22.9 C
Karnataka
Sunday, May 24, 2026
    Home Blog Page 68

    ಸಿ.ಟಿ ರವಿ ಸ್ವಾತಂತ್ರ್ಯ ಹೋರಾಟಗಾರನಾ? -ಸಿದ್ಧರಾಮಯ್ಯ ಪ್ರಶ್ನೆ

    BENGALURU AUG 12

    ಇಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯನವರಿಗೆ 75 ಜನ್ಮ ದಿನಾಚರಣೆಯ ಸಂಭ್ರಮ. ಈ ಸಂದರ್ಭದಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಅವರ ಮಾತು ಕತೆಯ ಆಯ್ದ ಭಾಗ ಅವರ ಮಾತಿನಲ್ಲೇ ಹೀಗೆ ಇದೆ:

    ನಾನು ಯಾವತ್ತೂ ಜನ್ಮದಿನ ಆಚರಿಸಿಕೊಂಡವನಲ್ಲ, ನನ್ನ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಪ್ರೀತಿಯಿಂದ ಶುಭ ಹಾರೈಸಲು ನನ್ನ ಮನೆಗೆ ಬರುತ್ತಾರೆ. ಅವರನ್ನು ಭೇಟಿ ಮಾಡುತ್ತಿದ್ದೇನೆ. ನಾನು ಐದನೇ ತರಗತಿಗೆ ನೇರವಾಗಿ ದಾಖಲಾತಿ ಆದ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಬರೆದುಕೊಂಡ ಪ್ರಕಾರ ನನಗೀಗ 74 ವರ್ಷ ತುಂಬಿ 75 ನೇ ವರ್ಷಕ್ಕೆ ಕಾಲಿಟ್ಟಿದ್ದೇನೆ.

    ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಹಿಂದಿನ 74 ವರ್ಷಗಳ ಇತಿಹಾಸವನ್ನು ಹಿಂತಿರುಗಿ ನೋಡಬೇಕು. ಸಂವಿಧಾನದ ಆಶಯಗಳು ಈಡೇರಿವೆಯೋ ಇಲ್ಲವೋ ಎಂಬುದನ್ನು ಗಮನಿಸಿ, ಈಡೇರದೇ ಇದ್ದರೆ ಅದನ್ನು ಈಡೇರಿಸುವ ಶಪಥ ಮಾಡಬೇಕು.

    ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಪಾಲ್ಗೊಂಡವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿಯಾಗಲೀ, ಅಧಿಕಾರ ಪಡೆಯಬೇಕೆಂಬ ಉದ್ದೇಶದಿಂದಾಗಲೀ ಹೋರಾಟ ಮಾಡಿಲ್ಲ. ಬ್ರಿಟಿಷರು ದೇಶದಿಂದ ತೊಲಗಬೇಕು, ನಮ್ಮ ಭವಿಷ್ಯವನ್ನು ರೂಪಿಸುವ ಸ್ವಾತಂತ್ರ್ಯ ನಮಗೆ ಸಿಗಬೇಕು ಎಂಬ ಧ್ಯೇಯದೊಂದಿಗೆ ತ್ಯಾಗ, ಬಲಿದಾನ ಮಾಡಿದ್ದಾರೆ. 75 ನೇ ಸ್ವಾತಂತ್ರ್ಯೋತ್ಸವದಂದು ನಾವೆಲ್ಲ ದೇಶ ಕಟ್ಟುವ, ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯ, ಬ್ರಾತೃತ್ವ ಭಾವನೆಯನ್ನು ಬೆಳೆಸುವ ಸಂಕಲ್ಪ ಮಾಡಬೇಕು.

    ನಾವು ಸ್ವಾತಂತ್ರ್ಯ ಹೋರಾಟಗಾರರಲ್ಲ, ನಾವೆಲ್ಲಾ ಸ್ವಾತಂತ್ರ್ಯದ ಫಲಾನುಭವಿಗಳು. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ನಿಸ್ವಾರ್ಥವಾಗಿ ಪಾಲ್ಗೊಂಡವರ ಹೆಜ್ಜೆ ಗುರುತುಗಳನ್ನು ನಾವು ಅರ್ಥಮಾಡಿಕೊಂಡು, ಅವರ ದಾರಿಯಲ್ಲಿ ಸಾಗುವ ಪ್ರಯತ್ನ ಮಾಡಬೇಕು.

    ಚುನಾವಣೆಗೆ ಇನ್ನೂ ಒಂದು ವರ್ಷ ಎಂಟು ತಿಂಗಳುಗಳು ಬಾಕಿ ಇವೆ. ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ಸರ್ಕಾರ ಕೊರೊನಾ ನಿಯಂತ್ರಣ, ನೆರೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಸುಳ್ಳು ಭರವಸೆಗಳನ್ನು ನೀಡುವುದಷ್ಟೇ ಅಲ್ಲ ಕೊರೊನಾದಿಂದ ಸಾವಿಗೀಡಾದವರ ಲೆಕ್ಕದಲ್ಲೂ ಸುಳ್ಳು ಹೇಳುತ್ತಿದ್ದಾರೆ. ದೇಶದಲ್ಲಿ ಕೊರೊನಾದಿಂದ ಕನಿಷ್ಟ 50 ಲಕ್ಷ ಜನ ಸತ್ತಿದ್ದಾರೆ, ಕರ್ನಾಟಕವೊಂದರಲ್ಲೇ ಸುಮಾರು ನಾಲ್ಕು ಲಕ್ಷ ಜನ ಸಾವಿಗೀಡಾಗಿದ್ದಾರೆ. ಸರ್ಕಾರ 36 ಸಾವಿರ ಜನ ಸತ್ತಿದ್ದಾರೆ ಅಂತ ಸುಳ್ಳು ಹೇಳುತ್ತಿದೆ.

    ಸಿಟಿ ರವಿ ಕೇಳಿದ್ದು ಸರಿನಾ?

    ಅಹ್ಮದಾಬಾದ್ ಸ್ಟೇಡಿಯಂಗೆ ಮೋದಿಯವರ ಹೆಸರು ಏಕೆ ಇಟ್ಟಿರೋದು? ಮೇಲ್ಸೇತುವೆಗೆ ದೀನದಾಯಾಳು ಉಪಾಧ್ಯಾಯ ಎಂದು ಹೆಸರಿಟ್ಟುವುದು ಏಕೆ? ವಾಜಪೇಯಿ ಅವರ ಹೆಸರಿನ ರಸ್ತೆಗಳಿಲ್ಲವೇ? ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟಿದ್ದು ಏಕೆ?

    ಯಾರಿಗೆ ಏನು ಪ್ರಿಯವೋ ಅದೇ ನೆನಪಾಗುತ್ತೆ. ನಮಗೆ ಬಡವರನ್ನು ಕಂಡಾಗ ತಿನ್ನುವ ಅನ್ನ ನೆನಪಾಗಿ ಇಂದಿರಾ ಕ್ಯಾಂಟೀನ್ ಮಾಡಿದ್ದೇವೆ. ಸಿ ಟಿ ರವಿ ಅವರಿಗೆ, ಅವರ ಆಸಕ್ತಿ-ಸಂಸ್ಕೃತಿಗೆ ತಕ್ಕ ಹಾಗೆ ಬಾರ್-ಹುಕ್ಕಾಬಾರ್ ನೆನಪಾಗಿದೆ.ಬೊಮ್ಮಾಯಿ ಅವರು ಅವರನ್ನು ಅಬಕಾರಿ ಸಚಿವರಾಗಿ ಮಾಡಿ ಅವರ ಆಸೆ ಈಡೇರಿಸಬೇಕು.

    ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡಬಾರದು. ನೆಹರು ಕುಟುಂಬ ದೇಶಕ್ಕಾಗಿ ತ್ಯಾಗ ಬಲಿದಾನಗೈದಿದೆ.‌ ಸಿ.ಟಿ ರವಿ ಸ್ವಾತಂತ್ರ್ಯ ಹೋರಾಟಗಾರನಾ? ಸಂವಿಧಾನ ಬದಲಿಸುತ್ತೇವೆ ಎನ್ನುವವರಿಗೆ ದೇಶದ ಇತಿಹಾಸ, ದೇಶ ಕಟ್ಟಿದ ಮಹಾನ್ ವ್ಯಕ್ತಿಗಳ ಬಗ್ಗೆ ಗೌರವವಿದೆಯಾ? ಒಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿರುವ ವ್ಯಕ್ತಿಯ ಮಾತಿಗೆ ಘನತೆ ಇರಬೇಕು. ಸಾರ್ವಜನಿಕ ಜೀವನದಲ್ಲಿರುವವರು ಸಂಸ್ಕೃತಿ ಹೀನರಂತೆ ಮಾತನಾಡಬಾರದು ಎಂಬುದನ್ನು ಅವರೇ ಅರ್ಥಮಾಡಿಕೊಳ್ಳಬೇಕು.

    ಬಿಜೆಪಿ ಶಾಸಕನಿಂದಲೇ ಪ್ರತಿಭಟನೆ

    ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ತಮ್ಮದೇ ಸರ್ಕಾರ ಅನುದಾನ ಕೊಡುತ್ತಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದಾರೆಂದರೆ ಇನ್ನು ಕಾಂಗ್ರೆಸ್, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಸಿಗುವ ಅನುದಾನದ ಬಗ್ಗೆ ನೀವೆ ಊಹೆ ಮಾಡಿ.

    ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು.‌ ಅದನ್ನು ತಡೆಯುವ ಅಧಿಕಾರ ತಮಿಳುನಾಡಿಗಾಗಲೀ, ಕೇರಳಕ್ಕಾಗಲೀ ಇಲ್ಲ. ಸಿ.ಟಿ ರವಿಗೆ ನೆಲ ಜಲದ ಬಗ್ಗೆ ಬದ್ಧತೆ ಇದ್ದರೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಯೋಜನೆ ಜಾರಿಗೆ ಅನುಮತಿ ಕೊಡಿಸಲಿ. ಸಿ.ಟಿ ರವಿ ತಮಿಳುನಾಡಿನ ಬಿಜೆಪಿ ಉಸ್ತುವಾರಿಯಾದ ಕಾರಣಕ್ಕೆ ಹೀಗೆ ಎಡಬಿಡಂಗಿ ನಿಲುವು ತಾಳಿದ್ದಾರೆ, ಅವರು ನಮ್ಮ ರಾಜ್ಯದ ಪರ ಇಲ್ಲ. ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾದರು ಅವರಿಂದ ಯಾವ ಪ್ರಯೋಜನವಾಗುತ್ತಿಲ್ಲ. ನಮ್ಮ ನ್ಯಾಯಯುತ ಜಿ.ಎಸ್.ಟಿ ಪಾಲು, ನಮ್ಮ ಪಾಲಿನ ಅನುದಾನ, ನೆರೆ – ಬರ ಪರಿಹಾರ, ರೂ. 5,495 ಕೋಟಿ ವಿಶೇಷ ಅನುದಾನ ಕೊಡಿಸುವ ವಿಚಾರದಲ್ಲಿ ಒಂದು ದಿನವಾದರೂ ಬಾಯಿ ಬಿಟ್ಟಿದ್ದಾರಾ?

    ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜಿ.ಎಸ್.ಟಿ ಕೌನ್ಸಿಲ್ ಸದಸ್ಯರಾಗಿದ್ದರು. ಒಮ್ಮೆಯಾದರೂ 15 ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ ವಿಶೇಷ ಅನುದಾನವನ್ನು ಕೇಳಿದ್ದಾರಾ? ಈ ಬಗ್ಗೆ ಬಿಜೆಪಿ ಶಾಸಕರು, ಸಂಸದರು, ರಾಜ್ಯಸಭಾ ಸದ್ಸಯರು ಯಾರಾದ್ರೂ ಮಾತನಾಡ್ತಾರಾ? ಇಂಥವರಿಂದ ರಾಜ್ಯದ ಹಿತ ರಕ್ಷಣೆ ಸಾಧ್ಯವೇ? ರಾಜ್ಯಕ್ಕೆ ಅನ್ಯಾವಾಗುತ್ತಿರೋದನ್ನು ರಾಜ್ಯದ ಜನ ನೋಡುತ್ತಿದ್ದಾರೆ.

    ಜಾತಿ ಸಮೀಕ್ಷೆ ವರದಿಯನ್ನೇ ಸ್ವೀಕರಿಸದರೆ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ ಎಂದು ಬಿಜೆಪಿಯವರಿಗೆ ಹೇಗೆ ಗೊತ್ತಾಯ್ತು. ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬ ಗಾಧೆ ಮಾತಿದೆ ಹಾಗೆ ಬಿಜೆಪಿಯವರಿಗೆ ಎಲ್ಲದರಲ್ಲೂ ಸಮಸ್ಯೆ ಕಾಣುತ್ತೆ. ಸಮೀಕ್ಷೆಯ ವರದಿ ಸ್ವೀಕರಿಸಿ ಸದನದಲ್ಲಿ ಚರ್ಚೆ ಮಾಡಲಿ, ಆಗ ಅದು ವೈಜ್ಞಾನಿಕವೋ, ಅವೈಜ್ಞಾನಿಕವೋ ಗೊತ್ತಾಗಲಿದೆ.

    ಬಿಜೆಪಿಯ ಮಿತ್ರ ಪಕ್ಷದ ಮುಖಂಡರಾದ ನಿತೀಶ್ ಕುಮಾರ್ ಅವರೇ ಕೇಂದ್ರ ಸರ್ಕಾರ ಜಾತಿ ಸಮೀಕ್ಷೆ ಮಾಡಬೇಕು, ಇಲ್ಲದಿದ್ದರೆ ನಾವೇ ರಾಜ್ಯದಲ್ಲಿ ಸಮೀಕ್ಷೆ ಮಾಡುತ್ತೇವೆ ಎಂದಿದ್ದಾರೆ. ಇದರಿಂದ ಜಾತಿ ಸಮೀಕ್ಷೆಯ ಪ್ರಾಮುಖ್ಯತೆ ಎಷ್ಟು ಎಂದು ನೀವೇ ಅರ್ಥಮಾಡಿಕೊಳ್ಳಿ. ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸಬೇಕಾದರೆ ಯಾರು ಹಿಂದುಳಿದ್ದಾರೆ? ಯಾರು ಮುಖ್ಯ ವಾಹಿನಿಗೆ ಬಂದಿದ್ದಾರೆ? ಯಾರು ಬಂದಿಲ್ಲ? ಅವರು ಹಿಂದುಳಿಯಲು ಏನು ಕಾರಣ? ಅವರನ್ನು ಮುಂದಕ್ಕೆ ತರಲು ಏನು ಮಾಡಬೇಕು? ಇವೆಲ್ಲಾ ತಿಳಿದುಕೊಳ್ಳಬೇಕು.

    8 ಹೊಸ ಡಿಪ್ಲೊಮಾ ಕೋರ್ಸುಗಳಿಗೆ ಚಾಲನೆ

    BENGALURU AUG 12

    ಉದ್ಯೋಗ ಮಾರುಕಟ್ಟೆ ಹಾಗೂ ಕೈಗಾರಿಕೆಗಳ ಬೇಡಿಕೆಗಳಿಗೆ ತಕ್ಕಂತೆ ಮಾನವ ಸಂಪನ್ಮೂಲವನ್ನು ಒದಗಿಸುವ ಉದ್ದೇಶದಿಂದ ಎಂಟು ಹೊಸ ಡಿಪ್ಲೊಮಾ ಕೋರ್ಸುಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು.

    ವಿಧಾನಸೌಧದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ನೂತನ ಕೋರ್ಸುಗಳಿಗೆ ಹಸಿರು ನಿಶಾನೆ ತೋರಿದ ನಂತರ ಮಾತನಾಡಿದ ಅವರು, “ರಾಜ್ಯದಲ್ಲಿ ಹೆಚ್ಚೆಚ್ಚು ಉದ್ಯೋಗಾವಕಾಶ ಸೃಷ್ಟಿಸುವುದು, ಕೈಗಾರಿಕೆಗಳಿಗೆ ಉತ್ಕೃಷ್ಟ ಮಾನವ ಸಂಪನ್ಮೂಲ ಒದಗಿಸುವುದೇ ಹೊಸ ಕೋರ್ಸುಗಳ ಗುರಿ” ಎಂದರು.

    ಡಿಪ್ಲೊಮಾದಲ್ಲಿ ಸದ್ಯ 33 ಕೋರ್ಸ್ʼಗಳು ಇವೆ. ಇವುಗಳಲ್ಲಿ ಹಳೆಯ, ಅಪ್ರಸ್ತುತ ಕೋರ್ಸುಗಳನ್ನು ಕೈಬಿಡಲಾಗಿದೆ. ಈಗಾಗಲೇ ಹೊಸ ಪಠ್ಯವನ್ನು ಅಳವಡಿಸಲಾಗಿದೆ. ಈಗ 21ನೇ ಶತಮಾನದ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಎಂಟು ಹೊಸ ಕೋರ್ಸ್ʼಗಳನ್ನೂ ಈ ವರ್ಷದಿಂದಲೇ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

    ಹೊಸ ಕೊರ್ಸ್ʼಗಳು ಯಾವುವು?

    ಆಲ್ಟರ್ನೇಟಿವ್ ಎನರ್ಜಿ ಟೆಕ್ನಾಲಜೀಸ್‌ (Alternative Energy Technologies), ಸೈಬರ್ ಭದ್ರತೆ (Cyber security), ಆಹಾರ ಸಂಸ್ಕರಣೆ ಮತ್ತು ಸಂರಕ್ಷಣೆ (Food Processing and Preservation),  ಪ್ರವಾಸೋದ್ಯಮ (Travel & Tourism ), ಕ್ಲೌಡ್ ಕಂಪ್ಯೂಟಿಂಗ್ (Cloud Computing), ಆಟೋಮೇಷನ್ ಮತ್ತು ರೋಬೋಟಿಕ್ಸ್ (Automation and Robotics), ನಿರ್ದೇಶನ ಮತ್ತು ಚಿತ್ರಕಥೆ ರಚನೆ, ಟೀವಿ ಕಾರ್ಯಕ್ರಮಗಳ ನಿರ್ಮಾಣ (Direction screen play writing and TV production) ಹಾಗೂ ಸೈಬರ್ ಭೌತಿಕ ವ್ಯವಸ್ಥೆ ಮತ್ತು ಭದ್ರತೆ (Cyber physical system and security)  ಈ ಕೋರ್ಸುಗಳನ್ನು ಹೊಸದಾಗಿ ಆರಂಭ ಮಾಡಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಈ ನೂತನ ಕೋರ್ಸುಗಳನ್ನು ಗೌರಿಬಿದನೂರು, ಶಿರಾಳಕೊಪ್ಪ, ಕೂಡ್ಲಿಗಿ, ರಬಕವಿ ಬನಹಟ್ಟಿ, ಔರಾದ್ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್, ಚನ್ನಗಿರಿ, ಕೊಪ್ಪ, ಹೊನ್ನಾಳಿ, ಕಾಪು ಕಾಲೇಜುಗಳಲ್ಲಿ ಆರಂಭಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

    ನೂತನ ಕೋರ್ಸುಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಹೊಸ  ಪಠ್ಯಕ್ರಮದ ಪ್ರಕಾರ ಬೋಧನೆ ಮಾಡಲಾಗುವುದು ಹಾಗೂ ಈ ಪಠ್ಯಕ್ರಮವು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ಪ್ರಕಾರ ಸಿದ್ಧಪಡಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗಲಿದೆ. ಡಿಪ್ಲೋಮಾ ಪಠ್ಯಕ್ರಮಗಳನ್ನು ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಹಳೆಯ ವಿದ್ಯಾರ್ಥಿಗಳೊಂದಿಗೆ ವ್ಯಾಪಕ ಸಮಾಲೋಚನೆಯ ನಂತರ ಅಭಿವೃದ್ಧಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

    ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನೂತನ ಕೋರ್ಸುಗಳಿಗೆ ನೇರ ಪ್ರವೇಶಾತಿ ಸಿಗಲಿದ್ದು, ಮೂರನೇ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇದೊಂದು ರೀತಿಯಲ್ಲಿ ವಿಶೇಷ ಕಲಿಕಾ ವಿಷಯವಾಗಿರುತ್ತದೆ. ಅಲ್ಲದೆ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎರಡು ವರ್ಷದ ಡಿಪ್ಲೋಮಾ ನಂತರ ಮೂರನೇ ವರ್ಷದಲ್ಲಿ ಹೊಸ ರಾಷ್ಟೀಯ ಶಿಕ್ಷಣ ನೀತಿ ಅನುಸಾರ ತಮ್ಮ ಇಚ್ಛಗೆ ಅನುಗುಣವಾಗಿ ಓದಲು ಡಾಟಾ ಸೈನ್ಸ್, ಎಐ-ಎಂಎಲ್, ಪವರ್ ಎಂಜಿನಿಯರಿಂಗ್, ನವೀಕರಿಸಬಹುದಾದ ಇಂಧನ, ಇಂಡಸ್ಟ್ರಿಯಲ್ ಆಟೋಮ್ಯಾಷನ್ ಹಾಗೂ ಕೈಗಾರಿಕಾ ವಿದ್ಯುತ್ ಎಂಜಿನಿಯರಿಂಗ್, ಸುಸ್ಥಿರ ನಿರ್ಮಿತ ಪರಿಸರ, ಮೂಲಭೂತ ಎಂಜಿನಿಯರಿಂಗ್ ಸೇರಿ ಇನ್ನೂ ಹಲವಾರು ವಿಷಯಗಳನ್ನು ಆಯ್ಕೆಯ ಅನುಸಾರ ಅಧ್ಯಯನ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.

    ವಿದ್ಯಾರ್ಥಿಗಳ ದಾಖಲಾತಿಗೆ ಚಾಲನೆ:

    ಇದೇ ಸಂದರ್ಭದಲ್ಲಿ ಸಚಿವರು ರಾಜ್ಯದಲ್ಲಿರುವ ಒಟ್ಟು 87 ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಿದರು. ಇವುಗಳ ಪೈಕಿ 26 ಸರಕಾರಿ ಕಾಲೇಜುಗಳಲ್ಲಿ ಮೆರಿಟ್ ಮೇಲೆ ಪ್ರವೇಶ ನೀಡಲಾಗುವುದು. ಉಳಿದ ಕಾಲೇಜುಗಳಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ಕೊಡಲಾಗುವುದು ಎಂದು ಅವರು ಹೇಳಿದರು.ಇದೇ ವೇಳೆ ಅವರು ಸರಕಾರಿ ಪಾಲಿಟೆಕ್ನಿಕ್ ಗಳಿಗೆ ಹೊಸ ಲೊಗೊ ಬಿಡುಗಡೆ ಮಾಡಿದರು.

    ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಕಾಲೇಜು-ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ನಿರ್ದೇಶಕ ಮಂಜುನಾಥ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    23ರಿಂದ 9 ರಿಂದ 12ನೇ ತರಗತಿ ಆರಂಭ: ಬ್ಯಾಚ್ ವೈಸ್ ಪಾಠ ಪ್ರವಚನ

    MANGALURU AUG 12

    ಕೋವಿಡ್‌ ನಡುವೆಯೂ ಶೈಕ್ಷಣಿಕ ಚಟುವಟಿಕೆಗಳು ಹಳಿತಪ್ಪದಂತೆ ನೋಡಿಕೊಳ್ಳಲು ರಾಜ್ಯದಲ್ಲಿ ಆಗಸ್ಟ್ 23ರಿಂದ 9 ರಿಂದ 12ನೇ ತರಗತಿವರೆಗೆ ಶಾಲೆ-ಕಾಲೇಜುಗಳನ್ನು ಆರಂಭಿಸಲು ನಿರ್ಧಾರಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಮಂಗಳೂರಿನಲ್ಲಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು; ಆಗಸ್ಟ್ 23ರಿಂದ 9 ರಿಂದ 12 ತರಗತಿವರೆಗೆ ಶಾಲೆ-ಕಾಲೇಜುಗಳನ್ನು ಆರಂಭಿಸಲಾಗುವುದು. ತಜ್ಞರ ಸಲಹೆಯಂತೆ ಬ್ಯಾಚ್ʼವೈಸ್ ತರಗತಿ ಆರಂಭಕ್ಕೆ ನಿರ್ಧರಿಸಲಾಗಿದೆ ಎಂದರು.

    ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗಳು ಬಂದ್‌ ಆಗಿವೆ. ವಿದ್ಯಾರ್ಥಿಗಳಿ ಆನ್‌ಲೈನ್‌ ಮೂಲಕ ಮಾತ್ರ ಕಲಿಯುತ್ತಿದ್ದಾರೆ. ಶಿಕ್ಷಣ ವ್ಯವಸ್ಥೆ ಯಾವುದೇ ಕಾರಣಕ್ಕೂ ಹಳಿತಪ್ಪಬಾರದು ಎನ್ನುವುದು ಸರಕಾರದ ಉದ್ದೇಶ ಎಂದು ಅವರು ಹೇಳಿದರು.

    ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಹಾರ ತುರಾಯಿಗಳ ಬದಲಾಗಿ ಕನ್ನಡ ಪುಸ್ತಕ ಕೊಡುವ ಮೂಲಕ ಸ್ವಾಗತಿಸಲಾಯಿತು.

    ತಜ್ಞರು ಒಪ್ಪುವವರೆಗೂ ಚಿತ್ರಮಂದಿರ ಪೂರ್ಣ ಭರ್ತಿಗಿಲ್ಲ ಅನುಮತಿ

    BENGALURU AUG 11

    ಕನ್ನಡ ಚಿತ್ರರಂಗ ಸೃಜನಾತ್ಮಕ ಕ್ಷೇತ್ರವಾಗಿದ್ದು, ಅದರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ರಾಜ್ಯಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ಶೇ.100ರಷ್ಟು ಆಸನಗಳ ಭರ್ತಿಗೆ ಅವಕಾಶ ಸೇರಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಕನ್ನಡ ಸಿನಿಮಾ ನಿರ್ಮಿಸುವುದೇ ಒಂದು ಸಾಹಸ. ಸಿನಿಮಾ ರಂಗದವರು ಆರ್ಥಿಕ ಸಂಕಷ್ಟದಲ್ಲಿರುವುದು ತಿಳಿದಿರುವ ವಿಷಯ. ಈ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ. ಕೋವಿಡ್ ಸಾಂಕ್ರಾಮಿಕದಿಂದ ಎಲ್ಲರಿಗೂ ತೊಂದರೆಯಾಗಿದ್ದು, ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ ಪುನ: ಲಾಕ್‌ಡೌನ್ ಮಾಡಬೇಕಾಗುತ್ತದೆ. ಹೀಗಾಗಿ ಸಿನಿಮಾ ಮಂದಿರಗಳ ಪೂರ್ಣ ಭರ್ತಿ ಕುರಿತಂತೆ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಈಗಿರುವ ನಿಯಮಗಳೇ ಮುಂದುವರಿಯಲಿದೆ ಎಂದರು.

    ಇತ್ತೀಚೆಗೆ ಚಿತ್ರೀಕರಣದ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಸ್ಟಂಟ್‌ಮನ್ ಒಬ್ಬರು ಮೃತಪಟ್ಟಿದ್ದು ದುರದೃಷ್ಟಕರ ಎಂದ ಮುಖ್ಯಮಂತ್ರಿಗಳು, ಚಿತ್ರೀಕರಣದ ವೇಳೆ ಪಾಲಿಸಬೇಕಾದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸತಕ್ಕದ್ದು. ತಪ್ಪಿದ್ದಲ್ಲಿ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಲಾಗುವುದು ಎಂದರು.

    ಚಲನಚಿತ್ರ ಸಹಾಯಧನ ಆಯ್ಕೆ ಸಮಿತಿ ರಚನೆ ಹಾಗೂ ಸಹಾಯಧನ ಮಂಜೂರು, ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ರಚನೆ ಕುರಿತಂತೆ ಮಂಡಳಿಯ ಅಧ್ಯಕ್ಷ ಡಿ.ಆರ್.ಜಯರಾಜ್ ಹಾಗೂ ಸಾ.ರಾ.ಗೋವಿಂದು, ನಿರ್ಮಾಪಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ಬಗ್ಗೆ ಅನುದಾನ ಬಿಡುಗಡೆ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ರಚನೆ ಕುರಿತು ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

    ಹಿರಿಯ ನಟಿ ಹಾಗೂ ಅರಣ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ತಾರಾ ಅನುರಾಧ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಹಾಗೂ ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಆಯುಕ್ತ ಪಿ.ಎಸ್.ಹರ್ಷ, ಅಕಾಡೆಮಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಉದ್ಯಾನ ನಗರಿಯಲ್ಲಿ10 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

    BENGALURU AUG 11

    ಬೆಂಗಳೂರಿಗೆ ಇರುವ ಉದ್ಯಾನ ನಗರಿ ಎಂಬ ಬ್ರ್ಯಾಂಡ್ ಉಳಿಸಿಕೊಳ್ಳಬೇಕು. ಅದಕ್ಕಾಗಿ ಬೆಂಗಳೂರಿನ ಪಾರ್ಕ್, ಕ್ರೀಡಾ ಸಮುಚ್ಚಯ, ಕೆರೆ ಕಟ್ಟೆ ಪ್ರದೇಶಗಳಲ್ಲಿ ಗಿಡ ನೆಟ್ಟು ಪೋಷಿಸುವ ಕೆಲಸ ಆಗಬೇಕು. ಅಭಿವೃದ್ಧಿಗಾಗಿ ಒಂದು ಮರ ತೆರವುಗೊಳಿಸಿದರೆ ಏಳು ಸಸಿಗಳನ್ನು ನೆಡಬೇಕು ಎಂದು ಯುವ ಸಬಲಿಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹೇಳಿದರು.

    ಬೆಂಗಳೂರಿನ ವಿದ್ಯಾನಗರದಲ್ಲಿರುವ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ಕೇಂದ್ರದಲ್ಲಿ ಶಾಸಕರಾದ ಕೃಷ್ಣಬೈರೇಗೌಡ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಅವರೊಂದಿಗೆ ಸಸಿ ನೆಡುವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು.

    ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ ಎಸ್ ಎಸ್ ಹಾಗೂ ಬಿ ಎಂ ಆರ್ ಸಿ ಎಲ್ ಸಹಯೋಗದಲ್ಲಿ 10 ಸಾವಿರ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ. ಇಂದು ಈ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು. ಬೆಂಗಳೂರಿನಾದ್ಯಂತ ಕ್ರೀಡಾ ಸಮುಚ್ಚಯ, ಸರ್ಕಾರಿ ಆಸ್ಪತ್ರೆ ಆವರಣ ಸೇರಿದಂತೆ ಸರ್ಕಾರಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟು ಮೂರುವರ್ಷಗಳ ಕಾಲ ಪೋಷಿಸುವ ಜವಾಬ್ದಾರಿಯನ್ನು ಬಿ.ಎಂ.ಆರ್.ಸಿ.ಎಲ್. ಹೊತ್ತುಕೊಂಡಿದೆ. ರಸ್ತೆ, ಮೆಟ್ರೋ ಕಾಮಗಾರಿ ಸೇರಿದಂತೆ ಅಭಿವೃದ್ಧಿ ಕಾರಣಕ್ಕಾಗಿ ಮರಗಳನ್ನು ತೆರವು ಮಾಡಲಾಗಿದೆ. ಹೀಗಾಗಿ ಉದ್ಯಾನ ನಗರಿಯಲ್ಲಿ ಮರಗಳ ಪ್ರಮಾಣ ಹೆಚ್ಚಾಗಬೇಕು ಎಂಬ ಉದ್ದೇಶದೊಂದಿಗೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಸರಕಾರಿ ಜಾಗವಿದೆ‌. ಕೆ.ಸಿ. ವ್ಯಾಲಿ ಯಿಂದ ನೀರು ತರಲಾಗುತ್ತಿದೆ. ಕೆರೆ ಏರಿ ಸೇರಿದಂತೆ ಅವಕಾಶ ಇರುವ ಕಡೆಗಳಲ್ಲಿ ಎನ್ ಎಸ್ ಎಸ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಿ. ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಶಾಸಕ ಕೃಷ್ಣಬೈರೇಗೌಡ ಹೇಳಿದರು.

    ದೂರದೃಷ್ಟಿ ಇಟ್ಟುಕೊಂಡು ಸಮರ್ಥವಾಗಿ ವಿದ್ಯುತ್ ನಿರ್ವಹಣೆ ಮಾಡಲು ಸಿಎಂ ಸೂಚನೆ

    BENGALURU AUG 11

    ವಿದ್ಯುತ್ ಕ್ಷೇತ್ರದಲ್ಲಿ ಸಾವಲಂಬಿ ಆಗುವುದರ ಜೊತೆಗೆ ಸಮರ್ಥವಾಗಿ ವಿದ್ಯುತ್ ನಿರ್ವಹಣೆಯನ್ನು ದೂರದೃಷ್ಟಿಯನ್ನು ಇಟ್ಟುಕೊಂಡು ಕೆಲಸ ಮಾಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸೂಚನೆ ನೀಡಿದರು.‌

    ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಸಿದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.

    ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆ ಇನ್ನು ಬಹಳ ವ್ಯವಸ್ಥಿತವಾಗಿ ಮಾಡಬೇಕು. ಮಾರುಕಟ್ಟೆ ಸ್ಥಿತಿಗತಿಯನ್ನು ಆಧರಿಸಿ ಹೆಚ್ಚಿನ ದರಕ್ಕೆ ವಿದ್ಯುತ್ತನ್ನು ಮಾರಾಟ ಮಾಡುವಂತಾಗಬೇಕು. ಕರ್ನಾಟಕ ವಿದ್ಯುತ್ ನಿಗಮದಿಂದ ವಿದ್ಯುತ್ ಉತ್ಪಾದನೆ ಅತ್ಯಂತ ದಕ್ಷತೆಯಿಂದ ಆಗಬೇಕು. ಜಲ ಮತ್ತು ವಿದ್ಯುತ್ ಘಟಕಗಳು ಅತಿ ಹೆಚ್ಚು ಕಾರ್ಯ ಕ್ಷಮತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಿಸಲಾಗಿರುವ ಬೋರ್ ವೆಲ್ ಗಳಿಗೆ ಯಾವುದೇ ರೀತಿಯ ತಡ ಮಾಡದೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಕೋವಿಡ್ ಸಂದರ್ಭದಲ್ಲಿ ವಿಶೇಷವಾಗಿ ಆಸ್ಪತ್ರೆಗಳಿಗೆ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿರ್ದೇಶನ ನೀಡಿದರು.

    ರಾಜ್ಯದ 15 ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ 7 ಗಂಟೆಗಳ ವಿದ್ಯುತ್ ಪೂರೈಕೆಯಾಗುತ್ತಿದ್ದು, ಉಳಿದ ಜಿಲ್ಲೆಗಳಲ್ಲಿ 5 ಗಂಟೆಗಳ ವಿದ್ಯುತ್ ಪೂರೈಕೆಯೂ ಸರಿಯಾಗಿ ಆಗುತ್ತಿಲ್ಲ. ಈ ಅಸಮಾನತೆಯನ್ನು ಹೋಗಲಾಡಿಸಲು ನೀಲನಕ್ಷೆಯನ್ನು ಸಿದ್ಧಪಡಿಸಿ ಕಾಲಮಿತಿಯಲ್ಲಿ ಯೋಜನಾಬದ್ಧವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.

    ವಿದ್ಯುತ್ ಸೋರಿಕೆಯನ್ನು ತಡೆಗಟ್ಟಿ ಒಟ್ಟಾರೆ ಇಂಧನ ವ್ಯವಸ್ಥೆಯ ಸುಧಾರಣೆಗೆ ಒತ್ತು ನೀಡಬೇಕು. ರಾಜ್ಯದಲ್ಲಿ ನವೀಕೃತ ಮೂಲಗಳ ಸ್ಥಾಪಿತ ಸಾಮರ್ಥ್ಯ 15184.13 ಮೆ. ವ್ಯಾಟ್.ಗಳಿದ್ದು ದೇಶದಲ್ಲಿಯೇ ಕರ್ನಾಟಕ ಮುಂಚೂಣಿಯಲ್ಲಿದೆ. ಭವಿಷ್ಯದ ದೃಷ್ಟಿಯಿಂದ ನವೀಕೃತ ಇಂಧನಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.‌

    ಗಂಗಾ ಕಲ್ಯಾಣ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಎಲ್ಲಾ ಅಭಿವೃದ್ಧಿ ನಿಗಮಗಳು ಸೇರಿದಂತೆ ಒಟ್ಟು 18569 ಕೊಳವೆಬಾವಿಗಳ ವಿದ್ಯುದೀಕರಣಗೊಳಿಸುವ ಗುರಿ ಇದೆ. ಇದಕ್ಕಾಗಿ ಪ್ರತಿ ಪಂಪ್ ಸೆಟ್ ವಿದ್ಯುದೀಕರಣಕ್ಕೆ ಬಿಡುಗಡೆ ಮಾಡುವ 50 ಸಾವಿರ ರೂ.ಗಳ ವೆಚ್ಚವನ್ನು 1.2 ಲಕ್ಷಕ್ಕೆ ಹೆಚ್ಚಿಸುವ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಸಭೆಯಲ್ಲಿ ಇಂಧನ ಸಚಿವ ಸುನೀಲ್ ಕುಮಾರ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್,ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕೆ.ಪಿ.ಟಿ.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕಿ ಡಾ. ಎನ್.ಮಂಜುಳಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಶ್ರೀ ಇಭರಾಮಪುರ ಅಪ್ಪಾವರು


    ಆಗಸ್ಟ್ 11, ಬುಧವಾರ ಶ್ರೀ ಇಭರಾಮಪುರ ಅಪ್ಪಾವರ 1789 -1869 ಆರಾಧನೆಯ ಪ್ರಯುಕ್ತ ಈ ಲೇಖನ.


    ವಿಷ್ಣುತೀರ್ಥಚಾರ್ಯ

    ಪುಣ್ಯ ಭರತ ಭೂಮಿಯಲ್ಲಿ ಹಲವು ದಾರ್ಶನಿಕರು , ಜ್ಞಾನಿಗಳು ಮನುಕುಲದ ಉದ್ಧಾರಕ್ಕಾಗಿ ಅವತರಿಸಿದ್ದಾರೆ. ಆಚಾರ್ಯತ್ರೈಯರಲ್ಲಿ ಒಬ್ಬರಾದ ದ್ವೈತ ಸಿದ್ಧಾಂತದ ಪ್ರತಿಷ್ಠಾಪನಾಚಾರ್ಯರಾದ ಜಗದ್ಗುರು ಮಧ್ವಾಚಾರ್ಯರ ನೇರ ಪರಂಪರೆಯಲ್ಲಿ ಬಂದ ಶ್ರೀ ವಿಜಯೀಂದ್ರತೀರ್ಥರ ಕರಕಮಲ ಸಂಜಾತರಾಜ ಶ್ರೀ ಸುಧೀಂದ್ರತೀರ್ಥರ ವರಕುಮಾರರಾದ ಕಲಿಯುಗ ಕಲ್ಪತರು ಕಾಮಧೇನು ಶ್ರೀರಾಘವೇಂದ್ರ ಗುರುಸಾರ್ವಭೌಮರ ಕಾರ್ಯಕ್ಷೇತ್ರವಾದ ಮಂತ್ರಿಸಿದ್ಧಿ ಕ್ಷೇತ್ರ ಮಂತ್ರಾಲಯ. ಈ ಮಂತ್ರಾಲಯದ ಹತ್ತಿರದ ಪುಟ್ಟ ಗ್ರಾಮ ಇಭರಾಮಪುರ. ಗ್ರಾಮಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ.

    ಶ್ರೀರಾಮಚಂದ್ರ ದೇವರು ಅಂಬಾರಿಯಲ್ಲಿ ಬಂದು ಸ್ವಲ್ಪ ಕಾಲ ವಿಶ್ರಾಂತಿಸಿದ ಸ್ಥಳವೆಂದು ಸ್ಥಳ ಪುರಾಣ ಹೇಳುತ್ತದೆ. ಈ ಗ್ರಾಮದಲ್ಲಿ ಸದಾಚಾರ ಸಂಪನ್ನರಾದ ಅಹೋಬಲಾಚಾರ್ಯ ಮತ್ತು ಸಾಧ್ವಿ ಕೃಷ್ಣಾಬಾಯಿ ದಂಪತಿಗಳು ನೆಲಸಿದ್ದರು. ಅಹೋಬಲಾಚಾರ್ಯರಿಗೆ ಬಹುವರ್ಷದಿಂದ ಸಂತಾನವಿರಲಿಲ್ಲ. ಕುಲಗುರುಗಳಾದ ಶ್ರೀರಾಘವೇಂದ್ರ ಸ್ವಾಮಿಗಳು ಹಾಗೂ ಕುಲ ಸ್ವಾಮಿಯಾದ ತಿರುಪತಿಯ ಶ್ರೀನಿವಾಸನ ವಿಶೇಷ ಅನುಗ್ರಹದಿಂದ 1789 ವಿಜಯದಶಮಿಯಂದು ಸಂತಾನ ಪ್ರಾಪ್ತಿಯಾಗಿ ಆ ಮಗುವಿಗೆ ಕೃಷ್ಣಾಚಾರ್ಯವೆಂದು ನಾಮಕರಣ ಮಾಡಿದರು.

    ಚಿಕ್ಕವಯಸ್ಸಿನಲ್ಲೇ ಅಪಾರವಾದ ಪ್ರೌಢತೆಯನ್ನು ತೋರಿಸಿ ಮೆರೆದ ಜನರಿಗೆ ಆಶ್ಚರ್ಯವನ್ನುಂಟು ಮಾಡುತಿದ್ದರು. ಕೃಷ್ಣಚಾರ್ಯರು ಮಲಗಿದ್ದ ತೊಟ್ಟಿಲು ತಾನಾಗಿಯೇ ತೂಗುತ್ತಿತ್ತು. ತಾಯಿ ಪುರಾಣ / ಪ್ರವಚನಕ್ಕೆ ಕರೆದುಕೊಂಡು ಹೋದಕಡೆ ಪುರಾಣದಲ್ಲಿ ಸಜ್ಜನರಿಗೆ ತೊಂದರೆಯಾದ ಪ್ರಸಂಗ ಬಂದರೆ ಕೂಸು ಬಿಕ್ಕಿಬಿಕ್ಕಿ ಅಳುತ್ತಿತು. ದುರ್ಜನರಿಗೆ ಭಾವಂತ ಶಿಕ್ಷೆಯನ್ನು ಕೊಟ್ಟ ಪ್ರಸಂಗ ಬಂದರೆ ಕೇಕೆ ಹಾಕಿ ನಗುವುದನ್ನು ಕಂಡು ಜನರಿಗೆ ಆಶ್ಚರ್ಯವಾಗುತ್ತಿತು.

    ಅಹೋಬಲಾಚಾರ್ಯರು ಮಗನಿಗೆ 7ನೆ ವಯಸ್ಸಿನಲ್ಲೇ ಉಪನಯನ ಮಾಡುತ್ತಾರೆ. ಅಪ್ಪಾವರ ಉಪನಯನ ನಂತರ ಶಾಸ್ತ್ರದ ಅಭ್ಯಾಸ ತಮ್ಮಲ್ಲಿಯೇ ಮಾಡಿಸಬೇಕೆಂಬ ಆಸೆ, ಆದರೆ ಚಿಕ್ಕ ವಯಸ್ಸಿನಲ್ಲೇ ದೇವರ , ವೇದ ಶಾಸ್ತ್ರದ ಮೇಲೆ ಅಷ್ಟು ಆಸಕ್ತಿಯನ್ನು ಹೊಂದಿದ ಕೃಷ್ಣಾಚಾರ್ಯರು ಉಪನಯನ ಆದಮೇಲೆ ಯಾವ ಆಸಕ್ತಿಯನ್ನು ತೋರುತ್ತಿರಲಿಲ್ಲ.ಈ ಮನಃಸ್ಥಿತಿಯಲ್ಲಿ ಕೃಷ್ಣಾಚಾರ್ಯರನ್ನು ನೋಡಿ ಅಹೋಬಲಾಚಾರ್ಯರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಒಂದು ದಿವಸ ಮಗನಿಗೆ ಅಹೋಬಲಾಚಾರ್ಯರು ಕೋಪದಿಂದ ಬೈದು ಬುದ್ಧಿ ಹೇಳುತ್ತಾರೆ. ಮನನೊಂದ ಕೃಷ್ಣಾಚಾರ್ಯರು ಮನೆಬಿಟ್ಟು ಅಳುತ್ತಾ ಊರಿನ ಹತ್ತಿರದ ಕಾಡಿನಲ್ಲಿ ಕುಳಿತಿರುತ್ತಾರೆ.

    ಅಶ್ವಥಾಮಾಚಾರ್ಯರಿಂದ ಅನುಗ್ರಹ :

    ಮರದ ಕೆಳಗಡೆ ಕುಳಿತು ಕೃಷ್ಣಾಚಾರ್ಯರು ಅಳುವುದನ್ನು ನೋಡಿದ ಮಹಾ ತಪಸ್ವಿತರಹ ಇದ್ದ ಒಬ್ಬ ವೃದ್ಧ ಬ್ರಾಹ್ಮಣ ಕೃಷ್ಣಾಚಾರ್ಯರನ್ನು ವಿಚಾರಿಸಿ ಅವರ ನಾಲಿಗೆಯ ಮೇಲೆ ಬೀಜಾಕ್ಷರಗಳನ್ನು ಬರೆದು ನಿನ್ನ ಜೀವ ಸ್ವರೂಪವೇ ಬೇರೆ ನಿನ್ನ ಅವತಾರ ನಿನಗೆ ಅರಿವು ಆಗುತ್ತೆ ಹಾಗೂ ಮಂತ್ರಾಲಯದ ಗುರುಸಾರ್ವಭೌಮರಲ್ಲಿ ವಿಶೇಷ ಅನುಗ್ರಹ ಆಗುತ್ತೆ ಅಂತ ಹೇಳಿ ತಾವು ಅಶ್ವಥಾಮಾಚಾರ್ಯರೆಂದು ಬೀಜಾಕ್ಷರಗಳು ಬರೆಯೋ ಮುಂಚೆ ಹೇಳಿಕೊಂಡು ಅದೃಶ್ಯರಾಗುತ್ತಾರೆ.

    ಅಶ್ವಥಾಮಾಚಾರ್ಯರ ಈ ವಿಶೇಷ ಅನುಗ್ರಹದಿಂದ ಕೃಷ್ಣಾಚಾರ್ಯರು ತಮ್ಮ ಸ್ವರೂಪವನ್ನು ಅರಿತು ಅಪರೋಕ್ಷವನ್ನು ಹೊಂದಿ ಜನರ ಬಾಯಿಯಲ್ಲಿ ಅಪ್ಪ ಅಪ್ಪ ಎಂದು ಕರೆಸಿಕೊಂಡು ಕೃಷ್ಣಾಚಾರ್ಯರು ಅಪ್ಪಾವರೆಂದು ಪ್ರಸಿದ್ಧಿ ಹೊಂದುತ್ತಾರೆ.

    ಶ್ರೀ ರಾಘವೇಂದ್ರ ಚಿತ್ತಜ್ಞಂ :

    ಶ್ರೀ ಅಪ್ಪಾವರಿಗೆ ಶ್ರೀ ಮಂತ್ರಾಲಯ ಪ್ರಭುಗಳ ಮೇಲೆ ಅಪರಿಮಿತವಾದ ಭಕ್ತಿ. ಶ್ರೀ ರಾಯರು ಸಹ ಶ್ರೀ ಅಪ್ಪಾವರ ಮೇಲೆ ಅತ್ಯಂತ ಅಂತಃಕರಣ – ಪ್ರೀತಿ – ಮಾತೃವಾತ್ಸಲ್ಯ ತೋರುತ್ತಿದ್ದರು. ಇವರಿಬ್ಬರ ಸಂಬಂಧ ಹಸು – ಕರುವಿನ ಸಂಬಂಧ.ಶ್ರೀ ರಾಯರು ಸಹ ಶ್ರೀ ಅಪ್ಪಾವರ ವಿಷಯದಲ್ಲಿ ಅತ್ಯಂತ ಪ್ರಸನ್ನರಾಗಿದ್ದರು.ಶ್ರೀ ರಾಯರು ನಡೆಸುವ ಸಕಲ ವ್ಯಾಪಾರವೂ ಶ್ರೀ ಅಪ್ಪಾವರಿಗೆ ಮೊದಲೇ ತಿಳಿದಿರುತ್ತಿತ್ತು.

    ಶ್ರೀ ರಾಘವೇಂದ್ರ ಚಿತ್ತಜ್ಞಂ ಸಾರಮಾತ್ರ ವದಾವದಂ ।
    ದೂರೀಕೃತ ದುರಾಚಾರಂ ಕೃಷ್ಣಾಚಾರ್ಯ ಗುರುಂಭಜೇ ।।
    ಅಗಮ್ಯ ಮಹಿಮರೆಂದು ಜಗತ್ಪ್ರಸಿದ್ಧರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಮಹಿಮೆಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಸಾಮರ್ಥ್ಯ ಉಳ್ಳವರಾದರಿಂದ ” ಶ್ರೀ ರಾಘವೇಂದ್ರ ಚಿತ್ತಜ್ಞಂ ” ಎಂದು ಹೆಸರು ಪಡೆದರು

    ಶ್ರೀ ಅಪ್ಪಾವರಿಗೆ ಪಂಚಮುಖಿ ಪ್ರಾಣದೇವರ ಪ್ರಾಪ್ತಿ :

    ಮೈಸೂರಿನಲ್ಲಿ ತಮ್ಮ ಮಿತ ಪರಿವಾರದೊಡನೆ ಶ್ರೀ ಅಪ್ಪಾವರು ಶ್ರೀ ಮನ್ಮಹಾರಾಜರ ಅರಮನೆಯ ಸಮೀಪದಲ್ಲಿಯೇ ಒಂದು ಚಿಕ್ಕ ಮನೆಯಲ್ಲಿ (ಈಗಿನ ಕಟ್ಟೆ ಮನೆ) ಬಿಡಾರ ಮಾಡಿದರು. ಈ ವಾರ್ತೆ ಗ್ರಾಮದಲ್ಲಿರುತ್ತಿದ್ದ ಸಮೀಪವರ್ತಿಗಳಿಗೆ ಮಾತ್ರವಲ್ಲದೆ ಅರಮನೆಯವರೆಲ್ಲರಿಗೂ ಮುಮ್ಮಡಿ ಕೃಷ್ಣರಾಜ ಒಡೆಯರಿಗೂ ತಲುಪಿತ್ತು.

    ಇದಾದ ಎಂಟು ದಿನಕ್ಕೆ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರು ಇದ್ದಕ್ಕಿದ್ದ ಹಾಗೆ ಪಾದಚಾರಿಗಳಾಗಿ ಶ್ರೀ ಅಪ್ಪಾವರ ಸಂದರ್ಶನಕ್ಕೆ ಹೊರಡುವುದಾಗಿ ನಿಶ್ಚಯಮಾಡಿಕೊಂಡು ಕೇವಲ ಶ್ರೀ ಮನ್ಮಹಾರಾಣಿಯವರಿಗೆ ಮಾತ್ರವೇ ಈ ವಾರ್ತೆಯನ್ನು ತಿಳಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರು ಶ್ರೀ ಅಪ್ಪಾವರನ್ನು ಸಂದರ್ಶನ ಮಾಡಲು ಅವರು ತಂಗಿದ್ದ ಕಟ್ಟೆ ಮನೆಗೆ ಮಾರು ವೇಷದಲ್ಲಿ ಪಾದಚಾರಿಗಳಾಗಿ ಬಂದರು.

    ಶ್ರೀ ಅಪಾವರು ಧ್ಯಾನದಲ್ಲಿರುವ ಸಂಗತಿಯನ್ನು ತಿಳಿದು ಅಲ್ಲಿಯೇ ಹೊರಗೆ ಇದ್ದ ಕಟ್ಟೆ ಮೇಲೆ ಕುಳಿತು ಕಾಯುತ್ತಿದ್ದರು. ಅದನ್ನು ಗ್ರಹಣ ಮಾಡಿದ ಶ್ರೀ ಅಪ್ಪಾವರು ತಮ್ಮ ಶಿಷ್ಯರನ್ನು ಕರೆದು “ ಹೊರಗಡೆ ಮಹಾರಾಜರು ಮಾರುವೇಷದಲ್ಲಿ ಬಂದು ಕಾಯುತ್ತಾ ಕುಳಿತಿದ್ದಾರೆ, ಹೋಗಿ ಅವರನ್ನು ರಾಜ ಮರ್ಯಾದೆಯಿಂದ ಬರಮಾಡಿಕೊಂಡು ಬನ್ನಿ “ ಎಂದು ಆಜ್ಞಾಪಿಸಿದರು. ಗುರುಗಳ ಆಜ್ಞೆಯಂತೆ ಮಹಾರಾಜರನ್ನು ಬರಮಾಡಿಕೊಂಡರು. ಕೇವಲ ಮಹಾರಾಣಿಯವರಿಗೆ ಮಾತ್ರ ತಿಳಿದ ಈ ವಿಷಯವು ಶ್ರೀ ಅಪ್ಪಾವರ ಜ್ಞಾನ ದೃಷ್ಟಿಗೆ ತಿಳಿದ ಸಂಗತಿಯನ್ನು ಕಂಡು ಮಹಾರಾಜರಿಗೆ ಆಶ್ಚರ್ಯದ ಜೊತೆ ಸಂತೋಷವೂ ಆಯಿತು.ಶ್ರೀ ಅಪ್ಪಾವರ ದರ್ಶನದಿಂದ ಮನಃಸಂತೋಷಭರಿತರಾದ ಮಹಾರಾಜರು ಅವರ ಪಾದಾರವಿಂದಗಳಿಗೆ ಶಿರಃಸಾಷ್ಟಾಂಗ ನಮಸ್ಕರಿಸಿದರು.

    ನಂತರ ಈರ್ವರ ನಡುವೆಯೂ ಸಂದರ್ಶನ ಪ್ರಾರಂಭವಾಯಿತು. ಹೀಗೇ ಸಂದರ್ಶನ ನಡೆಯುತ್ತಿರುವಾಗ ಮಹಾರಾಜರು ಶ್ರೀ ಅಪ್ಪಾವರಲ್ಲಿ ಸ್ವಾಮೀ !! ಬಹಳ ದಿನಗಳಿಂದ ನನ್ನ ಮನದಲ್ಲಿ ಒಂದು ಪ್ರಶ್ನೆ ಕಾಡುತ್ತಿದೆ, ತಾವು ನನ್ನ ಮೇಲೆ ದಯತೋರಿ ಅದನ್ನು ಪರಿಹರಿಸಬೇಕೆಂದು ಕಳಕಳಿಯಿಂದ ಪ್ರಾರ್ಥಿಸಿದರು. ಶ್ರೀ ಅಪ್ಪಾವರು ಏನೆಂದು ವಿಚಾರಿಸಿದಾಗ ಮಹಾರಾಜರು, ಸ್ವಾಮೀ !! “ ನಾನು ಪ್ರಸ್ತುತ ಜನ್ಮದಲ್ಲಿ ಇಂತಹ ಒಂದು ರಾಜ ವೈಭೋಗವನ್ನು ಅನುಭವಿಸಬೇಕಾದರೆ, ಪೂರ್ವ ಜನ್ಮದ ಸುಕೃತದ ಫಲವೇ ಆಗಿರಬೇಕು. ದಯಮಾಡಿ ಅದರ ವೃತ್ತಾಂತವನ್ನು ತಿಳಿಸಿಕೊಡಿ” ಎಂದು ಮನವರಿಕೆ ಮಾಡಿಕೊಂಡರು. ಆಗ ಅಪ್ಪಾವರು ಮುಗುಳ್ನಗೆ ಬೀರುತ್ತಾ ಮಹಾರಾಜರ ಪೂರ್ವ ಜನ್ಮದ ವೃತ್ತಾಂತವನ್ನು ಈ ರೀತಿ ತಿಳಿಸುತ್ತಾರೆ.

    ಮಹಾರಾಜರು ತಮ್ಮ ಪೂರ್ವ ಜನ್ಮದಲ್ಲಿ ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕನಾದ ಶ್ರೀ ವೆಂಕಟೇಶ್ವರಸ್ವಾಮಿ ಸನ್ನಿಧಾನ (ತಿರುಮಲೆ) ದಲ್ಲಿ ಕಾರ್ಯರೂಪಕ ಸೇವೆಯನ್ನು ಸಲ್ಲಿಸುತ್ತಿದ್ದರು. ಸ್ವಾಮಿಯ ಅಲಂಕಾರಕ್ಕೆ ಬೇಕಾದ ಹೂವು – ತುಳಸಿಯ ವ್ಯವಸ್ಥೆ ಹಾಗೂ ನಂತರದ ನಿರ್ಮಾಲ್ಯ ವಿಸರ್ಜನೆ (ಸರೋವರದಲ್ಲಿ) ಯು ಅವರ ಕಾರ್ಯಧರ್ಮವಾಗಿತ್ತು. ನಿತ್ಯವೂ ಇದೇ ಸೇವೆಯಲ್ಲಿ ನಿರತರಾದ ಆಚಾರ್ಯರು, ಒಂದು ದಿನ ನಿರ್ಮಾಲ್ಯ ವಿಸರ್ಜನೆಗೆಂದು ಸರೋವರಕ್ಕೆ ಬಂದಾಗ ತಂದ ನಿರ್ಮಾಲ್ಯದಲ್ಲಿ ಶ್ರೀನಿವಾಸ ದೇವರ ಅಪರೂಪವಾದ ರಾಜಮುದ್ರಿಕೆ ಕಂಡುಬಂತು. ಸ್ವಾಮಿಯ ಮೂರ್ತಿ ದರ್ಶನದ ತೇಜಸ್ಸಿಗೇ ಮಿತಿಯಿಲ್ಲವಾದರೆ ಇನ್ನು ಸಾಕ್ಷಾತ್ ಅವನು ಧರಿಸಿದ ರಾಜಮುದ್ರಿಕೆಯ ಅಪೂರ್ವವಾದ ತೇಜಸ್ಸು ಆಚಾರ್ಯರನ್ನು ಅನಂತ ಆಕರ್ಷಿಸಿ ಅದನ್ನು ಧರಿಸುವಂತೆ ಮನೋಪ್ರೇರಿತವಾಯಿತು. ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕನಾದ ಸ್ವಾಮಿಯ ಆಭರಣವನ್ನು ಸಾಮಾನ್ಯ ಮಾನವರಾದ ನಾವು ಅಪೇಕ್ಷಿಸುವುದೇ ತಪ್ಪು, ಅದರಲ್ಲಿಯೂ ಧರಿಸಿದ್ದು ಸರಿಯಾಗಲಾರದು ಎಂದು ತಿಳಿದು ಮತ್ತೆ ಅದನ್ನು ಸ್ವಾಮಿಯ ಸನ್ನಿಧಾನದಲ್ಲಿ ಅರ್ಪಣೆ ಮಾಡಿದರು. ಅಂದು ನೀವು ಸ್ವಾಮಿಯ ರಾಜಮುದ್ರಿಕೆಯನ್ನು ಕ್ಷಣ ಮಾತ್ರ ಧರಿಸಿದ ಕಾರಣ ಪ್ರಸ್ತುತ ಜನ್ಮದಲ್ಲಿ ಅನುಗ್ರಹ ಪೂರ್ವಕ ರಾಜವೈಭೋಗವು ಲಭ್ಯವಾಗಿದೆ ಎಂದು ತಿಳಿಸಿದರು.

    ಇದನ್ನು ಕೇಳಿ ಆನಂದ ಭರಿತರಾದ ಮಹಾರಾಜರು ಸ್ವಾಮೀ !! ಪೂರ್ವ ಜನ್ಮದ ವೃತ್ತಾಂತವನ್ನು ಹೇಳಿ ಮಹದಾನುಗ್ರಹ ಮಾಡಿದ್ದೀರಿ. ತಮ್ಮಲ್ಲಿ ನಾವೇನಾದರೂ ಸಮರ್ಪಿಸಿಕೊಳ್ಳಬೇಕು ಎಂದು ಮನಃ ಸಂತೋಷಭರಿತರಾಗಿ ಪ್ರಾರ್ಥಿಸಿದರು. ಆಗ ಶ್ರೀ ಅಪ್ಪಾವರು ಅರಮನೆಯ ಈಶಾನ್ಯ ಭಾಗವನ್ನು ಖನನ ಮಾಡಿ ಆ ಭೂ ಗೃಹದಲ್ಲಿ ಇರುವ ವಸ್ತುವೊಂದನ್ನು ತಮಗೆ ಕೊಡುವುದಾಗಿ ವಿವರಣೆ ಮಾಡಿದರು.
    ಭೂ ಖನನ ಮಾಡಿದ ಮೇಲೆ ಅಲ್ಲಿ ಕಂಡು ಬಂದ ಬಹಳ ಅಪರೂಪವಾದ, ಅದ್ಭುತವಾದ ಹಾಗೂ ನಯನ ಮನೋಹರವಾದ ಶ್ರೀ ಪಂಚಮುಖಿ ಪ್ರಾಣದೇವರ ತೇಜೋಮಯವಾದ ವಿಗ್ರಹವನ್ನು ಕಂಡು ಮಹಾರಾಜರಿಗೆ ಅನಂತ ಸಂತೋಷದ ಜೊತೆಗೆ ಮನದಲ್ಲಿ ಪ್ರಶ್ನೆಯೂ ಉದ್ಭವವಾಯಿತು. ಇಂತಹ ಅದ್ಭುತವಾದ ಮೂರ್ತಿಯು ನಮ್ಮ ಅರಮನೆಯಲ್ಲಿ ಹೇಗೆ ಬಂದಿತು, ಇದರ ಮಹಿಮೆಯನ್ನು ತಿಳಿಸಿಕೊಡಿ ಎಂದು ಶ್ರೀ ಅಪ್ಪಾವರಲ್ಲಿ ಪ್ರಾರ್ಥಿಸಿದರು.

    ಆಗ ಶ್ರೀ ಅಪ್ಪಾವರು ಈ ರೀತಿ ವಿವರಣೆ ಮಾಡುತ್ತಾರೆ. “ಮಹಾಭಾರತದಲ್ಲಿ ಪಾಂಡವರು ರಾಜಸೂಯ ಮಹಾಯಾಗವನ್ನು ನಿರ್ವಹಿಸುವ ಸಂದರ್ಭದಲ್ಲಿ ದೇವಶಿಲ್ಪಿಯಾದ ವಿಶ್ವಕರ್ಮನನ್ನು ಕರೆಯಿಸಿ ಈ ಅಭೂತಪೂರ್ವವಾದ ವಿಗ್ರಹವನ್ನು ನಿರ್ಮಿಸಿದರು. ವಿಶೇಷ ಪೂಜೆ ಉಪಾಸನೆಯೊಂದಿಗೆ ಪರಮಾತ್ಮನ ಉಪಸ್ಥಿತಿಯಲ್ಲಿ ಮಹಾಯಾಗವು ನಿರ್ವಿಘ್ನವಾಗಿ ಜರುಗಿತು. ಕಾಲಾನಂತರ 12 ವರ್ಷ ವನವಾಸವಾಯಿತು. ಇನ್ನು 13ನೇ ವರ್ಷದ ಅಜ್ಞಾತವಾಸದಲ್ಲಿ ಪೂಜೆ, ಉಪಾಸನೆ ಬಹಳ ಕಷ್ಟವಾಯಿತು (ಶ್ರೀ ಪಂಚಮುಖಿ ಪ್ರಾಣದೇವರ ವಿಗ್ರಹವು ಜೊತೆಗಿದ್ದರೆ ಅವರು ಪಾಂಡವರೆಂದು ಗುರುತಿಸಲ್ಪಡುತ್ತಾರೆ, ಹಾಗಾದ ಪಕ್ಷದಲ್ಲಿ ಮತ್ತೆ 12 ವರ್ಷ ವನವಾಸ 1 ವರ್ಷ ಅಜ್ಞಾತವಾಸ ಮಾಡಬೇಕಾಗಿತ್ತು). ಇಂತಹ ಸಂದರ್ಭದಲ್ಲಿ ಈ ಅಭೂತಪೂರ್ವವಾದ ವಿಗ್ರಹವನ್ನು ಭೂ ಗರ್ಭದಲ್ಲಿ ಭದ್ರ ಮಾಡಿದರು (ಭೂ ಗರ್ಭದಲ್ಲಿದ್ದರೆ ಅದರ ಸನ್ನಿಧಾನ ಮತ್ತು ಅದರಲ್ಲಿಯ ವಿಶೇಷ ಶಕ್ತಿ ಯುಗಾಂತರದಲ್ಲಿಯೂ ಹಾಗೆಯೇ ಇರುತ್ತದೆ ಎಂದು ಶಾಸ್ತ್ರ ಹೇಳುತ್ತದೆ). “ ಕಾಲಕ್ರಮೇಣ ಕುರುಕ್ಷೇತ್ರವಾಯಿತು, ಯುಗಗಳು ಕಳೆದವು, ಅರಮನೆ ನಿರ್ಮಾಣವಾಯಿತು ಹಾಗೂ ಈ ಕಾರಣವಾಗಿಯೇ ತಾವು ಹರಿಪ್ರೇರಣೆಯಂತೆ ಆಗಮಿಸಿರುವುದಾಗಿಯೂ ತಿಳಿಸಿದರು. ಇದನ್ನು ಕೇಳಿ ಆನಂದಭರಿತರಾದ ಮಹಾರಾಜರು ಸಕಲ ವೈಭವದೊಂದಿಗೆ ಉತ್ಸವ, ರಾಜಮರ್ಯಾದೆ ಪೂರಕವಾಗಿ ಈ ಅಭೂತಪೂರ್ವವಾದ ವಿಗ್ರಹವನ್ನು ಶ್ರೀ ಅಪ್ಪಾವರಲ್ಲಿ ಸಮರ್ಪಣೆ ಮಾಡಿದರು.

    ಇದರ ಗುರುತಾಗಿ ರಾಜಾಲಯದಲ್ಲಿಯೇ ಶ್ರೀ ಮಂತ್ರಾಲಯ ಪ್ರಭುಗಳ ಮೃತ್ತಿಕಾ ವೃಂದಾವನವನ್ನು ಸ್ಥಾಪಿಸಿದರು. ನಂತರ ಶ್ರೀ ಅಪ್ಪಾವರು ಪಂಚಮುಖಿ ಪ್ರಾಣದೇವರನ್ನು ತಮ್ಮ ಸ್ವಸ್ಥಾನವಾದ ಇಭರಾಮಪುರಕ್ಕೆ ತೆಗೆದುಕೊಂಡು ಬಂದು ವಿಶೇಷ ಉಪಾಸನೆಯೊಂದಿಗೆ ಬಂದ ಭಕ್ತರಿಗೆಲ್ಲಾ ಅನುಗ್ರಹ ಮಾಡುತ್ತಾ ಮತ್ತಷ್ಟು ವಿಜೃಂಭಿಸತೊಡಗಿದರು. ಪರಮಾತ್ಮನ ಅನುಗ್ರಹಕ್ಕೆ ಮಿತಿಯೇ ಇಲ್ಲವೆಂಬ ಹಾಗೆ ಮಹಾರಾಜರಿಗೆ ಪ್ರಸ್ತುತ ಜನ್ಮದಲ್ಲಿ ಅಪರೂಪವಾದ ರಾಜ ವೈಭೋಗವು ದೊರಕಿದ್ದು ಒಂದು ಕಡೆ ಆದರೆ, ಇನ್ನು ಶ್ರೀ ಅಪ್ಪಾವರು ಕೇವಲ ಪೂರ್ವ ಜನ್ಮದ ವೃತ್ತಾಂತ ಮಾತ್ರವಲ್ಲದೇ ಹಿಂದಿನ ಏಳು ಜನ್ಮದ ವೃತ್ತಾಂತವನ್ನು ಹೇಳುತ್ತಿದ್ದರು.

    ಗುರು ಜಗನ್ನಾಥದಾಸರಿಗೆ ಅನುಗ್ರಹ:

    ಶ್ರೀ ವೆಂಕಟಗಿರಿ ಆಚಾರ್ಯರು ಮತ್ತು ಶ್ರೀ ಇಭರಾಮಪುರದ ಅಪ್ಪಾವರು ಸ್ನೇಹಿತರು. ಇಬ್ಬರು ಒಬ್ಬರಿಗೊಬ್ಬರು ಅಣ್ಣ ತಮ್ಮನ ಹಾಗೆ ಆತ್ಮೀಯ ಸಂಬಂಧ. ಶ್ರೀ ವೆಂಕಟಗಿರಿ ಆಚಾರ್ಯರು ಒಂದು ಸಂದರ್ಭದಲ್ಲಿ ಇಭರಾಮಪುರಕೆ ಬಂದಿರುತ್ತಾರೆ. ಬಂದ ಸಂದರ್ಭದಲ್ಲಿ ಅಪ್ಪಾವರು ಪ್ರಾಣದೇವರ ಪೂಜೆಯಲ್ಲಿ ನಿರತರಾಗಿರುತ್ತಾರೆ, ಆಚಾರ್ಯರು ನೊಂದ ಮನಸ್ಸಿನಿಂದ ಅಪ್ಪಾವರಲ್ಲಿ ಪ್ರಾರ್ಥನೆ ಮಾಡುತ್ತಾರೆ, ಅಣ್ಣಾ ಎಲ್ಲರಿಗೂ ಅನುಗ್ರಹ ಮಾಡ್ತೀಯ, ನನಗೆ ಸಂತಾನ ಇಲ್ಲ ಅಂತ ಬೇಡಿಕೊಂಡಾಗ ಅಪ್ಪಾವರು ತಮ್ಮ ಉಪಾಸ್ಯಮೂರ್ತಿಯಾದ ಪಂಚಮುಖಿ ಮುಖ್ಯ ಪ್ರಾಣದೇವರಿಗೆ ಅಭಿಷೇಕ ಮಾಡಿದ ಮುತ್ತು ಕೊಡುತ್ತಾ “ವೆಂಕಟಗಿರಿ ನಿನಗೆ ಮುತ್ತಿನಂತಹ ಮಗ ಹುಟ್ಟುತ್ತಾನೆ ಅಂತ ಆಶೀರ್ವಾದ ಮಾಡುತ್ತಾರೆ. ಅಪ್ಪಾವರ ಆಶೀರ್ವಾದದಿಂದ ಗಂಡುಮಗು ಜನನವಾಗಿ ಸ್ವಾಮಿರಾಯ ಅಂತ ನಾಮಕರ್ಣ ಮಾಡುತ್ತಾರೆ. ಶ್ರೀ ಸ್ವಾಮಿರಾಯಾಚಾರ್ಯರೇ ಮುಂದೆ ಶ್ರೀ ಗುರುಜಗನ್ನಾಥದಾಸರು ಅಂತ ಜಗನ್ಮಾನ್ಯರಾದರು.

    ಸ್ವಪ್ನದಲ್ಲಿ ಪಾಠ :

    ಶ್ರೀ ಸ್ವಾಮಿರಾಯ (ಶ್ರೀ ಗುರು ಜಗನ್ನಾಥದಾಸರು) ಶ್ರೀಹರಿಯ ಕೃಪೆಗೆ ಗುರುವೇ ಕಾರಣ. ಅತಿರೋಹಿತ ವಿಮಲವಿಜ್ಞಾನಿಗಳಾದ ವಾಯು ದೇವರ ಮೊರೆ ಹೋಗಬೇಕೆಂದು ನಿಶ್ಚಯಸಿದರು.

    ಸ್ವಗ್ರಾಮ ಕೌತಾಳ ಹತ್ತಿರವಾದ ಬುಡಮಲ ದೊಡ್ಡಿಯೆಂಬ ಪವಿತ್ರ ಕ್ಷೇತ್ರ ಸಾಧನೆಗೆ ಯೋಗ್ಯವಾದ ಸ್ಥಳವೆಂದು ನಿರ್ಧರಿಸಿ ಯಾರಿಗೂ ಹೇಳದೆ ಪ್ರಯಾಣ ಬೆಳೆಸುತ್ತಾರೆ. ಆ ಕ್ಷೇತ್ರದಲ್ಲಿಯ ವಾಯು ದೇವರ ಸೇವೆ ಆರಂಭಿಸುತ್ತಾರೆ. ಶ್ರೀ ಸ್ವಾಮಿರಾಯರ ಸೇವೆ ಸ್ವೀಕರಿಸಿದ ಮುಖ್ಯಪ್ರಾಣದೇವರು ಸ್ವಪ್ನದಲ್ಲಿ ನಾಲಿಗೆಯಮೇಲೆ ಬೀಜಾಕ್ಷರ ಬರೆದು ಸ್ವಗ್ರಾಮಕ್ಕೆ ತೆರೆಳು ನಿನಗೆ ಉಪದೇಶ ಆಗುತ್ತೆ ಎಂದು ಅನುಗ್ರಹಿಸುತ್ತಾರೆ.
    ವಾಯುದೇವರ ಆಜ್ಞೆಯಂತೆ ಸ್ವಗ್ರಾಮಗೆ ತೆರುಳುತ್ತಾರೆ. ರೂಢಿನಾಮ ಸಂವತ್ಸರ ಶ್ರಾವಣ ಶುದ್ಧ ಮಹಾಲಕ್ಷ್ಮಿಯ ದಿನದಂದು ಸ್ವಪ್ನದಲ್ಲಿ ಶ್ರೀ ಅಪ್ಪಾವರು ಹಾಗು ರಾಘವೇಂದ್ರತೀರ್ಥ ಗುರುಸಾರ್ವಭೌಮರು ಗುರು ಉಪದೇಶ ಕೊಡುತ್ತಾರೆ. ನಂತರ ಶ್ರೀ ಸ್ವಾಮಿರಾಯರು ಮುಂದೆ ಗುರುಜಗನ್ನಾಥದಾಸರು ಎಂದು ಜಗನ್ಮಾನ್ಯರಾಗುತ್ತಾರೆ.

    ಶ್ರೀ ಗುರುಜಗನ್ನಾಥದಾಸರು ದಾಸಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. “ತೂಗಿರೆ ರಾಯರ ತೂಗಿರೆ ಗುರುಗಳ” ಕೃತಿ ದಾಸರ ಪ್ರಸಿದ್ದವಾದ ರಚನೆ. ದಾಸರು ಕೆಲವು ಕನ್ನಡವಲ್ಲದೆ ಸಂಸ್ಕೃತ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ.

    ಭವಿಷ್ಯ ವಾಣಿ :
    ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರು ಪಂಚಮುಖಿ ಮುಖ್ಯಪ್ರಾಣ ಆರಾಧಕರು. ನಿರಂತರ ಶ್ರೀಮಾನ್ ನ್ಯಾಯಸುಧಾ ಪರಿಮಳ ಗ್ರಂಥದ ಪಾರಾಯಣದಿಂದ ಅವರು ನುಡಿದ ಪ್ರತಿಯೊಂದು ಮಾತೂ ಸತ್ಯವಾಗುತ್ತಿತ್ತು.

    ಶ್ರೀ ಗಣೇಶಾಚಾರ್ಯರು ಮಂತ್ರಾಲಯ ಅಪ್ಪಾವರ ಕಾಲದಲ್ಲಿ ಇದ್ದ ಮಹಾ ಪಂಡಿತರು. ಅಪ್ಪಾವರು ಶ್ರೀ ರಾಯರ ದರ್ಶನಕೆಂದು ಬಂದಿರುತ್ತಾರೆ. ಅಪ್ಪಾವರನ್ನು ಕಂಡು ದೀರ್ಘ ದಂಡ ನಮಸ್ಕಾರ ಮಾಡಿದರು ಗಣೇಶಾಚಾರ್ಯರು. ನಮಸ್ಕಾರ ಮಾಡಿದ ಮೇಲೆ ಅಪ್ಪಾವರು ಅವರಿಗೆ ಇದು ನೀನು ನನಗೆ ಮಾಡುವ ಕೊನೆಯ ನಮಸ್ಕಾರ ನಾಳೆಯಿಂದ ನಾನು ನಿನಗೆ ಮಾಡುತ್ತೇನೆ ಅಂತ ಮಾರ್ಮಿಕವಾಗಿ ಆಚಾರ್ಯರಿಗೆ ಹೇಳುತ್ತಾರೆ.

    ಮರುದಿನದ ಸಾಯಂಕಾಲ ಸಮಯಕ್ಕೆ ಶ್ರೀಮಠದಿಂದ ಗಣೇಶಾಚಾರ್ಯರಿಗೆ ಈಗಲೇ ನಂಜನಗೂಡುಗೆ ಹೊರಡ ಬೇಕು ಶ್ರೀ ಸುಜ್ಞಾನೇಂದ್ರ ತೀರ್ಥರಿಗೆ ದೇಹ ಆಲಸ್ಯವಾಗುತ್ತಿದೆ ಅವರು ಮುಂದಿನ ಜವಾಬ್ದಾರಿ ನಿಮಗೆ ವಹಿಸಿದ್ದಾರೆ ಎಂದು ಹೇಳಿದ ತಕ್ಷಣ ನಂಜನಗೂಡುಗೆ ಪ್ರಯಾಣ ಬೆಳಸಿ ಮುಂದೆ ಅವರೇ ಪರಮಹಂಸ ಪೀಠದಲ್ಲಿ ವಿರಾಜಾಮಾನರಾಗಿ ಶ್ರೀ ಸುಧರ್ಮೇಂದ್ರತೀರ್ಥರೆಂದು ಜಗನ್ಮಾನ್ಯರಾದರು.

    ಶ್ರೀ ಬೇಲೂರು ಕೇಶವ ದಾಸರಿಗೆ ಅನುಗ್ರಹ :
    ಶ್ರೀ ಅಪ್ಪಾವರು ಸಂಚಾರತ್ವೇನ ಉಡುಪಿಯಾತ್ರೆ ಹೋಗಿರುತ್ತಾರೆ. ಶ್ರೀ ಮಧ್ವಾಚಾರ್ಯರ ಜನ್ಮಭೂಮಿಯಾದ ಪಾಜಕ ಕ್ಷೇತ್ರ ದರ್ಶನಮಾಡಿ ನಂತರದಲ್ಲಿ ಪರಶುರಾಮ ದೇವರು ಪ್ರತಿಷ್ಠಿತ ಕುಂಜಾರು ಗಿರಿ ಶ್ರೀದುರ್ಗಾ ದೇವಿಯ ದರ್ಶನಕ್ಕೆ ಬಂದಿರುತ್ತಾರೆ.

    ಅಲ್ಲಿ ಶ್ರೀವೆಂಕಟೇಶದಾಸರೆಂಬುವರು ತಮ್ಮ ಪತ್ನಿ ತಿಮ್ಮವ್ವನವರ ಜೊತೆಯಲ್ಲಿ ದುರ್ಗಾದೇವಿಯ ಸೇವೆ ಮಾಡಲು ಬಂದಿರುತ್ತಾರೆ. ತಿಮ್ಮವ್ವನವರು ತಮ್ಮ ಗಂಡನಿಗೆ ಇರುವ ವ್ಯಾಧಿಯ ನಿವಾರಣೆಗೆ ಹಲವು ದಿವಸದಿಂದ ಸೇವೆ ಸಲ್ಲಿಸುತ್ತಿದ್ದರು.

    ಒಂದು ದಿನ ಶ್ರೀ ವೆಂಕಟೇಶದಾಸರ ಪತ್ನಿ ತಿಮ್ಮವ್ವನವರು ಸೇವೆ ಮುಗಿಸಿಕೊಂಡು ದೇವಿಯ ದರ್ಶನ ಪಡೆದಮೇಲೆ ಅಲ್ಲಿಯ ದೇವಸ್ಥಾನದ ಅರ್ಚಕರು ಪ್ರಸಾದ ಕೊಟ್ಟರು. ಪ್ರಸಾದದಲ್ಲಿ ಅಂಗಾರ ಮತ್ತು ತುಳಸಿ ಇರುವ ಕಾಯಿ ಬಟ್ಟಲು ಬಂತು. ಅರ್ಚಕರು ಕೊಟ್ಟ ಆ ಪ್ರಸಾದವನ್ನು ನೋಡಿ ಅದರಲ್ಲಿ ಇದ್ದ ಅಂಗಾರ ಮತ್ತು ತುಳಸಿಯನ್ನು ನೋಡಿ ಅಶುಭಸೂಚಕವೆಂದು ಬಹುದುಃಖದಿಂದ ಅಳ್ಳುತ್ತಾ ಕಣ್ಣೀರು ಹಾಕುತ್ತಿದಳು.ಕಣ್ಣೀರು ಇಡುತ್ತಿದ್ದ ತಿಮ್ಮವ್ವನವರನ್ನು ನೋಡಿ ಅಲ್ಲಿಯೇ ಇದ್ದ ಅಪ್ಪಾವರು , ಬೇಸರ ಪಡಬೇಡಮ್ಮ ದೇವಿಯು ಪ್ರಸನ್ನಳಾಗಿ ಆ ಪ್ರಸಾದ ಕರುಣಿಸಿದ್ದಾಳೆ.

    ನಿಮಗೆ ಅಂಗಾರವನ್ನು ನೀಡುವ ಮೂಲಕ ಅದನ್ನು ಧರಿಸುವ ವೈಷ್ಣವೋತ್ತಮನಾದ ಪುತ್ರನನ್ನು ಹಾಗೂ ತುಳಸಿಯನ್ನು ನೀಡುವ ಮೂಲಕ ಅದನ್ನು ಪೂಜೆಸುವ ಹೆಣ್ಣು ಸಂತಾನವನ್ನು ಕರುಣಿಸುವುದಾಗಿಯೂ ಸೂಚಿಸಿದ್ದಾಳೆ ಎಂದು ತಿಮ್ಮವ್ವನವರಿಗೆ ಸಮಾಧಾನಮಾಡಿ ಅವರಿಗೆ ಅಭಯ ನೀಡುತ್ತಾರೆ. ಮುಂದೆ ಎಲ್ಲವೂ ಒಳ್ಳೆಯದಾಗುವದು ಎಂದು ಆಶೀರ್ವಾದ ಮಾಡಿದರು. ಅಪ್ಪಾವರು ಹೇಳಿದ ಮಾತು ಹುಸಿಯಾಗಲಿಲ್ಲ, ಮುಂದೆ ವೆಂಕಟದಾಸರಿಗೆ ಒಂದು ಗಂಡು ಮಗು ಜನಿಸಿತು, ಅವರೇ ಶ್ರೀ ಕರ್ಣಾಟಕ ಭಕ್ತ ವಿಜಯ ಎಂಬ ಉತ್ತಮ ಗ್ರಂಥ ವನ್ನು ಬರೆದ ಶ್ರೀ ಬೇಲೂರು ಕೇಶವ ದಾಸರು ಎಂದು ಪ್ರಸಿದ್ಧಿಯನ್ನು ಹೊಂದಿದರು.

    ಪರಿಮಳ ಶರೀರ :
    ಶ್ರೀ ಅಪ್ಪಾವರು ನಿರಂತರವಾಗಿ ಶ್ರೀಮನ್ಯಾಯ ಸುಧಾ ಪರಿಮಳ ಗ್ರಂಥದ ಶ್ರವಣ, ಮನನ, ಧ್ಯಾನ , ಪಾಂಡವರು ಪೂಜಿಸಿದ ಅರ್ಜುನ ಕರಾರ್ಜಿತ ಪಂಚಮುಖಿ ಮುಖ್ಯಪ್ರಾಣದೇವರ ನಿರಂತರ ಸೇವೆ ಇಂದ ಅವರ ಶರೀರದಿಂದ ನಿತಂತರವಾಗಿ ಪರಿಮಳ ಸುವಾಸನೆ ಬರುತಿತ್ತು.
    ಒಂದು ಬಾರಿ ಶ್ರೀ ಅಪ್ಪಾವರು ದಕ್ಷಿಣ ಭಾರತದ ಯಾತ್ರೆಯ ಸಮಯದಲ್ಲಿ ಕಾವೇರಿ ಸ್ನಾನಕ್ಕೆಂದು ಶ್ರೀರಂಗಪಟ್ಟಣ ನಗರಕ್ಕೆ ಬಂದಾಗ ಅಲ್ಲಿ ಕೆಲವು ಕುಹಕಿಗಳು ಶ್ರೀ ಅಪ್ಪಾವರು ಯಾವುದೋ ದ್ರವ್ಯ ಧಾರಣೆ ಮಾಡಿಕೊಂಡು ಜನರಿಗೆ ತಪ್ಪು ಗ್ರಹಿಕೆ ಮಾಡುತ್ತಿದ್ದಾರೆಂದು ಅವರ ಪರೀಕ್ಷೆ ಮಾಡುಲು ಮುಂದಾಗುತ್ತಾರೆ.

    “ನೀವು ಸ್ನಾನ ಮಾಡಿದಾಗ ಪರಿಮಳದ‌ ಸುವಾಸನೆ ಬರುವುದೆಂದು ಕೇಳಿದ್ದೇವೆ, ಅದನ್ನು ನೀವು ಈಗ ಕಾವೇರಿ ನದಿಯಲ್ಲಿ ಸ್ನಾನಮಾಡಿ ತೋರಿಸಿ” ಎನ್ನುತ್ತಾರೆ.ಆಗ ಶ್ರೀ ಅಪ್ಪಾವರು ಸ್ನಾನ ಮಾಡಿದಾಗ ಕಾವೇರಿ ನದಿಯಲ್ಲಿ ಮತ್ತು ಸುತ್ತ- ಮುತ್ತಲಿನ ಗ್ರಾಮದಲ್ಲಿ ಪರಿಮಳದ ಸುವಾಸನೆ ಹರಡಿತು. ಅಪ್ಪಾವರ ಪರೀಕ್ಷೆ ಮಾಡಲು ಬಂದ ಆ ಕುಹಕಿಗಳಿಗೆ ತಮ್ಮ ತಪ್ಪಿನ ಅರಿವಾಗಿ ಅಪ್ಪಾವರ ಬಳಿ ಶರಣಾಗುತ್ತಾರೆ. ಕರುಣಾಸಾಗರರಾದ ಅಪ್ಪಾವರು ಪರೀಕ್ಷೆ ಮಾಡಲು ಬಂದ‌ ಆ ಜನರನ್ನು ಕ್ಷಮಿಸಿ ಅನುಗ್ರಹಿಸುತ್ತಾರೆ.

    ಶ್ರೀ ಅಪ್ಪಾವರು ಬರೆದ ಪತ್ರಗಳು, ಧರಿಸಿದ ಉಡುಪುಗಳು ,ಅವರು ನದಿಯಲ್ಲಿ ಸ್ನಾನ ಮಾಡಿದಾಗ, ಅವರ ಕೈನಿಂದ ಬಂದ ವಸ್ತುಗಳಲ್ಲಿ ಪರಿಮಳದ ಸುವಾಸನೆ ಬರುತ್ತಿದ್ದ ಕಾರಣ ಶ್ರೀ ಅಪ್ಪಾವರು ಶ್ರೀ ಪರಿಮಳಾಚಾರ್ಯರು ಎಂದು ಪ್ರಸಿದ್ಧಿಯಾಗಿದ್ದರು.

    ಶ್ರೀ ಅಪ್ಪಾವರು ನಿರಂತರವಾಗಿ ಶ್ರೀಮನ್ಯಾಯಸುಧಾ, ಪರಿಮಳ ಗ್ರಂಥದ ಶ್ರವಣ, ಮನನ, ಧ್ಯಾನ , ಪಾಂಡವರು ಪೂಜಿಸಿದ ಅರ್ಜುನ ಕರಾರ್ಜಿತ ಪಂಚಮುಖಿ ಮುಖ್ಯಪ್ರಾಣದೇವರ ನಿರಂತರ ಸೇವೆ, ಉಪಾಸನೆ ಮತ್ತು ಅನುಷ್ಠಾನ ಹಾಗೂ ಶ್ರೀ ರಾಯರ ಮತ್ತು ಶ್ರೀ ವಾಯುದೇವರ ವಿಶೇಷ ಕಾರುಣ್ಯದಿಂದ ಶೃತಿ- ಸ್ಮೃತಿ ಸಮ್ಮತವಾದ ಈ ಮಹಿಮೆಗಳು ಗೋಚರವಾಗುತ್ತಿತ್ತು ಎಂದು ಅಪ್ಪಾವರ ಶಿಷ್ಯರಾದ ಶ್ರೀಯೋಗಿ ನಾರಾಯಣಾಚಾರ್ಯರು ರಚಿಸಿದ ಶ್ರೀ ಇಭರಾಮಪುರ ಶ್ರೀಕೃಷ್ಣಾರ್ಯ ಸ್ತೋತ್ರದಲ್ಲಿ ಸ್ಪಷ್ಟವಾಗಿ ತಿಳಿಸುತ್ತಾರೆ .

    ಶ್ರೀ ಅಪ್ಪಾವರ ಶಿಷ್ಯರು ಶ್ರೀ ಯೋಗಿ ನಾರಾಯಣಾಚಾರ್ಯರು :

    ಶ್ರೀ ಅಪ್ಪಾವರಿಗೆ ದೇಶದೆಲ್ಲೆಡೆ ಹಲವಾರು ಶಿಷ್ಯರು ಅಪ್ಪಾವರ ಅನುಗ್ರಹಕ್ಕೆ ಪಾತ್ರರಾಗಿದ್ದರು. ಅವರ ಪ್ರಮುಖ ಶಿಷ್ಯರಲ್ಲಿ ಶ್ರೀ ಯೋಗಿ ನಾರಾಯಣಾಚಾರ್ಯರು ಒಬ್ಬರು.ಶ್ರೀ ನಾರಾಯಣಾಚಾರ್ಯರು ಮೂಲತಃ ಗದಗಿನವರು. ಆಚಾರ್ಯರು ಗದಗಿನ ವೀರ ನಾರಾಯಣನ ಅಂತರಂಗ ಭಕ್ತರು. ತಮ್ಮ ಸ್ವರೂಪೊದ್ದಾರಕ ಗುರುಗಳ ಪ್ರಾಪ್ತಿಗಾಗಿ ನಿತ್ಯವೂ ಶ್ರೀ ನಾರಾಯಣಾಚಾರ್ಯರು ವೀರ ನಾರಾಯಣನ ಸೇವೆ ಮಾಡುತಿದ್ದರು. ಆಚಾರ್ಯರ ನಿಷ್ಠೆಯ ಸೇವೆಗೆ ಮೆಚ್ಚಿದ ವೀರ ನಾರಾಯಣ ದೇವರು ಸ್ವಪ್ನದಲ್ಲಿ ಆಚಾರ್ಯರಿಗೆ ನಿಮ್ಮ ಸ್ವರೂಪೊದ್ದಾರಕರು ಅತಿ ಶೀಘ್ರದಲ್ಲಿ ನಿನಗೆ ಭೇಟಿ ಆಗುತ್ತಾರೆ ಅಂತ ಸೂಚನೆ ಕೊಡುತ್ತಾರೆ.

    ಶ್ರೀ ಅಪ್ಪಾವರು ಸಂಚಾರ ಅನ್ವಯ ಗದಗಗೆ ಬಂದಿರುತ್ತಾರೆ. ಅಲ್ಲಿ ಮಧ್ಯಾಹ್ನದ ಸಮಯಕ್ಕೆ ಶ್ರೀ ವೀರ ನಾರಾಯಣನ ದರ್ಶನಕ್ಕೆ ಅಪ್ಪಾವರು ಬಂದಿರುತ್ತಾರೆ, ಬಂದ ಸಮಯದಲ್ಲಿ ಅರ್ಚಕರು ದೇವಸ್ಥಾನ ಗರ್ಭಗುಡಿ ಬೀಗ ಹಾಕಿರುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಅಪ್ಪಾವರು ವೀರ ನಾರಾಯಣನ ಪ್ರಾರ್ಥಿಸುತ್ತಾ- ಸ್ವಾಮಿ ನಾನು ನಿನ್ನ ದರ್ಶನಕ್ಕಾಗಿ ಇಭರಾಮಪುರದಿಂದ ಬಂದಿದ್ದೇನೆ ಅಂತ ಪ್ರಾರ್ಥಿಸಿದಾಗ, ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆಯುತ್ತದೆ.

    ಇದೇ ಸಮಯದಲ್ಲಿ ಶ್ರೀ ಯೋಗಿ ನಾರಾಯಣಾಚಾರ್ಯರು ದೇವಸ್ಥಾನ ಪ್ರಾಂಗಣದಲ್ಲಿಯೇ ಇರುತ್ತಾರೆ. ಶ್ರೀ ಅಪ್ಪಾವರನ್ನು ಯಾರೋ ಯಾತ್ರಿಕರು ನಾರಾಯಣನ ದರ್ಶನಕ್ಕಾಗಿ ಬಂದಿದ್ದಾರೆ ಎಂದು ತಿಳಿದಿರುತ್ತಾರೆ ಆದರೆ ಅಲ್ಲಿ ನಡೆದಿದ್ದು ಬೇರೆ. ಅಪ್ಪಾವರ ಪ್ರಾರ್ಥನೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆದುದನ್ನು ಕಂಡು ಆಚಾರ್ಯರು ಒಂದು ಕ್ಷಣ ಏನು ತೋಚಲಾಗದೆ ಬೆರಗಾಗುತ್ತಾರೆ. ಶ್ರೀ ಅಪ್ಪಾವರು ವೀರ ನಾರಾಯಣನ ಜೊತೆ ನೇರವಾಗಿ ಸಂದರ್ಶನ ಮಾಡುವುದನ್ನು ಕಂಡು ಶ್ರೀ ಯೋಗಿ ನಾರಾಯಣಾಚಾರ್ಯರು ಅಪ್ಪಾವರಲ್ಲಿ ಶಿಷ್ಯ ಸ್ವೀಕಾರಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆಚಾರ್ಯರ ಪ್ರಾರ್ಥನೆಗೆ ಶ್ರೀ ಅಪ್ಪಾವರು ಸಂತುಷ್ಟರಾಗಿ ಅವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸುತ್ತಾರೆ.

    ರಾಯರ ಮೃತಿಕಾ ಬೃಂದಾವನ :

    ಶಿಷ್ಯತ್ವ ಸ್ವೀಕಾರದ ಪ್ರತೀಕವಾಗಿ ನಮ್ಮ ಕುಲ ಗುರುಗಳಾದ ಮಂತ್ರಾಲಯ ಗುರುಸೌರ್ವಭೌಮರ ಬೃಂದಾವನ ಪ್ರತಿಷ್ಠಾಪಿಸಲು ಶ್ರೀ ಅಪ್ಪಾವರು ಇಚ್ಛಿಸುತ್ತಾರೆ. ಅಪ್ಪಾವರ ಆಜ್ಞೆಯಂತೆ ಶ್ರೀ ಯೋಗಿ ನಾರಾಯಣಾಚಾರ್ಯರು ಬೃಂದಾವನ ಕೆತ್ತನೆ ಮಾಡುತ್ತಾರೆ. ಶ್ರೀ ಅಪ್ಪಾವರು ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಭವ್ಯ ಬೃಂದಾವನವನ್ನು ಪ್ರತಿಷ್ಠಾಪನೆ ಮಾಡುತ್ತಾರೆ.

    ಶಿಲ್ಪಕಳಾ ನಿಪುಣರು ಶ್ರೀಯೋಗಿ ನಾರಾಯಣಾಚಾರ್ಯರು :

    ಶ್ರೀ ಅಪ್ಪಾವರು ಹಾಗೂ ವೀರ ನಾರಾಯಣನ ಅನುಗ್ರಹದಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಶಿಲ್ಪಕಲೆಯ ಅನುಗ್ರಹ ಹೊಂದಿರುತ್ತಾರೆ. ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಬೃಂದಾವನ, ಅಪ್ಪಾವರ ಕಟ್ಟೆಯಲ್ಲಿ ಮಂಟಪದಲ್ಲಿ ಕೆತ್ತನೆಗಳು , ಮಂತ್ರಾಲಯದ ತುಂಗಾ ತಟದಲ್ಲಿ ರಾಯರು ಆಹ್ನಿಕ ಮಾಡುತಿದ್ದ ಸ್ಥಳ ಗುರುತಿಸಿ ಅಲ್ಲಿ ಅವತಾರತ್ರಯ ಪ್ರಾಣದೇವರು , ಅಪ್ಪಾವರ ಕಟ್ಟೆಯಲ್ಲಿ ಶಾಲಿಗ್ರಾಮ ಶಿಲೆಯಲ್ಲಿ ಚತುರ್ಭುಜ ವೇಣುಗೋಪಾಲ ಹಾಗು ಶ್ರೀ ಅಪ್ಪಾವರ ಭವ್ಯವಾದ ಮೂರ್ತಿಯು ಶ್ರೀ ಯೋಗಿ ನಾರಾಯಣಾಚಾರ್ಯರ ನೈಪುಣ್ಯತೆ ತೋರಿಸುತ್ತದೆ.

    ಯೋಗಿ ನಾರಾಯಣಾಚಾರ್ಯರು ರಚಿಸಿದ ಶ್ರೀ ಅಪ್ಪಾವರ ಸ್ತೋತ್ರ. ಶ್ರೀ ಆಚಾರ್ಯರು ತಮ್ಮ ಗುರುಗಳಾದ ಶ್ರೀ ಅಪ್ಪಾವರ ಮಹಿಮೆ ಸಾರುವ ಶ್ರೀ ಇಭರಾಮಪುರ ಶ್ರೀ ಕೃಷ್ಣಾರ್ಯ ಸ್ತೋತ್ರ ರಚಿಸಿದರು. ತಾವು ಪ್ರತ್ಯಕ್ಷ್ಯವಾಗಿ ಕಂಡ ಹಾಗೂ ಶ್ರುತಿ ಸ್ಮೃತಿ ಸಮ್ಮತಿಸುವ ಮಹಿಮೆಗಳು ಮತ್ತು ಆ ಮಹಿಮೆಗಳು ಯಾವ ಯಾವ ಪುರಾಣಗಳಲ್ಲಿ ಉಲ್ಲೇಖವಾಗಿದ ಎಂದು ಸ್ತೋತ್ರಮಾಡಿದ್ದಾರೆ.

    ಸುರಪುರದ ಆನಂದ ದಾಸರು ತಮ್ಮ ಸಮಕಾಲೀನ ಎಲ್ಲಾ ಅಪರೋಕ್ಷ ಜ್ಞಾನಿಗಳನ್ನು ಗುರುತಿಸಿ ರಚಿಸಿದ ಕೀರ್ತನೆ :
    ಶ್ರೀ ರಾಘವೇಂದ್ರರಾಯರ ಪಾದಾಂಬುಜ
    ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।
    ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।
    ಬಲವಂತ ಯೋಗಿ ನಾರಾಯಣಾರ್ಯರ ।।

    ಮೇಲೆಕಂಡ ಕೀರ್ತನೆಯಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಗುರುಸಾರ್ವಭೌಮ ಶ್ರೀ ಅಪ್ಪಾವರ ಹಾಗೂ ತಮ್ಮ ಇಷ್ಟ ದೈವ ಶ್ರೀ ವೀರ ನಾರಾಯಣನ ಅನುಗ್ರಹಕ್ಕೆ ಪಾತ್ರರಾಗಿ ಅಪರೋಕ್ಷ ಜ್ಞಾನ ಹೊಂದಿದ್ದಾರೆ ಎಂದು ತಿಳಿಯಬಹುದು.

    ಶ್ರೀ ಅಪ್ಪಾವರ ಹೆಸರಿನ ಮಹಿಮೆ :

    ಶ್ರೀ ಅಪ್ಪಾವರ ಕೀರ್ತಿಯು ಅಪಾರವಾದದು , ದೇಶದೆಲ್ಲೆಡೆ ಹಲವಾರು ಶಿಷ್ಯರು ಅಪ್ಪಾವರ ಅನುಗ್ರಹಕ್ಕೆ ಪಾತ್ರರಾಗಿದ್ದರು. ಹೀಗೆ ಅಪ್ಪಾವರ ಶಿಷ್ಯರಾದ ಶ್ರೀ ಕೆರೊಡೆ ಕೃಷ್ಣರಾಯರು ಆಮಂತ್ರಣಮೇರೆಗೆ ಶಿವಮೊಗ್ಗಕ್ಕೆ ಬಂದಿರುತ್ತಾರೆ.

    ಅಪ್ಪಾವರ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಿದ್ದ ಕೃಷ್ಣರಾಯರು ಮನೆತನದವರು ತಮ್ಮ ಸರ್ವಸ್ವವವು ಅಪ್ಪಾವರಿಗೆ ಸಮರ್ಪಣೆಯ ಸಂಕಲ್ಪಿಸಿದರು. ಆದರೆ ಯದ್ಪಚ್ಛಾಲಾಭ ಸಂತುಷ್ಟರಾದ ಅಪ್ಪಾವರು ಇದಕ್ಕೆ ಸಮ್ಮತಿಸಲಿಲ್ಲ. ತಮ್ಮಿಂದ ಏನನ್ನಾದರೂ ಸ್ವೀಕರಿಸಿ ಅಂತ ಶಿಷ್ಯ ಒತ್ತಾಯ ಮಾಡಿದಾಗ ಅಪ್ಪಾವರು ನಿನಗೆ ಕೊಡಲೇಬೇಕೆಂಬ ಇಚ್ಛೆಯಿದ್ದರೆ ನಿಮ್ಮಲ್ಲಿ ಇರುವ ಮರದ ದಿಮ್ಮಿಗಳನ್ನು ನಮಗೆ ಕೊಡಿ ಎಂದರು. ಶ್ರೀ ಅಪ್ಪಾವರ ಆಜ್ಞೆಯಂತೆ ಸಂತುಷ್ಠರಾದ ಕುಟುಂಬದವರು ಎಲ್ಲವೂ ಸಮರ್ಪಣೆ ಮಾಡುತ್ತಾರೆ.

    ಆ ಕಾಲದಲ್ಲಿ ಇಂಥಹ ದೊಡ್ಡದಾದ ವಸ್ತುಗಳ ಸಾಗಣೆಗೆ ವ್ಯವಸ್ಥೆ ಇರಲಿಲ್ಲ. ಈ ವಿಷಯದ ಬಗ್ಗೆ ಕುಟುಂಬದ ಸದಸ್ಯರಿಗೆ ಗೊಂದಲ ಉಂಟಾಗುತ್ತದೆ. ಈ ಸಮಸ್ಯೆಯ ಬಗ್ಗೆ ಶ್ರೀ ಅಪ್ಪಾವರಲ್ಲಿ ಹೇಳಿದಾಗ, ಚಿಂತಿಸಬೇಡಿ ಮರದ ದಿಮ್ಮಿಗಳ ಮೇಲೆ ಶ್ರೀ ಇಭರಾಮಪುರ ಅಪ್ಪಾವರು ಅಂತ ಬರೆದು ನಿಮ್ಮ ಊರಿನಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಬಿಡಿ ಅವು ನನಗೆ ತಲುಪುತ್ತೆ. ಅಪ್ಪಾವರು ಹೇಳಿದಾಗೇ ಅವರ ಶಿಷ್ಯ ಪರಿವಾರ ಆ ಮರದ ದಿಮ್ಮಿಗಳು ಶಿವಮೊಗ್ಗದ ತುಂಗಾ ನದಿಯಲ್ಲಿ ಹಾಕಿದರು. ಶಿವಮೊಗ್ಗದಿಂದ ತುಂಗಭದ್ರ ನದಿಯಿಂದ ಮಂತ್ರಾಲಯಕ್ಕೆ ಬಂದು ತಲುಪಿದವು.ಈ ಮರದ ದಿಮ್ಮಿಯಿಂದ ಶ್ರೀ ಅಪ್ಪಾವರು ಮಂತ್ರಾಲಯದಲ್ಲಿ ತಮ್ಮ ಮನೆ ನಿರ್ಮಾಣಕ್ಕೆ ಉಪಯೋಗ ಮಾಡಿದರು.

    ನಂದವಾರ ಇಭರಾಮಪುರ ಗ್ರಾಮಕ್ಕೆ ಹತ್ತಿರವಾದ ಗ್ರಾಮ. ಆ ಗ್ರಾಮದಲ್ಲಿ ನಂದವಾರ ದೇಸಾಯಿ ಮನೆತನದವರು ನೆಲಸಿದ್ರು. ಸುಖ ಸಂಪತಿನಲ್ಲಿ ಇದ್ದ ದೇಸಾಯಿ ಮನೆತನಕ್ಕೆ ಸಂತಾನ ಭಾಗ್ಯ ಇರಲಿಲ್ಲ. ಸಂತಾನ ಅನುಗ್ರಹಕಾಗಿ ಅಪ್ಪಾವರ ಮೊರೆ ಹೋಗುತ್ತಾರೆ. ಶ್ರೀ ಅಪ್ಪಾವರ ಅನುಗ್ರಹದಿಂದ ಅವರ ವಂಶ ಬೆಳೆಯುತ್ತೆ.

    ಶ್ರೀ ಅಪ್ಪಾವರು ಮಾಡಿದ ಅನುಗ್ರಹಕ್ಕೆ ದೇಸಾಯಿಯವರು ಶ್ರೀ ಅಪ್ಪಾವರಿಗೆ ನಿತ್ಯ ಅನುಷ್ಠಾನಕ್ಕೆ ಇಭರಾಮಪುರದಲ್ಲಿ ಮಂಟಪ ಕಟ್ಟಲು ಸಂಕಲ್ಪಿಸುತ್ತಾರೆ.ಮಂಟಪ ಕಟ್ಟಲು ಬೇಕಾದ ಎಲ್ಲಾ ಬಂಡೆಗಳು ರಾಂಪುರ ಗ್ರಾಮದಲ್ಲಿ ಇರುತ್ತೆ. ಕಲ್ಲು ಬಂಡೆಗಳು ಸಾಗಿಸಲು ದೂರದ ಇಭರಾಮಪುರಕ್ಕೆ ಸೇರಿಸುವುದು ಅಸಾದ್ಯದ ಮಾತು. ದೇಸಾಯಿಯವರು ಅಪ್ಪಾವರಲ್ಲಿ ಈ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಅಪ್ಪಾವರು ಆಗ ಬಂದು ಎಲ್ಲಾ ಬಂಡೆಗಳ ಮೇಲೆ ಇಭರಾಮಪುರ ಶ್ರೀ ಅಪ್ಪಾವರ ಅಂತ ಬರೆದು ನದಿಗೆ ಹಾಕಿಸು ಅಂತ ಹೇಳುತ್ತಾರೆ. ಅಪ್ಪಾವರ ಮಾತಿನಂತೆ ಆ ಕಲ್ಲುಗಳ ಮೇಲೆ ಇಭರಾಮಪುರ ಶ್ರೀ ಅಪ್ಪಾವರ ಅಂತ ಬರೆದು ನದಿಯಲ್ಲಿ ಹಾಕುತ್ತಾರೆ. ಇಭರಾಮಪುರ ಹತ್ತಿರದಲ್ಲಿ ಇದ್ದ ನದಿಖೈರವಾಡಿಯಲ್ಲಿ ತೇಲಿಬಂದವು. ಆ ದೊಡ್ಡ ಗಾತ್ರದ ಕಲ್ಲುಬಂಡೆಗಳು ಭಾರವು ಹುಲ್ಲುಕಡ್ಡಿಯಂತೆ ಆಗಿತ್ತು ನದಿಖೈರವಾಡಿಯಿಂದ ಇಭರಾಮಪುರಕ್ಕೆ ಅತಿಸುಲಭವಾಗಿ ಸಾಗಿಸಿ ಅಲ್ಲಿ ಮಂಟಪ ನಿರ್ಮಾಣವಾಯಿತು .

    ಶ್ರೀ ಕ್ಷೇತ್ರ ಅಪ್ಪಾವರ ಕಟ್ಟೆಯಲ್ಲಿ ಈಗಿನ ಮಂಟಪವಾಗಿದೆ. ಈ ಮಂಟಪದಲ್ಲಿ ಶ್ರೀ ಯೋಗಿನಾರಾಯಣಾಚಾರ್ಯರು ಮಂಟಪದ ಕಂಬದ ಮೇಲೆ ಗಣಪತಿ , ಪ್ರಾಣದೇವರು , ರುದ್ರದೇವರು , ರಾಯರನ್ನು, ಅವತಾರತ್ರಯ ಪ್ರಾಣದೇವರ ಕೆತ್ತನೆ ಮಾಡಿದ್ದಾರೆ.

    ಹರಿದಾಸರಿಗೆ ಮಂದಿರ :
    ಶ್ರೀ ಅಪ್ಪಾವರಿಂದ ಅನುಗ್ರಹೀತರಾದ ದಾಸರು ಮತ್ತು ಜ್ಞಾನಿಗಳು
    ೧. ಶ್ರೀ ಗಂಧರ್ವಾಂಶ ಸಂಭೂತರಾದ ಸುರಪುರದ ಆನಂದದಾಸರು
    ೨. ಶ್ರೀ ಗುರು ಜಗನ್ನಾಥದಾಸರು
    ೩. ಅಪರೋಕ್ಷ ಜ್ಞಾನಿಗಳಾದ ವಿದ್ವಾನ್ ಶ್ರೀ ಯಳಮೇಲಿ ಹಯಗ್ರೀವಾಚಾರ್ಯರು
    ೪. ವಿದ್ವಾನ್ ಯಳಮೇಲಿ ವಿಠಲಾಚಾರ್ಯರು
    ೫. ಶ್ರೀ ವಿಜಯರಾಮಚಂದ್ರದಾಸರು
    ೬. ಶ್ರೀ ಜಯೇಶವಿಠಲರು
    ೭. ಶ್ರೀ ಕಾರ್ಪರ ನರಹರಿದಾಸರು
    ೮. ಶ್ರೀ ಮುದ್ದು ಭೀಮಾಚಾರ್ಯರು
    ೯. ಬೇಲೂರು ಕೇಶವದಾಸರು
    ೧೦. ಶ್ರೀ ಯೋಗಿ ನಾರಾಯಣಾಚಾರ್ಯರು
    ೧೧. ಶ್ರೀ ಇಂದಿರೇಶದಾಸರು
    ಹೀಗೆ ಅಪರೋಕ್ಷ ಜ್ಞಾನಿಗಳ ಸಮೂಹಕ್ಕೆ ಸ್ವರೂಪಧಾರಕರು ಶ್ರೀ ಅಪ್ಪಾವರು .

    ಸುಜ್ಞಾನಬೆಳಕಿನಕಣ್ಮರೆ :

    ಶ್ರೀ ಅಪ್ಪಾವರು ಶ್ರೀ ಪಂಚಮುಖಿ ಪ್ರಾಣದೇವರನ್ನು ಪ್ರತಿನಿತ್ಯ ಪೂಜಿಸುತ್ತಾ; ಪಂಚಮುಖನ ಪಂಚ ರೂಪಗಳನ್ನು ತಮ್ಮ ಮನೋ ಪಂಕಜದಲ್ಲಿ ಸದಾ ಧ್ಯಾನಿಸುತ್ತಾ ಅಪೂರ್ವವಾದ ಆನಂದವನ್ನು ಸೂರೆಗೊಂಡ ಶ್ರೀ ಅಪ್ಪಾವರು ತಮ್ಮ ಕೊನೆಯ ಕಾಲ ಸ್ವಗ್ರಾಮವಾದ ಇಭರಾಮಪುರದಲ್ಲಿಯೇ ನೆಲಸಿದರು.

    ಅಗಮ್ಯ ಮಹಿಮನಾದ ವಾಯುವಾಹನ ತಮ್ಮ ಮೂಲಕ ಪ್ರಕಟಿಸಿದ ವಿವಿಧ ಮಹಿಮೆಗಳನ್ನು ಮೆಲಕು ಹಾಕಿದರು. ತಮ್ಮ ಮೇಲೆ ಶ್ರೀ ಪಂಚಮುಖಿ ಪ್ರಾಣದೇವರು ಸುರಿಸಿದ ಕಾರುಣ್ಯ ವೃಷ್ಟಿಯನ್ನು ಸ್ಮರಿಸಿ ಅವರ ಕಣ್ಣಲೆಗಳು ತೇಲಿ ಬಂದವು. ತಮ್ಮ ಜೀವನದಲ್ಲಿ ನಡೆದ ಸಕಲ ಕ್ರಿಯೆಗಳನ್ನೂ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನೃಸಿಂಹದೇವರ ಪಾದಾರವಿಂದಗಳಲ್ಲಿ ಸಲ್ಲಿಸಿ, ಶ್ರಾವಣ ಶುದ್ಧ ತೃತೀಯಾ 1869 ಶ್ರೀ ಕೃಷ್ಣ ಪಾದಾರವಿಂದವನ್ನು ಸೇರಿದರು!!

    (ಶ್ರೀ ಅಪ್ಪಾವರ ಪವಾಡಗಳು ಮುಂದಿನ ಸಂಚಿಕೆಯಲ್ಲಿ)

    ಮಾದಕ ವಸ್ತು: ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ

    BENGALURU AUG 10

    ರಾಜ್ಯದಲ್ಲಿ ಅತ್ಯುತ್ತಮ ಪೊಲೀಸ್ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸರು ಜನರು ಶಾಂತಿ ನೆಮ್ಮದಿಯ ಜೀವನ ನಡೆಸುವ ವಾತಾವರಣ ಸೃಷ್ಟಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

    ಅವರು ಇಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

    ಸಭೆಯಲ್ಲಿ ಮುಖ್ಯಮಂತ್ರಿಗಳು ನೀಡಿದ ಸೂಚನೆಗಳ ಮುಖ್ಯಾಂಶಗಳು:

    ಪೊಲೀಸ್ ಇಲಾಖೆಯಲ್ಲಿ ಹಲವು ಸುಧಾರಣೆಗಳು, ಮೂಲಸೌಕರ್ಯ ಅಭಿವೃದ್ಧಿಗೆ ಚಾಲನೆ ನೀಡಲಾಗಿತ್ತು.ಮುಂದಿನ ದಿನಗಳಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಿದೆ.

    ಕೋವಿಡ್ 19 ಸಂಭಾವ್ಯ ಮೂರನೇ ಅಲೆ ತಡೆಗಟ್ಟಲು ಕ್ರಮ ವಹಿಸಬೇಕು. ಗಡಿ ಜಿಲ್ಲೆಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಹಿರಿಯ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಗಡಿ ಚೆಕ್ ಪೋಸ್ಟ್ ಗಳ ತಪಾಸಣೆ ನಡೆಸಬೇಕು.

    ಅಪರಾಧ ಪ್ರಕರಣಗಳನ್ನು ಹತೋಟಿಗೆ ತರಬೇಕು. ಅಪರಾಧ ವೈರಸ್ ಇದ್ದ ಹಾಗೆ. ಇದನ್ನು ಸಶಕ್ತವಾಗಿ ಸದೆಬಡಿಯಬೇಕು. ಆಗ ಹತೋಟಿಯಲ್ಲಿರುತ್ತದೆ.

    ಸಮಾಜದಲ್ಲಿ ಜೂಜು, ಡಾರ್ಕ್ ವೆಬ್ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚಿಸಿದರು. ಅಪರಾಧವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಕಾನೂನು, ಸುವ್ಯವಸ್ಥೆ ಕಾಪಾಸುವುದು ಸರ್ಕಾರದ ಪ್ರಥಮ ಆದ್ಯತೆ.ಭೂವಿವಾದದ ಹಿನ್ನೆಲೆಯಲ್ಲಿ ಸಂಭವಿಸುವ ಅಪರಾಧ ಪ್ರಕರಣಗಳನ್ನು ತಡೆಗಟ್ಟಬೇಕು.

    ಮಾದಕ ವಸ್ತುಗಳ ವಿರುದ್ಧದ ಹೋರಾಟ ಮುಂದುವರೆಯಲಿದೆ. ಎಲ್ಲ ಜಿಲ್ಲೆಗಳಲ್ಲಿ ಈ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು.

    ಆಂತರಿಕ ಭದ್ರತಾ ವಿಭಾಗವನ್ನು ಬಲಪಡಿಸಬೇಕು.ಕೈದಿಗಳ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು.ಪೊಲೀಸ್ ವ್ಯವಸ್ಥೆ ಜನಸ್ನೇಹಿ ಯಾಗಬೇಕು.

    ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ ಇಲಾಖೆಯ ಸುಧಾರಣೆ ಮತ್ತು ಅತ್ಯುತ್ತಮ ಕಾರ್ಯ ನಿರ್ವಹಣೆಗೆ ಬೆಂಬಲ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಿದರು.
    ಇಲಾಖೆಯು ಅಪರಾಧ ಪ್ರಕರಣಗಳ ಶೀಘ್ರ ತನಿಖೆಗೆ ಆದ್ಯತೆ ನೀಡಬೇಕು. ಇದರಲ್ಲಿ ವಿಳಂಬ ಧೋರಣೆ ಸಲ್ಲದು ಎಂದು ತಿಳಿಸಿದರು.


    ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಸಿನಿಮಾ ಚಿತ್ರೀಕರಣ: ಕಠಿಣ ಸುರಕ್ಷತಾ ನಿಯಮ ಜಾರಿಗೆ ನಿರ್ಧಾರ

    BENGALURU AUG 10

    ಕನ್ನಡ ಸಿನಿಮಾ ಚಿತ್ರೀಕರಣದಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೆ ಅಪಾಯಕಾರಿ ದೃಶ್ಯಗಳನ್ನು ಚಿತ್ರೀಕರಣ ಮಾಡಿ, ಸಾವು-ನೋವಿಗೆ ಕಾರಣವಾಗುತ್ತಿರುವುದನ್ನು ತಪ್ಪಿಸಲು ಕಠಿಣ ನಿಯಮ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬವಸರಾಜ ಬೊಮ್ಮಾಯಿ ಹೇಳಿದ್ದಾರೆ.

    ʼಲವ್ ಯೂ ರಚ್ಚುʼ ಸಿನಿಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ಎಂಬ ಯುವಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ ಅವರು, ಪದೇಪದೆ ಇಂತಹ ಘಟನೆಗಳು ನಡೆಯುತ್ತಿರುವುದು ದುರಂತ. ಈ ಘಟನೆ ನೋವು ತಂದಿದೆ ಎಂದರು.

    ʼಲವ್ ಯೂ ರಚ್ಚುʼ ಸಿನಿಮಾ ಚಿತ್ರದ ದೃಶ್ಯದಲ್ಲಿ ಅಜಯ್‌ ರಾವ್‌ ಮತ್ತು ರಚಿತಾರಾಮ್

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರೀಕರಣದ ವೇಳೆ ಕೆಲವರು ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ಅನೇಕ ಅವಘಡಗಳು ಮತ್ತೆ ಮತ್ತೆ ಸಂಭವಿಸುತ್ತಿವೆ. ಹಾಗಾಗಿ ಚಿತ್ರೀಕರಣದ ವೇಳೆ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದರು.

    ಒದೆರಡು ದಿನಗಳಲ್ಲಿ ಕಠಿಣ ನಿಯಮಗಳ ಬಗ್ಗೆ ಆದೇಶ ಹೊರಡಿಸಲಾಗುವುದು. ಇನ್ನು ಮುಂದೆ ಶೂಟಿಂಗ್ ವೇಳೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಸಂಬಂಧಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

    ಮನರಂಜನಾ ಮಾಧ್ಯಮದಲ್ಲಿ ಇಂಥ ಅಪಶೃತಿಗಳಿಗೆ ಅವಕಾಶ ಇರಬಾರದು. ಚಿತ್ರೀಕರಣಕ್ಕೆ ಮುನ್ನ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು. ಅಪಾಯಕಾರಿ ಸನ್ನಿವೇಶಗಳನ್ನು ಚಿತ್ರಿಸುವ ಮುನ್ನ ಎಲ್ಲ ಕ್ರಮಗಳನ್ನು ಪಾಲಿಸಿ, ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯಬೇಕೆಂದು ಅವರು ತಿಳಿಸಿದರು.

    ಅಧಿಕಾರಿಗಳಿಂದ ಮಾಹಿತಿ ಪಡೆದ ಗೃಹ ಸಚಿವರು

    ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ರಾಮನಗರ ಎಸ್‌ಪಿ ಅವರು ಈಗಾಗಲೇ ಎಲ್ಲ ಮಾಹಿತಿ ನೀಡಿದ್ದಾರೆ.

    ಈ ಘಟನೆ ನಡೆಯಬಾರದಾಗಿತ್ತು. ಈ ಹಿಂದೆ ʼಮಾಸ್ತಿಗುಡಿʼ ಸಿನಿಮಾ ಚಿತ್ರೀಕರಣದ ವೇಳೆ ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡುವ ವೇಳೆ ಹೆಲಿಕಾಪ್ಟರ್‌ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ಹಾರಿದ ಇಬ್ಬರು ಸಾಹಸ ಕಲಾವಿದರು (ಉದಯ್ ಮತ್ತು ಅನಿಲ್) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಅದಾದ ಮೇಲೆ ಇನ್ನೊಂದು ಸಿನಿಮಾ ಸೆಟ್‌ನಲ್ಲಿ ಸ್ಫೋಟಕವೂ ಉಂಟಾಗಿತ್ತು. ಹೀಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

    ಏನಿದು ಘಟನೆ?

    ಬಿಡದಿ ಬಳಿ ನಡೆಯುತ್ತಿದ್ದ ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ಸೋಮವಾರ ವಿದ್ಯುತ್ ತಂತಿ ಸ್ಪರ್ಶಿಸಿ 28 ವರ್ಷದ ಫೈಟರ್ ವಿವೇಕ್ ಮೃತಪಟ್ಟಿದ್ದರು.

    ಈ ಘಟನೆ ಸಂಬಂಧ ಬಿಡದಿ ಪೊಲೀಸರು ನಿರ್ದೇಶಕ ಶಂಕರಯ್ಯ, ನಿರ್ಮಾಪಕ ಗುರು ದೇಶಪಾಂಡೆ, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್, ಕ್ರೇನ್ ಆಪರೇಟರ್ ಮಹದೇವ್ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ.

    ಸಾಮಾನ್ಯ ಜನರ ಜೀವನದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ: ಡಿ.ಕೆ. ಶಿವಕುಮಾರ್

    BENGALURU AUG 10

    ‘ಕೋವಿಡ್ 2ನೇ ಅಲೆಯಲ್ಲಿ ಆಗಿರುವ ನಷ್ಟಕ್ಕೆ ರೈತರಿಗೆ ಸರ್ಕಾರದಿಂದ ಈವರೆಗೂ ಪರಿಹಾರ ಸಿಕ್ಕಿಲ್ಲ. ಬೆಳೆಗೆ ಬೆಲೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಸರ್ಕಾರ ಇದ್ಯಾವುದರ ಬಗ್ಗೆಯೂ ಚಿಂತಿಸದೇ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದ್ದಾರೆ.

    ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;

    ‘ಹೊಸ ಸರ್ಕಾರ ಬಂದಿದೆ, ಜನರ ರಕ್ಷಣೆ ಮಾಡುತ್ತದೆ ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ. ಹಾರ-ತುರಾಯಿ ಹಾಕಿಸಿಕೊಳ್ಳುವವರಿಗೆ ನಾನು ಬೇಡ ಎನ್ನುವುದಿಲ್ಲ. ಕೋವಿಡ್ ಸೋಂಕು ನಿಯಂತ್ರಿಸಬೇಕು. ಎಲ್ಲರೂ ತಮ್ಮ ಕ್ಷೇತ್ರಗಳಿಗೆ ಹೋಗಿ ಎಂದು ಸಿಎಂ ಸೂಚಿಸಿದ್ದಾರೆ. ಈ ವಿಚಾರವಾಗಿ ನಾನು ಇಲ್ಲಿ ಮಾತನಾಡುವುದಿಲ್ಲ. ಎಲ್ಲಿ ಹೋದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ, ಅವರು ಬೆಳೆದ ಟಮೋಟೋ, ತರಕಾರಿಗಳಿಗೆ ಬೆಲೆ ಸಿಗದೇ ಬಿಸಾಕುತ್ತಿದ್ದಾರೆ. ನೂತನ ಮುಖ್ಯಮಂತ್ರಿಗಳು ಬಂದಿದ್ದಾರೆ, ಅವರಾದರೂ ರೈತರು, ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವವರನ್ನು ಉಳಿಸುತ್ತಾರಾ ನೋಡಬೇಕು.

    ಜಗದೀಶ್ ಶೆಟ್ಟರ್ ಅವರು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚಿಂತನೆ ಮಾಡಬೇಕಿದೆ, ಅಧಿವೇಶನ ಕರೆಯುತ್ತೇವೆ ಎಂದಿದ್ದರು. ಈಗ ಉತ್ತರ ಕರ್ನಾಟಕ ಭಾಗದ ಮುಖ್ಯಮಂತ್ರಿಗಳೇ ಇದ್ದಾರೆ. ಯಾವಾಗ ಕರೆಯುತ್ತಾರೋ ನೋಡೋಣ. ತರಾತುರಿಯಲ್ಲಿ ನಾನು ಮಾತನಾಡುವುದಿಲ್ಲ.

    ಜಮೀರ್ ಅವರ ಜತೆ ನನ್ನ ಅನುಭವವನ್ನು ಖಾಸಗಿಯಾಗಿ ಹಂಚಿಕೊಳ್ಳಲು ಸಿದ್ಧ:

    ಇನ್ನು ನಮ್ಮ ನಾಯಕರ ಮನೆ ಮೇಲೆ ಇಡಿ ದಾಳಿ ಬಗ್ಗೆ ನನಗೆ ಇರುವ ಕಾನೂನು ಅರಿವಿನ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ನಾನು ಈ ಬಗ್ಗೆ ವೈಯಕ್ತಿಯವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಖಾಸಗಿಯಾಗಿ ನನ್ನ ಅನುಭವವನ್ನು ಜಮೀರ್ ಅವರೊಟ್ಟಿಗೆ ಹಂಚಿಕೊಳ್ಳಲು ಸಿದ್ಧನಿದ್ದೇನೆ. ಸಾರ್ವಜನಿಕವಾಗಿ ಈ ಬಗ್ಗೆ ಮಾತನಾಡುವುದಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದರು.

    ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುರಿತಾಗಿ ಜಮೀರ್ ಅವರು ಮಾಡಿರುವ ಆರೋಪಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅವರು ಇವರ ಬಗ್ಗೆ ಹೇಳಿದರೆ, ಇವರು ಅವರ ಬಗ್ಗೆ ಮಾತನಾಡಿದರೆ, ನೀವು ಅವರನ್ನೇ ಕೇಳಬೇಕು. ಆ ವಿಚಾರವಾಗಿ ನನ್ನನ್ನು ಯಾಕೆ ಪ್ರಶ್ನಿಸುತ್ತಿದ್ದೀರಿ?’ಎಂದು ಡಿಕೆಶಿ ಕೇಳಿದರು.

    error: Content is protected !!