34.1 C
Karnataka
Monday, May 13, 2024

    ಆಗ ಇದ್ದಿದ್ದು ಅಸಲಿ ಕಾಂಗ್ರೆಸ್, ಈಗಿರುವುದು ನಕಲಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಆಕ್ರೋಶ

    Must read

    BENGALURU AUG 15

    ಇಂದು ದೇಶಪ್ರೇಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವ ಶಕ್ತಿಗಳೇ ಸ್ವಾತಂತ್ರ್ಯ ನಂತರ ದೇಶ ವಿಭಜನೆಗೆ ಕಾರಣವಾದವು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಹಾಗೆಯೇ, ಕಾಂಗ್ರೆಸ್ ವಿರುದ್ಧವೂ ಟೀಕಾ ಪ್ರಹಾರ ನಡೆಸಿದ ಅವರು; ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷವೇ ಬೇರೆ, ಆದರೆ, ಈಗಿನ ಕಾಂಗ್ರೆಸ್ ನಕಲಿ ಕಾಂಗ್ರೆಸ್ ಎಂದು ನೇರವಾಗಿ ಹೇಳಿದರು.

    ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಜೆಡಿಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಒಂದು ಕಡೆ ನೆಹರೂ ಭಾವಚಿತ್ರ ಕಣ್ಮರೆ ಮಾಡುತ್ತಾರೆ. ಮತ್ತೊಂದು ಕಡೆ ಜವಹಾರಲಾಲ್ ನೆಹರೂ ರಾಷ್ಟ್ರ ವಿಭಜನೆ ಆಗಲು ಕಾರಣ ಅಂತ ನೆಪ ಹೇಳುತ್ತಾರೆ. ಅಂದು ನಿಮ್ಮ (ಬಿಜೆಪಿಯ) ಸಂಕುಚಿತ ಮನೋಭಾವದಿಂದಲೇ ದೇಶ ವಿಭಜನೆ ಆಗಲು ಕಾರಣ. ಇಂದು ನೋಡಿದರೆ ನೆಹರು ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ ಎಂದರು ಅವರು.

    75 ವರ್ಷದ ಸವಿನೆನಪಿಗಾಗಿ ಬಿಜೆಪಿ ಹರ್‌ಘರ್ ತಿರಂಗ ಎಂಬ ಕಾರ್ಯಕ್ರಮ ಮಾಡಿದೆ. ಕಾಂಗ್ರೆಸ್ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿವೆ. ಅದರ ಎರಡೂ ರಾಷ್ಟ್ರೀಯ ಪಕ್ಷಗಳೂ ಜನರಿಗೆ ಮಂಕಬೂದಿ ಎರಚುತ್ತುವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

    ಅಂದು ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್‌ ಬೇರೆ. ಇಂದು ಕಾಂಗ್ರೆಸ್ ಹೆಸರೇಳಿ ರಾಜಕೀಯ ಮಾಡುವವರು ನಕಲಿ ಕಾಂಗ್ರೆಸ್ಸಿಗರು. ಅಂದು ಹಲವಾರು ಮಂದಿ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು. ಸ್ವಾತಂತ್ರ್ಯ ತಂದುಕೊಟ್ಟ ನಂತರದ ದಿನಗಳ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ನುಡಿದರು.

    ಜವಾಹರಲಾಲ್ ನೆಹರು ಭಾವಚಿತ್ರ ವಿಚಾರದಲ್ಲಿ ಬಿಜೆಪಿ ಸರ್ಕಾರ ಹೇಗೆ ನಡೆದುಕೊಂಡಿದೆ ಎಂಬುದನ್ನು ನೋಡಿದ್ದೇ‌ನೆ. ಅದಕ್ಕೆ ನಾವೆಲ್ಲರೂ ತಲೆ ತಗ್ಗಿಸುವ ಕೆಲಸವಾಗಿದೆ ಎಂಬುದು ನನ್ನ ಅಭಿಪ್ರಾಯ. ನೆಹರು ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಹೇಗೆ ಭಾಗವಹಿಸಿತ್ತು. ಅವರ ಕೊಡುಗೆ ಏನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಎಂದು ನೆಹರು ಭಾವಚಿತ್ರ ಹಾಕದಿದ್ದಕ್ಕೆ ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

    ಸಾವರ್ಕರ್ ಭಾವಚಿತ್ರ ತೆಗೆದರೆಂದು ಮುಸ್ಲಿಂ ಯುವಕರನ್ನು ಬಂಧನ ಮಾಡಿದ್ದಾರೆ. ಅಲ್ಲಿ ಸಾವರ್ಕರ್ ಭಾವಚಿತ್ರ ತೆಗೆದರೆಂಬ ಕಾರಣಕ್ಕೆ ಇಲ್ಲಿ ಟಿಪ್ಪು ಫ್ಲೆಕ್ಸ್ ಹರಿದು ಹಾಕಿದ್ದಾರೆ. ಇದು ಅಮೃತ ಮಹೋತ್ಸವ ಆಚರಿಸುವ ವಿಧಾನವೇ? ಎಂದು ಪ್ರಶ್ನಿಸಿದರು ಕುಮಾರಸ್ವಾಮಿ ಅವರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಆಚರಣೆ ಮಾಡಬೇಕೆಂದು ಕರೆಕೊಟ್ಟಿವೆ. ಆದರೆ ಅವರೇ ಸಂಕುಚಿತ ಮನೋಭಾವದಲ್ಲಿ ಈ ಮಹಾನ್ ದಿನವನ್ನು ಆಚರಿಸುತ್ತಿದ್ದಾರೆ. ನಾಡಿನ ಅನೇಕ ಮಹನೀಯರ ಕೊಡುಗೆ ಸ್ಮರಿಸುವಲ್ಲಿ ಸಂಕುಚಿತ ಮನೋಭಾವ ತೋರಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ಊಟ, ವಸತಿ ಕೊಡದೇ ಹರ್ ಘರ್ ತಿರಂಗ ಮಾಡಿ ಪ್ರಯೋಜನ ಏನು?. ಕೋವಿಡ್ ಅನಾಹುತ ಸಂದರ್ಭದಲ್ಲಿ ಏನೇನಾಯಿತು? ಮನೆ ಮನೆಯ ಮೇಲೆ ಬಾವುಟ ಹಾರಿಸಿ ಎಂದು ಕರೆ ಕೊಟ್ಟಿದ್ದೀರಾ. ಆದರೆ, ಎಷ್ಟೋ ಜನಕ್ಕೆ ವಾಸ ಮಾಡಲು ಮನೆ ಇಲ್ಲ. ಫ್ಲೈ ಓವರ್ ಗಳ ಕೆಳಗೆ, ದೊಡ್ಡ ದೊಡ್ಡ ಪೈಪುಗಳಲ್ಲಿ ಜನ ವಾಸ ಮಾಡುತ್ತಿದ್ದಾರೆ. ಬೃಹತ್ ಜಾಥಾಗಳನ್ನು ಮಾಡಿಕೊಂಡು ಹೊರಟ್ಟಿದ್ದಿರಿ, ನಿಮ್ಮ ಜಾಥಾಗಳಿಂದ ಜನರ ಹೊಟ್ಟೆ ತುಂಬಲ್ಲ. ಪ್ರಧಾನಿ ನರೇಂದ್ರ ಮೋದಿ ಒಂದು ಕಡೆ ಹೇಳುತ್ತಾರೆ. ಉಚಿತ ಸೌಲಭ್ಯಗಳನ್ನು ಕೊಡುವುದು ನಿಲ್ಲಿಸಬೇಕು. ಎಷ್ಟೋ ಕುಟುಂಬಗಳು ಎರಡು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಇದೆ. ಅಂತಹ ಕುಟುಂಬಗಳ ಗತಿ ಏನು? ಎಂದು ಬಿಜೆಪಿ ಸರ್ಕಾರಗಳನ್ನು ಹೆಚ್ ಡಿಕೆ ಪ್ರಶ್ನಿಸಿದರು.

    ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು. ಈ ಸ್ವಾತಂತ್ರ್ಯ ದಿನ ಪ್ರತಿ ಕನ್ನಡಿಗರಿಗೆ, ಪ್ರತಿ ಭಾರತೀಯರಿಗೆ ಮಹತ್ವದ ದಿನ. ಹಲವಾರು ಕ್ಲಿಷ್ಟಕರವಾದ ದಿನಗಳನ್ನು ಇಷ್ಟು ದಿನಗಳಲ್ಲಿ ಕಂಡಿದ್ದೇವೆ. ಹಂತ ಹಂತವಾಗಿ ಪ್ರಗತಿಯನ್ನು ಕಾಣುತ್ತಿದ್ದೇವೆ. ಶಾಂತಿ ಹಾಗೂ ಸಹಬಾಳ್ವೆಯಿಂದ ಬಾಳುವಂತಹ ವಾತಾವರಣ ಸೃಷ್ಟಿ ಮಾಡಬೇಕಿದೆ. ಇಂದು ಕನ್ನಡಿಗರಿಗೆ ಅತ್ಯಂತ ಮಹತ್ವವಾದ ದಿನ. ದೇಶಕ್ಕೆ ಬೇಕಾಗಿರೋದು ಶಾಂತಿ ಸಹಬಾಳ್ವೆ. ಪ್ರತಿಯೊಬ್ಬರೂ ತಮ್ಮ ನಡವಳಿಕೆಯಿಂದ ಅಮೃತಮಹೋತ್ಸವ ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದು ಹೇಳಿದರು.

    ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು, 1995ರಲ್ಲೇ ಜನತಾದಳ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಹೆಚ್.ಡಿ.ದೇವೇಗೌಡರು ಧ್ವಜಾರೋಹಣ ಮಾಡಿದ್ದರು. ಮುಂದಿನ ಬಾರಿ ನಾನು ಇಲ್ಲೇ ಧ್ವಜಾರೋಹಣ ಮಾಡುತ್ತೇನೆ. ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಧ್ವಜಾರೋಹಣ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.

    ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸಿದ ಏಕೈಕ ಕನ್ನಡಿಗ ಹೆಚ್.ಡಿ.ದೇವೇಗೌಡರು. ಮುಂದಿನ ಬಾರಿ ಕುಮಾರಸ್ವಾಮಿ ಸಿಎಂ ಆಗಿ ದ್ವಜಾರೋಹಣದ ಮಾಡುತ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಾತಂತ್ರ್ಯ ಸಂದೇಶದಲ್ಲಿ ಕುವೆಂಪು ಅವರ ಕವನ ಕೇಳಿ ಸಂತೋಷ ಆಯಿತು. ಭಾರತ ಜನನಿಯ ತನುಜಾತೆ ಕನ್ನಡಾಂಬೆಗೆ ಆಗುತ್ತಿರುವ ಅನ್ಯಾಯ ಕುಮಾರಸ್ವಾಮಿ ಸರಿಪಡಿಸ್ತಾರೆ. ಹಸಿವು ಮುಕ್ತ, ಬಡತನ ಮುಕ್ತ ಕರ್ನಾಟಕವನ್ನಾಗಿ ಕುಮಾರಸ್ವಾಮಿ ಮಾಡ್ತಾರೆ. ಮುಂದೆ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬರುವುದು ಖಂಡಿತಾ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷರಾದ ಆರ್.ಪ್ರಕಾಶ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!