23.5 C
Karnataka
Saturday, May 23, 2026
    Home Blog Page 66

    ಸ್ನೇಹ ಎಷ್ಟು ಮಧುರವೋ ತುಸು ಎಡವಿದರೆ ಅಷ್ಟೇ ಯಾತನೆಯನ್ನೂ ಕೊಡಬಲ್ಲುದು

    ಸುಮಾ ವೀಣಾ

    ಕ್ರೂರ ಜಂತುಗಳೊಡನೆ ಸಖತನ ಫಲಿಸಿತು– ಮಹತ್ವದ ಕೀರ್ತನಕಾರರಲ್ಲಿ ಒಬ್ಬರಾಗಿರುವ  ಕನಕದಾಸರು   ಸಾಂಗತ್ಯ ಛಂದಸ್ಸಿನಲ್ಲಿ ರಚಿಸಿರುವ ‘ನಳಚರಿತ್ರೆ’ ಎಂಬ ಕಾವ್ಯದಿಂದ  ಪ್ರಸ್ತುತ ಸಾಲನ್ನು ಆರಿಸಿದೆ. 

    ನಳಮಹಾರಾಜ  ಬೆಂಕಿಯಲ್ಲಿ ಸಿಲುಕಿದ್ದ ಕಾರ್ಕೋಟಕ ಸರ್ಪವನ್ನು ರಕ್ಷಿಸುತ್ತಾನೆ. ಆದರೆ ಆ ಹಾವು ಉಪಕಾರಸ್ಮರಣೆ ಮಾಡದೆ ನಳಮಹಾರಾಜನನ್ನೆ ಕಚ್ಚುತ್ತದೆ.  ಆ ಸಂದರ್ಭದಲ್ಲಿ  ನಳಮಹಾರಾಜ  ತನ್ನಲ್ಲಿಯೇ “ಕ್ರೂರ ಜಂತುಗಳೊಡನೆ ಸಖತನ ಫಲಿಸಿತು” ಎಂದು ಹೇಳಿಕೊಳ್ಳುತ್ತಾನೆ. 

    ಹಾವು  ಕಚ್ಚಿದೊಡನೆ ಸ್ಫುರದ್ರೂಪಿಯಾಗಿದ್ದವನು ಕುರೂಪಿಯಾದಾಗ  ದುಷ್ಟ ಹಾವಿನೊಂದಿಗೆ ಗೆಳೆತನ ಬೆಳೆಸುವ ತಪ್ಪಿಗೆ ನಾನು ಕೈ ಹಾಕಬಾರದಿತ್ತು ಎಂದು ತನ್ನನ್ನೆ ತಾನು ಹಳಿದುಕೊಳ್ಳುತ್ತಾನೆ. ಇಲ್ಲಿ ನಳಮಹಾರಾಜನ ಪರಿಸ್ಥಿತಿ” ಮಿಂಚಿಹೋದ ಕಾಲಕ್ಕೆ  ಚಿಂತಿಸಿ ಫಲವಿಲ್ಲ” ಎಂಬಂತಾಗಿರುತ್ತದೆ. 

    ಮನುಷ್ಯ ನಿತ್ಯ ಸಹಜೀವನವನ್ನು ಅಪೇಕ್ಷಿಸುತ್ತಾನೆ  ಹಾಗಾಗಿ ಸ್ನೇಹ, ಕೂಟ, ಆಟ,ಊಟ,  ಎಲ್ಲವೂ ಇರುತ್ತದೆ. ಹಾಗೆ ಜೊತೆಗಿರಲಿ, ಜೊತೆಯಾಗಿರೋಣ  ಎಂದು ಸ್ನೇಹಸಂಬಂಧ ಹೊಂದುವಾಗ ಸಾಧ್ಯವಾದಷ್ಟು  ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ    ತೊಂದರೆಗೆ ಸಿಲುಕುವುದು ಸತ್ಯ.

    ಅದಕ್ಕೆ ಹಿರಿಯರು ‘ಸಜ್ಜನರ ಸಂಘ ಹೆಜ್ಜೇನು ಸವಿದಂತೆ’ ಎಂದಿರುವುದು.  ಸಾಮಾಜಿಕ ಬದುಕಿನಲ್ಲಿ ನಮ್ಮ ಸಹವಾಸ ಸಖ್ಯ ಯಾವ ರೀತಿಯ ವ್ಯಕ್ತಿಗಳೊಂದಿಗೆ ಇದೆ ಎಂಬುದರ ಮೇಲೆಯೂ ನಮ್ಮ ವ್ಯಕ್ತಿತ್ವ ನಿರ್ಣಯವಾಗುತ್ತದೆ. 

    ಆದ್ದರಿಂದ ಸ್ನೇಹ ಹಸ್ತವನ್ನು ಚಾಚುವಾಗ  ಇಲ್ಲವೆ ಬಯಸುವಾಗ ಆದಷ್ಟೂ ಜಾಗರೂಕವಾಗಿರಬೇಕಾಗುತ್ತದೆ. ಪರಾಮರ್ಶಿಸಿ  ನೋಡದೆ  ದುಷ್ಟರೊಡನೆ ಗೆಳೆತನ ಕಟ್ಟಿಕೊಂಡರೆ  ಹಾವಿನಿಂದ ಕಚ್ಚಿಸಿಕೊಂಡು  ವಿಕಾರ ರೂಪಿಯಾಗಿ ದುಷ್ಟ ಜಂತುವಿನೊಡನೆ ಗೆಳೆತನ ಮಾಡಿದೆನಲ್ಲಾ ಎಂದು ಪರಿತಪಿಸಿದ ನಳ ಮಹಾರಾಜನಂತಾಗುತ್ತದೆ ನಮ್ಮ ಪರಿಸ್ಥಿತಿಯೂ ಕೂಡ.  ಸ್ನೇಹ ಎಷ್ಟು ಮಧುರವೋ ತುಸು ಎಡವಿದರೆ ಅಷ್ಟೇ ಯಾತನೆಯನ್ನೂ ಕೊಡಬಲ್ಲುದು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    ಪ್ರಬಲ ಹಾಗೂ ಸಶಕ್ತ ದೇಶವಾಗಿ ಹೊರಹೊಮ್ಮಿದ ಭಾರತ

    75 ವರ್ಷಗಳ ಸ್ವಾತಂತ್ರ್ಯದ ಸಂಭ್ರಮವನ್ನು 75 ವಾರಗಳ ಮಹೋನ್ನತ ಉತ್ಸವವಾಗಿ ಆಚರಿಸಲು ಪ್ರೇರೇಪಿಸಿದ ಪ್ರಧಾನಿ ಮೋದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ದೇಶಕ್ಕಾಗಿ ತಮ್ಮ ತನುಮನಗಳನ್ನು ಸಮರ್ಪಿಸಿದ ಎಲ್ಲಾ ಮಹನೀಯರನ್ನು ಸ್ಮರಿಸುವ ಈ ಹಬ್ಬ ಕೋಟ್ಯಂತರ ಭಾರತೀಯರಿಗೆ ಎಂದೆಂದಿಗೂ ತ್ಯಾಗ, ಬಲಿದಾನ, ದೇಶ ಭಕ್ತಿ ಹಾಗೂ ದೃಢ ಸಂಕಲ್ಪದ ಪ್ರತೀಕ. ಇತಿಹಾಸದಲ್ಲಿ ಅಚ್ಚಳಿಯದೆ ನಿಂತ ಎಲ್ಲಾ ಮಹಾತ್ಮರಿಗೆ ನಾವು ಯಾವಾಗಲೂ ಚಿರರುಣಿ.

    ಪ್ರಸ್ತುತ ನಮ್ಮ ದೇಶವು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವುದು ನಿಶ್ಚಿತ. ಅದಕ್ಕೆ ನಾವು ಹೆಮ್ಮೆ ಪಡುವುದು ಸ್ವಾಭಾವಿಕ. ಆದರೆ ಭಾರತದ ಗತ ವೈಭವವನ್ನು ನಾವು ಮತ್ತೊಮ್ಮೆ ತಿರುಗಿ ನೋಡಿದರೆ ನಡೆದು ಬಂದ ಹಾದಿಯಲ್ಲಿ ಅಪ್ರತಿಮ ಸಾಧನೆಗಳು ಲೆಕ್ಕವಿಲ್ಲದಷ್ಟು.

    ಶತಮಾನಗಳ ಹಿಂದೆ ಜ್ಞಾನಾರ್ಜನೆಯೇ ನಮ್ಮ ಪರಂಪರೆ ಹಾಗೂ ತಳಹದಿಯಾಗಿತ್ತು. ಪ್ರಪಂಚದ ಸೃಷ್ಟಿಯ ಪರಿಕಲ್ಪನೆ ಹೊಂದಿರುವ ಋಗ್ವೇದ ಮನುಕುಲದ ಮೊದಲ ಗ್ರಂಥ. ವೇದ, ಪುರಾಣ ಉಪನಿಷತ್ತುಗಳು ಇಡೀ ವಿಶ್ವದ ಎಲ್ಲ ರಹಸ್ಯಗಳನ್ನೂ ಹುದುಗಿಸಿಟ್ಟುಕೊಂಡಿವೆ. ಸನಾತನ ಧರ್ಮದ ಸ್ಥಾಪನೆ ಶ್ರೇಷ್ಠ ಸಂಸ್ಕೃತಿಗೆ ನಾಂದಿ ಹಾಡಿತ್ತು. ಜಗತ್ತಿನ ಅತಿ ಶ್ರೇಷ್ಠ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತಗಳು ರಚನೆಯಾದ ಯುಗ. ಯೋಗ, ಆಯುರ್ವೇದ, ಸಂಸ್ಕೃತ ಭಾಷೆ ಹಾಗೂ ವ್ಯಾಕರಣವನ್ನು ಜಗತ್ತಿಗೆ ಪರಿಚಯಿಸಿದ ಗರಿಮೆ ನಮ್ಮದು. ವಿಜ್ಞಾನ, ಗಣಿತ, ಆಧ್ಯಾತ್ಮದಲ್ಲೂ ನಮ್ಮ ಕೊಡುಗೆ ಅಪಾರ. ಕಲೆ ತಂತ್ರಜ್ಞಾನ ಎಲ್ಲದರಲ್ಲೂ ಭಾರತ ಮುಂಚೂಣಿಯಲ್ಲಿ ಇದ್ದ ಕಾಲ. ವಿಶ್ವದ ಮೊದಲ ವಿಶ್ವ ವಿದ್ಯಾನಿಲಯ ತಕ್ಷಶಿಲ ಹಾಗೂ ನಳಂದ ಪ್ರಪಂಚಕ್ಕೆ ತನ್ನ ಜ್ಞಾನವನ್ನು ಧಾರೆ ಎರೆದ ಪರ್ವ ಅದು. ಒಂದು
    ಮಾತಿನಲ್ಲಿ ಹೇಳಬೇಕೆಂದರೆ ಭಾರತ ಆ ಕಾಲದ ವಿಶ್ವಗುರು ಎನ್ನುವುದರಲ್ಲಿ ಆಶ್ಚರ್ಯವೇ ಇಲ್ಲ.

    ಶತಕಗಳು ಉರುಳಿದಂತೆ ಭಾರತ ಅಪಾರ ಜ್ಞಾನ ಹಾಗೂ ಸಂಪತ್ತಿನ ಮೇರು ಶಿಖರವಾಗಿ ಬೆಳೆದು ನಿಂತಿತ್ತು. ಹಲವರಿಂದ ಈ ದೇಶದಲ್ಲಿ ನಡೆದ ದಬ್ಬಾಳಿಕೆ ನಮ್ಮ ಇತಿಹಾಸದಲ್ಲಿ ಒಂದು ಕರಾಳ ಪರ್ವ. ಎಷ್ಟೋ ಗಂಡುಗಲಿಗಳು ಪರಾಕ್ರಮ ಮೆರೆದು ವೀರಗತಿ ಸೇರಿದ್ದು ನಾವು ಮರೆಯುವಂತಿಲ್ಲ. ಆಂಗ್ಲರ ಸುಮಾರು ಇನ್ನೂರು ವರ್ಷಗಳ ಅಟ್ಟಹಾಸ ಭಾರತವನ್ನು ನಾನಾ ರೀತಿಯ ವಿನಾಶದ ಅಂಚಿಗೆ ತಂದು ನಿಲ್ಲಿಸಿತ್ತು. ಅಲ್ಲಿಯವರೆಗೂ ಪ್ರಾಂತ್ಯವಾರು ಹೋರಾಟವನ್ನೇ ಮಾಡಿಕೊಂಡಿದ್ದ ನಮ್ಮನ್ನು ಬಾಲಗಂಗಾಧರ ತಿಲಕ್ ಎಚ್ಚರಿಸಿದರು. ಭಾರತಮಾತೆ ಸ್ವತಂತ್ರವಾಗಬೇಕಾದರೆ ಸಂಘಟನೆಯೇ ಮಾರ್ಗ ಎಂದು ದೃಢ ಸಂಕಲ್ಪ ಮಾಡಿದರು. ಅವರ ಪ್ರೇರಣೆಯಿಂದ ಹಲವಾರು ನಾಯಕರು ಹುಟ್ಟಿಕೊಂಡು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು. ಎಷ್ಟೋ ಜನ ಹುತಾತ್ಮರಾದರೆ ಲಕ್ಷಾಂತರ ಯೋಧರು ವೀರ ಸ್ವರ್ಗ ಸೇರಿದರು. ಅವರೆಲ್ಲರ ಹೋರಾಟ ಹಾಗೂ ಬಲಿದಾನದ ಪ್ರತಿಫಲವಾಗಿ ಭಾರತ ಮಾತೆ ಸ್ವಾತಂತ್ರಳಾದಳು.

    ಸ್ವಾತಂತ್ರಾನಂತರ ಏಕೀಕರಣ, ಆರ್ಥಿಕ ಬಿಕ್ಕಟ್ಟು, ಕ್ಷಾಮ, ನೆರೆ ರಾಷ್ಟ್ರಗಳ ಜೊತೆ ಯುದ್ಧದಿಂದ ದೇಶದ ಅಭಿವೃದ್ಧಿ ಕುಂಟಿತು. ಆದರೆ ದೂರದೃಷ್ಟಿಯ ಪ್ರಭಲ ನಾಯಕರು ಚುಕ್ಕಾಣಿ ಹಿಡಿದು ದೇಶದ ದಿಕ್ಕನ್ನು ಕೀರ್ತಿ ಪಥದಲ್ಲಿ ತಂದು ನಿಲ್ಲಿಸಿದರು. ಮತ್ತೆ ಭಾರತ ಒಂದು ಪ್ರಭಲ ಹಾಗೂ ಸಶಕ್ತ ದೇಶವಾಗಿ ಹೊರಹೊಮ್ಮಿದೆ. ಮಂಗಳ ಗ್ರಹಕ್ಕೆ ಹೆಜ್ಜೆ ಇಟ್ಟಾಗಿದೆ, ಕೊರೋನಾಕ್ಕೆ ಲಸಿಕೆ ಕಂಡುಹಿಡಿದಿದೆ. ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಭಾರತೀಯರದೇ ಸಾರಥ್ಯ. ನಮ್ಮ ಪ್ರಧಾನಿ ವಿಶ್ವದ ಅತಿ ಪ್ರಭಲ ನಾಯಕ. ಭಾರತ ಮಾತೆಗೆ ಮತ್ತೆ ಕಾಶ್ಮೀರದ ಕಿರೀಟ ತೊಡಿಸಿ ಆಗಿದೆ. ಒಲಂಪಿಕ್ಸ್ ನಲ್ಲಿ ಜನಗಣಮನ ರಾರಾಜಿಸಿದೆ.

    ಭಾರತ ಮತ್ತೊಮ್ಮೆ ಕೀರ್ತಿಶಿಖರದ ಹೊಸ್ತಿಲಲ್ಲಿದೆ. ಇಷ್ಟರಲ್ಲೇ ರಾಮ ರಾಜ್ಯದ ಕನಸೂ ನನಸಾಗಲಿದೆ.

    ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

    ಅಮೃತ ಮಹೋತ್ಸವ ಸವಿ ನೆನಪಿಗೆ ಮುಖ್ಯಮಂತ್ರಿಗಳಿಂದ ಹೊಸ ಯೋಜನೆಗಳ ಕೊಡುಗೆ

    BENGALURU AUG 15

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗೆ ಹಲವು ಹೊಸ ಜನಪರ ಯೋಜನೆಗಳನ್ನು ಘೋಷಿಸಿದರು.

    75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿ ನಾಡಿನ ಜನತೆಗೆ ನೀಡಿದ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಅವರು ಹೊಸ ಯೋಜನೆಗಳನ್ನು ಘೋಷಿಸಿದರು. ಹೊಸ ಯೋಜನೆಗಳ ವಿವರ ಹೀಗಿದೆ:

    ಅಮೃತ ಗ್ರಾಮ ಪಂಚಾಯತಿಗಳು:

    ಆಯ್ದ 750 ಗ್ರಾಮ ಪಂಚಾಯತಿಗಳಲ್ಲಿ ಬೀದಿ ದೀಪಗಳು, ಪ್ರತಿ ಮನೆಗೆ ಕುಡಿಯುವ ನೀರಿನ ಸರಬರಾಜು, ಶೇ.100 ರಷ್ಟು ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಸೌರವಿದ್ಯುತ್ ಅಳವಡಿಕೆ, ಡಿಜಿಟಲ್ ಲೈಬ್ರರಿಗಳೊಂದಿಗೆ ಸುಸಜ್ಜಿತವಾದ ಶಾಲೆಗಳನ್ನು ಸ್ಥಾಪಿಸಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಯೋಜನೆ .

    ಅಮೃತ ಗ್ರಾಮೀಣ ವಸತಿ ಯೋಜನೆ :

    ಆಯ್ದ 750 ಗ್ರಾಮ ಪಂಚಾಯತಿಗಳಲ್ಲಿ ವಸತಿ ಮತ್ತು ಆಶ್ರಯರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸುವ ಯೋಜನೆ

    ಅಮೃತ ರೈತ ಉತ್ಪಾದಕ ಸಂಸ್ಥೆಗಳು :

    ರೈತ, ನೇಕಾರ ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು 750 ಅಮೃತ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ. ಪ್ರತಿ ಸಂಸ್ಥೆಗೆ 30 ಲಕ್ಷ ರೂ. ನಂತೆ ಮೂರು ವರ್ಷದ ಅವಧಿಗೆ 225 ಕೋಟಿ ರೂ. ಅನುದಾನ.

    ಅಮೃತ ನಿರ್ಮಲ ನಗರ :

    ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಅಮೃತ ನಿರ್ಮಲ ನಗರ ರೂಪಿಸಿ ಪ್ರತಿ ಸ್ಥಳೀಯ ಸಂಸ್ಥೆಗೆ 1 ಕೋಟಿ ರೂ.ನಂತೆ 75 ಕೋಟಿ ರೂ. ನೆರವು.

    ಅಮೃತ ಶಾಲಾ ಸೌಲಭ್ಯ ಯೋಜನೆ :

    ಆಯ್ದ 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಇತ್ಯಾದಿ ಸಮಗ್ರ ಸೌಲಭ್ಯ ಒದಗಿಸಲು ತಲಾ 10 ಲಕ್ಷ ರೂ.ಗಳಂತೆ 75 ಕೋಟಿ ರೂ. ಅನುದಾನ.

    ಅಮೃತ ಅಂಗನವಾಡಿ ಕೇಂದ್ರಗಳು :
    ಆಯ್ದ 750 ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಪ್ರತಿ ಅಂಗನವಾಡಿಗೆ 1 ಲಕ್ಷ ರೂ.ನಂತೆ 7.5 ಕೋಟಿ ರೂ. ನೆರವು.

    ಅಮೃತ ನಗರೋತ್ಥಾನ
    ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಅಮೃತ ನಗರೋತ್ಥಾನ ಯೋಜನೆ ಪ್ರಾರಂಭ; ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರಿನ 75 ಕೊಳೆಗೇರಿ ಅಭಿವೃದ್ಧಿ; 75 ಕೆರೆ/ ಉದ್ಯಾನಗಳ ಅಭಿವೃದ್ಧಿ. ನಗರದ ಸುಗಮ ಸಂಚಾರಕ್ಕೆ 12 ಹೈ ಡೆನ್ಸಿಟಿ ಕಾರಿಡಾರ್ ಅಭಿವೃದ್ಧಿ, ಫ್ಲೈ ಓವರ್, ರಿಂಗ್ ರಸ್ತೆ ಅಭಿವೃದ್ಧಿಗೆ ಕ್ರಮ. .

    ಅಮೃತ ಸ್ವಸಹಾಯ ಕಿರು ಉದ್ದಿಮೆಗಳು :

    ಆಯ್ದ 7,500 ಸ್ವಸಹಾಯ ಗುಂಪುಗಳನ್ನು ಕಿರು ಉದ್ಯಮ ಸಂಸ್ಥೆಗಳಾಗಿ (Micro Enterprises) ರೂಪಿಸಲು ತಲಾ 1 ಲಕ್ಷ ರಂತೆ 75 ಕೋಟಿ ರೂ. ಬೀಜ ಧನ ಸೌಲಭ್ಯ.

    ಮೃತ ಸಮುದಾಯ ಅಭಿವೃದ್ಧಿ ಯೋಜನೆ :

    ಆಯ್ದ 750 ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರುತಿಸಿ ರಚನಾತ್ಮಕ ಸಾಮುದಾಯಿಕ ಸೇವೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಣೆ.

    ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆ :

    ಆಯ್ದ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ತಲಾ 20 ಲಕ್ಷ ರೂ.ಗಳಂತೆ 150 ಕೋಟಿ ರೂ. ವೆಚ್ಚ.

    ಅಮೃತ ಕೌಶಲ್ಯ ತರಬೇತಿ ಯೋಜನೆ :

    ರಾಜ್ಯದ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ 75 ಸಾವಿರ ಯುವಕ ಯುವತಿಯರ ಕೌಶಲ್ಯಾಭಿವೃದ್ಧಿಗೆ 2 ವರ್ಷಗಳ ತರಬೇತಿ ಯೋಜನೆಗೆ 112 ಕೋಟಿ ರೂ. ವೆಚ್ಚ.

    ಸ್ಟಾರ್ಟಪ್ ಉತ್ತೇಜನ ಯೋಜನೆ

    ಈ ಯೋಜನೆಯಡಿ 75 ಸ್ಟಾರ್ಟಪ್ ಉದ್ಯಮಗಳಿಗೆ ಉತ್ತೇಜನ ನೀಡಲು ಕ್ರಮ.

    ಮೃತ ಕ್ರೀಡಾ ದತ್ತು ಯೋಜನೆ :

    ಮುಂದಿನ ಪ್ಯಾರೀಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಹಾಗೂ ಪದಕ ವಿಜೇತ ಸಾಮಥ್ರ್ಯವುಳ್ಳ ಆಯ್ದ 75 ಕ್ರೀಡಾಪಟುಗಳನ್ನು ರೂಪಿಸಲು ಅಗತ್ಯವಾದ ತರಬೇತಿ ಮತ್ತು ಪ್ರೋತ್ಸಾಹ ನೀಡಲು ಅಮೃತ ಕ್ರೀಡಾ ದತ್ತು ಯೋಜನೆ ಅನುಷ್ಠಾನ.

    ನೂತನ ಶಿಕ್ಷಣ ನೀತಿಯಿಂದ ಕನ್ನಡಕ್ಕೆ ಎಳ್ಳಷ್ಟೂ ಅಪಾಯವಿಲ್ಲ

    ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.‌ಅಶ್ವತ್ಥನಾರಾಯಣ

    RAMANAGARA AUG 15

    ಈ ವರ್ಷದಿಂದ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕನ್ನಡಕ್ಕೆ ಎಳ್ಳಷ್ಟೂ ಅಪಾಯವಿಲ್ಲ. ಮಾತೃಭಾಷಾ ಶಿಕ್ಷಣಕ್ಕೆ ಅಗ್ರ ಆದ್ಯತೆ ನೀಡುತ್ತಿದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಖಾತೆ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

    ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರೆವೇರಿಸಿ ಭಾಷಣ ಮಾಡಿದ ಅವರು; “ನೂತನ ಶಿಕ್ಷಣ ನೀತಿಯಿಂದ ಕನ್ನಡ ಭಾಷಾ ಕಲಿಕೆ ಮತ್ತು ಬೆಳವಣಿಗೆಗೆ ಧಕ್ಕೆಯಾಗುತ್ತದೆ ಎಂಬುದು ಕೇವಲ ಮಿಥ್ಯೆ ಮಾತ್ರ” ಎಂದರು.

    ಮುಂದುವರಿದು ಮಾತನಾಡಿದ ಅವರು; “ಪದವಿ ಹಂತದಲ್ಲಿ ಎರಡು ವರ್ಷ ಕನ್ನಡದ ಕಲಿಕೆ ಕಡ್ಡಾಯ. ಜತೆಗೆ ನಮ್ಮ ದೇಶದ ಮತ್ತೊಂದು ಭಾಷೆಯನ್ನು ವಿಷಯವನ್ನಾಗಿ ಕಲಿಸಲಾಗುತ್ತದೆ. ಅಲ್ಲದೆ; ಎಂಜಿನಿಯರಿಂಗ್, ವಿಜ್ಞಾನ, ವೈದ್ಯಕೀಯ ಸೇರಿದಂತೆ ಎಲ್ಲಾ ಉನ್ನತ ಶಿಕ್ಷಣ ಕೋರ್ಸ್ʼಗಳನ್ನು ಕನ್ನಡ ಭಾಷೆಯಲ್ಲೇ ಸಮರ್ಥವಾಗಿ ಕಲಿಸಲಾಗುತ್ತದೆ. ಈ ದಿಸೆಯಲ್ಲಿ ಈಗಾಗಲೇ ಕೆಲಸ ಆರಂಭವಾಗಿದ್ದು, ಎಂಜಿನಿಯರಿಂಗ್ ಪಠ್ಯಕ್ರಮವನ್ನು ಕನ್ನಡದಲ್ಲಿ ಸಿದ್ಧಪಡಿಸಲು ಅನುವಾದ ಕಾರ್ಯ ಆರಂಭವಾಗಿದೆ” ಎಂದು ಸಚಿವರು ಹೇಳಿದರು.

    ಈ ಎಲ್ಲ ಪ್ರಯತ್ನಗಳು ಕನ್ನಡವನ್ನು ಮತ್ತಷ್ಟು ಶಕ್ತಿಯುತಗೊಳಿಸುವ ದಿಸೆಯಲ್ಲೆ ಸಾಗುತ್ತಿವೆಯೇ ಹೊರತು ದುರ್ಬಲಗಿಳಿಸುವುದಕ್ಕಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

    ಮೂರು ದಶಕಗಳ ನಂತರ ಬಂದ ನೀತಿ:

    34 ವರ್ಷಗಳ ನಂತರ ರೂಪಿಸಲಾಗಿರುವ ಈ ಶಿಕ್ಷಣ ನೀತಿಯ ಕರಡನ್ನು ನಮ್ಮವರೇ ಆದ ಡಾ.ಕೆ.ಕಸ್ತೂರಿರಂಗನ್ ನೇತೃತ್ವದ ತಜ್ಞರ ತಂಡವು 5-6 ವರ್ಷಗಳ ನಿರಂತರ ಸಮಾಲೋಚನೆ ನಡೆಸಿ ರೂಪಿಸಿದೆ. ಈ ನೀತಿಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ರಾಜ್ಯ ಸರಕಾರವು ಉನ್ನತ ಶಿಕ್ಷಣದಲ್ಲಿ ಶಿಕ್ಷಣ ನೀತಿಯನ್ನು ಇದೇ 2021-22ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸಲು ಆದೇಶ ಹೊರಡಿಸಿದೆ ಎಂದ ಅವರು, ನೂತನ ನೀತಿಯಿಂದಾಗಿ ಮುಂಚೆ ಇದ್ದ ಬಿಗುವಿನ ಕಟ್ಟುಪಾಡುಗಳು ಹೊರಟು ಹೋಗಲಿವೆ. ಶಿಕ್ಷಣ ನೀತಿಯು ಬಹುಶಿಸ್ತುಗಳ ಕಲಿಕೆಯನ್ನು ಉತ್ತೇಜಿಸಲಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳನ್ನು ಓದಿ-ಕಲಿತು ಮುಂದೆ ಬರಬಹುದಾಗಿದೆ ಎಂದರು.

    ಕಲಿಕೆಯಲ್ಲಿ ಮುಕ್ತ ಸ್ವಾತಂತ್ರ್ಯ:

    ವಿದ್ಯಾರ್ಥಿಗಳು ತಮ್ಮ ಕೋರ್ಸ್ ಹೇಗಿರಬೇಕು ಎಂಬುದನ್ನು ತಾವೇ ನಿರ್ಧರಿಸಿಕೊಳ್ಳಬಹುದು. ಇದರಿಂದಾಗಿ, ನಿಜಕ್ಕೂ, ಸ್ವಾತಂತ್ರ್ಯೋತ್ಸವದ 75ನೇ ದಿನಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕೂಡ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದು ಖುಷಿಯ ವಿಚಾರ. ಈ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯಕ್ಕಾಗಿ, ಜೊತೆಗೆ, ಭಾರತದ ಕೀರ್ತಿ ಪತಾಕೆಯನ್ನು ಜಗತ್ತಿನೆಲ್ಲೆಡೆ ಬೆಳಗಿಸಲು ಬಳಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.

    ಭಾರತದ ಸರ್ವೋನ್ನತ ಅಭಿವೃದ್ಧಿಗೆ 10 ಅಂಶಗಳ ದಿಕ್ಸೂಚಿ

    DELHI AUG 15

    ಸ್ವಾತಂತ್ರ್ಯೋತ್ಸವದ ʼಆಜಾದಿ ಅಮೃತ ಮಹೋತ್ಸವʼದ ನಿಮಿತ್ತ ದೇಶ ರಾಜಧಾನಿ ನವದೆಹಲಿಯ ಕೆಂಪುಕೋಟೆ ಮೇಲೆ ಭಾನುವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು; ಭಾರತದ ಸರ್ವೋನ್ನತ ಅಭಿವೃದ್ಧಿಗೆ 10 ಅಂಶಗಳ ದಿಕ್ಸೂಚಿಯನ್ನು ಮಂಡಿಸಿದರು.

    ಒಂದೆಡೆ ದೇಶ ಎದುರಿಸುತ್ತಿರುವ ಸವಾಲುಗಳನ್ನು ಜನರಿಗೆ ನೆನಪು ಮಾಡುತ್ತಲೇ, ಇನ್ನೊಂದೆಡೆ ಕೋವಿಡ್ಡೋತ್ತರ ಭಾರತವನ್ನು ಕಟ್ಟಲು ತಮ್ಮ ಕಸನುಗಳನ್ನು ಬಿಚ್ಚಿಟ್ಟ ಪ್ರಧಾನಿ, ಅವುಗಳನ್ನು ಸಾಕಾರ ಮಾಡುವ ಬಗೆಯನ್ನೂ ಲಾಲ್‌ಕಿಲಾ ಮೇಲಿನ ಭಾಷಣದಲ್ಲಿ ಸವಿಸ್ತಾರವಾಗಿ ಹೇಳಿದರು.

    ಹಾಗಾದರೆ; ಅವರು ಬಿಚ್ಚಿಟ್ಟ ದಿಕ್ಸೂಚಿಗಳೇನು? ಇಲ್ಲಿದೆ ವಿವರ:

    1. 25 ವರ್ಷಗಳಲ್ಲಿ ನವ ಭಾರತ

    ಮುಂಬರುವ 25 ವರ್ಷಗಳಲ್ಲಿ ನಮ್ಮ ದೇಶವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಿಕೊಳ್ಳಲಿದೆ. ಆ ಹೊತ್ತಿಗೆ ಭಾರತದ ಜಗತ್ತಿನ ಅತಿ ಬೃಹತ್‌ ಶಕ್ತಿಯಾಗಿ ಹೊರಹೊಮ್ಮಬೇಕು. ಅಲ್ಲಿವರೆಗೂ ನಮಗೆ ವಿಶ್ರಾಂತಿ ಎಂಬುದೇ ಇರಬಾರದು. ನಮ್ಮ ಗುರಿ ಏನಿದ್ದರೂ ಭಾರತದ ನಿರ್ಮಾಣವೇ ಆಗಿರಬೇಕು ಹಾಗೂ ಯಾವ ರಾಷ್ಟ್ರಕ್ಕೂ ನಾವು ಕಡಿಮೆ ಇಲ್ಲ ಎನ್ನುವ ಕೆಚ್ಚೆದೆಯ ಗುರಿಯೊಂದಿಗೆ ಎಲ್ಲರೂ ಹೆಜ್ಜೆ ಹಾಕಬೇಕು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಎಂಬುದು ಈ ಪಯಣದಲ್ಲಿ ಮಹಳ ಮುಖ್ಯವಾಗುತ್ತದೆ.

    2. ಸೈನಿಕ ಶಾಲೆಗಳಿಗೆ ಬಾಲಕಿಯರು

    ನಮ್ಮ ಸೇನೆ ಪ್ರಬಲವಾಗಬೇಕು. ಪ್ರಗತಿಯ ಜತೆಜತೆಗೇ ಸೇನಾ ಶಕ್ತಿಯೂ ವೃದ್ಧಿಸಲೇಬೇಕು. ಎರಡೂವರೆ ವರ್ಷಗಳ ಹಿಂದೆ ಮಿಜೊರಂ ರಾಜ್ಯದಲ್ಲಿ ಸೈನಿಕ ಶಾಲೆಗಳಿಗೆ ಬಾಲಕಿಯರಿಗೆ ಪ್ರವೇಶ ನೀಡಿದ ವಿಷಯವನ್ನು ನಾವೆಲ್ಲರೂ ಗಮನಿಸಬೇಕು. ಅದೊಂದು ಕ್ರಾಂತಿಕಾರಕ ಹೆಜ್ಜೆ.  ನಾರಿ ಶಕ್ತಿಯ ಮೂಲಕವೂ ಸೇನೆಯನ್ನು ಶಕ್ತಿಶಾಲಿ ಮಾಡಬೇಕು, ಮಾಡೋಣ. ಇನ್ನು ಮುಂದೆ ದೇಶ ಎಲ್ಲಾ ಸೈನಿಕ ಶಾಲೆಗಳಲ್ಲೂ ಬಾಲಕಿಯರು ಮತ್ತು ಯುವತಿಯರಿಗೆ ಪ್ರವೇಶ ಅವಕಾಶ ಇರುತ್ತದೆ.

    3. ಪ್ರಧಾನಿ ಗತಿಶಕ್ತಿ ಯೋಜನೆ

    ರಾಷ್ಟ್ರದ ಅಭಿವೃದ್ಧಿಗೆ ಮೂಲಸೌಕರ್ಯ ಎನ್ನುವುದು ಬಹಳ ಮುಖ್ಯ. ಈ ಕ್ಷೇತ್ರವು ಬೆಳೆದಂತೆಲ್ಲ ದೇಶವೂ ಆರ್ಥಿಕವಾಗಿ ಶಕ್ತಿಶಾಲಿಯಾಗಿ  ಮುನ್ನಡೆಯುತ್ತದೆ. ಹೀಗಾಗಿ ಪ್ರಧಾನಿ ಗತಿಶಕ್ತಿ ಯೋಜನೆ ಪ್ರಾರಂಭಿಸುತ್ತೇವೆ. 100 ಲಕ್ಷ ಕೋಟಿ ರೂ. ವೆಚ್ಚದ ಮಹಾನ್‌ ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲ್ಯಾನ್ ಇದಾಗಿದೆ. ಇನ್ನು ಇಪ್ಪತ್ತೈದು ವರ್ಷಗಳಲ್ಲಿ ಈ ಯೋಜನೆ ದೇಶದ ದಿಕ್ಕನ್ನೇ ಸಂಪೂರ್ಣವಾಗಿ ಬದಲಾವಣೆ ಮಾಡಲಿದೆ.

    4. ರಾಷ್ಟ್ರೀಯ ಜಲಜನಕ ಮಿಷನ್

    ಮುಂದಿನ ಇಪ್ಪತ್ತೈದು ವರ್ಷಗಳ ಒಳಗೆ ಕಾರ್ಯಕತ ಮಾಡಲೇಬೇಕಾದ ಗುರಿಗಳನ್ನು ನಾನು ಪ್ರಸ್ತಾಪ ಮಾಡುತ್ತಿದ್ದೇನೆ. ಹಸಿರು ಜಲಜನಕ​ (Hydrogen) ಕ್ಷೇತ್ರವನ್ನು ಎತ್ತರದ ಸಾಧನೆಯತ್ತ ಕೊಂಡೊಯ್ಯುವುದು ಅದರಲ್ಲಿ ಬಹಖಳ ಮಹತ್ತ್ವದ ಕಾರ್ಯಕ್ರಮ. ಅದಕ್ಕಾಗಿ ʼರಾಷ್ಟ್ರೀಯ ಜಲಜನಕ​ ಮಿಷನ್ʼ ಸ್ಥಾಪನೆಯ ಘೋಷಣೆ.

    5. 2030ರ ವೇಳೆಗೆ ರೈಲ್ವೆಯಲ್ಲಿ ಮಾಲಿನ್ಯ ಶೂನ್ಯ

    ಮುಂಬರುವ 2030ರ ವೇಳೆಗೆಲ್ಲ ಭಾರತೀಯ ರೈಲ್ವೆ ಕ್ಷೇತ್ರದಲ್ಲಿ ಶೂನ್ಯ ಮಾಲಿನ್ಯ ಸ್ಥಿತಿ ನಿರ್ಮಾಣ ಮಾಡಲು ಪ್ರಧಾನಿ ಶಪಥ ಮಾಡಿದರು. ಹೊಗೆ ರಹಿತವಾದ, ಶುದ್ಧ, ಶುಚಿಯಾದ ರೈಲ್ವೆ ರೂಪುಗೊಳ್ಳಲಿದ್ದು ಜಗತ್ತಿನಲ್ಲಿಯೇ ಮಾದರಿ ರೈಲ್ವೆ ವ್ಯವಸ್ಥೆಯಾಗಿ ಹೊರಹೊಮ್ಮಲಿದೆ.

    6. ಡಿಜಿಟಲ್‌ ಮತ್ತು ಇ–ಕಾಮರ್ಸ್‌

    ಡಿಜಿಟಲ್‌ ವ್ಯಹಾರದಲ್ಲಿ ಭಾರತ ಜಗತ್ತಿನಲ್ಲಿಯೇ ಅತಿ ವೇಗವಾಗಿ ಬದಲಾಗುತ್ತಿರುವ ದೇಶ. ಈಗಾಗಲೇ ಭಾರತ ಬಹುದೂರ ಸಾಗಿದೆ. ಇದನ್ನು ಮತ್ತಷ್ಟು ಎತ್ತರಕ್ಕೆ ಒಯ್ಯುವ ಉದ್ದೇಶದಿಂದ ಸರಕಾರವು ಇ–ಕಾಮರ್ಸ್‌ ಪ್ಲಾಟ್‌ಫಾರ್ಮ್‌ʼಗಳನ್ನು ಆರಂಭ ಮಾಡುತ್ತಿದೆ. ದೇಶದ ಗ್ರಾಮೀಣ ಭಾಗದ ಪ್ರತಿ ಮೂಲೆಯಲ್ಲಿರುವ ಕುಶಲ ಕರ್ಮಿಗಳಿಗೆ ಜಗತ್ತಿನ ಜತೆ ನೇರ ಸಂಪರ್ಕ ಕಲ್ಪಿಸಲು ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

    7. 75 ವಂದೇ ಭಾರತ್ ರೈಲುಗಳು

    ರೈಲ್ವೆ ಮುಂದಿನ ಕಾಲು ಶತಮಾನದಲ್ಲಿ ಅಗಾಧವಾಗಿ ಬದಲಾಗಲಿದೆ ಎನ್ನುವುದರಲ್ಲಿ ಯಾವುದೇ ಬದಲಾವಣೆ ಇಲ್ಲ. ದೇಶದ 75ನೇ ಸ್ವಾತಂತ್ರೋತ್ಸವವನ್ನು ಮುಂದಿನ 75 ವಾರಗಳ ಕಾಲ ಆಚರಣೆ ಮಾಡಲಿದ್ದೇವೆ. 2021ರ ಮಾರ್ಚ್‌ 12ರಿಂದ 2023ರ ಅಗಸ್ಟ್‌ 15ರವರೆಗೂ ಸ್ವಾತಂತ್ರ್ಯ ದಿಆಚರಣೆಯ ಅಮೃತ ಮಹೋತ್ಸವ ಮುಂದುವರಿಯಲಿದೆ. ಇದರ ಭಾಗವಾಗಿ 75 ವಂದೇ ಭಾರತ್ ರೈಲುಗಳು ಮುಂದಿನ 75 ವಾರಗಳಲ್ಲಿ ಭಾರತದ ವಿವಿಧ ಸ್ಥಳಗಳನ್ನು ಜೋಡಣೆ ಮಾಡುತ್ತವೆ.

    8. ಒಟ್ಟಿಗೆ ನಡೆಯೋಣ, ಒಟ್ಟಿಗೆ ಸಾಧಿಸೋಣ

    ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಭಾರತದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ನಾವೆಲ್ಲರೂ ಒಟ್ಟಿಗೆ ಸಾಗೋಣ ಮತ್ತು ಒಟ್ಟಿಗೇ ಶ್ರಮಿಸೋಣ. ಒಬ್ಬರಿಂದಲ್ಲ, ಎಲ್ಲರ ಪ್ರಯತ್ನದಿಂದ ಅದು ಸಾಕಾರವಾಗಲಿ. ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ತತ್ತ್ವದಲ್ಲಿ ನಾವೆಲ್ಲ ನಂಬಿಕೆ ಇಟ್ಟು ನಡೆಯುತ್ತಿದ್ದೇವೆ. ಆದರೆ ಇವೆರಡೂ ಅಂಶಗಳ ಜತೆಗೆ ʼಸಬ್‌ಕಾ ಪ್ರಯಾಸ್‌ʼ ಎನ್ನುವುದು ಕೂಡ ಬಹಳ ಮುಖ್ಯ. ಈ ತತ್ತ್ವದಲ್ಲಿ ನಂಬಿಕೆ ಇಟ್ಟು ಎಲ್ಲರೂ ದೇಶ ಕಟ್ಟಲು ಕೆಲಸ ಮಾಡೋಣ

    9. ಪೌಷ್ಠಿಕ ಆಹಾರ

    ಭಾರತದ ಜನಸಂಖ್ಯೆ ಹೆಚ್ಚಾಗಿದೆ ನಿಜ, ಅದೇ ರೀತಿ ಆಹಾರದ ಬೇಡಿಕೆಯೂ ಇದೆ. ಅದಕ್ಕೆ ಅನುಗುಣವಾಗಿ ಕೃಷಿ ಉತ್ಪನ್ನಗಳ ಉತ್ಪಾದನೆ ಕ್ರಮಬದ್ಧವಾಗಿ ಹೆಚ್ಚಾಗಿ ಪ್ರತಿಯೊಬ್ಬರಿಗೂ ಪೌಷ್ಠಿಕ ಆಹಾರ ಸಿಗುವಂತೆ ಆಗಬೇಕು. 2024ರ ವೇಳೆ ಎಲ್ಲ ಕಡೆಗಳಲ್ಲೂ ಅತ್ಯುತ್ತಮ ಗುಣಮಟ್ಟದ ಅಕ್ಕಿ ಸಿಗುವಂತೆ ಮಾಡಲಾಗುವುದು.

    10. ದುರ್ಬಲರಿಗೆ ನೆರವಿನ ಹಸ್ತ

    ಶಿಕ್ಷಣವೂ ಸೇರಿದಂತೆ ಎಲ್ಲ ರಂಗಗಳಲ್ಲು ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸರಕಾರ ಸಹಾಯ ಹಸ್ತ ಚಾಚುತ್ತದೆ. ಈಗಾಗಲೇ ವೈದ್ಯ ಕೋರ್ಸುಗಳ ಪ್ರವೇಶಕ್ಕೆ ಬಡವರು, ಆರ್ಥಿಕ ದುರ್ಬಲರಿಗೆ ಮೀಸಲು ಘೋಷಣೆ ಮಾಡಲಾಗಿದೆ. ಎಲ್ಲ ಹಂತಗಳಲ್ಲೂ ಇಂಥ ಜನರನ್ನು ಮೇಲೆತ್ತುವ ಪ್ರಯತ್ನವನ್ನು ಸರಕಾರ ಬದ್ಧತೆಯಿಂದ ಮಾಡುತ್ತದೆ.

    ಸಫಲರಾಗಿದ್ದೆಲ್ಲಿ? ಎಡವಿದ್ದೆಲ್ಲಿ?


    ಕೊರೋನಾ ನಡುವೆಯೇ 75ನೇ ಸ್ವಾತಂತ್ರ್ಯ ದಿನದ ಸಂಭ್ರಮದ ಆಚರಣೆ ನಡೆದಿದೆ.ಈ 74 ವರ್ಷದಲ್ಲಿ ನಾವು ಸಫರಲಾಗಿದ್ದೆಲ್ಲಿ . ಎಡವಿದ್ದೆಲ್ಲಿ ಎಂಬ ಎಂಬ ಪ್ರಶ್ನೆಯನ್ನು ನಾಡಿನ ಪ್ರಜ್ಞಾವಂತರ ಮುಂದೆ ಕನ್ನಡ ಪ್ರೆಸ್.ಕಾಮ್ ಇಟ್ಟಿತು. ನಮಗೆ ಸಿಕ್ಕ ಸ್ವಾರಸ್ಯಕರ ಉತ್ತರವನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ.


    ವಿಫಲವೋ, ಸಫಲವೋ ಎಂದು ಗೊತ್ತಾಗದ ಎಪ್ಪತ್ತೈದು ತುಂಬುತ್ತಿರುವ ಹೊತ್ತು

    ಗಗನದಲ್ಲಿ ಹಾರುತ್ತಿರುವ ಹಕ್ಕಿಗೆ ಪಂಜರದ ಕಷ್ಟ ಗೊತ್ತಿಲ್ಲದಾಗ ಗಗನದ ಸುಖವೂ ಸಂಭ್ರಮಕ್ಕಿಂತ ಸಹಜದಂತೆ ಅಷ್ಟೇ ಭಾಸವಾಗುತ್ತದೆ. ಸ್ವಾತಂತ್ರ್ಯ ಬರುವ ಮುನ್ನದ ಪರಿಸ್ಥಿತಿ ಕೇಳಿ , ಓದಿ ಮಾತ್ರ ಗೊತ್ತಿರುವ, ಪ್ರತ್ಯಕ್ಷ ಸಾಕ್ಷಿಗಳಲ್ಲದ ನಾವು ಸ್ವತಂತ್ರವಾದ ಭಾವವನ್ನು ಪರಿಪೂರ್ಣವಾಗಿ ಅನುಭವಿಸಲಾರೆವು.

    ಆದರೆ ಆ ಕುರಿತ ಹೋರಾಟಗಳ ವಿವರಗಳನ್ನು ಓದಿದಾಗ ದಾಖಲಾಗದೇ ಇರುವ ಅದೆಷ್ಟು ಸಂಕಟಗಳು ಸಂದುಹೋಗಿರಬಹುದೆಂಬ ಊಹನೆಯಲ್ಲಿಯೇ ಒದ್ದಾಡುವಂತಾಗುತ್ತದೆ. ಶತಮಾನಗಳ ಹೋರಾಟದಿಂದ ದಕ್ಕಿದ ಸ್ವಾತಂತ್ರ್ಯದ ನಂತರದ ದಿನಗಳು, ವರ್ಷಗಳು ತಕ್ಕಮಟ್ಟಿಗೆ ನೆಮ್ಮದಿಯನ್ನೂ, ಹಲಮಟ್ಟಿಗೆ ಬೇಸರವನ್ನೂ ತಂದು ಕೊಟ್ಟಿದೆ.

    ಎಲ್ಲ ರೀತಿಯ ಸುಭಿಕ್ಷತೆಯನ್ನು ಯಾವ ಕಾಲಕ್ಕೂ ನಿರೀಕ್ಷಿಸಲಾಗುವುದಿಲ್ಲ ಎಂಬುದು ಸತ್ಯವೇ ಆದರೂ ಆಳುವವರಿಗೆ ಆ ಸ್ಥಾನಕ್ಕೇರಲು ಕೆಲವೊಂದು ಅರ್ಹತೆ ಇರುವಂತೆ ಮಾಡಬೇಕಿತ್ತು. ಕಡಿಮೆಯಾಗಬೇಕಿದೆ ಭ್ರಷ್ಟಾಚಾರ. ಬೆಲೆಗಳೂ ಕಡಿಮೆಯಾಗಬೇಕಿದೆ. ಮಿತಿಮೀರಿದ ಭ್ರಷ್ಟಾಚಾರ… ಅದಕ್ಕೆ ಒಗ್ಗಿ ಜಡ್ಡಾಗಿರುವ ನಮ್ಮ ಮನಸ್ಸುಗಳನ್ನು ನೋಡಿದರೆ ಹೇಗೆಲ್ಲಾ ಬದುಕುತ್ತಿದ್ದೇವೆ ಅನ್ನಿಸಿ ಖೇದವಾಗುತ್ತದೆ. ಮನುಷ್ಯ ಮನುಷ್ಯನಾಗಿ ಬಾಳುವುದನ್ನು ಕಲಿಸಲು , ಅದರ ಬೆಲೆ ಅರಿವಾಗಿಸಲು, ಸ್ವತಂತ್ರದ ಅರ್ಥ ಗೊತ್ತು ಮಾಡಿಸಲು ಮತ್ತಾರು ನಮ್ಮ ದೇಶವನ್ನು ಆಕ್ರಮಿಸಬೇಕೋ ?..ಇದು ಸ್ವತಂತ್ರ ಭಾರತದ ವೈಫಲ್ಯವೇ ಅಲ್ಲವಾ ಎನ್ನಿಸುವಷ್ಟರಲ್ಲೇ ಕಿವಿಗಪ್ಪಳಿಸುತ್ತವೆ ಪ್ರಪಂಚದಲ್ಲಿ ಜರುಗುತ್ತಿರುವ ಇತ್ತೀಚಿನ ವಿದ್ಯಮಾನಗಳನ್ನು ಹೊತ್ತ ಸುದ್ದಿಗಳು. ಹಾಗಾದರೆ ಇದು ನಮ್ಮ ವೈಫಲ್ಯವಾ..? ಮಾನವ ಜನಾಂಗದ ವೈಫಲ್ಯವಾ? ತೀರಾ ಸಿನಿಕರಾಗದೇ ಇದ್ದುದನ್ನು ಸಂಭ್ರಮಿಸೋಣ ಎನ್ನುವವರೂ ಕಡಿಮೆಯಿಲ್ಲ, ಮತ್ತು ಅದೂ ಸುಳ್ಳಲ್ಲ.

    ವಿಫಲವೋ, ಸಫಲವೋ ಎಂದು ಗೊತ್ತಾಗದ ಎಪ್ಪತ್ತೈದು ತುಂಬಿದ ಹೊತ್ತಲ್ಲಿ ಸ್ವಾತಂತ್ರಕ್ಕಾಗಿ ಹೊಡೆದಾಡಿದ, ಬಲಿಯಾದ ಎಲ್ಲ ಜೀವಗಳಿಗೊಂದು ಕೃತಜ್ಞತಾ ಪೂರ್ವಕ ನಮನ.

    ಹೊಸ ಹೆಜ್ಜೆಗಳ ದಾರಿಗಳನ್ನು‌ನೋಡುವ ದಿನ

    ಸ್ವಾತಂತ್ರ್ಯ ಅಂದರೆ ಸಂಭ್ರಮ. ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳಲ್ಲಿ ಏನಾಯಿತು ಅಂತ ಕೇಳಿದರೆ ಒಂದಷ್ಟು ಜನ ನೆಗೆಟಿವ್ ಆಗಿಯೂ, ಪಾಸಿಟಿವ್ ಆಗಿಯೂ ಉತ್ತರಿಸುತ್ತಾರೆ.ಪ್ರಜಾಪ್ರಭುತ್ವ ಹಾಳಾಗೋಯ್ತು ಕಣ್ರೀ. ಇದು ಮತ್ತೆ ಬಂಡವಾಳಶಾಹಿಗಳ ನಾಡಾಗಿದೆ. ಈಗ ಬ್ರಿಟಿಷರಿಲ್ಲ. ಕರಿ ತೊಗಲಿನ ಬ್ರಿಟಿಷರಿದ್ದಾರೆ ಅನ್ನುವವರುಂಟು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರಿದ್ದರೇ ಉದ್ಧಾರವಾಗುತ್ತಿದ್ದೆವು ಅನ್ನುವವರೂ ಉಂಟು.

    ರಾಜಪ್ರಭುತ್ವದಿಂದಾಗಿ ಎಲ್ಲೆಲ್ಲೋ ಚದುರಿಹೋಗಬಹುದಾಗಿದ್ದ ನಮ್ಮನ್ನು ಕೂಡಿಸಿ ದೇಶವಾಗಿಸಿದ್ದಕ್ಕೆ ಅವರಿಗೆ ಖಂಡಿತಾ ಥ್ಯಾಂಕ್ಸ್ ಹೇಳೋಣ. ಇಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಕೂಡ ಸುಳ್ಳಿನ ಮಾತಲ್ಲ. ಆದರೆ..ಇದೊಂದು ವಿಶಿಷ್ಟ ದೇಶ. ಇಲ್ಲಿ ಮೇಲ್ನೋಟಕ್ಕೆ ಕಾಣುವುದೇ ಬೇರೆ. ಇದರ ಒಳಹರಿವೇ ಬೇರೆ. ಅಗತ್ಯ ಬಂದಾಗ ಇಲ್ಲಿ ಎಲ್ಲವೂ ತಂತಾನೇ ಸಂಭವಾಮಿ ಯುಗೇ ಯುಗೇ ಆಗುತ್ತದೆ. ಯಾವ್ಯಾವ ಜನ ಹೇಗೋ ಒಟ್ಟಾಗುತ್ತಾರೆ.

    ಸ್ವಾತಂತ್ರ್ಯ ದಿನಾಚರಣೆ ಅನ್ನುವುದು ನಮ್ಮ ಸಂಭ್ರಮದ ದಿನ. ನಾವು ಮತ್ತೆ ಮತ್ತೆ ನಮ್ಮ‌ ಅಸ್ಮಿತೆಯನ್ನು ನೆನಪಿಸಿಕೊಂಡು ಮತ್ತಷ್ಟು ಜಾಗರೂಕರಾಗುವ, ಒಂದಾಗುವ , ಮುನ್ನಡೆಯ ಹೊಸ ಹೆಜ್ಜೆಗಳ ದಾರಿಗಳನ್ನು‌ನೋಡುವ ದಿನ. ಎಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳು.

    ಆರ್ಥಿಕ ಸಾಕ್ಷರತೆ ಈ ಹೊತ್ತಿನ ಅಗತ್ಯ

    ಸ್ವಾತಂತ್ರೋತ್ಸವ ಎಂದಾಕ್ಷಣ ಭಾಲ್ಯದಲ್ಲಿನ ಪ್ರಭಾತ್‌ ಪೇರಿ, ರಾಷ್ಟ್ರದ್ವಜಕ್ಕೆ ಸೆಲ್ಯೂಟ್‌ ಮಾಡುತ್ತಿರುವ ನೆನಪುಗಳು ಮರುಕಳಿಸಿ ಮನಸ್ಸನ್ನು ಭಾವೋದ್ವೇಗಕ್ಕೊಳಪಡುವುದು. ಈ ಸುದೀರ್ಘ ಸಮಯದಲ್ಲಿ ನಮ್ಮ ದೇಶವು ವೈವಿಧ್ಯತೆಯಲ್ಲಿ ವಿವಿಧ ರಂಗಗಳಲ್ಲಿ ಹೆಚ್ಚಿನ ಸಾಧನೆಯನ್ನು, ಪ್ರಗತಿಯನ್ನು ಸಾಧಿಸಿದೆ.

    ವಿಶೇಷವಾಗಿ ತಾಂತ್ರಿಕ ವಿಭಾಗದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಕಿರೀಟಪ್ರಾಯವಾಗಿದೆ. ಉದ್ಯೋಗೀಕರಣ, ಉತ್ಪಾದನಾ ವಲಯ, ಫಾರ್ಮಾ ವಲಯದ ಸಾಧನೆಯಂತೂ ಈಚಿನ ವರ್ಷದಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದು ಜೀವ ಉಳಿಸುವ ಔಷದಿಗಳು ವಿಶೇಷವಾಗಿ ಕೊರೋನ ಸಾಂಕ್ರಾಮಿಕ ಸಮಯದಲ್ಲಿ, ಅದನ್ನು ತಡೆಗಟ್ಟುವ ದಿಶೆಯಲ್ಲಿ ಕೈಗೊಂಡ ಅನುಸಂಧಾನ, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹುದಾಗಿದೆ. ಇನ್ನು ಶೈಕ್ಷಣಿಕವಾಗಿ, ಕೈಗಾರಿಕಾ ವಲಯದಲ್ಲಿ, ಕ್ರೀಡಾ ವಿಭಾಗದಲ್ಲಿಯೂ ಹೆಚ್ಚಿನ ಪ್ರಗತಿ ಕಂಡುಕೊಂಡಿದ್ದೇವೆ. ವಿಶೇಷವಾಗಿ ಜಾಗತೀಕರಣದ ನಂತರ ನಮ್ಮ ದೇಶವು ಎಲ್ಲಾ ವ್ಯವಹಾರಿಕ ಚಟುವಟಿಕೆಗಳಿಗೆ ತೆರೆದುಕೊಂಡಿದೆ. ಹಾಗಾಗಿ ದೇಶದಲ್ಲಿ ಆಂತರಿಕ ವಾಣಿಜ್ಯ ಚಟುವಟಿಕೆಗಳು ವೃದ್ದಿಯಾಗಿ ದೇಶದ ಆರ್ಥಿಕ ಅಭಿವೃದ್ದಿಗೆ ಕಾರಣವಾಗಿದೆ. ರಪ್ತು ಪೇಟೆಯೂ ಚೆನ್ನಾಗಿ ಬೆಳೆದಿದೆ.

    ಭಾರತದೇಶವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರಿಕವಾಗಿ ಆಕರ್ಷಿತವಾಗಿ ಮಿಂಚಲು ಮೂಲ ಕಾರಣ ನಮ್ಮ ದೇಶದ ʼಜನಸಂಪತ್ತುʼ. 64 ದೇಶಗಳ ಗ್ಲೋಬಲ್‌ ಕಾಂಪಿಟೆಟಿವ್‌ ಇಂಡೆಕ್ಸ್‌ ನಲ್ಲಿ ನಮ್ಮ ದೇಶವು 43 ನೇ ಸ್ಥಾನದಲ್ಲಿದ್ದರೂ, ಪೇಟೆಯ ಗಾತ್ರದಲ್ಲಿ ಮೂರನೆ ಸ್ಥಾನದಲ್ಲಿರುವುದು ಮುಖ್ಯ ಆಕರ್ಷಣೆಯಾಗಿದೆ. ಅಂದರೆ ಇಲ್ಲಿ ಗ್ರಾಹಕರ ಸಂಖ್ಯೆ, ಬಳಕೆದಾರರ ಗಾತ್ರ ಅತಿ ಹೆಚ್ಚಾಗಿರುವುದರಿಂದ ಎಲ್ಲಾ ದೇಶಗಳ ಉದ್ಯಮಗಳ ಗಮನ ಸೆಳೆದಿಟ್ಟುಕೊಂಡಿದೆ. ಮಾರ್ಕೆಟಿಂಗ್‌ ವಿಭಾಗಗಳು ವೈವಿಧ್ಯಮಯ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಆಫರ್‌, ಡಿಸ್ಕೌಂಟ್‌, ಬೈ ಬ್ಯಾಕ್‌, ಕೊಡುಗೆಗಳಿಲ್ಲದ ವ್ಯವಹಾರವೇ ಇಲ್ಲ ಎನ್ನುವ ಮಟ್ಟಕ್ಕೆ ಬೆಳೆದು, ಗ್ರಾಹಕರನ್ನು ತನ್ನತ್ತ ಸೆಳೆಯಲು ವ್ಯಾಪಾರಸ್ಥರು ತುದಿಗಾಲಲ್ಲಿರುತ್ತಾರೆ. ಇದು ಜಾಹಿರಾತು ವಲಯ ವಿಜೃಂಭಿಸಲೂ ಸಹ ಕಾರಣವಾಗಿದೆ. ಆದರೆ ಬದ್ಧತೆ, ಭಾದ್ಯತೆಗಳು ಕ್ಷೀಣಿತಗೊಳ್ಳುತ್ತಿವೆ. ಕೆಲವು ಅಸಹಜ ವಿಧಗಳ ಜಾಹಿರಾತುಗಳೂ ಪ್ರಸಾರವಾಗುತ್ತವೆ.

    ಈ ಸ್ಪರ್ಧಾತ್ಮಕ ಸಂದರ್ಭದಲ್ಲಿ ನಮ್ಮ ನಾಗರಿಕರು ವ್ಯವಹಾರಿಕ ಚತುರತೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯವಶ್ಯಕ. ವರ್ಣರಂಜಿತ ಜಾಹಿರಾತುಗಳನ್ನು ಅಳೆದು ತೂಗಿ ಅರ್ಹತೆಯ ಆಧಾರದ ಮೇಲೆ ಸ್ಪಂದಿಸುವುದು ಅನಿವಾರ್ಯ. ಈ ದಿಶೆಯಲ್ಲಿ ನಾವುಗಳು ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸಿಕೊಳ್ಳಲೇಬೇಕು. ಸಧ್ಯ ನಮ್ಮಲ್ಲಿ ಸಾಕ್ಷರತಾ ಮಟ್ಟ ಅತಿ ಹೆಚ್ಚಾಗಿದ್ದು, ಶಿಕ್ಷಣದ ಅವಶ್ಯಕತೆಯನ್ನು ಜನಸಾಮಾನ್ಯರೂ ಅರಿತಿದ್ದಾರೆ. ಆದರೆ ಸಾಕ್ಷರಸ್ಥರ ಮಧ್ಯೆ ಆರ್ಥಿಕ ಸಾಕ್ಷರತೆ, ಸ್ವಾಸ್ಥ್ಯ ಸಾಕ್ಷರತೆಗಳೂ ಇಂದಿನ ಅವಶ್ಯಕತೆ ಇದೆ ಎಂಬುದನ್ನು ಕಡೆಗಣಿಸಿದ್ದೇವೆ. ಗ್ಲೋಬಲ್‌ ಫೈನಾನ್ಶಿಯಲ್‌ ಲಿಟರಸಿ ಸಮ್ಮಿಟ್‌ ನ ಅಂಶಗಳ ಪ್ರಕಾರ 2012 ರಲ್ಲಿ ಭಾರತದಲ್ಲಿ ಶೇ.35 ರಷ್ಟು ನಾಗರೀಕರು ಆರ್ಥಿಕ ಸಾಕ್ಷರತೆಯಿಂದ ಮೆರೆದಿದ್ದಾರೆ. ಈ ಅಂಶವು 2016 ರಲ್ಲಿ ಶೇ.23ಕ್ಕೆ ಕುಸಿದಿದೆ. ಅಂದರೆ ನಾಲ್ಕು ವರ್ಷಗಳಲ್ಲಿ ನಮ್ಮ ದೇಶದ ಆರ್ಥಿಕ ಸಾಕ್ಷರತಾ ಮಟ್ಟವು ಶೇ.35 ರಿಂದ 23ಕ್ಕೆ ಕುಸಿದಿದೆ. 2020 ಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದೆ. ಸೆಪ್ಟೆಂಬರ್‌ 2020 ರಲ್ಲಿನ ಅಂಶಗಳ ಪ್ರಕಾರ ಭಾರತದಲ್ಲಿ ಶೇ.24 ರಷ್ಟರ ಜನ ಮಾತ್ರ ಆರ್ಥಿಕ ಸಾಕ್ಷರತೆಯನ್ನು ಹೊಂದಿದ್ದಾರೆ. ನಾವು ಸಾಕ್ಷರತೆಗೆ ನೀಡುವ ಆಧ್ಯತೆಯನ್ನು ಆರ್ಥಿಕ ಸಾಕ್ಷರತೆಗೂ ನೀಡಲೇಬೇಕು. ಆಗಲೇ ಜನಮಾನಸದಲ್ಲಿ ನೆಮ್ಮದಿ ಕಾಣಬಹುದು. ಇದು ದೇಶವನ್ನು ಸದೃಢಗೊಳಿಸಲು ಸಹಕಾರಿಯಾಗುವುದು.

    ಇಂದಿನ ವ್ಯವಹಾರಿಕ ಚಟುವಟಿಕೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಎಲ್ಲಾ ಒಂದೇ. ಅವುಗಳಿಗೆ ಕೇವಲ ಲಾಭಗಳಿಕೆಯೊಂದೇ ಗುರಿ. ಸರ್ಕಾರ ಎಂ ಆರ್‌ ಪಿ ಬೆಲೆ ಮುದ್ರಣವನ್ನು ಪ್ಯಾಕ್ಡ್‌ ಐಟಂಗಳ ಮೇಲೆ ಕಡ್ಡಾಯಗೊಳಿಸಿತು. ಅದೇ ವ್ಯವಹಾರಿಕ ಲಾಭಕ್ಕೆ ಹೇಗೆ ಪರಿವರ್ತನೆಗೊಂಡಿದೆ ಎಂದರೆ ಪದಾರ್ಥಗಳ ಪ್ಯಾಕ್‌ ಮೇಲೆ ಮುದ್ರಿಸಿರುವ ಬೆಲೆಗೂ, ಮಾಲ್‌ ಗಳಲ್ಲಿ ಮಾರಾಟಮಾಡುವ ಬೆಲೆಗಳಿಗೂ ಅಜಗಜಾಂತರ ವ್ಯತ್ಯಾಸವಿರುವುದು ಸಾಮಾನ್ಯವಾಗಿದೆ. ಈ ಬೆಲೆಗಳ ಅಂತರ ನೋಡಿದಲ್ಲಿ ಉತ್ಪಾದಕರಿಗೂ ಉತ್ಪಾದನೆಯ ವೆಚ್ಚದ ಅರಿವಾಗದ ರೀತಿಯಲ್ಲಿರುತ್ತದೆ. ಉದಾಹರಣೆಯಾಗಿ ಒಂದು ಲೀಟರ್‌ ನಂದಿನಿ ತುಪ್ಪದ ಪ್ಯಾಕ್‌ ಮೇಲೆ ಮುದ್ರಿತ ಬೆಲೆ ರೂ.450 ಎಂದಿದ್ದರೂ ಮಾಲ್‌ ಗಳು ರೂ.410 ರಲ್ಲಿ ಮಾರಾಟಮಾಡುವ ಜಾಹಿರಾತು ನೀಡುತ್ತವೆ. ಅಂದರೆ ಈ ಎಂ ಆರ್‌ ಪಿ ಬೆಲೆಯು ಅಮಾಯಕ ಗ್ರಾಹಕರನ್ನು ಬಲಿಪಶುಮಾಡುತ್ತದೆಯಲ್ಲವೇ? ಈ ಸಂದರ್ಭದಲ್ಲಿ ಸರ್ಕಾರ ಎರಡು ರೀತಿಯ ಎಂ ಆರ್‌ ಪಿ ಮುದ್ರಣಕ್ಕೆ ಮುಂದಾಗಬೇಕು. ಮೊದಲನೇ ಎಂ ಆರ್‌ ಪಿ: minimum retail price: ಇದು ಉತ್ಪಾದಕರಿಗೆ ತಗಲಿದ ವೆಚ್ಚ, ಎರಡನೆಯದು ಈಗಿನ ಎಂ ಆರ್‌ ಪಿ: maximim retail price. ಇದರಿಂದ ಗ್ರಾಹಕರಿಗೂ ಅರಿವಾಗುವುದು ಖರೀದಿಸುವ ಉತ್ಪನ್ನಕ್ಕೆ ಯಾವ ಬೆಲೆ ಸೂಕ್ತ ಎಂಬುದು.

    ಒಟ್ಟಿನಲ್ಲಿ ಆರ್ಥಿಕ ಸಾಕ್ಷರತೆಯು ಜೀವನದಲ್ಲಿ ನೆಮ್ಮದಿ ಮೂಡಿಸಿ, ಶಾಂತಿಯನ್ನು ನೆಲೆಸುವಂತೆ ಮಾಡುವುದು. ಷೇರುಪೇಟೆಯ ಚಟುವಟಿಕೆಯ ದೃಷ್ಠಿಯಿಂದ ಹೇಳಬೇಕಾದರೆ, ಹೊಸದಾಗಿ ಪ್ರವೇಶಿಸುವವರು, ಬ್ರೋಕರೇಜ್‌ ಉಳಿಸಬಹುದೆಂಬ ಕಾರಣಕ್ಕಾಗಿ ಆನ್‌ ಲೈನ್‌ ಟ್ರೇಡಿಂಗ್‌ ಮಾಡೋಣ ಎಂದು ಪ್ರಯತ್ನಿಸಿ, ಬ್ರೋಕರೇಜ್‌ ಉಳಿಸಿ, ಬಂಡವಾಳ ನಶಿಸಿಕೊಂಡಿರುವ ಅನೇಕ ನಿದರ್ಶನಗಳಿವೆ. ಕಾರಣ ಯಾವ ಷೇರನ್ನು ಯಾವ ಸಂದರ್ಭದಲ್ಲಿ ಖರೀದಿಸಬಹುದು ಅಥವಾ ಮಾರಾಟಮಾಡಬಹುದು ಎಂಬುದು ಸ್ಪಷ್ಠವಾಗಿ ಅರಿತು ನಿರ್ಧರಿಸಿಲ್ಲಿ ಮಾತ್ರ ಹೂಡಿಕೆ ಮಾಡಿದ ಬಂಡವಾಳ ಸ್ವಲ್ಪ ಮಟ್ಟಿನ ಸುರಕ್ಷತೆ ಕಾಣಬಹುದು.

    ಈ ವರ್ಷದ ಸ್ವಾತಂತ್ರೋತ್ಸವದಿಂದ ಎಲ್ಲರೂ ಆರ್ಥಿಕವಾಗಿ ಸಾಕ್ಷರಸ್ಥರಾಗಲು ಪ್ರಯತ್ನಿಸೋಣ. ಅತಿಯಾದ ಆಸೆಗೆ ಓಗೊಡದೆ ನೆಮ್ಮದಿಯನ್ನು ಕಂಡುಕೊಳ್ಳೋಣ ಇದರಿಂದ ದೇಶದ ಅಭಿವೃದ್ದಿಗೆ ಕೈ ಜೋಡಿಸೋಣ.

    ತಂತ್ರಜ್ಞಾನದಿಂದ ಕೃಷಿ ಕೆಲಸ ಹಗುರು, ಬೆಲೆ ಸಿಗದೆ ಕಂಗಾಲು

    ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ ಉತ್ತರ ಪ್ರದೇಶದಲ್ಲಿ ಚಳವಳಿ ನಡೆಸುತ್ತಿದ್ದ ರೈತ ಸಮುದಾಯಕ್ಕೆ ಬೆಂಬಲ ನೀಡಿ ಅವರೊಂದಿಗೆ ಭಾಗವಹಿಸುವ ಮೂಲಕ ಸ್ವಾತಂತ್ರ್ಯ ಚಳವಳಿಗೆ ನಾಂದಿ ಹಾಡಿದರು. ಆಗ ಬ್ರಿಟಿಷರು ರೈತರಿಗೆ ಇಂಥದ್ದೇ ಬೆಳೆಯನ್ನು ಬೆಳೆಯಬೇಕು ಎಂದು ಕಾನೂನು ಮಾಡುತ್ತಿದ್ದರು. ರೈತರು ತಾವು ಇಷ್ಟಪಟ್ಟಿದ್ದನ್ನು ಬೆಳೆಯಲು ಸಾಧ್ಯವಿರಲಿಲ್ಲ.

    ಈ ಘಟನೆಯಾಗಿ ಒಂದು ಶತಮಾನವಾದರೂ, ನಮಗೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ರೈತರಿಗೆ ತಮಗೆ ಬೇಕಾದ ಬೆಳೆ ಬೆಳೆಯಲು, ಅದಕ್ಕೆ ನ್ಯಾಯಯುತವಾದ, ವೈಜ್ಞಾನಿಕವಾದ ಬೆಲೆ ಪಡೆಯುವ ಸ್ವಾತಂತ್ರ್ಯ ಸಿಕ್ಕಿಲ್ಲ. ನಮ್ಮ ದೇಶದಲ್ಲಿ ಕೈಗಾರಿಕಾ ಉತ್ಪನ್ನವನ್ನು ತಯಾರಿಸುವವರು ಉತ್ಪಾದನಾ ವೆಚ್ಚ ಲೆಕ್ಕ ಹಾಕಿ ಅವುಗಳಿಗೆ ಬೆಲೆ ನಿಗದಿಪಡಿಸುತ್ತಾರೆ. ದಿನಗೂಲಿಯವರಿಗೂ ಇಂತಿಷ್ಟು ಎಂದು ದಿನಗೂಲಿ ಉಂಟು. ರೈತರ ಬೆಳೆಗೆ ಸರಿಯಾದ ಬೆಲೆ ಇಲ್ಲ.

    ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇತ್ತೀಚೆಗೆ ಕೆಲವು ಬೆಲೆಗಳಿಗೆ ಬೆಂಬಲ ಬೆಲೆ ಘೋಷಿಸಿವೆ. ಆದರೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಸರ್ಕಾರಗಳು, ಇಲಾಖೆಗಳು ಅಪಾರವಾದ ಕೃಷಿ ಉಪಕರಣಗಳನ್ನು ಒದಗಿಸುತ್ತಿವೆ. ತಂತ್ರಜ್ಞಾನದಿಂದ ಕೃಷಿ ಕೆಲಸ ತಕ್ಕಮಟ್ಟಿಗೆ ಹಗುರವಾಗಿದೆ. ಆದರೆ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಮಾರುಕಟ್ಟೆ ನಿಯಂತ್ರಣದಲ್ಲಿಲ್ಲ. ಮಧ್ಯವರ್ತಿಗಳಿಂದ ರೈತರು ಹೈರಾಣಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕೊರೋನಾದಿಂದ “ಸಾಕಪ್ಪಾ ಸಾಕು, ಈ ಕೃಷಿ ಲಾಸು” ಎನ್ನುವವರೇ ಬಹಳ ಮಂದಿ. ಆದರೆ ವಿಮುಖರಾಗಿದ್ದವರು ಕೃಷಿಯತ್ತ ಮುಖ ಮಾಡಿರುವುದು ಆಶಾದಾಯಕ ಬೆಳವಣಿಗೆ.

    ಕೃಷಿ ಒಂದಿಷ್ಟು ಮಾಹಿತಿ ಅರಿವನ್ನು ಬೇಡುತ್ತದೆ. ಅದರ ಕೊರತೆ ಇದೆ. ಇದನ್ನು ಲಾಭದಾಯಕ ಕಸುಬನ್ನಾಗಿ ಮಾಡಿದರೆ ಈ ಬೃಹತ್ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇರುವುದಿಲ್ಲ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಇಲಾಖೆಗಳು, ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಆಗ ಮಾತ್ರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅರ್ಥಪೂರ್ಣವಾಗುತ್ತದೆ.

    ನಾವು ಉತ್ಸವಕ್ಕೆ ಸೀಮಿತಗೊಂಡು ಪ್ರಗತಿಯ ಹಿಮ್ಮುಖ ನಡೆಯಲ್ಲಿದ್ದೇವೆ

    ದೇಶ ಸ್ವಾತಂತ್ರ್ಯೋತ್ಸವ ಎಪ್ಪತೈದರ ಸಂಭ್ರಮ ದಲ್ಲಿದೆ,ಆದರೆ ನಮಗಿಂತ ಹತ್ತು ಹದಿನೈದು ವರ್ಷಗಳ ನಂತರ ಸ್ವಾತಂತ್ರ್ಯ ಪಡೆದ ದೇಶಗಳು ನಾಗರಿಕತೆ ನಾಗಲೋಟದಲ್ಲಿವೆ ನಾವು ಉತ್ಸವಕ್ಕೆ ಸೀಮಿತಗೊಂಡು ಪ್ರಗತಿಯ ಹಿಮ್ಮುಖ ನಡೆಯಲ್ಲಿದ್ದೇವೆನಿಸುತ್ತದೆ.

    ಅದಕ್ಕೆ ಸ್ಪಷ್ಟ ಉದಾಹರಣೆ ಉಚಿತ ಸವಲತ್ತುಗಳಿಗೆ ಸಾಲುಗಟ್ಟಿ ನಿಲ್ಲುವ ಜನ, ಮೀಸಲಾತಿಗೆ ಧರ್ಮ ಗುರುಗಳ ನೇತೃತ್ವದ ಹೋರಾಟ,ಸೇವಾ ವಲಯದಲ್ಲಿ ಲಾಭ ಗಳಿಸುವ ಪೈಪೋಟಿ, ದೇಶ, ಭಾಷೆ,ಭೂಮಿ, ನೀರು, ಕಾಡು,ಕೆರೆ ಎಲ್ಲವುಗಳ ಸ್ವಾರ್ಥ ಬಳಕೆ ಹೀಗೆ.

    ನಮ್ಮದು ಹಿಮ್ಮುಖ ಚಲನೆ ಎನಿಸುತ್ತದೆ,ಇನ್ನಾದರೂ ನೈತಿಕ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣ ಎಲ್ಲರಿಗೂ ದೊರೆತು ದೇಶ ಮಾನವ ಧರ್ಮದ ಗುರುವಾಗಲಿ ಆ ಕಡೆ ನಡೆ ಎಲ್ಲರದಾಗಲಿ.

    ಎಲ್ಲರ ಮಾತು ಹೃದಯದ ಮಾತಾಗಬೇಕು

    ಮುಕ್ಕಾಲು ಶತಮಾನದ ಸಂಭ್ರಮದ ಅಮೃತ ಮಹೋತ್ಸವವು ಈ ಸ್ವಾತಂತ್ರ್ಯೋತ್ಸವದಲ್ಲಿದೆ. ಇಂತಹ ವಿಭಿನ್ನ ಉತ್ಸವವನ್ನು ಸಂಭ್ರಮಿಸಲು ಈಗಿನ ವಾತಾವರಣವು ಸಹಕಾರ ಕೊಡುತ್ತಿಲ್ಲ. ಸ್ವಾತಂತ್ರ್ಯವಾಗಿ ತಿರುಗುವ, ಮನಸೋ ಇಚ್ಛೆ ಸ್ವಾತಂತ್ರ್ಯವಾಗಿ ಎಲ್ಲರೊಂದಿಗೆ ಬೆರೆತು ಬಾಳಲು ಸಾಧ್ಯವಾಗುತ್ತಿಲ್ಲ!

    ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಬೆದರಿಕೆ ದಬ್ಬಾಳಿಕೆಯಿಂದ ಎಲ್ಲರ ಬಾಯ್ಕಟ್ಟಿತು, ಕೈಕಾಲುಗಳು ಕಟ್ಟಿತ್ತು, ಸ್ವತಂತ್ರ್ಯವಾಗಿ ಹೊರಗೆ ಕಾಲಿಡಲು ಹೆದರಬೇಕಿತ್ತು. ಈಗಲೂ ಬಾಯ್ಗೆ ಕಟ್ಟು ಬಿದ್ದಿದೆ, ಕ್ರೂರ ಕರೋನಾದ ದಾಳಿಯಿಂದ!

    ಆಗ `ಕ್ವಿಟ್ ಇಂಡಿಯಾ ಚಳುವಳಿ’ಯು ಬ್ರಿಟಿಷರ ವಿರುದ್ಧವಾಗಿತ್ತು. ಈಗಲೂ ಚಳುವಳಿ ಮಾಡಬೇಕಿದೆ ಈ ಕ್ರೂರ ಕರೋನಾದ ವಿರುದ್ಧ, ಇದನ್ನು ದೇಶದಿಂದಷ್ಟೇ ಅಲ್ಲಾ ವಿಶ್ವದಿಂದಲೇ ತೊಲಗಿಸುವ ಪಣ ತೊಡಬೇಕಿದೆ.

    ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳ ಹಂತಕ್ಕೆ ಬಂದಿದ್ದರೂ ಸ್ವಾತಂತ್ರ್ಯವಾಗಿ ನಮ್ಮ ಧ್ವನಿಯನ್ನು ಎತ್ತರಿಸಿ ಹೇಳುವ ಸ್ಥಿತಿಯಲ್ಲೂ ಇಲ್ಲ. ಎಲ್ಲಾ ಮಾತಿಗೂ ಒಂದು ಫಿಲ್ಟರ್ ಹಾಕಿಯೇ ಹೊರತರಬೇಕಿದೆ. ಸಾಮಾಜಿಕ ತಾಣಗಳಲ್ಲಿ ನಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಮೊದಲು ಅಭಿಪ್ರಾಯವು ಎಡಕ್ಕೋ, ಬಲಕ್ಕೋ ವಾಲದಂತೆ ಎಚ್ಚರ ವಹಿಸಿ ಎರಡಕ್ಕೂ ಧಕ್ಕೆಯಾಗದಂತೆ ಎಚ್ಚರವಹಿಸಬೇಕಿದೆ. ಆದರೆ ಎಡ-ಬಲಗಳ ನಡುವೆ ಒಂದು ನಿರ್ಮಲವಾದ ಹೃದಯವಿದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಹಾಗಾಗಿ ಎಲ್ಲರ ಮಾತು ಹೃದಯದ ಮಾತಾಗಬೇಕು.

    ಸ್ವಾತಂತ್ರ್ಯತೆ ಎಂದರೆ ಸ್ವೇಚ್ಛಾಚಾರವಲ್ಲ, ಬೇರೊಬ್ಬರಿಗೆ ತೊಂದರೆಯಾಗದಂತೆ ನಮ್ಮ ಬದುಕನ್ನು ನಾವು ಕಟ್ಟಿಕೊಳ್ಳಬೇಕು. ಅಲ್ಲದೇ ಬೇರೊಬ್ಬರ ಬದುಕಿಗೆ ಆಧಾರವಾಗಬೇಕು. ನಾವು ಬದುಕುವುದರ ಜೊತೆಗೆ ಮತ್ತೊಬ್ಬರ ಬದುಕಿಗೂ ಕೈಯಾಸರೆ ಆಗಬೇಕು.

    ಅತಿ ಎತ್ತರದ ಉಬ್ಬು ರಸ್ತೆಯಲ್ಲಿ ಭಾರವಾದ ಸರಕು ತುಂಬಿದ ಕೈಗಾಡಿಯನ್ನು ನೂಕಲಾರದ ವ್ಯಕ್ತಿಗೆ ಒಂದಷ್ಟು ದೂರ ಕೈಯಾಸರೆ ಆದರೂ ಎಷ್ಟೋ ಸಹಕಾರವಾಗುತ್ತೆ!

    ಇಂತಹ ನಿಸ್ವಾರ್ಥ ಸೇವೆಯನ್ನು ಆಗಾಗ ಮಾಡುವ ಮಾನವೀಯತೆಯನ್ನು ರೂಢಿಸಿಕೊಂಡರೂ ಸಾಕು. ದೇಶವೆಂದರೆ ಮಣ್ಣಷ್ಟೇ ಅಲ್ಲ ಮನಸುಗಳ ಸಮೂಹವೆಂದು ಅರಿತು ಈ ಮನಸುಗಳಿಗೆ ಇಷ್ಟವಾಗುವಂತಹ ಇನಿತನ್ನಾದರೂ ಮಾಡಲು ನಿರ್ಧಾರ ಮಾಡಿ.

    ಸಮಾಜದ ಭಾಗವಾದ ನಾವು ಸಮಾಜಕ್ಕಾಗಿ ಕಿಂಚಿತ್ತನ್ನಾದರೂ ಮಾಡುವ ಪಣ ತೊಡಬೇಕು!


    ಈ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ : ಸಿದ್ದರಾಮಯ್ಯ

    BENGALURU AUG 14
    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ತಮ್ಮ ನಿವಾಸದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸರ್ಕಾರದಲ್ಲಿ ಗೊಂದಲ ಮುಂದುವರಿದಿದೆ. ಈ ಸರ್ಕಾರ ಅವಧಿ ಪೂರ್ಣಗೊಳಿಸುವುದು ಅನುಮಾನ. ಯಾವುದೇ ಸಂದರ್ಭದಲ್ಲಿ ಪತನಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

    ಸಿದ್ದರಾಮಯ್ಯ ಅವರು ಹೇಳಿದ್ದಿಷ್ಟು :

    ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ್, ರಾಮದಾಸ ಮತ್ತಿತರ ಶಾಸಕರು ದೆಹಲಿಗೆ ಹೋಗಿ ಬಂದು ಮಾಡುತ್ತಿದ್ದಾರೆ. ಹೀಗಾಗಿ ಈ ಸರ್ಕಾರ ಬಹಳ ದಿನ ಬಾಳುವುದಿಲ್ಲ.

    ಕೊರೊನಾ : ಬಿಗಿ ಕ್ರಮ ಅಗತ್ಯ :

    ಕೊರೊನಾ ಮೂರನೇ ಅಲೆ ಆರಂಭವಾಗುತ್ತಿದೆ. ಕೊಡಗು, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಮೂರನೇ ಅಲೆಯಿಂದ ಜನ ತೊಂದರೆಗೆ ಒಳಗಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ವಾರಾಂತ್ಯದ ಲಾಕ್‌ಡೌನ್ ಘೋಷಣೆ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವುದು ಉತ್ತಮ.

    ಸರ್ಕಾರದ ಕ್ರಮಗಳ ಜೊತೆ ಜೊತೆಗೆ ಜನತೆಯೂ ಸಹ ಕೊರೊನಾ ಕುರಿತು ಎಚ್ಚರ ವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ರಾಜ್ಯದಲ್ಲಿ ಲಸಿಕೆ ಕೊರತೆ ಉಂಟಾಗಿದೆ. ಎಲ್ಲಿರಿಗೂ ಲಸಿಕೆ ಕೊಡಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ. ಕೇವಲ ಸಭೆಗಳನ್ನು ನಡೆಸುವುದರಿಂದ ಏನೂ ಆಗದು. ಜನರಿಗೆ ಲಸಿಕೆ ಕೊಡಿಸುವ ಕಾರ್ಯ ಮೊದಲ ಆಗಬೇಕು.

    ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಬರದಿದ್ದರೆ ಶಾಲೆ, ಕಾಲೇಜುಗಳನ್ನು ಆರಂಭಿಸುವುದು ಸೂಕ್ತವಲ್ಲ. ಇದರಿಂದ ಮಕ್ಕಳನ್ನು ನಾವೇ ತೊಂದರೆಗೆ ದೂಡಿದಂತೆ ಆಗುತ್ತದೆ.
    ಜನಜಂಗುಳಿ ಹೆಚ್ಚಾಗಿರುವ ಕಾರ್ಯಕ್ರಮಗಳಿಗೆ ಸರ್ಕಾರ ಅನುಮತಿ ನೀಡಬಾರದು. ಈ ಒಂದು ವರ್ಷ ಹಬ್ಬ ಹರಿದಿನ, ಜಾತ್ರೆಗಳನ್ನು ಮಾಡದಿರುವುದು ಉತ್ತಮ. ಮುಂದಿನ ತಿಂಗಳು ಗಣೇಶನ ಹಬ್ಬ. ಸಾಧ್ಯವಾದಷ್ಟು ಮನೆಗಳಲ್ಲಿಯೇ ಮೂರ್ತಿ ಕೂರಿಸಿ ಪೂಜಿಸಬೇಕು.

    ಎಂಟಿಬಿ ಭೇಟಿಯಲ್ಲಿ ವಿಶೇಷವಿಲ್ಲ :
    ನಾನು ಮತ್ತು ಸಚಿವ ಎಂಟಿಬಿ ನಾಗರಾಜ್ ನಿನ್ನೆ ಹೊಸಕೋಟೆಯಲ್ಲಿ ಭೇಟಿಯಾಗಿದ್ದುದು ನಿಜ. ಆದರೆ ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಲಿಲ್ಲ. ಬಿಜೆಪಿಯವರ ಜೊತೆ ರಾಜಕೀಯ ಮಾತನಾಡುವುದೂ ಇಲ್ಲ. ಬಿಜೆಪಿಯವರು ಅಧಿಕಾರದಿಂದ ತೊಲಗಲಿ ಎಂದು ಹೇಳುವವನು ನಾನು.

    ಕನಕ ಸಮೃದ್ಧಿ ಸಹಕಾರ ಬ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಹೊಸಕೋಟೆಗೆ ಹೋಗಿದ್ದೆ. ಕಾರ್ಯಕ್ರಮಕ್ಕೆ ಮುನ್ನ ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಊಟ ಇತ್ತು. ನಾಗರಾಜ್ ಸಹ ಅಲ್ಲಿಗೆ ಬಂದಿದ್ದರು ಅಷ್ಟೆ. ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯಿಲಿ, ಶಾಸಕರಾದ ಬೈರತಿ ಸುರೇಶ್ ಶರತ್ ಬಚ್ಚೇಗೌಡ ಸಹ ಇದ್ದರು.

    ಈಶ್ವರಪ್ಪ ಆಸಕ್ತಿ ವಹಿಸಲಿ :

    ಈಗ ಈಶ್ವರಪ್ಪ ಅವರು ಸಚಿವರಾಗಿದ್ದಾರೆ. ಅವರು ವರದಿ ಸ್ವೀಕಾರ ಆಗುವಂತೆ ಮಾಡಲಿ. ರಾಯಣ್ಣ ಬ್ರಿಗೇಡ್, ಕುರುಬರ ಎಸ್ ಟಿ ಹೋರಾಟದ ಜೊತೆಗೆ ಈ ಕೆಲಸಕ್ಕೂ ಅವರು ಮುಂದಾಗಲಿ. ವರದಿ ಮಂಡನೆಗೆ ನಿರಾಕರಿಸಿದಾಗ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕಿತ್ತು ಎಂದು ಈಶ್ವರಪ್ಪ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಮಂತ್ರಿ ಆಗಿರಲಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ಆಗಿದ್ದೆ. ರಾಜಿನಾಮೆ ಪರಿಹಾರ ಎಂದಾಗಿದ್ದರೆ ಕೊಡುತ್ತಿದೆ.

    ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಅತಿ ಹಿಂದುಳಿದ ವರ್ಗಗಳ ವೇದಿಕೆ ಈಗ ವರದಿ ಸ್ವೀಕಾರಕ್ಕೆ ಸರ್ಕಾರವನ್ನು ಒತ್ತಾಯಿಸಿ ಹೋರಾಟ ಮಾಡುತ್ತಿದೆ. ಹೋರಾಟ ನಡೆಯಲಿ. ಬಳಿಕ ನಾನು ಮಾತನಾಡುತ್ತೇನೆ.

    ಹುತಾತ್ಮರಿಗೆ ನನ್ನ ನಮನ :
    ನಮ್ಮ ದೇಶ 75 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ನಾವೆಲ್ಲ ಸ್ವಾತಂತ್ರö್ಯದ ಫಲಾನುಭವಿಗಳಾಗಿದ್ದೇವೆ. ನಮ್ಮ ದೇಶವನ್ನು ಬ್ರಿಟಿಷರ ಸಂಕೋಲೆಯಿಂದ ಬಿಡುಗಡೆ ಮಾಡಿಸಲು ಮಹಾತ್ಮ ಗಾಂಧಿ, ಸುಭಾಷ್ ಚಂದ್ರಭೋಸ್, ಸೇರಿದಂತೆ ಲಕ್ಷಾಂತರ ಮಂದಿ ಹೋರಾಟ ಮಾಡಿದ್ದಾರೆ. ಈ ಹೋರಾಟದಲ್ಲಿ ಅನೇಕ ಮಂದಿ ಹುತಾತ್ಮರಾಗಿದ್ದಾರೆ.
    ಸ್ವಾತಂತ್ರö್ಯಕ್ಕೆ ಹೋರಾಟ ಮಾಡಿದವರಲ್ಲಿ ಎಲ್ಲ ಜಾತಿ, ಜನಾಂಗದವರು, ಧರ್ಮದವರು. ಇದ್ದರು. ಹೋರಾಟ ನಡೆಸಿದ ಎಲ್ಲಿರಿಗೂ ಈ ಸಂದರ್ಭದಲ್ಲಿ ನಾನು ನಮನಗಳನ್ನು ಸಲ್ಲಿಸುತ್ತೇನೆ.
    ಸ್ವಾತಂತ್ರö್ಯಕ್ಕಾಗಿ ಹೋರಾಟ ಮಾಡಿದವರು ಸ್ವಾರ್ಥಪರರಾಗಿರಲಿಲ್ಲ. ಯಾವುದೇ ಆಸೆ, ಆಕಾಂಕ್ಷೆ ಇಲ್ಲದೆ ನಿಸ್ವಾರ್ಥದಿಂದ ಹೋರಾಟ ಮಾಡಿದವರು ಅವರು ಎಂದು ಸಿದ್ಧರಾಮಯ್ಯ ಹೇಳಿದರು.

    ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ 9, 10 , ಪಿಯುಸಿ ತರಗತಿ ಪ್ರಾರಂಭ

    BENGALURU AUG 14

    ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಆಗಸ್ಚ್ 23 ರಿಂದ 9, 10 , ಪಿಯುಸಿ ತರಗತಿ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.

    ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಶೇ. 2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಹಾಗೂ ಗಡಿ ಭಾಗದ ತಾಲ್ಲೂಕಿನಲ್ಲಿ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಶಾಲೆಗಳಲ್ಲಿ ಶೇ. 2ಕ್ಕಿಂತ ಹೆಚ್ಚು ಪ್ರಕರಣ ವರದಿಯಾದರೆ, ಒಂದು ವಾರ ಕಾಲ ಶಾಲೆ ಮುಚ್ಚಿ, ಸ್ವಚ್ಛಗೊಳಿಸಿದ ನಂತರ ತೆರೆಯಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.ಶಾಲಾ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರು ಆದ್ಯತೆ ಮೇರೆಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.

    ಕಳೆದವಾರದ ಪಾಸಿಟಿವಿಟಿ ದರ

    ಕೋವಿಡ್ ನಿರ್ವಹಣೆಗೆ ಜಿಲ್ಲಾವಾರು ಯೋಜನೆ ರೂಪಿಸಲು ಸೂಚಿಸಲಾಯಿತು. ಆಯಾ ಜಿಲ್ಲೆಗಳ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲೆಯ ಅಗತ್ಯಕ್ಕೆ ತಕ್ಕಂತೆ ಯೋಜನೆ ರೂಪಿಸಲಾಗುವುದು.

    ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಹಾಕಿಸಲು ಹಾಗೂ ಪರೀಕ್ಷಾ ಪ್ರಮಾಣ ಹೆಚ್ಚಿಸಲು ತೀರ್ಮಾನಿಸಲಾಯಿತು.

    ಕೇರಳ ಮತ್ತು ಮಹಾರಾಷ್ಟ್ರ ಗಡಿ ಭಾಗದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿರುವ ರಾಜ್ಯದ ಹಳ್ಳಿಗಳಲ್ಲಿ ಲಸಿಕೆ ನೀಡುವುದನ್ನು ತೀವ್ರಗೊಳಿಸಲು ಹಾಗೂ ಪರೀಕ್ಷಾ ಪ್ರಮಾಣ ಹೆಚ್ಚಿಸಲು ತೀರ್ಮಾನಿಸಲಾಯಿತು.

    ರಾಯಚೂರು, ಕಲಬುರಗಿ, ಬಳ್ಳಾರಿ, ಬೀದರ್, ಕೊಪ್ಪಳ, ಹಾವೇರಿ, ವಿಜಯಪುರ, ತುಮಕೂರು, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪರಿಕ್ಷಾ ಪ್ರಮಾಣ ಹೆಚ್ಚಿಸಲು ನಿರ್ಧರಿಸಲಾಯಿತು.

    ಮುಂದಿನ ಎರಡು ವಾರದಲ್ಲಿ ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಕಲಬುರಗಿ, ಬೆಳಗಾವಿ, ಹುಬ್ಬಳ್ಳಿಗಳಲ್ಲಿ ಆರು ಜಿನೋಮ್ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ. ಡೆಲ್ಟಾ ವೇರಿಯೆಂಟ್ ವೈರಸ್ ಅಧ್ಯಯನ ಹಾಗೂ ಇತರ ವೇರಿಯೆಂಟ್ ಗಳನ್ನು ಪತ್ತೆ ಹಚ್ಚಲು ಇದರಿಂದ ಅನುಕೂಲವಾಗಲಿದೆ.

    ರಾಜ್ಯದಲ್ಲಿ ಇಂದಿನ ವರೆಗೆ ಸುಮಾರು 4 ಕೋಟಿ ಲಸಿಕೆ ಹಾಕಲಾಗಿದೆ. 14.89 ಲಕ್ಷ ಡೋಸ್ ಲಸಿಕೆ ಲಭ್ಯವಿದೆ. ಮುಂದಿನ ವಾರ ದೆಹಲಿಗೆ ತೆರಳಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ರಾಜ್ಯಕ್ಕೆ ಹಂಚಿಕೆಯಾಗುವ ಲಸಿಕೆ ಡೋಸ್ ಗಳನ್ನು 65 ಲಕ್ಷದಿಂದ 1 ಕೋಟಿಗೆ ಹೆಚ್ಚಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

    ಬೆಂಗಳೂರು ನಗರದಲ್ಲಿ ಕೋವಿಡ್ ನಿರ್ವಹಣೆ ಕುರಿತಂತೆ ಮಕ್ಕಳ ಐಸಿಯು ಬೆಡ್ ಗಳನ್ನು ಮೀಸಲಿರಿಸಲು ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಸದ್ಯ 0.75 ಪಾಸಿಟಿವಿಟಿ ದರ ಇದೆ. ಶೆ. 2 ರಷ್ಟು ಪಾಸಿಟಿವಿಟಿ ದರ ಹಾಗೂ ಶೆ. 40 ರಷ್ಟು ಆಕ್ಸಿಜನೇಟೆಡ್ ಬೆಡ್ ಗೆ ಸೋಂಕಿತರಾದರೆ ದಾಖಲಾದರೆ, ಮುಂದಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಅಧಿಕಾರ ನೀಡಲಾಯಿತು.

    ಟೋಕಿಯೋ ಒಲಂಪಿಕ್ ಟೂರ್ನಿಯ ಮಹಿಳಾ ಹಾಕಿ ತಂಡದ ಕೋಚ್ ಅಂಕಿತಾಗೆ ಸನ್ಮಾನ

    BENGALURU AUG 13

    ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಕೋಚ್ ಅಂಕಿತಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು.

    ಟೋಕಿಯೋ ಒಲಂಪಿಕ್ ಟೂರ್ನಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ‌ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಆ ಮಹಿಳಾ ತಂಡ ಗೆದ್ದಿದೆ. ಆ ತಂಡದ ತರಬೇತಿದಾರರಾದ ನಿಮಗೆ ತುಂಬು ಹೃದಯದ ಶುಭಾಶಯ ಕೋರುತ್ತೇನೆ. ಕನ್ನಡದ ಯುವತಿ ಭಾರತ ತಂಡದ ಕೋಚ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಸಿಎಂ‌ ಹೇಳಿದರು.

    ಅಂಕಿತ ಅವರು ಮಡಿಕೇರಿ ಮೂಲದವರು. ಇವರ ತರಬೇತಿಯಲ್ಲಿ ಪಳಗಿದ ದೇಶದ ಮಹಿಳಾ ಹಾಕಿ ತಂಡ ಬಲಿಷ್ಠವಾಗಿದೆ. ಕಳೆದ ಎರಡು ವರ್ಷಗಳಿಂದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅಂಕಿತಾ ತರಬೇತಿ ನೀಡುತ್ತಿದ್ದಾರೆ. ಹಲವಾರು ವರ್ಷಗಳ ಬಳಿಕ ಓಲಂಪಿಕ್ ನಲ್ಲಿ ಮಹಿಳಾ ತಂಡ ಸೆಮಿಫೈನಲ್ ಹಂತಕ್ಕೆ ತಲುಪಿ ಅಭೂತಪೂರ್ವ ಅಮೋಘ ಸಾಧನೆ ಮಾಡಿದೆ. ಒಟ್ಟು ಮೂರು ಜನ ಕೋಚ್ ಗಳ ಪೈಕಿ ಅಂಕಿತಾ ಒಬ್ಬರು. ಅವರು ಕನ್ನಡಿಗರು ಅಂಬುದು ಶ್ಲಾಘನೀಯ ಮತ್ತು ಹೆಮ್ಮೆ ಎಂದು ಸಿಎಂ‌ ಬೊಮ್ಮಾಯಿ ಅಭಿಪ್ರಾಯಪಟ್ಟರು.

    ಆಗಸ್ಟ್ 13 ರಿಂದ 15:ಏಷ್ಯಾ ಆಭರಣ ಮೇಳ

    BENGALURU AUG 13

    ದಕ್ಷಿಣ ಭಾರತದ ಪ್ರಮುಖ ಆಭರಣ ಪ್ರದರ್ಶನ “ಏಷ್ಯಾ ಆಭರಣ ಮೇಳ 2021“ ಬೆಂಗಳೂರಿನಲ್ಲಿಆಗಸ್ಟ್ 13 ರಿಂದ 15 ರ ವರೆಗೆ ಆಯೋಜಿಸಲಾಗಿದೆ.  ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯ ಜೆ.ಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ನಲ್ಲಿ ಆಭರಣ ಮೇಳ ನಡೆಯಲಿದೆ. ಬೆಳಿಗ್ಗೆ 10.30 ರಿಂದ ರಾತ್ರಿ 8.00 ಗಂಟೆವರೆಗೆ ಪ್ರದರ್ಶನವಿರುತ್ತದೆ.

     

    ದೇಶಾದ್ಯಂತ ಇರುವ ಅತ್ಯುತ್ತಮ ಆಭರಣಗಳ ಉತ್ತಮ ವಿನ್ಯಾಸಗಳನ್ನು ಒಂದೇ ಸೂರಿನಡಿ ಪ್ರದರ್ಶಿಸಲಾಗುತ್ತಿದೆ.   ಅತ್ಯುತಮ ಚಿನ್ನ, ವಜ್ರ, ಪ್ಲಾಟಿನಂನಲ್ಲಿ ಸಾಂಪ್ರದಾಯಿಕ ಆಭರಣಗಳನ್ನು ಪ್ರದರ್ಶಿಸಲಾಗುತ್ತಿದೆ. ಮದುವೆ ಆಭರಣ, ಅಮೂಲ್ಯ ಕಲ್ಲಿನ ಆಭರಣ, ಕುಂದನ್, ಜಡೌ ಮತ್ತು ಪೋಲ್ಕಿ ಆಭರಣಗಳು ಸಹ ಪ್ರದರ್ಶನವಾಗುತ್ತಿರುವ ಕೆಲ ಮಾದರಿಗಳಾಗಿವೆ.  

    ಮುಂಬರುವ ವರ ಮಹಾಲಾಕ್ಷ್ಮಿ ಹಬ್ಬ ಮತ್ತು ಮದುವೆ ಹಂಗಾಮಿಗೆ, ವರ ಮತ್ತು ವಧುವಿಗಾಗಿ ಏಷ್ಯಾ ಆಭರಣ ಪ್ರದರ್ಶನ ಅತ್ಯುನ್ನತ ವೇದಿಕೆಯಾಗಿದೆ. ಸೊಗಸಾದ ಮತ್ತು ವಿಶ್ವದರ್ಜೆಯ ಆಭರಣಗಳನ್ನು ಖರೀದಿಸಲು ಇದು ಸೂಕ್ತ ತಾಣವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

    error: Content is protected !!