26.3 C
Karnataka
Monday, May 20, 2024

    ನೋವಿನ ಮೇಲೆ ಮತ್ತೆ ಮತ್ತೆ ನೋವುಗಳು ಬಂದರೆ ಎಂಥ ಗಟ್ಟಿಗರಿಗು ಅದನ್ನು ಸಹಿಸಲಾಗುವುದಿಲ್ಲ

    Must read

    ಸುಮಾ ವೀಣಾ

    ಗಂಡಸ್ಯೋಪರಿ ಸ್ಫೋಟಕಂ– ‘ಶಕ್ತಿಕವಿ ರನ್ನ’ನ ಸಾಹಸ ಭೀಮ ವಿಜಯಂನ ‘ದುರ್ಯೋಧನ ವಿಲಾಪಂ’ ಭಾಗದ   27 ನೆ ಪದ್ಯದ ನಂತರದ ವಚನದಲ್ಲಿ ಈ ಮಾತು ಬರುತ್ತದೆ.  ಮಹಾಭಾರತ  ಯುದ್ಧದಲ್ಲಿ ದುರ್ಯೋಧನ ತನ್ನ ಬಂಧು ಭಾಂದವರನ್ನೆಲ್ಲ ಕಳೆದುಕೊಂಡು ಭೀಷ್ಮರನ್ನು ಭೇಟಿಯಾಗಲೆಂದು  ಸಂಜಯನ ಸಂಗಡ ನಡೆದುಕೊಂಡು ಬರುತ್ತಿರುತ್ತಾನೆ. ಆ ಸಂದರ್ಭದಲ್ಲಿ ಗುರು ದ್ರೋಣಾಚಾರ್ಯ, ಅಭಿಮನ್ಯು, ಲಕ್ಷಣಕುಮಾರ, ದುಶ್ಯಾಸನ  ಮೊದಲಾದವರ ಶವಗಳನ್ನು ಕಂಡು ಮಮ್ಮಲಮರುಗುತ್ತಾನೆ.  ಆ ಸಂದರ್ಭವೇ ಆತನಿಗೆ ಸಹಿಸಲಾರದಷ್ಟು ನೋವನ್ನು ಕೊಟ್ಟಿರುತ್ತದೆ   ಅದು ಸಾಲದೆಂಬಂತೆ ತನ್ನ ಪ್ರಾಣ ಸ್ನೇಹಿತ ಕರ್ಣನ  ಕಳೇಬರವನ್ನು ನೋಡಬೇಕಾದ ಸಂದರ್ಭ  ಎದುರಾದಾಗ  ಕವಿ ರನ್ನ “ಗಂಡಸ್ಯೋಪರಿ ಸ್ಫೋಟಕಂ” ಎಂಬ  ಮಾತನ್ನು ಹೇಳುತ್ತಾರೆ.

    “ಗಾಯದ ಮೇಲೆ ಬರೆ”, “ಕುರುವಿನ ಮೇಲೆ ಬೊಕ್ಕೆ”  ಮೊದಲಾದ  ಮಾತುಗಳನ್ನು  ಹೇಳಬಹುದು.  ಮೊದಲೆ  ನೋವು  ಹಿಂಸೆ ಆಗುತ್ತಿರುತ್ತದೆ ಅದರ ಮೇಲೆ ಮತ್ತೆ ನೋವುಂಟಾದರೆ , ಬರೆ ಎಳೆದರೆ ಇನ್ಯಾವುದೋ  ವೃಣವಾದರೆ ಅದನ್ನು ಸಹಿಸಲು ಸಾಧ್ಯವಾಗುತ್ತದೆಯೇ ಖಂಡಿತಾ ಇಲ್ಲ. ಮೊದಲ ಹೊಡೆತದಿಂದ ಏನಾಗುತ್ತಿದೆ ಎಂದು ತಿಳಿಯುವ ಮೊದಲೆ  ಇನ್ನೊಂದು ನೋವು  ಉಂಟಾದರೆ ಅದನ್ನು ಸಹಿಸಲು ಸಾಧ್ಯವೇ ಆಗುವುದಿಲ್ಲ. ದೈಹಿಕವಾಗಿ ಮಾನಸಿಕವಾಗಿ  ಕುಸಿದು ಹೋಗಿ ಬಿಡುತ್ತಾನೆ.

    ಅಂತಹದ್ದೆ ನೋವು ದುರ್ಯೋಧನನಿಗೂ ಎದುರಾಗುತ್ತದೆ ವಿದ್ಯೆ ಕಲಿಸಿದ ಗುರು, ತನ್ನ ಮಗ, ಪ್ರಾಣ ಪ್ರಿಯನಾಗಿದ್ದ ದುಶ್ಯಾಸನ   ಇವರುಗಳ ಶವವನ್ನು ನೋಡಿಯೇ   ಜನಕಂಗೆ ತಿಲಾಂಜಲಿ ಕುಡುವುದುಚಿತ, ಕ್ರಮವಿಪರ್ಯಮಂ  ಮಾಡುವುದೇ ಇತ್ಯಾದಿಗಳನ್ನು ಹೇಳಿ  ಮುನ್ನಡೆಯುವಾಗ ಕರ್ಣನ ಶವ ನೋಡಿ  ನೀನಿಲ್ಲದ ಮೇಲೆ ಈರಾಜ್ಯ,  ಅಧಿಕಾರವಿದ್ದು ಪ್ರಯೋಜನವೇನು ಎನ್ನುತ್ತಾ ದುಃಖಿಸುತ್ತಾನೆ. 

    ದಿನ ನಿತ್ಯದ  ಬದುಕಿನಲ್ಲಿ ಸಾಮಾಜಿಕರ ಮೇಲೂ ಇಂಥ ಘಟನೆಗಳು ಎದುರಾಗುತ್ತಿರುತ್ತವೆ.  ಕೊರೊನಾ ಸಾಂಕ್ರಾಮಿಕ ವ್ಯಾಧಿಯಿಂದ ಚೇತರಿಸಿಕೊಂಡ ಹಲವರಲ್ಲಿ ಬ್ಲ್ಯಾಕ್ ಫಂಗಸ್ , ವೈಟ್ ಫಂಗಸ್ ಸೋಂಕು ಕಾಣಿಸಿಕೊಂಡು ಇನ್ನಿಲ್ಲದ ಹಾಗೆ   ಕಾಡಿದ್ದು ನಿಜ.  ಹಾಗೆ ಕೊರೊನಾದಿಂದ ಕುಟುಂಬದಲ್ಲಿ  ತೀರಿಕೊಂಡಿದ್ದಾರೆ ಅನ್ನುವ  ಹೊತ್ತಿಗೆ ಧುತ್ತನೆ   ಇನ್ನೊಂದು ಸಾವನ್ನು ಅದೇ ಮನೆಯಲ್ಲಿ ನೋಡಬೇಕಾದ  ದುಃಖದ  ಸನ್ನಿವೇಶಗಳು ಅದೆಷ್ಟೋ ಎದುರಾದದ್ದನ್ನು  ಕಂಡಿದ್ದೇವೆ.

    ಇಂಥ ಸಂದರ್ಭಗಳನ್ನು ನೋಡಿಯೇ “ಬಾಣಲೆಯಿಂದ ಬೆಂಕಿಗೆ”,  “ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ” , “ಗಾಯದ ಮೇಲೆ ಉಪ್ಪು ಸವರಿದಂತೆ”  ಮೊದಲಾದ ಮಾತುಗಳನ್ನು ಹೇಳಿರುವುದು.  ನೋವಿನ  ಮೇಲೆ ಮತ್ತೆ ಮತ್ತೆ ನೋವುಗಳು ಬಂದರೆ ಎಂಥ ಗಟ್ಟಿಗರಿಗು ಅದನ್ನು ಸಹಿಸಲಾಗುವುದಿಲ್ಲ   ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾನೆ ಎನ್ನುವ ಸೂಕ್ಷ್ಮವನ್ನು   ರನ್ನನ “ಗಂಡಸ್ಯೋಪರಿ ಸ್ಫೋಟಕಂ”   ಎಂಬ ಮಾತು ತಿಳಿಸುತ್ತದೆ.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!