25.7 C
Karnataka
Monday, May 20, 2024

    ಸಫಲರಾಗಿದ್ದೆಲ್ಲಿ? ಎಡವಿದ್ದೆಲ್ಲಿ?

    Must read


    ಕೊರೋನಾ ನಡುವೆಯೇ 75ನೇ ಸ್ವಾತಂತ್ರ್ಯ ದಿನದ ಸಂಭ್ರಮದ ಆಚರಣೆ ನಡೆದಿದೆ.ಈ 74 ವರ್ಷದಲ್ಲಿ ನಾವು ಸಫರಲಾಗಿದ್ದೆಲ್ಲಿ . ಎಡವಿದ್ದೆಲ್ಲಿ ಎಂಬ ಎಂಬ ಪ್ರಶ್ನೆಯನ್ನು ನಾಡಿನ ಪ್ರಜ್ಞಾವಂತರ ಮುಂದೆ ಕನ್ನಡ ಪ್ರೆಸ್.ಕಾಮ್ ಇಟ್ಟಿತು. ನಮಗೆ ಸಿಕ್ಕ ಸ್ವಾರಸ್ಯಕರ ಉತ್ತರವನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ.


    ವಿಫಲವೋ, ಸಫಲವೋ ಎಂದು ಗೊತ್ತಾಗದ ಎಪ್ಪತ್ತೈದು ತುಂಬುತ್ತಿರುವ ಹೊತ್ತು

    ಗಗನದಲ್ಲಿ ಹಾರುತ್ತಿರುವ ಹಕ್ಕಿಗೆ ಪಂಜರದ ಕಷ್ಟ ಗೊತ್ತಿಲ್ಲದಾಗ ಗಗನದ ಸುಖವೂ ಸಂಭ್ರಮಕ್ಕಿಂತ ಸಹಜದಂತೆ ಅಷ್ಟೇ ಭಾಸವಾಗುತ್ತದೆ. ಸ್ವಾತಂತ್ರ್ಯ ಬರುವ ಮುನ್ನದ ಪರಿಸ್ಥಿತಿ ಕೇಳಿ , ಓದಿ ಮಾತ್ರ ಗೊತ್ತಿರುವ, ಪ್ರತ್ಯಕ್ಷ ಸಾಕ್ಷಿಗಳಲ್ಲದ ನಾವು ಸ್ವತಂತ್ರವಾದ ಭಾವವನ್ನು ಪರಿಪೂರ್ಣವಾಗಿ ಅನುಭವಿಸಲಾರೆವು.

    ಆದರೆ ಆ ಕುರಿತ ಹೋರಾಟಗಳ ವಿವರಗಳನ್ನು ಓದಿದಾಗ ದಾಖಲಾಗದೇ ಇರುವ ಅದೆಷ್ಟು ಸಂಕಟಗಳು ಸಂದುಹೋಗಿರಬಹುದೆಂಬ ಊಹನೆಯಲ್ಲಿಯೇ ಒದ್ದಾಡುವಂತಾಗುತ್ತದೆ. ಶತಮಾನಗಳ ಹೋರಾಟದಿಂದ ದಕ್ಕಿದ ಸ್ವಾತಂತ್ರ್ಯದ ನಂತರದ ದಿನಗಳು, ವರ್ಷಗಳು ತಕ್ಕಮಟ್ಟಿಗೆ ನೆಮ್ಮದಿಯನ್ನೂ, ಹಲಮಟ್ಟಿಗೆ ಬೇಸರವನ್ನೂ ತಂದು ಕೊಟ್ಟಿದೆ.

    ಎಲ್ಲ ರೀತಿಯ ಸುಭಿಕ್ಷತೆಯನ್ನು ಯಾವ ಕಾಲಕ್ಕೂ ನಿರೀಕ್ಷಿಸಲಾಗುವುದಿಲ್ಲ ಎಂಬುದು ಸತ್ಯವೇ ಆದರೂ ಆಳುವವರಿಗೆ ಆ ಸ್ಥಾನಕ್ಕೇರಲು ಕೆಲವೊಂದು ಅರ್ಹತೆ ಇರುವಂತೆ ಮಾಡಬೇಕಿತ್ತು. ಕಡಿಮೆಯಾಗಬೇಕಿದೆ ಭ್ರಷ್ಟಾಚಾರ. ಬೆಲೆಗಳೂ ಕಡಿಮೆಯಾಗಬೇಕಿದೆ. ಮಿತಿಮೀರಿದ ಭ್ರಷ್ಟಾಚಾರ… ಅದಕ್ಕೆ ಒಗ್ಗಿ ಜಡ್ಡಾಗಿರುವ ನಮ್ಮ ಮನಸ್ಸುಗಳನ್ನು ನೋಡಿದರೆ ಹೇಗೆಲ್ಲಾ ಬದುಕುತ್ತಿದ್ದೇವೆ ಅನ್ನಿಸಿ ಖೇದವಾಗುತ್ತದೆ. ಮನುಷ್ಯ ಮನುಷ್ಯನಾಗಿ ಬಾಳುವುದನ್ನು ಕಲಿಸಲು , ಅದರ ಬೆಲೆ ಅರಿವಾಗಿಸಲು, ಸ್ವತಂತ್ರದ ಅರ್ಥ ಗೊತ್ತು ಮಾಡಿಸಲು ಮತ್ತಾರು ನಮ್ಮ ದೇಶವನ್ನು ಆಕ್ರಮಿಸಬೇಕೋ ?..ಇದು ಸ್ವತಂತ್ರ ಭಾರತದ ವೈಫಲ್ಯವೇ ಅಲ್ಲವಾ ಎನ್ನಿಸುವಷ್ಟರಲ್ಲೇ ಕಿವಿಗಪ್ಪಳಿಸುತ್ತವೆ ಪ್ರಪಂಚದಲ್ಲಿ ಜರುಗುತ್ತಿರುವ ಇತ್ತೀಚಿನ ವಿದ್ಯಮಾನಗಳನ್ನು ಹೊತ್ತ ಸುದ್ದಿಗಳು. ಹಾಗಾದರೆ ಇದು ನಮ್ಮ ವೈಫಲ್ಯವಾ..? ಮಾನವ ಜನಾಂಗದ ವೈಫಲ್ಯವಾ? ತೀರಾ ಸಿನಿಕರಾಗದೇ ಇದ್ದುದನ್ನು ಸಂಭ್ರಮಿಸೋಣ ಎನ್ನುವವರೂ ಕಡಿಮೆಯಿಲ್ಲ, ಮತ್ತು ಅದೂ ಸುಳ್ಳಲ್ಲ.

    ವಿಫಲವೋ, ಸಫಲವೋ ಎಂದು ಗೊತ್ತಾಗದ ಎಪ್ಪತ್ತೈದು ತುಂಬಿದ ಹೊತ್ತಲ್ಲಿ ಸ್ವಾತಂತ್ರಕ್ಕಾಗಿ ಹೊಡೆದಾಡಿದ, ಬಲಿಯಾದ ಎಲ್ಲ ಜೀವಗಳಿಗೊಂದು ಕೃತಜ್ಞತಾ ಪೂರ್ವಕ ನಮನ.

    ಹೊಸ ಹೆಜ್ಜೆಗಳ ದಾರಿಗಳನ್ನು‌ನೋಡುವ ದಿನ

    ಸ್ವಾತಂತ್ರ್ಯ ಅಂದರೆ ಸಂಭ್ರಮ. ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳಲ್ಲಿ ಏನಾಯಿತು ಅಂತ ಕೇಳಿದರೆ ಒಂದಷ್ಟು ಜನ ನೆಗೆಟಿವ್ ಆಗಿಯೂ, ಪಾಸಿಟಿವ್ ಆಗಿಯೂ ಉತ್ತರಿಸುತ್ತಾರೆ.ಪ್ರಜಾಪ್ರಭುತ್ವ ಹಾಳಾಗೋಯ್ತು ಕಣ್ರೀ. ಇದು ಮತ್ತೆ ಬಂಡವಾಳಶಾಹಿಗಳ ನಾಡಾಗಿದೆ. ಈಗ ಬ್ರಿಟಿಷರಿಲ್ಲ. ಕರಿ ತೊಗಲಿನ ಬ್ರಿಟಿಷರಿದ್ದಾರೆ ಅನ್ನುವವರುಂಟು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರಿದ್ದರೇ ಉದ್ಧಾರವಾಗುತ್ತಿದ್ದೆವು ಅನ್ನುವವರೂ ಉಂಟು.

    ರಾಜಪ್ರಭುತ್ವದಿಂದಾಗಿ ಎಲ್ಲೆಲ್ಲೋ ಚದುರಿಹೋಗಬಹುದಾಗಿದ್ದ ನಮ್ಮನ್ನು ಕೂಡಿಸಿ ದೇಶವಾಗಿಸಿದ್ದಕ್ಕೆ ಅವರಿಗೆ ಖಂಡಿತಾ ಥ್ಯಾಂಕ್ಸ್ ಹೇಳೋಣ. ಇಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಕೂಡ ಸುಳ್ಳಿನ ಮಾತಲ್ಲ. ಆದರೆ..ಇದೊಂದು ವಿಶಿಷ್ಟ ದೇಶ. ಇಲ್ಲಿ ಮೇಲ್ನೋಟಕ್ಕೆ ಕಾಣುವುದೇ ಬೇರೆ. ಇದರ ಒಳಹರಿವೇ ಬೇರೆ. ಅಗತ್ಯ ಬಂದಾಗ ಇಲ್ಲಿ ಎಲ್ಲವೂ ತಂತಾನೇ ಸಂಭವಾಮಿ ಯುಗೇ ಯುಗೇ ಆಗುತ್ತದೆ. ಯಾವ್ಯಾವ ಜನ ಹೇಗೋ ಒಟ್ಟಾಗುತ್ತಾರೆ.

    ಸ್ವಾತಂತ್ರ್ಯ ದಿನಾಚರಣೆ ಅನ್ನುವುದು ನಮ್ಮ ಸಂಭ್ರಮದ ದಿನ. ನಾವು ಮತ್ತೆ ಮತ್ತೆ ನಮ್ಮ‌ ಅಸ್ಮಿತೆಯನ್ನು ನೆನಪಿಸಿಕೊಂಡು ಮತ್ತಷ್ಟು ಜಾಗರೂಕರಾಗುವ, ಒಂದಾಗುವ , ಮುನ್ನಡೆಯ ಹೊಸ ಹೆಜ್ಜೆಗಳ ದಾರಿಗಳನ್ನು‌ನೋಡುವ ದಿನ. ಎಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳು.

    ಆರ್ಥಿಕ ಸಾಕ್ಷರತೆ ಈ ಹೊತ್ತಿನ ಅಗತ್ಯ

    ಸ್ವಾತಂತ್ರೋತ್ಸವ ಎಂದಾಕ್ಷಣ ಭಾಲ್ಯದಲ್ಲಿನ ಪ್ರಭಾತ್‌ ಪೇರಿ, ರಾಷ್ಟ್ರದ್ವಜಕ್ಕೆ ಸೆಲ್ಯೂಟ್‌ ಮಾಡುತ್ತಿರುವ ನೆನಪುಗಳು ಮರುಕಳಿಸಿ ಮನಸ್ಸನ್ನು ಭಾವೋದ್ವೇಗಕ್ಕೊಳಪಡುವುದು. ಈ ಸುದೀರ್ಘ ಸಮಯದಲ್ಲಿ ನಮ್ಮ ದೇಶವು ವೈವಿಧ್ಯತೆಯಲ್ಲಿ ವಿವಿಧ ರಂಗಗಳಲ್ಲಿ ಹೆಚ್ಚಿನ ಸಾಧನೆಯನ್ನು, ಪ್ರಗತಿಯನ್ನು ಸಾಧಿಸಿದೆ.

    ವಿಶೇಷವಾಗಿ ತಾಂತ್ರಿಕ ವಿಭಾಗದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಕಿರೀಟಪ್ರಾಯವಾಗಿದೆ. ಉದ್ಯೋಗೀಕರಣ, ಉತ್ಪಾದನಾ ವಲಯ, ಫಾರ್ಮಾ ವಲಯದ ಸಾಧನೆಯಂತೂ ಈಚಿನ ವರ್ಷದಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದು ಜೀವ ಉಳಿಸುವ ಔಷದಿಗಳು ವಿಶೇಷವಾಗಿ ಕೊರೋನ ಸಾಂಕ್ರಾಮಿಕ ಸಮಯದಲ್ಲಿ, ಅದನ್ನು ತಡೆಗಟ್ಟುವ ದಿಶೆಯಲ್ಲಿ ಕೈಗೊಂಡ ಅನುಸಂಧಾನ, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹುದಾಗಿದೆ. ಇನ್ನು ಶೈಕ್ಷಣಿಕವಾಗಿ, ಕೈಗಾರಿಕಾ ವಲಯದಲ್ಲಿ, ಕ್ರೀಡಾ ವಿಭಾಗದಲ್ಲಿಯೂ ಹೆಚ್ಚಿನ ಪ್ರಗತಿ ಕಂಡುಕೊಂಡಿದ್ದೇವೆ. ವಿಶೇಷವಾಗಿ ಜಾಗತೀಕರಣದ ನಂತರ ನಮ್ಮ ದೇಶವು ಎಲ್ಲಾ ವ್ಯವಹಾರಿಕ ಚಟುವಟಿಕೆಗಳಿಗೆ ತೆರೆದುಕೊಂಡಿದೆ. ಹಾಗಾಗಿ ದೇಶದಲ್ಲಿ ಆಂತರಿಕ ವಾಣಿಜ್ಯ ಚಟುವಟಿಕೆಗಳು ವೃದ್ದಿಯಾಗಿ ದೇಶದ ಆರ್ಥಿಕ ಅಭಿವೃದ್ದಿಗೆ ಕಾರಣವಾಗಿದೆ. ರಪ್ತು ಪೇಟೆಯೂ ಚೆನ್ನಾಗಿ ಬೆಳೆದಿದೆ.

    ಭಾರತದೇಶವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರಿಕವಾಗಿ ಆಕರ್ಷಿತವಾಗಿ ಮಿಂಚಲು ಮೂಲ ಕಾರಣ ನಮ್ಮ ದೇಶದ ʼಜನಸಂಪತ್ತುʼ. 64 ದೇಶಗಳ ಗ್ಲೋಬಲ್‌ ಕಾಂಪಿಟೆಟಿವ್‌ ಇಂಡೆಕ್ಸ್‌ ನಲ್ಲಿ ನಮ್ಮ ದೇಶವು 43 ನೇ ಸ್ಥಾನದಲ್ಲಿದ್ದರೂ, ಪೇಟೆಯ ಗಾತ್ರದಲ್ಲಿ ಮೂರನೆ ಸ್ಥಾನದಲ್ಲಿರುವುದು ಮುಖ್ಯ ಆಕರ್ಷಣೆಯಾಗಿದೆ. ಅಂದರೆ ಇಲ್ಲಿ ಗ್ರಾಹಕರ ಸಂಖ್ಯೆ, ಬಳಕೆದಾರರ ಗಾತ್ರ ಅತಿ ಹೆಚ್ಚಾಗಿರುವುದರಿಂದ ಎಲ್ಲಾ ದೇಶಗಳ ಉದ್ಯಮಗಳ ಗಮನ ಸೆಳೆದಿಟ್ಟುಕೊಂಡಿದೆ. ಮಾರ್ಕೆಟಿಂಗ್‌ ವಿಭಾಗಗಳು ವೈವಿಧ್ಯಮಯ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಆಫರ್‌, ಡಿಸ್ಕೌಂಟ್‌, ಬೈ ಬ್ಯಾಕ್‌, ಕೊಡುಗೆಗಳಿಲ್ಲದ ವ್ಯವಹಾರವೇ ಇಲ್ಲ ಎನ್ನುವ ಮಟ್ಟಕ್ಕೆ ಬೆಳೆದು, ಗ್ರಾಹಕರನ್ನು ತನ್ನತ್ತ ಸೆಳೆಯಲು ವ್ಯಾಪಾರಸ್ಥರು ತುದಿಗಾಲಲ್ಲಿರುತ್ತಾರೆ. ಇದು ಜಾಹಿರಾತು ವಲಯ ವಿಜೃಂಭಿಸಲೂ ಸಹ ಕಾರಣವಾಗಿದೆ. ಆದರೆ ಬದ್ಧತೆ, ಭಾದ್ಯತೆಗಳು ಕ್ಷೀಣಿತಗೊಳ್ಳುತ್ತಿವೆ. ಕೆಲವು ಅಸಹಜ ವಿಧಗಳ ಜಾಹಿರಾತುಗಳೂ ಪ್ರಸಾರವಾಗುತ್ತವೆ.

    ಈ ಸ್ಪರ್ಧಾತ್ಮಕ ಸಂದರ್ಭದಲ್ಲಿ ನಮ್ಮ ನಾಗರಿಕರು ವ್ಯವಹಾರಿಕ ಚತುರತೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯವಶ್ಯಕ. ವರ್ಣರಂಜಿತ ಜಾಹಿರಾತುಗಳನ್ನು ಅಳೆದು ತೂಗಿ ಅರ್ಹತೆಯ ಆಧಾರದ ಮೇಲೆ ಸ್ಪಂದಿಸುವುದು ಅನಿವಾರ್ಯ. ಈ ದಿಶೆಯಲ್ಲಿ ನಾವುಗಳು ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸಿಕೊಳ್ಳಲೇಬೇಕು. ಸಧ್ಯ ನಮ್ಮಲ್ಲಿ ಸಾಕ್ಷರತಾ ಮಟ್ಟ ಅತಿ ಹೆಚ್ಚಾಗಿದ್ದು, ಶಿಕ್ಷಣದ ಅವಶ್ಯಕತೆಯನ್ನು ಜನಸಾಮಾನ್ಯರೂ ಅರಿತಿದ್ದಾರೆ. ಆದರೆ ಸಾಕ್ಷರಸ್ಥರ ಮಧ್ಯೆ ಆರ್ಥಿಕ ಸಾಕ್ಷರತೆ, ಸ್ವಾಸ್ಥ್ಯ ಸಾಕ್ಷರತೆಗಳೂ ಇಂದಿನ ಅವಶ್ಯಕತೆ ಇದೆ ಎಂಬುದನ್ನು ಕಡೆಗಣಿಸಿದ್ದೇವೆ. ಗ್ಲೋಬಲ್‌ ಫೈನಾನ್ಶಿಯಲ್‌ ಲಿಟರಸಿ ಸಮ್ಮಿಟ್‌ ನ ಅಂಶಗಳ ಪ್ರಕಾರ 2012 ರಲ್ಲಿ ಭಾರತದಲ್ಲಿ ಶೇ.35 ರಷ್ಟು ನಾಗರೀಕರು ಆರ್ಥಿಕ ಸಾಕ್ಷರತೆಯಿಂದ ಮೆರೆದಿದ್ದಾರೆ. ಈ ಅಂಶವು 2016 ರಲ್ಲಿ ಶೇ.23ಕ್ಕೆ ಕುಸಿದಿದೆ. ಅಂದರೆ ನಾಲ್ಕು ವರ್ಷಗಳಲ್ಲಿ ನಮ್ಮ ದೇಶದ ಆರ್ಥಿಕ ಸಾಕ್ಷರತಾ ಮಟ್ಟವು ಶೇ.35 ರಿಂದ 23ಕ್ಕೆ ಕುಸಿದಿದೆ. 2020 ಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದೆ. ಸೆಪ್ಟೆಂಬರ್‌ 2020 ರಲ್ಲಿನ ಅಂಶಗಳ ಪ್ರಕಾರ ಭಾರತದಲ್ಲಿ ಶೇ.24 ರಷ್ಟರ ಜನ ಮಾತ್ರ ಆರ್ಥಿಕ ಸಾಕ್ಷರತೆಯನ್ನು ಹೊಂದಿದ್ದಾರೆ. ನಾವು ಸಾಕ್ಷರತೆಗೆ ನೀಡುವ ಆಧ್ಯತೆಯನ್ನು ಆರ್ಥಿಕ ಸಾಕ್ಷರತೆಗೂ ನೀಡಲೇಬೇಕು. ಆಗಲೇ ಜನಮಾನಸದಲ್ಲಿ ನೆಮ್ಮದಿ ಕಾಣಬಹುದು. ಇದು ದೇಶವನ್ನು ಸದೃಢಗೊಳಿಸಲು ಸಹಕಾರಿಯಾಗುವುದು.

    ಇಂದಿನ ವ್ಯವಹಾರಿಕ ಚಟುವಟಿಕೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಎಲ್ಲಾ ಒಂದೇ. ಅವುಗಳಿಗೆ ಕೇವಲ ಲಾಭಗಳಿಕೆಯೊಂದೇ ಗುರಿ. ಸರ್ಕಾರ ಎಂ ಆರ್‌ ಪಿ ಬೆಲೆ ಮುದ್ರಣವನ್ನು ಪ್ಯಾಕ್ಡ್‌ ಐಟಂಗಳ ಮೇಲೆ ಕಡ್ಡಾಯಗೊಳಿಸಿತು. ಅದೇ ವ್ಯವಹಾರಿಕ ಲಾಭಕ್ಕೆ ಹೇಗೆ ಪರಿವರ್ತನೆಗೊಂಡಿದೆ ಎಂದರೆ ಪದಾರ್ಥಗಳ ಪ್ಯಾಕ್‌ ಮೇಲೆ ಮುದ್ರಿಸಿರುವ ಬೆಲೆಗೂ, ಮಾಲ್‌ ಗಳಲ್ಲಿ ಮಾರಾಟಮಾಡುವ ಬೆಲೆಗಳಿಗೂ ಅಜಗಜಾಂತರ ವ್ಯತ್ಯಾಸವಿರುವುದು ಸಾಮಾನ್ಯವಾಗಿದೆ. ಈ ಬೆಲೆಗಳ ಅಂತರ ನೋಡಿದಲ್ಲಿ ಉತ್ಪಾದಕರಿಗೂ ಉತ್ಪಾದನೆಯ ವೆಚ್ಚದ ಅರಿವಾಗದ ರೀತಿಯಲ್ಲಿರುತ್ತದೆ. ಉದಾಹರಣೆಯಾಗಿ ಒಂದು ಲೀಟರ್‌ ನಂದಿನಿ ತುಪ್ಪದ ಪ್ಯಾಕ್‌ ಮೇಲೆ ಮುದ್ರಿತ ಬೆಲೆ ರೂ.450 ಎಂದಿದ್ದರೂ ಮಾಲ್‌ ಗಳು ರೂ.410 ರಲ್ಲಿ ಮಾರಾಟಮಾಡುವ ಜಾಹಿರಾತು ನೀಡುತ್ತವೆ. ಅಂದರೆ ಈ ಎಂ ಆರ್‌ ಪಿ ಬೆಲೆಯು ಅಮಾಯಕ ಗ್ರಾಹಕರನ್ನು ಬಲಿಪಶುಮಾಡುತ್ತದೆಯಲ್ಲವೇ? ಈ ಸಂದರ್ಭದಲ್ಲಿ ಸರ್ಕಾರ ಎರಡು ರೀತಿಯ ಎಂ ಆರ್‌ ಪಿ ಮುದ್ರಣಕ್ಕೆ ಮುಂದಾಗಬೇಕು. ಮೊದಲನೇ ಎಂ ಆರ್‌ ಪಿ: minimum retail price: ಇದು ಉತ್ಪಾದಕರಿಗೆ ತಗಲಿದ ವೆಚ್ಚ, ಎರಡನೆಯದು ಈಗಿನ ಎಂ ಆರ್‌ ಪಿ: maximim retail price. ಇದರಿಂದ ಗ್ರಾಹಕರಿಗೂ ಅರಿವಾಗುವುದು ಖರೀದಿಸುವ ಉತ್ಪನ್ನಕ್ಕೆ ಯಾವ ಬೆಲೆ ಸೂಕ್ತ ಎಂಬುದು.

    ಒಟ್ಟಿನಲ್ಲಿ ಆರ್ಥಿಕ ಸಾಕ್ಷರತೆಯು ಜೀವನದಲ್ಲಿ ನೆಮ್ಮದಿ ಮೂಡಿಸಿ, ಶಾಂತಿಯನ್ನು ನೆಲೆಸುವಂತೆ ಮಾಡುವುದು. ಷೇರುಪೇಟೆಯ ಚಟುವಟಿಕೆಯ ದೃಷ್ಠಿಯಿಂದ ಹೇಳಬೇಕಾದರೆ, ಹೊಸದಾಗಿ ಪ್ರವೇಶಿಸುವವರು, ಬ್ರೋಕರೇಜ್‌ ಉಳಿಸಬಹುದೆಂಬ ಕಾರಣಕ್ಕಾಗಿ ಆನ್‌ ಲೈನ್‌ ಟ್ರೇಡಿಂಗ್‌ ಮಾಡೋಣ ಎಂದು ಪ್ರಯತ್ನಿಸಿ, ಬ್ರೋಕರೇಜ್‌ ಉಳಿಸಿ, ಬಂಡವಾಳ ನಶಿಸಿಕೊಂಡಿರುವ ಅನೇಕ ನಿದರ್ಶನಗಳಿವೆ. ಕಾರಣ ಯಾವ ಷೇರನ್ನು ಯಾವ ಸಂದರ್ಭದಲ್ಲಿ ಖರೀದಿಸಬಹುದು ಅಥವಾ ಮಾರಾಟಮಾಡಬಹುದು ಎಂಬುದು ಸ್ಪಷ್ಠವಾಗಿ ಅರಿತು ನಿರ್ಧರಿಸಿಲ್ಲಿ ಮಾತ್ರ ಹೂಡಿಕೆ ಮಾಡಿದ ಬಂಡವಾಳ ಸ್ವಲ್ಪ ಮಟ್ಟಿನ ಸುರಕ್ಷತೆ ಕಾಣಬಹುದು.

    ಈ ವರ್ಷದ ಸ್ವಾತಂತ್ರೋತ್ಸವದಿಂದ ಎಲ್ಲರೂ ಆರ್ಥಿಕವಾಗಿ ಸಾಕ್ಷರಸ್ಥರಾಗಲು ಪ್ರಯತ್ನಿಸೋಣ. ಅತಿಯಾದ ಆಸೆಗೆ ಓಗೊಡದೆ ನೆಮ್ಮದಿಯನ್ನು ಕಂಡುಕೊಳ್ಳೋಣ ಇದರಿಂದ ದೇಶದ ಅಭಿವೃದ್ದಿಗೆ ಕೈ ಜೋಡಿಸೋಣ.

    ತಂತ್ರಜ್ಞಾನದಿಂದ ಕೃಷಿ ಕೆಲಸ ಹಗುರು, ಬೆಲೆ ಸಿಗದೆ ಕಂಗಾಲು

    ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ ಉತ್ತರ ಪ್ರದೇಶದಲ್ಲಿ ಚಳವಳಿ ನಡೆಸುತ್ತಿದ್ದ ರೈತ ಸಮುದಾಯಕ್ಕೆ ಬೆಂಬಲ ನೀಡಿ ಅವರೊಂದಿಗೆ ಭಾಗವಹಿಸುವ ಮೂಲಕ ಸ್ವಾತಂತ್ರ್ಯ ಚಳವಳಿಗೆ ನಾಂದಿ ಹಾಡಿದರು. ಆಗ ಬ್ರಿಟಿಷರು ರೈತರಿಗೆ ಇಂಥದ್ದೇ ಬೆಳೆಯನ್ನು ಬೆಳೆಯಬೇಕು ಎಂದು ಕಾನೂನು ಮಾಡುತ್ತಿದ್ದರು. ರೈತರು ತಾವು ಇಷ್ಟಪಟ್ಟಿದ್ದನ್ನು ಬೆಳೆಯಲು ಸಾಧ್ಯವಿರಲಿಲ್ಲ.

    ಈ ಘಟನೆಯಾಗಿ ಒಂದು ಶತಮಾನವಾದರೂ, ನಮಗೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ರೈತರಿಗೆ ತಮಗೆ ಬೇಕಾದ ಬೆಳೆ ಬೆಳೆಯಲು, ಅದಕ್ಕೆ ನ್ಯಾಯಯುತವಾದ, ವೈಜ್ಞಾನಿಕವಾದ ಬೆಲೆ ಪಡೆಯುವ ಸ್ವಾತಂತ್ರ್ಯ ಸಿಕ್ಕಿಲ್ಲ. ನಮ್ಮ ದೇಶದಲ್ಲಿ ಕೈಗಾರಿಕಾ ಉತ್ಪನ್ನವನ್ನು ತಯಾರಿಸುವವರು ಉತ್ಪಾದನಾ ವೆಚ್ಚ ಲೆಕ್ಕ ಹಾಕಿ ಅವುಗಳಿಗೆ ಬೆಲೆ ನಿಗದಿಪಡಿಸುತ್ತಾರೆ. ದಿನಗೂಲಿಯವರಿಗೂ ಇಂತಿಷ್ಟು ಎಂದು ದಿನಗೂಲಿ ಉಂಟು. ರೈತರ ಬೆಳೆಗೆ ಸರಿಯಾದ ಬೆಲೆ ಇಲ್ಲ.

    ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇತ್ತೀಚೆಗೆ ಕೆಲವು ಬೆಲೆಗಳಿಗೆ ಬೆಂಬಲ ಬೆಲೆ ಘೋಷಿಸಿವೆ. ಆದರೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಸರ್ಕಾರಗಳು, ಇಲಾಖೆಗಳು ಅಪಾರವಾದ ಕೃಷಿ ಉಪಕರಣಗಳನ್ನು ಒದಗಿಸುತ್ತಿವೆ. ತಂತ್ರಜ್ಞಾನದಿಂದ ಕೃಷಿ ಕೆಲಸ ತಕ್ಕಮಟ್ಟಿಗೆ ಹಗುರವಾಗಿದೆ. ಆದರೆ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಮಾರುಕಟ್ಟೆ ನಿಯಂತ್ರಣದಲ್ಲಿಲ್ಲ. ಮಧ್ಯವರ್ತಿಗಳಿಂದ ರೈತರು ಹೈರಾಣಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕೊರೋನಾದಿಂದ “ಸಾಕಪ್ಪಾ ಸಾಕು, ಈ ಕೃಷಿ ಲಾಸು” ಎನ್ನುವವರೇ ಬಹಳ ಮಂದಿ. ಆದರೆ ವಿಮುಖರಾಗಿದ್ದವರು ಕೃಷಿಯತ್ತ ಮುಖ ಮಾಡಿರುವುದು ಆಶಾದಾಯಕ ಬೆಳವಣಿಗೆ.

    ಕೃಷಿ ಒಂದಿಷ್ಟು ಮಾಹಿತಿ ಅರಿವನ್ನು ಬೇಡುತ್ತದೆ. ಅದರ ಕೊರತೆ ಇದೆ. ಇದನ್ನು ಲಾಭದಾಯಕ ಕಸುಬನ್ನಾಗಿ ಮಾಡಿದರೆ ಈ ಬೃಹತ್ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇರುವುದಿಲ್ಲ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಇಲಾಖೆಗಳು, ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಆಗ ಮಾತ್ರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅರ್ಥಪೂರ್ಣವಾಗುತ್ತದೆ.

    ನಾವು ಉತ್ಸವಕ್ಕೆ ಸೀಮಿತಗೊಂಡು ಪ್ರಗತಿಯ ಹಿಮ್ಮುಖ ನಡೆಯಲ್ಲಿದ್ದೇವೆ

    ದೇಶ ಸ್ವಾತಂತ್ರ್ಯೋತ್ಸವ ಎಪ್ಪತೈದರ ಸಂಭ್ರಮ ದಲ್ಲಿದೆ,ಆದರೆ ನಮಗಿಂತ ಹತ್ತು ಹದಿನೈದು ವರ್ಷಗಳ ನಂತರ ಸ್ವಾತಂತ್ರ್ಯ ಪಡೆದ ದೇಶಗಳು ನಾಗರಿಕತೆ ನಾಗಲೋಟದಲ್ಲಿವೆ ನಾವು ಉತ್ಸವಕ್ಕೆ ಸೀಮಿತಗೊಂಡು ಪ್ರಗತಿಯ ಹಿಮ್ಮುಖ ನಡೆಯಲ್ಲಿದ್ದೇವೆನಿಸುತ್ತದೆ.

    ಅದಕ್ಕೆ ಸ್ಪಷ್ಟ ಉದಾಹರಣೆ ಉಚಿತ ಸವಲತ್ತುಗಳಿಗೆ ಸಾಲುಗಟ್ಟಿ ನಿಲ್ಲುವ ಜನ, ಮೀಸಲಾತಿಗೆ ಧರ್ಮ ಗುರುಗಳ ನೇತೃತ್ವದ ಹೋರಾಟ,ಸೇವಾ ವಲಯದಲ್ಲಿ ಲಾಭ ಗಳಿಸುವ ಪೈಪೋಟಿ, ದೇಶ, ಭಾಷೆ,ಭೂಮಿ, ನೀರು, ಕಾಡು,ಕೆರೆ ಎಲ್ಲವುಗಳ ಸ್ವಾರ್ಥ ಬಳಕೆ ಹೀಗೆ.

    ನಮ್ಮದು ಹಿಮ್ಮುಖ ಚಲನೆ ಎನಿಸುತ್ತದೆ,ಇನ್ನಾದರೂ ನೈತಿಕ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣ ಎಲ್ಲರಿಗೂ ದೊರೆತು ದೇಶ ಮಾನವ ಧರ್ಮದ ಗುರುವಾಗಲಿ ಆ ಕಡೆ ನಡೆ ಎಲ್ಲರದಾಗಲಿ.

    ಎಲ್ಲರ ಮಾತು ಹೃದಯದ ಮಾತಾಗಬೇಕು

    ಮುಕ್ಕಾಲು ಶತಮಾನದ ಸಂಭ್ರಮದ ಅಮೃತ ಮಹೋತ್ಸವವು ಈ ಸ್ವಾತಂತ್ರ್ಯೋತ್ಸವದಲ್ಲಿದೆ. ಇಂತಹ ವಿಭಿನ್ನ ಉತ್ಸವವನ್ನು ಸಂಭ್ರಮಿಸಲು ಈಗಿನ ವಾತಾವರಣವು ಸಹಕಾರ ಕೊಡುತ್ತಿಲ್ಲ. ಸ್ವಾತಂತ್ರ್ಯವಾಗಿ ತಿರುಗುವ, ಮನಸೋ ಇಚ್ಛೆ ಸ್ವಾತಂತ್ರ್ಯವಾಗಿ ಎಲ್ಲರೊಂದಿಗೆ ಬೆರೆತು ಬಾಳಲು ಸಾಧ್ಯವಾಗುತ್ತಿಲ್ಲ!

    ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಬೆದರಿಕೆ ದಬ್ಬಾಳಿಕೆಯಿಂದ ಎಲ್ಲರ ಬಾಯ್ಕಟ್ಟಿತು, ಕೈಕಾಲುಗಳು ಕಟ್ಟಿತ್ತು, ಸ್ವತಂತ್ರ್ಯವಾಗಿ ಹೊರಗೆ ಕಾಲಿಡಲು ಹೆದರಬೇಕಿತ್ತು. ಈಗಲೂ ಬಾಯ್ಗೆ ಕಟ್ಟು ಬಿದ್ದಿದೆ, ಕ್ರೂರ ಕರೋನಾದ ದಾಳಿಯಿಂದ!

    ಆಗ `ಕ್ವಿಟ್ ಇಂಡಿಯಾ ಚಳುವಳಿ’ಯು ಬ್ರಿಟಿಷರ ವಿರುದ್ಧವಾಗಿತ್ತು. ಈಗಲೂ ಚಳುವಳಿ ಮಾಡಬೇಕಿದೆ ಈ ಕ್ರೂರ ಕರೋನಾದ ವಿರುದ್ಧ, ಇದನ್ನು ದೇಶದಿಂದಷ್ಟೇ ಅಲ್ಲಾ ವಿಶ್ವದಿಂದಲೇ ತೊಲಗಿಸುವ ಪಣ ತೊಡಬೇಕಿದೆ.

    ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳ ಹಂತಕ್ಕೆ ಬಂದಿದ್ದರೂ ಸ್ವಾತಂತ್ರ್ಯವಾಗಿ ನಮ್ಮ ಧ್ವನಿಯನ್ನು ಎತ್ತರಿಸಿ ಹೇಳುವ ಸ್ಥಿತಿಯಲ್ಲೂ ಇಲ್ಲ. ಎಲ್ಲಾ ಮಾತಿಗೂ ಒಂದು ಫಿಲ್ಟರ್ ಹಾಕಿಯೇ ಹೊರತರಬೇಕಿದೆ. ಸಾಮಾಜಿಕ ತಾಣಗಳಲ್ಲಿ ನಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಮೊದಲು ಅಭಿಪ್ರಾಯವು ಎಡಕ್ಕೋ, ಬಲಕ್ಕೋ ವಾಲದಂತೆ ಎಚ್ಚರ ವಹಿಸಿ ಎರಡಕ್ಕೂ ಧಕ್ಕೆಯಾಗದಂತೆ ಎಚ್ಚರವಹಿಸಬೇಕಿದೆ. ಆದರೆ ಎಡ-ಬಲಗಳ ನಡುವೆ ಒಂದು ನಿರ್ಮಲವಾದ ಹೃದಯವಿದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಹಾಗಾಗಿ ಎಲ್ಲರ ಮಾತು ಹೃದಯದ ಮಾತಾಗಬೇಕು.

    ಸ್ವಾತಂತ್ರ್ಯತೆ ಎಂದರೆ ಸ್ವೇಚ್ಛಾಚಾರವಲ್ಲ, ಬೇರೊಬ್ಬರಿಗೆ ತೊಂದರೆಯಾಗದಂತೆ ನಮ್ಮ ಬದುಕನ್ನು ನಾವು ಕಟ್ಟಿಕೊಳ್ಳಬೇಕು. ಅಲ್ಲದೇ ಬೇರೊಬ್ಬರ ಬದುಕಿಗೆ ಆಧಾರವಾಗಬೇಕು. ನಾವು ಬದುಕುವುದರ ಜೊತೆಗೆ ಮತ್ತೊಬ್ಬರ ಬದುಕಿಗೂ ಕೈಯಾಸರೆ ಆಗಬೇಕು.

    ಅತಿ ಎತ್ತರದ ಉಬ್ಬು ರಸ್ತೆಯಲ್ಲಿ ಭಾರವಾದ ಸರಕು ತುಂಬಿದ ಕೈಗಾಡಿಯನ್ನು ನೂಕಲಾರದ ವ್ಯಕ್ತಿಗೆ ಒಂದಷ್ಟು ದೂರ ಕೈಯಾಸರೆ ಆದರೂ ಎಷ್ಟೋ ಸಹಕಾರವಾಗುತ್ತೆ!

    ಇಂತಹ ನಿಸ್ವಾರ್ಥ ಸೇವೆಯನ್ನು ಆಗಾಗ ಮಾಡುವ ಮಾನವೀಯತೆಯನ್ನು ರೂಢಿಸಿಕೊಂಡರೂ ಸಾಕು. ದೇಶವೆಂದರೆ ಮಣ್ಣಷ್ಟೇ ಅಲ್ಲ ಮನಸುಗಳ ಸಮೂಹವೆಂದು ಅರಿತು ಈ ಮನಸುಗಳಿಗೆ ಇಷ್ಟವಾಗುವಂತಹ ಇನಿತನ್ನಾದರೂ ಮಾಡಲು ನಿರ್ಧಾರ ಮಾಡಿ.

    ಸಮಾಜದ ಭಾಗವಾದ ನಾವು ಸಮಾಜಕ್ಕಾಗಿ ಕಿಂಚಿತ್ತನ್ನಾದರೂ ಮಾಡುವ ಪಣ ತೊಡಬೇಕು!


    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!