಕ್ಷೇತ್ರದ ಜನತೆ ಅಭಿಮಾನದಿಂದ ಗೆಲ್ಲಿಸಿದ್ದಾರೆ. ಅವರ ಈ ಋಣವನ್ನು ಮರೆಯಲು ಸಾಧ್ಯವೇ ಇಲ್ಲ.ಬಾದಾಮಿ ಕ್ಷೇತ್ರದ ಶಾಸಕನಾಗಿ ನನ್ನ ಕರ್ತವ್ಯ ನಿಭಾಯಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಅಭಿವೃದ್ಧಿ ಕೆಲಸದ ವಿಷಯದಲ್ಲಿ ಹಿಂದೆ ಬೀಳುವುದಿಲ್ಲ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಾವಿರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳು ಕ್ಷೇತ್ರದಲ್ಲಿ ನಡೆಯುತ್ತಿದೆ.

    ಶಾಶ್ವತ ಕುಡಿಯುವ ನೀರಿನ ಯೋಜನೆ ಹಾಗೂ ಕೆರೂರು ಏತ ನೀರಾವರಿ ಯೋಜನೆ ಇದರಲ್ಲಿ ಪ್ರಮುಖವಾದದ್ದು. ಜೊತೆಗೆ ಕಾಲೇಜು, ಆಸ್ಪತ್ರೆ ಸೇರಿದಂತೆ ಹಲವಾರು ಕೆಲಸಗಳೂ ಆಗಿವೆ. ಇನ್ನೂ ಎರಡು ವರ್ಷಗಳ ಅವಧಿ ಇದೆ. ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಶ್ರಮ ವಹಿಸುತ್ತೇನೆ ಎಂದು ಹೇಳಿದರು. ಇದು ಶಾಸಕನಾಗಿ ನನ್ನ ಜವಾಬ್ದಾರಿಯೂ ಹೌದು ಎಂದರು.

    ನೀವು ಬಾದಾಮಿ ಕ್ಷೇತ್ರದಿಂದಲೇ ಗೆದ್ದು ಶಾಸಕರಾಗಬೇಕು. ಮುಖ್ಯಮಂತ್ರಿಯೂ ಆಗಬೇಕು ಎಂದು ಅಭಿಮಾನಿಗಳು ಹಾರೈಸಿದರು.

    ರಾಜ್ಯದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್

    ಕೇಂದ್ರ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಿಸಲಾಗಿದೆ. ರಾಜ್ಯಸಭೆಯಲ್ಲಿ ಬಿಜೆಪಿ ಯ ನಾಯಕರೂ ಆಗಿರುವ ಗೆಹ್ಲೋಟ್ ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಸಚಿವರಾಗಿದ್ದಾರೆ.

    ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಬಂಡಾರು ದತ್ತಾತ್ರೇಯ ಅವರನ್ನು ಹರಿಯಾಣ ರಾಜ್ಯಪಾಲರಾಗಿ ನೇಮಿಸಲಾಗಿದೆ. ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.ಮಿಜೋರಾಮ್ ರಾಜ್ಯಪಾಲ ಪಿ ಎಸ್ ಶ್ರೀಧರನ್ ಪಿಳ್ಳೈ ಅವರನ್ನು ಗೋವಾ ರಾಜ್ಯಕ್ಕೆ ವರ್ಗಾಯಿಸಲಾಗಿದೆ.

    ಹರಿಯಾಣ ರಾಜ್ಯಪಾಲ ಸತ್ಯದೇವ ನಾರಾಯಣ ಆರ್ಯ ಅವರನ್ನು ತ್ರಿಪುರಾ ರಾಜ್ಯಪಾಲರಾಗಿಯೂ, ತ್ರಿಪುರ ರಾಜ್ಯಪಾಲರಾಗಿದ್ದ ರಮೇಶ್ ವ್ಯಾಸ್ ಅವರನ್ನು ಜಾರ್ಖಂಡ್ ರಾಜ್ಯಪಾಲರನ್ನಾಗಿಯೂ ನೇಮಿಸಲಾಗಿದೆ. ಡಾ. ಹರಿ ಬಾಬು ಕಂಬಂಪತಿ ಅವರು ಮಿಜೋರಾಮ್ ಗೂ ,  ಮಂಗುಭಾಯ್ ಛಗ್ಗನ್ ಭಾಯ್ ಪಟೇಲ್ ಅವರು ಮಧ್ಯಪ್ರದೇಶ ರಾಜ್ಯಪಾಲರಾಗಿಯೂ ನೇಮಕವಾಗಿದ್ದಾರೆ.

    ಮೇಕೆದಾಟು ಯೋಜನೆ ಜಾರಿ ಮಾಡಿಯೇ ಮಾಡುತ್ತೇವೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಚಲ ವಿಶ್ವಾಸ

    ಕಾವೇರಿ ಕಣಿವೆಯಲ್ಲಿನ ಕರ್ನಾಟಕ ರಾಜ್ಯದ ರೈತರ ಹಕ್ಕಿನ ಸಲುವಾಗಿ ತಮಿಳುನಾಡು ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇವೆ. ಈ ಹೋರಾಟದಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸ ಇದೆ. ಮೇಕೆದಾಟು ಯೋಜನೆಯನ್ನು ಜಾರಿ ಮಾಡಿಯೇ ಮಾಡುತ್ತೇವೆ.-ಇವು ರಾಜ್ಯದ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಅವರ ಆತ್ಮವಿಶ್ವಾಸದ ನುಡಿಗಳು.

    ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಇಂದು-ನಿನ್ನೆಯದಲ್ಲ. ಹಲವಾರು ವರ್ಷಗಳ ಹಿಂದೆ ಈ ಯೋಜನೆ ಸಿದ್ಧವಾಗಿದೆ. ಇದು ವಿದ್ಯುತ್ಚ್ಛಕ್ತಿ, ಕುಡಿಯುವ ನೀರು ಮತ್ತು ಸಂಕಷ್ಟದ ವರ್ಷಗಳಲ್ಲಿ ಉಭಯ ರಾಜ್ಯಗಳ ನಡುವೆ ನೀರಿನ ಸಮರ್ಪಕ ನಿರ್ವಹಣೆ ಮಾಡಲು ಅನುಕೂಲವಾಗುವ ಯೋಜನೆಯಾಗಿದೆ. ಉಭಯ ರಾಜ್ಯಗಳಿಗೂ ಅನುಕೂಲವಾಗುವ ಈ ಯೋಜನೆಯನ್ನು ಜಾರಿ ಮಾಡಲು ನಾವು ಪ್ರಯತ್ನಿಸಿದ್ದರೆ ತಮಿಳುನಾಡು ಸರ್ಕಾರ ತಕರಾರು ತೆಗೆಯುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

    ಕರ್ನಾಟಕ ರಾಜ್ಯದ ಕಾವೇರಿ ಕಣಿವೆಯ ರೈತರ ಹಕ್ಕಿನ ಸಲುವಾಗಿ ನಾವು ಕಾನೂನು ಹೋರಾಟವನ್ನು ಸದಾಕಾಲ ಮಾಡುತ್ತಲೇ ಬಂದಿದ್ದೇವೆ. ನಮ್ಮ ಹಕ್ಕಿನ ಸಲುವಾಗಿ ಈಗಲೂ ನಮ್ಮ ಕಾನೂನು ಹೋರಾಟ ಮುಂದುವರಿಸುತ್ತೇವೆ. ನಮಗೆ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಮೇಕೆದಾಟು ಯೋಜನೆಯನ್ನು ಜಾರಿ ಮಾಡಿಯೇ ಮಾಡುತ್ತೇವೆ ಎಂಬ ವಿಶ್ವಾಸವಿದೆ ಎಂಬ ಭರವಸೆಯ ಮಾತುಗಳನ್ನು ಅವರು ಆಡಿದರು.

    ಮೇಕೆದಾಟು ಯೋಚನೆ ಕುರಿತು ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ಆಧರಿಸಿ ಕೇಂದ್ರ ಸರ್ಕಾರದಿಂದ ಬೇಕಾಗುವ ಎಲ್ಲಾ ಕ್ಲಿಯರೆನ್ಸ್ ಗಳನ್ನು ಪಡೆಯುತ್ತೇವೆ ಎಂದು ಅವರು ಹೇಳಿದರು.

    ತಮಿಳುನಾಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ತಪ್ಪು ಎಂದ ಸಿದ್ಧರಾಮಯ್ಯ

    ಮೇಕೆದಾಟು ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ನಾವು ಅಣೆಕಟ್ಟು ಕಟ್ಟಲು ಅವರ ಅನುಮತಿ ಏಕೆ ಬೇಕು. ಕೋರ್ಟ್ ಆದೇಶ ಪ್ರಕಾರ ನಮ್ಮ ಕೆಲಸ ನಾವು ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಹೇಳಿದರು. ಪತ್ರ ಬರೆದು ಅನುಮತಿ ಕೋರಿದರೆ ಯಾರೂ ಒಪ್ಪುವುದಿಲ್ಲ. ನಾವು ಅಣೆಕಟ್ಟು ಕಟ್ಟುವುದರಿಂದ ತಮಿಳುನಾಡಿಗೆ ನೀರಿನ ಸಮಸ್ಯೆ ಆಗುವುದಿಲ್ಲ. ನಮ್ಮ ಸರ್ಕಾರ ಇದ್ದಾಗ ಈ ರೀತಿ ಪತ್ರ ಬರೆದು ಒಪ್ಪಿಗೆ ಕೇಳಿರಲಿಲ್ಲ ಎಂದರು.

    ಬಸವನಗುಡಿಯ ಶ್ರೀ ನಗರದಲ್ಲಿ ಇಂದು ಯುವ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿನಸಿ ಕಿಟ್‍ಗಳನ್ನು ವಿತರಿಸಿ ಸಿದ್ದರಾಮಯ್ಯ ಅವರು ಮಾತನಾಡಿದರು.

    ಬಿಡದಿಯಲ್ಲೇ ಕುಮಾರ ಸ್ವಾಮಿ ಬಿಡಾರ

    ರಾಮನಗರ ಜಿಲ್ಲೆ ಬಿಡದಿ ಸಮೀಪ ಇರುವ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಕಳೆದ ಆರು ತಿಂಗಳಿಂದ ವಾಸ್ತವ್ಯ ಹೂಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಾರ್ವಜನಿಕರಿನ್ನು ಭೇಟಿ ಮಾಡಲು ಅಲ್ಲೇ ಒಂದು ಕಚೆೇರಿಯನ್ನು ಆರಂಭಿಸಿದ್ದು ಸಮಯವನ್ನು ನಿಗದಿ ಮಾಡಿದ್ದಾರೆ.

    ನನ್ನ ಹೊಲ ಮತ್ತು ತೋಟದ ಕೃಷಿಯನ್ನು ಇಸ್ರೇಲ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇನೆ. ಹೀಗಾಗಿ ತೋಟ ಮನೆಯಲ್ಲೇ ಇದ್ದೇನೆ. ನನ್ನ ಭೇಟಿಗೆ ರಾಜ್ಯದ ನಾನಾ ಭಾಗಗಳಿಂದ ನಮ್ಮ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಆಗಮಿಸುತ್ತಿದ್ದಾರೆ.ಬೆಳಗ್ಗೆ 8.30 ರಿಂದ 10.30 ಗಂಟೆಯವರೆಗೆ ನನ್ನ ತೋಟದ ಮನೆಯಲ್ಲಿ ಭೇಟಿಯಾಗಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಭಾನುವಾರ ಹೊರತುಪಡಿಸಿ, ಉಳಿದ ದಿನಗಳಲ್ಲಿ ಈ ಸಮಯದಲ್ಲಿ ಬಂದು ನನ್ನನ್ನು ಭೇಟಿ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

    ಸಾರ್ಜನಿಕರು ನನ್ನನ್ನು ಭೇಟಿ ಮಾಡುವ ಸದುದ್ದೇಶಕ್ಕಾಗಿಯೇ ನನ್ನ ತೋಟದ ಮನೆಯಲ್ಲಿ ಆರಂಭಿಸಿರುವ ಪುಟ್ಟ ಕಚೇರಿಯ ಔಪಚಾರಿಕ ಪೂಜೆ ಇಂದು ನೆರವೇರಿತು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

    ಮಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾನಸಿಕ ಸ್ಥೈರ್ಯ ತುಂಬಲು ಕಾರ್ಯಗಾರ

    ಕರ್ನಾಟಕ ಸರ್ಕಾರದ  ಶಿಕ್ಷಣ ಸುಧಾರಣೆಗಳ ಕಾರ್ಯಕ್ರಮದ ಅಡಿಯಲ್ಲಿ  ‘ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾನಸಿಕ ಸ್ಥೈರ್ಯ ಹಾಗೂ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ಆನ್ಲೈನ್  ತರಬೇತಿ’ ಯನ್ನು  ಮಂಗಳೂರು ವಿವಿಯಲ್ಲಿ ಶನಿವಾರ ಆಯೋಜಿಸಲಾಗಿತ್ತು.  

    ಕಾರ್ಯಕ್ರಮದ ಮುಖ್ಯ ಪೋಷಕರಾದ ಪ್ರೊ. ಎಂ. ಆರ್. ದೊರೆಸ್ವಾಮಿ (ಸಲಹೆಗಾರರು – ಶಿಕ್ಷಣ ಸುಧಾರಣೆಗಳು ಕರ್ನಾಟಕ ಸರ್ಕಾರ  ಹಾಗೂ ಪಿ. ಇ. ಎಸ್ . ವಿಶ್ವವಿದ್ಯಾನಿಯದ ಕುಲಾಧಿಪತಿಗಳು)    ಅವರು ಸಮಯೋಚಿತವಾಗಿ ಇಂತಹ   ಕಾರ್ಯಕ್ರಮವನ್ನು ಆಯೋಜಿಸಿರುವುದನ್ನು  ಶ್ಲಾಘಿಸಿ   ಶುಭಕೋರಿದರು. 

    ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.  ಪಿ. ಸುಬ್ರಹ್ಮಣ್ಯ  ಯಡಪಡಿತ್ತಾಯ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಕೋವಿಡ್ -19 ಸಂದಿಗ್ಧತೆಯ ಈ ಸನ್ನಿವೇಶದಲ್ಲಿ  ವಿದ್ಯಾರ್ಥಿಗಳು ಮುಖ್ಯವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರುಗಳಿಗೆ  ಅತಂತ್ರ ಸ್ಥಿತಿ  ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ  ಅವರಲ್ಲಿ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವುದು ನಮ್ಮ ಕರ್ತವ್ಯ.   ಎಲ್ಲರೂ   ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಕರೆ ನೀಡಿದರು.

    ಸುರಕ್ಷತೆ ಮತ್ತು   ಜನರ  ಹಿತದೃಷ್ಟಿಯಿಂದ   ಸರ್ಕಾರವು ಕಾಲಕಾಲಕ್ಕೆ ತೆಗೆದುಕೊಳ್ಳುವ ಕ್ರಮಗಳನ್ನು ಅನುಸರಿಸಿ ಶೀಘ್ರದಲ್ಲಿ  ಕೊರೊನಾಮುಕ್ತ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಕೈಜೋಡಿಸಬೇಕು.   ಸಂಪನ್ಮೂಲ ವ್ಯಕ್ತಿಗಳು  ನೀಡುವ ಸಲಹೆ ಸೂಚನೆಗಳನ್ನು  ಪಾಲಿಸಿ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಕೊಳ್ಳಬೇಕು ಎಂದು ಹೇಳಿದರು.

    ರಾಮಕುಂಜದ ಶ್ರೀ  ರಾಮಕುಂಜೇಶ್ವರ   ಪ್ರೌಢಶಾಲೆಯ   ಮುಖ್ಯೋಪಾಧ್ಯಾಯ ಹಾಗೂ  ಜೆಸಿಐ  ರಾಷ್ಟ್ರೀಯ ತರಬೇತುದಾರರಾದ ಸತೀಶ್ ಭಟ್ ಬಿಳಿನೆಲೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಈ  ಬಾರಿಯ ಪರೀಕ್ಷಾ ವಿಧಾನ,  ಪರೀಕ್ಷೆಗೆ ಹೇಗೆ ತಯಾರಿ ನೆಡೆಸಬೇಕು, ಉತ್ತಮ ಅಂಕಗಳನ್ನು ಗಳಿಸಲು  ಶಿಸ್ತುಬದ್ಧವಾಗಿ ಹೇಗೆ ಅಭ್ಯಾಸ ಮಾಡಬೇಕು.  ಗಣಿತ ಮತ್ತು ವಿಜ್ಞಾನದ  ಸೂತ್ರಗಳನ್ನು ಹೇಗೆ ಸುಲಭವಾಗಿ ನೆನಪಿಟ್ಟುಕೊಳ್ಳಬೇಕು, ಗಣಿತ ಸಮಸ್ಯೆಗಳನ್ನು  ಸರಳವಾಗಿ  ಪರಿಹರಿಸುವ ಬಗೆ, ಉತ್ತಮ ಅಂಕಗಳನ್ನು ಗಳಿಸಿದರೆ ಇರುವ ಅವಕಾಶಗಳು,   ಹೀಗೆ  ಅನೇಕ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.  

    ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ಮಂಗಳೂರು ವಿವಿ ವಸ್ತುವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿಶ್ವನಾಥ ಟಿ ಅವರು ಪರೀಕ್ಷೆಗೆ ಬೇಕಾದ ಮಾನಸಿಕ ಸಿದ್ಧತೆ,  ಒತ್ತಡರಹಿತವಾಗಿ ಪರೀಕ್ಷೆಯನ್ನು ಎದುರಿಸುವ ಬಗ್ಗೆ  ಮಕ್ಕಳಿಗೆ ಚಿತ್ರಗಳ ಮೂಲಕ ಉಪನ್ಯಾಸವನ್ನು  ಮಂಡಿಸಿದರು. 

    ಕಾರ್ಯಕ್ರಮದ ಸಂಯೋಜಕರಾದ  ಡಾ. ಪ್ರಶಾಂತ ನಾಯ್ಕ  ಪ್ರಸ್ತಾವನೆ ಗೈದು ಸ್ವಾಗತಿಸಿದರು ಹಾಗೂ  ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಸುಪ್ತಮನಸ್ಸನ್ನು ಬಳಸಿಕೊಳ್ಳುವ ವಿಧಾನವನ್ನು ಪ್ರಾತ್ಯಕ್ಷಿಕೆ ನೀಡಿದರು. 

    ವಿದಾರ್ಥಿಗಳು ಪ್ರಶ್ನೆಗಳನ್ನು ಕೇಳಿ ನೇರ ಸಂವಾದದಲ್ಲಿ  ಭಾಗವಹಿಸಿದರು. ಕುಲಸಚಿವ ಪ್ರೊ. ಸಿ. ಕೆ. ಕಿಶೋರ್ ಕುಮಾರ್, ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ. ಎಲ್. ಧರ್ಮ ಮತ್ತು ದತ್ತು ಸ್ವೀಕೃತ ಹತ್ತು ಶಾಲೆಗಳ ನೋಡಲ್ ಅಧಿಕಾರಿ ಪ್ರೊ. ಬಿ. ನಾರಾಯಣ ಅವರುಗಳು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ  ಶುಭ ಹಾರೈಸಿದರು. ನರಸಿಂಹಯ್ಯ ಎನ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ. ಗೋವಿಂದರಾಜು ಬಿ. ಎಂ.  ವಂದನಾರ್ಪಣೆ ಸಲ್ಲಿಸಿದರು.  

    error: Content is protected !!