ಸುಮಾವೀಣಾ
ವಿಧಿ ಬರೆದ ಲಿಪಿ ಜಲ ಲಿಪಿಯೇ- ಪ್ರಸ್ತುತ ಮಾತು ನಾಗಚಂದ್ರ ಕವಿಯ ‘ರಾಮಚಂದ್ರ ಚರಿತ ಪುರಾಣ’ದಿಂದ ಆರಿಸಲಾಗಿದೆ.
ಸೀತೆಯ ಕಾರಣದಿಂದ ದಶರಥನ ಮಗನಿಂದ ರಾವಣನ ಸಾವು ಸಂಭವಿಸುತ್ತದೆ ಎಂಬ ವಿಷಯ ತಿಳಿದ ಬಳಿಕ ಪಾಪಕರ್ಮವೆಂದು ತಿಳಿದಿದ್ದರೂ ಕೂಡ ವಿಭೀಷಣ ಮುಂದೆ ತನ್ನ ಅಣ್ಣನಿಗೆ ಆಗಬಹುದಾದ ತೊಡಕನ್ನು ನಿವಾರಿಸಲು ಸಾಕಷ್ಟು ಪೂರ್ವಭಾವಿಯಾಗಿ ಉಪ್ಪರಿಗೆಯ ಮೇಲೆ ಮಲಗಿದ್ದ ದಶರಥನ ತಲೆ ತೆಗೆಯಲು ಹೋಗುತ್ತಾನೆ. ವಿಭೀಷಣ ಆಕ್ರಮಣ ಮಾಡುವ ವಿಚಾರವನ್ನು ನಾರದರಿಂದ ಮೊದಲೆ ತಿಳಿದಿದ್ದ ದಶರಥ ತನ್ನದೇ ಅರಗಿನ ವಿಗ್ರಹ ಮಾಡಿ ಉಪ್ಪರಿಗೆಯಲ್ಲಿ ಇರಿಸಿರುತ್ತಾನೆ. ಯಾವುದು ಸತ್ಯ ಯಾವುದು ಮಿಥ್ಯ ಎಂದು ತಿಳಿಯದ ವಿಭೀಷಣ ಅರಗಿನ ವಿಗ್ರಹದ ತಲೆ ತೆಗೆದು ಸಂಭ್ರಮಿಸುತ್ತಾನೆ. ಆ ಸಂದರ್ಭದಲ್ಲಿ ಕವಿ ನಾಗಚಂದ್ರ ಯಾರಿಂದಲೇ ಆಗಲಿ ವಿಧಿಯನ್ನು ಮಾತ್ರ ಬದಲಾಯಿಸಲು ಸಾಧ್ಯವಿಲ್ಲ. ಎಂಬುದನ್ನು ಹೇಳಿದ್ದಾರೆ.
ಈ ಭೂಮಿಯ ಮೇಲೆ ನಡೆಯುವ ಕಾರ್ಯಗಳನ್ನೆಲ್ಲಾ ಒಂದಿಲ್ಲೊಂದು ರೀತಿಯಲ್ಲಿ ಯಾವುದೋ ಒಂದು ಬಂಧವೊಂದು ನಿಯಂತ್ರಿಸುತ್ತಿರುತ್ತದೆ. “ವಿಧಿ ಬರೆದ ಲಿಪಿ ಜಲ ಲಿಪಿಯೇ” ಎಂಬೀ ವಾಕ್ಯದ ಮೂಲಕ ಎಲ್ಲವೂ ಪೂರ್ವ ನಿರ್ಧರಿತ ಎಂದೇ ವೇದ್ಯವಾಗುತ್ತದೆ. ನೀರಿನ ಮೇಲೆ ಲಿಪಿಯನ್ನು ಬರೆಯಲು ಸಾಧ್ಯವಿಲ್ಲ. ಹಾಗೊಂದುವೇಳೆ ಬರೆಯ ಹೊರಟರೂ ಸಾಧ್ಯವಾಗುವುದಿಲ್ಲ ಆದರೆ ಹಣೆ ಬರಹವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂಬ ಭಾವ ಇಲ್ಲಿದೆ.
ಕನ್ನಡದ ಆದಿಕವಿ ಪಂಪನೂ ಕೂಡ ಕರ್ಣನ ಕುರಿತು ಹೇಳುವಾಗ ಬಿಧಿ ಸಮಕಟ್ಟಿಕೊಟ್ಟೊಡೆ ಎಡೆಯೊಳ್ ಕುಡಿಸಲ್ ಕಿಡಿಸಲ್ ಸಮರ್ಥರಾರ್” ಎಂಬ ಮಾತನ್ನು ಹೇಳುತ್ತಾನೆ. ಅಂದರೆ ದುರದೃಷ್ಟವೋ ಅದೃಷ್ಟವೋ ಅದನ್ನು ಅನುಭವಿಸಲೇಬೇಕು ಇದರ ನಡುವೆ ವಿಧಿ ಲಿಖಿತಕ್ಕೆ ಇನ್ನಷ್ಟು ಒಳಿತು ಕೆಡುಕುಗಳನ್ನು ಕೂಡಿಸಲು,ಕಳೆಯಲು ಸಾಧ್ಯವಾಗುವುದಿಲ್ಲ ಎಂದೇ ಆಗುತ್ತದೆ. ಇವುಗಳು ಕಾವ್ಯಭಾಗದಲ್ಲಿ ಬಂದಿರುವ ಮಾತುಗಳು.
ಆದರೆ ಆಧುನಿಕ ದಿನಮಾನಗಳಲ್ಲಿ ನಾವು ಅನಿಷ್ಟಕ್ಕೆಲ್ಲಾ ಶನೀಶ್ವರನೆ ಹೊಣೆ ಎಂಬಂತೆ ಎಲ್ಲವನ್ನು ‘ವಿಧಿ’ ಎಂದು ತಿಳಿದು ಕೈಕಟ್ಟಿ ಕುಳಿತು ಅಸಹಾಯಕರಾಗುವ ಬದಲು ನಿರಂತರ ಪ್ರಯತ್ನ ಹಾಗು ಶ್ರಮಪಟ್ಟರೆ ಅವುಗಳೇ ಖಂಡಿತವಾಗಿಯೂ ನಮ್ಮ ಕೈ ಹಿಡಿಯುತ್ತವೆ ಎನ್ನಬಹುದು.

ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.


