ಎಂ.ವಿ. ಶಂಕರಾನಂದ
ಭಾರತೀಯ ಪರಂಪರೆಯಲ್ಲಿ ಸಾಮಾನ್ಯವಾಗಿ ಆಷಾಢದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲವಾದರೂ ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತ’ ಎಂದು ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆಪತಿ ಸಂಜೀವಿನಿ ವ್ರತ’ ಎಂಬ ಹೆಸರೂ ಇದೆ.
ಮದುವೆಯಾದ ಸ್ತ್ರೀಯರು ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ, ತಮ್ಮನ್ನು ದೀರ್ಘ ಸುಮಂಗಲಿಯಾಗಿ ಹರಸುವಂತೆ ಕೋರಿ, ಹಾಗೂ ಮದುವೆಯಾಗದ ಕನ್ಯೆಯರು ತಮಗೆ ಭೀಮನಂತ ಬಲಶಾಲಿ ಗಂಡ ಸಿಗಲಿ ಎಂಬ ಉದ್ದೇಶದಿಂದಲೂ ಶಿವನನ್ನು ಪೂಜಿಸುವ ಹಬ್ಬವೇ ಈ ಭೀಮನ ಅಮಾವಾಸ್ಯೆ.
ಜ್ಯೋತಿರ್ಭೀಮೇಶ್ವರ ವ್ರತ
ಇನ್ನೊಂದು ವಿಶೇಷವೇನೆಂದರೆ ಈದಿನ ಮದುವೆಯಾಗದ ಅಕ್ಕ ತಂಗಿಯರು ಕೂಡ ತಮ್ಮ ಅಣ್ಣತಮ್ಮಂದಿರಿಗೆ ಅವರ ಜೀವನದಲ್ಲಿ ಸುಖ ಶಾಂತಿ ಲಭಿಸಲೆಂದು ಪಾರ್ವತೀ ಪರಮೇಶ್ವರರಲ್ಲಿ ಬೇಡಿಕೊಳ್ಳುವ ಪದ್ಧತಿಯುಂಟು. ಇದರಿಂದ ಇದಕ್ಕೆ ನಾಗರ ಅಮಾವಾಸ್ಯೆ ಎಂದೂ ಹೆಸರಿದೆ. ಶಿವನನ್ನು ಜ್ಯೋತಿಯ ರೂಪದಲ್ಲಿ ಪೂಜಿಸುವುದರಿಂದ ಈ ವ್ರತಕ್ಕೆ ಜ್ಯೋತಿರ್ಭೀಮೇಶ್ವರ ವ್ರತ ಎಂದು ಹೆಸರು ಬಂದಿದೆ.
ಪುರಾಣದಲ್ಲಿರುವ ಕಥೆ
ಈ ಹಬ್ಬಕ್ಕೆ ಪತಿ ಸಂಜೀವಿನಿ ವ್ರತ ಎಂದು ಹೆಸರು ಬರಲು ಸ್ಕಂದ ಪುರಾಣದಲ್ಲಿ ಒಂದು ಕಥೆಯಿದೆ. ಹಿಂದೆ ರಾಜನೊಬ್ಬ ತನ್ನ ಮಗನಿಗೆ ವಿಜೃಂಭಣೆಯಿಂದ ಮದುವೆ ಮಾಡಬೇಕೆಂದು ನಿರ್ಧಾರ ಮಾಡಿರುತ್ತಾನೆ. ಆದರೆ ದುರಾದೃಷ್ಟದಿಂದ ಆ ರಾಜಕುಮಾರ ಅಕಾಲ ಮರಣ ಹೊಂದುತ್ತಾನೆ. ಇದರಿಂದ ದುಃಖಿತನಾದರೂ ಸಹ ಆ ರಾಜನು ತನ್ನ ಆಸೆಯಂತೆ ಮಗನ ಶವಕ್ಕೇ ಮದುವೆ ಮಾಡಲು ನಿಶ್ಚಯಿಸುತ್ತಾನೆ. ಆದರೆ ಶವದೊಂದಿಗೆ ವಿವಾಹವಾಗಲು ಯಾರು ಮುಂದೆ ಬರುತ್ತಾರೆ? ಅದಕ್ಕಾಗಿ ರಾಜ ಒಂದು ಆಮಿಷವನ್ನು ಒಡ್ಡುತ್ತಾನೆ. ಅದೇನೆಂದರೆ; ಯಾರು ತಮ್ಮ ಮಗಳನ್ನು ಸತ್ತಿರುವ ತನ್ನ ಮಗನೊಂದಿಗೆ ಮದುವೆ ಮಾಡಿಕೊಡುತ್ತಾರೋ ಅವರಿಗೆ ಅಪಾರ ಸಂಪತ್ತನ್ನು ಕೊಡುವುದಾಗಿ ಹೇಳಿ ಡಂಗೂರ ಹಾಕಿಸುತ್ತಾನೆ. ಆಸೆಬುರುಕನಾದ ಒಬ್ಬನು ಹಣಕ್ಕಾಗಿ ತನ್ನ ಮಗಳ ಮದುವೆಯನ್ನು ರಾಜಕುಮಾರನ ಶವದೊಂದಿಗೆ ನಡೆಸುತ್ತಾನೆ. ನಂತರ ಹಣವನ್ನು ತೆಗೆದುಕೊಂಡು ಅಲ್ಲಿಂದ ಹೊರಟು ಹೋಗುತ್ತಾನೆ. ಸುರಿಯುತ್ತಿದ್ದ ಮಳೆಯಲ್ಲಿ, ಶವವನ್ನೂ, ಶವವನ್ನು ವರಿಸಿದ ವಧುವನ್ನೂ ರಾಜಪರಿವಾರದವರು ನದೀ ತೀರದಲ್ಲಿ ಬಿಟ್ಟು ಹೋಗುತ್ತಾರೆ.
ಗಾಢಾಂಧಕಾರದಲ್ಲಿ ಪತಿಯ ಶವದ ಮುಂದೆ ಕುಳಿತು ರೋಧಿಸುತ್ತಿದ್ದ ಆ ವಧುವಿಗೆ ಅಂದು ಅಮಾವಾಸ್ಯೆ ಎಂದು ನೆನಪಾಗಿ ತನ್ನ ತಾಯಿ ಪ್ರತಿ ವರ್ಷವೂ ಆ ದಿನ ಶಿವನ ಪೂಜೆ ಮಾಡುತ್ತಿದ್ದುದು ನೆನಪಿಗೆ ಬಂದು, ಮರಳಿನಲ್ಲಿ ಶಿವಲಿಂಗ ಮಾಡಿ, ಮಣ್ಣಿನಲ್ಲಿ ಎರಡು ದೀಪಗಳನ್ನೂ ಮಾಡಿ ಪೂಜಿಸುತ್ತಾಳೆ. ಅವಳ ಭಕ್ತಿಗೆ ಮೆಚ್ಚಿದ ಶಿವ ಪಾರ್ವತಿಯರು ಪ್ರತ್ಯಕ್ಷರಾಗಿ ಅವಳು ಮಾಡಿದ ಭಂಢಾರವನ್ನು ಭೇದಿಸಿ, ವರವನ್ನು ಬೇಡು ಎಂದಾಗ, ಆಕೆ ತನ್ನ ಗಂಡನಿಗೆ ಜೀವವನ್ನು ಕೊಡುವಂತೆ ಕೇಳುತ್ತಾಳೆ. ಶಿವ ಪಾರ್ವತಿಯರು ಅವಳ ಗಂಡನಿಗೆ ಜೀವವನ್ನು ನೀಡುತ್ತಾರೆ. ಆ ದಂಪತಿಗೆ ರಾಜ್ಯವೂ ಪ್ರಾಪ್ತಿಯಾಗಿ ಸುಖವಾಗಿ ಜೀವಿಸುತ್ತಾರೆ. ಅಮಾವಾಸ್ಯೆಯ ದಿನ ಆಕೆ ತನ್ನ ಪತಿಯನ್ನು ಬದುಕಿಸಿಕೊಳ್ಳಲು ನಡೆಸಿದ ಪೂಜೆಯೇ ಜ್ಯೋತಿರ್ಭೀಮೇಶ್ವರ ವ್ರತ.
ಭೀಮನ ಅಮಾವಾಸ್ಯೆಯ ದಿನ ಹೆಣ್ಣು ಮಕ್ಕಳು ಮತ್ತು ಸುಮಂಗಲಿಯರು ಮಂಗಳ ಸ್ನಾನ ಮಾಡಿ, ಮಂಟಪ ನಿರ್ಮಿಸಿ, ಅದರಲ್ಲಿ ಧಾನ್ಯರಾಶಿ ಮಾಡಿ, ಅದರ ಮೇಲೆ ಗೋಧಿಹಿಟ್ಟಿನಿಂದ ಎರಡು ದೀಪವನ್ನು ಮಾಡಿ, ಹಚ್ಚುತ್ತಾರೆ. ಗೋಧಿಹಿಟ್ಟಿನಿಂದ ಮಾಡಿದ ಈ ದೀಪದ ಬೆಳಕು ಎಲ್ಲ ದುಷ್ಟ ಗ್ರಹಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ. ಕೆಮ್ಮಣ್ಣಿನಿಂದ ಮಾಡಿದ ಪಾರ್ವತಿ ಪರಮೇಶ್ವರರ ವಿಗ್ರಹವನ್ನು ಪೂಜೆ ಮಾಡುತ್ತಾರೆ. ಅಂದು ಹನಿ ನೀರು ಕೂಡ ಸೇವಿಸದೆ ಗೃಹಿಣಿಯರು ಕಟ್ಟಾ ಉಪವಾಸ ಆಚರಿಸುತ್ತಾರೆ.
ಆಷಾಢ ಆರಂಭವಾಗುತ್ತಿದ್ದಂತೆಯೇ ತವರಿನ ಹಾದಿ ತುಳಿವ ಹೊಸದಾಗಿ ಮದುವೆಯಾದ ಹೆಣ್ಣು ಭೀಮೇಶ್ವರನ ವ್ರತವನ್ನೇ ಕಾಯುತ್ತಿರುತ್ತಾಳೆ. ಅಂದು ತನ್ನ ಗಂಡ ಬರುವ ದಿನ. ಮರುದಿನ ಶ್ರಾವಣದ ಸಂಭ್ರಮ. ತಾನು ಗಂಡನ ಮನೆಯಲ್ಲಿ ಮುಂಬರುವ ಹಬ್ಬಗಳ ಸಿದ್ಧತೆಯಲ್ಲಿ ಕಳೆದು ಹೋಗಲಿದ್ದೇನೆ ಎನ್ನುವ ಯೋಚನೆ ಅವಳೆದೆಯಲ್ಲಿ ಖುಷಿಯನ್ನು ಕಟ್ಟಿಹಾಕುತ್ತದೆ. ಗಂಡನ ಮನೆಗೆ ಹೋಗುವ ಸಂಭ್ರಮದಲ್ಲಿ ಆಕೆಗೆ ಭೀಮನ ಉಪವಾಸದಂದು ಹೊಟ್ಟೆ ಚುರುಕ್ಕೆನ್ನುವುದೇ ಇಲ್ಲ.
ಭಂಡಾರ ಒಡೆಯುವ ಹಬ್ಬ
ಈ ದಿನದ ಮತ್ತೊಂದು ವಿಶೇಷತೆ ಎಂದರೆ ಭಂಡಾರ ಒಡೆಯುವುದು. ಗೋಧಿ ಅಥವಾ ಮೈದಾ ಹಿಟ್ಟಿನಲ್ಲಿ ಸಣ್ಣಗೆ ಚೌಕಾಕಾರದಲ್ಲಿ ಎರಡು ಬಟ್ಟಲುಗಳನ್ನು ಅಥವಾ ಸಿಹಿ ಇಲ್ಲದ ಕರಿದ ಕಡುಬುಗಳನ್ನು ಮಾಡಿ, ಒಂದರಲ್ಲಿ ಲಕ್ಷಿö್ಮÃ ಸ್ವರೂಪಿ ನಾಣ್ಯವನ್ನು ಹಾಕಿ, ಇನ್ನೊಂದನ್ನು ಖಾಲಿಬಿಟ್ಟು ಮುಚ್ಚಿಡುತ್ತಾರೆ. ಈ ಎರಡೂ ಭಂಡಾರಗಳನ್ನು ಮನೆಯ ಬಾಗಿಲ ಹೊಸ್ತಿಲ ಮೇಲೆ ಇಟ್ಟು, ಹೂವು, ಅರಿಸಿನ ಕುಂಕುಮಗಳಿಂದ ಪೂಜಿಸಿ, ಸೋದರರನ್ನು ಹೊಸ್ತಿಲ ಮೇಲೆ ಕುಳಿತು ತಮ್ಮ ಮೊಣಕೈಗಳಿಂದ ಒಡೆಯುವಂತೆ ಅಕ್ಕತಂಗಿಯರು ಕೇಳಿಕೊಳ್ಳುತ್ತಾರೆ. ತಮಾಷೆಗಾಗಿ ಅವರು ಖಾಲಿಯಿರುವ ಭಂಡಾರವನ್ನು ಒಡೆಯುವಂತೆ ಹೇಳುತ್ತಾರೆ. ಹೀಗೆ ಒಬ್ಬರನ್ನೊಬ್ಬರು ತಮಾಷೆ ಮಾಡಿಕೊಳ್ಳುತ್ತಾ ಭಂಡಾರವನ್ನು ಒಡೆಯುವ ಕಾರ್ಯವನ್ನು ಆಚರಿಸುತ್ತಾರೆ. ನಂತರ ಅಣ್ಣನ ಆಶೀರ್ವಾದವನ್ನು ಬೇಡುವ ಸೋದರಿಯರು ಫಲತಾಂಬೂಲ ನೀಡುತ್ತಾರೆ.
ಈ ವ್ರತವನ್ನು ಅವಿವಾಹಿತ ಸ್ತ್ರೀಯರು, ವಿವಾಹಿತೆಯರು ಆಚರಿಸಬಹುದು. ಒಮ್ಮೆ ವ್ರತ ಕೈಗೊಂಡರೆ ಐದು, ಒಂಬತ್ತು ಅಥವಾ ಹದಿನಾರು ವರ್ಷ ಸಂಪೂರ್ಣಗೊಳಿಸಿ, ಉದ್ಯಾಪನೆ ಮಾಡಿ, ಎಲ್ಲರಿಗೂ ಸಿಹಿಯೂಟ ಹಾಕಿಸಬೇಕು ಎಂದು ಸ್ಕಂದ ಪುರಾಣ ಹೇಳುತ್ತದೆ.

ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.



ಭೀಮನ ಅಮಾವಾಸ್ಯದ ವಿಶೇಷತೆ ಯನ್ನು.ಶಂಕರಾನಂದ ಅವರು ಚೆನ್ನಾಗಿ ತಿಳು ಹಿಸಿದ್ದಾರೆ. ಇಂದಿನ ದಿನಕ್ಕೆ ಇದು ಅಗತ್ಯವಾಗಿತ್ತು. 🙏🙏