24.7 C
Karnataka
Sunday, May 24, 2026
    Home Blog Page 67

    ಬಿಜೆಪಿ ಎದುರಿಸಲು ಅಗ್ರೆಸಿವ್ ಆಗುವಂತೆ ರಕ್ಷಾ ರಾಮಯ್ಯಗೆ ಸಿದ್ಧರಾಮಯ್ಯ ಸಲಹೆ

    BENGALURU AUG 13

    ಭಾರತೀಯ ಜನತಾ ಪಾರ್ಟಿ ಸ್ಥಾಪನೆಯಾದದ್ದು 1980 ರಲ್ಲಿ. ಈ ಪಕ್ಷದ ಯಾವೊಬ್ಬ ನಾಯಕನೂ ಭಾರತೀಯ ಸ್ವಾತಂತ್ರ್ಯ ಹೋರಾಟಗಾರದಲ್ಲಿ ಪಾಲ್ಗೊಂಡಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದ ಇತಿಹಾಸ ಇರುವುದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ನಾನು ಕಾಂಗ್ರೆಸಿಗ ಎಂಬುದೇ ನಾವು, ನೀವು ಹೆಮ್ಮೆಪಡಬೇಕಾದ ಸಂಗತಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.

    ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಅವರು ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

    ಬಿಜೆಪಿಯವರು ಇತಿಹಾಸ ತಿರುಚುವುದರಲ್ಲಿ, ಸುಳ್ಳು ಹೇಳಿ ಸಮಾಜದ ದಾರಿ ತಪ್ಪಿಸುವುದರಲ್ಲಿ ಪ್ರವೀಣರು. ಜನರಿಗೆ ಸತ್ಯದ ಅರಿವಾದ್ರೆ ಬಿಜೆಪಿ ಜೊತೆ ಯಾರೂ ಹೋಗಲ್ಲ, ಪಕ್ಷದ ಹಿಂಬಾಲಕರು ಕಡಿಮೆಯಾಗ್ತಾರೆ ಅಂತ ಭಯ. ಸಿ.ಟಿ ರವಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಇವರು ಇತಿಹಾಸ ಓದಿಲ್ಲ ಅನ್ನೋದು ನನ್ನ ಅಭಿಪ್ರಾಯ. ಕಾರಣ ಇತಿಹಾಸದ ಕನಿಷ್ಠ ಜ್ಞಾನ ಇದ್ದರೆ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರ ಬಗ್ಗೆ ಹಗುರಾಗಿ ಮಾತನಾಡುತ್ತಾ ಇರಲಿಲ್ಲ.

    ನಮಗೆ ದೇಶಪ್ರೇಮದ ಪಾಠ ಮಾಡುವ ಬಿಜೆಪಿಯವರು ಎಂದಾದರೂ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರತಿಭಟನೆ ಮಾಡಿದ್ರಾ? ಮೊಘಲರು, ಬ್ರಿಟಿಷರ ಆಸ್ಥಾನದಲ್ಲಿ ಪ್ರಮುಖ ಹುದ್ದೆಯಲ್ಲಿ ಇದ್ದವರು ಇದೇ ಆರ್.ಎಸ್.ಎಸ್ ಹಾಗೂ ಬಿಜೆಪಿಯ ಹಿಂದಿನ ತಲೆಮಾರಿನವರಲ್ಲವೇ? ಟಿಪ್ಪುವಿನ‌ ಆಸ್ಥಾನದಲ್ಲಿ ದಿವಾನರಾಗಿದ್ದವರು ಪೂರ್ಣಯ್ಯನವರಲ್ಲವೇ? ಟಿಪ್ಪು ಜಯಂತಿಗೆ ವಿರೋಧ ಮಾಡೋರು ಪೂರ್ಣಯ್ಯನನ್ನು, ಕೃಷ್ಣಸ್ವಾಮಿಯನ್ನು ಏಕೆ ವಿರೋಧ ಮಾಡಲ್ಲ? ಅವರೆಲ್ಲ ನಮ್ಮವರು ಎಂಬ ಭಾವನೆಯೇ? ನಾಚಿಕೆಯಾಗಬೇಕು ಬಿಜೆಪಿ ನಾಯಕರಿಗೆ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

    ರಕ್ಷಾ ರಾಮಯ್ಯ ಸಜ್ಜನ, ಸಂಭಾವಿತ ನಾಯಕ. ಆದರೆ ಕೋಮುವಾದಿಗಳನ್ನು ಖಂಡಿಸುವಾಗ ಅಗ್ರೆಸಿವ್ ಆಗಿರಬೇಕಾಗುತ್ತದೆ. ಬಿಜೆಪಿಯವರು ಢೋಂಗಿಗಳು. ಇಂತಹಾ ಮೋಸಗಾರರು, ಸುಳ್ಳು ಹೇಳುವವರು ಭಾರತದ ರಾಜಕಾರಣದಲ್ಲಿ ಬೇರಾರು ಇಲ್ಲ. ಮೋದಿ ಮೋದಿ ಎಂದು ಕುಣಿಯುತ್ತಿದ್ದ ಯುವಜನತೆ ಇಂದು ಮೋದಿಯವರ ಆಡಳಿತದಿಂದ ಭ್ರಮನಿರಸನರಾಗಿದ್ದಾರೆ. ಹಿಂದೆ ನಾವು ಹೋದ ಕಡೆ ಕೆಲವರು ಮೋದಿ ಮೋದಿ ಎಂದು ಕೂಗುತ್ತಿದ್ದರು, ಈಗ ಅವರೆಲ್ಲಾ ಎಲ್ಲೋದ್ರಪ್ಪಾ? ಏನಾಯ್ತಪ್ಪ ಅವರ ಕತೆ? ಎಂದು ಕೇಳಿದರು.

    ಕರ್ನಾಟಕಕ್ಕೆ ಹದಿನೈದನೆ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ ರೂ. 5,495 ಕೋಟಿ ವಿಶೇಷ ಅನುದಾನವನ್ನು ತಿರಸ್ಕರಿಸಿದವರು ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು. ಇಂಥವರನ್ನು ನಮ್ಮ ರಾಜ್ಯದಿಂದ ಆಯ್ಕೆ ಮಾಡಿರುವುದು ಕನ್ನಡಿಗರ ತಪ್ಪೇ?

    ಬಿಜೆಪಿ ಪಕ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ, ದೇಶಕ್ಕಾಗಿ ತ್ಯಾಗ ಬಲಿದಾನಗೈದಿಲ್ಲ. ಕಾಂಗ್ರೆಸ್ ತಂದುಕೊಟ್ಟ ಸ್ವಾತಂತ್ರ್ಯದ ಫಲಾನುಭವಿಗಳಾಗಿ, ಅಂಬೇಡ್ಕರ್ ಅವರ ಸಂವಿಧಾನದ ಕಾರಣದಿಂದ ಇಂದು ಅಧಿಕಾರದಲ್ಲಿದ್ದಾರೆ. ಆದರೆ ನಮ್ಮ ಸಂವಿಧಾನದ ಬಗ್ಗೆಯೂ ಬಿಜೆಪಿಯವರಿಗೆ ಗೌರವವಿಲ್ಲ. ಇತಿಹಾಸ ತಿಳಿಯದವರು ಇತಿಹಾಸ ನಿರ್ಮಿಸಲಾರರು ಎಂದು ಬಾಬಾ ಸಾಹೇಬರು ಹೇಳಿದ್ದರು. ಹಾಗಾಗಿ ಪ್ರತಿಯೊಬ್ಬರು ದೇಶದ ಇತಿಹಾಸ, ಗಾಂಧಿ, ನೆಹರು, ವಲ್ಲಭಭಾಯ್ ಪಟೇಲ್, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸುಭಾಷ್ ಚಂದ್ರ ಬೋಸ್ ಯಾರು ಎಂದು ತಿಳಿದುಕೊಳ್ಳಬೇಕು. ಬಿಜೆಪಿಯವರು ಜನರಿಗೆ ಸುಳ್ಳು ಹೇಳಿದರೆ ನಾವು ನಮ್ಮ ಇತಿಹಾಸದ ಬಗ್ಗೆ ಸತ್ಯ ಹೇಳೋಣ. ನಮ್ಮ ಯುವಕರು ಈ ಕೆಲಸ ಮಾಡಬೇಕು ಆಗ ಮಾತ್ರ ಭವ್ಯ ಭಾರತ ನಿರ್ಮಾಣ ಸಾಧ್ಯ. ಕೇವಲ ಭಾಷಣದಿಂದ ಭಾರತ ನಿರ್ಮಾಣ ಸಾಧ್ಯವಿಲ್ಲ.

    ರಕ್ಷಾ ರಾಮಯ್ಯ ನಾಯಕತ್ವದಲ್ಲಿ ಯುವಕರನ್ನು, ವಿದ್ಯಾರ್ಥಿಗಳನ್ನು, ಹಿಂದುಳಿದವರನ್ನು, ದಲಿತರನ್ನು, ಅಲ್ಪಸಂಖ್ಯಾತರನ್ನು, ಆದಿವಾಸಿಗಳನ್ನು ಸೇರಿಸಿಕೊಂಡು ಹೊಸ ಪಡೆಯನ್ನು ಕಟ್ಟಬೇಕು ಎಂದು ಸಲಹೆ ನೀಡುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದರು.

    ಆಗಸ್ಟ್ 16ರಿಂದ ರಾಜ್ಯದಲ್ಲಿ 4 ಕೇಂದ್ರ ಸಚಿವರಿಂದ ಜನಾಶೀರ್ವಾದ ಯಾತ್ರೆ

    BENGALURU AUG 13

    ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರದ ನೂತನ ಸಚಿವ ಸಂಪುಟದ ಸಚಿವರನ್ನು ಪರಿಚಯಿಸಲು ಪ್ರಧಾನಿಯವರಿಗೆ ಅವಕಾಶ ನೀಡದೆ ಕಾಂಗ್ರೆಸ್ ಅಡ್ಡಿ ಪಡಿಸಿದ ಘಟನೆ ಅತ್ಯಂತ ದುರದೃಷ್ಟಕರ. ಇದನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು, ನೂತನ ಸಚಿವರನ್ನು ಜನರಿಗೆ ಪರಿಚಯಿಸಲು ಆಗಸ್ಟ್ 16ರಿಂದ “ಜನಾಶೀರ್ವಾದ ಯಾತ್ರೆ” ನಡೆಸಲು ನಿರ್ಧರಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯರಾದ ಸಿದ್ದರಾಜು ಅವರು ತಿಳಿಸಿದರು.

    ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಉದ್ದಗಲಕ್ಕೆ ಜನಾಶೀರ್ವಾದ ಯಾತ್ರೆ ತೆರಳಲಿದೆ. ರಾಜ್ಯದಲ್ಲಿ ನಾಲ್ಕು ತಂಡಗಳು ಸಂಚರಿಸಲಿದ್ದು, ಸಚಿವರಾದ ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್ ಮತ್ತು ಭಗವಂತ ಖೂಬಾ ಅವರ ನೇತೃತ್ವದಲ್ಲಿ ಈ ತಂಡಗಳು ಪ್ರವಾಸ ಮಾಡಲಿವೆ. ಇದಕ್ಕಾಗಿ ಸಂಚಾಲಕರು, ಸಹ ಸಂಚಾಲಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

    ದೇಶದಲ್ಲಿ ಒಟ್ಟು 160 ದಿನ ವಿವಿಧ ತಂಡಗಳು ಪ್ರವಾಸ ಮಾಡಲಿವೆ. ರಾಜ್ಯದಲ್ಲಿ 5 ದಿನಗಳ ಪ್ರವಾಸದಲ್ಲಿ 2,030 ಕಿಮೀ ದೂರವನ್ನು ಕ್ರಮಿಸಲಿವೆ. 24 ಲೋಕಸಭಾ ಕ್ಷೇತ್ರಗಳು, 72 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ 25 ಕಂದಾಯ ಜಿಲ್ಲೆಗಳಲ್ಲಿ 161 ಕಾರ್ಯಕ್ರಮಗಳು ನಡೆಯಲಿವೆ ಎಂದರು.

    ಕೇಂದ್ರ ಸರಕಾರವು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅನುಷ್ಠಾನಗೊಳಿಸಿದ ಯೋಜನೆಗಳು, ರೈತರ ಆದಾಯ ದ್ವಿಗುಣ, ದೀನದಲಿತರು, ಬಡವರ ಅಭ್ಯುದಯಕ್ಕಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಪರಿಚಯಿಸಲಾಗುವುದು. ದೇಶದಲ್ಲಿ 55 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ನೀಡಲಾಗಿದೆ. ದೀಪಾವಳಿ ವರೆಗೆ ಬಡವರಿಗೆ ಉಚಿತ ಪಡಿತರ ನೀಡುತ್ತಿದ್ದು, ಲಸಿಕಾ ಕೇಂದ್ರ, ರೇಶನ್ ಅಂಗಡಿಗಳಿಗೆ ಈ ಯಾತ್ರೆ ಭೇಟಿ ಕೊಡಲಿದೆ ಎಂದು ವಿವರಿಸಿದರು.
    ರಸಗೊಬ್ಬರದ ಅಂಗಡಿಗೆ ಭೇಟಿ ನೀಡಿ ಗೊಬ್ಬರ ಸರಿಯಾಗಿ ಸಿಗುತ್ತಿದೆಯೇ ಎಂದು ಮಾಹಿತಿ ಪಡೆಯಲಾಗುವುದು. ಸಾಹಿತಿಗಳು, ಗಡಿ ಕಾಯುವ ಯೋಧರ ಮನೆ, ಗಣ್ಯ ವ್ಯಕ್ತಿಗಳ ಮನೆ, ಜನಸಂಘ ಮತ್ತು ಬಿಜೆಪಿಯ ಹಿರಿಯ ನಾಯಕರ ಮನೆಗಳಿಗೆ ಭೇಟಿ ಕೊಟ್ಟು ಅವರ ಆಶೀರ್ವಾದ ಪಡೆಯಲಾಗುವುದು ಎಂದರು. ಬಳಿಕ ಯಾತ್ರೆಯ ರೂಟ್ ಮ್ಯಾಪ್ ಅನ್ನೂ ಅವರು ಬಿಡುಗಡೆಗೊಳಿಸಿದರು.

    ಕೋವಿಡ್ ನಿಯಮಾವಳಿ ಕಡ್ಡಾಯವಾಗಿ ಪಾಲಿಸಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

    ಯೂರಿಯಾ ಉತ್ಪಾದನೆಯಲ್ಲಿ ಭಾರತ ಶೀಘ್ರವೇ ಸ್ವಾವಲಂಬಿ


    BENGALURU AUG 13

    ನನ್ನ ಎರಡೂ ಖಾತೆಗಳ ವಿಚಾರದಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದೇನೆ. ವಿದ್ಯುತ್ ಕ್ಷೇತ್ರದಲ್ಲಿ ದೇಶವು ಸ್ವಾವಲಂಬಿ ಆಗಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ನಾಲ್ಕು ಹೊಸ ರಸಗೊಬ್ಬರ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿದ್ದು, ಯೂರಿಯಾ ಉತ್ಪಾದನೆಯಲ್ಲಿ ದೇಶವು ಶೀಘ್ರವೇ ಸ್ವಾವಲಂಬಿ ಆಗಲಿದೆ ಎಂದು ಕೇಂದ್ರ ಸರಕಾರದ ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ್ ಖೂಬಾ ಅವರು ತಿಳಿಸಿದರು.

    ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇಫ್ಕೋ ಕಂಪೆನಿಯು ಕರ್ನಾಟಕದಲ್ಲಿ ನ್ಯಾನೊ ಯೂರಿಯಾ ಉತ್ಪಾದನಾ ಘಟಕ ಆರಂಭಿಸಲು ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ರಾಜ್ಯ ಸರಕಾರವು ಮೂಲಸೌಕರ್ಯ ನೀಡಿದ ಬಳಿಕ ಅದು ರಾಜ್ಯದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.

    ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನೇತೃತ್ವವನ್ನು ನಮ್ಮ ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ವಹಿಸುತ್ತಿದ್ದಾರೆ. ಇದು ಅತ್ಯಂತ ಹೆಮ್ಮೆಯ ವಿಚಾರ ಎಂದರು. ಹಿಂದುಳಿದ ಜಾತಿಗಳನ್ನು ಗುರುತಿಸುವ ರಾಜ್ಯಗಳ ಅಧಿಕಾರವನ್ನು ಮರು ಸ್ಥಾಪಿಸುವ ಮಸೂದೆಗೆ ರಾಜ್ಯಸಭೆಯು ಒಪ್ಪಿಗೆ ನೀಡಿದ್ದು, ಇದೊಂದು ಮಹತ್ವದ ಕ್ರಮ ಎಂದು ಅವರು ಶ್ಲಾಘಿಸಿದರು.

    ಯೋಗಿ ಶ್ರೀ ನಾರಾಯಣಾಚಾರ್ಯರು

    ಆಗಸ್ಟ್ 13, ಶುಕ್ರವಾರ ಗುರುಗಳ ಆರಾಧನೆಯ ಪ್ರಯುಕ್ತ ತನ್ನಿಮಿತ್ತ ಈ ಲೇಖನ

    ವಿಷ್ಣುತೀರ್ಥ, ಇಭರಾಮಪುರ 

    ಶ್ರೀ ಯೋಗಿ ನಾರಾಯಣಾಚಾರ್ಯರು ಕಲಿಯುಗ ಕಲ್ಪವೃಕ್ಷ ಕಾಮಧೇನು ಶ್ರೀರಾಘವೇಂದ್ರ ಗುರುಸಾರ್ವಭೌಮರ ವಿಶೇಷ ಕರುಣಾ ಸುಪಾತ್ರರು  ಹಾಗೂ ಶ್ರೀ ಅಪ್ಪಾವರ ಸಾಕ್ಷಾತ್ ಶಿಷ್ಯರು.
    ಶ್ರೀಯೋಗಿ ನಾರಾಯಣಾಚಾರ್ಯರು ವಿದ್ಯಾಸಂಪನ್ನರಾದ ಶ್ರೀ ಉಪಾಧ್ಯಾಯ ರಾಮಾಚಾರ್ಯರಲ್ಲಿ ಸಕಲ ವೇದಾಂತ ಶಾಸ್ತ್ರವನ್ನು ಅಧ್ಯಯನ ಮಾಡಿದವರು.  

    ಶ್ರೀ ನಾರಾಯಣಾಚಾರ್ಯರು ಮೂಲತಃ ಗದುಗಿನವರು. ಆಚಾರ್ಯರು ಗದುಗಿನ ವೀರ ನಾರಾಯಣನ ಅಂತರಂಗ ಭಕ್ತರು. ತಮ್ಮ ಸ್ವರೂಪಪೋದ್ಧಾರಕ ಗುರುಗಳ  ಪ್ರಾಪ್ತಿಗಾಗಿ ನಿತ್ಯವೂ ಶ್ರೀ ನಾರಾಯಣಾಚಾರ್ಯರು ವೀರ ನಾರಾಯಣನ ಸೇವೆ ಮಾಡುತ್ತಿದ್ದರು. 

    ಸ್ವರೂಪೋದ್ಧಾರಕ ಗುರುಗಳ ಪ್ರಾಪ್ತಿ:ಆಚಾರ್ಯರ ನಿಷ್ಠೆಯ ಸೇವೆಗೆ ಮೆಚ್ಚಿದ ವೀರ ನಾರಾಯಣ ದೇವರು ಸ್ವಪ್ನದಲ್ಲಿ ಆಚಾರ್ಯರಿಗೆ ನಿಮ್ಮ ಸ್ವರೂಪೊದ್ದಾರಕರು ಅತಿ ಶೀಘ್ರದಲ್ಲಿ ನಿನಗೆ ಭೇಟಿ ಆಗುತ್ತಾರೆ ಅಂತ ಸೂಚನೆ ಕೊಡುತ್ತಾರೆ.ಶ್ರೀ ಅಪ್ಪಾವರು ಸಂಚಾರದ ಅನ್ವಯ ಗದುಗಿಗೆ ಬಂದಿರುತ್ತಾರೆ. ಅಲ್ಲಿ ಮಧ್ಯಾಹ್ನದ ಸಮಯಕ್ಕೆ ಶ್ರೀ ವೀರ ನಾರಾಯಣನ ದರ್ಶನಕ್ಕೆ ಅಪ್ಪಾವರು ಬಂದರು, ಬಂದ ಸಮಯದಲ್ಲಿ ಅರ್ಚಕರು ದೇವಸ್ಥಾನ ಗರ್ಭಗುಡಿಗೆ ಬೀಗ ಹಾಕಿರುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಅಪ್ಪಾವರು ವೀರ ನಾರಾಯಣನ ಪ್ರಾರ್ಥಿಸುತ್ತಾ ಸ್ವಾಮಿ ನಾನು ನಿನ್ನ ದರ್ಶನಕ್ಕಾಗಿ  ಇಭರಾಮಪುರದಿಂದ ಬಂದಿದ್ದೇನೆ ಅಂತ ಪ್ರಾರ್ಥಿಸಿದಾಗ, ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆಯುತ್ತದೆ.

    ಇದೇ ಸಮಯದಲ್ಲಿ ಶ್ರೀ ಯೋಗಿ ನಾರಾಯಣಾಚಾರ್ಯರು ದೇವಸ್ಥಾನ ಪ್ರಾಂಗಣದಲ್ಲಿಯೇ ಇರುತ್ತಾರೆ. ಶ್ರೀ ಅಪ್ಪಾವರನ್ನು ಯಾರೋ ಯಾತ್ರಿಕರು ನಾರಾಯಣನ ದರ್ಶನಕ್ಕಾಗಿ ಬಂದಿದ್ದಾರೆ ಎಂದು ತಿಳಿದಿರುತ್ತಾರೆ ಆದರೆ ಅಲ್ಲಿ ನಡೆದಿದ್ದು ಬೇರೆ. ಅಪ್ಪಾವರ ಪ್ರಾರ್ಥನೆಗೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆದುದನ್ನು ಕಂಡು ಆಚಾರ್ಯರು ಒಂದು ಕ್ಷಣ ಏನು ತೋಚದೆ ಬೆರಗಾಗುತ್ತಾರೆ .

     ಶ್ರೀಅಪ್ಪಾವರು ವೀರ ನಾರಾಯಣನ ಜೊತೆ ನೇರವಾಗಿ ಸಂದರ್ಶನ ಮಾಡುವುದನ್ನು ಕಂಡು ಸ್ವಪ್ನದಲ್ಲಿ ಸೂಚಿಸಿದ ಹಾಗೆ ತಮಗೆ ಯೋಗ್ಯವಾದ ಗುರುಗಳ ಪ್ರಾಪ್ತಿಯಾಯಿತು ಎಂದು  ಶ್ರೀ ಯೋಗಿ  ನಾರಾಯಣಾಚಾರ್ಯರು ಅಪ್ಪಾವರಲ್ಲಿ ಶಿಷ್ಯ ಸ್ವೀಕಾರಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆಚಾರ್ಯರ ಪ್ರಾರ್ಥನೆಗೆ ಶ್ರೀ ಅಪ್ಪಾವರು ಸಂತುಷ್ಟರಾಗಿ ಅವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸುತ್ತಾರೆ.

    ರಾಯರ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ: ಶಿಷ್ಯತ್ವ ಸ್ವೀಕಾರದ ಪ್ರತೀಕವಾಗಿ ನಮ್ಮ ಕುಲಗುರುಗಳಾದ ಮಂತ್ರಾಲಯ ಗುರುಸಾರ್ವಭೌಮರ ಬೃಂದಾವನ ಪ್ರತಿಷ್ಠಾಪಿಸಲು ಶ್ರೀ ಅಪ್ಪಾವರು ಇಚ್ಛಿಸುತ್ತಾರೆ. ಅಪ್ಪಾವರ ಆಜ್ಞೆಯಂತೆ ಶ್ರೀ ಯೋಗಿ ನಾರಾಯಣಾಚಾರ್ಯರು ಬೃಂದಾವನ ಕೆತ್ತನೆ ಮಾಡುತ್ತಾರೆ. ಶ್ರೀ ಅಪ್ಪಾವರು ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಭವ್ಯ ಬೃಂದಾವನವನ್ನು ಪ್ರತಿಷ್ಠಾಪನೆ ಮಾಡುತ್ತಾರೆ. 

    ಶಿಲ್ಪಕಲಾ ನಿಪುಣ : ಶ್ರೀ ಅಪ್ಪಾವರು ಹಾಗೂ ವೀರ ನಾರಾಯಣನ ಅನುಗ್ರಹದಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಶಿಲ್ಪಕಲೆಯ ಅನುಗ್ರಹ ಹೊಂದಿರುತ್ತಾರೆ. ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಬೃಂದಾವನ, ಅಪ್ಪಾವರ ಕಟ್ಟೆಯಲ್ಲಿ ಮಂಟಪದಲ್ಲಿ ಕೆತ್ತನೆಗಳು , ಮಂತ್ರಾಲಯದ ತುಂಗಾ ತಟದಲ್ಲಿ ರಾಯರು ಆಹ್ನಿಕ ಮಾಡುತ್ತಿದ್ದ ಸ್ಥಳ ಗುರುತಿಸಿ ಅಲ್ಲಿ ಅವತಾರತ್ರಯ ಪ್ರಾಣದೇವರು, ಅಪ್ಪಾವರ ಕಟ್ಟೆಯಲ್ಲಿ ಶಾಲಿಗ್ರಾಮ ಶಿಲೆಯಲ್ಲಿ ಚತುರ್ಭುಜ ವೇಣುಗೋಪಾಲ ಹಾಗೂ ಶ್ರೀ ಅಪ್ಪಾವರ ಭವ್ಯವಾದ ಮೂರ್ತಿಯು ಶ್ರೀ ಯೋಗಿ ನಾರಾಯಣಾಚಾರ್ಯರ ನೈಪುಣ್ಯತೆ ತೋರಿಸುತ್ತೆ.

    ಗುರುಗಳ ಅನುಗ್ರಹದಿಂದ ಯಾತ್ರೆ:ಶ್ರೀ ಅಪ್ಪಾವರು ಒಂದು ಬಾರಿ ದಕ್ಷಿಣ ಭಾರತದ ತೀರ್ಥ ಯಾತ್ರೆ ಮಾಡಲು ಇಚ್ಛಿಸುತ್ತಾರೆ. ಇದಕ್ಕಾಗಿಯೇ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪರಮ ಗುರುಗಳಾದ ಶ್ರೀ ವಿಜಯೀಂದ್ರತೀರ್ಥರ ದರ್ಶನ ಮಾಡಲು ನಿರ್ಧರಿಸುತ್ತಾರೆ. ಯಾತ್ರೆಯ ಬಗ್ಗೆ ಶ್ರೀ ಅಪ್ಪಾವರು ತಮ್ಮ ಶಿಷ್ಯರಾದ ಯೋಗಿ ನಾರಾಯಣಾಚಾರ್ಯರ ಹತ್ತಿರ ಹೇಳಿಕೊಳ್ಳುತ್ತಾರೆ.

    ಶ್ರೀ ಯೋಗಿ ನಾರಾಯಣಾಚಾರ್ಯರು ಅಪ್ಪಾವರ ಮಾತಿನಂತೆಯೇ ಎಲ್ಲಾ ಸಿದ್ಧತೆಗಳನ್ನು ಮಾಡಿರುತ್ತಾರೆ. ದೂರದ ಕುಂಭಕೋಣಕ್ಕೆ ತಲುಪಲು ಸುಮಾರು ವಾರದ ಸಮಯ ಬೇಕು. ವಾರಗಳೇ ಕಳೆದವು. ಶ್ರೀ ವಿಜಯೀಂದ್ರತೀರ್ಥರ ಆರಾಧನೆ ಹತ್ತಿರವಾಗುತ್ತಿದೆ. ಜೇಷ್ಟ ಮಾಸದ ಕೃಷ್ಣ ಪಕ್ಷ ಏಕಾದಶಿಯೂ ಕೂಡ ಬಂತು. ಮರುದಿನವೇ ಶ್ರೀ ವಿಜಯೀಂದ್ರತೀರ್ಥರ ಆರಾಧನೆ. ಆದರೂ ಶ್ರೀ ಅಪ್ಪಾವರು ಯಾತ್ರೆಗೆ ಹೊರಡುವ  ಬಗ್ಗೆ ಏನೂ ಸುಳಿವು ಕೊಡಲಿಲ್ಲ.

    ಏಕಾದಶಿಯ ರಾತ್ರಿ ಅಪ್ಪಾವರು ಶ್ರೀ ನಾರಾಯಣಾಚಾರ್ಯರಿಗೆ ಕರೆದು ನಾಳೆ ಶ್ರೀ ವಿಜಯೀಂದ್ರರ ಆರಾಧನೆ ದರ್ಶನಕ್ಕೆ ಹೊರಡಬೇಕು ಬೆಳಗ್ಗೆ ಬೇಗ ಎದ್ದು ಅಹ್ನಿಕಾದಿಗಳನ್ನು ಮುಗಿಸಲು ಸೂಚಿಸುತ್ತಾರೆ. ದರ್ಶನದ ಭಾಗ್ಯ ದೊರೆಯುತ್ತದೆ ಎನ್ನುವ ಖುಷಿಯಲ್ಲಿ ಇದ್ದ ಆಚಾರ್ಯರಿಗೆ ಇನ್ನೊಂದು ಕಡೆ ದೂರದ ಕುಂಭಕೋಣಕ್ಕೆ ಬೆಳಗಾಗುವುದರಲ್ಲಿ ಹೇಗೆ ಹೋಗಿ ತಲುಪಬೇಕೆಂಬ ಗೊಂದಲ ಮನಸ್ಸಿನಲ್ಲಿ ಮೂಡುತ್ತದೆ.
    ಆದರೂ ಶ್ರೀ ಅಪ್ಪಾವರ ಆಜ್ಞೆ ಎಂದು ಭಾವಿಸಿ ಬೆಳಗ್ಗೆ ಬೇಗ ಎದ್ದು ಅಹ್ನೀಕಾದಿಗಳನ್ನು ಮುಗಿಸಿದ ಆಚಾರ್ಯರು ಶ್ರೀ ಅಪ್ಪಾವರ ಬಳಿ ಬಂದು ತಮ್ಮ ಮನದಲ್ಲಿನ ಗೊಂದಲಗಳನ್ನು  ಹೇಳಿಕೊಳ್ಳುತ್ತಾರೆ . ಅಪ್ಪಾವರು ಆಚಾರ್ಯರ ಗೊಂದಲಕ್ಕೆ ನಗುತ್ತಾ ನನ್ನ ಕೈ ಹಿಡಿಯಿರಿ ಎನ್ನುತ್ತಾರೆ. 

    ಶ್ರೀ ಅಪ್ಪಾವರ ಕೈ ಹಿಡಿದ ಶ್ರೀ ಯೋಗಿ ನಾರಾಯಣಾಚಾರ್ಯರಿಗೆ ಕ್ಷಣಮಾತ್ರದಲ್ಲಿ ಕುಂಭಕೋಣಕ್ಕೆ ತಲುಪಿಸಿ ಚತುರಧಿಕ ಶತಗ್ರಂಥರತ್ನಗಳ ಒಡೆಯರಾದ ಶ್ರೀ ವಿಜಯೀಂದ್ರ ತೀರ್ಥರ ದರ್ಶನವನ್ನು ಮಾಡಿಸುತ್ತಾರೆ.

    ಶ್ರೀ ಅಪ್ಪಾವರ ಸ್ತೋತ್ರ :ಶ್ರೀ ಆಚಾರ್ಯರು ತಮ್ಮ ಗುರುಗಳಾದ ಶ್ರೀ ಅಪ್ಪಾವರ ಮಹಿಮೆ ಸಾರುವ ಶ್ರೀ ಇಭರಾಮಪುರ ಶ್ರೀ ಕೃಷ್ಣಾರ್ಯ ಸ್ತೋತ್ರ ರಚಿಸಿದರು. ತಾವು ಪ್ರತೀಕ್ಷ್ಯವಾಗಿ ಕಂಡ ಹಾಗೂ ಶ್ರುತಿ ಸ್ಮೃತಿ ಸಮ್ಮತಿಸುವ ಮಹಿಮೆಗಳು ಮತ್ತು ಆ ಮಹಿಮೆಗಳು ಯಾವ ಯಾವ ಪುರಾಣಗಳಲ್ಲಿ ಉಲೇಖವಾಗಿದೆ ಎಂದು  ಸ್ತೋತ್ರಮಾಡಿದ್ದಾರೆ. 

    ಅಪರೋಕ್ಷ ಜ್ಞಾನ: ಸುರಪುರದ ಆನಂದದಾಸರು ತಮ್ಮ ಸಮಕಾಲೀನ ಎಲ್ಲಾ ಅಪರೋಕ್ಷ ಜ್ಞಾನಿಗಳನ್ನು  ಗುರುತಿಸಿ ರಚಿಸಿದ ಕೀರ್ತನೆ :


    ಶ್ರೀ ರಾಘವೇಂದ್ರರಾಯರ ಪಾದಾಂಬುಜ ।ದಾರಾಧಕರ ಕೊಂಡಾಡಿರೋ ।। ಪಲ್ಲವಿ ।।
    *ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ ।**ಬಲವಂತ ಯೋಗಿ ನಾರಾಯಣಾರ್ಯರ ।।*


    ಮೇಲೆಕಂಡ ಕೀರ್ತನೆಯಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಶ್ರೀರಾಘವೇಂದ್ರ ಗುರುಸಾರ್ವಭೌಮರ, ಶ್ರೀ ಅಪ್ಪಾವರ ಹಾಗೂ ತಮ್ಮ ಇಷ್ಟ ದೈವ ಶ್ರೀ ವೀರ ನಾರಾಯಣನ ಅನುಗ್ರಹಕ್ಕೆ ಪಾತ್ರರಾಗಿ ಅಪರೋಕ್ಷ ಜ್ಞಾನ ಹೊಂದಿದ್ದಾರೆ ಎಂದು ತಿಳಿಯಬಹುದು.

    ಸಮಕಾಲೀನ ಅಪರೋಕ್ಷ ಜ್ಞಾನಿಗಳ ಜೊತೆ ಒಡನಾಟ :

    ಶ್ರೀ ಆಚಾರ್ಯರು ತಮ್ಮ ಸಮಕಾಲೀನ ಅಪರೋಕ್ಷ ಜ್ಞಾನಿಗಳಾದ ಸುರಪುರದ ಆನಂದದಾಸರು  , ಮೊದಲಕಲ್ಲು ಶೇಷದಾಸರು , ವಿಜಯರಾಮಚಂದ್ರ ವಿಠಲರು , ಸುಜ್ಞಾನೇಂದ್ರತೀರ್ಥರು , ಗಣೇಶಾಚಾರ್ಯರು , ಯಳಮೇಲಿ ಹಯಗ್ರೀವಾಚಾರ್ಯರು ,  ಅಂತಃ ಜ್ಞಾನಿಗಳ ಸಮ್ಮೂಹರೊಡನೆ ವಿಶೇಷ ಒಡನಾಟ ಹೊಂದಿದವರು ಮತ್ತು ಅವರ ಜೊತೆ ಅನೇಕ ಶಾಸ್ತ್ರದ ವಿಚಾರ ಚರ್ಚೆಮಾಡುತ್ತಿದ್ದರು.

    ಶ್ರಾವಣ ಶುದ್ಧ ಪಂಚಮಿ ಶ್ರೀಲಯ ಚಿಂತನಾ ಪೂರ್ವಕವಾಗಿ ಹರಿಧ್ಯಾನ ಮಾಡುತ್ತಾ ತಮ್ಮ ಸ್ವರೂಪೋಧಾರ ಅಪ್ಪಾವರ ಸನ್ನಿಧಾನ ಹತ್ತಿರ ಅದೃಶ್ಯರಾದರು.

    ಉತ್ತಮ ಉದ್ಯೋಗ ಅವಕಾಶಕ್ಕೆ GTTC ಡಿಪ್ಲೋಮಾ ಕೋರ್ಸ್‌

    GTTC ( ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ) ಇದು 1972ರಲ್ಲಿ ಸ್ಥಾಪನೆಯಾದ ಕರ್ನಾಟಕ ಸರಕಾರ ಹಾಗೂ ಕೆನಡಾ, ಡೆನ್ಮಾರ್ಕ್ ಜಂಟಿಯಾಗಿ ನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ.

    ಇಲ್ಲಿ ಡಿಪ್ಲೊಮಾ, ಪೋಸ್ಟ್ ಡಿಪ್ಲೊಮಾ ಹಾಗೂ ಪಿಜಿ ವರೆಗೆ ಶಿಕ್ಷಣಕ್ಕೆ ಅವಕಾಶಗಳಿವೆ. ಇಲ್ಲಿ ಸಾಂಪ್ರದಾಯಿಕ ಹೈ ಟೆಕ್/ಆಟೊಮೇಟೆಡ್ ಹಾಗೂ ಸಾಫ್ಟ್‌ವೇರ್ ಆಧಾರಿತ ಕೋರ್ಸ್‌ಗಳಿವೆ. ಜಾಗತಿಕ ಮಟ್ಟದ ಬೆಳವಣಿಗೆಗಳನ್ನು ಗಮನಿಸಿಯೇ ಇಲ್ಲಿ ವೃತ್ತಿ ತರಬೇತಿಗಳನ್ನು ನೀಡುತ್ತಿದ್ದಾರೆ.

    ಇಲ್ಲಿ ಮಹಿಳೆಯರಿಗೆ ಮೀಸಲಾದ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ತರಬೇತಿ 3 ವರ್ಷದ್ದಾಗಿದೆ. ಇನ್ನುಳಿದಂತೆ ಟೂಲ್ ಅಂಡ್ ಡೈ ಮೇಕಿಂಗ್, ಪ್ರಿಸಿಪಿನ್ ಮ್ಯಾನುಪ್ಯಾಕ್ಟರಿಂಗ್ ಮೆಕಾಟ್ರಾನಿಕ್ಸ್ ತರಬೇತಿಗಳಿದ್ದು ಎಲ್ಲವೂ 3 ವರ್ಷದ ಅವಧಿಯಾಗಿದ್ದು 1 ವರ್ಷದ ಕಡ್ಡಾಯ ಕೈಗಾರಿಕಾ ತರಬೇತಿ ಇದೆ. ಇದು ಕರ್ನಾಟಕ ರಾಜ್ಯ ಸರಕಾರ ಹಾಗೂ ಎಐಸಿಟಿಇ ಮಂಡಳಿಯಿಂದ ಅಂಗೀಕೃತವಾಗಿದ್ದು ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 35 ಅಂಕ ಪಡೆದು ಉತ್ತೀರ್ಣರಾಗಿದ್ದು, ಕನಿಷ್ಠ 5 ವರ್ಷ ಕರ್ನಾಟಕ ರಾಜ್ಯದಲ್ಲಿ ವಿದ್ಯಾಭ್ಯಾಸ ಪಡೆದಿರಬೇಕು. ಶೇ. 30 ರಷ್ಟು ಸೀಟುಗಳು ವಿದ್ಯಾರ್ಥಿನಿಯರಿಗೆ ಮೀಸಲಿದೆ.

    ಜಿಟಿಟಿಸಿ ಡಿಪ್ಲೋಮಾ ಕೋರ್ಸುಗಳನ್ನು ಕ್ಲಾಸ್‌ರೂಮ್ ತರಬೇತಿಗಳಿಗಷ್ಟೇ ಸೀಮಿತಗೊಳಿಸದೆ ಪ್ರಾಯೋಗಿಕ ಹಾಗೂ ರಚಿನಾತ್ಮಕ ಕಲಿಕೆಗೆ ಒತ್ತು ನೀಡಿ ರೂಪಿಸಲಾಗಿದೆ.ವಿದ್ಯಾರ್ಥಿಗಳಿಗೆ ವಿಜ್ಞಾನಗಳ ಜೊತೆಗೆ ಅತ್ಯಾಧುನಿಕ ಯಂತ್ರೋಪಕರಣಗಳಾದ ಸಿ.ಎನ್.ಸಿ. ಯಂತ್ರಗಳು, – ರೋಬೋಟೋಗಳು 3ಡಿ ಮುದ್ರಕಗಳು, ಸಿ.ಎಮ್.ಎಮ್ ಇತ್ಯಾದಿಗಳನ್ನು ಬಳಸಿ ಕಲಿಸಿಕೊಡಲಾಗುತ್ತದೆ.

    ವಿದ್ಯಾರ್ಥಿಗಳಿಗೆ ಆಧುನಿಕ ವಿನ್ಯಾಸ ಮತ್ತು ಸಿಮ್ಯುಲೇಶನ್ ಸಾಫ್ಟ್‌ವೇರ್‌ಗಳನ್ನು ಬಳಸಿ ಪಾಠ ಮಾಡಲಾಗುತ್ತದೆ.* ಕೈಗಾರಿಕೆ ಮತ್ತು ಕಂಪನಿಗಳ ಪಠ್ಯಕ್ರಮವನ್ನು ಇಂದಿನ ಮಾರುಕಟ್ಟೆಗಳ ಅಗತ್ಯಗಳಿಗನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.

    ಜಿಟಿಟಿಸಿ ಡಿಪ್ಲೋಮಾ, ಪಿ.ಡಿ.ಟಿ.ಡಿ ಮತ್ತು ಎಮ್.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದುವರೆಗೂ ಕೈಗಾರಿಕೆಗಳಲ್ಲಿ ಉತ್ತಮ ಉದ್ಯೋಗಾವಕಾಶಗಳಿವೆ. ದೇಶ, ವಿದೇಶಗಳಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಇರುವ ಬೇಡಿಕೆಯೇ ಇದಕ್ಕೆ ಸಾಕ್ಷಿಯಾಗಿದೆ.

    ಜಿಟಿಟಿಸಿ ಪ್ರಾರಂಭದಿಂದ ಇಲ್ಲಿಯವರೆಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಳ್ಳಲು ನೆರವಾಗಿದೆ.

    ಜಿಟಿಟಿಸಿ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರಿಗೆ ಲ್ಯಾಟರಲ್ ಎಂಟ್ರಿ ಮೂಲಕ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ದ್ವಿತೀಯ ವರ್ಷಕ್ಕೆ ನೇರ ಪ್ರವೇಶ ಹೊಂದಲು ಅವಕಾಶವಿರುತ್ತದೆ

    ಎಸ್.ಸಿ/ಎಸ್.ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಸೌಲಭ್ಯವಿರುತ್ತದೆ

    ಕೈಗಾರಿಕಾ ಪ್ರಾಯೋಜಿತ ಅಭ್ಯರ್ಥಿಗಳಿಗಾಗಿ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್‌ನಲ್ಲಿ ಆವಕಾಶ ಕಲ್ಪಿಸಲಾಗಿದೆ.

     ಜಿಟಿಟಿಸಿ ಡಿಪ್ಲೋಮಾ ಕೋರ್ಸ್‌ಗಳು

    ತರಬೇತಿ ಕಾರ್ಯಕ್ರಮಗಳು  ವಿದ್ಯಾರ್ಹತೆ  ತರಬೇತಿಯ ಅವಧಿ (ವರ್ಷಗಳಲ್ಲಿ)ಕೇಂದ್ರಗಳು  
    ಡಿಪ್ಲೋಮಾ ಇನ್ ಟೂಲ್ & ಡೈ ಮೇಕಿಂಗ್ (DTDM)10ನೇ ತರಗತಿ3+1ಜಿಟಿಟಿಸಿಯ 28 ಕೇಂದ್ರಗಳು  
    ಡಿಪ್ಲೋಮಾ ಇನ್ ಪ್ರಿಸಿಶನ್ ಮ್ಯಾನುಫ್ಯಾಕ್ಟರಿಂಗ್ (DPM)  10ನೇ ತರಗತಿ3+1ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ಧಾರವಾಡ ಮತ್ತು ಮಂಗಳೂರು
    ಡಿಪ್ಲೋಮಾ ಇನ್ ಮೆಕ್ಯಾಟ್ರಾನಿಕ್ಸ್ (DMCH)  10ನೇ ತರಗತಿ3+1ಬೆಂಗಳೂರು, ಗೌರಿಬಿದನೂರು, ಚಿಕ್ಕೋಡಿ, ಗೋಕಾಕ್, ಉಡುಪಿ, ಚಿತ್ರದುರ್ಗ, ಚಳ್ಳಕೆರೆ ಕೊಪ್ಪಳ ಮತ್ತು ಯಾದಗಿರಿ
    ಡಿಪ್ಲೋಮಾ ಇನ್ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್‌ (DEC)10ನೇ ತರಗತಿ3ಬೆಂಗಳೂರು  

    ಕಡ್ಡಾಯ ಒಂದು ವರ್ಷದ ಇಂಟರ್ನ್‌ಶಿಪ್ ತರಬೇತಿಯಿಂದಾಗಿ ವಿದ್ಯಾರ್ಥಿಗಳು ಕೈಗಾರಿಕಾ ವಾತಾವರಣಕ್ಕೆ ಹೊಂದಿಕೊಳ್ಳಲು ಸುಲಭವಾಗುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಸಹ ನೀಡಲಾಗುತ್ತದೆ. ಜಿಟಿಟಿಸಿ ಡಿಪ್ಲೋಮಾ ಕೋರ್ಸುಗಳು ಎಳುಸಿಟಿ (AICTE) ಹಾಗೂ ಡಿಟಿಇ (DTE) ಯಿಂದ ಅನುಮೋದಿತಗೊಂಡಿವೆ.

    ಡಿಪ್ಲೋಮಾ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ

    (DTE/AICTE ನಿಯಮಗಳ ಅನ್ವಯ ಪ್ರವೇಶ ಮಾನದಂಡಗಳಿರುತ್ತವೆ). ಅರ್ಹತೆ: 10ನೇ ತರಗತಿ ಅಥವಾ CBSE, ICSE ಯಲ್ಲಿ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. ಪ್ರದೇಶ, ಮೆಂಟ್ ಕಮ್ ರೋಸ್ಟರ್ ಸಿಸ್ಟಂ ಮತ್ತು ಕೌನ್ಸೆಲಿಂಗ್ ಮೂಲಕ (ವಿದ್ಯಾರ್ಥಿಯ ಕರ್ವಾಟಕದಲ್ಲಿ ಕನಿಷ್ಠ ವರ್ಷಗಳ ಅವಧಿ ಅಧ್ಯಯನ ಮಾಡಿರಬೇಕು.100% Placement ನೆರವು.

    ಟಿ ಆಯ್ ಪೂರ್ಣ ಗೊಳಿಸಿದ ಅರ್ಹ ಅಭ್ಯರ್ಥಿಗಳಿಗೆ 2 ನೇ ವರ್ಷದ ಡಿಪ್ಲೋಮಾ ತರಗತಿಗಳಿಗೆ ನೇರ ಪ್ರವೇಶ

    ಐಟಿಐನಲ್ಲಿ ಟರ್ನರ್/ ಮೆಕ್ಯಾನಿಸ್ಟ್/ ಫಿಟ್ಟರ್/ ಟರ್ನರ್/ ಟೂಲ್ ಅಂಡ್ ಡೈ ಮೇಕಿಂಗ್/ ಎಲೆಕ್ಟ್ರೀಷಿಯನ್ ಟ್ರೇಡ್‌ನಲ್ಲಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ನೇರವಾಗಿ ಡಿಪ್ಲೊಮಾದ 2 ನೇ ವರ್ಷದ ತರಬೇತಿಗೆ ಎಐಸಿಟಿಐ/ಡಿಟಿಇ ನಿಯಮಾವಳಿ ಪ್ರಕಾರ ಲ್ಯಾಟರಲ್ ಪ್ರವೇಶ ಪಡೆಯಬಹುದಾಗಿದೆ. ಕರ್ನಾಟಕದಲ್ಲಿ 22 ಜಿಟಿಟಿಸಿಗಳಿವೆ.

    ಪೋಸ್ಟ್ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಮೆಕ್ಯಾನಿಕಲ್ ಹಿನ್ನೆಲೆಯ ಡಿಪ್ಲೊಮಾ/ಬಿಇ ಇದ್ದವರು ಒಂದು ವರ್ಷದ ಅವಧಿಯ ಟೂಲ್ ಡಿಸೈನ್ ಹಾಗೂ ಮೆಟೆರಾಲಜಿ ಮೆಷರ್‌ಮೆಂಟ್‌ನಲ್ಲಿ ಪೋಸ್ಟ್ ಡಿಪ್ಲೊಮಾ ಕೋರ್ಸ್‌ಗೆ ಸೇರಬಹುದು. ಎಸ್‌ಎಸ್‌ಎಲ್‌ಸಿ ಫೇಲ್ ಆದವರು ಕೂಡ ಒಂದು ವರ್ಷದ ಟೂಲ್‌ರೂಮ ಮೆಕ್ಯಾನಿಸ್ಟ್,, 2 ವರ್ಷದ ಟೂಲ್ ಅಂಡ್ ಡೈ ಟೆಕ್ನೀಷಿಯನ್ ಹಾಗೂ 4 ತಿಂಗಳ ಟರ್ನರ್, ಮಿಲ್ಲರ್, ಗ್ರೈಂಡರ್ ಫಿಟ್ಟರ್ ಕೋರ್ಸ್‌ಗಳಿಗೆ ಸೇರಬಹುದಾಗಿದೆ.

    ಮೇಕೆದಾಟು: ತನ್ನ ಹಕ್ಕನ್ನಷ್ಟೇ ರಾಜ್ಯ ಪ್ರತಿಪಾದಿಸುತ್ತಿದೆ ಎಂದ ಡಾ.ಸಿ.ಎನ್.ಅಶ್ವತ್ಥನಾರಾಯಣ

    RAMANAGARA AUG 13

    ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕವು ತನ್ನ ಹಕ್ಕನ್ನು ಮಾತ್ರ ಪ್ರತಿಪಾದಿಸುತ್ತಿದೆ. ನೆರೆ ರಾಜ್ಯದ ಒಂದು ಹನಿ ನೀರೂ ನಮಗೆ ಬೇಕಿಲ್ಲ ಎಂದು ರಾಮನಗರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಜಿಲ್ಲಾ ಕೇಂದ್ರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ನ್ಯಾಯ ಸಮ್ಮತವಾಗಿ ಹಾಗೂ ಕಾನೂನಾತ್ಮಕವಾಗಿ ನಮಗೆ ಹಂಚಿಕೆಯಾಗಿರುವ ನೀರನ್ನು ಮಾತ್ರ ನಾವು ಕೇಳುತ್ತಿದ್ದೇವೆ ಹಾಗೂ ಅದನ್ನು ಬಳಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದರು.

    ಮೇಕೆದಾಟು ಯೋಜನೆಯ ಬಗ್ಗೆ ರಾಜ್ಯ ಸರಕಾರಕ್ಕೆ ಸ್ಪಷ್ಟತೆ ಇದೆ. ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ. ಈ ಯೋಜನೆ ಬಗ್ಗೆ ಉಪೇಕ್ಷೆ ಮಾಡುವ ಪ್ರಶ್ನೆಯೂ ಇಲ್ಲ, ರಾಜಿ ಮಾತಂತೂ ಇಲ್ಲವೇ ಇಲ್ಲ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ನೀಡಿದ ಅಭಿಪ್ರಾಯವನ್ನೇ ತಮಿಳುನಾಡು ತನಗೆ ಬೇಕಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದೆ. ಕಾನೂನು ಎಂಬುದು ಎಲ್ಲರಿಗೂ ಒಂದೇ. ನ್ಯಾಯ ಸಮ್ಮತವಾಗಿಯೇ ಈ ಯೋಜನೆ ಆಗುತ್ತಿದೆ. ನ್ಯಾಯಾಧೀಕರಣ ಹೇಳಿದ್ದನ್ನೇ ನಾವು ಕೇಳುತ್ತಿದ್ದೇವೆ. ಮೇಕೆದಾಟು ಯೋಜನೆ ಯಾವ ಕಾರಣಕ್ಕೂ ನಿಲ್ಲದು ಎಂದು ಅವರು ಹೇಳಿದರು.

    ಇದೇ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು; ಮೇಕೆದಾಟು ವಿಚಾರದಲ್ಲಿ ನಮಗೆ ದೇಶವೇ ಮುಖ್ಯ ಎಂದು ಹೇಳಿರುವ ಬಗ್ಗೆ ಗಮನ ಸೆಳೆದಾಗ, ಅವರ ಹೇಳಿಕೆ ಬಗ್ಗೆ ಗೊತ್ತಿಲ್ಲ. ಆದರೆ, ಮೇಕೆದಾಟು ಯೋಜನೆ ಬಗ್ಗೆ ರಾಜ್ಯದ ನಿಲವು ಬದಲಾಗುವವ ಪ್ರಶ್ನೆಯೇ ಇಲ್ಲ ಎಂದರು ಅಶ್ವತ್ಥನಾರಾಯಣ.

    ಬಹಿರಂಗ ಪೈಪೋಟಿ ಬೇಡ

    ಎಲ್ಲರಿಗೂ ರಾಜಕೀಯ ಸ್ಥಾನಮಾನ, ಸಚಿವ ಸ್ಥಾನ ಬೇಕೆಂಬ ಬಯಕೆ ಇರುವುದು ಸಹಜ. ಆದರೆ, ಆ ಎಲ್ಲ ಪ್ರಯತ್ನಗಳನ್ನು ಬಹಿರಂಗವಾಗಿ ಮಾಡದೇ ನಾಲ್ಕು ಗೋಡೆಗಳ ಮಧ್ಯೆ ಕೂತು ಪಕ್ಷದ ಚೌಕಟ್ಟಿನಲ್ಲಿ ನಡೆಸಬೇಕು. ಮಾಧ್ಯಮಗಳ ಮುಂದೆ ಹೋಗಿ ರಂಪ ಮಾಡುವುದು ಒಳ್ಳೆಯದಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು.

    ನಮ್ಮ ಪಕ್ಷ ರಾಷ್ಟ್ರೀಯ ಪಕ್ಷ. ಅದಕ್ಕೊಂದು ನೀತಿ-ಸಿದ್ಧಾಂತ ಇದೆ. ಅದನ್ನು ಎಲ್ಲರೂ ಗೌರವಿಸಬೇಕು ಎಂದ ಅವರು, ಮನೆ ವಿಷಯವನ್ನು ಯಾವ ಕಾರಣಕ್ಕೂ ಬೀದಿಗೊಯ್ಯುವುದು ಸಲ್ಲ ಎಂದರು.

    ಮಹಾಸಾಧ್ವಿ ಹೆಳವನಕಟ್ಟೆ ಗಿರಿಯಮ್ಮ


    ಹರಿದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಗಿರಿಯಮ್ಮನವರ ಆರಾಧನೆ ಇಂದು


    ಸಂಗ್ರಹಿತ ಲೇಖನ

    ಹೆಳವನಕಟ್ಟೆ ಗಿರಿಯಮ್ಮನವರು ಹರಿದಾಸ ಸಾಹಿತ್ಯಲೋಕದಲ್ಲಿ ಕಾಣಬರುವ ವಿಶಿಷ್ಟ ಸಾಹಿತಿ. ಕ್ರಿಶ. 1750ರ ಸುಮಾರಿಗೆ ಜೀವಿಸಿದ್ದರು. ಇವರ ತವರೂರು ಹಾವೇರಿ ಜಿಲ್ಲೆಯ ರಾಣಿಬೆನ್ನೂರು. ತಾಯಿ ತುಂಗಮ್ಮ, ತಂದೆ ಬಿಷ್ಟಪ್ಪ ಜೋಯಿಸರು. ಈ ದಂಪತಿಗಳಿಗೆ ದೀರ್ಘ ಕಾಲದ ನಂತರ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಳಿಕ, ಹೆಣ್ಣು ಮಗುವಿನ ಜನನವಾಯಿತು. ತಿಮ್ಮಪ್ಪನ ಅನುಗ್ರಹದ ಸಂಕೇತವಾಗಿ ಮಗುವಿಗೆ ಗಿರಿಯಮ್ಮ ಎಂದು ಹೆಸರನ್ನಿಟ್ಟರು.

    ಚಿಕ್ಕಂದಿನಿಂದಲೂ ಗಿರಿಯಮ್ಮ ಸ್ತೋತ್ರಪಾಠಗಳಲ್ಲಿ, ಪೂಜಾ ಕಾರ್ಯದಲ್ಲಿ ಆಸಕ್ತಳಾಗಿದ್ದಳು. ಈಕೆಗೆ ನಾಲ್ಕು ವರ್ಷ ವಯಸ್ಸಾದಾಗ ತಾಯಿ ತೀರಿಕೊಂಡರು. ತಾಯಿಯ ಹಿಂದೆಯೆ ತಂದೆ ಸಹ ಗತಿಸಿದರು. ಗಿರಿಯಮ್ಮ ಚಿಕ್ಕಮ್ಮ, ಚಿಕ್ಕಪ್ಪರ ವಾತ್ಸಲ್ಯದ ಆಶ್ರಯದಲ್ಲಿ ಬೆಳೆದಳು. ಬೆಳೆಯುತ್ತಿದ್ದಂತೆ ಗಿರಿಯಮ್ಮ ದೇವರ ಹಾಡುಗಳನ್ನು ಹಾಡುತ್ತ ನರ್ತಿಸುವುದರಲ್ಲಿ ಪರವಶಳಾಗತೊಡಗಿದಳು.

    ತನ್ನ ಬಳಗದವರೊಂದಿಗೆ ಇವಳೊಮ್ಮೆ ಮಲೇಬೆನ್ನೂರಿಗೆ ಹೋದಾಗ ಅಲ್ಲಿಯ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಳು. ಉಡುಪಿ ಯಾತ್ರೆಗೆಂದು ಆ ಮಾರ್ಗವಾಗಿ ಹೋಗುತ್ತಿದ್ದ ಗೋಪಾಲದಾಸರ ಅಕಸ್ಮಾತ್ ದರ್ಶನ ಹಾಗು ಅನುಗ್ರಹ ಈ ಬಾಲೆಗೆ ಆಯಿತು.
    ಆ ಕಾಲದ ಸಂಪ್ರದಾಯದಂತೆ ಗಿರಿಯಮ್ಮನವರ ಮದುವೆ ಬಾಲ್ಯದಲ್ಲೆ, ಮಲೇಬೆನ್ನೂರಿನ ಶ್ಯಾನುಭೋಗರಾದ ಕೃಷ್ಣಪ್ಪನವರ ಮಗ ತಿಪ್ಪರಸನೊಡನೆ ಜರುಗಿತು. ಗಿರಿಯಮ್ಮನ ಮನಸ್ಸು ರಂಗನಾಥಸ್ವಾಮಿಯಲ್ಲಿಯೆ ನಿಂತುಹೋಗಿತ್ತು. ಆಕೆ ಲೌಕಿಕ ಸಂಸಾರಕ್ಕೆ ವಿಮುಖರಾಗಿದ್ದರು. ಪತಿ ತಿಪ್ಪರಸ ಆಕೆಯ ಮನಸ್ಸನ್ನು ಅರಿತಿದ್ದರಿಂದ ವಿರೋಧವಾಗಿ ನಡೆಯಲಿಲ್ಲ. ಆದರೆ ಅತ್ತೆಯ ಕಾಟ ದಿನೇ ದಿನೇ ಹೆಚ್ಚಾಗತೊಡಗಿತು. ಕೊನೆಗೊಮ್ಮೆ ಗಿರಿಯಮ್ಮನವರೇ ಸ್ವತಃ ತಿಪ್ಪರಸನಿಗೆ ಕನ್ಯೆ ಹುಡುಕಿ ಎರಡನೆಯ ಮದುವೆ ಮಾಡಿಸಿದರು.

    ಹೆಳವನಕಟ್ಟೆ ರಂಗನ ಅಂಕಿತ

    ಗಿರಿಯಮ್ಮನವರ ಸಾಧನೆ ಮುಂದುವರಿಯುತ್ತಿದ್ದಂತೆ ಹೆಳವನಕಟ್ಟೆಗೆ ರಂಗನಾಥಸ್ವಾಮಿಯ ದರ್ಶನಕ್ಕೆ ಬರುತ್ತಿದ್ದವರು ಈಕೆಯ ಭಕ್ತರಾಗತೊಡಗಿದರು. ಗಿರಿಯಮ್ಮನ ಕರುಣೆಯಿಂದ ರೋಗ ನಿವಾರಣೆ ಮೊದಲಾದ ಪರಿಹಾರ ದೊರೆಯುತ್ತವೆ ಎಂದು ಜನ ನಂಬತೊಡಗಿದರು.
    ಮೊದಲೊಮ್ಮೆ ಉಡುಪಿಗೆ ಹೋಗುತ್ತಿದ್ದಾಗ ದರ್ಶನವಿತ್ತ ಗೋಪಾಲದಾಸರು ಮತ್ತೊಮ್ಮೆ ಅದೇ ಮಾರ್ಗವಾಗಿ ಉಡುಪಿಗೆ ಹೋಗುತ್ತಿರುವಾಗ ಗಿರಿಯಮ್ಮನವರಿಗೆ ಬಾಲಗೋಪಾಲನ ವಿಗ್ರಹ ನೀಡಿ ಆಶೀರ್ವದಿಸಿದರು. “ಹೆಳವನಕಟ್ಟೆ ರಂಗ”ನ ಅಂಕಿತದಲ್ಲಿ ದೇವರ ನಾಮಗಳನ್ನು ರಚಿಸಲು ಸೂಚಿಸಿದರು.

    ಮಂತ್ರಾಲಯದ ಮಠಾಧೀಶ್ವರರಾದ ಶ್ರೀ ಸುಮತೀಂದ್ರರು ಮಲೇಬೆನ್ನೂರಿಗೆ ಬಂದಾಗ ಗಿರಿಯಮ್ಮನ ಕೆಲವು ವಿರೋಧಿಗಳು ಈಕೆಗೆ ಸ್ವಾಮಿಗಳು ತೀರ್ಥ ಕೊಡಲು ವಿರೋಧಿಸಿದರು. ಸ್ವಾಮಿಗಳು ಅದನ್ನು ಲೆಕ್ಕಿಸದೆ ಗಿರಿಯಮ್ಮನವರಿಗೆ ಮರ್ಯಾದೆ ನೀಡಿದರು.
    ರಂಗನಾಥಸ್ವಾಮಿಯ ಬೆರಳ ಉಂಗುರ ಕಾಣೆಯಾದಾಗ ಗುಬ್ಬಿಯ ಮೂಲಕ ಅದನ್ನು ಮರಳಿ ಪಡೆದದ್ದು, ಮೃತ ಶಿಶುವನ್ನು ಬದುಕಿಸಿದ್ದು, ಕುರುಡು ಬಾಲಕನಿಗೆ ದೃಷ್ಟಿದಾನ ಮಾಡಿದ್ದು ಮೊದಲಾದ ಪವಾಡಗಳ ಕಥೆಗಳು ಗಿರಿಯಮ್ಮನವರ ಕುರಿತು ಪ್ರಚಲಿತವಿದೆ. ಆ ಪ್ರದೇಶದಲ್ಲಿ ಒಮ್ಮೆ ಭೀಕರ ಬರಗಾಲ ಬಂದಿದ್ದು ಅವರ ಒಂದು ಹಾಡಿನಲ್ಲಿ ತಿಳಿದು ಬರುತ್ತದೆ. ಗಿರಿಯಮ್ಮನವರು ಭಕ್ತಿಯಿಂದ ಹಾಡಿ ಮಳೆ ಬಂತು ಎಂಬ ಕಥೆಯೂ ಪ್ರಚಲಿತವಿದೆ.

    ಗಿರಿಯಮ್ಮನವರ ಕೊಡುಗೆ ಹರಿದಾಸ ಸಾಹಿತ್ಯಕ್ಕೆ ಅಪಾರ. ಚಂದ್ರಹಾಸ ಕಥೆ, ಸೀತಾ ಕಲ್ಯಾಣ, ಉದ್ದಾಳಕನ ಕಥೆ ಅವರು ರಚಿಸಿರುವ ಖಂಡ ಕಾವ್ಯಗಳು. ಜೆಮಿನಿ ಭಾರತ ಕರ್ತೃ ಲಕ್ಷ್ಮೀಶನ ಶೈಲಿ ಅವರ ಕಾವ್ಯಗಳಲ್ಲಿ ಎದ್ದು ಕಾಣುತ್ತದೆ. ಗಿರಿಯಮ್ಮನ ಕೃತಿಗಳು ಹೆಚ್ಚಾಗಿ ಪ್ರಚಾರವಾಗಿರುವುದು ಆಕೆಯ ಹಾಡುಗಳಲ್ಲಿ, ನಾಡಿನದ್ಯಾಂತ ಗಿರಿಯಮ್ಮನವರು ರಚಿಸಿರುವ ಶಂಕರ ಗಂಡನ ಹಾಡು, ಬ್ರಹ್ಮ ಕೊರವಂಜಿ, ಕೃಷ್ಣ ಕೊರವಂಜಿ, ಸೀತಾಕಲ್ಯಾಣ, ಲವಕುಶ ಕಾಳಗ, ಉದ್ದಾಲಕನ ಹಾಡು ಬಹಳ ಪ್ರಖ್ಯಾತವಾಗಿವೆ. ಗಿರಿಯಮ್ಮನವರ ಬಹುತೇಕ ಹಾಡುಗಳು ನಿತ್ಯ ನಿರ್ಮಲ ಪರಮಾನಂದ ಹೃದಯೇ ಎಂದು ಅಂತ್ಯಗೊಳ್ಳುತ್ತವೆ.

    ಹೆಳವನಕಟ್ಟೆ ಗಿರಿಯಮ್ಮನವರ ರಚನೆಗಳಲ್ಲಿ ಈ ಗೀತೆ ಬಹು ಪ್ರಸಿದ್ಧವಾದುದು


    ಹೊನ್ನು ತಾ ಗುಬ್ಬಿ ಹೊನ್ನು ತಾ
    ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ
    ಹೊನ್ನು ತಾ ಗುಬ್ಬಿ ಹೊನ್ನು ತಾ…..
    ಆಗಮವನು ತಂದು ಜಗಕಿತ್ತ ಕೈಗೆ
    ಸಾಗರವನು ಮಥಿಸಿ ಸುಧೆ ತಂದ ಕೈಗೆ
    ತೂಗಿ ಮಾತಾಡುವ ಸ್ಥೂಲಕಾಯನ ಕೈಗೆ
    ಸಾಗರಪತಿ ನರಸಿಂಹನ ಕೈಗೆ
    ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ
    ಹೊನ್ನು ತಾ ಗುಬ್ಬಿ ಹೊನ್ನು ತಾ…..
    ಬಲಿಯ ದಾನವ ಬೇಡಿ ಕೊಂಡಂಥ ಕೈಗೆ
    ಛಲದಿಂದ ಕ್ಷತ್ರಿಯರ ಅಳಿದಂಥ ಕೈಗೆ
    ಒಲವಿಂದ ವಿಭೀಷಣಗೆ ಅಭಯವಿತ್ತ ಕೈಗೆ
    ಬಲು ಬೆಟ್ಟ ಬೆರಳಲ್ಲೆ ಹೊತ್ತಂಥ ಕೈಗೆ
    ಹೊನ್ನು ತಾ ಗುಬ್ಬಿ ಹೊನ್ನು ತಾ…..
    ಪತಿವ್ರತೆಯರ ವ್ರತವ ಅಳಿದಂಥ ಕೈಗೆ
    ಹಿತವಾಜಿಯನೇರಿ ಮರ್ದಿಸಿದ ಕೈಗೆ

    ಪತಿ ಶಿರೋಮಣಿ ಲಕ್ಷ್ಮೀ ಕಾಂತನ ಕೈಗೆ
    ಚತುರ ಹೆಳವನ ಕಟ್ಟೆ ರಂಗನ ಕೈಗೆ…
    ಹೊನ್ನು ತಾ ಗುಬ್ಬಿ ಹೊನ್ನು ತಾ…..

    ಹೊನ್ನಾಳಿಗೆ ಸಮೀಪವಾಗಿ ತುಂಗಭದ್ರಾ ನದಿಯ ದಂಡೆಯ ಮೇಲೆ ಕಮ್ಮಾರಗಟ್ಟೆ ಎನ್ನುವ ಗ್ರಾಮವಿದೆ. ಒಂದು ಶ್ರಾವಣ ಶುದ್ಧ ಪಂಚಮಿಯ ದಿನ ಗಿರಿಯಮ್ಮ ತುಂಗಾ ಪ್ರವಾಹದಲ್ಲಿಳಿದು ಜಲಸಮಾಧಿ ಹೊಂದಿದರೆಂದು ನಂಬಲಾಗಿದೆ.

    ಹೆಳವನಕಟ್ಟೆ ಶ್ರೀರಂಗನಾಥಸ್ವಾಮಿ ದೇವಾಲಯ

    ಒಂದು ದಿನ ಮಂತ್ರಾಲಯದ ಸ್ವಾಮೀಜಿಯವರು ಗಿರಿಯಮ್ಮನವರಿದ್ದ ಗ್ರಾಮಕ್ಕೆ ಭೇಟಿ ನೀಡಿ ಮೂಲರಾಮದೇವರ ಪೂಜೆ ಮಾಡುತ್ತಿದ್ದ ಸಮಯದಲ್ಲಿ ಗಿರಿಯಮ್ಮನವರ ಭಾವಾವೇಶದ ಕೀರ್ತನೆಯಿಂದಾಗಿ ಆ ಊರ ಮುಖಂಡನ ಮಗನಿಗೆ ಕಣ್ಣು ಬಂದಿತು ಎಂದೂ, ಇದರಿಂದ ಸಂತೃಪ್ತನಾದ ನಾಯಕ ಹೇರಳವಾದ ಹೊನ್ನು ದಾನ ಮಾಡಿದನೆಂದೂ ಅದನ್ನು ಗಿರಿಯಮ್ಮ ದೇವಾಲಯ ಕಟ್ಟಿಸಲು ಬಳಸಿಕೊಂಡರು ಎಂಬ ಮಾತೂ ಇದೆ.

    ಹೆಳವನಕಟ್ಟೆ ಶ್ರೀ ಲಕ್ಷ್ಮೀರಂಗನಾಥ ದೇವಾಲಯವು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಮಾರನಹಳ್ಳಿಯಲ್ಲಿ ಇದೆ. ಆ ಸ್ಥಳದಲ್ಲಿ ನದಿಗೆ ಸೋಪಾನವನ್ನೂ, ಮಾರುತಿ ದೇವಸ್ಥಾನವನ್ನೂ ಗಿರಿಯಮ್ಮನವರೇ ಕಟ್ಟಿಸಿದ್ದರೆಂದೂ ಜನ ಹೇಳುತ್ತಾರೆ. (ಸಂಗ್ರಹಿತ ಲೇಖನ ಜಯರಾಜ್ ಕುಲಕರ್ಣಿ)

    ನಾಗರ ಪಂಚಮಿ ನಾಡಿಗೆ ದೊಡ್ಡದು

    ಎಂ.ವಿ. ಶಂಕರಾನಂದ

    ನಾಗರ ಪಂಚಮಿ ನಾಡಿಗೆ ದೊಡ್ಡದು ಎಂಬುದು ಬಹು ಚಾಲ್ತಿಯಲ್ಲಿರುವ ಮಾತು. ನಾಗರ ಪಂಚಮಿ ಅಥವಾ ಗರುಡ ಪಂಚಮಿ ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಬರುವ ದೊಡ್ಡ ಹಬ್ಬ. ಇದು ಸರ್ಪಗಳು ನಮ್ಮನ್ನು ಕಚ್ಚದಿರಲಿ, ವಿಷಬಾಧೆ ಪರಿಹಾರವಾಗಲಿ, ಸಂತಾನ ಪ್ರಾಪ್ತಿಯಾಗಲಿ, ಸಂಪತ್ತು ದೊರೆಯಲಿ, ಚರ್ಮರೋಗಗಳು ನಿವಾರಣೆಯಾಗಲಿ ಮತ್ತು ಮರಣಾನಂತರ ಸ್ವರ್ಗ ಪ್ರಾಪ್ತಿಯಾಗಲಿ ಎಂಬ ಹಲವಾರು ಇಚ್ಛೆಗಳನ್ನು ಇಟ್ಟುಕೊಂಡು ಫಲಪ್ರಾಪ್ತಿಗಾಗಿ ತನಿ ಎರೆಯುವ ಹಬ್ಬ.

    ಅದು ವಿಶೇಷವಾಗಿ ಅಕ್ಕ ತಂಗಿಯರು ತವರುಮನೆಗೆ ಬಂದು ಸಿಹಿ ಉಂಡು, ಬಣ್ಣದ ಸೀರೆ ಉಟ್ಟು, ನಲಿಯುವ ಹಬ್ಬ. ಈ ದಿನ ನಾಗರಕಲ್ಲಿಗೆ, ಹಾವಿನ ಹುತ್ತಕ್ಕೆ ಅಥವಾ ಮನೆಗೇ ತಂದ ಹುತ್ತದ ಮಣ್ಣಿಗೆ, ಇಲ್ಲವೇ ರಂಗೋಲಿಯಿಂದ ಬರೆದ, ಅಕ್ಕಿ ಹಿಟ್ಟಿನಿಂದ ಮಾಡಿದ ನಾಗರಹಾವಿನ ಚಿತ್ರಕ್ಕೆ ಶ್ರದ್ಧಾಭಕ್ತಿಗಳಿಂದ ಹಾಲೆರೆಯುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ.

    ಈ ದಿನ ನಾಗರ ಕಲ್ಲಿಗೆ ಹಾಲೆರೆಯುವ ಮೂಲಕ ತಾಯಿಯ ಹಾಲ ಋಣ ತೀರಿಸಬಹುದು ಎಂಬ ನಂಬಿಕೆಯೂ ಇದೆ. ಕೆಲವು ಕಡೆ ನಿಜವಾದ ನಾಗರನಿಗೇ ಹಾಲೆರೆವ ರೂಢಿಯೂ ಇದೆ. ಗುಜರಾತಿನಲ್ಲಿ ಈ ವ್ರತವನ್ನು ಇದೇ ತಿಂಗಳ ಕೃಷ್ಣ ಪಂಚಮಿಯಂದು ಆಚರಿಸುತ್ತಾರೆ. ಪಶ್ಚಿಮ ಬಂಗಾಳ, ಬಾಂಗ್ಲಾ ದೇಶಗಳಲ್ಲಿ ಕಶ್ಯಪ ಋಷಿಗಳ ಮಾನಸ ಪುತ್ರಿಯಾದ ಸರ್ಪದೇವಿಯ ಆರಾಧನೆಯಾಗಿ ಈ ಹಬ್ಬವನ್ನು ಮನಸಾದೇವಿ ಎಂದು ಆಚರಿಸುತ್ತಾರೆ.

    ನಾಗರ ಪಂಚಮಿ ಅಣ್ಣ –ತಂಗಿಯರ ಹಬ್ಬವೂ ಹೌದು. ಅಂದು ಸೋದರಿಯರು ಸೋದರರ ಹೊಟ್ಟೆ-ಬೆನ್ನಿಗೆ ಹಾಲನ್ನು ಸವರಿ.ಹೊಟ್ಟೆ ಬೆನ್ನು ತಂಪಾಗಿರಲಿ’’ ಎಂದು ಹಾರೈಸುತ್ತಾರೆ. ಹೊಟ್ಟೆ ಎಂದರೆ ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತ. ಬೆನ್ನು ಎಂದರೆ ಹಿಂದಿನ ಪೀಳಿಗೆ ಅಂದರೆ, ನಮ್ಮ ಹಿರಿಯರು ಎಂಬ ಸಂಕೇತ. ಒಡ ಹುಟ್ಟಿದವವರು ಮತ್ತು ಅವರ ಮಕ್ಕಳು ಎಲ್ಲರೂ ಚೆನ್ನಾಗಿರಲಿ ಎಂದು ಹೀಗೆ ಹಾರೈಸುತ್ತಾರೆ.

    ಹಿಂದೆ ಒಂದೂರಿನಿಂದ ಮತ್ತೊಂದೂರಿಗೆ ಹೋಗಲು ಈಗಿನಂತೆ ವಾಹನ ಸೌಕರ್ಯಗಳು ಇರುತ್ತಿರಲಿಲ್ಲ. ಆಗ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಒಬ್ಬರನ್ನೊಬ್ಬರು ನೋಡುವುದೇ ಕಷ್ಟವಾಗಿತ್ತು. ಕನಿಷ್ಠ ವರ್ಷಕ್ಕೊಮ್ಮೆಯಾದರೂ ಅಣ್ಣ-ತಂಗಿ, ಅಕ್ಕ-ತಮ್ಮಂದಿರು ಸಂಧಿಸಲಿ, ಬಾಂಧವ್ಯ ಹಾಗೇ ಚಿರವಾಗಿರಲಿ ಎಂದು ಹಿರಿಯರು ಈ ಹಬ್ಬವನ್ನು ಸಹೋದರ-ಸಹೋದರಿಯರ ಹಬ್ಬ ಎಂದು ಕರೆದರು. ಬಿತ್ತನೆ ಕಾರ್ಯ ಮುಗಿಸಿ, ವರ್ಷದ ಮೊದಲ ಫಸಲಿನ ನಿರೀಕ್ಷೆಯಲ್ಲಿರುವ ಸೋದರರು, ಸೋದರಿಯರನ್ನು ಕರೆಸಿ, ಉಡಿ ತುಂಬಿ ಕಳುಹಿಸಲಿ ಎಂಬುದೂ ಈ ಹಬ್ಬದ ಆಶಯವಾಗಿದೆ.

    ಚಂದ್ರನು ಪೂರ್ಣಿಮಾ ದಿನ ಶ್ರವಣ ನಕ್ಷತ್ರದಲ್ಲಿ ಇರುವ ಮಾಸವೇ ಶ್ರಾವಣ. ಚಂದ್ರನು ಮನಃಕಾರಕ. ಶ್ರಾವಣದಲ್ಲಿ ಚಂದ್ರನ ಪ್ರಭಾವ ಹೆಚ್ಚು. ಚಂದ್ರನು ಶ್ರಾವಣ ತಿಂಗಳ ಮೊದಲ ದಿನವಾದ ಪಾಡ್ಯದಿಂದ ಪ್ರತಿ ದಿನವೂ ಹನ್ನೆರಡು ಡಿಗ್ರಿಯಂತೆ ಸಂಚರಿಸುತ್ತಾನೆ. ಪಂಚಮಿಯ ದಿನದ ಹೊತ್ತಿಗೆ ಅರವತ್ತು ಡಿಗ್ರಿಗೆ ಬರುತ್ತಾನೆ. ಅಂದರೆ ಚಂದ್ರ ಆ ಹೊತ್ತಿಗೆ ಒಂದು ಕೋನದಲ್ಲಿರುತ್ತಾನೆ. ಚಂದ್ರನು ತ್ರಿಕೋನಕ್ಕೆ ಬಂದಾಗ ಭೂವರ್ಗ ಹಾಗೂ ಜಲವರ್ಗದ ಮೇಲೆ ಅವನ ಪ್ರಭಾವ ಹೆಚ್ಚಾಗಿರುತ್ತದೆ. ಚಂದ್ರ ಪ್ರಭಾವ ಹೆಚ್ಚಾಗಿರುವ ಕಾಲದಲ್ಲಿ ಸಾತ್ವಿಕ ಆಹಾರ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

    ಶ್ರಾವಣ ಶುದ್ಧ ಪಂಚಮಿಯ ದಿನ ಉದ್ದಿನ ಕಡುಬು, ಹಾಗೂ ಸಿಹಿ ಕಡುಬು, ತಂಬಿಟ್ಟು ಮೊದಲಾದ ಸಾತ್ವಿಕ ಆಹಾರಗಳನ್ನು ಮಾಡುತ್ತಾರೆ. ಅಂದು ಸಾತ್ವಿಕ ಆಹಾರ ಸೇವಿಸಿ ಪಾರಮಾರ್ಥಿಕ ಚಿಂತನೆ ಮಾಡುವುದರಿಂದ ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ ಎಂದು ಹಿರಿಯರು ಹೇಳುತ್ತಾರೆ.ಮನುಷ್ಯ ಚಿಂತನೆಯ ಕೇಂದ್ರವೇ ಮೆದುಳು. ಮೆದುಳು ಕೂಡ ಸರ್ಪದ ಆಕಾರದಲ್ಲೇ ಇದೆ. ಹೀಗಾಗಿ ಇದಕ್ಕೆ ಕುಂಡಲಿನಿ ಎನ್ನುವರು. ಮನಃಕಾರಕನಾದ ಚಂದ್ರನ ಪ್ರಭಾವವಿರುವ ಮಾಸದಲ್ಲಿ ಕುಂಡಲಿಯನ್ನು ಸಾತ್ವಿಕ ರೀತಿಯಲ್ಲಿ ಉದ್ರೇಕಿಸುವುದೇ ಈ ಸರ್ಪಪೂಜೆಯ ಪರಮಾರ್ಥವಾಗಿದೆ.

    ಸಾಮಾನ್ಯವಾಗಿ ಜ್ಯೇಷ್ಠ-ಆಷಾಢದ ನಡುವೆ ಮಳೆಯಾಗುತ್ತದೆ. ಈ ಕಾಲದಲ್ಲಿ ರೈತರು ಬಿತ್ತನೆಯಲ್ಲಿ ತೊಡಗುತ್ತಾರೆ. ಶ್ರಾವಣದ ಆರಂಭದ ಹೊತ್ತಿಗೆ ಬಿತ್ತಿದ ಬೀಜಗಳು ಪೈರುಗಳಾಗಿ ಬೆಳೆದಿರುತ್ತವೆ. ಬೆಳೆದ ಪೈರನ್ನು ಇಲಿಗಳು ತಿಂದು ಅಪಾರ ಹಾನಿಯನ್ನುಂಟು ಮಾಡುತ್ತವೆ. ಇಲಿಗಳನ್ನು ಹಿಡಿಯುವುದು ರೈತರಿಗೆ ಅಸಾಧ್ಯವಾದ ಕೆಲಸ. ಈ ಕಾರ್ಯದಲ್ಲಿ ಹಾವುಗಳು ರೈತನಿಗೆ ನೆರವಾಗುತ್ತವೆ. ಇಲಿಗಳನ್ನು ತಿನ್ನುವ ಮೂಲಕ ಹಾವು ರೈತನ ಮಿತ್ರನಾಗಿದೆ. ಈ ಋಣವನ್ನು ರೈತ ಹುತ್ತಕ್ಕೆ ಹಾಲು ಎರೆಯುವ ಮೂಲಕ ತೀರಿಸುತ್ತಾನೆ.

    ಹಾವುಗಳು ಗೆದ್ದಲುಗಳು ಕಟ್ಟುವ ಹುತ್ತದಲ್ಲಿ ವಾಸಿಸುತ್ತದೆ. ಬಹು ನಯವಾದ ಮಣ್ಣಿನಿಂದ ಗೆದ್ದಲು ಕಟ್ಟಿದ ಹುತ್ತವು ಮಳೆ, ಗಾಳಿಗಳಿಗೂ ಜಗ್ಗುವುದಿಲ್ಲ. ಹುತ್ತದ ಒಳಗೆ ಕೂಡ ಗೆದ್ದಲುಗಳು ನವಿರಾದ ಮಣ್ಣಿನಿಂದ ನೆಲವನ್ನು ಸಮತಟ್ಟು ಮಾಡಿರುತ್ತವೆ. ಅಲ್ಲಿ ನೆಲ ಮೆತ್ತನೆಯ ಹಾಸಿಗೆಯಂತಿರುತ್ತದೆ. ಇಂತಹ ಸ್ಥಳದಲ್ಲಿ ವಾಸಿಸುವ ಹಾವುಗಳಿಗೆ ಶ್ರಾವಣದ ಚಂದ್ರನ ಕಿರಣಗಳು ಬೀಳುತ್ತಿದ್ದಂತೆ ಕಾಮೋದ್ರೇಕಗೊಳ್ಳುತ್ತವೆ. ಸಾಮಾನ್ಯವಾಗಿ ಹಾವುಗಳು ಕೂಡುವುದೂ ಈ ಕಾಲದಲ್ಲೇ. ಹಾಗೆ ಕೂಡುವ ಮುನ್ನ ಹೆಣ್ಣು ಹಾವುಗಳು ರಜಸ್ಸನ್ನು ಹೊರಬಿಡುತ್ತವಂತೆ. ಈ ಸಮಯದಲ್ಲಿ ಹಾವುಗಳ ಹುತ್ತದಿಂದ ಹೊರಬರುವಾಗ ಅಥವಾ ಹುತ್ತವನ್ನು ಸೇರುವಾಗ ವಿಸರ್ಜಿಸಲ್ಪಟ್ಟ ರಜಸ್ಸನ್ನು ನಯವಾದ ಹುತ್ತದ ಮಣ್ಣು ಹೀರಿಕೊಳ್ಳುತ್ತದೆ. ಹಾಗೆಯೇ ಈ ಸಮಯದಲ್ಲಿ ಸ್ಖಲನವಾಗುವ ಗಂಡುಹಾವಿನ ವೀರ್ಯವೂ ಹುತ್ತದ ಮಣ್ಣಿನಲ್ಲಿ ಸೇರ್ಪಡೆಯಾಗುತ್ತದೆ. ಈ ರೀತಿಯಾಗಿ ವೀರ್ಯ ಮತ್ತು ರಜಸ್ಸು ಲೇಪಿತ ಹುತ್ತದ ಮಣ್ಣಿಗೆ ನೀರಾಗಲೀ ಹಾಲಾಗಲೀ ಬಿದ್ದಾಗ ಒಂದು ಸುಮಧುರವಾದ ವಾಸನೆ ಉತ್ಪತ್ತಿಯಾಗುತ್ತದೆ.

    ಹೆಂಗಸರು ಹಬ್ಬದ ದಿನ ಹುತ್ತಕ್ಕೆ ಹಾಲು ಹಾಕಿದಾಗ ಅಂದರೆ ತನಿ ಎರೆದಾಗಲೂ ಈ ಪ್ರಕ್ರಿಯೆ ನಡೆಯುತ್ತಿರುತ್ತದೆ. ಈ ಸುಗಂಧಯುಕ್ತವಾದ ವಾಸನೆಯು ಹೆಣ್ಣಿನ ಭಾವನೆಗಳನ್ನು ಕೆರಳಿಸುವುದೇ ಅಲ್ಲದೆ, ರೀಪ್ರೋಡಕ್ಟೀವ್ ಆರ್ಗನ್ಸ್ ಮೇಲೂ ನೇರ ಪರಿಣಾಮ ಉಂಟು ಮಾಡುತ್ತವೆ. ಈ ಮಾಸದಲ್ಲಿ ಚಂದ್ರ ಪ್ರಭಾವವೂ ಇರುವ ಕಾರಣ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ. ಆದ್ದರಿಂದಲೇ ಹಿರಿಯರು ನಾಗರ ಪಂಚಮಿ ದಿನ ಹುತ್ತಕ್ಕೆ ತನಿ ಎರೆದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ.

    ಸಾಮಾನ್ಯವಾಗಿ ಚರ್ಮರೋಗ ಬಂದಾಗ ಜನರು ಹುತ್ತಕ್ಕೆ ಹಾಲೆರೆದು ಆ ಹುತ್ತದ ಮಣ್ಣನ್ನು ಮೈಗೆಲ್ಲಾ ಹಚ್ಚಿಕೊಳ್ಳುತ್ತಾರೆ. ಅಂದರೆ ಹುತ್ತದ ಮಣ್ಣಿನಲ್ಲಿ ಔಷಧಿಯ ಗುಣವಿರುತ್ತದೆ ಎಂಬುದನ್ನು ಇದು ಸಾಬೀತು ಮಾಡುತ್ತದೆ. ನಾಗರ ಪಂಚಮಿಯಂದು ವಿಷ್ಣುವಿನ ಶಯನ ಶೇಷನಾಗನಿಗೆ ಸಲ್ಲಿಸುವ ಪೂಜೆಯೇ ಶ್ರೇಷ್ಠ. ಈ ದಿನ ನಾಗಪೂಜೆ ಮಾಡಿದರೆ ನಾಗದೋಷಕ್ಕೆ ಪರಿಹಾರ ಸಿಗುವುದು ಎಂದು ಹೇಳುತ್ತಾರೆ. ಈ ಸಲುವಾಗಿ ವಾಸುಕಿ, ತಕ್ಷಕ, ಕಾಲಿಯಾ, ಮಣಿಭದ್ರ, ಐರಾವತ, ಧೃತರಾಷ್ಟç, ಕಾರ್ಕೋಟಕ, ಧನಂಜಯ ಅನಂತ, ಶಂಖ, ಪದ್ಮ, ಪಿಂಗಳ ಮುಂತಾದ ಹಾವುಗಳನ್ನು ಸ್ಮರಿಸಿಕೊಂಡು ನಾಗಪೂಜೆ ಮಾಡಿ ಹಾಲನ್ನು ಎರೆಯುವರು.

    ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಗಿರುವ ಇನ್ನೊಂದು ಹೆಸರೇ ಉಂಡಿ ಹಬ್ಬ. ಈ ಹಬ್ಬಕ್ಕಾಗಿ ಹೊಸ ಬೆಲ್ಲದ ಪಾಕದಲ್ಲಿ ವಿವಿಧ ದವಸ ಧಾನ್ಯಗಳನ್ನು ಒಡಗೂಡಿಸಿ ವೈವಿಧ್ಯಮಯ ರುಚಿ ನೀಡುವಂಥ ತಂಬಿಟ್ಟು, ನವಣೆ ಉಂಡೆ, ಅಕ್ಕಿ ತಂಬಿಟ್ಟು, ಅರಳುಂಡೆ, ಎಳ್ಳು ಉಂಡಿ, ಸೇಂಗಾ ಉಂಡಿ, ಡಾಣಿ ಉಂಡಿ, ಹುರಗಡ್ಲಿ ಹುಂಡಿ, ಮಂಡಾಳು ಉಂಡಿ, ಅವಲಕ್ಕಿ ಉಂಡಿ, ರವೆ ಉಂಡೆ, ಬೇಸನ್ ಉಂಡೆ, ಬೂಂದಿ ಲಾಡು, ಅಂಟಿನ ಉಂಡಿ, ಸೀಕೆದುಂಡಿ, ಅಳ್ಳಿಟ್ಟಿನ ಉಂಡಿ, ಎಳ್ಳಿನ ಚಿಗಳಿ ಮುಂತಾದ ಉಂಡಿಗಳನ್ನು ತಯಾರು ಮಾಡಿರುತ್ತಾರೆ.

    ನಾಗರ ಪಂಚಮಿ ದಿನ ಕರಿದರೆ ನಾಗರ ಹೆಡೆ ಕರಿದಂತೆ’’ ಎಂಬ ನಂಬುಗೆ ಇರುವುದರಿಂದ ಈ ದಿನದ ಆಹಾರದಲ್ಲಿ ಯಾವುದೇ ಕರಿದ ತಿಂಡಿ ಇರುವುದಿಲ್ಲ. ಜನರು ವೈವಿಧ್ಯಮಯ ತಿನಿಸನ್ನು ಸವಿದ ಮೇಲೆ ಊರ ಮುಂದಿರುವ ಮರಗಳಿಗೆ ಜೋಕಾಲಿ ಕಟ್ಟಿ ಮಕ್ಕಳನ್ನು ಅದರಲ್ಲಿ ಕುಳ್ಳಿರಿಸಿ ತೂಗುವರು. ಇಲ್ಲವಾದರೆ ಮುಂದಿನ ಜನ್ಮದಲ್ಲಿ ಬಾವಲಿಯಾಗಿ ತಲೆಕೆಳಗು ಮಾಡಿಕೊಂಡು ಬದುಕುವ ಸ್ಥಿತಿ ಬರುವುದು ಎಂಬ ನಂಬಿಕೆ ಇದೆ.

    ಇದು ಹೆಣ್ಣು ಮಕ್ಕಳ ಹಬ್ಬ. ಮದುವೆಯಾಗಿ ಹತ್ತಾರು ವರ್ಷ ಕಳೆದರೂ, ಗಂಡನ ಮನೆಯಲ್ಲಿ ಸುಖ ಸಂತೋಷದಿಂದಿದ್ದರೂ, ತಾಯಿಯ ಜತೆ ನಾಗರಪಂಚಮಿಯಾದಾಗಲೇ ಮನಸ್ಸಿಗೆ ಮುದ. ಇದು ಹೆಂಗಸರ ವಿಶೇಷ. ಗಂಡನಿಗೆ ಪ್ರವೇಶವಿಲ್ಲ. ಆದ್ದರಿಂದಲೇ ನಾಚಿಕೆಯಿಲ್ಲದ ಅಳಿಯ, ನಾಗರ ಪಂಚಮಿಗೆ ಬಂದ ಎಂಬ ಗಾದೆಯೇ ಇದೆ.ವಿಷ್ಣುವಿನ ವಾಹನವಾದ ಗರುಡನು ದೇವಲೋಕದಿಂದ ಅಮೃತವನ್ನು ನಾಗಗಳಿಗೆ ತಂದುಕೊಟ್ಟು ತನ್ನ ತಾಯಿ ವಿನತೆಯನ್ನು ಅವುಗಳ ದಾಸ್ಯದಿಂದ ಬಿಡಿಸಿಕೊಂಡ ದಿನವೂ ಇಂದೇ ಆಗಿದೆ. ಆದ್ದರಿಂದಲೇ ಈ ದಿನವನ್ನು ಗರುಡಪಂಚಮಿ ಎಂದೂ ಕರೆಯುತ್ತಾರೆ.

    This image has an empty alt attribute; its file name is M-V-SHNAKARANANDA.jpg

    ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.

    ಉಡುಪಿಯಲ್ಲಿ ಮುಖ್ಯಮಂತ್ರಿ

    ಮುಖ್ಯಮಂತ್ರಿ ಶ್ರೀ ಬಸವರಾಜ ಎಸ್ ಬೊಮ್ಮಾಯಿ ಅವರು ಉಡುಪಿ ಪರ್ಯಾಯ ಶ್ರೀ ಅದಮಾರು ಮಠಕ್ಕೆ ಭೇಟಿ ನೀಡಿ, ರಾಜಾಂಗಣ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

    ಇಂದಿರಾ ನೆಹರೂ ಹೊರತು ಪಡಿಸಿ ಬೇರೆ ಯಾರೂ ದೇಶಕ್ಕೆ ಕೊಡುಗೆ ನೀಡಿಲ್ಲವೆ?- ಸಿಟಿ ರವಿ ಪ್ರಶ್ನೆ

    BENGALURU AUG 12

    ಮೇಕೆದಾಟು ಯೋಜನೆಯನ್ನು ವಾಸ್ತವಿಕ ನೆಲೆಯಲ್ಲಿ ನೋಡಬೇಕು. ರಾಜಕೀಯವಾಗಿ ಯಾವುದೇ ಪಕ್ಷ ಇದರ ದುರ್ಬಳಕೆ ಮಾಡಬಾರದು. ಎರಡು ದೇಶಗಳ ನೀರಿನ ಹಂಚಿಕೆ ಸುಗಮವಾಗಿ ನಡೆಯುತ್ತದೆ. ಎರಡು ರಾಜ್ಯಗಳ ನಡುವಿನ ನೀರಿನ ಹಂಚಿಕೆ; ಅದರಲ್ಲೂ ಕುಡಿಯುವ ನೀರಿನ ಹಂಚಿಕೆಯ ಸಮಸ್ಯೆ ಪರಿಹಾರ ಕಷ್ಟವೇನಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ತಿಳಿಸಿದರು.

    ಕುಡಿಯುವ ನೀರು ಎಲ್ಲರಿಗೂ ಅವಶ್ಯಕ. ಈ ವಿಷಯದಲ್ಲಿ ರಾಜಕಾರಣ ಸಲ್ಲದು. ಬೆಂಗಳೂರಿನಲ್ಲಿ ಶೇ 15ರಿಂದ 16 ಮಂದಿ ತಮಿಳುನಾಡಿನಿಂದ ಬಂದವರು ಇದ್ದಾರೆ. ಅವರಿಗೆ ಕುಡಿಯುವ ನೀರು ಕೊಡುವುದಿಲ್ಲ ಎನ್ನಲಾದೀತೇ ಎಂದು ಅವರು ಪ್ರಶ್ನಿಸಿದರು. ಈ ನೆಲೆಗಟ್ಟಿನಲ್ಲಿ ವಿಷಯ ಮನವರಿಕೆ ಮಾಡಬೇಕು ಎಂದು ಆಶಿಸಿದರು. ಕುಡಿಯುವ ನೀರಿನ ವಿಚಾರದಲ್ಲಿ ಬೆಂಕಿ ಹಚ್ಚುವ ರಾಜಕಾರಣಕ್ಕೆ ಅವಕಾಶವಿಲ್ಲ. ಇದು ಸೌಹಾರ್ದಯುತವಾಗಿ ಬಗೆಹರಿಯಬೇಕಾದ ವಿಚಾರ ಎಂದು ಅವರು ನುಡಿದರು.

    ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿ ಹಲವು ತೀರ್ಪುಗಳು ಬಂದಿವೆ. ಆ ತೀರ್ಪಿನ ವ್ಯಾಪ್ತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ತಮ್ಮ ಪಾಲನ್ನು ಉಪಯೋಗಿಸಲು ಯಾವುದೇ ಅಡ್ಡಿ ಇಲ್ಲ. ಆ ತೀರ್ಪನ್ನು ಮೀರಿದರೆ ವ್ಯಾಜ್ಯ ಆಗುತ್ತದೆ. ಕರ್ನಾಟಕವು ತೀರ್ಪಿನನ್ವಯ ಯೋಜನೆ ರೂಪಿಸಿದರೆ ಅದರಿಂದ ಏನೂ ಸಮಸ್ಯೆ ಆಗಲಾರದು. ಈ ಮಾತನ್ನು ತಮಿಳುನಾಡಿನಲ್ಲೂ ಹೇಳುತ್ತೇನೆ ಎಂದು ತಿಳಿಸಿದರು.

    ಇಂದಿರಾ ಕ್ಯಾಂಟೀನ್

    ಇಂದಿರಾ ಗಾಂಧಿ ಕ್ಯಾಂಟೀನ್ ಹೆಸರು ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ನಡೆದಿದೆ. 2017-18ರಲ್ಲಿ ಇಂದಿರಾ ಗಾಂಧಿ ಕ್ಯಾಂಟೀನ್ ಆರಂಭಿಸಲಾಯಿತು. ಇಂದಿರಾ ಗಾಂಧಿ ಅವರ ಮೇಲೆ ಪ್ರೇಮದಿಂದ ಈ ಕ್ಯಾಂಟೀನ್ ಆರಂಭಿಸಿಲ್ಲ. ಅದು ರಾಜಕಾರಣಕ್ಕಾಗಿ ಮಾಡಿದ ನಿರ್ಧಾರ. ಬದ್ಧತೆಗಾಗಿ ಅಲ್ಲ ಎಂದು ತಿಳಿಸಿದ ಅವರು, 89- 94, 1999-2006, 2013ರಿಂದ 2017ರ ನಡುವೆ ಕಾಂಗ್ರೆಸ್ ಸರಕಾರ ಇದ್ದರೂ ಯಾಕೆ ಇಂದಿರಾ ಕ್ಯಾಂಟೀನ್ ತೆರೆದಿಲ್ಲ ಎಂದು ಪ್ರಶ್ನಿಸಿದರು. ಇಂದಿರಾ ಗಾಂಧಿ ಅವರ ಎಲ್ಲ ನಿರ್ಧಾರಗಳನ್ನು ವಿರೋಧಿಸುವ ಪೂರ್ವಗ್ರಹ ಪೀಡಿತ ಮನಸ್ಥಿತಿ ನಮ್ಮದಲ್ಲ ಎಂದು ಸ್ಪಷ್ಟಪಡಿಸಿದರು.

    ದೇಶಕ್ಕೆ ನೆಹರೂ, ಇಂದಿರಾ ಗಾಂಧಿ ಮಾತ್ರ ಕೊಡುಗೆ ಕೊಟ್ಟಿದ್ದಾರೆ ಎಂದರೆ ಅವರ ಗುಲಾಮರು ಮಾತ್ರ ಒಪ್ಪಿಕೊಳ್ಳಲು ಸಾಧ್ಯ. ಸ್ವಾತಂತ್ರ್ಯ ಲಭಿಸಲು ಅವರು ಮಾತ್ರ ಕೊಡುಗೆ ಕೊಟ್ಟಿದ್ದಾರೆ ಎಂದರೆ ಮೂರ್ಖರು ಮತ್ತು ಗುಲಾಮರು ಮಾತ್ರ ಒಪ್ಪಿಕೊಳ್ಳುತ್ತಾರೆ. ಆದರೆ, ನಾವು ಮೂರ್ಖರು ಮತ್ತು ಗುಲಾಮರಲ್ಲ ಎಂದು ನುಡಿದರು.
    217 ಯೋಜನೆಗಳಿಗೆ ಅವರ ಹೆಸರು ಇಡಲಾಗಿದೆ. ಹಾಗಿದ್ದರೆ ಬೇರೆ ಯಾರೂ ದೇಶಕ್ಕೆ ಕೊಡುಗೆ ನೀಡಿಲ್ಲವೇ ಎಂದು ಕೇಳಿದ ಅವರು, ಅನ್ನಪೂರ್ಣೇಶ್ವರಿ ರಾಜಕೀಯ ವ್ಯಕ್ತಿಯಲ್ಲ. ಅನ್ನದ ದೇವತೆ; ದುರ್ಭಿಕ್ಷ ಬಂದಾಗ ಅನ್ನ ಕೊಡುವ ತಾಯಿ ಅವಳು. ಅದಕ್ಕೇ ಅನ್ನಪೂರ್ಣೇಶ್ವರಿ ಹೆಸರು ಇಡಲು ಹೇಳಿದ್ದೇನೆ. ನಾನೇನಾದರೂ ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಹೆಸರು ಇಡಲು ಹೇಳಿದರೆ ಅದು ರಾಜಕಾರಣ ಆಗುತ್ತಿತ್ತು ಎಂದರು.

    ಬಡವರಿಗೆ ಅನ್ನಪೂರ್ಣೇಶ್ವರಿ ಹೆಸರಿನಲ್ಲಿ ಅನ್ನ ಕೊಟ್ಟರೇನು? ಇಂದಿರಾ ಹೆಸರಲ್ಲಿ ಅನ್ನ ಕೊಟ್ಟರೇನು? ಜನರ ತೆರಿಗೆಯಿಂದ ಅನ್ನ ಕೊಡುವುದಲ್ಲವೇ ಎಂದರು. ಕಾಂಗ್ರೆಸ್ ಕಾರ್ಯಾಲಯದಲ್ಲಿ ನೆಹರೂ ಅಥವಾ ಇಂದಿರಾ ಹೆಸರಿನಲ್ಲಿ ಕ್ಯಾಂಟೀನ್ ತೆರೆದರೆ ನಮ್ಮ ಅಡ್ಡಿ ಇಲ್ಲ ಎಂದು ತಿಳಿಸಿದರು. ಅನ್ನಪೂರ್ಣೇಶ್ವರಿ ಹೆಸರು ಸಲಹೆ ಮಾತ್ರ. ಆ ಕುರಿತು ಚರ್ಚೆ ನಡೆಯಲಿ ಎಂದು ತಿಳಿಸಿದರು.

    error: Content is protected !!