23.1 C
Karnataka
Sunday, May 24, 2026
    Home Blog Page 71

    ಜಾವೆಲಿನ್ ಥ್ರೋನಲ್ಲಿ ಸ್ವರ್ಣ ಪದಕ ಗೆದ್ದ ನೀರಜ್ ಚೋಪ್ರಾ

    Tokyo AUG 7

    ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಶನಿವಾರದಂದು ಸುವರ್ಣ ಇತಿಹಾಸ ಬರೆಯಿತು.

    ಜಾವಲಿನ್‌ ಪಟು ಹಾಗೂ ನಮ್ಮ ಹೆಮ್ಮೆಯ ಸೇನೆಯಲ್ಲಿ ಸುಬೇದಾರ್‌ ಆಗಿರುವ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದಿದ್ದು, ಜಾವಲಿನ್‌ ಥ್ರೋ ಫೈನಲ್‌ ಸ್ಪರ್ಧೆಯಲ್ಲಿ 85.30 ಮೀಟರ್ ಎಸೆದು ಬಂಗಾರದ ಪದಕ ಗೆದ್ದುಕೊಂಡು ಭಾರತದ ಕೀರ್ತಿ ಪಾತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದರು.

    ಚೋಪ್ರಾ ಗೆಲುವಿನ ಹಾದಿ ರೋಚಕವಾಗಿತ್ತು. ಮೊದಲ ಪ್ರಯತ್ನದಲ್ಲಿ ಅವರು 87.03 ಮೀಟರ್‌ ದೂರ ಎಸೆದು ಪ್ರಥಮ ಸುತ್ತಿನಲ್ಲೇ ಮೊದಲಿಗರಾಗಿ ಹೊರಹೊಮ್ಮಿದರಲ್ಲದೆ, ಜರ್ಮನಿಯ ಜೂಲಿಯನ್ ವೇಬರ್ ಅವರು 85.30 ಮೀಟರ್ ದೂರ ಎಸೆಯುವ ಮೂಲಕ ದ್ವಿತೀಯ ಸ್ಥಾನಕ್ಕಷ ಬಂದು ನಿಂತರು.

    ವಿಶೇಷವೆಂದರೆ, ಪ್ರಥಮ ಸುತ್ತಿನಲ್ಲಿ ಯಾವ ಜಾವಲಿನ್‌ ಪಟು ಕೂಡ 85 ಮೀಟರ್‌ಗಿಂತ ಹೆಚ್ಚು ದೂರ ಜಾವಲಿನ್ ಎಸೆಯಲು ಸಾಧ್ಯವಾಗಲಿಲ್ಲ. ಅಲ್ಲಿಯೇ ನೀರಜ್‌ ತಮ್ಮ ಶಕ್ತಿ ಏನೆಂಬುದನ್ನು ತೋರಿಸಿಕೊಂಡಿದ್ದರು.

    ಎರಡನೇ ಪ್ರಯತ್ನದಲ್ಲೂ ನೀರಜ್‌ ಮತ್ತಷ್ಟು ಬಲವಾಗಿ ಜಾವೆಲಿನ್‌ ಥ್ರೋ ಮಾಡಿದರು. ಈ ಪ್ರಯತ್ನದಲ್ಲಿ ಅವರು 87.58 ಮೀಟರ್ ದೂರ ಜಾವಲಿನ್ ಎಸೆದರು. ಉಳಿದಂತೆ ಈ ಪ್ರಯತ್ನದಲ್ಲಿ ವೇಬರ್‌ 77.90 ಮೀಟರ್ ದೂರವಷ್ಟೇ ಎಸೆದು ಹಿಂದೆ ಬಿದ್ದರು.

    ನಾಲ್ಕನೇ ಪ್ರಯತ್ನಕ್ಕೆ ಬರುವಷ್ಟರಲ್ಲಿ ಇನ್ನಷ್ಟು ಹಿಂದೆ ಬಿದ್ದಂತೆ ಕಂಡ ನೀರಜ್‌ ಗೆರೆ ದಾಟಿಬಿಟ್ಟು ಪೌಲ್‌ ಮಾಡಿಕೊಂಡರಲ್ಲೆ, ಅಂತಿಮ ಸುತ್ತಿನಲ್ಲಿ 80 ಮೀಟರ್ ಮೀರಲು ಅವರಿಗೆ ಆಗಲಿಲ್ಲ.

    ಗಮನಾರ್ಹ ಅಂಶವೆಂದರೆ, ಜಾವೆಲಿನ್‌ ಥ್ರೋ ವಿಭಾಗದಲ್ಲಿ ಜಗತ್ತಿನ ನಂ.1 ಸ್ಥಾನದಲ್ಲಿದ್ದ  ಜೊಹಾನಸ್‌ ವೆಟ್ಟರ್ ಅವರು ಫೈನಲ್‌ 8ರ ಪಟ್ಟಿಗೇ ಬರಲು ಶಾಧ್ಯವಾಗಲೇ ಇಲ್ಲ.

    ವೈಯಕ್ತಿಕ 96.29 ಮೀಟರ್ ದೂರ ಎಸೆದು ದಾಖಲೆ ಮಾಡಿದ್ದ ಅವರು, ನೀರಸ ಪ್ರದರ್ಶನ ತೋರಿದರು.2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ ವಿಭಾಗದಲ್ಲಿ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಮಹೋನ್ನತ ಸಾಧನೆಯನ್ನು ನೀರಜ್‌ ಮಾಡಿದ್ದಾರೆ.

    ಪ್ರಧಾನಿ ಅಭಿನಂದನೆ

    ಟೋಕಿಯೊ ಒಲಿಂಪಿಕ್ಸ್ 2020ʼನಲ್ಲಿ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ನೀರಜ್ ಅವರು ಅದಮ್ಯ ಉತ್ಸಾಹದಿಂದ ಆಡಿದ್ದಾರೆ ಮತ್ತು ಅಪ್ರತಿಮ ದಿಟ್ಟತನ ತೋರಿದ್ದಾರೆ ಎಂದೂ ಮೋದಿ ಹೇಳಿದ್ದಾರೆ. 

    ಈ ಕುರಿತು ಟ್ವೀಟ್ ಮಾಡಿರುವ ಅವರು,”ಟೋಕಿಯೊದಲ್ಲಿ ಹೊಸ ಇತಿಹಾಸ ಸೃಷ್ಟಿಸಲಾಗಿದೆ! ನೀರಜ್ ಚೋಪ್ರಾ @Neeraj_chopra1 ಅವರ ಇಂದಿನ ಸಾಧನೆ ಇನ್ನು ಎಂದೆಂದಿಗೂ ನೆನಪಿನಲ್ಲಿ ಚಿರಸ್ಥಾಯಿಗಲಿದೆ. ಯುವ ನೀರಜ್ ಅವರದ್ದು ಅಸಾಧಾರಣ ಪ್ರದರ್ಶನ. ಅವರು ಅದಮ್ಯ ಉತ್ಸಾಹದಿಂದ ಆಡಿದರು ಮತ್ತು ಅಪ್ರತಿಮ ದಿಟ್ಟತನ ತೋರಿಸಿದರು. ಚಿನ್ನ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. #ಟೋಕಿಯೋ 2020,” ಎಂದಿದ್ದಾರೆ.

    ಈ ಬಾರಿಯು ಸರಳ ದಸರ ಆಚರಣೆಗೆ ಚಿಂತನೆ

    MYSURU AUG 7

    ಕೊರೊನಾ ಹಿನ್ನೆಲೆಯಲ್ಲಿ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿಯೂ ಸರಳವಾಗಿ ಆಚರಿಸಲು ಚಿಂತಿಸಲಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

    ಹೆಚ್.ಡಿ ಕೋಟೆ ತಾಲ್ಲೂಕು ಬಾವಲಿ ಚೆಕ್‌ಪೋಸ್ಟ್‌ ಪರಿಶೀಲನೆ ವೇಳೆ ದಸರಾ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು,
    ಸರಳ ದಸರ ಆಚರಣೆಗೆ ರೂಪರೇಷೆಗಳನ್ನು ಸಿದ್ದಪಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ರೂಪರೇಷೆ ಸಿದ್ದವಾದ ನಂತರ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

    ಕಳೆದ ವರ್ಷ ದಸರಾ ಆಚರಣೆಗೆ 10 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಆ ಪೈಕಿ 7.50 ಕೋಟಿ ಅನುದಾನ ಉಳಿದಿದೆ. ಈ ವರ್ಷದ ದಸರಾ ಆಚರಣೆಗೆ ಸರ್ಕಾರದ ಅನುಮೋದನೆ ಪಡೆದು ಆ ಉಳಿಕೆ ಅನುದಾನ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

    ಮೈಸೂರು ದಸರಾ ಮಹೋತ್ಸವವನ್ನು ಯಾವುದೇ ಕಾರಣಕ್ಕು ನಿಲ್ಲಿಸುವುದಿಲ್ಲ. ಈ ವರ್ಷವೂ ದಸರಾ ಆಚರಣೆ ಮಾಡಲಾಗುತ್ತದೆ ಎಂದರು

    ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಈ ವರ್ಷದಿಂದಲೇ ಜಾರಿ

    BENGALURU AUG 7

    ನೂತನ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ, ಐಟ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಬಹುನಿರೀಕ್ಷಿತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2021-22ನೇ ಸಾಲಿನಿಂದಲೇ ಜಾರಿ ಮಾಡುವ ಆದೇಶಕ್ಕೆ ಸಹಿ ಹಾಕಿದರು.

    ಇದು ದೇಶದಲ್ಲೇ ಕರ್ನಾಟಕ ರಾಜ್ಯವು ಮೊದಲನೆಯದಾಗಿ ಅನುಷ್ಠಾನಗೊಳಿಸುತ್ತಿರುವುದಾಗಿದೆ.

    ತಮ್ಮ ಗೃಹ ಕಚೇರಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರನಾಯಕ್‌ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ಮುಂತಾದ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಅವರು ಈ ಆದೇಶಕ್ಕೆ ಅಸ್ತು ಎಂದರು.

    ಅಲ್ಲದೆ, ಮಲ್ಲೇಶ್ವರದ 13ನೇ ಕ್ರಾಸ್‌ನಲ್ಲಿರುವ ಪಿಯುಸಿ ಕಾಲೇಜು ಆವರಣದಲ್ಲಿ ನೂತನ ಮಹಿಳಾ ಪದವಿ ಕಾಲೇಜು ಆರಂಭಿಸುವ ಮತ್ತೊಂದು ಆದೇಶಕ್ಕೂ ಡಾ.ಅಶ್ವತ್ಥನಾರಾಯಣ ಸಹಿ ಹಾಕಿದರು.

    ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಅವರು, “ಉನ್ನತ ಶಿಕ್ಷಣ ಕೇತ್ರದಲ್ಲಿ ಈ ಹಿಂದೆ ಕೈಗೊಳ್ಳಲಾಗಿದ್ದ ಎಲ್ಲ ಸುಧಾರಣಾ ಕ್ರಮಗಳು ಮುಂದುವರಿಯುತ್ತವೆ ಹಾಗೂ ವೇಗವಾಗಿ ಅನುಷ್ಠಾನಕ್ಕೆ ಬರುತ್ತಿವೆ. ಅದರಲ್ಲಿ ಪ್ರಮುಖವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಆದೇಶ ಹೊರಡಿಸಲಾಗಿದೆ” ಎಂದರು.

    ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಅವುಗಳ ಬಗ್ಗೆ ಡಾ.ಅಶ್ವತ್ಥನಾರಾಯಣ ಅವರು ವಿವರಿಸಿದ್ದು ಹೀಗೆ;

    ಪ್ರಸಕ್ತ ವರ್ಷಕ್ಕೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಿ.ಎ. ಅಥವಾ ಬಿ.ಎಸ್ಸಿ ಪದವಿ ಅಧ್ಯಯನಕ್ಕೆ ಆಯಾ ಕಾಲೇಜುಗಳಲ್ಲಿ ಲಭ್ಯವಿರುವ ಎರಡು ವಿಷಯಗಳನ್ನು (Discipline Core)  ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೂರನೇ ವರ್ಷದ ಆರಂಭದಲ್ಲಿ ಒಂದು ವಿಷಯವನ್ನು ಮೇಜರ್‌ ಆಗಿಯೂ, ಇನ್ನೊಂದು ವಿಷಯವನ್ನು ಮೈನರ್‌ ವಿಷಯವನ್ನಾಗಿಯೂ ಅಥವಾ ಎರಡೂ ವಿಷಯಗಳನ್ನು ಮೇಜರ್‌ ಆಗಿ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲು ಅವಕಾಶವಿದೆ.

    ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಎರಡು ವಿಷಯಗಳ (Discipline Core) ಜತೆಗೆ, ಕನ್ನಡ ಮತ್ತು ಇನ್ನೊಂದು ಭಾಷಾ ವಿಷಯವನ್ನು, ಪ್ರೋಗ್ರಾಮ್‌ ವಿನ್ಯಾಸಕ್ಕೆ (Curriculum  Structure) ಅನುಗುಣವಾಗಿ ಮುಕ್ತ ಆಯ್ಕೆಗಳು (Open Electives) ಮತ್ತು ಬಹುಶಿಸ್ತೀಯ ಆಯ್ಕೆಗಳನ್ನು (Discipline Electives) ಮಾಡಿಕೊಳ್ಳಬೇಕು. ಪಿಯುಸಿ ಅಥವಾ 10+2 ಹಂತದಲ್ಲಿ ಕನ್ನಡ ಕಲಿಯದವರಿಗೆ ಅಥವಾ ಕನ್ನಡ ಮಾತೃ ಭಾಷೆಯಲ್ಲದವರಿಗೆ ಕನ್ನಡದ ಬೇರೆ ಪಠ್ಯಕ್ರಮ ರೂಪಿಸಿ ಬೋಧಿಸಲು ಅವಕಾಶ ನೀಡಲಾಗಿದ್ದು, ಮಾತೃಭಾಷೆ ಕಲಿಕೆಗೆ ಹೆಚ್ಚು ಮಹತ್ವ ನೀಡಲಾಗಿದೆ.

    ವಿಷಯಾಧಾರಿತ ಪದವಿ ಅಧ್ಯಯನಗಳಿಗೆ (B.Com, BCA, BBA, BVA, BPA, etc.) ಸಂಬಂಧಪಟ್ಟ ಹಾಗೆ ವಿಷಯಗಳನ್ನು ಬಹಶಿಸ್ತೀಯ ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ, ಅವರು ಕನ್ನಡ ಹಾಗೂ ಮತ್ತೊಂದು ಭಾಷೆ ಮತ್ತು ಪಠ್ಯಕ್ರಮಕ್ಕೆ ಅನುಗುಣವಾಗಿ ಮುಕ್ತ ಆಯ್ಕೆಗಳನ್ನು ಮತ್ತು ಬಹಶಿಸ್ತೀಯ ಆಯ್ಕೆಗಳನ್ನು ಮಾಡಿಕೊಳ್ಳಬೇಕು.

    ವಿದ್ಯಾರ್ಥಿಯು ಪ್ರಥಮ ವರ್ಷದಲ್ಲಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ 5ನೇ ಹಂತದ (National Skills Qualifications Framework Level 5) ನಿಗಧಿತ ಪಠ್ಯವನ್ನು ಅಧ್ಯಯನ ಮಾಡಿ, ಅವಶ್ಯಕ ಅಂಕಗಳನ್ನು ಗಳಿಸಿ ಕಾರಣಾಂತರಗಳಿಂದ ಅಧ್ಯಯನದಿಂದ ನಿರ್ಗಮಿಸಿದರೆ ಪ್ರಮಾಣ ಪತ್ರವನ್ನು ನೀಡಬೇಕು.

    ವಿದ್ಯಾರ್ಥಿಯು ಎರಡನೇ ವರ್ಷದ ಅಧ್ಯಯನವನ್ನು ಮುಂದುವರೆಸಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ 6ನೇ ಹಂತದ (National Skills Qualifications Framework Level 6) ನಿಗಧಿತ ಪಠ್ಯವನ್ನು ಅಧ್ಯಯನ ಮಾಡಿ ಅವಶ್ಯಕ ಅಂಕಗಳನ್ನು ಗಳಿಸಿ ಕಾರಣಾಂತರಗಳಿಂದ ಅಧ್ಯಯನದಿಂದ ನಿರ್ಗಮಿಸಿದರೆ ಡಿಪ್ಲೋಮಾ ನೀಡಬೇಕು.

    ವಿದ್ಯಾರ್ಥಿಯು ಮೂರನೇ ವರ್ಷದ ಅಧ್ಯಯನವನ್ನು ಮುಂದುವರೆಸಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ 3ನೇ ಹಂತದ (National Skills Qualifications Framework Level 7) ನಿಗದಿತ ಪಠ್ಯವನ್ನು ಅಧ್ಯಯನ ಮಾಡಿ ಅವಶ್ಯಕ ಅಂಕಗಳನ್ನು ಗಳಿಸಿದರೆ ಪದವಿ ನೀಡುವುದು.

    ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡುತ್ತಿರುವ ಮಹಾವಿದ್ಯಾಲಯದಲ್ಲಿ ನಾಲ್ಕನೇ ವರ್ಷದ ಅಧ್ಯಯನ ಲಭ್ಯವಿದ್ದಲ್ಲಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನ 8ನೇ ಹಂತದ (National Skills Qualifications Framework Level 8) ಅವರು ಆಯ್ಕೆ ಮಾಡಿದ ಐಚ್ಛಿಕ ವಿಷಯಗಳ ಅಧ್ಯಯನ ಮುಂದುವರೆಸಿ ಅಧ್ಯಯನ ಪೂರ್ಣಗೊಳಿಸಿದರೆ ಸ್ನಾತಕ ಹಾನರ್ಸ್‍ ಪದವಿ ನೀಡಲಾಗುವುದು. ನಾಲ್ಕನೇ ವರ್ಷದಲ್ಲಿ ಸಂಶೋಧನೆಯು ಅಧ್ಯಯನದ ಭಾಗವಾದರೆ, ಅಂತಹ ಸ್ನಾತಕ ಹಾನರ್ಸ್‍ ಪದವೀಧರರು ನೇರವಾಗಿ ಡಾಕ್ಟರೇಟ್‍ (Ph.D) ಪದವಿ ಅಧ್ಯಯನಕ್ಕೆ ಸೇರಲು ಅರ್ಹರು.

    ಒಂದು ವೇಳೆ ವಿದ್ಯಾರ್ಥಿಯು ಅಧ್ಯಯನ ಮಾಡುತ್ತಿರುವ ಮಹಾವಿದ್ಯಾಲಯದಲ್ಲಿ ಸ್ನಾತಕ ಹಾನರ್ಸ್‌ ಪದವಿ ತರಗತಿ ಲಭ್ಯವಿಲ್ಲದಿದ್ದರೆ, ವಿದ್ಯಾರ್ಥಿಯು ನಾಲ್ಕನೇ ವರ್ಷದ ಸ್ನಾತಕ ಹಾನರ್ಸ್‌ ಪದವಿಗೆ ಬೇರೊಂದು ಮಹಾವಿದ್ಯಾಲಯ ಸೇರಲು ಅವಕಾಶವಿದೆ.(ಈ ಕೆಳಗಿರುವ ಸರ್ಕಾರದ ಆದೇಶ ಪ್ರತಿಯನ್ನು ಸ್ಕ್ರಾಲ್ ಮಾಡಿ ಓದಿ)

    ಮಲ್ಲೇಶ್ವರದಲ್ಲಿ ಮಹಿಳಾ ಪದವಿ ಕಾಲೇಜು

    ಮಲ್ಲೇಶ್ವರದ 13ನೇ ಕ್ರಾಸ್‌ನಲ್ಲಿರುವ ಬಾಲಕಿಯರ ಪಿಯುಸಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರಿಗಾಗಿ ಹೊಸ ಪದವಿ ಕಾಲೇಜು ಆರಂಭಕ್ಕೂ ಇಂದೇ ಆದೇಶ ಹೊರಡಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆ ಇಲ್ಲದೆಯೇ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಆಗಿರುವುದರಿಂದ ಹೆಚ್ಚು ಪದವಿ ಕಾಲೇಜುಗಳ ಅಗತ್ಯವಿದೆ. ಹೀಗಾಗಿ ಮಲ್ಲೇಶ್ವರದಲ್ಲಿ ಹೊಸ ಡಿಗ್ರಿ ಕಾಲೇಜು ಆರಂಭಕ್ಕೆ ಕ್ರಮ ವಹಿಸಲಾಗಿದೆ ಎಂದರು ಅವರು.

    ಈ ಕಾಲೇಜನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಅಡಿಯಲ್ಲಿ ಆರಂಭಿಸಲಾಗುತ್ತಿದ್ದು, ಅಲ್ಲಿನ ಪಿಯುಸಿ ಕಾಲೇಜಿನಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿನಿಯರಿಗೆ ಅದೇ ಕ್ಯಾಂಪಸ್‌ನಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ಅನುಕೂಲವಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ರಾಜ್ಯ ಮಂತ್ರಿಮಂಡಲ: ಯಾರಿಗೆ ಯಾವ ಖಾತೆ?

    BENGALURU AUG 7

    ಖಾತೆ ಬಿಕ್ಕಟ್ಟಿಗೆ ಕೊನೆಗೂ ಪರಿಹಾರ ಸಿಕ್ಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಯ ಮೇರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.

    ಖಾತೆಗಾಗಿ ಕಸರತ್ತು; ರಾತ್ರಿ ವೇಳೆಗೆ ಹಂಚಿಕೆ ಸಾಧ್ಯತೆ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದ ಸಚಿವರಿಗೆ ಇಂದು ಖಾತೆಗಳನ್ನು ಹಂಚಿಕೆ ಮಾಡಲಿದ್ದಾರೆ. ರಾತ್ರಿಯೊಳಗೆ ಖಾತೆ ಹಂಚಿಕೆ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ.

    ವಿಚಿತ್ರವೆಂದರೆ ಸಂಪುಟಕ್ಕೆ ಸೇರಲು ತೀವ್ರ ಒದ್ದಾಟ ನಡೆಸಿ ಕೊನೆಗೂ ಪ್ರಮಾಣ ಸ್ವೀಕಾರ ಮಾಡಿದ್ದ ಸಚಿವರು, ಈಗ ತಮಗೆ ಬೇಕಾದ ಹಾಗೂ ತಮ್ಮ ಹಿತಾಸಕ್ತಿ ಅಡಗಿರುವ ಖಾತೆಗಳನ್ನು ಪಡೆಯಲು ಇನ್ನಿಲ್ಲದ ಪ್ರಭಾವ ಬಳಸುತ್ತಿದ್ದಾರೆ. ಇದನ್ನು ಕಂಡು ಸಿಎಂ ಬೊಮ್ಮಾಯಿ ಅವರಿಗೆ ರೇಜಿಗೆ ಉಂಟಾಗಿದೆ ಎಂದ ಮಾಹಿತಿ ಸಿಕ್ಕಿದೆ.

    ಕೆಲ ಸಚಿವರು ತಮಗೆ ಇಂಥದ್ದೇ ನಿರ್ದಿಷ್ಟ ಖಾತೆ ಬೇಕು ಎಂದು ಪಟ್ಟು ಹಾಕಿದರೆ, ಇನ್ನು ಕೆಲವರು ಯಡಿಯೂರಪ್ಪ ಸಂಪುಟದಲ್ಲಿ ನೀಡಲಾಗಿದ್ದ ಖಾತೆಯನ್ನೇ ನೀಡಿ ಎಂದು ಬೊಮ್ಮಾಯಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇನ್ನು ಕೆಲವರಂತೂ ಹೈಕಮಾಂಡ್‌ ಬಳಿ, ಅದರಲ್ಲೂ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಬಳಿ ಲಾಬಿ ಮಾಡುತ್ತಿದ್ದಾರೆಂದು ಗೊತ್ತಾಗಿದೆ.

    ಸಂಪುಟಕ್ಕೆ ಸೇರುವ ತನಕ ಒಂದು ಲೆಕ್ಕ, ಸಂಪುಟ ಸೇರಿದ ಮೇಲೆ ಇನ್ನೊಂದು ಲೆಕ್ಕ ಎನ್ನುವಂತೆ ಪ್ರಭಾವೀ ಹಾಗೂ ಹೆಚ್ಚು ಅನುದಾನವಿರುವ ಖಾತೆಗಳ ಮೇಲೆ ಕಣ್ಣು ಹಾಕಿರುವ ಸಚಿವರು, ಶತಾಯಗತಾಯ ತಮಗೆ ʼಲಾಭʼ ತಂದುಕೊಡುವ ಖಾತೆಗಳನ್ನು ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ.

    ಮುಖ್ಯವಾಗಿ ಬಿಜೆಪಿಯಲ್ಲಿ ಆರಂಭದಿಂದಲೂ ಸಚಿವರಾಗಿದ್ದವರು ಹಾಗೂ ಅನ್ಯ ಪಕ್ಷಗಳಿಂದ ವಲಸೆ ಬಂದು ಸಚಿವರಾದವರು ಮಹತ್ವದ ಖಾತೆಗಳಿಗೆ ಪಟ್ಟು ಹಿಡಿದಿದ್ದು, ಬೊಮ್ಮಾಯಿ ಅವರು ಇವರೆಲ್ಲರಿಗೂ ʼನೋಡೋಣʼ ಎನ್ನುವ ಒಂದು ಪದದ ಭರವಸೆಯನ್ನಷ್ಟೇ ನೀಡಿದ್ದಾರೆ. ಹೀಗಾಗಿ ಪಟ್ಟಿ ಹೊರಬರುವುದನ್ನೇ ಎಲ್ಲರೂ ನೋಡುತ್ತಿದ್ದಾರೆ.

    ಇದೇ ವೇಳೆ ಖಾತೆಗಳ ಹಂಚಿಕೆ ಬಗ್ಗೆ ಹೈಕಮಾಂಡ್‌ ಕೆಲ ನಿರ್ದಿಷ್ಟ ಸೂಚನೆಗಳನ್ನು ಬೊಮ್ಮಾಯಿ ಅವರಿಗೆ ನೀಡಿದೆ. ಆ ಮಾರ್ಗಸೂಚಿ ಪ್ರಕಾರವೇ ಸಿಎಂ ಖಾತೆಗಳನ್ನು ಹಂಚಿಕೆ ಮಾಡುವುದು ಖಚಿತ.

    ಸಂಘ ಪರಿವಾರದ ನಾಯಕರು ಕೂಡ ಖಾತೆ ಹಂಚಿಕೆಯ ಬಗ್ಗೆ ಕೆಲ ಸೂಚನೆಗಳನ್ನು ನೀಡಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿಗಳು ಸಚಿವರ ಒತ್ತಡಕ್ಕೆ ಮಣೆ ಹಾಕುವುದು ಕಡಿಮೆ. ಇದರ ಜತೆಗೆ, ಕೆಲ ಸಚಿವರಂತೂ ಯಡಿಯೂರಪ್ಪ ಅವರ ಮೂಲಕ ಸಿಎಂ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

    ಹೈಪ್ರೊಫೈಲ್‌ ಖಾತೆಗಳು, ಕೆಲ ನೀತಿ ಆಧಾರಿತ ಖಾತೆಗಳನ್ನು ಸಂಘ ಪರಿವಾರದ ಹಿನ್ನೆಲೆಯುಳ್ಳ ಬಿಜೆಪಿ ಮೂಲ ನಿವಾಸಿಗಳಿಗೇ ಕೊಡಬೇಕು ಎನ್ನುವ ಚರ್ಚೆ ನಡೆದಿದೆ.

    ಹೈಪ್ರೊಫೈಲ್‌ ಖಾತೆಗಳು

    ಗೃಹ, ಹಣಕಾಸು, ಜಲಸಂಪನ್ಮೂಲ, ಲೋಕೋಪಯೋಗಿ, ಕೃಷಿ, ಸಹಕಾರ, ಗ್ರಾಮೀಣಾಭಿವೃದ್ಧಿ, ಇಂಧನ, ಬೃಹತ್‌ ಕೈಗಾರಿಕೆ, ನಗರಾಭಿವೃದ್ಧಿ, ಬೃಹತ್‌ ಕೈಗಾರಿಕೆ ಇಲಾಖೆಗಳೆಲ್ಲ ಮೂಲ ಬಿಜೆಪಿಗರ ಪಾಲಾಗಲಿವೆ. ಅಲ್ಲದೆ, ಸಂಘ ಪರಿವಾರದ ಆಸಕ್ತಿ ಇರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಉನ್ನತ ಶಿಕ್ಷಣ, ಸಮಾಜ ಕಲ್ಯಾಣ, ಮುಜರಾಯಿ ಖಾತೆಗಳು ಕೂಡ ಬಿಜೆಪಿ ಮೂಲ ನಿವಾಸಿಗಳಿಗೇ ಕೊಡುವ ಸಾಧ್ಯತೆ ಇದೆ.

    ಉಳಿದಂತೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಉನ್ನತ ಶಿಕ್ಷಣ ಖಾತೆಗಳು ಬಿಜೆಪಿ ಮೂಲದವರಿಗೆ ಕೊಡುವ ಉದ್ದೇಶ ಸಿಎಂ ಅವರಿಗಿದೆ ಎನ್ನಲಾಗಿದೆ.

    ಅಬಕಾರಿ, ಯುವಜನ ಸಬಲೀಕರಣ, ಸಾರ್ವಜನಕ ಸಂಪರ್ಕ, ವಕ್ಫ್‌, ಹಿಂದುಳಿದ ವರ್ಗಗಳ ಕಲ್ಯಾಣ, ಕಾರ್ಮಿಕ, ಜವಳಿ, ರೇಷ್ಮೆ, ತೋಟಗಾರಿಕೆಯಂಥ ಖಾತೆಗಳನ್ನು ವಲಸಿಗರಿಗೆ ನೀಡಲು ಸಿಎಂ ಉದ್ದೇಶಿಸಿದ್ದಾರೆಂಬ ಮಾಹಿತಿ ಸಿಕ್ಕಿದೆ. ಈ ಮಧ್ಯೆ ಪ್ರಭಾವಿ ಖಾತೆಗಳನ್ನು ಪಡೆಯಲು ವಲಸಿಗ ಸಚಿವರು ನಿನ್ನೆಯಿಂದಲೂ ಮುಖ್ಯಮಂತ್ರಿ ಸುತ್ತಲೇ ಗಿರಕಿ ಹೊಡೆಯುತ್ತಿದ್ದಾರೆ.

    ಹಳೆಯ ಖಾತೆಗಳ ಮೇಲೆ ವಲಸಿಗರ ಕಣ್ಣು

    ಯಡಿಯೂರಪ್ಪ ಸಂಪುಟದಲ್ಲಿ ಎಸ್‌.ಟಿ.ಸೋಮಶೇಖರ್‌-ಸಹಕಾರ, ಭೈರತಿ ಬಸವರಾಜ್‌-ನಗರಾಭಿವೃದ್ಧಿ (ಬೆಂಗಳೂರು) ಹೊರತುಪಡಿಸಿ, ಡಾ.ಕೆ.ಸುಧಾಕರ್-ಆರೋಗ್ಯ ಮತ್ತು ವೈದ್ಯಶಿಕ್ಷಣ, ಬಿಸಿ ಪಾಟೀಲ್-ಕೃಷಿ, ಎಂಟಿಬಿ ನಾಗರಾಜ್‌-ಪೌರಾಡಳಿತ, ಶಿವರಾಮ್‌ ಹೆಬ್ಬಾರ್-ಕಾರ್ಮಿಕ, ರಮೇಶ್‌ ಜಾರಕಿಹೊಳಿ-ಜಲಸಂಪನ್ಮೂಲ (ಇವರು ರಾಜೀನಾಮೆ ನೀಡಿದ್ದರು.), ಆನಂದ ಸಿಂಗ್-ಪ್ರವಾಸೋದ್ಯಮ, ಕೆ.ಗೋಪಾಲಯ್ಯ-ಅಬಕಾರಿ, ನಾರಾಯಣ ಗೌಡ-ಯುವಜನ ಸಬಲೀಕರಣ ಖಾತೆಗಳನ್ನು ಹೊಂದಿದ್ದರು. ಈ ಸಂಪುಟದಲ್ಲಿಯೂ ಮುಖ್ಯವಾಗಿ ಸೋಮಶೇಖರ್‌, ಭೈರತಿ ಬಸವರಾಜ್‌, ಡಾ.ಸುಧಾಕರ್‌, ಬಿಸಿ ಪಾಟೀಲ್‌ ಅದೇ ಖಾತೆಗಳನ್ನು ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆನ್ನಲಾಗಿದೆ.

    ಬೆಂಗಳೂರು ಅಭಿವೃದ್ಧಿ ಬೇಕೆಂದ ಅಶೋಕ್

    ಹಿಂದೆ ಕಂದಾಯ, ಅದಕ್ಕೂ ಹಿಂದೆ ಗೃಹ ಖಾತೆಗಳನ್ನು ನಿರ್ವಹಿಸಿದ್ದ ಹಿರಿಯ ಸಚಿವ ಆರ್.‌ಅಶೋಕ್‌, ಈ ಬಾರಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕೆಂದು ಪಟ್ಟು ಹಿಡಿದ್ದಾರೆ. ಆದರೆ, ಸಂಘ ಪರಿವಾರ ಈ ಖಾತೆಯನ್ನು ಡಾ.ಅಶ್ವತ್ಥನಾರಾಯಣ ಅವರಿಗೆ ನೀಡಿ ಎಂದು ಮುಖ್ಯಮಂತ್ರಿಗೆ ಸಲಹೆ ಮಾಡಿದೆ ಎನ್ನಲಾಗಿದೆ. ಆದರೆ, ಯಡಿಯೂರಪ್ಪ ಅವರೂ ಅಶೋಕ್‌ಗೆ ಬೆಂಗಳೂರು ನಗರಾಭಿವೃದ್ಧಿ ಕೊಡುವಂತೆ ಒತ್ತಡ ಹೇರಿದ್ದಾರೆನ್ನಲಾಗಿದೆ. ಆದರೆ, ಅಂತಿಮವಾಗಿ ಬೊಮ್ಮಾಯಿ ಅವರು ಸಂಘ ಪರಿವಾರ ಅಥವಾ ಯಡಿಯೂರಪ್ಪ ಇಬ್ಬರಲ್ಲಿ ಯಾರ ಮಾತು ಕೇಳುತ್ತಾರೆ ಎನ್ನುವದನ್ನು ಕಾದು ನೋಡಬೇಕಿದೆ.

    ಉಳಿದಂತೆ ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಕೇಳಿದ್ದು, ಅದು ತಪ್ಪಿದರೆ ಇಂಧನ ಕೊಡಿ, ಅದೂ ಬಿಟ್ಟರೆ ಜಲಸಂಪನ್ಮೂಲ ಕೊಡಿ ಎಂದು ಕೇಳಿದ್ದಾರೆಂದು ಗೊತ್ತಾಗಿದೆ.

    ಆಗಸ್ಟ್ 23 ರಿಂದ 9,10 ಮತ್ತು ಪಿಯು ತರಗತಿ ಆರಂಭ

    BENGALURU AUG 6

    ಆಗಸ್ಟ್ 23 ರಿಂದ 9, 10 ಮತ್ತು ಪಿಯುಸಿ ತರಗತಿಯನ್ನು ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ನಡೆದ ಸಭೆಯು ತೀರ್ಮಾನಿಸಿತು.

    ಶಾಲೆಗಳನ್ನು ಎರಡು ಹಂತದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಮೊದಲನೇ ಹಂತದಲ್ಲಿ ನಿಬಂಧನೆಗಳಿಗೊಳಪಟ್ಟಂತೆ, ಮೊದಲು 9, 10 ಮತ್ತು ಪಿಯುಸಿ ತರಗತಿಯನ್ನು ಪ್ರಾರಂಭಿಸಿ ಇನ್ನುಳಿದ ತರಗತಿಗಳ ಬಗ್ಗೆ ಮುಂದೆ ತೀರ್ಮಾನಿಸಲಾಗವುದು ಎಂದು ಸಭೆಯ ನಂತರ ಮುಖ್ಯಮಂತ್ರಿಗಳು ತಿಳಿಸಿದರು. ಶಾಲೆಗಳ ಆರಂಭದ ಬಗ್ಗೆ ಮಾರ್ಗಸೂಚಿಗಳ -SOP -ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಲಾಗುವುದು ಎಂದೂ ಅವರು ಹೇಳಿದರು.

    ಸಭೆ ತೆಗೆದುಕೊಂಡ ಪ್ರಮುಖ ತೀರ್ಮಾನಗಳು

    1. ಗಡಿ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ತೀರ್ಮಾನ.

    2. ಇತರ ಜಿಲ್ಲೆಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳಲು ತೀರ್ಮಾನ.

    4. ಕೋವಿಡ್ ತೀವ್ರತೆ ನೋಡಿಕೊಂಡು ಆಗಸ್ಟ್ ತಿಂಗಳಾಂತ್ಯಕ್ಕೆ ಉಳಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ತರಗತಿ ಶಾಲೆ ಆರಂಭಿಸಲು ತೀರ್ಮಾನ ತೆಗೆದುಕೊಳ್ಳಲಾಗುವುದು

    5. ರಾಜ್ಯದಲ್ಲಿ ರಾತ್ರಿ ಕರ್ಫ್ಯೂ (ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ) ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಸೂಚಿಸಲಾಯಿತು.

    ಮಸಾಲೆ ದೋಸೆ ಬೊಂಬಾಟ್ ಗುರು ಎಂದ ಬ್ರಿಟಿಷ್ ಹೈ ಕಮಿಷನರ್

    BENGALURU AUG 5

    ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಇವತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

    ಮಾತು ಕತೆಯ ನಂತರ ತಮ್ಮ ಭೇಟಿಯ ಬಗ್ಗೆ ಟ್ವೀಟ್ ಮಾಡಿರುವ ಅವರು ನಮಸ್ಕಾರ ಮುಖ್ಯಮಂತ್ರಿ ಅವರೆ ಎಂದು ಕನ್ನಡದಲ್ಲಿಯೇ ತಿಳಿಸಿದ್ದಾರೆ. ಇದನ್ನು ಅನೇಕ ಟ್ವಿಟ್ಟಿಗರು ಸ್ವಾಗತಿಸಿದ್ದಾರೆ.

    ಮಸಾಲೆ ದೋಸೆಯ ಸವಿ

    ಇದಕ್ಕೂ ಮೊದಲು ಮಸಾಲೆ ದೋಸೆಯನ್ನು ಅವರು ಸ್ಪೂನ್ ,ಪೋರ್ಕಗಳನ್ನು ಬಿಟ್ಟು ಬರಿ ಕೈನಲ್ಲೇ ಸವಿದಿದ್ದಾರೆ. ನಿನ್ನೆ ಪೋರ್ಕ್ ಬಳಸಿ ದೋಸೆ ಸವಿದಿದ್ದ ಅವರು ಸಕ್ಕತ್ತಾಗಿದೆ ಎಂದು ಟ್ವೀಟ್ ಮಾಡಿದ್ದು ಅಲ್ಲದೆ South India; how do I eat tomorrow’s dosa? ಎಂದು ಪೋಲ್ ಕೂಡ ಮಾಡಿದ್ದರು. ಅದರಲ್ಲಿ ಶೇಕಡ 92 ರಷ್ಟು ಮಂದಿ ಕೈ ನಲ್ಲಿ ತಿನ್ನುವುದನ್ನು ರೆಕ್ಮೆಂಡ್ ಮಾಡಿದ್ದರು. ಅದಕ್ಕಾಗಿ ಇಂದು ಚಮಚದ ನೆರವಿಲ್ಲದೆ ಕೈ ಬಳಸಿಯೇ ದೋಸೆ ಸವಿದ ಅವರು It tastes better with the hand ಎಂದು ಹೇಳಿದ್ದೂ ಅಲ್ಲದೆ ಮಸಾಲೆ ದೋಸೆ ಬೊಂಬಾಟ್ ಗುರು ಎಂದು ಕನ್ನಡದಲ್ಲೇ ಟ್ವಿೀಟ್ ಮಾಡಿದ್ದಾರೆ.

    ರಾಜಕೀಯ ಪ್ರೇರಿತ ದಾಳಿ ಎಂದ ಸಿದ್ಧರಾಮಯ್ಯಗೆ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದ ಬಿಜೆಪಿ

    BENGALURU AUG 5

    ಶಾಸಕ ಜಮೀರ್ ಅಹಮದ್ ಖಾನ್ ಅವರ ಮನೆ ಮೇಲೆ ಇಡಿ ನಡೆಸಿರುವ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಕರೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.

    ಐಎಂಎ ಪ್ರಕರಣವನ್ನು ತನಿಖೆ ನಡೆಸಿದ್ದು ನಿಮ್ಮದೇ ಸರಕಾರ, ಆಗ ನಿಮ್ಮದೇ ಪಕ್ಷದ ರೋಶನ್ ಬೇಗ್ ಅವರ ಬಂಧನವಾಗಿತ್ತು ಆಗೆಲ್ಲಾ ಮೌನವಾಗಿದ್ದ ನೀವು ಜಮೀರ್ ವಿಷಯದಲ್ಲೇಕೆ ಸಿಡಿಯುತ್ತೀರಿ ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.

    ಕೊಳ್ಳೇಗಾಲದ ಶಾಸಕ ಎನ್. ಮಹೇಶ್ ಬಿಜೆಪಿ ಸೇರ್ಪಡೆ

    BENGALURU AUG 5

    ತುಳಿತಕ್ಕೆ ಒಳಗಾದವರಿಗೆ ಸ್ವಾಭಿಮಾನದ ಬದುಕು ಸಿಗಲಿದೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಆಗಲಿದೆ ಎಂಬ ವಿಶ್ವಾಸದೊಂದಿಗೆ ಕೊಳ್ಳೇಗಾಲದ ಶಾಸಕ ಮಹೇಶ್ ಅವರು ಬಿಜೆಪಿ ಸೇರಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿಯ ಆಶಯವನ್ನು ರಾಜ್ಯ ಸರಕಾರ ಈಡೇರಿಸಲಿದೆ. ಆ ಭಾಗದಲ್ಲಿ ಸಾಮರಸ್ಯ, ಸಹೋದರತ್ವ ಭಾವನೆ ಇರುವ ಸಾಮಾಜಿಕ ನೆಲೆಗಟ್ಟು ಸ್ಥಾಪನೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

    ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ನಡೆದ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಭಾರತೀಯ ಜನತಾ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮಹೇಶ್ ಅವರು ಪಕ್ಷದ ಜೊತೆ ಮತ್ತು ಯಡಿಯೂರಪ್ಪ ಅವರ ಜೊತೆಗೆ ಹೊಂದಿರುವ ಸಂಬಂಧ ಮತ್ತು ಅನುಭವ ಇವತ್ತು ಅವರ ಈ ನಿರ್ಣಯಕ್ಕೆ ಪೂರಕವಾಗಿದೆ. ಅವರನ್ನು ಪಕ್ಷಕ್ಕೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೊಂದು ಉತ್ತಮ ಬೆಳವಣಿಗೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.

    ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಎನ್.ಮಹೇಶ್ ಅವರ ಸೇರ್ಪಡೆಯ ಶುಭ ಕ್ಷಣ ಈಗ ಬಂದಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಬರುವುದರ ಮುನ್ಸೂಚನೆ ಇದಾಗಿದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ದಲಿತ ಸಮೂಹ ಬಿಜೆಪಿ ಪರವಾಗಿದೆ ಎಂಬ ಸಂದೇಶ ಪ್ರಧಾನಿಯವರಾದ ನರೇಂದ್ರ ಮೋದಿ ಅವರನ್ನು ತಲುಪಲು ನಮ್ಮ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಅವರು ತಿಳಿಸಿದರು. ಮಹೇಶ್ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದರು.

    ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗೆ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕನಿಷ್ಠ 135 ಸ್ಥಾನ ಗೆದ್ದು ಸ್ವಂತ ಬಲದಿಂದ ಅಧಿಕಾರಕ್ಕೆ ಬರಬೇಕೆಂಬ ಸಂಕಲ್ಪ ನಮ್ಮದಾಗಿದೆ. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು. ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡೋಣ ಎಂದು ತಿಳಿಸಿದರು.

    ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿ, ಬಿಎಸ್‍ಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಶಾಸಕ ಎನ್. ಮಹೇಶ್ ಅವರು ಈಗ ಬಿಜೆಪಿ ಸೇರಿದ್ದಾರೆ. ನರೇಂದ್ರ ಮೋದಿಯವರ ಆಡಳಿತ, ರಾಜ್ಯದಲ್ಲಿ ಯಡಿಯೂರಪ್ಪ ಅವರ ಆಡಳಿತ, ಬಿಜೆಪಿ ಚಿಂತನೆ, ವಿಚಾರಧಾರೆಗಳನ್ನು ಮೆಚ್ಚಿ ಬಿಜೆಪಿಗೆ ಸೇರಿದ್ದು ಅವರಿಗೆ ಸ್ವಾಗತ ಎಂದರು.

    ಅವರ ಮೂಲಕ ಬಿಜೆಪಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಆಗಬೇಕು. ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಬೇರೆ ಬೇರೆ ಪಕ್ಷಗಳ ಹತ್ತಾರು ಜನರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ಏಳು ವರ್ಷಗಳ ಅಭಿವೃದ್ಧಿ ಕಾರ್ಯ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಜನಪರ ಆಡಳಿತವನ್ನು ಮೆಚ್ಚಿಕೊಂಡು ಅನೇಕರು ಬಿಜೆಪಿ ಸೇರಲು ಉತ್ಸುಕತೆ ತೋರಿದ್ದಾರೆ ಎಂದು ತಿಳಿಸಿದರು.

    ಶಾಸಕ ಎನ್.ಮಹೇಶ್ ಅವರು ಮಾತನಾಡಿ, ರಾಷ್ಟ್ರದ 130 ಕೋಟಿ ಜನರ ಅಭಿವೃದ್ಧಿಗಾಗಿ ಬಿಜೆಪಿ ಪ್ರಯತ್ನಿಸುತ್ತಿದೆ. ಆ ವಿಚಾರವನ್ನು ಗಮನಿಸಿ ನಾನು ಬಿಜೆಪಿ ಸೇರುತ್ತಿದ್ದೇನೆ. ಇದಕ್ಕೆ ಮತ್ತೊಂದು ಪ್ರೇರಕ ಶಕ್ತಿ ಡಾ. ಬಿ.ಆರ್.ಅಂಬೇಡ್ಕರ್ ಅವರು. ಬಿಜೆಪಿ ಈಗ ಪ್ರಬುದ್ಧ ಮನಸ್ಥಿತಿಯೊಂದಿಗೆ ರಾಷ್ಟ್ರವನ್ನು ಸಮಗ್ರ ಅಭಿವೃದ್ಧಿ ಕಡೆ ಒಯ್ಯುತ್ತಿದೆ. ಅದೂ ನನ್ನ ಬಿಜೆಪಿ ಸೇರ್ಪಡೆಗೆ ಕಾರಣ ಎಂದರು.
    ಮಾಜಿ ಸಿಎಂ ಯಡಿಯೂರಪ್ಪ ಅವರ ನನಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನನಗೆ ಹಲವಾರು ವರ್ಷಗಳಿಂದ ಪರಿಚಿತರು. ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಕಟೀಲ್ ಮತ್ತು ಪಕ್ಷದ ಎಲ್ಲಾ ಮುಖಂಡರ ಜೊತೆ ಸೇರಿ ಪಕ್ಷದ ಸಂಘಟನೆಗೆ ಶ್ರಮಿಸಲಿದ್ದೇನೆ ಎಂದು ಅವರು ತಿಳಿಸಿದರು.

    ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್ ರವಿಕುಮಾರ್,ಸಿದ್ದರಾಜು, ಪಕ್ಷದ ರಾಜ್ಯ ಉಪಾಧ್ಯಕ್ಷರಾದ ವಿಜಯೇಂದ್ರ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಆರ್ ಅಶೋಕ್, ಸಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್, ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ, ಪಕ್ಷದ ಮುಖಂಡರು, ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಒಲಿಂಪಿಕ್ಸ್ ಹಾಕಿ ಗೆಲವಿನ ಹಿಂದಿದೆ ನವೀನ ತಂತ್ರ

    ಟೋಕಿಯೊ ಒಲಿಂಪಿಕ್ಸ್ ನ ಪುರುಷರ ಹಾಕಿ ಪಂದ್ಯಾಟದಲ್ಲಿ ಭಾರತ ಗುರುವಾರ ಕಂಚಿನ ಪದಕ ಸಂಪಾದಿಸುವದರೊಂದಿಗೆ 41 ವರ್ಷಗಳ ವನವಾಸ ಅಂತ್ಯಗೊಂಡಿದೆ.

    ಒಂದು ಕಾಲದಲ್ಲಿ ಒಲಿಂಪಿಕ್ಸ್ ನಲ್ಲಿ ಹಾಕಿಯ ಕಣ್ಮಣಿ ಎನಿಸಿಕೊಂಡಿದ್ದ ಭಾರತ ತಂಡ ಕಳೆದ ನಲವತ್ತೊಂದು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಪದಕದ ಬಳಿ ಸುಳಿದಿರಲಿಲ್ಲ. 1980ರಲ್ಲಿ ಯುಎಸ್ ಎಸ್ ಆರ್ (ಈಗ ಅಸ್ತಿತ್ವದಲ್ಲಿ ಇಲ್ಲ) ನಲ್ಲಿ ನಡೆದಿದ್ದ ಒಲಿಂಪಿಕ್ಸ್ ನಲ್ಲಿ ಭಾರತ ತಂಡ ಚಿನ್ನದ ಪದಕ ಸಂಪಾದಿಸಿತ್ತು. ಆದಾಗಿ 41 ವರ್ಷಗಳ ಬರಗಾಲದ ನಂತರ ಮತ್ತೆ ಪದಕ ಪ್ರಾಪ್ತಿಯಾಗಿದೆ.

    ಆಗ 1980ರಲ್ಲಿ ಜನತಾ ಪಕ್ಷದ ಸರಕಾರ ಪತನವಾಗಿ ಇಂದಿರಾ ಗಾಂಧೀ ಮತ್ತೆ ಅಧಿಕಾರಕ್ಕೆ ಬಂದಿದ್ದರು. ಹಲವು ದೇಶಗಳು ಈ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿರಲಿಲ್ಲ ಇದಕ್ಕೆ ಕಾರಣ ಅಮೆರಿಕ ಮತ್ತು ಯುಎಸ್ ಎಸ್ ಆರ್ ನಡುವಿನ ಶೀತಲ ಸಮರ. ಆದರೆ ಇಂದಿರಾ ಸರಕಾರ ಪಂದ್ಯದಲ್ಲಿ ಭಾಗವಹಿಸುವ ನಿರ್ಧಾರ ತೆಗೆದು ಕೊಂಡಿತ್ತು.

    ಈ ಬಾರಿ ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಪಡೆಯಲು ಪ್ರಮುಖವಾಗಿ ಕಾರಣರಾದವರು ಒಡಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್. ಅವರು ಅತ್ಯಂತ ಮುತುವರ್ಜಿ ವಹಿಸಿ ಈ ಬಾರಿ ಭಾರತ ತಂಡವನ್ನು ಪ್ರತಿನಿಧಿಸುವ ಹಾಕಿ ಇಂಡಿಯಾಕ್ಕೆ ಸಕಲ ನೆರವನ್ನು ನೀಡಿ ಪ್ರೋತ್ಸಾಹಿಸಿದ್ದರು.

    ಇದಕ್ಕೆ ಪ್ರಮುಖ ಕಾರಣ ನವೀನ್ ಸ್ವತಃ ಹಾಕಿ ಆಟಗಾರ. ಅವರು ಡೂನ್ ಸ್ಕೂಲ್ ಲ್ಲಿ ಓದುತ್ತಿರುವಾಗ ಅಲ್ಲಿನ ಪ್ರಮುಖ ಹಾಕಿ ಆಟಗಾರರಾಗಿದ್ದರು. 2018ರಲ್ಲಿ ಹಾಕಿ ಇಂಡಿಯಾದ ಪ್ರಾಯೋಜಕತ್ವ ವಹಿಸಿದ್ದ ಸಹರಾ ಸಂಸ್ಥೆ ಅದರಿಂದ ಹಿಂದೆ ಸರಿಯಿತು. ಮತ್ತಾವ ಸಂಸ್ಥೆಯೂ ಪ್ರಾಯೋಜಕತ್ವಕ್ಕೆ ಮುಂದೆ ಬರಲಿಲ್ಲ. ಈ ಸಮಯದಲ್ಲಿ ಒಡಿಸ್ಸಾ ಸರಕಾರ ಭಾರತ ಹಾಕಿ ಸಂಸ್ಥೆಗೆ 100 ಕೋಟಿ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿ ಪ್ರಾಯೋಜಕತ್ವ ವಹಿಸಿಕೊಂಡಿತು. ಹಾಕಿ ಇಂಡಿಯಾ ದೊಂದಿಗಿನ ಒಡಿಸ್ಸಾ ಸರಕಾರದ ಪ್ರಾಯೋಜಕತ್ವದ ಒಪ್ಪಂದ 2023 ರವರೆಗೂ ಮುಂದುವರಿಯಲಿದೆ.

    ಇಲ್ಲೂ ಒಂದು ಆಸಕ್ತಿದಾಯಕ ರಾಜಕೀಯ ಸಂಗತಿಯೂ ಇದೆ. 1980ರಲ್ಲಿ ಭಾರತ ಹಾಕಿ ತಂಡ ಚಿನ್ನದ ಪದಕ ಗೆದ್ದಾಗ ಒಡಿಸ್ಸಾದ ಮುಖ್ಯಮಂತ್ರಿ ಆಗಿದ್ದವರು ಜಾನಕಿ ವಲ್ಲಭ ಪಟ್ನಾಯಕ್. ಅವರು ಸುದೀರ್ಘ ಅವಧಿಯ ಒರಿಸ್ಸಾ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದರು. ಇದೀಗ ನವೀನ್ ಪಟ್ನಾಯಕ್ ಆ ದಾಖಲೆಯನ್ನು ಮುರಿದ ಸಂದರ್ಭದಲ್ಲೇ ಭಾರತ ತಂಡ ಒಲಿಂಪಿಕ್ಸ್ ನಲ್ಲಿ ಪದಕ ಸಂಪಾದಿಸಿದೆ.

    ಪ್ರಧಾನ ಮಂತ್ರಿ ನರೇಂದ್ರ ಮೋದಿ, ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಆನೇಕ ಗಣ್ಯರು ಹಾಕಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    error: Content is protected !!