22.9 C
Karnataka
Sunday, May 24, 2026
    Home Blog Page 69

    ಸರಕಾರಿ ಸಭೆ-ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ಶಾಲು ನಿಷೇಧ

    BENGALURU AUG 10

    ಸಭೆಗಳಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವುದನ್ನು ನಿಷೇಧಿಸಿ, ಶೀಘ್ರವೇ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಗೆ ಆಗಮಿಸಿದ ಮುಖ್ಯಮಂತ್ರಿಗಳು, ಹೂಗುಚ್ಛ ಸ್ವೀಕರಿಸಲು ನಿರಾಕರಿಸಿದರು. ಇದು ಅನವಶ್ಯಕ ವೆಚ್ಚ. ಸಭೆಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವ ಅಗತ್ಯವಿಲ್ಲ. ಇನ್ನು ಮುಂದೆ ಆ ಸಂಪ್ರದಾಯ ಬೇಡ ಎಂದು ಅವರು ತಿಳಿಸಿದರು.

    ಆದೇಶ ಪ್ರಕಟ

    ಸಿಎಂ ಈ ಆದೇಶವನ್ನು ಮೌಖಿಕವಾಗಿ ಹೇಳಿದ ತಕ್ಷಣ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಸರ್ಕಾರಿ ಆದೇಶ ಜಾರಿ ಮಾಡಿದರು.

    ಇನ್ನು ಮುಂದೆ ಹೂ ಗುಚ್ಚದ ಬದಲಿಗೆ ಕನ್ನಡ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಹೃದ್ರೋಗದ ನಡುವೆಯೂ 625ಕ್ಕೆ 625 ಅಂಕ ಗಳಿಸಿದ ಬಾಲಕಿಗೆ ನೆರವಿನ ಹಸ್ತ ಚಾಚಿದ ಸಚಿವ ಕಾರಜೋಳ

    BAGALKOTA AUG 9

    2020-21ನೇ ಸಾಲಿನ sslc ಪರೀಕ್ಷೆಯಲ್ಲಿ ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾದ ದುರ್ಗಾದೇವಿ ಹೈಸ್ಕೂಲಿನ ಗಂಗಮ್ಮ ಬಸಪ್ಪ ಹುಡೇದ ಎಂಬ ವಿದ್ಯಾರ್ಥಿನಿ 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.

    ಈ ಸುದ್ದಿ ತಮಗೆ ಗೊತ್ತಾಗುತ್ತಿದ್ದಂತೆ ಸಂತಸಗೊಂಡು ಆ ವಿದ್ಯಾರ್ಥಿಯನ್ನು ಅಭಿನಂದಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಂತಸದ ಬೆನ್ನಲ್ಲೇ ತೀವ್ರ ಬೇಸರಕ್ಕೆ ಗುರಿಯಾದ ಪ್ರಸಂಗವೂ ನಡೆಯಿತು.

    ಕಾರಣ ಇಷ್ಟೇ; ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಜಿಲ್ಲೆಯ ಹೆಮ್ಮೆಗೆ ಗರಿ ಮೂಡಿಸಿದ ಆ ಬಾಲಕಿಗೆ ಹೃದಯ ಸಂಬಂಧಿ ರೋಗವಿರುವುದು ಮಾಧ್ಯಮ ಪ್ರತಿನಿಧಿಯೊಬ್ಬರ ಮೂಲಕ ತಿಳಿದು ತೀವ್ರ ದಿಗ್ಭ್ರಮೆಗೊಂಡ ಸಚಿವರು, ಕೂಡಲೇ ಬಾಲಕಿಯ ನೆರವಿಗೆ ಧಾವಿಸಿದ್ದಾರೆ

    ಅವರ ಪೋಷಕರೊಂದಿಗೆ ಮೊಬೈಲ್‌ ಮೂಲಕ ಮಾತನಾಡಿದ ಕಾರಜೋಳರು, ಬಾಲಕಿಗೆ ಹೃದಯ ಸಂಬಂಧಿ ರೋಗ, ಉಸಿರಾಟದ ತೊಂದರೆ ಇರುವುದನ್ನು ಧೃಡಪಡಿಸಿಕೊಂಡು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕರೆ‌ ಮಾಡಿ ಮಾತನಾಡಿದರು. ತಕ್ಷಣವೇ ಬಾಲಕಿಯನ್ನು ತಪಾಸಣೆಗೊಳಪಡಿಸಿ ಚಿಕಿತ್ಸೆ ನೀಡಿ ಹೆಚ್ವಿನ ಚಿಕಿತ್ಸೆಯ ಅಗತ್ಯವಿದ್ದರೆ ತಡ ಮಾಡದೇ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಬಾಲಕಿಯ ಪೋಷಕರ ಜತೆ ಮಾತನಾಡಿದ ಕಾರಜೋಳರು, “ನಿಮ್ಮ ಮಗಳು ಬುದ್ಧಿವಂತೆ ಇದಾಳ. ಆಕೆ 625ಕ್ಕೆ 625 ಅಂಕ ಪಡೆದದ್ದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ಆಕೆಯ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಡಿ. ನಾವಿದ್ದೇವೆ. ನಾನು ಈಗಾಗಲೇ ಡಿಎಚ್‌ಓ ಜತೆ ಮಾತನಾಡಿದ್ದೇನೆ. ಅವರು ನಾಳೆ ಬೆಳಗ್ಗೆ ನಿಮ್ಮ ಮನೆಗೆ ಬರಲಿದ್ದಾರೆ, ಅಥವಾ ಹಿಂದೆ ಚಿಕಿತ್ಸೆ ಕೊಡಿಸಿದ ಕಾಗದ ಪತ್ರಗಳನ್ನು ತೆಗೆದುಕೊಂಡು ನೀವೆ ನಾಳೆಯೇ ಜಿಲ್ಲಾಸ್ಪತ್ರೆಗೆ ಹೋಗಿ ಡಿಎಚ್‌ಓ ಅವರನ್ನು ಭೇಟಿ ಮಾಡಿ. ಅಲ್ಲಿ ತಪಾಸಣೆ ಮಾಡುವವರಿದ್ದಾರೆ. ನಂತರ ಬೆಂಗಳೂರಿನಲ್ಲಿ ಒಳ್ಳೆಯ ಚಿಕಿತ್ಸೆ ಮಾಡಿಸೋಣ” ಎಂದು ಹೇಳಿದ್ದಾರೆ.

    ಬೆಂಗಳೂರು ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎನ್.‌ಮಂಜುನಾಥ್‌ ಅವರ ಜತೆ ಮಾತನಾಡಿ ನಿಮ್ಮ ಮಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿಸುವುದಾಗಿ ಅವರು ಪೋಷಕರಿಗೆ ತಿಳಿಸಿದ್ದಾರೆ.

    ಬಳಿಕ, ಬಾಲಕಿ ಗಂಗಮ್ಮ ಜತೆಯೂ ಮಾತನಾಡಿದ ಸಚಿವರು, “ಒಳ್ಳೆಯ ಅಂಕ ತೆಗೆದು ಸಾಧನೆ ಮಾಡಿದ್ದು ಸಂತೋಷ ಉಂಟು ಮಾಡಿದೆ ಎಂದರಲ್ಲದೆ, ಮುಂದೇನು ಓದಬೇಕೂಂತ ಇದ್ದಿ ಅಂತ ಕೇಳಿದಾಗ ಆ ಬಾಲಕಿ ಕಾಮರ್ಸ್‌ ಓದುವೆ ಎಂದು ಉತ್ತರಿಸಿದ್ದಾಳೆ. ಸಚಿವರು ಬಹಳ ಸಂತಸಪಟ್ಟರಲ್ಲದೆ, ವಿದ್ಯಾಭ್ಯಾಸಕ್ಕೂ ನೆರವು ನೀಡುವುದಾಗಿ ಭರವಸೆ ನೀಡಿದರು

    ರಾಷ್ಟ್ರೀಯ ಶಿಕ್ಷಣ ನೀತಿ;ಆಗಸ್ಟ್ 23ರಿಂದಲೇ ಪದವಿ ವಿದ್ಯಾರ್ಥಿಗಳ ದಾಖಲು ಪ್ರಕ್ರಿಯೆ ಆರಂಭ

    BENGALURU AUG 9

    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳ ಜತೆ ಸೋಮವಾರ ಮಹತ್ವದ ಮಾತುಕತೆ ನಡೆಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು, ಈ ತಿಂಗಳ ಅಂದರೆ ಆಗಸ್ಟ್ 23 ರಿಂದಲೇ ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಘೋಷಿಸಿದರು.

    ಉಪ ಕುಲಪತಿಗಳ ಸಭೆ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಹೊಸದಾಗಿ ರೂಪಿಸಲಾಗಿರುವ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕ ದಾಖಲಾತಿ ಪ್ರಕ್ರಿಯೆ ಆರಂಭ ಮಾಡಲಾಗುವುದು. ಅದರ ಮಾದರಿಯನ್ನೂ ಉದ್ಘಾಟಿಸಲಾಗುವುದು ಎಂದು ಅವರು ತಿಳಿಸಿದರು

    ಹತ್ತು ವರ್ಷಗಳಲ್ಲೇ ಜಾರಿ:

    ಶಿಕ್ಷಣ ನೀತಿ ಜಾರಿಗೆ ಕೇಂದ್ರ ಸರಕಾರ 15 ವರ್ಷ ಕಾಲಾವಕಾಶ ನೀಡಿದ್ದು, ರಾಜ್ಯ ಸರಕಾರ ಹತ್ತೇ ವರ್ಷಗಳಲ್ಲಿ ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿ ಮಾಡುವುದಕ್ಕೆ ಅಗಸ್ಟ್‌ 7ರಂದೇ ಆದೇಶ ಹೊರಡಿಸಲಾಗಿದ್ದು, ಅದರ ಮಾರ್ಗಸೂಚಿಯನ್ನೂ ಪ್ರಕಟಿಸಲಾಗಿದೆ ಎಂದರು ಅವರು.

    ಈ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಹೆಚ್ಚು ಒತ್ತು ನೀಡಲಾಗಿದೆ. ಮೊದಲಿಗಿಂತ ಹೆಚ್ಚು ವಿಸ್ತೃತವಾಗಿ ಕನ್ನಡವನ್ನು ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಕಾರಣಕ್ಕೂ ಕನ್ನಡವನ್ನು ಉಪೇಕ್ಷೆ ಮಾಡಿಲ್ಲ. ಎರಡು ವರ್ಷಗಳ ಕನ್ನಡ ಕಲಿಕೆ ಇತ್ತು. ಹಾಗೆ ನೋಡಿದರೆ ಮೊದಲು ಕಡ್ಡಾಯ ಇರಲಿಲ್ಲ. ಈಗ ಕಡ್ಡಾಯ ಮಾಡಲಾಗಿದೆ ಎಂದು ಅವರು ಹೇಳಿದರು.

    2021-22ರಿಂದಲೇ ಶಿಕ್ಷಣ ನೀತಿ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳ‌ ವಿಷಯವಾರು ಮಾದರಿ ಪಠ್ಯಕ್ರಮಗಳನ್ನು ಸಿದ್ಧಪಡಿಸಲು ವಿಷಯ ತಜ್ಞರ 32 ಸಮಿತಿಗಳನ್ನು ರಚಿಸಲಾಗಿದೆ. ಈ ಪ್ರಕಾರವಾಗಿ 3 ವರ್ಷದ ಪದವಿ ಪ್ಲಸ್‌ 2 ವರ್ಷದ ಸ್ನಾತಕೋತ್ತರ ಅಥವಾ 4 ವರ್ಷದ ಆನರ್ಸ್‌ ಪದವಿ ಪ್ಲಸ್‌ 1 ವರ್ಷದ ಸ್ನಾತಕೋತ್ತರ ಪದವಿ ಅಧ್ಯಯನದ ಬಗ್ಗೆ ವಿಷಯವಾರು ಮಾದರಿ ಪಠ್ಯ ತಯಾರಿಸುವಂತೆ ಆಯಾ ಸಮಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಈ ಎಲ್ಲ ವಿಷಯವಾರು ಸಮಿತಿಗಳು ಸಲ್ಲಿಸುವ ವರದಿಗಳ ಆಧಾರದ ಆಯಾ ವಿಷಯದ ಪಠ್ಯ ರಚನೆಯಾಗಲಿದ್ದು, ಇದೇ ಅಗಸ್ಟ್‌ 31ರೊಳಗೆ ಪಠ್ಯ ಸಿದ್ಧಪಡಿಸುವಂತೆ ಸೂಚಿಸಲಾಗಿದ್ದು, ಈ ಬಗ್ಗೆ ಉಪ ಕುಲಪತಿಗಳ ಜತೆ ವಿಷದವಾಗಿ ಚರ್ಚೆ ನಡೆಸಿಲಾಗಿದೆ ಎಂದು ಅವರು ಮಾಹಿತಿ ನೀಡಿದರು.

    ಅನುಮಾನ, ಗೊಂದಲ ಬೇಡ: 

    ಶಿಕ್ಷಣ ನೀತಿಯ ಬಗ್ಗೆ ಕೆಲವರು ಕೆಲ ಅನುಮಾನ, ಪ್ರಶ್ನೆಗಳನ್ನು ಎತ್ತುತ್ತಿದ್ದು, ಎಲ್ಲಕ್ಕೂ ಈಗಾಗಲೇ ಉತ್ತರ ನೀಡಲಾಗಿದೆ. ಮತ್ತೆ ಬೇಕಿದ್ದರೂ ಸರಕಾರ ಉತ್ತರ ನೀಡಲು ಸಿದ್ಧವಿದೆ ಎಂದ ಅವರು ಪ್ರಧಾನಿ ನರೇಂದ್ರ ಮೋದಿ ಅವರು 38 ವರ್ಷಗಳ ನಂತರ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಸಂಕಲ್ಪ ಮಾಡಿದರು. ಈ ನೀತಿಯನ್ನು ರೂಪಿಸುವ ಮುನ್ನ ಎಲ್ಲ ವಿವಿಗಳ ಉಪ ಕುಲಪತಿಗಳು, ವಿಷಯವಾರು ತಜ್ಞರು, ವಿಜ್ಞಾನಿಗಳು, ತಂತ್ರಜ್ಞರು, ಭಾಷಾತಜ್ಞರು ಸೇರಿ ಎಲ್ಲ ಕ್ಷೇತ್ರಗಳ ಮುಂಚೂಣಿ ವ್ಯಕ್ತಿಗಳ ಅಭಿಪ್ರಾಯ ಪಡೆಯಲಾಗಿದೆ. ಐದು ವರ್ಷಗಳ ಕಾಲ ಅಧ್ಯಯನ ನಡೆಸಿದ ಕರಡು ನಂತರ ಕೇಂದ್ರಕ್ಕೆ ಅಂತಿಮ ವರದಿ ಸಲ್ಲಿಸಲಾಯಿತು ಎಂದರು.

    ಕೇಂದ್ರವು ಶಿಕ್ಷಣ ನೀತಿಯನ್ನು ಪ್ರಕಟಿಸಿದ ಕೂಡಲೇ ರಾಜ್ಯ ಸರಕಾರ ನೀತಿಯನ್ನು ಅಂಗೀಕರಿಸಿತಲ್ಲದೆ, ಸಂಪುಟದ ಒಪ್ಪಿಗೆ ಸಿಕ್ಕ ಕೂಡಲೇ ಸದನದ ಒಳಗೆ ಹೊರಗೆ ವ್ಯಾಪಕ ಚರ್ಚೆ ನಡೆಸಲಾಯಿತು. ವಿದ್ಯಾರ್ಥಿಗಳು ತಮಗಿಷ್ಟವಾದ ಕೋರ್ಸ್ ಗಳನ್ನು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳುವ ಬಹುಆಯ್ಕೆಯ ಮತ್ತು ಬಹುಶಿಸ್ತೀಯ ವ್ಯವಸ್ಥೆ ಶಿಕ್ಷಣ ನೀತಿಯಲ್ಲಿದೆ. ಜತೆಗೆ, 40% ಡಿಜಿಟಲ್‌ ಕಲಿಕೆಗೂ ಅವಕಾಶ ಮಾಡಿಕೊಡಲಾಗುತ್ತದೆ. ಡಿಜಿಟಲ್‌ ಕಲಿಕೆ ಅನ್ನುವುದು ಕಡ್ಡಾಯವಲ್ಲ. ಅಗತ್ಯ ಇದ್ದವರು ಮಾತ್ರ ಪಡೆಯಬಹುದು. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಅವರು ಅವರು ವಿವರಿಸಿದರು.

    ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎತ್ತಿರುವ ಎಲ್ಲ ಪ್ರಶ್ನೆಗಳಿಗೆ ಈಗಾಗಲೇ ಉತ್ತರ ನೀಡಿದ್ದೇವೆ. ಅಗತ್ಯಬಿದ್ದರೆ, ಮತ್ತಷ್ಟು ವಿವರ ನೀಡಲಾಗುವುದು. ಇದರಲ್ಲಿ ಮುಚ್ಚುಮರೆ ಏನಿಲ್ಲ. ಅತ್ಯಂತ ಪಾರದರ್ಶಕವಾಗಿ, ರಾಷ್ಟ್ರದ ಹಿತದೃಷ್ಟಿಯಿಂದ ಜಾರಿಗೆ ಬರುತ್ತಿರುವ ಶಿಕ್ಷಣ ನೀತಿ. ಮುಖ್ಯವಾಗಿ ಕನ್ನಡದ ಕಲಿಕೆಯ ಬಗ್ಗೆ ಸಿದ್ದರಾಮಯ್ಯ ಹೇಳಿರುವ ಮಾತು ಸತ್ಯಕ್ಕೆ ದೂರವಾದದ್ದು  ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು

    ಅನುದಾನಕ್ಕೆ ಬೇಡಿಕೆ ಇಡುತ್ತೇವೆ

    ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಬೇಡಿಕೆ ಇಡುತ್ತೇವೆ. ಉನ್ನತ ಶಿಕ್ಷಣ ಸುಧಾರಣೆಗೆ ಕನಿಷ್ಠ 3000 ಕೋಟಿಯಾದರೂ ಬೇಕು. ವರ್ಷಕ್ಕೊಂದು ಸಾವಿರ ಕೋಟಿ ಕೊಟ್ಟರೆ ಒಳ್ಳೆಯದು. ಈ ಬಗ್ಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌, ವಿವಿಧ ವಿವಿಗಳ ಕುಲಪತಿಗಳು ಸಭೆಯಲ್ಲಿ ಹಾಜರಿದ್ದರು.

    ಮೇಕೆದಾಟು ಯೋಜನೆಗೆ ಶೀಘ್ರ ಕೇಂದ್ರದ ಅನುಮೋದನೆ: ಮುಖ್ಯಮಂತ್ರಿ ವಿಶ್ವಾಸ


    MYSORE AUG 9

    ಮೇಕೆದಾಟು ಯೋಜನೆಯ ಡಿಪಿಆರ್ ಗೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಅನುಮೋದನೆ ದೊರೆಯುವ ವಿಶ್ವಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು. ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.


    ಮೇಕೆದಾಟು ಯೋಜನೆಯ ಡಿಪಿಆರ್ ಅನ್ನು ಕೇಂದ್ರ ಜಲ ಆಯೋಗಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಕಳೆದ ಬಾರಿ ದೆಹಲಿಗೆ ತೆರಳಿದಾಗ ಈ ಯೋಜನೆಗೆ ಒಪ್ಪಿಗೆ ನೀಡುವುದಾಗಿ ಭರವಸೆ ದೊರೆತಿದೆ. ಇದಕ್ಕೆ ಕೆಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಇದು ಪೂರ್ಣಗೊಂಡ ಕೂಡಲೇ ಕೇಂದ್ರದ ಒಪ್ಪಿಗೆ ದೊರೆಯುವ ವಿಶ್ವಾಸವಿದೆ.
    ಮತ್ತೊಮ್ಮೆ ಈ ಉದ್ದೇಶಕ್ಕಾಗಿಯೇ ದೆಹಲಿಗೆ ತೆರಳಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ವಸ್ತುಸ್ಥಿತಿಯನ್ನು ವಿವರಿಸಲಾಗುವುದು. ಸುಪ್ರೀಂ ಕೋರ್ಟಿನ ಆದೇಶಗಳ ಕುರಿತು ಮನವರಿಕೆ ಮಾಡಿಕೊಡಲಾಗುವುದು.

    ಇದರೊಂದಿಗೆ ರಾಜ್ಯದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ದೆಹಲಿಯಲ್ಲಿ ವಕೀಲರ ತಂಡದೊಂದಿಗೆ ಸಭೆ ನಡೆಸಿ, ಕಾವೇರಿ ತೀರದಲ್ಲಿ ಹೆಚ್ಚುವರಿ ನೀರಿನ ಹಕ್ಕನ್ನು ಕಾನೂನು ಪ್ರಕಾರ ಪಡೆದುಕೊಳ್ಳುವ ಕುರಿತು ಸಹ ಚರ್ಚಿಸಲಾಗುವುದು ಎಂದು ತಿಳಿಸಿದರು.

    ಕೋವಿಡ್ 19 ಮುನ್ನೆಚ್ಚರಿಕೆ:
    ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಕೇರಳ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಈ ಎಲ್ಲ ಜಿಲ್ಲೆಗಳಿಗೆ ತಾವು ಭೇಟಿ ನೀಡಲಿದ್ದು, ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಳೆದ ಬಾರಿ ಈ ಎರಡು ರಾಜ್ಯಗಳಿಂದ ಪ್ರಾರಂಭವಾದ ಎರಡನೇ ಅಲೆ ಇಡೀ ರಾಜ್ಯವನ್ನು ವ್ಯಾಪಿಸಿತ್ತು. ಈ ಬಾರಿ ಅದನ್ನು ತಡೆಗಟ್ಟಲು ಪೂರ್ವಭಾವಿಯಾಗಿಯೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಪಿಎಂ-ಕಿಸಾನ್ ಯೋಜನೆಯ 9ನೇ ಕಂತನ್ನು ಬಿಡುಗಡೆ ಮಾಡಿದ ಪ್ರಧಾನಿ

    NEW DELHI AUG 9
    ʻಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ (ಪಿಎಂ-ಕಿಸಾನ್) ಅಡಿಯಲ್ಲಿ ಮುಂದಿನ ಕಂತಿನ ಆರ್ಥಿಕ ನೆರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ರೈತ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಯೋಜನೆಯು 9.75 ಕೋಟಿಗೂ ಅಧಿಕ ಫಲಾನುಭವಿ ರೈತ ಕುಟುಂಬಗಳಿಗೆ 19,500 ಕೋಟಿ ರೂ.ಗಿಂತಲೂ ಅಧಿಕ ಹಣ ವರ್ಗಾವಣೆಯನ್ನು ಸಾಧ್ಯವಾಗಿಸಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ ನೀಡಲಾದ ಆರ್ಥಿಕ ನೆರವಿನ 9ನೇ ಕಂತು ಇದಾಗಿದೆ.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು ಬಿತ್ತನೆ ಋತುವಿನ ಬಗ್ಗೆ ಪ್ರಸ್ತಾಪಿಸಿದರು ಮತ್ತು ಇಂದು ರೈತರು ಪಡೆದ ಮೊತ್ತವು ಬಿತ್ತನೆ ಕಾರ್ಯಕ್ಕೆ ಸಹಾಯಕವಾಗುವ ಭರವಸೆಯನ್ನು ಅವರು ವ್ಯಕ್ತಪಡಿಸಿದರು. 1 ಲಕ್ಷ ಕೋಟಿ ರೂಪಾಯಿ ಮೀಸಲು ಹಣವನ್ನು ಹೊಂದಿರುವ ʻಕಿಸಾನ್ ಮೂಲಸೌಕರ್ಯ ನಿಧಿ ಯೋಜನೆʼಯೂ ಇಂದಿಗೆ ಒಂದು ವರ್ಷ ಪೂರ್ಣಗೊಳಿಸುತ್ತದೆ ಎಂದು ಅವರು ಉಲ್ಲೇಖಿಸಿದರು.

    ʻಮಿಷನ್ ಹನಿ ಬೀʼ ಹಾಗೂ ʻನಫೆಡ್ʼ(NAFED) ಮಳಿಗೆಗಳಲ್ಲಿ ಜಮ್ಮು-ಕಾಶ್ಮೀರದ ಕೇಸರಿ ಲಭ್ಯತೆಯಂತಹ ಉಪಕ್ರಮಗಳ ಬಗ್ಗೆ ಅವರು ವಿವರಿಸಿದರು. ʻಮಿಷನ್‌ ಹನಿ ಬೀʼ ಯೋಜನೆಯು 700 ಸಾವಿರ ಕೋಟಿ ಜೇನು ತುಪ್ಪ ರಫ್ತಿಗೆ ಕಾರಣವಾಗಿದೆ ಮತ್ತು ಆ ಮೂಲಕ ರೈತರಿಗೆ ಹೆಚ್ಚುವರಿ ಆದಾಯ ದೊರೆತಿದೆ ಎಂದರು.

    ಮುಂಬರುವ 75ನೇ ಸ್ವಾತಂತ್ರ್ಯೋತ್ಸವ ದಿನವನ್ನು ಉಲ್ಲೇಖಿಸಿದ ಅವರು, ಇದು ಕೇವಲ ಹೆಮ್ಮೆಯ ಸಂದರ್ಭ ಮಾತ್ರವಲ್ಲ, ಇದು ಹೊಸ ನಿರ್ಣಯಗಳಿಗೆ ಒಂದು ಅವಕಾಶವಾಗಿದೆ ಎಂದು ಹೇಳಿದರು. ಮುಂಬರುವ 25 ವರ್ಷಗಳಲ್ಲಿ ನಾವು ಭಾರತವನ್ನು ಎಲ್ಲಿ ನೋಡಲು ಬಯಸುತ್ತೇವೆ ಎಂಬುದನ್ನು ನಿರ್ಧರಿಸಲು ನಾವು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. 2047ರಲ್ಲಿ ದೇಶವು ಸ್ವಾತಂತ್ರ್ಯ ಬಂದು 100 ವರ್ಷಗಳನ್ನು ಪೂರ್ಣಗೊಳಿಸಿದಾಗ ಭಾರತದ ಸ್ಥಿತಿಯನ್ನು ನಿರ್ಧರಿಸುವಲ್ಲಿ ನಮ್ಮ ಕೃಷಿ ಮತ್ತು ನಮ್ಮ ರೈತರ ಪಾತ್ರ ದೊಡ್ಡದು ಎಂದು ಪ್ರಧಾನಿ ಹೇಳಿದರು.

    ಹೊಸ ಸವಾಲುಗಳನ್ನು ಎದುರಿಸಲು, ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಭಾರತದ ಕೃಷಿಯ ದಿಕ್ಕನ್ನು ನಿರ್ಧರಿಸಲು ಇದು ಸಕಾಲ. ಕಾಲಕಾಲಕ್ಕೆ ಬದಲಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ಭಾರತೀಯ ಕೃಷಿಯಲ್ಲಿ ಬದಲಾವಣೆ ಅಗತ್ಯ ಎಂದು ಅವರು ಕರೆ ನೀಡಿದರು. ಸಾಂಕ್ರಾಮಿಕದ ಸಮಯದಲ್ಲಿ ದಾಖಲೆಯ ಕೃಷಿ ಉತ್ಪಾದನೆಗಾಗಿ ರೈತರನ್ನು ಶ್ಲಾಘಿಸಿದ ಅವರು, ಕಠಿಣ ಸಮಯದಲ್ಲಿ ರೈತರ ಸಂಕಷ್ಟಗಳನ್ನು ಕಡಿಮೆ ಮಾಡಲು ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಸರಕಾರವು ಬೀಜ, ರಸಗೊಬ್ಬರ ಮತ್ತು ಮಾರುಕಟ್ಟೆಗಳ ಲಭ್ಯತೆಗೆ ಯಾವುದೇ ತೊಡಕಾಗದಂತೆ ನೋಡಿಕೊಂಡಿತು. ಎಲ್ಲಾ ಸಮಯದಲ್ಲೂ ಯೂರಿಯಾ ಲಭ್ಯತೆ ಕಾಯ್ದುಕೊಳ್ಳಲಾಗಿತ್ತು. ಜೊತೆಗೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ʻಡಿಎಪಿʼ ಬೆಲೆ ಹಲವು ಪಟ್ಟು ಹೆಚ್ಚಾದಾಗಲೂ ಸರಕಾರ ತಕ್ಷಣವೇ 12000 ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ಹಳೆ ದರದಲ್ಲೇ ರೈತರಿಗೆ ಡಿಎಪಿ ಲಭ್ಯವಾಗುವಂತೆ ಹಾಗೂ ದರ ಹೆಚ್ಚಳದ ಹೊರೆ ರೈತರ ಮೇಲೆ ಬೀಳದಂತೆ ನೋಡಿಕೊಂಡಿತು ಎಂದರು.

    ಅದು ಮುಂಗಾರು ಋತುವಾಗಿರಲಿ ಅಥವಾ ಹಿಂಗಾರು ಋತುವಾಗಿರಲಿ ಸರಕಾರ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಇದುವರೆಗಿನ ಅತಿ ದೊಡ್ಡ ಮಟ್ಟದ ಖರೀದಿ ಮಾಡಿದೆ. ಇದರಿಂದಾಗಿ ಸುಮಾರು 1,70,000 ಕೋಟಿ ರೂ. ಭತ್ತದ ಬೆಳಗಾರರ ಖಾತೆಗಳಿಗೆ ಮತ್ತು ಸುಮಾರು 85,000 ಕೋಟಿ ರೂ. ಗೋಧಿ ರೈತರ ಖಾತೆಗಳಿಗೆ ನೇರವಾಗಿ ತಲುಪಿದೆ ಎಂದು ಪ್ರಧಾನಿ ಹೇಳಿದರು.

    ಕೆಲವು ವರ್ಷಗಳ ಹಿಂದೆ ದೇಶದಲ್ಲಿ ದ್ವಿದಳ ಧಾನ್ಯಗಳ ಕೊರತೆ ಕಂಡು ಬಂದಾಗ, ಅವುಗಳ ಉತ್ಪಾದನೆಯನ್ನು ಹೆಚ್ಚಿಸುವಂತೆ ರೈತರನ್ನು ತಾವು ಒತ್ತಾಯಿಸಿದ್ದಾಗಿ ಪ್ರಧಾನಿ ಸ್ಮರಿಸಿದರು. ಇದರ ಪರಿಣಾಮವಾಗಿ, ಕಳೆದ 6 ವರ್ಷಗಳಲ್ಲಿ ದೇಶದಲ್ಲಿ ದ್ವಿದಳ ಧಾನ್ಯಗಳ ಅಥವಾ ಬೇಳೆ ಕಾಳುಗಳ ಉತ್ಪಾದನೆಯಲ್ಲಿ ಸುಮಾರು 50 ಪ್ರತಿಶತ ಹೆಚ್ಚಳವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಖಾದ್ಯ ತೈಲದಲ್ಲಿ ಸ್ವಾವಲಂಬನೆ ಸಾಧಿಸುವ ಪ್ರತಿಜ್ಞೆಯ ಭಾಗವಾಗಿ ಆರಂಭಿಸಲಾಗಿರುವ ʻರಾಷ್ಟ್ರೀಯ ಖಾದ್ಯ ತೈಲ ಮಿಷನ್-ಆಯಿಲ್ ಪಾಮ್ʼ (ಎನ್‌ಎಂಇಒ-ಒಪಿ) ಬಗ್ಗೆ ಪ್ರಧಾನಿ ಒತ್ತಿ ಹೇಳಿದರು. ಇಂದು ʻಭಾರತ ಬಿಟ್ಟು ತೊಲಗಿʼ (ಕ್ವಿಟ್‌ ಇಂಡಿಯಾ) ಚಳವಳಿಯ ಸ್ಮರಣಾರ್ಥ ದಿನ. ಈ ಐತಿಹಾಸಿಕ ದಿನದಂದು, ಈ ಸಂಕಲ್ಪವು ನಮಗೆ ಹೊಸ ಶಕ್ತಿಯನ್ನು ತುಂಬುತ್ತದೆ ಎಂದು ಅವರು ಹೇಳಿದರು. ʻರಾಷ್ಟ್ರೀಯ ಖಾದ್ಯ ತೈಲ ಮಿಷನ್-ಆಯಿಲ್ ಪಾಮ್ʼ ಯೋಜನೆ ಮೂಲಕ ಅಡುಗೆ ತೈಲ ಪರಿಸರ ವ್ಯವಸ್ಥೆಯಲ್ಲಿ 11,000 ಕೋಟಿ ರೂ.ಗಿಂತಲೂ ಹೆಚ್ಚು ಹೂಡಿಕೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

    ಗುಣಮಟ್ಟದ ಬೀಜಗಳಿಂದ ಹಿಡಿದು ತಂತ್ರಜ್ಞಾನದವರೆಗೆ ರೈತರಿಗೆ ಎಲ್ಲಾ ಸೌಲಭ್ಯಗಳ ಖಾತರಿಯನ್ನು ಸರಕಾರ ಒದಗಿಸಿದೆ. ಇಂದು ಮೊದಲ ಬಾರಿಗೆ ಭಾರತವು ಕೃಷಿ ರಫ್ತಿಗೆ ಸಂಬಂಧಿಸಿದಂತೆ ವಿಶ್ವದ ಅಗ್ರ-10 ರಾಷ್ಟ್ರಗಳಲ್ಲಿ ಸ್ಥಾನ ಪಡೆದುಕೊಂಡಿದೆ ಎಂದು ಪ್ರಧಾನಿ ಗಮನ ಸೆಳೆದರು. ಕೊರೊನಾ ಅವಧಿಯಲ್ಲಿ ದೇಶವು ಕೃಷಿ ರಫ್ತಿನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಇಂದು ಭಾರತವನ್ನು ಬೃಹತ್‌ ಕೃಷಿ ರಫ್ತು ದೇಶವನ್ನಾಗಿ ಗುರುತಿಸಲಾಗುತ್ತಿದೆ. ಇಂತಹ ಸಮಯದಲ್ಲಿ ನಮ್ಮ ಖಾದ್ಯ ತೈಲದ ಅಗತ್ಯಗಳಿಗಾಗಿ ಆಮದನ್ನು ಅವಲಂಬಿಸುವುದು ಸರಿಯಲ್ಲ ಎಂದರು.

    ದೇಶದ ಕೃಷಿ ನೀತಿಗಳಲ್ಲಿ ಸಣ್ಣ ರೈತರಿಗೆ ಈಗ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ನಿಟ್ಟಿನಲ್ಲಿ, ಕಳೆದ ಕೆಲ ವರ್ಷಗಳಿಂದ ಈ ಸಣ್ಣ ರೈತರಿಗೆ ಅನುಕೂಲ ಹಾಗೂ ಭದ್ರತೆಯನ್ನು ಒದಗಿಸಲು ಗಂಭೀರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ʻಪಿಎಂ ಕಿಸಾನ್ ಸಮ್ಮಾನ್ ನಿಧಿʼ ಅಡಿಯಲ್ಲಿ, ಇಲ್ಲಿಯವರೆಗೆ ರೈತರಿಗೆ 1.60 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ. ಈ ಪೈಕಿ ಸಾಂಕ್ರಾಮಿಕದ ಅವಧಿಯಲ್ಲಿ ಸಣ್ಣ ರೈತರಿಗೆ 1 ಲಕ್ಷ ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ 2 ಕೋಟಿಗೂ ಹೆಚ್ಚು ʻಕಿಸಾನ್ ಕ್ರೆಡಿಟ್ ಕಾರ್ಡ್ʼಗಳನ್ನು ನೀಡಲಾಗಿದೆ. ಅವುಗಳಲ್ಲಿ ಹೆಚ್ಚಿನವು ಸಣ್ಣ ರೈತರಿಗೆ ದೊರೆತಿವೆ. ಅಂತಹ ರೈತರು ಮುಂದೆ ವಿಸ್ತರಣೆಯಾಗಲಿರುವ ಕೃಷಿ ಮೂಲಸೌಕರ್ಯ ಮತ್ತು ಸಂಪರ್ಕ ಮೂಲಸೌಕರ್ಯಗಳ ಅನುಕೂಲ ಪಡೆಯಲಿದ್ದಾರೆ. ʻಆಹಾರ ಪಾರ್ಕ್‌ಗಳುʼ, ʻಕಿಸಾನ್ ರೈಲುಗಳುʼ ಮತ್ತು ʻಮೂಲಸೌಕರ್ಯ ನಿಧಿʼಯಂತಹ ಉಪಕ್ರಮಗಳು ಸಣ್ಣ ರೈತರಿಗೆ ಸಹಾಯಕವಾಗಲಿವೆ. ಕಳೆದ ವರ್ಷದಲ್ಲಿ, ಮೂಲಸೌಕರ್ಯ ನಿಧಿಯ ಅಡಿಯಲ್ಲಿ 6 ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಕ್ರಮಗಳು ಸಣ್ಣ ರೈತರ ಮಾರುಕಟ್ಟೆ ಸಂಪರ್ಕವನ್ನು ಮತ್ತು ʻಎಪ್‌ಪಿಒʼಗಳ ಮೂಲಕ ಅವರ ಚೌಕಾಶಿ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಎಂದು ಪ್ರಧಾನಿ ಹೇಳಿದರು.

    ಮೈಸೂರಿನಿಂದ ಸಿಎಂ ಭಾಗಿ

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶದ ರೈತರಿಗೆ ಎರಡನೇ ಕಂತಿನ ಹಣವನ್ನು ಬಿಡುಗಡೆಗೊಳಿಸಿ ಪ್ರಗತಿಪರ ರೈತರ ಜತೆ ಇಂದು ನಡೆಸಿದ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರಿನಿಂದ ಭಾಗವಹಿಸಿದ್ದರು.

    ಮೈಸೂರು ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಕೋವಿಡ್ ೧೯ ಕುರಿತ ಸಭೆಯ ಮಧ್ಯದಲ್ಲಿ ಪ್ರಧಾನಿಗಳ ವಿಡಿಯೋ ಸಂವಾದದಲ್ಲಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು.

    ಈ ಸಂದರ್ಭದಲ್ಲಿ ಸಚಿವರಾದ ಎಸ್ ಟಿ ಸೋಮಶೇಖರ, ಡಾ. ಕೆ. ಸುಧಾಕರ್, ಬೈರತಿ ಬಸವರಾಜ ಮತ್ತು ಜಿಲ್ಲೆಯ ಜನ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಚಿತ್ರ ಕಲಾವಿದ ಬಿ ಜಯರಾಮ್ ಅವರ ಅಭಿವ್ಯಕ್ತಿಯ ಕಲಾ ಪಯಣ

    ಬಳಕೂರು ವಿ ಎಸ್ ನಾಯಕ

    ಕಲಾವಿದನ ಕಲಾ ಭಾಷೆಗೆ ಗಡಿಯಿಲ್ಲ. ತನ್ನ ಮನಸ್ಸಿನಲ್ಲಿ ಪುಟಿದೆದ್ದ ಭಾವನೆಗಳನ್ನು ಚಿತ್ರ ಚಿತ್ತಾರಗಳಲ್ಲಿ ಭಿನ್ನವಾಗಿ ಬಿಂಬಿಸಿ ಎಲ್ಲರ ಮನಸೂರೆಗೊಳ್ಳುವಂತೆ ಮಾಡುತ್ತಾನೆ. ಅವನ ಕುಂಚದಲ್ಲಿ ಅರಳಿರುವ ವಿಭಿನ್ನಬಗೆಯ ಕಲಾಕೃತಿಗಳು ಪ್ರತಿಯೊಬ್ಬರನ್ನು ಒಂದು ಕ್ಷಣ ಭಾವಪರವಶರನ್ನಾಗಿ ಸುತ್ತದೆ. ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಕಲಾಕೃತಿಗಳ ಗುಚ್ಛವನ್ನು ನೀಡಿದ ನಮ್ಮ ನಾಡಿನ ಪ್ರಖ್ಯಾತ ಕಲಾವಿದರಲ್ಲಿ ಒಬ್ಬರು ಬಿ. ಜಯರಾಮ್.

    ಇವರು ಮೊದಲಿನಿಂದಲೂ ಹೊಸತನ ಹೊಸ ವಿಷಯಗಳ ಅನ್ವೇಷಣೆಯಲ್ಲಿ ಇರುತ್ತಾರೆ. ಇಂತಹ ವಿಭಿನ್ನ ಕಲಾಕೃತಿಗಳ ರಚಿಸುವುದರ ಮೂಲಕ ಜನಮಾನಸವನ್ನು ಗೆದ್ದಿದ್ದಾರೆ. ಇದೀಗ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಹೆಣ್ಣು ಮತ್ತು ಬೆಕ್ಕು ಎಂಬ ಶೀರ್ಷಿಕೆಯ ಅಡಿಯಲ್ಲಿ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ.

    ಇವರು ರಚಿಸಿರುವ ರೇಖಾಚಿತ್ರಗಳು ವರ್ಣಚಿತ್ರಗಳು ನಿಜವಾಗಿಯೂ ಕೂಡ ಪ್ರತಿಯೊಬ್ಬರ ಮನಸ್ಸನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಾಮಾನ್ಯವಾಗಿ ಇವರ ಕಲಾಕೃತಿಗಳಲ್ಲಿ ಪ್ರಪ್ರಥಮವಾಗಿ ತಾಮ್ರದ ಉಬ್ಬು ಫಲಕಗಳ ಮೂಲಕ ವಿಭಿನ್ನ ರೀತಿಯ ಕಲಾಕೃತಿಗಳ ರಚಿಸಿರುವುದು ಎಲ್ಲರ ಗಮನ ಸೆಳೆಯುತ್ತದೆ.

    ಈ ಕಲಾಕೃತಿಗಳಲ್ಲಿ ವಿದೇಶಿಯರ ಪ್ರಾಣಿ-ಪ್ರೀತಿಯ ವಿಶಿಷ್ಟ ಗ್ರಹಿಕೆಗಳು ಇಲ್ಲಿ ಅದ್ಭುತವಾಗಿ ಅಭಿವ್ಯಕ್ತಿಗೊಂಡಿದೆ. ಹೆಣ್ಣು ಮತ್ತು ಬೆಕ್ಕು ಶೀರ್ಷಿಕೆಯ ಬಹುತೇಕ ಅಭಿವ್ಯಕ್ತಿಗಳು ಹೊರದೇಶಗಳಲ್ಲಿ ಹೆಣ್ಣು ಮತ್ತು ಬೆಕ್ಕುಗಳು ಪರಸ್ಪರ ಸಹಬಾಳ್ವೆಯನ್ನು ಸಾಧಿಸಿರುವುದು ಸಂಕೇತದಂತೆ ತಾಮ್ರದ ಫಲಕವನ್ನು ಪೂರಕವಾಗಿಸಿ ಕೊಂಡಿದೆ. ಇವರ ರೇಖಾ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ ಅದ್ಭುತವಾದ ವಿಚಾರಧಾರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಕಲಾವಿದರು ಯಶಸ್ವಿಯಾಗಿದ್ದಾರೆ.

    ಸಾಮಾನ್ಯ ಕಾಗದದಲ್ಲಿ ಇಂಕ್ ಪೆನ್ ಮೂಲಕವಾಗಿ ರಚಿಸಿರುವ ರೇಖಾಚಿತ್ರಗಳು ವಿಶೇಷ ಸಂದೇಶವನ್ನು ಕಲಾ ನೈಪುಣ್ಯತೆಯನ್ನು ತಿಳಿಸುತ್ತವೆ. ಬಿ. ಜಯರಾಮ್ ಅವರು ಕಲಾ ಗುರು ಎನ್ ಆರ್ ಹಡಪದ್ ಅವರ ಕೆನ್ ಕಲಾಶಾಲೆಯಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ರಾಜ್ಯ ಹಾಗೂ ಅಂತಾರಾಜ್ಯಮಟ್ಟದಲ್ಲಿ ಚಿತ್ರಕಲಾ ಶಿಬಿರಕ್ಕೆ23 ಬಾರಿ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಹಲವಾರು ಪ್ರಶಸ್ತಿಗಳು ಸಂದಿವೆ.

    ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಪ್ರಶಸ್ತಿ.ಲಲಿತಕಲಾ ಅಕಾಡೆಮಿ ಪ್ರಶಸ್ತಿ.ಮೈಸೂರು ದಸರಾ ಮತ್ತು ಕ್ಯಾಮಲಿನ್ ಪ್ರಶಸ್ತಿ. ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2018 ರಲ್ಲಿ ಬೆಂಗಳೂರು ಫೌಂಡೇಶನ್ ವತಿಯಿಂದ ಬಿ ಜಯರಾಮ್ ಸಮಕಾಲೀನ ದೃಶ್ಯಕಲೆಯ ಸಾಕ್ಷಿಪ್ರಜ್ಞೆ ಪ್ರಕಟಿಸಿದ್ದ ಈ ಪುಸ್ತಕಕ್ಕೆ2018 ನೇ ಸಾಲಿನ ಪುಸ್ತಕ ಪ್ರಾಧಿಕಾರದಿಂದ ಪುಸ್ತಕ ಸೊಬಗು ವಿಭಾಗದಲ್ಲಿ ಮೊದಲನೆಯ ಬಹುಮಾನ ಬಂದಿದೆ. ಇವರ ಕಲಾ ಸೇವೆ ಹೀಗೆ ಮುಂದುವರಿಯಲಿ. ಇವರು ರಚಿಸಿದ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬೇಕಾದರೆ ಬೆಂಗಳೂರಿನ ಕುಮಾರಕೃಪ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾಗ್ಯಾಲರಿಗೆ ತಪ್ಪದೇ ಭೇಟಿ ನೀಡಿ. ಪ್ರದರ್ಶನ ಆಗಸ್ಟ್ 11ರವರೆಗೆ ತೆರೆದಿರುತ್ತದೆ. ಸಮಯ ಬೆಳಿಗ್ಗೆ 11ರಿಂದ ಸಂಜೆ 7


    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    SSLC ರಿಸಲ್ಟ್;‌ ಒಬ್ಬ ವಿದ್ಯಾರ್ಥಿ ಮಾತ್ರ ಫೇಲ್

    BENGALURU AUG 9

    ಒಬ್ಬೇ ಒಬ್ಬ ವಿದ್ಯಾರ್ಥಿ ಹೊರತುಪಡಿಸಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಎಲ್ಲ ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಅಲ್ಲಿಗೆ, ಶೇ. 99.9ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದು, ಕೋವಿಡ್‌ ನಡುವೆಯೂ ಇದೊಂದು ದಾಖಲೆಯಾಗಿದೆ. ವಿಚಿತ್ರವೆಂದರೆ, ತಾನು ಪರೀಕ್ಷೆ ಬರೆಯುವ ಬದಲು ಇನ್ನೊಬ್ಬ ಪರೀಕ್ಷೆ ಬರೆದ ಕಾರಣಕ್ಕೆ ಒಬ್ಬ ವಿದ್ಯಾರ್ಥಿಯನ್ನು ನಪಾಸು ಮಾಡಲಾಗಿದೆ!

    ಇದೇ ಮೊದಲ ಬಾರಿಗೆ; ಅಂದರೆ ರಾಜ್ಯದ ಎಸ್‌ಎಸ್‌ಎಲ್‌ಸಿ ಇತಿಹಾಸದಲ್ಲೇ ಈ ವರ್ಷ ವಿಭಿನ್ನವಾಗಿ ಪರೀಕ್ಷೆ ನಡೆದಿದ್ದು, ಮೂರು ವಾರಗಳ ಹಿಂದೆ ಓಎಂಆರ್‌ ಶೀಟ್‌ ಆಧಾರಿತ ಪರೀಕ್ಷೆ ಫಲಿತಾಂಶವನ್ನು ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸಚಿವ ಬಿ.ಸಿ.ನಾಗೇಶ್ ಬೆಂಗಳೂರಿನಲ್ಲಿಂದು ಪ್ರಕಟಿಸಿದರು.

    ಕೊರೊನ ಸೋಂಕಿನ ನಡುವೆಯೂ ಪರೀಕ್ಷೆ ಬರೆದಿರುವ ಎಲ್ಲ ವಿದ್ಯಾರ್ಥಿಗಳನ್ನು ಪಾಸ್‌ ಮಾಡುವುದಾಗಿ ಹಿಂದಿನ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದರು. ಅದರಂತೆಯೇ ಎಲ್ಲ ಮಕ್ಕಳನ್ನು ಪಾಸ್‌ ಮಾಡಲಾಗಿದೆ ಎಂದು ನಾಗೇಶ್‌ ತಿಳಿಸಿದರು.

    ಸುದಿಗೋಷ್ಠಿಯಲ್ಲಿ ಫಲಿತಾಂಶವನ್ನು ಪ್ರಕಟಿಸಿದ ಸಚಿವರು, ಕೇವಲ ಒಬ್ಬ ವಿದ್ಯಾರ್ಥಿಯನ್ನು ಹೊರತುಪಡಿಸಿ ಉಳಿದೆಲ್ಲ ಮಕ್ಕಳನ್ನು ಉತ್ತೀರ್ಣ ಮಾಡಲಾಗಿದೆ. ಒಟ್ಟಾರೆ ಫಲಿತಾಂಶದ ಪ್ರಮಾಣ ಶೇ.99.9ರಷ್ಟು ಎಂದರು.

    ಮುಂದುವರಿದು ಫಲಿತಾಂಶದ ಬಗ್ಗೆ ಸಚಿವರು ನೀಡಿದ ಮಾಹಿತಿ ಹೀಗಿದೆ:

    ಎ ಪ್ಲಸ್​​ ಗ್ರೇಡ್​ನಲ್ಲಿ 1,28,931 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು ಎ ಗ್ರೇಡ್​ನಲ್ಲಿ 2,50,317, ಬಿ ಗ್ರೇಡ್‌ನಲ್ಲಿ 2,87,684, ಸಿ ಗ್ರೇಡ್​ನಲ್ಲಿ 1,13,610 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಲೆಕ್ಕದಲ್ಲಿ 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಒಬ್ಬ ವಿದ್ಯಾರ್ಥಿ ಬಿಟ್ಟು ಎಲ್ಲರೂ ಉತ್ತೀರ್ಣರಾಗಿದ್ದಾರೆ.

    ಉಳಿದಂತೆ 157 ಮಕ್ಕಳು 625ಕ್ಕೆ 625 ಅಂಕ ಪಡೆದಿದ್ದು, 289 ವಿದ್ಯಾರ್ಥಿಗಳು 625ಕ್ಕೆ 623 ಅಂಕ ಪಡೆದಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಗೆ 622 ಅಂಕ ಸಿಕ್ಕಿದೆ. 449 ವಿದ್ಯಾರ್ಥಿಗಳು 621 ಅಂಕ ಪಡೆದಿದ್ದಾರೆ. ಇನ್ನು 28 ವಿದ್ಯಾರ್ಥಿಗಳು 620 ಅಂಕ ಪಡೆದು ತೇರ್ಗಡೆಯಾಗಿದ್ದಾರೆ.

    100ಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳು

    ವಿವಿಧ ವಿಷಯಗಳಲ್ಲಿ ಕೆಲ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ. ಕನ್ನಡದಲ್ಲಿ 25,702 ವಿದ್ಯಾರ್ಥಿಗಳು 125ಕ್ಕೆ 125ಕ್ಕೆ ಅಂಕ ಪಡೆದಿದ್ದಾರೆ. ಅದೇ ರೀತಿ ದ್ವಿತೀಯ ಭಾಷೆ ಇಂಗ್ಲಿಷ್‌ನಲ್ಲಿ 36,628, ತೃತೀಯ ಭಾಷೆ ಹಿಂದಿಯಲ್ಲಿ 36,776, ಗಣಿತದಲ್ಲಿ 6,321, ವಿಜ್ಞಾನದಲ್ಲಿ 3,649, ಸಮಾಜ ವಿಜ್ಞಾನದಲ್ಲಿ 9,367 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಪಾಸಾಗಿರುವ ಮಕ್ಕಳಲ್ಲಿ ಶೇ.9ರಷ್ಟು ಮಂದಿ ಕೃಪಾಂಕ ಪಡೆದು ಉತ್ತೀರ್ಣರಾಗಿದ್ದಾರೆ.

    ಮೊಬೈಲ್‌ಗೆ ರಿಸಲ್ಟ್‌

    ಇಂದು ಸಂಜೆಯೊಳಗೇ ಪಾಸಾಗಿರುವ ಪ್ರತಿ ವಿದ್ಯಾರ್ಥಿ ಮೊಬೈಲ್ ಸಂಖ್ಯೆಗೆ ಫಲಿತಾಂಶ ಬರಲಿದೆ. ವೆಬ್‌ನಲ್ಲಿ ನೋಡಲು ಸಾಧ್ಯವಾಗದಿದ್ದರೆ ಎಸ್‌ಎಂಎಸ್‌ ಮೂಲಕವೇ ನೋಡಿಕೊಳ್ಳಬಹುದು.

    ಈ ವೆಬ್‌ಗಳಲ್ಲಿ ಫಲಿತಾಂಶ ನೋಡಬಹುದು
    kseeb.kar.nic.in
    karresults.nic.in

    ಶ್ರಾವಣ ಬಂತು ನಾಡಿಗೆ …

    ಮಳೆ ಸುರಿದು ಇಳೆ ತಂಪಾದ ಹೊತ್ತಿನಲ್ಲಿ ಮತ್ತೆ ಶ್ರಾವಣ ಮಾಸ ಬಂದಿದೆ. ಆಷಾಢದ ನಂತರ ಮಳೆರಾಯನು ಒಂದಿಷ್ಟು ಬಿಡುವು ಕೊಡುವ ಸಮಯ ಇದು. ಹೀಗಾಗಿ ಎಲ್ಲೆಡೆಯೂ ಸಡಗರ ಸಂಭ್ರಮ.

    ಕಳೆದೆರಡು ವರ್ಷಗಳಿಂದ ಕೊರೊನಾ ಎಂಬ ಮಹಾಮಾರಿ ಎಲ್ಲಾ ಹಬ್ಬಗಳ ಸಡಗರವನ್ನೇ ಕಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಶ್ರಾವಣ ಸಂಭ್ರಮಕ್ಕೆ ಕೊರತೆಯೇನು ಕಾಣುತ್ತಿಲ್ಲ.

    ಈ ಸಡಗರವನ್ನು ಹೆಚ್ಚಿಸಲು ಈ ಪಾಡ್ಕಾಸ್ಟ್ ಅನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಶ್ರಾವಣದ ಹಿರಿಮೆ ಗರಿಮಗೆಳ ಜೊತೆಗೆ ಶ್ರಾವಣದ ಸಂಭ್ರಮವನ್ನು ಹೆಚ್ಚಿಸುವ ಗೀತೆಗಳ ಗಾಯನವೂ ಇದೆ.

    ಮೂಲ ದಾವಣಗೆರೆಯವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಪರಿಮಳ ಎಸ್ ನರಹರಿರಾವ್ ಇಲ್ಲಿ ಶ್ರಾವಣದ ನೆನಪನ್ನು ಹಂಚಿಕೊಂಡಿದ್ದಾರೆ.ಶಾಸ್ತ್ರೀಯ ಸಂಗೀತವನ್ನು ಸೊಗಸಾಗಿ ಹಾಡುವ ಪರಿಮಳಾ ಅವರು ತಂದೆ ದಿ. ಶ್ರೀನಿವಾಸ ಮೂರ್ತಿ ಅವರಿಂದ ಸಂಗೀತ ಅಭ್ಯಾಸ ಶುರು ಮಾಡಿದರು. ನಂತರ ಚಿತ್ರದುರ್ಗದಲ್ಲಿ ವಿದ್ವಾನ್ ದಿ. ಎಚ್ ಎನ್ ನಾರಾಯಣಪ್ಪ ಅವರ ಬಳಿ ಸಂಗೀತ ಅಭ್ಯಾಸ ಮಾಡಿ ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆಲ ಕಾಲ ಸಂಗೀತ ಶಿಕ್ಷಕಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.ಗಮಕ ಅಭ್ಯಾಸ ಮಾಡಿ ಪಾರೀಣದಲ್ಲೂ ತೇರ್ಗಡೆಹೊಂದಿದ್ದಾರೆ.

    ಇವರ ಜೊತಗೆ ಶ್ಯಾಮಲ ನರಸಿಂಹ ಮೂರ್ತಿ ಅವರು ಗೀತೆಗಳನ್ನು ಹಾಡಿ ಶ್ರಾವಣದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಭಾರತಿ ಶ್ರೀನಿವಾಸ್ ನಿರೂಪಿಸಿದ್ದಾರೆ.

    ಇನ್ನು ಆಲಿಸಿ ಸಡಗರ ನಿಮ್ಮದಾಗಲಿ.

    ಶಿವಳ್ಳಿ ರೆಸ್ಟೋರೆಂಟ್ ನಲ್ಲಿ ಉಪಹಾರ ಸವಿದ ಮುಖ್ಯಮಂತ್ರಿ

    RAMANAGARA AUG 9

    ಮೈಸೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿನ ಶಿವಳ್ಳಿ ರೆಸ್ಟೋರೆಂಟ್ ಗೆ ಇದು ಮುಂಜಾನೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಿನ ಉಪಹಾರ ಸೇವಿಸಿದರು.

    ಸಚಿವರಾದ ಮುರುಗೇಶ್ ನಿರಾಣಿ, ಡಾ. ಕೆ. ಸುಧಾಕರ, ಎಸ್ ಟಿ ಸೋಮಶೇಖರ, ಬೈರತಿ ಬಸವರಾಜ, ಡಾ. ನಾರಾಯಣಗೌಡ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಕೋವಿಡ್ ಸೋಂಕು ಹೆಚ್ಚಿರುವ ಗಡಿ ಜಿಲ್ಲೆಗಳಿಗೆ ಸಿಎಂ ಭೇಟಿ

    BENGALURU AUG 9

    ಕೋವಿಡ್ ಸೋಂಕು ಹೆಚ್ಚಾಗಿರುವ ರಾಜ್ಯದ ಎಲ್ಲಾ ಗಡಿ ಜಿಲ್ಲೆಗಳಿಗೆ ಭೇಟಿ ನೀಡಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಬೆಂಗಳೂರಿನಲ್ಲಿ ಇಂದು ತಮ್ಮ ನಿವಾಸದ ಬಳಿ ಮೈಸೂರಿಗೆ ತೆರಳುವ ಮುನ್ನ ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು.

    ನಾನು ಇಂದು ಮೈಸೂರಿಗೆ ಭೇಟಿ ನೀಡುತ್ತಿದ್ದೇನೆ. ಮೈಸೂರು ಜಿಲ್ಲೆಯಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸುತ್ತೇನೆ. ಕೋವಿಡ್ ನಿಯಂತ್ರಣ ಕ್ರಮಗಳನ್ನು ಪರಿಶೀಲನೆ ನಡೆಸುತ್ತೇನೆ. ಕೋವಿಡ್ ಸೋಂಕು ಹೆಚ್ಚಾಗಿರುವ ಎಲ್ಲಾ ಗಡಿ ಜಿಲ್ಲೆಗಳಿಗೆ ಭೇಟಿ ನೀಡಲು ತೀರ್ಮಾನ ಮಾಡಿದ್ದೇನೆ ಎಂದು ಅವರು ತಿಳಿಸಿದರು.

    ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆಯುತ್ತೇನೆ. ನಂತರ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶಿರ್ವಾದ ಪಡೆಯುತ್ತೇನೆ ಎಂದು ಅವರು ತಿಳಿಸಿದರು.

    error: Content is protected !!