30.5 C
Karnataka
Friday, May 10, 2024

    ವೈರಸ್ ನ ಕೈಗೆ ಮನಸ್ಸನ್ನು ಕೊಡಬೇಡಿ

    Must read


    ಕೋವಿಡ್ ಎರಡನೇ ಅಲೆ ಕಡಿಮೆಯಾಗುತ್ತಿದೆ.ಈ ಅಲೆಯನ್ನು ಅನೇಕರು ಮೆಟ್ಟಿನಿಂತು ಎದುರಿಸಿ ಬಂದಿದ್ದಾರೆ. ಗೆದ್ದವರ ಪಾಸಿಟಿವ್ ಕಥೆಗಳನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ. ಈ ಗೆಲವು ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ. ಕರೋನಾ ಒಂದೇ ಅಲ್ಲ ಯಾವ ರೋಗ ಬಂದರು ಧೈರ್ಯದಿಂದ ಎದುರಿಸಿದಾಗ ಜಯಿಸಲು ಸಾಧ್ಯ.


    ಪ್ರಾರಂಭಿಕ ಹಂತದಲ್ಲೇ ಎಚ್ಚೆತ್ತುಕೊಳ್ಳಬೇಕು! ಹೋರಾಡಬೇಕು! ಗೆಲ್ಲಬೇಕು!

    ‘ತಲೆನೋವು ಇದೆ, ಸ್ವಲ್ಪ ಜ್ವರ ಇದೇನ್  ಮಹಾ!’  ಎನ್ನುತ್ತಲೇ ಕಾಫಿ ಪುಡಿ ಡಬ್ಬಿ ತೆರೆದರೆ ಆ ದಿನ  ಘಮಬರಲಿಲ್ಲ, ನೋಡೋಣ ಎನ್ನುತ್ತಲೇ ಊದುಬತ್ತಿ ಸುವಾಸನೆ ತೆಗೆದುಕೊಳ್ಳಹೋದರೆ ಅದೂ  ತಿಳಿಯಲಿಲ್ಲ.
    ದಡಬಡಿಸಿ ನೀಲಗಿರಿ ಎಣ್ಣೆಯ ಪರಿಮಳ ತೆಗೆದುಕೊಳ್ಳ ಹೋದರೆ ಅದೂ ತಿಳಿಯದಾದಾಗ ದಡಬಡಿಸಿ  ಜಿಲ್ಲಾಸ್ಪತ್ರೆಗೆ ಹೋಗಿ ಗಂಟಲು ದ್ರವ ಪರೀಕ್ಷೆಗೆ ಕೊಟ್ಟಿದ್ದಾಯಿತು. ಸ್ವ್ಯಾಬ್ ಕೊಟ್ಟಲ್ಲಿಂದ ಮನಸ್ಸಿನಲ್ಲಿ ಏನೋ ತಳಮಳ ತಳಮಳ   ವರದಿ  ಪಾಸಿಟಿವ್ ಬರುತ್ತದೆಯೋ…? ನೆಗೆಟಿವ್ ಬರತ್ತದೆಯೋ…?  ಏನೋ ಎಂಬ   ತಹತಹವಿತ್ತು.

    ಅಂತೂ  ಸ್ವ್ಯಾಬ್ ಕೊಟ್ಟು ಮೂರನೆಯ  ದಿನಾಂತ್ಯಕ್ಕೆ  ಕರೆ ಬಂದೇ ಬಿಟ್ಟಿತು. ಆ ನಂಬರ್ ಅಪರಿಚಿತ ಅನ್ನಿಸಿತು. ಕರೆ ಸ್ವೀಕರಿಸಿದರೆ  ಆ ಧ್ವನಿ ಮತ್ತೂ ಅಪರಿಚಿತವಾಗಿತ್ತು. ಆದರೆ ಸೌಮ್ಯವಾಗಿತ್ತು.  ಮೇ ಎರಡನೇ ವಾರದಲ್ಲಿ ಕೊರೊನಾ   ಪಾಸಿಟಿವ್ ಸಂಖ್ಯೆಯಂತೂ ಮಿತಿಮೀರಿತ್ತು.  “ನಾವು ಹಿಮ್ಸ್ನಿಂದ ಕರೆ ಮಾಡುತ್ತಿದ್ದೇವೆ. ನೀವು ಸ್ವ್ಯಾಬ್ ಕೊಟ್ಟಿದ್ದು  ಪಾಸಿಟಿವ್ ಆಗಿದೆ, ಆದರೆ  ಗಾಬರಿಯಾಗುವುದು ಬೇಡ!” ಎಂದರು. ಅನಂತರ ಅವರಾಡಿದ ಮಾತುಗಳು ಏನೂ ಕೇಳಿಸಲೇ ಇಲ್ಲ ಭಯವಾಗಿತ್ತು, ತಲೆ ತಿರುಗಿ ಸುಸ್ತಾದಂತೆ ಅನ್ನಿಸಿತು .   ಸಾವರಿಸಿಕೊಂಡು  ಮತ್ತೆ ಅದೇ ಸಂಖ್ಯೆಗೆ ಕರೆ ಮಾಡಿದರೆ  ಮತ್ತೆ ಸೌಮ್ಯವಾಗಿಯೇ   “ಹಿಮ್ಸ್ನಿಂದ-Hassan Institute of Medical Sciences – ಕೋವಿಡ್ ಕಿಟ್ ಪಡೆಯಿರಿ ಐಸೋಲೇಟ್ ಆಗಿ ಮಾಸ್ಕ್ ಹಾಕಿ. ನಿಮ್ಮ ಮನೆಯವರೆಲ್ಲರ ಸ್ವ್ಯಾಬ್  ಟೆಸ್ಟ್ಗೆ ಕೊಡಿ” ಎಂದು ಹೇಳಿದರು . 

    ಗಂಟಲು ದ್ರವ ಕೊಟ್ಟ ನಂತರ   ನನ್ನ ಸುಪ್ತ ಮನಸ್ಸು  ಪರಿಸ್ಥಿತಿ ಎದುರಿಸಲು ತಯಾರಾಗಿದ್ದಂತೆ ಅನ್ನಿಸಿತು .   ಮತ್ತೆ ಮನೆ ಒಳಗೆ ಹೋಗಲೇ ಇಲ್ಲ ಮನೆಯ ಹೊರ ಕೊಠಡಿಯಲ್ಲಿ ಹೋಗಿ ಕುಳಿತೆ ಇದರ ನಡುವೆ ಮತ್ತೆ ಮತ್ತೆ ನೀವು ರೋಗಿ ಸಂಖ್ಯೆ ——- ಎಂದು ಐದಾರು ಸಂದೇಶಗಳು ಒಟ್ಟಿಗೆ ಬಂದವು.  ಮನೆಯವರು, ಮಗಳು “ಇದೇನ್ ಮಹಾ ಎಲ್ಲರಿಗೂ ಆಗುವಂಥದ್ದೆ  ನಾಳೆ ನಾವುಗಳು ಟೆಸ್ಟ್ಗೆ ಕೊಟ್ಟರೂ  ಪಾಸಿಟಿವ್ ಬರುತ್ತದೆ”  ಎನ್ನುತ್ತ ಧೈರ್ಯ ಹೇಳಿದರು. ಅಂತೂ ನನ್ನ  ಅಧಿಕೃತ ಕೊರೊನಾ ವಾಸ ಪ್ರಾರಂಭವಾಯಿತು. 

    ಮರುದಿನ ಮನೆಯವರು   ನನ್ನ ಕೋವಿಡ್ ಕಿಟ್ ಪಡೆಯಹೋದರೆ “ಇಲ್ಲ  ರೋಗಿಯೇ ಬರಬೇಕು “ ಎಂದು ಹಿಮ್ಸ್ನವರು ತಾಕೀತು ಮಾಡಿದಾಗ ಅಕ್ಷರಷಃ ಭಯವಾಯಿತು ಆದರೆ ಹಿಮ್ಸ್ ತಲುಪವ ಹೊತ್ತಿಗೆ ಅವರು ಹೇಳುವುದು ನಮ್ಮ ಅನುಕೂಲಕ್ಕೇ ಅಲ್ಲವೇ” ಅನ್ನಿಸಿತು  ಜೊತೆಗೆ ಖುಷಿ ಕೂಡ ಆಯಿತು.  ಕೆಲವು ಮಾತ್ರೆಗಳನ್ನು ಅಲ್ಲಿ ಕೊಟ್ಟರು ಇನ್ನು ಕೆಲವು ಮಾತ್ರೆಗಳನ್ನು ಹೊರಗಿನಿಂದ ತೆಗೆದುಕೊಂಡು ಮನೆಗೆ ಬರುವುದರೊಳಗಾಗಿ ಇನ್ನೊಂದು ಕರೆ  “ನಾವು ಡಿಎಚ್ಒ ಆಫೀಸಿನಿಂದ  ಆರೋಗ್ಯವಾಗಿದ್ದೀರ…..?  ಸಿಮ್ಟಮ್ಸ್ ಏನಿದೆ ಮಾತ್ರೆಗಳನ್ನು ತೆಗೆದುಕೊಂಡಿದ್ದೀರ ?……. ಜಾಗರೂಕರಾಗಿರಿ  ಆತಂಕ ಪಡುವ ಆವಶ್ಯಕತೆ ಇಲ್ಲ ಬೇಗ ಗುಣಮುಖರಾಗಿ”  ಎಂದು ಸಕಾರಾತ್ಮಕವಾಗಿ ಮಾತನಾಡಿದ್ದು ಮನಸ್ಸಿಗೆ  ಮತ್ತೆ ಸಮಾಧಾನವಾಯಿತು.  ನಮ್ಮ ಬಗ್ಗೆಯೂ ಕಾಳಜಿ ತೆಗೆದುಕೊಳ್ಳುವವರು ಇದ್ದಾರಲ್ಲ ಎಂದು ಅನ್ನಿಸಿತು.

    ವಾರ್ತಾಮಾಧ್ಯಮಗಳಲ್ಲಿ ಹೇಳುವಂತೆ ನಮ್ಮ ಸರಕಾರ ಬೇಜವಾಬ್ದಾರಿ ತೋರಿಸಿಲ್ಲ  ನಾಗರಿಕರಿಗೆ  ಎಷ್ಟು ಅಗತ್ಯ ಸೌಲಭ್ಯ ಒದಗಿಸಬಹುದೋ ಅಷ್ಟನ್ನು ಒದಗಿಸುತ್ತಿದೆ.  ನಮ್ಮ  ಮನೆಯ ಸದಸ್ಯರೊಬ್ಬರಿಗೆ ಸೌಖ್ಯವಿಲ್ಲ ಎಂದರೇ ನಮಗೆ ಅದನ್ನು ನಿಭಾಯಿಸಲು ಕಷ್ಟವಾಗುತ್ತದೆ ಆದರೆ ಸರಕಾರ ಸಾವಿರಾರು ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ಬಂದಾಗ  ಒಮ್ಮೆಲೆ   ಎಲ್ಲವನ್ನೂ  ಚೆನ್ನಾಗಿ ನಿಭಾಯಿಸಲಾಗಲಿಲ್ಲವೇನೋ ಆದರೆ  ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ ಅದರಲ್ಲೂ ನಮ್ಮ ಹಿಮ್ಸ್ ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯಪ್ರವೃತ್ತವಾಗಿದೆ  ಎಂದರೆ ಅತಿಶಯೋಕ್ತಿಯಲ್ಲ.

    ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಅಲ್ಲದೆ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿಯಿಂದ ಎರಡೆರಡು ಬಾರಿ  ಕರೆ ಬಂದು “ಟ್ಯಾಬ್ಲೆಟ್ನ್ನು ಗಳನ್ನು ಮನೆಗೆ ತಲುಪಿಸಬೇಕಿದ್ದರೆ ಕರೆ   ಮಾಡಿ” ಎನ್ನುತ್ತಾ ಮನೆಯ ಸದಸ್ಯರಂತೆ ಯೋಗಕ್ಷೇಮ ವಿಚಾರಿಸಿದ್ದೂ ಇದೆ. ಇವೆಲ್ಲವುಗಳಿಗಿಂತ ಮಿಗಿಲಾಗಿ ಕೋವಿಡ್ ರೋಗಿಗಳ ಆರೋಗ್ಯದ ಮೇಲೆ ನಿಗಾವಹಿಸಲಿರುವ ಸ್ವಯಂಚಾಲಿತ ಕರೆ ವಾರವಿಡೀ ಬರುತ್ತಿತ್ತು. ನಂತರ ಸ್ವಯಂಚಾಲಿತ ಸಂದೇಶಗಳು .  ಈ ಕರೆಗಳು,  ಸಂದೇಶಗಳೇ ನನ್ನ ಆತಂಕವನ್ನು ದೂರ  ಮಾಡಿದವು ಎಂದರೆ ತಪ್ಪಿಲ್ಲ.

    ನನಗೆ ಹೋಂ ಐಸೋಲೇಶನ್   ಪ್ರಾರಂಭಕ್ಕೆ  ಬೇಸರ  ಅನ್ನಿಸಿತ್ತು. ನನ್ನ ಮಗ ಬಾಗಿಲ ಬಳಿ ಬಂದು ಇಣುಕಿ ಚಂಗನೆ ನೆಗೆಯುತ್ತಿದ್ದ ಆ ಕ್ಷಣಕ್ಕೆ ಬೇಸರ ಮತ್ತೆ ಚಿಕ್ಕ ಮಕ್ಕಳಿಗೂ ಕೊರೊನಾ ಎಂಥ ಗಾಬರಿ ತರಿಸಿದೆಯಲ್ಲಾ ಎಂದು  ಅನ್ನಿಸುತ್ತಿತ್ತು.  ಎರಡು ಮೂರು ದಿನಗಳ ನಂತರ  ಅವನೆ ಬಂದು “ಮನೆ ಒಳಗೆ ಯಾವಾಗ ಬರುತ್ತೀರ”, “ಲಿವಿಂಗ್ ರೂಮಿಗೆ ಯಾವಾಗ  ಬರುತ್ತೀರ?” ಎಂದು ಪದೇ ಪದೇ ಕೇಳುತ್ತಿದ್ದ.  ಒಮ್ಮೆ ವಿಟಮಿನ್ ‘ಸಿ’ ಮಾತ್ರೆ ಕೊಟ್ಟೆ  ರುಚಿ ಕಂಡ ಅವನು ಮತ್ತೆ ಮತ್ತೆ ಬೇಕು  ಎನ್ನುತ್ತಿದ್ದ. ಇದರ ನಡುವೆ ನನ್ನ ದೊಡ್ಡಮ್ಮ ಅನಾರೋಗ್ಯ ನಿಮಿತ್ತ ಕಾಲವಾದರು ಅವರನ್ನು  ವಿಡಿಯೋ ಕಾಲ್ ಮೂಲಕ  ಅಂತಿಮವಾಗಿ ದರ್ಶಿಸಿದ್ದು ಬಹಳ ಬಹಳ  ಬೇಸರ ತರಿಸಿತು. ತಲೆನೋವು ಹೆಚ್ಚಾಯಿತು.  ತಲೆ ಕೆಡಿಸಿಕೊಳ್ಳಲಿಲ್ಲ. ನಿಗದಿತ ಔಷಧಿಯನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಂಡೆ ಅಲೋಪತಿ ಜೊತೆಗೆ ಆಯುರ್ವೇದದ  ಔಷಧಿಯನ್ನು ವೈದ್ಯರ ಸಲಹೆಯ ಮೇರೆಗೆ ಮುಂದುವರೆಸಿದೆ.   ಉಳಿದಂತೆ ಕಷಾಯ,ಸ್ಟೀಮ್,ಭ್ರಮರಿ ಪ್ರಾಣಾಯಾಮ, ಮಾಸ್ಕ್ ಧರಿಸುವುದು ,   ಇತ್ಯಾದಿಗಳನ್ನು ಮುಂದುವರೆಸಿಕೊಂಡೆ. ನಿಗದಿತ ಔಷಧಿ ಮುಗಿಯುವ  ವೇಳೆಗೆ  ಆರಾಮಾಗಿದ್ದೇನೆ ಅನ್ನಿಸಿತು.  ಯಾವೆಲ್ಲ ಔಷಧಿ ತೆಗೆದುಕೊಂಡೆ ಎನ್ನುವುದನ್ನು ಇಲ್ಲಿ  ಮತ್ತೊಮ್ಮೆ ತಿಳಿದಿರುವುದನ್ನೆ ಹೇಳುವುದು ಅನಗತ್ಯ ಅನ್ನಿಸುತ್ತದೆ . ಅನೇಕ ಬಾರಿ ಜಾಲತಾಣಗಳಲ್ಲಿ ಪತ್ರಿಕೆಗಳಲ್ಲಿ ಅವುಗಳ ವಿವರ ಸಾಕಷ್ಟು ಜನರಿಗೆ   ಲಭ್ಯವಾಗಿದೆ ಎಂದನ್ನಿಸುತ್ತದೆ. ಗಂಟಲು ದ್ರವದ ಮಾದರಿಯನ್ನು ಯಾವ ವಿಭಾಗದವರು ಮಾಡಿರುತ್ತಾರೆಯೋ ಅವರೇ ರೋಗಿಗಳ  ಆರೋಗ್ಯ ವಿಚಾರಿಸುತ್ತಾರೆ.   ತುರ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳನ್ನು ನಿಯಮಿತವಾಗಿ  ಸಂದೇಶಗಳ ಮೂಲಕ ಕಳುಹಿಸುತ್ತಿರುತ್ತಾರೆ. 

    ಕೊರೊನಾ ಸಂದಿಗ್ಧತೆಯಲ್ಲಿ ನನಗೆ ಧೈರ್ಯ ಅನ್ನುವ ಔಷಧಿಯನ್ನು ತನಿತನಿಯಾಗಿ ನೀಡುತ್ತಿದ್ದುದು ಜಿಲ್ಲಾ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ. ತೇಜಸ್ವಿನಿಯವರು.    ನಾನು ಕರೆ    ಮಾಡಿದಾಗಲೆಲ್ಲ ಉತ್ತಮವಾಗಿ ಸ್ಪಂದಿಸುತ್ತಿದ್ದರು.ಆರೋಗ್ಯ ವಿಚಾರಿಸುತ್ತಿದ್ದರು.ನಮ್ಮ ಜಿಲ್ಲೆಯ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ನಂದಿನಿ ಮೇಡಮ್  ಕೂಡ “ಆಸ್ಪತ್ರೆ ಸೇರುವುದಿದ್ದರೆ ಕರೆ ಮಾಡಿ ,ಧೈರ್ಯ ತೆಗೆದುಕೊಳ್ಳಿ”  ಎಂದಿದ್ದರು.  ಕೊರೊನಾ ವಿರುದ್ಧ  ಕುಟುಂಬ ಸಹಿತ ಗೆದ್ದಿದ್ದ  ಮುಂಬೈ ಗೆಳತಿ ಅಮೃತಾಶೆಟ್ಟಿ ಆಗಾಗ ಕರೆ ಮಾಡಿ  ಟಿಪ್ಸ್ ಗಳನ್ನು ಕೊಡುತ್ತಿದ್ದರು.  ಉಳಿದಂತೆ  ಮತ್ತೆ ಮತ್ತೆ ಯೋಗಕ್ಷೇಮ   ವಿಚಾರಿಸುತ್ತಿದ್ದ ಆತ್ಮೀಯರಾದ  ಉಷಾ ಮೇಡಂ, ಜಯಶ್ರೀ ಮೇಡಮ್, ಭವಾನಿ……. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮನೆಯವರು, ಮಗಳಂತೂ ಅತೀವ ಕಾಳಜಿ ವಹಿಸಿದರು. ನಾನಿದ್ದ ಕೊಠಡಿಗೆ  ಮಾಸ್ಕ್ ಧರಿಸಿ ಬಂದು ಅಂತರದಲ್ಲೆ  ಇದ್ದು ಹರಟುತಿದ್ದರು.   ಇವೆಲ್ಲಾ  ಕಡೆ ಕಡೆಗೆ  ಹತ್ತು ವರ್ಷಗಳ ಹಿಂದಿನ  ನನ್ನ ಪಿಜಿ ವಾಸದ ಜೊತೆಗೆ ಅಲ್ಲಿ  ಸಮಯಕ್ಕೆ ಸರಿಯಾಗಿ ಊಟತಿಂಡಿ  ಬರುತ್ತಿದ್ದುದನ್ನು  ನೆನಪಿಸಿದ್ದಂತು ಸತ್ಯ.  

    ಕೊರೊನಾ ಕಣ್ಣಿಗೆ ಕಾಣದ ವೈರಸ್ ನಿಂದ  ಎನ್ನುವುದು  ತಿಳಿದಿರುವುದೇ ಆದರೆ ಅದರ ಕೈಗೆ ನಮ್ಮ  ಮನಸ್ಸನ್ನು ಕೊಟ್ಟರೆ ನಮ್ಮನ್ನು ಸಂಪೂರ್ಣ ಆವರಿಸಿಕೊಳ್ಳುತ್ತದೆ. ಭಯ ಬಿಟ್ಟು ,ಆತ್ಮಸ್ಥೈರ್ಯವನ್ನು ಕುಗ್ಗಿಸಿಕೊಳ್ಳದೆ ಔಷಧಿ, ಸತ್ವಭರಿತ ಆಹಾರ ತೆಗೆದುಕೊಂಡು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಚ್ಯವನಪ್ರಾಶ, ಅಮೃತಾರಿಷ್ಟ, ಗಿಲಾಯ್,ದಶಮೂಲಾರಿಷ್ಟ ಇತ್ಯಾದಿಗಳನ್ನು ಗುಣವಾದ ಹದಿನೈದು ದಿನಗಳವರೆಗು ಮುಂದುವರೆಸಬಹುದು. ಒಟ್ಟಾರೆಯಾಗಿ ಏನೇ ಬಂದರೂ ಸಮಚಿತ್ತದಿಂದ ಸ್ವೀಕರಿಸಬೇಕು  ಸದಾ ಕ್ರಿಯಾಶೀಲರಾಗಬೇಕು ಅಷ್ಟೆ.   ಐಸೋಲೇಶನ್ ನಮ್ಮ ದೇಹಕ್ಕೆ ವಿನಾ ಮನಸ್ಸಿಗಲ್ಲ ಅಲ್ವ! ಆದರೆ ಅತೀ ಹುಂಬತನದಿಂದ ಏನೂ ಲಕ್ಷಣಗಳಿಲ್ಲ  ಎಂದು ಅನಗತ್ಯ ಓಡಾಟ  ಮಾಡಿದರೆ ಅದೊಂದು ಅಪರಾಧವೇ ಸರಿ! ಇನ್ನು ಖೇದದ ಸಂಗತಿ ಎಂದರೆ ಸೋಂಕಿತರನ್ನು ತುಚ್ಛೀಕರಿಸುವುದು . ಸಹಾಯ ಮಾಡಬೇಕೇ ಹೊರತು ಅವಮಾನ ಮಾಡಬಾರದು.

    ಕೊರೊನಾ ಭಯದಿಂದ ಹೊರಬರಲು ನಾವು ಅನುಸರಿಸಬೇಕಾದ ಮೊದಲ ತಂತ್ರ ಎಂದರೆ  ಅನಗತ್ಯ  ಭಯ ಹುಟ್ಟಿಸುವ ವಾರ್ತಾ  ಮಾಧ್ಯಮಗಳಿಂದ ದೂರವಿದ್ದು ಮನರಂಜನಾ ಮಾಧ್ಯಮದ ಕಡೆಗೆ ಹೊರಳುವುದು.  ಪುಸ್ತಕಗಳನ್ನು ಓದಬಹುದು.  ಬಹುಶಃ ನನ್ನ ಹಾಗೆ  ತಲೆನೋವು ಇದ್ದರೆ  ಎಲ್ಲರಿಗೂ ಸಾಧ್ಯವಾಗದು.   ಈಗಂತೂ  ಕಿಂಚಿತ್  ಕೊರೊನಾ ಲಕ್ಷಣಗಳು ಕಂಡರೂ  ಹಲವರು ಸ್ವಯಂ ವೈದ್ಯ ಮಾಡಿಕೊಳ್ಳುತ್ತಾರೆ. ಬೇಗ ಗುಣವಾಗಲಿ ಎಂದು ಅತಿಯಾದ ಪ್ರಮಾಣದಲ್ಲಿ ಔಷಧ ತೆಗೆದುಕೊಳ್ಳುವುದು ತಪ್ಪಿನ ಕೆಲಸ. ಇದು ಖಂಡಿತಾ ತಪ್ಪು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಲೇಬೇಕು.   ಸರಕಾರದಿಂದ ಬಿಡುಗಡೆಯಾಗಿರುವ  ಕೋವಿಡ್ ಮಾರ್ಗ ಸೂಚಿಯನ್ನು ಅನುಸರಿಸಲೇಬೇಕು ಇದು ನಮ್ಮ ನಾಗರಿಕ ಸೂಕ್ಷ್ಮ ಹಾಗು ಹೊಣೆಗಾರಿಕೆಯೂ ಹೌದು!  “ಥಿಂಕ್ ಪಾಸಿಟಿವ್” ಎಂದು ಕೊರೊನಾ ಪಾಸಿಟಿವ್ ಬಗ್ಗೆಯೇ  ಥಿಂಕ್ ಮಾಡುವುದರ ಬದಲು “ಖಂಡಿತಾ ಇದರಿಂದ ಹೊರಬರುವೆ” ಎಂಬುದನ್ನು ನಿರ್ಧರಿಸಬೇಕು. “ಬಂದ್ರೆ ಬರುತ್ತೆ” ಎನ್ನುವ  ಉದಾಸೀನ, “ಬಂದೇ ಬಿಡ್ತು” ಎನ್ನುವ  ಆತಂಕ  ಎರಡೂ ಇರಬಾರದು.  ಪತ್ರಿಕೆಗಳಲ್ಲಿ ಸಾವಿನ ಸಂಖ್ಯೆಯನ್ನು ಗಮನಿಸಿದರೆ ಏದುಸಿರು ಖಂಡಿತಾ!   ಆದರೆ ಗುಣಮುಖರಾದವರ ಸಂಖ್ಯೆಯನ್ನು  ನೋಡುವುದೂ  ಒಂಥರಾ ನಮ್ಮಾತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ.

    ಕೊರೊನಾ ಸೋಂಕಿತರು ಎಂದಮೇಲೆ ICMR  ನಲ್ಲಿ ನಮ್ಮ ದಾಖಲೆ ಇರುತ್ತದೆ . ಗುಣಮುಖರಾದ ಮೇಲೆ ನೀವೂ ಪ್ಲಾಸ್ಮದಾನ ಮಾಡಲು ಇಚ್ಛಿಸುವಿರಾ ಎಂಬ ಸಂದೇಶವೂ ಬಂದಿತ್ತು .   ಅಂದರೆ ಸರಕಾರ  ನಿಗದಿತ ವ್ಯವಸ್ಥೆಯ ಮೂಲಕ ಹೇಗೆ ನಿಗಾ ಮಾಡುತ್ತದೆ ಅನ್ನಿಸಿತು.  ಆದರೆ ಸರಕಾರ ಈಗ ಪ್ಲಾಸ್ಮಾ ಚಿಕಿತ್ಸೆಯನ್ನು ನಿರ್ಬಂಧಿಸಿದೆ. ಕೊರೊನಾ ಮುಟ್ಟಿದ ಮೇಲೆ ಅದನ್ನು  ಮೆಟ್ಟಿ ನಿಲ್ಲುವುದು  ಅಗತ್ಯ.  

    “ಅಂಜಿದಡೆ ಮಾಣದು,ಅಳಿಕಿದಡೆ ಮಾಣದು
    ಧೃತಿಉಗೆಟ್ಟು ಮನಧಾತುಗೆಟ್ಟಡೆ
    ಅಪ್ಪುದು ತಪ್ಪದು ಕೂಡಲಸಂಗಮದೇವಾ”
    ಎಂದು ವಿಶ್ವಗುರು ಬಸವಣ್ಣನವರು   ಹೇಳಿರುವಂತೆ  ಬಂದ ಸವಾಲುಗಳನ್ನು ಎದುರಿಸಬೇಕು  ಧೃತಿಗೆಡಬಾರದಷ್ಟೆ ಅನ್ನಿಸುತ್ತದೆ.  ಸ್ವಲ್ಪ  ಆರೋಗ್ಯದಲ್ಲಿ ಏರು ಪೇರಾದರೂ ಮೃತ್ಯು ಪ್ರಜ್ಞೆಯಲ್ಲಿ ನರಳಬೇಕಾದ ಅವಶ್ಯಕತೆಯಿಲ್ಲ. ರೋಗ ಬಂದ ನಂತರ ಗಲಿಬಿಲಿಯಾಗುವುದಕ್ಕಿಂತ  ರೋಗಬಾರದೆ ಇರುವ ಹಾಗೆ ತಡೆಯುವ ಉಪಕ್ರಮಗಳನ್ನು ರೂಢಿಸಿಕೊಳ್ಳಬೇಕು.  ಹಾಗೊಂದು ವೇಳೆ ಬಂದರೆ ಅದನ್ನು ಎದುರಿಸಲು ಮಾನಸಿಕ ತಯಾರಿಯನ್ನೂ ಮಾಡಿಕೊಳ್ಳಬೇಕು. ಪ್ರಾರಂಭಿಕ ಹಂತದಲ್ಲೇ ಎಚ್ಚೆತ್ತುಕೊಳ್ಳಬೇಕು! ಹೋರಾಡಬೇಕು! ಗೆಲ್ಲಬೇಕು!


    ಕೊರೋನಾ ಗೆದ್ದವರು ತಮ್ಮ ಅನುಭವದ ಕಥೆಯನ್ನು [email protected] ಗೆ ಇ ಮೇಲ್ ಮಾಡಿ. ಸೂಕ್ತವಾದುವನ್ನು ಪ್ರಕಟಿಸಲಾಗುವುದು

    spot_img

    More articles

    4 COMMENTS

    1. ಲೇಖನ ತುಂಬಾ ಇಷ್ಟವಾಯಿತು madam. ಅದರಲ್ಲೂ ಸರಕಾರ ಏನು ಮಾಡಿದೆ ಎಂದು ಯಾವಾಗಲೂ ಗೂಬೆ ಕೂಡಿಸುವ ಜನಕ್ಕೆ ನಿಮ್ಮ ಲೇಖನದಲ್ಲಿ ಉತ್ತರವಿದೆ.
      ನಿಜ, ಮನೆಯಲ್ಲಿ ಒಬ್ಬರಿಗೆ ಹುಷಾರಿಲ್ಲವೆಂದರೆ ತಲೆ ಕೆಡುತ್ತದೆ,
      ಹಾಗಿದ್ದಾಗ ಲಕ್ಷಾಂತರ ಜನರ ಹೊಣೆ ಎಷ್ಟು ಕಷ್ಟ ಅಲ್ಲವಾ?

    2. ಈಗ ತಾನೇ ‘ಕೈಗೆ ಅಂಟಿದ ವೈರಸ್’ ಎಂಬ ಲೇಖನ ಓದಿದೆ.ಇದೊಂದು ಅನುಭವ ಕಥನವೂ,ಜೀವನ್ಮುಖಿಯೂ ಮಮತಾಮಯಿಯೂ ಆಗಿದ್ದ ನೀವು ನಿರಾಳಮನಸ್ಸಿನಿಂದ
      ರೋಗವನ್ನು ಎದುರಿಸಿದ್ದು, ನಿಮ್ಮ ಪಾಸಿಟೀವ್(ಇತ್ಯಾತ್ಮಕ) ಚಿಂತನೆಯಿಂದ ಮಾತ್ರ ನಿಮಗೆ ಸಾಧ್ಯವಾಗಿದೆ. ಅಂದರೆ ಯಾತನಾಮಯಿಯ ವೇದನೆ ಏನೆಂಬುದರ ಬಗ್ಗೆ ಬಿಡಿಬಿಡಿಯಾಗಿ ಹೇಳಿರುವಿರಿ. ಇದೇ ಮೇ ತಿಂಗಳಲ್ಲಿನಲ್ಲಿ ನನ್ನ
      ಮಗ ‘ಯುವರಾಜ’ನಂತೆ ಮೆರೆದಾಡುತ್ತಿದ್ದವನಿಗೆ ‘ಬಾರದು ಬಪ್ಪದು,ಬಪ್ಪದು ತಪ್ಪದು’ ಎಂಬಂತೆ ಕರೊನಾ ಸೋಂಕು ಅಮರಿಕೊಂಡು, ತರುವಾಯ ನಂತರ ಹೆತ್ತೊಡಲಿನ ಜೊತೆ ನಾನು ಒಂದು ವಾರ ಕಾಲ ಅನುಭವಿಸಿದ ಸಂಕಟ ಕೊವಿಡ್ ಸಂತ್ರಸ್ತನಾದ ಆತನಿಗೂ ತಿಳಿಯದು.ಅದನ್ನು ಯಾರಿಗೆ ಹೇಳೋಣ! ಅಬ್ಬಾ ಈ ಬಾಧೆಯ ಬೇಗೆಯಲಿ ನೊಂದು ಬೆಂದವರ ಕತೆ-ವ್ಯತೆ ಹೇಗಿರಬಹುದು?ಅದಂತು ಘನಘೋರವೇ ಆಗಿದೆ.ಸದ್ಯ ನೀವು ಅದರಿಂದ ಹೊರ ಬಂದದ್ದು ಸಹ್ಯವೂ, ದಿವ್ಯವೂ ಆಗಿರುವುದು.ನನಗಂತೂ ಸಮಾಧಾನ ತಂದಿದೆ.ನೀವು ಮರುಹುಟ್ಟು ಪಡೆದು ಬಂದು ಮತ್ತೆ ಬರಹವನ್ನು ಬದುಕಾಗಿ
      ಸ್ವೀಕರಿಸಿ,ಲೇಖನ ಬರೆದ ನಿಮಗೆ ದೈವಾನುಗ್ರಹ ಸದಾ ಇರಲಿ ಎಂದು ಹಾರೈಸುವೆನು.

    3. ಕೊವಿಡ್ ಪಾಸಿಟಿವ್ ಕುರಿತ ಪಾಸಿಟಿವ್ ಬರಹಕ್ಕೆ ಪಾಸಿಟಿವ್ ಅಭಿಪ್ರಾಯಿಸಿದ ಎಲ್ಲರಿಗೂ‌‌ ಧನ್ಯವಾದಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!