22.9 C
Karnataka
Sunday, May 24, 2026
    Home Blog Page 70

    ಸುವರ್ಣ ಸೌಧಕ್ಕೆ ಒಂದು ರೂಪವನ್ನು ಕೊಟ್ಟೇ ಕೊಡುತ್ತೇನೆ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

    BENGALURU AUG 8

    ಬೆಳಗಾವಿಯ ಸುವರ್ಣ ಸೌಧಕ್ಕೆ ಒಂದು ರೂಪವನ್ನು ಕೊಟ್ಟೇ ಕೊಡುತ್ತೇನೆ. ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ತೀರ್ಮಾನಿಸಿದ್ದೇನೆ’

    ಭಾನುವಾರ ಸಂಜೆ ಬೆಂಗಳೂರಿನ ಆರ್.ಟಿ.ನಗರ ನಿವಾಸದಲ್ಲಿ
    ತಮ್ಮನ್ನು ಭೆಟ್ಟಿಯಾದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ನಿಯೋಗಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಭರವಸೆ ನೀಡಿದ್ದಾರೆ.

    ಗಡಿ ಅಭಿವೃದ್ಧಿ ಪ್ರಾಧಿಕಾರ,ಗಡಿ ಸಂರಕ್ಷಣಾ ಆಯೋಗ,ಸುವರ್ಣ ಸೌಧಕ್ಕೆ ಪ್ರಮುಖ ಕಚೇರಿಗಳ ಸ್ಥಳಾಂತರ ಹಾಗೂ ಮುಂಬಯಿ ಕರ್ನಾಟಕಕ್ಕೆ ಕಿತ್ತೂರುಕರ್ನಾಟಕ ಎಂದು ಮರು ನಾಮಕರಣ ಮಾಡುವ ಕುರಿತು ನಿಯೋಗವು ಬೊಮ್ಮಾಯಿ ಅವರೊಂದಿಗೆ ಚರ್ಚಿಸಿತು.

    2006 ರ ಫೆಬ್ರುವರಿ 16 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ
    2014 ರ ಅಕ್ಟೋಬರ 14 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
    ವಿಧಾನ ಸೌಧದಲ್ಲಿ ನಾಡು,ನುಡಿ ಹಾಗೂ ಗಡಿಗೆ ಸಂಬಂಧಿಸಿದಂತೆ ಕನ್ನಡ ಪರ ಹೋರಾಟಗಾರರ,ಚಿಂತಕರ ಸಭೆ ಕರೆದಿದ್ದರು.ತಾವೂ ಸಹ ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂಥ ಸಭೆಯನ್ನು ಕರೆಯಬೇಕೆಂದು ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಬೊಮ್ಮಾಯಿ ಅವರನ್ನು ಆಗ್ರಹಿಸಿದರು.

    ಮುಂದಿನ ಅಕ್ಟೋಬರ 23ರ ಕಿತ್ತೂರು ಚೆನ್ನಮ್ಮ ರಾಣಿಯ ವಿಜಯೋತ್ಸವದ ಮುನ್ನವೇ ಮುಂಬಯಿ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕೆಂದು ಅಶೋಕ ಚಂದರಗಿ ಮನವಿ ಮಾಡಿದರು. ನಿಯೋಗದಲ್ಲಿ ಮೈನೋದ್ದೀನ್ ಮಕಾನದಾರ, ಶಿವಪ್ಪ ಶಮರಂತ,ಹರೀಶ ಕರಿಗೊನ್ನವರ, ವಿರೇಂದ್ರ ಗೋಬರಿ ಇದ್ದರು

    ವೈದ್ಯ ಶಿಕ್ಷಣದಲ್ಲಿ ಆರ್ಥಿಕ ದುರ್ಬಲರಿಗೆ 10% ಮೀಸಲು, ರಾಜ್ಯದಲ್ಲೂ ಜಾರಿಗೆ ನಿರ್ಧಾರ

    BENGALURU AUG 8

    ವೈದ್ಯಕೀಯ ಶಿಕ್ಷಣದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಶೇ10ರಷ್ಟು ಮೀಸಲು ನೀಡುವ ಮಹತ್ವದ ನಿರ್ಧಾರವನ್ನು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕೈಗೊಂಡಿದ್ದು, ರಾಜ್ಯದಲ್ಲೂ ಅದನ್ನು ಜಾರಿಗೆ ತರಲು ಸರಕಾರ ನಿರ್ಧಾರ ಮಾಡಿದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಮಲ್ಲೇಶ್ವರದಲ್ಲಿಂದು ʼಮಲ್ಲೇಶ್ವರ ಬ್ರಾಹ್ಮಣ ಮಹಾಸಭಾʼ ಹಾಗೂ ʼಉಭಯ ವೇದಾಂತ ಪ್ರವರ್ತನಾ ಸಭಾʼ ಸಹಯೋಗದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಕಳೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಸರಕಾರ ನಿರ್ಣಯ ಕೈಗೊಂಡಿದ್ದು, ಕೆಲ ದಿನಗಳಲ್ಲಿಯೇ ಆದೇಶ ಹೊರಬೀಳಲಿದೆ. ಅತ್ಯಂತ ದೂರದೃಷ್ಟಿ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರಕಾರ ಆರ್ಥಿಕ ದುರ್ಬಲರ ನೆರವಿಗೆ ಧಾವಿಸಿದೆ. ಬ್ರಾಹ್ಮಣ ಸಮುದಾಯದಲ್ಲಿರುವ ಆರ್ಥಿಕ ದುರ್ಬಲರಿಗೂ ಇದರ ಲಾಭ ದಕ್ಕಲಿದೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಎಲ್ಲ ಯೋಜನೆಗಳ ಪ್ರಯೋಜನವನ್ನು ಬ್ರಾಹ್ಮಣರಲ್ಲಿರುವ ಆರ್ಥಿಕ ದುರ್ಬಲ ಕುಟುಂಬಗಳು ಪಡೆದುಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

    ಆರ್ಥಿಕ ದುರ್ಬಲರಿಗೆ 10% ಮೀಸಲು ನೀಡುವುದಕ್ಕೆ ಕಾಂಗ್ರೆಸ್ ಸೇರಿ ಅನೇಕ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ, ವೈಜ್ಞಾನಿಕವಾಗಿ ಹಾಗೂ ನ್ಯಾಯಯುತವಾಗಿ ಆರ್ಥಿಕ ದುರ್ಬಲರಿಗೆ ಇಷ್ಟು ಮೀಸಲು ನೀಡಲೇಬೇಕೆಂದು ಮೋದಿ ಅವರು ನಿಶ್ಚಿಯಿಸಿದ್ದರು. ಆ ಬಗ್ಗೆ ಕೇಂದ್ರದ ಆದೇಶವೂ ಹೊರಬಿದ್ದಿದೆ ಎಂದು ಡಾ.ಅಶ್ವತ್ಥನಾರಾಯಣ ನುಡಿದರು.

    ಈಗಾಗಲೇ ರಾಜ್ಯಾದ್ಯಂತ 70,000 ಕ್ಕೂ ಹೆಚ್ಚು ಬ್ರಾಹ್ಮಣ ಸಮುದಾಯದವರಿಗೆ ಮನೆ ಬಾಗಿಲಿಗೆ ಫುಡ್ ಕಿಟ್ ತಲುಪಿಸುವ ಕೆಲಸ ಮಾಡಲಾಗಿದೆ. ಅದರ ನೇತೃತ್ವದ ವಹಿಸಿದ್ದ ಬ್ರಾಹ್ಮಣ ಅಭಿವೃದ್ಧಿ ಮಂಡಲಿ ಆಧ್ಯಕ್ಷ ಸಚ್ಚಿದಾನಂದ ಮೂರ್ತಿ ಅವರ ಬಗ್ಗೆ ಡಾ.ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

    ಬ್ರಾಹ್ಮಣ ಸಮುದಾಯದ ಪ್ರಕಾಶ್ ಅಯ್ಯಾಂಗಾರ್, ಪ್ರಶಾಂತ್ ಮುಂತಾದವರು ಹಾಜರಿದ್ದರು. ಈ ಸಂದರ್ಭದಲ್ಲಿ 150 ಆಹಾರ ಕಿಟ್ʼಗಳನ್ನು ವಿತರಣೆ ಮಾಡಲಾಯಿತು.

    ವಿಧಿ ಬರಹ ಬದಲಿಸಲಾಗದು

    ಸುಮಾವೀಣಾ

    ವಿಧಿ ಬರೆದ ಲಿಪಿ ಜಲ ಲಿಪಿಯೇ- ಪ್ರಸ್ತುತ ಮಾತು ನಾಗಚಂದ್ರ ಕವಿಯ  ‘ರಾಮಚಂದ್ರ ಚರಿತ ಪುರಾಣ’ದಿಂದ ಆರಿಸಲಾಗಿದೆ.

    ಸೀತೆಯ ಕಾರಣದಿಂದ ದಶರಥನ ಮಗನಿಂದ ರಾವಣನ ಸಾವು ಸಂಭವಿಸುತ್ತದೆ ಎಂಬ ವಿಷಯ ತಿಳಿದ ಬಳಿಕ  ಪಾಪಕರ್ಮವೆಂದು ತಿಳಿದಿದ್ದರೂ ಕೂಡ ವಿಭೀಷಣ  ಮುಂದೆ ತನ್ನ ಅಣ್ಣನಿಗೆ ಆಗಬಹುದಾದ   ತೊಡಕನ್ನು ನಿವಾರಿಸಲು  ಸಾಕಷ್ಟು ಪೂರ್ವಭಾವಿಯಾಗಿ ಉಪ್ಪರಿಗೆಯ ಮೇಲೆ ಮಲಗಿದ್ದ  ದಶರಥನ ತಲೆ ತೆಗೆಯಲು  ಹೋಗುತ್ತಾನೆ.   ವಿಭೀಷಣ ಆಕ್ರಮಣ ಮಾಡುವ ವಿಚಾರವನ್ನು ನಾರದರಿಂದ ಮೊದಲೆ ತಿಳಿದಿದ್ದ  ದಶರಥ ತನ್ನದೇ ಅರಗಿನ  ವಿಗ್ರಹ ಮಾಡಿ ಉಪ್ಪರಿಗೆಯಲ್ಲಿ ಇರಿಸಿರುತ್ತಾನೆ.  ಯಾವುದು ಸತ್ಯ ಯಾವುದು  ಮಿಥ್ಯ  ಎಂದು ತಿಳಿಯದ ವಿಭೀಷಣ ಅರಗಿನ ವಿಗ್ರಹದ ತಲೆ ತೆಗೆದು ಸಂಭ್ರಮಿಸುತ್ತಾನೆ.  ಆ ಸಂದರ್ಭದಲ್ಲಿ ಕವಿ ನಾಗಚಂದ್ರ  ಯಾರಿಂದಲೇ ಆಗಲಿ ವಿಧಿಯನ್ನು ಮಾತ್ರ ಬದಲಾಯಿಸಲು ಸಾಧ್ಯವಿಲ್ಲ. ಎಂಬುದನ್ನು ಹೇಳಿದ್ದಾರೆ.

    ಈ ಭೂಮಿಯ ಮೇಲೆ ನಡೆಯುವ ಕಾರ್ಯಗಳನ್ನೆಲ್ಲಾ ಒಂದಿಲ್ಲೊಂದು ರೀತಿಯಲ್ಲಿ  ಯಾವುದೋ ಒಂದು ಬಂಧವೊಂದು ನಿಯಂತ್ರಿಸುತ್ತಿರುತ್ತದೆ.  “ವಿಧಿ ಬರೆದ ಲಿಪಿ ಜಲ ಲಿಪಿಯೇ” ಎಂಬೀ ವಾಕ್ಯದ ಮೂಲಕ ಎಲ್ಲವೂ ಪೂರ್ವ ನಿರ್ಧರಿತ ಎಂದೇ ವೇದ್ಯವಾಗುತ್ತದೆ.  ನೀರಿನ ಮೇಲೆ ಲಿಪಿಯನ್ನು ಬರೆಯಲು ಸಾಧ್ಯವಿಲ್ಲ. ಹಾಗೊಂದುವೇಳೆ ಬರೆಯ ಹೊರಟರೂ  ಸಾಧ್ಯವಾಗುವುದಿಲ್ಲ ಆದರೆ  ಹಣೆ ಬರಹವನ್ನು ಯಾರಿಂದಲೂ ಅಳಿಸಲು  ಸಾಧ್ಯವಿಲ್ಲ  ಎಂಬ ಭಾವ  ಇಲ್ಲಿದೆ.

    ಕನ್ನಡದ ಆದಿಕವಿ ಪಂಪನೂ ಕೂಡ  ಕರ್ಣನ  ಕುರಿತು ಹೇಳುವಾಗ ಬಿಧಿ ಸಮಕಟ್ಟಿಕೊಟ್ಟೊಡೆ ಎಡೆಯೊಳ್ ಕುಡಿಸಲ್ ಕಿಡಿಸಲ್ ಸಮರ್ಥರಾರ್” ಎಂಬ ಮಾತನ್ನು ಹೇಳುತ್ತಾನೆ. ಅಂದರೆ ದುರದೃಷ್ಟವೋ  ಅದೃಷ್ಟವೋ  ಅದನ್ನು ಅನುಭವಿಸಲೇಬೇಕು ಇದರ ನಡುವೆ  ವಿಧಿ ಲಿಖಿತಕ್ಕೆ ಇನ್ನಷ್ಟು ಒಳಿತು ಕೆಡುಕುಗಳನ್ನು  ಕೂಡಿಸಲು,ಕಳೆಯಲು ಸಾಧ್ಯವಾಗುವುದಿಲ್ಲ ಎಂದೇ ಆಗುತ್ತದೆ.  ಇವುಗಳು ಕಾವ್ಯಭಾಗದಲ್ಲಿ ಬಂದಿರುವ ಮಾತುಗಳು.

    ಆದರೆ ಆಧುನಿಕ  ದಿನಮಾನಗಳಲ್ಲಿ ನಾವು ಅನಿಷ್ಟಕ್ಕೆಲ್ಲಾ ಶನೀಶ್ವರನೆ ಹೊಣೆ ಎಂಬಂತೆ  ಎಲ್ಲವನ್ನು ‘ವಿಧಿ’ ಎಂದು ತಿಳಿದು ಕೈಕಟ್ಟಿ ಕುಳಿತು ಅಸಹಾಯಕರಾಗುವ ಬದಲು  ನಿರಂತರ ಪ್ರಯತ್ನ ಹಾಗು ಶ್ರಮಪಟ್ಟರೆ ಅವುಗಳೇ   ಖಂಡಿತವಾಗಿಯೂ ನಮ್ಮ ಕೈ ಹಿಡಿಯುತ್ತವೆ ಎನ್ನಬಹುದು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ನೀಡುವಂತೆ ಸೂಚನೆ

    MUDHOL AUG 8

    ಪ್ರವಾಹದಿಂದ ಬಾದಿತವಾದ ಪ್ರದೇಶಗಳಲ್ಲಿ ತೀವ್ರ ನಿಗಾವಹಿಸಿ, ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ
    ಜಲಸಂಪನ್ಮೂಲಸಚಿವ ಗೋವಿಂದ ಎಂ ಕಾರಜೋಳ ಅವರು ಅಧಿಕಾರಿಗಳಿಗೆ ಸೂಚಿಸಿದರು.

    ಮುಧೋಳ್ ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿಂದು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೈಗೊಂಡ ಕ್ರಮಗಳು ಮತ್ತು ಕೋವಿಡ್ 19 ಸೋಂಕು ನಿಯಂತ್ರಣ ಕುರಿತ ಸಭೆಯಲ್ಲಿ ನಡೆಸಿ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶಗಳ ಎಲ್ಲಾ ಅರ್ಹ ಸಂತ್ರಸ್ತರಿಗೆ ಪರಿಹಾರ ಧನವನ್ನು ನೀಡಬೇಕು. ಮಾರ್ಗಸೂಚಿಯನ್ವಯ ಪರಿಹಾರ ದನ ನೀಡಬೇಕು. ರಸ್ತೆ, ಸೇತುವೆ ಸಂಪರ್ಕ ಮಾರ್ಗಗಳನ್ನು ಪುನರ್ ನಿರ್ಮಿಸಬೇಕು. ಕೋವಿಡ್ ನಿಯಂತ್ರಣ ಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.

    ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ.ರಾಜೇಂದ್ರ, ಪೊಲೀಸ್ ವರಿಷ್ಟಧಿಕಾರಿಗಳಾದ ಜಗದೀಶ್ ಸಗಲಸರ, ಅಧಿಕಾರಿಗಳು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

    ಆನೆ ನಡೆದದ್ದೇ ದಾರಿ- ಸೆನ್ಸೆಕ್ಸ್‌, ನಿಫ್ಟಿ ಚಲಿಸಿದ್ದೇ ಗುರಿ

    ಷೇರುಪೇಟೆಯಲ್ಲಿ Money allways flows from active TRADER to passive INVESTOR ಎಂಬುದು ಈ ಹಿಂದೆ ಅನ್ವಯವಾಗುವ ನಾಣ್ಣುಡಿಯಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಇದು ಪಲ್ಲಟಗೊಂಡಂತಿದೆ. ಈಗಿನ ಸಂದರ್ಭಕ್ಕೆ ಅದು Money flowing from active INVESTOR to passive TRADER ಎಂದು ಬದಲಾಗಿದಂತಿದೆ. ಅಂದರೆ ಈಗಿನ ಗರಿಷ್ಠದಲ್ಲಿರುವ ಷೇರಿನ ಬೆಲೆಗಳು ದಣಿದಂತಿದೆ. ಹಾಗಾಗಿ ಅಸ್ಥಿರತೆಯ ಪ್ರಮಾಣ ಹೆಚ್ಚಿದೆ. ಆನೆ ನಡೆದದ್ದೇ ದಾರಿ- ಸೆನ್ಸೆಕ್ಸ್‌, ನಿಫ್ಟಿ ಚಲಿಸಿದ್ದೇ ಗುರಿ ಎಂಬಂತಾಗಿರುವ ಈಗಿನ ವಾತಾವರಣದಲ್ಲಿ ಸೆನ್ಸೆಕ್ಸ್‌, ನಿಫ್ಟಿಯಲ್ಲಿರುವ ಅಗ್ರಮಾನ್ಯ ಕಂಪನಿಗಳು ಯಾವ ರೀತಿ ಮ್ಯುಜಿಕಲ್‌ ಚೇರ್‌ ಆಟ ಆಡುತ್ತಿವೆ ಎಂಬುದನ್ನು ಕೆಲವು ನಿದರ್ಶನಗಳಿಂದ ತಿಳಿಯಬಹುದು.

    ಶುಕ್ರವಾರದ ನಿಫ್ಟ್ಟಿ | NSE

    ಇದುವರೆಗೂ ಸತತವಾಗಿ ವೈವಿಧ್ಯಮಯವಾದ ನಕಾರಾತ್ಮಕ ಸುದ್ಧಿಗಳಿಂದ ವಹಿವಾಟುದಾರರ ನಿರ್ಲಕ್ಷಕ್ಕೆ ಗುರಿಯಾಗಿದ್ದ ಬ್ಯಾಂಕಿಂಗ್‌ ವಲಯವು ದಿಢೀರನೆ ಬೆಳಕಿಗೆ ಬಂದು ವಿಜೃಂಭಿಸಿದ ರೀತಿಯು ಹಿಂದಿನ ದಿನದವರೆಗಿನ ವಿವಿಧ ವಿಶ್ಲೇಷಣೆಗಳನ್ನು ಸುಳ್ಳಾಗಿಸಿತು. ಉದಾಹರಣೆಗಳು ಇಂತಿವೆ.

    ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌ :ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌ ಷೇರಿನ ಬೆಲೆ ಜುಲೈ ತಿಂಗಳ ಮಧ್ಯೆಯಲ್ಲಿ ರೂ.1,520/30 ರ ಸಮೀಪವಿತ್ತು. ನಂತರದ ದಿನಗಳಲ್ಲಿ ಷೇರಿನ ಬೆಲೆ ಕರಗುತ್ತಾ 26 ರಂದು ಶೇ.93 ರಷ್ಟರ ವಹಿವಾಟು delivery based ಆಗಿತ್ತು. ಇದು ಆಗಷ್ಟ್‌ 3 ರವರೆಗೂ ನಡೆದು ಅಂದು ರೂ.1,428 ರ ಸಮೀಪವಿದ್ದ ಷೇರಿನ ಬೆಲೆ 4 ರಂದು ರೂ.1,464 ಕ್ಕೂ, 5 ರಂದು ರೂ.1,482 ಕ್ಕೂ, 6 ರಂದು ರೂ.1,489 ರವರೆಗೂ ಏರಿಕೆ ಕಂಡಿವೆ. ಅಂದರೆ ಷೇರಿನ ಬೆಲೆಗಳು ಹೆಚ್ಚಿನ ಕುಸಿತಕ್ಕೊಳಗಾಗಿದ್ದ ಕಾರಣ ಅಲ್ಪ ಕಾಲೀನ ಹೂಡಿಕೆಯಾಗಿ ಮೌಲ್ಯಾಧಾರಿತ ಕೊಳ್ಳುವಿಕೆಗೆ ದಾರಿಯಾಗಿದೆ. ಅಲ್ಲದೆ ಗುರುವಾರ ಚುಕ್ತಾ ಚಕ್ರದ ಕೊನೆಯದಿನವಾಗಿದ್ದುದು ಸಹ ಈ ಏರಿಕೆಗೆ ಪೂರಕ ಅಂಶವಾಗಿದೆ.

    ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌ | BSE

    ಕೋಟಕ್‌ ಮಹೀಂದ್ರ ಬ್ಯಾಂಕ್‌ : ಕೋಟಕ್‌ ಮಹೀಂದ್ರ ಬ್ಯಾಂಕ್‌ ಷೇರಿನ ಚಲನಾ ವಿಧವೂ ಇದೇ ರೀತಿಯಲ್ಲಿತ್ತು. ಜುಲೈ ಮಧ್ಯಂತರದಲ್ಲಿ ರೂ.1,750 ರ ಸಮೀಪವಿದ್ದ ಷೇರಿನ ಬೆಲೆ ಮಾಸಾಂತ್ಯದಲ್ಲಿ ರೂ.1,648 ರವರೆಗೂ ಕುಸಿದು ನಂತರ ಆರೋಹಣ ಕಂಡು ರೂ.1,776 ರಲ್ಲಿ ಆಗಷ್ಟ್‌ 6 ರಂದು ವಾರಾಂತ್ಯ ಕಂಡಿದೆ.

    ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್ : ಜುಲೈ ಮೊದಲವಾರದಲ್ಲಿ, ಕೊರೊನ ಲಸಿಕೆಯ ಉತ್ಪಾದನೆಗೆ ಅನುಮತಿ ಪಡೆದ ಕಾರಣ ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್ ಕಂಪನಿ ಷೇರಿನ ಬೆಲೆ ರೂ.5,600 ನ್ನು ದಾಟಿತ್ತು. ಮಾರ್ಚ್‌ ನಲ್ಲಿ ವಾರ್ಷಿಕ ಕನಿಷ್ಠದಲ್ಲಿದ್ದ ಈ ಕಂಪನಿ ಷೇರಿನ ಬೆಲೆ ನಿರಂತರವಾಗಿ ಏರಿಕೆ ಕಂಡು ಜುಲೈ 7 ರಂದು ರೂ.5,613 ರ ವಾರ್ಷಿಕ ಗರಿಷ್ಠ ದಾಖಲಿಸಿತು. ಕಂಪನಿಯ ತ್ರೈಮಾಸಿಕ ಫಲಿತಾಂಶ ಪ್ರಕಟಣೆಯ ನಂತರದಲ್ಲಿ ಹೆಚ್ಚಿನ ಮಾರಾಟದ ಒತ್ತಡ ಉಂಟಾಗಿ ರೂ.4,660 ರ ಸಮೀಪಕ್ಕೆ ಕುಸಿದು ವಾರಾಂತ್ಯದಲ್ಲಿ ರೂ.4,785 ಕ್ಕೆ ಚೇತರಿಸಿಕೊಂಡಿದೆ.

    ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್ | BSE

    ಸೋಜಿಗ ಅಂಶವೆಂದರೆ ರೂ.4,745 ರಲ್ಲಿ ಶೇ.25 ರಷ್ಟು ವಹಿವಾಟು ವಿಲೇವಾರಿಯುತವಾಗಿದ್ದರೆ, ಮತ್ತೊಮ್ಮೆ ರೂ.4,690 / 4,720 ರಲ್ಲಿ ಆಗಷ್ಟ್‌ 3 ರಂದು ಶೇ.77 ಕ್ಕೂ ಹೆಚ್ಚಿನ ವಹಿವಾಟು ವಿಲೇವಾರಿಯಾಗಿ( Delivery based) ಚುಕ್ತಾ ಆಗಿದೆ. ಈ ವಿಲೇವಾರಿ ಸಂಖ್ಯೆ ಹೆಚ್ಚಾದ ಮೇಲೆ ಷೇರಿನ ಬೆಲೆ ಏರಿಕೆ ಕಂಡು ರೂ.4,785 ಕ್ಕೆ ತಲುಪಿದೆ. ವಿಲೇವಾರಿಯಾದ ಷೇರುಗಳ ಸಂಖ್ಯೆ ಹೆಚ್ಚಾದಾಗ ಪೇಟೆಯ ದಿಶೆ ತಿರುವು ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಷೇರಿನ ಬೆಲೆ ಪುಟಿದೆದ್ದು ಪುನ: ರೂ.5,000 ದ ಗಡಿ ದಾಟಬಹುದಾಗಿದೆ.

    ಒಂದೇ ವಾರದಲ್ಲಿ ಅಧಿಕ ಲಾಭ ಒದಗಿಸಿದ ಅಗ್ರಮಾನ್ಯ ಕಂಪನಿಗಳು;

    ಲೌರಸ್‌ ಲ್ಯಾಬ್ಸ್‌ ಲಿಮಿಟೆಡ್:ಜುಲೈ ಅಂತ್ಯದಲ್ಲಿ ಈ ಕಂಪನಿಯ ಷೇರಿನ ಬೆಲೆ ರೂ.590 ರ ಸಮೀಪವಿತ್ತು, ಆದರೆ ಆಗಷ್ಟ್‌ 2 ನೇ ಸೋಮವಾರದಂದು ಷೇರಿನ ಬೆಲೆ ದಿಢೀರನೆ ಗಗನಕ್ಕೇರಿ ರೂ.663 ರವರೆಗೂ ತಲುಪಿದೆ. ಕ್ರಮೇಣ ಏರಿಕೆಯಿಂದ ರೂ.686 ರರವರೆಗೂ ಶುಕ್ರವಾರ 6 ರಂದು ಜಿಗಿತ ಕಂಡು ಆಕರ್ಷಣೀಯ ಲಾಭವನ್ನು ಅಲ್ಪಕಾಲೀನದಲ್ಲೇ ಒದಗಿಸಿದೆ. ಈ ಷೇರಿನ ಬೆಲೆ ಜುಲೈ ಮಧ್ಯಂತರದಲ್ಲಿ ರೂ.680 ರ ಸಮೀಪವಿತ್ತು. ಕೇವಲ ಕೆಲವೇ ದಿನಗಳಲ್ಲಿ ಸುಮಾರು ರೂ.100 ರಷ್ಟು ಕುಸಿತ ಕಂಡು ಪುಟಿದೆದ್ದಿದೆ. ಈ ಪ್ರಕರಣವು ಷೇರುಪೇಟೆಯಲ್ಲಿ ಅಗ್ರಮಾನ್ಯ ಕಂಪನಿಗಳು ಅಲ್ಪಕಾಲೀನ ಸಮಯದಲ್ಲಿ ಒದಗಿಸಬಹುದಾದ ಅವಕಾಶಕ್ಕೆ ಹಿಡಿದ ಕನ್ನಡಿಯಾಗಿದೆ.

    ಸಿಪ್ಲಾ ಲಿಮಿಟೆಡ್‌ :ಈ ಕಂಪನಿಯು ಒಂದು ಕಾಲದಲ್ಲಿ ಸೆನ್ಸೆಕ್ಸ್‌ ನ ಅಂಗವಾಗಿದ್ದ ಅಗ್ರಮಾನ್ಯ ಫಾರ್ಮಾ ವಲಯದ ಕಂಪನಿ. 1992 ರ ಸಮಯದಲ್ಲಿ ರೂ.30 ಸಾವಿರ ರೂಪಾಯಿಗಳನ್ನು ದಾಟಿ ಗಮಾನ ಸೆಳೆದಿದ್ದ ಕಂಪನಿಯಾಗಿದೆ. ಈ ಷೇರು ಜುಲೈ 30 ರಂದು ಶುಕ್ರವಾರ ರೂ.875 ರವರೆಗೂ ಕುಸಿದಿದ್ದು ಅಂದೇ ರೂ.930 ನ್ನು ದಾಖಲಿಸಿ ರೂ.920 ರಸಮೀಪ ಕೊನೆಗೊಂಡಿದೆ. ಸೋಮವಾರ ಆಗಷ್ಟ್‌ 2 ರಂದು 913 ರ ಸಮೀಪದ ಕನಿಷ್ಠದಿಂದ ಗುರುವಾರ ರೂ.950 ನ್ನು ದಾಟಿತು. ಆದರೆ ಮಾರನೇ ದಿನ ಅಂದರೆ ಶುಕ್ರವಾರ ರೂ.909 ರವರೆಗೂ ಕುಸಿದು ರೂ.917 ರ ಸಮೀಪ ಕೊನೆಗೊಂಡಿದೆ.

    ಇದೇ ರೀತಿ ಅಲ್ಪಕಾಲೀನ ಸಮಯದಲ್ಲೇ ಹೆಚ್ಚಿನ ಏರುಪೇರುಗಳನ್ನು ಪ್ರದರ್ಶಿಸುತ್ತಿರುವ ಕಂಪನಿಗಳೆಂದರೆ ಪ್ರತಿ ಷೇರಿಗೆ ರೂ.58 ರಂತೆ ಡಿವಿಡೆಂಡ್‌ ಪ್ರಕಟಿಸಿರುವ ಸಾರ್ವಜನಿಕ ವಲಯದ ಬಿ ಪಿ ಸಿ ಎಲ್‌, ಪ್ರತಿ ಷೇರಿಗೆ 1:1 ರಂತೆ ಬೋನಸ್‌ ಷೇರು ವಿತರಿಸಲಿರುವ ರೆಡಿಂಗ್‌ ಟನ್‌ ಗಳಲ್ಲದೆ ಎನ್‌ ಎಂ ಡಿ ಸಿ, ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ, ಟಾಟಾ ಪವರ್‌, ಕ್ಲಾರಿಯಂಟ್‌ ಕೆಮಿಕಲ್ಸ್‌, ರೂಪಾ ಕಂಪನಿ ಲಿಮಿಟೆಡ್‌, ಸ್ಟ್ರೈಡ್ಸ್‌ ಫಾರ್ಮಾ, ಐಟಿಸಿ, ಗೇಲ್‌ (ಇಂಡಿಯಾ), ಟಾಟಾ ಸ್ಟೀಲ್‌, ನಂತಹ ಅನೇಕ ಕಂಪನಿಗಳ ಚಲನೆಯು ಹೂಡಿಕೆಗಿಂತ ಅಲ್ಪಕಾಲೀನ ಅವಕಾಶಗಳ ಆಗರ ಈ ಷೇರುಪೇಟೆ ಎಂದು ಸಾರಿ ಸಾರಿ ಹೇಳುತ್ತವೆ.

    ಈಗ ಪೇಟೆಗಳು ಉತ್ತುಂಗದಲ್ಲಿರುವ ಸಂದರ್ಭದಲ್ಲಿ ಸುದ್ಧಿಯೊಂದು ಹೊರಬಿದ್ದಿದೆ ಏನೆಂದರೆ ಷೇರುಪೇಟೆಯಲ್ಲಿ ಭಾಗವಹಿಸುತ್ತಿರುವ ರೀಟೇಲ್‌ ಹೂಡಿಕೆದಾರರ ಸಂಖ್ಯೆ ದಾಖಲೆಯ ಮಟ್ಟಕ್ಕೆ ಹೆಚ್ಚಿದೆ ಎಂಬುದಾಗಿದೆ. ಇದರಿಂದ ಪ್ರೇರೇಪಿತರಾಗುವ ಅವಶ್ಯಕತೆ ಇಲ್ಲ, ಇದು ಕೇವಲ ಶೇ.7.18 ಅಷ್ಟೆ.

    ಭಾರತದ ಷೇರುಪೇಟೆಯಲ್ಲಿ ಭಾಗವಹಿಸುವವರ ಸಂಖ್ಯೆಯು ಕೇವಲ ಶೇ.5 ರಷ್ಟು ಮಾತ್ರ. ಕೇವಲ 7.1% ರಷ್ಟು ಜನ ಭಾಗವಹಿಸುವಾಗ ಈ ಪ್ರಮಾಣದ ಏರಿಕೆಯನ್ನು ನಾವು ಕಾಣುತ್ತಿರುವಾಗ ಈ ಪ್ರಮಾಣವು ಎರಡಂಕಿ ಮೀರಿದಾಗ ಷೇರುಪೇಟೆಯ ಸ್ಥಿತಿ ಏನಾಗಿರಬಹುದೆಂಬುದು ಹಲವರ ಕಲ್ಪನೆ. ಆದರೆ ನಮ್ಮಲ್ಲಿರುವ ಭಾವನಾತ್ಮಕ ಚಿಂತನೆಗಳಿಗೆ ತಿಲಾಂಜಲಿ ನೀಡಿ ಸಹಜತೆಯತ್ತ ಗಮನಹರಿಸಿದಲ್ಲಿ ಮಾತ್ರ ನಮ್ಮ ಹೂಡಿಕೆ ಸುರಕ್ಷತೆಯನ್ನು ಕಾಣಬಹುದಾಗಿದೆ. ಇತ್ತೀಚೆಗೆ ಬರುತ್ತಿರುವ ಐಪಿಒ ಗಳಿಗೆ ದೊರೆಯುತ್ತಿರುವ ಸ್ಪಂಧನೆ ಮಾತ್ರ ಅಮೋಘವಾದುದಾಗಿದೆ.

    ಆದರೆ ಇದಕ್ಕೆ ಪ್ರೇರಣೆಯಾಗಿ ಹೆಚ್ಚು ಪ್ರಚಾರ ಪಡೆಯುವ ʼ ಗ್ರೇ ಮಾರ್ಕೆಟ್‌ ಪ್ರೀಮಿಯಂʼ ನ್ನು ಆಧರಿಸಿ, ಕಂಪನಿಗಳ ಸಾಮರ್ಥ್ಯವನ್ನರಿಯದೆ, ನಿರ್ಧರಿಸಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಸಂದರ್ಭವನ್ನರಿತು ತುಲನಾತ್ಮಕವಾಗಿ ನಿರ್ಧರಿಸಿರಿ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಮುಜುಮದಾರ್ ಭೋಜನಕೂಟದಲ್ಲಿ ಸಿಎಂ ಭಾಗಿ

    BENGALURU AUG 8

    ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಕಿರಣ ಮುಜುಮದಾರ್ ಷಾ ಬೆಂಗಳೂರಿನ ದಿ ಒಬೆರಾಯ್ ಹೊಟೇಲ್ ನಲ್ಲಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಭಾಗವಹಿಸಿದ್ದರು . ಈ ಸಂದರ್ಭದಲ್ಲಿ ಬೆಂಗಳೂರಿನ ಅಭಿವೃದ್ಧಿಯ ಕುರಿತು ಚರ್ಚಿಸಲಾಯಿತು ಎಂದು ಅವರು ಟ್ವೀಟ್ ಮಾಡಿದ್ದಾರೆ.

    ಭೋಜನಕೂಟದಲ್ಲಿ ವಿಪ್ರೋ ಅಧ್ಯಕ್ಷ ಅಜಿಮ್ ಪ್ರೇಮ್ಜಿ, ಮೋಹನ್ ದಾಸ್ ಪೈ, ಕ್ರಿಸ್ ಗೋಪಾಲಕೃಷ್ಣನ್ ಮತ್ತು ಇತರರು ಇದ್ದರು.

    ಸಭೆ ಫಲಪ್ರದವಾಗಿತ್ತು ಮೂಲ ಸೌಲಭ್ಯ ಮತ್ತು ಆರ್ಥಿಕ ವಿಚಾರಗಳ ಬಗ್ಗೆ ಒಳ್ಳೆಯ ಮಾತುಕತೆಯಾಯಿತು ಎಂದು ಕಿರಣ ಮುಜುಮದಾರ್ ಷಾ ಟ್ವೀಟ್ ಮಾ್ಡಿದ್ದಾರೆ.

    ರಾಷ್ಟ್ರೀಯ ನೀತಿ ಜಾರಿ ಆದೇಶ ವಾಪಸ್ಸು ಪಡೆಯಲು ಸಿದ್ಧರಾಮಯ್ಯ ಒತ್ತಾಯ

    BENGALURU AUG 8

    ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಕುರಿತಾದ ಆದೇಶವನ್ನು ಈ ಕ್ಷಣವೆ ಹಿಂಪಡೆದು ವಿಸ್ತೃತ ಚರ್ಚೆ ನಡೆಸಿದ ಬಂತರ ಅನುಷ್ಠಾನಗೊಳಿಸುವ ಕುರಿತು ತೀರ್ಮಾನಿಸಬೇಕೆಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಯಾವುದೇ ಚರ್ಚೆ ನಡೆಸದೆ ಆದೇಶ ಹೊರಡಿಸಿರುವುದು ಸರ್ವಾಧಿಕಾರಿ ನಿಲುವು, ದೇಶದ ಒಕ್ಕೂಟ ತತ್ವಕ್ಕೆ ಮಾಡಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ನಾಡಿನ ಶಿಕ್ಷಣ ತಜ್ಞರು, ಉಪನ್ಯಾಸಕರು, ಹಿರಿಯರು ಮತ್ತು ವಿರೋಧ ಪಕ್ಷಗಳ ಮುಖಂಡರು ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ರಾಜ್ಯದ ಮೇಲೆ ಹೇರಬೇಡಿ, ಸಂಬಂಧಿಸಿದ ವಲಯಗಳ ಜನರ ಜೊತೆಗೆ ವಿಸ್ತೃತ ಚರ್ಚೆ ನಡೆಸಿ, ಸಾಧಕ ಬಾಧಕಗಳನ್ನು ಪರಿಶೀಲಿಸಿದ ನಂತರ ತೀರ್ಮಾನಿಸಿ ಎಂದು‌ ಹೇಳಿದ್ದೆವು.

    ಹಾಗೆ ಮಾಡದೆ ಈ ಅನಾಹುತಕಾರಿ ನೀತಿಯನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೆ ಜಾರಿಗೊಳಿಸಲು ಆದೇಶ ಹೊರಡಿಸಲಾಗಿದೆ. ಈ ಆದೇಶದಲ್ಲಿ ಹಲವಾರು ಅಪಾಯಕಾರಿಯಾದ ಅಂಶಗಳಿವೆ; ಬಡವರ, ಮಧ್ಯಮ ವರ್ಗದವರ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಕನಸಿಗೆ ನೇರವಾಗಿ ಬೆಂಕಿ ಇಡುವ ಪ್ರಕ್ರಿಯೆಯ ಭಾಗವಾಗಿ ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹೊರಡಲಾಗಿದೆ ಎಂದು ಅವರು ಟೀಕಿಸಿದ್ದಾರೆ.

    ಈ ಆದೇಶದಲ್ಲಿನ ಪ್ರಮುಖ ಸಮಸ್ಯೆಗಳನ್ನು ತಾವು ಗುರುತಿಸಿರುವುದಾಗಿ ಹೇಳಿರುವ ಅವರು ಅದನ್ನು ಈ ಕೆಳಗಿನಂತೆ ಪಟ್ಟಿ ಮಾಡಿದ್ದಾರೆ.

    1. ಕನ್ನಡ ಭಾಷಾ ವಿಷಯವನ್ನು ಕೇವಲ ಎರಡು ಸೆಮಿಸ್ಟರುಗಳಿಗೆ ಅಂದರೆ ಒಂದು ವರ್ಷಕ್ಕೆ ಮಾತ್ರ ಕಲಿಸುವುದಾಗಿ ಹಿಂದೆ ಹೇಳಿದ್ದರು. ರಾಜ್ಯದ ವಿವಿಧ ವಲಯಗಳಿಂದ ಪ್ರಬಲ ಪ್ರತಿರೋಧ ಬಂದ ಮೇಲೆ ಶಿಕ್ಷಣ ಸಚಿವರಾದ ಡಾ. ಅಶ್ವತ್ಥ ನಾರಾಯಣ ಅವರು ಈ ಸಮಸ್ಯೆಯನ್ನು ಸರಿಪಡಿಸುವುದಾಗಿ ಹೇಳಿಕೆ ಕೊಟ್ಟಿದ್ದರು.ಆದರೆ ಸರ್ಕಾರ ನಿನ್ನೆ ಹೊರಡಿಸಿರುವ ಆದೇಶದಲ್ಲಿ ಅದರ ಕುರಿತು ಸ್ಪಷ್ಟತೆ ಇಲ್ಲ. ಒಂದು ವರ್ಷಕ್ಕೆ ಸೀಮಿತಗೊಳಿಸುವರೊ ಇಲ್ಲ ಹಿಂದೆ ಇದ್ದಂತೆ ಎರಡು ವರ್ಷಗಳೂ ಕಲಿಸುವರೊ ಅಥವಾ ನಾವು ಒತ್ತಾಯ ಮಾಡಿದಂತೆ ಧಾರವಾಡ ಮುಂತಾದ ವಿ ವಿ ಗಳಲ್ಲಿರುವಂತೆ ಮೂರೂ ವರ್ಷಗಳಿಗೆ ಕಲಿಸಲಾಗುವುದೊ ಎಂಬುದರ ಬಗ್ಗೆ ಸರ್ಕಾರದ ಆದೇಶ ಮೌನವಾಗಿದೆ.
    2. ಈ ಆದೇಶದಲ್ಲಿ ಜಗತ್ತಿನ ಯಾವ ದೇಶಗಳಲ್ಲೂ ಇಲ್ಲದ ಕಲಿಕಾ ಕ್ರಮವನ್ನು ಪ್ರಸ್ತಾಪಿಸಿದ್ದಾರೆ.ಅದರ ಪ್ರಕಾರ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಯು ಶೇ. 40 ರಷ್ಟು ಕ್ರೆಡಿಟ್ಟುಗಳನ್ನು/ ಅಂಕಗಳನ್ನು/ ಆನ್ ಲೈನ್ ಮೂಲಕ ಕೇಳಿ ಪಡೆಯಬಹುದು. ತರಗತಿಗಳಿಗೆ ಹಾಜರಾಗಬೇಕಾದ ಅಗತ್ಯವಿಲ್ಲ. ಯಾವುದೇ ವಿಶ್ವವಿದ್ಯಾಲಯದಿಂದ ಶೇ 50 ರಷ್ಟು ಅಂಕ /ಕ್ರೆಡಿಟ್ಟುಗಳನ್ನು‌ ಪಡೆಯಬೇಕು. ಇದರಿಂದಾಗಿ ಪ್ರಾಕ್ಟಿಕಲ್ ತರಗತಿಗಳನ್ನು ಹೊರತುಪಡಿಸಿ ಇನ್ನುಳಿದಂತೆ ತರಗತಿಗಳಿಗೆ ಹಾಜರಾಗುವ ಅಗತ್ಯವಿಲ್ಲ. (ಈಗಾಗಲೆ ಉಪನ್ಯಾಸಕರುಗಳಿಂದ ಪಠ್ಯಗಳನ್ನು ರೆಕಾರ್ಡ್ ಮಾಡಿಸಲಾಗಿದೆ).
    3. ಈ ನೀತಿಯ ಪ್ರಕಾರ ವಿಶ್ವ ವಿದ್ಯಾಲಯಗಳನ್ನು ದೂರ ಶಿಕ್ಷಣ ಕೇಂದ್ರಗಳಂತೆ ಮಾಡಲಾಗುತ್ತಿದೆ,ಆ ಮೂಲಕ ಅನೇಕ ಸರ್ಟಿಫಿಕೇಟ್ ಕೋರ್ಸ ಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ, ನಿಧಾನಕ್ಕೆ ಸರ್ಕಾರಿ ವಿವಿಗಳನ್ನು ಮುಚ್ಚಿ ಖಾಸಗಿ ವಿವಿಗಳನ್ನು ಹೆಚ್ಚಿಸಲು, ಖಾಸಗಿಯವರಿಗೆ ವಿಪರೀತ ಹಣ ಮಾಡಲು ಬೇಕಾದ ವೇದಿಕೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಸೃಷ್ಟಿಸಿಕೊಡಲು ಕೇಂದ್ರ- ರಾಜ್ಯ ಸರಕಾರಗಳು ಹೊರಟಿವೆ.
    4. ಗುಣಮಟ್ಟದ ಪ್ರಾಧ್ಯಾಪಕರುಗಳನ್ನು ಮತ್ತು ಅತ್ಯಂತ ಪ್ರಾಯೋಗಿಕವಾದ ಹಾಗೂ ಬದುಕಿಗೆ ಹತ್ತಿರವಾದ “ಪೆಡಗಾಗಿ (ಕಲಿಕೆ ಮತ್ತು ಬೋಧನಾ ವಿಧಾನ) ಗಳ‌ ಮೂಲಕ ಶಿಕ್ಷಣ ಕೊಡುವುದರ ಕಡೆಗೆ ಯೋಚಿಸುವುದರ ಬದಲಾಗಿ‌ ವಿ ವಿಗಳನ್ನು ಸರ್ಟಿಫಿಕೇಟ್ ನೀಡುವ ಅಂಗಡಿಗಳನ್ನು ಮಾಡಲಾಗುತ್ತಿದೆ.
    5. ಈಗಿನ ಪದವಿಯಲ್ಲಿ ಮೂರು ಮೇಜರ್ ವಿಷಯಗಳ ಬದಲಾಗಿ ಕೇವಲ ಎರಡು ವಿಷಯಗಳನ್ನು ಕಲಿಸುವಂತೆ ಹಾಗೂ ಮೂರನೆ ವರ್ಷ ಅಥವಾ 5 & 6 ನೇ ಸೆಮಿಸ್ಟರುಗಳಾಚೆಗೆ ಕೇವಲ ಒಂದು ವಿಷಯವನ್ನು ಮೇಜರ್ ಆಗಿ ಇನ್ನೊಂದನ್ನು ಮೈನರ್ ಆಗಿ ಅಥವಾ ಎರಡನ್ನೂ ಮೇಜರ್ ಆಗಿ ಕಲಿಸಲು ಆದೇಶಿಸಲಾಗಿದೆ. ಇದರಿಂದಾಗಿ ಸಾವಿರಾರು ಉಪನ್ಯಾಸಕರು ಉದ್ಯೋಗ ಕಳೆದುಕೊಳ್ಳುತ್ತಾರೆ . ಮುಂದೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಉದ್ಯೋಗಗಳೇ ಸೃಷ್ಟಿಯಾಗುವುದಿಲ್ಲ.
    6. ಜಗತ್ತಿನ ಅನೇಕ ಪ್ರಮುಖ ಇತಿಹಾಸಕಾರರು ಶುದ್ಧ ವಿಜ್ಞಾನದ ( ಜೆನೆಟಿಕ್ಸ್ ಮುಂತಾದ) ವಿಷಯಗಳ ಮೂಲಕ‌ ತಮ್ಮ ವಿಷಯಗಳನ್ನು ಮಂಡಿಸುತ್ತಿದ್ದಾರೆ.‌ ನಮ್ಮ ವಿದ್ಯಾರ್ಥಿಗಳೂ ಆ ಎಲ್ಲ ವಿಷಯಗಳನ್ನು ಕಲಿಯಬೇಕಲ್ಲವೆ? ಆದರೆ ಒಂದು ಮೇಜರ್ ಸಬ್ಜೆಕ್ಟ್ ಎಂದು ಮಾಡಿ ಮಕ್ಕಳನ್ನು ಕೂಪ ಮಂಡೂಕಗಳನ್ನಾಗಿಸಲು ಹೊರಟಿದ್ದಾರೆ.
    7. ಪಿ ಯು ಸಿ ಮಟ್ಟದಲ್ಲಿ‌ ವಿಜ್ಞಾನ ಕಲಿತವರು ಇದುವರೆಗೆ ಬಿಎಸ್ಸಿ ಹೋಗಲು‌ ಮನಸ್ಸಾಗದಿದ್ದರೆ ಬಿ.ಕಾಂ ಅಥವಾ ಬಿ ಎ ಗೆ ಸೇರಬಹುದಿತ್ತು. ಈ ಆಯ್ಕೆಗಳು ರದ್ದಾಗುತ್ತವೆ ಎಂಬಂತೆ ಆದೇಶ ಹೊರಡಿಸಲಾಗಿದೆ.

    ಶಿಕ್ಷಣ, ಪಠ್ಯಕ್ರಮಗಳನ್ನು ನಿರ್ಧರಿಸುವ ಹಕ್ಕು ರಾಜ್ಯಗಳಿಗೆ ಸಂಬಂಧಿಸಿದ್ದು. ರಾಜ್ಯಗಳ ಅಧಿಕಾರಗಳನ್ನು ದಮನ ಮಾಡಿ ಕೇಂದ್ರದ ಬಿಜೆಪಿ ಸರ್ಕಾರವು ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹೊರಟಿದೆ.

    ಇದಕ್ಕೆ ತಕ್ಕ ಹಾಗೆ ಕೇಂದ್ರದ ದಮನಕಾರಿ ನೀತಿಯನ್ನು ಪ್ರಶ್ನಿಸಬೇಕಾದ, ಪ್ರತಿಭಟಿಸಬೇಕಾದ ರಾಜ್ಯ ಬಿಜೆಪಿ ಸರ್ಕಾರವು ರಾಜ್ಯದ ಹಿತಾಸಕ್ತಿಯನ್ನು ಎಲ್ಲರಿಗಿಂತ ಮುಂದೆ ನಿಂತು ಬಲಿಕೊಡಲು ಇನ್ನಿಲ್ಲದ ಉತ್ಸಾಹ ತೋರುತ್ತಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

    ಇದನ್ನೂ ಓದಿ: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಈ ವರ್ಷದಿಂದಲೇ ಜಾರಿ

    ಶ್ರಾವಣ ಮಾಸಕ್ಕೆ ಸ್ವಾಗತ ನೀಡುವ ಭೀಮನ ಅಮಾವಾಸ್ಯೆ

    ಎಂ.ವಿ. ಶಂಕರಾನಂ

    ಭಾರತೀಯ ಪರಂಪರೆಯಲ್ಲಿ ಸಾಮಾನ್ಯವಾಗಿ ಆಷಾಢದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲವಾದರೂ ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತ’ ಎಂದು ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆಪತಿ ಸಂಜೀವಿನಿ ವ್ರತ’ ಎಂಬ ಹೆಸರೂ ಇದೆ.
    ಮದುವೆಯಾದ ಸ್ತ್ರೀಯರು ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ, ತಮ್ಮನ್ನು ದೀರ್ಘ ಸುಮಂಗಲಿಯಾಗಿ ಹರಸುವಂತೆ ಕೋರಿ, ಹಾಗೂ ಮದುವೆಯಾಗದ ಕನ್ಯೆಯರು ತಮಗೆ ಭೀಮನಂತ ಬಲಶಾಲಿ ಗಂಡ ಸಿಗಲಿ ಎಂಬ ಉದ್ದೇಶದಿಂದಲೂ ಶಿವನನ್ನು ಪೂಜಿಸುವ ಹಬ್ಬವೇ ಈ ಭೀಮನ ಅಮಾವಾಸ್ಯೆ.

    ಜ್ಯೋತಿರ್ಭೀಮೇಶ್ವರ ವ್ರತ

    ಇನ್ನೊಂದು ವಿಶೇಷವೇನೆಂದರೆ ಈದಿನ ಮದುವೆಯಾಗದ ಅಕ್ಕ ತಂಗಿಯರು ಕೂಡ ತಮ್ಮ ಅಣ್ಣತಮ್ಮಂದಿರಿಗೆ ಅವರ ಜೀವನದಲ್ಲಿ ಸುಖ ಶಾಂತಿ ಲಭಿಸಲೆಂದು ಪಾರ್ವತೀ ಪರಮೇಶ್ವರರಲ್ಲಿ ಬೇಡಿಕೊಳ್ಳುವ ಪದ್ಧತಿಯುಂಟು. ಇದರಿಂದ ಇದಕ್ಕೆ ನಾಗರ ಅಮಾವಾಸ್ಯೆ ಎಂದೂ ಹೆಸರಿದೆ. ಶಿವನನ್ನು ಜ್ಯೋತಿಯ ರೂಪದಲ್ಲಿ ಪೂಜಿಸುವುದರಿಂದ ಈ ವ್ರತಕ್ಕೆ ಜ್ಯೋತಿರ್ಭೀಮೇಶ್ವರ ವ್ರತ ಎಂದು ಹೆಸರು ಬಂದಿದೆ.

    ಪುರಾಣದಲ್ಲಿರುವ ಕಥೆ
    ಈ ಹಬ್ಬಕ್ಕೆ ಪತಿ ಸಂಜೀವಿನಿ ವ್ರತ ಎಂದು ಹೆಸರು ಬರಲು ಸ್ಕಂದ ಪುರಾಣದಲ್ಲಿ ಒಂದು ಕಥೆಯಿದೆ. ಹಿಂದೆ ರಾಜನೊಬ್ಬ ತನ್ನ ಮಗನಿಗೆ ವಿಜೃಂಭಣೆಯಿಂದ ಮದುವೆ ಮಾಡಬೇಕೆಂದು ನಿರ್ಧಾರ ಮಾಡಿರುತ್ತಾನೆ. ಆದರೆ ದುರಾದೃಷ್ಟದಿಂದ ಆ ರಾಜಕುಮಾರ ಅಕಾಲ ಮರಣ ಹೊಂದುತ್ತಾನೆ. ಇದರಿಂದ ದುಃಖಿತನಾದರೂ ಸಹ ಆ ರಾಜನು ತನ್ನ ಆಸೆಯಂತೆ ಮಗನ ಶವಕ್ಕೇ ಮದುವೆ ಮಾಡಲು ನಿಶ್ಚಯಿಸುತ್ತಾನೆ. ಆದರೆ ಶವದೊಂದಿಗೆ ವಿವಾಹವಾಗಲು ಯಾರು ಮುಂದೆ ಬರುತ್ತಾರೆ? ಅದಕ್ಕಾಗಿ ರಾಜ ಒಂದು ಆಮಿಷವನ್ನು ಒಡ್ಡುತ್ತಾನೆ. ಅದೇನೆಂದರೆ; ಯಾರು ತಮ್ಮ ಮಗಳನ್ನು ಸತ್ತಿರುವ ತನ್ನ ಮಗನೊಂದಿಗೆ ಮದುವೆ ಮಾಡಿಕೊಡುತ್ತಾರೋ ಅವರಿಗೆ ಅಪಾರ ಸಂಪತ್ತನ್ನು ಕೊಡುವುದಾಗಿ ಹೇಳಿ ಡಂಗೂರ ಹಾಕಿಸುತ್ತಾನೆ. ಆಸೆಬುರುಕನಾದ ಒಬ್ಬನು ಹಣಕ್ಕಾಗಿ ತನ್ನ ಮಗಳ ಮದುವೆಯನ್ನು ರಾಜಕುಮಾರನ ಶವದೊಂದಿಗೆ ನಡೆಸುತ್ತಾನೆ. ನಂತರ ಹಣವನ್ನು ತೆಗೆದುಕೊಂಡು ಅಲ್ಲಿಂದ ಹೊರಟು ಹೋಗುತ್ತಾನೆ. ಸುರಿಯುತ್ತಿದ್ದ ಮಳೆಯಲ್ಲಿ, ಶವವನ್ನೂ, ಶವವನ್ನು ವರಿಸಿದ ವಧುವನ್ನೂ ರಾಜಪರಿವಾರದವರು ನದೀ ತೀರದಲ್ಲಿ ಬಿಟ್ಟು ಹೋಗುತ್ತಾರೆ.

    ಗಾಢಾಂಧಕಾರದಲ್ಲಿ ಪತಿಯ ಶವದ ಮುಂದೆ ಕುಳಿತು ರೋಧಿಸುತ್ತಿದ್ದ ಆ ವಧುವಿಗೆ ಅಂದು ಅಮಾವಾಸ್ಯೆ ಎಂದು ನೆನಪಾಗಿ ತನ್ನ ತಾಯಿ ಪ್ರತಿ ವರ್ಷವೂ ಆ ದಿನ ಶಿವನ ಪೂಜೆ ಮಾಡುತ್ತಿದ್ದುದು ನೆನಪಿಗೆ ಬಂದು, ಮರಳಿನಲ್ಲಿ ಶಿವಲಿಂಗ ಮಾಡಿ, ಮಣ್ಣಿನಲ್ಲಿ ಎರಡು ದೀಪಗಳನ್ನೂ ಮಾಡಿ ಪೂಜಿಸುತ್ತಾಳೆ. ಅವಳ ಭಕ್ತಿಗೆ ಮೆಚ್ಚಿದ ಶಿವ ಪಾರ್ವತಿಯರು ಪ್ರತ್ಯಕ್ಷರಾಗಿ ಅವಳು ಮಾಡಿದ ಭಂಢಾರವನ್ನು ಭೇದಿಸಿ, ವರವನ್ನು ಬೇಡು ಎಂದಾಗ, ಆಕೆ ತನ್ನ ಗಂಡನಿಗೆ ಜೀವವನ್ನು ಕೊಡುವಂತೆ ಕೇಳುತ್ತಾಳೆ. ಶಿವ ಪಾರ್ವತಿಯರು ಅವಳ ಗಂಡನಿಗೆ ಜೀವವನ್ನು ನೀಡುತ್ತಾರೆ. ಆ ದಂಪತಿಗೆ ರಾಜ್ಯವೂ ಪ್ರಾಪ್ತಿಯಾಗಿ ಸುಖವಾಗಿ ಜೀವಿಸುತ್ತಾರೆ. ಅಮಾವಾಸ್ಯೆಯ ದಿನ ಆಕೆ ತನ್ನ ಪತಿಯನ್ನು ಬದುಕಿಸಿಕೊಳ್ಳಲು ನಡೆಸಿದ ಪೂಜೆಯೇ ಜ್ಯೋತಿರ್ಭೀಮೇಶ್ವರ ವ್ರತ.


    ಭೀಮನ ಅಮಾವಾಸ್ಯೆಯ ದಿನ ಹೆಣ್ಣು ಮಕ್ಕಳು ಮತ್ತು ಸುಮಂಗಲಿಯರು ಮಂಗಳ ಸ್ನಾನ ಮಾಡಿ, ಮಂಟಪ ನಿರ್ಮಿಸಿ, ಅದರಲ್ಲಿ ಧಾನ್ಯರಾಶಿ ಮಾಡಿ, ಅದರ ಮೇಲೆ ಗೋಧಿಹಿಟ್ಟಿನಿಂದ ಎರಡು ದೀಪವನ್ನು ಮಾಡಿ, ಹಚ್ಚುತ್ತಾರೆ. ಗೋಧಿಹಿಟ್ಟಿನಿಂದ ಮಾಡಿದ ಈ ದೀಪದ ಬೆಳಕು ಎಲ್ಲ ದುಷ್ಟ ಗ್ರಹಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ. ಕೆಮ್ಮಣ್ಣಿನಿಂದ ಮಾಡಿದ ಪಾರ್ವತಿ ಪರಮೇಶ್ವರರ ವಿಗ್ರಹವನ್ನು ಪೂಜೆ ಮಾಡುತ್ತಾರೆ. ಅಂದು ಹನಿ ನೀರು ಕೂಡ ಸೇವಿಸದೆ ಗೃಹಿಣಿಯರು ಕಟ್ಟಾ ಉಪವಾಸ ಆಚರಿಸುತ್ತಾರೆ.


    ಆಷಾಢ ಆರಂಭವಾಗುತ್ತಿದ್ದಂತೆಯೇ ತವರಿನ ಹಾದಿ ತುಳಿವ ಹೊಸದಾಗಿ ಮದುವೆಯಾದ ಹೆಣ್ಣು ಭೀಮೇಶ್ವರನ ವ್ರತವನ್ನೇ ಕಾಯುತ್ತಿರುತ್ತಾಳೆ. ಅಂದು ತನ್ನ ಗಂಡ ಬರುವ ದಿನ. ಮರುದಿನ ಶ್ರಾವಣದ ಸಂಭ್ರಮ. ತಾನು ಗಂಡನ ಮನೆಯಲ್ಲಿ ಮುಂಬರುವ ಹಬ್ಬಗಳ ಸಿದ್ಧತೆಯಲ್ಲಿ ಕಳೆದು ಹೋಗಲಿದ್ದೇನೆ ಎನ್ನುವ ಯೋಚನೆ ಅವಳೆದೆಯಲ್ಲಿ ಖುಷಿಯನ್ನು ಕಟ್ಟಿಹಾಕುತ್ತದೆ. ಗಂಡನ ಮನೆಗೆ ಹೋಗುವ ಸಂಭ್ರಮದಲ್ಲಿ ಆಕೆಗೆ ಭೀಮನ ಉಪವಾಸದಂದು ಹೊಟ್ಟೆ ಚುರುಕ್ಕೆನ್ನುವುದೇ ಇಲ್ಲ.

    ಭಂಡಾರ ಒಡೆಯುವ ಹಬ್ಬ

    ಈ ದಿನದ ಮತ್ತೊಂದು ವಿಶೇಷತೆ ಎಂದರೆ ಭಂಡಾರ ಒಡೆಯುವುದು. ಗೋಧಿ ಅಥವಾ ಮೈದಾ ಹಿಟ್ಟಿನಲ್ಲಿ ಸಣ್ಣಗೆ ಚೌಕಾಕಾರದಲ್ಲಿ ಎರಡು ಬಟ್ಟಲುಗಳನ್ನು ಅಥವಾ ಸಿಹಿ ಇಲ್ಲದ ಕರಿದ ಕಡುಬುಗಳನ್ನು ಮಾಡಿ, ಒಂದರಲ್ಲಿ ಲಕ್ಷಿö್ಮÃ ಸ್ವರೂಪಿ ನಾಣ್ಯವನ್ನು ಹಾಕಿ, ಇನ್ನೊಂದನ್ನು ಖಾಲಿಬಿಟ್ಟು ಮುಚ್ಚಿಡುತ್ತಾರೆ. ಈ ಎರಡೂ ಭಂಡಾರಗಳನ್ನು ಮನೆಯ ಬಾಗಿಲ ಹೊಸ್ತಿಲ ಮೇಲೆ ಇಟ್ಟು, ಹೂವು, ಅರಿಸಿನ ಕುಂಕುಮಗಳಿಂದ ಪೂಜಿಸಿ, ಸೋದರರನ್ನು ಹೊಸ್ತಿಲ ಮೇಲೆ ಕುಳಿತು ತಮ್ಮ ಮೊಣಕೈಗಳಿಂದ ಒಡೆಯುವಂತೆ ಅಕ್ಕತಂಗಿಯರು ಕೇಳಿಕೊಳ್ಳುತ್ತಾರೆ. ತಮಾಷೆಗಾಗಿ ಅವರು ಖಾಲಿಯಿರುವ ಭಂಡಾರವನ್ನು ಒಡೆಯುವಂತೆ ಹೇಳುತ್ತಾರೆ. ಹೀಗೆ ಒಬ್ಬರನ್ನೊಬ್ಬರು ತಮಾಷೆ ಮಾಡಿಕೊಳ್ಳುತ್ತಾ ಭಂಡಾರವನ್ನು ಒಡೆಯುವ ಕಾರ್ಯವನ್ನು ಆಚರಿಸುತ್ತಾರೆ. ನಂತರ ಅಣ್ಣನ ಆಶೀರ್ವಾದವನ್ನು ಬೇಡುವ ಸೋದರಿಯರು ಫಲತಾಂಬೂಲ ನೀಡುತ್ತಾರೆ.

    ಈ ವ್ರತವನ್ನು ಅವಿವಾಹಿತ ಸ್ತ್ರೀಯರು, ವಿವಾಹಿತೆಯರು ಆಚರಿಸಬಹುದು. ಒಮ್ಮೆ ವ್ರತ ಕೈಗೊಂಡರೆ ಐದು, ಒಂಬತ್ತು ಅಥವಾ ಹದಿನಾರು ವರ್ಷ ಸಂಪೂರ್ಣಗೊಳಿಸಿ, ಉದ್ಯಾಪನೆ ಮಾಡಿ, ಎಲ್ಲರಿಗೂ ಸಿಹಿಯೂಟ ಹಾಕಿಸಬೇಕು ಎಂದು ಸ್ಕಂದ ಪುರಾಣ ಹೇಳುತ್ತದೆ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    ಬಿಎಸ್ ವೈ ಗೆ ಸಂಪುಟ ದರ್ಜೆ ಸ್ಥಾನಮಾನ

    BENGALURU AUG 7

    ನಿಕಟ ಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನ ಮಾನ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

    ಪ್ರಸಕ್ತ ಮುಖ್ಯಮಂತ್ರಿ ಅವರ ಪದವಿ ಅವಧಿಯವರೆಗೂ ಈ ಸೌಲಭ್ಯ ಮುಂದುವರಿಯುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ ಶಿಷ್ಟಾಚಾರ ವಿಭಾಗ ಶನಿವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

    2025 ರೊಳಗಾಗಿ ಮೆಟ್ರೋ 2, 2A & 2B ಹಂತಗಳ ಕಾಮಗಾರಿ ಪೂರ್ಣ

    BENGALURU AUG 7

    ಜಾಗತಿಕವಾಗಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಅತೀ ವೇಗವಾಗಿ ಮುನ್ನುಗ್ಗುತ್ತಿರುವ ಬೆಂಗಳೂರು ನಗರದ ಸಂಚಾರ ದಟ್ಟಣೆಯ ಪರಿಣಾಮಕಾರಿ ಪರಿಹಾರಕ್ಕೆ ನಮ್ಮ ಮೆಟ್ರೋ ಅತ್ಯಂತ ಸಹಕಾರಿಯಾಗಲಿದ್ದು, 2025 ರೊಳಗಾಗಿ ಮೆಟ್ರೋ 2, 2A ಮತ್ತು 2B ಹಂತಗಳು ಬೆಂಗಳೂರು ನಾಗರಿಕರ ಉಪಯೋಗಕ್ಕೆ ಹಾಗೂ ಸಂಪೂರ್ಣ ಕಾರ್ಯಾಚರಣೆಗೆ ಸಿದ್ಧವಾಗಲಿವೆ ಎಂದು ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ತಿಳಿಸಿದರು.

    ಡೈರಿ ಸರ್ಕಲ್ ಬಳಿಯ ಟನಲ್ ಬೋರಿಂಗ್ ಮಷಿನ್ ಕಾಮಗಾರಿಯನ್ನು ಮೆಟ್ರೋ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಸಂಸದರು, ನಿಗದಿತ ಕಾಲಮಿತಿಗಿಂತಲೂ ಮುಂಚಿತವಾಗಿ ಮೆಟ್ರೋ ಕಾಮಗಾರಿ ಮುಗಿಯುವ ಕುರಿತು ವಿವರಿಸಿದರು.

    “ಬೆಂಗಳೂರು ನಗರ ಸ್ಟಾರ್ಟ್ ಅಪ್ ಗಳ ತವರು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಅವಿಷ್ಕಾರಹಾಗೂ ಇತರ ಕ್ಷೇತ್ರಗಳಲ್ಲಿ ವೇಗವಾಗಿ ಮುನ್ನುಗ್ಗುತ್ತಿದ್ದು ಜಾಗತಿಕ ಪ್ರಾಮುಖ್ಯತೆ ಹೊಂದಿರುವ ನಗರವಾಗಿದೆ. ನಗರದ ಸಂಚಾರ ದಟ್ಟಣೆಗೆ ಪರಿಹಾರವಾಗುವ ನಿಟ್ಟಿನಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯು ವೇಗವಾಗಿ ನಡೆಯುತ್ತಿರುವುದು ಅಭಿನಂಧನಾರ್ಹ. ಪ್ರಸ್ತುತ 56ಕಿಮೀ ಇರುವ ಮೆಟ್ರೋ ಮಾರ್ಗವು 2025ರೊಳಗಾಗಿ 175 ಕಿಮೀ ವರೆಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದ್ದು, ಇದರಿಂದ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಮಟ್ಟದಲ್ಲಿ ಸಹಕಾರಿಯಾಗಲಿದೆ.
    ಜಯದೇವ & ಸಿಲ್ಕ್ ಬೋರ್ಡ್ ನಿಲ್ದಾಣಗಳು ಡಬಲ್ ಎಲಿವೆಟೆಡ್ ಸ್ಟೇಷನ್ ಗಳಾಗಿರಲಿವೆ ಎಂದರು.

    ನಗರದ ಸಂಚಾರ ದಟ್ಟಣೆ ನಿರ್ವಹಣೆಗೆ ಮೆಟ್ರೋ ಅಧಿಕಾರಿಗಳು Comprehensive Mobility Plan ಅನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿರುವುದು ಶ್ಲಾಘನೀಯ.
    ಕಾಮಗಾರಿಗೆ ಅಗತ್ಯವಿರುವ ಶೇ. 99 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವುದಕ್ಕೆ ನೂತನ ಭೂಸ್ವಾಧೀನ ನೀತಿಯಲ್ಲಿ ತಂದಿರುವ ಬದಲಾವಣೆಗಳು ಕೂಡ ಕಾರಣವಾಗಿವೆ” ಎಂದು ತೇಜಸ್ವೀ ಸೂರ್ಯ ರವರು ವಿವರಿಸಿದರು.

    ಸೆಪ್ಟೆಂಬರ್ 2021 ರೊಳಗಾಗಿ ಕೇಂದ್ರ ಸರ್ಕಾರದ ‘ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್’ ಅನ್ನು ಮೆಟ್ರೋ ಸೇವೆಗಳಿಗೂ ಅಳವಡಿಸಲು ತೀರ್ಮಾನಿಸಿದ್ದು, ಈ ಕಾರ್ಡ್‌ ಅನ್ವಯ ದೇಶಾದ್ಯಂತ ಎಲ್ಲ ವಿಧದ ಸಾರಿಗೆ ಪ್ರಾಕಾರಗಳಲ್ಲಿ ಸಂಚಾರ ಮಾಡಬಹುದಾಗಿದೆ ಎಂದು ತಿಳಿಸಿದರು.

    ಸಧ್ಯದಲ್ಲೇ ಸಾರಿಗೆ ಸಚಿವರಾದ ಶ್ರೀ ರಾಮುಲು ರೊಂದಿಗೆ ಚರ್ಚಿಸಿ, ನಗರದ ಆಂತರಿಕ (ಒಳ) ಪ್ರದೇಶಗಳಿಂದ, ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್ ಗಳನ್ನು ಇನ್ನಷ್ಟು ಹೆಚ್ಚಿಸಿ, ಅತಿ ಹೆಚ್ಚು ಜನರು ಮೆಟ್ರೋ ಬಳಸುವ ನಿಟ್ಟಿನಲ್ಲಿ ಸಹಕಾರ ಒದಗಿಸುವಂತೆ ಕೋರಲಾಗುವುದು ಎಂದು ಸಂಸದರು ತಿಳಿಸಿದರು.

    ಮೆಟ್ರೋ ಕಾಮಗಾರಿಯ ಸಂದರ್ಭದಲ್ಲಿ ಸ್ಥಳಾಂತರಗೊಂಡಿರುವ ಮರಗಳ ಪರಿಹಾರವಾಗಿ 10 ಸಾವಿರಕ್ಕೂ ಅಧಿಕ ಮರಗಳನ್ನು ನೆಡಲು ನಮ್ಮ ಮೆಟ್ರೋ ಮುಂದೆಬಂದಿದ್ದು, ಸಾರ್ವಜನಿಕರನ್ನು ಸಹ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಂಸದರು ವಿವರಿಸಿದರು.

    error: Content is protected !!